ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು’

‘ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು’

‘ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು’

ಯುದ್ಧಕಾಲದಲ್ಲಿ ಯಾವ ಸೈನಿಕನಿಗಾದರೂ, “ನೀನು ಮನೆಗೆ ಹಿಂದಿರುಗಿ ನಿನ್ನ ಹೆಂಡತಿ, ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆ” ಎಂದು ಹೇಳುವುದಾದರೆ ಅವನಿಗೆ ಅಸಂತೋಷವಾದೀತೆಂದು ನೀವು ಎಣಿಸುವಿರೋ?

ರಾಜ ದಾವೀದನ ಸಮಯದಲ್ಲಿ ಒಬ್ಬ ಸೈನಿಕನು ಈ ಅಪ್ಪಣೆಯನ್ನು ಪಡೆದಿದ್ದನು. ಹಿತ್ತೀಯನಾದ ಊರೀಯನನ್ನು ಅರಸನೇ ಕರೆಯಿಸಿ ಅವನು ತನ್ನ ಮನೆಗೆ ಹಿಂದಿರುಗುವಂತೆ ಪ್ರೋತ್ಸಾಹಿಸಿದನು. ಆದರೆ ಊರೀಯನು ಮನೆಗೆ ಹಿಂದಿರುಗಲು ನಿರಾಕರಿಸಿದನು. ಅವನ ವಿಚಿತ್ರ ವರ್ತನೆಗೆ ಕಾರಣವನ್ನು ಕೇಳಲಾಗಿ ಊರೀಯನು, ದೇವರ ಸಾನ್ನಿಧ್ಯವನ್ನು ಸೂಚಿಸುವ ಒಡಂಬಡಿಕೆಯ ಮಂಜೂಷ ಮತ್ತು ಇಸ್ರಾಯೇಲ್‌ ಸೈನ್ಯವು ರಣರಂಗದಲ್ಲಿದೆ ಎಂದು ಉತ್ತರಿಸುತ್ತಾ ಕೇಳಿದ್ದು: “ನಾನು ನನ್ನ ಮನೆಗೆ ಹೋಗಿ ಉಂಡು ಕುಡಿದು ಹೆಂಡತಿಯೊಡನೆ ಮಲಗಿಕೊಳ್ಳುವದು ಹೇಗೆ?” ಇಂತಹ ಕಠಿನ ಸಮಯದಲ್ಲಿ ಹಾಗೆ ಮಾಡುವುದು ಊರೀಯನಿಗೆ ಯೋಚಿಸಲಸಾಧ್ಯವಾದ ವಿಷಯವಾಗಿತ್ತು.​—⁠2 ಸಮುವೇಲ 11:8-11.

ನಾವು ಸಹ ಯುದ್ಧದ ಸಮಯದಲ್ಲಿ ಜೀವಿಸುತ್ತಿರುವುದರಿಂದ ಊರೀಯನ ವರ್ತನೆ ಅನೇಕ ಪ್ರಾಮುಖ್ಯ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಲೋಕದ ಜನಾಂಗಗಳು ಎಂದಿಗೂ ಹೋರಾಡಿದ್ದಿರದಂಥ ವಿಧದ ಯುದ್ಧವೊಂದು ಈಗ ನಡೆಯುತ್ತಾ ಇದೆ. ಇದಕ್ಕೆ ಹೋಲಿಸುವಾಗ, ನಡೆದಿರುವ ಎರಡು ಜಾಗತಿಕ ಯುದ್ಧಗಳು ಲಕ್ಷ್ಯಕ್ಕೆ ಬರದಿರುವಷ್ಟು ಕ್ಷುಲ್ಲಕವಾಗಿ ತೋರುತ್ತವೆ. ಅಷ್ಟುಮಾತ್ರವಲ್ಲ ನೀವೇ ಈ ಯುದ್ಧದಲ್ಲಿ ಒಳಗೂಡಿದ್ದೀರಿ. ಅಪಾಯವು ಬೃಹದ್‌ಗಾತ್ರದ್ದಾಗಿದೆ ಮತ್ತು ವೈರಿ ದಿಗಿಲುಹುಟ್ಟಿಸುವವನಾಗಿದ್ದಾನೆ. ಈ ಯುದ್ಧದಲ್ಲಿ ಗುಂಡು ಹಾರಿಸಲ್ಪಡುವುದಾಗಲಿ, ಬಾಂಬಿನ ಎಸೆತವಾಗಲಿ ಇಲ್ಲವಾದರೂ ಯುದ್ಧೋಪಾಯವು ಕಡಿಮೆ ತೀಕ್ಷ್ಣತೆಯದ್ದಾಗಿರಲು ಸಾಧ್ಯವಿಲ್ಲ.

ಆದರೆ ಶಸ್ತ್ರಧಾರಿಯಾಗುವ ಮೊದಲು, ಅದು ನೈತಿಕವಾಗಿ ಸರಿಯೊ ಮತ್ತು ಯಾವ ಉದ್ದೇಶಕ್ಕಾಗಿ ನೀವು ಹೋರಾಡುತ್ತಿದ್ದೀರೆಂಬುದು ನಿಮಗೆ ತಿಳಿದಿರಬೇಕು. ಆ ಹೋರಾಟವು, ಅದಕ್ಕೆ ತೆರಬೇಕಾದ ವೆಚ್ಚಕ್ಕೆ ಯೋಗ್ಯವಾದದ್ದೊ? ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದ ಪತ್ರದಲ್ಲಿ, ‘ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು’ ಎಂದು ಹೇಳಿದಾಗ ಈ ಅದ್ವಿತೀಯ ಹೋರಾಟದ ಉದ್ದೇಶವನ್ನು ವ್ಯಕ್ತಪಡಿಸಿದನು. ಹೌದು, ಈ ಯುದ್ಧದಲ್ಲಿ ನೀವು ಒಂದು ಕೋಟೆಯನ್ನಲ್ಲ, ಬದಲಾಗಿ “ನಂಬಿಕೆ”ಯನ್ನು ಅಂದರೆ, ಬೈಬಲಿನಲ್ಲಿ ತಿಳಿಸಿರುವ ಕ್ರೈಸ್ತ ಸತ್ಯದ ಮೊತ್ತವನ್ನು ನೀವು ಸಮರ್ಥಿಸಿ ಕಾಪಾಡಬೇಕು. ನೀವು “ನಂಬಿಕೆ”ಗಾಗಿ ಹೋರಾಡಿ, ಜಯಗಳಿಸಬೇಕಾದರೆ ಅದರ ಸತ್ಯತೆಯಲ್ಲಿ ದೃಢವಾಗಿ ವಿಶ್ವಾಸವಿಡಬೇಕೆಂಬುದು ಸ್ಪಷ್ಟ.​—⁠1 ತಿಮೊಥೆಯ 6:12.

ವಿವೇಕಿಯಾದ ಯೋಧನು ತನ್ನ ವೈರಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಈ ಯುದ್ಧದಲ್ಲಿಯಾದರೊ ವೈರಿಗೆ ಯುದ್ಧೋಪಾಯದಲ್ಲಿ ಅನೇಕಾನೇಕ ವರುಷಗಳ ಅನುಭವವಿರುವುದು ಮಾತ್ರವಲ್ಲ, ಭಾರೀ ಸಾಧನಗಳೂ ಶಸ್ತ್ರಗಳೂ ಅವನಲ್ಲಿವೆ. ಅವನು ಅತಿಮಾನುಷನೂ ಹೌದು. ಅವನು ಅತಿ ದುಷ್ಟನೂ, ಹಿಂಸಾತ್ಮಕನೂ, ಯಾವುದಕ್ಕೂ ಹೇಸದವನೂ ಆದ ಸೈತಾನನೇ. (1 ಪೇತ್ರ 5:⁠8) ಪ್ರಾಪಂಚಿಕ ಶಸ್ತ್ರಗಳು ಹಾಗೂ ಮಾನವ ಕುಯುಕ್ತಿ ಮತ್ತು ತಂತ್ರೋಪಾಯಗಳು ಈ ವಿರೋಧಿಯ ಎದುರಲ್ಲಿ ವ್ಯರ್ಥವೇ ಸರಿ. (2 ಕೊರಿಂಥ 10:⁠4) ಹಾಗಾದರೆ ಈ ಯುದ್ಧದಲ್ಲಿ ಹೋರಾಡಲು ನೀವು ಏನನ್ನು ಉಪಯೋಗಿಸಬಲ್ಲಿರಿ?

ಪ್ರಧಾನ ಆಯುಧವು “ದೇವರ ವಾಕ್ಯವೆಂಬ ಕತ್ತಿ”ಯೇ. (ಎಫೆಸ 6:17) ಅದೆಷ್ಟು ಕಾರ್ಯಸಾಧಕವೆಂಬುದನ್ನು ಅಪೊಸ್ತಲ ಪೌಲನು ತೋರಿಸುತ್ತಾನೆ: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿಯ 4:12) ಒಬ್ಬನ ಆಲೋಚನೆಗಳನ್ನೂ ಉದ್ದೇಶಗಳನ್ನೂ ತೂರಿಹೋಗುವಷ್ಟು ಹರಿತವೂ ನಿಕರವೂ ಆಗಿರುವ ಆಯುಧವನ್ನು ಕೌಶಲದಿಂದಲೂ ಜಾಗ್ರತೆಯಿಂದಲೂ ಉಪಯೋಗಿಸಬೇಕೆಂಬುದು ನಿಶ್ಚಯ.

ಒಂದು ಸೇನಾಪಡೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇರುವುದಾದರೂ ಸೈನಿಕರಿಗೆ ಅದನ್ನು ಉಪಯೋಗಿಸುವ ಕೌಶಲವಿಲ್ಲದಿರುವಲ್ಲಿ ಅವು ನಿಷ್ಪ್ರಯೋಜಕವಾದುದ್ದೆಂದು ನಿಮಗೆ ಪ್ರಾಯಶಃ ತಿಳಿದೇ ಇದೆ. ಅದೇ ರೀತಿ ನಿಮ್ಮ ಕತ್ತಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ನಿಮಗೂ ತರಬೇತಿಯ ಅಗತ್ಯವಿದೆ. ಸಂತೋಷಕರವಾಗಿ, ಅತಿ ನುರಿತ ಸೈನಿಕರಿಂದ ನಿಮಗೆ ತರಬೇತು ಲಭ್ಯವಿದೆ. ಯೇಸು ಈ ಸೈನಿಕ-ಬೋಧಕರನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂದು ಕರೆದು, ಸಮಯೋಚಿತವಾದ ಆಧ್ಯಾತ್ಮಿಕ ಆಹಾರವನ್ನು ಅಥವಾ ಶಿಕ್ಷಣವನ್ನು ತನ್ನ ಹಿಂಬಾಲಕರಿಗೆ ನೀಡುವ ಜವಾಬ್ದಾರಿಯನ್ನು ಅವರಿಗೆ ವಹಿಸಿದನು. (ಮತ್ತಾಯ 24:45) ಈ ಸಂಘಟಿತ ಆಳು ಬೋಧಿಸಲಿಕ್ಕಾಗಿ ಮಾಡುವ ಶ್ರದ್ಧಾಪೂರ್ವಕ ಪ್ರಯತ್ನ ಮತ್ತು ವೈರಿಯ ತಂತ್ರೋಪಾಯಗಳ ಕುರಿತಾಗಿ ಕೊಡುವ ಸಮಯೋಚಿತ ಎಚ್ಚರಿಕೆಗಳನ್ನು ಅವಲೋಕಿಸುವ ಮೂಲಕ ನೀವು ಈ ಆಳನ್ನು ಗುರುತಿಸಬಲ್ಲಿರಿ. ಈ ಸಂಘಟಿತ ಆಳು ಯೆಹೋವನ ಸಾಕ್ಷಿಗಳ ಕ್ರೈಸ್ತಸಭೆಯ ಆತ್ಮಾಭಿಷಿಕ್ತ ಸದಸ್ಯರೆಂದು ಪುರಾವೆಯು ಸೂಚಿಸುತ್ತದೆ.​—⁠ಪ್ರಕಟನೆ 14:⁠1.

ಈ ಸಂಘಟಿತ ಆಳು ಕೇವಲ ಶಿಕ್ಷಣ ಕೊಡುವುದಕ್ಕಿಂತಲೂ ಹೆಚ್ಚಿನದನ್ನು ಮಾಡಿದೆ. ಥೆಸಲೊನೀಕ ಸಭೆಗೆ ಹೀಗೆ ಬರೆದ ಅಪೊಸ್ತಲ ಪೌಲನ ಮನೋಭಾವವನ್ನೇ ಈ ಆಳು ತೋರಿಸಿದೆ: “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು. ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” (1 ಥೆಸಲೊನೀಕ 2:​7, 8) ಆದರೆ ಒದಗಿಸಲಾಗುವಂಥ ಈ ಪ್ರೀತಿಯ ತರಬೇತನ್ನು ಸದ್ವಿನಿಯೋಗಿಸುವ ಜವಾಬ್ದಾರಿಯಂತೂ ಪ್ರತಿಯೊಬ್ಬ ಕ್ರೈಸ್ತ ಸೈನಿಕನದ್ದಾಗಿದೆ.

ಸರ್ವಾಯುಧಗಳ ಪೂರ್ಣ ರಕ್ಷಾಕವಚ

ನಿಮ್ಮ ರಕ್ಷಣೆಗಾಗಿ ಸಾಂಕೇತಿಕವಾದ ಸರ್ವಾಯುಧಗಳ ಪೂರ್ಣ ರಕ್ಷಾಕವಚವೇ ಲಭ್ಯವಿದೆ. ಈ ರಕ್ಷಾಕವಚದ ಪಟ್ಟಿಯನ್ನು ನೀವು ಎಫೆಸ 6:​13-18ರಲ್ಲಿ ನೋಡಬಲ್ಲಿರಿ. ಮುಂಜಾಗ್ರತೆಯುಳ್ಳ ಸೈನಿಕನೊಬ್ಬನು, ತನ್ನ ಆಧ್ಯಾತ್ಮಿಕ ರಕ್ಷಾಕವಚದಲ್ಲಿ ಯಾವುದಾದರೊಂದು ಭಾಗವೂ ಇಲ್ಲದಿರುವುದಾದರೆ ಅಥವಾ ಅದಕ್ಕೆ ದುರಸ್ತು ಅಗತ್ಯವಿರುವುದಾದರೆ ಕಾದಾಡಲು ಹೋಗನು.

ಕ್ರೈಸ್ತನೊಬ್ಬನಿಗೆ ಅವನ ರಕ್ಷಾಕವಚದಲ್ಲಿ ಪ್ರತಿ ಆಯುಧವೂ ಅಗತ್ಯವಾಗಿದೆಯಾದರೂ ನಂಬಿಕೆಯ ದೊಡ್ಡ ಗುರಾಣಿಯು ವಿಶೇಷವಾಗಿ ಪ್ರಮುಖವಾದ ಆಯುಧವಾಗಿದೆ. ಈ ಕಾರಣದಿಂದಲೇ, ಪೌಲನು ಬರೆದುದು: “ನಂಬಿಕೆಯೆಂಬ [“ದೊಡ್ಡ,” NW] ಗುರಾಣಿಯನ್ನು ಹಿಡುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ.”​—⁠ಎಫೆಸ 6:16.

ಇಡೀ ದೇಹವನ್ನು ಮುಚ್ಚಸಾಧ್ಯವಿದ್ದ ದೊಡ್ಡ ಗುರಾಣಿಯು, ನಂಬಿಕೆಯೆಂಬ ಗುಣವನ್ನು ಪ್ರತಿನಿಧೀಕರಿಸುತ್ತದೆ. ನಿಮಗೆ ಯೆಹೋವನ ನಿರ್ದೇಶನದಲ್ಲಿ ದೃಢ ನಂಬಿಕೆಯಿದ್ದು, ಆತನ ವಾಗ್ದಾನಗಳೆಲ್ಲವು ನೆರವೇರುವವು ಎಂಬುದನ್ನು ನೀವು ಸಂದೇಹವಿಲ್ಲದೆ ಅಂಗೀಕರಿಸಬೇಕು. ಆ ವಾಗ್ದಾನಗಳು ಈಗಾಗಲೇ ನೆರವೇರಿವೆಯೋ ಎಂಬಂತೆ ನಿಮಗನಿಸಬೇಕು. ಸೈತಾನನ ಇಡೀ ಲೋಕ ವ್ಯವಸ್ಥೆಯು ಬೇಗನೆ ನಾಶಗೊಲಿಸಲ್ಪಡುವುದು, ಭೂಮಿಯು ಪರದೈಸಾಗಿ ಮಾರ್ಪಡುವುದು ಮತ್ತು ದೇವರಿಗೆ ನಿಷ್ಠರಾಗಿರುವ ಜನರು ಪರಿಪೂರ್ಣತೆಗೆ ಪುನಸ್ಸ್ಥಾಪಿಸಲ್ಪಡುವರೆಂಬುದನ್ನು ಒಂದು ಕ್ಷಣವೂ ಸಂಶಯಿಸದಿರಿ.​—⁠ಯೆಶಾಯ 33:24; 35:​1, 2; ಪ್ರಕಟನೆ 19:​17-21.

ಆದರೆ ಇಂದಿನ ಅಸಾಧಾರಣ ಹೋರಾಟದಲ್ಲಿ ನಿಮಗೆ ಇನ್ನೂ ಹೆಚ್ಚಿನದ್ದರ ಆವಶ್ಯಕತೆಯಿದೆ. ಅಂದರೆ ನಿಮಗೆ ಸ್ನೇಹಿತನೊಬ್ಬನ ಆವಶ್ಯಕತೆಯಿದೆ. ಯುದ್ಧಕಾಲದಲ್ಲಿ ಜೊತೆ ಸೈನಿಕರು ಪ್ರೋತ್ಸಾಹನೆ ಮತ್ತು ಪರಸ್ಪರ ರಕ್ಷೆಯನ್ನು ಕೊಡುವಾಗ, ಕೆಲವೊಮ್ಮೆ ಮರಣದಿಂದಲೂ ಪರಸ್ಪರರನ್ನು ಪಾರುಗೊಳಿಸುವಾಗ, ಅತ್ಯಾಪ್ತ ಮಿತ್ರತ್ವದ ಬಂಧಗಳು ಬೆಸೆಯಲ್ಪಡುತ್ತವೆ. ಸಂಗಾತಿಗಳು ಅತ್ಯಮೂಲ್ಯರಾಗಿದ್ದಾರೆ ನಿಜ, ಆದರೆ ಈ ಹೋರಾಟವನ್ನು ಪಾರಾಗಲು ನಮಗೆ ಸಾಕ್ಷಾತ್‌ ಯೆಹೋವನ ಸ್ನೇಹ ಅಗತ್ಯ. ಈ ಕಾರಣದಿಂದಲೇ, ಪೌಲನು ಸಶಸ್ತ್ರ ರಕ್ಷಾಕವಚದ ಆಯುಧಪಟ್ಟಿಯನ್ನು, “ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ” ಎಂದು ಹೇಳಿ ಮುಗಿಸುತ್ತಾನೆ.​—⁠ಎಫೆಸ 6:18.

ಒಬ್ಬ ಆಪ್ತ ಮಿತ್ರನೊಂದಿಗಿರುವುದು ನಮಗಿಷ್ಟ. ನಾವು ಅವನೊಂದಿಗಿರಲು ಸಮಯಮಾಡುತ್ತೇವೆ. ನಾವು ಯೆಹೋವನೊಂದಿಗೆ ಕ್ರಮವಾಗಿ ಮಾತಾಡುವ ಮೂಲಕ ಆತನು ನಮಗೆ ಒಬ್ಬ ಭರವಸಾರ್ಹ ಮಿತ್ರನಂತೆ ಒಬ್ಬ ನೈಜ ವ್ಯಕ್ತಿಯಾಗುತ್ತಾನೆ. ಶಿಷ್ಯ ಯಾಕೋಬನು ನಮ್ಮನ್ನು ಪ್ರೋತ್ಸಾಹಿಸುವುದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”​—⁠ಯಾಕೋಬ 4:⁠8.

ಶತ್ರುವಿನ ಕುಯುಕ್ತಿಗಳು

ಈ ಲೋಕದೊಂದಿಗಿನ ಹೋರಾಟವು ಕೆಲವೊಮ್ಮೆ, ನೆಲಬಾಂಬುಗಳು ಹುದುಗಿಸಲ್ಪಟ್ಟಿರುವ ಒಂದು ಹೊಲದ ಮಧ್ಯದಿಂದ ನಡೆದು ಹೋಗುವಂತಿರಬಲ್ಲದು. ಆಕ್ರಮಣವು ಯಾವುದೇ ದಿಕ್ಕಿನಿಂದ ಬರಬಹುದು, ಮತ್ತು ವೈರಿಯು ಅನಿರೀಕ್ಷಿತವಾಗಿ ನಿಮ್ಮ ಮೇಲೆ ಎರಗಬೇಕೆಂದಿದ್ದಾನೆ. ಆದರೆ ಯೆಹೋವನು ನಿಮಗೆ ಬೇಕಾಗಿರುವ ಸಕಲ ರಕ್ಷೆಯನ್ನೂ ಒದಗಿಸಿಕೊಟ್ಟಿದ್ದಾನೆಂಬ ಆಶ್ವಾಸನೆ ನಿಮಗಿರಲಿ.​—⁠1 ಕೊರಿಂಥ 10:13.

ವೈರಿಯು ನಿಮ್ಮ ನಂಬಿಕೆಗೆ ಮೂಲಭೂತವಾಗಿರುವ ಬೈಬಲ್‌ ಸತ್ಯಗಳನ್ನು ಟೀಕಿಸಿ ನಿಮ್ಮ ಮೇಲೆ ಒಂದು ಪ್ರಹಾರವನ್ನು ಮಾಡಬಹುದು. ಧರ್ಮಭ್ರಷ್ಟರು ಬೆಣ್ಣೆಯಂಥ ಮಾತುಗಳನ್ನಾಡಿ, ಮುಖಸ್ತುತಿ ಮತ್ತು ವಕ್ರ ತರ್ಕದಿಂದ ನಿಮ್ಮನ್ನು ಸೋಲಿಸಪ್ರಯತ್ನಿಸಬಹುದು. ಆದರೆ ಧರ್ಮಭ್ರಷ್ಟನ ಮನಸ್ಸಿನಲ್ಲಿ ನಿಮ್ಮ ಹಿತಾಸಕ್ತಿಯಿಲ್ಲ. ಜ್ಞಾನೋಕ್ತಿ 11:9 ಗಮನಿಸುವುದು: “ಧರ್ಮಭ್ರಷ್ಟನು ಬಾಯಿಂದ ನೆರೆಯವನನ್ನು ಹಾಳು ಮಾಡುವನು; ಶಿಷ್ಟನು ತಿಳುವಳಿಕೆಯಿಂದ ಉದ್ಧಾರವಾಗುವನು.”

ಧರ್ಮಭ್ರಷ್ಟರ ವಾದಗಳನ್ನು ಖಂಡಿಸಲು ನೀವು ಅವರಿಗೆ ಕಿವಿಗೊಡಬೇಕೆಂದೊ ಅವರ ಬರಹಗಳನ್ನು ಓದಬೇಕೆಂದೊ ಭಾವಿಸುವುದು ತಪ್ಪಾಗಿದೆ. ಅವರ ತಿರುಚಿಸಲ್ಪಟ್ಟ, ವಿಷಭರಿತ ತರ್ಕವಾದಗಳು ನಿಮಗೆ ಆಧ್ಯಾತ್ಮಿಕ ಹಾನಿಯನ್ನು ತಂದು, ಶೀಘ್ರ ಹರಡುವ ಅಂಗಕ್ಷಯದಂತೆ ನಿಮ್ಮ ನಂಬಿಕೆಯನ್ನು ಕಲುಷಿತಗೊಳಿಸಬಲ್ಲದು. (2 ತಿಮೊಥೆಯ 2:​16, 17) ಇದಕ್ಕೆ ಬದಲಾಗಿ ಧರ್ಮಭ್ರಷ್ಟರ ವಿಷಯದಲ್ಲಿ ದೇವರು ಹೇಗೆ ಪ್ರತಿಕ್ರಿಯಿಸುತ್ತಾನೊ ಅದನ್ನು ಅನುಕರಿಸಿರಿ. ಯೋಬನು ಯೆಹೋವನ ಕುರಿತಾಗಿ ಹೇಳಿದ್ದು: “ಭ್ರಷ್ಟನು ಆತನ ಮುಂದೆ ಬರುವದಿಲ್ಲ.”​—⁠ಯೋಬ 13:16.

ಈಗ ವೈರಿಯು ಒಂದು ಭಿನ್ನವಾದ ಉಪಾಯವನ್ನು, ಸ್ವಲ್ಪಮಟ್ಟಿಗೆ ಯಶಸ್ಸನ್ನು ಪಡೆದಿರುವ ಒಂದು ಉಪಾಯವನ್ನು ಉಪಯೋಗಿಸಲು ನೋಡಬಹುದು. ಸೈನಿಕ ನಡಗೆಯಿಂದ ಮುಂದುವರಿಯುತ್ತಿರುವ ಒಂದು ಸೈನ್ಯವು ಸ್ವೇಚ್ಛಾಚಾರ, ಲೈಂಗಿಕ ಅನೈತಿಕತೆಯ ನಡತೆಯನ್ನು ಬೆನ್ನಟ್ಟಲಿಕ್ಕೋಸ್ಕರ ಸಾಲಿನಿಂದ ಹೊರಬಿದ್ದು ಅಪಕರ್ಷಿತರಾಗುವಲ್ಲಿ ಅವ್ಯವಸ್ಥೆಯು ಉಂಟಾಗುತ್ತದೆ.

ಲೈಂಗಿಕ ಅನೈತಿಕತೆ ತುಂಬಿರುವ ಚಲನಚಿತ್ರಗಳು ಹಾಗೂ ಟೆಲಿವಿಷನ್‌ ಕಾರ್ಯಕ್ರಮಗಳು ಮತ್ತು ಗಟ್ಟಿಯಾದ ಹತೋಟಿ ಮೀರಿದ ಸಂಗೀತ ಮೊದಲಾದ ಲೌಕಿಕ ಮನೋರಂಜನೆಯು ಒಂದು ಪರಿಣಾಮಕಾರಿ ಸೆಳೆವಸ್ತುವಾಗಿದೆ. ತಾವು ಲೈಂಗಿಕ ಅನೈತಿಕತೆಯ ದೃಶ್ಯಗಳನ್ನು ನೋಡಲಿ, ಅಥವಾ ಅಂಥ ಸಾಹಿತ್ಯವನ್ನು ಓದಲಿ, ಅದು ತಮ್ಮ ಮೇಲೆ ಸ್ವಲ್ಪವೂ ಪರಿಣಾಮಬೀರುವುದಿಲ್ಲವೆಂದು ಕೆಲವರು ಪ್ರತಿಪಾದಿಸುತ್ತಾರೆ. ಆದರೆ ಮುಚ್ಚುಮರೆಯಿಲ್ಲದ ಲೈಂಗಿಕ ಕೃತ್ಯಗಳ ಚಲನಚಿತ್ರಗಳನ್ನು ಕ್ರಮವಾಗಿ ವೀಕ್ಷಿಸುತ್ತಿದ್ದ ಒಬ್ಬನು ಒಪ್ಪಿಕೊಂಡದ್ದು: “ನೀವು ಆ ದೃಶ್ಯಗಳನ್ನು ಮರೆಯುವುದೇ ಇಲ್ಲ. ಅದರ ಬಗ್ಗೆ ನೀವೆಷ್ಟು ಹೆಚ್ಚು ಯೋಚಿಸುತ್ತೀರೊ ಅದನ್ನು ಮಾಡುವ ಬಯಕೆಯೂ ಅಷ್ಟೇ ಹೆಚ್ಚಾಗುತ್ತದೆ . . . ನೀವು ಯಾವುದೊ ಒಳ್ಳೆಯ ಸಂಗತಿಯನ್ನು ಕಳೆದುಕೊಳ್ಳುತ್ತಿದ್ದೀರೆಂದು ಭಾವಿಸುವ ಹಾಗೆ ಆ ಚಲನಚಿತ್ರವು ಮಾಡುತ್ತದೆ.” ಈ ನವಿರಾದ ಆಕ್ರಮಣದಿಂದ ಗಾಯಗೊಳ್ಳುವ ಅಪಾಯಕ್ಕೆ ತಲೆಕೊಡುವುದು ಸಾರ್ಥಕವೊ?

ವೈರಿಯ ಆಯುಧಶಾಲೆಯಲ್ಲಿರುವ ಇನ್ನೊಂದು ಕ್ಷಿಪಣಿಯು ಪ್ರಾಪಂಚಿಕತೆಯೆಂಬ ಸೆಳೆವಸ್ತುವಾಗಿದೆ. ಈ ಅಪಾಯವನ್ನು ಗುರುತಿಸುವುದು ಕಷ್ಟಕರವಾಗಿರಬಲ್ಲದು ಏಕೆಂದರೆ ನಮಗೆಲ್ಲರಿಗೂ ಲೌಕಿಕ ಆವಶ್ಯಕತೆಗಳಿವೆ. ನಮಗೆ ಒಂದು ಮನೆ, ಆಹಾರ, ಮತ್ತು ಬಟ್ಟೆಬರೆಗಳು ಆವಶ್ಯಕ; ಮತ್ತು ಒಳ್ಳೆಯ ವಸ್ತುಗಳನ್ನು ಹೊಂದುವುದು ತಪ್ಪಲ್ಲ. ಆದರೆ ಅಪಾಯವಿರುವುದು ಒಬ್ಬನ ದೃಷ್ಟಿಕೋನದಲ್ಲಿ. ಹಣವು ಆಧ್ಯಾತ್ಮಿಕ ವಿಷಯಗಳಿಗಿಂತ ಹೆಚ್ಚು ಪ್ರಾಮುಖ್ಯವಾಗಿ ಪರಿಣಮಿಸಬಹುದು. ನಾವು ಧನಪ್ರೇಮಿಗಳಾಗಬಹುದು. ಆದುದರಿಂದ ಐಶ್ವರ್ಯಕ್ಕಿರುವ ಮಿತಿಗಳನ್ನು ನೆನಪಿಗೆ ತರುತ್ತಾ ಇರುವುದು ಒಳ್ಳೆಯದು. ಐಶ್ವರ್ಯವು ತಾತ್ಕಾಲಿಕ, ಆದರೆ ಆಧ್ಯಾತ್ಮಿಕ ಐಶ್ವರ್ಯಗಳು ಸಾರ್ವಕಾಲಿಕ.​—⁠ಮತ್ತಾಯ 6:​19, 20.

ಒಂದು ಸೈನ್ಯದ ಸ್ಥೈರ್ಯವೇ ಕುಂದಿರುವಲ್ಲಿ, ಅದು ವಿಜಯವನ್ನು ಗಳಿಸುವ ಸಂಭವವು ಕಡಿಮೆಯಾಗುತ್ತದೆ. “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ.” (ಜ್ಞಾನೋಕ್ತಿ 24:10) ನಿರುತ್ಸಾಹವು ಸೈತಾನನು ಪರಿಣಾಮಕಾರಿಯಾಗಿ ಉಪಯೋಗಿಸಿರುವ ಒಂದು ಅಸ್ತ್ರವಾಗಿದೆ. “ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣ”ವನ್ನು ಧರಿಸುವುದು ನಿರುತ್ಸಾಹದೊಂದಿಗೆ ಹೋರಾಡಲು ನಿಮಗೆ ಸಹಾಯಮಾಡುವುದು. (1 ಥೆಸಲೊನೀಕ 5:⁠8) ನಿಮ್ಮ ನಿರೀಕ್ಷೆಯನ್ನು ಅಬ್ರಹಾಮನ ನಿರೀಕ್ಷೆಯಷ್ಟು ಬಲವಾಗಿಡುವಂತೆ ಪ್ರಯತ್ನಿಸಿರಿ. ತನ್ನ ಒಬ್ಬನೇ ಮಗನಾದ ಇಸಾಕನನ್ನು ಯಜ್ಞಾರ್ಪಿಸಲಿಕ್ಕೋಸ್ಕರ ಕೇಳಿಕೊಳ್ಳಲ್ಪಟ್ಟಾಗ ಅಬ್ರಹಾಮನು ಹಿಂಜರಿಯಲಿಲ್ಲ. ಸಕಲ ಜನಾಂಗಗಳನ್ನು ತನ್ನ ಸಂತಾನದ ಮೂಲಕ ಆಶೀರ್ವದಿಸಲು ದೇವರು ಮಾಡಿರುವ ವಾಗ್ದಾನವನ್ನು ಆತನು ನೆರವೇರಿಸುವನೆಂದೂ ಆ ವಾಗ್ದಾನವನ್ನು ನೆರವೇರಿಸುವ ಸಲುವಾಗಿ, ಅಗತ್ಯವಿರುವಲ್ಲಿ ಇಸಾಕನನ್ನು ದೇವರು ಸತ್ತವರೊಳಗಿಂದ ಎಬ್ಬಿಸಲೂ ಶಕ್ತನಾಗಿದ್ದಾನೆಂದು ಅವನು ನಂಬಿದನು.​—⁠ಇಬ್ರಿಯ 11:​17-19.

ಹೋರಾಡುವುದನ್ನು ಬಿಟ್ಟುಬಿಡಬೇಡಿ

ದೀರ್ಘಕಾಲ ಸಾಹಸದಿಂದ ಹೋರಾಡಿರುವ ಕೆಲವರು ದಣಿಯುತ್ತಿದ್ದು, ಈಗ ಹಿಂದಿನಷ್ಟೇ ಜಾಗರೂಕತೆಯಿಂದ ಹೋರಾಡದೆ ಇರಬಹುದು. ಈ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟಿರುವ ಊರೀಯನ ಮಾದರಿಯು, ಹೋರಾಟದಲ್ಲಿ ಒಳಗೂಡಿರುವ ಸಕಲರೂ ಸರಿಯಾದ ದೃಷ್ಟಿಕೋನವನ್ನು ಇಟ್ಟುಕೊಳ್ಳುವಂತೆ ಸಹಾಯಮಾಡಬಲ್ಲದು. ನಮ್ಮ ಜೊತೆ ಕ್ರೈಸ್ತ ಯೋಧರಲ್ಲಿ ಅನೇಕರು ಜೀವನಕ್ಕೆ ಬೇಕಾದ ಸೌಕರ್ಯದ ಅಭಾವಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅವರು ಅಪಾಯಗಳಿಗೆ ತುತ್ತಾಗಿ, ಚಳಿ ಮತ್ತು ಹಸಿವೆಯನ್ನು ಅನುಭವಿಸಬೇಕಾಗುತ್ತದೆ. ಊರೀಯನಂತೆ ನಾವು ಸಹ ಈಗ ಆನಂದಿಸಬಹುದಾದ ಸಕಲ ಸುಖಸೌಕರ್ಯಗಳ ಕುರಿತು ಯೋಚಿಸಬಯಸುವುದಿಲ್ಲ, ಇಲ್ಲವೆ ನಿರಾತಂಕವಾದ ಆರಾಮದ ಜೀವನವನ್ನು ನಡೆಸುವ ಇಚ್ಛೆಗೆ ಮಣಿಯಲು ಬಯಸುವುದಿಲ್ಲ. ನಮಗಾಗಿ ಕಾದಿರುವ ಆಶ್ಚರ್ಯಕರವಾದ ಆಶೀರ್ವಾದಗಳನ್ನು ಅನುಭವಿಸಸಾಧ್ಯವಾಗುವ ವರೆಗೆ, ನಾವು ಯೆಹೋವನ ನಿಷ್ಠಾವಂತ ಯೋಧರ ಭೌಗೋಳಿಕ ಸೈನ್ಯದೊಂದಿಗಿದ್ದು ಹೋರಾಡುತ್ತಿರುವುದೇ ನಮ್ಮ ಬಯಕೆಯಾಗಿದೆ.​—⁠ಇಬ್ರಿಯ 10:​32-34.

ಕೊನೆಯ ಆಕ್ರಮಣ ಇನ್ನೂ ತುಂಬ ದೂರದಲ್ಲಿದೆಯೆಂದು ಪ್ರಾಯಶಃ ಯೋಚಿಸುತ್ತಾ ಎಚ್ಚರವಾಗಿರದೆ ಅಲಕ್ಷ್ಯದಿಂದಿರುವುದು ಅಪಾಯಕರವೇ ಸರಿ. ರಾಜ ದಾವೀದನ ಮಾದರಿ ಈ ಅಪಾಯವನ್ನು ಎತ್ತಿ ತೋರಿಸುತ್ತದೆ. ಯಾವುದೊ ಕಾರಣದಿಂದ ಅವನು ತನ್ನ ಸೈನ್ಯದೊಂದಿಗೆ ಯುದ್ಧರಂಗದಲ್ಲಿರಲಿಲ್ಲ. ಇದರ ಪರಿಣಾಮವಾಗಿ, ದಾವೀದನು ಗುರುತರವಾದ ಪಾಪವನ್ನು ಮಾಡಿದನು ಮತ್ತು ಇದು ಅವನ ಉಳಿದ ಜೀವಮಾನದಲ್ಲಿನ ಸಂಕಟ ಮತ್ತು ಕಷ್ಟಾನುಭವಕ್ಕೆ ಕಾರಣವಾಯಿತು.​—⁠2 ಸಮುವೇಲ 12:​10-14.

ಹಾಗಾದರೆ ಈ ಯುದ್ಧದಲ್ಲಿ ಭಾಗವಹಿಸಿ, ಕದನದ ಕಷ್ಟಗಳನ್ನು ಎದುರಿಸಿ, ಅಪಹಾಸ್ಯವನ್ನು ಸಹಿಸಿ, ಸಂದೇಹಾಸ್ಪದವಾದ ಲೌಕಿಕ ಸುಖಭೋಗಗಳನ್ನು ತ್ಯಜಿಸುವುದು ಸಾರ್ಥಕವೊ? ಯುದ್ಧದಲ್ಲಿ ಯಶಸ್ವಿಯಾಗಿ ಹೋರಾಡುತ್ತಿರುವವರು, ಲೋಕವು ಏನನ್ನು ನೀಡುತ್ತದೊ ಅದು ಥಳುಕಿನ ಅಲಂಕಾರದಂತೆ ಆಕರ್ಷಕವಾಗಿರುತ್ತದೆಂದೂ ಆದರೆ ಹತ್ತಿರದಿಂದ ನೋಡುವಾಗ ಅದರಲ್ಲಿ ಸತ್ವವಿಲ್ಲವೆಂದೂ ಒಪ್ಪಿಕೊಳ್ಳುತ್ತಾರೆ. (ಫಿಲಿಪ್ಪಿ 3:⁠8) ಇದಲ್ಲದೆ, ಅನೇಕವೇಳೆ ಇಂತಹ ಸುಖಭೋಗಗಳು ವೇದನೆ ಮತ್ತು ನಿರಾಶೆಯಲ್ಲಿ ಅಂತ್ಯಗೊಳ್ಳುತ್ತವೆ.

ಈ ಆಧ್ಯಾತ್ಮಿಕ ಹೋರಾಟದಲ್ಲಿರುವ ಕ್ರೈಸ್ತನಾದರೊ ನಿಜ ಸ್ನೇಹಿತರೊಂದಿಗಿನ ಆಪ್ತ ಸಂಬಂಧದಲ್ಲಿ, ಶುದ್ಧ ಮನಸ್ಸಾಕ್ಷಿ, ಮತ್ತು ಆಶ್ಚರ್ಯಕರವಾದ ನಿರೀಕ್ಷೆಯಲ್ಲಿ ಆನಂದಿಸುತ್ತಾನೆ. ಆತ್ಮಾಭಿಷಿಕ್ತ ಕ್ರೈಸ್ತರು ಕ್ರಿಸ್ತ ಯೇಸುವಿನೊಂದಿಗೆ ಅಮರ ಸ್ವರ್ಗೀಯ ಜೀವನವನ್ನು ಎದುರುನೋಡುತ್ತಾರೆ. (1 ಕೊರಿಂಥ 15:54) ಹೆಚ್ಚಿನ ಕ್ರೈಸ್ತ ಯೋಧರು ಭೂಪರದೈಸಿನಲ್ಲಿ ಪರಿಪೂರ್ಣ ಮಾನವ ಜೀವನವನ್ನು ಎದುರುನೋಡುತ್ತಾರೆ. ಇಂಥ ಬಹುಮಾನಗಳು ನಾವು ಮಾಡುವ ಯಾವ ತ್ಯಾಗಕ್ಕೂ ಅರ್ಹವಾಗಿವೆ ಎಂಬುದು ಖಂಡಿತ. ಮತ್ತು ಲೌಕಿಕ ಯುದ್ಧಗಳಿಗೆ ವ್ಯತಿರಿಕ್ತವಾಗಿ, ಎಷ್ಟರ ವರೆಗೆ ನಾವು ನಂಬಿಗಸ್ತರಾಗಿರುತ್ತೇವೊ ಅಷ್ಟರ ವರೆಗೆ ಈ ಯುದ್ಧದಲ್ಲಿ ನಮಗೆ ವಿಜಯವು ಖಾತ್ರಿ. (ಇಬ್ರಿಯ 11:⁠1) ಮತ್ತು ಸೈತಾನನ ವಶದಲ್ಲಿರುವ ಈ ವ್ಯವಸ್ಥೆಯ ಗತಿಯೋ, ಪೂರ್ತಿ ನಾಶನವೇ.​—⁠2 ಪೇತ್ರ 3:10.

ಈ ಹೋರಾಟವನ್ನು ನೀವು ಮಾಡುತ್ತಾ ಮುಂದುವರಿಯುವಾಗ, “ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂಬ ಯೇಸುವಿನ ಮಾತುಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. (ಯೋಹಾನ 16:33) ಅವನು ಎಚ್ಚರಿಕೆಯಿಂದಿದ್ದು, ಪರೀಕ್ಷೆಯಲ್ಲಿ ಸಮಗ್ರತೆಯನ್ನು ಇಟ್ಟುಕೊಳ್ಳುವ ಮೂಲಕ ಲೋಕವನ್ನು ಜಯಿಸಿದನು. ನಾವೂ ಹಾಗೆ ಮಾಡಬಲ್ಲೆವು.

[ಪುಟ 27ರಲ್ಲಿರುವ ಸಂಕ್ಷಿಪ್ತ ವಿವರಣೆ]

ಗುಂಡು ಹಾರಿಸಲ್ಪಡುವುದಾಗಲಿ, ಬಾಂಬಿನ ಎಸೆತವಾಗಲಿ ಇಲ್ಲವಾದರೂ ಯುದ್ಧೋಪಾಯವು ಕಡಿಮೆ ತೀಕ್ಷ್ಣತೆಯದ್ದಾಗಿರಲು ಸಾಧ್ಯವಿಲ್ಲ

[ಪುಟ 30ರಲ್ಲಿರುವ ಸಂಕ್ಷಿಪ್ತ ವಿವರಣೆ]

ಎಷ್ಟರ ವರೆಗೆ ನಾವು ನಂಬಿಗಸ್ತರಾಗಿರುತ್ತೇವೊ ಅಷ್ಟರ ವರೆಗೆ ಈ ಯುದ್ಧದಲ್ಲಿ ನಮಗೆ ವಿಜಯವು ಖಾತ್ರಿ

[ಪುಟ 26ರಲ್ಲಿರುವ ಚಿತ್ರ]

ರಕ್ಷಣೆಯೆಂಬ ಶಿರಸ್ತ್ರಾಣ ನಿರುತ್ಸಾಹದೊಂದಿಗೆ ಹೋರಾಡಲು ನಮಗೆ ಸಹಾಯಮಾಡುವುದು

ಸೈತಾನನ ‘ಅಗ್ನಿಬಾಣಗಳನ್ನು’ ತಪ್ಪಿಸಿಕೊಳ್ಳಲು ನಂಬಿಕೆಯೆಂಬ ದೊಡ್ಡ ಗುರಾಣಿಯನ್ನು ಉಪಯೋಗಿಸಿ

[ಪುಟ 28ರಲ್ಲಿರುವ ಚಿತ್ರ]

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”

[ಪುಟ 29ರಲ್ಲಿರುವ ಚಿತ್ರ]

ದೇವರ ವಾಗ್ದಾನಗಳ ನೆರವೇರಿಕೆಯಲ್ಲಿ ನಮಗೆ ನಂಬಿಕೆ ಇರಬೇಕು