ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಹೃದಯವನ್ನು ಕಾಪಾಡಿ, ನೈತಿಕ ಪರಿಶುದ್ಧತೆಯನ್ನು ಸುಸ್ಥಿತಿಯಲ್ಲಿಡಿರಿ

ನಿಮ್ಮ ಹೃದಯವನ್ನು ಕಾಪಾಡಿ, ನೈತಿಕ ಪರಿಶುದ್ಧತೆಯನ್ನು ಸುಸ್ಥಿತಿಯಲ್ಲಿಡಿರಿ

ನಿಮ್ಮ ಹೃದಯವನ್ನು ಕಾಪಾಡಿ, ನೈತಿಕ ಪರಿಶುದ್ಧತೆಯನ್ನು ಸುಸ್ಥಿತಿಯಲ್ಲಿಡಿರಿ

“ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.”​—⁠ಜ್ಞಾನೋಕ್ತಿ 4:23.

ಆಕಲಾಚಿತ್ರವು ಹಳೆಯ ಶೈಲಿಯದ್ದಾಗಿ ಕಂಡುಬಂದಿರಬಹುದು. ಬಹುಶಃ ಅದು ಆ ಮನೆಯ ಅಲಂಕಾರಕ್ಕೆ ಹೊಂದಿಕೊಳ್ಳುತ್ತಿರಲಿಲ್ಲ. ಹೇಗೂ ಇರಲಿ, ಆ ಮನೆ ಯಜಮಾನನಿಗೆ ಅದು ಅಗತ್ಯವೆಂದೆಣಿಸಲಿಲ್ಲ. ಕೊನೆಗೆ ಆ ಕಲಾಚಿತ್ರವು 1,400 ರೂಪಾಯಿಗಳ ಬೆಲೆಯುಳ್ಳದ್ದಾಗಿ ಧರ್ಮಕೆಲಸ ಸಹಾಯಾರ್ಥದ ಒಂದು ಮಾರಾಟಕ್ಕೆ ಬಂದು ತಲಪಿತು. ಆದರೆ ಕೆಲವೇ ವರುಷಗಳ ನಂತರ ಆ ಚಿತ್ರವು 4.7 ಕೋಟಿ ರೂಪಾಯಿ ಬೆಲೆಯುಳ್ಳದ್ದಾಗಿದೆಯೆಂಬುದು ತಿಳಿದುಬಂತು! ಹೌದು, ವಾಸ್ತವದಲ್ಲಿ ಅದು ಅತಿ ಅಪರೂಪದ ಒಂದು ನಾಯಕಕೃತಿಯಾಗಿತ್ತು. ಈ ಅಪೂರ್ವ ಕೃತಿಗೆ ಸರಿಯಾದ ಬೆಲೆಯನ್ನು ಕಟ್ಟದಿದ್ದ ಆ ಮಾಜಿ ಯಜಮಾನನಿಗೆ ಹೇಗನಿಸಿರಬೇಕೆಂಬುದನ್ನು ತುಸು ಊಹಿಸಿರಿ!

2 ಅನೇಕವೇಳೆ, ತದ್ರೀತಿಯ ಸಂಗತಿಯು ನೈತಿಕ ಪರಿಶುದ್ಧತೆಗೆ ಅಂದರೆ ಒಬ್ಬನ ನೈತಿಕ ಶುದ್ಧತೆ ಅಥವಾ ನಿರ್ಮಲತೆಗೆ ಸಂಭವಿಸುತ್ತದೆ. ಇಂದು ಹೆಚ್ಚಿನ ಜನರು ತಮ್ಮ ಸ್ವಂತ ನೈತಿಕ ಪರಿಶುದ್ಧತೆಯನ್ನು ತೀರ ಕಡಿಮೆ ಮೌಲ್ಯವುಳ್ಳದ್ದಾಗಿ ಪರಿಗಣಿಸುತ್ತಾರೆ. ಕೆಲವರು ಅದನ್ನು ಹಳೆಯ ಶೈಲಿಯ ವಿಚಾರವೆಂದೂ ಆಧುನಿಕ ಶೈಲಿಗೆ ಹೊಂದಿಕೊಳ್ಳದ ಸಂಗತಿಯೆಂದೂ ಭಾವಿಸುತ್ತಾರೆ. ಆದುದರಿಂದ ಅವರದನ್ನು ಅತ್ಯಲ್ಪ ಬೆಲೆಗೆ ಕೊಟ್ಟುಬಿಡುತ್ತಾರೆ. ಕೆಲವರು ತಮ್ಮ ನೈತಿಕ ಪರಿಶುದ್ದತೆಯನ್ನು ಕೆಲವೇ ಕ್ಷಣಗಳ ಕಾಮತೃಪ್ತಿಗಾಗಿ ವಿನಿಮಯಮಾಡುತ್ತಾರೆ. ಇತರರು, ತಮ್ಮ ಸಮಾನಸ್ಥರ ಅಥವಾ ವಿರುದ್ಧ ಲಿಂಗದವರ ದೃಷ್ಟಿಯಲ್ಲಿ ಹೆಚ್ಚು ಮಾನವನ್ನು ಗಳಿಸಲಿಕ್ಕಾಗಿ ಅದನ್ನು ಆಹುತಿಕೊಡುತ್ತಾರೆ.​—⁠ಜ್ಞಾನೋಕ್ತಿ 13:20.

3 ಅನೇಕರು, ತಮ್ಮ ಪರಿಶುದ್ಧತೆಯು ನಿಜವಾಗಿಯೂ ಎಷ್ಟು ಬೆಲೆಬಾಳುವ ಸ್ವತ್ತಾಗಿತ್ತೆಂಬುದನ್ನು ಕಾಲ ಮಿಂಚಿಹೋದ ನಂತರವೇ ಕಂಡುಕೊಳ್ಳುತ್ತಾರೆ. ಅವರ ನಷ್ಟವು ಅನೇಕವೇಳೆ ದುರಂತಕರವಾಗಿರುತ್ತದೆ. ಬೈಬಲ್‌ ಹೇಳುವಂತೆ, ಲೈಂಗಿಕ ಅನೈತಿಕತೆಯ ಅಂತ್ಯಪರಿಣಾಮಗಳು “ವಿಷದಂತೆ ಕಹಿ” ಆಗಿರುತ್ತವೆ. (ಜ್ಞಾನೋಕ್ತಿ 5:​3, 4) ಇಂದಿನ ಭ್ರಷ್ಟ ನೈತಿಕ ಪರಿಸರದಲ್ಲಿ ನೀವು ನಿಮ್ಮ ನೈತಿಕ ಪರಿಶುದ್ಧತೆಯನ್ನು ಹೇಗೆ ಬಹುಮೂಲ್ಯವೆಂದೆಣಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳಬಲ್ಲಿರಿ? ನಾವು ಕೈಗೊಳ್ಳಬಹುದಾದ ಮೂರು ಸಂಬಂಧಿತ ಹೆಜ್ಜೆಗಳ ಮೇಲೆ ನಾವೀಗ ಗಮನಹರಿಸುವೆವು.

ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿರಿ

4 ಪರಿಶುದ್ಧತೆಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದರ ಕೀಲಿ ಕೈ ಹೃದಯವನ್ನು ಕಾಪಾಡಿಕೊಳ್ಳುವುದೇ ಆಗಿದೆ. ಬೈಬಲ್‌ ಹೇಳುವುದು: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) ಇಲ್ಲಿ ಸೂಚಿಸಲ್ಪಟ್ಟಿರುವ “ಹೃದಯ” ಏನಾಗಿದೆ? ಇದು ಅಕ್ಷರಾರ್ಥಕ ಹೃದಯವಲ್ಲ. ಇದು ಸಾಂಕೇತಿಕವಾಗಿದೆ. ಅದು ನಿಮ್ಮ ಆಲೋಚನೆಗಳು, ಅನಿಸಿಕೆಗಳು, ಮತ್ತು ಪ್ರಚೋದನೆಗಳು ಸೇರಿರುವ ನಿಮ್ಮ ಆಂತರಿಕ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಬೈಬಲ್‌ ಹೇಳುವುದು: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಓರೆ ಅಕ್ಷರಗಳು ನಮ್ಮವು.) (ಧರ್ಮೋಪದೇಶಕಾಂಡ 6:5) ಯೇಸು ಈ ಆಜ್ಞೆಯನ್ನು ಸೂಚಿಸುತ್ತಾ ಅದು ಎಲ್ಲದ್ದಕ್ಕಿಂತ ಅತಿ ಮುಖ್ಯವಾದ ಆಜ್ಞೆಯೆಂದು ಹೇಳಿದನು. (ಮಾರ್ಕ 12:​29, 30) ನಮ್ಮ ಈ ಹೃದಯವು ಭಾರೀ ಬೆಲೆಯುಳ್ಳದ್ದೆಂಬುದು ಸ್ಪಷ್ಟ. ಅದು ಕಾಪಾಡಿಕೊಳ್ಳಲು ಯೋಗ್ಯವಾದ ವಸ್ತುವಾಗಿದೆ.

5 ಆದರೆ, “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ” ಎಂದೂ ಬೈಬಲ್‌ ಹೇಳುತ್ತದೆ. (ಯೆರೆಮೀಯ 17:9) ಆದರೆ ಹೃದಯವು ಹೇಗೆ ವಂಚಕವಾಗಿದ್ದು, ನಮಗೆ ಅಪಾಯಕರವಾಗಿರಬಲ್ಲದು? ಒಂದು ಮೋಟಾರು ವಾಹನವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಅದು ನಮಗೆ ಒಂದು ಬೆಲೆಬಾಳುವ ಉಪಕರಣವಾಗಿದೆ, ತುರ್ತಿನ ಸಮಯದಲ್ಲಿ ಅದು ಜೀವರಕ್ಷಕವೂ ಆಗಿರಸಾಧ್ಯವಿದೆ. ಆದರೆ ಚಾಲಕನು ಸ್ಟೀಯರಿಂಗನ್ನು ಸದಾ ನಿರ್ದೇಶಿಸುತ್ತಾ ಆ ವಾಹನವನ್ನು ನಿಯಂತ್ರಿಸದಿರುವಲ್ಲಿ, ಅದೇ ವಾಹನವು ಸುಲಭವಾಗಿ ಒಂದು ಮಾರಕ ಅಸ್ತ್ರವಾಗಿ ಪರಿಣಮಿಸಬಹುದು. ತದ್ರೀತಿಯಲ್ಲಿ, ನೀವು ಹೃದಯವನ್ನು ಕಾಪಾಡಿಕೊಳ್ಳದಿರುವಲ್ಲಿ, ನಿಮ್ಮ ಪ್ರತಿಯೊಂದು ಆಂತರಿಕ ಬಯಕೆ ಮತ್ತು ಪ್ರವೃತ್ತಿಯು ನಿಮ್ಮನ್ನು ನಿಯಂತ್ರಿಸಿ, ನಿಮ್ಮ ಜೀವನಪಥವನ್ನು ಆಪತ್ತಿಗೆ ನಡೆಸಬಹುದು. ದೇವರ ವಾಕ್ಯವು ಅನ್ನುವುದು: “ತನ್ನಲ್ಲೇ ಭರವಸವಿಡುವವನು ಮೂಢನು; ಜ್ಞಾನ [“ವಿವೇಕ,” NW]ದಿಂದ ನಡೆಯುವವನು ಉದ್ಧಾರವನ್ನು ಪಡೆಯುವನು.” (ಜ್ಞಾನೋಕ್ತಿ 28:26) ಹೌದು, ಪ್ರಯಾಣಕ್ಕೆ ತೊಡಗುವ ಮೊದಲು ದಾರಿ ನಕ್ಷೆಯನ್ನು ನೀವು ಹೇಗೆ ವಿಚಾರಿಸುವಿರೊ ಹಾಗೆಯೇ, ದೇವರ ವಾಕ್ಯವು ನಿಮ್ಮನ್ನು ಮಾರ್ಗದರ್ಶಿಸುವಂತೆ ನೀವು ಅದನ್ನು ಉಪಯೋಗಿಸುವಲ್ಲಿ ನೀವು ವಿವೇಕದಿಂದ ವರ್ತಿಸಿ ವಿಪತ್ತುಗಳಿಂದ ಪಾರಾಗಬಲ್ಲಿರಿ.​—⁠ಕೀರ್ತನೆ 119:105.

6 ನಮ್ಮ ಹೃದಯವು ಸಹಜವಾಗಿಯೇ ನೈತಿಕ ಪರಿಶುದ್ಧತೆಯ ಕಡೆಗೆ ಓಲಿಕೊಂಡಿರುವುದಿಲ್ಲ. ಅದನ್ನು ನಾವು ಆ ಕಡೆಗೆ ತಿರುಗಿಸಬೇಕಾಗುತ್ತದೆ. ಇದನ್ನು ಮಾಡುವ ಒಂದು ವಿಧವು, ನೈತಿಕ ಪರಿಶುದ್ಧತೆಯ ನಿಜ ಮೌಲ್ಯದ ಕುರಿತಾಗಿ ಧ್ಯಾನಿಸುವುದೇ ಆಗಿದೆ. ಈ ಗುಣವು, ನಿರ್ಮಲತೆ ಮತ್ತು ಶುದ್ಧತೆ, ಹಾಗೂ ಪಾಪಪ್ರವೃತ್ತಿಯಿಂದ ಪ್ರತ್ಯೇಕತೆಯನ್ನು ಸೂಚಿಸುವಂಥ ಪವಿತ್ರತೆಗೆ ಒತ್ತಾಗಿ ಸಂಬಂಧಿಸಿದೆ. ಪರಿಶುದ್ಧತೆಯು ಒಂದು ಅಮೂಲ್ಯ ಗುಣವಾಗಿದ್ದು, ಯೆಹೋವ ದೇವರ ಸಾಕ್ಷಾತ್‌ ಸ್ವಭಾವದ ಭಾಗವಾಗಿದೆ. ಆ ಗುಣವನ್ನು ನೂರಾರು ಬೈಬಲ್‌ ವಚನಗಳು ಯೆಹೋವ ದೇವರೊಂದಿಗೆ ಜೋಡಿಸುತ್ತವೆ. ವಾಸ್ತವವೇನಂದರೆ, “ಪರಿಶುದ್ಧತೆಯು ಯೆಹೋವನಿಗೆ ಮೀಸಲು” ಎಂದು ಬೈಬಲು ಹೇಳುತ್ತದೆ. (ವಿಮೋಚನಕಾಂಡ 28:​36, NW) ಆದರೆ ಈ ಉದಾತ್ತ ಗುಣಕ್ಕೂ ಅಪರಿಪೂರ್ಣ ಮಾನವರಾದ ನಮಗೂ ಏನು ಸಂಬಂಧ?

7 ಯೆಹೋವನು ತನ್ನ ವಾಕ್ಯದಲ್ಲಿ ನಮಗೆ, “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂದು ಹೇಳುತ್ತಾನೆ. (1 ಪೇತ್ರ 1:16) ಹೌದು, ನಾವು ಯೆಹೋವನ ಪರಿಶುದ್ಧತೆಯನ್ನು ಅನುಕರಿಸಬಲ್ಲೆವು. ನಾವು ಆತನ ಮುಂದೆ ನಮ್ಮ ನೈತಿಕ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುತ್ತಾ ಶುದ್ಧರಾಗಿರಬಲ್ಲೆವು. ಹೀಗೆ ಅಶುದ್ಧವೂ ಹೊಲಸೂ ಆಗಿರುವ ಕೃತ್ಯಗಳಿಂದ ನಾವು ದೂರವಿರುವಾಗ, ಸರ್ವೋನ್ನತ ದೇವರ ಈ ಸೊಗಸಾದ ಗುಣವನ್ನು ಪ್ರತಿಬಿಂಬಿಸುವ ಉದಾತ್ತವೂ ರೋಮಾಂಚಕವೂ ಆದ ಸುಯೋಗವನ್ನು ನಾವು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ! (ಎಫೆಸ 5:⁠1) ಅದನ್ನು ತಲಪುವುದು ನಮಗೆ ಅಸಾಧ್ಯವೆಂದು ನಾವು ಊಹಿಸಬಾರದು, ಏಕೆಂದರೆ ಯೆಹೋವನು ನಮಗೆ ಸಾಧ್ಯವಿರುವುದಕ್ಕಿಂತ ಹೆಚ್ಚಿನದ್ದನ್ನು ಎಂದಿಗೂ ಕೇಳಿಕೊಳ್ಳದ ವಿವೇಕಿಯೂ ವಿನಯವುಳ್ಳವನೂ ಆದ ಯಜಮಾನನಾಗಿದ್ದಾನೆ. (ಕೀರ್ತನೆ 103:13, 14; ಯಾಕೋಬ 3:17) ಆಧ್ಯಾತ್ಮಿಕವಾಗಿಯೂ ನೈತಿಕವಾಗಿಯೂ ಪರಿಶುದ್ಧರಾಗಿರಲು ಪ್ರಯತ್ನವು ಅಗತ್ಯವೆಂಬುದು ನಿಜ. ಆದರೆ ಅಪೊಸ್ತಲ ಪೌಲನು, ‘ಕ್ರಿಸ್ತನಿಗೆ ಸಲ್ಲತಕ್ಕ ಯಥಾರ್ಥತೆ ಮತ್ತು ನೈತಿಕ ಪರಿಶುದ್ಧತೆಯ’ ಕುರಿತು ಬರೆದನು. (2 ಕೊರಿಂಥ 11:⁠3, NW) ನೈತಿಕವಾಗಿ ಪರಿಶುದ್ಧರಾಗಿರಲು ಸಕಲ ಪ್ರಯತ್ನವನ್ನು ಮಾಡಲಿಕ್ಕಾಗಿ ನಾವು ಕ್ರಿಸ್ತನಿಗೂ ಆತನ ತಂದೆಗೂ ಹಂಗಿಗರಾಗಿದ್ದೇವಲ್ಲವೆ? ಏಕೆಂದರೆ ನಾವು ಎಂದೂ ಹಿಂದಿರುಗಿಸಲಾಗದಷ್ಟು ಪ್ರೀತಿಯನ್ನು ಅವರು ನಮ್ಮ ಕಡೆಗೆ ತೋರಿಸಿದ್ದಾರೆ. (ಯೋಹಾನ 3:16; 15:13) ಆದುದರಿಂದ, ಶುದ್ಧವೂ ನೈತಿಕವೂ ಆದ ಜೀವನವನ್ನು ನಡೆಸುವ ಮೂಲಕ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಯೋಗ್ಯವಾದ ವಿಷಯವಾಗಿದೆ. ನಮ್ಮ ನೈತಿಕ ಪರಿಶುದ್ಧತೆಯ ಕುರಿತು ಈ ರೀತಿಯಲ್ಲಿ ಯೋಚಿಸುತ್ತಿರುವ ಮೂಲಕ ನಾವು ಅದನ್ನು ಬೆಲೆಬಾಳುವಂಥದ್ದಾಗಿ ಎಣಿಸಿ, ನಮ್ಮ ಹೃದಯವನ್ನು ಕಾಪಾಡಿಕೊಳ್ಳುವೆವು.

8 ನಾವು ನಮ್ಮನ್ನೇ ಪೋಷಿಸಿಕೊಳ್ಳುವ ವಿಧದ ಮೂಲಕವೂ ನಮ್ಮ ಹೃದಯವನ್ನು ಕಾಪಾಡಿಕೊಳ್ಳುತ್ತೇವೆ. ನಾವು ನಮ್ಮ ಮನಸ್ಸು ಮತ್ತು ಹೃದಯವನ್ನು ಉತ್ತಮ ಆತ್ಮಿಕ ಆಹಾರದಿಂದ ಕ್ರಮವಾಗಿ ಪೋಷಿಸಿ, ದೇವರ ರಾಜ್ಯದ ಸುವಾರ್ತೆಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದು ಅಗತ್ಯ. (ಕೊಲೊಸ್ಸೆ 3:⁠2) ನಮ್ಮ ಸಂಭಾಷಣೆ ಸಹ ನಮ್ಮ ಗಮನದ ಕೇಂದ್ರಬಿಂದುವನ್ನು ಪ್ರತಿಬಿಂಬಿಸಬೇಕು. ಒಂದುವೇಳೆ ನಾವು ಮಾಂಸಿಕ, ಅನೈತಿಕ ವಿಷಯಗಳ ಮಾತುಕತೆಗಾಗಿ ಖ್ಯಾತರಾಗಿರುವುದಾದರೆ, ನಮ್ಮ ಹೃದಯದ ಸ್ಥಿತಿಯು ಹೇಗಿದೆ ಎಂಬುದನ್ನು ನಾವು ಪ್ರಕಟಪಡಿಸುತ್ತಿದ್ದೇವೆ. (ಲೂಕ 6:45) ಹೀಗಿರುವ ಬದಲಿಗೆ, ಆತ್ಮಿಕ ಹಾಗೂ ಭಕ್ತಿವರ್ಧಕ ವಿಷಯಗಳ ಬಗ್ಗೆ ಮಾತಾಡುವವರೆಂಬ ಹೆಸರು ನಮಗಿರಲಿ. (ಎಫೆಸ 5:3) ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ನಾವು ದೂರವಿರತಕ್ಕ ಗುರುತರವಾದ ಅಪಾಯಗಳಿವೆ. ಇವುಗಳಲ್ಲಿ ಎರಡನ್ನು ನಾವು ಚರ್ಚಿಸೋಣ.

ಜಾರತ್ವದಿಂದ ದೂರ ಓಡಿಹೋಗಿರಿ

9 ತಮ್ಮ ಹೃದಯವನ್ನು ಕಾಪಾಡಿಕೊಂಡು ನೈತಿಕ ಪರಿಶುದ್ಧತೆಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಅನೇಕರಿಗೆ ಸಹಾಯಮಾಡಿರುವಂಥ ಒಂದಿಷ್ಟು ಸಲಹೆಯನ್ನು ಬರೆಯುವಂತೆ ಯೆಹೋವನು ಅಪೊಸ್ತಲ ಪೌಲನನ್ನು ಪ್ರೇರಿಸಿದನು. “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂದು ಪೌಲನು ಹೇಳಿದನು. (1 ಕೊರಿಂಥ 6:18) ಗಮನಿಸಿರಿ, ಅವನು “ಜಾರತ್ವದಿಂದ ದೂರಸರಿಯಿರಿ” ಎಂದಷ್ಟೇ ಹೇಳಲಿಲ್ಲ. ಕ್ರೈಸ್ತರು ಹೆಚ್ಚನ್ನು ಮಾಡಬೇಕು. ಜೀವಘಾತಕ ಅಪಾಯದಿಂದ ಅವರು ಹೇಗೆ ಓಡಿಹೋಗುವರೊ ಹಾಗೆಯೆ ಅಂತಹ ಅನೈತಿಕ ಕೃತ್ಯಗಳಿಂದ ಅವರು ಓಡಿಹೋಗಬೇಕು. ಆ ಬುದ್ಧಿವಾದವನ್ನು ನಾವು ಅಲಕ್ಷ್ಯಮಾಡುವಲ್ಲಿ, ಘೋರ ಲೈಂಗಿಕ ಅನೈತಿಕತೆಯಲ್ಲಿ ಸಿಕ್ಕಿಬಿದ್ದು ದೇವರ ಅನುಗ್ರಹವನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ನಾವು ಹೆಚ್ಚಿಸುತ್ತೇವೆ.

10 ದೃಷ್ಟಾಂತಕ್ಕಾಗಿ: ಒಬ್ಬ ತಾಯಿ ತನ್ನ ಪುಟ್ಟ ಮಗನನ್ನು ಒಂದು ವಿಶೇಷ ಸಮಾರಂಭಕ್ಕಾಗಿ ಸಿದ್ಧಗೊಳಿಸುತ್ತಾ, ಅವನನ್ನು ತೊಳೆದು ಒಳ್ಳೇ ಬಟ್ಟೆ ತೊಡಿಸಿದ್ದಾಳೆ. ಕುಟುಂಬವು ಹೊರಡುವುದಕ್ಕೆ ಮೊದಲು ತಾನು ಹೊರಗೆ ಹೋಗಿ ಸ್ವಲ್ಪ ಹೊತ್ತು ಆಟವಾಡಬಹುದೋ ಎಂದು ಅವನು ಕೇಳಲಾಗಿ, ಆಕೆ ಒಂದು ಷರತ್ತಿನ ಮೇಲೆ ಒಪ್ಪಿಕೊಳ್ಳುತ್ತಾಳೆ. ಆಕೆ ಹೇಳುವುದು: “ಆ ಕೆಸರು ನೀರಿನ ಗುಂಡಿಯ ಬಳಿ ಹೋಗಬೇಡ. ನೀನು ಕೊಳಕಾಗುವಲ್ಲಿ ನಿನಗೆ ಶಿಕ್ಷೆ ಸಿಗುತ್ತದೆ.” ಆದರೆ ಕೆಲವೇ ನಿಮಿಷಗಳಲ್ಲಿ ಆ ಹುಡುಗನು ಅದೇ ಕೆಸರು ನೀರಿನ ಅಂಚಿನಲ್ಲಿ ತನ್ನ ಕಾಲ್ಬೆರಳ ಮೇಲೆ ನಡೆಯುತ್ತಿರುವುದನ್ನು ಆಕೆ ನೋಡುತ್ತಾಳೆ. ಅವನಿನ್ನೂ ಕೊಳಕಾಗಿರುವುದಿಲ್ಲ ನಿಜ. ಆದರೆ ಅವನು ಕೆಸರುಗುಂಡಿಯ ಬಳಿ ಹೋಗಬಾರದೆಂಬ ಆಕೆಯ ಎಚ್ಚರಿಕೆಯನ್ನು ಅಲಕ್ಷ್ಯಮಾಡುತ್ತಿದ್ದಾನೆ. ಮತ್ತು ಅವನು ಇನ್ನೇನು ತೊಂದರೆಯಲ್ಲಿ ಸಿಕ್ಕಿಬೀಳುವುದರಲ್ಲಿದ್ದಾನೆ. (ಜ್ಞಾನೋಕ್ತಿ 22:15) ಹೆಚ್ಚು ಜಾಗರೂಕರಾಗಿರಬೇಕಾದ ಅನೇಕ ಯುವ ಜನರೂ ವಯಸ್ಕರೂ ಇದೇ ರೀತಿಯ ತಪ್ಪುಗಳನ್ನು ಮಾಡುತ್ತಾರೆ. ಅದು ಹೇಗೆ?

11 ಅನೇಕರು “ತುಚ್ಛವಾದ ಕಾಮಾಭಿಲಾಷೆಗೆ” ಬಲಿಬಿದ್ದಿರುವ ಈ ಸಮಯಗಳಲ್ಲಿ, ನಿಷಿದ್ಧ ಲೈಂಗಿಕ ಸಂಬಂಧಗಳನ್ನು ಪ್ರವರ್ಧಿಸುವ ಒಂದು ಉದ್ಯಮವೇ ಉದಯಿಸಿದೆ. (ರೋಮಾಪುರ 1:​26, 27) ಅಶ್ಲೀಲ ಸಾಹಿತ್ಯವೆಂಬ ಪೀಡೆಯು ಪತ್ರಿಕೆಗಳು, ಪುಸ್ತಕಗಳು, ವಿಡಿಯೋಗಳು, ಮತ್ತು ಇಂಟರ್‌ನೆಟ್‌ನಲ್ಲಿ ಅತಿಯಾಗಿ ಹಬ್ಬಿಕೊಂಡಿದೆ. ಇಂತಹ ಚಿತ್ರಣಗಳನ್ನು ತಮ್ಮ ಮನಸ್ಸಿನಲ್ಲಿ ತುಂಬಿಸಿಕೊಳ್ಳುವವರು ಜಾರತ್ವದಿಂದ ಖಂಡಿತವಾಗಿಯೂ ದೂರ ಓಡಿಹೋಗುತ್ತಿಲ್ಲ. ಅವರು ಅದರೊಂದಿಗೆ ಆಟವಾಡುತ್ತಿದ್ದು, ಬೈಬಲಿನ ಎಚ್ಚರಿಕೆಯನ್ನು ಅಲಕ್ಷಿಸುತ್ತಾ ಅದರ ಅಂಚಿನ ಮೇಲೆ ಅಪಾಯಕಾರಿಯಾದ ಸ್ಥಿತಿಯಲ್ಲಿ ನಿಂತಿದ್ದಾರೆ. ಹೃದಯವನ್ನು ಕಾಪಾಡಿಕೊಳ್ಳುವುದಕ್ಕೆ ಬದಲಾಗಿ, ಅವರು ಅದರಲ್ಲಿ, ಜ್ಞಾಪಕದಿಂದ ಮಾಸಿಹೋಗಲು ಅನೇಕ ವರ್ಷಗಳು ತಗಲಬಹುದಾದ ಸುಸ್ಪಷ್ಟವಾದ ಚಿತ್ರಣಗಳಿಂದ ವಿಷತುಂಬಿಸುತ್ತಿದ್ದಾರೆ. (ಜ್ಞಾನೋಕ್ತಿ 6:27) ಆದರೆ ನಾವು ಯೋಬನಿಂದ ಕಲಿತುಕೊಳ್ಳೋಣ. ಕೇವಲ ಕೆಟ್ಟದನ್ನೇ ಮಾಡುವಂತೆ ತನ್ನ ಮನಸ್ಸನ್ನು ಸೆಳೆಯಬಹುದಾದ ವಿಷಯಗಳನ್ನು ನೋಡದಿರುವಂತೆ ಅವನು ತನ್ನ ಕಣ್ಣುಗಳೊಡನೆ ಒಂದು ನಿಬಂಧನೆಯನ್ನು ಮಾಡಿಕೊಂಡನು. (ಯೋಬ 31:⁠1) ಇಂದು ನಾವು ಅನುಸರಿಸಬೇಕಾದ ಮಾದರಿಯು ಇದೇ ಆಗಿದೆ!

12 ವಿಶೇಷವಾಗಿ ಪ್ರೇಮಯಾಚನೆಯ ಅವಧಿಯಲ್ಲಿ ‘ಜಾರತ್ವಕ್ಕೆ ದೂರವಾಗಿ ಓಡಿಹೋಗುವುದು’ ಪ್ರಾಮುಖ್ಯ. ಆ ಅವಧಿಯು ನಿರೀಕ್ಷೆ ಮತ್ತು ಎದುರುನೋಡುವಿಕೆಯ ಆನಂದಭರಿತ ಸಮಯವಾಗಿರಬೇಕಾದರೂ ಕೆಲವು ಮಂದಿ ಯುವ ಹುಡುಗ ಹುಡುಗಿಯರು ಅನೈತಿಕತೆಯೊಂದಿಗೆ ಚೆಲ್ಲಾಟವಾಡುತ್ತ ಅದನ್ನು ಕೆಡಿಸಿಕೊಳ್ಳುತ್ತಾರೆ. ಹೀಗೆ ಮಾಡುವಾಗ ಅವರು, ಒಂದು ಒಳ್ಳೆಯ ವಿವಾಹದ ಅತ್ಯುತ್ತಮ ಅಸ್ತಿವಾರವಾದ ನಿಸ್ವಾರ್ಥ ಪ್ರೇಮ, ಆತ್ಮ ನಿಯಂತ್ರಣ, ಮತ್ತು ಯೆಹೋವ ದೇವರಿಗೆ ತೋರಿಸಬೇಕಾದ ವಿಧೇಯತೆಯ ಮೇಲೆ ಆಧಾರಿತವಾದ ಒಂದು ಸಂಬಂಧವನ್ನು ಪರಸ್ಪರರಿಂದ ಅಪಹರಿಸಿಕೊಳ್ಳುತ್ತಾರೆ. ಒಂದು ಕ್ರೈಸ್ತ ಜೋಡಿಯು ತಮ್ಮ ಪ್ರೇಮಯಾಚನೆಯ ಅವಧಿಯಲ್ಲಿ ಲೈಂಗಿಕ ಅನೈತಿಕತೆಯ ನಡವಳಿಕೆಯಲ್ಲಿ ತೊಡಗಿದರು. ಅವರ ವಿವಾಹಾನಂತರ ಹೆಂಡತಿಯ ಮನಸ್ಸಾಕ್ಷಿ ಆಕೆಯನ್ನು ಪೀಡಿಸಿತೆಂದೂ ಮದುವೆ ದಿನದ ಆನಂದವನ್ನೂ ಕೆಡಿಸಿತೆಂದು ಆಕೆ ಒಪ್ಪಿಕೊಂಡಳು. ಆಕೆ ತಪ್ಪೊಪ್ಪಿಕೊಳ್ಳುತ್ತಾ ಅಂದದ್ದು: “ನಾನು ಎಷ್ಟೋ ಸಲ ಯೆಹೋವನಿಂದ ಕ್ಷಮೆಯನ್ನು ಯಾಚಿಸಿದ್ದೇನೆ, ಆದರೆ ಈಗ ಏಳು ವರುಷಗಳು ದಾಟಿರುವುದಾದರೂ ನನ್ನ ಮನಸ್ಸಾಕ್ಷಿ ನನ್ನನ್ನು ದೋಷಿಯೆಂದು ದೂರುತ್ತಾ ಇದೆ.” ಇಂತಹ ಪಾಪಗಳನ್ನು ಮಾಡುವವರು ಕ್ರೈಸ್ತ ಹಿರಿಯರಿಂದ ಸಹಾಯವನ್ನು ಕೇಳಿಕೊಳ್ಳುವುದು ಮಹತ್ವದ್ದಾಗಿದೆ. (ಯಾಕೋಬ 5:​14, 15) ಆದರೂ ಅನೇಕ ಕ್ರೈಸ್ತ ದಂಪತಿಗಳು ವಿವೇಕದಿಂದ ವರ್ತಿಸಿ ಪ್ರೇಮಯಾಚನೆಯ ಅವಧಿಯಲ್ಲಿ ಇಂತಹ ಅಪಾಯಗಳಿಂದ ದೂರವಿರುತ್ತಾರೆ. (ಜ್ಞಾನೋಕ್ತಿ 22:⁠3) ಅವರ ಪ್ರೇಮದ ಅಭಿವ್ಯಕ್ತಿಗಳನ್ನು ಅವರು ಸೀಮಿತವಾಗಿಡುತ್ತಾರೆ. ಅವರು ಜೊತೆಯಲ್ಲಿರುವಾಗ ತಮ್ಮೊಂದಿಗೆ ಒಬ್ಬ ವ್ಯಕ್ತಿಯನ್ನು ಕರಕೊಂಡು ಹೋಗುತ್ತಾರೆ ಮತ್ತು ಕೇವಲ ಅವರಿಬ್ಬರೂ ಏಕಾಂತ ಸ್ಥಳಗಳಲ್ಲಿ ಒಟ್ಟಾಗಿರದಂತೆ ಜಾಗ್ರತೆ ವಹಿಸುತ್ತಾರೆ.

13 ಯೆಹೋವನನ್ನು ಸೇವಿಸದಿರುವವರೊಂದಿಗೆ ಪ್ರೇಮಯಾಚನೆಮಾಡುವ ಕ್ರೈಸ್ತರು ಭಾರೀ ಸಮಸ್ಯೆಗಳಿಗೆ ಒಳಗಾಗುವ ಸಂಭವನೀಯತೆ ಇದೆ. ಉದಾಹರಣೆಗೆ, ಯೆಹೋವ ದೇವರನ್ನು ಪ್ರೀತಿಸದಿರುವ ಒಬ್ಬ ವ್ಯಕ್ತಿಯೊಂದಿಗೆ ನೀವು ಹೇಗೆ ತಾನೇ ಜೊತೆ ಸೇರಬಲ್ಲಿರಿ? ಕ್ರೈಸ್ತರು ಯೆಹೋವನನ್ನು ಪ್ರೀತಿಸುವವರೊಂದಿಗೆ ಮತ್ತು ಆತನ ಪರಿಶುದ್ಧತೆಯ ಮಟ್ಟಗಳನ್ನು ಗೌರವಿಸುವವರೊಂದಿಗೆ ಮಾತ್ರ ಇಜ್ಜೋಡಾಗುವುದು ಅತೀ ಪ್ರಾಮುಖ್ಯವಾಗಿದೆ. ದೇವರ ವಾಕ್ಯ ನಮಗೆ ಹೇಳುವುದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು?”​—⁠2 ಕೊರಿಂಥ 6:14.

14 ಜ್ಞಾನವೂ ಅತ್ಯಗತ್ಯ. ಜಾರತ್ವವೇನೆಂದು ನಮಗೆ ನಿಜವಾಗಿಯೂ ತಿಳಿಯದಿರುವಲ್ಲಿ ನಾವು ಅದರಿಂದ ಸರಿಯಾದ ವಿಧದಲ್ಲಿ ಓಡಿಹೋಗಲಾರೆವು. ಇಂದಿನ ಜಗತ್ತಿನಲ್ಲಿ ಕೆಲವರು, ‘ಜಾರತ್ವದ’ ಅರ್ಥದ ವಿಷಯದಲ್ಲಿ ತಪ್ಪಾದ ಅಭಿಪ್ರಾಯವನ್ನು ಸ್ವೀಕರಿಸಿದ್ದಾರೆ. ಎಷ್ಟರ ತನಕ ತಾವು ಲೈಂಗಿಕ ಸಂಭೋಗವನ್ನು ನಡೆಸುವುದಿಲ್ಲವೊ ಅಷ್ಟರ ತನಕ ತಾವು ವಿವಾಹವಾಗದೆ ತಮ್ಮ ಕಾಮಾಭಿಲಾಷೆಗಳನ್ನು ತೃಪ್ತಿಪಡಿಸಸಾಧ್ಯವಿದೆಯೆಂದು ಅವರು ಭಾವಿಸುತ್ತಾರೆ. ಕೆಲವು ಗೌರವಾರ್ಹವಾದ ಆರೋಗ್ಯ ಸಂಸ್ಥೆಗಳು ಸಹ, ಹದಿಪ್ರಾಯದವರಿಗೆ ಅನಪೇಕ್ಷಿತವಾದ ಗರ್ಭಧಾರಣೆಗಳನ್ನು ಕಡಿಮೆ ಮಾಡುವ ಯತ್ನದಲ್ಲಿ, ಯುವ ಜನರು ಗರ್ಭಧಾರಣೆ ಆಗದಿರುವಂಥ ಅಸ್ವಾಭಾವಿಕ ಲೈಂಗಿಕ ವರ್ತನೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸಿವೆ. ಆದರೆ ಶೋಚನೀಯವಾಗಿ ಇಂತಹ ಸಲಹೆಯು ತಪ್ಪಾಗಿದೆ. ವಿವಾಹಬಾಹಿರ ಗರ್ಭಧಾರಣೆಯಿಂದ ತಪ್ಪಿಸಿಕೊಳ್ಳುವುದು, ನೈತಿಕ ಪರಿಶುದ್ಧತೆಯ ಕಾಪಾಡಿಕೊಳ್ಳುವಿಕೆ ಆಗಿರುವುದಿಲ್ಲ. ಮತ್ತು “ಜಾರತ್ವ”ದ ನಿಜ ನಿರೂಪಣೆಯು ಸಹ ಅಷ್ಟು ಸೀಮಿತ ಅಥವಾ ಸಂಕುಚಿತವಾಗಿರುವುದಿಲ್ಲ.

15 “ಜಾರತ್ವ” ಎಂದು ತರ್ಜುಮೆಯಾಗಿರುವ ಪೋರ್ನಿಯ ಎಂಬ ಗ್ರೀಕ್‌ ಪದಕ್ಕೆ ಹೆಚ್ಚು ವಿಸ್ತಾರವಾದ ಅರ್ಥವಿದೆ. ಅದು, ಪರಸ್ಪರ ವಿವಾಹವಾಗಿರದ ಇಬ್ಬರು ವ್ಯಕ್ತಿಗಳ ನಡುವಣ ಲೈಂಗಿಕ ಸಂಬಂಧಕ್ಕೆ ಸಂಬಂಧಿಸಿರುತ್ತದೆ ಮತ್ತು ಲೈಂಗಿಕ ಅಂಗಗಳ ಅಪಪ್ರಯೋಗದ ಮೇಲೆ ಕೇಂದ್ರೀಕರಿಸುತ್ತದೆ. ಪೋರ್ನಿಯದಲ್ಲಿ ಮೌಖಿಕ ಸಂಭೋಗ, ಗುದದ್ವಾರ ಸಂಭೋಗ ಮತ್ತು ಇನ್ನೊಬ್ಬ ವ್ಯಕ್ತಿಗೆ ಹಸ್ತಮೈಥುನ ಮಾಡುವುದರಂಥ ಕೃತ್ಯಗಳು ಒಳಗೂಡಿವೆ, ಮತ್ತು ಇವೆಲ್ಲವು ಸಾಮಾನ್ಯವಾಗಿ ವೇಶ್ಯಾಗೃಹಗಳಲ್ಲಿ ನಡೆಯುವ ಕೃತ್ಯಗಳಾಗಿವೆ. ಇಂಥ ಕೃತ್ಯಗಳು “ಜಾರತ್ವ”ವಲ್ಲವೆಂದು ನೆನಸುವವರು ತಮ್ಮನ್ನೇ ವಂಚಿಸಿಕೊಂಡು ಸೈತಾನನ ಪಾಶವೊಂದರಲ್ಲಿ ಸಿಕ್ಕಿಬಿದ್ದಿರುತ್ತಾರೆ. (2 ತಿಮೊಥೆಯ 2:26) ಇದಲ್ಲದೆ ನೈತಿಕ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವುದೆಂದರೆ ಜಾರತ್ವದಲ್ಲಿ ಒಳಗೂಡಿರುವ ಕೃತ್ಯಗಳನ್ನು ಮಾಡದೇ ಇರುವುದು ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ‘ಜಾರತ್ವಕ್ಕೆ ದೂರವಾಗಿ ಓಡಿಹೋಗಲು’ ನಾವು ಈ ಪೋರ್ನಿಯ ಎಂಬ ಘೋರ ಪಾಪಕ್ಕೆ ಯಾವುದು ನಡೆಸಬಲ್ಲದೊ ಆ ಸಕಲ ವಿಧದ ಲೈಂಗಿಕ ಅಶುದ್ಧತೆ ಮತ್ತು ಸಡಿಲು ನಡತೆಯಿಂದಲೂ ದೂರವಿರಬೇಕಾಗಿದೆ. (ಎಫೆಸ 4:19) ಆ ವಿಧದಲ್ಲಿ ನಾವು ನೈತಿಕ ಪರಿಶುದ್ಧತೆಯನ್ನು ಸುಸ್ಥಿತಿಯಲ್ಲಿಡುತ್ತೇವೆ.

ಪ್ರಣಯಚೇಷ್ಟೆಯ ಅಪಾಯಗಳಿಂದ ದೂರವಿರಿ

16 ನಾವು ನಮ್ಮ ನೈತಿಕ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಬೇಕಾದರೆ ನಾವು ಎಚ್ಚರದಿಂದಿರಬೇಕಾದ ಇನ್ನೊಂದು ಅಪಾಯವು ಪ್ರಣಯಚೇಷ್ಟೆ ಆಗಿದೆ. ಪ್ರಣಯಚೇಷ್ಟೆಯು ವಿರುದ್ಧ ಲಿಂಗದವರ ಮಧ್ಯೆ ನಡೆಯುವ ಮುಗ್ಧ, ಹಾನಿರಹಿತ ಚೇಷ್ಟೆಯಾಗಿದೆಯೆಂದು ಕೆಲವರು ಪಟ್ಟುಹಿಡಿದು ಹೇಳಬಹುದು. ಪ್ರಣಯಾಸಕ್ತ ವರ್ತನೆಗಳಿಗೆ ಕಾಲವೂ ಸ್ಥಳವೂ ಇದೆಯೆಂಬುದು ಒಪ್ಪತಕ್ಕ ವಿಷಯ. ಇಸಾಕ ಮತ್ತು ರೆಬೆಕ್ಕ ಇಬ್ಬರೂ “ಸರಸವಾಡುವದನ್ನು” ನೋಡಿದವರಿಗೆ ಅವರು ಕೇವಲ ಅಣ್ಣ ತಂಗಿಯರಾಗಿರಲಿಲ್ಲವೆಂದು ತಿಳಿದುಬಂತು. (ಆದಿಕಾಂಡ 26:​6-9) ಆದರೆ ಅವರು ಗಂಡಹೆಂಡತಿ ಆಗಿದ್ದರು. ಅವರ ಮಧ್ಯೆ ನಡೆಯುತ್ತಿದ್ದ ಪ್ರೇಮಾಭಿವ್ಯಕ್ತಿಗಳು ತಕ್ಕದ್ದಾಗಿದ್ದವು. ಪ್ರಣಯಚೇಷ್ಟೆಯಾದರೊ ಇನ್ನೊಂದು ವರ್ಗಕ್ಕೆ ಸೇರಿದೆ.

17 ಪ್ರಣಯಚೇಷ್ಟೆಯನ್ನು ಹೀಗೆ ಅರ್ಥನಿರೂಪಿಸಬಹುದು: ಮದುವೆಯಾಗಲು ನಿಜವಾಗಿಯೂ ಇಚ್ಛೆ ಇಲ್ಲದಿರುವಾಗಲೂ ಪ್ರೇಮಸೂಚಕ ಆಸಕ್ತಿಯನ್ನು ತೋರಿಸುವುದು. ಮಾನವರು ಜಟಿಲ ಜೀವಿಗಳಾಗಿರುವುದರಿಂದ ಪ್ರಣಯಚೇಷ್ಟೆ ಮಾಡುವ ಅಸಂಖ್ಯಾತ ವಿಧಗಳಿವೆಯೆಂಬುದೂ, ಅವುಗಳಲ್ಲಿ ಕೆಲವು ಕೂಡಲೇ ಗಮನಕ್ಕೆಬಾರದಂಥ ರೀತಿಯವುಗಳೂ ಆಗಿವೆ ಎಂಬುದು ನಿಶ್ಚಯ. (ಜ್ಞಾನೋಕ್ತಿ 30:​18, 19) ಈ ಕಾರಣದಿಂದ, ಕಟ್ಟುನಿಟ್ಟಾದ ಕಟ್ಟಳೆಗಳು ಇದಕ್ಕೆ ನಿಜವಾದ ಪರಿಹಾರವಾಗಿರಲಾರದು. ಬದಲಿಗೆ, ಕಟ್ಟಳೆಗಳಿಗೂ ಶ್ರೇಷ್ಠವಾಗಿರುವ ಯಾವುದೋ ಸಂಗತಿ ಇದಕ್ಕೆ ಅಗತ್ಯ. ಅದು ಯಾವುದೆಂದರೆ, ಪ್ರಾಮಾಣಿಕವಾದ ಸ್ವಪರೀಕ್ಷೆ ಮತ್ತು ಬೈಬಲ್‌ ಮೂಲತತ್ತ್ವಗಳ ಶ್ರದ್ಧಾಪೂರ್ವಕ ಅನ್ವಯವೇ.

18 ಪ್ರಾಮಾಣಿಕವಾಗಿ ನಮ್ಮಲ್ಲಿ ಹೆಚ್ಚಿನವರು ಒಪ್ಪಿಕೊಳ್ಳಬೇಕಾದ ಸಂಗತಿಯೇನೆಂದರೆ, ವಿರುದ್ಧ ಲಿಂಗದವರು ನಮ್ಮಲ್ಲಿ ಪ್ರಣಯಾಸಕ್ತಿಯನ್ನು ತೋರಿಸುತ್ತಿದ್ದಾರೆಂದು ನಮಗೆ ಗೊತ್ತಾಗುವಾಗ ನಾವು ಉಬ್ಬಿಹೋಗುತ್ತೇವೆ. ಇದು ಸ್ವಾಭಾವಿಕ. ಆದರೆ ಬರೀ ನಮ್ಮ ಸ್ವಪ್ರತಿಷ್ಠೆಯನ್ನು ಹೆಚ್ಚಿಸಲಿಕ್ಕೋಸ್ಕರ ಅಥವಾ ಒಬ್ಬ ವ್ಯಕ್ತಿಯಲ್ಲಿ ನಮ್ಮ ಕಡೆಗೆ ಅಂಥ ಪ್ರಣಯಾತ್ಮಕ ಆಸಕ್ತಿಯನ್ನು ಹುಟ್ಟಿಸಲು ನಾವು ಪ್ರಣಯಚೇಷ್ಟೆಯನ್ನು ಮಾಡುತ್ತೇವೊ? ಹಾಗಿರುವಲ್ಲಿ, ನಾವು ಉಂಟುಮಾಡುತ್ತಿರಬಹುದಾದ ವೇದನೆಯನ್ನು ಪರಿಗಣಿಸಿದ್ದೇವೊ? ಉದಾಹರಣೆಗೆ, ಜ್ಞಾನೋಕ್ತಿ 13:12 ಹೇಳುವುದು: “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು.” ನಾವು ಇನ್ನೊಬ್ಬರೊಂದಿಗೆ ಬೇಕುಬೇಕೆಂದು ಪ್ರಣಯಚೇಷ್ಟೆ ಮಾಡುವಲ್ಲಿ, ಆ ವ್ಯಕ್ತಿಯ ಮೇಲೆ ಅದು ಯಾವ ಪರಿಣಾಮವನ್ನು ಬೀರುತ್ತದೆಂಬುದು ನಮಗೆ ಪ್ರಾಯಶಃ ತಿಳಿದಿರಲಿಕ್ಕಿಲ್ಲ. ಅವನು/ಳು ಪ್ರೇಮಯಾಚನೆ ಮತ್ತು ಅಂತಿಮವಾಗಿ ವಿವಾಹವಾಗುವ ನಿರೀಕ್ಷೆಗಳನ್ನೂ ಬೆಳೆಸಿಕೊಳ್ಳಬಹುದು. ಆದರೆ ಆ ನಿರೀಕ್ಷೆ ನೆರವೇರದಿರುವಾಗ ಉಂಟಾಗುವ ನಿರಾಶೆ ಅವನನ್ನು ಇಲ್ಲವೆ ಅವಳನ್ನು ಚೂರುಚೂರುಮಾಡಬಹುದು. (ಜ್ಞಾನೋಕ್ತಿ 18:14) ಇನ್ನೊಬ್ಬರ ಭಾವನೆಗಳೊಂದಿಗೆ ಬೇಕುಬೇಕೆಂದು ಚೆಲ್ಲಾಟವಾಡುವುದು ಕ್ರೂರ ಕೃತ್ಯವಾಗಿದೆ.

19 ವಿವಾಹಿತರೊಂದಿಗೆ ಪ್ರಣಯಚೇಷ್ಟೆ ಮಾಡುವುದರ ವಿರುದ್ಧ ಎಚ್ಚರವಾಗಿರುವುದು ವಿಶೇಷವಾಗಿ ಪ್ರಾಮುಖ್ಯ. ಒಬ್ಬ ವಿವಾಹಿತ ವ್ಯಕ್ತಿಯಲ್ಲಿ ಪ್ರಣಯಾಸಕ್ತಿಯ ಸಂಕೇತ ಕೊಡುವುದು ಅಥವಾ ವಿವಾಹಿತ ವ್ಯಕ್ತಿಯು ವಿವಾಹಬಂಧದ ಹೊರಗೆ ಒಬ್ಬ ವ್ಯಕ್ತಿಯಲ್ಲಿ ಇಂತಹ ಆಸಕ್ತಿಯನ್ನು ತೋರಿಸುವುದು ತಪ್ಪಾಗಿದೆ. ದುಃಖಕರವಾಗಿ, ಕೆಲವು ಮಂದಿ ಕ್ರೈಸ್ತರು ತಮ್ಮ ಸಂಗಾತಿಗಳಲ್ಲದ ವಿರುದ್ಧ ಲಿಂಗದವರೊಂದಿಗೆ ಪ್ರಣಯಾಸಕ್ತಿಯನ್ನು ಬೆಳೆಸಿಕೊಳ್ಳುವುದು ಸ್ವೀಕರಣೀಯವೆಂಬ ತಪ್ಪಾದ ಅಭಿಪ್ರಾಯವನ್ನು ಇಟ್ಟುಕೊಂಡಿದ್ದಾರೆ. ಕೆಲವರು ಅಂತಹ “ಮಿತ್ರ”ರಿಗೆ ತಮ್ಮ ಹೃದಯದಾಳದ ಚಿಂತೆಗಳನ್ನು, ತಮ್ಮ ವಿವಾಹ ಸಂಗಾತಿಗೂ ತಿಳಿಸದಿರುವ ವೈಯಕ್ತಿಕ ವಿಷಯಗಳನ್ನೂ ಹೇಳುತ್ತಾರೆ. ಇದರ ದೆಸೆಯಿಂದ, ಪ್ರಣಯಾನಿಸಿಕೆಗಳು ವಿವಾಹವನ್ನು ದುರ್ಬಲಗೊಳಿಸುವ ಮತ್ತು ನಾಶಗೊಳಿಸಲೂ ಬಹುದಾದ ಭಾವನಾತ್ಮಕ ಅವಲಂಬನೆಗೆ ನಡೆಸಿವೆ. ವಿವಾಹಿತ ಕ್ರೈಸ್ತರು ವ್ಯಭಿಚಾರದ ಕುರಿತ ಯೇಸುವಿನ ವಿವೇಕಭರಿತ ಎಚ್ಚರಿಕೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಅದು ಹೃದಯದಲ್ಲಿ ಆರಂಭಗೊಳ್ಳುತ್ತದೆಂದು ಅವನು ತಿಳಿಸಿದನು. (ಮತ್ತಾಯ 5:28) ಆದುದರಿಂದ ನಾವು ಹೃದಯವನ್ನು ಕಾಪಾಡಿಕೊಂಡು, ಇಂತಹ ಧ್ವಂಸಕಾರಕ ಪರಿಣಾಮಗಳಿಗೆ ನಡೆಸಬಹುದಾದ ಸನ್ನಿವೇಶಗಳಿಂದ ದೂರವಿರೋಣ.

20 ಇಂದಿನ ಅನೈತಿಕ ಜಗತ್ತಿನಲ್ಲಿ ನೈತಿಕವಾಗಿ ಪರಿಶುದ್ದರಾಗಿ ಉಳಿಯುವುದು ಸುಲಭವಲ್ಲ ಎಂಬುದು ನಿಜ. ಆದರೆ ನೈತಿಕ ಪರಿಶುದ್ಧತೆಯನ್ನು ಕಳೆದುಕೊಂಡು ಪುನಃ ಪಡೆಯುವುದಕ್ಕಿಂತ ಅದನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಹೆಚ್ಚು ಸುಲಭ ಎಂಬುದನ್ನು ಮರೆಯಬೇಡಿರಿ. ಹೌದು, ತಮ್ಮ ಪಾಪಗಳಿಗಾಗಿ ನಿಜವಾಗಿಯೂ ಪಶ್ಚಾತ್ತಾಪಪಡುವವರನ್ನು ಯೆಹೋವನು “ಮಹಾಕೃಪೆಯಿಂದ” ಕ್ಷಮಿಸಶಕ್ತನು ಮತ್ತು ಶುದ್ಧಪಡಿಸಬಲ್ಲನೆಂಬುದು ಸತ್ಯ. (ಯೆಶಾಯ 55:⁠7) ಆದರೂ ಲೈಂಗಿಕ ಅನೈತಿಕತೆಯನ್ನು ನಡೆಸುವವರ ಕೃತ್ಯಗಳ ಪರಿಣಾಮಗಳಿಂದ ಯೆಹೋವನು ಅವರನ್ನು ಕಾಪಾಡುವುದಿಲ್ಲ. ಇದರಿಂದ ಬರುವ ಪರಿಣಾಮಗಳು ಅನೇಕ ವರ್ಷಗಳ ವರೆಗೆ, ಒಬ್ಬನ ಜೀವಮಾನದಾದ್ಯಂತವೂ ಇರಬಲ್ಲವು. (2 ಸಮುವೇಲ 12:​9-12) ಆದುದರಿಂದ, ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವ ಮೂಲಕ ನಿಮ್ಮ ನೈತಿಕ ಪರಿಶುದ್ಧತೆಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿರಿ. ಯೆಹೋವನ ಮುಂದೆ, ನಿಮ್ಮ ನಿರ್ಮಲವೂ ಪರಿಶುದ್ಧವೂ ಆದ ನಿಲುವನ್ನು ಒಂದು ಅಮೂಲ್ಯ ನಿಧಿಯಾಗಿ ವೀಕ್ಷಿಸಿರಿ. ಅದು ಎಂದೂ ನಿಮ್ಮ ಕೈಯಿಂದ ಜಾರಿಹೋಗದಂತೆ ನೋಡಿಕೊಳ್ಳಿರಿ!

ನೀವು ಹೇಗೆ ಉತ್ತರಿಸುವಿರಿ?

• ನೈತಿಕ ಪರಿಶುದ್ಧತೆಯೆಂದರೇನು, ಮತ್ತು ಅದೇಕೆ ಪ್ರಾಮುಖ್ಯ?

• ನಾವು ನಮ್ಮ ಹೃದಯವನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?

• ಜಾರತ್ವಕ್ಕೆ ದೂರವಾಗಿ ಓಡಿಹೋಗುವುದರಲ್ಲಿ ಏನು ಒಳಗೊಂಡಿದೆ?

• ನಾವು ಪ್ರಣಯಚೇಷ್ಟೆಯಿಂದ ಏಕೆ ದೂರವಿರಬೇಕು?

[ಅಧ್ಯಯನ ಪ್ರಶ್ನೆಗಳು]

1-3. (ಎ) ಜನರು ತಮ್ಮ ನೈತಿಕ ಪರಿಶುದ್ಧತೆಯನ್ನು ಅಮೂಲ್ಯವೆಂದೆಣಿಸುವುದಿಲ್ಲ ಎಂದು ಅನೇಕವೇಳೆ ಹೇಗೆ ತೋರಿಸುತ್ತಾರೆ? ದೃಷ್ಟಾಂತಿಸಿರಿ. (ಬಿ) ನೈತಿಕ ಪರಿಶುದ್ಧತೆಯ ಮೌಲ್ಯವನ್ನು ಪರೀಕ್ಷಿಸುವುದು ಏಕೆ ಪ್ರಾಮುಖ್ಯ?

4. ಸಾಂಕೇತಿಕ ಹೃದಯವೆಂದರೇನು, ಮತ್ತು ನಾವು ಅದನ್ನು ಏಕೆ ಕಾಪಾಡಿಕೊಳ್ಳಬೇಕು?

5. ಹೃದಯವು ಏಕಕಾಲದಲ್ಲೇ ಬೆಲೆಬಾಳುವಂಥದ್ದೂ ಅಪಾಯಕರವೂ ಆಗಿರಲು ಹೇಗೆ ಸಾಧ್ಯ?

6, 7. (ಎ) ಪರಿಶುದ್ಧತೆಯೆಂದರೇನು, ಮತ್ತು ಯೆಹೋವನ ಸೇವಕರಿಗೆ ಇದೇಕೆ ಪ್ರಾಮುಖ್ಯ? (ಬಿ) ಯೆಹೋವನ ಪರಿಶುದ್ಧತೆಯನ್ನು ಅಪರಿಪೂರ್ಣ ಮಾನವರು ಪ್ರತಿಬಿಂಬಿಸಲು ಸಾಧ್ಯವಿದೆಯೆಂಬುದು ನಮಗೆ ಹೇಗೆ ತಿಳಿದಿದೆ?

8. (ಎ) ನಾವು ನಮ್ಮ ಸಾಂಕೇತಿಕ ಹೃದಯವನ್ನು ಹೇಗೆ ಪೋಷಿಸಿಕೊಳ್ಳಬಲ್ಲೆವು? (ಬಿ) ನಮ್ಮ ಸಂಭಾಷಣೆಯು ನಮ್ಮ ವಿಷಯದಲ್ಲಿ ಏನನ್ನು ತಿಳಿಯಪಡಿಸಬಹುದು?

9-11. (ಎ) ಒಂದನೇ ಕೊರಿಂಥ 6:18ರಲ್ಲಿ ಕೊಡಲಾಗಿರುವ ಸಲಹೆಯನ್ನು ಅಲಕ್ಷಮಾಡುವವರು ಗುರುತರವಾದ ದುರಾಚಾರದಲ್ಲಿ ಬೀಳುವ ಸಾಧ್ಯತೆ ಹೆಚ್ಚು ಏಕೆ? ದೃಷ್ಟಾಂತಿಸಿರಿ. (ಬಿ) ನಾವು ಜಾರತ್ವಕ್ಕೆ ದೂರವಾಗಿ ಓಡಿಹೋಗುತ್ತಿರುವವರಾದರೆ ಯಾವುದನ್ನು ದೂರವಿಡುತ್ತೇವೆ? (ಸಿ) ನಂಬಿಗಸ್ತ ಪುರುಷನಾದ ಯೋಬನು ನಮಗಾಗಿ ಯಾವ ಸಕಾರಾತ್ಮಕ ಮಾದರಿಯನ್ನು ಇಟ್ಟಿದ್ದಾನೆ?

12. ಪ್ರೇಮಯಾಚನೆಯ ಅವಧಿಯಲ್ಲಿ ಕ್ರೈಸ್ತ ಜೋಡಿಗಳು ಹೇಗೆ “ಜಾರತ್ವಕ್ಕೆ ದೂರವಾಗಿ ಓಡಿ”ಹೋಗಬಹುದು?

13. ಯೆಹೋವನನ್ನು ಸೇವಿಸದಿರುವವರೊಂದಿಗೆ ಕ್ರೈಸ್ತರು ಏಕೆ ಪ್ರೇಮಯಾಚನೆಮಾಡಬಾರದು?

14, 15. (ಎ) ಜಾರತ್ವದ ಅರ್ಥದ ವಿಷಯದಲ್ಲಿ ಕೆಲವರು ಯಾವ ತಪ್ಪಭಿಪ್ರಾಯವುಳ್ಳವರಾಗಿದ್ದಾರೆ? (ಬಿ) “ಜಾರತ್ವ”ದಲ್ಲಿ ಯಾವ ವಿಧದ ಕೃತ್ಯಗಳು ಒಳಗೊಂಡಿವೆ, ಮತ್ತು ಕ್ರೈಸ್ತರು ಹೇಗೆ “ಜಾರತ್ವಕ್ಕೆ ದೂರವಾಗಿ ಓಡಿ”ಹೋಗಬಹುದು?

16. ಪ್ರಣಯಾಸಕ್ತ ವರ್ತನೆಗಳು ಯಾವಾಗ ತಕ್ಕದ್ದಾಗಿರುತ್ತವೆ, ಮತ್ತು ಯಾವ ಶಾಸ್ತ್ರೀಯ ಉದಾಹರಣೆಯಿಂದ ಇದು ಚಿತ್ರಿತವಾಗಿದೆ?

17. ಪ್ರಣಯಚೇಷ್ಟೆ ಮಾಡುವುದೆಂದರೇನು, ಮತ್ತು ಈ ಸಮಸ್ಯೆಯನ್ನು ಹೇಗೆ ನಿಯಂತ್ರಿಸಿಕೊಳ್ಳಬಹುದು?

18. ಕೆಲವರನ್ನು ಪ್ರಣಯಚೇಷ್ಟೆ ಮಾಡುವಂತೆ ಯಾವುದು ಪ್ರಚೋದಿಸುತ್ತದೆ, ಮತ್ತು ಪ್ರಣಯಚೇಷ್ಟೆ ಮಾಡುವುದು ಏಕೆ ಹಾನಿಕರವಾಗಿದೆ?

19. ಪ್ರಣಯಚೇಷ್ಟೆಯು ಕ್ರೈಸ್ತ ವಿವಾಹಗಳಿಗೆ ಹೇಗೆ ಅಪಾಯಕರವಾಗಿರಬಹುದು?

20. ನಮ್ಮ ನೈತಿಕ ಪರಿಶುದ್ಧತೆಯನ್ನು ನಾವು ಹೇಗೆ ವೀಕ್ಷಿಸಲು ದೃಢನಿರ್ಣವುಳ್ಳವರಾಗಿರಬೇಕು?

[ಪುಟ 11ರಲ್ಲಿರುವ ಚಿತ್ರ]

ಒಂದು ವಾಹನವು ಸರಿಯಾಗಿ ಮಾರ್ಗದರ್ಶಿಸಲ್ಪಡದಿರುವಲ್ಲಿ ಅದು ಅಪಾಯಕಾರಿಯಾಗಿರಬಲ್ಲದು

[ಪುಟ 12ರಲ್ಲಿರುವ ಚಿತ್ರಗಳು]

ನಾವು ಎಚ್ಚರಿಕೆಗಳನ್ನು ಅಲಕ್ಷಿಸುವಲ್ಲಿ ಏನಾಗಸಾಧ್ಯವಿದೆ?

[ಪುಟ 13ರಲ್ಲಿರುವ ಚಿತ್ರ]

ನೈತಿಕವಾಗಿ ಪರಿಶುದ್ಧವಾಗಿರುವ ಪ್ರೇಮಯಾಚನೆಯು ಆನಂದಭರಿತವೂ ದೇವರಿಗೆ ಘನತೆ ತರುವಂಥದ್ದೂ ಆಗಿರುತ್ತದೆ