ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೀಡಿತರಿಗೆ ಸಾಂತ್ವನ

ಪೀಡಿತರಿಗೆ ಸಾಂತ್ವನ

ಪೀಡಿತರಿಗೆ ಸಾಂತ್ವನ

ಗತಕಾಲದ ನಂಬಿಗಸ್ತ ಸ್ತ್ರೀಪುರುಷರು ಕಷ್ಟಬಾಧೆಯನ್ನು ಅನುಭವಿಸಿದಾಗ ಅವರು ಮಾರ್ಗದರ್ಶನಕ್ಕಾಗಿ ದೇವರಿಗೆ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದರು. ಅದೇ ಸಮಯದಲ್ಲಿ ಅವರು ಆ ಕಷ್ಟಬಾಧೆಯನ್ನು ಕಡಿಮೆಗೊಳಿಸಲು, ಸ್ವತಃ ಕ್ರಮವನ್ನು ಕೈಗೊಂಡರು. ಉದಾಹರಣೆಗೆ ಅವರು ಪೀಡಕರಿಂದ ತಪ್ಪಿಸಿಕೊಳ್ಳಲು ಉಪಾಯ ಕೌಶಲವನ್ನು ಬಳಸಿದರು. ದೃಷ್ಟಾಂತಕ್ಕೆ, ಯೆಹೋವನ ಮೇಲೆ ಆತುಕೊಳ್ಳುವುದರೊಂದಿಗೆ ವೈಯಕ್ತಿಕ ಪ್ರಯತ್ನವು, ದಾವೀದನು ತನ್ನ ವಿಪತ್ತನ್ನು ಸಹಿಸಿಕೊಳ್ಳುವಂತೆ ಸಾಧ್ಯಮಾಡಿತು. ಇಂದು ನಮ್ಮ ವಿಷಯದಲ್ಲೇನು?

ನೀವು ಕಷ್ಟಬಾಧೆಯನ್ನು ಅನುಭವಿಸುವಾಗ, ನಿಮ್ಮ ಸಮಸ್ಯೆಯನ್ನು ಹೋಗಲಾಡಿಸಲು ಪ್ರಾಯಶಃ ನೀವು ಸ್ವತಃ ಆರಂಭದ ಹೆಜ್ಜೆಯನ್ನಿಡುತ್ತೀರಿ. ಉದಾಹರಣೆಗೆ, ನಿಮಗೆ ಉದ್ಯೋಗವಿಲ್ಲದಿರುವಲ್ಲಿ, ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ಪರಾಮರಿಸಲಿಕ್ಕಾಗಿ ಯೋಗ್ಯ ಉದ್ಯೋಗವನ್ನು ಕಂಡುಹಿಡಿಯಲು ನೀವು ಪ್ರಯತ್ನಿಸುವುದಿಲ್ಲವೆ? (1 ತಿಮೊಥೆಯ 5:⁠8) ಅಥವಾ, ಒಂದು ಶಾರೀರಿಕ ಕಾಯಿಲೆಯಿಂದ ನೀವು ನರಳುತ್ತಿರುವಲ್ಲಿ, ಸೂಕ್ತವಾದ ವೈದ್ಯಕೀಯ ಸಹಾಯವನ್ನು ಪಡೆದುಕೊಳ್ಳುವುದಿಲ್ಲವೆ? ಆಸಕ್ತಿಕರ ಸಂಗತಿಯೇನೆಂದರೆ, ಸಕಲ ವಿಧವಾದ ರೋಗಗಳನ್ನು ಗುಣಪಡಿಸಲು ದೇವರಿಂದ ಶಕ್ತಿಯನ್ನು ಹೊಂದಿದ್ದ ಯೇಸು ಕೂಡ ‘ಕ್ಷೇಮವಿಲ್ಲದವನಿಗೆ ವೈದ್ಯನು ಬೇಕು’ ಎಂಬುದನ್ನು ಒಪ್ಪಿಕೊಂಡನು. (ಮತ್ತಾಯ 9:12) ಆದರೂ, ನಿಮ್ಮ ಸಂಕಷ್ಟಗಳು ಯಾವಾಗಲೂ ತೆಗೆದು ಹಾಕಲ್ಪಡಲಿಕ್ಕಿಲ್ಲ; ಸ್ವಲ್ಪ ಮಟ್ಟಿಗೆ ನೀವು ಅದನ್ನು ಸಹಿಸಿಕೊಳ್ಳಬೇಕಾಗಿ ಬಂದೀತು.

ಹಾಗಿರುವಲ್ಲಿ, ಆ ವಿಷಯವನ್ನು ಪ್ರಾರ್ಥನೆಯಲ್ಲಿ ಯೆಹೋವ ದೇವರಿಗೆ ಏಕೆ ತಿಳಿಸಬಾರದು? ಉದಾಹರಣೆಗೆ, ಉದ್ಯೋಗವನ್ನು ಹುಡುಕುತ್ತಿರುವಾಗ, ದೇವರ ಮೇಲೆ ಪ್ರಾರ್ಥನಾಪೂರ್ವಕವಾದ ಆತುಕೊಳ್ಳುವಿಕೆಯು ಬೈಬಲ್‌ ಮೂಲಸೂತ್ರಗಳಿಗೆ ವಿರುದ್ಧವಾಗಿರುವಂಥ ಉದ್ಯೋಗವನ್ನು ಸ್ವೀಕರಿಸುವ ಶೋಧನೆಯನ್ನು ಪ್ರತಿರೋಧಿಸಲು ನಮಗೆ ಸಹಾಯಮಾಡುವುದು. ಇಂತಹ ಪ್ರಾರ್ಥನೆಯು, ದುರಾಶೆ ಅಥವಾ ಹಣದಾಸೆಯ ಕಾರಣ ನಾವು ‘ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡುವುದನ್ನೂ’ ತಪ್ಪಿಸುವುದು. (1 ತಿಮೊಥೆಯ 6:10) ಹೌದು, ಉದ್ಯೋಗ, ಕುಟುಂಬ, ಅಥವಾ ಆರೋಗ್ಯದ ಚಿಂತೆಗಳ ಸಂಬಂಧದಲ್ಲಿ ಪ್ರಾಮುಖ್ಯ ನಿರ್ಣಯಗಳನ್ನು ಮಾಡುವಾಗ ನಾವು ದಾವೀದನ ಈ ಸಲಹೆಯನ್ನು ಅನುಸರಿಸಬಲ್ಲೆವು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.”​—⁠ಕೀರ್ತನೆ 55:22.

ಹೃತ್ಪೂರ್ವಕವಾದ ಪ್ರಾರ್ಥನೆಯು, ನಮಗೆ ಬಂದಿರುವ ಸಂಕಷ್ಟದಡಿ ನಾವು ಹೂತುಹೋಗದಂತೆ ಮಾನಸಿಕ ಸಮತೂಕವನ್ನು ಇಟ್ಟುಕೊಳ್ಳುವಂತೆಯೂ ನಮಗೆ ಸಹಾಯಮಾಡುವುದು. ಒಬ್ಬ ನಿಜ ಕ್ರೈಸ್ತನಾಗಿದ್ದ ಅಪೊಸ್ತಲ ಪೌಲನು ಬರೆದುದು: “ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ” ಮಾಡಿರಿ. ಯಥಾರ್ಥವಾದ ಪ್ರಾರ್ಥನೆ ನಮಗೆ ಹೇಗೆ ಸಾಂತ್ವನವನ್ನು ನೀಡಬಲ್ಲದು? “ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ದೇವಶಾಂತಿಯು “ಎಲ್ಲಾ ಗ್ರಹಿಕೆಯನ್ನು ಮೀರುತ್ತದೆ.” ಆದಕಾರಣ, ಅತಿಯಾದ ವ್ಯಥೆಗೀಡುಮಾಡುವಂಥ ಭಾವನೆಗಳು ನಮಗೆ ಹೊರೆಯಂತಿರುವಾಗ ಈ ಶಾಂತಿಯು ನಮ್ಮನ್ನು ಸ್ಥಿರಪಡಿಸಬಲ್ಲದು. ಅದು ‘ಹೃದಯಗಳನ್ನೂ ಯೋಚನೆಗಳನ್ನೂ ಕಾಯುವುದು’ ಮತ್ತು ಹೀಗೆ, ನಮ್ಮ ಕಷ್ಟವನ್ನು ಇನ್ನಷ್ಟು ಹೆಚ್ಚಿಸುವಂಥ ದುಡುಕಿನ ಅಥವಾ ಅವಿವೇಕದ ಪ್ರತಿಕ್ರಿಯೆಯನ್ನು ತೋರಿಸದಂತೆ ಸಹಾಯಮಾಡುವುದು.

ಪ್ರಾರ್ಥನೆಯು ಒಂದು ಸನ್ನಿವೇಶದಲ್ಲಿ ಗಮನಾರ್ಹವಾದ ಬದಲಾವಣೆಯನ್ನೂ ಮಾಡಬಲ್ಲದು. ಅಪೊಸ್ತಲ ಪೌಲನು ರೋಮಿನಲ್ಲಿ ಸೆರೆಯಾಗಿದ್ದಾಗ, ಜೊತೆ ಕ್ರೈಸ್ತರು ಅವನ ಪರವಾಗಿ ಪ್ರಾರ್ಥಿಸುವಂತೆ ಅವನು ದೀನಭಾವದಿಂದ ಕೇಳಿಕೊಂಡನು. ಪೌಲನು ಈ ಬಿನ್ನಹವನ್ನು ಮಾಡಿದ್ದೇಕೆ? ಅವನು ಬರೆದುದು, “ನಿಮ್ಮನ್ನು ಬಹುವಿಶೇಷವಾಗಿ ಬೇಡಿಕೊಳ್ಳುತ್ತೇನೆ, ಯಾಕಂದರೆ ನಿಮ್ಮ ಪ್ರಾರ್ಥನೆಗಳ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರಿಗಿ ಬಂದೇನು.” (ಇಬ್ರಿಯ 13:19) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ತನ್ನ ಜೊತೆ ವಿಶ್ವಾಸಿಗಳು ಪಟ್ಟುಹಿಡಿದು ಮಾಡುವ ಪ್ರಾರ್ಥನೆಗಳನ್ನು ಯೆಹೋವನು ಕೇಳಿ ಅದು ಅವನ ಬಿಡುಗಡೆ ಯಾವಾಗ ಸಂಭವಿಸುವುದೆಂಬ ವಿಷಯದಲ್ಲಿ ವ್ಯತ್ಯಾಸವನ್ನು ಮಾಡೀತು ಎಂದು ಪೌಲನಿಗೆ ತಿಳಿದಿತ್ತು.​—⁠ಫಿಲೆಮೋನ 22.

ಪ್ರಾರ್ಥನೆಯು ನಮ್ಮ ಕಷ್ಟಬಾಧೆಗಳ ಫಲಿತಾಂಶವನ್ನು ಬದಲಾಯಿಸೀತೊ? ಹಾಗಾಗುವ ಸಂಭವವಿದೆ. ಆದರೂ, ಬಹುಶಃ ನಾವು ಇಚ್ಛಿಸುವ ವಿಧದಲ್ಲೇ ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರವನ್ನು ಕೊಡಲಿಕ್ಕಿಲ್ಲ ಎಂಬುದನ್ನು ನಾವು ಅರಿತಿರಬೇಕು. ಪೌಲನು ತನಗೆ ‘ನಾಟಿಕೊಂಡಿದ್ದ ಶೂಲದ’ ಕುರಿತು, ಅಂದರೆ ಪ್ರಾಯಶಃ ಯಾವುದೊ ಶಾರೀರಿಕ ಸಮಸ್ಯೆಯ ಕುರಿತು ಹಲವಾರು ಬಾರಿ ಪ್ರಾರ್ಥಿಸಿದನು. ಆದರೆ ಆ ಬಾಧೆಯನ್ನು ತೊಲಗಿಸುವ ಬದಲಾಗಿ, ದೇವರು ಪೌಲನಿಗಂದದ್ದು: “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ [ನನ್ನ] ಬಲವು ಪೂರ್ಣಸಾಧಕವಾಗುತ್ತದೆ.”​—⁠2 ಕೊರಿಂಥ 12:7-9.

ಹೀಗಿರುವುದರಿಂದ, ಪ್ರಾಯಶಃ ನಮ್ಮ ಕಷ್ಟಬಾಧೆ ಕೂಡಲೇ ನಿವಾರಣೆಯಾಗಲಿಕ್ಕಿಲ್ಲ. ಆದರೂ, ನಮ್ಮ ಸ್ವರ್ಗೀಯ ತಂದೆಯ ಮೇಲೆ ನಾವು ಆತುಕೊಂಡಿದ್ದೇವೆ ಎಂಬುದನ್ನು ಸಾಬೀತುಪಡಿಸುವ ಸಂದರ್ಭ ನಮಗಿರುವುದು. (ಯಾಕೋಬ 1:​2-4) ಒಂದುವೇಳೆ ಯೆಹೋವ ದೇವರು ನಮ್ಮ ಕಷ್ಟಬಾಧೆಯನ್ನು ತೊಲಗಿಸದೆ ಇರಬಹುದಾದರೂ, ನಾವು “ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:13) ಯೆಹೋವನನ್ನು ‘ಸಕಲ ವಿಧವಾಗಿ ಸಂತೈಸುವ ದೇವರು’ ಎಂದು ಕರೆಯಲಾಗಿರುವುದು ಗಮನಾರ್ಹ ಸಂಗತಿಯಾಗಿದೆ. (2 ಕೊರಿಂಥ 1:​3, 4) ನಮಗೆ ಸಹಿಸಿಕೊಳ್ಳಲು ಆವಶ್ಯಕವಾಗಿರುವಂಥದ್ದನ್ನು ದೇವರು ಕೊಡಬಲ್ಲನು, ಮತ್ತು ನಮಗೆ ನಿತ್ಯಜೀವದ ನಿರೀಕ್ಷೆಯೂ ಇದೆ.

ದೇವರ ವಾಕ್ಯವಾದ ಬೈಬಲು, ಯೆಹೋವನು ಹೀಗೆ ಮಾಡುವನೆಂದು ವಚನ ಕೊಡುತ್ತದೆ: “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” (ಪ್ರಕಟನೆ 21:3, 4) ಕಷ್ಟಬಾಧೆಗಳಿಲ್ಲದ ಲೋಕವಿರುವುದು ಎಂಬುದನ್ನು ನಂಬುವುದು ಕಷ್ಟವೆಂದು ನಿಮಗನಿಸುತ್ತದೊ? ನಿಮಗೆ ಕಷ್ಟಗಳ ಮಧ್ಯೆ ಜೀವಿಸುವುದು ರೂಢಿಯಾಗಿರುವಲ್ಲಿ ಹಾಗೆ ತೋರಬಹುದು. ಆದರೂ, ದೇವರು ಭಯ ಮತ್ತು ವಿಪತ್ತಿನಿಂದ ಬಿಡುಗಡೆಯನ್ನು ವಾಗ್ದಾನಿಸಿದ್ದಾನೆ ಹಾಗೂ ಆತನ ಉದ್ದೇಶವು ಖಂಡಿತವಾಗಿಯೂ ಕೈಗೂಡುವುದು.​—⁠ಯೆಶಾಯ 55:​10, 11.

[ಪುಟ 9ರಲ್ಲಿರುವ ಚಿತ್ರಗಳು]

ಹತಾಶೆಯಿಂದ ಉಪಶಮನಕ್ಕೆ