ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೋಸಹೋಗದಂತೆ ಎಚ್ಚರಿಕೆ ತೆಗೆದುಕೊಳ್ಳಿ

ಮೋಸಹೋಗದಂತೆ ಎಚ್ಚರಿಕೆ ತೆಗೆದುಕೊಳ್ಳಿ

ಮೋಸಹೋಗದಂತೆ ಎಚ್ಚರಿಕೆ ತೆಗೆದುಕೊಳ್ಳಿ

“[ಯಾರಾದರೂ] ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.”​—⁠ಕೊಲೊಸ್ಸೆ 2:⁠8.

“ನಿಮ್ಮಲ್ಲಿ ಎಷ್ಟು ಮಂದಿಗೆ ಕಕ್ಷಿಗಾರನು ಸುಳ್ಳನ್ನೇ ಆಡಿರುವುದಿಲ್ಲ?” ಕೆಲವು ವರುಷಗಳ ಹಿಂದೆ, ಕಾನೂನು ಪ್ರೊಫೆಸರರೊಬ್ಬರು ಈ ಪ್ರಶ್ನೆಯನ್ನು ಕೇಳುವ ಮೂಲಕ ಒಂದು ಸಮೀಕ್ಷೆಯನ್ನು ನಡೆಸಿದರು. ಪ್ರತಿಕ್ರಿಯೆ ಏನಾಗಿತ್ತು? ಅವರು ವಿವರಿಸುವುದು: “ಸಾವಿರಾರು ಮಂದಿ ವಕೀಲರಲ್ಲಿ ಒಬ್ಬನಿಗೆ ಮಾತ್ರ ಈ ವರೆಗೂ ಯಾವ ಕಕ್ಷಿಗಾರನೂ ಸುಳ್ಳಾಡಿರಲಿಲ್ಲ.” ಇದಕ್ಕೆ ಕಾರಣ? “ಆ ವಕೀಲನು ಆಗ ತಾನೆ ಒಂದು ದೊಡ್ಡ ವಾಣಿಜ್ಯ ಸಂಸ್ಥೆಯಲ್ಲಿ ತನ್ನ ವೃತ್ತಿಯನ್ನು ಆರಂಭಿಸಿದ್ದು ಈ ವರೆಗೂ ಒಬ್ಬ ಕಕ್ಷಿಗಾರನೊಂದಿಗೆ ಮಾತಾಡಿರಲಿಲ್ಲ.” ಈ ಅನುಭವವು, ಸುಳ್ಳಾಡುವುದು ಮತ್ತು ಮೋಸವು ಈ ಲೋಕದಲ್ಲಿ ಸರ್ವಸಾಮಾನ್ಯವಾಗಿದೆ ಎಂಬ ವಿಷಾದಕರ ಸತ್ಯವನ್ನು ದೃಷ್ಟಾಂತಿಸುತ್ತದೆ.

2 ಮೋಸವು ಅನೇಕ ರೂಪಗಳಲ್ಲಿ ತೋರಿಬಂದು ಆಧುನಿಕ ಜೀವನದ ಹೆಚ್ಚುಕಡಿಮೆ ಎಲ್ಲಾ ಕ್ಷೇತ್ರಗಳಲ್ಲೂ ಹರಡಿಕೊಂಡಿದೆ. ವಾರ್ತಾಮಾಧ್ಯಮಗಳಲ್ಲಿ ಇದಕ್ಕಿರುವ ದೃಷ್ಟಾಂತಗಳೊ ಹೇರಳ​—⁠ರಾಜಕಾರಣಿಗಳು ತಮ್ಮ ಕಾರ್ಯಗಳ ವಿಷಯದಲ್ಲಿ ಸುಳ್ಳಾಡುತ್ತಾರೆ, ಅಕೌಂಟೆಂಟರು ಮತ್ತು ವಕೀಲರು ಸಂಸ್ಥೆಗಳ ಲಾಭವನ್ನು ವಿಪರೀತ ದೊಡ್ಡದು ಮಾಡಿ ಹೇಳುತ್ತಾರೆ, ಜಾಹೀರಾತುಗಾರರು ಗ್ರಾಹಕರನ್ನು ದಾರಿತಪ್ಪಿಸುತ್ತಾರೆ, ಕಕ್ಷಿಗಾರರು ವಿಮಾ ಸಂಸ್ಥೆಗಳನ್ನು ವಂಚಿಸುತ್ತಾರೆ, ಇತ್ಯಾದಿ. ಇದಲ್ಲದೆ ಧಾರ್ಮಿಕ ಮೋಸವೂ ಇದೆ. ಪಾದ್ರಿವರ್ಗವು ಜನಸಾಮಾನ್ಯರನ್ನು ಆತ್ಮದ ಅಮರತ್ವ, ನರಕಾಗ್ನಿ, ಮತ್ತು ತ್ರೈಯೈಕ್ಯದ ವಿಷಯದಲ್ಲಿ ಮಿಥ್ಯ ಬೋಧನೆಗಳನ್ನು ಕಲಿಸುತ್ತಾ ಅವರನ್ನು ದಾರಿತಪ್ಪಿಸುತ್ತದೆ.​—⁠2 ತಿಮೊಥೆಯ 4:​3, 4.

3 ಈ ಎಲ್ಲಾ ಮೋಸವನ್ನು ನೋಡಿ ನಾವು ಆಶ್ಚರ್ಯಗೊಳ್ಳಬೇಕೊ? ಇಲ್ಲ. “ಕಡೇ ದಿವಸಗಳ” ಬಗ್ಗೆ ಬೈಬಲ್‌ ಎಚ್ಚರಿಕೆ ನೀಡಿದ್ದು: “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:1, 13) ಕ್ರೈಸ್ತರಾಗಿರುವ ನಾವು ನಮ್ಮನ್ನು ಸತ್ಯದಿಂದ ದಾರಿತಪ್ಪಿಸಸಾಧ್ಯವಿರುವ ವಿಷಯಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಸಹಜವಾಗಿಯೇ ಈ ಎರಡು ಪ್ರಶ್ನೆಗಳು ಏಳುತ್ತವೆ: ಇಂದು ಮೋಸವು ಇಷ್ಟು ವ್ಯಾಪಕವಾಗಿರುವುದೇಕೆ, ಮತ್ತು ಮೋಸಹೋಗುವ ವಿಷಯದಲ್ಲಿ ನಾವು ಹೇಗೆ ಎಚ್ಚರಿಕೆಯಿಂದಿರಬಲ್ಲೆವು?

ಇಂದು ಇಷ್ಟೊಂದು ಮೋಸ ಇರುವುದೇಕೆ?

4 ಈ ಲೋಕದಲ್ಲಿ ಮೋಸವು ವ್ಯಾಪಕವಾಗಿರುವುದಕ್ಕೆ ಕಾರಣವೇನೆಂಬುದನ್ನು ಬೈಬಲು ಸ್ಪಷ್ಟವಾಗಿ ವಿವರಿಸುತ್ತದೆ. ಅಪೊಸ್ತಲ ಯೋಹಾನನು, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬರೆದನು. (1 ಯೋಹಾನ 5:19) ಆ ‘ಕೆಡುಕನು’ ಪಿಶಾಚನಾದ ಸೈತಾನನೇ. ಅವನ ಸಂಬಂಧದಲ್ಲಿ ಯೇಸು ಹೇಳಿದ್ದು: “ಅವನು . . . ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ.” ಹೀಗಿರುವಾಗ, ಈ ಜಗತ್ತು ಅದರ ಅಧಿಪತಿಯ ಮನೋಭಾವ, ಮೌಲ್ಯಗಳು, ಮತ್ತು ಮೋಸಕರ ಪ್ರವೃತ್ತಿಗಳನ್ನು ಪ್ರತಿಬಿಂಬಿಸುವುದರಲ್ಲಿ ಆಶ್ಚರ್ಯವೇನಾದರೂ ಇದೆಯೆ?​—⁠ಯೋಹಾನ 8:44; 14:30; ಎಫೆಸ 2:1-3.

5 ಈ ಅಂತ್ಯಕಾಲದಲ್ಲಿ ಸೈತಾನನು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾನೆ. ಅವನನ್ನು ಭೂಮಿಗೆ ದೊಬ್ಬಲಾಗಿದೆ. ತನಗಿರುವ ಕಾಲ ಕೊಂಚವೆಂದು ಅವನಿಗೆ ತಿಳಿದದೆ ಮಾತ್ರವಲ್ಲ ಅವನು “ಮಹಾ ರೌದ್ರ”ವುಳ್ಳವನಾಗಿದ್ದಾನೆ. ಸಾಧ್ಯವಾಗುವಷ್ಟು ಮನುಷ್ಯರನ್ನು ನಾಶಗೊಳಿಸುವ ಛಲದಿಂದ ಅವನು “ಭೂಲೋಕದವರನ್ನೆಲ್ಲಾ ಮರುಳು”ಗೊಳಿಸುತ್ತಿದ್ದಾನೆ. (ಪ್ರಕಟನೆ 12:​9, 12) ಸೈತಾನನು ಒಮ್ಮೊಮ್ಮೆ ಮಾತ್ರ ಮೋಸಪಡಿಸುವವನಾಗಿರುವುದಿಲ್ಲ. ಬದಲಿಗೆ, ಅವನು ಮಾನವರನ್ನು ಮರುಳುಗೊಳಿಸುವುದರಲ್ಲಿ ತನ್ನ ಪ್ರಯತ್ನದ ಉಗ್ರತೆಯನ್ನು ಒಂದು ಕ್ಷಣಕ್ಕೂ ಸಡಿಲಿಸದಿರುತ್ತಾನೆ. * ಅವನು ಅವಿಶ್ವಾಸಿಗಳ ಮನಸ್ಸನ್ನು ಮಂಕುಮಾಡಿ, ದೇವರಿಂದ ದೂರ ಸೆಳೆಯಲು ಕುಯುಕ್ತಿ ಮತ್ತು ವಂಚನೆಗಳೊಂದಿಗೆ ತನ್ನ ಸಂಗ್ರಹದಲ್ಲಿರುವ ಪ್ರತಿಯೊಂದು ಮೋಸಕರ ವಿಧಾನವನ್ನೂ ಉಪಯೋಗಿಸುತ್ತಾನೆ. (2 ಕೊರಿಂಥ 4:⁠4) ಮೋಸಗೊಳಿಸುವುದರಲ್ಲಿ ನಿಷ್ಣಾತನಾಗಿರುವ ಇವನು, ವಿಶೇಷವಾಗಿ ದೇವರನ್ನು ‘ಆತ್ಮದಿಂದಲೂ ಸತ್ಯದಿಂದಲೂ’ ಆರಾಧಿಸುವವರನ್ನು ನುಂಗಲು ಛಲದಿಂದಿದ್ದಾನೆ. (ಯೋಹಾನ 4:24; 1 ಪೇತ್ರ 5:8) ವಾಸ್ತವದಲ್ಲಿ ಸೈತಾನನು, ‘ನಾನು ಯಾವನನ್ನೂ ದೇವರಿಂದ ತಿರುಗಿಸಬಲ್ಲೆ’ ಎಂದು ಹೇಳಿರುತ್ತಾನೆ ಎಂಬುದನ್ನು ಎಂದಿಗೂ ಮರೆಯಬೇಡಿರಿ. (ಯೋಬ 1:​9-12) ಈಗ ನಾವು, ಸೈತಾನನ ಕೆಲವು “ತಂತ್ರೋಪಾಯಗಳನ್ನು” ಮತ್ತು ಅವುಗಳ ವಿರುದ್ಧ ಹೇಗೆ ಎಚ್ಚರಿಕೆಯಿಂದಿರಬೇಕೆಂಬುದನ್ನು ಪರಿಗಣಿಸೋಣ.​—⁠ಎಫೆಸ 6:​11.

ಧರ್ಮಭ್ರಷ್ಟರಿಂದ ಮೋಸಹೋಗುವುದರ ವಿರುದ್ಧ ಎಚ್ಚರದಿಂದಿರಿ

6 ದೇವರ ಸೇವಕರನ್ನು ತಪ್ಪುದಾರಿಗೆಳೆಯಲು ಸೈತಾನನು ದೀರ್ಘಕಾಲದಿಂದ ಧರ್ಮಭ್ರಷ್ಟರನ್ನು ಉಪಯೋಗಿಸಿದ್ದಾನೆ. (ಮತ್ತಾಯ 13:​36-39) ಈ ಧರ್ಮಭ್ರಷ್ಟರು ತಾವು ಯೆಹೋವನನ್ನು ಆರಾಧಿಸುತ್ತೇವೆಂದೂ ಬೈಬಲನ್ನು ನಂಬುತ್ತೇವೆಂದೂ ಹೇಳಿಕೊಳ್ಳಬಹುದು ಆದರೆ ಅವರು ದೇವರ ಸಂಸ್ಥೆಯ ದೃಶ್ಯಭಾಗವನ್ನು ತಿರಸ್ಕರಿಸುತ್ತಾರೆ. ಅವರಲ್ಲಿ ಕೆಲವರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ‘ಮಹಾ ಬಾಬೆಲಿನ,’ ದೇವರನ್ನು ಅವಮಾನಗೊಳಿಸುವ ಬೋಧನೆಗಳಿಗೂ ಹಿಂದಿರುಗುತ್ತಾರೆ. (ಪ್ರಕಟನೆ 17:5; 2 ಪೇತ್ರ 2:19-22) ದೈವಿಕ ಪ್ರೇರಣೆಯಿಂದ ಬೈಬಲ್‌ ಲೇಖಕರು ಈ ಧರ್ಮಭ್ರಷ್ಟರ ಉದ್ದೇಶಗಳನ್ನೂ ವಿಧಾನಗಳನ್ನೂ ಬಯಲುಪಡಿಸಲು ಕಠಿನ ಮಾತುಗಳನ್ನು ಉಪಯೋಗಿಸಿದ್ದಾರೆ.

7 ಈ ಧರ್ಮಭ್ರಷ್ಟರಿಗೆ ಏನು ಬೇಕಾಗಿದೆ? ಇವರಲ್ಲಿ ಹೆಚ್ಚಿನವರು, ಪ್ರಾಯಶಃ ಒಂದೊಮ್ಮೆ ಅವರು ಸತ್ಯವೆಂದು ಎಣಿಸಿದ್ದಂಥ ನಂಬಿಕೆಯನ್ನು ಬಿಟ್ಟುಹೋಗುವುದರಷ್ಟರಲ್ಲೇ ತೃಪ್ತಿಪಡುವುದಿಲ್ಲ. ಅನೇಕವೇಳೆ, ಅವರು ಬೇರೆಯವರನ್ನೂ ತಮ್ಮೊಂದಿಗೆ ಒಯ್ಯಲು ಬಯಸುತ್ತಾರೆ. ಹೊರಗೆ ಹೋಗಿ ತಮ್ಮ ಸ್ವಂತ ಶಿಷ್ಯರನ್ನು ಮಾಡುವ ಬದಲಾಗಿ, ಅನೇಕ ಮಂದಿ ಧರ್ಮಭ್ರಷ್ಟರು ‘ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳಲು’ ಪ್ರಯತ್ನಿಸುತ್ತಾರೆ. (ಅ. ಕೃತ್ಯಗಳು 20:29, 30) ಸುಳ್ಳು ಬೋಧಕರ ಬಗ್ಗೆ ಅಪೊಸ್ತಲ ಪೌಲನು ಈ ಜರೂರಿಯ ಎಚ್ಚರಿಕೆಯನ್ನು ಕೊಟ್ಟನು: “[ಯಾರಾದರೂ] ನಿಮ್ಮಲ್ಲಿ ಬಂದು ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.” (ಕೊಲೊಸ್ಸೆ 2:8) ಇದು, ಅನೇಕ ಮಂದಿ ಧರ್ಮಭ್ರಷ್ಟರು ಏನನ್ನು ಮಾಡಲು ಪ್ರಯತ್ನಿಸುತ್ತಾರೋ ಅದನ್ನು ಸರಿಯಾಗಿ ವರ್ಣಿಸುತ್ತದಲ್ಲವೆ? ಅಪಹರಣಕಾರರು ಎಚ್ಚರಿಕೆಯಿಂದಿರದ ಒಬ್ಬನನ್ನು ಅವನ ಕುಟುಂಬದಿಂದ ಅಪಹರಿಸಿ ಕೊಂಡೊಯ್ಯುವಂತೆಯೇ ಈ ಧರ್ಮಭ್ರಷ್ಟರು ತಮ್ಮನ್ನು ಯಥಾರ್ಥತೆಯಿಂದ ನಂಬುವ ಸಭೆಯ ಸದಸ್ಯರನ್ನು ತಮ್ಮ ಬಲಿಪಶುಗಳನ್ನಾಗಿ ಮಾಡುತ್ತಾರೆ.

8 ಧರ್ಮಭ್ರಷ್ಟರು ತಮ್ಮ ಗುರಿಯನ್ನು ಸಾಧಿಸಲು ಯಾವ ವಿಧಾನಗಳನ್ನು ಉಪಯೋಗಿಸುತ್ತಾರೆ? ಅವರು ಅನೇಕವೇಳೆ ತಿರುಚಲ್ಪಟ್ಟ ವಿಷಯಗಳನ್ನು, ಅರ್ಧಸತ್ಯಗಳನ್ನು, ಮತ್ತು ನೇರವಾದ ಸುಳ್ಳುಗಳನ್ನು ಬಳಸುತ್ತಾರೆ. ತನ್ನ ಹಿಂಬಾಲಕರು, ಅವರ ಬಗ್ಗೆ “ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ” ಆಡುವವರಿಂದ ಮೋಸಗೊಳಿಸಲ್ಪಡುವರೆಂದೂ ಯೇಸುವಿಗೆ ಗೊತ್ತಿತ್ತು. (ಮತ್ತಾಯ 5:11) ಇಂತಹ ಹಗೆಸಾಧನೆ ಮಾಡುವ ವಿರೋಧಿಗಳು ಇತರರನ್ನು ಮೋಸಗೊಳಿಸುವ ಸಲುವಾಗಿ ಸತ್ಯವಲ್ಲದ್ದನ್ನು ಹೇಳುವರು. ಧರ್ಮಭ್ರಷ್ಟರು “ಕಲ್ಪನೆಯ ಮಾತುಗಳನ್ನು” ಉಪಯೋಗಿಸಿ, ‘ವಂಚನೆಯ ಬೋಧನೆಗಳನ್ನು’ (NW) ಹಬ್ಬಿಸಿ, ತಮ್ಮ ಸ್ವಂತ ಗುರಿಗಳನ್ನು ಸಾಧಿಸಲಿಕ್ಕಾಗಿ ಶಾಸ್ತ್ರಗಳಿಗೆ “ತಪ್ಪಾದ ಅರ್ಥ”ವನ್ನು ಕಟ್ಟುವರೆಂದು ಅಪೊಸ್ತಲ ಪೇತ್ರನು ಎಚ್ಚರಿಸಿದನು. (2 ಪೇತ್ರ 2:​3, 13; 3:16) ದುಃಖದ ಸಂಗತಿಯೇನೆಂದರೆ, ಧರ್ಮಭ್ರಷ್ಟರು ‘ಕೆಲವರ ನಂಬಿಕೆಯನ್ನು ಕೆಡಿಸುವುದರಲ್ಲಿ’ ಯಶಸ್ಸನ್ನು ಕಾಣುತ್ತಾರೆ.​—⁠2 ತಿಮೊಥೆಯ 2:18.

9 ಇಂತಹ ಧರ್ಮಭ್ರಷ್ಟರಿಂದ ಮೋಸಹೋಗದಂತೆ ನಾವು ಹೇಗೆ ಎಚ್ಚರದಿಂದಿರಬಲ್ಲೆವು? ದೇವರ ವಾಕ್ಯದ ಸಲಹೆಗೆ ಕಿವಿಗೊಡುವ ಮೂಲಕವೇ. ಅದು ಹೇಳುವುದು: “ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿ ಹೋಗಿರಿ.” (ರೋಮಾಪುರ 16:17) ಬಾಯಿಮಾತಿನಿಂದಾಗಲಿ, ಮುದ್ರಣ ರೂಪದಲ್ಲಾಗಲಿ ಇಲ್ಲವೆ ಇಂಟರ್‌ನೆಟ್‌ ಮೂಲಕವಾಗಲಿ ಅವರಿಂದ ಬರುವ ಕುತರ್ಕಗಳನ್ನು ತಿರಸ್ಕರಿಸುವ ಮೂಲಕವೇ ನಾವು ಅವರನ್ನು ‘ಬಿಟ್ಟು ತೊಲಗಿ ಹೋಗುತ್ತೇವೆ.’ ನಾವು ಇಂತಹ ನಿಲುವನ್ನು ಏಕೆ ತೆಗೆದುಕೊಳ್ಳುತ್ತೇವೆ? ಮೊದಲನೆಯದಾಗಿ, ದೇವರ ವಾಕ್ಯವು ನಾವು ಹಾಗೆ ಮಾಡಬೇಕೆಂದು ತಿಳಿಸುತ್ತದೆ, ಮತ್ತು ಯೆಹೋವನು ಸದಾ ನಮ್ಮ ನಿತ್ಯ ಹಿತವನ್ನೇ ಬಯಸುತ್ತಾನೆಂದು ನಾವು ಭರವಸೆಯಿಡುತ್ತೇವೆ.​—⁠ಯೆಶಾಯ 48:17, 18.

10 ಎರಡನೆಯದಾಗಿ, ಮಹಾ ಬಾಬೆಲಿನಿಂದ ನಮ್ಮನ್ನು ಅಷ್ಟು ಸ್ಪಷ್ಟವಾಗಿ ಪ್ರತ್ಯೇಕಿಸಿರುವ ಅಮೂಲ್ಯ ಸತ್ಯಗಳನ್ನು ನಮಗೆ ಕಲಿಸಿಕೊಟ್ಟಿರುವ ಸಂಸ್ಥೆಯನ್ನು ನಾವು ಪ್ರೀತಿಸುತ್ತೇವೆ. ಅದೇ ಸಮಯದಲ್ಲಿ, ದೇವರ ಉದ್ದೇಶದ ಕುರಿತು ನಮಗಿರುವ ಜ್ಞಾನವು ಪರಿಪೂರ್ಣವಲ್ಲವೆಂದೂ, ವರುಷಗಳು ಕಳೆದಂತೆ ನಮ್ಮ ತಿಳಿವಳಿಕೆಯು ಪರಿಷ್ಕೃತವಾಗುತ್ತಾ ಬಂದಿದೆ ಎಂಬುದನ್ನೂ ನಾವು ಒಪ್ಪಿಕೊಳ್ಳುತ್ತೇವೆ. ನಿಷ್ಠಾವಂತ ಕ್ರೈಸ್ತರು ಇಂತಹ ಸಕಲ ಪರಿಷ್ಕರಣಗಳಿಗಾಗಿ ಯೆಹೋವನ ಮೇಲೆ ಆತುಕೊಳ್ಳಲು ತೃಪ್ತರಾಗಿದ್ದಾರೆ. (ಜ್ಞಾನೋಕ್ತಿ 4:18) ಈ ಮಧ್ಯೆ, ದೇವರು ಯಾವುದನ್ನು ಉಪಯೋಗಿಸಲು ಇಷ್ಟಪಡುತ್ತಾನೊ ಆ ಸಂಸ್ಥೆಯನ್ನು ನಾವು ತೊರೆಯುವುದಿಲ್ಲ. ಏಕೆಂದರೆ ಆತನ ಆಶೀರ್ವಾದವು ಅದರ ಮೇಲಿದೆಯೆಂಬುದಕ್ಕೆ ಸ್ಪಷ್ಟವಾದ ರುಜುವಾತನ್ನು ನಾವು ನೋಡುತ್ತೇವೆ.​—⁠ಅ. ಕೃತ್ಯಗಳು 6:7; 1 ಕೊರಿಂಥ 3:⁠6.

ಆತ್ಮವಂಚನೆಯ ವಿರುದ್ಧ ಎಚ್ಚರಿಕೆವಹಿಸಿ

11 ಅಪರಿಪೂರ್ಣ ಮಾನವರಲ್ಲಿರುವ ಆತ್ಮವಂಚನೆಯ ಪ್ರವೃತ್ತಿಯನ್ನು ಸೈತಾನನು ಸ್ವಪ್ರಯೋಜನಕ್ಕಾಗಿ ಬಳಸಲು ತಡಮಾಡುವುದಿಲ್ಲ. “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ,” ಎಂದು ಯೆರೆಮೀಯ 17:⁠9 ತಿಳಿಸುತ್ತದೆ. ಯಾಕೋಬನು ಬರೆದುದು: “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ.” (ಯಾಕೋಬ 1:14) ನಮ್ಮ ಹೃದಯವು ಮರುಳುಗೊಳಿಸಲ್ಪಡುವಲ್ಲಿ ಅದು ಕಾರ್ಯತಃ ಪಾಪವನ್ನು ನಮ್ಮ ಮುಂದೆ ಮನವೊಲಿಸುವಂಥ ರೀತಿಯಲ್ಲಿ ಬೀಸುತ್ತಾ ಎಂಬಂತೆ, ಅದನ್ನು ಆಕರ್ಷಣೀಯವೂ ಅಪಾಯರಹಿತವಾಗಿಯೂ ತೋರುವಂತೆ ಮಾಡುತ್ತದೆ. ಇಂತಹ ದೃಷ್ಟಿಕೋನವು ಮೋಸಕರವಾಗಿದೆ, ಏಕೆಂದರೆ ಹೀಗೆ ಪಾಪಕ್ಕೆ ಎಡೆಗೊಡುವುದು ಅಂತಿಮವಾಗಿ ಅಳಿವಿಗೆ ನಡಿಸುತ್ತದೆ.​—⁠ರೋಮಾಪುರ 8:⁠6.

12 ಆತ್ಮವಂಚನೆಯು ನಮ್ಮನ್ನು ಸುಲಭವಾಗಿ ಸಿಕ್ಕಿಸಿಹಾಕಬಲ್ಲದು. ನಮ್ಮಲ್ಲಿರುವ ಒಂದು ಗುರುತರವಾದ ವೈಯಕ್ತಿಕ ದೋಷವನ್ನು ವಂಚಕ ಹೃದಯವು ನ್ಯಾಯಸಮ್ಮತವೆಂದು ತರ್ಕಿಸಬಹುದು ಅಥವಾ ಗುರುತರವಾದ ಪಾಪಕ್ಕೆ ಅದು ನೆವಗಳನ್ನು ಕೊಡಬಹುದು. (1 ಸಮುವೇಲ 15:13-15, 20, 21) ನಮ್ಮ ಹುಚ್ಚುಸಾಹಸದ ಹೃದಯವು ಸಂಶಯಾಸ್ಪದ ನಡತೆಯನ್ನು ನ್ಯಾಯವೆಂದು ಸಮರ್ಥಿಸುವ ಮಾರ್ಗಗಳಿಗಾಗಿಯೂ ಹುಡುಕೀತು. ಉದಾಹರಣೆಗಾಗಿ, ಮನೋರಂಜನೆಯನ್ನು ತೆಗೆದುಕೊಳ್ಳಿ. ಕೆಲವೊಂದು ರೀತಿಯ ಮನೋರಂಜನೆಯು ಹಿತಕರವೂ ಆನಂದದಾಯಕವೂ ಆಗಿದೆ. ಆದರೂ, ಈ ಲೋಕವು ಚಲನಚಿತ್ರ, ಟಿವಿ ಕಾರ್ಯಕ್ರಮಗಳು, ಮತ್ತು ಇಂಟರ್‌ನೆಟ್‌ ಸೈಟ್‌ಗಳ ಮೂಲಕ ಒದಗಿಸುವ ಹೆಚ್ಚಿನ ವಿಷಯಗಳು ಅಶ್ಲೀಲವೂ ಅನೈತಿಕವೂ ಆಗಿವೆ. ಇಂತಹ ಹೊಲಸು ವಿನೋದಾವಳಿಗಳನ್ನು ನಾವು ನೋಡುವುದಾದರೂ ಅದರಿಂದ ನಮಗೇನೂ ಹಾನಿಯಾಗದು ಎಂದು ನಮ್ಮ ಮನವೊಪ್ಪಿಸಿಕೊಳ್ಳುವುದು ಸುಲಭ. ಕೆಲವರು ಹೀಗೂ ತರ್ಕಿಸಿಕೊಳ್ಳುತ್ತಾರೆ: “ನನ್ನ ಮನಸ್ಸಾಕ್ಷಿಯನ್ನು ಇದು ಚುಚ್ಚುವುದಿಲ್ಲ, ಆದ್ದರಿಂದ ಅದರಲ್ಲಿ ಏನು ಸಮಸ್ಯೆಯಿದೆ?” ಆದರೆ ಇಂತಹ ವ್ಯಕ್ತಿಗಳು ‘ತಪ್ಪು ತರ್ಕದಿಂದ ತಮ್ಮನ್ನು ಮೋಸಗೊಳಿಸಿಕೊಳ್ಳುತ್ತಾರೆ.’​—⁠ಯಾಕೋಬ 1:​22, NW.

13 ನಾವು ಆತ್ಮವಂಚನೆಗೆ ಒಳಗಾಗದಂತೆ ಹೇಗೆ ಎಚ್ಚರಿಕೆಯಿಂದಿರಬಲ್ಲೆವು? ಮೊದಲನೆಯದಾಗಿ, ಮಾನವ ಮನಸ್ಸಾಕ್ಷಿ ಸದಾ ಭರವಸಾರ್ಹವಲ್ಲವೆಂಬುದನ್ನು ನಾವು ಜ್ಞಾಪಿಸಿಕೊಳ್ಳುವುದು ಅವಶ್ಯ. ಅಪೊಸ್ತಲ ಪೌಲನ ಉದಾಹರಣೆಯನ್ನು ತೆಗೆದುಕೊಳ್ಳಿರಿ. ಅವನು ಕ್ರೈಸ್ತನಾಗುವುದಕ್ಕೆ ಮೊದಲು ಕ್ರಿಸ್ತನ ಹಿಂಬಾಲಕರನ್ನು ಹಿಂಸಿಸಿದನು. (ಅ. ಕೃತ್ಯಗಳು 9:​1, 2) ಆಗ ಅವನ ಮನಸ್ಸಾಕ್ಷಿ ಅವನನ್ನು ಪೀಡಿಸದೆ ಇದ್ದಿರಬಹುದು. ಆಗ ಅದು ತಪ್ಪು ದಾರಿಯಲ್ಲಿ ನಡೆಸಲ್ಪಡುತ್ತಿತ್ತೆಂಬುದು ವ್ಯಕ್ತ. “ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ” ಮಾಡಿದೆನೆಂದು ಪೌಲನು ಹೇಳಿದನು. (1 ತಿಮೊಥೆಯ 1:13) ಆದುದರಿಂದ ಯಾವುದೋ ಒಂದು ಮನೋರಂಜನೆಯಲ್ಲಿ ತೊಡಗಿರುವಾಗ ನಮ್ಮ ಮನಸ್ಸಾಕ್ಷಿ ನಮ್ಮನ್ನು ಚುಚ್ಚುವುದಿಲ್ಲವೆಂಬ ಮಾತ್ರಕ್ಕೆ ನಾವು ಮಾಡುವಂಥದ್ದು ಸರಿ ಎಂಬುದಕ್ಕೆ ಯಾವುದೇ ಖಾತ್ರಿ ಇರುವುದಿಲ್ಲ. ದೇವರ ವಾಕ್ಯದಿಂದ ಸರಿಯಾಗಿ ಶಿಕ್ಷಿತವಾದ ಸ್ವಸ್ಥವಾದ ಮನಸ್ಸಾಕ್ಷಿ ಮಾತ್ರ ನಮ್ಮ ಸುರಕ್ಷಿತವಾದ ಮಾರ್ಗದರ್ಶಿಯಾಗಿರಬಲ್ಲದು.

14 ನಾವು ಆತ್ಮವಂಚನೆಯಿಂದ ದೂರವಿರಬೇಕಾದರೆ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಹಾಯಕರ ಸಲಹೆಸೂಚನೆಗಳಿವೆ. ಪ್ರಾರ್ಥನಾಪೂರ್ವಕವಾಗಿ ನಿಮ್ಮನ್ನು ವಿಶ್ಲೇಷಿಸಿಕೊಳ್ಳಿರಿ. (ಕೀರ್ತನೆ 26:2; 2 ಕೊರಿಂಥ 13:5) ಇಂತಹ ಪ್ರಾಮಾಣಿಕ ಆತ್ಮವಿಶ್ಲೇಷಣೆಯು ನಿಮ್ಮ ದೃಷ್ಟಿಕೋನ ಅಥವಾ ಮಾರ್ಗಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ನಿಮ್ಮ ಕಣ್ಣುಗಳನ್ನು ತೆರೆಸೀತು. ಇತರರಿಗೆ ಕಿವಿಗೊಡಿರಿ. (ಯಾಕೋಬ 1:19) ಸ್ವಪರೀಕ್ಷೆಯು ನಮ್ಮ ಸ್ವಂತ ಅಭಿಪ್ರಾಯದಿಂದ ಪ್ರಭಾವಿಸಲ್ಪಡುವುದರಿಂದ, ಪ್ರೌಢ ಜೊತೆ ಕ್ರೈಸ್ತರ ಪಕ್ಷಪಾತವಿಲ್ಲದ ಮಾತುಗಳಿಗೆ ಕಿವಿಗೊಡುವುದು ವಿವೇಕಪ್ರದ. ಸಮತೂಕಭಾವವುಳ್ಳ, ಅನುಭವಸ್ಥ ಜೊತೆ ವಿಶ್ವಾಸಿಗಳ ದೃಷ್ಟಿಯಲ್ಲಿ ಸಂಶಯಾಸ್ಪದವಾದ ರೀತಿಗಳಲ್ಲಿ ನೀವು ನಿರ್ಣಯಗಳನ್ನು ಮಾಡುತ್ತೀರಿ ಅಥವಾ ವರ್ತಿಸುತ್ತೀರೆಂದು ನಿಮಗೆ ತಿಳಿದುಬರುವುದಾದರೆ, ನೀವು ಹೀಗೆ ಕೇಳಿಕೊಳ್ಳಬಹುದು: ‘ನನ್ನ ಮನಸ್ಸಾಕ್ಷಿಯು ಸರಿಯಾಗಿ ತರಬೇತು ಹೊಂದಿರದ್ದಾಗಿರಬಹುದೊ ಇಲ್ಲವೆ ನನ್ನ ಹೃದಯ ನನ್ನನ್ನು ಮೋಸಗೊಳಿಸುತ್ತಿರಬಹುದೊ?’ ಬೈಬಲ್‌ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳಿಂದ ಕ್ರಮವಾಗಿ ಆಹಾರವನ್ನು ಸೇವಿಸಿರಿ. (ಕೀರ್ತನೆ 1:⁠2) ಹೀಗೆ ಮಾಡುವುದು ನಿಮ್ಮ ಆಲೋಚನೆ, ಮನೋಭಾವ, ಮತ್ತು ಅನಿಸಿಕೆಗಳನ್ನು ದೈವಿಕ ಮೂಲತತ್ತ್ವಗಳಿಗೆ ಹೊಂದಿಕೆಯಾಗಿ ಇಡುವಂತೆ ನಿಮಗೆ ಸಹಾಯಮಾಡುವುದು.

ಸೈತಾನನ ಸುಳ್ಳುಗಳ ವಿರುದ್ಧ ಎಚ್ಚರಿಕೆಯಿಂದಿರಿ

15 ನಮ್ಮನ್ನು ಮೋಸಗೊಳಿಸಲು ಸೈತಾನನು ವಿವಿಧ ಸುಳ್ಳುಗಳನ್ನು ಉಪಯೋಗಿಸುತ್ತಾನೆ. ಪ್ರಾಪಂಚಿಕ ಸ್ವತ್ತುಗಳೇ ನಮಗೆ ಸಂತೋಷ ಮತ್ತು ತೃಪ್ತಿಯನ್ನು ತರುತ್ತವೆಂದು ನಂಬಿಸಲು ಅವನು ಪ್ರಯತ್ನಿಸುತ್ತಾನಾದರೂ, ಅನೇಕವೇಳೆ ಅದಕ್ಕೆ ವ್ಯತಿರಿಕ್ತವಾಗಿರುವುದೇ ಸತ್ಯವಾಗಿ ಪರಿಣಮಿಸುತ್ತದೆ. (ಪ್ರಸಂಗಿ 5:​10-12) ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂಬುದಕ್ಕೆ ಸ್ಪಷ್ಟವಾದ ರುಜುವಾತು ಇದೆಯಾದರೂ, ಈ ದುಷ್ಟ ಲೋಕವು ಸದಾ ಮುಂದುವರಿಯುವುದೆಂದು ನಾವು ನಂಬಬೇಕೆಂಬುದು ಅವನ ಇಚ್ಛೆ. (2 ತಿಮೊಥೆಯ 3:​1-5) ಭೋಗಾನ್ವೇಷಕರು ಅನೇಕವೇಳೆ ಕಹಿಯಾದ ಫಲವನ್ನು ಕೊಯ್ಯುತ್ತಾರಾದರೂ, ಅನೈತಿಕ ಜೀವನ ಶೈಲಿಯನ್ನು ಬೆನ್ನಟ್ಟುವುದರಲ್ಲಿ ಹಾನಿಯಿಲ್ಲ ಎಂಬ ವಿಚಾರವನ್ನು ಸೈತಾನನು ಪ್ರವರ್ಧಿಸುತ್ತಾನೆ. (ಗಲಾತ್ಯ 6:⁠7) ಇಂತಹ ಸುಳ್ಳುಗಳಿಂದ ನಾವು ಮೋಸಹೋಗುವುದನ್ನು ಹೇಗೆ ತಪ್ಪಿಸಸಾಧ್ಯವಿದೆ?

16ಬೈಬಲ್‌ ಉದಾಹರಣೆಗಳಿಂದ ಪ್ರಯೋಜನ ಪಡೆಯಿರಿ. ಬೈಬಲಿನಲ್ಲಿ, ಸೈತಾನನ ಸುಳ್ಳುಗಳಿಂದ ಮೋಸಹೋದವರ ಎಚ್ಚರಿಕೆಯ ಉದಾಹರಣೆಗಳಿವೆ. ಅವರು ಪ್ರಾಪಂಚಿಕ ವಸ್ತುಗಳನ್ನು ಪ್ರೀತಿಸಿದರು, ತಾವು ಜೀವಿಸುತ್ತಿದ್ದ ಸಮಯಗಳ ವಿಷಯದಲ್ಲಿ ಅಲಕ್ಷ್ಯವನ್ನು ತೋರಿಸಿದರು, ಇಲ್ಲವೆ ದುರಾಚಾರಕ್ಕೆ ಬಲಿಬಿದ್ದರು ಮತ್ತು ಇದ್ದೆಲ್ಲದ್ದರಲ್ಲೂ ದುಷ್ಪರಿಣಾಮಗಳನ್ನು ಕೊಯ್ದರು. (ಮತ್ತಾಯ 19:16-22; 24:36-42; ಲೂಕ 16:14; 1 ಕೊರಿಂಥ 10:8-11) ಆಧುನಿಕ ದಿನದ ಉದಾಹರಣೆಗಳಿಂದ ಕಲಿತುಕೊಳ್ಳಿರಿ. ವಿಷಾದಕರವಾಗಿ, ಒಮ್ಮೊಮ್ಮೆ ಕೆಲವು ಮಂದಿ ಕ್ರೈಸ್ತರು ತಮ್ಮ ತುರ್ತುಪ್ರಜ್ಞೆಯನ್ನು ಕಳೆದುಕೊಂಡು, ಈಗ ದೇವರನ್ನು ಸೇವಿಸುವುದರಿಂದ ತಾವು ಯಾವುದೊ ಒಳ್ಳೆಯದನ್ನು ಕಳೆದುಕೊಳ್ಳುತ್ತಿದ್ದೇವೆಂದು ನಂಬುತ್ತಾರೆ. ಹೀಗಿರುವುದರಿಂದ ಅವರು ಸತ್ಯವನ್ನು ಬಿಟ್ಟು ಸುಖಾನುಭವವೆಂದು ಹೇಳಲ್ಪಡುವ ಜೀವನವನ್ನು ಬೆನ್ನಟ್ಟುತ್ತಾರೆ. ಆದರೆ ಅಂಥವರು “ಜಾರುವ ನೆಲದ ಮೇಲೆ” ಇದ್ದಾರೆ ಮತ್ತು ಈಗಲೊ ಮುಂದಕ್ಕೊ ಅವರು ತಮ್ಮ ಭಕ್ತಿಹೀನ ನಡತೆಯ ಫಲಿತಾಂಶಗಳನ್ನು ಅನುಭವಿಸಲೇಬೇಕಾಗುತ್ತದೆ. (ಕೀರ್ತನೆ 73:​18, 19, NW) ಇತರರ ತಪ್ಪುಗಳಿಂದ ನಾವು ಕಲಿತುಕೊಳ್ಳುವುದು ವಿವೇಕಪ್ರದ.​—⁠ಜ್ಞಾನೋಕ್ತಿ 22:⁠3.

17 ಸೈತಾನನು ಪರಿಣಾಮಕಾರಿಯಾಗಿ ಉಪಯೋಗಿಸಿರುವ ಇನ್ನೊಂದು ಸುಳ್ಳಿದೆ. ಯೆಹೋವನು ನಮ್ಮನ್ನು ಪ್ರೀತಿಸುವುದೂ ಇಲ್ಲ, ಅಮೂಲ್ಯವೆಂದೆಣಿಸುವುದೂ ಇಲ್ಲ ಎಂಬುದೇ ಆ ಸುಳ್ಳು. ಸೈತಾನನಿಗೆ ಅಪರಿಪೂರ್ಣ ಮಾನವರನ್ನು ಅಧ್ಯಯನ ಮಾಡಲು ಸಾವಿರಾರು ವರುಷ ಕಾಲ ಅವಕಾಶವಿದ್ದಿರುತ್ತದೆ. ನಿರುತ್ತೇಜನವು ನಮ್ಮನ್ನು ಬಲಹೀನಗೊಳಿಸಬಲ್ಲದೆಂದು ಅವನಿಗೆ ಚೆನ್ನಾಗಿ ತಿಳಿದದೆ. (ಜ್ಞಾನೋಕ್ತಿ 24:10) ಆದಕಾರಣ, ನಾವು ದೇವರ ದೃಷ್ಟಿಯಲ್ಲಿ ಬೆಲೆಯಿಲ್ಲದವರು ಎಂಬ ಸುಳ್ಳನ್ನು ಅವನು ವರ್ಧಿಸುತ್ತಾನೆ. ನಾವು ‘ಕೆಡವಲ್ಪಟ್ಟು,’ ಯೆಹೋವನು ನಮ್ಮ ಬಗ್ಗೆ ಸ್ವಲ್ಪವೂ ಚಿಂತಿಸುವುದಿಲ್ಲ ಎಂಬ ಮನವರಿಕೆ ನಮಗುಂಟಾಗುವಲ್ಲಿ ನಮಗೆ ಬಿಟ್ಟುಕೊಡುವ ಪ್ರೇರಣೆಯುಂಟಾದೀತು. (2 ಕೊರಿಂಥ 4:⁠9) ಆ ಮಹಾವಂಚಕನಿಗೆ ಬೇಕಾಗಿರುವುದು ಅದೇ! ಹಾಗಾದರೆ ಈ ಸೈತಾನನ ಸುಳ್ಳಿನಿಂದ ಮೋಸಹೋಗುವುದರ ವಿರುದ್ಧ ನಾವು ಹೇಗೆ ಎಚ್ಚರದಿಂದಿರಬಲ್ಲೆವು?

18ನಮ್ಮ ಮೇಲೆ ದೇವರಿಗಿರುವ ಪ್ರೀತಿಯ ಕುರಿತು ಬೈಬಲು ಏನು ಹೇಳುತ್ತದೆಂಬುದರ ಬಗ್ಗೆ ವೈಯಕ್ತಿಕವಾಗಿ ಧ್ಯಾನಮಾಡಿರಿ. ಯೆಹೋವನು ವ್ಯಕ್ತಿಪರವಾಗಿ ಪ್ರತಿಯೊಬ್ಬರನ್ನು ಗಮನಿಸುತ್ತಾನೆಂದು ಮತ್ತು ಪ್ರೀತಿಸುತ್ತಾನೆಂದು ಆಶ್ವಾಸನೆ ಕೊಡುವ ಮನಸ್ಪರ್ಶಿ ದೃಷ್ಟಾಂತಗಳನ್ನು ದೇವರ ವಾಕ್ಯವು ಉಪಯೋಗಿಸುತ್ತದೆ. ಆತನು ನಿಮ್ಮ ಕಣ್ಣೀರನ್ನು “ಬುದ್ದಲಿಯಲ್ಲಿ” ತುಂಬಿಸುತ್ತಾನೆ, ಅಂದರೆ ನೀವು ನಂಬಿಗಸ್ತರಾಗಿರಲು ಹೆಣಗಾಡುವಾಗ ಸುರಿಸುವಂಥ ಕಣ್ಣೀರನ್ನು ನೋಡಿ, ಅದನ್ನು ಜ್ಞಾಪಕದಲ್ಲಿಡುತ್ತಾನೆ. (ಕೀರ್ತನೆ 56:⁠8) ನೀವು “ಮುರಿದ ಮನಸ್ಸು”ಳ್ಳವರಾಗಿರುವಾಗ ಆತನಿಗೆ ತಿಳಿದಿರುತ್ತದೆ ಮತ್ತು ಅಂತಹ ಸಮಯಗಳಲ್ಲಿ ಆತನು ನಿಮ್ಮ ಬಳಿ ಇರುತ್ತಾನೆ. (ಕೀರ್ತನೆ 34:18) ಆತನಿಗೆ ನಿಮ್ಮ ‘ತಲೇಕೂದಲುಗಳ’ ಸಂಖ್ಯೆಯೂ ಸೇರಿ ನಿಮ್ಮ ಬಗ್ಗೆ ಪ್ರತಿಯೊಂದು ವಿವರವೂ ಕೂಲಂಕಷವಾಗಿ ತಿಳಿದಿದೆ. (ಮತ್ತಾಯ 10:​29-31) ಎಲ್ಲಕ್ಕೂ ಪ್ರಧಾನವಾಗಿ, ದೇವರು “ತನ್ನ ಒಬ್ಬನೇ ಮಗನನ್ನು” ನಿಮ್ಮ ಪರವಾಗಿ ಕೊಟ್ಟನು. (ಯೋಹಾನ 3:16; ಗಲಾತ್ಯ 2:20) ಕೆಲವು ಬಾರಿ ಇಂತಹ ಶಾಸ್ತ್ರವಚನಗಳು ನಿಮಗೆ ವೈಯಕ್ತಿಕವಾಗಿ ಅನ್ವಯಿಸುತ್ತವೆಂದು ನಂಬಲು ಕಷ್ಟವಾಗಬಹುದು. ಆದರೆ ನಾವು ಯೆಹೋವನ ವಾಕ್ಯವನ್ನು ನಂಬಲೇಬೇಕು. ಆತನು ನಮ್ಮನ್ನು ಒಂದು ಗುಂಪಾಗಿ ಮಾತ್ರವಲ್ಲ ವೈಯಕ್ತಿಕವಾಗಿಯೂ ಪ್ರತಿಯೊಬ್ಬರನ್ನು ಪ್ರೀತಿಸುತ್ತಾನೆಂದು ನಾವು ನಂಬಬೇಕೆಂಬುದು ಆತನ ಇಚ್ಛೆ.

19ಸುಳ್ಳನ್ನು ಗುರುತಿಸಿ ಅದನ್ನು ತಳ್ಳಿಹಾಕಿರಿ. ಒಬ್ಬನು ಸುಳ್ಳಾಡುತ್ತಾನೆಂದು ನಿಮಗೆ ತಿಳಿದಿರುವಲ್ಲಿ, ನೀವು ಮೋಸಹೋಗುವುದರ ವಿರುದ್ಧ ನಿಮ್ಮನ್ನೇ ಕಾಪಾಡಿಕೊಳ್ಳಬಲ್ಲಿರಿ. ಹಾಗೆಯೇ, ಯೆಹೋವನು ನಿಮ್ಮನ್ನು ಪ್ರೀತಿಸುವುದಿಲ್ಲವೆಂಬ ಸುಳ್ಳನ್ನು ನೀವು ನಂಬಬೇಕೆಂಬುದು ಸೈತಾನನ ಅಪೇಕ್ಷೆಯೆಂಬುದನ್ನು ತಿಳಿದಿರುವುದೇ ನಿಮಗೆ ಬಲವಾದ ಸಹಾಯವಾಗಬಲ್ಲದು. ಸೈತಾನನ ಕುತಂತ್ರಗಳ ಕುರಿತು ಎಚ್ಚರಿಸಿದ ಒಂದು ಕಾವಲಿನಬುರುಜು ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಕ್ರೈಸ್ತಳೊಬ್ಬಳು ತಿಳಿಸಿದ್ದು: “ಸೈತಾನನು ನನ್ನ ಅನಿಸಿಕೆಗಳನ್ನು ನನ್ನನ್ನೇ ನಿರುತ್ತೇಜನಗೊಳಿಸಲು ಉಪಯೋಗಿಸುತ್ತಾನೆಂಬುದನ್ನು ನಾನು ನೆನಸಿಯೇ ಇರಲಿಲ್ಲ. ಈ ಮಾಹಿತಿಯು ಅಂಥ ಅನಿಸಿಕೆಗಳನ್ನು ಜಯಿಸಬೇಕೆಂಬ ಪ್ರಚೋದನೆಯನ್ನು ನನಗೆ ಕೊಡುತ್ತದೆ.”

20 ದಕ್ಷಿಣ ಅಮೆರಿಕದಲ್ಲಿನ ಒಂದು ದೇಶದ ಸಂಚರಣ ಮೇಲ್ವಿಚಾರಕನೊಬ್ಬನ ಅನುಭವವನ್ನು ಪರಿಗಣಿಸಿರಿ. ಮನಗುಂದಿರುವ ಜೊತೆ ವಿಶ್ವಾಸಿಗಳಿಗೆ ಕುರಿಪಾಲನೆಯ ಭೇಟಿಮಾಡುವಾಗ, ಅನೇಕವೇಳೆ ಅವನು ಅವರಿಗೆ, ‘ನೀವು ತ್ರೈಯೈಕ್ಯವನ್ನು ನಂಬುತ್ತೀರಾ?’ ಎಂದು ಕೇಳುತ್ತಾನೆ. ಆ ನಿರುತ್ತೇಜಿತರು, ಇದು ಸೈತಾನನ ಸುಳ್ಳುಗಳಲ್ಲಿ ಒಂದಾಗಿರುವುದರಿಂದ, ‘ಖಂಡಿತವಾಗಿಯೂ ಇಲ್ಲ’ ಎಂದು ಉತ್ತರಿಸುತ್ತಾರೆ. ಆಗ ಈ ಸಂಚರಣ ಹಿರಿಯನು, ‘ನೀವು ನರಕಾಗ್ನಿಯನ್ನು ನಂಬುತ್ತೀರಾ?’ ಎಂದು ಕೇಳುತ್ತಾನೆ. ಪುನಃ ಉತ್ತರವು, ‘ಖಂಡಿತವಾಗಿಯೂ ಇಲ್ಲ’ ಎಂದಾಗಿರುತ್ತದೆ. ಆಗ ಆ ಸಂಚರಣ ಹಿರಿಯನು, ಸೈತಾನನ ಇನ್ನೊಂದು ಸುಳ್ಳಿದೆಯೆಂದೂ ಆದರೆ ಅದು ಸುಳ್ಳೆಂದು ಸಾಧಾರಣವಾಗಿ ಗುರುತಿಸಲ್ಪಡುವುದಿಲ್ಲವೆಂದೂ ಹೇಳುತ್ತಾನೆ. ಬಳಿಕ ಅವನು, ಯೆಹೋವನ ಸಮೀಪಕ್ಕೆ ಬನ್ನಿರಿ * ಎಂಬ ಪುಸ್ತಕದಿಂದ 249ನೆಯ ಪುಟ, ಪ್ಯಾರಗ್ರಾಫ್‌ 21ಕ್ಕೆ ಅವರ ಗಮನವನ್ನು ಸೆಳೆದು, ಯೆಹೋವನು ನಮ್ಮನ್ನು ವ್ಯಕ್ತಿಪರವಾಗಿ ಪ್ರೀತಿಸುವುದಿಲ್ಲವೆಂಬ ಸುಳ್ಳನ್ನು ಬಯಲುಪಡಿಸುವ ಭಾಗವನ್ನು ತೋರಿಸುತ್ತಾನೆ. ಈ ರೀತಿಯಲ್ಲಿ ನಿರುತ್ತೇಜಿತರು ಸೈತಾನನ ಈ ಸುಳ್ಳನ್ನು ಗುರುತಿಸಿ, ಅದನ್ನು ತಳ್ಳಿಹಾಕುವಂತೆ ಸಹಾಯಮಾಡುವುದರಲ್ಲಿ ತನಗೆ ಸಕಾರಾತ್ಮಕವಾದ ಫಲಿತಾಂಶಗಳು ದೊರೆತಿವೆ ಎಂದು ಆ ಸಂಚರಣ ಮೇಲ್ವಿಚಾರಕನು ವರದಿಮಾಡುತ್ತಾನೆ.

ಮೋಸಹೋಗುವುದರಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ

21 ಕಡೇ ದಿವಸಗಳ ಈ ಅಂತಿಮ ಭಾಗದಲ್ಲಿ, ಸೈತಾನನು ಸುಳ್ಳು ಮತ್ತು ಮೋಸಗಳ ಸುರಿಮಳೆಯನ್ನೇ ಸುರಿಸುವನೆಂಬುದು ನಿರೀಕ್ಷಿಸತಕ್ಕದ್ದೇ. ಆದರೆ ಸೈತಾನನ ತಂತ್ರೋಪಾಯಗಳ ವಿಷಯದಲ್ಲಿ ಯೆಹೋವನು ನಮ್ಮನ್ನು ಅಜ್ಞಾನಿಗಳಾಗಿ ಬಿಟ್ಟಿರುವುದಿಲ್ಲ ಎಂಬುದಕ್ಕೆ ನಾವು ಆಭಾರಿಗಳು. ಪಿಶಾಚನ ದುಷ್ಟ ವಿಧಾನಗಳನ್ನು ಬೈಬಲು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಪ್ರಕಟಿಸುವ ಬೈಬಲ್‌ ಆಧಾರಿತ ಪ್ರಕಾಶನಗಳು ಸ್ಪಷ್ಟವಾಗಿ ಬಯಲುಪಡಿಸುತ್ತವೆ. (ಮತ್ತಾಯ 24:45) ಮುನ್ನೆಚ್ಚರಿಕೆಯು ನಮಗೆ ಮುನ್‌ಸಜ್ಜಿಕೆಯಾಗಿದೆ.​—⁠2 ಕೊರಿಂಥ 2:11.

22 ಆದಕಾರಣ ನಾವು ಧರ್ಮಭ್ರಷ್ಟರ ಕುತರ್ಕಗಳ ವಿರುದ್ಧ ಎಚ್ಚರಿಕೆಯಿಂದಿರೋಣ. ಆತ್ಮವಂಚನೆಯ ನವಿರಾದ ಪಾಶದಿಂದ ತಪ್ಪಿಸಿಕೊಳ್ಳಲು ನಾವು ದೃಢನಿರ್ಣಯವನ್ನು ಮಾಡೋಣ. ಮತ್ತು ಸೈತಾನನ ಸಕಲ ಸುಳ್ಳುಗಳನ್ನು ಗುರುತಿಸಿ ತಳ್ಳಿಹಾಕೋಣ. ಹಾಗೆ ಮಾಡುವುದರಿಂದ ನಾವು ವಂಚನೆಯನ್ನು ಹೇಸುವ “ಸತ್ಯದ ದೇವರ” ಸಂಗಡ ನಮಗಿರುವ ಸಂಬಂಧವನ್ನು ಕಾಪಾಡಿಕೊಳ್ಳುವೆವು.​—⁠ಕೀರ್ತನೆ 31:​5, NW; ಜ್ಞಾನೋಕ್ತಿ 3:32.

[ಪಾದಟಿಪ್ಪಣಿಗಳು]

^ ಪ್ಯಾರ. 8 “ಮರುಳುಗೊಳಿಸುತ್ತಿರುವ” ಎಂದು ಪ್ರಕಟನೆ 12:​9 (NW)ರಲ್ಲಿ ಭಾಷಾಂತರವಾಗಿರುವ ಕ್ರಿಯಾಪದದ ರೂಪದ ಬಗ್ಗೆ ಒಂದು ಗ್ರಂಥಪಾಠ ಹೇಳುವುದು: “ಇದು ಒಬ್ಬನ ಸ್ವಭಾವದ ಒಂದು ಸಹಜ ಭಾಗವಾಗಿಬಿಟ್ಟಿರುವ ಒಂದು ಮುಂದುವರಿಯುತ್ತಿರುವ ಕ್ರಿಯೆಯನ್ನು ಸೂಚಿಸುತ್ತದೆ.”

^ ಪ್ಯಾರ. 26 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ನಿಮಗೆ ಜ್ಞಾಪಕವಿದೆಯೆ?

• ಇಂದು ಲೋಕದಲ್ಲಿ ಇಷ್ಟೊಂದು ಮೋಸವು ಏಕಿದೆ?

• ಧರ್ಮಭ್ರಷ್ಟರಿಂದ ಮೋಸಹೋಗುವುದರ ವಿರುದ್ಧ ನಾವು ಹೇಗೆ ಎಚ್ಚರಿಕೆಯಿಂದಿರಬಲ್ಲೆವು?

• ಆತ್ಮವಂಚನೆಯ ಯಾವುದೇ ಪ್ರವೃತ್ತಿಯ ವಿರುದ್ಧ ನಾವು ಹೇಗೆ ನಮ್ಮನ್ನು ಕಾಪಾಡಿಕೊಳ್ಳಬಲ್ಲೆವು?

• ಸೈತಾನನ ಸುಳ್ಳುಗಳಿಂದ ಮೋಸಹೋಗುವುದರಿಂದ ನಾವು ಹೇಗೆ ತಪ್ಪಿಸಿಕೊಳ್ಳಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1-3. (ಎ) ಮೋಸವು, ಬಹುಮಟ್ಟಿಗೆ ದೈನಂದಿನ ಜೀವಿತದ ಪ್ರತಿಯೊಂದು ಕ್ಷೇತ್ರದೊಳಗೆ ನುಸುಳಿದೆಯೆಂದು ಯಾವ ದೃಷ್ಟಾಂತಗಳು ತೋರಿಸುತ್ತವೆ? (ಬಿ) ಲೋಕದಲ್ಲಿರುವ ಮೋಸದ ಕುರಿತು ನಾವು ಏಕೆ ಆಶ್ಚರ್ಯಗೊಳ್ಳಬಾರದು?

4. ಈ ಲೋಕದಲ್ಲಿ ಮೋಸವು ಏಕೆ ವ್ಯಾಪಕವಾಗಿದೆಯೆಂಬುದನ್ನು ಬೈಬಲು ಹೇಗೆ ವಿವರಿಸುತ್ತದೆ?

5. ಸೈತಾನನು ಈ ಅಂತ್ಯಕಾಲದಲ್ಲಿ ತನ್ನ ವಂಚನೆಯ ಪ್ರಯತ್ನಗಳನ್ನು ಹೇಗೆ ತೀವ್ರಗೊಳಿಸಿದ್ದಾನೆ, ಮತ್ತು ಅವನ ವಿಶೇಷ ಗುರಿಹಲಗೆಗಳಾರು?

6, 7. (ಎ) ಧರ್ಮಭ್ರಷ್ಟರು ಏನೆಂದು ವಾದಿಸಬಹುದು? (ಬಿ) ಧರ್ಮಭ್ರಷ್ಟರಿಗೆ ಏನು ಬೇಕಾಗಿದೆಯೆಂಬುದನ್ನು ಶಾಸ್ತ್ರಗಳು ಹೇಗೆ ಸ್ಪಷ್ಟವಾಗಿ ತೋರಿಸುತ್ತವೆ?

8. ತಮ್ಮ ಗುರಿಯನ್ನು ಸಾಧಿಸಲು ಧರ್ಮಭ್ರಷ್ಟರು ಯಾವ ವಿಧಾನಗಳನ್ನು ಉಪಯೋಗಿಸುತ್ತಾರೆ?

9, 10. (ಎ) ಧರ್ಮಭ್ರಷ್ಟರು ನಮ್ಮನ್ನು ಮೋಸಗೊಳಿಸದಂತೆ ನಾವು ಹೇಗೆ ಎಚ್ಚರಿಕೆಯಿಂದಿರಬಲ್ಲೆವು? (ಬಿ) ದೇವರ ಉದ್ದೇಶಗಳ ಕುರಿತಾದ ನಮ್ಮ ತಿಳಿವಳಿಕೆಯು ಪರಿಷ್ಕರಿಸಲ್ಪಡಬೇಕಾಗುವಾಗ ನಮ್ಮ ಮನಸ್ಸು ಕದಡುವುದಿಲ್ಲ ಏಕೆ?

11. ಅಪರಿಪೂರ್ಣ ಮಾನವರಲ್ಲಿ ತಮ್ಮನ್ನೇ ಮೋಸಗೊಳಿಸುವ ಪ್ರವೃತ್ತಿ ಏಕಿದೆ?

12. ನಾವು ಯಾವ ವಿಧಗಳಲ್ಲಿ ಆತ್ಮವಂಚನೆಯ ಪಾಶದಲ್ಲಿ ಸಿಕ್ಕಿಕೊಳ್ಳಬಹುದು?

13, 14. (ಎ) ನಮ್ಮ ಮನಸ್ಸಾಕ್ಷಿ ಸದಾ ಒಂದು ಸುರಕ್ಷಿತ ಮಾರ್ಗದರ್ಶಿಯಲ್ಲವೆಂಬುದನ್ನು ಯಾವ ಶಾಸ್ತ್ರೀಯ ಉದಾಹರಣೆ ತೋರಿಸುತ್ತದೆ? (ಬಿ) ಆತ್ಮವಂಚನೆಯ ವಿರುದ್ಧ ನಾವು ಹೇಗೆ ಎಚ್ಚರಿಕೆಯಿಂದಿರಬಲ್ಲೆವು?

15, 16. (ಎ) ನಮ್ಮನ್ನು ಮೋಸಗೊಳಿಸುವ ಪ್ರಯತ್ನದಲ್ಲಿ, ಸೈತಾನನು ಯಾವ ಸುಳ್ಳುಗಳನ್ನು ಉಪಯೋಗಿಸುತ್ತಾನೆ? (ಬಿ) ಇಂತಹ ಸುಳ್ಳುಗಳಿಂದ ಮೋಸಹೋಗುವುದರಿಂದ ನಾವು ಹೇಗೆ ತಪ್ಪಿಸಿಕೊಳ್ಳಬಹುದು?

17. ಯೆಹೋವನು ನಮ್ಮನ್ನು ಪ್ರೀತಿಸುವುದೂ ಇಲ್ಲ, ಅಮೂಲ್ಯವೆಂದೆಣಿಸುವುದೂ ಇಲ್ಲ ಎಂಬ ಸುಳ್ಳನ್ನು ಸೈತಾನನು ಏಕೆ ಪ್ರವರ್ಧಿಸುತ್ತಾನೆ?

18. ಬೈಬಲು ಯೆಹೋವನ ಪ್ರೀತಿಯ ಆಶ್ವಾಸನೆಯನ್ನು ನಮಗೆ ಹೇಗೆ ಕೊಡುತ್ತದೆ?

19, 20. (ಎ) ಯೆಹೋವನು ನಿಮ್ಮನ್ನು ಪ್ರೀತಿಸುವುದಿಲ್ಲವೆಂಬ ಸೈತಾನನ ಸುಳ್ಳನ್ನು ಗುರುತಿಸಿ ತಳ್ಳಿಹಾಕುವುದು ಪ್ರಾಮುಖ್ಯವೇಕೆ? (ಬಿ) ಒಬ್ಬ ಸಂಚರಣ ಮೇಲ್ವಿಚಾರಕನು ಮನಗುಂದಿದವರಿಗೆ ಹೇಗೆ ಸಹಾಯಮಾಡಿದ್ದಾನೆ?

21, 22. ಸೈತಾನನ ತಂತ್ರೋಪಾಯಗಳ ವಿಷಯದಲ್ಲಿ ನಾವು ಏಕೆ ಅಜ್ಞಾನಿಗಳಾಗಿಲ್ಲ, ಮತ್ತು ನಮ್ಮ ದೃಢನಿರ್ಣಯವು ಏನಾಗಿರಬೇಕು?

[ಪುಟ 17ರಲ್ಲಿರುವ ಚಿತ್ರ]

ಮನೋರಂಜನೆಯ ವಿಷಯದಲ್ಲಿ ನಿಮ್ಮನ್ನು ವಂಚಿಸಿಕೊಳ್ಳಬೇಡಿರಿ

[ಪುಟ 18ರಲ್ಲಿರುವ ಚಿತ್ರಗಳು]

ಆತ್ಮವಂಚನೆಯನ್ನು ತಡೆಯಲು, ನಿಮ್ಮನ್ನು ಪ್ರಾರ್ಥನಾಪೂರ್ವಕವಾಗಿ ವಿಶ್ಲೇಷಿಸಿಕೊಳ್ಳಿ, ಇತರರಿಗೆ ಕಿವಿಗೊಡಿರಿ, ಮತ್ತು ದೇವರ ವಾಕ್ಯದಿಂದ ಕ್ರಮವಾಗಿ ಆಹಾರವನ್ನು ಸೇವಿಸಿರಿ