ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಜಲಪ್ರಳಯಾನಂತರ, ನೋಹನು ನಾವೆಯಿಂದ ಒಂದು ಪಾರಿವಾಳವನ್ನು ಹೊರಗೆ ಕಳುಹಿಸಿದಾಗ ಅದು ‘ಎಣ್ಣೇಮರದ ಹೊಸ ಚಿಗುರಿ’ನೊಂದಿಗೆ ಹಿಂದಿರುಗಿತು. ಆ ಪಾರಿವಾಳಕ್ಕೆ ಆ ಚಿಗುರು ಎಲ್ಲಿಂದ ಸಿಕ್ಕಿತು?

“ನೀರು ಭೂಮಿಯ ಮೇಲೆ ಅತ್ಯಧಿಕವಾಗಿ ಪ್ರಬಲವಾದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಹೋದವು” ಎನ್ನುತ್ತದೆ ಬೈಬಲು. (ಆದಿಕಾಂಡ 7:19) ನೀರು ಕೆಳಗಿಳಿಯುತ್ತಾ ಹೋದಂತೆ ಒಂದೊಂದು ವಾರಗಳ ಅಂತರದಲ್ಲಿ ನೋಹನು ಮೂರು ಬಾರಿ ಪಾರಿವಾಳವನ್ನು ಹೊರಬಿಟ್ಟನು. ಎರಡನೆಯ ಬಾರಿ “ಅದರ ಬಾಯಲ್ಲಿ ಎಣ್ಣೇಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಹರಿದು ಇಳಿದು ಹೋಯಿತೆಂದು ತಿಳುಕೊಂಡನು.”​—⁠ಆದಿಕಾಂಡ 8:8-11.

ಭೂಮಿಯ ಒಂದು ನಿರ್ದಿಷ್ಟ ಭಾಗವು ಎಷ್ಟು ಕಾಲ ನೀರಿನೊಳಗಿತ್ತೆಂದು ಈಗ ಹೇಳುವ ಸಾಧ್ಯತೆಯಿಲ್ಲವೆಂಬುದು ನಿಜ. ಏಕೆಂದರೆ ಜಲಪ್ರಳಯವು ಭೂಮಿಯ ಸ್ವರೂಪವನ್ನು ಬದಲಾಯಿಸಿದ್ದು ನಿಸ್ಸಂಶಯ. ಹೆಚ್ಚಿನ ಪ್ರದೇಶಗಳಲ್ಲಿ ಅನೇಕ ಮರಗಳು ಸಾಯುವಷ್ಟರ ತನಕ ನೀರು ನಿಂತಿದ್ದಿರುವ ಸಾಧ್ಯತೆಯಿದೆ. ಹಾಗಿದ್ದರೂ ಕೆಲವು ಮರಗಳು ತಮ್ಮ ಜೀವಚೈತನ್ಯವನ್ನು ಕಳೆದುಕೊಳ್ಳದೆ, ನೀರು ಕೆಳಗಿಳಿದಾಗ ಹೊಸದಾಗಿ ಚಿಗುರಿದವು.

ಎಣ್ಣೇಮರದ ಕುರಿತು ದ ನ್ಯೂ ಬೈಬಲ್‌ ಡಿಕ್ಷನೆರಿ ಹೇಳುವುದು: “ಕಡಿದು ಹಾಕಿದರೆ ಅದರ ಬುಡದಿಂದ ಹೊಸ ಚಿಗುರುಗಳು ಬರುತ್ತವೆ. ಹೀಗೆ ಐದರಷ್ಟು ಹೊಸ ಕಾಂಡಗಳು ಬೆಳೆಯಬಲ್ಲವು. ಸಾಯಲಿರುವ ಎಣ್ಣೇಮರಗಳೂ ಸಾಮಾನ್ಯವಾಗಿ ಇದೇ ರೀತಿ ಚಿಗುರಬಲ್ಲವು.” ದ ನ್ಯೂ ಶ್ಯಾಫ್‌-ಹರ್ಟ್‌ಸೋಕ್‌ ಎನ್‌ಸೈಕ್ಲಪೀಡೀಯ ಆಫ್‌ ರಿಲಿಜಸ್‌ ನಾಲೆಜ್‌ ಹೇಳುವಂತೆ, “ಅದರ ಜೀವಚೈತನ್ಯವು ಅವಿನಾಶಿ ಆಗಿರುವಂತೆ” ಇದೆ. ಪ್ರಳಯದ ನೀರಿನ ಲವಣತ್ವ ಮತ್ತು ಉಷ್ಣತೆ ಎಷ್ಟಿತ್ತು ಎಂಬಂಥ ವಿವರಗಳು ಇಂದು ಯಾವ ಮನುಷ್ಯನಿಗೂ ತಿಳಿದಿರುವುದಿಲ್ಲ. ಆದಕಾರಣ, ಎಣ್ಣೇಮರ ಮತ್ತು ಬೇರೆ ಸಸ್ಯಗಳ ಮೇಲೆ ಪ್ರಳಯದ ನೀರಿನ ಪರಿಣಾಮವನ್ನು ನಾವು ನಿಶ್ಚಯವಾಗಿ ಹೇಳಸಾಧ್ಯವಿಲ್ಲ.

ಆದರೂ, ಕಾಡಿನಲ್ಲಿರುವ ಎಣ್ಣೇಮರವು ಎತ್ತರದ ಪರ್ವತಗಳಲ್ಲಿ ಕಂಡುಬರುವ ಶೀತ ಹವಾಮಾನದಲ್ಲಿ ಬದುಕಿ ಉಳಿಯುವುದಿಲ್ಲ. ಅದು ಸಾಮಾನ್ಯವಾಗಿ, ಸರಾಸರಿ 10 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಶಾಖವಿರುವ ಮತ್ತು 1,000 ಮೀಟರ್‌ಗಳಿಗಿಂತ ಕೆಳಗಿನ ಕ್ಷೇತ್ರದಲ್ಲಿ ಬೆಳೆಯುತ್ತದೆ. “ಹೀಗೆ ಆ ಹೊಸ ಚಿಗುರಿನಿಂದ ಕೆಳಗಣ ತಗ್ಗು ಪ್ರದೇಶಗಳಲ್ಲಿ ನೀರು ಕಡಮೆಯಾಗುತ್ತ ಹೋಗುತ್ತಿದೆ ಎಂದು ನೋಹನು ತೀರ್ಮಾನಿಸಸಾಧ್ಯವಿತ್ತು” ಎಂದು ಪುನಃ ಪರಿಶೀಲಿಸಲ್ಪಟ್ಟ ಜಲಪ್ರಳಯ (ಇಂಗ್ಲಿಷ್‌) ಎಂಬ ಪುಸ್ತಕ ತಿಳಿಸುತ್ತದೆ. ನೋಹನು ಒಂದು ವಾರದ ನಂತರ ಆ ಪಾರಿವಾಳವನ್ನು ಬಿಡಲಾಗಿ, ಅದು ಹಿಂದಿರುಗಿ ಬರಲಿಲ್ಲ. ಇದು ಸಸ್ಯಗಳು ಹೇರಳವಾಗಿ ಬೆಳೆಯುತ್ತಿವೆ ಮತ್ತು ಆ ಪಾರಿವಾಳಕ್ಕೆ ನೆಲೆಸಲು ಹೆಚ್ಚಿನ ಸ್ಥಳಗಳು ದೊರಕಿವೆ ಎಂಬದನ್ನು ಸೂಚಿಸಿತು.​—⁠ಆದಿಕಾಂಡ 8:12.