ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚರ್ಚುಗಳನ್ನು ಉಳಿಸಲು ಸಾಧ್ಯವಿದೆಯೋ?

ಚರ್ಚುಗಳನ್ನು ಉಳಿಸಲು ಸಾಧ್ಯವಿದೆಯೋ?

ಚರ್ಚುಗಳನ್ನು ಉಳಿಸಲು ಸಾಧ್ಯವಿದೆಯೋ?

“ಬ್ರಿಟನ್‌ನಲ್ಲಿರುವ ಜನರು ದೇವರಲ್ಲಿ ಇನ್ನೂ ನಂಬಿಕೆಯನ್ನಿಟ್ಟಿದ್ದಾರೆ, ಆದರೆ ಕ್ರಿಸ್ತನಿಗೆ ಬದ್ಧರಾಗಿರಲು ಅವರು ಬಯಸುವುದಿಲ್ಲ,” ಎಂಬುದಾಗಿ ಯುಗಾಂಡದ ಪಾದ್ರಿಯಾಗಿರುವ ಸ್ಟೀಫನ್‌ ಟಿರಾಮ್‌ವೆ ಹೇಳಿದರು. ಸುಮಾರು 20 ವರ್ಷಗಳಿಗೆ ಮುಂಚೆ, ಯುಗಾಂಡದಲ್ಲಿರುವ ತನ್ನ ಚರ್ಚಿನಲ್ಲಾದ ಅನಪೇಕ್ಷಿತ ವ್ಯಕ್ತಿಗಳ ಹಿಂಸಾತ್ಮಕ ಬಹಿಷ್ಕಾರದಿಂದ ಇವರು ಪಾರಾಗಿದ್ದರು. ಇಂದು, ಇವರು ಇಂಗ್ಲಂಡಿನ ಲೀಡ್ಸ್‌ನಲ್ಲಿರುವ ಪುರುಷರ ಕ್ಲಬ್‌ಗಳಲ್ಲಿ ಪ್ರಸಂಗ ಮಾಡುತ್ತಿದ್ದಾರೆ; ತನ್ನ ಸಭಿಕರು ಬಿಂಗೋ ಇಸ್ಪೀಟು ಆಟವನ್ನು ಆರಂಭಿಸುವುದಕ್ಕೆ ಮುಂಚೆ ಅವರು ತನ್ನ ಹತ್ತು ನಿಮಿಷದ ಭಾಷಣವನ್ನು ಕೊಡುತ್ತಾರೆ.

ಅಟ್ಲಾಂಟಿಕ್‌ ಸಾಗರದಾಚೆ, ಅಮೆರಿಕದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಆಂಗ್ಲಿಕನ್‌ ಮಿಷನ್‌ ತದ್ರೀತಿಯ ಆತ್ಮಿಕ ಬಿಕ್ಕಟ್ಟಿನೊಂದಿಗೆ ಹೆಣಗಾಡುತ್ತಿದೆ. “ಇಡೀ ಲೋಕದಲ್ಲೇ, ಚರ್ಚ್‌ ಸದಸ್ಯತ್ವವನ್ನು ಹೊಂದಿರದ ಮತ್ತು ಆಧ್ಯಾತ್ಮಿಕ ಸಂಬಂಧವನ್ನು ಕಳೆದುಕೊಂಡಿರುವ ಆಂಗ್ಲ ಭಾಷೆಯವರ ಅತ್ಯಧಿಕ ಜನಸಂಖ್ಯೆಯನ್ನು ಈಗ ಯುನೈಟಡ್‌ ಸ್ಟೇಟ್ಸ್‌ ಹೊಂದಿದೆ,” ಎಂದು ಮಿಷನ್‌ನ ಅಧಿಕೃತ ವೆಬ್‌ ಸೈಟ್‌ ಹೇಳುತ್ತದೆ. “ಯುನೈಟಡ್‌ ಸ್ಟೇಟ್ಸ್‌ ಮಿಷನೆರಿ ಸೇವೆಯ ಅಗತ್ಯತೆಯಿರುವ ಕ್ಷೇತ್ರವಾಗಿ ಮಾರ್ಪಡುತ್ತಿದೆ.” ತಮ್ಮ ಚರ್ಚಿನಲ್ಲಿ ಪರಿವರ್ತನೆಗಳನ್ನು ಮಾಡಲಿಕ್ಕಾಗಿ ಕೈಗೊಂಡ ಪ್ರಯತ್ನಗಳು ವಿಫಲಗೊಂಡಿದ್ದರಿಂದ ಜಿಗುಪ್ಸೆಗೊಂಡ ಈ ಹೊಸ ಮಿಷನ್‌ನವರು ತಮ್ಮ ಪೂರ್ವಾಚಾರವನ್ನು ತೊರೆದು, “ಯುನೈಟಡ್‌ ಸ್ಟೇಟ್ಸ್‌ನಲ್ಲಿ ಮಿಷನೆರಿ ಚಟುವಟಿಕೆಯನ್ನು” ಆರಂಭಿಸಲಿಕ್ಕಾಗಿ ಏಷ್ಯಾ ಮತ್ತು ಆಫ್ರಿಕದ ಮುಖಂಡರೊಂದಿಗೆ ಜೊತೆಗೂಡಿದರು.

ಆದರೆ, ಆಫ್ರಿಕ, ಏಷ್ಯಾ, ಮತ್ತು ಲ್ಯಾಟಿನ್‌-ಅಮೆರಿಕದ ಮಿಷನೆರಿಗಳು, ಕ್ರೈಸ್ತ ರಾಷ್ಟ್ರಗಳೆಂದು ಹೇಳಿಕೊಳ್ಳುವ ಯೂರೋಪ್‌ ಮತ್ತು ಉತ್ತರ ಅಮೆರಿಕಗಳಲ್ಲಿ ‘ಜೀವಗಳನ್ನು ರಕ್ಷಿಸುತ್ತಿರುವುದು’ ಏಕೆ?

ಯಾರು ಯಾರನ್ನು ರಕ್ಷಿಸುತ್ತಿದ್ದಾರೆ?

ಸುಮಾರು ನಾನ್ನೂರಕ್ಕಿಂತ ಹೆಚ್ಚು ವರ್ಷಗಳ ವರೆಗೆ, ಯೂರೋಪಿನ ದೇಶಗಳಿಂದ ವಸಾಹತುಗಳಾಗಿ ವಿಸ್ತರಣಗೊಂಡ ಆಫ್ರಿಕ, ಏಷ್ಯಾ, ಪೆಸಿಫಿಕ್‌, ಮತ್ತು ದಕ್ಷಿಣ ಅಮೆರಿಕಗಳಂಥ ದೇಶಗಳಿಗೆ ಯೂರೋಪಿನ ದೇವಭೀರು ಮಿಷನೆರಿಗಳು ಕ್ರಮವಾಗಿ ಹೋಗುತ್ತಿದ್ದರು. ಆ ದೇಶಗಳಲ್ಲಿರುವ ವಿಧರ್ಮಿಗಳೆಂದು ಕರೆಯಲ್ಪಟ್ಟವರಿಗೆ ತಮ್ಮ ಧರ್ಮವನ್ನು ಪ್ರಸ್ತುತಪಡಿಸುವುದೇ ಅವರ ಉದ್ದೇಶವಾಗಿತ್ತು. ಸಮಯಾನಂತರ, ಕ್ರೈಸ್ತ ಮೂಲತತ್ತ್ವಗಳ ಮೇಲೆ ಸ್ಥಾಪಿಸಲ್ಪಟ್ಟಿವೆ ಎಂದು ಹೇಳಿಕೊಂಡ ಅಮೆರಿಕದ ವಸಾಹತಿಗರು ಇವರನ್ನು ಸೇರಿಕೊಂಡರು, ಮತ್ತು ಕ್ರಮೇಣ ಲೋಕವಿಡೀ ತಮ್ಮ ಸ್ವಂತ ಸೌವಾರ್ತಿಕ ಮಿಷನ್‌ಗಳನ್ನು ಸ್ಥಾಪಿಸುವುದರಲ್ಲಿ ಇವರು ಯೂರೋಪಿನ ಮಿಷನೆರಿಗಳಿಗಿಂತಲೂ ಮುಂದಾದರು. ಆದರೆ ಈಗ ಇದು ತಲೆಕೆಳಗಾಗಿದೆ.

“[ನಾಮಮಾತ್ರ ಕ್ರೈಸ್ತತ್ವದ] ಕೇಂದ್ರಸ್ಥಾನ ಬದಲಾಗಿದೆ,” ಎಂದು ಪಾಶ್ಚಾತ್ಯೇತರ ಲೋಕದಲ್ಲಿರುವ ಕ್ರೈಸ್ತತ್ವ ಅಧ್ಯಯನ ಕೇಂದ್ರದ ನಿರ್ಮಾಪಕ-ನಿರ್ದೇಶಕ ಆ್ಯಂಡ್ರು ವಾಲ್ಸ್‌ ಹೇಳಿದರು. ಇಸವಿ 1900ರಲ್ಲಿ, ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದವರಲ್ಲಿ 80 ಪ್ರತಿಶತದಷ್ಟು ಮಂದಿ ಒಂದೇ ಯೂರೋಪಿನವರಾಗಿದ್ದರು ಇಲ್ಲವೆ ಉತ್ತರ ಅಮೆರಿಕನ್ನರಾಗಿದ್ದರು. ಆದರೆ ಇಂದು, ಕ್ರೈಸ್ತರೆಂದು ಹೇಳಿಕೊಳ್ಳುವವರಲ್ಲಿ 60 ಪ್ರತಿಶತ ಜನರು ಆಫ್ರಿಕ, ಏಷ್ಯಾ, ಮತ್ತು ಲ್ಯಾಟಿನ್‌ ಅಮೆರಿಕದಲ್ಲಿದ್ದಾರೆ. ಇತ್ತೀಚಿನ ಒಂದು ಪತ್ರಿಕಾ ವರದಿಯು ಹೇಳಿದ್ದು: “ಯೂರೋಪಿನಲ್ಲಿರುವ ಕ್ಯಾಥೊಲಿಕ್‌ ಚರ್ಚುಗಳು ಫಿಲಿಪ್ಪೀನ್ಸ್‌ ಮತ್ತು ಭಾರತದಿಂದ ಬರುವ ಪಾದ್ರಿಗಳ ಮೇಲೆ ಅವಲಂಬಿತವಾಗಿವೆ” ಮತ್ತು “ಅಮೆರಿಕದ ಕ್ಯಾಥೊಲಿಕ್‌ ಪಾದ್ರಿಯಾಡಳಿತ ಪ್ರಾಂತಗಳಲ್ಲಿ ಸೇವೆಸಲ್ಲಿಸುತ್ತಿರುವ ಆರರಲ್ಲಿ ಒಬ್ಬ ಪಾದ್ರಿಯು ಈಗ ಹೊರದೇಶದಿಂದ ಆಮದು ಮಾಡಲ್ಪಡುತ್ತಾನೆ.” ನೆದರ್ಲೆಂಡ್ಸ್‌ನಲ್ಲಿರುವ ಆಫ್ರಿಕದ ಸೌವಾರ್ತಿಕರಲ್ಲಿ ಹೆಚ್ಚಿನವರು ಘಾನಾದವರಾಗಿದ್ದು, ಅವರು ತಮ್ಮನ್ನು “ಲೌಕಿಕಾಸಕ್ತಿಯುಳ್ಳ ಭೂಖಂಡದಲ್ಲಿರುವ ಮಿಷನೆರಿ ಚರ್ಚ್‌”ನೋಪಾದಿ ಕಂಡುಕೊಳ್ಳುತ್ತಾರೆ. ಮತ್ತು ಬ್ರಸಿಲ್‌ನಿಂದ ಬಂದಿರುವ ಸೌವಾರ್ತಿಕರು ಈಗ ಬ್ರಿಟನ್‌ನ ವಿವಿಧ ಭಾಗಗಳಲ್ಲಿ ಸುಧಾರಣಾ ಚಳವಳಿಗಳನ್ನು ನಡೆಸುತ್ತಿದ್ದಾರೆ. ಒಬ್ಬ ಲೇಖಕನು ಗಮನಿಸಿದ್ದು: “ಕ್ರೈಸ್ತ ಮಿಷನೆರಿ ಪ್ರವಾಹವು ಹಿಮ್ಮುಖವಾಗಿದೆ.”

ಒಟ್ಟುಗೂಡುತ್ತಿರುವ ಕಾರ್ಮೋಡಗಳು

ಹೆಚ್ಚೆಚ್ಚಾಗಿ ಧಾರ್ಮಿಕತೆಯನ್ನು ಕಳೆದುಕೊಳ್ಳುತ್ತಿರುವ ಯೂರೋಪ್‌ ಮತ್ತು ಉತ್ತರ ಅಮೆರಿಕದ ಖಂಡಗಳಲ್ಲಿ ಮಿಷನೆರಿಗಳ ಅಗತ್ಯವೆದ್ದಿದೆ ಎಂಬುದು ಸ್ಪಷ್ಟವಾಗಿದೆ. “ಸ್ಕಾಟ್‌ಲಂಡ್‌ನಲ್ಲಿ ಚರ್ಚಿಗೆ ಕ್ರಮವಾಗಿ ಹೋಗುವ ಕ್ರೈಸ್ತರ ಸಂಖ್ಯೆಯು 10 ಪ್ರತಿಶತಕ್ಕಿಂತ ಕಡಿಮೆ,” ಎಂದು ಒಂದು ವಾರ್ತಾಪತ್ರಿಕೆಯು ತಿಳಿಸುತ್ತದೆ. ಫ್ರಾನ್ಸ್‌ ಮತ್ತು ಜರ್ಮನಿಯಲ್ಲಂತೂ ಇದಕ್ಕಿಂತಲೂ ಕಡಿಮೆಯೇ. ಒಂದು ಸಮೀಕ್ಷೆಯನ್ನು ನಡೆಸಿದಾಗ, “ಸುಮಾರು 40 ಪ್ರತಿಶತ ಅಮೆರಿಕನ್ನರು ಮತ್ತು 20 ಪ್ರತಿಶತ ಕೆನಡದವರು ಕ್ರಮವಾಗಿ ಚರ್ಚಿಗೆ ಹೋಗುವುದಾಗಿ ಹೇಳುತ್ತಾರೆ,” ಎಂದು ಮತ್ತೊಂದು ಪತ್ರಿಕಾ ವರದಿಯು ಗಮನಿಸುತ್ತದೆ. ಇದಕ್ಕೆ ವೈದೃಶ್ಯವಾಗಿ, ಫಿಲಿಪ್ಪೀನ್ಸ್‌ನಲ್ಲಿ ಹಾಜರಿಯು 70 ಪ್ರತಿಶತವಾಗಿದೆ ಎಂದು ಹೇಳಲಾಗುತ್ತದೆ, ಮತ್ತು ಇತರ ಪ್ರಗತಿಶೀಲ ದೇಶಗಳಲ್ಲಿಯೂ ತದ್ರೀತಿಯ ಅಂಕಿಅಂಶಗಳು ಕಂಡುಬರುತ್ತವೆ.

ಇನ್ನೂ ಹೆಚ್ಚು ಗಮನಾರ್ಹವಾದ ವಿಷಯವೇನೆಂದರೆ, ದಕ್ಷಿಣಾರ್ಧಗೋಳದಲ್ಲಿರುವ ಚರ್ಚ್‌ಹೋಕರು ಉತ್ತರಾರ್ಧಗೋಳದಲ್ಲಿರುವ ಚರ್ಚ್‌ಹೋಕರಿಗಿಂತ ಹೆಚ್ಚು ಸಂಪ್ರದಾಯಸ್ಥರಾಗಿರುವುದಾಗಿ ತೋರುತ್ತದೆ. ದೃಷ್ಟಾಂತಕ್ಕೆ, ಯುನೈಟಡ್‌ ಸ್ಟೇಟ್ಸ್‌ ಮತ್ತು ಯೂರೋಪಿನಲ್ಲಿರುವ ಕ್ರೈಸ್ತರ ಅಭಿಪ್ರಾಯವನ್ನು ಸಂಗ್ರಹಿಸಿದಾಗ, ಅವರು ಕ್ರಮವಾಗಿ ಪಾದ್ರಿವರ್ಗದ ಅಧಿಕಾರ ನಿರ್ವಹಣೆಯಲ್ಲಿ ಬೆಳೆಯುತ್ತಿರುವ ಅಪನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ ಮತ್ತು ಜನಸಾಮಾನ್ಯರ ಹೆಚ್ಚಿನ ಭಾಗವಹಿಸುವಿಕೆ ಹಾಗೂ ಸ್ತ್ರೀಯರಿಗಾಗಿ ಸಮಾನತೆಯ ಕುರಿತು ತರ್ಕಿಸುತ್ತಾರೆ. ಆದರೆ ಮತ್ತೊಂದು ಬದಿಯಲ್ಲಿ, ದಕ್ಷಿಣಾರ್ಧಗೋಳದಲ್ಲಿರುವ ಕ್ಯಾಥೊಲಿಕರಾದರೋ, ಇದೇ ವಿಚಾರಗಳಲ್ಲಿ ಚರ್ಚಿನ ಸಾಂಪ್ರದಾಯಿಕ ನಿಲುವನ್ನು ಮಹಾ ಪ್ರಮಾಣದಲ್ಲಿ ಸ್ವೀಕರಿಸುತ್ತಾರೆ. ಚರ್ಚಿಗೆ ಸಿಗುವ ಜನಸಾಮಾನ್ಯರ ಬೆಂಬಲವು ಹೆಚ್ಚಾಗಿ ಈಗ ಉತ್ತರದಿಂದ ದಕ್ಷಿಣಾರ್ಧಗೋಳದತ್ತ ಸಾಗುತ್ತಿರುವುದರಿಂದ, ಭಾವೀ ಘರ್ಷಣೆಗೆ ಈಗಾಗಲೇ ತಳಪಾಯವು ಹಾಕಲ್ಪಡುತ್ತಿದೆ. ಇತಿಹಾಸ ಮತ್ತು ಧರ್ಮದ ವಿದ್ವಾಂಸರಾದ ಫಿಲಿಪ್‌ ಜೆಂಕನ್ಸ್‌ ಮುಂತಿಳಿಸುವುದು: “ಒಂದು ಅಥವಾ ಎರಡು ದಶಕಗಳು ಕಳೆಯುವಷ್ಟರಲ್ಲಿ, ಉತ್ತರಾರ್ಧಗೋಳದಲ್ಲಿರುವ ಕ್ರೈಸ್ತರಾಗಲಿ ಅಥವಾ ದಕ್ಷಿಣಾರ್ಧಗೋಳದಲ್ಲಿರುವ ಕ್ರೈಸ್ತರಾಗಲಿ ಪರಸ್ಪರರನ್ನು ಸಂಪೂರ್ಣವಾಗಿ ಅಥವಾ ಯಥಾರ್ಥವಾಗಿ ಕ್ರೈಸ್ತರಾಗಿ ಕಂಡುಕೊಳ್ಳುವುದಿಲ್ಲ.”

ಈ ಎಲ್ಲಾ ಪ್ರವೃತ್ತಿಗಳನ್ನು ಪರಿಗಣಿಸುವಾಗ, “ಯಥಾಪ್ರಕಾರವಾಗಿ ಒಂದೇ ನಂಬಿಕೆಯನ್ನು ವ್ಯಕ್ತಪಡಿಸುತ್ತಾ, ಆಫ್ರಿಕ, ಏಷ್ಯಾ, ಲ್ಯಾಟಿನ್‌ ಅಮೆರಿಕ, ಉತ್ತರ ಅಮೆರಿಕ ಮತ್ತು ಯೂರೋಪಿನ ಕ್ರೈಸ್ತರು ಹೇಗೆ ಒಂದೇ ಚರ್ಚಿನಲ್ಲಿ ಒಟ್ಟಿಗೆ ಜೀವಿಸುವರು” ಎಂಬ ಜರೂರಿಯ ಪ್ರಶ್ನೆಯು ಏಳುತ್ತದೆ ಎಂದು ವಾಲ್ಸ್‌ ಹೇಳುತ್ತಾರೆ. ನಿಮಗೆ ಹೇಗನಿಸುತ್ತದೆ? ವಿಭಜಿತಗೊಂಡಿರುವ ಒಂದು ಲೋಕದಲ್ಲಿ ಚರ್ಚುಗಳು ಉಳಿಯುವುದು ಸಾಧ್ಯವೆ? ನಿಜವಾದ ಕ್ರೈಸ್ತ ಐಕ್ಯಕ್ಕೆ ಆಧಾರ ಯಾವುದು? ಈ ಪ್ರಶ್ನೆಗಳಿಗೆ ಶಾಸ್ತ್ರೀಯ ಉತ್ತರಗಳೊಂದಿಗೆ, ಒಂದು ಐಕ್ಯವಾದ ಕ್ರೈಸ್ತ ಸಮಾಜವು ಲೋಕವ್ಯಾಪಕವಾಗಿ ಈಗಾಗಲೇ ಏಳಿಗೆ ಹೊಂದುತ್ತಿದೆ ಎಂಬುದರ ಸ್ಪಷ್ಟ ರುಜುವಾತನ್ನೂ ಮುಂದಿನ ಲೇಖನವು ಒದಗಿಸುವುದು.

[ಪುಟ 4ರಲ್ಲಿರುವ ಚಿತ್ರ]

ಹಿಂದೆ ಚರ್ಚಾಗಿದ್ದ ಈ ಕಟ್ಟಡ ಈಗ ಒಂದು ಸಂಗೀತ ಕೆಫೆ ಆಗಿದೆ

[ಕೃಪೆ]

AP Photo/Nancy Palmieri