ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು ಪ್ರೀತಿಸುತ್ತೇವೆಂದು ನಾವು ತೋರಿಸುವ ವಿಧ

ದೇವರನ್ನು ಪ್ರೀತಿಸುತ್ತೇವೆಂದು ನಾವು ತೋರಿಸುವ ವಿಧ

ದೇವರನ್ನು ಪ್ರೀತಿಸುತ್ತೇವೆಂದು ನಾವು ತೋರಿಸುವ ವಿಧ

ದೇವರಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಲು, ಕೇವಲ ದೇವರ ಕುರಿತು ಕಲಿಯುವುದು ಮಾತ್ರ ಸಾಕಾಗುವುದಿಲ್ಲ. ದೇವರ ಸೇವಕರು ಲೋಕವ್ಯಾಪಕವಾಗಿ ಹೇಳಸಾಧ್ಯವಿರುವಂತೆ, ಒಬ್ಬನು ದೇವರ ವ್ಯಕ್ತಿತ್ವದ ಕುರಿತು ಎಷ್ಟರ ಮಟ್ಟಿಗೆ ಪರಿಚಿತನಾಗಿರುತ್ತಾನೋ ಅಷ್ಟೇ ಹೆಚ್ಚಾಗಿ ಆತನಿಗಾಗಿರುವ ಪ್ರೀತಿಯು ಅವನಲ್ಲಿ ಬೆಳೆಯುತ್ತದೆ. ಮತ್ತು ವ್ಯಕ್ತಿಯೊಬ್ಬನು, ದೇವರು ಯಾವುದನ್ನು ಪ್ರೀತಿಸುತ್ತಾನೆ, ಯಾವುದನ್ನು ದ್ವೇಷಿಸುತ್ತಾನೆ, ಯಾವುದನ್ನು ಮೆಚ್ಚುತ್ತಾನೆ ಮತ್ತು ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳುವಾಗ ಅಂಥ ಪ್ರೀತಿಯು ಇನ್ನೂ ಹೆಚ್ಚು ಬಲಗೊಳ್ಳುತ್ತದೆ.

ಯೆಹೋವನು, ಸ್ವತಃ ತನ್ನ ಕುರಿತಾಗಿ ಪ್ರಕಟಪಡಿಸುವ ತನ್ನ ವಾಕ್ಯವಾದ ಬೈಬಲನ್ನು ನಮಗೆ ಪ್ರೀತಿಯಿಂದ ದಯಪಾಲಿಸಿದ್ದಾನೆ. ವಿಭಿನ್ನ ಸನ್ನಿವೇಶಗಳಲ್ಲಿ ದೇವರು ಹೇಗೆ ವ್ಯವಹರಿಸಿದನೆಂಬುದನ್ನು ನಾವು ಅದರಿಂದ ಕಲಿಯುತ್ತೇವೆ. ನಮಗೆ ಪ್ರಿಯರಾದವರೊಬ್ಬರ ಪತ್ರವು ಬಹಳಷ್ಟು ಆನಂದವನ್ನು ಕೊಡುವಂತೆಯೇ, ಬೈಬಲಿನಲ್ಲಿ ಯೆಹೋವನ ವ್ಯಕ್ತಿತ್ವದ ಹೊಸ ಅಂಶಗಳು ಪ್ರಕಟಪಡಿಸಲ್ಪಟ್ಟಿರುವುದನ್ನು ನಾವು ನೋಡುವಾಗ ಅದು ನಮಗೆ ಮಹದಾನಂದವನ್ನು ತರುತ್ತದೆ.

ಆದರೂ, ಕೆಲವೊಮ್ಮೆ ನಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ನಾವು ಗಮನಿಸುವಂತೆ, ದೇವರ ಕುರಿತು ಕಲಿಯುವುದು ಯಾವಾಗಲೂ ಒಬ್ಬನು ದೇವರನ್ನು ಪ್ರೀತಿಸುವಂತೆ ಮಾಡುವುದಿಲ್ಲ. ಯೇಸು ತನ್ನ ದಿನಗಳ ಕೆಲವು ಕೃತಘ್ನ ಯೆಹೂದ್ಯರಿಗೆ ಹೇಳಿದ್ದು: “ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; . . . ಆದರೆ ನಿಮ್ಮನ್ನು ನಾನು ಬಲ್ಲೆನು, ದೇವರಲ್ಲಿ ನಿಮಗೆ ಪ್ರೀತಿಯಿಲ್ಲವೆಂದು ನನಗೆ ತಿಳಿದದೆ.” (ಯೋಹಾನ 5:39, 42) ಕೆಲವರು, ಯೆಹೋವನ ಪ್ರೀತಿಪೂರ್ವಕ ಕಾರ್ಯಗಳ ಬಗ್ಗೆ ಕಲಿಯುವುದರಲ್ಲಿ ವರ್ಷಾನುಗಟ್ಟಲೆ ಸಮಯವನ್ನು ವ್ಯಯಿಸುತ್ತಾರೆ, ಆದರೆ ಅವರಲ್ಲಿ ಆತನಿಗಾಗಿರುವ ಪ್ರೀತಿಯಾದರೋ ಅಲ್ಪವಾಗಿರುತ್ತದೆ. ಏಕೆ? ಏಕೆಂದರೆ ಅವರು, ತಾವೇನನ್ನು ಕಲಿಯುತ್ತಾರೋ ಆ ವಿಷಯಗಳಿಗೆ ಸಂಬಂಧಿಸಿರುವ ಅಂಶಗಳ ಬಗ್ಗೆ ಯೋಚಿಸಲು ತಪ್ಪಿಹೋಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ನಾವು ಬೈಬಲ್‌ ಅಧ್ಯಯನ ಮಾಡುತ್ತಿರುವ ಯಥಾರ್ಥ ಹೃದಯದ ಲಕ್ಷಾಂತರ ಮಂದಿ ದೇವರ ಕಡೆಗೆ ತಮಗಿರುವ ಪ್ರೀತಿಯು ಹೆಚ್ಚುತ್ತ ಹೋಗುವುದನ್ನು ಕಂಡುಹಿಡಿಯುತ್ತಾರೆ. ಏಕೆ? ಏಕೆಂದರೆ ನಮ್ಮಂತೆಯೇ ಅವರು ಆಸಾಫನ ಮಾದರಿಯನ್ನು ಅನುಕರಿಸುತ್ತಾರೆ. ಯಾವ ವಿಧದಲ್ಲಿ?

ಕೃತಜ್ಞತಾಭಾವದಿಂದ ಧ್ಯಾನ ಮಾಡಿರಿ

ಆಸಾಫನು ತನ್ನ ಹೃದಯದಲ್ಲಿ ಯೆಹೋವನ ಕಡೆಗೆ ಪ್ರೀತಿಯನ್ನು ಬೆಳೆಸಿಕೊಳ್ಳಲು ನಿರ್ಧರಿಸಿದನು. ಅವನು ಬರೆದುದು: “ನನ್ನ ಆಂತರ್ಯದಲ್ಲಿ ಮಾತಾಡಿಕೊಳ್ಳುವೆನು. . . . ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡಿಸಿದ ಅದ್ಭುತಗಳನ್ನು ನೆನಪುಮಾಡಿಕೊಳ್ಳುವೆನು. ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.” (ಕೀರ್ತನೆ 77:6, 11, 12) ಕೀರ್ತನೆಗಾರನು ಮಾಡಿದಂತೆಯೇ ಯೆಹೋವನ ಮಾರ್ಗಗಳ ಕುರಿತು ಧ್ಯಾನಿಸುವವನ ಹೃದಯದಲ್ಲಿ ದೇವರಿಗಾಗಿ ಪ್ರೀತಿಯು ಬೆಳೆಯುವುದು.

ಇದಕ್ಕೆ ಕೂಡಿಸಿ, ಯೆಹೋವನನ್ನು ಸೇವಿಸುತ್ತಿರುವಾಗ ನಾವು ಆನಂದಿಸಿದ ಅನುಭವಗಳನ್ನು ಜ್ಞಾಪಿಸಿಕೊಳ್ಳುವುದು ಆತನೊಂದಿಗಿರುವ ನಮ್ಮ ಸಂಬಂಧವನ್ನು ಬಲಗೊಳಿಸುತ್ತದೆ. ನಾವು ದೇವರ “ಜೊತೆಕೆಲಸದವರು” ಎಂದು ಅಪೊಸ್ತಲ ಪೌಲನು ಹೇಳಿದನು, ಮತ್ತು ಜೊತೆಗೆಲಸಗಾರರ ಮಧ್ಯೆ ಬೆಳೆಯುವ ಮಿತ್ರತ್ವವು ಅತಿ ವಿಶೇಷ ರೀತಿಯದ್ದು. (1 ಕೊರಿಂಥ 3:​9) ನಾವು ಯೆಹೋವನಿಗೆ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಾಗ, ಆತನು ಅದನ್ನು ಅಮೂಲ್ಯವೆಂದೆಣಿಸುತ್ತಾನೆ, ಮತ್ತು ಅದು ಆತನ ಹೃದಯವನ್ನು ಸಂತೋಷಪಡಿಸುತ್ತದೆ. (ಜ್ಞಾನೋಕ್ತಿ 27:11) ನಾವು ಯೆಹೋವನ ಸಹಾಯವನ್ನು ಕೇಳಿಕೊಳ್ಳುವಾಗ ಮತ್ತು ಒಂದು ಸಮಸ್ಯೆಯನ್ನು ಬಗೆಹರಿಸಲು ಆತನು ನಮ್ಮನ್ನು ಮಾರ್ಗದರ್ಶಿಸುತ್ತ ನಮಗೆ ಸಹಾಯ ಮಾಡುವಾಗ ಆತನು ನಮ್ಮೊಂದಿಗಿದ್ದಾನೆಂದು ನಾವು ತಿಳಿಯುತ್ತೇವೆ ಮತ್ತು ಆಗ ಆತನಿಗಾಗಿರುವ ನಮ್ಮ ಪ್ರೀತಿ ಗಾಢವಾಗುತ್ತದೆ.

ಇಬ್ಬರು ವ್ಯಕ್ತಿಗಳ ಮಧ್ಯೆ ಸ್ನೇಹವು, ಅವರು ಪರಸ್ಪರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಾಗ ಬೆಳೆಯುತ್ತದೆ. ತದ್ರೀತಿಯಲ್ಲಿ, ನಾವು ಯೆಹೋವನಿಗೆ ಏಕೆ ದೃಢನಿಷ್ಠರೆಂದು ಆತನಿಗೆ ಹೇಳುವಾಗ, ಆತನಿಗಾಗಿರುವ ನಮ್ಮ ಪ್ರೀತಿ ಬಲಗೊಳ್ಳುತ್ತದೆ. ಆಗ ನಾವು ಯೇಸುವಿನ ಈ ಮಾತುಗಳನ್ನು ಪ್ರತಿಬಿಂಬಿಸುತ್ತಿದ್ದೇವೆಂದು ನಮಗೆ ತಿಳಿದುಬರುತ್ತದೆ: “ನಿನ್ನ ದೇವರಾದ ಕರ್ತನನ್ನು [“ಯೆಹೋವನನ್ನು,” NW] ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಮಾರ್ಕ 12:30) ಹಾಗಾದರೆ, ನಾವು ಯೆಹೋವನನ್ನು ನಮ್ಮ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿನಿಂದ ಮತ್ತು ಪೂರ್ಣ ಶಕ್ತಿಯಿಂದ ಪ್ರೀತಿಸುತ್ತಾ ಹೋಗುವೆವೆಂಬುದನ್ನು ಖಚಿತಪಡಿಸಿಕೊಳ್ಳಲು ನಾವೇನು ಮಾಡಬಲ್ಲೆವು?

ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸುವುದು

ಶಾಸ್ತ್ರವಚನಗಳು ಸಾಂಕೇತಿಕ ಹೃದಯಕ್ಕೆ ಸೂಚಿಸಿ ಮಾತಾಡುತ್ತವೆ. ಅದು, ನಮ್ಮ ಅಪೇಕ್ಷೆಗಳು, ಮನೋಭಾವಗಳು ಮತ್ತು ಅನಿಸಿಕೆಗಳನ್ನು ಒಳಗೊಂಡಿರುವ ಆಂತರಿಕ ವ್ಯಕ್ತಿಯಾಗಿದೆ. ಆದುದರಿಂದ, ನಮ್ಮ ಪೂರ್ಣ ಹೃದಯದಿಂದ ಯೆಹೋವನನ್ನು ಪ್ರೀತಿಸುವುದೆಂದರೆ, ಬೇರೆ ಯಾವುದೇ ವಿಷಯಕ್ಕಿಂತಲೂ ಹೆಚ್ಚಾಗಿ ನಾವು ದೇವರನ್ನು ಮೆಚ್ಚಿಸಲು ಬಯಸುತ್ತೇವೆಂದು ಅರ್ಥ. (ಕೀರ್ತನೆ 86:11) ನಮ್ಮ ವ್ಯಕ್ತಿತ್ವವನ್ನು ಆತನಿಗೆ ಸ್ವೀಕಾರಯೋಗ್ಯವಾಗಿ ಮಾಡುವ ಮೂಲಕ ನಮ್ಮಲ್ಲಿ ಅಂತಹ ಪ್ರೀತಿಯಿದೆಯೆಂದು ನಾವು ತೋರಿಸುತ್ತೇವೆ. ನಾವು “ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ ಹಿಡಿದು”ಕೊಳ್ಳುವ ಮೂಲಕ ದೇವರನ್ನು ಅನುಕರಿಸಲು ಶ್ರಮಿಸುತ್ತೇವೆ.​—⁠ರೋಮಾಪುರ 12:⁠9.

ದೇವರ ಮೇಲೆ ನಮಗಿರುವ ಪ್ರೀತಿಯು ಪ್ರತಿಯೊಂದು ವಿಷಯದ ಕುರಿತು ನಮಗಿರುವ ಅನಿಸಿಕೆಗಳನ್ನು ಪ್ರಭಾವಿಸುತ್ತದೆ. ಉದಾಹರಣೆಗೆ, ನಮ್ಮ ಉದ್ಯೋಗವು ಆಸಕ್ತಿಕರವು ಇಲ್ಲವೇ ಹೆಚ್ಚು ಸಮಯವನ್ನು ಕೇಳಿಕೊಳ್ಳುವಂಥದ್ದೂ ಆಗಿರಬಹುದು. ಆದರೆ ನಮ್ಮ ಹೃದಯ ಅಲ್ಲಿರಬೇಕೋ? ಇಲ್ಲ. ನಾವು ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸುವುದರಿಂದ ನಾವು ಪ್ರಪ್ರಥಮವಾಗಿ ದೇವರ ಶುಶ್ರೂಷಕರಾಗಿದ್ದೇವೆ. ಅದೇ ರೀತಿ, ನಾವು ನಮ್ಮ ಹೆತ್ತವರನ್ನು, ವಿವಾಹ ಸಂಗಾತಿಯನ್ನು, ನಮ್ಮ ಧಣಿಯನ್ನು ಮೆಚ್ಚಿಸಲು ಬಯಸುತ್ತೇವೆ ಸರಿ, ಆದರೂ ಇವರೆಲ್ಲರಿಗಿಂತಲೂ ಹೆಚ್ಚಾಗಿ ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುವ ಮೂಲಕ, ಯೆಹೋವನಿಗಾಗಿ ಪೂರ್ಣ ಹೃದಯದ ಪ್ರೀತಿ ನಮ್ಮಲ್ಲಿದೆಯೆಂದು ನಾವು ರುಜುಪಡಿಸುತ್ತೇವೆ. ಎಷ್ಟೆಂದರೂ, ನಮ್ಮ ಹೃದಯದಲ್ಲಿ ಪ್ರಥಮ ಸ್ಥಾನಕ್ಕೆ ಆತನೇ ಅರ್ಹನು.​—⁠ಮತ್ತಾಯ 6:24; 10:37.

ಯೆಹೋವನನ್ನು ಪೂರ್ಣ ಪ್ರಾಣದಿಂದ ಪ್ರೀತಿಸುವುದು

ಶಾಸ್ತ್ರವಚನಗಳಲ್ಲಿ “ಪ್ರಾಣ” ಎಂಬ ಪದವು ಮೂಲಭೂತವಾಗಿ ನಮ್ಮ ಇಡೀ ಶರೀರಕ್ಕೆ ಹಾಗೂ ನಮ್ಮಲ್ಲಿರುವ ಜೀವಕ್ಕೆ ಸೂಚಿಸುತ್ತದೆ. ಆದಕಾರಣ ಯೆಹೋವನನ್ನು ಪೂರ್ಣ ಪ್ರಾಣದಿಂದ ಪ್ರೀತಿಸುವುದು, ಆತನನ್ನು ಸ್ತುತಿಸಲು ಹಾಗೂ ಆತನಿಗಾಗಿರುವ ನಮ್ಮ ಪ್ರೀತಿಯನ್ನು ರುಜುಪಡಿಸಲು ನಾವು ನಮ್ಮ ಜೀವನವನ್ನು ಉಪಯೋಗಿಸುತ್ತೇವೆ ಎಂಬುದನ್ನು ಅರ್ಥೈಸುತ್ತದೆ.

ನಮಗೆ ಜೀವನದಲ್ಲಿ, ಒಂದು ಕೆಲಸವನ್ನು ಕಲಿಯುವುದು, ವ್ಯಾಪಾರ ಮಾಡುವುದು ಇಲ್ಲವೆ ಒಂದು ಕುಟುಂಬವನ್ನು ಬೆಳೆಸುವಂಥ ಇತರ ಅಭಿರುಚಿಗಳಿರಬಹುದು. ಆದರೆ ಅದೇ ಸಮಯದಲ್ಲಿ, ನಾವು ನಮ್ಮ ಎಲ್ಲಾ ಕಾರ್ಯಗಳನ್ನು ಯೆಹೋವನ ಮಾರ್ಗಕ್ಕನುಸಾರವಾಗಿ ಮಾಡುವುದರ ಮೂಲಕ ಮತ್ತು ಬೇರೆ ಸಂಗತಿಗಳನ್ನು ನಮ್ಮ ಜೀವನದಲ್ಲಿ ಅವುಗಳ ತಕ್ಕದಾದ ಸ್ಥಾನದಲ್ಲಿ ಇಡುವುದರ ಮೂಲಕ “ಮೊದಲು ರಾಜ್ಯಕ್ಕಾಗಿಯೂ ನೀತಿಗಾಗಿಯೂ” ತವಕಪಡುತ್ತ, ದೇವರಿಗೆ ನಮ್ಮ ಪೂರ್ಣ ಪ್ರಾಣದ ಪ್ರೀತಿಯನ್ನು ರುಜುಪಡಿಸುತ್ತೇವೆ. (ಮತ್ತಾಯ 6:33) ಪೂರ್ಣ ಪ್ರಾಣದ ಆರಾಧನೆಯು ಹುರುಪುಳ್ಳವರಾಗಿರುವುದನ್ನೂ ಅರ್ಥೈಸುತ್ತದೆ. ನಾವು ಹುರುಪಿನಿಂದ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ, ಕೂಟಗಳಲ್ಲಿ ಭಕ್ತಿವರ್ಧಕ ಹೇಳಿಕೆಗಳನ್ನು ಕೊಡುವ ಮೂಲಕ, ಅಥವಾ ನಮ್ಮ ಕ್ರೈಸ್ತ ಸೋದರಸೋದರಿಯರಿಗೆ ಸಹಾಯ ಮಾಡುವ ಮೂಲಕ ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ಆತನಿಗೆ ತೋರಿಸಿ ಕೊಡುತ್ತೇವೆ. ಪ್ರತಿಯೊಂದು ವಿಷಯದಲ್ಲಿ, ನಾವು “ದೇವರ ಚಿತ್ತವನ್ನು ಮನಃಪೂರ್ವಕವಾಗಿ [“ಪೂರ್ಣಪ್ರಾಣದಿಂದ,” NW]” ಮಾಡುತ್ತಿರುತ್ತೇವೆ.​—⁠ಎಫೆಸ 6:⁠6.

ಯೇಸು ತನ್ನನ್ನು ನಿರಾಕರಿಸಿಕೊಳ್ಳುವ ಮೂಲಕ ದೇವರಿಗೆ ಪೂರ್ಣ ಪ್ರಾಣದ ಪ್ರೀತಿಯನ್ನು ಪ್ರದರ್ಶಿಸಿದನು. ಅವನು ದೇವರ ಚಿತ್ತವನ್ನು ಪ್ರಥಮಸ್ಥಾನದಲ್ಲಿಟ್ಟು ತನ್ನ ಸ್ವಂತ ಆವಶ್ಯಕತೆಗಳನ್ನು ಎರಡನೆಯ ಸ್ಥಾನದಲ್ಲಿರಿಸಿದನು. ತನ್ನ ಮಾದರಿಯನ್ನು ಅನುಕರಿಸುವಂತೆಯೂ ಯೇಸು ನಮ್ಮನ್ನು ಆಮಂತ್ರಿಸಿದನು. ಅವನಂದದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಮತ್ತಾಯ 16:24, 25) ನಮ್ಮನ್ನು ನಿರಾಕರಿಸಿಕೊಳ್ಳುವುದೆಂದರೆ ಸಮರ್ಪಣೆಯನ್ನು ಮಾಡುವುದೆಂದರ್ಥ. ನಾವು ನಮ್ಮ ಮೇಲಿರುವ ಸ್ವಾಮ್ಯವನ್ನು ಆತನಿಗೆ ಒಪ್ಪಿಸಿಕೊಡುವಷ್ಟರ ಮಟ್ಟಿಗೆ ಆತನನ್ನು ಪ್ರೀತಿಸುತ್ತೇವೆಂಬುದು ಅದರ ಅರ್ಥ. ಇದು, ಬೈಬಲ್‌ ಸಮಯಗಳಲ್ಲಿ ಇಸ್ರಾಯೇಲ್ಯ ಆಳೊಬ್ಬನು ತನ್ನ ಯಜಮಾನನನ್ನು ಅತಿಯಾಗಿ ಪ್ರೀತಿಸಿದ ಕಾರಣ ಅವನ ಖಾಯಂ ಆಳಾಗಿರಲು ತನ್ನನ್ನು ನಿರ್ಬಂಧಿಸಿಕೊಳ್ಳುತ್ತಿದ್ದಂತೆಯೇ ಇದೆ. (ಧರ್ಮೋಪದೇಶಕಾಂಡ 15:​16, 17) ನಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವುದು, ನಾವು ಆತನನ್ನು ಪ್ರೀತಿಸುತ್ತೇವೆಂಬುದಕ್ಕೆ ಭರವಸಾರ್ಹ ಸಾಕ್ಷ್ಯವಾಗಿದೆ.

ನಮ್ಮ ಪೂರ್ಣ ಮನಸ್ಸಿನಿಂದ ಯೆಹೋವನನ್ನು ಪ್ರೀತಿಸುವುದು

ಯೆಹೋವನನ್ನು ಪೂರ್ಣ ಮನಸ್ಸಿನಿಂದ ಪ್ರೀತಿಸುವುದೆಂದರೆ, ಯೆಹೋವನ ವ್ಯಕ್ತಿತ್ವವನ್ನು, ಉದ್ದೇಶಗಳನ್ನು ಮತ್ತು ಆವಶ್ಯಕತೆಗಳನ್ನು ತಿಳಿದುಕೊಳ್ಳಲು ನಾವು ಸಕಲ ಪ್ರಯತ್ನವನ್ನೂ ಮಾಡುತ್ತೇವೆ ಎಂದರ್ಥ. (ಯೋಹಾನ 17:3; ಅ. ಕೃತ್ಯಗಳು 17:11) ಇತರರು ಯೆಹೋವನನ್ನು ಪ್ರೀತಿಸುವಂತೆ ಸಹಾಯ ನೀಡಲು ಮತ್ತು ನಮ್ಮ ಬೋಧಿಸುವ ಕೌಶಲವನ್ನು ಉತ್ತಮಗೊಳಿಸಲು ನಮ್ಮ ಎಲ್ಲ ಮಾನಸಿಕ ಸಾಮರ್ಥ್ಯಗಳನ್ನು ಉಪಯೋಗಿಸುವ ಮೂಲಕವೂ ನಾವು ಯೆಹೋವನಿಗೆ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ. ನಾವು “ಮನಸ್ಸಿನ ನಡುವನ್ನು ಕಟ್ಟಿ”ಕೊಳ್ಳುವಂತೆ ಅಪೊಸ್ತಲ ಪೇತ್ರನು ಪ್ರೋತ್ಸಾಹಿಸಿದನು. (1 ಪೇತ್ರ 1:13) ಅಲ್ಲದೆ, ನಾವು ಇತರರಲ್ಲಿ, ಅದರಲ್ಲೂ ವಿಶೇಷವಾಗಿ ದೇವರ ಜೊತೆ ಸೇವಕರಲ್ಲಿ ಆಸಕ್ತಿ ತೋರಿಸಲು ಪ್ರಯತ್ನಿಸುತ್ತೇವೆ. ಅವರ ಪರಿಸ್ಥಿತಿಗಳು ನಮಗೆ ತಿಳಿದಿರುತ್ತವೆ ಮತ್ತು ಪ್ರಶಂಸಿಸುವುದು ಯಾವಾಗ ಸಮಂಜಸವೆಂದು ಅಥವಾ ಸಂತೈಸುವಿಕೆ ಯಾವಾಗ ಅಗತ್ಯವೆಂಬುದನ್ನು ನಾವು ಅವಲೋಕಿಸುತ್ತೇವೆ.

ನಾವು ಯೆಹೋವನನ್ನು ನಮ್ಮ ಪೂರ್ಣ ಮನಸ್ಸಿನಿಂದ ಪ್ರೀತಿಸುತ್ತೇವೆಂಬುದನ್ನು ಆತನಿಗೆ ಮಾನಸಿಕವಾಗಿ ಅಧೀನರಾಗುವ ಮೂಲಕ ತೋರಿಸುತ್ತೇವೆ. ನಾವು ವಿಷಯಗಳನ್ನು ಆತನ ದೃಷ್ಟಿಕೋನದಿಂದ ವೀಕ್ಷಿಸಿ, ನಿರ್ಣಯಗಳನ್ನು ಮಾಡುವಾಗ ಆತನನ್ನು ಗಮನದಲ್ಲಿಟ್ಟು, ಆತನ ಮಾರ್ಗವೇ ಅತ್ಯುತ್ತಮ ಮಾರ್ಗವೆಂದು ಭರವಸೆಯಿಡುತ್ತೇವೆ. (ಜ್ಞಾನೋಕ್ತಿ 3:5, 6; ಯೆಶಾಯ 55:9; ಫಿಲಿಪ್ಪಿ 2:3-7) ಆದರೆ ದೇವರಿಗೆ ಪ್ರೀತಿಯನ್ನು ತೋರಿಸುತ್ತಿರುವಾಗ, ನಾವು ನಮ್ಮ ಶಕ್ತಿಯನ್ನು ಹೇಗೆ ಉಪಯೋಗಿಸಬಲ್ಲೆವು?

ನಮ್ಮ ಪೂರ್ಣ ಶಕ್ತಿಯಿಂದ ಯೆಹೋವನನ್ನು ಪ್ರೀತಿಸುವುದು

ಕ್ರೈಸ್ತ ಸಭೆಯಲ್ಲಿರುವ ಅನೇಕ ಯುವಜನರು ಯೆಹೋವನನ್ನು ಸ್ತುತಿಸಲು ತಮ್ಮ ಶಕ್ತಿಯನ್ನು ಉಪಯೋಗಿಸುತ್ತಾರೆ. (ಜ್ಞಾನೋಕ್ತಿ 20:29; ಪ್ರಸಂಗಿ 12:1) ಅನೇಕ ಮಂದಿ ಯುವ ಕ್ರೈಸ್ತರು ತಾವು ಯೆಹೋವನನ್ನು ಪೂರ್ಣ ಶಕ್ತಿಯಿಂದ ಪ್ರೀತಿಸುತ್ತೇವೆಂದು ತೋರಿಸುವ ಒಂದು ವಿಧವು ಪಯನೀಯರ್‌ ಸೇವೆ ಅಂದರೆ ಪೂರ್ಣಸಮಯದ ಶುಶ್ರೂಷೆಯಲ್ಲಿ ಭಾಗವಹಿಸುವ ಮೂಲಕವೇ. ಅನೇಕ ತಾಯಂದಿರು, ತಮ್ಮ ಮಕ್ಕಳು ಶಾಲೆಯಲ್ಲಿರುವಾಗ ಈ ಸೇವೆಯಲ್ಲಿ ಭಾಗವಹಿಸುತ್ತಾರೆ. ತಮ್ಮ ಕುಟುಂಬದ ಹಿತವನ್ನು ನೋಡಿಕೊಳ್ಳುವುದರೊಂದಿಗೆ ಕುರಿಪಾಲನೆಯ ಭೇಟಿಗಳನ್ನು ಮಾಡುವ ನಂಬಿಗಸ್ತ ಹಿರಿಯರು ತಾವು ತಮ್ಮ ಸರ್ವಶಕ್ತಿಯಿಂದ ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸುತ್ತಾರೆ. (2 ಕೊರಿಂಥ 12:15) ಯೆಹೋವನು ತನ್ನಲ್ಲಿ ನಿರೀಕ್ಷೆಯನ್ನಿಡುವವರಿಗೆ, ಅವರು ತಮ್ಮಲ್ಲಿರುವ ಸಕಲ ಶಕ್ತಿಯಿಂದ ತನ್ನನ್ನು ಸ್ತುತಿಸುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸಸಾಧ್ಯವಾಗುವಂತೆ ಅವರಿಗೆ ಬಲವನ್ನು ದಯಪಾಲಿಸುತ್ತಾನೆ.​—⁠ಯೆಶಾಯ 40:29; ಇಬ್ರಿಯ 6:11, 12.

ಪ್ರೀತಿಯನ್ನು ಸರಿಯಾದ ರೀತಿಯಲ್ಲಿ ಬೆಳೆಸುವಲ್ಲಿ ಅದು ಬೆಳೆಯುತ್ತಾ ಹೋಗುವುದು. ಆದಕಾರಣ, ನಾವು ಧ್ಯಾನಿಸಲಿಕ್ಕಾಗಿ ಸಮಯವನ್ನು ಬದಿಗಿರಿಸುವುದನ್ನು ಮುಂದುವರಿಸುವೆವು. ಯೆಹೋವನು ನಮಗೆ ಏನನ್ನು ಮಾಡಿರುತ್ತಾನೆ ಮತ್ತು ಆತನು ನಮ್ಮ ಭಕ್ತಿಗೆ ಏಕೆ ಪಾತ್ರನೆಂಬುದನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ಆದಾಮನ ಅಪರಿಪೂರ್ಣ ವಂಶಸ್ಥರಾದ ನಾವು, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು” ಪಡೆಯಲು ಎಂದಿಗೂ ಅರ್ಹರಾಗಲಿಕ್ಕಿಲ್ಲವಾದರೂ, ನಾವು ಯೆಹೋವನನ್ನು ನಮ್ಮ ಪೂರ್ಣಪ್ರಾಣದಿಂದ ಪ್ರೀತಿಸುತ್ತೇವೆಂದು ತೋರಿಸಬಲ್ಲೆವು. ನಾವು ಹಾಗೆ ಮಾಡುತ್ತಾ ಇರೋಣ!​—⁠1 ಕೊರಿಂಥ 2:⁠9.

[ಪುಟ 20ರಲ್ಲಿರುವ ಚಿತ್ರ]

ನಾವು ಕ್ರಿಯೆಗಳ ಮೂಲಕ ದೇವರಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ