ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ಸಂತೃಪ್ತಿಯು ನನ್ನನ್ನು ಪೋಷಿಸಿದೆ

ದೈವಿಕ ಸಂತೃಪ್ತಿಯು ನನ್ನನ್ನು ಪೋಷಿಸಿದೆ

ಜೀವನ ಕಥೆ

ದೈವಿಕ ಸಂತೃಪ್ತಿಯು ನನ್ನನ್ನು ಪೋಷಿಸಿದೆ

ಬೆಂಜಮಿನ್‌ ಈಕೀಚೂಕ್ವೂ ಓಸ್ಯೂಈಕೀ ಅವರು ಹೇಳಿದಂತೆ

ನಾನು ಕ್ರೈಸ್ತ ಶುಶ್ರೂಷೆಯಲ್ಲಿ ಪೂರ್ಣವಾಗಿ ಭಾಗವಹಿಸುವುದಕ್ಕೆ ತೊಡಗಿದ ಸ್ವಲ್ಪ ಸಮಯದ ನಂತರ ನನ್ನ ಹೆತ್ತವರ ಮನೆಗೆ ಭೇಟಿಕೊಟ್ಟೆ. ನನ್ನನ್ನು ಕಂಡೊಡನೆ, ನನ್ನ ತಂದೆಯವರು ಥಟ್ಟನೆ ನನ್ನ ಷರ್ಟನ್ನು ಹಿಡಿದೆಳೆದು, “ಕಳ್ಳ!” ಎಂದು ಕೂಗಿದರು. ಅವರು ತಮ್ಮ ಮಚ್ಚುಕತ್ತಿಯನ್ನು ತೆಗೆದು ಅದರ ಚಪ್ಪಟೆಯಾಗಿರುವ ಬದಿಯಿಂದ ನನ್ನನ್ನು ಹೊಡೆದರು. ಈ ಗಲಾಟೆಯನ್ನು ಕೇಳಿ, ಹಳ್ಳಿಯ ಜನರು ನಮ್ಮ ಮನೆಯ ಬಳಿ ಸೇರಿಬಂದರು. ನಾನೇನು ಕದ್ದಿದ್ದೆ? ಹೇಳುತ್ತೇನೆ, ಕೇಳಿ.

ನಾನು ನೈಜೀರಿಯದ ನೈಋತ್ಯ ಭಾಗದಲ್ಲಿರುವ ಊಮಾರೀಅಮ್‌ ಗ್ರಾಮದಲ್ಲಿ 1930ರಲ್ಲಿ ಜನಿಸಿದೆ. ನಾನು ಏಳು ಮಂದಿ ಮಕ್ಕಳಲ್ಲಿ ಹಿರಿಯವನಾಗಿದ್ದೆ. ನನ್ನ ತಂಗಿಯರಲ್ಲಿ ಹಿರಿಯವಳು 13ನೇ ವಯಸ್ಸಿನಲ್ಲೇ ತೀರಿಕೊಂಡಳು. ನನ್ನ ತಂದೆತಾಯಿ ಆ್ಯಂಗ್ಲಿಕನ್‌ ಧರ್ಮದವರಾಗಿದ್ದರು. ತಂದೆಯವರು ಬೇಸಾಯಗಾರರಾಗಿದ್ದರು ಮತ್ತು ತಾಯಿಯವರು ಚಿಕ್ಕ ರೀತಿಯ ವ್ಯಾಪಾರದಲ್ಲಿ ತೊಡಗಿದ್ದರು. ತಾಯಿಯವರು ನಮ್ಮ ಗ್ರಾಮದಿಂದ ಸುಮಾರು 30 ಕಿಲೊಮೀಟರ್‌ ದೂರದಲ್ಲಿದ್ದ ಸ್ಥಳಿಕ ಮಾರುಕಟ್ಟೆಗಳಿಗೆ ನಡೆದುಕೊಂಡು ಹೋಗಿ ತಾಳೆ ಎಣ್ಣೆಯ ಟಿನ್ನನ್ನು ಖರೀದಿಸಿ ಅದೇ ದಿನ ತಡವಾಗಿ ಹಿಂದಿರುಗಿ ಬರುತ್ತಿದ್ದರು. ಬಳಿಕ ಮರುದಿನ ಮುಂಜಾನೆ ಅವರು ಎಣ್ಣೆ ಮಾರಲು 40 ಕಿಲೊಮೀಟರ್‌ ದೂರದಲ್ಲಿದ್ದ ರೈಲು ನಿಲ್ದಾಣವುಳ್ಳ ಒಂದು ಊರಿಗೆ ನಡೆದುಕೊಂಡೇ ಹೋಗುತ್ತಿದ್ದರು. ಅವರು ಲಾಭ ಗಳಿಸುವಲ್ಲಿ ಅಂದರೆ ಸುಮಾರು 15 ಸೆಂಟ್ಸ್‌ [ಸುಮಾರು ಏಳು ರೂಪಾಯಿ] ಲಾಭ ಗಳಿಸುವಲ್ಲಿ, ಕುಟುಂಬಕ್ಕಾಗಿ ಆಹಾರಪದಾರ್ಥಗಳನ್ನು ಖರೀದಿಸಿ ಅದೇ ದಿನ ಮರಳಿ ಮನೆಗೆ ಬರುತ್ತಿದ್ದರು. ಇದು ಅವರು 1950ರಲ್ಲಿ ಸಾಯುವ ತನಕ ಸುಮಾರು 15 ವರುಷಗಳ ವರೆಗೆ ಅವರ ನಿಯತಕ್ರಮವಾಗಿತ್ತು.

ನಾನು ನನ್ನ ಗ್ರಾಮದಲ್ಲಿದ್ದ ಆ್ಯಂಗ್ಲಿಕನ್‌ ಚರ್ಚ್‌ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದೆ, ಆದರೆ ಪ್ರಾಥಮಿಕ ಶಾಲೆಯನ್ನು ಮುಗಿಸಲಿಕ್ಕೋಸ್ಕರ ನಾನು ಸುಮಾರು 35 ಕಿಲೊಮೀಟರ್‌ ದೂರದಲ್ಲಿದ್ದ ಬೋರ್ಡಿಂಗ್‌ ಗೃಹದಲ್ಲಿ ವಾಸಿಸಬೇಕಾಯಿತು. ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ನನ್ನ ಹೆತ್ತವರ ಬಳಿ ಹಣವಿಲ್ಲದಿದ್ದುದರಿಂದ, ನಾನು ಕೆಲಸಕ್ಕಾಗಿ ಹುಡುಕತೊಡಗಿದೆ. ಮೊದಲು ನಾನು ಪಶ್ಚಿಮ ನೈಜೀರಿಯದ ಲೇಗಾಸ್‌ನಲ್ಲಿ ಒಬ್ಬ ರೈಲ್ವೇ ಗಾರ್ಡ್‌ನ ಮನೆಯಾಳಾಗಿಯೂ, ಬಳಿಕ ಉತ್ತರ ನೈಜೀರಿಯದ ಕಾಡೂನಾದಲ್ಲಿ ಒಬ್ಬ ಸರಕಾರೀ ಅಧಿಕಾರಿಯ ನೌಕರನಾಗಿಯೂ ಕೆಲಸಮಾಡಿದೆ. ಮಧ್ಯಪಶ್ಚಿಮ ನೈಜೀರಿಯದ ಬೆನೀನ್‌ ನಗರದಲ್ಲಿ ನಾನು ಒಬ್ಬ ವಕೀಲನ ಗುಮಾಸ್ತನಾಗಿಯೂ, ಬಳಿಕ ಮರ ಕೊಯ್ಯುವ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿಯೂ ಕೆಲಸಮಾಡಿದೆ. ಅಲ್ಲಿಂದ ನಾನು 1953ರಲ್ಲಿ ಒಬ್ಬ ಮಾವನೊಂದಿಗೆ ವಾಸಿಸಲಿಕ್ಕಾಗಿ ಕ್ಯಾಮರೂನ್‌ ದೇಶಕ್ಕೆ ಹೋದೆ. ಅಲ್ಲಿ ಅವನು ಒಂದು ರಬ್ಬರ್‌ ತೋಟದಲ್ಲಿ ಕೆಲಸವನ್ನು ಪಡೆಯಲು ನನಗೆ ಸಹಾಯಮಾಡಿದ. ನನ್ನ ಮಾಸಿಕ ಸಂಬಳ ಸುಮಾರು ಒಂಬತ್ತು ಡಾಲರುಗಳು [420 ರೂಪಾಯಿಗಳು] ಆಗಿತ್ತು. ನನಗೆ ಕೇವಲ ದಾಸ್ಯದ ಕೆಲಸಗಳೇ ಇರುತ್ತಿದ್ದರೂ, ಸಾಕಷ್ಟು ಊಟ ಸಿಗುತ್ತಿದ್ದುದರಿಂದ ನಾನು ತೃಪ್ತನಾಗಿದ್ದೆ.

ಬಡವನೊಬ್ಬನು ನನಗೆ ಆಧ್ಯಾತ್ಮಿಕ ಐಶ್ವರ್ಯವನ್ನು ಕೊಟ್ಟನು

ನನ್ನ ಜೊತೆಕೆಲಸದವನಾದ ಸಿಲ್ವಾನೂಸ್‌ ಓಕೇಮೀರೀ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದನು. ನಾವು ರಬ್ಬರ್‌ ಸಸಿಗಳ ಸುತ್ತ ಹುಲ್ಲು ಕೊಯ್ದು ಹಸಿಗೊಬ್ಬರ ಹಾಕುತ್ತಿದ್ದಾಗ, ಸಿಲ್ವಾನೂಸ್‌ ತನ್ನ ಬೈಬಲ್‌ ಜ್ಞಾನವನ್ನು ನನ್ನೊಂದಿಗೆ ಹಂಚಿಕೊಳ್ಳಲು ಪ್ರತಿ ಸಂದರ್ಭವನ್ನೂ ಉಪಯೋಗಿಸಿದನು. ನಾನು ಅವನಿಗೆ ಕಿವಿಗೊಡುತ್ತಿದ್ದೆ, ಆದರೆ ಆ ಸಮಯದಲ್ಲಿ ನಾನು ಅದಕ್ಕಿಂತ ಹೆಚ್ಚನ್ನು ಮಾಡಲಿಲ್ಲ. ಆದರೂ, ನಾನು ಸಾಕ್ಷಿಗಳ ಸಂಪರ್ಕದಲ್ಲಿದ್ದೇನೆಂದು ನನ್ನ ಮಾವನಿಗೆ ತಿಳಿದುಬಂದಾಗ ಅವನು ನನ್ನನ್ನು ನಿರುತ್ತೇಜಿಸಲು ತನ್ನಿಂದ ಸಾಧ್ಯವಾದುದ್ದನ್ನೆಲ್ಲ ಮಾಡಿದನು. ಅವನು ನನಗೆ ಎಚ್ಚರಿಕೆಕೊಡುತ್ತಾ ಹೇಳಿದ್ದು: “ಬೆಂಜೀ, ಆ ಓಕೇಮೀರೀ ಮನುಷ್ಯನ ಸಹವಾಸ ನಿನಗೆ ಬೇಡ. ಅವನು ಯೆಹೋವ ವಿಶ್ವಾಸಿ ಮತ್ತು ಒಬ್ಬ ಬಡವ. ಅವನೊಂದಿಗೆ ಸಹವಾಸ ಮಾಡುವ ಯಾವನೇ ವ್ಯಕ್ತಿ ಅವನಂತೆಯೇ ಆಗುವುದು ಖಂಡಿತ.”

ನಾನು 1954ರಲ್ಲಿ, ಆ ಕಂಪೆನಿಯಲ್ಲಿದ್ದ ಕಠಿನ ಕೆಲಸದ ಪರಿಸ್ಥಿತಿಗಳನ್ನು ಸಹಿಸಲಾಗದೆ ಮನೆಗೆ ಹಿಂದಿರುಗಿದೆ. ಆ ದಿನಗಳಲ್ಲಿ ಆ್ಯಂಗ್ಲಿಕನ್‌ ಚರ್ಚು ನೈತಿಕ ವಿಷಯಗಳ ಸಂಬಂಧದಲ್ಲಿ ಹೆಚ್ಚು ಕಟ್ಟುನಿಟ್ಟಿನದ್ದಾಗಿತ್ತು. ಲೈಂಗಿಕ ಅನೈತಿಕತೆಯನ್ನು ಹೇಸುತ್ತ ನಾನು ಬೆಳೆದಿದ್ದೆ. ಆದರೆ ಬೇಗನೆ, ಚರ್ಚಿಗೆ ಹೋಗುತ್ತಿದ್ದವರ ಕಪಟತನವನ್ನು ಕಂಡು ನಾನು ಜುಗುಪ್ಸೆಗೊಂಡೆ. ಅವರು ಬೈಬಲ್‌ ಮಟ್ಟಗಳನ್ನು ಅನುಸರಿಸುತ್ತೇವೆಂದು ಬಲವಾಗಿ ಹೇಳಿಕೊಳ್ಳುತ್ತಿದ್ದರೂ, ಅವರ ಜೀವನಶೈಲಿ ಅದಕ್ಕೆ ವ್ಯತಿರಿಕ್ತವಾಗಿತ್ತು. (ಮತ್ತಾಯ 15:⁠8) ನಾನು ತಂದೆಯವರೊಡನೆ ಈ ವಿಷಯದಲ್ಲಿ ತುಂಬ ವಾದಿಸುತ್ತಿದ್ದುದರಿಂದ ನಮ್ಮ ಸಂಬಂಧವು ತೀರ ಬಿಗಡಾಯಿಸಿಕೊಂಡಿತು. ಹೀಗೆ ಒಂದು ರಾತ್ರಿ ನಾನು ಮನೆಬಿಟ್ಟು ಹೋದೆ.

ನಾನು ಒಂದು ಸಣ್ಣ ರೈಲ್ವೇ ಪಟ್ಟಣವಾದ ಓಮೋಬಾದಲ್ಲಿ ನೆಲೆಸಿದೆ. ಅಲ್ಲಿ ನನಗೆ ಪುನಃ ಯೆಹೋವನ ಸಾಕ್ಷಿಗಳ ಸಂಪರ್ಕವಾಯಿತು. ನನ್ನ ಗ್ರಾಮದವರಾಗಿದ್ದು ನನಗೆ ಪರಿಚಯವಿದ್ದ ಪ್ರಿಸಿಲ್ಲ ಈಸೀಓಕಾ ಎಂಬವರು, “ರಾಜ್ಯದ ಈ ಸುವಾರ್ತೆ” ಮತ್ತು “ಹರ್ಮಗೆದೋನಿನ ನಂತರ​—⁠ದೇವರ ನೂತನ ಲೋಕ” ಎಂಬ ಪುಸ್ತಿಕೆಗಳನ್ನು ನನಗೆ ಕೊಟ್ಟರು. * ನಾನು ಅದನ್ನು ಅತ್ಯಾಸಕ್ತಿಯಿಂದ ಓದಿಮುಗಿಸಿದಾಗ, ಸತ್ಯವು ನನಗೆ ಸಿಕ್ಕಿತೆಂಬ ಖಾತ್ರಿ ನನಗಾಯಿತು. ನನ್ನ ಚರ್ಚಿನಲ್ಲಿ ನಾವು ಬೈಬಲ್‌ ಅಧ್ಯಯನ ಮಾಡುತ್ತಿರಲಿಲ್ಲ; ಮಾನವ ಸಂಪ್ರದಾಯಗಳ ಮೇಲೆ ನಾವು ಗಮನಕೇಂದ್ರೀಕರಿಸುತ್ತಿದ್ದೆವು. ಆದರೆ ಸಾಕ್ಷಿಗಳ ಸಾಹಿತ್ಯವಾದರೊ, ಬೈಬಲಿನಿಂದ ಧಾರಾಳ ಉಲ್ಲೇಖಗಳನ್ನು ಮಾಡಿತ್ತು.

ಇದಾಗಿ ಒಂದು ತಿಂಗಳೊಳಗೆ, ನಾನು ಸಹೋದರ ಮತ್ತು ಸಹೋದರಿ ಈಸೀಓಕಾರವರನ್ನು ನೀವು ಯಾವಾಗ ನಿಮ್ಮ ಚರ್ಚಿಗೆ ಹೋಗುತ್ತೀರಿ ಎಂದು ಕೇಳಿದೆ. ನಾನು ಯೆಹೋವನ ಸಾಕ್ಷಿಗಳ ಕೂಟಕ್ಕೆ ಪ್ರಥಮ ಬಾರಿ ಹಾಜರಾದಾಗ ನನಗೆ ಏನೂ ಅರ್ಥವಾಗಲಿಲ್ಲ. ಕಾವಲಿನಬುರುಜು ಲೇಖನವು ಯೆಹೆಜ್ಕೇಲನ ಪ್ರವಾದನಾತ್ಮಕ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ‘ಮಾಗೋಗಿನ ಗೋಗನ’ ಆಕ್ರಮಣದ ಕುರಿತಾಗಿತ್ತು. (ಯೆಹೆಜ್ಕೇಲ 38:​1, 2) ಉಪಯೋಗಿಸಲ್ಪಟ್ಟಿದ್ದ ಅನೇಕ ಪದಗಳು ನನಗೆ ಪರಕೀಯವಾಗಿದ್ದವು, ಆದರೆ ನನಗೆ ದೊರೆತ ಹಾರ್ದಿಕ ಸ್ವಾಗತದಿಂದ ನಾನು ತುಂಬ ಪ್ರಭಾವಿತನಾದುದರಿಂದ ಮುಂದಿನ ಭಾನುವಾರವೂ ಹೋಗಲು ನಾನು ನಿಶ್ಚಯಿಸಿದೆ. ಆ ಎರಡನೆಯ ಕೂಟದ ಸಮಯದಲ್ಲಿ ಸಾರುವುದರ ಕುರಿತಾಗಿ ಕೇಳಿಸಿಕೊಂಡೆ. ಆದುದರಿಂದ ನಾನು ಪ್ರಿಸಿಲ್ಲರೊಡನೆ ಅವರು ಯಾವಾಗ ಸಾರಲು ಹೋಗುತ್ತಾರೆಂದು ಕೇಳಿದೆ. ಮೂರನೆಯ ಭಾನುವಾರ ನಾನು ಒಂದು ಚಿಕ್ಕ ಬೈಬಲನ್ನು ಕೈಯಲ್ಲಿ ಹಿಡಿದುಕೊಂಡು ಅವರ ಜೊತೆಯಲ್ಲಿ ಹೋದೆ. ನನ್ನೊಂದಿಗೆ ಸೇವೆಯ ಚೀಲವಾಗಲಿ ಬೈಬಲ್‌ ಸಾಹಿತ್ಯವಾಗಲಿ ಇರಲಿಲ್ಲ. ಆದರೂ ನಾನು ರಾಜ್ಯ ಪ್ರಚಾರಕನಾಗಿ, ಆ ತಿಂಗಳ ಕೊನೆಯಲ್ಲಿ ಕ್ಷೇತ್ರ ಸೇವಾ ವರದಿಯನ್ನು ಬರೆದು ಹಾಕಿದೆ!

ನನ್ನೊಂದಿಗೆ ಯಾರೂ ಬೈಬಲ್‌ ಅಧ್ಯಯನ ನಡೆಸದಿದ್ದರೂ, ನಾನು ಈಸೀಓಕಾ ದಂಪತಿಗಳನ್ನು ಭೇಟಿ ಮಾಡಿದಾಗಲೆಲ್ಲಾ ಶಾಸ್ತ್ರವಚನಗಳಿಂದ ನಂಬಿಕೆ ಮತ್ತು ಪ್ರೋತ್ಸಾಹದ ಮಾತುಗಳನ್ನು ಕಲಿತುಕೊಂಡು ಕೆಲವು ಬೈಬಲ್‌ ಸಾಹಿತ್ಯಗಳನ್ನು ಪಡೆದುಕೊಂಡೆ. ಡಿಸೆಂಬರ್‌ 11, 1954ರಲ್ಲಿ, ಆಬಾ ಪಟ್ಟಣದಲ್ಲಿ ನಡೆದ ಜಿಲ್ಲಾ ಅಧಿವೇಶನದಲ್ಲಿ ನಾನು ಯೆಹೋವನಿಗೆ ಮಾಡಿದ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದೆ. ಆಗ, ನಾನೊಬ್ಬ ಅಪ್ರೆಂಟಿಸಾಗಿ ಯಾರ ಜೊತೆಯಲ್ಲಿ ಜೀವಿಸುತ್ತಿದ್ದು ಕೆಲಸ ಮಾಡುತ್ತಿದ್ದೆನೊ ಆ ಸೋದರಬಂಧು ನನಗೆ ಒದಗಿಸುತ್ತಿದ್ದ ಆಹಾರ ಮತ್ತು ತರಬೇತನ್ನು ನಿಲ್ಲಿಸಿದ್ದು ಮಾತ್ರವಲ್ಲ, ನಾನು ಮಾಡಿದ ಕೆಲಸಕ್ಕಾಗಿ ಒಂದು ಕಾಸನ್ನೂ ನನಗೆ ಕೊಡಲಿಲ್ಲ. ಆದರೂ ನಾನು ಮನಸ್ಸಲ್ಲೇ ಅವನ ಬಗ್ಗೆ ಸೇಡು ಇಡಲಿಲ್ಲ; ದೇವರೊಂದಿಗೆ ನನಗಿದ್ದ ವೈಯಕ್ತಿಕ ಸಂಬಂಧಕ್ಕೆ ನಾನು ತೀರ ಕೃತಜ್ಞನಾಗಿದ್ದೆ. ಇದು ನನಗೆ ಸಾಂತ್ವನವನ್ನೂ ಮನಶ್ಶಾಂತಿಯನ್ನೂ ಕೊಟ್ಟಿತು. ಸ್ಥಳಿಕ ಸಾಕ್ಷಿಗಳು ನನ್ನ ಸಹಾಯಕ್ಕೆ ಬಂದರು. ಈಸೀಓಕಾ ದಂಪತಿಗಳು ನನಗೆ ಆಹಾರವನ್ನೂ, ಇತರರು ನಾನು ಸಣ್ಣ ವ್ಯಾಪಾರದಲ್ಲಿ ತೊಡಗಲು ಹಣವನ್ನೂ ಕೊಟ್ಟರು. ನಾನು 1955ರ ಮಧ್ಯಭಾಗದಲ್ಲಿ, ಹಳೆಯ ಸೈಕಲೊಂದನ್ನು ಖರೀದಿಸಿದೆ, ಮತ್ತು 1956ರ ಮಾರ್ಚ್‌ ತಿಂಗಳಲ್ಲಿ ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಆರಂಭಿಸಿದೆ. ಬಳಿಕ ಸ್ವಲ್ಪದರಲ್ಲಿ, ನಾನು ನನ್ನ ಸಾಲಗಳನ್ನು ತೀರಿಸಿದೆ. ನನ್ನ ವ್ಯಾಪಾರದಿಂದ ನಾನು ಗಳಿಸುತ್ತಿದ್ದ ಲಾಭ ತೀರ ಕೊಂಚವಾಗಿದ್ದರೂ ನಾನೀಗ ನನ್ನ ಕಾಲ ಮೇಲೆ ನಿಂತುಕೊಳ್ಳಬಹುದಾಗಿತ್ತು. ಯೆಹೋವನು ನನಗೆ ಏನು ಒದಗಿಸುತ್ತಿದ್ದನೊ ಅದು ನನಗೆ ಸಾಕಾಗುತ್ತಿತ್ತು.

ನನ್ನ ಒಡಹುಟ್ಟಿದವರನ್ನು “ಕದಿಯುವುದು”

ನಾನು ಹೀಗೆ ಸ್ವತಂತ್ರನಾದೊಡನೆ, ನನ್ನ ಪ್ರಥಮ ಚಿಂತೆಯು ನನ್ನ ಒಡಹುಟ್ಟಿದವರಿಗೆ ಆಧ್ಯಾತ್ಮಿಕವಾಗಿ ಸಹಾಯ ಮಾಡುವುದೇ ಆಗಿತ್ತು. ತಂದೆಯವರು ತಮ್ಮ ಪೂರ್ವ ಕಲ್ಪಿತ ಅಭಿಪ್ರಾಯ ಮತ್ತು ಆಳವಾದ ಸಂದೇಹದ ಕಾರಣ ನಾನು ಸಾಕ್ಷಿಯಾಗುವುದನ್ನು ವಿರೋಧಿಸಿದ್ದರು. ಹಾಗಾದರೆ, ನನ್ನ ಒಡಹುಟ್ಟಿದವರು ಬೈಬಲ್‌ ಸತ್ಯವನ್ನು ಕಲಿಯುವಂತೆ ನಾನು ಹೇಗೆ ಸಹಾಯ ಮಾಡಬಹುದಿತ್ತು? ನನ್ನ ತಮ್ಮನಾದ ಅರ್ನೆಸ್ಟ್‌ ಎಂಬವನನ್ನು ನಾನು ನೋಡಿಕೊಳ್ಳುತ್ತೇನೆಂದು ಹೇಳಿದಾಗ, ಅವನು ನನ್ನೊಂದಿಗೆ ಜೀವಿಸುವಂತೆ ತಂದೆಯವರು ಅನುಮತಿಸಿದರು. ಅರ್ನೆಸ್ಟ್‌ ಸತ್ಯವನ್ನು ಬೇಗನೆ ಸ್ವೀಕರಿಸಿ 1956ರಲ್ಲಿ ದೀಕ್ಷಾಸ್ನಾನ ಪಡೆದನು. ಅವನು ಹೀಗಾದದ್ದು ತಂದೆಯವರ ವಿರೋಧವನ್ನು ಇನ್ನೂ ಹೆಚ್ಚಿಸಿತು. ಹೀಗಿದ್ದರೂ, ಆಗಲೇ ವಿವಾಹಿತಳಾಗಿದ್ದ ನನ್ನ ತಂಗಿ ಆಕೆಯ ಗಂಡನ ಸಮೇತ ಸತ್ಯಕ್ಕೆ ಬಂದಳು. ನನ್ನ ಎರಡನೆಯ ತಂಗಿ, ಫೆಲಿಷ್ಯ, ನನ್ನೊಂದಿಗೆ ಶಾಲಾ ರಜಾದಿನಗಳನ್ನು ಕಳೆಯುವಂತೆ ನಾನು ಏರ್ಪಡಿಸಿದಾಗ ತಂದೆಯವರು ಒಲ್ಲದ ಮನಸ್ಸಿನಿಂದ ಒಪ್ಪಿದರು. ಬೇಗನೆ, ಫೆಲಿಷ್ಯಳು ಸಹ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದಳು.

ನಾನು 1959ರಲ್ಲಿ ನನ್ನ ಮೂರನೆಯ ತಂಗಿಯಾದ ಬರ್ನೀಸಳನ್ನು ಅರ್ನೆಸ್ಟ್‌ ಜೊತೆಗೆ ಜೀವಿಸುವಂತೆ ಕರೆತರಲು ಮನೆಗೆ ಹೋದೆ. ತಂದೆಯವರು ನನ್ನ ಮೇಲೆ ಕೈಮಾಡಿ, ನಾನು ಅವರ ಮಕ್ಕಳನ್ನು ಕದಿಯುತ್ತಿದ್ದೇನೆಂದು ಆರೋಪ ಹಾಕಿದ್ದು ಆಗಲೇ. ಯೆಹೋವನನ್ನು ಸೇವಿಸಲಿಕ್ಕಾಗಿ ಅವರು ತಮ್ಮ ವೈಯಕ್ತಿಕ ನಿರ್ಣಯಗಳನ್ನು ಮಾಡಿದ್ದರೆಂಬುದನ್ನು ತಂದೆಯವರಿಗೆ ಅರ್ಥಮಾಡಿಕೊಳ್ಳಲಾಗಲಿಲ್ಲ. ಬರ್ನೀಸಳನ್ನು ನನ್ನೊಂದಿಗೆ ಹೋಗುವಂತೆ ತಾನೆಂದಿಗೂ ಬಿಡೆನು ಎಂದು ತಂದೆಯವರು ಆಣೆಯಿಟ್ಟರು. ಆದರೆ ಯೆಹೋವನ ಕೈ ಮೋಟುಗೈಯಾಗಿರಲಿಲ್ಲ. ಏಕೆಂದರೆ ಮರುವರುಷವೇ, ಬರ್ನೀಸ್‌ ತನ್ನ ಶಾಲಾ ರಜಾಸಮಯವನ್ನು ಅರ್ನೆಸ್ಟ್‌ನೊಂದಿಗೆ ಕಳೆಯಲು ಬಂದಳು. ಅವಳ ಸೋದರಿಯರಂತೆ ಆಕೆಯೂ ಸತ್ಯವನ್ನು ಅಂಗೀಕರಿಸಿ ದೀಕ್ಷಾಸ್ನಾನ ಪಡೆದಳು.

‘ಗುಟ್ಟು ತಿಳಿಯುವುದು’

ಸೆಪ್ಟೆಂಬರ್‌ 1957ರಲ್ಲಿ, ನಾನು ಸ್ಪೆಷಲ್‌ ಪಯನೀಯರನಾಗಿ ಸಾರುವ ಕೆಲಸದಲ್ಲಿ ಪ್ರತಿ ತಿಂಗಳು 150 ತಾಸುಗಳನ್ನು ಕಳೆಯತೊಡಗಿದೆ. ನನ್ನ ಜೊತೆಗಾರ ಸಂಡೇ ಈರೋಬೇಲಾಕೀ ಮತ್ತು ನಾನು ಏಚೇ ಜಿಲ್ಲೆಯ ಆಕ್ಪೂನಾ ಆಬೂಅದ ವಿಸ್ತಾರವಾದ ಪ್ರದೇಶದಲ್ಲಿ ಸೇವೆ ಮಾಡಿದೆವು. ನಾವು ಅಲ್ಲಿಂದ ಹಾಜರಾದ ಪ್ರಥಮ ಸರ್ಕಿಟ್‌ ಸಮ್ಮೇಳನದಲ್ಲಿ ನಮ್ಮ ಗುಂಪಿನಿಂದ 13 ಮಂದಿ ದೀಕ್ಷಾಸ್ನಾನ ಪಡೆದರು. ಈಗ ಆ ಪ್ರದೇಶದಲ್ಲಿ 20 ಸಭೆಗಳನ್ನು ನೋಡುವಾಗ ನಾವೆಷ್ಟು ಪುಳಕಿತರಾಗುತ್ತೇವೆ!

ನನಗೆ 1958ರಲ್ಲಿ ಏಬಾ ಈಸ್ಟ್‌ ಸಭೆಯಲ್ಲಿದ್ದ ಕ್ರಿಸ್ಟ್ಯಾನಾ ಆಸ್ವಿಕೇ ಎಂಬ ರೆಗ್ಯುಲರ್‌ ಪಯನೀಯರ್‌ ಸಹೋದರಿಯ ಪರಿಚಯವಾಯಿತು. ನಾನು ಆಕೆಯ ಹುರುಪನ್ನು ಮೆಚ್ಚಿದೆ ಮತ್ತು ಆ ವರುಷದ ಡಿಸೆಂಬರ್‌ನಲ್ಲಿ ನಾವು ವಿವಾಹವಾದೆವು. ನಮ್ಮ ಆಧ್ಯಾತ್ಮಿಕ ಸಹೋದರರ ಸಭೆಗಳನ್ನು ಭೇಟಿ ಮಾಡಿ, ಅವರನ್ನು ಬಲಪಡಿಸುವಂತೆ ನನ್ನನ್ನು 1959ರ ಆರಂಭದಲ್ಲಿ ಸಂಚರಣ ಮೇಲ್ವಿಚಾರಕನಾಗಿ ನೇಮಿಸಲಾಯಿತು. ಅಂದಿನಿಂದ 1972ರ ತನಕ ನಾನೂ ನನ್ನ ಪತ್ನಿಯೂ ನೈಜೀರಿಯದ ಪೂರ್ವ ಮತ್ತು ಮಧ್ಯಪಶ್ಚಿಮ ಭಾಗದಲ್ಲಿರುವ ಯೆಹೋವನ ಜನರ ಹೆಚ್ಚುಕಡಮೆ ಎಲ್ಲ ಸಭೆಗಳನ್ನು ಸಂದರ್ಶಿಸಿದೆವು.

ಸಭೆಗಳು ದೂರದೂರದಲ್ಲಿದ್ದವು ಮತ್ತು ನಮ್ಮ ಪ್ರಯಾಣದ ಮುಖ್ಯ ಮಾಧ್ಯಮ ಸೈಕಲಾಗಿತ್ತು. ನಾವು ದೊಡ್ಡ ನಗರಗಳ ಸಭೆಗಳಲ್ಲಿ ಸೇವೆಮಾಡುತ್ತಿದ್ದಾಗ ನಮ್ಮ ಸಹೋದರರು ನಮ್ಮನ್ನು ಮುಂದಿನ ಸಭೆಗೆ ಕಳುಹಿಸಲು ಟ್ಯಾಕ್ಸಿಗಳನ್ನು ಏರ್ಪಡಿಸುತ್ತಿದ್ದರು. ನಾವಿದ್ದಂಥ ಕೆಲವೆಡೆಗಳಲ್ಲಿ ಮಣ್ಣಿನ ನೆಲವಿತ್ತು ಮತ್ತು ಒಳಛಾವಣಿಗಳಿಲ್ಲದ ಕೋಣೆಗಳಿದ್ದವು. ತಾಳೆ ಜಾತಿಯ ರ್ಯಾಫಿಅ ಮರದ ಕಂಬಗಳಿಂದ ಮಾಡಿದ ಮಂಚದ ಮೇಲೆ ನಾವು ಮಲಗಿದೆವು. ಕೆಲವು ಮಂಚಗಳಲ್ಲಿ ಹುಲ್ಲಿನ ಹಾಸಿಗೆಗಳಿದ್ದರೂ ಇನ್ನು ಕೆಲವು ಮಂಚಗಳಲ್ಲಿ ಹಾಸಿಗೆಯೇ ಇರಲಿಲ್ಲ. ಆಹಾರದ ಪ್ರಮಾಣವಾಗಲಿ ಗುಣಮಟ್ಟವಾಗಲಿ ನಮಗೆ ಸಮಸ್ಯೆಯಾಗಿರಲಿಲ್ಲ. ಈ ಹಿಂದೆ ಕೇವಲ ಅತ್ಯಾವಶ್ಯಕ ವಸ್ತುಗಳಲ್ಲಿ ಸಂತೃಪ್ತರಾಗಿದ್ದ ನಾವು ಕೊಡಲ್ಪಟ್ಟ ಯಾವುದೇ ಆಹಾರದಲ್ಲಿ ಆನಂದಿಸಿದೆವು. ಮತ್ತು ಇದನ್ನು ನಮ್ಮ ಆತಿಥೇಯರು ಮಾನ್ಯ ಮಾಡಿದರು. ಆ ದಿನಗಳಲ್ಲಿ ಕೆಲವು ನಗರಗಳಲ್ಲಿ ವಿದ್ಯುಚ್ಛಕ್ತಿ ಇಲ್ಲದಿದ್ದುದರಿಂದ ನಾವು ಯಾವಾಗಲೂ ನಮ್ಮೊಂದಿಗೆ ಸೀಮೆ ಎಣ್ಣೆಯ ಲಾಂದ್ರವನ್ನು ಕೊಂಡೊಯ್ಯುತ್ತಿದ್ದೆವು. ಆದರೆ ಕಷ್ಟಕರ ಪರಿಸ್ಥಿತಿಗಳ ಹೊರತೂ ನಮಗೆ ಸಭೆಗಳಲ್ಲಿ ಅನೇಕ ಸಂತೋಷದ ಸಮಯಗಳಿದ್ದವು.

ಆ ವರುಷಗಳಲ್ಲಿ, “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು” ಎಂಬ ಅಪೊಸ್ತಲ ಪೌಲನ ಮಾತುಗಳ ಮೌಲ್ಯವನ್ನು ನಮಗೆ ಗ್ರಹಿಸಿಕೊಳ್ಳಲು ಸಾಧ್ಯವಾಯಿತು. (1 ತಿಮೊಥೆಯ 6:8) ಕಷ್ಟಗಳ ಮಧ್ಯದಲ್ಲೂ ತೃಪ್ತನಾಗಿರುವಂತೆ ಸಹಾಯಮಾಡಿದ ಒಂದು ಗುಟ್ಟನ್ನು ಪೌಲನು ಕಲಿತುಕೊಂಡನು. ಅದೇನು? ಅವನು ವಿವರಿಸಿದ್ದು: “ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ.” ನಾವು ಅದೇ ಗುಟ್ಟನ್ನು ಕಲಿತುಕೊಂಡೆವು. ಪೌಲನು ಹೀಗೂ ಹೇಳಿದನು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:12, 13) ನಮ್ಮ ಸನ್ನಿವೇಶದಲ್ಲಿ ಇದೆಷ್ಟು ನಿಜವಾಗಿ ಪರಿಣಮಿಸಿತು! ನಾವು ಸಂತೃಪ್ತಿ, ಪೂರ್ಣ ಪ್ರಮಾಣದ ಭಕ್ತಿವರ್ಧಕ ಕ್ರಿಸ್ತೀಯ ಚಟುವಟಿಕೆಗಳು ಮತ್ತು ಮನಶ್ಶಾಂತಿಯಿಂದ ಆಶೀರ್ವದಿಸಲ್ಪಟ್ಟೆವು.

ಕುಟುಂಬವಾಗಿ ಸಭೆಗಳಿಗೆ ಸೇವೆಸಲ್ಲಿಸುವುದು

ಇಸವಿ 1959ರ ಅಂತ್ಯಭಾಗದಲ್ಲಿ ನಮ್ಮ ಪ್ರಥಮ ಪುತ್ರ ಜೋಎಲ್‌ ಹುಟ್ಟಿದನು ಮತ್ತು ನಂತರ 1962ರಲ್ಲಿ ಎರಡನೆಯ ಮಗ ಸ್ಯಾಮ್ವೆಲ್‌ ಹುಟ್ಟಿದನು. ಕ್ರಿಸ್ಟ್ಯಾನಾಳೂ ನಾನೂ ಈ ಹುಡುಗರೊಂದಿಗೆ ಸಭೆಗಳನ್ನು ಸಂದರ್ಶಿಸುವುದನ್ನು ಮುಂದುವರಿಸಿದೆವು. 1967ರಲ್ಲಿ ನೈಜೀರಿಯದ ಅಂತರ್ಯುದ್ಧವು ಆರಂಭವಾಯಿತು. ಎಡೆಬಿಡದ ವಿಮಾನದಾಳಿಗಳ ಕಾರಣ ಶಾಲೆಗಳು ಮುಚ್ಚಲ್ಪಟ್ಟವು. ಸಂಚರಣ ಕೆಲಸದಲ್ಲಿ ನನ್ನ ಜೊತೆಯಲ್ಲಿ ಬರುವುದಕ್ಕೆ ಮೊದಲು ನನ್ನ ಹೆಂಡತಿ ಒಬ್ಬ ಶಾಲಾ ಶಿಕ್ಷಕಿಯಾಗಿದ್ದುದರಿಂದ, ಆಕೆ ಯುದ್ಧಕಾಲದಲ್ಲಿ ಮಕ್ಕಳಿಗೆ ಮನೆಯಲ್ಲೇ ಕಲಿಸಿದಳು. ಆರು ವರ್ಷ ಪ್ರಾಯದೊಳಗೆ ಸ್ಯಾಮ್ವೆಲ್‌ಗೆ ಓದು ಬರಹ ಬರುತ್ತಿತ್ತು. ಯುದ್ಧಾನಂತರ ಅವನು ಶಾಲೆಗೆ ಸೇರಿದಾಗ, ಅವನು ತನ್ನ ಸಮಾನಸ್ಥರಿಗಿಂತ ಎರಡು ತರಗತಿ ಮುಂದಿದ್ದನು.

ಸಂಚರಣ ಕಾರ್ಯದಲ್ಲಿರುತ್ತ ಮಕ್ಕಳನ್ನು ಬೆಳೆಸುವುದರಲ್ಲಿರುವ ಕಷ್ಟಗಳನ್ನು ನಾವು ಆ ಸಮಯದಲ್ಲಿ ಪೂರ್ಣವಾಗಿ ಗ್ರಹಿಸಿರಲಿಲ್ಲ. ಆದರೆ 1972ರಲ್ಲಿ ಸ್ಪೆಷಲ್‌ ಪಯನೀಯರರಾಗಿ ಸೇವೆಮಾಡುವಂತೆ ನೇಮಿಸಲ್ಪಟ್ಟದ್ದು ನಮಗೆ ಪ್ರಯೋಜನಕರವಾಗಿ ಪರಿಣಮಿಸಿತು. ಇದರಿಂದಾಗಿ ನಾವು ಒಂದೇ ಸ್ಥಳದಲ್ಲಿದ್ದು ನಮ್ಮ ಕುಟುಂಬದ ಆಧ್ಯಾತ್ಮಿಕತೆಗೆ ಯೋಗ್ಯ ಗಮನವನ್ನು ಕೊಡುವಂತಾಯಿತು. ಆರಂಭದಲ್ಲೇ, ನಾವು ನಮ್ಮ ಹುಡುಗರಿಗೆ ದೈವಿಕ ಸಂತೃಪ್ತಿಯ ಮೌಲ್ಯವನ್ನು ಕಲಿಸಿದೆವು. ಸ್ಯಾಮ್ವೆಲ್‌ 1973ರಲ್ಲಿ ದೀಕ್ಷಾಸ್ನಾನ ಪಡೆದನು ಮತ್ತು ಜೋಎಲ್‌ ಅದೇ ವರುಷದಲ್ಲಿ ರೆಗ್ಯುಲರ್‌ ಪಯನೀಯರ್‌ ಸೇವೆಗೆ ಇಳಿದನು. ನಮ್ಮ ಇಬ್ಬರು ಗಂಡುಮಕ್ಕಳೂ ಒಳ್ಳೇ ಕ್ರೈಸ್ತ ಸ್ತ್ರೀಯರನ್ನು ವಿವಾಹವಾಗಿ, ಈಗ ತಮ್ಮದೇ ಆದ ಕುಟುಂಬಗಳನ್ನು ಸತ್ಯದಲ್ಲಿ ಬೆಳೆಸುತ್ತಿದ್ದಾರೆ.

ಆಂತರಿಕ ಕಲಹದಿಂದುಂಟಾದ ದುರವಸ್ಥೆ

ಅಂತರ್ಯುದ್ಧವು ಶುರುವಾದಾಗ ನಾನು ಕುಟುಂಬ ಸಮೇತ ಓನೀಚಾದಲ್ಲಿರುವ ಸಭೆಯೊಂದರಲ್ಲಿ ಸರ್ಕಿಟ್‌ ಮೇಲ್ವಿಚಾರಕನಾಗಿ ಸೇವೆಮಾಡುತ್ತಿದ್ದೆ. ಪ್ರಾಪಂಚಿಕ ವಸ್ತುಗಳನ್ನು ಶೇಖರಿಸುವುದು ಅಥವಾ ಅವುಗಳಲ್ಲಿ ಭರವಸೆಯಿಡುವುದು ಎಷ್ಟು ವ್ಯರ್ಥವೆಂಬುದನ್ನು ಆ ಯುದ್ಧ ನಮ್ಮ ಮನಸ್ಸಿನಲ್ಲಿ ಇನ್ನೂ ಹೆಚ್ಚಾಗಿ ಅಚ್ಚೊತ್ತಿಸಿತು. ಜನರು ತಮಗೆ ಅಮೂಲ್ಯವಾಗಿದ್ದ ಸ್ವತ್ತುಗಳನ್ನು ಬೀದಿಗಳಲ್ಲಿ ಬಿಟ್ಟುಬಿಟ್ಟು ತಮ್ಮ ಜೀವವನ್ನು ಕಾಪಾಡಿಕೊಳ್ಳಲಿಕ್ಕಾಗಿ ಓಡಿಹೋಗುತ್ತಿರುವುದನ್ನು ನಾನು ನೋಡಿದ್ದೇನೆ.

ಯುದ್ಧ ತೀವ್ರವಾದಂತೆ, ಎಲ್ಲ ಸಮರ್ಥ ಪುರುಷರನ್ನು ಸೈನ್ಯಕ್ಕೆ ಒತ್ತಾಯದಿಂದ ಸೇರಿಸಲಾಯಿತು. ಹೀಗೆ ಸೇರಲು ನಿರಾಕರಿಸಿದ ಅನೇಕ ಸಹೋದರರನ್ನು ಚಿತ್ರಹಿಂಸೆಗೊಳಪಡಿಸಲಾಯಿತು. ನಾವು ಮೊದಲಿನಂತೆ ಸ್ವತಂತ್ರವಾಗಿ ಸಂಚರಿಸಲು ಸಾಧ್ಯವಿರಲಿಲ್ಲ. ಆಹಾರದ ಅಭಾವ ದೇಶದಲ್ಲಿ ಮಹಾ ಗೊಂದಲವನ್ನು ಉಂಟುಮಾಡಿತು. ಅರ್ಧ ಕಿಲೊಗ್ರ್ಯಾಮ್‌ ಕಸಾವ ಗೆಣಸಿನ ಕ್ರಯ 7 ಸೆಂಟ್ಸ್‌ನಿಂದ 14 ಡಾಲರುಗಳಿಗೆ [3 ರೂಪಾಯಿಯಿಂದ 660 ರೂಪಾಯಿ] ಏರಿತು. ಒಂದು ಕಪ್‌ ಉಪ್ಪಿನ ಬೆಲೆ 8 ಡಾಲರುಗಳಿಂದ 42 ಡಾಲರುಗಳಿಗೆ [ರೂ. 380ರಿಂದ ರೂ. 2000ಕ್ಕೆ] ಏರಿತು. ಹಾಲು, ಬೆಣ್ಣೆ ಮತ್ತು ಸಕ್ಕರೆ ಸಿಗುತ್ತಲೇ ಇರಲಿಲ್ಲ. ಬದುಕಿ ಉಳಿಯಲಿಕ್ಕಾಗಿ ನಾವು ಕಾಯಿ ಪರಂಗಿಯನ್ನು ಅರೆದು ಸ್ವಲ್ಪ ಕಸಾವ ಹಿಟ್ಟಿನೊಂದಿಗೆ ಬೆರೆಸುತ್ತಿದ್ದೆವು. ಮತ್ತು ನಾವು ಮಿಡತೆಗಳನ್ನು, ಕಸಾವ ಗೆಣಸಿನ ಸಿಪ್ಪೆಯನ್ನು, ದಾಸವಾಳ ಎಲೆಗಳನ್ನು, ಆನೆ ಹುಲ್ಲನ್ನು, ನಮಗೆ ಲಭ್ಯವಾಗುವ ಯಾವುದೇ ಎಲೆಗಳನ್ನು ತಿನ್ನುತ್ತಿದ್ದೆವು. ಮಾಂಸವು ಭೋಗದ ವಸ್ತುವೇ ಆಗಿದ್ದುದರಿಂದ ಮಕ್ಕಳಿಗೆ ತಿನ್ನಲಿಕ್ಕಾಗಿ ನಾನು ಹಲ್ಲಿಗಳನ್ನು ಹಿಡಿಯುತ್ತಿದ್ದೆ. ಹೀಗಿದ್ದರೂ, ಸ್ಥಿತಿ ಎಷ್ಟೇ ವಿಷಮವಾಗಿರಲಿ, ಯೆಹೋವನು ನಮ್ಮನ್ನು ಸದಾ ಪೋಷಿಸಿದನು.

ಆದರೆ ಯುದ್ಧದಿಂದುಂಟಾದ ಆಧ್ಯಾತ್ಮಿಕ ಅಭಾವವು ಇನ್ನೂ ಹೆಚ್ಚು ಅಪಾಯಕರವಾಗಿತ್ತು. ಹೆಚ್ಚಿನ ಸಹೋದರರು ಯುದ್ಧದ ವಲಯವನ್ನು ಬಿಟ್ಟು ಕಾಡಿಗೊ ಬೇರೆ ಹಳ್ಳಿಗಳಿಗೊ ಓಡಿಹೋದರು. ಮತ್ತು ಹೀಗೆ ಓಡುವಾಗ, ಅವರು ತಮ್ಮ ಬೈಬಲ್‌ ಸಾಹಿತ್ಯಗಳಲ್ಲಿ ಹೆಚ್ಚಿನದನ್ನು ಇಲ್ಲವೆ ಎಲ್ಲವನ್ನು ಕಳೆದುಕೊಂಡಿದ್ದರು. ಇದಕ್ಕೆ ಕೂಡಿಸಿ, ಸರಕಾರೀ ಸೈನ್ಯಗಳು ಹಾಕಿದ್ದ ದಿಗ್ಬಂಧನವು ಬಿಯಾಫ್ರ ಪ್ರದೇಶಕ್ಕೆ ಹೊಸ ಬೈಬಲ್‌ ಸಾಹಿತ್ಯ ಬರುವುದನ್ನು ತಡೆಯಿತು. ಹೆಚ್ಚಿನ ಸಭೆಗಳು ಕೂಟಗಳನ್ನು ನಡೆಸಲು ಪ್ರಯತ್ನಿಸಿದರೂ, ಬ್ರಾಂಚ್‌ ಆಫೀಸಿನ ಮಾರ್ಗದರ್ಶನೆ ಅವುಗಳಿಗೆ ತಲಪದಿದ್ದುದರಿಂದ ಸಹೋದರರ ಆಧ್ಯಾತ್ಮಿಕತೆಯು ಬಾಧಿಸಲ್ಪಟ್ಟಿತು.

ಆಧ್ಯಾತ್ಮಿಕ ಹಸಿವನ್ನು ಎದುರಿಸುವುದು

ಸಂಚರಣ ಮೇಲ್ವಿಚಾರಕರು ಪ್ರತಿಯೊಂದು ಸಭೆಗೆ ಭೇಟಿಮಾಡುವ ಏರ್ಪಾಡನ್ನು ತಮಗೆ ಸಾಧ್ಯವಿರುವಷ್ಟರ ಮಟ್ಟಿಗೆ ಮುಂದುವರಿಸಿದರು. ಅನೇಕ ಮಂದಿ ಸಹೋದರರು ಪಟ್ಟಣಗಳನ್ನು ಬಿಟ್ಟು ಓಡಿಹೋಗಿದ್ದುದರಿಂದ, ನಾನು ಅವರಿಗಾಗಿ ಸಾಧ್ಯವಿರುವಲ್ಲೆಲ್ಲ ಹುಡುಕಿದೆ. ಒಂದು ಸಂದರ್ಭದಲ್ಲಿ, ನಾನು ನನ್ನ ಹೆಂಡತಿ, ಮಕ್ಕಳನ್ನು ಒಂದು ಸುರಕ್ಷಿತ ಸ್ಥಳದಲ್ಲಿ ಬಿಟ್ಟು, ಆರು ವಾರ ಒಬ್ಬನೇ, ವಿವಿಧ ಗ್ರಾಮಗಳಲ್ಲಿ ಮತ್ತು ಕಾಡು ಪ್ರದೇಶಗಳಲ್ಲಿ ಸಹೋದರರನ್ನು ಹುಡುಕುತ್ತಾ ಪಯಣಿಸಿದೆ.

ನಾನು ಆಬೂಂಕಾ ನಗರದ ಒಂದು ಸಭೆಯಲ್ಲಿ ಸೇವೆಮಾಡುತ್ತಿದ್ದಾಗ, ಯೆಹೋವನ ಸಾಕ್ಷಿಗಳ ಒಂದು ದೊಡ್ಡ ಗುಂಪು ಓಕೀಗ್ವೇ ಜಿಲ್ಲೆಯ ಈಸೂಓಚೀ ಎಂಬ ಕ್ಷೇತ್ರದಲ್ಲಿದೆಯೆಂಬ ಸುದ್ದಿ ಕೇಳಿದೆ. ಆದುದರಿಂದ ಆ ಕ್ಷೇತ್ರದಲ್ಲಿನ ಸಹೋದರರು ಊಮ್ವಾಕೂ ಹಳ್ಳಿಯ ಗೇರುಹಣ್ಣಿನ ತೋಟದಲ್ಲಿ ಕೂಡಿಬರಬೇಕೆಂಬ ಸುದ್ದಿಯನ್ನು ಹಬ್ಬಿಸುವಂತೆ ನಾನು ಒಬ್ಬರನ್ನು ಕೇಳಿಕೊಂಡೆ. ನಾನೂ ಒಬ್ಬ ವೃದ್ಧ ಸಹೋದರನೂ ಸೈಕಲ್‌ಗಳ ಮೇಲೆ 15 ಕಿಲೊಮೀಟರ್‌ ಸವಾರಿ ಮಾಡುತ್ತ ಆ ತೋಟಕ್ಕೆ ಬಂದೆವು. ಅಲ್ಲಿ ಸ್ತ್ರೀಯರು ಮತ್ತು ಮಕ್ಕಳನ್ನೊಳಗೊಂಡು ಸುಮಾರು 200 ಜನರು ಸೇರಿಬಂದಿದ್ದರು. ಮತ್ತು ಒಬ್ಬ ಪಯನೀಯರ್‌ ಸಹೋದರಿಯ ಸಹಾಯದಿಂದ ನಾನು, ಲೋಮಾರಾ ಕಾಡುಪ್ರದೇಶದಲ್ಲಿ ಆಶ್ರಯ ಪಡೆದಿದ್ದ ಇನ್ನು ನೂರು ಸಾಕ್ಷಿಗಳನ್ನು ಕಂಡುಹಿಡಿಯಲು ಶಕ್ತನಾದೆ.

ಯುದ್ಧದಿಂದ ಧ್ವಂಸವಾಗಿದ್ದ ಓವೆರೀ ಪಟ್ಟಣದಲ್ಲಿ ಜೀವಿಸುತ್ತಿದ್ದ ನಿರ್ಭೀತ ಸಹೋದರರ ಒಂದು ಗುಂಪಿನಲ್ಲಿ ಲಾರೆನ್ಸ್‌ ಊಗ್ವೇಗ್ಬೂ ಒಬ್ಬನಾಗಿದ್ದನು. ಅವನು ಓಹಾಜೀ ಪ್ರದೇಶದಲ್ಲಿ ಅನೇಕಾನೇಕ ಸಾಕ್ಷಿಗಳಿದ್ದಾರೆಂದು ಹೇಳಿದನು. ಆದರೆ ಸೈನಿಕರು ಆ ಪ್ರದೇಶವನ್ನು ವಶಪಡಿಸಿಕೊಂಡಿದ್ದರಿಂದ ಈ ಸಹೋದರರಿಗೆ ಸ್ವತಂತ್ರವಾಗಿ ತಿರುಗಾಡಲು ಆಗುತ್ತಿದ್ದಿಲ್ಲ. ನಾವಿಬ್ಬರು ರಾತ್ರಿಸಮಯದಲ್ಲಿ ಅಲ್ಲಿಗೆ ಸೈಕಲಿನಲ್ಲಿ ಹೋಗಿ, ಒಬ್ಬ ಸಹೋದರನ ಹಿತ್ತಲಿನಲ್ಲಿ ಸುಮಾರು 120 ಮಂದಿ ಸಹೋದರರನ್ನು ಭೇಟಿಯಾದೆವು. ಅಡಗಿಕೊಂಡಿದ್ದ ಇನ್ನು ಕೆಲವು ಸಹೋದರರನ್ನು ಭೇಟಿಮಾಡಲಿಕ್ಕಾಗಿಯೂ ನಾವು ಈ ಅವಕಾಶವನ್ನು ಉಪಯೋಗಿಸಿದೆವು.

ತಮ್ಮ ಮನೆಬಿಟ್ಟು ಓಡಿಹೋಗಬೇಕಾದ ಇತರ ಸಹೋದರರನ್ನು ನಾನು ಕಂಡುಹಿಡಿಯುವಂತೆ ಸಹಾಯಮಾಡಲು ಸಹೋದರ ಐಸಕ್‌ ವಾಗ್ವೂ ತಮ್ಮ ಜೀವವನ್ನೇ ಅಪಾಯಕ್ಕೊಳಪಡಿಸಿಕೊಂಡರು. ಎಗ್ಬೂ ಏಟ್ಚೇ ಎಂಬ ಸ್ಥಳದಲ್ಲಿ ಕೂಡಿಬಂದಿದ್ದ 150 ಮಂದಿ ಸಹೋದರರನ್ನು ಭೇಟಿಮಾಡಲಿಕ್ಕೋಸ್ಕರ ಅವರು ನನ್ನನ್ನು ಒಂದು ಚಿಕ್ಕ ದೋಣಿಯಲ್ಲಿ ಕುಳ್ಳಿರಿಸಿ ಓಟಾಮೀರೀ ನದಿಯಾಚೆ ಕೊಂಡೊಯ್ದರು. ಅಲ್ಲಿದ್ದ ಒಬ್ಬ ಸಹೋದರನು ಉದ್ಗರಿಸಿದ್ದು: “ಇದು ನನ್ನ ಜೀವನದಲ್ಲಿಯೇ ಅತ್ಯುತ್ತಮ ದಿನ! ನಾನು ಪುನಃ ಒಬ್ಬ ಸರ್ಕಿಟ್‌ ಮೇಲ್ವಚಾರಕನನ್ನು ನೋಡಲು ಜೀವದಿಂದಿರುವೆನೆಂದು ಎಣಿಸಿಯೇ ಇರಲಿಲ್ಲ. ಈ ತೀಕ್ಷ್ಣ ಯುದ್ಧವು ನಡೆಯುತ್ತಿರುವಾಗ ನಾನೀಗ ಸತ್ತರೂ ತೃಪ್ತನೇ ಸರಿ.”

ಸೈನ್ಯಕ್ಕೆ ಒತ್ತಾಯದಿಂದ ಭರ್ತಿಮಾಡಲ್ಪಡುವ ಅಪಾಯದಲ್ಲಿ ನಾನಿದ್ದರೂ ನಾನು ಪದೇಪದೇ ಯೆಹೋವನ ಕಾಪನ್ನು ಅನುಭವಿಸಿದೆ. ಒಂದು ಅಪರಾಹ್ನ ಸುಮಾರು 250 ಸಹೋದರರನ್ನು ಭೇಟಿಯಾದ ಮೇಲೆ ನನ್ನ ವಾಸಸ್ಥಳಕ್ಕೆ ನಾನು ಹಿಂದಿರುಗುತ್ತಿದ್ದಾಗ, ಮಿಲಿಟರಿ ಕಮಾಂಡೊಗಳ ಒಂದು ಸೈನಿಕ ಪಡೆಯು ರಸ್ತೆಯ ಅಡ್ಡಗಟ್ಟಿನಲ್ಲಿ ನನ್ನನ್ನು ನಿಲ್ಲಿಸಿತು. “ನೀನೇಕೆ ಸೈನ್ಯಕ್ಕೆ ಸೇರಿಲ್ಲ?” ಎಂದು ಅವರು ಕೇಳಿದರು. ನಾನು ದೇವರ ರಾಜ್ಯವನ್ನು ಸಾರುವ ಒಬ್ಬ ಮಿಷನೆರಿ ಎಂದು ವಿವರಿಸಿದೆ. ಅವರು ನನ್ನನ್ನು ದಸ್ತಗಿರಿ ಮಾಡಲು ನಿರ್ಧರಿಸಿದ್ದಾರೆಂದು ನಾನು ಗ್ರಹಿಸಿದೆ. ಒಂದು ಸಣ್ಣ ಮೌನ ಪ್ರಾರ್ಥನೆಯ ಬಳಿಕ ನಾನು ಅವರ ಕ್ಯಾಪ್ಟನನಿಗೆ, “ನನ್ನನ್ನು ದಯವಿಟ್ಟು ಬಿಟ್ಟುಬಿಡಿ” ಎಂದು ಕೇಳಿಕೊಂಡೆ. ಆಶ್ಚರ್ಯಕರವಾಗಿ, ಅವನು, “ನಾವು ನಿನ್ನನ್ನು ಹೋಗುವಂತೆ ಬಿಡಬೇಕೆಂದು ನೀನು ಹೇಳುವುದೊ?” ಎಂದು ಕೇಳಿದನು. “ಹೌದು, ನನ್ನನ್ನು ಬಿಟ್ಟುಬಿಡಿ” ಎಂದೆ ನಾನು. ಆಗ ಅವನು, “ನೀನು ಹೋಗಬಹುದು” ಎಂದನು. ಅಲ್ಲಿದ್ದ ಯಾವ ಸೈನಿಕನೂ ಒಂದು ಮಾತನ್ನೂ ಆಡಲಿಲ್ಲ.​—⁠ಕೀರ್ತನೆ 65:​1, 2.

ಸಂತೃಪ್ತಿಯು ಇನ್ನೂ ಹೆಚ್ಚಿನ ಆಶೀರ್ವಾದಗಳನ್ನು ತರುತ್ತದೆ

ಯುದ್ಧವು 1970ರಲ್ಲಿ ನಿಂತ ಬಳಿಕ, ನಾನು ಸರ್ಕಿಟ್‌ ಕೆಲಸದಲ್ಲಿ ಸೇವೆಯನ್ನು ಮುಂದುವರಿಸಿದೆ. ಸಭೆಗಳ ಪುನರ್‌ಸಂಘಟನೆಯಲ್ಲಿ ಸಹಾಯ ಮಾಡುವುದು ನನಗಿದ್ದ ಸುಯೋಗವಾಗಿತ್ತು. ಆ ಬಳಿಕ, ಕ್ರಿಸ್ಟ್ಯಾನಾಳೂ ನಾನೂ 1976ರ ತನಕ ಸ್ಪೆಷಲ್‌ ಪಯನೀಯರರಾಗಿ ಸೇವೆಸಲ್ಲಿಸಿದ ಅನಂತರ, ನಾನು ಪುನಃ ಸರ್ಕಿಟ್‌ ಮೇಲ್ವಿಚಾರಕನಾಗಿ ನೇಮಕಗೊಂಡೆ. ಆ ವರ್ಷದ ಮಧ್ಯಭಾಗದಲ್ಲಿ, ನನ್ನನ್ನು ಡಿಸ್ಟ್ರಿಕ್ಟ್‌ ಕೆಲಸಕ್ಕೆ ನೇಮಿಸಲಾಯಿತು. ಏಳು ವರ್ಷಗಳಾನಂತರ, ನನ್ನನ್ನೂ ನನ್ನ ಹೆಂಡತಿಯನ್ನೂ, ಯಾವುದು ಈಗ ನಮ್ಮ ಮನೆಯಾಗಿದೆಯೊ ಆ ಯೆಹೋವನ ಸಾಕ್ಷಿಗಳ ನೈಜೀರಿಯ ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡುವಂತೆ ಆಮಂತ್ರಿಸಲಾಯಿತು. ಇಲ್ಲಿ, ನಾವು ಆ ಅಂತರ್ಯುದ್ಧದ ಮತ್ತು ಬೇರೆ ಸಮಯಗಳಲ್ಲಿ ಭೇಟಿಯಾಗಿದ್ದ ಹಾಗೂ ಈಗಲೂ ನಂಬಿಗಸ್ತಿಕೆಯಿಂದ ಯೆಹೋವನನ್ನು ಸೇವಿಸುತ್ತಿರುವ ಸಹೋದರ ಸಹೋದರಿಯರನ್ನು ಪುನಃ ನೋಡುವುದು ನಮಗೆ ಯಾವಾಗಲೂ ಮಹಾ ಸಂತೋಷವನ್ನು ತರುತ್ತದೆ.

ಕಳೆದು ಹೋದ ವರುಷಗಳಲ್ಲಿ, ಕ್ರಿಸ್ಟ್ಯಾನಾ ನನಗೆ ಉತ್ತಮ ರೀತಿಯ ಬೆಂಬಲಿಗಳೂ ನಿಷ್ಠಾವಂತ ಸಂಗಾತಿಯೂ ಆಗಿ ಪರಿಣಮಿಸಿದ್ದಾಳೆ. ಆಕೆ 1978ರಂದಿನಿಂದ ಸಹಿಸಿಕೊಂಡಿರುವ ನಿರಂತರವಾದ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಆಕೆಯ ಸಕಾರಾತ್ಮಕ ಮತ್ತು ದೃಢನಿಶ್ಚಯದ ಮನೋಭಾವವು ನಾನು ನನ್ನ ಜವಾಬ್ದಾರಿಗಳನ್ನು ವಹಿಸಿಕೊಂಡು ಮುಂದುವರಿಯುವಂತೆ ಮಾಡಿದೆ. “ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು” ಎಂಬ ಕೀರ್ತನೆಗಾರನ ಮಾತುಗಳ ಸತ್ಯತೆಯನ್ನು ನಾವು ಅನುಭವಿಸಿದ್ದೇವೆ.​—⁠ಕೀರ್ತನೆ 41:⁠3.

ದೇವಪ್ರಭುತ್ವಾತ್ಮಕ ಚಟುವಟಿಕೆಯ ಈ ವರುಷಗಳನ್ನು ಹಿಂದಿರುಗಿ ನೋಡುವಾಗ, ಯೆಹೋವನಿಗೆ ಆತನ ಅದ್ಭುತಕರವಾದ ಆಶೀರ್ವಾದಗಳಿಗಾಗಿ ಉಪಕಾರಸ್ಮರಣೆ ಮಾಡದಿರಲು ನನಗೆ ಸಾಧ್ಯವಾಗುವುದಿಲ್ಲ. ಆತನು ಏನನ್ನು ಒದಗಿಸುತ್ತಾನೊ ಅದರಲ್ಲಿ ಸಂತೃಪ್ತನಾಗಿರುವ ಕಾರಣ, ನಾನು ಮಹಾ ಸಂತೋಷವನ್ನು ಕಂಡುಕೊಂಡಿದ್ದೇನೆಂದು ಖಂಡಿತವಾಗಿಯೂ ಹೇಳಬಲ್ಲೆ. ನನ್ನ ಒಡಹುಟ್ಟಿದವರು, ನನ್ನ ಮಕ್ಕಳು, ಮತ್ತು ಅವರ ಕುಟುಂಬಗಳು, ಹೀಗೆ ಎಲ್ಲರೂ ನನ್ನ ಮತ್ತು ನನ್ನ ಹೆಂಡತಿಯ ಜೊತೆಗೂಡಿ ಯೆಹೋವನನ್ನು ಸೇವಿಸುವುದನ್ನು ನೋಡುವ ಸಂತೋಷವು ಅತುಲ್ಯವಾದ ಆಶೀರ್ವಾದವೇ ಸರಿ. ಯೆಹೋವನು ನನಗೆ ಒಂದು ಸಮೃದ್ಧ ಮತ್ತು ಅರ್ಥಗರ್ಭಿತವಾದ ಜೀವನವನ್ನು ಕೊಟ್ಟು ನನ್ನನ್ನು ತೃಪ್ತಿಪಡಿಸಿದ್ದಾನೆ. ನನ್ನ ಯಾವುದೇ ಅಪೇಕ್ಷೆಯನ್ನು ಆತನು ತೀರಿಸದೆ ಬಿಟ್ಟಿರುವುದಿಲ್ಲ.

[ಪಾದಟಿಪ್ಪಣಿ]

^ ಪ್ಯಾರ. 10 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಈಗ ಮುದ್ರಣವಾಗುತ್ತಿಲ್ಲ.

[ಪುಟ 27ರಲ್ಲಿರುವ ಚೌಕ]

ಸಮಯೋಚಿತ ಏರ್ಪಾಡೊಂದು ಸಹೋದರತ್ವವನ್ನು ಪೋಷಿಸಲು ಸಹಾಯಮಾಡುತ್ತದೆ

ಉತ್ತರ ಮತ್ತು ಪೂರ್ವ ನೈಜೀರಿಯದ ಕುಲಗಳ ಮಧ್ಯೆ 1960ಗಳ ಮಧ್ಯಭಾಗದಲ್ಲಿ ಎದ್ದ ದ್ವೇಷೋದ್ರೇಕವು ಗಲಭೆ, ದಂಗೆ, ನಿಯಮರಾಹಿತ್ಯ ಮತ್ತು ಕುಲಸಂಬಂಧದ ಹಿಂಸಾಚಾರಗಳಿಗೆ ನಡೆಸಿತು. ಈ ಬೆಳವಣಿಗೆಗಳು, ಈ ತಿಕ್ಕಾಟದಲ್ಲಿ ಕಟ್ಟುನಿಟ್ಟಾಗಿ ತಟಸ್ಥರಾಗಿರಲು ಬಯಸಿದ ಯೆಹೋವನ ಸಾಕ್ಷಿಗಳ ಮೇಲೆ ಮಹಾ ಒತ್ತಡವನ್ನು ತಂದೊಡ್ಡಿತು. ಇವರಲ್ಲಿ ಸುಮಾರು 20 ಮಂದಿ ಕೊಲ್ಲಲ್ಪಟ್ಟರು. ಹೆಚ್ಚಿನವರು ತಮ್ಮ ಎಲ್ಲಾ ಸ್ವತ್ತುಗಳನ್ನು ಕಳೆದುಕೊಂಡರು.

ಇಸವಿ 1967ರ ಮೇ 30ರಂದು, ನೈಜೀರಿಯದ ಪೂರ್ವ ಪ್ರಾಂತ್ಯಗಳು ಸಂಯುಕ್ತ ನೈಜೀರಿಯದಿಂದ ಪ್ರತ್ಯೇಕವಾಗಿ ಬಿಯಾಫ್ರ ಗಣರಾಜ್ಯವನ್ನು ರಚಿಸಿದವು. ಸಂಯುಕ್ತ ಸೈನ್ಯವನ್ನು ಸಜ್ಜುಗೊಳಿಸಲಾಯಿತು ಮತ್ತು ಬಿಯಾಫ್ರದ ವಿರುದ್ಧ ಸಂಪೂರ್ಣ ದಿಗ್ಬಂಧನವನ್ನು ಹಾಕಲಾಯಿತು. ಆಗ ರಕ್ತಮಯ ಹಾಗೂ ಹಿಂಸಾತ್ಮಕ ಅಂತರ್ಯುದ್ಧವೊಂದು ಆರಂಭಗೊಂಡಿತು.

ಬಿಯಾಫ್ರ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳು ತೋರಿಸಿದ ತಾಟಸ್ಥ್ಯ ಅವರನ್ನು ಆಕ್ರಮಣದ ಗುರಿಹಲಗೆಯನ್ನಾಗಿ ಮಾಡಿತು. ವಾರ್ತಾಪತ್ರಗಳು ಬಿರುಸಿನ ಹೇಳಿಕೆಗಳನ್ನು ಮಾಡಿ, ಸಾರ್ವಜನಿಕರ ಅಭಿಪ್ರಾಯ ಅವರಿಗೆ ವಿರೋಧವಾಗಿರುವಂತೆ ಕೆರಳಿಸಿತು. ಆದರೆ ತನ್ನ ಸೇವಕರು ಆಧ್ಯಾತ್ಮಿಕ ಆಹಾರವನ್ನು ಪಡೆಯುವಂತೆ ಯೆಹೋವನು ಸಾಧ್ಯಮಾಡಿದನು. ಅದು ಹೇಗೆ?

ಒಬ್ಬ ಸರಕಾರೀ ಅಧಿಕಾರಿಯನ್ನು 1968ರಲ್ಲಿ ಯೂರೋಪಿನಲ್ಲಿ ಒಂದು ಹುದ್ದೆಗೂ ಇನ್ನೊಬ್ಬರನ್ನು ಬಿಯಾಫ್ರದ ವಿಮಾನಹಾದಿಯನ್ನು ನೋಡಿಕೊಳ್ಳುವುದಕ್ಕೂ ನೇಮಿಸಲಾಯಿತು. ಇವರಿಬ್ಬರೂ ಸಾಕ್ಷಿಗಳಾಗಿದ್ದರು. ಈ ನೇಮಕವು ಅವರನ್ನು ಬಿಯಾಫ್ರ ಮತ್ತು ಹೊರಗಣ ಲೋಕದ ಮಧ್ಯೆ ಇದ್ದ ಒಂದೇ ಒಂದು ಕೊಂಡಿಯ ಇಕ್ಕಡೆಗಳಲ್ಲಿ ಹಾಕಿತು. ಈ ಇಬ್ಬರು ಸಾಕ್ಷಿಗಳು ಬಿಯಾಫ್ರದೊಳಗೆ ಆಧ್ಯಾತ್ಮಿಕ ಆಹಾರವನ್ನು ಕೊಂಡೊಯ್ಯುವ ಅಪಾಯಕರ ಕೆಲಸವನ್ನು ಮಾಡಲು ತಮ್ಮನ್ನೇ ನೀಡಿಕೊಂಡರು. ಸಂಕಟದಲ್ಲಿದ್ದ ನಮ್ಮ ಸಹೋದರರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲೂ ಅವರು ಸಹಾಯ ಮಾಡಿದರು. ಈ ಇಬ್ಬರು ಸಹೋದರರರು ಈ ಅತ್ಯಾವಶ್ಯಕವಾದ ಏರ್ಪಾಡನ್ನು 1970ರಲ್ಲಿ ಆ ಯುದ್ಧವು ಮುಗಿಯುವ ತನಕ, ಯುದ್ಧಾವಧಿಯಾದ್ಯಂತ ಮುಂದುವರಿಯುವಂತೆ ಮಾಡಲು ಶಕ್ತರಾದರು. ಅವರಲ್ಲಿ ಒಬ್ಬನು ಅನಂತರ ಹೇಳಿದ್ದು: “ಈ ಏರ್ಪಾಡು ಮನುಷ್ಯರು ಯೋಜಿಸಸಾಧ್ಯವಿದ್ದ ಯಾವುದೇ ಏರ್ಪಾಡನ್ನು ಮೀರಿದಂಥದ್ದಾಗಿತ್ತು.”

[ಪುಟ 23ರಲ್ಲಿರುವ ಚಿತ್ರ]

1956ರಲ್ಲಿ

[ಪುಟ 25ರಲ್ಲಿರುವ ಚಿತ್ರ]

1965ರಲ್ಲಿ, ನಮ್ಮ ಹುಡುಗರಾದ ಜೋಎಲ್‌ ಮತ್ತು ಸ್ಯಾಮ್ವೆಲ್‌ರೊಂದಿಗೆ

[ಪುಟ 26ರಲ್ಲಿರುವ ಚಿತ್ರ]

ಕುಟುಂಬವಾಗಿ ಯೆಹೋವನನ್ನು ಸೇವಿಸುವುದು ಎಂಥ ಒಂದು ಆಶೀರ್ವಾದ!

[ಪುಟ 27ರಲ್ಲಿರುವ ಚಿತ್ರ]

ಇಂದು, ಕ್ರಿಸ್ಟ್ಯಾನಾ ಮತ್ತು ನಾನು ನೈಜೀರಿಯ ಬ್ರಾಂಚ್‌ನಲ್ಲಿ ಸೇವೆ ಮಾಡುತ್ತೇವೆ