ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಂಬಿಗಸ್ತನಾದ ಆಳು’ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ!

‘ನಂಬಿಗಸ್ತನಾದ ಆಳು’ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ!

‘ನಂಬಿಗಸ್ತನಾದ ಆಳು’ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ!

“ನ್ಯಾಯವಿಚಾರಣೆಯು ದೇವರ ಮನೆಯಲ್ಲಿ ಆರಂಭವಾಗಲು ಇದು ನೇಮಿತ ಸಮಯವಾಗಿದೆ.”​—⁠1 ಪೇತ್ರ 4:​17, Nw.

ಸಾ.ಶ. 33ರ ಪಂಚಾಶತ್ತಮದಂದು, ತನ್ನ “ಮನೆಯವರಿಗೆ” ಹೊತ್ತು ಹೊತ್ತಿಗೆ ಆಹಾರವನ್ನು ಒದಗಿಸಲಿಕ್ಕಾಗಿ ಯೇಸು ಒಬ್ಬ ‘ಆಳನ್ನು’ ನೇಮಿಸಿದನು. ಯೇಸು 1914ರಲ್ಲಿ ಅರಸನಾಗಿ ಸಿಂಹಾಸನವನ್ನೇರಿದನು, ಮತ್ತು ಬೇಗನೆ ಆ ‘ಆಳನ್ನು’ ಪರೀಕ್ಷಿಸುವ ಸಮಯ ಬಂತು. ಬಹುಮಟ್ಟಿಗೆ ಆ “ಆಳು” “ನಂಬಿಗಸ್ತನೂ ವಿವೇಕಿಯೂ” ಆಗಿದ್ದನೆಂದು ಅವನು ಕಂಡುಹಿಡಿದನು. ಆದಕಾರಣ, ಯೇಸು ಆ ಆಳನ್ನು “ತನ್ನ ಎಲ್ಲಾ ಆಸ್ತಿಯ ಮೇಲೆ” ನೇಮಿಸಿದನು. (ಮತ್ತಾಯ 24:​45-47) ಆದರೆ ಒಬ್ಬ ಕೆಟ್ಟ ಆಳು ಸಹ ಇದ್ದನು ಮತ್ತು ಅವನು ನಂಬಿಗಸ್ತನೂ ಆಗಿರಲಿಲ್ಲ, ವಿವೇಕಿಯೂ ಆಗಿರಲಿಲ್ಲ.

“ಕೆಟ್ಟ ಆಳು”

2 ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಬಗ್ಗೆ ಚರ್ಚಿಸಿದ ಬಳಿಕ ಕೂಡಲೆ ಯೇಸು ಕೆಟ್ಟ ಆಳಿನ ಬಗ್ಗೆ ಮಾತಾಡಿದನು. ಅವನು ಹೇಳಿದ್ದು: “ಆದರೆ ಆ ಕೆಟ್ಟ ಆಳು​—⁠ನನ್ನ ಯಜಮಾನನು ತಡಮಾಡುತ್ತಾನೆ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ತನ್ನ ಜೊತೆ ಆಳುಗಳನ್ನು ಹೊಡೆಯುವದಕ್ಕೆ ತೊಡಗಿ ಕುಡಿಕರ ಸಂಗಡ ತಿನ್ನುತ್ತಾ ಕುಡಿಯುತ್ತಾ ಇರುವದಾದರೆ, ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾಗಿ ಹೊಡಿಸಿ ಕಪಟಿಗಳಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.” (ಮತ್ತಾಯ 24:48-51) “ಆ ಕೆಟ್ಟ ಆಳು” ಎಂಬ ಅಭಿವ್ಯಕ್ತಿಯು ನಂಬಿಗಸ್ತನೂ ವಿವೇಕಿಯೂ ಆದ ಆಳಿನ ಕುರಿತು ಯೇಸು ಹೇಳಿದ ಹಿಂದಿನ ಮಾತುಗಳಿಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಹೌದು, ಆ “ಕೆಟ್ಟ ಆಳು” ನಂಬಿಗಸ್ತ ಆಳು ವರ್ಗದ ಸದಸ್ಯರೊಳಗಿಂದ ಬಂದಿದ್ದನು. * ಅದು ಹೇಗೆ?

3 ಇಸವಿ 1914ಕ್ಕೆ ಮೊದಲು, ನಂಬಿಗಸ್ತ ಆಳು ವರ್ಗದ ಅನೇಕ ಸದಸ್ಯರಿಗೆ ಆ ವರುಷದಲ್ಲಿ ಪರಲೋಕದಲ್ಲಿ ಮದಲಿಂಗನನ್ನು ಸಂಧಿಸುವ ಬಲವಾದ ನಿರೀಕ್ಷೆಯಿತ್ತು. ಆದರೆ ಅವರ ನಿರೀಕ್ಷೆ ನೆರವೇರಲಿಲ್ಲ. ಇದರಿಂದ ಮತ್ತು ಇನ್ನಿತರ ವಿಕಸನಗಳಿಂದ ಅನೇಕರು ಬೇಸತ್ತರು ಮತ್ತು ಕೆಲವರು ಕಹಿಮನೋಭಾವದವರಾದರು. ಇವರಲ್ಲಿ ಕೆಲವರು ತಮ್ಮ ಹಿಂದಿನ ಸಹೋದರರನ್ನು ಬಾಯಿಮಾತಿನಿಂದ ‘ಹೊಡೆಯಲು’ ತೊಡಗಿ, “ಕುಡಿಕರ” ಅಂದರೆ ಕ್ರೈಸ್ತಪ್ರಪಂಚದ ಧಾರ್ಮಿಕ ಗುಂಪುಗಳ ಸಂಗಡ ಒಂದುಗೂಡಿದರು.​—⁠ಯೆಶಾಯ 28:​1-3; 32:⁠6.

4 ಈ ಮಾಜಿ ಕ್ರೈಸ್ತರು “ಕೆಟ್ಟ ಆಳು” ಎಂದು ಕಟ್ಟಕಡೆಗೆ ಗುರುತಿಸಲ್ಪಟ್ಟರು ಮತ್ತು ಯೇಸು “ಅವರನ್ನು ಕಠಿಣವಾಗಿ” ಶಿಕ್ಷಿಸಿದನು. ಅದು ಹೇಗೆ? ಅವನು ಅವರನ್ನು ತಿರಸ್ಕರಿಸಿದನು ಮತ್ತು ಅವರು ತಮ್ಮ ಸ್ವರ್ಗೀಯ ನಿರೀಕ್ಷೆಯನ್ನು ಕಳೆದುಕೊಂಡರು. ಆದರೆ ಅವರು ಒಡನೆ ನಾಶಮಾಡಲ್ಪಡಲಿಲ್ಲ. ಅವರು ಪ್ರಥಮವಾಗಿ ಕ್ರೈಸ್ತ ಸಭೆಯ “ಹೊರಗೆ ಕತ್ತಲೆ”ಯಲ್ಲಿ ಗೋಳಾಟ ಮತ್ತು ಹಲ್ಲು ಕಡಿಯೋಣದ ಒಂದು ಅವಧಿಯನ್ನು ಸಹಿಸಿಕೊಳ್ಳಬೇಕಾಯಿತು. (ಮತ್ತಾಯ 8:12) ಆ ಆರಂಭದ ದಿನಗಳಿಂದೀಚೆಗೆ ಅಭಿಷಿಕ್ತರಲ್ಲಿ ಕೆಲವರು ತದ್ರೀತಿಯ ಮನೋಭಾವವನ್ನು ಪ್ರದರ್ಶಿಸುತ್ತಾ ಆ ‘ಕೆಟ್ಟ ಆಳಿನ’ ಜೊತೆಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. “ಬೇರೆ ಕುರಿ”ಗಳಲ್ಲಿ ಕೆಲವು ಮಂದಿ ಸಹ ಅವರ ಅಪನಂಬಿಗಸ್ತಿಕೆಯನ್ನು ಅನುಕರಿಸಿದ್ದಾರೆ. (ಯೋಹಾನ 10:16) ಕ್ರಿಸ್ತನ ಇಂತಹ ವೈರಿಗಳೆಲ್ಲರೂ ಅದೇ ರೀತಿಯ ಆಧ್ಯಾತ್ಮಿಕ ‘ಕತ್ತಲೆಯನ್ನು’ ಅನುಭವಿಸುತ್ತಾರೆ.

5 ಹೀಗಿದ್ದರೂ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಸಹ, “ಆ ಕೆಟ್ಟ ಆಳು” ಎದುರಿಸಿದಂತಹ ಪರೀಕ್ಷೆಗಳನ್ನೇ ಅನುಭವಿಸಿತ್ತು. ಆದರೆ ಅವರು ಮನಸ್ಸಿನಲ್ಲಿ ಕಹಿತುಂಬಿಕೊಳ್ಳುವುದರ ಬದಲಾಗಿ ತಮ್ಮನ್ನೇ ಸರಿಪಡಿಸಿಕೊಂಡರು. (2 ಕೊರಿಂಥ 13:11) ಯೆಹೋವನಿಗಾಗಿಯೂ ಅವರ ಸಹೋದರರಿಗಾಗಿಯೂ ಅವರಿಗಿದ್ದ ಪ್ರೀತಿಯು ಬಲಗೊಳಿಸಲ್ಪಟ್ಟಿತು. ಇದರ ಪರಿಣಾಮವಾಗಿ, ಈ ಗೊಂದಲಭರಿತ “ಕಡೇ ದಿವಸಗಳಲ್ಲಿ” ಅವರು “ಸತ್ಯಕ್ಕೆ ಸ್ತಂಭವೂ ಆಧಾರವೂ” ಆಗಿ ಪರಿಣಮಿಸಿದ್ದಾರೆ.​—⁠1 ತಿಮೊಥೆಯ 3:15; 2 ತಿಮೊಥೆಯ 3:⁠1.

ಬುದ್ಧಿವಂತೆಯರಾದ ಮತ್ತು ಬುದ್ಧಿಹೀನರಾದ ಕನ್ಯೆಯರು

6 ‘ಆ ಕೆಟ್ಟ ಆಳಿನ’ ವಿಷಯದಲ್ಲಿ ಮಾತಾಡಿದ ಬಳಿಕ, ಕೆಲವು ಮಂದಿ ಅಭಿಷಿಕ್ತ ಕ್ರೈಸ್ತರು ಏಕೆ ನಂಬಿಗಸ್ತರಾಗಿಯೂ ವಿವೇಕಿಗಳಾಗಿಯೂ ಇರುವರು ಮತ್ತು ಇತರರು ಏಕೆ ಹಾಗಿರುವುದಿಲ್ಲವೆಂಬುದನ್ನು ತೋರಿಸಲು ಯೇಸು ಎರಡು ಸಾಮ್ಯಗಳನ್ನು ಕೊಟ್ಟನು. * ವಿವೇಕವನ್ನು ದೃಷ್ಟಾಂತಿಸಲು ಅವನು ಹೇಳಿದ್ದು: “ಆಗ ಪರಲೋಕರಾಜ್ಯವು ಆರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಎದುರುಗೊಳ್ಳುವದಕ್ಕೆ ಹೊರಟಂಥ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು. ಅವರಲ್ಲಿ ಐದು ಮಂದಿ ಬುದ್ಧಿಯಿಲ್ಲದವರು, ಐದು ಮಂದಿ ಬುದ್ಧಿವಂತೆಯರು. ಬುದ್ಧಿಯಿಲ್ಲದವರು ತಮ್ಮ ಆರತಿಗಳನ್ನು ತಕ್ಕೊಂಡರು, ಆದರೆ ಎಣ್ಣೆ ತಕ್ಕೊಳ್ಳಲಿಲ್ಲ. ಬುದ್ಧಿವಂತೆಯರು ತಮ್ಮ ಆರತಿಗಳ ಕೂಡ ಪಾತ್ರೆಗಳಲ್ಲಿ ಎಣ್ಣೆ ತಕ್ಕೊಂಡರು.” (ಮತ್ತಾಯ 25:1-4) ಆ ಹತ್ತು ಮಂದಿ ಕನ್ಯೆಯರು 1914ಕ್ಕೆ ಮುಂಚೆ ಇದ್ದ ಅಭಿಷಿಕ್ತ ಕ್ರೈಸ್ತರನ್ನು ನಮ್ಮ ಜ್ಞಾಪಕಕ್ಕೆ ತರುತ್ತಾರೆ. ಮದಲಿಂಗನಾದ ಯೇಸು ಕ್ರಿಸ್ತನು ಇನ್ನೇನು ತೋರಿಬರಲಿದ್ದಾನೆಂದು ಅವರು ಲೆಕ್ಕಿಸಿದ್ದರು. ಆದಕಾರಣ, ಅವರು 1914ರಲ್ಲಿ “ಅನ್ಯದೇಶದವರ ಸಮಯಗಳು” ಮುಗಿಯುತ್ತವೆಂದು ಧೈರ್ಯದಿಂದ ಸಾರುತ್ತಾ ಅವನನ್ನು ‘ಎದುರುಗೊಳ್ಳುವದಕ್ಕೆ ಹೊರಟರು.’​—⁠ಲೂಕ 21:24.

7 ಅವರ ಲೆಕ್ಕ ಸರಿಯಾಗಿತ್ತು. ಅನ್ಯಜನಾಂಗಗಳ ಕಾಲವು 1914ರಲ್ಲಿ ಖಂಡಿತ ಅಂತ್ಯಗೊಂಡಿತು ಮತ್ತು ಕ್ರಿಸ್ತ ಯೇಸುವಿನ ಕೈಯಲ್ಲಿರುವ ದೇವರ ರಾಜ್ಯವು ಕಾರ್ಯಭಾರವನ್ನು ನಡೆಸತೊಡಗಿತು. ಆದರೆ ಇದು ಸಂಭವಿಸಿದ್ದು ಅದೃಶ್ಯ ಪರಲೋಕದಲ್ಲಿ. ಭೂಮಿಯ ಮೇಲೆ ಮಾನವಕುಲವು ಮುಂತಿಳಿಸಲ್ಪಟ್ಟಿದ್ದಂಥ “ದುರ್ಗತಿ”ಯನ್ನು ಅನುಭವಿಸತೊಡಗಿತು. (ಪ್ರಕಟನೆ 12:​10, 12) ಪರೀಕ್ಷೆಯ ಅವಧಿ ಹಿಂಬಾಲಿಸಿ ಬಂತು. ವಿಷಯಗಳ ಸ್ಪಷ್ಟವಾದ ತಿಳಿವಳಿಕೆಯಿಲ್ಲದವರಾಗಿ ಅಭಿಷಿಕ್ತ ಕ್ರೈಸ್ತರು, “ಮದಲಿಂಗನು ಬರುವದಕ್ಕೆ ತಡ”ಮಾಡುತ್ತಿದ್ದಾನೆಂದು ಯೋಚಿಸಿದರು. ಗಲಿಬಿಲಿಗೊಂಡವರಾಗಿ ಮತ್ತು ಲೋಕದಿಂದ ವಿರೋಧವನ್ನು ಅನುಭವಿಸುತ್ತ ಸಂಘಟಿತವಾದ ಸಾರ್ವಜನಿಕ ಸಾರುವ ಕೆಲಸವನ್ನು ಅವರು ನಿಧಾನಿಸಿದರು ಮತ್ತು ಕಾರ್ಯತಃ ನಿಲ್ಲಿಸಿಯೇ ಬಿಟ್ಟರು. ದೃಷ್ಟಾಂತದಲ್ಲಿರುವ ಕನ್ಯೆಯರಂತೆ, ಆಧ್ಯಾತ್ಮಿಕವಾಗಿ ಹೇಳುವುದಾದರೆ, ಅವರು “ತೂಕಡಿಸಿ ಮಲಗಿದರು.” ಯೇಸುವಿನ ಅಪೊಸ್ತಲರ ಮರಣಾನಂತರ ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದ ಅಪನಂಬಿಗಸ್ತರೂ ಹಾಗೆಯೇ ಮಾಡಿದ್ದರು.​—⁠ಮತ್ತಾಯ 25:5; ಪ್ರಕಟನೆ 11:7, 8; 12:17.

8 ಬಳಿಕ 1919ರಲ್ಲಿ ಅನಿರೀಕ್ಷಿತವಾಗಿ ಏನೊ ಸಂಭವಿಸಿತು. ನಾವು ಓದುವುದು: “ಆದರೆ ಅರ್ಧರಾತ್ರಿಯಲ್ಲಿ​—⁠ಇಗೋ, ಮದಲಿಂಗನು! ಅವನನ್ನು ಎದುರುಗೊಳ್ಳುವದಕ್ಕೆ ಹೊರಡಿರಿ ಎಂಬ ಕೂಗಾಯಿತು. ಆಗ ಆ ಕನ್ಯೆಯರೆಲ್ಲರು ಎಚ್ಚತ್ತು ತಮ್ಮ ಆರತಿಗಳನ್ನು ನೆಟ್ಟಗೆಮಾಡಿದರು.” (ಮತ್ತಾಯ 25:6, 7) ಎಲ್ಲೆಲ್ಲೂ ವಿಷಯಗಳು ತೀರ ಅಂಧಕಾರಮಯವಾಗಿರುವಂತೆ ತೋರಿದಂಥ ಸಮಯದಲ್ಲಿ, ಚಟುವಟಿಕಾಭರಿತರಾಗಿರಿ ಎಂಬ ಕರೆ ಕೇಳಿಬಂತು! ಇಸವಿ 1918ರಲ್ಲಿ “ಒಡಂಬಡಿಕೆಯ ದೂತ”ನಾದ ಯೇಸು, ದೇವರ ಸಭೆಯನ್ನು ಪರೀಕ್ಷಿಸಿ, ಶುದ್ಧೀಕರಿಸುವ ಸಲುವಾಗಿ ಯೆಹೋವನ ಆಧ್ಯಾತ್ಮಿಕಾಲಯಕ್ಕೆ ಬಂದಿದ್ದನು. (ಮಲಾಕಿಯ 3:⁠1) ಈಗ ಆ ಆಲಯದ ಭೂಅಂಗಣಗಳಲ್ಲಿ ಅಭಿಷಿಕ್ತ ಕ್ರೈಸ್ತರು ಹೋಗಿ ಅವನನ್ನು ಸಂಧಿಸಬೇಕಾಗಿತ್ತು. ಅವರು ಬೆಳಕನ್ನು ‘ಪ್ರಕಾಶಿಸಬೇಕಾಗಿದ್ದ’ ಸಮಯವು ಅದಾಗಿತ್ತು.​—⁠ಯೆಶಾಯ 60:1; ಫಿಲಿಪ್ಪಿ 2:14, 15.

9 ಆದರೆ ತಾಳಿ! ಆ ಸಾಮ್ಯದಲ್ಲಿನ ಯುವ ಸ್ತ್ರೀಯರಲ್ಲಿ ಕೆಲವರಿಗೆ ಸಮಸ್ಯೆಯೊಂದಿತ್ತು. ಯೇಸು ಮುಂದುವರಿಸುತ್ತಾ ಹೇಳಿದ್ದು: “ಆಗ್ಗೆ ಬುದ್ಧಿಯಿಲ್ಲದವರು ಬುದ್ಧಿವಂತೆಯರಿಗೆ​—⁠ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ. ನಮ್ಮ ಆರತಿಗಳು ಆರಿಹೋಗುತ್ತವೆ ಎಂದು ಹೇಳಿದರು.” (ಮತ್ತಾಯ 25:​8, 9) ಎಣ್ಣೆಯಿಲ್ಲದಿದ್ದರೆ ದೀಪಗಳು ಬೆಳಕನ್ನು ಪ್ರಕಾಶಿಸುವುದಿಲ್ಲ. ಹೀಗೆ ದೀಪದ ಎಣ್ಣೆಯು, ಯಾವುದು ಸತ್ಯಾರಾಧಕರನ್ನು ಬೆಳಕು ವಾಹಕರಾಗಿರಲು ಬಲಗೊಳಿಸುತ್ತದೋ ಆ ದೇವರ ಸತ್ಯವಾಕ್ಯವನ್ನೂ ಆತನ ಪವಿತ್ರಾತ್ಮವನ್ನೂ ನಮ್ಮ ಜ್ಞಾಪಕಕ್ಕೆ ತರುತ್ತದೆ. (ಕೀರ್ತನೆ 119:130; ದಾನಿಯೇಲ 5:14) ವಿವೇಕಿಗಳಾದ ಅಭಿಷಿಕ್ತ ಕ್ರೈಸ್ತರು, 1919ಕ್ಕೆ ಮುಂಚೆ ಅವರಿದ್ದ ತಾತ್ಕಾಲಿಕ ಬಲಹೀನ ಸ್ಥಿತಿಯ ಹೊರತಾಗಿಯೂ, ತಮಗಾಗಿ ದೇವರ ಚಿತ್ತವೇನಾಗಿದೆ ಎಂಬುದನ್ನು ಅರಿತುಕೊಳ್ಳಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿದ್ದರು. ಆ ಕಾರಣದಿಂದ, ಬೆಳಕನ್ನು ಪ್ರಕಾಶಿಸಬೇಕೆಂಬ ಕರೆಯು ಬಂದಾಗ ಅವರು ಅದಕ್ಕೆ ಸಿದ್ಧರಾಗಿದ್ದರು.​—⁠2 ತಿಮೊಥೆಯ 4:2; ಇಬ್ರಿಯ 10:24, 25.

10 ಕೆಲವು ಮಂದಿ ಅಭಿಷಿಕ್ತರಾದರೊ, ಮದಲಿಂಗನೊಡನೆ ಇರಲು ಶ್ರದ್ಧಾಪೂರ್ವಕವಾಗಿ ಬಯಸಿದರಾದರೂ, ತ್ಯಾಗಗಳನ್ನು ಮಾಡಲಿಕ್ಕಾಗಲಿ, ವೈಯಕ್ತಿಕವಾಗಿ ಶ್ರಮಿಸಲಿಕ್ಕಾಗಲಿ ಸಿದ್ಧರಾಗಿರಲಿಲ್ಲ. ಆದಕಾರಣ, ಸುವಾರ್ತೆ ಸಾರುವುದರಲ್ಲಿ ಕ್ರಿಯಾಶೀಲರಾಗಿರುವ ಸಮಯ ಬಂದಾಗ, ಅವರು ಅದಕ್ಕೆ ಸಿದ್ಧರಾಗಿರಲಿಲ್ಲ. (ಮತ್ತಾಯ 24:14) ಅವರು ತಮ್ಮ ಹುರುಪುಳ್ಳ ಸಂಗಾತಿಗಳನ್ನು ನಿಧಾನಿಸಲೂ, ಅಂದರೆ ಕಾರ್ಯತಃ, ಅವರಿಂದ ಎಣ್ಣೆಯನ್ನು ಕೇಳಲೂ ಪ್ರಯತ್ನಿಸಿದರು. ಆದರೆ ಯೇಸುವಿನ ಸಾಮ್ಯದಲ್ಲಿ, ವಿವೇಕಿಗಳಾಗಿದ್ದ ಕನ್ಯೆಯರು ಹೇಗೆ ಪ್ರತಿವರ್ತಿಸಿದರು? ಅವರಂದದ್ದು: “ನಿಮಗೆ ಕೊಟ್ಟರೆ ನಮಗೂ ನಿಮಗೂ ಕೂಡ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೇದು.” (ಮತ್ತಾಯ 25:9) ತದ್ರೀತಿಯಲ್ಲಿ, 1919ರಲ್ಲಿ ನಿಷ್ಠಾವಂತ ಅಭಿಷಿಕ್ತ ಕ್ರೈಸ್ತರು, ಬೆಳಕು ವಾಹಕರಾಗಿರುವ ತಮ್ಮ ಸ್ವಂತ ಸಾಮರ್ಥ್ಯಕ್ಕೆ ಕುಂದು ತರುವ ಯಾವುದೇ ವಿಷಯವನ್ನು ಮಾಡಲು ನಿರಾಕರಿಸಿದರು. ಹೀಗೆ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾದರು.

11 ಯೇಸು ಹೀಗೆ ಮುಕ್ತಾಯಗೊಳಿಸುತ್ತಾನೆ: “ಅವರು [ಬುದ್ಧಿಯಿಲ್ಲದ ಕನ್ಯೆಯರು] ಕೊಂಡುಕೊಳ್ಳಲಿಕ್ಕೆ ಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಕ್ಕೆ ಹೋದರು. ಬಾಗಿಲನ್ನು ಮುಚ್ಚಲಾಯಿತು. ತರುವಾಯ ಉಳಿದ ಕನ್ಯೆಯರು ಸಹ ಬಂದು​—⁠ಸ್ವಾಮೀ, ಸ್ವಾಮೀ, ನಮಗೆ ತೆರೆಯಿರಿ ಅಂದರು. ಆತನು​—⁠ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.” (ಮತ್ತಾಯ 25:10-12) ಹೌದು, ಕೆಲವರು ಮದಲಿಂಗನ ಬರೋಣಕ್ಕೆ ಸಜ್ಜಿತರಾಗಿರಲಿಲ್ಲ. ಆದಕಾರಣ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ, ಸ್ವರ್ಗೀಯ ವಿವಾಹದ ಔತಣಕ್ಕೆ ಹೋಗುವ ಅವಕಾಶವನ್ನು ಕಳೆದುಕೊಂಡರು. ಎಂತಹ ದುರಂತ!

ತಲಾಂತುಗಳ ಸಾಮ್ಯ

12 ವಿವೇಕವನ್ನು ದೃಷ್ಟಾಂತಿಸಿದ ಬಳಿಕ ಯೇಸು ನಂಬಿಗಸ್ತಿಕೆಯನ್ನು ದೃಷ್ಟಾಂತಿಸತೊಡಗಿದನು. ಅವನಂದದ್ದು: “ದೇಶಾಂತರಕ್ಕೆ ಹೋಗುವ ಒಬ್ಬ ಮನುಷ್ಯನು ತನ್ನ ಆಳುಗಳನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವದು. ಅವನು ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು, ಒಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಬೇರೊಂದು ದೇಶಕ್ಕೆ ಹೋದನು.” (ಮತ್ತಾಯ 25:14, 15) ಈ ಸಾಮ್ಯದಲ್ಲಿರುವ ಮನುಷ್ಯನು ಸ್ವತಃ ಯೇಸುವೇ. ಅವನು “ದೇಶಾಂತರಕ್ಕೆ” ಹೋದದ್ದು, ಸಾ.ಶ. 33ರಲ್ಲಿ ಸ್ವರ್ಗಕ್ಕೇರಿ ಹೋದಾಗ. ಆದರೆ ಆ ದಿವಾರೋಹಣಕ್ಕೆ ಮೊದಲು ಯೇಸು “ತನ್ನ ಆಸ್ತಿಯನ್ನು” ನಂಬಿಗಸ್ತ ಶಿಷ್ಯರಿಗೆ ಒಪ್ಪಿಸಿಕೊಟ್ಟನು. ಅದು ಹೇಗೆ?

13 ತನ್ನ ಭೂಶುಶ್ರೂಷೆಯ ಸಮಯದಲ್ಲಿ, ರಾಜ್ಯದ ಸುವಾರ್ತೆಯನ್ನು ಇಸ್ರಾಯೇಲ್‌ ದೇಶದಲ್ಲೆಲ್ಲ ಸಾರುವ ಮೂಲಕ ಯೇಸು ಚಟುವಟಿಕೆಯ ಒಂದು ದೊಡ್ಡ ಕ್ಷೇತ್ರವನ್ನು ಸಿದ್ಧಮಾಡಿದನು. (ಮತ್ತಾಯ 9:​35-38) ಅವನು “ದೇಶಾಂತರಕ್ಕೆ” ಹೋಗುವ ಮೊದಲು ಆ ಕ್ಷೇತ್ರವನ್ನು ತನ್ನ ನಂಬಿಗಸ್ತ ಶಿಷ್ಯರಿಗೆ ಹೀಗೆಂದು ಹೇಳುತ್ತ ಒಪ್ಪಿಸಿದನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ [“ಪವಿತ್ರಾತ್ಮದ,” NW] ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:18-20) ಈ ಮಾತುಗಳಿಂದ ಯೇಸು, ತಾನು ಹಿಂದಿರುಗುವ ವರೆಗೂ “ಅವನವನ ಸಾಮರ್ಥ್ಯದ ಪ್ರಕಾರ” ವ್ಯಾಪಾರ ಮಾಡುವ ಅಧಿಕಾರವನ್ನು ತನ್ನ ‘ಆಳುಗಳಿಗೆ’ ಕೊಟ್ಟನು.

14 ‘ಅವನವನ ಸಾಮರ್ಥ್ಯದ ಪ್ರಕಾರ’ ಎಂಬ ಆ ಅಭಿವ್ಯಕ್ತಿಯು ಒಂದನೆಯ ಶತಮಾನದ ಕ್ರೈಸ್ತರೆಲ್ಲರಿಗೆ ಏಕಪ್ರಕಾರವಾದ ಪರಿಸ್ಥಿತಿಗಳಾಗಲಿ ಸಾಮರ್ಥ್ಯಗಳಾಗಲಿ ಇರಲಿಲ್ಲವೆಂಬುದನ್ನು ಸೂಚಿಸುತ್ತದೆ. ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ಅತ್ಯಧಿಕವಾದುದ್ದನ್ನು ಮಾಡಲು, ಪೌಲ ಮತ್ತು ತಿಮೊಥೆಯರಂತಹ ಕೆಲವರಿಗೆ ಅವರ ಪರಿಸ್ಥಿತಿಗಳು ಸ್ವಾತಂತ್ರ್ಯವನ್ನು ಕೊಟ್ಟವು. ಇತರರ ಪರಿಸ್ಥಿತಿಗಳು ಅವರ ಚಟುವಟಿಕೆಯ ಸ್ವಾತಂತ್ರ್ಯವನ್ನು ತೀರ ನಿರ್ಬಂಧಕ್ಕೊಳಪಡಿಸಿರಬಹುದು. ದೃಷ್ಟಾಂತಕ್ಕೆ, ಕೆಲವು ಮಂದಿ ಕ್ರೈಸ್ತರು ದಾಸರಾಗಿದ್ದರು, ಇನ್ನು ಕೆಲವರು ರೋಗಿಗಳು, ವೃದ್ಧರು ಇಲ್ಲವೆ ಕುಟುಂಬದ ಜವಾಬ್ದಾರಿಯುಳ್ಳವರಾಗಿದ್ದರು. ನಿಜ, ಸಭೆಯ ಕೆಲವು ಸೇವಾ ನೇಮಕಗಳು ಎಲ್ಲ ಶಿಷ್ಯರಿಗೆ ಲಭ್ಯವಾಗಿರಲಿಲ್ಲ. ಅಭಿಷಿಕ್ತ ಮಹಿಳೆಯರು ಮತ್ತು ಕೆಲವು ಮಂದಿ ಅಭಿಷಿಕ್ತ ಪುರುಷರು ಸಭೆಯಲ್ಲಿ ಬೋಧಿಸಲಿಲ್ಲ. (1 ಕೊರಿಂಥ 14:34; 1 ತಿಮೊಥೆಯ 3:1; ಯಾಕೋಬ 3:1) ಹೀಗಿದ್ದರೂ, ಅವರ ವೈಯಕ್ತಿಕ ಪರಿಸ್ಥಿತಿಯು ಏನೇ ಆಗಿದ್ದಿರಲಿ, ಕ್ರಿಸ್ತನ ಅಭಿಷಿಕ್ತ ಶಿಷ್ಯರೆಲ್ಲರೂ​—⁠ಪುರುಷರೂ ಸ್ತ್ರೀಯರೂ​—⁠ವ್ಯಾಪಾರದಲ್ಲಿ ತೊಡಗಲು, ಅಂದರೆ ತಮಗಿರುವ ಸಂದರ್ಭಗಳನ್ನೂ ಪರಿಸ್ಥಿತಿಗಳನ್ನೂ ಕ್ರೈಸ್ತ ಶುಶ್ರೂಷೆಯಲ್ಲಿ ಸದುಪಯೋಗಿಸಲು ನೇಮಿಸಲ್ಪಟ್ಟಿದ್ದರು. ಆಧುನಿಕ ದಿನದ ಕ್ರಿಸ್ತನ ಶಿಷ್ಯರೂ ಹಾಗೆಯೇ ಮಾಡುತ್ತಾರೆ.

ಪರೀಕ್ಷೆಯ ಕಾಲ ಪ್ರಾರಂಭವಾಗುತ್ತದೆ!

15 ಸಾಮ್ಯವು ಮುಂದುವರಿಸಿ ಹೇಳುವುದು: “ಬಹುಕಾಲದ ಮೇಲೆ ಆ ಆಳುಗಳ ದಣಿಯು ಬಂದು ಅವರಿಂದ ಲೆಕ್ಕತೆಗೆದು”ಕೊಂಡನು. (ಮತ್ತಾಯ 25:19) ಸಾ.ಶ. 33ರ ಬಳಿಕ, ನಿಶ್ಚಯವಾಗಿಯೂ ದೀರ್ಘಕಾಲದ ನಂತರ 1914ರಲ್ಲಿ, ಕ್ರಿಸ್ತ ಯೇಸು ತನ್ನ ರಾಜವೈಭವದ ಸಾನ್ನಿಧ್ಯವನ್ನು ಆರಂಭಿಸಿದನು. ಮೂರುವರೆ ವರುಷಗಳ ಬಳಿಕ 1918ರಲ್ಲಿ, ಅವನು ದೇವರ ಆಧ್ಯಾತ್ಮಿಕ ದೇವಾಲಯಕ್ಕೆ ಬಂದು ಪೇತ್ರನ ಈ ಮಾತುಗಳನ್ನು ನೆರವೇರಿಸಿದನು: “ನ್ಯಾಯವಿಚಾರಣೆಯು ದೇವರ ಮನೆಯಲ್ಲಿ ಆರಂಭವಾಗಲು ಇದು ನೇಮಿತ ಸಮಯವಾಗಿದೆ.” (1 ಪೇತ್ರ 4:​17, NW; ಮಲಾಕಿಯ 3:1) ಲೆಕ್ಕ ತೀರಿಸುವ ಸಮಯವು ಅದಾಗಿತ್ತು.

16 ಆಳುಗಳಾದ ಯೇಸುವಿನ ಅಭಿಷಿಕ್ತ ಸಹೋದರರು ರಾಜನ “ತಲಾಂತು”ಗಳನ್ನು ಹೇಗೆ ಉಪಯೋಗಿಸಿದ್ದರು? ಸಾ.ಶ. 33ರಿಂದ ಹಿಡಿದು, 1914ರ ವರೆಗಿನ ವರುಷಗಳಲ್ಲಿ ಅನೇಕರು ಯೇಸುವಿನ “ವ್ಯಾಪಾರ”ದಲ್ಲಿ ಶ್ರಮಪಟ್ಟು ದುಡಿಯುತ್ತಿದ್ದರು. (ಮತ್ತಾಯ 25:16) ಒಂದನೆಯ ಲೋಕ ಯುದ್ಧದ ಸಮಯದಲ್ಲಿಯೂ ಅವರು ಯಜಮಾನನ ಸೇವೆಮಾಡಲು ಬಲವಾದ ಇಚ್ಛೆಯನ್ನು ತೋರಿಸಿದ್ದರು. ಆದುದರಿಂದ ಈಗ, ಈ ನಂಬಿಗಸ್ತರಿಗೆ ‘ವ್ಯಾಪಾರ ಮಾಡಲು’ ಹೊಸ ಸಂದರ್ಭಗಳನ್ನು ಕೊಡುವುದು ಸೂಕ್ತವಾಗಿತ್ತು. ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಕಾಲವು ಬಂದಿತ್ತು. ಸುವಾರ್ತೆಯನ್ನು ಲೋಕಾದ್ಯಂತ ಸಾರಬೇಕಾಗಿತ್ತು. “ಭೂಮಿಯ ಪೈರನ್ನು” ಕೊಯ್ಯಬೇಕಾಗಿತ್ತು. (ಪ್ರಕಟನೆ 14:6, 7, 14-16) ಗೋದಿ ವರ್ಗದವರಲ್ಲಿ ಕೊನೆಯ ಸದಸ್ಯರನ್ನು ಕಂಡುಹಿಡಿಯಬೇಕಾಗಿತ್ತು ಮತ್ತು ಬೇರೆ ಕುರಿಗಳ ‘ಮಹಾಸಮೂಹವನ್ನು’ ಒಟ್ಟುಗೂಡಿಸಬೇಕಾಗಿತ್ತು.​—⁠ಪ್ರಕಟನೆ 7:9; ಮತ್ತಾಯ 13:24-30.

17 ಸುಗ್ಗೀಕಾಲವು ಹರ್ಷಿಸುವ ಸಮಯವಾಗಿದೆ. (ಕೀರ್ತನೆ 126:⁠6) ಆದುದರಿಂದ, 1919ರಲ್ಲಿ ಯೇಸು ತನ್ನ ನಂಬಿಗಸ್ತ ಅಭಿಷಿಕ್ತ ಸಹೋದರರಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟಾಗ ಅವನು, “ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ದಣಿಯ ಸೌಭಾಗ್ಯದಲ್ಲಿ [“ಸಂತೋಷದಲ್ಲಿ,” NW] ಸೇರು” ಎಂದು ಹೇಳಿದ್ದು ಯೋಗ್ಯವಾಗಿದೆ. (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 25:21, 23) ಇದಲ್ಲದೆ, ದೇವರ ರಾಜ್ಯದ ಹೊಸದಾಗಿ ಸಿಂಹಾಸನವೇರಿರುವ ಯಜಮಾನನ ಸಂತೋಷವು ನಮ್ಮ ಕಲ್ಪನಾಶಕ್ತಿಯನ್ನು ಮೀರಿರುತ್ತದೆ. (ಕೀರ್ತನೆ 45:​1, 2, 6, 7) ನಂಬಿಗಸ್ತ ಆಳು ವರ್ಗವು ಅರಸನನ್ನು ಪ್ರತಿನಿಧೀಕರಿಸಿ, ಭೂಮಿಯ ಮೇಲೆ ಅವನ ಅಭಿರುಚಿಗಳನ್ನು ವೃದ್ಧಿಸುವ ಮೂಲಕ ಆ ಸಂತೋಷದಲ್ಲಿ ಭಾಗಿಗಳಾಗುತ್ತಾರೆ. (2 ಕೊರಿಂಥ 5:20) ಅವರ ಸಂತೋಷವು ಯೆಶಾಯ 61:10ರ ಪ್ರವಾದನಾತ್ಮಕ ಮಾತುಗಳಲ್ಲಿ ಕಂಡುಬರುತ್ತದೆ: “ನಾನು ಯೆಹೋವನಲ್ಲಿ ಪರಮಾನಂದಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವದು; . . . ಆತನು ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿ”ದ್ದಾನೆ.

18 ವಿಷಾದಕರವಾಗಿ, ಕೆಲವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ನಾವು ಓದುವುದು: “ತರುವಾಯ ಒಂದೇ ತಲಾಂತು ಹೊಂದಿದವನು ಸಹ ಮುಂದೆಬಂದು​—⁠ಸ್ವಾಮೀ, ನೀನು ಕಠಿಣ ಮನುಷ್ಯನು, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದು ಹೆದರಿಕೊಂಡು ಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೆ ಸಂದಿದೆ ಅಂದನು.” (ಮತ್ತಾಯ 25:24, 25) ಅದೇ ರೀತಿ, ಕೆಲವು ಮಂದಿ ಅಭಿಷಿಕ್ತ ಕ್ರೈಸ್ತರು ‘ವ್ಯಾಪಾರದಲ್ಲಿ’ ತೊಡಗಿರಲಿಲ್ಲ. ಅವರು 1914ಕ್ಕೆ ಮೊದಲು ತಮ್ಮ ನಿರೀಕ್ಷೆಯನ್ನು ಉತ್ಸಾಹದಿಂದ ಇತರರಿಗೆ ಹಂಚಿರಲಿಲ್ಲ, ಮತ್ತು 1919ರಲ್ಲಿ ಅವರು ಹಾಗೆ ಮಾಡಲಾರಂಭಿಸಲೂ ಬಯಸಲಿಲ್ಲ. ಅವರ ಈ ಸೊಕ್ಕಿನ ವರ್ತನೆಗೆ ಯೇಸು ಹೇಗೆ ಪ್ರತಿವರ್ತಿಸಿದನು? ಅವರಿಗಿದ್ದ ಸುಯೋಗಗಳನ್ನೆಲ್ಲ ಅವನು ತೆಗೆದುಬಿಟ್ಟನು. ಅವರನ್ನು ‘ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವ ಕತ್ತಲೆಗೆ’ ತಳ್ಳಲಾಯಿತು.​—⁠ಮತ್ತಾಯ 25:​28, 30.

ಪರೀಕ್ಷೆ ಮುಂದುವರಿಯುತ್ತದೆ

19 ಅಂತ್ಯಕಾಲದಲ್ಲಿ ಕ್ರಿಸ್ತನ ಅಭಿಷಿಕ್ತ ಆಳುಗಳಾಗಿ ಪರಿಣಮಿಸಲಿದ್ದವರಲ್ಲಿ ಹೆಚ್ಚಿನವರು ಯೇಸು ತನ್ನ ಪರೀಕ್ಷೆಯನ್ನು 1918ರಲ್ಲಿ ಆರಂಭಿಸಿದಾಗ ಇನ್ನೂ ಯೆಹೋವನನ್ನು ಸೇವಿಸಲಾರಂಭಿಸಿರಲಿಲ್ಲವೆಂಬುದು ನಿಜ. ಹಾಗಾದರೆ ಅವರು ಈ ಪರೀಕ್ಷೆಯ ಸಂದರ್ಭವನ್ನು ಕಳೆದುಕೊಂಡರೊ? ನಿಶ್ಚಯವಾಗಿಯೂ ಇಲ್ಲ. 1918/19ರಲ್ಲಿ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು, ಒಂದು ವರ್ಗವಾಗಿ ತೇರ್ಗಡೆ ಹೊಂದಿದಾಗ ಆ ಪರೀಕ್ಷೆಯ ಕಾರ್ಯಗತಿಯು ಕೇವಲ ಪ್ರಾರಂಭವಾಯಿತು ಅಷ್ಟೇ. ಅಭಿಷಿಕ್ತ ಕ್ರೈಸ್ತರಲ್ಲಿ ಒಬ್ಬೊಬ್ಬರೂ ಪರೀಕ್ಷಿಸಲ್ಪಡುವುದು, ಅವರ ಮುದ್ರೆ ಒತ್ತುವಿಕೆಯು ಖಾಯಂ ಆಗುವ ತನಕ ಮುಂದುವರಿಯುತ್ತದೆ. (ಪ್ರಕಟನೆ 7:⁠1-3) ಇದನ್ನು ಗ್ರಹಿಸಿದವರಾಗಿ, ಕ್ರಿಸ್ತನ ಅಭಿಷಿಕ್ತ ಸಹೋದರರು ನಂಬಿಗಸ್ತಿಕೆಯಿಂದ ‘ವ್ಯಾಪಾರ ಮಾಡುತ್ತಾ’ ಮುಂದುವರಿಯಲು ದೃಢನಿಶ್ಚಯದಿಂದಿದ್ದಾರೆ. ಅವರು ವಿವೇಕಿಗಳಾಗಿರಲು, ಬೆಳಕು ಉಜ್ವಲವಾಗಿ ಪ್ರಕಾಶಿಸುವಂತೆ ಎಣ್ಣೆಯ ಧಾರಾಳವಾದ ಸರಬರಾಯಿಯನ್ನಿಟ್ಟುಕೊಳ್ಳಲು ದೃಢನಿಶ್ಚಯದಿಂದಿದ್ದಾರೆ. ಅವರಲ್ಲಿ ಪ್ರತಿಯೊಬ್ಬರಿಗೂ, ಅವರು ನಂಬಿಗಸ್ತಿಕೆಯಿಂದ ತಮ್ಮ ಜೀವಾಂತ್ಯವನ್ನು ತಲಪುವಾಗ, ಯೇಸು ತಮ್ಮನ್ನು ಸ್ವರ್ಗೀಯ ವಾಸಸ್ಥಾನಕ್ಕೆ ಬರಮಾಡಿಕೊಳ್ಳುವನೆಂದು ತಿಳಿದಿದೆ.​—⁠ಮತ್ತಾಯ 24:13; ಯೋಹಾನ 14:2-4; 1 ಕೊರಿಂಥ 15:50, 51.

20 ಬೇರೆ ಕುರಿಗಳ ಮಹಾಸಮೂಹದವರು ತಮ್ಮ ಅಭಿಷಿಕ್ತ ಸಹೋದರರನ್ನು ಅನುಕರಿಸಿದ್ದಾರೆ. ದೇವರ ಉದ್ದೇಶಗಳ ವಿಷಯದಲ್ಲಿ ತಮಗಿರುವ ಜ್ಞಾನವು ತಮ್ಮ ಮೇಲೆ ದೊಡ್ಡ ಜವಾಬ್ದಾರಿಯನ್ನು ತರುತ್ತದೆಂದು ಅವರು ಅರಿತಿರುತ್ತಾರೆ. (ಯೆಹೆಜ್ಕೇಲ 3:​17-21) ಆದುದರಿಂದ, ಯೆಹೋವನ ವಾಕ್ಯ ಮತ್ತು ಪವಿತ್ರಾತ್ಮದ ಸಹಾಯದಿಂದ, ಅವರು ಸಹ ಅಧ್ಯಯನ ಮತ್ತು ಕ್ರೈಸ್ತ ಕೂಟಗಳ ಮೂಲಕ ತಮ್ಮ ಎಣ್ಣೆಯ ಸರಬರಾಯಿಯನ್ನು ಯಥೇಷ್ಟವಾಗಿ ಇಟ್ಟುಕೊಳ್ಳುತ್ತಾರೆ. ಸಾರುವ ಹಾಗೂ ಬೋಧಿಸುವ ಕೆಲಸದ ಮೂಲಕ ಮತ್ತು ಹೀಗೆ ತಮ್ಮ ಅಭಿಷಿಕ್ತ ಸಹೋದರರ ಜೊತೆಯಲ್ಲಿ ‘ವ್ಯಾಪಾರ ಮಾಡುವ’ ಮೂಲಕ ಅವರು ತಮ್ಮ ಬೆಳಕನ್ನು ಪ್ರಕಾಶಿಸುತ್ತಾರೆ. ಆದರೂ, ತಲಾಂತುಗಳು ತಮ್ಮ ಕೈಗೆ ಕೊಡಲ್ಪಟ್ಟಿವೆಯೆಂಬುದನ್ನು ಅಭಿಷಿಕ್ತ ಕ್ರೈಸ್ತರಿಗೆ ಚೆನ್ನಾಗಿ ತಿಳಿದಿದೆ. ಭೂಮಿಯ ಮೇಲಿರುವ ಕರ್ತನ ಆಸ್ತಿಯನ್ನು ನೋಡಿಕೊಳ್ಳುವ ವಿಧಕ್ಕೆ ಅವರು ಲೆಕ್ಕವನ್ನು ಒಪ್ಪಿಸುತ್ತಾರೆ. ಅವರ ಸಂಖ್ಯೆಯು ಕೊಂಚವಾಗಿದ್ದರೂ ಈ ವಿಷಯದಲ್ಲಿ ಅವರು ತಮ್ಮ ಜವಾಬ್ದಾರಿಯನ್ನು ಮಹಾಸಮೂಹದವರಿಗೆ ಬಿಟ್ಟುಕೊಟ್ಟು ತೊರೆದುಬಿಡರು. ಇದನ್ನು ಮನಸ್ಸಿನಲ್ಲಿಟ್ಟವರಾಗಿ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಅರಸನ ವ್ಯಾಪಾರದ ಜಾಗ್ರತೆ ವಹಿಸುವುದರಲ್ಲಿ ಮುಂದಾಳುತ್ವವನ್ನು ವಹಿಸುತ್ತ ಮುಂದುವರಿಯುತ್ತಾನೆ ಮತ್ತು ಮಹಾಸಮೂಹದ ಸಮರ್ಪಣಾಭಾವದ ಸದಸ್ಯರು ಕೊಡುವ ಬೆಂಬಲಕ್ಕಾಗಿ ಕೃತಜ್ಞನಾಗಿದ್ದಾನೆ. ಹಾಗೂ ಮಹಾಸಮೂಹದವರು ತಮ್ಮ ಅಭಿಷಿಕ್ತ ಸಹೋದರರ ಜವಾಬ್ದಾರಿಯನ್ನು ಮಾನ್ಯಮಾಡುತ್ತ, ಅವರ ಮೇಲ್ವಿಚಾರಣೆಯ ಕೆಳಗೆ ಕೆಲಸ ಮಾಡುವುದನ್ನು ಸುಯೋಗವೆಂದು ಎಣಿಸುತ್ತಾರೆ.

21 ಹೀಗೆ, ಈ ಎರಡು ಸಾಮ್ಯಗಳು 1919ರಲ್ಲಿ ಮತ್ತು ಆ ಇಸವಿಯ ಸುತ್ತಮುತ್ತ ನಡೆದ ಘಟನೆಗಳ ಮೇಲೆ ಬೆಳಕನ್ನು ಬೀರುತ್ತವಾದರೂ, ಅವುಗಳ ಮೂಲತತ್ತ್ವಗಳು ಕೊನೆಯ ದಿನಗಳಾದ್ಯಂತವಾಗಿ ಸಕಲ ಸತ್ಕ್ರೈಸ್ತರಿಗೆ ಅನ್ವಯಿಸುತ್ತದೆ. ಈ ರೀತಿಯಲ್ಲಿ, ಹತ್ತು ಮಂದಿ ಕನ್ಯೆಯರ ಸಾಮ್ಯದ ಅಂತ್ಯದಲ್ಲಿ ಯೇಸು ಕೊಟ್ಟ ಬುದ್ಧಿವಾದವು 1919ಕ್ಕೆ ಮುಂಚೆ ಇದ್ದ ಅಭಿಷಿಕ್ತ ಕ್ರೈಸ್ತರಿಗೆ ಪ್ರಥಮವಾಗಿ ಅನ್ವಯಿಸುತ್ತದಾದರೂ, ತತ್ವತಃ ಇದು ಈಗಲೂ ಪ್ರತಿಯೊಬ್ಬ ಕ್ರೈಸ್ತನಿಗೆ ಅನ್ವಯಿಸುತ್ತದೆ. ಆದುದರಿಂದ ನಾವೆಲ್ಲರೂ ಯೇಸುವಿನ ಈ ಮಾತುಗಳಿಗೆ ಕಿವಿಗೊಡೋಣ: “ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.”​—⁠ಮತ್ತಾಯ 25:13.

[ಪಾದಟಿಪ್ಪಣಿಗಳು]

^ ಪ್ಯಾರ. 5 ಅದೇ ರೀತಿಯಲ್ಲಿ, ಅಪೊಸ್ತಲರ ಮರಣಾನಂತರ, “ಕ್ರೂರವಾದ ತೋಳಗಳು” ಅಭಿಷಿಕ್ತ ಕ್ರೈಸ್ತ ಹಿರಿಯರ ವರ್ಗದೊಳಗಿಂದ ಬಂದವು.​—⁠ಅ. ಕೃತ್ಯಗಳು 20:29, 30.

^ ಪ್ಯಾರ. 10 ಯೇಸುವಿನ ಸಾಮ್ಯದ ಇನ್ನೊಂದು ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾಗಿರುವ, “ಸಮಾಧಾನದ ಪ್ರಭು”ವಿನ ಕೆಳಗೆ ಲೋಕವ್ಯಾಪಕ ಭದ್ರತೆ (ಇಂಗ್ಲಿಷ್‌) ಎಂಬ ಪುಸ್ತಕದ ಅಧ್ಯಾಯಗಳು 5 ಮತ್ತು 6 ನೋಡಿ.

ನೀವು ವಿವರಿಸಬಲ್ಲಿರೊ?

• ಯೇಸು ತನ್ನ ಶಿಷ್ಯರನ್ನು ಯಾವಾಗ ಪರೀಕ್ಷಿಸಿದನು, ಮತ್ತು ಅವನೇನನ್ನು ಕಂಡನು?

• ಕೆಲವು ಮಂದಿ ಅಭಿಷಿಕ್ತ ಕ್ರೈಸ್ತರು ‘ಆ ಕೆಟ್ಟ ಆಳಿನ’ ಮನೋಭಾವವನ್ನು ಬೆಳೆಸಿಕೊಂಡದ್ದೇಕೆ?

• ನಾವು ಆಧ್ಯಾತ್ಮಿಕವಾಗಿ ವಿವೇಕವುಳ್ಳವರೆಂದು ಹೇಗೆ ತೋರಿಸಬಲ್ಲೆವು?

• ಯೇಸುವಿನ ನಂಬಿಗಸ್ತ ಅಭಿಷಿಕ್ತ ಸಹೋದರರನ್ನು ಅನುಕರಿಸುತ್ತ, ನಾವು ಯಾವ ವಿಧದಲ್ಲಿ ‘ವ್ಯಾಪಾರಮಾಡುತ್ತಾ’ ಮುಂದುವರಿಯಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1. ‘ಆಳನ್ನು’ ಪರೀಕ್ಷೆ ಮಾಡುವಾಗ ಯೇಸು ಏನನ್ನು ಕಂಡುಹಿಡಿದನು?

2, 3. “ಕೆಟ್ಟ ಆಳು” ಬಂದದ್ದು ಎಲ್ಲಿಂದ, ಮತ್ತು ಅದು ಹೇಗೆ ವಿಕಸನಗೊಂಡಿತು?

4. ಯೇಸು ಆ ‘ಕೆಟ್ಟ ಆಳಿನ’ ಜೊತೆಗೆ ಮತ್ತು ಅದೇ ಮನೋಭಾವವನ್ನು ತೋರಿಸಿದವರೆಲ್ಲರೊಂದಿಗೆ ಹೇಗೆ ವರ್ತಿಸಿದನು?

5. ‘ಕೆಟ್ಟ ಆಳಿಗೆ’ ವೈದೃಶ್ಯವಾಗಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹೇಗೆ ಪ್ರತಿವರ್ತಿಸಿತು?

6. (ಎ) ತನ್ನ ನಂಬಿಗಸ್ತ ಆಳು ವರ್ಗದ ವಿವೇಕವನ್ನು ಯೇಸು ಹೇಗೆ ದೃಷ್ಟಾಂತಿಸಿದನು? (ಬಿ) ಇಸವಿ 1914ಕ್ಕೆ ಮುಂಚೆ ಅಭಿಷಿಕ್ತ ಕ್ರೈಸ್ತರು ಯಾವ ಸಂದೇಶವನ್ನು ಘೋಷಿಸಿದರು?

7. ಅಭಿಷಿಕ್ತ ಕ್ರೈಸ್ತರು ಯಾವಾಗ ಮತ್ತು ಏಕೆ ಸಾಂಕೇತಿಕವಾಗಿ ‘ನಿದ್ದೆ ಹೋದರು’?

8. “ಇಗೋ, ಮದಲಿಂಗನು!” ಎಂಬ ಕರೆಗೆ ಯಾವುದು ದಾರಿಮಾಡಿಕೊಟ್ಟಿತು ಮತ್ತು ಅಭಿಷಿಕ್ತ ಕ್ರೈಸ್ತರು ಏನು ಮಾಡುವ ಸಮಯ ಅದಾಗಿತ್ತು?

9, 10. ಕೆಲವು ಮಂದಿ ಕ್ರೈಸ್ತರು 1919ರಲ್ಲಿ ‘ಬುದ್ಧಿವಂತರೂ’ ಇತರರು ‘ಬುದ್ಧಿಯಿಲ್ಲದವರೂ’ ಆಗಿದ್ದುದೇಕೆ?

11. ಬುದ್ಧಿಹೀನ ಕನ್ಯೆಯರಿಗೆ ಏನು ಸಂಭವಿಸಿತು?

12. (ಎ) ನಂಬಿಗಸ್ತಿಕೆಯನ್ನು ದೃಷ್ಟಾಂತಿಸಲು ಯೇಸು ಏನನ್ನು ಉಪಯೋಗಿಸಿದನು? (ಬಿ) “ದೇಶಾಂತರಕ್ಕೆ” ಹೋದ ಮನುಷ್ಯನಾರು?

13. ಯೇಸು ಹೇಗೆ ಚಟುವಟಿಕೆಯ ಒಂದು ದೊಡ್ಡ ಕ್ಷೇತ್ರವನ್ನು ಸಿದ್ಧಮಾಡಿ ತನ್ನ ‘ಆಳುಗಳಿಗೆ’ ವ್ಯಾಪಾರ ಮಾಡುವ ಅಧಿಕಾರವನ್ನು ಕೊಟ್ಟನು?

14. ಎಲ್ಲರೂ ಏಕಪ್ರಕಾರದ ವ್ಯಾಪಾರದಲ್ಲಿ ತೊಡಗಬೇಕೆಂದು ಏಕೆ ನಿರೀಕ್ಷಿಸಲಾಗಲಿಲ್ಲ?

15, 16. (ಎ) ಲೆಕ್ಕ ತೀರಿಸುವ ಸಮಯ ಯಾವಾಗ ಬಂತು? (ಬಿ) ‘ವ್ಯಾಪಾರ ಮಾಡುವ’ ಯಾವ ಹೊಸ ಸಂದರ್ಭಗಳನ್ನು ನಂಬಿಗಸ್ತರಿಗೆ ಒಪ್ಪಿಸಲಾಯಿತು?

17. ನಂಬಿಗಸ್ತರಾದ ಅಭಿಷಿಕ್ತ ಕ್ರೈಸ್ತರು ‘ದಣಿಯ ಸಂತೋಷದಲ್ಲಿ ಸೇರಿದ್ದು’ ಹೇಗೆ?

18. ಕೆಲವರು ಪರೀಕ್ಷೆಯಲ್ಲಿ ಏಕೆ ಉತ್ತೀರ್ಣರಾಗಲಿಲ್ಲ, ಮತ್ತು ಪರಿಣಾಮವೇನು?

19. ಪರೀಕ್ಷಾ ಕಾರ್ಯಗತಿ ಯಾವ ವಿಧದಲ್ಲಿ ಮುಂದುವರಿಯುತ್ತದೆ, ಮತ್ತು ಎಲ್ಲ ಅಭಿಷಿಕ್ತ ಕ್ರೈಸ್ತರು ಏನು ಮಾಡಲು ದೃಢನಿಶ್ಚಯದಿಂದಿದ್ದಾರೆ?

20. (ಎ) ಇಂದು ಬೇರೆ ಕುರಿಗಳು ಏನು ಮಾಡಲು ದೃಢನಿಶ್ಚಯದಿಂದಿದ್ದಾರೆ? (ಬಿ) ಅಭಿಷಿಕ್ತ ಕ್ರೈಸ್ತರಿಗೆ ಯಾವುದರ ಅರಿವಿದೆ?

21. ಯಾವ ಬುದ್ಧಿವಾದವು ಕ್ರೈಸ್ತರೆಲ್ಲರಿಗೆ 1919ರ ಮುಂಚಿನಿಂದ ಹಿಡಿದು ನಮ್ಮ ದಿನಗಳ ತನಕವೂ ಅನ್ವಯಿಸುತ್ತದೆ?

[ಪುಟ 16ರಲ್ಲಿರುವ ಚೌಕ]

ಯೇಸು ಯಾವಾಗ ಬರುತ್ತಾನೆ?

ಮತ್ತಾಯ 24 ಮತ್ತು 25ನೆಯ ಅಧ್ಯಾಯಗಳಲ್ಲಿ ಯೇಸು ‘ಬರುವದನ್ನು’ ವಿವಿಧ ಅರ್ಥಗಳಲ್ಲಿ ತಿಳಿಸಲಾಗಿದೆ. ಹಾಗೆ ‘ಬರಲು’ ಅವನು ತಾನಿರುವ ಸ್ಥಳವನ್ನು ಶಾರೀರಿಕವಾಗಿ ಬಿಟ್ಟುಬರಬೇಕಾಗಿಲ್ಲ. ಬದಲಾಗಿ, ಮಾನವಕುಲದ ಕಡೆಗೆ ಇಲ್ಲವೆ ತನ್ನ ಶಿಷ್ಯರ ಕಡೆಗೆ, ಅನೇಕ ವೇಳೆ ನ್ಯಾಯವಿಚಾರಣೆಗಾಗಿ, ತನ್ನ ಗಮನವನ್ನು ತಿರುಗಿಸುವ ಅರ್ಥದಲ್ಲಿ ಅವನು ‘ಬರುತ್ತಾನೆ.’ ಹೀಗೆ 1914ರಲ್ಲಿ ಅವನು ಸಿಂಹಾಸನಾರೂಢನಾದ ಅರಸನೋಪಾದಿ, ತನ್ನ ಸಾನ್ನಿಧ್ಯವನ್ನು ಪ್ರಾರಂಭಿಸಲು ‘ಬಂದನು.’ (ಮತ್ತಾಯ 16:28; 17:1; ಅ. ಕೃತ್ಯಗಳು 1:11) 1918ರಲ್ಲಿ, ಅವನು ಒಡಂಬಡಿಕೆಯ ದೂತನಾಗಿ ‘ಬಂದು,’ ಯೆಹೋವನನ್ನು ಸೇವಿಸುವವರೆಂದು ಹೇಳಿಕೊಳ್ಳುವವರನ್ನು ನ್ಯಾಯವಿಚಾರಿಸಲು ಶುರುಮಾಡಿದನು. (ಮಲಾಕಿಯ 3:1-3; 1 ಪೇತ್ರ 4:17) ಅವನು ಅರ್ಮಗೆದೋನಿನಲ್ಲಿ ಯೆಹೋವನ ವೈರಿಗಳಿಗೆ ನ್ಯಾಯತೀರ್ಪನ್ನು ವಿಧಿಸಲು ‘ಬರುವನು.’​—⁠ಪ್ರಕಟನೆ 19:​11-16.

ಮತ್ತಾಯ 24:​29-44 ಮತ್ತು 25:​31-46ರಲ್ಲಿ ಅನೇಕ ಸಲ ಸೂಚಿಸಲ್ಪಟ್ಟಿರುವ ಬರೋಣವು (ಅಥವಾ, ಆಗಮನ) ‘ಮಹಾ ಸಂಕಟದ’ (NW) ಸಮಯದಲ್ಲಿ ಆಗುವುದು. (ಪ್ರಕಟನೆ 7:14) ಆದರೆ ಮತ್ತಾಯ 24:45ರಿಂದ 25:30ರಲ್ಲಿ ಅನೇಕ ಬಾರಿ ಸೂಚಿಸಲ್ಪಟ್ಟಿರುವ ಅವನ ಬರೋಣವು 1918 ಮತ್ತು ಅದರ ಬಳಿಕ ಅವನ ಶಿಷ್ಯರೆಂದು ಹೇಳಿಕೊಳ್ಳುವವರನ್ನು ನ್ಯಾಯವಿಚಾರಿಸುವ ಸಂಬಂಧದಲ್ಲಿದೆ. ಉದಾಹರಣೆಗೆ, ನಂಬಿಗಸ್ತನಾದ ಆಳಿಗೆ ದೊರೆತ ಬಹುಮಾನ, ಬುದ್ಧಿಹೀನ ಕನ್ಯೆಯರಿಗಾದ ನ್ಯಾಯತೀರ್ಪು ಮತ್ತು ಯಜಮಾನನ ತಲಾಂತನ್ನು ಬಚ್ಚಿಟ್ಟ ಆ ಸೋಮಾರಿಯಾದ ಆಳಿಗೆ ದೊರೆತ ನ್ಯಾಯತೀರ್ಪು, ಯೇಸು ಮಹಾಸಂಕಟದ ಸಮಯದಲ್ಲಿ ‘ಬರುವಾಗ’ ನಡೆಯುವುದೆಂದು ಹೇಳುವುದು ನ್ಯಾಯಸಮ್ಮತವಾಗಿರುವುದಿಲ್ಲ. ಏಕೆಂದರೆ ಹಾಗೆ ಹೇಳುವಲ್ಲಿ, ಅನೇಕ ಮಂದಿ ಅಭಿಷಿಕ್ತರು ಮಹಾಸಂಕಟದ ಸಮಯದಲ್ಲಿ ಅಪನಂಬಿಗಸ್ತರಾಗಿ ಕಂಡುಬರುವರೆಂದೂ ಅವರ ಸ್ಥಾನಕ್ಕೆ ಆಗ ಇತರರನ್ನು ಭರ್ತಿಮಾಡಬೇಕಾಗುವುದೆಂದೂ ಅದು ಸೂಚಿಸುವುದು. ಆದರೆ, ಕ್ರಿಸ್ತನ ಎಲ್ಲಾ ಅಭಿಷಿಕ್ತ ಆಳುಗಳಿಗೆ ಮಹಾಸಂಕಟ ಬರುವುದರೊಳಗೆ ಖಾಯಂ ಆಗಿ ಮುದ್ರೆ ಒತ್ತಲ್ಪಡಲಾಗುವುದೆಂದು ಪ್ರಕಟನೆ 7:3 ಸೂಚಿಸುತ್ತದೆ.

[ಪುಟ 14ರಲ್ಲಿರುವ ಚಿತ್ರ]

“ಕೆಟ್ಟ ಆಳು” 1919ರಲ್ಲಿ ಯಾವ ಆಶೀರ್ವಾದಗಳನ್ನೂ ಪಡೆಯಲಿಲ್ಲ

[ಪುಟ 15ರಲ್ಲಿರುವ ಚಿತ್ರ]

ಬುದ್ಧಿವಂತೆಯರಾಗಿದ್ದ ಕನ್ಯೆಯರು ಮದಲಿಂಗನು ಬಂದಾಗ ಸಿದ್ಧವಾಗಿದ್ದರು

[ಪುಟ 17ರಲ್ಲಿರುವ ಚಿತ್ರ]

ನಂಬಿಗಸ್ತ ಆಳುಗಳು “ವ್ಯಾಪಾರ” ಮಾಡಿದ್ದರು

ಸೋಮಾರಿ ಆಳು ಹಾಗೆ ಮಾಡಿರಲಿಲ್ಲ

[ಪುಟ 18ರಲ್ಲಿರುವ ಚಿತ್ರಗಳು]

ಅಭಿಷಿಕ್ತರೂ “ಮಹಾಸಮೂಹ”ದವರೂ ತಮ್ಮ ಬೆಳಕನ್ನು ಪ್ರಕಾಶಿಸುತ್ತಾ ಹೋಗುತ್ತಾರೆ