ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವರ್ಣದ್ರವ್ಯಗಳು ಪುರಾತನಕಾಲದ ಸೌಂದರ್ಯವರ್ಧಕ ಪದಾರ್ಥಗಳು

ವರ್ಣದ್ರವ್ಯಗಳು ಪುರಾತನಕಾಲದ ಸೌಂದರ್ಯವರ್ಧಕ ಪದಾರ್ಥಗಳು

ವರ್ಣದ್ರವ್ಯಗಳು ಪುರಾತನಕಾಲದ ಸೌಂದರ್ಯವರ್ಧಕ ಪದಾರ್ಥಗಳು

ಕಾನಾನ್ಯರ ಸೇನಾಪತಿಯಾದ ಸೀಸೆರನು ಯುದ್ಧದಿಂದ ಹಿಂದಿರುಗಿ ಬರುವುದನ್ನು ಅವನ ತಾಯಿಯು ಬಹಳ ಕಾತುರದಿಂದ ಎದುರುನೋಡುತ್ತಿದ್ದಳು. ಅವನು ತಾನು ಜಯಿಸಿದ ಜನರಿಂದ ಕೊಳ್ಳೆಹೊಡೆದು ತರಬಹುದಾದ ಅಮೂಲ್ಯ ವಸ್ತುಗಳನ್ನು ಅವಳು ಮನಸ್ಸಲ್ಲೇ ಚಿತ್ರಿಸಿಕೊಳ್ಳುತ್ತಿದ್ದಳು. ಅವಳು ನಿರೀಕ್ಷಿಸುತ್ತಿದ್ದ ವಸ್ತುಗಳಲ್ಲಿ, ‘ನಾನಾ ವರ್ಣಗಳುಳ್ಳ ಬಟ್ಟೆಗಳು ವಿಚಿತ್ರವಾಗಿ ಕಸೂತಿಹಾಕಿದ ಒಂದೆರಡು ವಸ್ತ್ರಗಳು ಕಂಠಮಾಲೆ’ ಮುಂತಾದವುಗಳು ಸೇರಿದ್ದವು. (ನ್ಯಾಯಸ್ಥಾಪಕರು 5:30) ಮನುಷ್ಯನು ಯಾವಾಗಲೂ ಸೌಂದರ್ಯವನ್ನು ಗಣ್ಯಮಾಡಿದ್ದಾನೆ ಮತ್ತು ಸೌಂದರ್ಯವನ್ನು ವರ್ಧಿಸುವಂಥದ್ದರಲ್ಲಿ ಅಗ್ರಗಣ್ಯವಾದದ್ದು ಬಣ್ಣವಾಗಿದೆ. ಆದುದರಿಂದ ಬಟ್ಟೆಗಳಿಗೆ ಮತ್ತು ಮನೆಸಾಮಗ್ರಿಗಳಿಗೆ ಬಣ್ಣಹಾಕುವ ಇಚ್ಛೆಯು ಪುರಾತನ ಕಾಲಗಳಲ್ಲಿಯೇ ಇತ್ತು ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ಕಾರಣದಿಂದಾಗಿಯೇ, ಬಣ್ಣಹಾಕುವ (ಡೈಇಂಗ್‌) ಕೌಶಲ ಆರಂಭಗೊಂಡಿತು.

ರಂಗುಬಳಿಯುವ ತಂತ್ರವನ್ನು ಉಪಯೋಗಿಸುವ ಮೂಲಕ ದಾರ, ವಸ್ತ್ರ, ಮತ್ತು ಇತರ ವಸ್ತುಗಳಿಗೆ ನಿರ್ದಿಷ್ಟ ಬಣ್ಣಗಳನ್ನು ಹಾಗೂ ಛಾಯೆಗಳನ್ನು ಕೊಡುವ ಕಲೆಯನ್ನು ಬಣ್ಣಹಾಕುವುದು ಎಂದು ಕರೆಯಲಾಗುತ್ತದೆ. ಅಬ್ರಹಾಮನ ಕಾಲಗಳಿಗಿಂತ ಮುಂಚೆಯೇ ಇದು ಪ್ರಸಿದ್ಧವಾಗಿದ್ದು ಉಪಯೋಗದಲ್ಲಿತ್ತು ಮತ್ತು ಬಹುಶಃ ಇದು ಬಟ್ಟೆ ನೇಯುವ ಕಲೆಯಷ್ಟೇ ಹಳೆಯದಾಗಿದೆ. ಇಸ್ರಾಯೇಲ್ಯರು, ದೇವದರ್ಶನದ ಗುಡಾರಕ್ಕೆ ಮತ್ತು ಯಾಜಕರು ಧರಿಸಬೇಕಾದ ವಸ್ತ್ರಗಳಿಗೆ ನೀಲಿ ಧೂಮ್ರ ರಕ್ತವರ್ಣಗಳುಳ್ಳ ದಾರಗಳು ಮತ್ತು ಇನ್ನೂ ಮುಂತಾದ ವಸ್ತುಗಳನ್ನು ಉಪಯೋಗಿಸುತ್ತಿದ್ದರು. (ವಿಮೋಚನಕಾಂಡ ಅಧ್ಯಾಯಗಳು 25-28, 35, 38, 39 ನೋಡಿರಿ.) ಹಿಂದಿನ ಕಾಲಗಳಲ್ಲಿ ಬಣ್ಣಹಾಕುವುದು ಗೃಹಉದ್ಯಮವಾಗಿತ್ತು, ಆದರೆ ಇದು ಕ್ರಮೇಣ ಬೇರೆ ಬೇರೆ ಸ್ಥಳಗಳಲ್ಲಿ ಒಂದು ವಾಣಿಜ್ಯ ಉದ್ಯಮವಾಗಿ ಪರಿಣಮಿಸಿತು. ಹಿಂದೆ ಐಗುಪ್ತ್ಯರು ಅವರ ವಿಶೇಷವಾಗಿ ಉಜ್ವಲವಾದ ಬಣ್ಣಹಾಕಿದ ಸರಕುಗಳಿಗೆ ಖ್ಯಾತರಾಗಿದ್ದರು. ಯೆಹೆಜ್ಕೇಲ ಪುಸ್ತಕದ 27ನೇ ಅಧ್ಯಾಯದ 7ನೆಯ ವಚನದಲ್ಲಿ ನಾವು ಓದುವುದು: “ನಿನ್ನ ಹಾಯಿಯು ನಿನಗೆ ಧ್ವಜವೂ ಆಗಲೆಂದು ಅದನ್ನು ಐಗುಪ್ತದ ಕಸೂತಿಯ [“ವಿವಿಧ ಬಣ್ಣಗಳ,” NW] ನಾರುಬಟ್ಟೆಯಿಂದ ಮಾಡಿದರು. ನಿನ್ನ ಮೇಲ್ಕಟ್ಟು ಎಲೀಷಕರಾವಳಿಯ ಧೂಮ್ರರಕ್ತವರ್ಣಗಳಿಂದ ಚಿತ್ರಿತವಾಗಿತ್ತು.” ಐಗುಪ್ತವು ಪತನಗೊಂಡ ನಂತರ, ತೂರ್‌ ಮತ್ತು ಇತರ ಫಿನಿಷಿಯನ್‌ ಪಟ್ಟಣಗಳು ವರ್ಣದ್ರವ್ಯಗಳ ಪ್ರಾಮುಖ್ಯ ಕೇಂದ್ರಗಳಾದವು. ಆದರೆ ಈ ವರ್ಣದ್ರವ್ಯಗಳನ್ನು ಹೇಗೆ ತಯಾರಿಸಲಾಗುತ್ತಿತ್ತು?

ಆರಂಭದ ಕಾರ್ಯಗತಿಗಳು

ಬಣ್ಣಹಾಕುವ ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದ್ದವು. ಕೆಲವೊಮ್ಮೆ ದಾರಕ್ಕೆ ಬಣ್ಣಹಾಕಲಾಗುತ್ತಿತ್ತು, ಇನ್ನು ಕೆಲವು ಸಂದರ್ಭಗಳಲ್ಲಿ ಸಿದ್ಧಗೊಂಡಿರುವ ಬಟ್ಟೆಗೆ ಬಣ್ಣಹಾಕಲಾಗುತ್ತಿತ್ತು. ದಾರವನ್ನು ವರ್ಣದ್ರವ್ಯದಲ್ಲಿ ಎರಡು ಬಾರಿ ತೋಯಿಸಿಟ್ಟು, ನಂತರ ಎರಡನೆಯ ಬಾರಿ ಅದನ್ನು ತೊಟ್ಟಿಯಿಂದ ಹೊರತೆಗೆಯುವಾಗ ಚೆನ್ನಾಗಿ ಹಿಂಡಲಾಗುತ್ತಿತ್ತು. ಹೀಗೆ ಮಾಡುವ ಮೂಲಕ ಅಗತ್ಯವಿರುವಷ್ಟು ವರ್ಣದ್ರವ್ಯ ಅದರಲ್ಲಿ ಉಳಿಯುತ್ತಿತ್ತು. ತದನಂತರ, ದಾರವು ಒಣಗುವಂತೆ ಅದನ್ನು ಹರವಿ ಇಡಲಾಗುತ್ತಿತ್ತು.

ಪ್ರತಿಯೊಂದು ಬಟ್ಟೆಗೆ ಬೇರೆ ಬೇರೆ ರೀತಿಯಲ್ಲಿ ಬಣ್ಣಗಳನ್ನು ಬಳಸಬೇಕಾಗುತ್ತಿತ್ತು. ಕೆಲವೊಮ್ಮೆ ಬಣ್ಣವು ಸ್ವಾಭಾವಿಕವಾಗಿ ಬಟ್ಟೆಗೆ ಸ್ಥಿರವಾಗಿ ಅಂಟಿಕೊಳ್ಳುತ್ತಿತ್ತು. ಆದರೆ ಇಂಥ ಸಂದರ್ಭಗಳು ಬಹಳ ಅಪರೂಪ. ಆದುದರಿಂದ ಬಣ್ಣವು ಸ್ವಾಭಾವಿಕವಾಗಿ ಬಟ್ಟೆಗೆ ಸ್ಥಿರವಾಗಿ ಅಂಟಿಕೊಳ್ಳದಿದ್ದಾಗ, ಬಟ್ಟೆ ಮತ್ತು ವರ್ಣದ್ರವ್ಯ ಇವೆರಡರೊಂದಿಗೂ ಹೊಂದಿಕೊಳ್ಳುವ ಮಾರ್ಡೆಂಟ್‌ (ಬಣ್ಣವನ್ನು ಸ್ಥಿರೀಕರಿಸುವ ಪದಾರ್ಥ) ಎಂಬ ಪದಾರ್ಥವನ್ನು ಮೊದಲು ಆ ಬಟ್ಟೆಗೆ ಹಚ್ಚಬೇಕಾಗುತ್ತಿತ್ತು. ಯಾವುದೇ ಪದಾರ್ಥವನ್ನು ಮಾರ್ಡೆಂಟ್‌ ಆಗಿ ಉಪಯೋಗಿಸಬೇಕಾದರೆ, ಕಡಿಮೆಪಕ್ಷ ಅದು ಬಣ್ಣದೊಂದಿಗೆ ಹೊಂದಿಕೊಳ್ಳಬೇಕು ಮತ್ತು ಈ ಮೂಲಕ ಬಣ್ಣವನ್ನು ಸ್ಥಿರ ಬಣ್ಣವಾಗಿ ಮಾರ್ಪಡಿಸಬೇಕು. ಐಗುಪ್ತ್ಯರು, ಬಣ್ಣಹಾಕುವ ಕಾರ್ಯಗತಿಗಳಲ್ಲಿ ಮಾರ್ಡೆಂಟ್‌ ಅನ್ನು ಉಪಯೋಗಿಸಿದರೆಂದು ಆವಿಷ್ಕಾರಗಳು ತೋರಿಸುತ್ತವೆ. ಉದಾಹರಣೆಗೆ, ಅವರು ಉಪಯೋಗಿಸುತ್ತಿದ್ದ ಬಣ್ಣಗಳು ಕೆಂಪು, ಹಳದಿ, ಮತ್ತು ನೀಲಿ ಬಣ್ಣಗಳಾಗಿದ್ದವು ಮತ್ತು ಈ ಬಣ್ಣಗಳಿಗೆ ಆರ್ಸನಿಕ್‌, ಕಬ್ಬಿಣ, ಹಾಗೂ ತವರದ ಆಕ್ಸೈಡ್‌ಗಳನ್ನು ಮಾರ್ಡೆಂಟ್‌ಗಳಾಗಿ ಬೆರೆಸದಿದ್ದರೆ ಅದನ್ನು ನೇರವಾಗಿ ಬಟ್ಟೆಗಳಿಗೆ ಹಾಕಿ ಸ್ಥಿರೀಕರಿಸಲು ಸಾಧ್ಯವಾಗುತ್ತಿರಲಿಲ್ಲವೆಂದು ಹೇಳಲಾಗುತ್ತದೆ.

ಪ್ರಾಣಿಯ ಚರ್ಮಗಳನ್ನು ಮೊದಲು ಹದಮಾಡಿ, ನಂತರ ಅದಕ್ಕೆ ವರ್ಣದ್ರವ್ಯಗಳನ್ನು ಹಚ್ಚಲಾಗುತ್ತಿತ್ತು. ಇತ್ತೀಚೆಗೆ ಸಹ ಸಿರಿಯದಲ್ಲಿ, ಟಗರಿನ ಚರ್ಮವನ್ನು ಸುಮ್ಮಾಕುವಿನಲ್ಲಿ ಹದಮಾಡಿ, ನಂತರ ಅದಕ್ಕೆ ಬಣ್ಣವನ್ನು ಹಾಕಲಾಯಿತು. ಬಣ್ಣವು ಒಣಗಿದ ನಂತರ, ಚರ್ಮವನ್ನು ಎಣ್ಣೆಯಿಂದ ಉಜ್ಜಿ, ಅದಕ್ಕೆ ಪಾಲಿಶ್‌ ಮಾಡಲಾಗುತ್ತದೆ. ಬೆಡುಯಿನ್‌ರಿಂದ ಉಪಯೋಗಿಸಲ್ಪಡುವ ಪಾದರಕ್ಷೆಗಳು ಮತ್ತು ಇತರ ಚರ್ಮದ ವಸ್ತುಗಳಿಗೆ ಈ ರೀತಿಯಾಗಿಯೇ ಕೆಂಪು ಬಣ್ಣವನ್ನು ಹಾಕಲಾಗುತ್ತದೆ. ಇದು ನಮಗೆ, ದೇವದರ್ಶನ ಗುಡಾರಕ್ಕೆ ಉಪಯೋಗಿಸಲ್ಪಟ್ಟ “ಕೆಂಪುಬಣ್ಣದ ಕುರಿದೊಗಲು”ಗಳನ್ನು ನೆನಪಿಗೆ ತರಬಹುದು.​—⁠ವಿಮೋಚನಕಾಂಡ 25:⁠5.

ಬಣ್ಣಹಾಕಲಾದ ವಸ್ತುಗಳ ಕುರಿತ ಒಂದು ಸ್ವಾರಸ್ಯಕರ ವರದಿಯು, ಅಶ್ಶೂರ್ಯರ ರಾಜ IIIನೇ ತಿಗ್ಲತ್ಪಿಲೆಸೆರನ ಕುರಿತಾದ ಒಂದು ಕಟ್ಟಡದಲ್ಲಿನ ಕೆತ್ತನೆಯಲ್ಲಿ ಕಂಡುಬರುತ್ತದೆ. ಅವನು, ಪ್ಯಾಲೆಸ್ಟೀನ್‌ ಮತ್ತು ಸಿರಿಯದ ವಿರುದ್ಧ ನಡೆಸಿದ ತನ್ನ ಮಿಲಿಟರಿ ಕಾರ್ಯಾಚರಣೆಗಳ ಕುರಿತು ತಿಳಿಸಿದ ನಂತರ, ತೂರಿನ ಹಿರಾಮ ಮತ್ತು ಇತರ ರಾಜರಿಂದ ದೊರೆತ ಕಪ್ಪಕಾಣಿಕೆಯ ಕುರಿತು ತಿಳಿಸುತ್ತಾನೆ. ಪಟ್ಟಿಮಾಡಲಾದ ವಸ್ತುಗಳಲ್ಲಿ “ವಿವಿಧ ಬಣ್ಣಗಳ ನಾರುಮಡಿಗಳು, . . . ನೀಲಿ ಬಣ್ಣದ ಉಣ್ಣೆ, ನೇರಳೆ ಬಣ್ಣದ ಉಣ್ಣೆ, . . . ನೇರಳೆ ಬಣ್ಣದ ಕುರಿಮರಿದೊಗಲುಗಳೂ, (ಮತ್ತು) ಅಗಲವಾಗಿ ತೆರೆದಿರುವ ರೆಕ್ಕೆಗಳಿಗೆ ನೀಲಿ ಬಣ್ಣವನ್ನು ಹಾಕಲಾಗಿರುವ ಕಾಡು ಹಕ್ಕಿಗಳು” ಸೇರಿವೆ.​—⁠ಜೆ. ಪ್ರಿಟ್‌ಚರ್ಡ್‌ ಸಂಪಾದಕನಾಗಿರುವ ಏನ್‌ಶಿಯೆಂಟ್‌ ನಿಯರ್‌ ಈಸ್ಟರ್ನ್‌ ಟೆಕ್ಸ್ಟ್‌, 1974, ಪುಟ 282, 283.

ವರ್ಣದ್ರವ್ಯಗಳ ಮೂಲಗಳು

ವರ್ಣದ್ರವ್ಯಗಳನ್ನು ವಿವಿಧ ಮೂಲಗಳಿಂದ ತಯಾರಿಸಲಾಗುತ್ತಿತ್ತು. ಪ್ಯಾಲೆಸ್ಟೀನ್‌ನಲ್ಲಿ, ಬಾದಾಮಿ ಎಲೆಗಳಿಂದ ಮತ್ತು ದಾಳಿಂಬೆ ಸಿಪ್ಪೆಯ ಪುಡಿಯಿಂದ ಹಳದಿ ವರ್ಣದ್ರವ್ಯಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಫೋನಿಷೀಯದವರು ಈ ಬಣ್ಣವನ್ನು ತಯಾರಿಸಲು, ಅರಸಿನ ಮತ್ತು ಕುಸುಂಬೆ ಹೂವನ್ನು ಸಹ ಉಪಯೋಗಿಸುತ್ತಿದ್ದರು. ಇಬ್ರಿಯರು, ದಾಳಿಂಬೆ ಮರದ ತೊಗಟೆಯಿಂದ ಕಪ್ಪು ವರ್ಣದ್ರವ್ಯವನ್ನು ಮತ್ತು ಮ್ಯಾಡರ್‌ ಬಳ್ಳಿಯ (ರೂಬಿಯ ಟಿಂಕ್‌ಟೋರಮ್‌) ಬೇರುಗಳಿಂದ ಕೆಂಪು ವರ್ಣದ್ರವ್ಯವನ್ನು ಉತ್ಪಾದಿಸಸಾಧ್ಯವಿತ್ತು. ಬಹುಶಃ ಐಗುಪ್ತ ಇಲ್ಲವೆ ಸಿರಿಯದಿಂದ ಪ್ಯಾಲೆಸ್ಟೀನ್‌ಗೆ ತರಲ್ಪಟ್ಟ ಇಂಡಿಗೊ ಸಸ್ಯಗಳನ್ನು (ಇಂಡಿಗೋಫೆರಾ ಟಿಂಕ್‌ಟೋರಿಯ) ನೀಲಿ ವರ್ಣದ್ರವ್ಯದ ಉತ್ಪಾದನೆಯಲ್ಲಿ ಉಪಯೋಗಿಸಸಾಧ್ಯವಿತ್ತು. ಉಣ್ಣೆಗೆ ಕೆನ್ನೀಲಿ ಬಣ್ಣವನ್ನು ಹಾಕಲು ಉಪಯೋಗಿಸಲಾಗುತ್ತಿದ್ದ ಒಂದು ವಿಧಾನವು, ಇಡೀ ರಾತ್ರಿ ಉಣ್ಣೆಯನ್ನು ದ್ರಾಕ್ಷಾರಸದಲ್ಲಿ ನೆನಸಿಟ್ಟು, ಅದರ ಮೇಲೆ ಮ್ಯಾಡರ್‌ ಪುಡಿಯನ್ನು ಚಿಮಿಕಿಸುವುದೇ ಆಗಿತ್ತು.

ಧೂಮ್ರರಕ್ತವರ್ಣ ಮತ್ತು ಕಿರಮಂಜಿ ಬಣ್ಣದ ವರ್ಣದ್ರವ್ಯಗಳ ಮೂಲವು ಅತ್ಯಂತ ಪುರಾತನದ್ದಾಗಿದೆ. ಅದು ಕಾಕ್ಸೀಡಿಯ (ಕಾಕಸ್‌ ಇಲಿಸಿಸ್‌) ಜಾತಿಯ ಪರಾವಲಂಬಿ ಹಮಾಪ್ಟರೀಯ ಕೀಟವಾಗಿದೆ. ಜೀವಂತವಿರುವ ಹೆಣ್ಣು ಕೀಟವು ಚೆರಿ ಹಣ್ಣಿನ ಬೀಜದ ಗಾತ್ರದಲ್ಲಿದ್ದು ಒಂದು ಬೆರಿ ಹಣ್ಣನ್ನು ಹೋಲುತ್ತದೆ. ಆದುದರಿಂದಲೇ ಗ್ರೀಕರು, “ಬೆರಿ” ಎಂಬ ಅರ್ಥ ಕೊಡುವ ಕೋಕ್‌ಕೋಸ್‌ ಎಂದು ಅದಕ್ಕೆ ಹೆಸರಿಟ್ಟಿದ್ದಾರೆ. ಈ ಕೀಟದ ಅರಬ್‌ ಹೆಸರು, ಕ್ವಿರ್ಮಿಸ್‌ ಅಥವಾ ಕರ್ಮಿಸ್‌ (ಕಿರುಮಂಜಿ ಕೀಟ) ಎಂದಾಗಿದೆ. ಈ ಹೆಸರಿನಿಂದಲೇ, “ಕ್ರಿಮ್‌ಸನ್‌” ಎಂಬ ಇಂಗ್ಲಿಷ್‌ ಪದವು ಬಂದಿರುತ್ತದೆ. ಈ ಕೀಟವು ಮಧ್ಯಪೂರ್ವದಾದ್ಯಂತ ಕಂಡುಬರುತ್ತದೆ. ಕೇವಲ ಅದರ ಮೊಟ್ಟೆಗಳಲ್ಲಿ ಕೆನ್ನೀಲಿ ಕೆಂಪು ಬಣ್ಣದ ಕರ್ಮಿಸಿಕ್‌ ಆಮ್ಲಭರಿತವಾಗಿರುವ ವರ್ಣದ್ರವ್ಯವು ದೊರೆಯುತ್ತದೆ. ಏಪ್ರಿಲ್‌ ತಿಂಗಳಿನ ಅಂತ್ಯದಷ್ಟಕ್ಕೆ, ರೆಕ್ಕೆಗಳನ್ನು ಕಳೆದುಕೊಂಡಿರುವ ಮತ್ತು ಮೊಟ್ಟೆಗಳಿಂದ ತುಂಬಿರುವ ಹೆಣ್ಣು ಕೀಟವು, ಕಿರುಮಂಜಿ ಓಕ್‌ (ಕ್ವರ್ಕಸ್‌ ಕಾಕಿಫರಾ) ಮರದ ಕೊಂಬೆಗಳಿಗೆ ಹಾಗೂ ಕೆಲವೊಮ್ಮೆ ಎಲೆಗಳಿಗೆ ತನ್ನ ಹೀರು ಕೊಳವೆಯ ಸಹಾಯದಿಂದ ಅಂಟಿಕೊಳ್ಳುತ್ತದೆ. ಈ ಕಿರುಮಂಜಿ ಕೀಟಗಳನ್ನು ಒಟ್ಟುಗೂಡಿಸಿ, ಒಣಗಿಸಲಾಗುತ್ತದೆ ಮತ್ತು ನಂತರ ಅವುಗಳನ್ನು ನೀರಿನಲ್ಲಿ ಕುದಿಸುವ ಮೂಲಕ ಬೆಲೆಬಾಳುವ ವರ್ಣದ್ರವ್ಯವನ್ನು ತಯಾರಿಸಲಾಗುತ್ತದೆ. ಈ ರೀತಿಯ ಕೆಂಪು ವರ್ಣದ್ರವ್ಯವನ್ನು ಗುಡಾರದ ಸಾಧನಸಾಮಗ್ರಿಗಳಿಗೆ ಹಾಗೂ ಇಸ್ರಾಯೇಲಿನ ಮಹಾಯಾಜಕನು ಧರಿಸುವ ವಸ್ತ್ರಗಳಿಗೆ ಉಪಯೋಗಿಸಲಾಗುತ್ತಿತ್ತು.

ನೀಲಿ ವರ್ಣದ್ರವ್ಯದ ಮೂಲವು ಒಂದು ವಿಧದ ಚಿಪ್ಪುಮೀನು (ಕಡುನೀಲಿ ಚಿಪ್ಪುಜೀವಿ) ಎಂದು ಹೇಳಲಾಗಿದೆ. ಮ್ಯೂರೆಕ್ಸ್‌ ಟ್ರಂಕ್ಯುಲಸ್‌ ಮತ್ತು ಮ್ಯೂರೆಕ್ಸ್‌ ಬ್ರ್ಯಾಂಡಾರಿಸ್‌ನಂತಹ ಚಿಪ್ಪುಮೀನು ಅಥವಾ ಮೃದ್ವಂಗಿಗಳಿಂದ ಕೆನ್ನೀಲಿ ವರ್ಣದ್ರವ್ಯವನ್ನು ತಯಾರಿಸಲಾಗುತ್ತಿತ್ತು. ಈ ಜೀವಿಗಳ ಗಂಟಲಿನಲ್ಲಿ ಒಂದು ಸಣ್ಣ ಗ್ರಂಥಿಯಿದ್ದು, ಅದರಲ್ಲಿ ಫ್ಲವರ್‌ ಎಂದು ಕರೆಯಲ್ಪಡುವ ಕೇವಲ ಒಂದು ತೊಟ್ಟು ದ್ರವವಿದೆ. ಆರಂಭದಲ್ಲಿ ಅದಕ್ಕೆ ಕೆನೆಯ ತೋರಿಕೆ ಮತ್ತು ಸಾಂದ್ರತೆಯಿರುತ್ತದೆ, ಆದರೆ ಗಾಳಿ ಹಾಗೂ ಬೆಳಕಿಗೆ ಒಡ್ಡಲ್ಪಟ್ಟಾಗ ಅದು ನಿಧಾನವಾಗಿ ಕಡುನೇರಳೆ ಅಥವಾ ಕೆಂಪನೆಯ ಕೆನ್ನೀಲಿ ಬಣ್ಣಕ್ಕೆ ಬದಲಾಗುತ್ತದೆ. ಈ ಚಿಪ್ಪುಮೀನುಗಳು ಮೆಡಿಟರೇನಿಯನ್‌ ಸಮುದ್ರದ ತೀರದಲ್ಲಿ ಕಂಡುಬರುತ್ತವೆ ಮತ್ತು ಅದರಿಂದ ದೊರಕುವ ಬಣ್ಣದ ಛಾಯೆಯು, ಅವುಗಳು ಕಂಡುಹಿಡಿಯಲಾಗುವ ಸ್ಥಳಕ್ಕನುಸಾರ ಬದಲಾಗುತ್ತವೆ. ದೊಡ್ಡ ಚಿಪ್ಪುಮೀನುಗಳನ್ನು ಒಂದೊಂದಾಗಿ ಒಡೆದು, ಅತಿ ಜಾಗರೂಕತೆಯಿಂದ ಅದರ ಅಮೂಲ್ಯ ದ್ರವವನ್ನು ತೆಗೆಯಲಾಗುತ್ತಿತ್ತು, ಆದರೆ ಚಿಕ್ಕ ಚಿಪ್ಪುಮೀನುಗಳನ್ನು ಒರಳುಗಳಲ್ಲಿ ಪುಡಿಮಾಡಲಾಗುತ್ತಿತ್ತು.

ಪ್ರತಿಯೊಂದು ಚಿಪ್ಪುಮೀನಿನಿಂದ ದೊರಕುತ್ತಿದ್ದ ದ್ರವವು ಬಹಳ ಅಲ್ಪವಾಗಿತ್ತು, ಆದುದರಿಂದ ಬೇಕಾಗಿರುವಷ್ಟು ಮೊತ್ತದ ದ್ರವವನ್ನು ಸಂಗ್ರಹಿಸುವುದು ಬಹಳ ದುಬಾರಿ ಕಾರ್ಯಗತಿಯಾಗಿತ್ತು. ಆದುದರಿಂದ ಇದು ಅತಿ ಬೆಲೆಯುಳ್ಳ ವರ್ಣದ್ರವ್ಯವಾಗಿತ್ತು ಮತ್ತು ಕೆನ್ನೀಲಿ ಬಣ್ಣಹಾಕಿದ ವಸ್ತ್ರವು ಶ್ರೀಮಂತರ ಅಥವಾ ಉಚ್ಛ ಪದವಿಯಲ್ಲಿದ್ದ ಜನರ ಗುರುತಾಯಿತು. ಮೊರ್ದೆಕೈ, ಅರಸ ಅಹಷ್ವೇರೋಷನಿಂದ ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟಾಗ “ನೀಲ ಶುಭ್ರ ವರ್ಣಗಳುಳ್ಳ ರಾಜವಸ್ತ್ರಗಳನ್ನು ಧರಿಸಿ ಬಂಗಾರದ ದೊಡ್ಡ ಪಟ್ಟವನ್ನು ಹಣೆಗೆ ಕಟ್ಟಿಕೊಂಡು ರಕ್ತವರ್ಣದ ನಾರಿನ ಶಾಲನ್ನು ಹೊದ್ದು ರಾಜಸನ್ನಿಧಿಯಿಂದ ಹೊರಟನು.” (ಎಸ್ತೇರಳು 8:15) ಲೂಕ 16ನೇ ಅಧ್ಯಾಯದಲ್ಲಿನ 19ರಿಂದ 31ನೆಯ ವಚನದಲ್ಲಿ ತಿಳಿಸಲ್ಪಟ್ಟಿರುವ ಯೇಸುವಿನ ಸಾಮ್ಯದಲ್ಲಿನ ‘ಐಶ್ವರ್ಯವಂತನಾದ ಮನುಷ್ಯನು’ ಸಹ “ಸಕಲಾತಿ ನಯವಾದ ನಾರುಮಡಿ [“ಮತ್ತು ಕೆನ್ನೀಲಿ,” NW] ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು ಪ್ರತಿದಿನವೂ ವೈಭವದೊಡನೆ ಸುಖಸಂತೋಷಪಡುತ್ತಿದ್ದನು.”

ತೂರ್ಯರ ಕೆನ್ನೀಲಿ

ಪುರಾತನ ತೂರ್‌ ದೇಶವು ಕೆನ್ನೀಲಿ ವರ್ಣದ್ರವ್ಯಕ್ಕೆ ಬಹಳ ಪ್ರಖ್ಯಾತವಾಯಿತು. ಆ ವರ್ಣದ್ರವ್ಯವನ್ನು ತೂರ್ಯರ ಅಥವಾ ರಾಜೋಚಿತ ಕೆನ್ನೀಲಿ ಎಂದು ಕರೆಯಲಾಗುತ್ತಿತ್ತು. ತೂರ್ಯರು ಎರಡು ಬಾರಿ ಬಣ್ಣಹಾಕುವ ವಿಧಾನವನ್ನು ಉಪಯೋಗಿಸುತ್ತಿದ್ದರೆಂದು ಹೇಳಲಾಗುತ್ತದಾದರೂ, ಈ ಬಣ್ಣವನ್ನು ಗಳಿಸಲು ಅವರು ಉಪಯೋಗಿಸುತ್ತಿದ್ದ ಸರಿಯಾದ ಸೂತ್ರವು ಅಜ್ಞಾತವಾಗಿದೆ. ಮ್ಯೂರೆಕ್ಸ್‌ ಮತ್ತು ಪರ್‌ಪ್ಯೂರ ಮೃದ್ವಂಗಿ (ಮಾಲಸ್ಕ್‌)ಗಳಿಂದ ಈ ಬಣ್ಣವನ್ನು ತೆಗೆಯಲಾಗುತ್ತಿತ್ತು ಎಂಬುದು ವ್ಯಕ್ತ, ಏಕೆಂದರೆ ತೂರಿನ ಸಮುದ್ರತೀರದಲ್ಲಿ ಮತ್ತು ಸೀದೋನಿನ ಆಸುಪಾಸಿನಲ್ಲಿ ಮ್ಯೂರೆಕ್ಸ್‌ ಟ್ರಂಕ್ಯುಲಸ್‌ನ ಖಾಲಿ ಚಿಪ್ಪಿನ ರಾಶಿಗಳು ಕಂಡುಹಿಡಿಯಲ್ಪಟ್ಟಿವೆ. ಯೆಹೋವನು ತೂರಿನ ಫಿನಿಶಿಯನ್‌ ಪಟ್ಟಣವನ್ನು, ಧೂಮ್ರರಕ್ತವರ್ಣಗಳಿಂದ ರಂಜಿತವಾದ ಉಣ್ಣೆ ಮತ್ತು ಇತರ ರಂಗುರಂಗಿನ ಬಟ್ಟೆಯನ್ನು ಹೊಂದಿರುವ ಹಾಗೂ ಅಂಥ ಬಟ್ಟೆಗಳ ವ್ಯಾಪಾರವನ್ನು ಮಾಡುವ ಸ್ಥಳವಾಗಿ ವರ್ಣಿಸಿದನು.​—⁠ಯೆಹೆಜ್ಕೇಲ 27:2, 7, 24.

ಹೌದು, ಸೀಸೆರನ ತಾಯಿ ಮಾತ್ರವಲ್ಲದೆ ಇತರ ಅನೇಕ ಸ್ತ್ರೀಯರು ಮತ್ತು ಅವರ ಪುರುಷರು ಸಹ ಉತ್ತಮವಾದ, ಸುಂದರವಾದ ಬಣ್ಣಗಳುಳ್ಳ ವಸ್ತ್ರಗಳನ್ನು ಹಾಗೂ ಮನೆಸಾಮಗ್ರಿಗಳನ್ನು ಇಚ್ಛಿಸಿರಲೇಬೇಕು. ಇಂದು ಸಹ ಸತ್ಯವಾಗಿರುವಂತೆ, ಬಣ್ಣಹಾಕುವ ವಿಧಾನದ ಮೂಲಕ ಬಣ್ಣವನ್ನು ಸೇರಿಸುವುದು ಸೌಂದರ್ಯವನ್ನು ವರ್ಧಿಸುತ್ತದೆ ಮತ್ತು ಕಣ್ಣಿಗೆ ಆನಂದವನ್ನು ನೀಡುತ್ತದೆ.