ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಹೂದನು ಪೀಡಕನ ನೊಗವನ್ನು ಮುರಿಯುತ್ತಾನೆ

ಏಹೂದನು ಪೀಡಕನ ನೊಗವನ್ನು ಮುರಿಯುತ್ತಾನೆ

ಏಹೂದನು ಪೀಡಕನ ನೊಗವನ್ನು ಮುರಿಯುತ್ತಾನೆ

ಇದು ಧೈರ್ಯ ಹಾಗೂ ಒಳಸಂಚಿನ ಕುರಿತಾದ ನಿಜ ವೃತ್ತಾಂತವಾಗಿದೆ. ಇದು 3,000 ವರ್ಷಗಳಷ್ಟು ಹಿಂದೆ ನಡೆಯಿತು. ಶಾಸ್ತ್ರೀಯ ವೃತ್ತಾಂತವು ಈ ಮಾತುಗಳಿಂದ ಆರಂಭವಾಗುತ್ತದೆ: “ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು; ಆತನು ಅವರ ದ್ರೋಹದ ನಿಮಿತ್ತ ಮೋವಾಬ್ಯರ ಅರಸನಾದ ಎಗ್ಲೋನನನ್ನು ಅವರಿಗೆ ವಿರೋಧವಾಗಿ ಬಲಪಡಿಸಿದನು. ಇವನು ಅಮ್ಮೋನಿಯರನ್ನೂ ಅಮಾಲೇಕ್ಯರನ್ನೂ ಕೂಡಿಸಿಕೊಂಡು ಹೊರಟು ಬಂದು ಇಸ್ರಾಯೇಲ್ಯರನ್ನು ಸೋಲಿಸಿ ಖರ್ಜೂರನಗರವನ್ನು ಹಿಡಿದನು. ಇಸ್ರಾಯೇಲ್ಯರು ಅವನಿಗೆ ಹದಿನೆಂಟು ವರುಷ ದಾಸರಾಗಿದ್ದರು.”​—⁠ನ್ಯಾಯಸ್ಥಾಪಕರು 3:12-14.

ಯೊರ್ದನ್‌ ನದಿ ಮತ್ತು ಮೃತ ಸಮುದ್ರದ ಪೂರ್ವ ದಿಕ್ಕಿಗೆ ಮೋವಾಬ್ಯರ ಕ್ಷೇತ್ರವಿತ್ತು. ಆದರೆ ಅವರು ಯೊರ್ದನ್‌ ನದಿಯನ್ನು ದಾಟಿಬಂದು, “ಖರ್ಜೂರನಗರ”ವಾಗಿದ್ದ ಯೆರಿಕೋ ಪಟ್ಟಣದ ಸುತ್ತಲಿರುವ ಕ್ಷೇತ್ರವನ್ನು ವಶಪಡಿಸಿಕೊಂಡು, ಇಸ್ರಾಯೇಲ್ಯರನ್ನು ದಾಸತ್ವಕ್ಕೆ ಒಳಪಡಿಸುವ ಹಂತಕ್ಕೆ ಬಂದು ತಲಪಿದ್ದರು. (ಧರ್ಮೋಪದೇಶಕಾಂಡ 34:⁠3) ಮೋವಾಬ್ಯರ ರಾಜನಾಗಿದ್ದ ಎಗ್ಲೋನನು ‘ಬಲು ಕೊಬ್ಬಿದವನಾಗಿದ್ದು,’ ಬಹುಮಟ್ಟಿಗೆ ಎರಡು ದಶಕಗಳ ವರೆಗೆ ಇಸ್ರಾಯೇಲ್ಯರಿಂದ ಹೊರೆದಾಯಕವಾದ ಮತ್ತು ಅವಮಾನಕರವಾದ ರೀತಿಯಲ್ಲಿ ಕಪ್ಪವನ್ನು ಒತ್ತಾಯದಿಂದ ಸುಲುಕೊಳ್ಳುತ್ತಿದ್ದನು. (ನ್ಯಾಯಸ್ಥಾಪಕರು 3:17) ಆದರೂ, ಕಪ್ಪಕ್ಕಾಗಿದ್ದ ಈ ಪೀಡಕನ ಬೇಡಿಕೆಗಳು, ಅವನನ್ನೇ ನೆಲಸಮಮಾಡುವ ಸದವಕಾಶವನ್ನು ಇಸ್ರಾಯೇಲ್ಯರಿಗೆ ಒದಗಿಸಿದವು.

ದಾಖಲೆಯು ತಿಳಿಸುವುದು: “[ಇಸ್ರಾಯೇಲ್ಯರು] ಯೆಹೋವನಿಗೆ ಮೊರೆಯಿಡಲು ಆತನು ಅವರನ್ನು ರಕ್ಷಿಸುವದಕ್ಕೋಸ್ಕರ ಬೆನ್ಯಾಮೀನ್‌ ಕುಲದ ಗೇರನ ಮಗನಾದ ಏಹೂದನನ್ನು ಎಬ್ಬಿಸಿದನು. ಅವನು ಎಡಚನಾಗಿದ್ದನು. ಇಸ್ರಾಯೇಲ್ಯರು ಅವನ ಮೂಲಕವಾಗಿ ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಕಳುಹಿಸಿದರು.” (ನ್ಯಾಯಸ್ಥಾಪಕರು 3:15) ಕಪ್ಪವನ್ನು ಕೊಂಡೊಯ್ಯಲಿಕ್ಕಾಗಿ ಏಹೂದನೇ ಆಯ್ಕೆಮಾಡಲ್ಪಡುವುದನ್ನು ಯೆಹೋವನು ಖಚಿತಪಡಿಸಿಕೊಂಡಿದ್ದಿರಬೇಕು. ಈ ಮುಂಚೆ ಅವನು ಇಂಥ ಕೆಲಸವನ್ನು ನಿರ್ವಹಿಸಿದ್ದನೋ ಇಲ್ಲವೊ ಎಂಬುದು ತಿಳಿಸಲ್ಪಟ್ಟಿಲ್ಲ. ಆದರೂ, ರಾಜನ ಸಮ್ಮುಖಕ್ಕೆ ಹೋಗಲಿಕ್ಕಾಗಿ ಏಹೂದನು ಜಾಗರೂಕತೆಯಿಂದ ಸಿದ್ಧನಾದ ವಿಧ ಮತ್ತು ಅವನು ಉಪಯೋಗಿಸಿದಂಥ ಚಾಕಚಕ್ಯತೆಗಳು, ಅವನು ಎಗ್ಲೋನನ ಅರಮನೆಯ ವಿವರಗಳ ಕುರಿತು ಮತ್ತು ಅಲ್ಲಿ ಏನನ್ನು ನಿರೀಕ್ಷಿಸಸಾಧ್ಯವಿತ್ತು ಎಂಬುದರ ಕುರಿತು ಚಿರಪರಿಚಿತನಾಗಿದ್ದನು ಎಂಬುದನ್ನು ಸೂಚಿಸುತ್ತವೆ. ಇದೆಲ್ಲದರ ಜೊತೆಗೆ ಅವನು ಎಡಚನೂ ಆಗಿದ್ದದ್ದು ಇನ್ನೊಂದು ಗಮನಾರ್ಹ ಅಂಶವಾಗಿತ್ತು.

ಒಬ್ಬ ಅಂಗವಿಕಲನೊ ಯುದ್ಧವೀರನೊ?

ಹೀಬ್ರು ಭಾಷೆಯಲ್ಲಿ ಅಕ್ಷರಾರ್ಥವಾಗಿ “ಎಡಚ” ಎಂಬ ಪದದ ಅರ್ಥವು, ‘ಬಲಗೈ ಸ್ಥಗಿತಗೊಂಡಿರುವ, ಊನವಾಗಿರುವ ಅಥವಾ ಕಟ್ಟಿಹಾಕಲ್ಪಟ್ಟಿರುವ’ ಎಂದಾಗಿದೆ. ಏಹೂದನು ಅಂಗವಿಕಲನಾಗಿದ್ದನು, ಬಹುಶಃ ಅವನ ಬಲಗೈ ಊನವಾಗಿತ್ತು ಎಂಬುದು ಇದರ ಅರ್ಥವೋ? ಬೆನ್ಯಾಮೀನ್‌ ಕುಲದ ಎಡಚರಾದ ‘ಏಳು ನೂರು ಮಂದಿ ಯುದ್ಧವೀರರ’ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿರಿ. “ಅವರಲ್ಲಿ ಪ್ರತಿಯೊಬ್ಬನೂ ಕೂದಲೆಳೆಯಷ್ಟೂ ಗುರಿತಪ್ಪದ ಹಾಗೆ ಕವಣೆಯನ್ನು ಹೊಡೆಯುವದರಲ್ಲಿ ನಿಪುಣನು” ಎಂದು ನ್ಯಾಯಸ್ಥಾಪಕರು 20:16 ತಿಳಿಸುತ್ತದೆ. ಆದುದರಿಂದ, ಕದನದಲ್ಲಿ ಇವರ ಪರಾಕ್ರಮಕ್ಕಾಗಿ ಇವರನ್ನು ಆಯ್ಕೆಮಾಡಲಾಗುತ್ತಿದ್ದದ್ದು ತೀರ ಸಂಭವನೀಯ. ಕೆಲವು ಬೈಬಲ್‌ ವಿದ್ವಾಂಸರಿಗನುಸಾರ, “ಎಡಚ” ಎಂಬ ಪದವು ಒಬ್ಬನು “ಬಲಗೈಯಂತೆಯೇ ಎಡಗೈಯನ್ನೂ ಸರಾಗವಾಗಿ ಉಪಯೋಗಿಸುವುದನ್ನು” ಸೂಚಿಸುತ್ತದೆ.​—⁠ನ್ಯಾಯಸ್ಥಾಪಕರು 3:​15, ದ ಡುಯೇ ವರ್ಷನ್‌.

ವಾಸ್ತವದಲ್ಲಿ, ಬೆನ್ಯಾಮೀನ್‌ ಕುಲವು ಎಡಚರಿಗೆ ಪ್ರಸಿದ್ಧವಾಗಿತ್ತು. ಒಂದನೆಯ ಪೂರ್ವಕಾಲವೃತ್ತಾಂತ 12:​1, 2ನೆಯ ವಚನಗಳು ಬೆನ್ಯಾಮೀನ್‌ ಕುಲದ ಕುರಿತು ಹೇಳುವುದು: ‘ಅವರು ಬಿಲ್ಲುಗಾರರೂ ಎಡಬಲಕೈಗಳಿಂದ ಕಲ್ಲುಗಳನ್ನೂ ಬಾಣಗಳನ್ನೂ ಎಸೆಯಬಲ್ಲವರೂ ಆಗಿದ್ದ ರಣವೀರರಾಗಿದ್ದರು.’ ಒಂದು ಪರಾಮರ್ಶೆ ಗ್ರಂಥವು ಹೇಳುವಂತೆ, “ಚಿಕ್ಕ ಮಕ್ಕಳ ಬಲಗೈಗಳನ್ನು ಕಟ್ಟಿಹಾಕುವ​—⁠ಹೀಗೆ ‘ಬಲಗೈ ನಿರ್ಬಂಧಿಸಲ್ಪಟ್ಟಿರುವ’​—⁠ಮತ್ತು ಬಲಗೈಯಂತೆಯೇ ಎಡಗೈಯನ್ನು ಸರಾಗವಾಗಿ ಉಪಯೋಗಿಸುವ ತರಬೇತಿಯನ್ನು ಅವರಿಗೆ ಕೊಡುವ ಮೂಲಕ” ಈ ಸಾಮರ್ಥ್ಯವನ್ನು ಪಡೆದುಕೊಳ್ಳಸಾಧ್ಯವಿತ್ತು. ಇಸ್ರಾಯೇಲ್ಯರ ಶತ್ರುಗಳು ಸಾಮಾನ್ಯವಾಗಿ ಬಲಗೈಯನ್ನು ಉಪಯೋಗಿಸುವ ಯುದ್ಧವೀರರನ್ನು ಎದುರಿಸಲು ತರಬೇತಿಯನ್ನು ಪಡೆದುಕೊಂಡಿರುತ್ತಿದ್ದರು. ಆದುದರಿಂದ, ಒಂದುವೇಳೆ ಒಬ್ಬನು ಅನಿರೀಕ್ಷಿತವಾಗಿ ಎಡಚನಾಗಿರುವ ಸೈನಿಕನನ್ನು ಸಂಧಿಸುತ್ತಿದ್ದಲ್ಲಿ, ಆ ಶತ್ರುವಿನ ತರಬೇತಿಯಲ್ಲಿ ಹೆಚ್ಚಿನದ್ದನ್ನು ಸುಲಭವಾಗಿಯೇ ನಿಷ್ಫಲಗೊಳಿಸಸಾಧ್ಯವಿತ್ತು.

ಅರಸನಿಗೆ ತಿಳಿಸತಕ್ಕ “ರಹಸ್ಯ”

ಏಹೂದನು ಮಾಡಿದ ಮೊದಲ ಕೆಲಸವು, ‘ತನಗೋಸ್ಕರ ಒಂದು ಕತ್ತಿಯನ್ನು’ ಸಿದ್ಧಪಡಿಸಿಕೊಳ್ಳುವುದಾಗಿತ್ತು. ಇದು ಇಬ್ಬಾಯಿ ಕತ್ತಿಯಾಗಿದ್ದು, ಅವನ ಬಟ್ಟೆಗಳ ಕೆಳಗೆ ಅಡಗಿಸಿಡಲು ಸಾಧ್ಯವಿರುವಷ್ಟು ಚಿಕ್ಕದಾಗಿತ್ತು. ತನ್ನನ್ನು ಪರೀಕ್ಷಿಸಿಯೇ ಒಳಗೆ ಕಳುಹಿಸಲಾಗುತ್ತದೆಂದು ಅವನು ನಿರೀಕ್ಷಿಸಿದ್ದಿರಬಹುದು. ಸಾಮಾನ್ಯವಾಗಿ ಕತ್ತಿಗಳನ್ನು ದೇಹದ ಎಡಭಾಗದಲ್ಲಿ ಕಟ್ಟಿಕೊಳ್ಳಲಾಗುತ್ತಿತ್ತು ಮತ್ತು ಬಲಗೈಯನ್ನು ಉಪಯೋಗಿಸುವವರು ಒಡನೆಯೇ ಅವುಗಳನ್ನು ಹೊರಸೆಳೆಯಸಾಧ್ಯವಿತ್ತು. ಏಹೂದನು ಎಡಚನಾಗಿದ್ದುದರಿಂದ, ಅವನು ತನ್ನ ಆಯುಧವನ್ನು ‘ಬಟ್ಟೆಗಳ ಕೆಳಗೆ ಬಲಗಡೆಯ ಸೊಂಟ’ದ ಬಳಿ ಅಡಗಿಸಿಟ್ಟನು; ಇಲ್ಲಿಟ್ಟರೆ ಅರಸನ ಅಂಗರಕ್ಷಕರು ಅದನ್ನು ಕಂಡುಕೊಳ್ಳುವ ಸಂಭವನೀಯತೆ ತೀರ ಕಡಿಮೆಯಾಗಿತ್ತು. ಆದುದರಿಂದ, ಯಾವುದೇ ಹಿಂಜರಿಕೆಯಿಲ್ಲದೆ ಅವನು “ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಒಪ್ಪಿ”ಸಲು ಮುನ್ನಡೆದನು.​—⁠ನ್ಯಾಯಸ್ಥಾಪಕರು 3:​16, 17.

ಎಗ್ಲೋನನ ಆಸ್ಥಾನದಲ್ಲಿ ನಡೆದ ಆರಂಭದ ಘಟನೆಗಳ ಕುರಿತಾದ ವಿವರಗಳು ಕೊಡಲ್ಪಟ್ಟಿಲ್ಲ. ಆದರೆ ಬೈಬಲು ಇಷ್ಟನ್ನು ಮಾತ್ರ ತಿಳಿಸುತ್ತದೆ: ‘ಏಹೂದನು ಕಪ್ಪವನ್ನು ಒಪ್ಪಿಸಿದ ಮೇಲೆ ಅದನ್ನು ಹೊತ್ತುಕೊಂಡು ಬಂದ ಆಳುಗಳನ್ನು ಅವನು ಕಳುಹಿಸಿಬಿಟ್ಟನು.’ (ನ್ಯಾಯಸ್ಥಾಪಕರು 3:18) ಏಹೂದನು ಕಪ್ಪವನ್ನು ಒಪ್ಪಿಸಿ, ಕಪ್ಪವನ್ನು ಹೊತ್ತುಕೊಂಡು ಬಂದಿದ್ದ ಆಳುಗಳನ್ನು ಎಗ್ಲೋನನ ಅರಮನೆಯಿಂದ ಸಾಕಷ್ಟು ದೂರ ಬಿಟ್ಟುಬಂದನು, ಮತ್ತು ನಂತರ ಅರಸನ ನಿವಾಸಕ್ಕೆ ಹಿಂದಿರುಗಿದನು. ಏಕೆ? ಅವನು ಈ ಪುರುಷರನ್ನು ಕೇವಲ ತನ್ನ ರಕ್ಷಣೆಗಾಗಿ ಅಥವಾ ರಾಜತಾಂತ್ರಿಕ ಮರ್ಯಾದೆಗಾಗಿ ಇಲ್ಲವೆ ಕೇವಲ ಕಪ್ಪವನ್ನು ಹೊರುವುದಕ್ಕಾಗಿ ಕರೆತಂದಿದ್ದನೋ? ಮತ್ತು ಅವನು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೊದಲು, ಆ ಜನರು ಸ್ವತಃ ತಮ್ಮ ರಕ್ಷಣೆಗೋಸ್ಕರ ಅಲ್ಲಿಂದ ಹೊರಟುಹೋಗಬೇಕೆಂದು ಅವನು ಬಯಸಿದನೋ? ಏಹೂದನ ಆಲೋಚನೆಯು ಏನೇ ಇರಲಿ, ಅವನು ಒಂಟಿಗನಾಗಿಯೇ ಅರಸನ ನಿವಾಸಕ್ಕೆ ಹಿಂದಿರುಗಿದನು.

“[ಏಹೂದನು] ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಿರುಗಿ ಎಗ್ಲೋನನ ಬಳಿಗೆ ಬಂದು​—⁠ಅರಸೇ, ನಿನಗೆ ತಿಳಿಸತಕ್ಕದ್ದೊಂದು ರಹಸ್ಯವದೆ ಅಂದನು.” ಎಗ್ಲೋನನ ಸನ್ನಿಧಾನಕ್ಕೆ ಅವನು ಹೇಗೆ ಪ್ರವೇಶವನ್ನು ಪಡೆದುಕೊಳ್ಳಲು ಶಕ್ತನಾದನು ಎಂಬುದನ್ನು ಶಾಸ್ತ್ರವಚನವು ವಿವರಿಸುವುದಿಲ್ಲ. ಅಂಗರಕ್ಷಕರು ಸಂದೇಹಪಡಲಿಲ್ಲವೊ? ಒಬ್ಬೊಂಟಿಗನಾಗಿರುವ ಇಸ್ರಾಯೇಲ್ಯನು ತಮ್ಮ ಯಜಮಾನನಿಗೆ ಯಾವುದೇ ಬೆದರಿಕೆಯನ್ನು ಒಡ್ಡಲು ಸಾಧ್ಯವಿಲ್ಲ ಎಂದು ಅವರು ನೆನಸಿದರೊ? ಏಹೂದನು ಒಂಟಿಯಾಗಿಯೇ ಹಿಂದಿರುಗಿದ್ದು, ಅವನು ತನ್ನ ಸ್ವಕೀಯ ಜನರಿಗೆ ದ್ರೋಹವೆಸಗುತ್ತಿದ್ದಾನೆ ಎಂಬ ಅಭಿಪ್ರಾಯವನ್ನು ಉಂಟುಮಾಡಿತೊ? ವಿಷಯವು ಏನೇ ಇರಲಿ, ಏಹೂದನು ಅರಸನೊಂದಿಗೆ ಖಾಸಗಿಯಾಗಿ ಮಾತಾಡಲು ಅನುಮತಿಯನ್ನು ಕೇಳಿಕೊಂಡನು ಮತ್ತು ಅವನಿಗೆ ಅನುಮತಿ ಸಿಕ್ಕಿತು.​—⁠ನ್ಯಾಯಸ್ಥಾಪಕರು 3:⁠19.

ಪ್ರೇರಿತ ವೃತ್ತಾಂತವು ಹೀಗೆ ಮುಂದುವರಿಯುತ್ತದೆ: ‘ಅರಸನು ತನ್ನ ತಂಪಾದ ಮೇಲುಪ್ಪರಿಗೆಯಲ್ಲಿ ಒಬ್ಬನೇ ಕೂತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಹೋಗಿ​—⁠ನಿನಗೆ ಹೇಳಬೇಕಾದದ್ದೊಂದು ದೈವೋಕ್ತಿಯಿದೆ ಅಂದನು.’ ಏಹೂದನು ದೈವೋಕ್ತಿಯು ಮಾತಿನ ರೂಪದಲ್ಲಿದೆ ಎಂದು ಸೂಚಿಸುತ್ತಿರಲಿಲ್ಲ. ತನ್ನ ಕತ್ತಿಯನ್ನು ಉಪಯೋಗಿಸುವುದೇ ಏಹೂದನ ಮನಸ್ಸಿನಲ್ಲಿದ್ದ ವಿಚಾರವಾಗಿತ್ತು. ಪ್ರಾಯಶಃ ತನ್ನ ದೇವನಾದ ಕೆಮೋಷನಿಂದ ಕೊಡಲ್ಪಟ್ಟಿರುವ ಯಾವುದೋ ಸಂದೇಶವನ್ನು ಕೇಳಿಸಿಕೊಳ್ಳುವ ನಿರೀಕ್ಷೆ ಇದ್ದವನಾದ ಅರಸನು ‘ತನ್ನ ಸಿಂಹಾಸನದಿಂದ ಎದ್ದನು.’ ಆಗ, ಮಿಂಚಿನ ವೇಗದಲ್ಲಿ ಏಹೂದನು ತನ್ನ ಆಯುಧವನ್ನು ಹೊರಸೆಳೆದು, ಎಗ್ಲೋನನ ಹೊಟ್ಟೆಗೆ ತಿವಿದನು. ಆ ಕತ್ತಿಗೆ ಯಾವುದೇ ಅಡ್ಡಪಟ್ಟಿಗಳಿರಲಿಲ್ಲ ಎಂಬುದು ಸುವ್ಯಕ್ತ. ಆದುದರಿಂದಲೇ “ಅಲಗೂ ಹಿಡಿಯೂ ಹೊಟ್ಟೆಯೊಳಗೆ ಹೊಕ್ಕವು.” ಮತ್ತು ಗಾಯದ ಮೂಲಕ ಅಥವಾ ಏಗ್ಲೋನನ ದೇಹದ ಒಳಭಾಗದಿಂದ ಅನೈಚ್ಛಿಕ ವಿಸರ್ಜನೆಯ ಮೂಲಕ “ಮಲವು ಹೊರಗೆ ಬಂದಿತು.”​—⁠ನ್ಯಾಯಸ್ಥಾಪಕರು 3:20-22.

ಯಾವುದೇ ತೊಂದರೆಯಿಲ್ಲದೆ ತಪ್ಪಿಸಿಕೊಂಡದ್ದು

ತನ್ನ ಕತ್ತಿಯನ್ನು ಹೊರಗೆ ತೆಗೆಯಲೂ ಸಮಯವನ್ನು ತೆಗೆದುಕೊಳ್ಳದೆ ‘ಏಹೂದನು ಪಡಸಾಲೆಗೆ ಬಂದು ಆ ಮೇಲುಪ್ಪರಿಗೆಯ ಕದವನ್ನು ಮುಚ್ಚಿ ಬೀಗಹಾಕಿ ಹೊರಟು ಹೋದನು. ತರುವಾಯ [ಎಗ್ಲೋನನ] ಸೇವಕರು ಅಲ್ಲಿ ಬಂದು ಬಾಗಲಿಗೆ ಬೀಗಹಾಕಿರುವದನ್ನು ಕಂಡು​—⁠ಅರಸನು ತಂಪಾದ ಕೋಣೆಗೆ ಸೇರಿದ ಪಾಯಖಾನೆಗೆ ಹೋಗಿರಬೇಕು ಅಂದುಕೊಂಡರು.’​—⁠ನ್ಯಾಯಸ್ಥಾಪಕರು 3:23, 24.

ಏಹೂದನು ಯಾವುದರ ಮೂಲಕ ಹಾದುಹೋದನೋ ಆ ‘ಪಡಸಾಲೆಯು’ ಏನಾಗಿತ್ತು? ಒಂದು ಪರಾಮರ್ಶೆ ಗ್ರಂಥವು ಹೇಳುವ ಮೇರೆಗೆ, “[ಆ ಹೀಬ್ರು ಪದದ] ನಿಷ್ಕೃಷ್ಟ ಅರ್ಥವು ಇದುವರೆಗೆ ತಿಳಿದಿಲ್ಲವಾದರೂ, ‘ಕಂಬಸಾಲು,’ ‘ಮೊಗಸಾಲೆ’ ಎಂಬರ್ಥವಿರಬಹುದು ಎಂದು ಸೂಚಿಸಲಾಗಿದೆ.” ಏಹೂದನು ಕದಗಳನ್ನು ಮುಚ್ಚಿ ಒಳಗಿನಿಂದ ಬೀಗಹಾಕಿ, ನಂತರ ಬೇರೊಂದು ಮಾರ್ಗವಾಗಿ ಹೊರಟುಹೋದನೊ? ಅಥವಾ ಅವನು ಮೃತ ಅರಸನಿಂದ ಕೀಲಿ ಕೈಯನ್ನು ತೆಗೆದುಕೊಂಡು ಕದಗಳಿಗೆ ಹೊರಗಿನಿಂದ ಬೀಗಹಾಕಿದನೊ? ನಂತರ ಅವನು ಏನೂ ನಡೆದೇ ಇಲ್ಲವೋ ಎಂಬಂತೆ ಅಂಗರಕ್ಷಕರ ಮುಂದಿನಿಂದ ನಿಧಾನವಾಗಿ ನಡೆದುಕೊಂಡು ಹೊರಗೆಹೋದನೊ? ಶಾಸ್ತ್ರವಚನಗಳು ಇದರ ಬಗ್ಗೆ ತಿಳಿಸುವುದಿಲ್ಲ. ಏಹೂದನು ಯಾವುದೇ ವಿಧಾನವನ್ನು ಉಪಯೋಗಿಸಿರಲಿ, ಬಾಗಿಲಿಗೆ ಬೀಗಹಾಕಿರುವುದನ್ನು ಎಗ್ಲೋನನ ಸೇವಕರು ನೋಡಿದಾಗ ಅವರು ಆ ಕೂಡಲೆ ಇದರ ಬಗ್ಗೆ ಸ್ವಲ್ಪವೂ ಸಂದೇಹಿಸಲಿಲ್ಲ. ಅರಸನು ‘ಪಾಯಖಾನೆಗೆ ಹೋಗಿರಬೇಕು’ ಎಂದಷ್ಟೇ ಅವರು ನೆನಸಿದರು.

ಅರಸನ ಸೇವಕರು ಅಲ್ಲಿಯೇ ಅಡ್ಡಾಡುತ್ತಿದ್ದಾಗ, ಏಹೂದನು ತಪ್ಪಿಸಿಕೊಂಡನು. ತದನಂತರ ಅವನು ತನ್ನ ಸ್ವದೇಶದವರನ್ನು ಒಟ್ಟುಗೂಡಿಸಿ ಹೇಳಿದ್ದು: “ನನ್ನನ್ನು ಹಿಂಬಾಲಿಸಿರಿ; ಯೆಹೋವನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ.” ಏಹೂದನ ಜನರು ಯೊರ್ದನಿನ ಹಾಯಗಡಗಳನ್ನೆಲ್ಲಾ ಮುತ್ತಿಗೆಹಾಕುವ ಮೂಲಕ, ನಾಯಕನಿಲ್ಲದ ಮೋವಾಬ್ಯರು ತಮ್ಮ ಸ್ವದೇಶಕ್ಕೆ ಪಲಾಯನಗೈಯುವುದರಿಂದ ಅವರನ್ನು ತಡೆಗಟ್ಟಿದರು, ಅಲ್ಲಿಂದ ಯಾರನ್ನೂ ದಾಟಗೊಡಲಿಲ್ಲ. ಹೀಗೆ, “ಆ ಕಾಲದಲ್ಲಿ [ಇಸ್ರಾಯೇಲ್ಯರು] ಪುಷ್ಟರೂ ಪರಾಕ್ರಮಿಗಳೂ ಆದ ಸುಮಾರು ಹತ್ತು ಸಾವಿರ ಮಂದಿ ಮೋವಾಬ್ಯರನ್ನು ಒಬ್ಬನೂ ತಪ್ಪಿಸಿಕೊಳ್ಳದಂತೆ ಹತಮಾಡಿದರು. ಆ ದಿವಸದಲ್ಲಿ ಮೋವಾಬ್ಯರು ಇಸ್ರಾಯೇಲ್ಯರಿಂದ ತಗ್ಗಿಸಲ್ಪಟ್ಟರು; ದೇಶದಲ್ಲಿ ಎಂಭತ್ತು ವರುಷ ಸಮಾಧಾನವಿತ್ತು.”​—⁠ನ್ಯಾಯಸ್ಥಾಪಕರು 3:25-30.

ನಾವು ಕಲಿಯಸಾಧ್ಯವಿರುವ ಪಾಠಗಳು

ಏಹೂದನ ದಿನಗಳಲ್ಲಿ ಏನು ಸಂಭವಿಸಿತೋ ಅದು, ನಾವು ಯೆಹೋವನ ದೃಷ್ಟಿಯಲ್ಲಿ ಏನು ಕೆಟ್ಟದಾಗಿದೆಯೋ ಅದನ್ನು ಮಾಡುವಾಗ ವಿಪತ್ಕಾರಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಪಾಠವನ್ನು ಕಲಿಸುತ್ತದೆ. ಇನ್ನೊಂದು ಕಡೆಯಲ್ಲಿ, ಯಾರು ಪಶ್ಚಾತ್ತಾಪಪಟ್ಟು ಯೆಹೋವನ ಕಡೆಗೆ ತಿರುಗುತ್ತಾರೋ ಅವರಿಗೆ ಆತನು ಸಹಾಯಮಾಡುತ್ತಾನೆ.

ಏಹೂದನ ಯೋಜನೆಗಳು ಸಫಲವಾದದ್ದು, ಅವನು ತನ್ನ ಚಾಕಚಕ್ಯತೆಯನ್ನು ಉಪಯೋಗಿಸಿದ್ದರಿಂದ ಅಥವಾ ಶತ್ರುಪಕ್ಷದವರು ಅಸಮರ್ಥರಾಗಿದ್ದರು ಎಂಬ ಕಾರಣದಿಂದಲ್ಲ. ದೈವಿಕ ಉದ್ದೇಶಗಳ ಪೂರೈಕೆಯು ಯಾವುದೇ ಮಾನವ ಅಂಶಗಳ ಮೇಲೆ ಅವಲಂಬಿಸುವುದಿಲ್ಲ. ಏಹೂದನ ಸಾಫಲ್ಯಕ್ಕೆ ಮುಖ್ಯ ಕಾರಣವು, ತನ್ನ ಜನರನ್ನು ವಿಮೋಚಿಸಲಿಕ್ಕಾಗಿರುವ ದೇವರ ಅಜೇಯ ಚಿತ್ತಕ್ಕೆ ಹೊಂದಿಕೆಯಲ್ಲಿ ಅವನು ಕ್ರಿಯೆಗೈದುದರಿಂದ ಅವನಿಗೆ ಆತನಿಂದ ಸಿಕ್ಕಿದ ಬೆಂಬಲವೇ ಆಗಿತ್ತು. ದೇವರೇ ಏಹೂದನನ್ನು ಎಬ್ಬಿಸಿದನು, ಮತ್ತು ‘ಯೆಹೋವನು [ತನ್ನ ಜನರಿಗೋಸ್ಕರ] ನ್ಯಾಯಸ್ಥಾಪಕರನ್ನು ಎಬ್ಬಿಸಿದಾಗ, ಅವರ ಜೀವಮಾನವೆಲ್ಲಾ ಅವರ ಸಂಗಡ ಇದ್ದನು.’​—⁠ನ್ಯಾಯಸ್ಥಾಪಕರು 2:18; 3:⁠15.