ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕರ್ತನ ರಾತ್ರಿ ಭೋಜನ ಹೇಗೆ ಆಚರಿಸಲ್ಪಡುತ್ತದೆ?

ಕರ್ತನ ರಾತ್ರಿ ಭೋಜನ ಹೇಗೆ ಆಚರಿಸಲ್ಪಡುತ್ತದೆ?

ಕರ್ತನ ರಾತ್ರಿ ಭೋಜನ ಹೇಗೆ ಆಚರಿಸಲ್ಪಡುತ್ತದೆ?

ಕರ್ತನ ರಾತ್ರಿ ಭೋಜನದ ಆಚರಣೆಯ ಮೇಲೆ ಬೆಳಕು ಬೀರುತ್ತಾ ಕ್ರೈಸ್ತ ಅಪೊಸ್ತಲ ಪೌಲನು ಬರೆಯುವುದು: “ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ​—⁠ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು​—⁠ಇದು ನಿಮಗೋಸ್ಕರವಾಗಿರುವ ನನ್ನ ದೇಹ [“ದೇಹವನ್ನು ಅರ್ಥೈಸುತ್ತದೆ,” NW]; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು. ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು​—⁠ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ [“ಹೀಗೆ ಮಾಡುತ್ತಾ ಇರಿ,” NW] ಅಂದನು. ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.”​—⁠1 ಕೊರಿಂಥ 11:23-26.

ಪೌಲನು ಹೇಳುವಂತೆ, ಶೂಲಕ್ಕೇರಿಸುವಂತೆ ರೋಮನ್ನರಿಗೆ ಒತ್ತಡ ಹೇರಿದಂಥ ಯೆಹೂದಿ ಧಾರ್ಮಿಕ ಮುಖಂಡರಿಗೆ ಇಸ್ಕರಿಯೋತ ಯೂದನು ಕ್ರಿಸ್ತನನ್ನು ‘ಹಿಡಿದುಕೊಡಲಿದ್ದ ರಾತ್ರಿಯೇ’ ಯೇಸುವು ಕರ್ತನ ರಾತ್ರಿ ಭೋಜನವನ್ನು ಆರಂಭಿಸಿದನು. ಈ ಭೋಜನವು ಸಾ.ಶ. 33, ಮಾರ್ಚ್‌ 31ರ ಗುರುವಾರ ಸಾಯಂಕಾಲ ನಡೆಯಿತು. ಏಪ್ರಿಲ್‌ 1ರ ಶುಕ್ರವಾರ ಮಧ್ಯಾಹ್ನ ಯೇಸು ಯಾತನಾಕಂಬದ ಮೇಲೆ ಮೃತಪಟ್ಟನು. ಯೆಹೂದಿ ಕ್ಯಾಲೆಂಡರ್‌ನ ದಿನಗಳು, ಒಂದು ದಿನದ ಸಾಯಂಕಾಲದಿಂದ ಆರಂಭವಾಗಿ ಮರುದಿನ ಸಾಯಂಕಾಲದ ವರೆಗೆ ಮುಂದುವರಿಯುತ್ತಿದ್ದುದರಿಂದ, ಕರ್ತನ ರಾತ್ರಿ ಭೋಜನ ಮತ್ತು ಯೇಸು ಕ್ರಿಸ್ತನ ಮರಣವು ಒಂದೇ ದಿನದಲ್ಲಿ ಅಂದರೆ ಸಾ.ಶ. 33ರ ನೈಸಾನ್‌ 14ರಂದು ಘಟಿಸಿತು.

ರೊಟ್ಟಿ ಮತ್ತು ದ್ರಾಕ್ಷಾಮದ್ಯದಲ್ಲಿ ಪಾಲ್ಗೊಳ್ಳುವವರು, ಯೇಸುವನ್ನು ನೆನಸಿಕೊಳ್ಳುವುದಕ್ಕೋಸ್ಕರ ‘ಇದನ್ನು ಮಾಡುತ್ತಾ ಇರಬೇಕಿತ್ತು.’ ಇನ್ನೊಂದು ಭಾಷಾಂತರಕ್ಕನುಸಾರ, ಯೇಸು ಹೇಳಿದ್ದು: “ನನ್ನ ಸ್ಮರಣಾರ್ಥವಾಗಿ ಇದನ್ನು ಮಾಡಿರಿ.” (1 ಕೊರಿಂಥ 11:​24, ದ ಜೆರೂಸಲೆಮ್‌ ಬೈಬಲ್‌) ಕರ್ತನ ರಾತ್ರಿ ಭೋಜನವನ್ನು ಕ್ರಿಸ್ತನ ಮರಣದ ಜ್ಞಾಪಕಾಚರಣೆ ಎಂದು ಸಹ ಕರೆಯಲಾಗುತ್ತದೆ.

ಯೇಸುವಿನ ಮರಣವನ್ನು ಏಕೆ ಆಚರಿಸಬೇಕು?

ಆ ಮರಣವು ಯಾವುದರೊಂದಿಗೆ ಜೊತೆಗೂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಉತ್ತರವು ಅಡಕವಾಗಿದೆ. ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿದವರಲ್ಲಿ ಅಗ್ರಗಣ್ಯನಾಗಿ ಯೇಸು ಮೃತಪಟ್ಟನು. ಹೀಗೆ ಕೇವಲ ಸ್ವಾರ್ಥಪರ ಹೇತುಗಳಿಗಾಗಿ ಮಾತ್ರ ಮಾನವರು ದೇವರ ಸೇವೆಮಾಡುತ್ತಾರೆ ಎಂಬ ಸೈತಾನನ ದೋಷಾರೋಪವು ಸುಳ್ಳಾಗಿದೆ ಎಂಬುದನ್ನು ಅವನು ರುಜುಪಡಿಸಿದನು. (ಯೋಬ 2:1-5; ಜ್ಞಾನೋಕ್ತಿ 27:11) ಒಬ್ಬ ಪರಿಪೂರ್ಣ ಮಾನವನೋಪಾದಿ ಮರಣಪಡುವ ಮೂಲಕ ಯೇಸು ‘ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡಾಗಿಯೂ’ ಕೊಟ್ಟನು. (ಮತ್ತಾಯ 20:28) ಆದಾಮನು ದೇವರಿಗೆ ವಿರುದ್ಧವಾಗಿ ಪಾಪಮಾಡಿದಾಗ, ಅವನು ಪರಿಪೂರ್ಣ ಮಾನವ ಜೀವಿತವನ್ನು ಮತ್ತು ಅದರ ಪ್ರತೀಕ್ಷೆಗಳನ್ನು ಕಳೆದುಕೊಂಡನು. ಆದರೆ “ದೇವರು [ಮಾನವಕುಲದ] ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ವಾಸ್ತವದಲ್ಲಿ, “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.”​—⁠ರೋಮಾಪುರ 6:⁠23.

ಹೀಗೆ ಯೇಸು ಕ್ರಿಸ್ತನ ಮರಣವು ಪ್ರೀತಿಯ ಎರಡು ಮಹಾನ್‌ ಅಭಿವ್ಯಕ್ತಿಗಳನ್ನು ಒಳಗೂಡಿದೆ​—⁠ತನ್ನ ಮಗನನ್ನು ಕೊಡುವ ಮೂಲಕ ಯೆಹೋವನು ಮಾನವಕುಲಕ್ಕಾಗಿ ತೋರಿಸಿರುವ ಅತ್ಯಂತ ಮಹಾನ್‌ ಪ್ರೀತಿ ಮತ್ತು ತನ್ನ ಮಾನವ ಜೀವಿತವನ್ನು ಮನಃಪೂರ್ವಕವಾಗಿ ನೀಡಿಕೊಳ್ಳುವ ಮೂಲಕ ಯೇಸು ಮಾನವಕುಲಕ್ಕಾಗಿ ತೋರಿಸಿದ ಸ್ವತ್ಯಾಗದ ಪ್ರೀತಿ. ಯೇಸುವಿನ ಮರಣದ ಜ್ಞಾಪಕಾಚರಣೆಯು ಪ್ರೀತಿಯ ಈ ಎರಡು ಅಭಿವ್ಯಕ್ತಿಗಳನ್ನು ಅತಿ ಮಹತ್ವಭರಿತವಾದದ್ದಾಗಿ ಮಾಡುತ್ತದೆ. ನಾವು ಈ ಪ್ರೀತಿಯನ್ನು ಪಡೆದುಕೊಳ್ಳುವವರಾಗಿರುವುದರಿಂದ, ಅದಕ್ಕಾಗಿ ನಾವು ಕೃತಜ್ಞತೆಯನ್ನು ತೋರಿಸಬಾರದೋ? ಕೃತಜ್ಞತೆ ತೋರಿಸುವ ಒಂದು ವಿಧವು, ಕರ್ತನ ರಾತ್ರಿ ಭೋಜನದ ಆಚರಣೆಗೆ ಹಾಜರಾಗುವುದೇ ಆಗಿದೆ.

ರೊಟ್ಟಿ ಮತ್ತು ದ್ರಾಕ್ಷಾಮದ್ಯದ ವಿಶೇಷತೆ

ಕರ್ತನ ರಾತ್ರಿ ಭೋಜನವನ್ನು ಆರಂಭಿಸುವಾಗ ಯೇಸು ರೊಟ್ಟಿಯನ್ನೂ ಕೆಂಪು ದ್ರಾಕ್ಷಾಮದ್ಯವನ್ನೂ ಕುರುಹುಗಳಾಗಿ ಅಥವಾ ಸಂಕೇತಗಳಾಗಿ ಉಪಯೋಗಿಸಿದನು. ಯೇಸು ರೊಟ್ಟಿಯನ್ನು ತೆಗೆದುಕೊಂಡು, “ದೇವರ ಸ್ತೋತ್ರಮಾಡಿ ಮುರಿದು​—⁠ಇದು ನಿಮಗೋಸ್ಕರವಾಗಿರುವ ನನ್ನ ದೇಹ . . . ಅಂದನು.” (1 ಕೊರಿಂಥ 11:​23, 24) ಹಂಚಲ್ಪಡಲು ಮತ್ತು ತಿನ್ನಲ್ಪಡಲಿಕ್ಕಾಗಿ ಆ ರೊಟ್ಟಿಯನ್ನು ಮುರಿಯಬೇಕಾಗಿತ್ತು, ಆದುದರಿಂದಲೇ ಅದು ಯಾವುದೇ ಹುಳಿ ಅಥವಾ ಯೀಸ್ಟ್‌ ಇಲ್ಲದೆ ಕೇವಲ ಹಿಟ್ಟು ಮತ್ತು ನೀರಿನಿಂದ ನಾದಿ ಮಾಡಲ್ಪಟ್ಟ ಸುಲಭವಾಗಿ ಮುರಿಯಲಾಗುವ ರೊಟ್ಟಿಯಾಗಿತ್ತು. ಶಾಸ್ತ್ರವಚನಗಳಲ್ಲಿ ಹುಳಿಯು ಪಾಪವನ್ನು ಸಂಕೇತಿಸುತ್ತದೆ. (ಮತ್ತಾಯ 16:11, 12; 1 ಕೊರಿಂಥ 5:6, 7) ಯೇಸು ಪಾಪಿಯಾಗಿರಲಿಲ್ಲ. ಆದುದರಿಂದಲೇ ಅವನ ಪರಿಪೂರ್ಣ ಮಾನವ ದೇಹವು ಮಾನವಕುಲಕ್ಕಾಗಿ ಸೂಕ್ತವಾಗಿರುವ ಈಡಿನ ಯಜ್ಞವಾಗಿ ಕಾರ್ಯನಡಿಸಿತು. (1 ಯೋಹಾನ 2:​1, 2) ಕ್ರಿಸ್ತನ ಪಾಪರಹಿತ ದೇಹವನ್ನು ಪ್ರತಿನಿಧಿಸಲಿಕ್ಕಾಗಿ ಉಪಯೋಗಿಸಲ್ಪಡುವ ರೊಟ್ಟಿಯು ಹುಳಿಯಿಲ್ಲದ್ದಾಗಿರುವುದು ಎಷ್ಟು ಸೂಕ್ತವಾದದ್ದಾಗಿದೆ!

ಯೇಸು ಕಲಬೆರಕೆಯಿಲ್ಲದ ಶುದ್ಧವಾದ ಕೆಂಪು ದ್ರಾಕ್ಷಾಮದ್ಯವನ್ನು ತೆಗೆದುಕೊಂಡು ಸ್ತೋತ್ರಮಾಡಿ ಹೇಳಿದ್ದು: “ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.” (1 ಕೊರಿಂಥ 11:25) ಪಾತ್ರೆಯಲ್ಲಿನ ಕೆಂಪು ದ್ರಾಕ್ಷಾಮದ್ಯವು ಯೇಸುವಿನ ರಕ್ತವನ್ನು ಪ್ರತಿನಿಧಿಸುತ್ತದೆ. ಯಜ್ಞವಾಗಿ ಅರ್ಪಿಸಲ್ಪಡುತ್ತಿದ್ದ ಹೋರಿ ಮತ್ತು ಆಡುಗಳ ರಕ್ತವು, ಸಾ.ಶ.ಪೂ. 1513ರಲ್ಲಿ ದೇವರ ಮತ್ತು ಇಸ್ರಾಯೇಲ್‌ ಜನಾಂಗದ ನಡುವಣ ಧರ್ಮಶಾಸ್ತ್ರದೊಡಂಬಡಿಕೆಯನ್ನು ಹೇಗೆ ಸ್ಥಿರೀಕರಿಸಿತೋ ಅದೇ ರೀತಿಯಲ್ಲಿ ಮರಣದಲ್ಲಿ ಸುರಿಸಲ್ಪಟ್ಟ ಯೇಸುವಿನ ರಕ್ತವು ಹೊಸ ಒಡಂಬಡಿಕೆಯನ್ನು ಸ್ಥಿರೀಕರಿಸಿತು.

ಯಾರು ಇದರಲ್ಲಿ ಪಾಲ್ಗೊಳ್ಳಬೇಕು?

ಜ್ಞಾಪಕಾಚರಣೆಯ ಕುರುಹುಗಳಲ್ಲಿ ಯಾರು ಯೋಗ್ಯವಾಗಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ಗುರುತಿಸಲಿಕ್ಕಾಗಿ, ಹೊಸ ಒಡಂಬಡಿಕೆ ಎಂದರೇನು ಮತ್ತು ಆ ಒಡಂಬಡಿಕೆಯಲ್ಲಿ ಯಾವ ಪಕ್ಷಗಳು ಒಳಗೂಡಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಬೈಬಲ್‌ ಹೇಳುವುದು: “ಯೆಹೋವನು ಇಂತೆನ್ನುತ್ತಾನೆ​—⁠ಇಗೋ, ನಾನು ಇಸ್ರಾಯೇಲ್‌ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು; . . . ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು; . . . ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ. ಇದು ಯೆಹೋವನ ನುಡಿ.”​—⁠ಯೆರೆಮೀಯ 31:31-34.

ಈ ಹೊಸ ಒಡಂಬಡಿಕೆಯು ಯೆಹೋವ ದೇವರೊಂದಿಗೆ ಒಂದು ವಿಶೇಷ ರೀತಿಯ ಸಂಬಂಧವನ್ನು ಸಾಧ್ಯಗೊಳಿಸುತ್ತದೆ. ಈ ಒಡಂಬಡಿಕೆಯ ಮೂಲಕ, ಜನರ ಒಂದು ನಿರ್ದಿಷ್ಟ ಗುಂಪು ಆತನ ಸ್ವಕೀಯ ಪ್ರಜೆಯಾಗಿ ಪರಿಣಮಿಸುತ್ತದೆ ಮತ್ತು ಆತನು ಅವರಿಗೆ ದೇವರಾಗುತ್ತಾನೆ. ಯೆಹೋವನ ನಿಯಮಶಾಸ್ತ್ರವು ಅವರೊಳಗೆ, ಅಂದರೆ ಅವರ ಹೃದಯದೊಳಗೆ ಬರೆಯಲ್ಪಡುತ್ತದೆ, ಮತ್ತು ಸುನ್ನತಿಯಾಗಿರದ ಯೆಹೂದ್ಯರು ಸಹ ದೇವರೊಂದಿಗಿನ ಈ ಹೊಸ ಒಡಂಬಡಿಕೆಯ ಸಂಬಂಧದೊಳಗೆ ಬರಸಾಧ್ಯವಿದೆ. (ರೋಮಾಪುರ 2:29) ಬೈಬಲ್‌ ಲೇಖಕನಾದ ಲೂಕನು, ‘ಅನ್ಯಜನರನ್ನು ಕಟಾಕ್ಷಿಸಿನೋಡಿ ತನ್ನ ಹೆಸರಿಗಾಗಿ ಅವರೊಳಗಿಂದ ಒಂದು ಪ್ರಜೆಯನ್ನು ಆರಿಸಿಕೊಳ್ಳುವ’ ದೇವರ ಉದ್ದೇಶದ ಕುರಿತು ಬರೆಯುತ್ತಾನೆ. (ಅ. ಕೃತ್ಯಗಳು 15:14) ಒಂದನೇ ಪೇತ್ರ 2:10ಕ್ಕನುಸಾರ, ಅವರು ‘ಮೊದಲು ಪ್ರಜೆಯಾಗಿರಲಿಲ್ಲ, ಆದರೆ ಈಗ ದೇವರ ಪ್ರಜೆಯಾಗಿದ್ದಾರೆ.’ ಶಾಸ್ತ್ರವಚನಗಳು ಅವರನ್ನು ‘ದೇವರ ಇಸ್ರಾಯೇಲ್‌’ ಅಂದರೆ ಆತ್ಮಿಕ ಇಸ್ರಾಯೇಲ್‌ ಎಂದು ಸಂಬೋಧಿಸುತ್ತದೆ. (ಗಲಾತ್ಯ 6:16; 2 ಕೊರಿಂಥ 1:21) ಆದುದರಿಂದ, ಈ ಹೊಸ ಒಡಂಬಡಿಕೆಯು ಯೆಹೋವ ದೇವರು ಮತ್ತು ಆತ್ಮಿಕ ಇಸ್ರಾಯೇಲ್‌ನ ನಡುವೆ ಮಾಡಿಕೊಳ್ಳಲ್ಪಟ್ಟಿರುವಂಥ ಒಂದು ಒಡಂಬಡಿಕೆಯಾಗಿದೆ.

ತನ್ನ ಶಿಷ್ಯರೊಂದಿಗಿನ ಕೊನೆಯ ರಾತ್ರಿಯಂದು, ಯೇಸು ತಾನೇ ಅವರೊಂದಿಗೆ ಬೇರೊಂದು ಒಡಂಬಡಿಕೆಯನ್ನು ಮಾಡಿಕೊಂಡನು. ಅವನು ಅವರಿಗೆ ಹೇಳಿದ್ದು: “ರಾಜ್ಯಕ್ಕಾಗಿ ನನ್ನ ತಂದೆಯು ನನ್ನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡಿರುವಂತೆಯೇ ನಾನು ನಿಮ್ಮೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.” (ಲೂಕ 22:​29, NW) ಇದೇ ರಾಜ್ಯದೊಡಂಬಡಿಕೆಯಾಗಿದೆ. ರಾಜ್ಯದೊಡಂಬಡಿಕೆಯೊಳಗೆ ಸ್ವೀಕರಿಸಲ್ಪಟ್ಟ ಅಪರಿಪೂರ್ಣ ಮಾನವರ ಸಂಖ್ಯೆಯು 1,44,000ವಾಗಿದೆ. ಸ್ವರ್ಗಕ್ಕೆ ಪುನರುತ್ಥಾನಗೊಳಿಸಲ್ಪಟ್ಟ ಬಳಿಕ ಅವರು ಕ್ರಿಸ್ತನೊಂದಿಗೆ ರಾಜರಾಗಿಯೂ ಯಾಜಕರಾಗಿಯೂ ಆಳ್ವಿಕೆ ನಡೆಸುವರು. (ಪ್ರಕಟನೆ 5:9, 10; 14:1-4) ಹೀಗೆ, ಯೆಹೋವ ದೇವರೊಂದಿಗೆ ಹೊಸ ಒಡಂಬಡಿಕೆಯಲ್ಲಿರುವವರೇ ಯೇಸು ಕ್ರಿಸ್ತನೊಂದಿಗೆ ರಾಜ್ಯದೊಡಂಬಡಿಕೆಯಲ್ಲಿಯೂ ಇರುವರು. ಕರ್ತನ ರಾತ್ರಿ ಭೋಜನದ ಕುರುಹುಗಳಲ್ಲಿ ಯೋಗ್ಯವಾಗಿ ಪಾಲ್ಗೊಳ್ಳಲು ಅರ್ಹರಾಗಿರುವವರು ಇವರು ಮಾತ್ರವೇ ಆಗಿದ್ದಾರೆ.

ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುವವರಿಗೆ, ತಾವು ದೇವರೊಂದಿಗೆ ಅಪೂರ್ವ ಸಂಬಂಧದಲ್ಲಿದ್ದೇವೆ ಮತ್ತು ಕ್ರಿಸ್ತನೊಂದಿಗೆ ಜೊತೆಬಾಧ್ಯಸ್ಥರಾಗಿದ್ದೇವೆ ಎಂಬುದು ಹೇಗೆ ಗೊತ್ತಿರುತ್ತದೆ? ಪೌಲನು ವಿವರಿಸುವುದು: ‘ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ. ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು. ಹೇಗಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.’​—⁠ರೋಮಾಪುರ 8:16, 17.

ತನ್ನ ಪವಿತ್ರಾತ್ಮ ಅಥವಾ ಕ್ರಿಯಾಶೀಲ ಶಕ್ತಿಯ ಮೂಲಕ ದೇವರು ಕ್ರಿಸ್ತನ ಜೊತೆಬಾಧ್ಯಸ್ಥರನ್ನು ಅಭಿಷೇಕಿಸುತ್ತಾನೆ. ಇದು, ತಾವು ರಾಜ್ಯದ ಬಾಧ್ಯಸ್ಥರಾಗಿದ್ದೇವೆ ಎಂಬುದರ ಖಾತ್ರಿಯನ್ನು ಅವರಿಗೆ ನೀಡುತ್ತದೆ. ಇದು ಅಭಿಷಿಕ್ತ ಕ್ರೈಸ್ತರ ಮನಸ್ಸಿನಲ್ಲಿ ಒಂದು ಸ್ವರ್ಗೀಯ ನಿರೀಕ್ಷೆಯನ್ನು ಉಂಟುಮಾಡುತ್ತದೆ. ಸ್ವರ್ಗೀಯ ಜೀವಿತದ ಕುರಿತು ಬೈಬಲ್‌ ಏನು ಹೇಳುತ್ತದೋ ಅದನ್ನೆಲ್ಲಾ ಅವರು ವೈಯಕ್ತಿಕವಾಗಿ ಅನ್ವಯಿಸಿಕೊಳ್ಳುತ್ತಾರೆ. ಅಷ್ಟುಮಾತ್ರವಲ್ಲ, ಭೂಜೀವಿತವನ್ನು ಮತ್ತು ಎಲ್ಲಾ ಮಾನವ ಸಂಬಂಧಗಳನ್ನೂ ಒಳಗೊಂಡು ಭೂಮಿಗೆ ಸಂಬಂಧಿಸಿದ ಎಲ್ಲಾ ನಂಟುಗಳನ್ನು ಮನಸಾರೆ ತ್ಯಾಗಮಾಡಲು ಅವರು ಸಿದ್ಧರಾಗಿದ್ದಾರೆ. ಭೂಪರದೈಸಿನಲ್ಲಿನ ಜೀವಿತವು ಅತ್ಯದ್ಭುತಕರವಾಗಿರುವುದು ಎಂಬುದನ್ನು ಆತ್ಮಾಭಿಷಿಕ್ತ ಕ್ರೈಸ್ತರು ಗ್ರಹಿಸುತ್ತಾರಾದರೂ, ಇದು ಅವರ ನಿರೀಕ್ಷೆಯಾಗಿರುವುದಿಲ್ಲ. (ಲೂಕ 23:43) ತಪ್ಪಾದ ಧಾರ್ಮಿಕ ದೃಷ್ಟಿಕೋನಗಳ ಕಾರಣದಿಂದಲ್ಲ, ಬದಲಾಗಿ ದೇವರಾತ್ಮವು ಅವರ ಮೇಲೆ ಕಾರ್ಯನಡಿಸುವುದರಿಂದ, ಅವರು ಅಚಲವಾದ ಸ್ವರ್ಗೀಯ ನಿರೀಕ್ಷೆಯನ್ನು ಹೊಂದಿದ್ದಾರೆ ಮತ್ತು ಯೋಗ್ಯವಾಗಿಯೇ ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳುತ್ತಾರೆ.

ತಾನು ಹೊಸ ಒಡಂಬಡಿಕೆ ಮತ್ತು ರಾಜ್ಯದೊಡಂಬಡಿಕೆಯಲ್ಲಿ ಇದ್ದೇನೋ ಇಲ್ಲವೊ ಎಂಬ ವಿಷಯದಲ್ಲಿ ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಖಚಿತವಾಗಿರುವುದಿಲ್ಲ ಎಂದಿಟ್ಟುಕೊಳ್ಳಿ. ಅವನು ಕ್ರಿಸ್ತನೊಂದಿಗೆ ಜೊತೆಬಾಧ್ಯಸ್ಥನಾಗಿದ್ದಾನೆ ಎಂಬುದಕ್ಕೆ ದೇವರಾತ್ಮದ ಸಾಕ್ಷಿಯೂ ಅವನಿಗೆ ಇಲ್ಲದಿರುವುದಾದರೆ ಆಗೇನು? ಹಾಗಿರುವಲ್ಲಿ, ಅವನು ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳುವುದು ತಪ್ಪಾಗಿದೆ. ವಾಸ್ತವದಲ್ಲಿ, ಒಬ್ಬ ವ್ಯಕ್ತಿಯು ನಿಜವಾಗಿಯೂ ಅಂಥ ಸ್ವರ್ಗೀಯ ಕರೆಯನ್ನು ಪಡೆಯದೇ ಇದ್ದು, ಸ್ವಗೀಯ ರಾಜನಾಗಿಯೂ ಯಾಜಕನಾಗಿಯೂ ಸೇವೆಮಾಡುವ ಕರೆಯು ತನಗೆ ಕೊಡಲ್ಪಟ್ಟಿದೆ ಎಂದು ಉದ್ದೇಶಪೂರ್ವಕವಾಗಿ ತನ್ನನ್ನು ಪ್ರತಿನಿಧಿಸಿಕೊಳ್ಳುವಲ್ಲಿ ದೇವರು ಖಂಡಿತವಾಗಿಯೂ ಅಪ್ರಸನ್ನನಾಗುವನು.​—⁠ರೋಮಾಪುರ 9:16; ಪ್ರಕಟನೆ 22:⁠5.

ಎಷ್ಟು ಬಾರಿ ಅದು ಆಚರಿಸಲ್ಪಡಬೇಕು?

ಯೇಸುವಿನ ಮರಣವನ್ನು ಪ್ರತಿ ವಾರ ಅಥವಾ ಪ್ರತಿ ದಿನ ಆಚರಿಸಬೇಕಾಗಿದೆಯೋ? ಕ್ರಿಸ್ತನು ಕರ್ತನ ರಾತ್ರಿ ಭೋಜನವನ್ನು ಆರಂಭಿಸಿದ್ದೂ ಅನ್ಯಾಯವಾಗಿ ಮರಣಕ್ಕೆ ಒಪ್ಪಿಸಲ್ಪಟ್ಟದ್ದೂ ಪಸ್ಕಹಬ್ಬದ ದಿನದಂದೇ. ವರ್ಷಕ್ಕೆ ಒಮ್ಮೆ ನೈಸಾನ್‌ 14ರಂದು ಆಚರಿಸಲ್ಪಡುತ್ತಿದ್ದ ಪಸ್ಕಹಬ್ಬವು, ಐಗುಪ್ತದ ಬಂದಿವಾಸದಿಂದ ಇಸ್ರಾಯೇಲ್ಯರ ಬಿಡುಗಡೆಯನ್ನು ಸ್ಮರಿಸಲಿಕ್ಕಾಗಿತ್ತು. (ವಿಮೋಚನಕಾಂಡ 12:6, 14; ಯಾಜಕಕಾಂಡ 23:⁠5) ಆದುದರಿಂದ, ‘ಪಸ್ಕದ ಯಜ್ಞದ ಕುರಿಯಾಗಿದ್ದ ಕ್ರಿಸ್ತನ’ ಮರಣವು, ವರ್ಷಕ್ಕೆ ಒಮ್ಮೆ ಮಾತ್ರ ಆಚರಿಸಲ್ಪಡಬೇಕೇ ಹೊರತು ಪ್ರತಿ ವಾರ ಅಥವಾ ಪ್ರತಿ ದಿನವಲ್ಲ. (1 ಕೊರಿಂಥ 5:⁠7) ಕ್ರೈಸ್ತರು ಕರ್ತನ ರಾತ್ರಿ ಭೋಜನವನ್ನು ಆಚರಿಸುವಾಗ, ಯೇಸು ಅದನ್ನು ಆರಂಭಿಸಿದಾಗ ಯಾವ ಕಾರ್ಯವಿಧಾನವನ್ನು ಉಪಯೋಗಿಸಿದನೋ ಅದನ್ನೇ ಅನುಸರಿಸುತ್ತಾರೆ.

ಹಾಗಾದರೆ, “ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ” ಎಂಬ ಪೌಲನ ಮಾತುಗಳ ಅರ್ಥವೇನು? (1 ಕೊರಿಂಥ 11:26) ಈ ವಚನಭಾಗದಲ್ಲಿ ಪೌಲನು “ಪ್ರತಿ ಬಾರಿ” ಅಥವಾ “ಆಗೆಲ್ಲಾ” ಎಂಬ ಅರ್ಥವನ್ನು ಕೊಡುವ ಒಂದು ಪದವನ್ನು ಉಪಯೋಗಿಸಿದನು. ಹೀಗೆ, ಅಭಿಷಿಕ್ತ ಕ್ರೈಸ್ತರು ಕುರುಹುಗಳಲ್ಲಿ ಪಾಲ್ಗೊಂಡಾಗಲೆಲ್ಲಾ, ಅವರು ಯೇಸುವಿನ ಈಡಿನ ಯಜ್ಞದಲ್ಲಿ ತಮ್ಮ ನಂಬಿಕೆಯನ್ನು ಪ್ರಕಟಿಸುವರು ಎಂಬುದು ಅವನು ಹೇಳಿದ್ದರ ಅರ್ಥವಾಗಿತ್ತು.

ಕ್ರಿಸ್ತನು “ಬರುವ ತನಕ” ಅಭಿಷಿಕ್ತ ಕ್ರೈಸ್ತರು ಅವನ ಮರಣದ ಜ್ಞಾಪಕವನ್ನು ಆಚರಿಸುವರು. ಯೇಸು ತನ್ನ ‘ಬರೋಣದ’ ಸಮಯದಲ್ಲಿ ತನ್ನ ಅಭಿಷಿಕ್ತ ಹಿಂಬಾಲಕರನ್ನು ಆತ್ಮ ಜೀವಿತಕ್ಕೆ ಪುನರುತ್ಥಾನಗೊಳಿಸುವ ಮೂಲಕ ಅವರನ್ನು ಸ್ವರ್ಗಕ್ಕೆ ಕರೆದೊಯ್ಯಲು ಆಗಮಿಸುವ ವರೆಗೆ ಈ ಆಚರಣೆಯು ಮುಂದುವರಿಯುವುದು. (1 ಥೆಸಲೊನೀಕ 4:​14-17) ಇದು 11 ಮಂದಿ ನಿಷ್ಠಾವಂತ ಅಪೊಸ್ತಲರಿಗೆ ಯೇಸು ನುಡಿದ ಮಾತುಗಳಿಗೆ ಹೊಂದಿಕೆಯಲ್ಲಿದೆ: “ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.”​—⁠ಯೋಹಾನ 14:⁠3.

ಜ್ಞಾಪಕಾಚರಣೆಯು ನಿಮಗೆ ಯಾವ ಅರ್ಥವನ್ನು ಹೊಂದಿದೆ?

ಯೇಸುವಿನ ಯಜ್ಞದಿಂದ ಪ್ರಯೋಜನಹೊಂದಲು ಮತ್ತು ಭೂಮಿಯಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳಲು ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳುವ ಆವಶ್ಯಕತೆಯಿದೆಯೋ? ಇಲ್ಲ. ನೋಹ, ಅಬ್ರಹಾಮ, ಸಾರ, ಇಸಾಕ, ರೆಬೆಕ್ಕ, ಯೋಸೇಫ, ಮೋಶೆ ಮತ್ತು ದಾವೀದರಂಥ ದೇವಭಯವಿದ್ದ ಜನರು ಭೂಮಿಯ ಮೇಲೆ ಪುನರುತ್ಥಾನಗೊಳಿಸಲ್ಪಟ್ಟ ಬಳಿಕ, ಅವರು ಈ ಕುರುಹುಗಳಲ್ಲಿ ಎಂದಾದರೂ ಪಾಲ್ಗೊಳ್ಳುವರು ಎಂದು ಬೈಬಲಿನಲ್ಲಿ ಎಲ್ಲಿಯೂ ತಿಳಿಸಲಾಗಿಲ್ಲ. ಆದರೂ, ಅವರು ಮತ್ತು ಭೂಮಿಯ ಮೇಲೆ ಅನಂತ ಜೀವನವನ್ನು ಬಯಸುವಂಥ ಇನ್ನಿತರರೆಲ್ಲರೂ ದೇವರಲ್ಲಿ ಮತ್ತು ಕ್ರಿಸ್ತನಲ್ಲಿ ಹಾಗೂ ಯೇಸುವಿನ ಈಡಿನ ಯಜ್ಞದ ಯೆಹೋವನ ಒದಗಿಸುವಿಕೆಯಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಬೇಕಾಗಿರುವುದು. (ಯೋಹಾನ 3:36; 14:⁠1) ನಿತ್ಯಜೀವವನ್ನು ಪಡೆದುಕೊಳ್ಳಲಿಕ್ಕಾಗಿ ನೀವು ಸಹ ನಂಬಿಕೆಯನ್ನು ವ್ಯಕ್ತಪಡಿಸಬೇಕು. ಕ್ರಿಸ್ತನ ಮರಣದ ವಾರ್ಷಿಕ ಜ್ಞಾಪಕಾಚರಣೆಗೆ ನೀವು ಹಾಜರಿರುವುದು, ಆ ಮಹಾನ್‌ ಯಜ್ಞದ ಜ್ಞಾಪನವಾಗಿ ಕಾರ್ಯನಡಿಸುವುದು ಮತ್ತು ಇದು ನಿಮ್ಮ ಕೃತಜ್ಞತೆಯನ್ನು ಇನ್ನಷ್ಟು ಆಳಗೊಳಿಸಬೇಕು.

ಅಪೊಸ್ತಲ ಯೋಹಾನನು ಯೇಸುವಿನ ಯಜ್ಞದ ಮಹತ್ವವನ್ನು ಒತ್ತಿಹೇಳುತ್ತಾ ತಿಳಿಸಿದ್ದು: “ನೀವು ಪಾಪಮಾಡದಂತೆ ಈ ಮಾತುಗಳನ್ನು [ಜೊತೆ ಅಭಿಷಿಕ್ತರಾದ] ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.” (1 ಯೋಹಾನ 2:1, 2) ಯೇಸುವಿನ ಯಜ್ಞವು ತಮ್ಮ ಪಾಪಗಳನ್ನು ನಿವಾರಿಸುವ ಯಜ್ಞವಾಗಿದೆ ಎಂದು ಅಭಿಷಿಕ್ತರು ಹೇಳಸಾಧ್ಯವಿದೆ. ಆದರೆ ಇದು ಇಡೀ ಲೋಕದ ಪಾಪಗಳಿಗಾಗಿಯೂ ತದ್ರೀತಿಯ ನಿವಾರಕ ಯಜ್ಞವಾಗಿದೆ; ಅವನ ಯಜ್ಞವು ವಿಧೇಯ ಮಾನವಕುಲಕ್ಕೆ ನಿತ್ಯಜೀವವನ್ನು ಸಾಧ್ಯಗೊಳಿಸಿದೆ!

ನೀವು 2004ನೇ ಇಸವಿಯ ಏಪ್ರಿಲ್‌ 4ರಂದು ಯೇಸುವಿನ ಮರಣವನ್ನು ಆಚರಿಸಲು ಹಾಜರಿರುವಿರೋ? ಈ ಆಚರಣೆಯು ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳಿಂದ ಅವರ ಕೂಟದ ಸ್ಥಳಗಳಲ್ಲಿ ನಡೆಸಲ್ಪಡುತ್ತದೆ. ಒಂದುವೇಳೆ ನೀವು ಹಾಜರಾಗುವುದಾದರೆ, ಅತಿ ಪ್ರಾಮುಖ್ಯವಾದ ಒಂದು ಬೈಬಲ್‌ ಭಾಷಣಕ್ಕೆ ಕಿವಿಗೊಡುವುದರಿಂದ ಪ್ರಯೋಜನ ಪಡೆಯುವಿರಿ. ಯೆಹೋವ ದೇವರೂ ಯೇಸು ಕ್ರಿಸ್ತನೂ ನಮಗೋಸ್ಕರ ಎಷ್ಟೆಲ್ಲಾ ಮಾಡಿದ್ದಾರೆ ಎಂಬುದು ನಿಮಗೆ ಜ್ಞಾಪಿಸಲ್ಪಡುವುದು. ದೇವರಿಗಾಗಿ, ಕ್ರಿಸ್ತನಿಗಾಗಿ ಮತ್ತು ಯೇಸುವಿನ ಈಡಿನ ಯಜ್ಞಕ್ಕಾಗಿ ಆಳವಾದ ಗೌರವವಿರುವವರೊಂದಿಗೆ ಕೂಡಿಬರುವುದು ಸಹ ಆಧ್ಯಾತ್ಮಿಕವಾಗಿ ಪ್ರತಿಫಲದಾಯಕವಾಗಿರುವುದು. ಈ ಸಂದರ್ಭವು, ನಿತ್ಯಜೀವಕ್ಕೆ ಮುನ್ನಡಿಸುವಂಥ ದೇವರ ಅಪಾತ್ರ ದಯೆಯನ್ನು ಪಡೆದುಕೊಳ್ಳುವ ನಿಮ್ಮ ಬಯಕೆಯನ್ನು ಇನ್ನಷ್ಟು ಬಲಪಡಿಸಬಹುದು. ಈ ಕೂಟಕ್ಕೆ ಹಾಜರಾಗುವುದರಿಂದ ಯಾವುದೂ ನಿಮ್ಮನ್ನು ತಡೆಯದಿರಲಿ. ನಮ್ಮ ಸ್ವರ್ಗೀಯ ತಂದೆಯಾಗಿರುವ ಯೆಹೋವ ದೇವರನ್ನು ಘನಪಡಿಸುವ ಹಾಗೂ ಆತನನ್ನು ಸಂತೋಷಪಡಿಸುವ ಈ ಹೃದಯಪ್ರೇರಕ ಆಚರಣೆಗೆ ಹಾಜರಾಗಿ.

[ಪುಟ 5ರಲ್ಲಿರುವ ಚಿತ್ರ]

ಯೇಸುವಿನ ಮರಣವು ಪ್ರೀತಿಯ ಎರಡು ಮಹಾನ್‌ ಅಭಿವ್ಯಕ್ತಿಗಳನ್ನು ಒಳಗೂಡಿದೆ

[ಪುಟ 6ರಲ್ಲಿರುವ ಚಿತ್ರ]

ಹುಳಿಯಿಲ್ಲದ ರೊಟ್ಟಿ ಮತ್ತು ದ್ರಾಕ್ಷಾಮದ್ಯವು, ಯೇಸುವಿನ ಪಾಪರಹಿತ ದೇಹ ಹಾಗೂ ಅವನು ಸುರಿಸಿದ ರಕ್ತದ ಸೂಕ್ತ ಸಂಕೇತವಾಗಿದೆ