ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು”

“ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು”

“ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು”

“ನಿನ್ನ ಸೇವೆಯನ್ನು ಪೂರ್ಣ ರೀತಿಯಲ್ಲಿ ಮಾಡು.”​—⁠2 ತಿಮೊಥೆಯ 4:​5, ಬೈಯಿಂಗ್ಟನ್‌.

ನೀವು ಒಬ್ಬ ರಾಜ್ಯ ಘೋಷಕರಾಗಿದ್ದೀರೋ? ಹಾಗಿರುವಲ್ಲಿ, ಈ ಅಪೂರ್ವ ಸುಯೋಗಕ್ಕಾಗಿ ಯೆಹೋವ ದೇವರಿಗೆ ಉಪಕಾರ ಸಲ್ಲಿಸಿರಿ. ನೀವು ಸಭೆಯಲ್ಲಿ ಒಬ್ಬ ಹಿರಿಯರಾಗಿದ್ದೀರೋ? ಹಾಗಾದರೆ ಇದು ಯೆಹೋವನಿಂದ ಕೊಡಲ್ಪಟ್ಟ ಹೆಚ್ಚಿನ ಸುಯೋಗವಾಗಿದೆ. ಆದರೆ ಐಹಿಕ ಶಿಕ್ಷಣವಾಗಲಿ ಅಥವಾ ನಿರರ್ಗಳವಾಗಿ ಮಾತಾಡುವ ಸಾಮರ್ಥ್ಯವಾಗಲಿ ನಮ್ಮಲ್ಲಿ ಯಾರನ್ನೂ ಶುಶ್ರೂಷೆಗಾಗಿ ಅಥವಾ ಸಭೆಯಲ್ಲಿನ ಮೇಲ್ವಿಚಾರಣೆಗಾಗಿ ಅರ್ಹರನ್ನಾಗಿ ಮಾಡುವುದಿಲ್ಲ ಎಂಬುದನ್ನು ಮಾತ್ರ ನಾವೆಂದಿಗೂ ಮರೆಯಬಾರದು. ಶುಶ್ರೂಷೆಗಾಗಿ ಯೆಹೋವನೇ ನಮ್ಮನ್ನು ಸಾಕಷ್ಟು ಮಟ್ಟಿಗೆ ಅರ್ಹರನ್ನಾಗಿ ಮಾಡುತ್ತಾನೆ, ಮತ್ತು ನಮ್ಮಲ್ಲಿರುವ ಕೆಲವು ಪುರುಷರು ನಿರ್ದಿಷ್ಟ ಶಾಸ್ತ್ರೀಯ ಆವಶ್ಯಕತೆಗಳನ್ನು ತಲಪಿರುವ ಕಾರಣದಿಂದಲೇ ಮೇಲ್ವಿಚಾರಕರಾಗಿ ಸೇವೆಮಾಡುವ ಸುಯೋಗವುಳ್ಳವರಾಗಿದ್ದಾರೆ.​—⁠2 ಕೊರಿಂಥ 3:5, 6; 1 ತಿಮೊಥೆಯ 3:1-7.

2 ಎಲ್ಲಾ ಸಮರ್ಪಿತ ಕ್ರೈಸ್ತರು ಸೌವಾರ್ತಿಕ ಕೆಲಸವನ್ನು ಮಾಡುತ್ತಾರಾದರೂ, ವಿಶೇಷವಾಗಿ ಮೇಲ್ವಿಚಾರಕರು ಅಥವಾ ಹಿರಿಯರು ಶುಶ್ರೂಷೆಯಲ್ಲಿ ಅತ್ಯುತ್ತಮ ಮಾದರಿಯನ್ನು ಇಡುವ ಆವಶ್ಯಕತೆಯಿದೆ. “ಪ್ರಸಂಗದಲ್ಲಿಯೂ ಉಪದೇಶದಲ್ಲಿಯೂ ಕಷ್ಟಪಡುವ” ಹಿರಿಯರು ದೇವರಿಂದ ಮತ್ತು ಕ್ರಿಸ್ತನಿಂದ ಹಾಗೂ ಯೆಹೋವನ ಜೊತೆ ಸಾಕ್ಷಿಗಳಿಂದ ಗಮನಿಸಲ್ಪಡುತ್ತಾರೆ. (1 ತಿಮೊಥೆಯ 5:17; ಎಫೆಸ 5:23; ಇಬ್ರಿಯ 6:10-12) ಎಲ್ಲಾ ಸನ್ನಿವೇಶಗಳ ಕೆಳಗೆ ಒಬ್ಬ ಹಿರಿಯನ ಉಪದೇಶವು ಆಧ್ಯಾತ್ಮಿಕವಾಗಿ ಸ್ವಸ್ಥಕರವಾಗಿರಬೇಕು, ಏಕೆಂದರೆ ಅಪೊಸ್ತಲ ಪೌಲನು ಮೇಲ್ವಿಚಾರಕನಾಗಿದ್ದ ತಿಮೊಥೆಯನಿಗೆ ಹೇಳಿದ್ದು: “ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯಬೋಧನೆಗೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ಹೋಗುವರು. ಆದರೆ ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು, ಶ್ರಮೆಯನ್ನು ತಾಳಿಕೋ, ಸೌವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು.”​—⁠2 ತಿಮೊಥೆಯ 4:3-5.

3 ಸುಳ್ಳು ಬೋಧನೆಗಳು ಸಭೆಯ ಆಧ್ಯಾತ್ಮಿಕತೆಗೆ ಬೆದರಿಕೆಯನ್ನೊಡ್ಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಒಬ್ಬ ಮೇಲ್ವಿಚಾರಕನು ಪೌಲನ ಸಲಹೆಗನುಸಾರ ಕಾರ್ಯನಡಿಸಬೇಕು: “ಎಲ್ಲಾ ವಿಧಗಳಲ್ಲಿ ಮಿತಭಾವದವನಾಗಿರು, . . . ನಿನ್ನ ಸೇವೆಯನ್ನು ಪೂರ್ಣ ರೀತಿಯಲ್ಲಿ ಮಾಡು.” (2 ತಿಮೊಥೆಯ 4:​5, ಬೈಯಿಂಗ್ಟನ್‌) ಹೌದು, ಹಿರಿಯನೊಬ್ಬನು ‘ತನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸುವ’ ಆವಶ್ಯಕತೆಯಿದೆ. ಅವನು ಅದನ್ನು ಸಂಪೂರ್ಣವಾಗಿ, ಸಮಗ್ರವಾದ ರೀತಿಯಲ್ಲಿ, ಅಥವಾ ಪೂರ್ಣ ಮಟ್ಟದಲ್ಲಿ ನಡಿಸಬೇಕು. ಪೂರ್ಣ ರೀತಿಯಲ್ಲಿ ತನ್ನ ಶುಶ್ರೂಷೆಯನ್ನು ನಿರ್ವಹಿಸುವ ಹಿರಿಯನೊಬ್ಬನು ತನ್ನೆಲ್ಲಾ ಜವಾಬ್ದಾರಿಗಳಿಗೆ ಯೋಗ್ಯ ಗಮನವನ್ನು ಕೊಡುತ್ತಾನೆ ಮತ್ತು ಯಾವುದನ್ನೂ ಅಲಕ್ಷಿಸುವುದಿಲ್ಲ ಅಥವಾ ಅಪೂರ್ಣ ರೀತಿಯಲ್ಲಿ ಕಾರ್ಯನಡಿಸುವುದಿಲ್ಲ. ಇಂಥ ಒಬ್ಬ ವ್ಯಕ್ತಿಯು ಚಿಕ್ಕಪುಟ್ಟ ವಿಷಯಗಳಲ್ಲಿಯೂ ನಂಬಿಗಸ್ತನಾಗಿರುತ್ತಾನೆ.​—⁠ಲೂಕ 12:48; 16:⁠10.

4 ನಮ್ಮ ಸೇವೆಯನ್ನು ಲೋಪವಿಲ್ಲದೆ ನಡಿಸುವುದು ಯಾವಾಗಲೂ ಹೆಚ್ಚಿನ ಸಮಯವನ್ನು ಅಗತ್ಯಪಡಿಸುವುದಿಲ್ಲವಾದರೂ, ಒಬ್ಬನು ಸಮಯವನ್ನು ದಕ್ಷವಾಗಿ ಉಪಯೋಗಿಸುವುದನ್ನು ಅಗತ್ಯಪಡಿಸುತ್ತದೆ. ಸಮತೂಕತೆ ಹಾಗೂ ಕ್ರಮಬದ್ಧತೆಯು ಸೇವೆಯನ್ನು ಲೋಪವಿಲ್ಲದೆ ನಡಿಸಲು ಎಲ್ಲಾ ಕ್ರೈಸ್ತರಿಗೆ ಸಹಾಯಮಾಡಬಲ್ಲದು. ಹಿರಿಯನೊಬ್ಬನು ಕ್ಷೇತ್ರ ಸೇವೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಸಲುವಾಗಿ ಒಳ್ಳೇ ವೈಯಕ್ತಿಕ ಯೋಜನೆಯನ್ನು ಮಾಡಿಕೊಳ್ಳುವ ಅಗತ್ಯವಿದೆ; ಅಂದರೆ ತನ್ನ ಕಾರ್ಯತಖ್ತೆಯನ್ನು ಸಮತೂಕವಾಗಿಡಲು ಹಾಗೂ ಯಾವ ಜವಾಬ್ದಾರಿಯನ್ನು ಇತರರಿಗೆ ವಹಿಸಿಕೊಡಸಾಧ್ಯವಿದೆ ಮತ್ತು ಅದನ್ನು ಹೇಗೆ ವಹಿಸಿಕೊಡಸಾಧ್ಯವಿದೆ ಎಂಬುದನ್ನು ಸರಿಯಾಗಿ ಯೋಜಿಸಬೇಕಾಗಿದೆ. (ಇಬ್ರಿಯ 13:17) ಸಹಜವಾಗಿಯೇ, ಯೆರೂಸಲೇಮಿನ ಗೋಡೆಗಳನ್ನು ಪುನರ್ನಿರ್ಮಿಸುವುದರಲ್ಲಿ ವೈಯಕ್ತಿಕವಾಗಿ ಒಳಗೂಡಿದ್ದ ನೆಹೆಮೀಯನಂತೆ ಒಬ್ಬ ಗೌರವಾನ್ವಿತ ಹಿರಿಯನು ತನ್ನ ಪಾಲಿನ ಕೆಲಸವನ್ನು ತಾನೇ ಮಾಡುತ್ತಾನೆ. (ನೆಹೆಮೀಯ 5:16) ಮತ್ತು ಯೆಹೋವನ ಎಲ್ಲಾ ಸೇವಕರೂ ರಾಜ್ಯದ ಸಾರುವಿಕೆಯ ಕೆಲಸದಲ್ಲಿ ಕ್ರಮವಾಗಿ ಭಾಗವಹಿಸಬೇಕು.​—⁠1 ಕೊರಿಂಥ 9:​16-18.

5 ಸ್ಥಾಪಿಸಲ್ಪಟ್ಟಿರುವ ಸ್ವರ್ಗೀಯ ರಾಜ್ಯದ ಘೋಷಕರೋಪಾದಿ ಎಂಥ ಹರ್ಷಕರ ನೇಮಕವು ನಮಗೆ ಕೊಡಲ್ಪಟ್ಟಿದೆ! ಅಂತ್ಯವು ಬರುವುದಕ್ಕೆ ಮೊದಲು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸುವಾರ್ತೆಯನ್ನು ಸಾರುವುದರಲ್ಲಿ ಪಾಲನ್ನು ಹೊಂದಿರುವ ನಮ್ಮ ಸುಯೋಗವನ್ನು ನಾವು ಖಂಡಿತವಾಗಿಯೂ ಅಮೂಲ್ಯವಾಗಿ ಪರಿಗಣಿಸುತ್ತೇವೆ. (ಮತ್ತಾಯ 24:14) ನಾವು ಅಪರಿಪೂರ್ಣರಾಗಿರುವುದಾದರೂ, ಪೌಲನ ಈ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳಸಾಧ್ಯವಿದೆ: “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ [ಶುಶ್ರೂಷೆಯ] ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.” (2 ಕೊರಿಂಥ 4:⁠7) ಹೌದು, ನಾವು ಸ್ವೀಕಾರಾರ್ಹವಾದ ಸೇವೆಯನ್ನು ಸಲ್ಲಿಸಬಲ್ಲೆವು, ಆದರೆ ಕೇವಲ ದೇವದತ್ತ ಬಲ ಮತ್ತು ವಿವೇಕದ ಸಹಾಯದಿಂದ ಮಾತ್ರ.​—⁠1 ಕೊರಿಂಥ 1:​26-31.

ದೇವರ ಮಹಿಮೆಯನ್ನು ಪ್ರತಿಬಿಂಬಿಸುವುದು

6 ಅಭಿಷಿಕ್ತ ಕ್ರೈಸ್ತರನ್ನು ಸೂಚಿಸುತ್ತಾ ಪೌಲನು ಹೇಳಿದ್ದೇನೆಂದರೆ, ದೇವರು “ಹೊಸ ಒಡಂಬಡಿಕೆಯ ಶುಶ್ರೂಷಕರಾಗಿರಲಿಕ್ಕಾಗಿ ನಮ್ಮನ್ನು ಸಾಕಷ್ಟು ಅರ್ಹರನ್ನಾಗಿ” (NW) ಮಾಡಿದ್ದಾನೆ. ಅಪೊಸ್ತಲನು ಯೇಸು ಕ್ರಿಸ್ತನ ಮೂಲಕ ಆಧ್ಯಾತ್ಮಿಕ ಇಸ್ರಾಯೇಲ್‌ನೊಂದಿಗೆ ಮಾಡಲ್ಪಟ್ಟ ಹೊಸ ಒಡಂಬಡಿಕೆ ಹಾಗೂ ಮೋಶೆಯ ಮೂಲಕ ಮಾಂಸಿಕ ಇಸ್ರಾಯೇಲ್ಯರೊಂದಿಗೆ ಮಾಡಲ್ಪಟ್ಟ ಹಳೇ ಧರ್ಮಶಾಸ್ತ್ರದೊಡಂಬಡಿಕೆಯ ನಡುವಣ ವ್ಯತ್ಯಾಸವನ್ನು ಎತ್ತಿತೋರಿಸುತ್ತಾನೆ. ಪೌಲನು ಕೂಡಿಸಿ ಹೇಳಿದ್ದೇನೆಂದರೆ, ಮೋಶೆಯು ದಶಾಜ್ಞೆಗಳನ್ನು ಒಳಗೂಡಿದ್ದ ಕಲ್ಲಿನ ಹಲಿಗೆಗಳೊಂದಿಗೆ ಸೀನಾಯಿಬೆಟ್ಟದಿಂದ ಕೆಳಗಿಳಿದು ಬಂದಾಗ, ಅವನ ಮುಖವು ಎಷ್ಟು ಪ್ರಕಾಶಮಾನವಾಗಿತ್ತೆಂದರೆ, ಇಸ್ರಾಯೇಲ್ಯರು ಅವನ ಮುಖವನ್ನು ದಿಟ್ಟಿಸಿ ನೋಡುವುದು ಅಸಾಧ್ಯವಾಯಿತು. ಆದರೂ, “ಅವರ ಬುದ್ಧಿ ಮಂದ”ವಾದದ್ದರಿಂದ ಮತ್ತು ಅವರ ಹೃದಯದ ಮೇಲೆ ಒಂದು ಮುಸುಕು ಹಾಕಲ್ಪಟ್ಟಿದ್ದರಿಂದ, ಸಕಾಲದಲ್ಲಿ ಇನ್ನೂ ಹೆಚ್ಚು ಗಂಭೀರವಾದ ಸಂಗತಿಯು ಘಟಿಸಿತು. ಆದರೂ, ಪೂರ್ಣಹೃದಯದ ಭಕ್ತಿಯಿಂದ ಯೆಹೋವನ ಕಡೆಗೆ ತಿರುಗಿಕೊಂಡಾಗಲೇ ಆ ಮುಸುಕು ತೆಗೆಯಲ್ಪಡುತ್ತದೆ. ತದನಂತರ ಹೊಸ ಒಡಂಬಡಿಕೆಯಲ್ಲಿದ್ದವರಿಗೆ ಕೊಡಲ್ಪಟ್ಟ ಶುಶ್ರೂಷೆಯ ಕುರಿತು ಸೂಚಿಸುತ್ತಾ ಪೌಲನು ಹೇಳುವುದು: ‘ನಾವೆಲ್ಲರೂ . . . ಮುಸುಕು ತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು [“ಯೆಹೋವನ ಮಹಿಮೆಯನ್ನು,” NW] ದರ್ಪಣಗಳಂತೆ’ ಪ್ರತಿಬಿಂಬಿಸುತ್ತೇವೆ. (2 ಕೊರಿಂಥ 3:6-8, 14-18; ವಿಮೋಚನಕಾಂಡ 34:29-35) ಯೇಸುವಿನ ಇಂದಿನ “ಬೇರೆ ಕುರಿಗಳು” ಸಹ ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುವ ಸುಯೋಗವುಳ್ಳವರಾಗಿದ್ದಾರೆ.​—⁠ಯೋಹಾನ 10:⁠16.

7 ಮನುಷ್ಯರಲ್ಲಿ ಯಾವನೂ ದೇವರ ಮುಖವನ್ನು ನೋಡಿ ಜೀವಿಸಸಾಧ್ಯವಿಲ್ಲದಿರುವಾಗ, ಪಾಪಭರಿತ ಮಾನವರು ಆತನ ಮಹಿಮೆಯನ್ನು ಹೇಗೆ ಪ್ರತಿಬಿಂಬಿಸಸಾಧ್ಯವಿದೆ? (ವಿಮೋಚನಕಾಂಡ 33:20) ಯೆಹೋವನ ವೈಯಕ್ತಿಕ ಮಹಿಮೆಯು ಮಾತ್ರವಲ್ಲದೆ, ತನ್ನ ರಾಜ್ಯದ ಮೂಲಕ ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸುವ ಆತನ ಮಹಿಮಾಭರಿತ ಉದ್ದೇಶವೂ ಇದೆ ಎಂಬುದನ್ನು ನಾವು ಗ್ರಹಿಸಬೇಕು. ರಾಜ್ಯಕ್ಕೆ ಸಂಬಂಧಿಸಿದ ಸತ್ಯಗಳು “ದೇವರ ಮಹತ್ತುಗಳ” ಒಂದು ಭಾಗವಾಗಿದ್ದವು ಮತ್ತು ಸಾ.ಶ. 33ರ ಪಂಚಾಶತ್ತಮದಂದು ಪವಿತ್ರಾತ್ಮವು ಯಾರ ಮೇಲೆ ಸುರಿಸಲ್ಪಟ್ಟಿತೋ ಅವರು ಈ ಮಹತ್ತುಗಳನ್ನು ಇತರರಿಗೆ ಪ್ರಕಟಿಸಲು ಆರಂಭಿಸಿದರು. (ಅ. ಕೃತ್ಯಗಳು 2:11) ಪವಿತ್ರಾತ್ಮದ ಮಾರ್ಗದರ್ಶನದಿಂದ ಅವರು ತಮಗೆ ವಹಿಸಲ್ಪಟ್ಟಿದ್ದ ಶುಶ್ರೂಷೆಯನ್ನು ಲೋಪವಿಲ್ಲದೆ ನಡಿಸಲು ಶಕ್ತರಾದರು.​—⁠ಅ. ಕೃತ್ಯಗಳು 1:⁠8.

8 ಪೌಲನು ತನ್ನ ಶುಶ್ರೂಷೆಯನ್ನು ಲೋಪವಿಲ್ಲದೆ ಮಾಡುವುದರಿಂದ ಯಾವುದೂ ತನ್ನನ್ನು ತಡೆಗಟ್ಟುವಂತೆ ಅನುಮತಿಸದಿರಲು ನಿರ್ಧರಿಸಿದನು. ಅವನು ಬರೆದುದು: “ನಾವು ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಟ್ಟು ಹಿಂದೆಗೆಯುವದಿಲ್ಲ. ನಾಚಿಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಕೆಡಿಸದೆ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಸಜ್ಜನರೆಂದು ಪ್ರತಿಮನುಷ್ಯನ ಮನಸ್ಸು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ.” (2 ಕೊರಿಂಥ 4:1, 2) “ಈ ಸೇವೆ” ಎಂದು ಪೌಲನು ಯಾವುದನ್ನು ಕರೆಯುತ್ತಾನೋ ಅದರ ಮೂಲಕ ಸತ್ಯವು ಬೋಧಿಸಲ್ಪಡುತ್ತಿದೆ ಮತ್ತು ಆಧ್ಯಾತ್ಮಿಕ ಬೆಳಕು ವ್ಯಾಪಕವಾಗಿ ಹಬ್ಬುತ್ತಿದೆ.

9 ಭೌತಿಕ ಮತ್ತು ಆಧ್ಯಾತ್ಮಿಕ ಬೆಳಕಿನ ಮೂಲದ ಕುರಿತು ಪೌಲನು ಬರೆಯುವುದು: “ಕತ್ತಲೆಯೊಳಗಿಂದ ಬೆಳಕುಹೊಳೆಯಲಿ ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು.” (2 ಕೊರಿಂಥ 4:6; ಆದಿಕಾಂಡ 1:2-5) ದೇವರ ಶುಶ್ರೂಷಕರಾಗಿರುವ ಅತ್ಯಮೂಲ್ಯ ಸುಯೋಗವು ನಮಗೆ ದಯಪಾಲಿಸಲ್ಪಟ್ಟಿರುವುದರಿಂದ, ನಾವು ದೇವರ ಮಹಿಮೆಯನ್ನು ದರ್ಪಣಗಳಂತೆ ಪ್ರತಿಬಿಂಬಿಸಲಿಕ್ಕಾಗಿ ನಮ್ಮನ್ನು ಶುದ್ಧರನ್ನಾಗಿರಿಸಿಕೊಳ್ಳೋಣ.

10 ಆಧ್ಯಾತ್ಮಿಕ ಅಂಧಕಾರದಲ್ಲಿರುವ ವ್ಯಕ್ತಿಗಳು ಯೆಹೋವನ ಮಹಿಮೆಯನ್ನು ಅಥವಾ ಮಹಾ ಮೋಶೆಯಾಗಿರುವ ಯೇಸು ಕ್ರಿಸ್ತನಿಂದ ತೋರಿಸಲ್ಪಡುವ ಅದರ ಪ್ರತಿಬಿಂಬವನ್ನು ನೋಡಲಾರರು. ಆದರೆ ಯೆಹೋವನ ಸೇವಕರೋಪಾದಿ ನಾವು ಶಾಸ್ತ್ರವಚನಗಳಿಂದ ಮಹಿಮಾಭರಿತ ಬೆಳಕನ್ನು ಪಡೆದುಕೊಳ್ಳುತ್ತೇವೆ ಮತ್ತು ಅದನ್ನು ಇತರರಿಗೆ ಪ್ರತಿಬಿಂಬಿಸುತ್ತೇವೆ. ಈಗ ಆಧ್ಯಾತ್ಮಿಕ ಅಂಧಕಾರದಲ್ಲಿರುವ ಜನರು ನಾಶನವನ್ನು ಪಾರಾಗಬೇಕಾದರೆ, ಅವರಿಗೆ ದೇವರಿಂದ ಬರುವ ಬೆಳಕಿನ ಆವಶ್ಯಕತೆಯಿದೆ. ಆದುದರಿಂದ, ಯೆಹೋವನ ಮಹಿಮೆಗಾಗಿ ಕತ್ತಲೆಯೊಳಗಿಂದ ಬೆಳಕನ್ನು ಪ್ರಕಾಶಿಸುವಂತೆ ಕೊಡಲ್ಪಟ್ಟಿರುವ ದೈವಿಕ ಆಜ್ಞೆಗೆ ನಾವು ಅತ್ಯಾನಂದದಿಂದ ಹಾಗೂ ಹುರುಪಿನಿಂದ ವಿಧೇಯರಾಗುತ್ತೇವೆ.

ಮನೆ ಬೈಬಲ್‌ ಅಧ್ಯಯನಗಳಲ್ಲಿ ನಿಮ್ಮ ಬೆಳಕು ಪ್ರಕಾಶಿಸಲಿ

11 ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕುಕೊಡುವದು. ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” (ಮತ್ತಾಯ 5:14-16) ನಮ್ಮ ಅತ್ಯುತ್ತಮ ನಡತೆಯು, ದೇವರಿಗೆ ಮಹಿಮೆಯನ್ನು ಸಲ್ಲಿಸುವಂತೆ ಇತರರನ್ನು ಪ್ರಚೋದಿಸಬಲ್ಲದು. (1 ಪೇತ್ರ 2:12) ಮತ್ತು ನಮ್ಮ ಸೌವಾರ್ತಿಕ ಕೆಲಸದ ಬೇರೆ ಬೇರೆ ಕ್ಷೇತ್ರಗಳು ನಮ್ಮ ಬೆಳಕನ್ನು ಪ್ರಕಾಶಿಸಲು ನಮಗೆ ಅನೇಕ ಸದವಕಾಶಗಳನ್ನು ನೀಡುತ್ತವೆ. ನಮ್ಮ ಮುಖ್ಯ ಹೇತುಗಳಲ್ಲಿ ಒಂದು, ಪರಿಣಾಮಕಾರಿ ಮನೆ ಬೈಬಲ್‌ ಅಧ್ಯಯನಗಳನ್ನು ನಡಿಸುವ ಮೂಲಕ ದೇವರ ವಾಕ್ಯದ ಆಧ್ಯಾತ್ಮಿಕ ಬೆಳಕನ್ನು ಪ್ರತಿಬಿಂಬಿಸುವುದೇ ಆಗಿದೆ. ನಮ್ಮ ಶುಶ್ರೂಷೆಯನ್ನು ಲೋಪವಿಲ್ಲದೆ ನಡಿಸುವುದರಲ್ಲಿ ಇದು ಅತ್ಯಂತ ಪ್ರಾಮುಖ್ಯ ವಿಧವಾಗಿದೆ. ಸತ್ಯಾನ್ವೇಷಕರ ಹೃದಯಗಳನ್ನು ಸ್ಪರ್ಶಿಸುವಂಥ ರೀತಿಯಲ್ಲಿ ಬೈಬಲ್‌ ಅಧ್ಯಯನಗಳನ್ನು ನಡಿಸಲು ನಮಗೆ ಯಾವ ಸಲಹೆಗಳು ಸಹಾಯಮಾಡಬಹುದು?

12 ಈ ವಿಷಯದಲ್ಲಿ ಯೆಹೋವನಿಗೆ ಪ್ರಾರ್ಥಿಸುವುದು, ಬೈಬಲ್‌ ಅಧ್ಯಯನಗಳನ್ನು ನಡಿಸಲಿಕ್ಕಾಗಿರುವ ನಮ್ಮ ಕಡುಬಯಕೆಯನ್ನು ವ್ಯಕ್ತಪಡಿಸುತ್ತದೆ. ಇದು, ದೇವರ ಜ್ಞಾನವನ್ನು ಪಡೆದುಕೊಳ್ಳುವಂತೆ ಇತರರಿಗೆ ಸಹಾಯಮಾಡುವುದರ ಪ್ರಾಮುಖ್ಯತೆಯನ್ನು ನಾವು ಮನಗಾಣುತ್ತೇವೆ ಎಂಬುದನ್ನೂ ತೋರಿಸುತ್ತದೆ. (ಯೆಹೆಜ್ಕೇಲ 33:​7-9) ಯೆಹೋವನು ಖಂಡಿತವಾಗಿಯೂ ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ ಮತ್ತು ಶುಶ್ರೂಷೆಯಲ್ಲಿನ ನಮ್ಮ ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಆಶೀರ್ವದಿಸುತ್ತಾನೆ. (1 ಯೋಹಾನ 5:14, 15) ಆದರೆ ಒಂದು ಮನೆ ಬೈಬಲ್‌ ಅಧ್ಯಯನವನ್ನು ನಡಿಸಲಿಕ್ಕಾಗಿ ಯಾರನ್ನಾದರೂ ಕಂಡುಕೊಳ್ಳುವಂತೆ ಸಹಾಯಕ್ಕಾಗಿ ಮಾತ್ರ ನಾವು ಪ್ರಾರ್ಥಿಸುವುದಿಲ್ಲ. ನಾವು ಒಂದು ಅಧ್ಯಯನವನ್ನು ಆರಂಭಿಸಿದ ಬಳಿಕವೂ, ಬೈಬಲ್‌ ವಿದ್ಯಾರ್ಥಿಯ ನಿರ್ದಿಷ್ಟ ಆವಶ್ಯಕತೆಗಳ ಕುರಿತು ಪ್ರಾರ್ಥಿಸುವುದು ಮತ್ತು ಅದರ ಕುರಿತು ಮನನಮಾಡುವುದು, ಪ್ರತಿಯೊಂದು ಅಧ್ಯಯನವನ್ನು ಫಲಪ್ರದ ರೀತಿಯಲ್ಲಿ ನಡೆಸುವಂತೆ ಸಹಾಯಮಾಡುವುದು.​—⁠ರೋಮಾಪುರ 12:⁠12.

13 ಫಲಪ್ರದ ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸಲಿಕ್ಕಾಗಿ, ಪ್ರತಿಯೊಂದು ಅಧ್ಯಯನಕ್ಕಾಗಿಯೂ ನಾವು ಚೆನ್ನಾಗಿ ತಯಾರಿಯನ್ನು ಮಾಡಬೇಕು. ಇದರಲ್ಲಿ ನಮಗೆ ಸಾಕಷ್ಟು ಅನುಭವವಿಲ್ಲ ಎಂದು ಅನಿಸುವುದಾದರೆ, ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕನು ಪ್ರತಿ ವಾರದ ಪಾಠವನ್ನು ಹೇಗೆ ಆವರಿಸುತ್ತಾನೆ ಎಂಬುದನ್ನು ಗಮನಿಸುವುದು ಬಹಳಷ್ಟು ಸಹಾಯಕರವಾಗಿರಬಹುದು. ಕೆಲವೊಮ್ಮೆ, ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸುವುದರಲ್ಲಿ ಒಳ್ಳೇ ಫಲಿತಾಂಶಗಳನ್ನು ಪಡೆದುಕೊಂಡಿರುವ ರಾಜ್ಯ ಪ್ರಚಾರಕರೊಂದಿಗೆ ಹೋಗಲು ಸಹ ನಾವು ಶಕ್ತರಾಗಿರಬಹುದು. ವಿಶೇಷವಾಗಿ ಯೇಸು ಕ್ರಿಸ್ತನ ಮನೋಭಾವ ಮತ್ತು ಬೋಧನಾ ವಿಧಾನಗಳು ನಮ್ಮ ಪರಿಗಣನೆಗೆ ಅರ್ಹವಾಗಿವೆ ಎಂಬುದಂತೂ ನಿಶ್ಚಯ.

14 ತನ್ನ ಸ್ವರ್ಗೀಯ ತಂದೆಯ ಚಿತ್ತವನ್ನು ಮಾಡುವುದರಲ್ಲಿ ಮತ್ತು ದೇವರ ಕುರಿತು ಇತರರೊಂದಿಗೆ ಮಾತಾಡುವುದರಲ್ಲಿ ಯೇಸು ಆನಂದವನ್ನು ಪಡೆದನು. (ಕೀರ್ತನೆ 40:⁠8) ಅವನು ಮೃದುಸ್ವಭಾವದವನಾಗಿದ್ದನು ಮತ್ತು ಯಾರು ಅವನಿಗೆ ಕಿವಿಗೊಟ್ಟರೋ ಅವರ ಹೃದಯಗಳನ್ನು ತಲಪುವುದರಲ್ಲಿ ಸಫಲನಾದನು. (ಮತ್ತಾಯ 11:​28-30) ಆದುದರಿಂದಲೇ ನಾವು ನಮ್ಮ ಬೈಬಲ್‌ ವಿದ್ಯಾರ್ಥಿಗಳ ಹೃದಯಗಳನ್ನು ತಲಪಲು ಪ್ರಯತ್ನಿಸೋಣ. ಹೀಗೆ ಮಾಡಲಿಕ್ಕಾಗಿ ನಾವು ವಿದ್ಯಾರ್ಥಿಯ ನಿರ್ದಿಷ್ಟ ಪರಿಸ್ಥಿತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿದ್ದು ಪ್ರತಿಯೊಂದು ಅಧ್ಯಯನಕ್ಕಾಗಿ ತಯಾರಿಯನ್ನು ಮಾಡುವ ಅಗತ್ಯವಿದೆ. ಉದಾಹರಣೆಗೆ, ಒಂದುವೇಳೆ ಆ ವ್ಯಕ್ತಿಯು ಬೈಬಲಿನ ಹಿನ್ನೆಲೆಯಿಲ್ಲದಿರುವಂಥ ಒಂದು ಸಂಸ್ಕೃತಿಗೆ ಸೇರಿದವನಾಗಿರುವಲ್ಲಿ, ಬೈಬಲ್‌ ಸತ್ಯವಾಗಿದೆ ಎಂಬುದನ್ನು ನಾವು ಅವನಿಗೆ ಮನದಟ್ಟುಮಾಡಿಸಬೇಕಾಗಿರಬಹುದು. ಹೀಗಿರುವಲ್ಲಿ ನಾವು ಅನೇಕ ಶಾಸ್ತ್ರವಚನಗಳನ್ನು ಓದಬೇಕಾಗಿರುವುದು ಮತ್ತು ಅವುಗಳನ್ನು ವಿವರಿಸಬೇಕಾಗಿರುವುದು ಎಂಬುದಂತೂ ಸುವ್ಯಕ್ತ.

ದೃಷ್ಟಾಂತಗಳನ್ನು ಅರ್ಥಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡಿರಿ

15 ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಶಾಸ್ತ್ರವಚನಗಳಲ್ಲಿ ಉಪಯೋಗಿಸಲ್ಪಟ್ಟಿರುವ ಒಂದು ನಿರ್ದಿಷ್ಟ ದೃಷ್ಟಾಂತದ ಪರಿಚಯವಿಲ್ಲದಿರಬಹುದು. ಉದಾಹರಣೆಗೆ, ಒಂದು ದೀಪವನ್ನು ದೀಪಸ್ತಂಭದ ಮೇಲೆ ಇಡುವುದರ ಕುರಿತು ಯೇಸು ಮಾತಾಡಿದಾಗ, ಅವನು ಏನನ್ನು ಅರ್ಥೈಸಿದನು ಎಂಬುದನ್ನು ವಿದ್ಯಾರ್ಥಿಯು ಅರ್ಥಮಾಡಿಕೊಳ್ಳದಿರಬಹುದು. (ಮಾರ್ಕ 4:​21, 22) ಯೇಸುವು ಉರಿಯುತ್ತಿರುವ ಬತ್ತಿಯಿದ್ದ ಒಂದು ಪುರಾತನ ಎಣ್ಣೆ ದೀಪವನ್ನು ಸೂಚಿಸಿ ಮಾತಾಡುತ್ತಿದ್ದನು. ಇಂಥ ದೀಪವು ಒಂದು ವಿಶೇಷ ದೀಪಸ್ತಂಭದ ಮೇಲೆ ಇಡಲ್ಪಡುತ್ತಿತ್ತು ಮತ್ತು ಇದು ಮನೆಯ ಒಂದು ಭಾಗಕ್ಕೆ ಸಾಕಷ್ಟು ಬೆಳಕನ್ನು ಪಸರಿಸುತ್ತಿತ್ತು. ಯೇಸುವಿನ ದೃಷ್ಟಾಂತವನ್ನು ಸ್ಪಷ್ಟೀಕರಿಸಲಿಕ್ಕಾಗಿ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌)ದಂಥ ಪ್ರಕಾಶನದಲ್ಲಿ “ದೀಪ” ಮತ್ತು “ದೀಪಸ್ತಂಭ” ಎಂಬ ಮುಖ್ಯ ವಿಷಯಗಳ ಕುರಿತು ಸಂಶೋಧನೆಮಾಡುವ ಅಗತ್ಯವಿರಬಹುದು. * ವಿದ್ಯಾರ್ಥಿಗೆ ಅರ್ಥವಾಗುವ ಮತ್ತು ಅವನಿಂದ ಗಣ್ಯಮಾಡಲ್ಪಡುವಂಥ ವಿವರದೊಂದಿಗೆ ಬೈಬಲ್‌ ಅಧ್ಯಯನಕ್ಕೆ ಬರುವುದು ಎಷ್ಟು ಪ್ರತಿಫಲದಾಯಕವಾಗಿದೆ!

16 ಒಂದು ಬೈಬಲ್‌ ಅಧ್ಯಯನ ಸಹಾಯಕ ಪುಸ್ತಕವು, ಒಬ್ಬ ನಿರ್ದಿಷ್ಟ ವಿದ್ಯಾರ್ಥಿಯು ಗ್ರಹಿಸಲು ಕಷ್ಟಕರವಾಗಿರುವ ದೃಷ್ಟಾಂತವೊಂದನ್ನು ಉಪಯೋಗಿಸಬಹುದು. ಅದನ್ನು ವಿವರಿಸಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳಿರಿ, ಅಥವಾ ಇದೇ ಅಂಶವನ್ನು ವಿವರಿಸುವಂಥ ಇನ್ನೊಂದು ದೃಷ್ಟಾಂತವನ್ನು ಉಪಯೋಗಿಸಿರಿ. ಒಂದು ಪ್ರಕಾಶನವು, ವಿವಾಹದಲ್ಲಿ ಯೋಗ್ಯವಾದ ಸಂಗಾತಿ ಮತ್ತು ಸುಸಂಘಟಿತ ಪ್ರಯತ್ನವು ತುಂಬ ಪ್ರಾಮುಖ್ಯವಾದದ್ದಾಗಿದೆ ಎಂಬುದನ್ನು ಒತ್ತಿಹೇಳುತ್ತಿರಬಹುದು. ಇದನ್ನು ದೃಷ್ಟಾಂತಿಸಲಿಕ್ಕಾಗಿ, ಉಯ್ಯಾಲೆ ದಂಡವೊಂದರಲ್ಲಿ ತೂಗಾಡುತ್ತಾ ಇರುವ ವ್ಯಕ್ತಿಯ ಉದಾಹರಣೆಯನ್ನು ಉಪಯೋಗಿಸಬಹುದು. ಅವನು ಸ್ವಲ್ಪ ಸಮಯ ಆ ದಂಡದಲ್ಲೇ ತೂಗಾಡುತ್ತಾ ಇದ್ದು, ನಂತರ ಆ ದಂಡದಿಂದ ಕೈಗಳನ್ನು ಸಡಿಲಿಸಿ, ಇನ್ನೊಂದು ಉಯ್ಯಾಲೆಯಿಂದ ತೂಗಾಡುತ್ತಿರುವ ಇನ್ನೊಬ್ಬ ಕ್ರೀಡಾಪಟುವು ತನ್ನನ್ನು ಹಿಡಿಯುವಂತೆ ಅವನ ಮೇಲೆ ಅವಲಂಬಿಸಿರುತ್ತಾನೆ. ಅಥವಾ ಒಂದು ದೋಣಿಯಿಂದ ಪೆಟ್ಟಿಗೆಗಳನ್ನು ಕೆಳಗಿಳಿಸುತ್ತಿರುವಾಗ ಕೆಲಸಗಾರರು ಅವುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸಲಿಕ್ಕಾಗಿ ಹೇಗೆ ಸಹಕರಿಸುತ್ತಾರೆ ಎಂಬುದನ್ನು ವಿವರಿಸುವ ಮೂಲಕ ಒಬ್ಬ ಯೋಗ್ಯವಾದ ಸಂಗಾತಿ ಮತ್ತು ಸುಸಂಘಟಿತ ಪ್ರಯತ್ನದ ಆವಶ್ಯಕತೆಯನ್ನು ದೃಷ್ಟಾಂತಿಸಸಾಧ್ಯವಿದೆ.

17 ಒಂದು ಬದಲಿ ದೃಷ್ಟಾಂತವನ್ನು ಉಪಯೋಗಿಸುವುದು ಮುಂಚಿತವಾಗಿಯೇ ತಯಾರಿಮಾಡುವುದನ್ನು ಅಗತ್ಯಪಡಿಸಬಹುದು. ಆದರೂ, ಇದು ಬೈಬಲ್‌ ವಿದ್ಯಾರ್ಥಿಯಲ್ಲಿ ನಮಗಿರುವ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಒಂದು ವಿಧವಾಗಿದೆ. ಕಷ್ಟಕರವಾದ ವಿಷಯಗಳನ್ನು ಸ್ಪಷ್ಟೀಕರಿಸಲಿಕ್ಕಾಗಿ ಯೇಸು ಸರಳವಾದ ದೃಷ್ಟಾಂತಗಳನ್ನು ಉಪಯೋಗಿಸಿದನು. ಅವನ ಪರ್ವತ ಪ್ರಸಂಗವು ಇದಕ್ಕೆ ಉದಾಹರಣೆಗಳನ್ನು ನೀಡುತ್ತದೆ ಮತ್ತು ಅವನ ಬೋಧನೆಯು ಕೇಳುಗರ ಮೇಲೆ ಒಳ್ಳೇ ಪರಿಣಾಮವನ್ನು ಬೀರಿತು ಎಂಬುದನ್ನು ಬೈಬಲ್‌ ತೋರಿಸುತ್ತದೆ. (ಮತ್ತಾಯ 5:​1–7:29) ಯೇಸು ತಾಳ್ಮೆಯಿಂದ ವಿಷಯಗಳನ್ನು ವಿವರಿಸಿದನು, ಏಕೆಂದರೆ ಇತರರಲ್ಲಿ ಅವನಿಗೆ ಆಳವಾದ ಆಸಕ್ತಿಯಿತ್ತು.​—⁠ಮತ್ತಾಯ 16:​5-12.

18 ಇತರರಲ್ಲಿನ ನಮ್ಮ ಆಸಕ್ತಿಯು ‘ಶಾಸ್ತ್ರಾಧಾರದಿಂದ ತರ್ಕಿಸುವಂತೆ’ ನಮ್ಮನ್ನು ಪ್ರಚೋದಿಸುವುದು. (ಅ. ಕೃತ್ಯಗಳು 17:​2, 3) ಇದು ಪ್ರಾರ್ಥನಾಪೂರ್ವಕ ಅಧ್ಯಯನ ಮತ್ತು ‘ನಂಬಿಗಸ್ತ ಮನೆವಾರ್ತೆಯ’ ಮೂಲಕ ಲಭ್ಯಗೊಳಿಸಲ್ಪಡುವ ಪ್ರಕಾಶನಗಳ ವಿವೇಕಯುತ ಉಪಯೋಗವನ್ನು ಅಗತ್ಯಪಡಿಸುತ್ತದೆ. (ಲೂಕ 12:​42-44) ಉದಾಹರಣೆಗಾಗಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವು ಅನೇಕ ಶಾಸ್ತ್ರವಚನಗಳನ್ನು ಉಲ್ಲೇಖಿಸುತ್ತದೆ. * ಪುಸ್ತಕದಲ್ಲಿ ಮಿತವಾದ ಸ್ಥಳಾವಕಾಶವಿರುವುದರಿಂದ, ಕೆಲವು ವಚನಗಳನ್ನು ಆಧಾರವಾಗಿ ಕೊಡಲಾಗಿದೆ. ಒಂದು ಬೈಬಲ್‌ ಅಧ್ಯಯನವನ್ನು ನಡೆಸುತ್ತಿರುವಾಗ, ಉಲ್ಲೇಖಿಸಲ್ಪಟ್ಟಿರುವ ಈ ವಚನಗಳಲ್ಲಿ ಕೆಲವನ್ನಾದರೂ ಓದುವುದು ಮತ್ತು ವಿವರಿಸುವುದು ಪ್ರಾಮುಖ್ಯವಾದದ್ದಾಗಿದೆ. ಏನೇ ಆದರೂ ನಮ್ಮ ಬೋಧಿಸುವಿಕೆಯು ದೇವರ ವಾಕ್ಯದ ಮೇಲೆ ಆಧಾರಿತವಾಗಿದೆ, ಮತ್ತು ಆ ವಾಕ್ಯಕ್ಕೆ ಅಪಾರವಾದ ಶಕ್ತಿಯಿದೆ. (ಇಬ್ರಿಯ 4:12) ಪ್ರತಿಯೊಂದು ಅಧ್ಯಯನದಾದ್ಯಂತ ಬೈಬಲನ್ನು ಸೂಚಿಸಿ ಮಾತಾಡಿರಿ ಮತ್ತು ಪ್ಯಾರಗ್ರಾಫ್‌ಗಳಲ್ಲಿ ಕಂಡುಬರುವ ಶಾಸ್ತ್ರವಚನಗಳನ್ನು ಧಾರಾಳವಾಗಿ ಉಪಯೋಗಿಸಿರಿ. ನಿರ್ದಿಷ್ಟ ವಿಷಯದ ಕುರಿತು ಅಥವಾ ಮಾರ್ಗಕ್ರಮದ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ವಿದ್ಯಾರ್ಥಿಯು ಮನಗಾಣುವಂತೆ ಸಹಾಯಮಾಡಿರಿ. ದೇವರಿಗೆ ವಿಧೇಯತೆ ತೋರಿಸುವುದರಿಂದ ವಿದ್ಯಾರ್ಥಿಯು ಹೇಗೆ ಪ್ರಯೋಜನ ಪಡೆದುಕೊಳ್ಳುತ್ತಾನೆ ಎಂಬುದನ್ನು ಅವನಿಗೆ ತೋರಿಸಿರಿ.​—⁠ಯೆಶಾಯ 48:​17, 18.

ಆಲೋಚನಾಪ್ರೇರಕ ಪ್ರಶ್ನೆಗಳನ್ನು ಕೇಳಿರಿ

19 ಯೇಸು ಜಾಣ್ಮೆಯಿಂದ ಪ್ರಶ್ನೆಗಳನ್ನು ಉಪಯೋಗಿಸಿದ್ದು ಜನರು ತರ್ಕಬದ್ಧವಾಗಿ ಆಲೋಚಿಸುವಂತೆ ಸಹಾಯಮಾಡಿತು. (ಮತ್ತಾಯ 17:​24-27) ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಮುಜುಗರವನ್ನು ಉಂಟುಮಾಡದಿರುವಂಥ ರೀತಿಯಲ್ಲಿ ನಾವು ದೃಷ್ಟಿಕೋನ ಪ್ರಶ್ನೆಗಳನ್ನು ಕೇಳುವಲ್ಲಿ, ಒಂದು ನಿರ್ದಿಷ್ಟ ವಿಚಾರದ ಕುರಿತು ಅವನ ಅಭಿಪ್ರಾಯವೇನು ಎಂಬುದನ್ನು ಅವನ ಉತ್ತರಗಳು ಬಯಲುಪಡಿಸಬಹುದು. ಅವನಿಗೆ ಇನ್ನೂ ಕೂಡ ಅಶಾಸ್ತ್ರೀಯ ದೃಷ್ಟಿಕೋನಗಳೇ ಇವೆ ಎಂಬುದು ನಿಮಗೆ ಗೊತ್ತಾಗಬಹುದು. ಉದಾಹರಣೆಗೆ, ಅವನಿಗೆ ತ್ರಯೈಕ್ಯದಲ್ಲಿ ನಂಬಿಕೆಯಿರಬಹುದು. ಜ್ಞಾನ ಪುಸ್ತಕದ 3ನೆಯ ಅಧ್ಯಾಯದಲ್ಲಿ, “ತ್ರಯೈಕ್ಯ” ಎಂಬ ಪದವು ಬೈಬಲಿನಲ್ಲಿ ಕಂಡುಬರುವುದಿಲ್ಲ ಎಂದು ಸೂಚಿಸಲಾಗಿದೆ. ಈ ಪುಸ್ತಕವು, ಯೆಹೋವನೂ ಯೇಸುವೂ ಬೇರೆ ಬೇರೆ ವ್ಯಕ್ತಿಗಳಾಗಿದ್ದಾರೆ ಮತ್ತು ಪವಿತ್ರಾತ್ಮವು ದೇವರ ಕ್ರಿಯಾಶೀಲ ಶಕ್ತಿಯಾಗಿದೆಯೇ ಹೊರತು ವ್ಯಕ್ತಿಯಲ್ಲ ಎಂಬುದನ್ನು ತೋರಿಸುವಂಥ ಶಾಸ್ತ್ರವಚನಗಳನ್ನು ಉಲ್ಲೇಖಿಸುತ್ತದೆ ಮತ್ತು ಉದ್ಧರಿಸುತ್ತದೆ. ಈ ಬೈಬಲ್‌ ವಚನಗಳನ್ನು ಓದುವುದು ಮತ್ತು ಚರ್ಚಿಸುವುದು ಸಾಕಷ್ಟು ಮಟ್ಟಿಗೆ ಈ ಅಂಶವನ್ನು ರುಜುಪಡಿಸಬಹುದು. ಆದರೆ ಇನ್ನೂ ಹೆಚ್ಚಿನ ಪುರಾವೆಯ ಅಗತ್ಯವಿರುವಲ್ಲಿ ಆಗೇನು? ಮುಂದಿನ ಅಧ್ಯಯನ ಸೆಷನ್‌ನ ಬಳಿಕ, ನೀವು ತ್ರಯೈಕ್ಯವನ್ನು ನಂಬ ಬೇಕೋ? ಎಂಬ ಬ್ರೋಷರಿನಂಥ ಯೆಹೋವನ ಸಾಕ್ಷಿಗಳ ಇತರ ಪ್ರಕಾಶನದಲ್ಲಿ ಈ ಮುಖ್ಯ ವಿಷಯದ ಕುರಿತಾಗಿ ಆವರಿಸಲ್ಪಟ್ಟಿರುವ ವಿಚಾರಗಳ ಬಗ್ಗೆ ಪ್ರಯೋಜನದಾಯಕ ಚರ್ಚೆಯಲ್ಲಿ ಸ್ವಲ್ಪ ಸಮಯವನ್ನು ಕಳೆಯಸಾಧ್ಯವಿದೆ. ತದನಂತರ ನಾವು ಜ್ಞಾನ ಪುಸ್ತಕವನ್ನು ಉಪಯೋಗಿಸಿ ಅಧ್ಯಯನವನ್ನು ಮುಂದುವರಿಸಸಾಧ್ಯವಿದೆ.

20 ಒಂದುವೇಳೆ ದೃಷ್ಟಿಕೋನ ಪ್ರಶ್ನೆಗೆ ವಿದ್ಯಾರ್ಥಿಯಿಂದ ಕೊಡಲ್ಪಡುವ ಉತ್ತರವು ಆಶ್ಚರ್ಯದಾಯಕ ಅಥವಾ ನಿರಾಶಾದಾಯಕವಾಗಿರುವಲ್ಲಿ ಆಗೇನು? ಒಂದುವೇಳೆ ಧೂಮಪಾನ ಅಥವಾ ಇನ್ನಿತರ ಸೂಕ್ಷ್ಮ ವಿಚಾರವು ಒಳಗೂಡಿರುವಲ್ಲಿ, ನಾವು ಅಧ್ಯಯನವನ್ನು ಮುಂದುವರಿಸೋಣ ಮತ್ತು ಈ ವಿಷಯದ ಕುರಿತು ಬೇರೆ ಯಾವಾಗಲಾದರೂ ಚರ್ಚಿಸೋಣ ಎಂದು ನಾವು ಸೂಚಿಸಬಹುದು. ವಿದ್ಯಾರ್ಥಿಯು ಇನ್ನೂ ಧೂಮಪಾನಮಾಡುತ್ತಿದ್ದಾನೆ ಎಂಬುದನ್ನು ಅರಿತಿರುವುದು, ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ಅವನಿಗೆ ಸಹಾಯಮಾಡಬಹುದಾದ ಪ್ರಕಾಶಿತ ಮಾಹಿತಿಯನ್ನು ಕಂಡುಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ನಾವು ವಿದ್ಯಾರ್ಥಿಯ ಹೃದಯವನ್ನು ತಲಪಲು ಪ್ರಯತ್ನಿಸುತ್ತಿರುವಾಗ, ಅವನು ಆಧ್ಯಾತ್ಮಿಕವಾಗಿ ಬೆಳೆಯಲು ಯೆಹೋವನು ಸಹಾಯಮಾಡುವಂತೆ ನಾವು ಪ್ರಾರ್ಥಿಸಸಾಧ್ಯವಿದೆ.

21 ಒಳ್ಳೆಯ ತಯಾರಿ ಮತ್ತು ಯೆಹೋವನ ಸಹಾಯದಿಂದ, ಬೈಬಲ್‌ ವಿದ್ಯಾರ್ಥಿಯ ನಿರ್ದಿಷ್ಟ ಆವಶ್ಯಕತೆಗಳಿಗೆ ಅನುಸಾರವಾಗಿ ನಾವು ನಮ್ಮ ಬೋಧನಾ ವಿಧಾನಗಳನ್ನು ಹೊಂದಿಸಿಕೊಳ್ಳಲು ಶಕ್ತರಾಗುವೆವು ಎಂಬುದರಲ್ಲಿ ಸಂಶಯವೇ ಇಲ್ಲ. ಸಮಯ ಸರಿದಂತೆ ಅವನು ದೇವರಿಗಾಗಿ ಆಳವಾದ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಅವನಿಗೆ ಸಹಾಯಮಾಡಲು ನಾವು ಶಕ್ತರಾಗಬಹುದು. ಯೆಹೋವನ ಸಂಸ್ಥೆಗಾಗಿ ಗೌರವ ಮತ್ತು ಗಣ್ಯತೆಯನ್ನು ಕಟ್ಟುವುದರಲ್ಲಿಯೂ ನಾವು ಸಫಲರಾಗಬಹುದು. ಮತ್ತು ‘ದೇವರು ನಿಜವಾಗಿಯೂ ನಿಮ್ಮಲ್ಲಿದ್ದಾನೆ’ ಎಂಬುದನ್ನು ಬೈಬಲ್‌ ವಿದ್ಯಾರ್ಥಿಗಳು ಅಂಗೀಕರಿಸುವಾಗ ಅದೆಷ್ಟು ಆನಂದಕರ ಸಂಗತಿಯಾಗಿರುವುದು! (1 ಕೊರಿಂಥ 14:​24, 25) ಆದುದರಿಂದಲೇ, ನಾವು ಫಲಪ್ರದ ಬೈಬಲ್‌ ಅಧ್ಯಯನಗಳನ್ನು ನಡಿಸೋಣ ಮತ್ತು ಇತರರು ಯೇಸುವಿನ ಶಿಷ್ಯರಾಗುವಂತೆ ಅವರಿಗೆ ಸಹಾಯಮಾಡಲು ನಮ್ಮಿಂದಾದುದೆಲ್ಲವನ್ನೂ ಮಾಡೋಣ.

ಅಮೂಲ್ಯವಾಗಿ ಪರಿಗಣಿಸಬೇಕಾಗಿರುವ ಒಂದು ನಿಕ್ಷೇಪ

22 ನಮ್ಮ ಶುಶ್ರೂಷೆಯನ್ನು ಲೋಪವಿಲ್ಲದೆ ನಡಿಸಲಿಕ್ಕಾಗಿ ನಾವು ದೇವದತ್ತ ಬಲದ ಮೇಲೆ ಆತುಕೊಳ್ಳಬೇಕಾಗಿದೆ. ಶುಶ್ರೂಷೆಯನ್ನು ಸೂಚಿಸುತ್ತಾ ಪೌಲನು ಜೊತೆ ಅಭಿಷಿಕ್ತ ಕ್ರೈಸ್ತರಿಗೆ ಬರೆದುದು: “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ [“ಮಡಕೆಗಳಲ್ಲಿ,” NW] ನಮಗುಂಟು.”​—⁠2 ಕೊರಿಂಥ 4:⁠7.

23 ಅಭಿಷಿಕ್ತರ ಗುಂಪಿಗೆ ಸೇರಿದವರಾಗಿರಲಿ ಅಥವಾ “ಬೇರೆ ಕುರಿ”ಗಳಿಗೆ ಸೇರಿದವರಾಗಿರಲಿ, ನಾವೆಲ್ಲರೂ ದುರ್ಬಲವಾದ ಮಡಕೆಗಳಂತಿದ್ದೇವೆ. (ಯೋಹಾನ 10:16) ಆದರೆ, ನಮ್ಮ ವಿರುದ್ಧ ಎಷ್ಟೇ ಒತ್ತಡಗಳು ತರಲ್ಪಡುವುದಾದರೂ, ನಮ್ಮ ನೇಮಕಗಳನ್ನು ಪೂರೈಸಲು ಅಗತ್ಯವಿರುವ ಬಲವನ್ನು ಯೆಹೋವನು ನಮಗೆ ನೀಡಬಲ್ಲನು. (ಯೋಹಾನ 16:13; ಫಿಲಿಪ್ಪಿ 4:13) ಆದುದರಿಂದ, ನಾವು ಸಂಪೂರ್ಣವಾಗಿ ಯೆಹೋವನಲ್ಲಿ ಭರವಸವಿಡೋಣ, ನಮ್ಮ ಸೇವಾ ಸುಯೋಗವನ್ನು ಅಮೂಲ್ಯವಾಗಿ ಪರಿಗಣಿಸೋಣ ಮತ್ತು ನಮ್ಮ ಶುಶ್ರೂಷೆಯನ್ನು ಲೋಪವಿಲ್ಲದೆ ನಡಿಸೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 20 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 23 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ನೀವು ಹೇಗೆ ಉತ್ತರಿಸುವಿರಿ?

• ಹಿರಿಯರು ತಮ್ಮ ಶುಶ್ರೂಷೆಯನ್ನು ಲೋಪವಿಲ್ಲದೆ ನಡಿಸಲು ಏನು ಮಾಡಸಾಧ್ಯವಿದೆ?

• ನಮ್ಮ ಮನೆ ಬೈಬಲ್‌ ಅಧ್ಯಯನಗಳ ಪರಿಣಾಮಕಾರಿತ್ವವನ್ನು ನಾವು ಹೇಗೆ ಉತ್ತಮಗೊಳಿಸಸಾಧ್ಯವಿದೆ?

• ಒಬ್ಬ ಬೈಬಲ್‌ ವಿದ್ಯಾರ್ಥಿಯು ದೃಷ್ಟಾಂತವೊಂದನ್ನು ಅರ್ಥಮಾಡಿಕೊಳ್ಳದಿರುವಲ್ಲಿ ಅಥವಾ ಒಂದು ನಿರ್ದಿಷ್ಟ ವಿಷಯದ ಕುರಿತು ಅವನಿಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಲಭ್ಯಗೊಳಿಸುವ ಅಗತ್ಯವಿರುವಲ್ಲಿ ನೀವೇನು ಮಾಡಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1, 2. ಎಲ್ಲಾ ಕ್ರೈಸ್ತರು ಸೌವಾರ್ತಿಕರಾಗಿರುವುದಾದರೂ, ಶಾಸ್ತ್ರೀಯವಾಗಿ ಹಿರಿಯರಿಂದ ಏನು ಕೇಳಿಕೊಳ್ಳಲ್ಪಡುತ್ತದೆ?

3. ಸುಳ್ಳು ಬೋಧನೆಗಳು ಸಭೆಯ ಆಧ್ಯಾತ್ಮಿಕತೆಗೆ ಬೆದರಿಕೆಯನ್ನೊಡ್ಡದಿರಲಿಕ್ಕಾಗಿ ಏನನ್ನು ಮಾಡುವ ಆವಶ್ಯಕತೆಯಿದೆ?

4. ಸೇವೆಯನ್ನು ಲೋಪವಿಲ್ಲದೆ ನಡಿಸಲು ಯಾವುದು ನಮಗೆ ಸಹಾಯಮಾಡಬಲ್ಲದು?

5. ಶುಶ್ರೂಷೆಯ ವಿಷಯದಲ್ಲಿ ನಮಗೆ ಯಾವ ಅನಿಸಿಕೆಯಿರಬೇಕು?

6. ಮಾಂಸಿಕ ಇಸ್ರಾಯೇಲ್‌ ಮತ್ತು ಆಧ್ಯಾತ್ಮಿಕ ಇಸ್ರಾಯೇಲ್‌ನ ನಡುವೆ ಯಾವ ವ್ಯತ್ಯಾಸವು ಅಸ್ತಿತ್ವದಲ್ಲಿತ್ತು?

7. ಮಾನವರು ದೇವರ ಮಹಿಮೆಯನ್ನು ಹೇಗೆ ಪ್ರತಿಬಿಂಬಿಸಬಲ್ಲರು?

8. ಶುಶ್ರೂಷೆಯ ವಿಷಯದಲ್ಲಿ ಪೌಲನು ಏನು ಮಾಡಲು ನಿರ್ಧರಿಸಿದನು?

9, 10. ಯೆಹೋವನ ಮಹಿಮೆಯನ್ನು ಹೇಗೆ ಪ್ರತಿಬಿಂಬಿಸಸಾಧ್ಯವಿದೆ?

11. ನಮ್ಮ ಬೆಳಕನ್ನು ಪ್ರಕಾಶಿಸುವ ವಿಷಯದಲ್ಲಿ ಯೇಸು ಏನು ಹೇಳಿದನು, ಮತ್ತು ನಮ್ಮ ಶುಶ್ರೂಷೆಯಲ್ಲಿ ಇದನ್ನು ಮಾಡುವ ಒಂದು ವಿಧವು ಯಾವುದು?

12. ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸುವ ಕೆಲಸಕ್ಕೆ ಪ್ರಾರ್ಥನೆಯು ಹೇಗೆ ಸಂಬಂಧಿಸಿದೆ?

13. ಫಲಪ್ರದ ಅಧ್ಯಯನಗಳನ್ನು ನಡೆಸುವಂತೆ ನಮಗೆ ಯಾವುದು ಸಹಾಯಮಾಡಬಹುದು?

14. ನಾವು ಒಬ್ಬ ಬೈಬಲ್‌ ವಿದ್ಯಾರ್ಥಿಯ ಹೃದಯವನ್ನು ಹೇಗೆ ತಲಪಸಾಧ್ಯವಿದೆ?

15, 16. (ಎ) ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಒಂದು ದೃಷ್ಟಾಂತವನ್ನು ಅರ್ಥಮಾಡಿಕೊಳ್ಳಲು ಅಸಮರ್ಥನಾಗಿರುವಂಥ ಒಬ್ಬ ವಿದ್ಯಾರ್ಥಿಗೆ ನಾವು ಹೇಗೆ ಸಹಾಯಮಾಡಬಹುದು? (ಬಿ) ಒಬ್ಬ ನಿರ್ದಿಷ್ಟ ಬೈಬಲ್‌ ವಿದ್ಯಾರ್ಥಿಯು ಅರ್ಥಮಾಡಿಕೊಳ್ಳಲು ಕಷ್ಟಕರವಾಗಿರುವಂಥ ಒಂದು ದೃಷ್ಟಾಂತವನ್ನು ನಮ್ಮ ಪ್ರಕಾಶನಗಳು ಉಪಯೋಗಿಸುವಲ್ಲಿ ನಾವೇನು ಮಾಡಸಾಧ್ಯವಿದೆ?

17. ದೃಷ್ಟಾಂತಗಳ ಕುರಿತು ಯೇಸುವಿನಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

18. ನಮ್ಮ ಪ್ರಕಾಶನಗಳಲ್ಲಿ ಆಧಾರವಾಗಿ ಕೊಡಲ್ಪಟ್ಟಿರುವ ಶಾಸ್ತ್ರವಚನಗಳ ಕುರಿತು ಏನನ್ನು ಶಿಫಾರಸ್ಸು ಮಾಡಲಾಗಿದೆ?

19, 20. (ಎ) ಒಂದು ಮನೆ ಬೈಬಲ್‌ ಅಧ್ಯಯನವನ್ನು ನಡೆಸುತ್ತಿರುವಾಗ ಏಕೆ ದೃಷ್ಟಿಕೋನ ಪ್ರಶ್ನೆಗಳನ್ನು ಉಪಯೋಗಿಸಬೇಕು? (ಬಿ) ನಿರ್ದಿಷ್ಟ ವಿಷಯವೊಂದು ಇನ್ನೂ ಹೆಚ್ಚಿನ ಪರಿಗಣನೆಯನ್ನು ಅಗತ್ಯಪಡಿಸುವಲ್ಲಿ ಏನು ಮಾಡಸಾಧ್ಯವಿದೆ?

21. ಬೈಬಲ್‌ ವಿದ್ಯಾರ್ಥಿಯ ನಿರ್ದಿಷ್ಟ ಆವಶ್ಯಕತೆಗಳಿಗೆ ಅನುಸಾರವಾಗಿ ನಾವು ನಮ್ಮ ಬೋಧನಾ ವಿಧಾನಗಳನ್ನು ಹೊಂದಿಸಿಕೊಳ್ಳುವಲ್ಲಿ ಏನು ಸಂಭವಿಸಬಹುದು?

22, 23. ನಮ್ಮ ಶುಶ್ರೂಷೆಯನ್ನು ನಾವು ಲೋಪವಿಲ್ಲದೆ ನಡಿಸಲು ಯಾವುದರ ಆವಶ್ಯಕತೆಯಿದೆ?

[ಪುಟ 16ರಲ್ಲಿರುವ ಚಿತ್ರ]

ಕ್ರೈಸ್ತ ಹಿರಿಯರು ಸಭೆಯಲ್ಲಿ ಬೋಧಿಸುತ್ತಾರೆ ಮತ್ತು ಶುಶ್ರೂಷೆಯಲ್ಲಿ ಜೊತೆ ವಿಶ್ವಾಸಿಗಳಿಗೆ ತರಬೇತಿ ನೀಡಲು ಸಹಾಯಮಾಡುತ್ತಾರೆ

[ಪುಟ 18ರಲ್ಲಿರುವ ಚಿತ್ರ]

ಫಲಪ್ರದ ಮನೆ ಬೈಬಲ್‌ ಅಧ್ಯಯನಗಳನ್ನು ನಡಿಸುವುದು ನಮ್ಮ ಬೆಳಕನ್ನು ಪ್ರಕಾಶಿಸುವ ಒಂದು ವಿಧವಾಗಿದೆ