ನಿಮ್ಮ ಮೇಲೆ ಪರಿಣಾಮ ಬೀರುವ ಒಂದು ಆಚರಣೆ
ನಿಮ್ಮ ಮೇಲೆ ಪರಿಣಾಮ ಬೀರುವ ಒಂದು ಆಚರಣೆ
ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ದೇವರಿಗೆ ಘನತೆ ತರುವಂಥ ಒಂದು ಆಚರಣೆಯನ್ನು ಜಾರಿಗೆ ತಂದನು. ತನ್ನ ಹಿಂಬಾಲಕರು ಆಚರಿಸುವಂತೆ ಅವನು ನೇರವಾಗಿ ಆಜ್ಞಾಪಿಸಿದ ಏಕಮಾತ್ರ ಧಾರ್ಮಿಕ ಆಚರಣೆಯು ಇದಾಗಿತ್ತು. ಇದು ಕರ್ತನ ರಾತ್ರಿ ಭೋಜನವಾಗಿದ್ದು, ಪ್ರಭು ಭೋಜನ ಎಂದೂ ಪ್ರಸಿದ್ಧವಾಗಿದೆ.
ಆ ಸಂದರ್ಭಕ್ಕೆ ಮುನ್ನಡಿಸುವಂಥ ಘಟನೆಗಳಿಗೆ ನೀವು ಅದೃಶ್ಯ ವೀಕ್ಷಕರಾಗಿದ್ದೀರಿ ಎಂದಿಟ್ಟುಕೊಳ್ಳಿ. ಯೆಹೂದಿ ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ ಯೇಸುವೂ ಅವನ ಅಪೊಸ್ತಲರೂ ಯೆರೂಸಲೇಮಿನಲ್ಲಿರುವ ಮೇಲಂತಸ್ತಿನ ಕೋಣೆಯಲ್ಲಿ ಕೂಡಿಬಂದಿದ್ದಾರೆ. ಪದ್ಧತಿಗನುಸಾರ ಅವರು ಸುಟ್ಟ ಕುರಿಮಾಂಸ, ಕಹಿಯಾದ ಪಲ್ಯ, ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯವು ಒಳಗೂಡಿರುವ ಪಸ್ಕದ ಊಟವನ್ನು ಮಾಡಿಮುಗಿಸಿದ್ದಾರೆ. ದ್ರೋಹಿಯಾದ ಅಪೊಸ್ತಲ ಯೂದನು ಅಲ್ಲಿಂದ ಹೊರಟುಹೋಗಿದ್ದಾನೆ ಮತ್ತು ಸ್ವಲ್ಪದರಲ್ಲೇ ತನ್ನ ಗುರುವನ್ನು ಹಿಡಿದುಕೊಡಲಿದ್ದಾನೆ. (ಮತ್ತಾಯ 26:17-25; ಯೋಹಾನ 13:21, 26-30) ಈಗ ಯೇಸು ತನ್ನ 11 ಮಂದಿ ಅಪೊಸ್ತಲರೊಂದಿಗೆ ಮಾತ್ರ ಇದ್ದಾನೆ. ಮತ್ತಾಯನು ಇವರಲ್ಲಿ ಒಬ್ಬನಾಗಿದ್ದಾನೆ.
ಮತ್ತಾಯನು ಕಣ್ಣಾರೆ ಕಂಡು ಬರೆದ ವರದಿಗನುಸಾರ, ಕರ್ತನ ರಾತ್ರಿ ಭೋಜನವನ್ನು ಯೇಸು ಹೀಗೆ ಆರಂಭಿಸಿದನು: “ಯೇಸು [ಹುಳಿಯಿಲ್ಲದ] ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಮುರಿದು ಶಿಷ್ಯರಿಗೆ ಕೊಟ್ಟು—ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ [“ದೇಹವನ್ನು ಅರ್ಥೈಸುತ್ತದೆ,” NW] ಅಂದನು. ಆ ಮೇಲೆ [ದ್ರಾಕ್ಷಾಮದ್ಯದ] ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟು—ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ [“ರಕ್ತವನ್ನು ಅರ್ಥೈಸುತ್ತದೆ,” NW], ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.”—ಮತ್ತಾಯ 26:26-28.
ಯೇಸುವು ಕರ್ತನ ರಾತ್ರಿ ಭೋಜನವನ್ನು ಏಕೆ ಆರಂಭಿಸಿದನು? ಹೀಗೆ ಮಾಡುತ್ತಿರುವಾಗ ಅವನು ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯವನ್ನು ಏಕೆ ಉಪಯೋಗಿಸಿದನು? ಕ್ರಿಸ್ತನ ಹಿಂಬಾಲಕರಲ್ಲಿ ಎಲ್ಲರೂ ಈ ಕುರುಹುಗಳಲ್ಲಿ ಪಾಲ್ಗೊಳ್ಳಬೇಕೊ? ಈ ಭೋಜನವನ್ನು ಎಷ್ಟು ಬಾರಿ ಆಚರಿಸಬೇಕು? ಮತ್ತು ಇದು ನಿಮಗೆ ನಿಜವಾಗಿಯೂ ಏನಾದರೂ ಅರ್ಥವನ್ನು ಹೊಂದಿದೆಯೋ?