ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಿಮೋಚನಕಾಂಡ 4:​24-26ರಲ್ಲಿ ದಾಖಲಿಸಲ್ಪಟ್ಟಿರುವ ಘಟನೆಯಲ್ಲಿ ಏನು ಸಂಭವಿಸಿತು, ಮತ್ತು ಯಾರ ಜೀವವು ಅಪಾಯದಲ್ಲಿತ್ತು?

ಮೋಶೆಯು ತನ್ನ ಪತ್ನಿಯಾದ ಚಿಪ್ಪೋರಳನ್ನು ಮತ್ತು ತನ್ನ ಇಬ್ಬರು ಗಂಡುಮಕ್ಕಳಾಗಿದ್ದ ಗೇರ್ಷೋಮ್‌ ಹಾಗೂ ಎಲೀಯೆಜೆರರನ್ನು ಕರೆದುಕೊಂಡು ಐಗುಪ್ತದೇಶಕ್ಕೆ ಹೋಗುತ್ತಿದ್ದಾಗ, ಈ ಮುಂದಿನ ಘಟನೆಯು ಸಂಭವಿಸಿತು: “ಹೋಗುವ ದಾರಿಯಲ್ಲಿ ಮೋಶೆ ಛತ್ರದಲ್ಲಿದ್ದಾಗ ಯೆಹೋವನು ಅವನೆದುರಿಗೆ ಬಂದು ಅವನ ಪ್ರಾಣವನ್ನು ತೆಗೆಯಬೇಕೆಂದಿದ್ದನು. ಹೀಗಿರುವಾಗ ಚಿಪ್ಪೋರಳು ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿ ಮಾಡಿ, ಮೋಶೆಗೆ​—⁠ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನಾದಿ ಎಂದು ಹೇಳಿ ಕತ್ತರಿಸಿದ್ದನ್ನು ಅವನ ಪಾದಗಳಿಗೆ ಮುಟ್ಟಿಸಲು ಯೆಹೋವನು ಅವನನ್ನು ಉಳಿಸಿದನು. ಆಕೆ ಸುನ್ನತಿಯ ನಿಮಿತ್ತವೇ​—⁠ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನು ಎಂಬ ಮಾತನ್ನು ಹೇಳಿದಳು.” (ವಿಮೋಚನಕಾಂಡ 4:20, 24-26) ಈ ಭಾಗವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಇದರ ಅರ್ಥದ ಕುರಿತು ನಿಶ್ಚಿತರಾಗಿರಲು ಸಾಧ್ಯವಿಲ್ಲವಾದರೂ, ಈ ವಚನಗಳ ಕುರಿತು ಶಾಸ್ತ್ರಗಳು ಸ್ಪಷ್ಟೀಕರಣವನ್ನು ನೀಡುತ್ತವೆ.

ಯಾರ ಜೀವವು ಅಪಾಯದಲ್ಲಿತ್ತು ಎಂಬುದನ್ನು ಆ ವೃತ್ತಾಂತವು ನಿರ್ದಿಷ್ಟವಾಗಿ ತಿಳಿಯಪಡಿಸುವುದಿಲ್ಲ. ಆದರೂ, ಆಗಷ್ಟೇ ಮೋಶೆಗೆ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ವಿಮೋಚಿಸುವುದರಲ್ಲಿ ನಾಯಕತ್ವವನ್ನು ವಹಿಸುವ ದೈವಿಕ ನೇಮಕವು ಕೊಡಲ್ಪಟ್ಟಿದ್ದರಿಂದ, ಅವನ ಜೀವವು ಅಪಾಯದಲ್ಲಿರಲಿಲ್ಲ ಎಂಬ ತರ್ಕಬದ್ಧ ತೀರ್ಮಾನಕ್ಕೆ ನಾವು ಬರಸಾಧ್ಯವಿದೆ. (ವಿಮೋಚನಕಾಂಡ 3:10) ಆ ನೇಮಕವನ್ನು ಪೂರೈಸಲು ಹೋಗುತ್ತಿರುವಾಗ ದೇವದೂತನು ಮೋಶೆಯ ಜೀವಕ್ಕೆ ಬೆದರಿಕೆಯನ್ನೊಡ್ಡಿರುವುದು ಅಸಂಭವನೀಯವಾಗಿ ತೋರುತ್ತದೆ. ಆದುದರಿಂದಲೇ, ಇದು ಮೋಶೆಯ ಪುತ್ರರಲ್ಲಿ ಒಬ್ಬನ ಜೀವಕ್ಕೆ ಒಡ್ಡಲ್ಪಟ್ಟ ಬೆದರಿಕೆಯಾಗಿರಬಹುದು. ಸುನ್ನತಿಯ ವಿಷಯದಲ್ಲಿ ಈ ಮುಂಚೆ ಅಬ್ರಹಾಮನಿಗೆ ಕೊಡಲ್ಪಟ್ಟಿದ್ದ ನಿಯಮವು ಹೀಗಿತ್ತು: “ಸುನ್ನತಿಮಾಡಿಸಿಕೊಳ್ಳದ ಗಂಡಸು ನನ್ನ ಒಡಂಬಡಿಕೆಯನ್ನು ಮೀರಿದವನಾದ ಕಾರಣ ಅವನು ಕುಲದಿಂದ ತೆಗೆದುಹಾಕಲ್ಪಡಬೇಕು.” (ಆದಿಕಾಂಡ 17:14) ಮೋಶೆಯು ತನ್ನ ಮಗನಿಗೆ ಸುನ್ನತಿ ಮಾಡಿಸುವುದನ್ನು ಅಲಕ್ಷಿಸಿದ್ದನು ಎಂಬುದು ಸುವ್ಯಕ್ತ, ಮತ್ತು ಈಗ ಯೆಹೋವನ ದೂತನು ಆ ಹುಡುಗನ ಜೀವಕ್ಕೆ ಬೆದರಿಕೆಯೊಡ್ಡಿದ್ದನು.

ವಿಷಯವನ್ನು ಸರಿಪಡಿಸುವ ಪ್ರಯತ್ನದಲ್ಲಿ ಚಿಪ್ಪೋರಳು ತನ್ನ ಮಗನಿಗೆ ಸುನ್ನತಿಯನ್ನು ಮಾಡಿಸಿ ಕತ್ತರಿಸಿದ ಭಾಗವನ್ನು ಯಾರ ಪಾದಗಳಿಗೆ ಮುಟ್ಟಿಸಿದಳು? ಸುನ್ನತಿಮಾಡಿಸಿಕೊಂಡಿರದ ಮಗನನ್ನು ಹತಿಸುವ ಅಧಿಕಾರವುಳ್ಳವನಾಗಿದ್ದ ಯೆಹೋವನ ದೂತನ ಪಾದಗಳಿಗೇ. ಆದುದರಿಂದಲೇ, ಒಡಂಬಡಿಕೆಗೆ ಅನುಸಾರವಾಗಿ ನಡೆದುಕೊಂಡಿದ್ದೇನೆ ಎಂಬುದರ ಪುರಾವೆಯೋಪಾದಿ ಕತ್ತರಿಸಿದ ಆ ಭಾಗವನ್ನು ದೇವದೂತನಿಗೆ ಒಪ್ಪಿಸುತ್ತಾ ಚಿಪ್ಪೋರಳು ಅದು ಅವನ ಪಾದಗಳನ್ನು ಸ್ಪರ್ಶಿಸುವಂತೆ ಮಾಡಿದ್ದಿರಬೇಕು.

“ನೀನು ನನಗೆ ರಕ್ತಧಾರೆಯಿಂದಾದ ಮಂದಲಿಂಗನು” ಎಂಬ ಚಿಪ್ಪೋರಳ ಅಭಿವ್ಯಕ್ತಿಯು ತುಂಬ ಅಸಾಮಾನ್ಯವಾದದ್ದಾಗಿದೆ. ಇದು ಅವಳ ಕುರಿತು ಏನನ್ನು ತಿಳಿಯಪಡಿಸುತ್ತದೆ? ಸುನ್ನತಿಯೊಡಂಬಡಿಕೆಯ ಆವಶ್ಯಕತೆಗಳಿಗೆ ಅನುಸಾರವಾಗಿ ನಡೆದುಕೊಳ್ಳುವ ಮೂಲಕ ಚಿಪ್ಪೋರಳು, ಯೆಹೋವನೊಂದಿಗೆ ಒಂದು ಒಡಂಬಡಿಕೆಯ ಸಂಬಂಧವನ್ನು ಅಂಗೀಕರಿಸಿದಳು. ಸಮಯಾನಂತರ ಇಸ್ರಾಯೇಲ್ಯರೊಂದಿಗೆ ಮಾಡಿಕೊಳ್ಳಲ್ಪಟ್ಟ ನಿಯಮದೊಡಂಬಡಿಕೆಯು, ಒಂದು ಒಡಂಬಡಿಕೆಯ ಸಂಬಂಧದಲ್ಲಿ ಯೆಹೋವನನ್ನು ಒಬ್ಬ ಪತಿಯಾಗಿಯೂ ಇನ್ನೊಂದು ಪಕ್ಷವನ್ನು ಪತ್ನಿಯಾಗಿಯೂ ಪರಿಗಣಿಸಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿತು. (ಯೆರೆಮೀಯ 31:32) ಆದುದರಿಂದ, “ರಕ್ತಧಾರೆಯಿಂದಾದ ಮದಲಿಂಗನು” ಎಂದು ಯೆಹೋವನನ್ನು (ಆತನ ಪ್ರತಿನಿಧಿಯಾಗಿದ್ದ ದೇವದೂತನ ಮೂಲಕ) ಸಂಬೋಧಿಸುವ ಮೂಲಕ, ಆ ಒಡಂಬಡಿಕೆಯ ಷರತ್ತುಗಳಿಗೆ ಚಿಪ್ಪೋರಳು ತನ್ನ ಸ್ವಂತ ಅಧೀನತೆಯನ್ನು ಒಪ್ಪಿಕೊಳ್ಳುತ್ತಿದ್ದಂತೆ ತೋರುತ್ತದೆ. ಅದು ಸುನ್ನತಿಯೊಡಂಬಡಿಕೆಯಲ್ಲಿ ಪತಿಯೋಪಾದಿ ಯೆಹೋವ ದೇವರ ಮುಂದೆ ಪತ್ನಿಸದೃಶ ಸ್ಥಾನವನ್ನು ಅವಳು ಅಂಗೀಕರಿಸಿದ್ದಾಳೋ ಎಂಬಂತಿತ್ತು. ಏನೇ ಆಗಿರಲಿ, ದೇವರ ಆವಶ್ಯಕತೆಗೆ ಅವಳ ವಿಧೇಯತೆಯ ನಿರ್ಣಾಯಕ ಕ್ರಿಯೆಯಿಂದಾಗಿ ಅವಳ ಮಗನ ಜೀವವು ಅಪಾಯದಿಂದ ಕಾಪಾಡಲ್ಪಟ್ಟಿತು.