ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೆಸ್ಟ್‌ಫೇಲಿಯದ ಶಾಂತಿ ಸಂಧಾನ ಯೂರೋಪಿನಲ್ಲಿ ಗಮನಾರ್ಹ ಬದಲಾವಣೆಯ ಕಾಲಾವಧಿ

ವೆಸ್ಟ್‌ಫೇಲಿಯದ ಶಾಂತಿ ಸಂಧಾನ ಯೂರೋಪಿನಲ್ಲಿ ಗಮನಾರ್ಹ ಬದಲಾವಣೆಯ ಕಾಲಾವಧಿ

ವೆಸ್ಟ್‌ಫೇಲಿಯದ ಶಾಂತಿ ಸಂಧಾನ ಯೂರೋಪಿನಲ್ಲಿ ಗಮನಾರ್ಹ ಬದಲಾವಣೆಯ ಕಾಲಾವಧಿ

“ಇಂದು ಇಲ್ಲಿ ಕೂಡಿಬಂದಿರುವಂತೆ ಯೂರೋಪಿನ ಮಂತ್ರಿಮಂಡಲದ ಅನೇಕ ಮಂದಿ ಪ್ರತಿನಿಧಿಗಳು ಕೂಡಿಬಂದಿರಬೇಕಾದರೆ, ಖಂಡಿತವಾಗಿಯೂ ಇದು ಅಪರೂಪದ ಘಟನೆಯಾಗಿರಲೇಬೇಕು.” ಈ ಹೇಳಿಕೆಯನ್ನು, 1998ರ ಅಕ್ಟೋಬರ್‌ ತಿಂಗಳಿನಲ್ಲಿ ಫೆಡರಲ್‌ ರಿಪಬ್ಲಿಕ್‌ ಆಫ್‌ ಜರ್ಮನಿಯ ಮಾಜಿ ಅಧ್ಯಕ್ಷರಾಗಿದ್ದ ರೋಮಾನ್‌ ಹರ್ಚ್‌ಸೋಕ್‌ ಅವರು ನುಡಿದರು. ಅವರು ಈ ಹೇಳಿಕೆಯನ್ನು ನುಡಿದಾಗ, ಅವರ ಸಭಿಕರಲ್ಲಿ ನಾಲ್ಕು ಅರಸರು, ನಾಲ್ಕು ರಾಣಿಯರು, ಇಬ್ಬರು ರಾಜಕುಮಾರರು, ಒಬ್ಬ ಗ್ರಾಂಡ್‌ ಡ್ಯೂಕ್‌ ದೊರೆ, ಮತ್ತು ಅನೇಕ ಅಧ್ಯಕ್ಷರು ಇದ್ದರು. ಯೂರೋಪಿನ ಮಂತ್ರಿಮಂಡಲದವರೇ ಇದರ ಪ್ರಾಯೋಜಕರಾಗಿದ್ದು, ಆಧುನಿಕ ಜರ್ಮನ್‌ ದೇಶದ 50ವರ್ಷಗಳ ಇತಿಹಾಸದಲ್ಲೇ ಈ ಘಟನೆಯು ಅತಿ ಪ್ರಾಮುಖ್ಯವಾದದ್ದಾಗಿತ್ತು. ಇದು ಯಾವ ಸಂದರ್ಭವಾಗಿತ್ತು?

ಇಸವಿ 1998ರ ಅಕ್ಟೋಬರ್‌ ತಿಂಗಳಿನಲ್ಲಿ, ವೆಸ್ಟ್‌ಫೇಲಿಯದ ಶಾಂತಿ ಸಂಧಾನದ 350ನೆಯ ವಾರ್ಷಿಕೋತ್ಸವವು ಜರುಗಿತು. ಅನೇಕವೇಳೆ ಶಾಂತಿ ಸಂಧಾನಗಳ ಕುರಿತಾದ ಪ್ರಮುಖ ನಿರ್ಣಯಗಳು ಮಾಡಲ್ಪಡುವಾಗ, ಅವು ಇತಿಹಾಸದ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತವೆ, ಮತ್ತು ಈ ರೀತಿಯಲ್ಲಿ ವೆಸ್ಟ್‌ಫೇಲಿಯದ ಶಾಂತಿ ಸಂಧಾನವೂ ಒಂದು ವಿಶೇಷ ಘಟನೆಯಾಗಿತ್ತು. ಇಸವಿ 1648ರಲ್ಲಿ ಈ ಒಪ್ಪಂದಕ್ಕೆ ಸಹಿಹಾಕುವಿಕೆಯು, ಮೂವತ್ತು ವರ್ಷಗಳ ಯುದ್ಧವನ್ನು ಅಂತ್ಯಗೊಳಿಸಿತು ಮತ್ತು ಸರ್ವಸ್ವತಂತ್ರ ರಾಜ್ಯಗಳ ಒಂದು ಖಂಡದೋಪಾದಿ ಆಧುನಿಕ ಯೂರೋಪಿನ ಉದಯವನ್ನು ಗುರುತಿಸಿತು.

ಹಳೆಯ ವ್ಯವಸ್ಥಾಪನೆಯು ಅಲುಗಾಡಿಸಲ್ಪಡುತ್ತದೆ

ಮಧ್ಯ ಯುಗಗಳಲ್ಲಿ, ಯೂರೋಪಿನಲ್ಲಿದ್ದ ಅತ್ಯಂತ ಪ್ರಬಲ ಆಧ್ಯಾತ್ಮಿಕ ಸಂಸ್ಥೆಗಳು ರೋಮನ್‌ ಕ್ಯಾಥೊಲಿಕ್‌ ಚರ್ಚು ಹಾಗೂ ಪವಿತ್ರ ರೋಮನ್‌ ಸಾಮ್ರಾಜ್ಯವಾಗಿದ್ದವು. ಈ ಸಾಮ್ರಾಜ್ಯವು ಬೇರೆ ಬೇರೆ ಗಾತ್ರದ ನೂರಾರು ಸಣ್ಣ ಸಂಸ್ಥಾನಗಳನ್ನು ಒಳಗೂಡಿತ್ತು ಮತ್ತು ಆಸ್ಟ್ರೀಯ, ಚೆಕ್‌ ರಿಪಬ್ಲಿಕ್‌, ಪೂರ್ವ ಫ್ರಾನ್ಸ್‌, ಜರ್ಮನಿ, ಸ್ವಿಟ್ಸರ್ಲೆಂಡ್‌ ಮತ್ತು ನೆದರ್ಲೆಂಡ್ಸ್‌, ಬೆಲ್ಜಿಯಮ್‌ ಹಾಗೂ ಲಕ್ಸಂಬರ್ಗ್‌ ದೇಶಗಳು ಮತ್ತು ಇಟಲಿಯ ಕೆಲವು ಭಾಗಗಳ ಕ್ಷೇತ್ರವನ್ನು ಆವರಿಸಿತ್ತು. ಈ ಸಾಮ್ರಾಜ್ಯದ ಅಧಿಕಾಂಶ ಭಾಗವು ಜರ್ಮನ್‌ ಸಂಸ್ಥಾನಗಳಿಂದ ರಚಿತವಾಗಿದ್ದುದರಿಂದ, ಇದು ಜರ್ಮನ್‌ ರಾಷ್ಟ್ರದ ಪವಿತ್ರ ರೋಮನ್‌ ಸಾಮ್ರಾಜ್ಯ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಪ್ರತಿಯೊಂದು ಸಂಸ್ಥಾನವು ಒಬ್ಬ ರಾಜಕುಮಾರನಿಂದ ಅರ್ಧಸ್ವಯಮಾಧಿಕಾರದಿಂದ ಆಳಲ್ಪಡುತ್ತಿತ್ತು. ಚಕ್ರವರ್ತಿಯು ತಾನೇ ಆಸ್ಟ್ರೀಯನ್‌ ಹ್ಯಾಬ್ಸ್‌ಬರ್ಗ್‌ ಮನೆತನದ ರೋಮನ್‌ ಕ್ಯಾಥೊಲಿಕನಾಗಿದ್ದನು. ಆದುದರಿಂದ, ಪೋಪ್‌ ಪ್ರಭುತ್ವ ಮತ್ತು ಆಳ್ವಿಕೆಯಲ್ಲಿದ್ದ ಸಾಮ್ರಾಜ್ಯದ ಕಾರಣದಿಂದಾಗಿ, ಯೂರೋಪು ರೋಮನ್‌ ಕ್ಯಾಥೊಲಿಕರ ಬಿಗಿಹಿಡಿತದಲ್ಲಿ ಸಿಕ್ಕಿಕೊಂಡಿತ್ತು.

ಆದರೂ, 16 ಮತ್ತು 17ನೆಯ ಶತಮಾನಗಳಲ್ಲಿ ಹಳೆಯ ವ್ಯವಸ್ಥಾಪನೆಯು ಅಲುಗಾಡಿಸಲ್ಪಟ್ಟಿತು. ರೋಮನ್‌ ಕ್ಯಾಥೊಲಿಕ್‌ ಚರ್ಚಿನ ಅನಿಯಂತ್ರಿತ ನಡತೆಯಿಂದಾಗಿ, ಸಾಮ್ರಾಜ್ಯದಾದ್ಯಂತ ವ್ಯಾಪಕವಾದ ಅತೃಪ್ತಿಯು ತಲೆದೋರಿತ್ತು. ಮಾರ್ಟಿನ್‌ ಲೂತರ್‌ ಮತ್ತು ಜಾನ್‌ ಕ್ಯಾಲ್ವಿನ್‌ರಂಥ ಧಾರ್ಮಿಕ ಸುಧಾರಕರು, ಬೈಬಲ್‌ ಮಟ್ಟಗಳನ್ನು ಪುನಃ ಅನುಸರಿಸಲು ಆರಂಭಿಸುವ ಪ್ರಸ್ತಾಪವೆತ್ತಿದರು. ಲೂತರ್‌ ಮತ್ತು ಕ್ಯಾಲ್ವಿನ್‌ರಿಗೆ ಎಲ್ಲಾ ಕಡೆಗಳಿಂದಲೂ ಬೆಂಬಲ ಸಿಕ್ಕಿತು, ಮತ್ತು ಈ ಚಳವಳಿಯೇ ಮತಸುಧಾರಣೆ ಹಾಗೂ ಪ್ರಾಟೆಸ್ಟೆಂಟ್‌ ಧರ್ಮದ ಸ್ಥಾಪನೆಗೆ ಕಾರಣವಾಯಿತು. ಮತಸುಧಾರಣೆಯು ಇಡೀ ಸಾಮ್ರಾಜ್ಯವನ್ನು ಮೂರು ರೀತಿಯ ನಂಬಿಕೆಗಳುಳ್ಳದ್ದಾಗಿ ವಿಭಾಗಿಸಿತು​—⁠ಕ್ಯಾಥೊಲಿಕರು, ಲೂತರ್‌ನ ಅನುಯಾಯಿಗಳು, ಮತ್ತು ಕ್ಯಾಲ್ವಿನ್‌ನ ಅನುಯಾಯಿಗಳು.

ಕ್ಯಾಥೊಲಿಕರು ಪ್ರಾಟೆಸ್ಟೆಂಟರನ್ನು ಭರವಸೆಗೆ ಅನರ್ಹರನ್ನಾಗಿ ಪರಿಗಣಿಸುತ್ತಿದ್ದರು, ಮತ್ತು ಪ್ರಾಟೆಸ್ಟೆಂಟರು ತಮ್ಮ ಕ್ಯಾಥೊಲಿಕ್‌ ಎದುರಾಳಿಗಳನ್ನು ತಿರಸ್ಕಾರದಿಂದ ಕಾಣುತ್ತಿದ್ದರು. ಈ ಸನ್ನಿವೇಶವು, 17ನೆಯ ಶತಮಾನದ ಆರಂಭದಲ್ಲಿ ಪ್ರಾಟೆಸ್ಟೆಂಟ್‌ ಒಕ್ಕೂಟ ಮತ್ತು ಕ್ಯಾಥೊಲಿಕ್‌ ಸಂಘದ ರಚನೆಗೆ ಕಾರಣವಾಯಿತು. ಸಾಮ್ರಾಜ್ಯದ ರಾಜಕುಮಾರರು ಪ್ರಾಟೆಸ್ಟೆಂಟ್‌ ಒಕ್ಕೂಟಕ್ಕೆ ಸೇರಿದರು ಮತ್ತು ಇತರರು ಕ್ಯಾಥೊಲಿಕ್‌ ಸಂಘಕ್ಕೆ ಸೇರಿಕೊಂಡರು. ಯೂರೋಪ್‌ ಮತ್ತು ಅದರಲ್ಲೂ ವಿಶೇಷವಾಗಿ ಸಾಮ್ರಾಜ್ಯವು ಎಂಥ ಸ್ಥಿತಿಯಲ್ಲಿತ್ತೆಂದರೆ, ಅಲ್ಲಿನ ಪ್ರತಿಯೊಬ್ಬರೂ ಇತರರ ವಿಷಯದಲ್ಲಿ ಎಷ್ಟರ ಮಟ್ಟಿಗೆ ಭರವಸೆಯನ್ನು ಕಳೆದುಕೊಂಡಿದ್ದರೆಂದರೆ, ಸರ್ವವನ್ನೂ ಭಸ್ಮಮಾಡಿಬಿಡಲು ಕೇವಲ ಒಂದು ಕಿಡಿಯ ಆವಶ್ಯಕತೆಯಿತ್ತು. ಕೊನೆಗೂ ಆ ಕಿಡಿಯು ಹೊತ್ತಿಕೊಂಡಾಗ, ಮುಂದಿನ 30 ವರ್ಷಗಳ ವರೆಗೆ ಸತತವಾಗಿ ಅಸ್ತಿತ್ವದಲ್ಲಿದ್ದಂಥ ಒಂದು ಹೋರಾಟವನ್ನು ಅದು ಆರಂಭಿಸಿತು.

ಮಾರಕ ಕಿಡಿಯೊಂದು ಇಡೀ ಯೂರೋಪಿಗೇ ಬೆಂಕಿಹೊತ್ತಿಸಿತು

ಪ್ರಾಟೆಸ್ಟೆಂಟ್‌ ರಾಜರು ಇನ್ನೂ ಹೆಚ್ಚಿನ ಆರಾಧನಾ ಸ್ವಾತಂತ್ರ್ಯವನ್ನು ಅನುಮತಿಸುವಂತೆ ಕ್ಯಾಥೊಲಿಕ್‌ ಹ್ಯಾಬ್ಸ್‌ಬರ್ಗರನ್ನು ಪ್ರಭಾವಿಸಲು ಪ್ರಯತ್ನಿಸಿದರು. ಆದರೆ ಈ ಸ್ವಾತಂತ್ರ್ಯವು ಒಲ್ಲದ ಮನಸ್ಸಿನಿಂದ ಅನುಗ್ರಹಿಸಲ್ಪಟ್ಟಿತು, ಮತ್ತು 1617-18ರಲ್ಲಿ ಬೊಹೀಮೀಯ (ಚೆಕ್‌ ರಿಪಬ್ಲಿಕ್‌)ದಲ್ಲಿದ್ದ ಎರಡು ಲ್ಯೂತರನ್‌ ಚರ್ಚುಗಳು ಒತ್ತಾಯಪೂರ್ವಕವಾಗಿ ಮುಚ್ಚಲ್ಪಟ್ಟವು. ಇದು ಪ್ರಾಟೆಸ್ಟೆಂಟ್‌ ಕುಲೀನರನ್ನು ಬಹಳವಾಗಿ ರೇಗಿಸಿತು; ಇವರು ಪ್ರಾಗ್‌ನಲ್ಲಿದ್ದ ಅರಮನೆಯೊಂದಕ್ಕೆ ಲಗ್ಗೆಹಾಕಿ, ಮೂವರು ಕ್ಯಾಥೊಲಿಕ್‌ ಅಧಿಕಾರಿಗಳನ್ನು ಹಿಡಿದು ಮಹಡಿಯ ಕಿಟಕಿಯಿಂದ ಕೆಳಗೆ ಎಸೆದರು. ಈ ಕೃತ್ಯವೇ ಇಡೀ ಯೂರೋಪಿಗೇ ಬೆಂಕಿಹೊತ್ತಿಸಿದಂಥ ಕಿಡಿಯಾಗಿತ್ತು.

ಅವರು ಸಮಾಧಾನದ ಪ್ರಭುವಾಗಿದ್ದ ಯೇಸು ಕ್ರಿಸ್ತನ ಹಿಂಬಾಲಕರಾಗಿರಬೇಕಾಗಿತ್ತಾದರೂ, ಪರಸ್ಪರ ವೈರಿಗಳಾಗಿರುವ ಈ ಧರ್ಮಗಳ ಸದಸ್ಯರು ಈಗ ಒಬ್ಬರು ಇನ್ನೊಬ್ಬರ ಕೊರಳನ್ನು ಕೊಯ್ಯಲು ಸಿದ್ಧರಾಗಿದ್ದರು. (ಯೆಶಾಯ 9:⁠6) ವೈಟ್‌ ಮೌಂಟೆನ್‌ನ ಕದನದಲ್ಲಿ, ಕ್ಯಾಥೊಲಿಕ್‌ ಸಂಘವು ಪ್ರಾಟೆಸ್ಟೆಂಟ್‌ ಒಕ್ಕೂಟದ ಮೇಲೆ ಎಷ್ಟು ವಿನಾಶಕರ ಅಪಜಯವನ್ನು ತಂದೊಡ್ಡಿತೆಂದರೆ, ಈ ಒಕ್ಕೂಟವು ಪ್ರತ್ಯೇಕ ಭಾಗಗಳಾಗಿ ಒಡೆದುಹೋಯಿತು. ಪ್ರಾಟೆಸ್ಟೆಂಟ್‌ ಕುಲೀನರು ಪ್ರಾಗ್‌ನ ಮಾರುಕಟ್ಟೆಯಲ್ಲಿ ವಧಿಸಲ್ಪಟ್ಟರು. ಬೊಹೀಮೀಯದಾದ್ಯಂತ, ತಮ್ಮ ನಂಬಿಕೆಯನ್ನು ತೊರೆಯದಿರುವಂಥ ಪ್ರಾಟೆಸ್ಟೆಂಟರೆಲ್ಲರ ಸೊತ್ತುಗಳು ಬಲವಂತವಾಗಿ ವಶಪಡಿಸಿಕೊಳ್ಳಲ್ಪಟ್ಟವು ಮತ್ತು ಕ್ಯಾಥೊಲಿಕರ ನಡುವೆ ವಿತರಿಸಲ್ಪಟ್ಟವು. 1648​—⁠ಕ್ರೀಕ್‌ ಉಂಟ್‌ ಫ್ರೀಡನ್‌ ಇನ್‌ ಐರೋಪಾ (1648​—⁠ಯೂರೋಪಿನಲ್ಲಿ ಯುದ್ಧ ಮತ್ತು ಶಾಂತಿ) ಎಂಬ ಪುಸ್ತಕವು ಈ ವಶಪಡಿಸಿಕೊಳ್ಳುವಿಕೆಯನ್ನು, “ಮಧ್ಯ ಯೂರೋಪಿನಲ್ಲಿ ಆಸ್ತಿಯ ಒಡೆತನದಲ್ಲಾದ ಮಹತ್ತರ ಬದಲಾವಣೆಗಳಲ್ಲಿ ಒಂದು” ಎಂದು ವರ್ಣಿಸುತ್ತದೆ.

ಯಾವುದು ಬೊಹೀಮೀಯದಲ್ಲಿ ಕೇವಲ ಒಂದು ಧಾರ್ಮಿಕ ಹೋರಾಟವಾಗಿ ಆರಂಭವಾಯಿತೋ ಅದು ಒಂದು ಅಂತಾರಾಷ್ಟ್ರೀಯ ಅಧಿಕಾರವನ್ನು ಪಡೆಯಲಿಕ್ಕಾಗಿರುವ ಕಾದಾಟವಾಗಿ ಉಲ್ಬಣಗೊಂಡಿತು. ಮುಂದಿನ 30 ವರ್ಷಗಳಲ್ಲಿ, ಡೆನ್ಮಾರ್ಕ್‌, ನೆದರ್ಲೆಂಡ್ಸ್‌, ಫ್ರಾನ್ಸ್‌, ಸ್ಪೆಯಿನ್‌ ಮತ್ತು ಸ್ವೀಡನ್‌ಗಳು ಸಹ ಬಲವಂತವಾಗಿ ಯುದ್ಧಕ್ಕೆ ಎಳೆಯಲ್ಪಟ್ಟವು. ಅನೇಕವೇಳೆ ದುರಾಸೆ ಮತ್ತು ಅಧಿಕಾರಕ್ಕಾಗಿರುವ ದಾಹದಿಂದ ಆಕರ್ಷಿತರಾದ ಕ್ಯಾಥೊಲಿಕ್‌ ಮತ್ತು ಪ್ರಾಟೆಸ್ಟೆಂಟ್‌ ರಾಜರು, ರಾಜಕೀಯ ಪರಮಾಧಿಕಾರ ಮತ್ತು ವಾಣಿಜ್ಯ ಲಾಭಕ್ಕಾಗಿ ಮೋಸದಿಂದ ಕಾರ್ಯವೆಸಗಿದರು. ಆ ಮೂವತ್ತು ವರ್ಷಗಳ ಯುದ್ಧವು ಅನೇಕ ಹಂತಗಳಾಗಿ ವಿಭಾಗಿಸಲ್ಪಟ್ಟಿದ್ದು, ಪ್ರತಿಯೊಂದು ಹಂತಕ್ಕೂ ಚಕ್ರವರ್ತಿಯ ಮುಖ್ಯ ಎದುರಾಳಿಯ ಹೆಸರು ಕೊಡಲ್ಪಟ್ಟಿದೆ. ಅನೇಕ ಪರಾಮರ್ಶೆ ಕೃತಿಗಳು ಈ ರೀತಿಯ ಮೂರು ಹಂತಗಳನ್ನು ಉಲ್ಲೇಖಿಸುತ್ತವೆ: ಬೊಹೀಮೀಯ ಮತ್ತು ಪ್ಯಾಲಟೈನ್‌ ಯುದ್ಧ, ಡ್ಯಾನಿಷ್‌-ಲೋವರ್‌ ಸ್ಯಾಕ್ಸೊನಿ ಯುದ್ಧ, ಸ್ವೀಡಿಷ್‌ ಯುದ್ಧ, ಮತ್ತು ಫ್ರೆಂಚ್‌-ಸ್ವೀಡಿಷ್‌ ಯುದ್ಧ. ಹೋರಾಟದಲ್ಲಿ ಹೆಚ್ಚಿನದ್ದು ಪವಿತ್ರ ರೋಮನ್‌ ಸಾಮ್ರಾಜ್ಯದ ಕ್ಷೇತ್ರದಲ್ಲೇ ನಡೆಯಿತು.

ಆ ಕಾಲಾವಧಿಯಲ್ಲಿದ್ದ ಆಯುಧಗಳಲ್ಲಿ ಪಿಸ್ತೂಲುಗಳು, ತುಪಾಕಿಗಳು, ಫಿರಂಗಿಗಳು ಮತ್ತು ತೋಫುಗಳು ಒಳಗೂಡಿದ್ದು, ಸ್ವೀಡನ್‌ ದೇಶವು ಶಸ್ತ್ರಾಸ್ತ್ರಗಳನ್ನು ಸರಬರಾಜುಮಾಡುತ್ತಿದ್ದ ಪ್ರಮುಖ ದೇಶವಾಗಿತ್ತು. ಕ್ಯಾಥೊಲಿಕರು ಮತ್ತು ಪ್ರಾಟೆಸ್ಟೆಂಟರು ಹೋರಾಟದಲ್ಲಿ ಮುಳುಗಿದ್ದರು. “ಸ್ಯಾಂಟ ಮರೀಯ” ಇಲ್ಲವೆ “ದೇವರು ನಮ್ಮೊಂದಿಗಿದ್ದಾನೆ” ಎಂಬ ಘೋಷಣೆಯನ್ನು ಮಾಡುತ್ತಾ ಸೈನಿಕರು ಕದನರಂಗಕ್ಕೆ ಹೋದರು. ಸೇನೆಗಳು, ಜರ್ಮನ್‌ ಸಂಸ್ಥಾನಗಳುದ್ದಕ್ಕೂ ಕೊಳ್ಳೆಹೊಡೆಯುತ್ತಾ ಲೂಟಿಮಾಡುತ್ತಾ ಮುಂದುವರಿದವು ಮತ್ತು ವೈರಿಗಳು ಹಾಗೂ ಅಯೋಧರೊಂದಿಗೆ ಪ್ರಾಣಿಗಳಂತೆ ವರ್ತಿಸಿದವು. ಆ ಯುದ್ಧವು ಪಾಶವೀಯತೆಯಷ್ಟು ಹೀನ ಸ್ಥಿತಿಗೆ ಇಳಿಯಿತು. ಇದು ಈ ಮುಂದಿನ ಬೈಬಲ್‌ ಪ್ರವಾದನೆಗೆ ಎಷ್ಟು ತದ್ವಿರುದ್ಧವಾಗಿತ್ತು: “ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ”!​—⁠ಮೀಕ 4:⁠3.

ಜರ್ಮನರ ಒಂದು ಸಂತತಿಯು ಯುದ್ಧಭರಿತ ವಾತಾವರಣದಲ್ಲೇ ಬೆಳೆಸಲ್ಪಟ್ಟಿತು ಮತ್ತು ಬೇಸತ್ತ ಜನಸಂಖ್ಯೆಯು ಶಾಂತಿಗಾಗಿ ಹಂಬಲಿಸತೊಡಗಿತು. ರಾಜರುಗಳಿಗೆ ಸಂಘರ್ಷಿಸುವಂಥ ರಾಜಕೀಯ ಅಭಿರುಚಿಗಳು ಇಲ್ಲದಿರುತ್ತಿದ್ದಲ್ಲಿ ಶಾಂತಿಯನ್ನು ಸ್ಥಾಪಿಸುವ ಸಾಧ್ಯತೆಯಿರುತ್ತಿತ್ತು ಎಂಬುದು ಸುವ್ಯಕ್ತ. ಯುದ್ಧವು ಕ್ಯಾಥೊಲಿಕರು ಮತ್ತು ಪ್ರಾಟೆಸ್ಟೆಂಟರ ನಡುವಣ ಧಾರ್ಮಿಕ ಹೋರಾಟವಾಗಿರುವುದು ಕಡಿಮೆಯಾಗುತ್ತಾ ಹೋದಂತೆ, ಅದು ಹೆಚ್ಚೆಚ್ಚು ರಾಜಕೀಯ ಸ್ವರೂಪವನ್ನು ತಾಳಿತು. ಈ ಬದಲಾವಣೆಯನ್ನು ಉತ್ತೇಜಿಸಿದಂಥ ಮನುಷ್ಯನು ಕ್ಯಾಥೊಲಿಕ್‌ ಚರ್ಚಿನ ಉಚ್ಚ ವರ್ಗದ ಅಧಿಕಾರಿಯೇ ಆಗಿದ್ದನು ಎಂಬುದು ಹಾಸ್ಯವ್ಯಂಗ್ಯವಾದ ಸಂಗತಿಯಾಗಿತ್ತು.

ಕಾರ್ಡಿನಲ್‌ ರಿಷೆಲ್ಯೂ ತನ್ನ ಅಧಿಕಾರವನ್ನು ಚಲಾಯಿಸುತ್ತಾನೆ

ಅರ್ಮಾನ್‌-ಸಾನ್‌ ಡ್ಯೂ ಪ್ಲೆಸೀಯ ಅಧಿಕೃತ ಬಿರುದು ಕಾರ್ಡಿನಲ್‌ ಡೀ ರಿಷೆಲ್ಯೂ ಎಂದಾಗಿತ್ತು. ಇವನು 1624ರಿಂದ 1642ರ ವರೆಗೆ ಫ್ರಾನ್ಸ್‌ನ ಪ್ರಧಾನ ಮಂತ್ರಿಯಾಗಿಯೂ ಅಧಿಕಾರದಲ್ಲಿದ್ದನು. ಫ್ರಾನ್ಸನ್ನು ಯೂರೋಪಿನಲ್ಲೇ ಹೆಚ್ಚು ಬಲವತ್ತಾದ ಅಧಿಕಾರವನ್ನಾಗಿ ಮಾಡುವುದು ರಿಷೆಲ್ಯೂನ ಗುರಿಯಾಗಿತ್ತು. ಈ ಗುರಿಯನ್ನು ಸಾಧಿಸಲಿಕ್ಕಾಗಿ ಅವನು ತನ್ನ ಜೊತೆ ಕ್ಯಾಥೊಲಿಕರ ಅಂದರೆ ಹ್ಯಾಬ್ಸ್‌ಬರ್ಗರ ಅಧಿಕಾರವನ್ನು ಶಿಥಿಲಗೊಳಿಸಲು ಪ್ರಯತ್ನಿಸಿದನು. ಅವನು ಇದನ್ನು ಹೇಗೆ ಮಾಡಿದನು? ಹ್ಯಾಬ್ಸ್‌ಬರ್ಗರ ವಿರುದ್ಧ ಹೋರಾಟ ನಡೆಸುತ್ತಿದ್ದ ಎಲ್ಲಾ ಜರ್ಮನ್‌ ಸಂಸ್ಥಾನಗಳು, ಡೆನ್ಮಾರ್ಕ್‌, ನೆದರ್ಲೆಂಡ್ಸ್‌, ಮತ್ತು ಸ್ವೀಡನ್‌ನ ಪ್ರಾಟೆಸ್ಟೆಂಟ್‌ ಸೇನೆಗಳಿಗೆ ಹಣಕಾಸನ್ನು ಒದಗಿಸುವ ಮೂಲಕವೇ.

ಇಸವಿ 1635ರಲ್ಲಿ ರಿಷೆಲ್ಯೂ ಮೊದಲ ಬಾರಿಗೆ ಫ್ರೆಂಚ್‌ ಪಡೆಗಳನ್ನು ಯುದ್ಧಕ್ಕೆ ಕಳುಹಿಸಿದನು. ವೀವಾಟ್‌ ಪಾಕ್ಸ್‌​—⁠ಎಸ್‌ ಲೇಬ ಡೇಅ ಫ್ರೀಡ! (ಶಾಂತಿಯು ಚಿರಂಜೀವಿಯಾಗಿರಲಿ!) ಎಂಬ ಪುಸ್ತಕವು ವಿವರಿಸುವುದೇನೆಂದರೆ, ಅದರ ಅಂತಿಮ ಹಂತದಲ್ಲಿ “ಮೂವತ್ತು ವರ್ಷಗಳ ಯುದ್ಧವು ಧಾರ್ಮಿಕ ಪಕ್ಷಗಳ ನಡುವಣ ಹೋರಾಟವಾಗಿರುವುದು ನಿಂತುಹೋಯಿತು. . . . ಈ ಯುದ್ಧವು ಯೂರೋಪಿನಲ್ಲಿನ ರಾಜಕೀಯ ಪರಮಾಧಿಕಾರಕ್ಕಾಗಿರುವ ಕಾದಾಟವಾಗಿ ಮಾರ್ಪಟ್ಟಿತು.” ಯಾವುದು ಕ್ಯಾಥೊಲಿಕರು ಮತ್ತು ಪ್ರಾಟೆಸ್ಟೆಂಟರ ನಡುವಣ ಧಾರ್ಮಿಕ ಯುದ್ಧವಾಗಿ ಆರಂಭಗೊಂಡಿತೋ ಅದು, ಕ್ಯಾಥೊಲಿಕರು ಪ್ರಾಟೆಸ್ಟೆಂಟರೊಂದಿಗೆ ಸೇರಿಕೊಂಡು ಇತರ ಕ್ಯಾಥೊಲಿಕರ ವಿರುದ್ಧ ನಡೆಸುವ ಹೋರಾಟವಾಗಿ ಕೊನೆಗೊಂಡಿತು. ಇಸವಿ 1630ಗಳ ಆರಂಭದಲ್ಲೇ ದುರ್ಬಲಗೊಂಡಿದ್ದ ಕ್ಯಾಥೊಲಿಕ್‌ ಸಂಘವು 1635ರಲ್ಲಿ ಸಂಪೂರ್ಣವಾಗಿ ಚೆದರಿಹೋಯಿತು.

ವೆಸ್ಟ್‌ಫೇಲಿಯದಲ್ಲಿ ಶಾಂತಿ ಸಂಧಾನ

ಲೂಟಿ, ಕೊಲೆ, ಬಲಾತ್ಕಾರ ಮತ್ತು ರೋಗದಿಂದ ಯೂರೋಪ್‌ ಪೂರ್ಣ ರೀತಿಯಲ್ಲಿ ಧ್ವಂಸಗೊಂಡಿತು. ಕಾಲಕ್ರಮೇಣ, ಇದು ಯಾವ ಪಕ್ಷವೂ ಜಯಿಸಲಾರದಂಥ ಒಂದು ಯುದ್ಧವಾಗಿತ್ತು ಎಂಬ ಮನವರಿಕೆಯಿಂದಾಗಿ ಶಾಂತಿಗಾಗಿರುವ ಹಂಬಲವು ಇನ್ನಷ್ಟು ತೀವ್ರಗೊಂಡಿತು. ವೀವಾಟ್‌ ಪಾಕ್ಸ್‌​—⁠ಎಸ್‌ ಲೇಬ ಡೇಅ ಫ್ರೀಡ! ಪುಸ್ತಕವು ಹೀಗೆ ಹೇಳುತ್ತದೆ: “1630ಗಳ ಅಂತ್ಯದಷ್ಟಕ್ಕೆ, ತಮ್ಮ ಗುರಿಯನ್ನು ಸಾಧಿಸಲು ಮಿಲಿಟರಿ ಶಕ್ತಿಯು ಇನ್ನೆಂದೂ ತಮಗೆ ಸಹಾಯಮಾಡಲಾರದು ಎಂಬುದು ಆಳುತ್ತಿದ್ದ ರಾಜಕುಮಾರರಿಗೆ ಕೊನೆಗೂ ಮನದಟ್ಟಾಯಿತು.” ಆದರೆ ಪ್ರತಿಯೊಬ್ಬರೂ ಬಯಸಿದ್ದು ಶಾಂತಿಯೇ ಆಗಿದ್ದಲ್ಲಿ, ಇದನ್ನು ಹೇಗೆ ತಾನೇ ಸಾಧಿಸಸಾಧ್ಯವಿತ್ತು?

ಪವಿತ್ರ ರೋಮನ್‌ ಸಾಮ್ರಾಜ್ಯದ IIIನೆಯ ಚಕ್ರವರ್ತಿ ಫರ್ಡಿನಾಂಡ್‌, ಫ್ರಾನ್ಸಿನ XIIIನೆಯ ರಾಜ ಲೂಯಿ, ಮತ್ತು ಸ್ವೀಡನ್‌ನ ರಾಣಿ ಕ್ರಿಸ್ಟೀನರು ಒಂದು ಸಮಾಲೋಚನೆಯನ್ನು ನಡೆಸಲು ಒಪ್ಪಿಕೊಂಡರು. ಅದರಲ್ಲಿ ಯುದ್ಧದ ಎಲ್ಲಾ ಪಕ್ಷಗಳವರೂ ಕೂಡಿಬರಬೇಕಾಗಿತ್ತು ಮತ್ತು ಶಾಂತಿ ಸಂಧಾನದ ಬಗ್ಗೆ ಸಮಾಲೋಚನೆ ನಡೆಸಬೇಕಾಗಿತ್ತು. ಮಾತುಕತೆ ನಡೆಸಲಿಕ್ಕಾಗಿ ಎರಡು ನಿವೇಶನಗಳನ್ನು ಆಯ್ಕೆಮಾಡಲಾಯಿತು. ಇವು ವೆಸ್ಟ್‌ಫೇಲಿಯದ ಜರ್ಮನ್‌ ಪ್ರಾಂತದಲ್ಲಿನ ಆಸ್ನಬ್ರೂಎಕ್‌ ಮತ್ತು ಮೂನ್‌ಸ್ಟರ್‌ ಪಟ್ಟಣಗಳಾಗಿದ್ದವು. ಈ ನಿವೇಶನಗಳನ್ನು ಏಕೆ ಆಯ್ಕೆಮಾಡಲಾಗಿತ್ತೆಂದರೆ, ಇವು ಸ್ವೀಡನ್‌ ಹಾಗೂ ಫ್ರಾನ್ಸ್‌ನ ರಾಜಧಾನಿಗಳ ಮಧ್ಯಭಾಗದಲ್ಲಿದ್ದವು. ಇಸವಿ 1643ರಿಂದ ಆರಂಭಿಸಿ, ಸುಮಾರು 150 ಪ್ರತಿನಿಧಿಗಳು ಮತ್ತು ಇವರಲ್ಲಿ ಕೆಲವರು ಸಲಹೆಗಾರರ ದೊಡ್ಡ ತಂಡದೊಂದಿಗೆ ಈ ಎರಡು ಪಟ್ಟಣಗಳಿಗೆ ಆಗಮಿಸಿದರು; ಕ್ಯಾಥೊಲಿಕ್‌ ನಿಯೋಗಿಗಳು ಮೂನ್‌ಸ್ಟರ್‌ನಲ್ಲಿ ಜಮಾಯಿಸಿದರು ಮತ್ತು ಪ್ರಾಟೆಸ್ಟೆಂಟ್‌ ಪ್ರತಿನಿಧಿಗಳು ಆಸ್ನಬ್ರೂಎಕ್‌ನಲ್ಲಿ ಕೂಡಿಬಂದರು.

ಪ್ರಥಮವಾಗಿ, ಪ್ರತಿನಿಧಿಗಳ ಬಿರುದು ಮತ್ತು ಸ್ಥಾನಮಾನ, ಆಸನದ ಏರ್ಪಾಡು, ಮತ್ತು ಕಾರ್ಯವಿಧಾನಗಳಂಥ ವಿಷಯಗಳನ್ನು ನಿರ್ಧರಿಸಲಿಕ್ಕಾಗಿ ಒಂದು ನಿಯಮಾವಳಿಯನ್ನು ರೂಪಿಸಲಾಯಿತು. ತದನಂತರ ಶಾಂತಿಯ ಮಾತುಕತೆಯು ಆರಂಭವಾಯಿತು ಮತ್ತು ಮಾಡಲ್ಪಟ್ಟ ಪ್ರಸ್ತಾಪಗಳನ್ನು ಮಧ್ಯವರ್ತಿಗಳ ಮೂಲಕ ಪ್ರತಿನಿಧಿಗಳ ಒಂದು ತಂಡದಿಂದ ಇನ್ನೊಂದು ತಂಡಕ್ಕೆ ದಾಟಿಸಲಾಯಿತು. ಈ ನಡುವೆ ಯುದ್ಧವು ಮುಂದುವರಿಯುತ್ತಿತ್ತಾದರೂ, ಸುಮಾರು ಐದು ವರ್ಷಗಳ ಬಳಿಕ ಶಾಂತಿಯ ಪ್ರಸ್ತಾಪಗಳು ಪರಸ್ಪರ ಸಮ್ಮತಿಸಲ್ಪಟ್ಟವು. ವೆಸ್ಟ್‌ಫೇಲಿಯದ ಶಾಂತಿ ಸಂಧಾನವು ಒಂದಕ್ಕಿಂತಲೂ ಹೆಚ್ಚು ದಾಖಲೆಪತ್ರಗಳನ್ನು ಒಳಗೂಡಿತ್ತು. IIIನೆಯ ಚಕ್ರವರ್ತಿ ಫರ್ಡಿನಾಂಡ್‌ ಮತ್ತು ಸ್ವೀಡನ್‌ನ ನಡುವೆ ಒಂದು ಒಪ್ಪಂದವು ಸಹಿಮಾಡಲ್ಪಟ್ಟಿತು; ಚಕ್ರವರ್ತಿ ಹಾಗೂ ಫ್ರಾನ್ಸ್‌ನ ನಡುವೆ ಇನ್ನೊಂದು ಒಪ್ಪಂದವು ಸಹಿಮಾಡಲ್ಪಟ್ಟಿತು.

ಶಾಂತಿ ಸಂಧಾನದ ಸುದ್ದಿಯು ಎಲ್ಲಾ ಕಡೆ ಹಬ್ಬಿದಂತೆ, ಸಂಭ್ರಮಾಚರಣೆಗಳು ಆರಂಭವಾದವು. ಯಾವುದು ಒಂದು ವಿನಾಶಕರ ಕಿಡಿಯಾಗಿ ಆರಂಭಗೊಂಡಿತ್ತೋ ಅದು ಅಕ್ಷರಾರ್ಥವಾಗಿ ಪಟಾಕಿಗಳ ಸಿಡಿತದೊಂದಿಗೆ ಕೊನೆಗೊಂಡಿತು. ಬೇರೆ ಬೇರೆ ನಗರಗಳಲ್ಲಿ ಪಟಾಕಿಗಳು ಆಕಾಶವನ್ನು ಬೆಳಗಿಸಿದವು. ಚರ್ಚಿನ ಘಂಟೆಗಳು ಮೊಳಗಿದವು, ಅಂಭಿನಂದನೆಯ ಸೂಚಕವಾಗಿ ತೋಫುಗಳು ಹಾರಿಸಲ್ಪಟ್ಟವು, ಮತ್ತು ಜನರು ಬೀದಿಗಳಲ್ಲಿ ಹಾಡಿದರು. ಈಗ ಯೂರೋಪ್‌ ಬಾಳುವ ಶಾಂತಿಯನ್ನು ನಿರೀಕ್ಷಿಸಸಾಧ್ಯವಿತ್ತೋ?

ಬಾಳುವ ಶಾಂತಿಯ ಸಾಧ್ಯತೆಯಿದೆಯೋ?

ವೆಸ್ಟ್‌ಫೇಲಿಯದ ಶಾಂತಿ ಸಂಧಾನವು ಆಳುವ ಅಧಿಕಾರದ ಹಕ್ಕನ್ನು ಅಂಗೀಕರಿಸಿತು. ಇದರ ಅರ್ಥ, ಶಾಂತಿ ಸಂಧಾನದ ಪ್ರತಿಯೊಂದು ಪಕ್ಷವು ಇನ್ನಿತರ ಎಲ್ಲಾ ಪಕ್ಷಗಳ ಪ್ರಾದೇಶಿಕ ಹಕ್ಕುಗಳನ್ನು ಗೌರವಿಸಲು ಮತ್ತು ಅವರ ಆಂತರಿಕ ಆಗುಹೋಗುಗಳಲ್ಲಿ ತಲೆಹಾಕದಿರಲು ಒಪ್ಪಿಕೊಂಡಿತು. ಹೀಗೆ, ಸರ್ವಸ್ವತಂತ್ರ ರಾಜ್ಯಗಳ ಒಂದು ಭೂಖಂಡದೋಪಾದಿ ಆಧುನಿಕ ಯೂರೋಪ್‌ ಉದಯವಾಯಿತು. ಈ ಶಾಂತಿ ಸಂಧಾನದಿಂದ, ಆ ರಾಜ್ಯಗಳಲ್ಲಿ ಕೆಲವು ಇತರ ರಾಜ್ಯಗಳಿಗಿಂತಲೂ ಹೆಚ್ಚಿನ ಒಳಿತನ್ನು ಪಡೆದುಕೊಂಡವು.

ಫ್ರಾನ್ಸ್‌ ಒಂದು ಮುಖ್ಯ ಶಕ್ತಿಯಾಗಿ ಸ್ಥಾಪಿಸಲ್ಪಟ್ಟಿತು, ಮತ್ತು ನೆದರ್ಲೆಂಡ್ಸ್‌ ಹಾಗೂ ಸ್ವಿಟ್ಸರ್ಲೆಂಡ್‌ಗಳಿಗೆ ಸ್ವಾತಂತ್ರ್ಯವು ನೀಡಲ್ಪಟ್ಟಿತು. ಯುದ್ಧದಿಂದ ಬಹುತೇಕವಾಗಿ ಧ್ವಂಸಕ್ಕೆ ಒಳಗಾಗಿದ್ದ ಜರ್ಮನ್‌ ಸಂಸ್ಥಾನಗಳಿಗೆ ಮಾತ್ರ ಈ ಶಾಂತಿ ಸಂಧಾನವು ಅನನುಕೂಲವಾಗಿ ಪರಿಣಮಿಸಿತು. ಜರ್ಮನಿಗೆ ಏನಾಗಬೇಕು ಎಂಬುದು ಸ್ವಲ್ಪಮಟ್ಟಿಗೆ ಇತರ ರಾಷ್ಟ್ರಗಳಿಂದ ನಿರ್ಣಯಿಸಲ್ಪಡಲಿಕ್ಕಿತ್ತು. ದ ನ್ಯೂ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕವು ಹೀಗೆ ವರದಿಸುತ್ತದೆ: “ಜರ್ಮನ್‌ ರಾಜಕುಮಾರರ ಲಾಭಗಳು ಮತ್ತು ನಷ್ಟಗಳನ್ನು, ಫ್ರಾನ್ಸ್‌, ಸ್ವೀಡನ್‌, ಮತ್ತು ಆಸ್ಟ್ರೀಯಗಳಂಥ ಪ್ರಮುಖ ಶಕ್ತಿಗಳಿಗೆ ಯಾವುದು ಪ್ರಯೋಜನದಾಯಕವಾಗಿದೆಯೋ ಅದಕ್ಕೆ ತಕ್ಕಂತೆ ನಿರ್ಧರಿಸಲಾಗುತ್ತಿತ್ತು.” ಜರ್ಮನ್‌ ಸಂಸ್ಥಾನಗಳು ಪುನಃ ಒಂದುಗೂಡಿ ಏಕ ಸಮುದಾಯವಾಗಿ ಐಕ್ಯಗೊಳ್ಳುವುದಕ್ಕೆ ಬದಲಾಗಿ ಅವು ಮೊದಲಿನಂತೆಯೇ ಪ್ರತ್ಯೇಕವಾಗಿದ್ದವು. ಅಷ್ಟುಮಾತ್ರವಲ್ಲ, ಜರ್ಮನಿಯ ಸ್ವಲ್ಪ ಕ್ಷೇತ್ರವನ್ನು ವಿದೇಶೀ ರಾಜರ ನಿಯಂತ್ರಣಕ್ಕೂ ಒಪ್ಪಿಸಲಾಯಿತು; ಅದೇ ರೀತಿಯಲ್ಲಿ ಜರ್ಮನಿಯ ರೈನ್‌, ಎಲ್ಬ, ಮತ್ತು ಓಡರ್‌ ಎಂಬ ಮುಖ್ಯ ನದಿಗಳ ಕೆಲವು ಭಾಗಗಳನ್ನೂ ಆ ರಾಜರ ವಶಕ್ಕೆ ನೀಡಲಾಯಿತು.

ಕ್ಯಾಥೊಲಿಕ್‌, ಲ್ಯೂತರನ್‌ ಮತ್ತು ಕ್ಯಾಲ್ವಿನ್‌ ಧರ್ಮಗಳಿಗೆ ಸಮಾನವಾದ ಅಂಗೀಕಾರವು ನೀಡಲ್ಪಟ್ಟಿತು. ಇದು ಎಲ್ಲರಿಗೂ ಸಂತೋಷವನ್ನುಂಟುಮಾಡಲಿಲ್ಲ. Xನೆಯ ಪೋಪ್‌ ಇನಸೆಂಟನು ಈ ಶಾಂತಿ ಸಂಧಾನವನ್ನು ಬಲವಾಗಿ ವಿರೋಧಿಸಿದನು ಮತ್ತು ಇದು ಅಸಮಂಜಸವಾದದ್ದು ಮತ್ತು ಅನಂಗೀಕೃತವಾದದ್ದು ಎಂದು ಘೋಷಿಸಿದನು. ಆದರೂ, ಸ್ಥಾಪಿಸಲ್ಪಟ್ಟಿದ್ದ ಧಾರ್ಮಿಕ ಸರಹದ್ದುಗಳು ಮಾತ್ರ ಮುಂದಿನ ಮೂರು ಶತಮಾನಗಳ ವರೆಗೆ ಬಹುಮಟ್ಟಿಗೆ ಬದಲಾಗದೇ ಉಳಿದವು. ಇಷ್ಟರ ತನಕ ವ್ಯಕ್ತಿಗತವಾಗಿ ಧಾರ್ಮಿಕ ಸ್ವಾತಂತ್ರ್ಯವು ಸಿಕ್ಕಿರಲಿಲ್ಲವಾದರೂ, ಇದು ಅದೇ ದಿಕ್ಕಿನಲ್ಲಿ ಮುನ್ನಡೆಯುತ್ತಿತ್ತು.

ಈ ಶಾಂತಿ ಸಂಧಾನವು ಮೂವತ್ತು ವರ್ಷಗಳ ಯುದ್ಧವನ್ನು ಮುಕ್ತಾಯಕ್ಕೆ ತಂದಿತು, ಮತ್ತು ಇದರಿಂದಾಗಿ ಅಧಿಕಾಂಶ ಕದನಗಳು ಕೂಡ ನಿಂತುಹೋದವು. ಇದು ಯೂರೋಪಿನಲ್ಲಿ ನಡೆದ ಕೊನೆಯ ಪ್ರಮುಖ ಧಾರ್ಮಿಕ ಯುದ್ಧವಾಗಿತ್ತು. ಯುದ್ಧಗಳು ಅಂತ್ಯಗೊಳ್ಳಲಿಲ್ಲವಾದರೂ, ಅವುಗಳ ಹಿಂದಿದ್ದ ಧಾರ್ಮಿಕ ಕಾರಣಗಳು ರಾಜಕೀಯ ಅಥವಾ ವಾಣಿಜ್ಯ ಕಾರಣಗಳಾಗಿ ಬದಲಾದವು. ಯೂರೋಪಿನ ಕದನಗಳಲ್ಲಿ ಧರ್ಮವು ಅದರ ಎಲ್ಲಾ ಪ್ರಭಾವವನ್ನು ಕಳೆದುಕೊಂಡಿತು ಎಂಬುದು ಇದರ ಅರ್ಥವಲ್ಲ. ಮೊದಲನೆಯ ಮತ್ತು ಎರಡನೆಯ ಲೋಕ ಯುದ್ಧಗಳಲ್ಲಿ, ಜರ್ಮನ್‌ ಸೈನಿಕರು ಧರಿಸಿದ್ದ ಬೆಲ್ಟಿನ ಬಕಲ್‌ಗಳ ಮೇಲೆ “ದೇವರು ನಮ್ಮೊಂದಿಗಿದ್ದಾನೆ” ಎಂಬ ಚಿರಪರಿಚಿತ ಕೆತ್ತನೆಯಿತ್ತು. ಈ ಅಹಿತಕರ ಹೋರಾಟಗಳ ಸಮಯದಲ್ಲಿ, ಪುನಃ ಒಮ್ಮೆ ಒಂದು ಪಕ್ಷದ ಕ್ಯಾಥೊಲಿಕರು ಮತ್ತು ಪ್ರಾಟೆಸ್ಟೆಂಟರು ಸೇರಿಕೊಂಡು ವಿರೋಧ ಪಕ್ಷದ ಕ್ಯಾಥೊಲಿಕರು ಮತ್ತು ಪ್ರಾಟೆಸ್ಟೆಂಟರ ವಿರುದ್ಧ ಕಾದಾಡಿದರು.

ವೆಸ್ಟ್‌ಫೇಲಿಯದ ಸಂಧಾನವು ಬಾಳುವ ಶಾಂತಿಯನ್ನು ತರಲಿಲ್ಲ ಎಂಬುದಂತೂ ಸುಸ್ಪಷ್ಟ. ಆದರೂ, ಬಾಳುವ ಶಾಂತಿಯು ಅತಿ ಬೇಗನೆ ವಿಧೇಯ ಮಾನವಕುಲದಿಂದ ಅನುಭವಿಸಲ್ಪಡುವುದು. ಯೆಹೋವ ದೇವರು ತನ್ನ ಪುತ್ರನಾಗಿರುವ ಯೇಸು ಕ್ರಿಸ್ತನ ಮೆಸ್ಸೀಯ ರಾಜ್ಯದ ಮೂಲಕ ಮಾನವಕುಲಕ್ಕೆ ನಿತ್ಯವಾದ ಶಾಂತಿಯನ್ನು ತರುವನು. ಆ ಸರಕಾರದ ಕೆಳಗೆ, ಏಕಮಾತ್ರ ಸತ್ಯ ಧರ್ಮವು ಒಡಕನ್ನು ಉಂಟುಮಾಡಲಿಕ್ಕಾಗಿ ಅಲ್ಲ ಬದಲಾಗಿ ಐಕ್ಯಭಾವಕ್ಕೆ ಪ್ರಚೋದಕವಾಗಿರುವುದು. ಧಾರ್ಮಿಕವಾಗಲಿ ಅಥವಾ ಬೇರೆ ಯಾವುದೇ ಕಾರಣಕ್ಕಾಗಲಿ ಯಾರೊಬ್ಬರೂ ಯುದ್ಧವನ್ನು ಮಾಡರು. ಆ ರಾಜ್ಯದಾಳ್ವಿಕೆಯು ಇಡೀ ಭೂಮಿಯ ಮೇಲೆ ಪೂರ್ಣ ನಿಯಂತ್ರಣವನ್ನು ಪಡೆಯುವಾಗ ಮತ್ತು “ಶಾಂತಿಗೆ ಅಂತ್ಯವೇ ಇಲ್ಲದಿರುವಾಗ” ಅದೆಷ್ಟು ನಿರಾಳವಾದ ಅನಿಸಿಕೆಯಾಗಿರುವುದು!​—⁠ಯೆಶಾಯ 9:​6, 7, NW.

[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯಾವುದು ಕ್ಯಾಥೊಲಿಕರು ಮತ್ತು ಪ್ರಾಟೆಸ್ಟೆಂಟರ ನಡುವಣ ಧಾರ್ಮಿಕ ಯುದ್ಧವಾಗಿ ಆರಂಭಗೊಂಡಿತೋ ಅದು, ಕ್ಯಾಥೊಲಿಕರು ಪ್ರಾಟೆಸ್ಟೆಂಟರೊಂದಿಗೆ ಸೇರಿಕೊಂಡು ಇತರ ಕ್ಯಾಥೊಲಿಕರ ವಿರುದ್ಧ ನಡೆಸುವ ಹೋರಾಟವಾಗಿ ಕೊನೆಗೊಂಡಿತು

[ಪುಟ 22ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಸ್ಯಾಂಟ ಮರೀಯ” ಇಲ್ಲವೆ “ದೇವರು ನಮ್ಮೊಂದಿಗಿದ್ದಾನೆ” ಎಂಬ ಘೋಷಣೆಯನ್ನು ಮಾಡುತ್ತಾ ಸೈನಿಕರು ಕದನರಂಗಕ್ಕೆ ಹೋದರು

[ಪುಟ 21ರಲ್ಲಿರುವ ಚಿತ್ರ]

ಕಾರ್ಡಿನಲ್‌ ರಿಷೆಲ್ಯೂ

[ಪುಟ 23ರಲ್ಲಿರುವ ಚಿತ್ರ]

ಲೂತರ್‌, ಕ್ಯಾಲ್ವಿನ್‌, ಮತ್ತು ಪೋಪ್‌ರ ನಡುವಣ ಹೋರಾಟವನ್ನು ಚಿತ್ರಿಸುತ್ತಿರುವ ಹದಿನಾರನೆಯ ಶತಮಾನದ ಚಿತ್ರಕಲೆ

[ಪುಟ 20ರಲ್ಲಿರುವ ಚಿತ್ರ ಕೃಪೆ]

From the book Spamers Illustrierte Weltgeschichte VI

[ಪುಟ 23ರಲ್ಲಿರುವ ಚಿತ್ರ ಕೃಪೆ]

ಹೋರಾಡುತ್ತಿರುವ ಧಾರ್ಮಿಕ ನಾಯಕರು: From the book Wider die Pfaffenherrschaft; ಭೂಪಟ: The Complete Encyclopedia of Illustration/J. G. Heck