ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿಕ್ಕಪುಟ್ಟ ತ್ಯಾಗಗಳು ನಮಗೆ ಅನೇಕ ಆಶೀರ್ವಾದಗಳನ್ನು ತಂದವು

ಚಿಕ್ಕಪುಟ್ಟ ತ್ಯಾಗಗಳು ನಮಗೆ ಅನೇಕ ಆಶೀರ್ವಾದಗಳನ್ನು ತಂದವು

ಜೀವನ ಕಥೆ

ಚಿಕ್ಕಪುಟ್ಟ ತ್ಯಾಗಗಳು ನಮಗೆ ಅನೇಕ ಆಶೀರ್ವಾದಗಳನ್ನು ತಂದವು

ಜಾರ್ಜ್‌ ಮತ್ತು ಆ್ಯನ್‌ ಆ್ಯಲ್ಜನ್‌ ಅವರು ಹೇಳಿದಂತೆ

ಒಂದು ದಿನ ನಾವು “ಬೋಧಕಿ” ಎಂಬ ಪದವನ್ನು “ಇಲಿ” ಎಂಬ ಪದದೊಂದಿಗೆ ಗಲಿಬಿಲಿಗೊಳಿಸುತ್ತೇವೆಂದು ನಾನು ಮತ್ತು ನನ್ನ ಹೆಂಡತಿ ಕನಸಲ್ಲೂ ನೆನಸಿರಲಿಲ್ಲ. ನಮ್ಮ 60ಗಳ ಪ್ರಾಯದಲ್ಲಿ, ದೂರ ಪ್ರಾಚ್ಯದ ಜನರೊಂದಿಗೆ ಸಂವಾದಿಸುವ ಪ್ರಯತ್ನದಲ್ಲಿ ವಿಚಿತ್ರವಾಗಿ ಕಾಣುವಂಥ ಲಿಖಿತ ಅಕ್ಷರಗಳ ಕುರಿತು ಧ್ಯಾನಿಸಲು ಪ್ರಯತ್ನಿಸಬಹುದು ಎಂಬುದರ ಕುರಿತು ಸಹ ನಾವು ಆಲೋಚಿಸಿರಲೇ ಇಲ್ಲ. ಆದರೂ, 1980ಗಳ ಕೊನೆಯಷ್ಟಕ್ಕೆ ನಾನು ಮತ್ತು ಆ್ಯನ್‌ ಇದನ್ನೇ ಮಾಡಿದೆವು. ನಮ್ಮ ಜೀವಿತಗಳಲ್ಲಿ ಗತ ವರ್ಷಗಳಿಂದಲೂ ನಾವು ಮಾಡಿರುವ ಚಿಕ್ಕಪುಟ್ಟ ತ್ಯಾಗಗಳು ಹೇಗೆ ಅನೇಕ ಆಶೀರ್ವಾದಗಳನ್ನು ತಂದವು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

ನಾನು ಅರ್‌ಮೇನಿಯನ್‌ ವಂಶಕ್ಕೆ ಸೇರಿದ ಕುಟುಂಬದಿಂದ ಬಂದವನಾಗಿದ್ದೆ ಮತ್ತು ಅರ್‌ಮೇನಿಯನ್‌ ಚರ್ಚಿಗೆ ಸೇರಿದವನಾಗಿದ್ದೆ. ಆ್ಯನ್‌ ರೋಮನ್‌ ಕ್ಯಾಥೊಲಿಕಳಾಗಿದ್ದಳು. ಇಸವಿ 1950ರಲ್ಲಿ ನಾವು ವಿವಾಹವಾದಾಗ, ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಪರಸ್ಪರ ಹೊಂದಾಣಿಕೆಗಳನ್ನು ಮಾಡಿಕೊಂಡೆವು. ಆಗ ನನಗೆ 27 ವರ್ಷ ವಯಸ್ಸಾಗಿತ್ತು ಮತ್ತು ಆ್ಯನ್‌ಳಿಗೆ 24. ನಾವು ಅಮೆರಿಕದ ನ್ಯೂ ಜೆರ್ಸಿಯ ಜೆರ್ಸಿ ಸಿಟಿಯಲ್ಲಿದ್ದ ನನ್ನ ಡ್ರೈ-ಕ್ಲೀನ್‌ ಅಂಗಡಿಯ ಮೇಲಿದ್ದ ಅಪಾರ್ಟ್‌ಮೆಂಟಿನಲ್ಲಿ ವಾಸಿಸತೊಡಗಿದೆವು. ಅಷ್ಟರೊಳಗೆ ಈ ಅಂಗಡಿಯನ್ನು ಸ್ವಂತಕ್ಕೆ ಖರೀದಿಸಿ ನಾಲ್ಕು ವರ್ಷಗಳಾಗಿದ್ದವು.

ಇಸವಿ 1955ರಲ್ಲಿ ನಾವು ನ್ಯೂ ಜೆರ್ಸಿಯ ಮಿಡ್ಲ್‌ಟೌನ್‌ನಲ್ಲಿ ಮೂರು ಬೆಡ್‌ರೂಮ್‌ ಇದ್ದ ಒಂದು ಸುಂದರ ಮನೆಯನ್ನು ಖರೀದಿಸಿದೆವು. ನನ್ನ ಅಂಗಡಿಯಿಂದ ಈ ಮನೆಯು ಸುಮಾರು 60 ಕಿಲೊಮೀಟರುಗಳಷ್ಟು ದೂರದಲ್ಲಿತ್ತು; ನಾನು ವಾರದಲ್ಲಿ ಆರು ದಿನ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದೆ. ಪ್ರತಿ ದಿನ ರಾತ್ರಿ ನಾನು ತಡವಾಗಿ ಮನೆಗೆ ಬರುತ್ತಿದ್ದೆ. ಸಾಕ್ಷಿಗಳು ನಿಯತಕ್ರಮವಾಗಿ ನನ್ನ ಅಂಗಡಿಗೆ ಬಂದು ಬೈಬಲ್‌ ಸಾಹಿತ್ಯವನ್ನು ನೀಡುತ್ತಿದ್ದಾಗ ಮಾತ್ರ ನನಗೆ ಅವರನ್ನು ಸಂಪರ್ಕಿಸುವ ಅವಕಾಶ ಸಿಗುತ್ತಿತ್ತು. ನಾನು ಅತ್ಯಾಸಕ್ತಿಯಿಂದ ಆ ಸಾಹಿತ್ಯವನ್ನು ಓದುತ್ತಿದ್ದೆ. ನನ್ನ ವ್ಯಾಪಾರವು ನನ್ನ ಹೆಚ್ಚಿನ ಸಮಯ ಹಾಗೂ ಗಮನವನ್ನು ಕಬಳಿಸಿಬಿಡುತ್ತಿತ್ತಾದರೂ, ನಾನು ಬೈಬಲಿನ ಕಡೆಗೆ ಆಳವಾದ ಗೌರವವನ್ನು ಬೆಳೆಸಿಕೊಂಡೆ.

ನಾನು ಕಾರಿನಲ್ಲಿ ನನ್ನ ಅಂಗಡಿಗೆ ಹೋಗುತ್ತಾ ಬರುತ್ತಾ ಇದ್ದಾಗ, ಡಬ್ಲ್ಯೂಬಿಬಿಆರ್‌ ಎಂಬ ವಾಚ್‌ಟವರ್‌ ರೇಡಿಯೋ ಸ್ಟೇಷನ್‌ ಬೈಬಲ್‌ ಭಾಷಣಗಳನ್ನು ಪ್ರಸಾರಮಾಡುತ್ತಿದೆ ಎಂಬುದು ನನಗೆ ಸ್ವಲ್ಪದರಲ್ಲೇ ತಿಳಿದುಬಂತು. ನಾನು ಈ ಭಾಷಣಗಳಿಗೆ ತೀವ್ರಾಸಕ್ತಿಯಿಂದ ಕಿವಿಗೊಡುತ್ತಿದ್ದೆ, ಮತ್ತು ನನ್ನ ಆಸಕ್ತಿಯು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ನನ್ನನ್ನು ಭೇಟಿಯಾಗುವಂತೆ ನಾನು ಸಾಕ್ಷಿಗಳ ಬಳಿ ವಿನಂತಿಸಿಕೊಂಡೆ. ಇಸವಿ 1957ರ ನವೆಂಬರ್‌ ತಿಂಗಳಿನಲ್ಲಿ, ಜಾರ್ಜ್‌ ಬ್ಲ್ಯಾಂಟನ್‌ ಅವರು ನನ್ನ ಮನೆಗೆ ಭೇಟಿ ನೀಡಿ, ನನ್ನೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಿದರು.

ನಮ್ಮ ಕುಟುಂಬವು ಶುದ್ಧಾರಾಧನೆಯಲ್ಲಿ ಐಕ್ಯವಾಗತೊಡಗಿದ್ದು

ಇದನ್ನೆಲ್ಲ ನೋಡಿ ಆ್ಯನ್‌ಗೆ ಯಾವ ಅನಿಸಿಕೆಯಾಯಿತು? ಅವಳೇ ನಿಮಗೆ ಹೇಳಲಿ.

“ಆರಂಭದಲ್ಲಿ ನಾನು ಕಟುವಾಗಿ ವಿರೋಧಿಸಿದೆ. ಜಾರ್ಜ್‌ರವರ ಬೈಬಲ್‌ ಅಧ್ಯಯನದ ಸಮಯದಲ್ಲಿ ನಾನು ಎಷ್ಟರ ಮಟ್ಟಿಗೆ ಅಡ್ಡಿಮಾಡುತ್ತಿದ್ದೆನೆಂದರೆ, ಬೇರೊಂದು ಸ್ಥಳದಲ್ಲಿ ಅಧ್ಯಯನವನ್ನು ಮುಂದುವರಿಸಲು ಅವರು ನಿರ್ಧರಿಸಿದರು. ಸುಮಾರು ಎಂಟು ತಿಂಗಳುಗಳ ವರೆಗೆ ಹೀಗೇ ನಡೆಯಿತು. ಆ ಸಮಯದಲ್ಲೇ ಜಾರ್ಜ್‌ ರಾಜ್ಯ ಸಭಾಗೃಹದಲ್ಲಿ ಭಾನುವಾರಗಳಂದು ನಡೆಯುತ್ತಿದ್ದ ಕೂಟಗಳಿಗೆ ಹಾಜರಾಗಲಾರಂಭಿಸಿದರು. ಜಾರ್ಜ್‌ ತನ್ನ ಬೈಬಲ್‌ ಅಧ್ಯಯನದ ವಿಷಯದಲ್ಲಿ ತುಂಬ ಗಂಭೀರ ನಿರ್ಧಾರವನ್ನು ತಾಳಿದ್ದಾರೆ ಎಂಬುದು ಆಗ ನನಗೆ ಮನವರಿಕೆಯಾಯಿತು, ಏಕೆಂದರೆ ಅವರಿಗೆ ರಜೆಯಿದ್ದದ್ದು ಕೇವಲ ಆ ದಿನ ಮಾತ್ರ. ಇಷ್ಟೆಲ್ಲಾ ಆದರೂ ಅವರು ಮಾತ್ರ ಒಳ್ಳೇ ಪತಿ ಹಾಗೂ ತಂದೆಯಾಗಿಯೇ ಉಳಿದರು; ಈಗಂತೂ ಇನ್ನೂ ಒಳ್ಳೆಯವರಾಗಿದ್ದಾರೆ ಎಂದು ನನಗನಿಸಿತು ಮತ್ತು ನನ್ನ ಮನೋಭಾವವು ಬದಲಾಗತೊಡಗಿತು. ವಾಸ್ತವದಲ್ಲಿ, ಕಾಫಿ ಟೇಬಲನ್ನು ಒರೆಸುತ್ತಿರುವಾಗ, ಕೆಲವೊಮ್ಮೆ ಯಾರೂ ನೋಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಜಾರ್ಜ್‌ ಯಾವಾಗಲೂ ಅಲ್ಲಿ ಇಟ್ಟು ಹೋಗುತ್ತಿದ್ದ ಎಚ್ಚರ! ಪತ್ರಿಕೆಯನ್ನು ನಾನು ತೆಗೆದುಕೊಂಡು ಓದುತ್ತಿದ್ದೆ. ಬೇರೆ ಸಮಯಗಳಲ್ಲಿ, ಮೂಲಸಿದ್ಧಾಂತದೊಂದಿಗೆ ನೇರವಾಗಿ ಸಂಬಂಧಿಸಿರದಿದ್ದರೂ ಸೃಷ್ಟಿಕರ್ತನ ಕುರಿತು ಯಾವಾಗಲೂ ಒತ್ತಿಹೇಳುತ್ತಿದ್ದಂಥ ಎಚ್ಚರ! ಪತ್ರಿಕೆಯ ಲೇಖನಗಳನ್ನು ಜಾರ್ಜ್‌ ನನಗೆ ಓದಿಹೇಳುತ್ತಿದ್ದರು.

“ಒಂದು ದಿನ ಸಾಯಂಕಾಲ ಸಹೋದರ ಬ್ಲ್ಯಾಂಟನ್‌ರೊಂದಿಗಿನ ಬೈಬಲ್‌ ಅಧ್ಯಯನಕ್ಕಾಗಿ ಜಾರ್ಜ್‌ ಹೊರಗೆಹೋಗಿದ್ದಾಗ, ನಮ್ಮ ಎರಡು ವರ್ಷ ಪ್ರಾಯದ ಮಗನಾಗಿದ್ದ ಜಾರ್ಜ್‌ ನನ್ನ ಹಾಸಿಗೆಯ ಪಕ್ಕದಲ್ಲಿದ್ದ ಟೇಬಲಿನ ಮೇಲೆ ಹಾಕಿದ್ದ ಒಂದು ಪ್ರಕಾಶನವನ್ನು ನಾನು ಕೈಗೆತ್ತಿಕೊಂಡೆ. ಮೃತರಿಗಾಗಿರುವ ನಿರೀಕ್ಷೆಯ ಕುರಿತಾದ ಸಂದೇಶ ಅದರಲ್ಲಿತ್ತು. ನಾನು ತುಂಬ ದಣಿದಿದ್ದೆನಾದರೂ ಅದನ್ನು ಓದಲು ಆರಂಭಿಸಿದೆ, ಏಕೆಂದರೆ ಸ್ವಲ್ಪ ಸಮಯಾವಧಿಗೆ ಮುಂಚೆಯಷ್ಟೇ ನನ್ನ ಅಜ್ಜಿ ತೀರಿಕೊಂಡಿದ್ದರು ಮತ್ತು ಇದರಿಂದ ನಾನು ತುಂಬ ಎದೆಗುಂದಿದ್ದೆ. ಮೃತರು ಎಲ್ಲಿಯೋ ಒಂದು ಕಡೆ ಕಷ್ಟವನ್ನು ಅನುಭವಿಸುತ್ತಿಲ್ಲ ಮತ್ತು ಭಾವೀ ಪುನರುತ್ಥಾನದಲ್ಲಿ ಅವರು ಪುನಃ ಉಜ್ಜೀವಿಸುವರು ಎಂಬ ಬೈಬಲ್‌ ಸತ್ಯವನ್ನು ನಾನು ಆ ಕೂಡಲೆ ನೋಡಿದೆ ಮತ್ತು ಅದನ್ನು ಅರ್ಥಮಾಡಿಕೊಂಡೆ. ನಂತರ ನಾನು ಹಾಸಿಗೆಯಲ್ಲೇ ಕುಳಿತುಕೊಂಡು ಆಸಕ್ತಿಯಿಂದ ಓದತೊಡಗಿದೆ ಮತ್ತು ಜಾರ್ಜ್‌ ತಮ್ಮ ಬೈಬಲ್‌ ಅಧ್ಯಯನದಿಂದ ಹಿಂದಿರುಗಿ ಬಂದಾಗ ನಾನು ಅವರಿಗೆ ತೋರಿಸಲು ಬಯಸಿದಂಥ ಅಂಶಗಳಿಗೆ ಅಡಿಗೆರೆಹಾಕಿದೆ.

“ನನ್ನಲ್ಲಾಗಿರುವ ಬದಲಾವಣೆಯನ್ನು ನೋಡಿ ನನ್ನ ಗಂಡನಿಗೆ ನಂಬಲಾಗಲಿಲ್ಲ. ಅವರು ಮನೆಯಿಂದ ಹೊರಟಾಗ ನಾನು ವಿರೋಧಿಸಿದ್ದೆ, ಆದರೆ ಈಗ ನಾನು ಕಲಿತಂಥ ಅದ್ಭುತಕರ ಬೈಬಲ್‌ ಸತ್ಯಗಳ ಕುರಿತು ರೋಮಾಂಚನಗೊಂಡಿದ್ದೆ! ನಾವು ಮಧ್ಯರಾತ್ರಿಯ ತನಕವೂ ಬೈಬಲಿನ ಕುರಿತು ಮಾತಾಡುತ್ತಾ ಇದ್ದೆವು. ಭೂಮಿಯ ಕಡೆಗಿನ ದೇವರ ಉದ್ದೇಶವನ್ನು ಜಾರ್ಜ್‌ ನನಗೆ ವಿವರಿಸಿದರು. ನಾನು ಸಹ ಅಧ್ಯಯನದಲ್ಲಿ ಜೊತೆಗೂಡಲು ಸಾಧ್ಯವಾಗುವಂತೆ, ಅವರ ಅಧ್ಯಯನವನ್ನು ನಮ್ಮ ಮನೆಯಲ್ಲಿ ನಡೆಸಸಾಧ್ಯವಿದೆಯೊ ಎಂದು ನಾನು ಅದೇ ರಾತ್ರಿ ಅವರನ್ನು ಕೇಳಿದೆ.

“ಅಧ್ಯಯನದ ಸಮಯದಲ್ಲಿ ಮಕ್ಕಳನ್ನೂ ಕುಳ್ಳಿರಿಸುವಂತೆ ಸಹೋದರ ಬ್ಲ್ಯಾಂಟನ್‌ ಸಲಹೆ ನೀಡಿದರು. ನಮ್ಮ ಮಕ್ಕಳು ಕೇವಲ ಎರಡು ಮತ್ತು ನಾಲ್ಕು ವರ್ಷ ಪ್ರಾಯದವರಾಗಿದ್ದರಿಂದ, ಅವರಿನ್ನೂ ತುಂಬ ಚಿಕ್ಕವರು ಎಂದು ನಾವು ನೆನಸಿದೆವು. ಆದರೂ, ಸಹೋದರ ಬ್ಲ್ಯಾಂಟನ್‌ ನಮಗೆ ಧರ್ಮೋಪದೇಶಕಾಂಡ 31:12ನ್ನು ತೋರಿಸಿದರು. ಅದು ಹೇಳುವುದು: ‘ಜನರೆಲ್ಲರೂ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀಪುರುಷರನ್ನೂ ಮಕ್ಕಳನ್ನೂ ಕೂಡಿಸಬೇಕು.’ ಈ ಮಾರ್ಗದರ್ಶನವನ್ನು ನಾವು ಗಣ್ಯಮಾಡಿದೆವು ಮತ್ತು ಬೈಬಲ್‌ ಅಧ್ಯಯನದ ಸಮಯದಲ್ಲಿ ಮಕ್ಕಳು ಉತ್ತರಿಸುವಂತೆ ಏರ್ಪಾಡನ್ನೂ ಮಾಡಿದೆವು. ನಾವು ಒಟ್ಟಿಗೆ ಸೇರಿಕೊಂಡು ಹೇಳಿಕೆಗಳನ್ನು ತಯಾರಿಸುತ್ತಿದ್ದೆವಾದರೂ, ಏನು ಹೇಳಬೇಕು ಎಂಬುದನ್ನು ಮಾತ್ರ ನಾವೆಂದೂ ಅವರಿಗೆ ಹೇಳಿಕೊಡಲಿಲ್ಲ. ಇದು, ನಮ್ಮ ಮಕ್ಕಳು ಸತ್ಯವನ್ನು ತಮ್ಮದಾಗಿ ಮಾಡಿಕೊಳ್ಳುವುದರ ಕಡೆಗೆ ಅವರನ್ನು ಮಾರ್ಗದರ್ಶಿಸಲು ಸಹಾಯಮಾಡಿತು ಎಂಬುದು ನಮ್ಮ ಅನಿಸಿಕೆ. ನಮ್ಮ ಕುಟುಂಬವು ಆಧ್ಯಾತ್ಮಿಕವಾಗಿ ಬೆಳೆಯುವಂತೆ ಸಹಾಯಮಾಡಲಿಕ್ಕಾಗಿ ಸಹೋದರ ಬ್ಲ್ಯಾಂಟನ್‌ರವರು ನಮಗೆ ಕೊಟ್ಟ ಮಾರ್ಗದರ್ಶನವನ್ನು ನಾವು ಸದಾ ಗಣ್ಯಮಾಡುವೆವು.”

ತ್ಯಾಗವನ್ನು ಅಗತ್ಯಪಡಿಸುವ ಪಂಥಾಹ್ವಾನಗಳು

ಈಗ ನಾವು ಐಕ್ಯವಾಗಿ ಬೈಬಲನ್ನು ಅಧ್ಯಯನ ಮಾಡುತ್ತಿದ್ದೆವು, ಆದರೆ ನಾವು ಹೊಸ ಪಂಥಾಹ್ವಾನಗಳನ್ನು ಎದುರಿಸಬೇಕಾಯಿತು. ನನ್ನ ಅಂಗಡಿಯು ತುಂಬ ದೂರದಲ್ಲಿದ್ದುದರಿಂದ, ಸಾಮಾನ್ಯವಾಗಿ ನನಗೆ ರಾತ್ರಿ ಒಂಬತ್ತು ಗಂಟೆಗೆ ಮುಂಚೆ ಮನೆಗೆ ಬರಲಾಗುತ್ತಿರಲಿಲ್ಲ. ಈ ಕಾರಣದಿಂದ, ಭಾನುವಾರಗಳಂದು ನಡೆಯುವ ಕೂಟಕ್ಕೆ ಹಾಜರಾಗಸಾಧ್ಯವಿತ್ತಾದರೂ, ವಾರದಲ್ಲಿ ನಡೆಯುವ ಕೂಟಗಳಿಗೆ ಹಾಜರಾಗಲು ಅಶಕ್ತನಾಗಿದ್ದೆ. ಇಷ್ಟರಲ್ಲಾಗಲೇ ಆ್ಯನ್‌ ಎಲ್ಲಾ ಕೂಟಗಳಿಗೆ ಹಾಜರಾಗುತ್ತಿದ್ದಳು ಮತ್ತು ತೀವ್ರಗತಿಯಲ್ಲಿ ಪ್ರಗತಿಯನ್ನು ಮಾಡುತ್ತಿದ್ದಳು. ನಾನು ಸಹ ಎಲ್ಲಾ ಕೂಟಗಳಿಗೆ ಹಾಜರಾಗಲು ಮತ್ತು ಅರ್ಥಭರಿತ ಕುಟುಂಬ ಅಧ್ಯಯನವನ್ನು ನಡೆಸಲು ಬಯಸುತ್ತಿದ್ದೆ. ನಾನು ಕೆಲವೊಂದು ತ್ಯಾಗಗಳನ್ನು ಮಾಡಬೇಕಾಗಿದೆ ಎಂಬುದು ನನಗೆ ಗೊತ್ತಿತ್ತು. ಆದುದರಿಂದಲೇ ನನ್ನ ವ್ಯಾಪಾರದ ತಾಸುಗಳನ್ನು ಕಡಿಮೆಗೊಳಿಸಲು ನಿರ್ಧರಿಸಿದೆ; ಇದಕ್ಕಾಗಿ ನಾನು ಕೆಲವು ಗಿರಾಕಿಗಳನ್ನು ಕಳೆದುಕೊಳ್ಳಲು ಸಹ ಸಿದ್ಧನಾಗಿದ್ದೆ.

ಈ ಏರ್ಪಾಡು ಪ್ರಯೋಜನದಾಯಕವಾಗಿತ್ತು. ನಮ್ಮ ಕುಟುಂಬ ಅಧ್ಯಯನವನ್ನು ನಾವು ರಾಜ್ಯ ಸಭಾಗೃಹದಲ್ಲಿ ನಡೆಸಲ್ಪಡುತ್ತಿದ್ದ ಇತರ ಐದು ಸಾಪ್ತಾಹಿಕ ಕೂಟಗಳಷ್ಟೇ ಗಂಭೀರವಾಗಿ ಪರಿಗಣಿಸುತ್ತಿದ್ದೆವು. ನಾವು ಇದನ್ನು ಆರನೆಯ ಕೂಟ ಎಂದೇ ಕರೆಯುತ್ತಿದ್ದೆವು. ಆದುದರಿಂದ ನಾವು ಒಂದು ನಿರ್ದಿಷ್ಟ ದಿನ ಹಾಗೂ ಸಮಯವನ್ನು ಗೊತ್ತುಪಡಿಸಿದೆವು; ಪ್ರತಿ ಬುಧವಾರ ರಾತ್ರಿ 8 ಗಂಟೆಗೆ ಇದು ನಡೆಸಲ್ಪಡುತ್ತಿತ್ತು. ಕೆಲವೊಮ್ಮೆ ರಾತ್ರಿಯೂಟದ ಬಳಿಕ ಪಾತ್ರೆಗಳನ್ನು ತೊಳೆದಾದ ನಂತರ, ನಮ್ಮಲ್ಲಿ ಒಬ್ಬರು “‘ಕೂಟ’ದ ಸಮಯವಾಯಿತು!” ಎಂದು ಹೇಳುತ್ತಿದ್ದೆವು. ನಾನು ಬರಲು ತಡವಾದಲ್ಲಿ ಆ್ಯನ್‌ ಅಧ್ಯಯನವನ್ನು ಆರಂಭಿಸುತ್ತಿದ್ದಳು, ಮತ್ತು ನಾನು ಬಂದ ಕೂಡಲೆ ನಾನದನ್ನು ಮುಂದುವರಿಸುತ್ತಿದ್ದೆ.

ಒಂದು ಕುಟುಂಬದೋಪಾದಿ ನಮ್ಮನ್ನು ಬಲವಾಗಿ ಹಾಗೂ ಐಕ್ಯವಾಗಿ ಇರಿಸಿದ ಇನ್ನೊಂದು ವಿಚಾರವು, ಬೆಳಗ್ಗೆ ಒಟ್ಟಿಗೆ ದೈನಂದಿನ ವಚನವನ್ನು ಪರಿಗಣಿಸುವುದೇ ಆಗಿತ್ತು. ಆದರೂ, ಇದನ್ನು ಏರ್ಪಡಿಸುವ ವಿಷಯದಲ್ಲಿ ಒಂದು ಸಮಸ್ಯೆಯಿತ್ತು, ಏಕೆಂದರೆ ನಾವು ಬೇರೆ ಬೇರೆ ಸಮಯಗಳಲ್ಲಿ ಏಳುತ್ತಿದ್ದೆವು. ಈ ವಿಷಯದ ಕುರಿತು ಚರ್ಚಿಸಿ, ನಾವೆಲ್ಲರೂ ಒಂದೇ ಸಮಯದಲ್ಲಿ ಏಳಬೇಕೆಂದೂ 6:30ಕ್ಕೆ ಬೆಳಗಿನ ಉಪಾಹಾರವನ್ನು ತಿನ್ನಬೇಕೆಂದೂ ಹಾಗೂ ದೈನಂದಿನ ವಚನವನ್ನು ಒಟ್ಟಿಗೆ ಪರಿಗಣಿಸಬೇಕೆಂದೂ ನಿರ್ಧರಿಸಿದೆವು. ಈ ಏರ್ಪಾಡು ತುಂಬ ಲಾಭದಾಯಕವಾಗಿ ಪರಿಣಮಿಸಿತು. ನಮ್ಮ ಗಂಡುಮಕ್ಕಳು ದೊಡ್ಡವರಾದಾಗ, ಅವರು ಬೆತೆಲ್‌ ಸೇವೆಯನ್ನು ಆರಂಭಿಸುವ ಆಯ್ಕೆಮಾಡಿದರು. ಈ ದೈನಂದಿನ ಚರ್ಚೆಗಳು ಅವರ ಆಧ್ಯಾತ್ಮಿಕತೆಗೆ ಸಹಾಯಮಾಡಿದವು ಎಂದು ನಮಗನಿಸಿತು.

ದೀಕ್ಷಾಸ್ನಾನದ ಬಳಿಕ ದೊರಕಿದ ಸುಯೋಗಗಳು ಇನ್ನೂ ಹೆಚ್ಚಿನ ತ್ಯಾಗವನ್ನು ಅಗತ್ಯಪಡಿಸಿದವು

ನಾನು 1962ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ, ಮತ್ತು 21 ವರ್ಷಗಳ ವರೆಗೆ ನನ್ನ ಸ್ವಂತ ವ್ಯಾಪಾರವನ್ನು ನಡೆಸಿದ ಬಳಿಕ ನಾನು ಅಂಗಡಿಯನ್ನು ಮಾರಿದೆ ಮತ್ತು ಸ್ಥಳಿಕವಾಗಿ ಒಂದು ಕೆಲಸಕ್ಕೆ ಸೇರಿದೆ; ಇದರಿಂದ ನಾವೆಲ್ಲರೂ ಒಟ್ಟಿಗೆ ಯೆಹೋವನ ಸೇವೆಮಾಡಸಾಧ್ಯವಾಗುವಂತೆ ನನ್ನ ಕುಟುಂಬಕ್ಕೆ ನಿಕಟವಾಗಿರಲು ಅವಕಾಶ ಸಿಕ್ಕಿತು. ಇದು ಅನೇಕ ಆಶೀರ್ವಾದಗಳಿಗೆ ಎಡೆಮಾಡಿಕೊಟ್ಟಿತು. ನಾವೆಲ್ಲರೂ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸುವ ಗುರಿಯನ್ನಿಟ್ಟೆವು. ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿದ ಕೂಡಲೆ, 1970ಗಳ ಆರಂಭದಲ್ಲಿ ನಮ್ಮ ಹಿರಿಯ ಮಗನಾದ ಎಡ್ವರ್ಡ್‌ ಒಬ್ಬ ಪೂರ್ಣ ಸಮಯದ ಶುಶ್ರೂಷಕ ಅಥವಾ ರೆಗ್ಯುಲರ್‌ ಪಯನೀಯರ್‌ ಆದಾಗ ಇದು ಆರಂಭಗೊಂಡಿತು. ತದನಂತರ ನಮ್ಮ ಮಗನಾದ ಜಾರ್ಜ್‌ ಪಯನೀಯರ್‌ ಸೇವೆಯನ್ನು ಆರಂಭಿಸಿದನು; ಇವನ ನಂತರ ಆ್ಯನ್‌ ಸಹ ಪಯನೀಯರಿಂಗ್‌ ಮಾಡತೊಡಗಿದಳು. ಈ ಮೂವರಿಂದ ನಾನು ತುಂಬ ಉತ್ತೇಜಿತನಾದೆ, ಏಕೆಂದರೆ ಕ್ಷೇತ್ರ ಸೇವೆಯಲ್ಲಿ ತಮಗಾದ ಅನುಭವಗಳ ಕುರಿತು ಇವರು ನನಗೆ ಹೇಳುತ್ತಿದ್ದರು. ನಾವೆಲ್ಲರೂ ಪೂರ್ಣ ಸಮಯದ ಸೇವೆಯಲ್ಲಿ ಇರಸಾಧ್ಯವಾಗುವಂತೆ ನಮ್ಮ ಜೀವನವನ್ನು ಹೇಗೆ ಸರಳೀಕರಿಸಬಹುದು ಎಂಬುದನ್ನು ನಾವು ಕುಟುಂಬವಾಗಿ ಚರ್ಚಿಸಿದೆವು. ನಮ್ಮ ಮನೆಯನ್ನು ಮಾರಲು ನಿರ್ಧರಿಸಿದೆವು. ನಾವು 18 ವರ್ಷಗಳಿಂದ ಈ ಮನೆಯಲ್ಲಿ ವಾಸಿಸುತ್ತಿದ್ದೆವು ಮತ್ತು ನಮ್ಮ ಕುಟುಂಬವು ಬೆಳೆದದ್ದೂ ಇಲ್ಲಿಯೇ. ನಮ್ಮ ಮನೆಯನ್ನು ನಾವು ತುಂಬ ಇಷ್ಟಪಡುತ್ತಿದ್ದೆವು, ಆದರೆ ಇದನ್ನು ಮಾರಲಿಕ್ಕಾಗಿರುವ ನಮ್ಮ ನಿರ್ಧಾರವನ್ನು ಯೆಹೋವನು ಆಶೀರ್ವದಿಸಿದನು.

ಇಸವಿ 1972ರಲ್ಲಿ ಎಡ್ವರ್ಡ್‌ ಮತ್ತು 1974ರಲ್ಲಿ ಜಾರ್ಜ್‌ ಬೆತೆಲಿಗೆ ಆಮಂತ್ರಿಸಲ್ಪಟ್ಟರು. ನನಗೆ ಮತ್ತು ಆ್ಯನ್‌ಗೆ ಅವರು ಮನೆಯಲ್ಲಿಲ್ಲ ಎಂಬ ಅನಿಸಿಕೆ ಮನಸ್ಸಿಗೆ ನೋವನ್ನುಂಟುಮಾಡುತ್ತದಾದರೂ, ಅವರು ನಮ್ಮ ನೆರೆಹೊರೆಯಲ್ಲೇ ಇದ್ದು, ಮದುವೆಮಾಡಿಕೊಂಡು ಮಕ್ಕಳನ್ನು ಪಡೆದಿದ್ದರೆ ಎಷ್ಟು ಒಳ್ಳೇದಿತ್ತು ಎಂದು ನಾವೆಂದೂ ನೆನಸಲಿಲ್ಲ. ಅದಕ್ಕೆ ಬದಲಾಗಿ, ನಮ್ಮ ಮಕ್ಕಳು ಬೆತೆಲ್‌ನಲ್ಲಿ ಯೆಹೋವನ ಸೇವೆಮಾಡುತ್ತಿರುವುದಕ್ಕಾಗಿ ತುಂಬ ಹರ್ಷಿಸಿದೆವು. * ನಾವು ಜ್ಞಾನೋಕ್ತಿ 23:15ರೊಂದಿಗೆ ಸಮ್ಮತಿಸುತ್ತೇವೆ; ಅದು ಹೀಗೆ ಹೇಳುತ್ತದೆ: “ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ ನನ್ನ ಮನಸ್ಸಿಗೂ ಉಲ್ಲಾಸವಾಗುವದು.”

ನಾವು ವಿಶೇಷ ಪಯನೀಯರ್‌ ಸೇವೆಯನ್ನು ಆರಂಭಿಸಿದ್ದು

ನಮ್ಮ ಇಬ್ಬರೂ ಗಂಡುಮಕ್ಕಳು ಬೆತೆಲ್‌ನಲ್ಲಿದ್ದುದರಿಂದ ನಾವು ಪಯನೀಯರ್‌ ಸೇವೆಯನ್ನು ಮುಂದುವರಿಸಿದೆವು. ನಂತರ 1975ರಲ್ಲಿ ಒಂದು ದಿನ, ಇಲಿನ್ವಾಯ್‌ ಕ್ಲಿಂಟನ್‌ ಕೌಂಟಿಯಲ್ಲಿನ ಅನೇಮಿತ ಟೆರಿಟೊರಿಯಲ್ಲಿ ಸ್ಪೆಷಲ್‌ ಪಯನೀಯರ್‌ ಸೇವೆಯನ್ನು ಆರಂಭಿಸುವಂತೆ ನಮ್ಮನ್ನು ಆಮಂತ್ರಿಸಿದ ಪತ್ರವೊಂದನ್ನು ನಾವು ಪಡೆದುಕೊಂಡೆವು. ಇದೆಂಥ ಅನಿರೀಕ್ಷಿತ ಸಂಗತಿಯಾಗಿತ್ತು! ಇದರ ಅರ್ಥ, ಎಲ್ಲಿ ನಾವು ನ್ಯೂ ಯಾರ್ಕಿನಲ್ಲಿರುವ ನಮ್ಮ ಮಕ್ಕಳಿಗೆ ಹತ್ತಿರದಲ್ಲಿರಲು ಶಕ್ತರಾಗಿದ್ದೆವೋ ಮತ್ತು ಎಲ್ಲಿ ನಮಗೆ ಸ್ನೇಹಿತರು ಹಾಗೂ ಸಂಬಂಧಿಕರು ಇದ್ದರೋ ಆ ನ್ಯೂ ಜೆರ್ಸಿಯನ್ನು ನಾವು ಬಿಟ್ಟುಹೋಗಬೇಕಾಗಿತ್ತು. ಆದರೂ, ನಾವಿದನ್ನು ಯೆಹೋವನಿಂದ ಕೊಡಲ್ಪಟ್ಟ ನೇಮಕವಾಗಿ ಸ್ವೀಕರಿಸಿದೆವು ಮತ್ತು ತ್ಯಾಗವನ್ನು ಮಾಡಿದೆವು; ಇದು ನಮ್ಮನ್ನು ಹೊಸ ಆಶೀರ್ವಾದಗಳಿಗೆ ಮುನ್ನಡಿಸಿತು.

ಅನೇಕ ತಿಂಗಳುಗಳ ವರೆಗೆ ಅನೇಮಿತ ಟೆರಿಟೊರಿಯಲ್ಲಿ ಸೇವೆಮಾಡಿದ ಬಳಿಕ, ಇಲಿನ್ವಾಯ್‌ಯ ಕಾರ್‌ಲೈಲ್‌ನಲ್ಲಿನ ಸಮುದಾಯ ಭವನವೊಂದರಲ್ಲಿ ಕೂಟಗಳನ್ನು ನಡೆಸಲಾರಂಭಿಸಿದೆವು. ಆದರೆ ನಾವು ಕೂಟವಾಗಿ ಕೂಡಿಬರಲಿಕ್ಕಾಗಿ ಒಂದು ಕಾಯಂ ಸ್ಥಳದ ಅಗತ್ಯವಿತ್ತು. ಒಬ್ಬ ಸ್ಥಳಿಕ ಸಹೋದರನೂ ಅವನ ಹೆಂಡತಿಯೂ ಸೇರಿಕೊಂಡು ಒಂದು ಸಣ್ಣ ಮನೆಯಿದ್ದ ಸ್ಥಳವೊಂದನ್ನು ಕಂಡುಕೊಂಡರು. ಇದರಿಂದ ನಾವು ಇದನ್ನು ಬಾಡಿಗೆಗೆ ತೆಗೆದುಕೊಳ್ಳಲು ಸಾಧ್ಯವಾಯಿತು. ನಾವು ಇಡೀ ಮನೆಯನ್ನು ಹಾಗೂ ಹೊರಗಿದ್ದ ಶೌಚಾಲಯವನ್ನು ಸ್ಪಚ್ಛಗೊಳಿಸಿದೆವು ಮತ್ತು ಇದನ್ನು ಒಂದು ಚಿಕ್ಕ ಕೂಟದ ಸ್ಥಳವಾಗಿ ಮಾರ್ಪಡಿಸಿದೆವು. ನಮ್ಮ ಕುರಿತು ಕುತೂಹಲಭರಿತವಾಗಿದ್ದ ಒಂದು ಕುದುರೆಯನ್ನು ನಾವು ಈಗಲೂ ಅಕ್ಕರೆಯಿಂದ ನೆನಪಿಸಿಕೊಳ್ಳುತ್ತೇವೆ. ಕೂಟದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲಿಕ್ಕಾಗಿ ಅದು ಅನೇಕವೇಳೆ ಕಿಟಕಿಯ ಮೂಲಕ ತಲೆಯನ್ನು ತೂರಿಸಿ ಇಣಿಕಿ ನೋಡುತ್ತಿತ್ತು!

ಸಕಾಲದಲ್ಲಿ, ಕಾರ್‌ಲೈಲ್‌ ಸಭೆಯು ಸ್ಥಾಪಿಸಲ್ಪಟ್ಟಿತು, ಮತ್ತು ಇದರಲ್ಲಿ ನಾವು ಪಾಲ್ಗೊಂಡದ್ದಕ್ಕಾಗಿ ನಮಗೆ ತುಂಬ ಸಂತೋಷವಾಯಿತು. ಅನೇಮಿತ ಟೆರಿಟೊರಿಯಲ್ಲಿ ಕೆಲಸಮಾಡಲಿಕ್ಕಾಗಿ ಬಂದಿದ್ದ ಸ್ಟೀವ್‌ ಹಾಗೂ ಕ್ಯಾರಲ್‌ ಥಾಮ್ಸನ್‌ ಎಂಬ ಯುವ ಪಯನೀಯರ್‌ ದಂಪತಿಯು ನಮಗೆ ಸಹಾಯಕರಾಗಿದ್ದರು. ಥಾಮ್ಸನ್‌ ದಂಪತಿಗಳು ಇಲ್ಲಿ ಅನೇಕ ವರ್ಷಗಳ ವರೆಗೆ ಉಳಿದರು ಮತ್ತು ಸಮಯಾನಂತರ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ಗೆ ಹಾಜರಾದರು ಹಾಗೂ ಪೂರ್ವ ಆಫ್ರಿಕದಲ್ಲಿನ ಮಿಷನೆರಿ ನೇಮಕಕ್ಕೆ ಸ್ಥಳಾಂತರಿಸಿದರು. ಅಲ್ಲಿ ಅವರು ಸಂಚರಣ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಅತಿ ಬೇಗನೆ ನಮ್ಮ ಚಿಕ್ಕ ಕೂಟದ ಸ್ಥಳವು ಜನರಿಂದ ಕಿಕ್ಕಿರಿಯತೊಡಗಿದ್ದರಿಂದ, ನಮಗೆ ದೊಡ್ಡ ಹಾಲ್‌ನ ಆವಶ್ಯಕತೆ ಉಂಟಾಯಿತು. ಈ ಮುಂಚೆ ತಿಳಿಸಲಾಗಿದ್ದ ಸ್ಥಳಿಕ ಸಹೋದರನೂ ಅವನ ಹೆಂಡತಿಯೂ ಪುನಃ ಸಹಾಯ ಹಸ್ತವನ್ನು ಚಾಚಿದರು, ಮತ್ತು ರಾಜ್ಯ ಸಭಾಗೃಹಕ್ಕೆ ಹೆಚ್ಚು ಸೂಕ್ತವಾಗಿದ್ದ ಸ್ಥಳವೊಂದನ್ನು ಖರೀದಿಸುವುದರಲ್ಲಿ ನೆರವಾದರು. ಕೆಲವು ವರ್ಷಗಳ ನಂತರ, ಕಾರ್‌ಲೈಲ್‌ನಲ್ಲಿ ಹೊಸದಾಗಿ ಕಟ್ಟಲ್ಪಟ್ಟಿದ್ದ ರಾಜ್ಯ ಸಭಾಗೃಹದ ಪ್ರತಿಷ್ಠಾಪನೆಗೆ ನಾವು ಆಮಂತ್ರಿಸಲ್ಪಟ್ಟಾಗ ನಮಗೆಷ್ಟು ಮಹದಾನಂದವಾಯಿತು! ಪ್ರತಿಷ್ಠಾಪನೆಯ ಭಾಷಣವನ್ನು ಕೊಡುವ ಸುಯೋಗ ನನಗೆ ಸಿಕ್ಕಿತು. ನಮ್ಮ ನೇಮಕವು ಒಂದು ಅದ್ಭುತಕರ ನೇಮಕವಾಗಿತ್ತು, ಯೆಹೋವನಿಂದ ಬಂದ ಒಂದು ಆಶೀರ್ವಾದವಾಗಿತ್ತು.

ಒಂದು ಹೊಸ ಕ್ಷೇತ್ರವು ತೆರೆಯಲ್ಪಟ್ಟದ್ದು

ಇಸವಿ 1979ರಲ್ಲಿ ನಾವು ನ್ಯೂ ಜೆರ್ಸಿಯ ಹ್ಯಾರಿಸನ್‌ನಲ್ಲಿ ಸೇವೆಮಾಡುವ ಒಂದು ಹೊಸ ನೇಮಕವನ್ನು ಪಡೆದೆವು. ಅಲ್ಲಿ ನಾವು ಸುಮಾರು 12 ವರ್ಷಗಳ ವರೆಗೆ ಸೇವೆಮಾಡಿದೆವು. ಆ ಸಮಯದಲ್ಲಿ ನಾವು ಒಬ್ಬ ಚೀನೀ ಸ್ತ್ರೀಯೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಿದೆವು, ಮತ್ತು ಇದು ಚೀನೀ ಜನರೊಂದಿಗೆ ಇನ್ನೂ ಅನೇಕ ಅಧ್ಯಯನಗಳನ್ನು ನಡೆಸುವಂತೆ ಮಾಡಿತು. ಈ ಮಧ್ಯೆ, ನಮ್ಮ ಕ್ಷೇತ್ರದಲ್ಲಿ ಸಾವಿರಾರು ಮಂದಿ ಚೀನೀ ವಿದ್ಯಾರ್ಥಿಗಳು ಹಾಗೂ ಕುಟುಂಬಗಳು ವಾಸಿಸುತ್ತಿವೆ ಎಂಬುದು ನಮಗೆ ತಿಳಿದುಬಂತು. ಈ ಕಾರಣದಿಂದಲೇ ಚೀನೀ ಭಾಷೆಯನ್ನು ಕಲಿಯುವ ಹುಮ್ಮಸ್ಸು ನಮ್ಮಲ್ಲಿ ಉಂಟಾಯಿತು. ಈ ಭಾಷೆಯನ್ನು ಕಲಿಯಲಿಕ್ಕಾಗಿ ಪ್ರತಿ ದಿನ ಸಮಯವನ್ನು ಬದಿಗಿರಿಸುವುದನ್ನು ಇದು ಅಗತ್ಯಪಡಿಸಿತಾದರೂ, ಇದರ ಫಲಿತಾಂಶವಾಗಿ ನಮ್ಮ ಕ್ಷೇತ್ರದಲ್ಲಿರುವ ಚೀನೀ ಜನರೊಂದಿಗೆ ಅನೇಕ ಹರ್ಷಭರಿತ ಬೈಬಲ್‌ ಅಧ್ಯಯನಗಳನ್ನು ನಡೆಸಲು ಸಾಧ್ಯವಾಯಿತು.

ಆ ವರ್ಷಗಳಲ್ಲಿ, ಚೀನೀ ಭಾಷೆಯನ್ನು ಮಾತಾಡುವ ನಮ್ಮ ಪ್ರಯತ್ನಗಳಲ್ಲಿ ನಮಗೆ ಅನೇಕ ತಮಾಷೆಯ ಸನ್ನಿವೇಶಗಳ ಅನುಭವವಾಯಿತು. ಒಂದು ದಿನ ಆ್ಯನ್‌ ತನ್ನನ್ನು ಬೈಬಲ್‌ “ಬೋಧಕಿ” ಎಂದು ಪರಿಚಯಿಸಿಕೊಳ್ಳುವುದಕ್ಕೆ ಬದಲಾಗಿ ಬೈಬಲ್‌ “ಇಲಿ” ಎಂದು ಪರಿಚಯಿಸಿಕೊಂಡಳು. ಏಕೆಂದರೆ ಇವೆರಡೂ ಪದಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆಗ ಮನೆಯಲ್ಲಿದ್ದ ವ್ಯಕ್ತಿ ನಸುನಗುತ್ತಾ ಹೇಳಿದ್ದು: “ದಯಮಾಡಿ ಒಳಗೆ ಬನ್ನಿ. ಈ ಮುಂಚೆ ನಾನೆಂದೂ ಬೈಬಲ್‌ ಇಲಿಯೊಂದಿಗೆ ಮಾತಾಡಿದ್ದೇ ಇಲ್ಲ.” ನಾವು ಚೀನೀ ಭಾಷೆಯನ್ನು ಕಲಿಯಲು ಇನ್ನೂ ಕಷ್ಟಪಡುತ್ತಿದ್ದೇವೆ.

ತದನಂತರ ನಾವು ನ್ಯೂ ಜೆರ್ಸಿಯಲ್ಲಿರುವ ಇನ್ನೊಂದು ಸ್ಥಳಕ್ಕೆ ನೇಮಿಸಲ್ಪಟ್ಟೆವು; ಅಲ್ಲಿನ ಚೀನೀ ಕ್ಷೇತ್ರದಲ್ಲಿ ನಾವು ಕೆಲಸವನ್ನು ಮುಂದುವರಿಸಲು ಶಕ್ತರಾಗಿದ್ದೆವು. ಅನಂತರ ನಮಗೆ ಎಲ್ಲಿ ಸುಮಾರು ಮೂರು ವರ್ಷಗಳಿಂದ ಒಂದು ಚೀನೀ ಗುಂಪು ವೃದ್ಧಿಯಾಗುತ್ತಿತ್ತೋ ಆ ಮ್ಯಾಸಚೂಸೆಟ್ಸ್‌ನ ಬಾಸ್ಟನ್‌ಗೆ ಸ್ಥಳಾಂತರಿಸುವಂತೆ ಕರೆಕೊಡಲಾಯಿತು. ಕಳೆದ ಏಳು ವರ್ಷಗಳಿಂದ ಈ ಗುಂಪಿಗೆ ಬೆಂಬಲವನ್ನು ನೀಡುವುದು ಮತ್ತು 2003ರ ಜನವರಿ 1ರಂದು ಅದು ಒಂದು ಸಭೆಯಾಗಿ ಪರಿಣಮಿಸುವುದನ್ನು ನೋಡುವುದು ನಮಗೆ ದೊರೆತಿರುವ ಸುಯೋಗವಾಗಿದೆ.

ಸ್ವತ್ಯಾಗದ ಜೀವನದಿಂದ ಬಂದ ಆಶೀರ್ವಾದಗಳು

ಮಲಾಕಿಯ 3:10ರಲ್ಲಿ, ಯೆಹೋವನು ಸ್ಥಳಹಿಡಿಯಲಾಗದಷ್ಟು ಸುವರಗಳನ್ನು ಸುರಿಸಸಾಧ್ಯವಾಗುವಂತೆ ತಮ್ಮ ಕಾಣಿಕೆಗಳನ್ನು ಹಾಗೂ ಯಜ್ಞಗಳನ್ನು ತರಲು ಆತನು ತನ್ನ ಜನರಿಗೆ ಕೊಟ್ಟ ಆಮಂತ್ರಣದ ಕುರಿತು ನಾವು ಓದುತ್ತೇವೆ. ನನಗೆ ತುಂಬ ಆಸಕ್ತಿಯಿದ್ದಂಥ ವ್ಯಾಪಾರವನ್ನು ನಾವು ಬಿಟ್ಟುಕೊಟ್ಟೆವು. ನಾವು ತುಂಬ ಪ್ರೀತಿಸುತ್ತಿದ್ದ ನಮ್ಮ ಮನೆಯನ್ನು ಮಾರಿಬಿಟ್ಟೆವು. ಮತ್ತು ಇನ್ನೂ ಅನೇಕ ವಿಷಯಗಳನ್ನು ತ್ಯಾಗಮಾಡಿದೆವು. ಆದರೂ, ನಮಗೆ ಸಿಕ್ಕಿರುವ ಆಶೀರ್ವಾದಗಳಿಗೆ ಹೋಲಿಸುವಾಗ ಈ ತ್ಯಾಗಗಳು ತೀರ ಕ್ಷುಲ್ಲಕವಾಗಿದ್ದವು.

ನಿಜವಾಗಿಯೂ ಯೆಹೋವನು ನಮ್ಮ ಮೇಲೆ ಎಷ್ಟು ಮಹತ್ತರವಾದ ಆಶೀರ್ವಾದಗಳನ್ನು ಸುರಿಸಿದ್ದಾನೆ! ನಮ್ಮ ಮಕ್ಕಳು ಸತ್ಯಕ್ಕೆ ಪ್ರತಿಕ್ರಿಯಿಸುವುದನ್ನು ನೋಡುವ ಸಂತೃಪ್ತಿ ನಮಗೆ ಸಿಕ್ಕಿತು, ಒಂದು ಜೀವರಕ್ಷಕ ಶುಶ್ರೂಷೆಯಲ್ಲಿ ಪೂರ್ಣ ಸಮಯ ಒಳಗೂಡುವ ಆನಂದವೂ ನಮಗೆ ಲಭ್ಯವಾಯಿತು, ಮತ್ತು ಯೆಹೋವನು ನಮ್ಮ ಆವಶ್ಯಕತೆಗಳ ಕುರಿತು ಕಾಳಜಿವಹಿಸಿರುವುದನ್ನೂ ನಾವು ನೋಡಿದ್ದೇವೆ. ಖಂಡಿತವಾಗಿಯೂ ನಮ್ಮ ಚಿಕ್ಕಪುಟ್ಟ ತ್ಯಾಗಗಳು ನಮಗೆ ಅನೇಕ ಆಶೀರ್ವಾದಗಳನ್ನು ತಂದಿವೆ!

[ಪಾದಟಿಪ್ಪಣಿ]

^ ಪ್ಯಾರ. 20 ಅವರು ಈಗಲೂ ಬೆತೆಲ್‌ನಲ್ಲಿ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುತ್ತಿದ್ದಾರೆ​—⁠ಎಡ್ವರ್ಡ್‌ ಮತ್ತು ಅವನ ಹೆಂಡತಿಯಾದ ಕಾನೀ ಪ್ಯಾಟರ್‌ಸನ್‌ನಲ್ಲಿ ಮತ್ತು ಜಾರ್ಜ್‌ ಹಾಗೂ ಅವನ ಹೆಂಡತಿಯಾದ ಗ್ರೇಸ್‌ ಬ್ರೂಕ್ಲಿನ್‌ನಲ್ಲಿ.

[ಪುಟ 25ರಲ್ಲಿರುವ ಚಿತ್ರ]

ಇಸವಿ 1991ರಲ್ಲಿ ಲುಯೀಸ್‌ ಮತ್ತು ಜಾರ್ಜ್‌ ಬ್ಲ್ಯಾಂಟನ್‌ರೊಂದಿಗೆ ಆ್ಯನ್‌

[ಪುಟ 26ರಲ್ಲಿರುವ ಚಿತ್ರ]

ಇಸವಿ 1983ರ ಜೂನ್‌ 4ರಂದು ಪ್ರತಿಷ್ಠಾಪಿಸಲ್ಪಟ್ಟ ಕಾರ್‌ಲೈಲ್‌ನಲ್ಲಿನ ರಾಜ್ಯ ಸಭಾಗೃಹ

[ಪುಟ 27ರಲ್ಲಿರುವ ಚಿತ್ರ]

ಹೊಸದಾಗಿ ರಚಿಸಲ್ಪಟ್ಟಿರುವ ಬಾಸ್ಟನ್‌ ಚೀನೀ ಸಭೆಯೊಂದಿಗೆ

[ಪುಟ 28ರಲ್ಲಿರುವ ಚಿತ್ರ]

ಎಡ್ವರ್ಡ್‌, ಕಾನೀ, ಜಾರ್ಜ್‌, ಮತ್ತು ಗ್ರೇಸ್‌ರೊಂದಿಗೆ