ನಾವು ಸಹಾಯಕ್ಕಾಗಿ ದೇವದೂತರಿಗೆ ಪ್ರಾರ್ಥಿಸಬೇಕೊ?
ನಾವು ಸಹಾಯಕ್ಕಾಗಿ ದೇವದೂತರಿಗೆ ಪ್ರಾರ್ಥಿಸಬೇಕೊ?
ವಿಪತ್ತಿನ ಸಮಯಗಳಲ್ಲಿ ದೇವದೂತರಿಗೆ ಪ್ರಾರ್ಥಿಸುವುದು ಸರಿಯಾಗಿದೆಯೋ? ಸರಿಯಾಗಿದೆ ಎಂದು ಅನೇಕರು ನೆನಸುತ್ತಾರೆ. ವಾಸ್ತವದಲ್ಲಿ, ನ್ಯೂ ಕ್ಯಾಥೊಲಿಕ್ ಎನ್‌ಸೈಕ್ಲಪೀಡೀಯವು ಹೇಳುವುದು: “ಒಬ್ಬನು . . . ದೇವದೂತರಿಗೆ ಪ್ರಾರ್ಥಿಸುತ್ತಾನೆ . . . ಆದರೆ ನಮ್ಮ ಪರವಾಗಿ ಅವರು ದೇವರ ಮುಂದೆ ಮಧ್ಯಸ್ಥಿಕೆ ವಹಿಸಬಹುದು ಎಂಬರ್ಥದಲ್ಲಿ ಮಾತ್ರ.” ಹಾಗಾದರೆ ನಮ್ಮ ಪರವಾಗಿ ಮಧ್ಯಸ್ಥಿಕೆ ವಹಿಸಲಿಕ್ಕಾಗಿ ನಾವು ದೇವದೂತರಿಗೆ ಪ್ರಾರ್ಥಿಸಬೇಕೊ?
ದೇವರ ನಂಬಿಗಸ್ತ ದೇವದೂತರಲ್ಲಿ ಇಬ್ಬರ ಹೆಸರನ್ನು ಮಾತ್ರ ದೇವರ ವಾಕ್ಯವು ಒದಗಿಸುತ್ತದೆ. (ದಾನಿಯೇಲ 8:16; 12:1; ಲೂಕ 1:26; ಯೂದ 9) ಈ ಹೆಸರುಗಳು ಬೈಬಲಿನಲ್ಲಿ ಕೊಡಲ್ಪಟ್ಟಿರುವುದರಿಂದ, ಪ್ರತಿಯೊಬ್ಬ ದೇವದೂತನು ಕೇವಲ ವ್ಯಕ್ತಿಸ್ವರೂಪವಿಲ್ಲದ ಶಕ್ತಿಯಲ್ಲ, ಬದಲಾಗಿ ಒಬ್ಬ ಅಪೂರ್ವ ಆತ್ಮ ಜೀವಿಯಾಗಿದ್ದಾನೆ ಮತ್ತು ಅವನಿಗೆ ಒಂದು ಹೆಸರೂ ಇರುತ್ತದೆ ಎಂಬುದು ನಮಗೆ ತಿಳಿದುಬರುತ್ತದೆ. ಹಾಗಿದ್ದರೂ, ಇತರ ದೇವದೂತರು ತಮ್ಮ ಹೆಸರುಗಳನ್ನು ತಿಳಿಯಪಡಿಸಲು ನಿರಾಕರಿಸಿದರು. ಉದಾಹರಣೆಗಾಗಿ, ಯಾಕೋಬನು ತನ್ನನ್ನು ಸಂಧಿಸಿದ ದೂತನಿಗೆ ಅವನ ಹೆಸರನ್ನು ತಿಳಿಸುವಂತೆ ಕೇಳಿಕೊಂಡಾಗ, ಅವನದನ್ನು ತಿಳಿಸಲು ನಿರಾಕರಿಸಿದನು. (ಆದಿಕಾಂಡ 32:29; ನ್ಯಾಯಸ್ಥಾಪಕರು 13:17, 18) ಮಾನವರು ದೇವದೂತರಿಗೆ ಅನಗತ್ಯವಾದ ಗಮನಕೊಡದಿರುವಂತೆ ಬೈಬಲಿನಲ್ಲಿ ಅವರ ಹೆಸರುಗಳ ಪಟ್ಟಿಯು ಕೊಡಲ್ಪಟ್ಟಿಲ್ಲ.
ದೇವದೂತರ ಕರ್ತವ್ಯಗಳಲ್ಲಿ ಒಂದು, ದೇವರಿಂದ ಕೊಡಲ್ಪಡುವ ಸಂದೇಶಗಳನ್ನು ಮಾನವರಿಗೆ ತಲಪಿಸುವುದೇ ಆಗಿದೆ. ವಾಸ್ತವದಲ್ಲಿ, “ದೇವದೂತ” ಎಂದು ಭಾಷಾಂತರಿಸಲ್ಪಟ್ಟಿರುವ ಮೂಲ ಹೀಬ್ರು ಮತ್ತು ಗ್ರೀಕ್ ಪದಗಳ ಅಕ್ಷರಾರ್ಥವು “ಸಂದೇಶವಾಹಕ” ಎಂದಾಗಿದೆ. ಆದರೂ, ದೇವದೂತರು ಮಾನವ ಪ್ರಾರ್ಥನೆಗಳನ್ನು ಪರಾತ್ಪರನ ಸಿಂಹಾಸನದ ತನಕ ಕೊಂಡೊಯ್ಯುವ ಮಧ್ಯಸ್ಥಗಾರರಾಗಿ ಕಾರ್ಯನಡಿಸುವುದಿಲ್ಲ. ತನ್ನ ಪುತ್ರನಾದ ಯೇಸು ಕ್ರಿಸ್ತನ ಮೂಲಕ ಪ್ರಾರ್ಥನೆಗಳು ಸ್ವತಃ ತನಗೆ ಸಂಬೋಧಿಸಲ್ಪಡಬೇಕು ಎಂದು ದೇವರೇ ನಿರ್ಧರಿಸಿದ್ದಾನೆ. ಯೇಸು ಹೇಳಿದ್ದು: “ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು.”—ಯೋಹಾನ 15:16; 1 ತಿಮೊಥೆಯ 2:5.
ಒಂದುವೇಳೆ ನಾವು ಯೋಗ್ಯವಾದ ರೀತಿಯಲ್ಲಿ ಪ್ರಾರ್ಥನೆಯ ಮೂಲಕ ದೇವರನ್ನು ಸಮೀಪಿಸಲು ಪ್ರಯತ್ನಿಸುವುದಾದರೆ ಅದನ್ನು ಕೇಳಿಸಿಕೊಳ್ಳದಿರುವಷ್ಟು ಆತನೆಂದೂ ಕಾರ್ಯಮಗ್ನನಾಗಿರುವುದಿಲ್ಲ. ಬೈಬಲು ಈ ಆಶ್ವಾಸನೆಯನ್ನು ಕೊಡುತ್ತದೆ: “ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.”—ಕೀರ್ತನೆ 145:18.