ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೈಬಿರೀಯ ಯುದ್ಧದ ಹೊರತಾಗಿಯೂ ರಾಜ್ಯಾಭಿವೃದ್ಧಿ

ಲೈಬಿರೀಯ ಯುದ್ಧದ ಹೊರತಾಗಿಯೂ ರಾಜ್ಯಾಭಿವೃದ್ಧಿ

ಲೈಬಿರೀಯ ಯುದ್ಧದ ಹೊರತಾಗಿಯೂ ರಾಜ್ಯಾಭಿವೃದ್ಧಿ

ಒಂದು ದಶಕಕ್ಕಿಂತಲೂ ಹೆಚ್ಚು ಸಮಯಾವಧಿಯಿಂದ ಲೈಬಿರೀಯದಲ್ಲಿ ಅಂತರ್ಯುದ್ಧವು ಅನಿಯಂತ್ರಿತ ಮಟ್ಟದಲ್ಲಿ ನಡೆಯುತ್ತಿತ್ತು. ಇಸವಿ 2003ರ ಮಧ್ಯದಷ್ಟಕ್ಕೆ, ದಂಗೆಕೋರರು ಹೋರಾಡುತ್ತಾ ಅದರ ರಾಜಧಾನಿಯಾದ ಮೊನ್ರೊವಿಯದ ವರೆಗೂ ಬಂದು ಮುಟ್ಟಿದ್ದರು. ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಪುನಃ ಪುನಃ ತಮ್ಮ ಮನೆಗಳನ್ನು ಬಿಟ್ಟು ಪಲಾಯನಗೈಯುವ ಒತ್ತಡಕ್ಕೊಳಗಾದರು. ಅವರ ಸೊತ್ತುಗಳನ್ನು ಅನೇಕಾವರ್ತಿ ಲೂಟಿಮಾಡಲಾಯಿತು.

ದುಃಖಕರವಾಗಿಯೇ, ರಾಜಧಾನಿಯಲ್ಲಿ ಹೋರಾಟ ನಡೆಯುತ್ತಿದ್ದಾಗ ಸಾವಿರಾರು ಜನರು ಕೊಲ್ಲಲ್ಪಟ್ಟರು. ಇವರಲ್ಲಿ ಇಬ್ಬರು ಸಾಕ್ಷಿಗಳಿದ್ದರು​—⁠ಒಬ್ಬ ಸಹೋದರ ಹಾಗೂ ಒಬ್ಬ ಸಹೋದರಿ. ಇತರ ಸಹೋದರರು ಈ ಕಷ್ಟಾನುಭವವನ್ನು ಹೇಗೆ ನಿಭಾಯಿಸಿದರು, ಮತ್ತು ಇವರಿಗೆ ಸಹಾಯಮಾಡಲಿಕ್ಕಾಗಿ ಏನು ಮಾಡಲಾಯಿತು?

ಅಗತ್ಯದಲ್ಲಿರುವವರಿಗೆ ಸಹಾಯ

ಈ ಬಿಕ್ಕಟ್ಟಿನಾದ್ಯಂತ, ಯೆಹೋವನ ಸಾಕ್ಷಿಗಳ ಲೈಬಿರೀಯ ಬ್ರಾಂಚ್‌ ಆಫೀಸು ಅಗತ್ಯದಲ್ಲಿರುವವರಿಗೆ ಸಹಾಯವನ್ನು ನೀಡುವ ವ್ಯವಸ್ಥೆಯನ್ನು ಮಾಡಿತು. ಆಹಾರ, ಮನೆಗೆ ಅತ್ಯಾವಶ್ಯಕವಾದ ವಸ್ತುಗಳು, ಮತ್ತು ಔಷಧೋಪಚಾರಗಳು ಸಹ ಒದಗಿಸಲ್ಪಟ್ಟವು. ಬಂದರು ಕ್ಷೇತ್ರವು ದಂಗೆಕೋರರ ಹಿಡಿತದಲ್ಲಿದ್ದಾಗಲೆಲ್ಲಾ ಆಹಾರವು ಸಿಕ್ಕುವುದು ತುಂಬ ವಿರಳವಾಗಿತ್ತು. ಬ್ರಾಂಚ್‌ ಆಫೀಸು ಈ ಸಮಸ್ಯೆಯನ್ನು ಮುನ್ನೋಡಿತ್ತು ಮತ್ತು ನಗರದಾದ್ಯಂತ ಇದ್ದ ರಾಜ್ಯ ಸಭಾಗೃಹಗಳಿಗೆ ಪಲಾಯನಗೈದಿದ್ದ ಎರಡು ಸಾವಿರ ಸಾಕ್ಷಿಗಳಿಗೆ ಅತ್ಯಾವಶ್ಯಕವಾಗಿದ್ದ ವಸ್ತುಗಳನ್ನು ಸಿದ್ಧವಾಗಿರಿಸಿಕೊಂಡಿತ್ತು. ಬಂದರು ಪುನಃ ತೆರೆಯಲ್ಪಡುವ ತನಕ ಆಹಾರಸಾಮಗ್ರಿಗಳನ್ನು ಉಳಿಸುವ ಉದ್ದೇಶದಿಂದ ಸಹೋದರರು ಆಹಾರವನ್ನು ದಿನಕ್ಕಿಷ್ಟೆಂದು ನಿಗದಿಯಾಗಿ ಕೊಡುವ ಏರ್ಪಾಡನ್ನು ಮಾಡಿದರು. ಬೆಲ್ಜಿಯಮ್‌ ಮತ್ತು ಸೀಎರ ಲಿಯೋನ್‌ ಬ್ರಾಂಚ್‌ಗಳು ವಿಮಾನದ ಮೂಲಕ ವೈದ್ಯಕೀಯ ಸರಬರಾಯಿಯನ್ನು ಒದಗಿಸಿದವು, ಮತ್ತು ಬ್ರಿಟನ್‌ ಹಾಗೂ ಫ್ರಾನ್ಸ್‌ ಬ್ರಾಂಚ್‌ಗಳು ಬಟ್ಟೆಬರೆಗಳನ್ನು ಕಳುಹಿಸಿದವು.

ಹತಾಶೆಯ ಸನ್ನಿವೇಶದ ನಡುವೆಯೂ ನಮ್ಮ ಸಹೋದರರು ಸಕಾರಾತ್ಮಕವಾಗಿಯೂ ಹರ್ಷಚಿತ್ತರಾಗಿಯೂ ಉಳಿದರು. ಮೂರು ಬಾರಿ ಮನೆಯಿಂದ ಪಲಾಯನಗೈಯಬೇಕಾಗಿ ಬಂದ ಒಬ್ಬ ಸಹೋದರನ ಈ ಹೇಳಿಕೆಯು ಇಂಥ ಅನೇಕರ ಹೇಳಿಕೆಯನ್ನು ಪ್ರತಿನಿಧಿಸುವಂಥದ್ದಾಗಿತ್ತು. ಅವನು ಹೇಳಿದ್ದು: “ನಾವು ಸಾರುವುದು ಇಂಥ ಪರಿಸ್ಥಿತಿಗಳ ಕುರಿತಾಗಿಯೇ; ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ.”

ಸುವಾರ್ತೆಗೆ ಪ್ರತಿಕ್ರಿಯೆ

ದೇಶದಾದ್ಯಂತ ಸಂಕ್ಷೋಭೆಯಿತ್ತಾದರೂ, ಸಾಕ್ಷಿಗಳು ಮಾತ್ರ ಕ್ಷೇತ್ರದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಾ ಮುಂದುವರಿದರು. ಇಸವಿ 2003ರ ಜನವರಿ ತಿಂಗಳಿನಲ್ಲಿ 3,879 ಮಂದಿ ರಾಜ್ಯ ಪ್ರಚಾರಕರ ಸಾರ್ವಕಾಲಿಕ ಉಚ್ಚಾಂಕವಿತ್ತು, ಮತ್ತು ಫೆಬ್ರವರಿ ತಿಂಗಳಿನಲ್ಲಿ ಅವರು 15,227 ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸಿದರು.

ಜನರು ಸುವಾರ್ತೆಗೆ ಅತಿ ಬೇಗನೆ ಪ್ರತಿಕ್ರಿಯಿಸುತ್ತಾರೆ. ಇದಕ್ಕೆ ಒಂದು ಉದಾಹರಣೆಯು, ಈ ದೇಶದ ಆಗ್ನೇಯ ಭಾಗದಲ್ಲಿರುವ ಹಳ್ಳಿಯೊಂದರಿಂದ ಬಂದದ್ದಾಗಿದೆ. ಒಂದು ಸಭೆಯು, ಸಾಮಾನ್ಯವಾಗಿ ತಾವು ಕೂಡಿಬರುತ್ತಿದ್ದ ಸ್ಥಳದಿಂದ ಸುಮಾರು ಐದು ತಾಸುಗಳಷ್ಟು ದೂರದ ಕಾಲುದಾರಿಯಲ್ಲಿರುವ ಬ್ವಾನ್‌ನ ದೊಡ್ಡ ಹಳ್ಳಿಯಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಯನ್ನು ನಡೆಸಲು ಯೋಜನೆಯನ್ನು ಮಾಡಿತು. ಜನರನ್ನು ಜ್ಞಾಪಕಾಚರಣೆಗೆ ಆಮಂತ್ರಿಸಲಿಕ್ಕಾಗಿ ಸಹೋದರರು ಹಳ್ಳಿಗೆ ಹೋಗುವುದಕ್ಕೆ ಮುಂಚೆ, ಬ್ವಾನ್‌ ಹಳ್ಳಿಯ ಮೇಯರ್‌ಗೆ ಒಂದು ಆಮಂತ್ರಣವು ಕೊಡಲ್ಪಟ್ಟಿತು. ಅವರು ಅದನ್ನು ಪಡೆದುಕೊಂಡ ಬಳಿಕ, ತಮ್ಮ ಬೈಬಲನ್ನು ತೆಗೆದುಕೊಂಡು ಹಳ್ಳಿಯ ಜನರ ಬಳಿಗೆ ಹೋಗಿ, ಆ ಆಮಂತ್ರಣ ಪತ್ರಿಕೆಯಲ್ಲಿ ಕೊಡಲ್ಪಟ್ಟಿದ್ದ ಒಂದು ಶಾಸ್ತ್ರವಚನವನ್ನು ಓದಿ, ಜ್ಞಾಪಕಾಚರಣೆಗೆ ಹಾಜರಾಗುವಂತೆ ಅವರನ್ನು ಉತ್ತೇಜಿಸಿದರು. ಪ್ರಚಾರಕರು ಈ ಹಳ್ಳಿಗೆ ಬಂದಾಗ, ಈಗಾಗಲೇ ತಮ್ಮ ಕೆಲಸವನ್ನು ಮಾಡಿಮುಗಿಸಲಾಗಿದೆ ಎಂಬುದು ಅವರ ಗಮನಕ್ಕೆ ಬಂತು! ಆ ಮೇಯರ್‌ ತನ್ನ ಮಕ್ಕಳು ಹಾಗೂ ಇಬ್ಬರು ಹೆಂಡತಿಯರೊಂದಿಗೆ ಜ್ಞಾಪಕಾಚರಣೆಗೆ ಬಂದರು. ಒಟ್ಟು 27 ಮಂದಿ ಈ ಕೂಟಕ್ಕೆ ಹಾಜರಾದರು. ಅಂದಿನಿಂದ ಈ ಮೇಯರ್‌ ಮೆಥೊಡಿಸ್ಟ್‌ ಚರ್ಚನ್ನು ಬಿಟ್ಟು, ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನವನ್ನು ಮಾಡಲಾರಂಭಿಸಿದರು, ಮತ್ತು ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಸ್ಥಳವನ್ನೂ ಕೊಟ್ಟರು.

ಮನೋಭಾವದಲ್ಲಿ ಪರಿವರ್ತನೆ

ಸತ್ಯದ ಕಡೆಗೆ ಕೆಲವು ವಿರೋಧಿಗಳಿಗಿರುವ ದೃಷ್ಟಿಕೋನವನ್ನು ಬದಲಾಯಿಸುವುದರಲ್ಲಿ ನಮ್ಮ ಸಹೋದರರ ನಡತೆಯು ಸಹ ತುಂಬ ಪರಿಣಾಮಕಾರಿಯಾಗಿದೆ. ಓಪೋಕು ಎಂಬ ಹೆಸರಿನ ಒಬ್ಬ ವ್ಯಕ್ತಿಯನ್ನು ಪರಿಗಣಿಸಿರಿ. ಒಬ್ಬ ಸ್ಪೆಷಲ್‌ ಪಯನೀಯರನು ಕ್ಷೇತ್ರ ಸೇವೆಯಲ್ಲಿ ಅವನನ್ನು ಭೇಟಿಯಾದನು ಮತ್ತು ಇವನಿಗೆ ಕಾವಲಿನಬುರುಜು ಪತ್ರಿಕೆಯನ್ನು ಕೊಟ್ಟನು. ಈ ಪತ್ರಿಕೆಯಲ್ಲಿದ್ದ ಲೇಖನವೊಂದರಲ್ಲಿ ಓಪೋಕುಗೆ ತುಂಬ ಆಸಕ್ತಿಯುಂಟಾಯಿತು, ಆದರೆ ಅವನ ಬಳಿ ಹಣವಿರಲಿಲ್ಲ. ಈ ಪತ್ರಿಕೆಗೆ ಹಣವನ್ನು ತೆಗೆದುಕೊಳ್ಳುವುದಿಲ್ಲ ಎಂಬುದನ್ನು ವಿವರಿಸಿದ ಬಳಿಕ, ಆ ಪಯನೀಯರನು ಅವನ ಬಳಿ ಪತ್ರಿಕೆಯನ್ನು ಬಿಟ್ಟುಹೋದನು ಮತ್ತು ಅವನನ್ನು ಪುನಃ ಭೇಟಿಯಾಗಲು ಏರ್ಪಾಡನ್ನು ಮಾಡಿದನು. ಪುನರ್ಭೇಟಿಯಲ್ಲಿ ಓಪೋಕು ಆ ಪಯನೀಯರನನ್ನು ಕೇಳಿದ್ದು: “ನಿನಗೆ ನನ್ನ ಪರಿಚಯವಿದೆಯೋ? ಈ ಹಾರ್ಪರ್‌ ಪಟ್ಟಣದಲ್ಲಿರುವ ನಿಮ್ಮ ಜನರಲ್ಲಿ ಹೆಚ್ಚಿನವರಿಗೆ ನನ್ನ ಪರಿಚಯವಿದೆ. ನಾನು ಸಾಕ್ಷಿಗಳ ಮಕ್ಕಳನ್ನು ಶಾಲೆಯಿಂದ ಹೊರಹಾಕುತ್ತಿದ್ದೆ!” ನಂತರ ಅವನು, ತಾನು ಈ ಪಟ್ಟಣದಲ್ಲಿರುವ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಾಗಿದ್ದೆ ಮತ್ತು ಧ್ವಜವಂದನೆ ಮಾಡದಿದ್ದದಕ್ಕಾಗಿ ಯೆಹೋವನ ಸಾಕ್ಷಿಗಳ ಮಕ್ಕಳನ್ನು ಹಿಂಸೆಗೊಳಪಡಿಸಿದ್ದೆ ಎಂಬುದನ್ನು ವಿವರಿಸಿದನು.

ಆದರೂ, ಯೆಹೋವನ ಸಾಕ್ಷಿಗಳಿಂದ ತೋರಿಸಲ್ಪಟ್ಟ ಕ್ರೈಸ್ತ ಪ್ರೀತಿಯ ಮೂರು ಉದಾಹರಣೆಗಳು ಓಪೋಕು ತನ್ನ ಮನೋಭಾವವನ್ನು ಪುನಃ ಪರಿಶೀಲಿಸುವಂತೆ ಮಾಡಿದವು. ಮೊದಲನೆಯದಾಗಿ, ಸಹೋದರರು ತೀರ ಅಸ್ವಸ್ಥನಾಗಿದ್ದ ಒಬ್ಬ ಆಧ್ಯಾತ್ಮಿಕ ಸಹೋದರನ ಆರೈಕೆಮಾಡುತ್ತಿರುವುದನ್ನು ಇವನು ನೋಡಿದನು. ಅವರು ಅವನಿಗಾಗಿ ಪಕ್ಕದ ದೇಶದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಏರ್ಪಾಡನ್ನೂ ಮಾಡಿದರು. ಆ ಅಸ್ವಸ್ಥ ಸಹೋದರನು ಸಾಕ್ಷಿಗಳಲ್ಲೇ ತುಂಬ “ಗಣ್ಯ ಪುರುಷ”ನಾಗಿರಬಹುದು ಎಂದು ಓಪೋಕು ನೆನಸಿದ್ದನಾದರೂ, ಅವನು ಒಬ್ಬ ಸಾಮಾನ್ಯ ಸಾಕ್ಷಿಯಾಗಿದ್ದನು ಎಂಬುದು ಅವನಿಗೆ ನಂತರ ಗೊತ್ತಾಯಿತು. ಎರಡನೆಯದಾಗಿ, 1990ಗಳಲ್ಲಿ ಓಪೋಕು ಕೋಟ್‌ಡೀವಾರ್‌ನಲ್ಲಿ ಒಬ್ಬ ನಿರಾಶ್ರಿತನಾಗಿದ್ದನು. ಒಂದು ದಿನ ಅವನಿಗೆ ತುಂಬ ಬಾಯಾರಿಕೆಯಾಗಿದ್ದಾಗ ಒಬ್ಬ ಯುವಕನಿಂದ ನೀರನ್ನು ಖರೀದಿಸಲು ಹೋದನು. ಓಪೋಕುವಿನ ಬಳಿ ದೊಡ್ಡ ಮೊತ್ತದ ಒಂದು ನೋಟು ಮಾತ್ರ ಇತ್ತು, ಮತ್ತು ಆ ಯುವಕನ ಬಳಿ ಚಿಲ್ಲರೆ ಇರಲಿಲ್ಲ. ಆದುದರಿಂದ ಅವನು ಹಣವನ್ನು ತೆಗೆದುಕೊಳ್ಳದೇ ಓಪೋಕುವಿಗೆ ನೀರನ್ನು ಉಚಿತವಾಗಿ ಕೊಟ್ಟನು. ನೀರನ್ನು ಕೊಡುತ್ತಿರುವಾಗ ಈ ಯುವಕನು ಓಪೋಕುವನ್ನು ಕೇಳಿದ್ದು: “ನಿಮ್ಮ ಹಾಗೂ ನಮ್ಮಂಥ ಜನರು ಹಣವನ್ನು ಕೇಳದೆ ಉಚಿತವಾಗಿ ವಸ್ತುಗಳನ್ನು ಪರಸ್ಪರ ಕೊಟ್ಟುಕೊಳ್ಳುವ ಒಂದು ಸಮಯವನ್ನು ನಾವೆಂದಾದರೂ ನೋಡುವೆವು ಎಂದು ನೀವು ನೆನಸುತ್ತೀರೋ?” ಇವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದಾನೆ ಎಂದು ಒಡನೆಯೇ ಓಪೋಕು ಊಹಿಸಿದನು, ಮತ್ತು ಈ ಯುವಕನು ಸಹ ತಾನೊಬ್ಬ ಸಾಕ್ಷಿಯೆಂಬುದನ್ನು ಖಚಿತಪಡಿಸಿದನು. ಈ ಸಹೋದರನ ಉದಾರಭಾವ ಹಾಗೂ ದಯಾಭಾವವು ಅವನ ಮೇಲೆ ಪ್ರಭಾವ ಬೀರಿತು. ಕೊನೆಯದಾಗಿ, ಆ ಸ್ಪೆಷಲ್‌ ಪಯನೀಯರನು ಮನಃಪೂರ್ವಕವಾಗಿ ಪತ್ರಿಕೆಯನ್ನು ಉಚಿತವಾಗಿ ಕೊಡಲು ಮುಂದೆ ಬಂದದ್ದು, ಸಾಕ್ಷಿಗಳ ಬಗ್ಗೆ ತನಗಿರುವ ದೃಷ್ಟಿಕೋನವು ತಪ್ಪಾಗಿದೆ ಮತ್ತು ತನ್ನ ಮನೋಭಾವವನ್ನು ಬದಲಾಯಿಸಬೇಕು ಎಂಬುದನ್ನು ಓಪೋಕುವಿಗೆ ಮನದಟ್ಟುಮಾಡಿತು. ಅವನು ಆಧ್ಯಾತ್ಮಿಕ ರೀತಿಯಲ್ಲಿ ಪ್ರಗತಿಯನ್ನು ಮಾಡಿದನು ಮತ್ತು ಈಗ ಒಬ್ಬ ಅಸ್ನಾತ ಪ್ರಚಾರಕನಾಗಿದ್ದಾನೆ.

ಲೈಬಿರೀಯದಲ್ಲಿರುವ ಸಹೋದರರು ವಿಪರೀತ ಕಷ್ಟಕರವಾಗಿರುವ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರಾದರೂ, ಅವರು ದೇವರಲ್ಲಿ ಭರವಸೆಯಿಡುತ್ತಾರೆ ಮತ್ತು ದೇವರ ರಾಜ್ಯದ ನೀತಿಯ ಆಳ್ವಿಕೆಯ ಕೆಳಗಿನ ಉತ್ತಮ ಪರಿಸ್ಥಿತಿಗಳ ಕುರಿತಾದ ಸುವಾರ್ತೆಯನ್ನು ನಂಬಿಗಸ್ತಿಕೆಯಿಂದ ಪ್ರಕಟಿಸುತ್ತಾರೆ. ಅವರ ಪರಿಶ್ರಮವನ್ನು ಹಾಗೂ ಯೆಹೋವನ ಹೆಸರಿಗಾಗಿ ಅವರು ತೋರಿಸುವ ಪ್ರೀತಿಯನ್ನು ಆತನೆಂದೂ ಮರೆಯನು.​—⁠ಇಬ್ರಿಯ 6:⁠10.

[ಪುಟ 30ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಮೊನ್ರೊವಿಯ

[ಪುಟ 31ರಲ್ಲಿರುವ ಚಿತ್ರಗಳು]

ವಿಪತ್ತಿನ ಸಮಯದಾದ್ಯಂತ ಯೆಹೋವನ ಜನರು ಅಗತ್ಯದಲ್ಲಿರುವವರಿಗೆ ಆಧ್ಯಾತ್ಮಿಕ ಹಾಗೂ ಭೌತಿಕ ಸಹಾಯವನ್ನು ಒದಗಿಸಿದರು