ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲೋಟ್‌ ಇತಿಹಾಸಪ್ರಸಿದ್ಧ ಭಾಷಾಂತರ ಸಹಾಯಕ

ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲೋಟ್‌ ಇತಿಹಾಸಪ್ರಸಿದ್ಧ ಭಾಷಾಂತರ ಸಹಾಯಕ

ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲೋಟ್‌ ಇತಿಹಾಸಪ್ರಸಿದ್ಧ ಭಾಷಾಂತರ ಸಹಾಯಕ

ಇಸವಿ 1455ರ ಸುಮಾರಿಗೆ, ಬೈಬಲನ್ನು ಪ್ರಕಾಶನ ಮಾಡುವುದರಲ್ಲಿ ಆಮೂಲಾಗ್ರ ಬದಲಾವಣೆಯು ಮಾಡಲ್ಪಟ್ಟಿತು. ಯೋಹಾನಸ್‌ ಗೂಟನ್‌ಬರ್ಗನು, ಚಲಿಸುವ ಅಚ್ಚುಮೊಳೆಗಳನ್ನು ಉಪಯೋಗಿಸಿ ಮಾಡಲ್ಪಟ್ಟ ಪ್ರಥಮ ಬೈಬಲಿನ ಮುದ್ರಣಕ್ಕಾಗಿ ಪ್ರಿಂಟಿಂಗ್‌ ಪ್ರೆಸ್ಸನ್ನು ಬಳಸಿದನು. ಅಂತಿಮವಾಗಿ, ಹಸ್ತಲಿಖಿತ ಪ್ರತಿಗಳ ಮಿತವಾದ ಸರಬರಾಯಿಯ ಕಾರಣದಿಂದಾಗಿ ಬೈಬಲಿನ ವಿತರಣೆಯು ಮುಂದೆಂದೂ ಪ್ರತಿಬಂಧಿಸಲ್ಪಡಲಿಲ್ಲ. ಕೊನೆಗೂ ಬೈಬಲುಗಳನ್ನು ದೊಡ್ಡ ಪ್ರಮಾಣಗಳಲ್ಲಿ ಮತ್ತು ಸಾಕಷ್ಟು ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಲು ಸಾಧ್ಯವಾಯಿತು. ಅತಿ ಬೇಗನೆ ಬೈಬಲು ಜಗತ್ತಿನಲ್ಲೇ ಅತಿ ಹೆಚ್ಚು ವ್ಯಾಪಕವಾಗಿ ವಿತರಿಸಲ್ಪಡುವ ಗ್ರಂಥವಾಗಿ ಪರಿಣಮಿಸಲಿತ್ತು.

ಗೂಟನ್‌ಬರ್ಗ್‌ನ ಬೈಬಲು ಲ್ಯಾಟಿನ್‌ ಭಾಷೆಯಲ್ಲಿತ್ತು. ಆದರೆ ಬೈಬಲಿನ ಮೂಲ ಭಾಷೆಗಳಲ್ಲಿ​—⁠ಹೀಬ್ರು ಮತ್ತು ಗ್ರೀಕ್‌​—⁠ಅದರ ವಿಶ್ವಾಸಾರ್ಹ ಮೂಲಪಾಠವೊಂದರ ಅಗತ್ಯ ತಮಗಿದೆ ಎಂಬುದನ್ನು ಯೂರೋಪಿಯನ್‌ ವಿದ್ವಾಂಸರು ಬೇಗನೆ ಮನಗಂಡರು. ಕ್ಯಾಥೊಲಿಕ್‌ ಚರ್ಚು ಲ್ಯಾಟಿನ್‌ ವಲ್ಗೇಟ್‌ ಅನ್ನು ಬೈಬಲಿನ ಏಕಮಾತ್ರ ಅಂಗೀಕೃತ ಭಾಷಾಂತರವಾಗಿ ಪರಿಗಣಿಸಿತ್ತು, ಆದರೆ ಈ ಭಾಷಾಂತರದ ವಿಷಯದಲ್ಲಿ ಎರಡು ಪ್ರಧಾನ ಕೊರತೆಗಳಿದ್ದವು. ಹದಿನಾರನೆಯ ಶತಮಾನದಲ್ಲಿದ್ದ ಅಧಿಕಾಂಶ ಜನರಿಗೆ ಲ್ಯಾಟಿನ್‌ ಭಾಷೆಯು ಅರ್ಥವಾಗುತ್ತಿರಲಿಲ್ಲ. ಅಷ್ಟುಮಾತ್ರವಲ್ಲದೆ, ಒಂದು ಸಾವಿರ ವರ್ಷಗಳ ಕಾಲಾವಧಿಯಲ್ಲಿ, ವಲ್ಗೇಟ್‌ ಬೈಬಲಿನ ನಕಲುಗಾರರು ನಕಲು ಪ್ರತಿಗಳನ್ನು ಮಾಡುವಾಗ ಬಹಳಷ್ಟು ತಪ್ಪುಗಳನ್ನು ಮಾಡಿದ್ದರು.

ಭಾಷಾಂತರಕಾರರು ಮತ್ತು ವಿದ್ವಾಂಸರಿಗೆ ಮೂಲ ಭಾಷೆಗಳಲ್ಲಿ ಒಂದು ಬೈಬಲ್‌ ಬೇಕಾಗಿತ್ತು, ಹಾಗೂ ಉತ್ತಮವಾದ ಲ್ಯಾಟಿನ್‌ ಭಾಷಾಂತರದ ಅಗತ್ಯವಿತ್ತು. ಇಸವಿ 1502ರಲ್ಲಿ, ಸ್ಪೆಯಿನ್‌ನ Iನೆಯ ಇಸಬೆಲಳ ರಾಜಕೀಯ ಮತ್ತು ಆಧ್ಯಾತ್ಮಿಕ ಸಮಾಲೋಚಕನಾಗಿದ್ದ ಕಾರ್ಡಿನಲ್‌ ಹೀಮೇನೇಥ್‌ ಥೇ ಥೀಸ್‌ನೀರೋಸನು, ಒಂದೇ ಒಂದು ಪ್ರಕಾಶನದ ಸಹಾಯದಿಂದ ಅವರ ಆವಶ್ಯಕತೆಗಳನ್ನು ಪೂರೈಸಲು ನಿರ್ಧರಿಸಿದನು. ಈ ಇತಿಹಾಸಪ್ರಸಿದ್ಧ ಭಾಷಾಂತರ ಸಹಾಯಕವು ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲೋಟ್‌ ಎಂದು ಖ್ಯಾತವಾಯಿತು. ಥೀಸ್‌ನೀರೋಸನು ಹೀಬ್ರು, ಗ್ರೀಕ್‌, ಮತ್ತು ಲ್ಯಾಟಿನ್‌ನೊಂದಿಗೆ ಅರಮೇಯಿಕ್‌ ಭಾಷೆಯ ಕೆಲವು ಭಾಗಗಳನ್ನೂ ಒಳಗೂಡಿರುವಂಥ ಒಂದು ಪಾಲೀಗ್ಲೋಟನ್ನು ಅಥವಾ ಬಹುಭಾಷೆಗಳ ಬೈಬಲನ್ನು ಸಿದ್ಧಪಡಿಸುವ ಆಕಾಂಕ್ಷೆಯುಳ್ಳವನಾಗಿದ್ದನು. ಮುದ್ರಣ ವ್ಯವಸ್ಥೆಯು ಇನ್ನೂ ಆರಂಭದ ಹಂತದಲ್ಲಿತ್ತು, ಆದುದರಿಂದ ಈ ಪಾಲೀಗ್ಲೋಟ್‌ ಬೈಬಲಿನ ತಯಾರಿಯು ಮುದ್ರಣ ವ್ಯವಸ್ಥೆಯ ವಿಕಸನದಲ್ಲೇ ಒಂದು ಮೈಲಿಗಲ್ಲಾಗಿ ಪರಿಣಮಿಸಲಿತ್ತು.

ಸ್ಪೆಯಿನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಅನೇಕ ಪುರಾತನ ಹೀಬ್ರು ಹಸ್ತಪ್ರತಿಗಳನ್ನು ಖರೀದಿಸುವ ಮೂಲಕ ಥೀಸ್‌ನೀರೋಸನು ಸಮಯ, ಪ್ರಯತ್ನ, ಹಾಗೂ ಗಮನವನ್ನು ಅಗತ್ಯಪಡಿಸುವಂಥ ಕೆಲಸವನ್ನು ಆರಂಭಿಸಿದನು. ಅವನು ಬೇರೆ ಬೇರೆ ಗ್ರೀಕ್‌ ಹಾಗೂ ಲ್ಯಾಟಿನ್‌ ಹಸ್ತಪ್ರತಿಗಳನ್ನು ಸಹ ಸಂಗ್ರಹಿಸಿದನು. ಇವು ಪಾಲೀಗ್ಲೋಟ್‌ ಮೂಲಪಾಠಕ್ಕೆ ಆಧಾರವನ್ನು ಒದಗಿಸಲಿದ್ದವು. ಥೀಸ್‌ನೀರೋಸನು ಈ ಸಂಗ್ರಹಕಾರ್ಯವನ್ನು ವಿದ್ವಾಂಸರ ಒಂದು ತಂಡಕ್ಕೆ ವಹಿಸಿಕೊಟ್ಟು, ಇವರನ್ನು ಸ್ಪೆಯಿನ್‌ನ ಆಲ್‌ಕಾಲಾ ಥೇ ಏನಾರೇಸ್‌ನ ಹೊಸದಾಗಿ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾನಿಲಯದಲ್ಲಿ ವ್ಯವಸ್ಥಾಪಿಸಿದನು. ತಂಡದ ಭಾಗವಾಗಿ ಕಾರ್ಯನಡಿಸುವಂತೆ ಕೇಳಿಕೊಳ್ಳಲ್ಪಟ್ಟ ವಿದ್ವಾಂಸರಲ್ಲಿ ರಾಟರ್‌ಡ್ಯಾಮ್‌ನ ಇರ್ಯಾಸ್‌ಮಸ್‌ ಒಬ್ಬನಾಗಿದ್ದನಾದರೂ, ಈ ಪ್ರಸಿದ್ಧ ಭಾಷಾಶಾಸ್ತ್ರಜ್ಞನು ಆ ಕರೆಯನ್ನು ನಿರಾಕರಿಸಿಬಿಟ್ಟನು.

ಈ ವಿದ್ವಾಂಸರು ಗಮನಾರ್ಹವಾದ ಕೃತಿಯನ್ನು ಸಂಕಲಿಸಲು ಹತ್ತು ವರ್ಷಗಳನ್ನು ತೆಗೆದುಕೊಂಡರು, ತದನಂತರ ಮುದ್ರಣಕಾರ್ಯಕ್ಕೆ ಇನ್ನೂ ನಾಲ್ಕು ವರ್ಷಗಳು ಹಿಡಿದವು. ಸ್ಪೆಯಿನ್‌ನ ಮುದ್ರಣಾಲಯಗಳಲ್ಲಿ ಹೀಬ್ರು, ಗ್ರೀಕ್‌, ಅಥವಾ ಅರಮೇಯಿಕ್‌ ಭಾಷೆಯ ಅಚ್ಚುಮೊಳೆಯ ಮಾದರಿಯು ಲಭ್ಯವಿರಲಿಲ್ಲವಾದುದರಿಂದ ಅನೇಕ ತಾಂತ್ರಿಕ ಸಮಸ್ಯೆಗಳಿದ್ದವು. ಹೀಗೆ, ಥೀಸ್‌ನೀರೋಸನು ಈ ಭಾಷೆಗಳಲ್ಲಿ ಅಚ್ಚುಮೊಳೆಯ ಮಾದರಿಯನ್ನು ತಯಾರಿಸಲಿಕ್ಕಾಗಿ ಆರ್ನಾಲ್ಡೋ ಗೀಯೆರ್‌ಮೋ ಬ್ರೋಕಾರ್‌ ಎಂಬ ಮಹಾನ್‌ ಮುದ್ರಣಕಾರನ ಸಹಾಯವನ್ನು ಪಡೆದುಕೊಂಡನು. ಅಂತಿಮವಾಗಿ, 1514ರಲ್ಲಿ ಮುದ್ರಣಾಲಯಗಳು ಬೈಬಲ್‌ಗಳನ್ನು ಉತ್ಪಾದಿಸಲು ಆರಂಭಿಸಿದವು. ಇಸವಿ 1517ರ ಜುಲೈ 10ರಂದು, ಕಾರ್ಡಿನಲನು ಮರಣಪಡುವ ನಾಲ್ಕು ತಿಂಗಳುಗಳಿಗೆ ಮುಂಚೆ ಆರು ಸಂಪುಟಗಳು ಪೂರ್ಣಗೊಳಿಸಲ್ಪಟ್ಟವು. ವಿರೋಧಾಭಾಸವೆನಿಸುವಂತೆ, ಸ್ಪ್ಯಾನಿಷ್‌ ಮಠೀಯ ನ್ಯಾಯಸ್ಥಾನವು ಅದರ ಉತ್ತುಂಗದಲ್ಲಿದ್ದ ಕಾಲಾವಧಿಯಲ್ಲೇ ಪೂರ್ಣ ಕೃತಿಯ ಸುಮಾರು ಆರುನೂರು ಪ್ರತಿಗಳು ಪ್ರಕಾಶನ ಮಾಡಲ್ಪಟ್ಟವು. *

ಪಾಲೀಗ್ಲೋಟ್‌ನ ಮುದ್ರಣಾಕ್ಷರ ಜೋಡಣೆ

ಪಾಲೀಗ್ಲೋಟ್‌ನ ಪ್ರತಿಯೊಂದು ಪುಟವು ಬಹಳಷ್ಟು ಪ್ರಮಾಣದ ಮಾಹಿತಿಯನ್ನು ಒದಗಿಸಿತು. ಹೀಬ್ರು ಶಾಸ್ತ್ರವಚನಗಳನ್ನು ಒಳಗೊಂಡಿರುವ ನಾಲ್ಕು ಸಂಪುಟಗಳಲ್ಲಿ, ಪ್ರತಿಯೊಂದು ಪುಟದ ಮಧ್ಯಭಾಗದಲ್ಲಿ ವಲ್ಗೇಟ್‌ನ ಮೂಲಪಾಠವಿತ್ತು; ಹೀಬ್ರು ಮೂಲಪಾಠವು ಹೊರಗಿನ ಅಂಕಣದಲ್ಲಿತ್ತು; ಮತ್ತು ಗ್ರೀಕ್‌ ಮೂಲಪಾಠ ಹಾಗೂ ಇದರೊಂದಿಗೆ ಲ್ಯಾಟಿನ್‌ಗೆ ತರ್ಜುಮೆಮಾಡಲ್ಪಟ್ಟಿರುವ ಇಂಟರ್‌ಲೀನಿಯರ್‌ ಭಾಷಾಂತರವು ಒಳಗಿನ ಅಂಕಣದಲ್ಲಿತ್ತು. ಮಾರ್ಜಿನ್‌ಗಳಲ್ಲಿ ಅನೇಕ ಹೀಬ್ರು ಪದಗಳ ಮೂಲಗಳು ತೋರಿಸಲ್ಪಟ್ಟಿದ್ದವು. ಮತ್ತು ಪೆಂಟಟ್ಯೂಕನ್ನು ಒಳಗೂಡಿರುವ ಪ್ರತಿಯೊಂದು ಪುಟದ ಕೆಳಭಾಗದಲ್ಲಿ, ಸಂಪಾದಕರು ಟಾರ್ಗಮ್‌ ಆಫ್‌ ಆಂಕಲಾಸ್‌ (ಬೈಬಲಿನ ಮೊದಲ ಐದು ಪುಸ್ತಕಗಳ ಒಂದು ಅರಮೇಯಿಕ್‌ ಸರಳಾನುವಾದ)ನ ಜೊತೆಗೆ ಲ್ಯಾಟಿನ್‌ ಭಾಷಾಂತರವನ್ನು ಸಹ ಸೇರಿಸಿದ್ದರು.

ಪಾಲೀಗ್ಲೋಟ್‌ನ ಐದನೆಯ ಸಂಪುಟವು ಎರಡು ಅಂಕಣಗಳಲ್ಲಿ ಗ್ರೀಕ್‌ ಶಾಸ್ತ್ರವಚನಗಳನ್ನು ಒಳಗೂಡಿತ್ತು. ಒಂದು ಅಂಕಣವು ಗ್ರೀಕ್‌ ಮೂಲಪಾಠವನ್ನು ಹೊಂದಿತ್ತು, ಮತ್ತು ಇನ್ನೊಂದು ಅಂಕಣವು ವಲ್ಗೇಟ್‌ನಿಂದ ತೆಗೆಯಲ್ಪಟ್ಟ ಸಮಾನಾರ್ಥಕ ಲ್ಯಾಟಿನ್‌ ಮೂಲಪಾಠವನ್ನು ಹೊಂದಿತ್ತು. ಎರಡೂ ಭಾಷೆಗಳ ಮೂಲಪಾಠಗಳ ನಡುವಣ ಸಂಬಂಧವನ್ನು, ಪ್ರತಿಯೊಂದು ಅಂಕಣದಲ್ಲಿರುವ ಸಮಾನಾರ್ಥಕ ಪದದ ಕಡೆಗೆ ವಾಚಕನ ಗಮನವನ್ನು ನಿರ್ದೇಶಿಸುವಂಥ ಚಿಕ್ಕ ಅಕ್ಷರಗಳ ಮೂಲಕ ತೋರಿಸಲಾಗಿತ್ತು. ಪಾಲೀಗ್ಲೋಟ್‌ನ ಗ್ರೀಕ್‌ ಮೂಲಪಾಠವು, ಅಷ್ಟರ ತನಕ ಮುದ್ರಿಸಲ್ಪಟ್ಟಿದ್ದ ಗ್ರೀಕ್‌ ಶಾಸ್ತ್ರವಚನಗಳ ಅಥವಾ “ಹೊಸ ಒಡಂಬಡಿಕೆ”ಯ ಮೊದಲ ಸಂಪೂರ್ಣ ಸಂಗ್ರಹವಾಗಿತ್ತು. ಇದರ ಬಳಿಕ ಇರ್ಯಾಸ್‌ಮಸ್‌ನಿಂದ ಸಿದ್ಧಗೊಳಿಸಲ್ಪಟ್ಟ ಗ್ರೀಕ್‌ ಶಾಸ್ತ್ರವಚನಗಳ ಸಂಪುಟವು ಮುದ್ರಿಸಲ್ಪಟ್ಟಿತು.

ಐದನೆಯ ಸಂಪುಟದ ಮೂಲಪಾಠದ ಕರಡಚ್ಚು ತಿದ್ದುವಿಕೆಯಲ್ಲಿ ವಿದ್ವಾಂಸರು ಎಷ್ಟರ ಮಟ್ಟಿಗೆ ಜಾಗ್ರತೆಯನ್ನು ವಹಿಸಿದರೆಂದರೆ, ಕೇವಲ 50 ಮುದ್ರಣ ದೋಷಗಳು ಮಾತ್ರ ಇದರಲ್ಲಿ ಕಂಡುಬಂದವು. ಈ ವಿದ್ವಾಂಸರು ಸೂಕ್ಷ್ಮ ವಿವರಗಳಿಗೂ ಬಹು ಎಚ್ಚರಿಕೆಯ ಗಮನಕೊಟ್ಟದ್ದರಿಂದಲೇ, ಆಧುನಿಕ ವಿಮರ್ಶಕರು ಇದನ್ನು ಇರ್ಯಾಸ್‌ಮಸ್‌ನ ಪ್ರಸಿದ್ಧ ಗ್ರೀಕ್‌ ಮೂಲಪಾಠಕ್ಕಿಂತಲೂ ಉತ್ಕೃಷ್ಟವಾದ ಕೃತಿಯಾಗಿ ಪರಿಗಣಿಸಿದ್ದಾರೆ. ಅಂದವಾದ ಗ್ರೀಕ್‌ ಅಕ್ಷರಗಳು, ಹಳೆಯ ದೊಡ್ಡಕ್ಷರದ ಹಸ್ತಪ್ರತಿಗಳ ಸರಳ ಸೌಂದರ್ಯಕ್ಕೆ ತುಂಬ ಅನುರೂಪವಾಗಿದ್ದವು. ಹದಿನೈದನೆಯ ಶತಮಾನದಲ್ಲಿ ಗ್ರೀಕ್‌ನ ಮುದ್ರಣ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಆರ್‌. ಪ್ರಾಕ್ಟರ್‌ ಹೇಳುವುದು: “ತನ್ನ ಮೊದಲ ಗ್ರೀಕ್‌ ಅಚ್ಚುಮೊಳೆ ಮಾದರಿಯನ್ನು ತಯಾರಿಸಿದ ಕೀರ್ತಿಯು ಸ್ಪೆಯಿನ್‌ಗೇ ಸಲ್ಲುತ್ತದೆ; ಇಷ್ಟರ ತನಕ ತಯಾರಿಸಲ್ಪಟ್ಟಿರುವ ಗ್ರೀಕ್‌ ಅಚ್ಚುಮೊಳೆಗಳ ಮಾದರಿಯಲ್ಲಿ ಇದೇ ಅತ್ಯುತ್ತಮವಾದದ್ದು ಎಂಬುದರಲ್ಲಿ ಸಂಶಯವೇ ಇಲ್ಲ.”

ಪಾಲೀಗ್ಲೋಟ್‌ನ ಆರನೆಯ ಸಂಪುಟವು ಬೈಬಲ್‌ ಅಧ್ಯಯನಕ್ಕಾಗಿ ಬೇರೆ ಬೇರೆ ಸಹಾಯಕಗಳನ್ನು ಒಳಗೂಡಿತ್ತು: ಒಂದು ಹೀಬ್ರು ಹಾಗೂ ಅರಮೇಯಿಕ್‌ ಭಾಷೆಯ ಶಬ್ದಕೋಶ, ಗ್ರೀಕ್‌, ಹೀಬ್ರು, ಮತ್ತು ಅರಮೇಯಿಕ್‌ ಹೆಸರುಗಳ ಅರ್ಥವಿವರಣೆ, ಹೀಬ್ರು ವ್ಯಾಕರಣದ ವಿವರಣೆ, ಹಾಗೂ ಶಬ್ದಕೋಶದ ಲ್ಯಾಟಿನ್‌ ವಿಷಯಸೂಚಿ. ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲೋಟ್‌ ಬೈಬಲು “ಮುದ್ರಣಕಲೆಗೆ ಮತ್ತು ಶಾಸ್ತ್ರೀಯ ವಿಜ್ಞಾನಕ್ಕೆ ಒಂದು ನಿದರ್ಶನ”ವಾಗಿದೆ ಎಂದು ಬಹಿರಂಗವಾಗಿ ಗುಣವಿಮರ್ಶೆಮಾಡಲ್ಪಟ್ಟಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಈ ಕೃತಿಯು “ಶಾಸ್ತ್ರವಚನಗಳ ಅಧ್ಯಯನ ಮಾಡುವುದರಲ್ಲಿನ ಆಸಕ್ತಿಯನ್ನು ನವೀಕರಿಸ”ಬೇಕೆಂಬುದು ಥೀಸ್‌ನೀರೋಸನ ಉದ್ದೇಶವಾಗಿತ್ತಾದರೂ, ಜನಸಾಮಾನ್ಯರಿಗೆ ಬೈಬಲನ್ನು ಲಭ್ಯಗೊಳಿಸುವುದು ಅವನ ಬಯಕೆಯಾಗಿರಲಿಲ್ಲ. “ದೇವರ ವಾಕ್ಯವು ಜನಸಾಮಾನ್ಯರ ಹಿಡಿತಕ್ಕೆ ಸಿಗದಿರುವಂಥ ರೀತಿಯಲ್ಲಿ ಅದನ್ನು ಜಾಗರೂಕತೆಯಿಂದ ರಹಸ್ಯಮಯವಾಗಿ ಇರಿಸಬೇಕು” ಎಂದು ಅವನು ನೆನಸಿದನು. “ಶಿಲುಬೆಗೇರಿಸಲ್ಪಟ್ಟಿದ್ದ ತನ್ನ ಪುತ್ರನ ತಲೆಯ ಬಳಿ ಕೆತ್ತಲ್ಪಟ್ಟಿದ್ದ ಕೆತ್ತನೆಯಲ್ಲಿ ದೇವರು ಅನುಮತಿಸಿದ್ದ ಮೂರು ಪುರಾತನ ಭಾಷೆಗಳು ಮಾತ್ರ ಶಾಸ್ತ್ರವಚನಗಳಲ್ಲಿ ಉಪಯೋಗಿಸಲ್ಪಡಬೇಕು” ಎಂದು ಸಹ ಅವನು ನಂಬಿದ್ದನು. * ಈ ಕಾರಣಕ್ಕಾಗಿಯೇ ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲೋಟ್‌ನಲ್ಲಿ ಸ್ಪ್ಯಾನಿಷ್‌ ಭಾಷೆಯ ಯಾವುದೇ ಭಾಷಾಂತರವು ಸೇರಿರಲಿಲ್ಲ.

ಮೂಲ ಭಾಷೆಗಳಿಗೆ ಪ್ರತಿಯಾಗಿ ವಲ್ಗೇಟ್‌

ಪಾಲೀಗ್ಲೋಟ್‌ ಬೈಬಲಿನ ಸ್ವರೂಪವೇ ಇದರ ಉತ್ಪಾದನೆಯಲ್ಲಿ ಒಳಗೂಡಿದ್ದ ವಿದ್ವಾಂಸರ ನಡುವೆ ಕೆಲವು ಭಿನ್ನಾಭಿಪ್ರಾಯಗಳನ್ನು ಉಂಟುಮಾಡಿತು. ಆಂಟೋನ್ಯೋ ಡೇ ನೇಬ್ರೀಹಾ * ಎಂಬ ಪ್ರಖ್ಯಾತ ಸ್ಪ್ಯಾನಿಷ್‌ ವಿದ್ವಾಂಸನು, ಪಾಲೀಗ್ಲೋಟ್‌ ಬೈಬಲಿನಲ್ಲಿ ಮುದ್ರಿಸಲ್ಪಡಲಿದ್ದ ವಲ್ಗೇಟ್‌ ಮೂಲಪಾಠವನ್ನು ಪರಿಷ್ಕರಿಸುವ ಜವಾಬ್ದಾರಿಯನ್ನು ಹೊತ್ತಿದ್ದನು. ಕ್ಯಾಥೊಲಿಕ್‌ ಚರ್ಚು ಜೆರೋಮ್‌ನ ವಲ್ಗೇಟ್‌ ಬೈಬಲನ್ನು ಏಕಮಾತ್ರ ಅಧಿಕೃತ ಭಾಷಾಂತರವಾಗಿ ಪರಿಗಣಿಸಿತ್ತಾದರೂ, ವಲ್ಗೇಟ್‌ ಅನ್ನು ಮೂಲ ಹೀಬ್ರು, ಅರಮೇಯಿಕ್‌, ಹಾಗೂ ಗ್ರೀಕ್‌ ಮೂಲಪಾಠಗಳೊಂದಿಗೆ ಹೋಲಿಸಿ ನೋಡುವ ಆವಶ್ಯಕತೆಯನ್ನು ನೇಬ್ರೀಹಾ ಮನಗಂಡನು. ಅವನು ಆಗ ಅಸ್ತಿತ್ವದಲ್ಲಿದ್ದ ವಲ್ಗೇಟ್‌ನ ಪ್ರತಿಗಳಲ್ಲಿ ನುಸುಳಿದ್ದ ಸುಸ್ಪಷ್ಟವಾದ ತಪ್ಪುಗಳನ್ನು ಸರಿಪಡಿಸಲು ಬಯಸಿದನು.

ವಲ್ಗೇಟ್‌ ಮತ್ತು ಮೂಲ ಭಾಷೆಗಳ ನಡುವೆ ಇರಬಹುದಾದ ಯಾವುದೇ ವ್ಯತ್ಯಾಸವನ್ನು ಬಗೆಹರಿಸಲಿಕ್ಕಾಗಿ ನೇಬ್ರೀಹಾನು ಥೀಸ್‌ನೀರೋಸನನ್ನು ಹೀಗೆ ಉತ್ತೇಜಿಸಿದನು: “ನಮ್ಮ ಧರ್ಮದ, ಅಂದರೆ ಹೀಬ್ರು ಮತ್ತು ಗ್ರೀಕ್‌ ಭಾಷೆಗಳ ದೀವಟಿಗೆಯನ್ನು ಪುನಃ ಬೆಳಗಿಸು. ಈ ಕೆಲಸಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡಿರುವವರಿಗೆ ಪ್ರತಿಫಲ ನೀಡು.” ಮತ್ತು ಅವನು ಈ ಮುಂದಿನ ಸಲಹೆಯನ್ನೂ ನೀಡಿದನು: “ಹೊಸ ಒಡಂಬಡಿಕೆಯ ಲ್ಯಾಟಿನ್‌ ಹಸ್ತಪ್ರತಿಗಳಲ್ಲಿ ಪ್ರತಿ ಬಾರಿ ವ್ಯತ್ಯಾಸವು ಕಂಡುಬರುವಾಗಲೂ ನಾವು ಅದನ್ನು ಗ್ರೀಕ್‌ ಹಸ್ತಪ್ರತಿಗಳೊಂದಿಗೆ ಹೋಲಿಸಿ ನೋಡಬೇಕು. ಹಳೇ ಒಡಂಬಡಿಕೆಯ ಬೇರೆ ಬೇರೆ ಲ್ಯಾಟಿನ್‌ ಹಸ್ತಪ್ರತಿಗಳ ನಡುವೆ ಅಥವಾ ಲ್ಯಾಟಿನ್‌ ಮತ್ತು ಗ್ರೀಕ್‌ ಹಸ್ತಪ್ರತಿಗಳ ನಡುವೆ ಭಿನ್ನಾಭಿಪ್ರಾಯವು ಉಂಟಾದಾಗಲೆಲ್ಲಾ, ವಿಶ್ವಾಸಾರ್ಹವಾದ ಹೀಬ್ರು ಮೂಲವನ್ನು ಪರೀಕ್ಷಿಸುವ ಮೂಲಕ ನಾವು ನಿಷ್ಕೃಷ್ಟತೆಯನ್ನು ಹುಡುಕಲು ಪ್ರಯತ್ನಿಸಬೇಕು.”

ಇದಕ್ಕೆ ಥೀಸ್‌ನೀರೋಸನು ಹೇಗೆ ಪ್ರತಿಕ್ರಿಯಿಸಿದನು? ಪಾಲೀಗ್ಲೋಟ್‌ನ ಬೈಬಲಿನ ತನ್ನ ಮುನ್ನುಡಿಯಲ್ಲಿ ಥೀಸ್‌ನೀರೋಸನು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಯಪಡಿಸಿದನು. “ನಾವು ದಿವ್ಯ ಜೆರೋಮ್‌ನ ಲ್ಯಾಟಿನ್‌ ಭಾಷಾಂತರವನ್ನು, ಯೆಹೂದ್ಯರ ಆರಾಧನಾ ಮಂದಿರ [ಹೀಬ್ರು ಮೂಲಗ್ರಂಥ] ಮತ್ತು ಪೌರಸ್ತ್ಯ ಚರ್ಚಿನ [ಗ್ರೀಕ್‌ ಮೂಲಗ್ರಂಥ] ಮಧ್ಯೆ ರೋಮನ್‌ ಅಥವಾ ಲ್ಯಾಟಿನ್‌ ಚರ್ಚನ್ನು ಪ್ರತಿನಿಧಿಸುವ ಯೇಸುವಿನ ಎರಡೂ ಪಕ್ಕಗಳಲ್ಲಿ ಕಳ್ಳರನ್ನು ನೇತುಹಾಕಿಸಿದ ಹಾಗೆ ಇಟ್ಟಿದ್ದೇವೆ.” ಈ ರೀತಿಯಲ್ಲಿ ಥೀಸ್‌ನೀರೋಸನು, ಮೂಲ ಭಾಷೆಗಳ ಮೂಲಪಾಠಕ್ಕೆ ಅನುಸಾರವಾಗಿ ಲ್ಯಾಟಿನ್‌ ವಲ್ಗೇಟ್‌ ಅನ್ನು ತಿದ್ದಲು ನೇಬ್ರೀಹಾನಿಗೆ ಅನುಮತಿಯನ್ನು ಕೊಡಲಿಲ್ಲ. ಕಟ್ಟಕಡೆಗೆ ನೇಬ್ರೀಹಾನು ಅಪೂರ್ಣವಾದ ಪರಿಷ್ಕೃತ ಕೃತಿಯಲ್ಲಿ ತನ್ನ ಹೆಸರನ್ನು ಸೇರಿಸುವುದಕ್ಕೆ ಬದಲಾಗಿ ಈ ಕಾರ್ಯಯೋಜನೆಯನ್ನೇ ತೊರೆಯಲು ನಿರ್ಧರಿಸಿದನು.

ಕಾಮಾ ಯೋಹಾನೇಯುಮ್‌

ಬೈಬಲಿನ ಮೂಲ ಭಾಷೆಗಳಲ್ಲಿ ಪರಿಷ್ಕೃತ ಮೂಲಪಾಠವನ್ನು ಸಿದ್ಧಪಡಿಸುವುದರಲ್ಲಿ ಆಲ್‌ಕಾಲಾ ಥೇ ಏನಾರೇಸ್‌ನ ಪಾಲೀಗ್ಲೋಟ್‌ ಒಂದು ದೈತ್ಯಾಕಾರದ ಮುನ್ನೆಜ್ಜೆಯಾಗಿತ್ತಾದರೂ, ಕೆಲವೊಮ್ಮೆ ಪಾಂಡಿತ್ಯಕ್ಕಿಂತಲೂ ಹೆಚ್ಚಾಗಿ ಸಂಪ್ರದಾಯವೇ ಮೇಲುಗೈ ಪಡೆಯಿತು. ವಲ್ಗೇಟ್‌ ಬೈಬಲನ್ನು ಎಷ್ಟು ಶ್ರೇಷ್ಠವಾಗಿ ಪರಿಗಣಿಸಲಾಗಿತ್ತೆಂದರೆ, ಸಂಪಾದಕರು ಕೆಲವೊಂದು ಸಂದರ್ಭಗಳಲ್ಲಿ ಮೂಲ ಗ್ರೀಕ್‌ನೊಂದಿಗೆ ಹೊಂದಿಕೆಯಲ್ಲಿರುವಂತೆ ಲ್ಯಾಟಿನ್‌ ಮೂಲಪಾಠವನ್ನು ಸರಿಪಡಿಸುವುದಕ್ಕೆ ಬದಲಾಗಿ, ಇದು ಲ್ಯಾಟಿನ್‌ನೊಂದಿಗೆ ಸರಿಹೊಂದುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ “ಹೊಸ ಒಡಂಬಡಿಕೆ”ಯ ಗ್ರೀಕ್‌ ಮೂಲಪಾಠವನ್ನೇ ತಿದ್ದುವ ಹಂಗಿಗೆ ಶರಣಾದರು. ಇದಕ್ಕಿರುವ ಉದಾಹರಣೆಗಳಲ್ಲಿ ಒಂದು, ಕಾಮಾ ಯೋಹಾನೇಯುಮ್‌ ಎಂದು ಪ್ರಸಿದ್ಧವಾಗಿರುವ ಹೆಸರಾಂತ ಖೋಟಾ ಮೂಲಪಾಠವೇ ಆಗಿದೆ. * ಯೋಹಾನನು ತನ್ನ ಪತ್ರವನ್ನು ಬರೆದು ಮುಗಿಸಿ ಅನೇಕ ಶತಮಾನಗಳು ಕಳೆದ ಬಳಿಕ ಒಳಸೇರಿಸಲ್ಪಟ್ಟ ಈ ವಾಕ್ಸರಣಿಯು, ಆರಂಭದ ಯಾವುದೇ ಗ್ರೀಕ್‌ ಹಸ್ತಪ್ರತಿಗಳಲ್ಲಿ ಇರಲಿಲ್ಲ; ಈ ವಾಕ್ಸರಣಿಯು ವಲ್ಗೇಟ್‌ನ ಅತ್ಯಂತ ಹಳೆಯ ಲ್ಯಾಟಿನ್‌ ಹಸ್ತಪ್ರತಿಗಳಲ್ಲಿಯೂ ಕಂಡುಬರಲಿಲ್ಲ. ಆದುದರಿಂದ, ಇರ್ಯಾಸ್‌ಮಸನು ತನ್ನ ಗ್ರೀಕ್‌ “ಹೊಸ ಒಡಂಬಡಿಕೆ”ಯಲ್ಲಿ ಈ ಪ್ರಕ್ಷೇಪಣವನ್ನೇ ಇಲ್ಲವಾಗಿಸಿಬಿಟ್ಟನು.

ಪಾಲೀಗ್ಲೋಟ್‌ನ ಸಂಪಾದಕರು, ಶತಮಾನಗಳಿಂದಲೂ ಸಾಂಪ್ರದಾಯಿಕ ವಲ್ಗೇಟ್‌ ಬೈಬಲಿನ ಭಾಗವಾಗಿದ್ದ ಈ ವಚನವನ್ನು ತೆಗೆದುಹಾಕಲು ಇಷ್ಟಪಡಲಿಲ್ಲ. ಆದುದರಿಂದ, ಅವರು ಆ ಖೋಟಾ ವಚನವನ್ನು ಲ್ಯಾಟಿನ್‌ ಮೂಲಪಾಠದಲ್ಲಿ ಹಾಗೆಯೇ ಬಿಟ್ಟರು ಮತ್ತು ಎರಡೂ ಅಂಕಣಗಳು ಪರಸ್ಪರ ಹೊಂದಿಕೆಯಲ್ಲಿರಸಾಧ್ಯವಾಗುವಂತೆ ಇದನ್ನು ಭಾಷಾಂತರಿಸಿ, ಗ್ರೀಕ್‌ ಮೂಲಪಾಠದಲ್ಲೂ ಇದನ್ನು ಒಳಗೂಡಿಸಲು ನಿರ್ಧರಿಸಿದರು.

ಹೊಸ ಬೈಬಲ್‌ ಭಾಷಾಂತರಗಳಿಗೆ ಒಂದು ಆಧಾರ

ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲೋಟ್‌ನ ಮೌಲ್ಯವು, ಅದರಲ್ಲಿ ಸೆಪ್ಟುಅಜಂಟ್‌ನೊಂದಿಗೆ ಇಡೀ ಗ್ರೀಕ್‌ ಶಾಸ್ತ್ರವಚನಗಳ ಮೊದಲ ಮುದ್ರಿತ ಸಂಪುಟವನ್ನು ಒಳಗೂಡಿತ್ತು ಎಂಬ ವಾಸ್ತವಾಂಶದ ಮೇಲಷ್ಟೇ ಹೊಂದಿಕೊಂಡಿಲ್ಲ. ಇರ್ಯಾಸ್‌ಮಸನ ಗ್ರೀಕ್‌ “ಹೊಸ ಒಡಂಬಡಿಕೆ”ಯು ಗ್ರೀಕ್‌ ಶಾಸ್ತ್ರವಚನಗಳ (ಬೇರೆ ಬೇರೆ ಭಾಷೆಗಳಿಗೆ ಮಾಡಲ್ಪಟ್ಟ ಅನೇಕ ಭಾಷಾಂತರಗಳಿಗೆ ಆಧಾರ) ಅಂಗೀಕೃತ ಗ್ರಂಥಪಾಠವಾಗಿ ಪರಿಣಮಿಸಿದಂತೆಯೇ, ಪಾಲೀಗ್ಲೋಟ್‌ನ ಹೀಬ್ರು ಮೂಲಪಾಠವು ಹೀಬ್ರು-ಅರಮೇಯಿಕ್‌ ಶಾಸ್ತ್ರವಚನಗಳಿಗೆ ಪ್ರಧಾನ ಗ್ರಂಥಪಾಠವನ್ನು ಒದಗಿಸಿತು. * ವಿಲ್ಯಮ್‌ ಟಿಂಡೆಲನು ತನ್ನ ಇಂಗ್ಲಿಷ್‌ ಬೈಬಲ್‌ ಭಾಷಾಂತರದಲ್ಲಿ ಈ ಪಾಲೀಗ್ಲೋಟನ್ನು ಮೂಲಭೂತ ಹೀಬ್ರು ಗ್ರಂಥಪಾಠವಾಗಿ ಉಪಯೋಗಿಸಿದನು.

ಹೀಗೆ, ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲೋಟ್‌ ಬೈಬಲನ್ನು ಉತ್ಪಾದಿಸಿದ ತಂಡದ ಪಾಂಡಿತ್ಯಪೂರ್ಣ ಕೆಲಸವು, ಶಾಸ್ತ್ರೀಯ ಪಾಂಡಿತ್ಯದ ಪ್ರಗತಿಯಲ್ಲಿ ಗಮನಾರ್ಹ ಪಾತ್ರವನ್ನು ವಹಿಸಿತು. ಯೂರೋಪಿನಾದ್ಯಂತ ಬೈಬಲಿನಲ್ಲಿ ಆಸಕ್ತಿಯು ಬೆಳೆಯುತ್ತಿದ್ದು, ಜನರ ಸಾಮಾನ್ಯ ಭಾಷೆಯಲ್ಲಿ ಇದನ್ನು ಭಾಷಾಂತರಿಸುವ ಉತ್ತೇಜನವು ದೊರಕಲು ಆರಂಭವಾದ ಒಂದು ಸಮಯದಲ್ಲೇ ಇದು ಪ್ರಕಾಶನ ಮಾಡಲ್ಪಟ್ಟಿತು. ಗ್ರೀಕ್‌ ಹಾಗೂ ಹೀಬ್ರು ಮೂಲಪಾಠಗಳ ಪರಿಷ್ಕರಣ ಹಾಗೂ ಸಂರಕ್ಷಣೆಗೆ ಸಹಾಯವನ್ನಿತ್ತ ಸೂಕ್ತಕ್ರಮಗಳ ಸರಪಣಿಯಲ್ಲಿ ಪಾಲೀಗ್ಲೋಟ್‌ ಬೈಬಲು ಇನ್ನೊಂದು ಕೊಂಡಿಯಾಗಿ ಪರಿಣಮಿಸಿತು. ಈ ಎಲ್ಲಾ ಪ್ರಯತ್ನಗಳು ‘ಶುದ್ಧವಾದ ಯೆಹೋವನ ವಚನ,’ ‘ನಮ್ಮ ದೇವರ ಮಾತು ಸದಾಕಾಲವೂ ಇರುವುದು’ ಎಂಬ ದೈವಿಕ ಉದ್ದೇಶದೊಂದಿಗೆ ಹೊಂದಿಕೆಯಲ್ಲಿವೆ.​—⁠ಕೀರ್ತನೆ 18:30; ಯೆಶಾಯ 40:8; 1 ಪೇತ್ರ 1:⁠25.

[ಪಾದಟಿಪ್ಪಣಿಗಳು]

^ ಪ್ಯಾರ. 6 ಆರುನೂರು ಪ್ರತಿಗಳು ಕಾಗದದ ಮೇಲೂ ಆರು ಪ್ರತಿಗಳು ಚರ್ಮದ ಮೇಲೂ ಮಾಡಲ್ಪಟ್ಟವು. ಇಸವಿ 1984ರಲ್ಲಿ ಸೀಮಿತ ಸಂಖ್ಯೆಯಲ್ಲಿ ಇದರ ಯಥಾವತ್ತಾದ ಪ್ರತಿಗಳನ್ನು ಮುದ್ರಿಸಲಾಯಿತು.

^ ಪ್ಯಾರ. 12 ಹೀಬ್ರು, ಗ್ರೀಕ್‌, ಮತ್ತು ಲ್ಯಾಟಿನ್‌.​—⁠ಯೋಹಾನ 19:⁠20.

^ ಪ್ಯಾರ. 14 ನೇಬ್ರೀಹಾನನ್ನು ಸ್ಪ್ಯಾನಿಷ್‌ ಮಾನವತಾವಾದಿ (ಪ್ರಗತಿಪರ ವಿದ್ವಾಂಸರು)ಗಳಲ್ಲೇ ಅಗ್ರಗಾಮಿಯಾಗಿ ಪರಿಗಣಿಸಲಾಗುತ್ತದೆ. ಇಸವಿ 1492ರಲ್ಲಿ ಅವನು ಮೊದಲ ಗ್ರಾಮಾಟೀಕಾ ಕಾಸ್ಟೆಲ್ಯಾನಾ (ಕ್ಯಾಸ್ಟೆಲ್ಯಾನಾ ಭಾಷೆಯ ವ್ಯಾಕರಣ)ವನ್ನು ಪ್ರಕಾಶನ ಮಾಡಿದನು. ಮೂರು ವರ್ಷಗಳ ತರುವಾಯ ಅವನು ತನ್ನ ಜೀವಮಾನಕಾಲದ ಉಳಿದ ಅವಧಿಯನ್ನು ಪವಿತ್ರ ಶಾಸ್ತ್ರಗಳ ಅಧ್ಯಯನಕ್ಕೆ ಮೀಸಲಾಗಿರಿಸಲು ನಿರ್ಧರಿಸಿದನು.

^ ಪ್ಯಾರ. 18 ಬೈಬಲಿನ ಕೆಲವು ಭಾಷಾಂತರಗಳಲ್ಲಿ 1 ಯೋಹಾನ 5:7ರಲ್ಲಿ ಕಂಡುಬರುವ ಖೋಟಾ ವಾಕ್ಸರಣಿಯು ಹೀಗೆ ಓದಲ್ಪಡುತ್ತದೆ: “ತಂದೆ, ವಾಕ್ಯ, ಮತ್ತು ಪವಿತ್ರಾತ್ಮ ಸ್ವರ್ಗದಲ್ಲಿದ್ದಾರೆ: ಮತ್ತು ಇವರು ಮೂವರು ಒಬ್ಬರಾಗಿದ್ದಾರೆ.”

^ ಪ್ಯಾರ. 21 ಇರ್ಯಾಸ್‌ಮಸನ ಕೃತಿಯ ಕುರಿತಾದ ವೃತ್ತಾಂತಕ್ಕಾಗಿ, 1982, ಸೆಪ್ಟೆಂಬರ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ 8-11ನೆಯ ಪುಟಗಳನ್ನು ನೋಡಿರಿ.

[ಪುಟ 29ರಲ್ಲಿರುವ ಚಿತ್ರ]

ಕಾರ್ಡಿನಲ್‌ ಹೀಮೇನೇಥ್‌ ಥೇ ಥೀಸ್‌ನೀರೋಸ್‌

[ಕೃಪೆ]

Biblioteca Histórica. Universidad Complutense de Madrid

[ಪುಟ 30ರಲ್ಲಿರುವ ಚಿತ್ರ]

ಆಂಟೋನ್ಯೋ ಡೇ ನೇಬ್ರೀಹಾ

[ಕೃಪೆ]

Biblioteca Histórica. Universidad Complutense de Madrid

[ಪುಟ 28ರಲ್ಲಿರುವ ಚಿತ್ರ ಕೃಪೆ]

Biblioteca Histórica. Universidad Complutense de Madrid