ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಚಿತ್ತವು ನೆರವೇರುತ್ತಾ ಇದೆಯೊ?

ದೇವರ ಚಿತ್ತವು ನೆರವೇರುತ್ತಾ ಇದೆಯೊ?

ದೇವರ ಚಿತ್ತವು ನೆರವೇರುತ್ತಾ ಇದೆಯೊ?

“ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”​ಮತ್ತಾಯ 6:⁠10.

ಹೂಲ್ಯೋ ಮತ್ತು ಕ್ರಿಸ್ಟೀನ ತಮ್ಮ ನಾಲ್ಕು ಮಂದಿ ಮಕ್ಕಳು ತಮ್ಮ ಕಣ್ಮುಂದೆಯೇ ಸುಟ್ಟು ಕರಕಲಾಗುವುದನ್ನು ನೋಡಿ ದಿಗ್ಭ್ರಾಂತರಾದರು. ರಸ್ತೆಬದಿಯಲ್ಲಿ ನಿಲ್ಲಿಸಲ್ಪಟ್ಟಿದ್ದ ಅವರ ಕಾರಿಗೆ ಅಮಲೇರಿದ್ದ ವಾಹನ ಚಾಲಕನೊಬ್ಬನು ಡಿಕ್ಕಿ ಹೊಡೆದಾಗ, ಅದು ಸ್ಫೋಟಿಸಿ ಭಗ್ಗನೆ ಉರಿಯತೊಡಗಿತು. ಅವರ ಐದನೆಯ ಮಗ ಮಾರ್ಕೊಸನನ್ನು ಆ ಅಗ್ನಿಕುಂಡದಿಂದ ರಕ್ಷಿಸಲಾಗಿತ್ತಾದರೂ ಆ ಜ್ವಾಲೆಯಿಂದ ಅವನ ದೇಹವು ಸುಟ್ಟುಹೋಗಿ, ಶಾಶ್ವತವಾಗಿ ವಿಕಾರವಾಗಿಬಿಟ್ಟಿತು. ಅವನು ಒಂಬತ್ತು ವರ್ಷ ಪ್ರಾಯದವನಾಗಿದ್ದನು. ಅವನ ತಂದೆ ದುಃಖದಲ್ಲಿ ಮುಳುಗಿಹೋದನು. ಆದರೂ, “ಇದು ದೇವರ ಚಿತ್ತ, ಒಳ್ಳೇದಾಗಲಿ ಕೆಟ್ಟದ್ದಾಗಲಿ ಏನೇ ಆದರೂ ಇದನ್ನು ನಾವು ಅರ್ಥಮಾಡಿಕೊಳ್ಳಬೇಕು” ಎಂಬ ಮಾತುಗಳನ್ನಾಡಿ ಅವನು ಸ್ವತಃ ತನಗೂ ತನ್ನ ಕುಟುಂಬಕ್ಕೂ ಆದರಣೆ ನೀಡಿದನು.

ಇಂಥ ದುರಂತಕರ ಸಂಭವದ ಸಮಯದಲ್ಲಿ ಅನೇಕರು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ‘ದೇವರು ಸರ್ವಶಕ್ತನಾಗಿದ್ದು ನಮ್ಮ ಬಗ್ಗೆ ಕಾಳಜಿವಹಿಸುತ್ತಿರುವುದರಿಂದ, ಏನು ನಡೆದಿದೆಯೊ ಅದು ನಮಗೆ ಗ್ರಹಿಸಲು ಕಷ್ಟವಾಗಿರುವುದಾದರೂ, ಯಾವುದೊ ರೀತಿಯಲ್ಲಿ ನಮ್ಮ ಒಳಿತಿಗಾಗಿಯೇ ಇರಬೇಕು’ ಎಂದು ಅವರು ತರ್ಕಿಸುತ್ತಾರೆ. ಈ ತರ್ಕವನ್ನು ನೀವು ಸಮ್ಮತಿಸುತ್ತೀರೊ?

ಒಳ್ಳೇದಾಗಿರಲಿ ಕೆಟ್ಟದ್ದಾಗಿರಲಿ ಏನೇ ನಡೆದರೂ ಅದು ದೇವರ ಚಿತ್ತವೆಂಬ ಅಭಿಪ್ರಾಯವು ಹೆಚ್ಚಾಗಿ, ಮೇಲೆ ಉಲ್ಲೇಖಿಸಲ್ಪಟ್ಟಿರುವ ಕರ್ತನ ಪ್ರಾರ್ಥನೆಯಲ್ಲಿನ ಯೇಸುವಿನ ಮಾತುಗಳ ಮೇಲೆ ಆಧಾರಿತವಾಗಿರುತ್ತದೆ. ದೇವರ ಚಿತ್ತವು ಪರಲೋಕದಲ್ಲಿ ನೆರವೇರುತ್ತಿದೆಯಲ್ಲವೇ? ‘ನಿನ್ನ ಚಿತ್ತವು ಭೂಲೋಕದಲ್ಲಿಯೂ ನೆರವೇರಲಿ’ ಎಂದು ಪ್ರಾರ್ಥಿಸುವ ಮೂಲಕ, ಭೂಮಿಯ ಮೇಲೆ ಏನು ನಡೆಯುತ್ತಿದೆಯೊ ಅದೆಲ್ಲವೂ ದೇವರ ಚಿತ್ತವಾಗಿದೆಯೆಂದು ನಾವು ಸಮ್ಮತಿಸುತ್ತಿಲ್ಲವೇ?

ಆದರೆ ಅನೇಕರು ಈ ಅಭಿಪ್ರಾಯವನ್ನು ಶಂಕಿಸುತ್ತಾರೆ. ಅವರಿಗಾದರೋ ಈ ವಿಚಾರವು, ದೇವರು ತನ್ನ ಮಾನವ ಸೃಷ್ಟಿಯ ಭಾವನೆಗಳ ಕಡೆಗೆ ಕಲ್ಲುಹೃದಯದವನಾಗಿದ್ದಾನೆ ಎಂಬ ಚಿತ್ರಣವನ್ನು ಕೊಡುತ್ತದೆ. ‘ಒಬ್ಬ ಪ್ರೀತಿಯ ದೇವರು ಮುಗ್ಧ ಜನರಿಗಾಗಿ ಭಯಂಕರ ವಿಷಯಗಳನ್ನು ಹೇಗೆ ಬಯಸ್ಯಾನು?’ ಎಂದವರು ಕೇಳುತ್ತಾರೆ. ‘ಒಂದುವೇಳೆ ಸಂಭವಿಸುವಂಥ ಕೆಟ್ಟ ವಿಷಯಗಳಿಂದ ನಾವು ಒಂದು ಪಾಠವನ್ನು ಕಲಿಯಬೇಕೆಂದಿರುವಲ್ಲಿ, ಆ ಪಾಠವೇನಾಗಿರಬಹುದು?’ ಬಹುಶಃ ನಿಮಗೂ ಇದೇ ರೀತಿ ಅನಿಸುತ್ತದೆ.

ಈ ವಿಷಯದಲ್ಲಿ ಯೇಸುವಿನ ಮಲತಮ್ಮನಾದ ಶಿಷ್ಯ ಯಾಕೋಬನು ಬರೆದುದು: “ಶೋಧನೆಗೆ ಗುರಿಯಾಗಿರುವ ವ್ಯಕ್ತಿಯು, ‘ದೇವರು ನನ್ನನ್ನು ಶೋಧಿಸುತ್ತಿದ್ದಾನೆ’ ಎಂದು ಹೇಳಬಾರದು. ಕೆಟ್ಟದ್ದು ದೇವರನ್ನು ಶೋಧಿಸಲಾರದು. ದೇವರು ತಾನಾಗಿಯೇ ಯಾರನ್ನೂ ಶೋಧಿಸುವುದಿಲ್ಲ.” (ಯಾಕೋಬ 1:​13, ಪರಿಶುದ್ಧ ಬೈಬಲ್‌ *) ದೇವರು ಕೆಟ್ಟ ವಿಷಯಗಳ ಮೂಲನಲ್ಲ. ಆದುದರಿಂದ, ಇಂದು ಭೂಮಿಯ ಮೇಲೆ ಸಂಭವಿಸುವಂಥದ್ದೆಲ್ಲವೂ ದೇವರ ಚಿತ್ತವಲ್ಲವೆಂಬುದು ಸ್ಪಷ್ಟ. ಶಾಸ್ತ್ರಗಳಲ್ಲಿ, ಮನುಷ್ಯನ ಚಿತ್ತ, ಜನಾಂಗಗಳ ಚಿತ್ತ ಮತ್ತು ಪಿಶಾಚನ ಚಿತ್ತದ ಕುರಿತಾಗಿಯೂ ತಿಳಿಸಲಾಗಿದೆ. ಹೂಲ್ಯೋ ಮತ್ತು ಕ್ರಿಸ್ಟೀನರ ಕುಟುಂಬಕ್ಕೆ ಏನು ಸಂಭವಿಸಿತೊ ಅದು, ಒಬ್ಬ ಪ್ರೀತಿಪರ ಸ್ವರ್ಗೀಯ ತಂದೆಯ ಚಿತ್ತವಾಗಿರಸಾಧ್ಯವಿಲ್ಲ ಎಂಬುದನ್ನು ನೀವು ಒಪ್ಪಿಕೊಳ್ಳುವಿರೊ?

ಹಾಗಾದರೆ, ಯೇಸು ತನ್ನ ಶಿಷ್ಯರಿಗೆ ‘ನಿನ್ನ ಚಿತ್ತವು ನೆರವೇರಲಿ’ ಎಂದು ಪ್ರಾರ್ಥಿಸುವಂತೆ ಕಲಿಸಿದಾಗ ಅವನೇನನ್ನು ಅರ್ಥೈಸಿದನು? ಅದು, ನಿರ್ದಿಷ್ಟ ಸಂದರ್ಭಗಳಲ್ಲಿ ಹಸ್ತಕ್ಷೇಪಮಾಡುವಂತೆ ದೇವರಿಗೆ ಮಾಡುವ ಕೇವಲ ಒಂದು ವಿನಂತಿಯಾಗಿತ್ತೊ, ಇಲ್ಲವೆ ಹೆಚ್ಚು ಪ್ರಾಮುಖ್ಯವಾದ, ಉತ್ತಮವಾದ ಮತ್ತು ಎಲ್ಲರೂ ನಿರೀಕ್ಷಿಸಸಾಧ್ಯವಿರುವ ಒಂದು ಬದಲಾವಣೆಗಾಗಿ ಪ್ರಾರ್ಥಿಸುವಂತೆ ಯೇಸು ಕಲಿಸುತ್ತಿದ್ದನೊ? ಬೈಬಲು ಏನು ಹೇಳುತ್ತದೆಂಬದನ್ನು ನಾವು ಇನ್ನೂ ಮುಂದಕ್ಕೆ ಪರೀಕ್ಷಿಸಿನೋಡೋಣ.

[ಪಾದಟಿಪ್ಪಣಿ]

^ ಪ್ಯಾರ. 7 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 3ರಲ್ಲಿರುವ ಚಿತ್ರ ಕೃಪೆ]

ಕಾರು: Dominique Faget-STF/AFP/Getty Images; ಮಗು: FAO photo/B. Imevbore