ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಚಿತ್ತವು ಭೂಲೋಕದಲ್ಲಿ ನೆರವೇರುವಾಗ

ದೇವರ ಚಿತ್ತವು ಭೂಲೋಕದಲ್ಲಿ ನೆರವೇರುವಾಗ

ದೇವರ ಚಿತ್ತವು ಭೂಲೋಕದಲ್ಲಿ ನೆರವೇರುವಾಗ

ಯೇಸು ತನ್ನ ಶಿಷ್ಯರಿಗೆ, “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಕಲಿಸಿದಾಗ, ಅವನು ಅನುಭವದಿಂದ ಮಾತಾಡುತ್ತಾ ಇದ್ದನು. ಏಕೆಂದರೆ ಅವನು ಪರಲೋಕದಲ್ಲಿ ತಂದೆಯೊಂದಿಗೆ ಜೀವಿಸಿದ್ದನು. (ಮತ್ತಾಯ 6:10; ಯೋಹಾನ 1:18; 3:13; 8:42) ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ ಯೇಸು, ಪರಲೋಕದಲ್ಲಿ ಮತ್ತು ಭೂಲೋಕದಲ್ಲಿ ಎಲ್ಲವೂ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ನಡೆಯುತ್ತಿದ್ದ ಸಮಯವನ್ನು ನೋಡಿದ್ದನು. ಅವು, ಸಾಧನೆ ಮತ್ತು ಸಂತೃಪ್ತಿಯ ಹರ್ಷಕರ ಸಮಯಗಳಾಗಿದ್ದವು.​—⁠ಜ್ಞಾನೋಕ್ತಿ 8:​27-31.

ದೇವರ ಪ್ರಥಮ ಸೃಷ್ಟಿಜೀವಿಗಳು, ಆತ್ಮಜೀವಿಗಳಾದ ‘ದೇವದೂತರು, ಆತನ ಆಜ್ಞೆಗಳಿಗೆ ವಿಧೇಯರಾಗುವ ಬಲಿಷ್ಠ ಸೈನಿಕರು’ ಆಗಿದ್ದರು. ಅವರು ‘ಆತನ ಚಿತ್ತವನ್ನು ನೆರವೇರಿಸುವ ಸೇವಕರು’ ಆಗಿದ್ದರು ಮತ್ತು ಈಗಲೂ ಆಗಿದ್ದಾರೆ. (ಕೀರ್ತನೆ 103:20, 21, ಪರಿಶುದ್ಧ ಬೈಬಲ್‌ *) ಅವರಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸ್ವಂತ ಅಭಿವ್ಯಕ್ತಿ ಮತ್ತು ಆಯ್ಕೆಮಾಡುವ ಸ್ವಾತಂತ್ರ್ಯವಿತ್ತೊ? ಹೌದು, ಆದುದರಿಂದಲೇ ಭೂಮಿಯ ಸೃಷ್ಟಿಯಾದಾಗ, ಈ ‘ದೇವಕುಮಾರರೆಲ್ಲರೂ ಆನಂದಘೋಷಮಾಡಿದರು.’ (ಯೋಬ 38:⁠6) ಈ ಆನಂದಘೋಷವು ದೇವರ ಚಿತ್ತದ ವಿಷಯದಲ್ಲಿ ಅವರಿಗಿದ್ದ ವೈಯಕ್ತಿಕ ಸಂತೋಷವನ್ನು ಪ್ರತಿಬಿಂಬಿಸಿತು, ಮತ್ತು ಅವರು ದೇವರ ಚಿತ್ತದೊಂದಿಗೆ ಸಮ್ಮತಿಸಿದರು.

ಭೂಮಿಯನ್ನು ಸೃಷ್ಟಿಸಿದ ನಂತರ, ದೇವರು ಅದನ್ನು ಮಾನವ ನಿವಾಸಕ್ಕಾಗಿ ಸಿದ್ಧಗೊಳಿಸಿದನು ಮತ್ತು ಕೊನೆಗೆ ಪ್ರಥಮ ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸಿದನು. (ಆದಿಕಾಂಡ, ಅಧ್ಯಾಯ 1) ಇದು ಕೂಡ ಆನಂದಘೋಷಕ್ಕೆ ಅರ್ಹವಾಗಿತ್ತೊ? ಪ್ರೇರಿತ ವೃತ್ತಾಂತವು ತಿಳಿಸುವುದು: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು,” ಹೌದು ದೋಷವಿಲ್ಲದ್ದೂ, ಪರಿಪೂರ್ಣವಾದದ್ದೂ ಆಗಿತ್ತು.​—⁠ಆದಿಕಾಂಡ 1:⁠31.

ನಮ್ಮ ಪ್ರಥಮ ಹೆತ್ತವರು ಮತ್ತು ಅವರ ಸಂತತಿಗಾಗಿ ದೇವರ ಚಿತ್ತವೇನಾಗಿತ್ತು? ಆದಿಕಾಂಡ 1:28ಕ್ಕನುಸಾರ ಅದು ಕೂಡ ತುಂಬ ಒಳ್ಳೇದಾಗಿತ್ತು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” ಆ ಅದ್ಭುತಕರ ನೇಮಕವನ್ನು ಪೂರೈಸಲಿಕ್ಕಾಗಿ, ನಮ್ಮ ಮೊದಲ ಹೆತ್ತವರು ಮತ್ತು ಅವರ ಸಂತತಿಯು ಸದಾಕಾಲ ಜೀವಿಸುತ್ತಾ ಇರುವುದು ಅಗತ್ಯವಾಗಿತ್ತು. ದುರಂತ, ಅನ್ಯಾಯ, ಮನೋವೇದನೆ ಇಲ್ಲವೆ ಮರಣವನ್ನು ಯಾವುದೂ ಸೂಚಿಸಲಿಲ್ಲ.

ಅದು, ದೇವರ ಚಿತ್ತವು ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ನೆರವೇರುತ್ತಾ ಇದ್ದ ಸಮಯವಾಗಿತ್ತು. ಆತನ ಚಿತ್ತವನ್ನು ನೆರವೇರಿಸುವವರು ಅದರಲ್ಲಿ ತುಂಬ ಸಂತಸವನ್ನು ಕಂಡುಕೊಳ್ಳಲಿದ್ದರು. ಆದರೆ ಎಡವಟ್ಟಾದದ್ದೆಲ್ಲಿ?

ದೇವರ ಚಿತ್ತದ ಕುರಿತು ಅನಿರೀಕ್ಷಿತವಾಗಿ ಒಂದು ಸವಾಲೆದ್ದಿತು. ಆದರೆ ಇದು, ಬಗೆಹರಿಸಲು ಅಸಾಧ್ಯವಾದುದ್ದಾಗಿರಲಿಲ್ಲ. ಹಾಗಿದ್ದರೂ ಮಾನವಕುಲಕ್ಕಾಗಿದ್ದ ದೇವರ ಚಿತ್ತದ ಬಗ್ಗೆ ಬಹಳಷ್ಟು ಗೊಂದಲವನ್ನುಂಟು ಮಾಡಿದ ಮನೋವೇದನೆ ಮತ್ತು ದುಃಖದ ಒಂದು ದೀರ್ಘಾವಧಿಯನ್ನು ಅದು ಆರಂಭಿಸಿತು. ಇದೆಲ್ಲಕ್ಕೂ ನಾವು ಬಲಿಪಶುಗಳಾಗಿದ್ದೇವೆ. ಆದರೆ ಆ ಸವಾಲೇನಾಗಿತ್ತು?

ದಂಗೆಯ ಸಮಯದಲ್ಲಿ ದೇವರ ಚಿತ್ತ

ಆತ್ಮಜೀವಿಗಳಾದ ‘ದೇವಕುಮಾರರಲ್ಲಿ’ ಒಬ್ಬನು, ಮಾನವರಿಗಾಗಿದ್ದ ದೇವರ ಚಿತ್ತಕ್ಕೆ ಅಡ್ಡಬರುವ ಸಾಧ್ಯತೆಯನ್ನು ನೋಡಿದನು. ಅವನ ಉದ್ದೇಶವು ಸ್ವತಃ ತಾನೇ ಪ್ರಯೋಜನಗಳನ್ನು ಹೊಂದುವುದಾಗಿತ್ತು. ಇದರ ಬಗ್ಗೆ ಆ ಆತ್ಮಜೀವಿಯು ಎಷ್ಟು ಹೆಚ್ಚು ಯೋಚಿಸಿದನೊ, ಅಷ್ಟು ಹೆಚ್ಚಾಗಿ ಅದು ಅವನಿಗೆ ಇನ್ನಷ್ಟು ಆಕರ್ಷಕವಾದದ್ದಾಗಿ ಮತ್ತು ಸಾಧ್ಯವಾದದ್ದಾಗಿ ತೋರಿಬಂತು. (ಯಾಕೋಬ 1:​14, 15) ಮೊದಲ ಮಾನವ ಜೋಡಿಯು ದೇವರಿಗೆ ಬದಲಾಗಿ ತನಗೆ ಕಿವಿಗೊಡುವಂತೆ ಮಾಡುವುದರಲ್ಲಿ ತಾನು ಯಶಸ್ವಿಯಾದರೆ, ಆಗ ದೇವರು ಒಂದು ಪ್ರತಿಸ್ಪರ್ಧಿ ಪರಮಾಧಿಕಾರವನ್ನು ಸಹಿಸಿಕೊಳ್ಳಲು ನಿರ್ಬಂಧಿಸಲ್ಪಡುವನೆಂದು ಅವನು ತರ್ಕಿಸಿರಬಹುದು. ದೇವರು ಅವರನ್ನು ಹೇಗೂ ಹತಿಸಲಿಕ್ಕಿಲ್ಲ, ಏಕೆಂದರೆ ಇದರಿಂದಾಗಿ ಆತನ ಉದ್ದೇಶವೇ ವಿಫಲವಾಗುವುದೆಂದು ಅವನು ನೆನಸಿರಬೇಕು. ಆದುದರಿಂದ, ಯೆಹೋವ ದೇವರು ತನ್ನ ಉದ್ದೇಶವನ್ನು ಮಾರ್ಪಡಿಸಿ, ತನ್ನ ಮಾನವ ಸೃಷ್ಟಿಯು ಈಗ ಯಾರಿಗೆ ವಿಧೇಯತೆ ತೋರಿಸುತ್ತಿದೆಯೊ ಈ ಆತ್ಮಪುತ್ರನ ಸ್ಥಾನವನ್ನು ಅಂಗೀಕರಿಸಬೇಕಾಗುವುದೆಂದು ಅವನು ಲೆಕ್ಕಹಾಕಿರಬೇಕು. ಸೂಕ್ತವಾಗಿಯೇ ಈ ದಂಗೆಕೋರನನ್ನು ಕಾಲಾನಂತರ, ಸೈತಾನನು ಅಂದರೆ ‘ವಿರೋಧಿಸುವವನು’ ಎಂದು ಕರೆಯಲಾಯಿತು.​—⁠ಯೋಬ 1:⁠6, NW ಪಾದಟಿಪ್ಪಣಿ.

ತನ್ನ ಇಚ್ಛೆಗನುಸಾರ ಕಾರ್ಯವೆಸಗುತ್ತಾ, ಸೈತಾನನು ಆ ಸ್ತ್ರೀಯ ಬಳಿ ಬಂದನು. ಅವಳು ದೇವರ ಚಿತ್ತವನ್ನು ಅಲಕ್ಷಿಸುವಂತೆ ಮತ್ತು ನೈತಿಕವಾಗಿ ಸ್ವತಂತ್ರಳಾಗುವಂತೆ ಪ್ರೇರಿಸುತ್ತಾ ಅವನಂದದ್ದು: “ನೀವು ಹೇಗೂ ಸಾಯುವದಿಲ್ಲ; . . . ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ.” (ಆದಿಕಾಂಡ 3:​1-5) ಆ ಸ್ತ್ರೀಗೆ ಇದು ಸ್ವಾತಂತ್ರ್ಯವನ್ನು ಕೊಡುವಂಥದ್ದಾಗಿ ತೋರಿತು, ಮತ್ತು ಹೆಚ್ಚು ಉತ್ತಮವಾದ ಜೀವನರೀತಿ ಎಂಬಂತೆ ತೋರಿದ ಈ ಮಾರ್ಗವನ್ನು ಅವಳು ಸ್ವೀಕರಿಸಿದಳು. ನಂತರ, ತನ್ನ ಗಂಡನು ತನ್ನೊಂದಿಗೆ ಸೇರುವಂತೆ ಅವಳು ಪುಸಲಾಯಿಸಿದಳು.​—⁠ಆದಿಕಾಂಡ 3:⁠6.

ಆದರೆ ಇದು ಆ ಜೋಡಿಗಾಗಿದ್ದ ದೇವರ ಚಿತ್ತವಾಗಿರಲಿಲ್ಲ. ಅದು ಅವರ ಸ್ವಂತ ಚಿತ್ತವಾಗಿತ್ತು. ಮತ್ತು ಅದರಿಂದ ವಿಪತ್ಕಾರಕ ಫಲಿತಾಂಶಗಳು ಬರಲಿದ್ದವು. ಅಂಥ ಮಾರ್ಗವು ಅವರ ಮೃತ್ಯುವಿಗೆ ನಡೆಸುವುದೆಂದು ದೇವರು ಈಗಾಗಲೇ ಅವರಿಗೆ ಹೇಳಿದ್ದನು. (ಆದಿಕಾಂಡ 3:⁠3) ಅವರು ದೇವರಿಂದ ಸ್ವತಂತ್ರರಾಗಿ ಯಶಸ್ವಿಯಾಗುವಂತೆ ಸೃಷ್ಟಿಸಲ್ಪಟ್ಟಿರಲಿಲ್ಲ. (ಯೆರೆಮೀಯ 10:23) ಅದಲ್ಲದೆ, ಅವರು ಅಪರಿಪೂರ್ಣರಾಗಲಿದ್ದರು, ಮತ್ತು ಅಪರಿಪೂರ್ಣತೆ ಹಾಗೂ ಮರಣವು ಈಗ ಅವರ ಸಂತತಿಗೂ ದಾಟಿಸಲ್ಪಡಲಿತ್ತು. (ರೋಮಾಪುರ 5:12) ಸೈತಾನನು ಈ ಎಲ್ಲಾ ಪರಿಣಾಮಗಳನ್ನು ತೊಲಗಿಸಲು ಸಾಧ್ಯವಿರಲಿಲ್ಲ.

ಈ ಎಲ್ಲಾ ವಿಕಸನಗಳು ಮಾನವಕುಲಕ್ಕಾಗಿ ಹಾಗೂ ಭೂಮಿಗಾಗಿ ದೇವರಿಗಿದ್ದ ಉದ್ದೇಶ ಅಥವಾ ಚಿತ್ತವನ್ನು ಸದಾಕಾಲಕ್ಕೂ ಬದಲಾಯಿಸಿದವೊ? ಇಲ್ಲ. (ಯೆಶಾಯ 55:​9-11) ಆದರೆ ಇವು, ಇತ್ಯರ್ಥಗೊಳಿಸಲ್ಪಡಬೇಕಾದ ಈ ವಾದಾಂಶಗಳನ್ನು ಎಬ್ಬಿಸಿದವೆಂಬದಂತೂ ನಿಶ್ಚಯ: ಸೈತಾನನು ಪ್ರತಿಪಾದಿಸಿದಂತೆ ಮಾನವಕುಲವು ದೇವರಂತೆ ‘ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿಯಲು’ ಸಾಧ್ಯವಿದೆಯೊ? ಅಂದರೆ, ಸಾಕಷ್ಟು ಸಮಯವು ಕೊಡಲ್ಪಡುವಲ್ಲಿ ನಾವು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು, ಯಾವುದು ಉಪಯುಕ್ತ ಮತ್ತು ಯಾವುದು ಹಾನಿಕರ ಎಂಬದನ್ನು ಸ್ವತಃ ನಿರ್ಧರಿಸಿಕೊಳ್ಳಲು ಸಾಧ್ಯವಿದೆಯೊ? ದೇವರು ಆಳುವ ವಿಧಾನವು ಅತ್ಯುತ್ತಮವಾದದ್ದಾಗಿರುವುದರಿಂದ ನಮ್ಮಿಂದ ಸಂಪೂರ್ಣ ವಿಧೇಯತೆಯನ್ನು ಪಡೆಯಲು ಆತನು ಅರ್ಹನಾಗಿದ್ದಾನೊ? ಆತನ ಚಿತ್ತಕ್ಕೆ ಪೂರ್ಣ ವಿಧೇಯತೆಯನ್ನು ತೋರಿಸುವುದು ಯೋಗ್ಯವೊ? ಈ ಪ್ರಶ್ನೆಗಳಿಗೆ ನೀವೇನು ಉತ್ತರ ಕೊಡುವಿರಿ?

ಬುದ್ಧಿಯುಳ್ಳ ಎಲ್ಲಾ ಸೃಷ್ಟಿಯ ಮುಂದೆ ಈ ವಾದಾಂಶಗಳನ್ನು ಬಗೆಹರಿಸುವ ಒಂದೇ ಒಂದು ಮಾರ್ಗವಿತ್ತು: ಸ್ವಾತಂತ್ರ್ಯವನ್ನು ಬಯಸುತ್ತಿದ್ದವರೆಲ್ಲರಿಗೆ, ಅದನ್ನು ಪ್ರಯತ್ನಿಸಿನೋಡಿ ಯಶಸ್ವಿಯಾಗುವಂತೆ ಅವಕಾಶಕೊಡುವುದೇ. ಅವರನ್ನು ಕೇವಲ ಸಾಯಿಸುವುದು, ಆ ವಾದಾಂಶಗಳನ್ನು ಬಗೆಹರಿಸುತ್ತಿರಲಿಲ್ಲ. ಮಾನವಜಾತಿಯು ಸಾಕಷ್ಟು ಸಮಯದ ವರೆಗೆ ಅದರ ಈ ಪಥದಲ್ಲಿ ಮುಂದುವರಿಯುವಂತೆ ಬಿಡುವುದು ಈ ವಾದಾಂಶಗಳನ್ನು ಇತ್ಯರ್ಥಗೊಳಿಸಲಿತ್ತು, ಏಕೆಂದರೆ ಆಗ ದೇವರಿಂದ ಸ್ವತಂತ್ರರಾಗುವುದರ ಫಲಿತಾಂಶಗಳು ಎಲ್ಲರಿಗೂ ವ್ಯಕ್ತವಾಗುತ್ತಿದ್ದವು. ದೇವರು ತಾನು ಈ ರೀತಿಯಲ್ಲಿ ವಿಷಯಗಳನ್ನು ನಿರ್ವಹಿಸಲಿದ್ದೇನೆಂದು, ಆ ಸ್ತ್ರೀಗೆ ಅವಳು ಮಕ್ಕಳನ್ನು ಹಡೆಯುವಳೆಂದು ಹೇಳಿದಾಗ ಸೂಚಿಸಿದನು. ಹೀಗೆ ಒಂದು ಮಾನವ ಕುಟುಂಬವು ಆರಂಭವಾಗಲಿತ್ತು. ಇದರಿಂದಾಗಿಯೇ ನಾವಿಂದು ಜೀವದಿಂದಿದ್ದೇವೆ!​—⁠ಆದಿಕಾಂಡ 3:​16, 20.

ಆದರೆ ಮಾನವರು ಮತ್ತು ಆ ದಂಗೆಕೋರ ಆತ್ಮಜೀವಿಯು ಸಂಪೂರ್ಣವಾಗಿ ಮನಸ್ಸೋ ಇಚ್ಛೆಯಂತೆ ನಡೆಯಲು ದೇವರು ಅನುಮತಿಸಲಿದ್ದನೆಂದು ಇದರ ಅರ್ಥವಾಗಿರಲಿಲ್ಲ. ದೇವರು ತನ್ನ ಪರಮಾಧಿಕಾರವನ್ನು ಬಿಟ್ಟುಕೊಡಲಿಲ್ಲ, ಇಲ್ಲವೆ ತನ್ನ ಉದ್ದೇಶವನ್ನು ಕೈಬಿಡಲಿಲ್ಲ. (ಕೀರ್ತನೆ 83:18) ಇದನ್ನು ಆತನು, ಆ ದಂಗೆಯನ್ನು ಚಿತಾಯಿಸಿದಾತನ ಕಟ್ಟಕಡೆಯ ಜಜ್ಜುವಿಕೆ ಮತ್ತು ಎಲ್ಲಾ ದುಷ್ಪರಿಣಾಮಗಳ ರದ್ದುಗೊಳಿಸುವಿಕೆಯನ್ನು ಮುಂತಿಳಿಸುವ ಮೂಲಕ ಸ್ಪಷ್ಟಪಡಿಸಿದನು. (ಆದಿಕಾಂಡ 3:15) ಹೀಗಿರುವುದರಿಂದ, ಅತ್ಯಾರಂಭದಿಂದಲೇ ಮಾನವ ಕುಟುಂಬಕ್ಕೆ ಕಷ್ಟಪರಿಹಾರವು ವಾಗ್ದಾನಿಸಲ್ಪಟ್ಟಿತ್ತು.

ಈ ಮಧ್ಯೆ, ನಮ್ಮ ಪ್ರಥಮ ಹೆತ್ತವರು ತಮ್ಮನ್ನು ಮತ್ತು ತಮ್ಮ ಭಾವೀ ಸಂತತಿಯನ್ನು ದೇವರ ಆಳ್ವಿಕೆಯಿಂದ ಪ್ರತ್ಯೇಕಿಸಿಕೊಂಡಿದ್ದರು. ಅವರ ಆ ನಿರ್ಣಯದ ದುಃಖಕರ ಫಲಿತಾಂಶಗಳನ್ನು ದೇವರು ತಡೆಗಟ್ಟಬೇಕಾದರೆ ಆತನು ಪ್ರತಿಯೊಂದು ಸಂದರ್ಭದಲ್ಲಿ ಅವರ ಮೇಲೆ ತನ್ನ ಚಿತ್ತವನ್ನು ಒತ್ತಾಯದಿಂದ ಹೇರಬೇಕಾಗುವುದನ್ನು ಅದು ಕೇಳಿಕೊಳ್ಳುತ್ತಿತ್ತು. ಹಾಗೆ ಮಾಡುವುದು, ದೇವರಿಂದ ಸ್ವತಂತ್ರವಾಗಿರಲು ಅವಕಾಶವನ್ನು ಕೊಡದೆ ಇರುವುದಕ್ಕೆ ಸಮಾನವಾಗಿರುತ್ತಿತ್ತು.

ನಿಜ, ಒಬ್ಬೊಬ್ಬ ವ್ಯಕ್ತಿಯು ವೈಯಕ್ತಿಕವಾಗಿ ದೇವರ ಆಳ್ವಿಕೆಯನ್ನು ಆಯ್ಕೆಮಾಡಸಾಧ್ಯವಿತ್ತು. ಈ ಅವಧಿಯಲ್ಲಿ ಜನರಿಗಾಗಿ ದೇವರ ಚಿತ್ತವೇನಾಗಿದೆ ಎಂಬುದನ್ನು ಅವರು ಕಲಿತುಕೊಂಡು, ಅದಕ್ಕೆ ಸಾಧ್ಯವಿರುವಷ್ಟು ನಿಕಟವಾಗಿ ಹೊಂದಿಕೊಳ್ಳಸಾಧ್ಯವಿತ್ತು. (ಕೀರ್ತನೆ 143:10) ಹಾಗಿದ್ದರೂ, ಮಾನವಕುಲದ ಪೂರ್ಣ ಸ್ವಾತಂತ್ರ್ಯದ ವಾದಾಂಶವು ಇತ್ಯರ್ಥಗೊಳಿಸಲ್ಪಡುವ ವರೆಗೆ, ಅವರು ಸಮಸ್ಯೆಗಳಿಂದ ವಿಮುಕ್ತರಾಗಿರುವುದಿಲ್ಲ.

ವೈಯಕ್ತಿಕ ಆಯ್ಕೆಯ ಪರಿಣಾಮಗಳು ಮಾನವ ಇತಿಹಾಸದ ಆರಂಭದಲ್ಲೇ ತೋರಿಬಂದವು. ಮಾನವ ಕುಟುಂಬದಲ್ಲಿ ಪ್ರಥಮಜಾತನಾಗಿದ್ದ ಕಾಯಿನನು ತನ್ನ ತಮ್ಮನಾದ ಹೇಬೆಲನನ್ನು ಕೊಂದುಹಾಕಿದನು, ಯಾಕಂದರೆ “ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಗೆ ಸರಿಯಾದವುಗಳೂ” ಆಗಿದ್ದವು. (1 ಯೋಹಾನ 3:⁠12) ಆದರೆ ಇದು ದೇವರ ಚಿತ್ತವಾಗಿರಲಿಲ್ಲ, ಯಾಕಂದರೆ ದೇವರು ಕಾಯಿನನನ್ನು ಎಚ್ಚರಿಸಿದ್ದನು, ಮತ್ತು ನಂತರ ಅವನನ್ನು ಶಿಕ್ಷಿಸಿದನು. (ಆದಿಕಾಂಡ 4:​3-12) ಸೈತಾನನು ನೀಡಿದಂಥ ನೈತಿಕ ಸ್ವಾತಂತ್ರ್ಯವನ್ನು ಕಾಯಿನನು ಆಯ್ಕೆಮಾಡಿದನು; ಹೀಗೆ ಅವನು ‘ಕೆಡುಕನಿಂದ ಹುಟ್ಟಿದವನಾದನು.’ ಇತರರೂ ಹಾಗೆಯೇ ಮಾಡಿದರು.

ಮಾನವ ಇತಿಹಾಸದ ಆರಂಭವಾಗಿ 1,500 ವರ್ಷಗಳು ಕಳೆದ ನಂತರ, “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು; ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು.” (ಆದಿಕಾಂಡ 6:11) ಭೂಮಿಯು ಕೆಟ್ಟುಹೋಗುವುದರಿಂದ ಸಂರಕ್ಷಿಸಲ್ಪಡಲು ನಿರ್ಣಾಯಕ ಕ್ರಮವು ತೆಗೆದುಕೊಳ್ಳಲ್ಪಡಲೇಬೇಕಾಗಿತ್ತು. ಭೌಗೋಳಿಕ ಪ್ರಳಯವನ್ನು ತಂದು, ಆಗ ಇದ್ದ ಒಂದೇ ಒಂದು ನೀತಿವಂತ ಕುಟುಂಬವನ್ನು​—⁠ನೋಹ, ಅವನ ಪತ್ನಿ, ಪುತ್ರರು ಮತ್ತು ಅವರ ಹೆಂಡತಿಯರನ್ನು​—⁠ಸಂರಕ್ಷಿಸುವ ಮೂಲಕ ದೇವರು ಕ್ರಮ ಕೈಗೊಂಡನು. (ಆದಿಕಾಂಡ 7:⁠1) ನಾವೆಲ್ಲರೂ ಅವರ ವಂಶಜರಾಗಿದ್ದೇವೆ.

ನೋಹನ ಆ ಸಮಯದಂದಿನಿಂದ, ದೇವರು ತನ್ನ ಚಿತ್ತವನ್ನು ತಿಳಿಯಲು ನಿಜವಾಗಿಯೂ ಬಯಸುವವರಿಗಾಗಿ ಮಾರ್ಗದರ್ಶನವನ್ನು ಒದಗಿಸಿದ್ದಾನೆ. ತನ್ನ ಮಾರ್ಗದರ್ಶನಕ್ಕಾಗಿ ಹುಡುಕುವವರಿಗಾಗಿ ತನ್ನ ಮಾತುಗಳನ್ನು ದಾಖಲಿಸಿಡುವಂತೆ ಆತನು ನಿಷ್ಠಾವಂತ ಪುರುಷರನ್ನು ಪ್ರೇರಿಸಿದನು. ಇವುಗಳು ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ. (2 ತಿಮೊಥೆಯ 3:16) ನಂಬಿಗಸ್ತ ಮಾನವರು ಆತನೊಂದಿಗೆ ಒಂದು ಸಂಬಂಧವನ್ನು ಹೊಂದಲು, ಹೌದು ಆತನ ಸ್ನೇಹಿತರಾಗುವಂತೆಯೂ ಆತನು ಪ್ರೀತಿಯಿಂದ ಅನುಮತಿಸಿದನು. (ಯೆಶಾಯ 41:⁠8) ಮತ್ತು ಇವರಿಗೆ, ಸ್ವಾತಂತ್ರ್ಯದ ಈ ಎಲ್ಲಾ ಸಹಸ್ರಮಾನಗಳಲ್ಲಿ ಮಾನವಕುಲವು ಅನುಭವಿಸಿರುವ ಕಷ್ಟಕರ ಪರೀಕ್ಷೆಗಳನ್ನು ಸಹಿಸಿಕೊಳ್ಳಲು ಬೇಕಾದಂಥ ಬಲವನ್ನು ಆತನು ಒದಗಿಸಿದ್ದಾನೆ. (ಕೀರ್ತನೆ 46:1; ಫಿಲಿಪ್ಪಿ 4:13) ಇದೆಲ್ಲದ್ದಕ್ಕಾಗಿ ನಾವೆಷ್ಟು ಆಭಾರಿಗಳಾಗಿರಬಲ್ಲೆವು!

‘ನಿನ್ನ ಚಿತ್ತವು ನೆರವೇರಲಿ’​—⁠ಸಂಪೂರ್ಣವಾಗಿ

ಇಷ್ಟರ ವರೆಗೆ ದೇವರೇನನ್ನು ಮಾಡಿದ್ದಾನೊ ಅದು ಮಾನವಕುಲಕ್ಕಾಗಿರುವ ಆತನ ಸಂಪೂರ್ಣ ಚಿತ್ತವಾಗಿರುವುದಿಲ್ಲ. ಕ್ರೈಸ್ತ ಅಪೊಸ್ತಲನಾದ ಪೇತ್ರನು ಬರೆದುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಈ ಸಾಂಕೇತಿಕ ಭಾಷೆಯು, ಮಾನವಕುಲದ ಮೇಲೆ ಒಂದು ಹೊಸ ಸರಕಾರ ಮತ್ತು ಆ ಸರಕಾರದಡಿಯಲ್ಲಿರುವ ಒಂದು ಹೊಸ ಮಾನವ ಸಮಾಜಕ್ಕೆ ಸೂಚಿಸುತ್ತದೆ.

ಸುಸ್ಪಷ್ಟವಾದ ಭಾಷೆಯನ್ನು ಬಳಸುತ್ತಾ, ಪ್ರವಾದಿಯಾದ ದಾನಿಯೇಲನು ಬರೆದುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, . . . ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಈ ಪ್ರವಾದನೆಯು, ಇಂದಿನ ಕಾರ್ಯಸಾಧಕವಲ್ಲದ ವಿಷಯಗಳ ವ್ಯವಸ್ಥೆಯು ಅಂತ್ಯಗೊಂಡು, ಅದು ದೇವರ ರಾಜ್ಯ ಇಲ್ಲವೆ ಸರಕಾರದಿಂದ ಸ್ಥಾನಪಲ್ಲಟವಾಗುವುದನ್ನು ಮುಂತಿಳಿಸುತ್ತದೆ. ಇದೆಂಥ ಒಳ್ಳೇ ಸುದ್ದಿಯಾಗಿದೆ! ಇಂದಿನ ಲೋಕವನ್ನು ಅನ್ಯಾಯದಿಂದ ತುಂಬಿಸಿ, ಪುನಃ ಒಮ್ಮೆ ಭೂಮಿಯನ್ನು ಕೆಡಿಸುವಂಥ ಬೆದರಿಕೆಯೊಡ್ಡುತ್ತಿರುವ ಸಂಘರ್ಷಗಳು ಮತ್ತು ಸ್ವಾರ್ಥವು ಒಂದು ದಿನ ಗತಕಾಲದ ಸಂಗತಿಯಾಗಿಬಿಡುವುದು.

ಇದೆಲ್ಲವೂ ಯಾವಾಗ ಸಂಭವಿಸುವುದು? ಯೇಸುವಿನ ಶಿಷ್ಯರು ಕೇಳಿದ್ದು: “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು?” ತಾನು ಕೊಟ್ಟ ಉತ್ತರದ ಭಾಗವಾಗಿ ಯೇಸು ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”​—⁠ಮತ್ತಾಯ 24:3, 14.

ಈ ಸಾರುವ ಕೆಲಸವು ಇಂದು ಲೋಕವ್ಯಾಪಕವಾಗಿ ನಡೆಸಲ್ಪಡುತ್ತಿದೆ ಎಂಬುದು ಜನಜನಿತ ವಿಷಯವಾಗಿದೆ. ನೀವು ಬಹುಶಃ ಇದನ್ನು ನಿಮ್ಮ ನೆರೆಹೊರೆಯಲ್ಲಿಯೇ ನೋಡಿದ್ದೀರಿ. ಇವರೂ ನಂಬುತ್ತಾರೆ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಪ್ರೊಫೆಸರ್‌ ಚಾರ್ಲ್ಸ್‌ ಎಸ್‌. ಬ್ರೇಡನ್‌ ಬರೆದುದು: “ಯೆಹೋವನ ಸಾಕ್ಷಿಗಳು ತಮ್ಮ ಸಾಕ್ಷಿಕಾರ್ಯದೊಂದಿಗೆ ಅಕ್ಷರಶಃವಾಗಿ ಇಡೀ ಜಗತ್ತನ್ನೇ ಆವರಿಸಿದ್ದಾರೆ. . . . ಈ ಲೋಕದಲ್ಲಿನ ಬೇರಾವುದೇ ಧಾರ್ಮಿಕ ಗುಂಪು ರಾಜ್ಯದ ಸುವಾರ್ತೆಯನ್ನು ಹಬ್ಬಿಸುವ ಪ್ರಯತ್ನದಲ್ಲಿ ಯೆಹೋವನ ಸಾಕ್ಷಿಗಳಷ್ಟು ಹುರುಪು ಮತ್ತು ಪಟ್ಟುಹಿಡಿಯುವಿಕೆಯನ್ನು ತೋರಿಸಿಲ್ಲ.” ಸಾಕ್ಷಿಗಳು ಈ ಸುವಾರ್ತೆಯನ್ನು 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಮತ್ತು ಸುಮಾರು 400 ಭಾಷೆಗಳಲ್ಲಿ ಸಕ್ರಿಯವಾಗಿ ಘೋಷಿಸುತ್ತಿದ್ದಾರೆ. ಮುಂಚಿತವಾಗಿ ತಿಳಿಸಲ್ಪಟ್ಟ ಈ ಕೆಲಸವು ಇಂಥ ಭೌಗೋಳಿಕ ಪ್ರಮಾಣದಲ್ಲಿ ಹಿಂದೆಂದೂ ಸಾಧಿಸಲ್ಪಟ್ಟಿರಲಿಲ್ಲ. ಆ ದೇವರ ರಾಜ್ಯವು, ಮಾನವ ಸರಕಾರಗಳನ್ನು ಸ್ಥಾನಪಲ್ಲಟಗೊಳಿಸುವ ಸಮಯವು ಈಗ ಹತ್ತಿರವಾಗುತ್ತಾ ಇದೆಯೆಂಬದನ್ನು ತೋರಿಸುವ ಅನೇಕ ಸಾಕ್ಷ್ಯಗಳಲ್ಲಿ ಇದು ಒಂದಾಗಿದೆ.

ಯಾವುದರ ಬಗ್ಗೆ ಸಾರಲಾಗುವುದೆಂದು ಯೇಸು ಹೇಳಿದನೊ ಆ ರಾಜ್ಯಕ್ಕಾಗಿಯೇ ನಾವು ಪ್ರಾರ್ಥಿಸುವಂತೆಯೂ ಅವನು ತನ್ನ ಮಾದರಿ ಪ್ರಾರ್ಥನೆಯಲ್ಲಿ ಕಲಿಸಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಹೌದು ಆ ರಾಜ್ಯವು, ಮಾನವಕುಲಕ್ಕಾಗಿ ಮತ್ತು ಭೂಮಿಗಾಗಿ ಇರುವ ತನ್ನ ಉದ್ದೇಶವನ್ನೂ ತನ್ನ ಚಿತ್ತವನ್ನೂ ನೆರವೇರಿಸಲು ದೇವರು ಉಪಯೋಗಿಸುವ ಸಾಧನವಾಗಿದೆ.

ಇದರರ್ಥವೇನು? ಇದನ್ನು ಪ್ರಕಟನೆ 21:​3, 4 ಉತ್ತರಿಸಲಿ: “ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು​—⁠ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು.” ಆಗ ದೇವರ ಚಿತ್ತವು ಖಂಡಿತವಾಗಿಯೂ ಭೂಲೋಕದಲ್ಲಿ ಮತ್ತು ಪರಲೋಕದಲ್ಲಿ ಸಂಪೂರ್ಣವಾಗಿ ನೆರವೇರುವುದು. * ನೀವು ಅದರ ಭಾಗವಾಗಿರಲು ಇಷ್ಟಪಡುವುದಿಲ್ಲವೆ?

[ಪಾದಟಿಪ್ಪಣಿಗಳು]

^ ಪ್ಯಾರ. 3 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 26 ದೇವರ ರಾಜ್ಯದ ಕುರಿತಾಗಿ ನೀವು ಹೆಚ್ಚನ್ನು ಕಲಿಯಲು ಬಯಸುವಲ್ಲಿ, ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ಸಂಪರ್ಕಿಸಿರಿ ಇಲ್ಲವೆ ಈ ಪತ್ರಿಕೆಯ 2ನೇ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ವಿಳಾಸಗಳಲ್ಲಿ ಒಂದಕ್ಕೆ ಬರೆಯಿರಿ.

[ಪುಟ 5ರಲ್ಲಿರುವ ಚಿತ್ರ]

ದೇವರ ಚಿತ್ತವನ್ನು ತ್ಯಜಿಸಿ ಪಡೆಯಲಾದ ಸ್ವಾತಂತ್ರ್ಯವು ದುರಂತವನ್ನು ತಂದೊಡ್ಡಿತು