ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷ ತುಂಬಿರುವ ಜಗತ್ತಿನಲ್ಲಿ ದಯೆಯನ್ನು ತೋರಿಸಲು ಪ್ರಯಾಸಪಡುವುದು

ದ್ವೇಷ ತುಂಬಿರುವ ಜಗತ್ತಿನಲ್ಲಿ ದಯೆಯನ್ನು ತೋರಿಸಲು ಪ್ರಯಾಸಪಡುವುದು

ದ್ವೇಷ ತುಂಬಿರುವ ಜಗತ್ತಿನಲ್ಲಿ ದಯೆಯನ್ನು ತೋರಿಸಲು ಪ್ರಯಾಸಪಡುವುದು

“ಭೂನಿವಾಸಿಯಾದ ಮನುಷ್ಯನಲ್ಲಿ ಅಪೇಕ್ಷಣೀಯ ವಿಷಯವು ಅವನ ಪ್ರೀತಿಪೂರ್ವಕ ದಯೆಯೇ.” —⁠ಜ್ಞಾನೋಕ್ತಿ 19:⁠22, Nw.

ನೀವು ಒಬ್ಬ ದಯಾಳು ವ್ಯಕ್ತಿಯಾಗಿದ್ದೀರೆಂದು ನೆನಸುತ್ತೀರೊ? ಹಾಗಿದ್ದರೆ, ಇಂದಿನ ಲೋಕದಲ್ಲಿ ಜೀವಿಸುವುದು ಕಷ್ಟಕರವಾಗಿರಬಲ್ಲದು. ನಿಜ, ಬೈಬಲಿನಲ್ಲಿ ದಯೆಯನ್ನು ‘ದೇವರಾತ್ಮದಿಂದ ಉಂಟಾಗುವ ಫಲಗಳಲ್ಲಿ’ ಒಂದಾಗಿ ಗುರುತಿಸಲಾಗಿದೆ. ಆದರೆ ಕ್ರೈಸ್ತದೇಶವೆಂದು ಹೇಳಿಕೊಳ್ಳುವಂಥ ದೇಶಗಳಲ್ಲೂ ದಯೆಯನ್ನು ತೋರಿಸುವುದು ಏಕೆ ತುಂಬ ಕಷ್ಟಕರವಾಗಿದೆ? (ಗಲಾತ್ಯ 5:22) ಹಿಂದಿನ ಲೇಖನದಲ್ಲಿ ನಾವು ಗಮನಿಸಿದಂತೆ, ಅಪೊಸ್ತಲ ಯೋಹಾನನು ಏನನ್ನು ಬರೆದನೊ ಅದರಲ್ಲಿ ನಮಗೆ ಭಾಗಶಃ ಉತ್ತರ ಸಿಗಬಹುದು. ಇಡೀ ಲೋಕವು, ಒಬ್ಬ ನಿರ್ದಯಿ ಆತ್ಮಜೀವಿಯಾಗಿರುವ ಪಿಶಾಚನಾದ ಸೈತಾನನ ಹತೋಟಿಯಲ್ಲಿದೆ. (1 ಯೋಹಾನ 5:19) ಯೇಸು ಕ್ರಿಸ್ತನು ಸೈತಾನನನ್ನು “ಇಹಲೋಕಾಧಿಪತಿ” ಎಂದು ಕರೆದನು. (ಯೋಹಾನ 14:30) ಹೀಗಿರುವುದರಿಂದಲೇ ಈ ಲೋಕವು, ಯಾರ ವಿಶೇಷ ಗುಣಲಕ್ಷಣವು ಕುತ್ಸಿತ ನಡವಳಿಕೆ ಆಗಿದೆಯೋ ಆ ದಂಗೆಕೋರ ಅಧಿಪತಿಯನ್ನು ಹೋಲುವಂಥ ಪ್ರವೃತ್ತಿಯುಳ್ಳದ್ದಾಗಿದೆ.​—⁠ಎಫೆಸ 2:⁠2.

2 ಬೇರೆಯವರು ನಮ್ಮನ್ನು ದಯಾಹೀನ ರೀತಿಯಲ್ಲಿ ಉಪಚರಿಸುವಾಗ, ಅದು ನಮ್ಮ ಜೀವನಗಳ ಮೇಲೆ ಪ್ರತಿಕೂಲ ಪ್ರಭಾವವನ್ನು ಬೀರುತ್ತದೆ. ಈ ನಿರ್ದಯೆಯನ್ನು, ಹಗೆಭರಿತ ನೆರೆಯವರು, ಸ್ನೇಹರಹಿತ ಅಪರಿಚಿತರು, ಮತ್ತು ಯೋಚಿಸದೇ ಕ್ರಿಯೆಗೈಯುವ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೂ ತೋರಿಸುತ್ತಿರಬಹುದು. ಒರಟುಸ್ವಭಾವದ ಮತ್ತು ಕಿರಿಚಿಕೊಳ್ಳುವ ಹಾಗೂ ಅವಾಚ್ಯ ಮಾತುಗಳನ್ನಾಡುವ ಜನರೊಂದಿಗೆ ಸಂಪರ್ಕದಲ್ಲಿರಬೇಕಾಗುವ ಒತ್ತಡವು, ಅನೇಕವೇಳೆ ಬಹಳಷ್ಟು ಹತಾಶೆಯನ್ನು ಉಂಟುಮಾಡಬಹುದು. ಇತರರಿಂದ ತೋರಿಸಲ್ಪಡುವ ಈ ರೀತಿಯ ದಯೆಯ ಕೊರತೆಯು, ಸ್ವತಃ ನಮ್ಮನ್ನು ದ್ವೇಷಭರಿತರಾಗುವಂತೆ ಮಾಡಿ, ನಾವು ಸಹ ನಿರ್ದಯೆಗೆ ನಿರ್ದಯೆಯನ್ನು ಹಿಂದಿರುಗಿಸುವಂತೆ ಮಾಡಬಹುದು. ಇದು ಆಧ್ಯಾತ್ಮಿಕ ಇಲ್ಲವೆ ಶಾರೀರಿಕ ಆರೋಗ್ಯದ ಸಮಸ್ಯೆಗಳಿಗೂ ನಡೆಸಬಹುದು.​—⁠ರೋಮಾಪುರ 12:⁠17.

3 ಲೋಕದ ಒತ್ತಡಭರಿತ ಸ್ಥಿತಿಗಳು ಸಹ, ನಾವು ದಯೆ ತೋರಿಸುವುದನ್ನು ಕಷ್ಟಕರವನ್ನಾಗಿ ಮಾಡಬಲ್ಲವು. ಉದಾಹರಣೆಗೆ, ಭಯೋತ್ಪಾದನೆಯ ಬೆದರಿಕೆಗಳು ಮತ್ತು ಕೃತ್ಯಗಳು, ಹಾಗೂ ಭಿನ್ನಭಿನ್ನ ರಾಷ್ಟ್ರೀಯ ಗುಂಪುಗಳಿಂದ ಜೈವಿಕ ಇಲ್ಲವೆ ಅಣ್ವಸ್ತ್ರಗಳ ಸಂಭಾವ್ಯ ಬಳಕೆಯಿಂದಾಗಿ ಸಾಮಾನ್ಯವಾಗಿ ಮಾನವಕುಲವು ಒತ್ತಡದ ಕೆಳಗಿರುತ್ತದೆ. ಅದಲ್ಲದೆ, ಕೋಟಿಗಟ್ಟಲೆ ಜನರು ಬಡತನದ ಬೇಗೆಯಲ್ಲಿದ್ದು, ಕನಿಷ್ಠ ಪ್ರಮಾಣದ ಆಹಾರ, ವಸತಿ, ಬಟ್ಟೆ, ಮತ್ತು ವೈದ್ಯಕೀಯ ಆರೈಕೆಯೊಂದಿಗೆ ಹೇಗೊ ಜೀವನ ನಡೆಸುತ್ತಿದ್ದಾರೆ. ಸನ್ನಿವೇಶವು ನಿರಾಶಜನಕವಾಗಿ ತೋರುವಾಗ, ದಯೆಯನ್ನು ತೋರಿಸಲು ಪ್ರಯತ್ನಿಸುವುದು ಒಂದು ಪಂಥಾಹ್ವಾನವಾಗಿ ಪರಿಣಮಿಸುತ್ತದೆ.​—⁠ಪ್ರಸಂಗಿ 7:⁠7.

4 ದಯೆಯನ್ನು ತೋರಿಸುವುದು ಅಷ್ಟೇನೂ ಪ್ರಾಮುಖ್ಯವಾದ ಸಂಗತಿಯಲ್ಲವೆಂದೂ ಅದು ದೌರ್ಬಲ್ಯದ ಸೂಚನೆಯಾಗಿದೆಯೆಂದೂ ಒಬ್ಬ ವ್ಯಕ್ತಿಯು ಸುಲಭವಾಗಿ ತೀರ್ಮಾನಿಸುವ ಸಾಧ್ಯತೆಯಿದೆ. ವಿಶೇಷವಾಗಿ ಇತರರು ಅವನ ಅನಿಸಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವಾಗ ಶೋಷಣೆಗೊಳಗಾಗಿರುವ ಅನುಭವ ಅವನಿಗಾಗಬಹುದು. (ಕೀರ್ತನೆ 73:​2-9) ಆದರೆ ಬೈಬಲ್‌ ನಮಗೆ ಹೀಗನ್ನುವಾಗ ಸರಿಯಾದ ನಿರ್ದೇಶನವನ್ನು ಕೊಡುತ್ತದೆ: “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋಕ್ತಿ 15:⁠1) ಆತ್ಮದ ಫಲಗಳಲ್ಲಿ ಎರಡಾಗಿರುವ ಸಾಧುತ್ವ ಮತ್ತು ದಯೆ ನಿಕಟವಾಗಿ ಜೋಡಿಸಲ್ಪಟ್ಟಿವೆ ಮತ್ತು ಕಷ್ಟಕರ ಹಾಗೂ ಪಂಥಾಹ್ವಾನಕರ ಪರಿಸ್ಥಿತಿಗಳೊಂದಿಗೆ ವ್ಯವಹರಿಸುವಾಗ ಪರಿಣಾಮಕಾರಿಯಾಗಿವೆ.

5 ದೇವರ ಪವಿತ್ರಾತ್ಮದ ಫಲಗಳನ್ನು ಪ್ರದರ್ಶಿಸುವುದು ಕ್ರೈಸ್ತರಾದ ನಮಗೆ ತುಂಬ ಮಹತ್ವಪೂರ್ಣವಾಗಿದೆ. ಆದುದರಿಂದ, ಆ ಗುಣಗಳಲ್ಲಿ ಒಂದಾದ ದಯೆಯನ್ನು ನಾವು ಹೇಗೆ ತೋರಿಸಬಹುದೆಂಬದನ್ನು ಪರಿಗಣಿಸುವುದು ಒಳ್ಳೇದು. ದ್ವೇಷಭರಿತ ಲೋಕವೊಂದರಲ್ಲಿ ದಯೆಯನ್ನು ಬೆನ್ನಟ್ಟುವುದು ಸಾಧ್ಯವೊ? ಹಾಗಿದ್ದರೆ, ಸೈತಾನನ ಪ್ರಭಾವವು, ವಿಶೇಷವಾಗಿ ಒತ್ತಡಭರಿತ ಸನ್ನಿವೇಶಗಳಲ್ಲಿ ನಮ್ಮ ದಯೆಯನ್ನು ಅದುಮಿಹಿಡಿಯಲು ನಾವು ಬಿಡುವುದಿಲ್ಲವೆಂಬ ಸಾಕ್ಷ್ಯವನ್ನು ಕೊಡಬಲ್ಲ ಕೆಲವೊಂದು ಕ್ಷೇತ್ರಗಳಾವುವು? ಕುಟುಂಬದಲ್ಲಿ, ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ನಮ್ಮ ನೆರೆಹೊರೆಯವರೊಂದಿಗೆ, ನಮ್ಮ ಶುಶ್ರೂಷೆಯಲ್ಲಿ, ಮತ್ತು ಜೊತೆ ವಿಶ್ವಾಸಿಗಳ ನಡುವೆ ದಯೆ ತೋರಿಸುವ ವಿಧಗಳನ್ನು ನಾವು ಪರಿಗಣಿಸೋಣ.

ಕುಟುಂಬದೊಳಗೆ ದಯೆ ತೋರಿಸುವುದು

6 ಯೆಹೋವನ ಆಶೀರ್ವಾದ ಮತ್ತು ನಿರ್ದೇಶನವನ್ನು ಪಡೆಯಲು, ಆತ್ಮದ ಫಲಗಳು ಅತ್ಯಾವಶ್ಯಕ ಮತ್ತು ಅದನ್ನು ಪೂರ್ಣವಾಗಿ ಬೆಳೆಸಿಕೊಳ್ಳುವುದು ಅಗತ್ಯ. (ಎಫೆಸ 4:32) ಕುಟುಂಬ ಸದಸ್ಯರು ಪರಸ್ಪರರಿಗೆ ದಯೆಯನ್ನು ವ್ಯಕ್ತಪಡಿಸುವ ವಿಶೇಷ ಅಗತ್ಯದ ಮೇಲೆ ನಾವು ಗಮನವನ್ನು ಕೇಂದ್ರೀಕರಿಸೋಣ. ದೈನಂದಿನ ವ್ಯವಹಾರಗಳಲ್ಲಿ ಗಂಡಹೆಂಡತಿಯರು ಪರಸ್ಪರರಿಗೆ ಮತ್ತು ತಮ್ಮ ಮಕ್ಕಳಿಗೆ ದಯಾಪರ ಹಾಗೂ ಕಾಳಜಿಭರಿತ ಮನೋಭಾವವನ್ನು ತೋರಿಸಬೇಕು. (ಎಫೆಸ 5:​28-33; 6:​1, 2) ಅಂಥ ದಯೆಯು, ಕುಟುಂಬ ಸದಸ್ಯರು ಪರಸ್ಪರರೊಂದಿಗೆ ಮಾತಾಡುವ ರೀತಿಯಲ್ಲಿ, ಮಕ್ಕಳು ತಮ್ಮ ಹೆತ್ತವರನ್ನು ಸನ್ಮಾನಿಸಿ ಗೌರವಿಸುವುದರಲ್ಲಿ ಹಾಗೂ ಹೆತ್ತವರು ತಮ್ಮ ಮಕ್ಕಳನ್ನು ಯೋಗ್ಯವಾಗಿ ಉಪಚರಿಸುವುದರಲ್ಲಿ ತೋರಿಬರಬೇಕು. ಶ್ಲಾಘಿಸಲು ತ್ವರಿತರೂ, ಖಂಡಿಸಲು ನಿಧಾನಿಗಳೂ ಆಗಿರಿ.

7 ನಮ್ಮ ಕುಟುಂಬದಲ್ಲಿ ದಯಾಪರರಾಗಿರುವುದರಲ್ಲಿ ಅಪೊಸ್ತಲ ಪೌಲನ ಬುದ್ಧಿವಾದವನ್ನು ಅನುಸರಿಸುವುದು ಸೇರಿರುತ್ತದೆ: “ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ.” ಕ್ರೈಸ್ತ ಕುಟುಂಬಗಳಲ್ಲಿನ ಸದಸ್ಯರು ಪ್ರತಿದಿನ ಪರಸ್ಪರರೊಂದಿಗೆ ಗೌರವಪೂರ್ವಕವಾದ ರೀತಿಯಲ್ಲಿ ಸಂವಾದಮಾಡಬೇಕು. ಏಕೆ? ಏಕೆಂದರೆ ಒಳ್ಳೇ ಸಂವಾದವು ಬಲವಾದ, ಆರೋಗ್ಯಪೂರ್ಣ ಕುಟುಂಬಗಳ ಜೀವನಾಡಿಯಾಗಿದೆ. ಮನಸ್ತಾಪಗಳು ಉಂಟಾದಾಗ, ಅದನ್ನು ಕಡಿಮೆಗೊಳಿಸಲು, ವಾದದಲ್ಲಿ ಜಯಿಸುವ ಬದಲಿಗೆ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿರಿ. ಸಂತೋಷಭರಿತ ಕುಟುಂಬ ಸದಸ್ಯರು, ದಯೆಯನ್ನು ಪ್ರವರ್ಧಿಸಲು ಮತ್ತು ಪರಸ್ಪರರಿಗಾಗಿ ಚಿಂತೆಯನ್ನು ತೋರಿಸಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುತ್ತಾರೆ.​—⁠ಕೊಲೊಸ್ಸೆ 3:8, 12-14.

8 ದಯೆಯು ಸಕಾರಾತ್ಮಕವಾಗಿದೆ ಮತ್ತು ನಾವು ಇತರರಿಗಾಗಿ ಒಳಿತನ್ನು ಮಾಡಲು ಬಯಸುವಂತೆ ಪ್ರೇರಿಸುತ್ತದೆ. ಹೀಗೆ ನಾವು ಕುಟುಂಬದ ಇತರ ಸದಸ್ಯರಿಗೆ ಒಳ್ಳೇ ರೀತಿಯಲ್ಲಿ ಉಪಯುಕ್ತರೂ ಕಾಳಜಿವಹಿಸುವವರೂ ಸಹಾಯಮಾಡುವವರೂ ಆಗಿರಲು ಪ್ರಯತ್ನಿಸುತ್ತೇವೆ. ಒಂದು ಕುಟುಂಬಕ್ಕೆ ಒಳ್ಳೇ ಹೆಸರನ್ನು ತರುವಂಥ ರೀತಿಯಲ್ಲಿ ದಯೆಯನ್ನು ತೋರಿಸಲಿಕ್ಕಾಗಿ ಪ್ರತಿಯೊಬ್ಬರಿಂದಲೂ ಕುಟುಂಬದೋಪಾದಿಯೂ ಪ್ರಯತ್ನವು ಆವಶ್ಯಕ. ಫಲಿತಾಂಶವಾಗಿ, ಅವರಿಗೆ ದೇವರ ಆಶೀರ್ವಾದ ದೊರಕುವುದು ಮಾತ್ರವಲ್ಲ ಸಭೆಯಲ್ಲೂ ಸಮುದಾಯದಲ್ಲೂ ಅವರು ದಯೆಯ ದೇವರಾಗಿರುವ ಯೆಹೋವನನ್ನು ಸನ್ಮಾನಿಸುವರು.​—⁠1 ಪೇತ್ರ 2:⁠12.

ಕೆಲಸದ ಸ್ಥಳದಲ್ಲಿ ದಯೆ

9 ಒಬ್ಬ ಕ್ರೈಸ್ತನಿಗೆ ಉದ್ಯೋಗದ ದಿನಚರಿಯು, ಜೊತೆ ಕಾರ್ಮಿಕರಿಗೆ ದಯೆಯನ್ನು ತೋರಿಸುವುದನ್ನು ಒಂದು ಪಂಥಾಹ್ವಾನವನ್ನಾಗಿ ಮಾಡಬಹುದು. ಉದ್ಯೋಗಿಗಳ ನಡುವಿನ ಪೈಪೋಟಿಯಿಂದಾಗಿ, ಸಹೋದ್ಯೋಗಿಯೊಬ್ಬನು ಮೋಸದಿಂದ ಇಲ್ಲವೆ ಕುತಂತ್ರದಿಂದ ಕಾರ್ಯವೆಸಗುತ್ತಾ ಧಣಿಯೊಂದಿಗೆ ನಿಮಗಿರುವ ಒಳ್ಳೇ ಹೆಸರನ್ನು ಕೆಡಿಸಿ, ನಿಮ್ಮ ಉದ್ಯೋಗಕ್ಕೆ ಅಪಾಯವನ್ನೊಡ್ಡಬಹುದು. (ಪ್ರಸಂಗಿ 4:⁠4) ಇಂಥ ಸಮಯಗಳಲ್ಲಿ ದಯೆ ತೋರಿಸುವುದು ಸುಲಭವಲ್ಲ. ಹಾಗಿದ್ದರೂ, ದಯಾಪರರಾಗಿರುವುದೇ ಸೂಕ್ತವೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಯೆಹೋವನ ಸೇವಕನೊಬ್ಬನು, ಸುಲಭವಾಗಿ ಹೊಂದಿಕೊಂಡು ಹೋಗಲಾಗದಂಥವರನ್ನು ಸನ್ಮಾರ್ಗಕ್ಕೆ ತರಲು ಸಾಧ್ಯವಾದಷ್ಟು ಪ್ರಯತ್ನಮಾಡಬೇಕು. ಕಾಳಜಿವಹಿಸುವಂಥ ಮನೋಭಾವವನ್ನು ತೋರಿಸುವುದು ಇದನ್ನು ಮಾಡಲು ಸಹಾಯಮಾಡಬಹುದು. ಸಹೋದ್ಯೋಗಿಯು ಅಸ್ವಸ್ಥನಾಗಿರುವಲ್ಲಿ ಇಲ್ಲವೆ ಅವನ ಕುಟುಂಬ ಸದಸ್ಯರು ಅಸ್ವಸ್ಥರಾಗಿರುವಲ್ಲಿ ಅವರ ಬಗ್ಗೆ ನೀವು ಕಳಕಳಿಯನ್ನು ವ್ಯಕ್ತಪಡಿಸಬಹುದು. ಕೇವಲ ಕ್ಷೇಮ ವಿಚಾರಿಸುವುದು ಸಹ ಆ ವ್ಯಕ್ತಿಯ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಹೌದು, ಕ್ರೈಸ್ತರು ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸಾಮರಸ್ಯ ಹಾಗೂ ಶಾಂತಿಯನ್ನು ಪ್ರವರ್ಧಿಸಲು ಪ್ರಯತ್ನಿಸಲೇಬೇಕು. ಕೆಲವೊಮ್ಮೆ ಕಾಳಜಿ ಮತ್ತು ಕಳಕಳಿಯನ್ನು ತೋರಿಸುವಂಥ ಒಂದು ದಯಾಪರ ಮಾತು ತಾನೇ ಆ ಸನ್ನಿವೇಶದಲ್ಲಿ ಸಹಾಯಮಾಡುವುದು.

10 ಇತರ ಸಂದರ್ಭಗಳಲ್ಲಿ, ಮಾಲೀಕನೊಬ್ಬನು ತನ್ನ ಅಭಿಪ್ರಾಯಗಳನ್ನು ತನ್ನ ಉದ್ಯೋಗಿಗಳ ಮೇಲೆ ಒತ್ತಾಯದಿಂದ ಹೇರಬಹುದು ಮತ್ತು ಎಲ್ಲರೂ ಯಾವುದಾದರೊಂದು ರಾಷ್ಟ್ರೀಯ ಸಮಾರಂಭ ಇಲ್ಲವೆ ಅಶಾಸ್ತ್ರೀಯವಾದ ಆಚರಣೆಯೊಂದರಲ್ಲಿ ಪಾಲ್ಗೊಳ್ಳುವಂತೆ ಬಯಸಬಹುದು. ಒಬ್ಬ ಕ್ರೈಸ್ತನ ಮನಸ್ಸಾಕ್ಷಿಯು ಅದರಲ್ಲಿ ಪಾಲ್ಗೊಳ್ಳುವಂತೆ ಅನುಮತಿಸದಿರುವಾಗ, ಇದು ತನ್ನ ಮಾಲೀಕನೊಂದಿಗೆ ತಿಕ್ಕಾಟಕ್ಕೆ ನಡೆಸಬಹುದು. ಆ ಕ್ಷಣದಲ್ಲಿ, ಅವನು ಹೇಳಿದಂತೆ ಮಾಡುವುದು ಎಷ್ಟು ತಪ್ಪಾಗಿದೆಯೆಂಬುದರ ಬಗ್ಗೆ ದೊಡ್ಡ ವಿವರಣೆಯನ್ನು ಕೊಡುವುದು ಬುದ್ಧಿವಂತಿಕೆಯ ಸಂಗತಿಯಾಗಿರದು. ಏಕೆಂದರೆ, ಯಾರಿಗೆ ಕ್ರೈಸ್ತ ನಂಬಿಕೆಗಳಿಲ್ಲವೊ ಅವರಿಗೆ ತಾವು ಮಾಡುತ್ತಿರುವಂಥದ್ದು ಸರಿಯೆಂದು ತೋಚುತ್ತಿರಬಹುದು. (1 ಪೇತ್ರ 2:​21-23) ನೀವು ವೈಯಕ್ತಿಕವಾಗಿ ಭಾಗವಹಿಸದೇ ಇರುವುದಕ್ಕಾಗಿರುವ ನಿಮ್ಮ ಕಾರಣಗಳನ್ನು ನೀವು ಪ್ರಾಯಶಃ ದಯೆಯಿಂದ ವಿವರಿಸಬಹುದು. ಅಣಕದ ಹೇಳಿಕೆಗಳಿಗೆ ಪ್ರತಿಯಾಗಿ ನೀವೂ ಅಣಕದ ಹೇಳಿಕೆಗಳನ್ನು ಆಡಬೇಡಿ. ಒಬ್ಬ ಕ್ರೈಸ್ತನು ರೋಮಾಪುರ 12:18ರಲ್ಲಿರುವ ಈ ಉತ್ತಮ ಬುದ್ಧಿವಾದವನ್ನು ಅನುಸರಿಸುವುದು ಒಳ್ಳೇದು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.”

ಶಾಲೆಯಲ್ಲಿ ದಯೆ ತೋರಿಸುವುದು

11 ಸಹಪಾಠಿಗಳಿಗೆ ದಯೆಯನ್ನು ತೋರಿಸುವುದು ಯುವಜನರಿಗೆ ಒಂದು ನಿಜ ಪಂಥಾಹ್ವಾನವಾಗಿರಬಲ್ಲದು. ಯುವಜನರು ಅನೇಕವೇಳೆ ತಮ್ಮ ಸಹಪಾಠಿಗಳಿಂದ ಅಂಗೀಕರಿಸಲ್ಪಡಲು ಹಾತೊರೆಯುತ್ತಾರೆ. ಕೆಲವು ಹುಡುಗರು ಇತರ ವಿದ್ಯಾರ್ಥಿಗಳ ಮೆಚ್ಚುಗೆಯನ್ನು ಪಡೆಯಲು, ಗಂಡಸುತನದ ಪ್ರದರ್ಶನ ಮಾಡುತ್ತಾರೆ. ಎಷ್ಟರ ಮಟ್ಟಿಗೆಯೆಂದರೆ ಶಾಲೆಯಲ್ಲಿರುವ ಇತರರನ್ನು ಅವರು ಪೀಡಿಸುತ್ತಾರೆ. (ಮತ್ತಾಯ 20:25) ಇತರ ಯುವಜನರು ವಿದ್ಯಾಭ್ಯಾಸದಲ್ಲಿ, ಕ್ರೀಡೆಯಲ್ಲಿ ಇಲ್ಲವೆ ಇತರ ಚಟುವಟಿಕೆಗಳಲ್ಲಿ ಮೆರೆಯಲು ಇಷ್ಟಪಡುತ್ತಾರೆ. ಆದುದರಿಂದ ತಮ್ಮ ಕೌಶಲಗಳನ್ನು ಪ್ರದರ್ಶಿಸುತ್ತಿರುವಾಗ, ಅವರು ಅನೇಕವೇಳೆ ಸಹಪಾಠಿಗಳನ್ನು ಮತ್ತು ಇತರ ವಿದ್ಯಾರ್ಥಿಗಳನ್ನು ನಿರ್ದಯವಾಗಿ ಉಪಚರಿಸುತ್ತಾರೆ. ಇದು ತಾನೇ ಅವರನ್ನು ಹೇಗೊ ಶ್ರೇಷ್ಠರನ್ನಾಗಿ ಮಾಡುತ್ತದೆಂದು ಅವರು ತಪ್ಪಾಗಿ ಯೋಚಿಸುತ್ತಾರೆ. ಒಬ್ಬ ಕ್ರೈಸ್ತ ಯುವಕ ಯಾ ಯುವತಿಯು ಅಂಥ ವ್ಯಕ್ತಿಗಳನ್ನು ಅನುಕರಿಸದಂತೆ ಜಾಗರೂಕರಾಗಿರಬೇಕು. (ಮತ್ತಾಯ 20:​26, 27) ಅಪೊಸ್ತಲ ಪೌಲನು ಹೇಳಿದ್ದು, “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು” ಮತ್ತು ಪ್ರೀತಿಯು “ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ.” ಹೀಗಿರುವುದರಿಂದ ಒಬ್ಬ ಕ್ರೈಸ್ತನು, ನಿರ್ದಯವಾಗಿ ವರ್ತಿಸುವವರ ನ್ಯೂನ ಮಾದರಿಯನ್ನಲ್ಲ ಬದಲಾಗಿ, ಸಹಪಾಠಿಗಳೊಂದಿಗಿನ ತನ್ನ ವ್ಯವಹಾರದಲ್ಲಿ ಶಾಸ್ತ್ರೀಯ ಬುದ್ಧಿವಾದಕ್ಕೆ ಅಂಟಿಕೊಳ್ಳುವ ಹಂಗಿನಲ್ಲಿದ್ದಾನೆ.​—⁠1 ಕೊರಿಂಥ 13:⁠4.

12 ಯುವಜನರು ತಮ್ಮ ಶಿಕ್ಷಕರನ್ನೂ ದಯೆಯಿಂದ ಉಪಚರಿಸಬೇಕು. ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಕಿರುಕುಳ ಕೊಡುವುದರಲ್ಲಿ ಆನಂದಿಸುತ್ತಾರೆ. ಶಾಲೆಯ ನಿಯಮಗಳನ್ನು ಉಲ್ಲಂಘಿಸುವಂಥ ಚಟುವಟಿಕೆಗಳಲ್ಲಿ ಒಳಗೂಡುವ ಮೂಲಕ ತಮ್ಮ ಶಿಕ್ಷಕರಿಕೆ ಗೌರವವನ್ನು ಕೊಡದಿರುವಾಗ ತಾವು ತುಂಬ ಹುಷಾರೆಂದು ಅವರು ನೆನಸುತ್ತಾರೆ. ಇತರರನ್ನು ಹೆದರಿಸುವ ಮೂಲಕ, ಅವರೂ ತಮ್ಮನ್ನು ಜೊತೆಗೂಡುವಂತೆ ಅವರು ಮಾಡಬಹುದು. ಆದರೆ ಒಬ್ಬ ಯುವ ಕ್ರೈಸ್ತನು/ಳು ಅವರು ಹೇಳಿದಂತೆ ಮಾಡಲು ನಿರಾಕರಿಸುವಾಗ, ಅವನು ಅಥವಾ ಅವಳು ಅಪಹಾಸ್ಯ ಅಥವಾ ದೌರ್ಜನ್ಯಕ್ಕೆ ಗುರಿಯಾಗಬಹುದು. ಶಾಲಾ ವರ್ಷದಲ್ಲಿ ಇಂಥ ಸನ್ನಿವೇಶಗಳನ್ನು ಎದುರಿಸುವುದು, ದಯೆಯನ್ನು ತೋರಿಸಲು ಒಬ್ಬ ಕ್ರೈಸ್ತನು ಮಾಡಿರುವ ದೃಢಸಂಕಲ್ಪವನ್ನು ಪರೀಕ್ಷೆಗೊಡ್ಡುತ್ತದೆ. ಆದರೆ, ಯೆಹೋವನ ಒಬ್ಬ ನಿಷ್ಠಾವಂತ ಸೇವಕನಾಗಿರುವುದು ಎಷ್ಟು ಪ್ರಾಮುಖ್ಯವೆಂಬದನ್ನು ಮನಸ್ಸಿನಲ್ಲಿಡಿರಿ. ಜೀವನದ ಈ ಕಷ್ಟಕರ ಕ್ಷಣಗಳಲ್ಲಿ ಆತನು ತನ್ನ ಆತ್ಮದ ಮೂಲಕ ನಿಮಗೆ ಆಸರೆಯಾಗಿರುವನೆಂಬ ಆಶ್ವಾಸನೆ ನಿಮಗಿರಲಿ.​—⁠ಕೀರ್ತನೆ 37:⁠28.

ನೆರೆಹೊರೆಯವರಿಗೆ ದಯೆ ತೋರಿಸುವುದು

13 ನೀವೊಂದು ಮನೆಯಲ್ಲಿ, ಒಂದು ಬಹುಮಹಡಿ ಕಟ್ಟಡದ ಫ್ಲ್ಯಾಟ್‌ನಲ್ಲಿ, ಒಂದು ಟ್ರೇಲರ್‌ನಲ್ಲಿ ಅಥವಾ ಬೇರೆಲ್ಲಿಯೇ ಜೀವಿಸುತ್ತಿರಲಿ, ದಯೆ ತೋರಿಸುವ ಮತ್ತು ನೆರೆಹೊರೆಯವರ ಕ್ಷೇಮದ ಬಗ್ಗೆ ನೀವು ಚಿಂತೆಯನ್ನು ವ್ಯಕ್ತಪಡಿಸುವ ವಿಧಗಳ ಕುರಿತಾಗಿ ಯೋಚಿಸಬಹುದು. ಆದರೆ ಇದು ಸಹ ಯಾವಾಗಲೂ ಸುಲಭವಲ್ಲ.

14 ನಿಮ್ಮ ಪಕ್ಕದ ಮನೆಯವರು, ನಿಮ್ಮ ಜಾತಿ, ರಾಷ್ಟ್ರೀಯತೆ, ಇಲ್ಲವೆ ಧರ್ಮದ ಕಾರಣದಿಂದ ನಿಮ್ಮ ವಿಷಯದಲ್ಲಿ ಪೂರ್ವಾಗ್ರಹ ತೋರಿಸುವಲ್ಲಿ ಆಗೇನು? ಅವರು ಕೆಲವೊಮ್ಮೆ ನಿಮ್ಮೊಂದಿಗೆ ಒರಟಾಗಿ ವರ್ತಿಸುವಲ್ಲಿ ಇಲ್ಲವೆ ನಿಮ್ಮನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಿರುವಲ್ಲಿ ಆಗೇನು? ಯೆಹೋವನ ಸೇವಕರೋಪಾದಿ, ಸಾಧ್ಯವಿರುವಷ್ಟರ ಮಟ್ಟಿಗೆ ದಯೆಯನ್ನು ವ್ಯಕ್ತಪಡಿಸುವುದು ಉಪಯುಕ್ತವಾಗಿರುವುದು. ನೀವು ಇತರರಿಂದ ಭಿನ್ನರಾಗಿದ್ದು ಚೇತೋಹಾರಿಯಾಗಿರುವಿರಿ. ಮತ್ತು ಇದು ದಯೆಯಲ್ಲಿ ಆದರ್ಶಪ್ರಾಯನಾಗಿರುವ ಯೆಹೋವನಿಗೆ ನಿಜವಾಗಿಯೂ ಸ್ತುತಿಯನ್ನು ತರುವುದು. ಯಾರಿಗೆ ಗೊತ್ತು, ಆ ನಿಮ್ಮ ನೆರೆಯವನು, ನಿಮ್ಮ ದಯೆಯಿಂದಾಗಿ ಬದಲಾಗಬಹುದು. ಅವನು ಯೆಹೋವನನ್ನು ಸ್ತುತಿಸುವವನೂ ಆಗಬಹುದು.​—⁠1 ಪೇತ್ರ 2:⁠12.

15 ದಯೆಯನ್ನು ಹೇಗೆ ತೋರಿಸಸಾಧ್ಯವಿದೆ? ಒಂದು ವಿಧ, ಕುಟುಂಬದ ಎಲ್ಲಾ ಸದಸ್ಯರು ಆತ್ಮದ ಫಲಗಳನ್ನು ಪ್ರದರ್ಶಿಸುವ ಮೂಲಕ ತೋರಿಸುವ ಆದರ್ಶಪ್ರಾಯ ನಡತೆ ಆಗಿದೆ. ನೆರೆಯವರು ಇದನ್ನು ಗಮನಿಸಬಹುದು. ಕೆಲವೊಮ್ಮೆ, ನೀವು ನಿಮ್ಮ ನೆರೆಯವರಿಗೆ ಒಂದು ಉಪಕಾರವನ್ನು ಮಾಡಲು ಶಕ್ತರಾಗಬಹುದು. ನೆನಪಿಡಿ, ದಯೆಯ ಅರ್ಥ, ಇತರರ ಕ್ಷೇಮದಲ್ಲಿ ಸಕ್ರಿಯ ಆಸಕ್ತಿಯನ್ನು ತೋರಿಸುವುದಾಗಿದೆ.​—⁠1 ಪೇತ್ರ 3:​8-12.

ನಮ್ಮ ಶುಶ್ರೂಷೆಯಲ್ಲಿ ದಯೆ ತೋರಿಸುವುದು

16 ಜನರನ್ನು ಅವರ ಮನೆಗಳಲ್ಲಿ, ಅವರ ಕೆಲಸದ ಸ್ಥಳಗಳಲ್ಲಿ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭೇಟಿಯಾಗಲು ನಾವು ಸಂಘಟಿತ ಪ್ರಯತ್ನವನ್ನು ಮಾಡುತ್ತಿರುವಾಗ ದಯೆಯು ನಮ್ಮ ಕ್ರೈಸ್ತ ಶುಶ್ರೂಷೆಯ ಮುಖ್ಯ ಲಕ್ಷಣವಾಗಿರಬೇಕು. ಎಲ್ಲಾ ಸಮಯದಲ್ಲೂ ದಯಾಪರನಾಗಿರುವ ಯೆಹೋವನನ್ನು ಪ್ರತಿನಿಧಿಸುತ್ತಿದ್ದೇವೆಂಬದನ್ನು ನಾವು ನೆನಪಿನಲ್ಲಿಡತಕ್ಕದ್ದು.​—⁠ವಿಮೋಚನಕಾಂಡ 34:⁠6.

17 ನಿಮ್ಮ ಶುಶ್ರೂಷೆಯಲ್ಲಿ ದಯೆಯನ್ನು ತೋರಿಸಲು ನೀವು ಮಾಡುವ ಪ್ರಯತ್ನಗಳಲ್ಲಿ ಏನೆಲ್ಲಾ ಒಳಗೂಡಿದೆ? ಉದಾಹರಣೆಗೆ, ಬೀದಿ ಸಾಕ್ಷಿಕಾರ್ಯದಲ್ಲಿ ಜನರೊಂದಿಗೆ ಚುಟುಕಾಗಿ ಮಾತಾಡುವ ಮತ್ತು ಪರಹಿತವನ್ನು ತೋರಿಸುವ ಮೂಲಕ ದಯೆಯನ್ನು ತೋರಿಸಬಲ್ಲಿರಿ. ಸಾಮಾನ್ಯವಾಗಿ ರಸ್ತೆಪಕ್ಕದ ಹಾದಿಗಳಲ್ಲಿ ಜನರು ಓಡಾಡುತ್ತಿರುತ್ತಾರೆ, ಆದುದರಿಂದ ಅಲ್ಲಿ ಜನಸಂಚಾರವನ್ನು ಅಡ್ಡಗಟ್ಟದಂತೆ ಜಾಗರೂಕರಾಗಿರಿ. ಅಲ್ಲದೆ, ನೀವು ವ್ಯಾಪಾರದ ಕ್ಷೇತ್ರದಲ್ಲಿ ಸಾಕ್ಷಿನೀಡುತ್ತಿರುವಾಗ, ಅಂಗಡಿಯವರಿಗೆ ತಮ್ಮ ಗಿರಾಕಿಗಳ ಕಡೆಗೆ ಗಮನಕೊಡಬೇಕೆಂಬದನ್ನು ಮನಸ್ಸಿನಲ್ಲಿಡುತ್ತಾ, ಸಂಕ್ಷಿಪ್ತವಾಗಿ ಮಾತಾಡಿರಿ.

18 ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ವಿವೇಚನೆಯನ್ನು ಬಳಸಿರಿ. ಒಂದೇ ಮನೆಬಾಗಲಲ್ಲಿ​—⁠ವಿಶೇಷವಾಗಿ ಹವಾಮಾನವು ತುಂಬ ಕೆಟ್ಟದ್ದಾಗಿರುವಾಗ​—⁠ತೀರ ಹೆಚ್ಚು ಸಮಯ ಇರಬೇಡಿರಿ. ನಿಮ್ಮ ಹಾಜರಿಯಿಂದಾಗಿಯೇ ಒಬ್ಬ ವ್ಯಕ್ತಿಯು ಹೆಚ್ಚೆಚ್ಚು ಅಸಹನೆಗೊಳ್ಳುತ್ತಿರುವುದನ್ನು ಇಲ್ಲವೆ ಕುಪಿತನಾಗುತ್ತಿರುವುದನ್ನೂ ನೀವು ಗುರುತಿಸಬಲ್ಲಿರೊ? ಬಹುಶಃ ನೀವಿರುವಂಥ ಲೋಕದ ಭಾಗದಲ್ಲಿ, ಯೆಹೋವನ ಸಾಕ್ಷಿಗಳು ತೀರ ಹೆಚ್ಚು ಬಾರಿ ಜನರ ಮನೆಗಳಿಗೆ ಭೇಟಿನೀಡುತ್ತಿರಬಹುದು. ಹಾಗಿರುವಲ್ಲಿ, ವಿಶೇಷ ಕಾಳಜಿ ತೋರಿಸಿರಿ, ಯಾವಾಗಲೂ ದಯಾಪರರೂ ಸ್ನೇಹಪರರೂ ಆಗಿರಿ. (ಜ್ಞಾನೋಕ್ತಿ 17:14) ಆ ದಿನ ನಿಮಗೆ ಕಿವಿಗೊಡದೆ ಇರಲು ಮನೆಯವನು ಕೊಡುವ ಕಾರಣವನ್ನು ಸಮಂಜಸವಾದದ್ದಾಗಿ ಸ್ವೀಕರಿಸಲು ಪ್ರಯತ್ನಿಸಿರಿ. ಸ್ವಲ್ಪ ದಿನಗಳೊಳಗೇ ನಿಮ್ಮ ಕ್ರೈಸ್ತ ಸಹೋದರ ಸಹೋದರಿಯರಲ್ಲಿ ಯಾರಾದರೊಬ್ಬರು ಪುನಃ ಆ ಮನೆಗೆ ಭೇಟಿನೀಡುವ ಸಂಭಾವ್ಯತೆಯಿದೆ ಎಂಬದನ್ನು ನೆನಪಿನಲ್ಲಿಡಿ. ಒರಟಾಗಿ ವರ್ತಿಸುವ ಒಬ್ಬ ವ್ಯಕ್ತಿಯನ್ನು ನೀವು ಭೇಟಿಯಾಗುವಲ್ಲಿ, ದಯೆಯನ್ನು ತೋರಿಸಲು ವಿಶೇಷ ಪ್ರಯತ್ನವನ್ನು ಮಾಡಿ. ನಿಮ್ಮ ಧ್ವನಿಯೇರಿಸಬೇಡಿ ಇಲ್ಲವೆ ಮುಖ ಸಿಂಡರಿಸಿಕೊಳ್ಳಬೇಡಿ. ಪ್ರಶಾಂತವಾದ ರೀತಿಯಲ್ಲಿ ಮಾತಾಡಿರಿ. ಒಬ್ಬ ದಯಾಪರ ಕ್ರೈಸ್ತನು, ಮಾತಿನ ಚಕಮಕಿಯೊಂದಿಗೆ ಮನೆಯವನನ್ನು ಕೆರಳಿಸಲು ಬಯಸುವುದಿಲ್ಲ. (ಮತ್ತಾಯ 10:​11-14) ಬಹುಶಃ ಒಂದಾನೊಂದು ದಿನ ಆ ವ್ಯಕ್ತಿಯೇ ಸುವಾರ್ತೆಗೆ ಕಿವಿಗೊಟ್ಟಾನು.

ಸಭಾ ಕೂಟಗಳಲ್ಲಿ ದಯೆ ತೋರಿಸುವುದು

19 ಜೊತೆ ವಿಶ್ವಾಸಿಗಳಿಗೆ ದಯೆ ತೋರಿಸುವುದು ಕಡಿಮೆ ಮಹತ್ವವುಳ್ಳ ಸಂಗತಿಯೇನಲ್ಲ. (ಇಬ್ರಿಯ 13:⁠1) ನಾವು ಒಂದು ಲೋಕವ್ಯಾಪಕ ಸಹೋದರತ್ವದ ಭಾಗವಾಗಿರುವುದರಿಂದ, ಪರಸ್ಪರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ದಯೆಯನ್ನು ತೋರಿಸುವುದು ಅತ್ಯಾವಶ್ಯಕ.

20 ಒಂದೇ ರಾಜ್ಯ ಸಭಾಗೃಹವನ್ನು ಅನೇಕ ಸಭೆಗಳು ಉಪಯೋಗಿಸುತ್ತಿರುವಲ್ಲಿ, ಎಲ್ಲಾ ಸಭೆಗಳು ಪರಸ್ಪರರೊಂದಿಗಿನ ವ್ಯವಹಾರಗಳಲ್ಲಿ ಅವರಿಗೆ ಗೌರವವನ್ನು ತೋರಿಸುತ್ತಾ, ದಯಾಪರರಾಗಿ ವ್ಯವಹರಿಸುವುದು ಪ್ರಾಮುಖ್ಯವಾಗಿದೆ. ಕೂಟಗಳ ಸಮಯಗಳು ಮತ್ತು ಶುಚಿಮಾಡುವ ಇಲ್ಲವೆ ದುರಸ್ತುಮಾಡುವುದರಂಥ ಅತ್ಯಾವಶ್ಯಕ ಕೆಲಸಗಳಿಗಾಗಿ ಏರ್ಪಡು ಮಾಡುವಾಗ ಪ್ರತಿಸ್ಪರ್ಧೆಯ ಭಾವನೆಯನ್ನು ಹೊಂದುವುದು, ಸಹಕಾರದ ಭಾವಕ್ಕೆ ಸಹಾಯಕಾರಿಯಾಗಿರುವುದಿಲ್ಲ. ಕೆಲವೊಂದು ಭಿನ್ನಾಭಿಪ್ರಾಯಗಳಿರುವುದಾದರೂ ದಯಾಪರರೂ ಪರಚಿಂತನೆಮಾಡುವವರೂ ಆಗಿರಿ. ಈ ರೀತಿಯಲ್ಲಿ ದಯೆ ಜಯಗಳಿಸುವುದು, ಮತ್ತು ನೀವು ಇತರರ ಕ್ಷೇಮದಲ್ಲಿ ತೋರಿಸುವಂಥ ಅಭಿರುಚಿಯನ್ನು ಯೆಹೋವನು ನಿಜವಾಗಿಯೂ ಆಶೀರ್ವದಿಸುವನು.

ದಯೆ ತೋರಿಸುವುದನ್ನು ಮುಂದುವರಿಸಿರಿ

21 ದಯೆಯು ಎಷ್ಟೊಂದು ಸರ್ವವ್ಯಾಪಿ ಗುಣವಾಗಿದೆಯೆಂದರೆ, ಅದು ನಮ್ಮ ಬದುಕಿನ ಪ್ರತಿಯೊಂದು ಅಂಶವನ್ನೂ ಪ್ರಭಾವಿಸುತ್ತದೆ. ಆದುದರಿಂದ ನಾವದನ್ನು ನಮ್ಮ ಕ್ರೈಸ್ತ ವ್ಯಕ್ತಿತ್ವದ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕು. ಇತರರಿಗೆ ದಯೆ ತೋರಿಸುವುದು ಒಂದು ರೂಢಿಯಾಗತಕ್ಕದ್ದು.

22 ನಾವೆಲ್ಲರೂ ಪ್ರತಿದಿನ ಇತರರಿಗೆ ದಯೆಯನ್ನು ತೋರಿಸುವವರಾಗಿರೋಣ ಮತ್ತು ಹೀಗೆ ಅಪೊಸ್ತಲ ಪೌಲನ ಮಾತುಗಳನ್ನು ವ್ಯಕ್ತಿಪರವಾಗಿ ಅನ್ವಯಿಸಿಕೊಳ್ಳೋಣ. ಅವನಂದದ್ದು: “ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.”​—⁠ಕೊಲೊಸ್ಸೆ 3:⁠12.

ನಿಮಗೆ ನೆನಪಿದೆಯೊ?

• ದಯೆ ತೋರಿಸುವುದನ್ನು ಒಬ್ಬ ಕ್ರೈಸ್ತನಿಗೆ ಕಷ್ಟಕರವನ್ನಾಗಿ ಮಾಡುವಂಥ ಸಂಗತಿ ಯಾವುದು?

• ಒಬ್ಬನ ಕುಟುಂಬದಲ್ಲಿ ದಯೆ ತೋರಿಸುವುದು ಏಕೆ ಪ್ರಾಮುಖ್ಯವಾಗಿದೆ?

• ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ, ಮತ್ತು ನೆರೆಯವರಿಗೆ ದಯೆ ತೋರಿಸುವುದನ್ನು ಕಷ್ಟಕರವನ್ನಾಗಿ ಮಾಡುವಂಥ ಕೆಲವೊಂದು ಪಂಥಾಹ್ವಾನಗಳು ಯಾವುವು?

• ಕ್ರೈಸ್ತರು ತಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ಹೇಗೆ ದಯೆಯನ್ನು ತೋರಿಸಬಹುದು ಎಂಬದನ್ನು ವಿವರಿಸಿರಿ.

[ಅಧ್ಯಯನ ಪ್ರಶ್ನೆಗಳು]

1. ದಯೆಯನ್ನು ತೋರಿಸುವುದು ಏಕೆ ಕಷ್ಟಕರವಾಗಿರಬಲ್ಲದು?

2. ನಾವು ದಯೆ ತೋರಿಸುವುದನ್ನು ಬಾಧಿಸಬಲ್ಲ ಪಂಥಾಹ್ವಾನಗಳು ಯಾವುವು?

3. ದಯಾಪರರಾಗಿರುವಂತೆ ಜನರಿಗಿರುವ ಮನಸ್ಸನ್ನು ಪರೀಕ್ಷೆಗೊಡ್ಡುವ ಯಾವ ಗಂಭೀರ ಸಮಸ್ಯೆಗಳನ್ನು ಅವರು ಎದುರಿಸುತ್ತಾರೆ?

4. ಇತರರಿಗೆ ದಯೆಯನ್ನು ತೋರಿಸುವುದರ ಕುರಿತಾಗಿ ಯೋಚಿಸುವಾಗ ಕೆಲವರು ಯಾವ ತಪ್ಪು ತೀರ್ಮಾನಕ್ಕೆ ಬರಬಹುದು?

5. ದಯೆಯು ಅಗತ್ಯವಿರುವ ಜೀವನದ ಕೆಲವೊಂದು ಕ್ಷೇತ್ರಗಳಾವುವು?

6. ಕುಟುಂಬದೊಳಗೆ ದಯೆಯು ಏಕೆ ತುಂಬ ಮಹತ್ವಪೂರ್ಣವಾಗಿದೆ, ಮತ್ತು ಅದನ್ನು ಹೇಗೆ ಪ್ರದರ್ಶಿಸಸಾಧ್ಯವಿದೆ?

7, 8. (ಎ) ಕುಟುಂಬದಲ್ಲಿ ನಾವು ನಿಜವಾದ ದಯೆಯನ್ನು ತೋರಿಸಬೇಕಾದರೆ ಯಾವ ರೀತಿಯ ನಡತೆಯಿಂದ ದೂರವಿರಬೇಕು? (ಬಿ) ಒಳ್ಳೇ ಸಂವಾದವು ಬಲವಾದ ಕುಟುಂಬ ಬಂಧವನ್ನು ಹೊಂದಲು ಹೇಗೆ ನೆರವುನೀಡುತ್ತದೆ? (ಸಿ) ನಿಮ್ಮ ಕುಟುಂಬದಲ್ಲಿ ನೀವು ಹೇಗೆ ದಯೆಯನ್ನು ಪ್ರದರ್ಶಿಸಬಹುದು?

9, 10. ಕೆಲಸದ ಸ್ಥಳದಲ್ಲಿ ಉದ್ಭವಿಸಬಹುದಾದ ಕೆಲವೊಂದು ಸಮಸ್ಯೆಗಳನ್ನು ವರ್ಣಿಸಿರಿ, ಮತ್ತು ಅವುಗಳನ್ನು ದಯೆಯಿಂದ ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ಹೇಳಿಕೆ ನೀಡಿರಿ.

11. ಸಹಪಾಠಿಗಳಿಗೆ ದಯೆಯನ್ನು ತೋರಿಸುವುದರಲ್ಲಿ ಯುವಜನರು ಯಾವ ಪಂಥಾಹ್ವಾನಗಳನ್ನು ಎದುರಿಸುತ್ತಾರೆ?

12. (ಎ) ಯುವಜನರು ತಮ್ಮ ಶಿಕ್ಷಕರೊಂದಿಗೆ ದಯಾಭರಿತರಾಗಿರುವುದು ಏಕೆ ಒಂದು ಪಂಥಾಹ್ವಾನವಾಗಿರಬಹುದು? (ಬಿ) ನಿರ್ದಯಿಗಳಾಗಿರುವಂತೆ ಒತ್ತಡಕ್ಕೊಳಕ್ಕಾಗುವಾಗ ಯುವಜನರು ಸಹಾಯಕ್ಕಾಗಿ ಯಾರ ಕಡೆಗೆ ನೋಡಬಲ್ಲರು?

13-15. ಒಬ್ಬನ ನೆರೆಯವರಿಗೆ ದಯೆಯನ್ನು ತೋರಿಸಲು ಯಾವ ಅಡ್ಡಿಗಳಿರಬಹುದು, ಆದರೆ ಈ ಪಂಥಾಹ್ವಾನಗಳನ್ನು ಹೇಗೆ ಎದುರಿಸಸಾಧ್ಯವಿದೆ?

16, 17. (ಎ) ನಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ದಯೆ ಏಕೆ ಪ್ರಾಮುಖ್ಯವಾಗಿದೆ? (ಬಿ) ಕ್ಷೇತ್ರ ಸೇವೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ದಯೆಯನ್ನು ಹೇಗೆ ವ್ಯಕ್ತಪಡಿಸಸಾಧ್ಯವಿದೆ?

18. ನಮ್ಮ ಶುಶ್ರೂಷೆಯಲ್ಲಿ ದಯೆಯನ್ನು ತೋರಿಸುವುದರಲ್ಲಿ ವಿವೇಚನಾಶಕ್ತಿಯು ಯಾವ ಪಾತ್ರವನ್ನು ವಹಿಸುತ್ತದೆ?

19, 20. ಸಭೆಯಲ್ಲಿ ದಯೆಯು ಏಕೆ ಅಗತ್ಯ, ಮತ್ತು ಅದನ್ನು ಹೇಗೆ ತೋರಿಸಸಾಧ್ಯವಿದೆ?

21, 22. ಕೊಲೊಸ್ಸೆ 3:12ಕ್ಕನುಗುಣವಾಗಿ, ನಮ್ಮ ದೃಢಸಂಕಲ್ಪ ಏನಾಗಿರಬೇಕು?

[ಪುಟ 18ರಲ್ಲಿರುವ ಚಿತ್ರ]

ಕುಟುಂಬದಲ್ಲಿ ಎಲ್ಲರೂ ತೋರಿಸುವ ದಯೆಯು, ಐಕ್ಯ ಹಾಗೂ ಸಹಕಾರಭಾವಕ್ಕೆ ಇಂಬುಕೊಡುತ್ತದೆ

[ಪುಟ 19ರಲ್ಲಿರುವ ಚಿತ್ರ]

ಒಬ್ಬ ಸಹೋದ್ಯೋಗಿ ಇಲ್ಲವೆ ಅವನ ಕುಟುಂಬವು ಅನಾರೋಗ್ಯದಿಂದ ಬಳಲುತ್ತಿರುವಾಗ ನೀವು ದಯೆ ತೋರಿಸಬಹುದು

[ಪುಟ 20ರಲ್ಲಿರುವ ಚಿತ್ರ]

ಅಪಹಾಸ್ಯದ ಎದುರಿನಲ್ಲೂ ದಯೆಯನ್ನು ತೋರಿಸುವವರಿಗೆ ಯೆಹೋವನು ಆಸರೆಕೊಡುತ್ತಾನೆ

[ಪುಟ 21ರಲ್ಲಿರುವ ಚಿತ್ರ]

ಕಷ್ಟದಲ್ಲಿರುವ ಒಬ್ಬ ನೆರೆಯವರಿಗೆ ಸಹಾಯಹಸ್ತವನ್ನು ಚಾಚುವುದು ದಯಾಪರ ಕೃತ್ಯವಾಗಿದೆ