ಬೈಬಲಿನ ಸಹಾಯದಿಂದ ಅವನು ಪ್ರಲೋಭನೆಯನ್ನು ಪ್ರತಿರೋಧಿಸಿದನು
ಬೈಬಲಿನ ಸಹಾಯದಿಂದ ಅವನು ಪ್ರಲೋಭನೆಯನ್ನು ಪ್ರತಿರೋಧಿಸಿದನು
ಲೋಕದಲ್ಲಿ ಇಂದು ಅತ್ಯಧಿಕ ರೀತಿಯ ಪ್ರಲೋಭನೆಗಳಿವೆ. ಬೈಬಲ್ ಮಟ್ಟಗಳನ್ನು ಎತ್ತಿಹಿಡಿಯುವುದು ಸುಲಭವೇನಲ್ಲ. ಉದಾಹರಣೆಗೆ, “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂಬ ಬೈಬಲಿನ ಸಲಹೆಗೆ ಕಿವಿಗೊಡುವುದು ಒಂದು ಪಂಥಾಹ್ವಾನವಾಗಿರಬಹುದು.—1 ಕೊರಿಂಥ 6:18.
ನಾವು ಯಾರನ್ನು ಸೇಬಾಸ್ಟೀಆನ್ ಎಂದು ಕರೆಯಲಿದ್ದೇವೋ ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದು, ಪೋಲೆಂಡ್‌ನ ಸ್ಕ್ಯಾಂಡಿನೇವಿಯನ್ ಕಂಪೆನಿಯೊಂದರಲ್ಲಿ ಕೆಲಸಮಾಡುತ್ತಿದ್ದನು. ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಅವನು ಬಹಳಷ್ಟು ಹೋರಾಟವನ್ನು ನಡೆಸಬೇಕಾಗಿತ್ತು.
ಸೇಬಾಸ್ಟೀಆನ್ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದಾನೆಂಬುದು ಸಹೋದ್ಯೋಗಿಗಳಿಗೆ ತಿಳಿದಿತ್ತು. ಅವನ ಉದ್ಯೋಗಶೀಲತೆ ಹಾಗೂ ಯಥಾರ್ಥ ನಡವಳಿಕೆಯನ್ನು ಗಣ್ಯಮಾಡಿದ ಅವನ ಸೂಪರ್‌ವೈಸರ್‌ಗಳು ಅವನಿಗೆ ಅನೇಕ ಉದ್ಯೋಗಾವಕಾಶಗಳನ್ನು ನೀಡಿ ಬಹುಮಾನಿಸಿದರು. ಆದರೂ, ಪ್ರಶ್ನಾರ್ಹವಾದ ಮನೋರಂಜನೆಯು ಒಳಗೂಡಿದ್ದಂಥ ವ್ಯಾಪಾರಕ್ಕೆ ಸಂಬಂಧಿಸಿದ ಮೀಟಿಂಗ್‌ಗಳು ಈ ವಿಶೇಷ ಅವಕಾಶಗಳಲ್ಲಿ ಸೇರಿದ್ದವು ಎಂಬುದು ಅವನಿಗೆ ಕ್ರಮೇಣ ತಿಳಿದುಬಂತು.
ಸ್ವಲ್ಪದರಲ್ಲೇ ಸೇಬಾಸ್ಟೀಆನ್‌ನನ್ನು ಅನೇಕ ಸಂಶಯಗಳು ಕಾಡತೊಡಗಿದವು. “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆಂಬುದು ನನ್ನ ಬಾಸ್‌ಗೆ ಗೊತ್ತು. ಈ ಕಾರಣದಿಂದಲೇ ಅವರು ನನ್ನ ಮೇಲೆ ವಿಶ್ವಾಸವಿರಿಸಿದ್ದಾರೆ ಹಾಗೂ ನನ್ನ ಮೇಲೆ ಅವಲಂಬಿತರಾಗಿದ್ದಾರೆ. ನಾನು ಸಂಶಯಾಸ್ಪದ ಮನೋರಂಜನೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸುವಲ್ಲಿ, ನನ್ನ ಕೆಲಸ ಹೋಗುತ್ತದೆ; ಇಂಥ ಕೆಲಸ ಸಿಗುವುದು ತುಂಬ ಕಷ್ಟ. ಹೀಗಿರುವಾಗ, ಅದರಲ್ಲಿ ಭಾಗವಹಿಸದೆ ಸುಮ್ಮನೆ ಒಬ್ಬ ದರ್ಶಕನಾಗಿ ಉಳಿಯುವಲ್ಲಿ ಆಗೇನು?”
ತನ್ನಿಂದ ಏನನ್ನು ನಿರೀಕ್ಷಿಸಲಾಗುತ್ತದೆ ಎಂಬುದರ ಕುರಿತು ಸೇಬಾಸ್ಟೀಆನ್‌ಗೆ ತದನಂತರ ಇನ್ನೂ ಹೆಚ್ಚಿನ ವಿಷಯವು ಗೊತ್ತಾಯಿತು. ಅನೈತಿಕ ಉದ್ದೇಶಗಳಿಗಾಗಿ ಸಾಯಂಕಾಲದಲ್ಲಿ ವಿದೇಶೀ ಗಿರಾಕಿಗಳಿಗೆ “ಹುಡುಗಿಯರನ್ನು” ಒದಗಿಸುವ ಮೂಲಕ ಅವರನ್ನು “ನೋಡಿಕೊಳ್ಳುವಂತೆ” ಅವನಿಂದ ನಿರೀಕ್ಷಿಸಲಾಗಿತ್ತು. ಈಗ ಅವನೇನು ಮಾಡುವನು?
ಸೇಬಾಸ್ಟೀಆನ್‌ನು ಅನೈತಿಕತೆಯ ಕಡೆಗಿನ ತನ್ನ ಬೈಬಲ್ ಆಧಾರಿತ ಮನೋಭಾವದ ಕುರಿತು ಸೂಪರ್‌ವೈಸರ್‌ಗೆ ಪುನಃ ನೆನಪು ಹುಟ್ಟಿಸಲು ನಿರ್ಧರಿಸಿದನು. ತನಗೆ ಈ ಕೆಲಸ ಸೂಕ್ತವಲ್ಲ ಮತ್ತು ಒಂದಲ್ಲ ಒಂದು ದಿನ ತಾನು ತನ್ನ ಉದ್ಯೋಗವನ್ನು ಬಿಟ್ಟುಬಿಡಲೇಬೇಕು ಎಂಬುದು ಸೇಬಾಸ್ಟೀಆನ್‌ಗೆ ಬೇಗನೆ ಮನವರಿಕೆಯಾಯಿತು. ಅವನು ಸಂಬಳ ಕಡಿಮೆಯಾದರೂ ಅನೈತಿಕ ಪ್ರಲೋಭನೆಗಳು ಇಲ್ಲದಿರುವಂಥ ಒಂದು ಹೊಸ ಉದ್ಯೋಗವನ್ನು ಕಂಡುಕೊಂಡನು. ಈಗ ಅವನಿಗೆ ಶುದ್ಧವಾದ ಮನಸ್ಸಾಕ್ಷಿಯಿದೆ.
ಅನೈತಿಕತೆಯಲ್ಲಿ ಪಾಲ್ಗೊಳ್ಳುವಂತೆ ಅಥವಾ ಅದನ್ನು ಮನ್ನಿಸುವಂತೆ ಯಾರಾದರೂ ನಿಮ್ಮ ಮೇಲೆ ಒತ್ತಡ ಹೇರುವಲ್ಲಿ ನೀವೇನು ಮಾಡುವಿರಿ? ಗಂಭೀರವಾದ ಬದಲಾವಣೆಯನ್ನು ಮಾಡಲು ನೀವು ಮನಃಪೂರ್ವಕವಾಗಿ ಸಿದ್ಧರಿರುವಿರೋ? ಆದಿಕಾಂಡ 39:7-12ರಲ್ಲಿ ವರದಿಸಲ್ಪಟ್ಟಿರುವಂತೆ, ಪುರಾತನ ಕಾಲದ ಯೋಸೇಫನು ಇದನ್ನೇ ಮಾಡಿದನು.