ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೆಕ್ಸಿಕೋದ ಇಂಗ್ಲಿಷ್‌ ಭಾಷಾ ಕ್ಷೇತ್ರದಲ್ಲಿ ಅನೌಪಚಾರಿಕ ಸಾಕ್ಷಿಕಾರ್ಯ

ಮೆಕ್ಸಿಕೋದ ಇಂಗ್ಲಿಷ್‌ ಭಾಷಾ ಕ್ಷೇತ್ರದಲ್ಲಿ ಅನೌಪಚಾರಿಕ ಸಾಕ್ಷಿಕಾರ್ಯ

ಮೆಕ್ಸಿಕೋದ ಇಂಗ್ಲಿಷ್‌ ಭಾಷಾ ಕ್ಷೇತ್ರದಲ್ಲಿ ಅನೌಪಚಾರಿಕ ಸಾಕ್ಷಿಕಾರ್ಯ

ಅಪೊಸ್ತಲ ಪೌಲನು ಅಥೇನೆಯಲ್ಲಿ ತನ್ನ ಸಂಚಾರಿ ಸಂಗಡಿಗರಿಗಾಗಿ ಕಾಯುತ್ತಿದ್ದಾಗ, ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಒಳಗೂಡುವ ಮೂಲಕ ಅವನು ಆ ಸಮಯವನ್ನು ಸದುಪಯೋಗಿಸಿಕೊಂಡನು. ಬೈಬಲು ಹೀಗೆ ವರದಿಸುತ್ತದೆ: ‘ಅವನು ಪ್ರತಿದಿನ ಪೇಟೆಯಲ್ಲಿ ಕಂಡುಬಂದವರ ಸಂಗಡ ವಾದಿಸಿದನು.’ (ಅ. ಕೃತ್ಯಗಳು 17:17) ಯೂದಾಯದಿಂದ ಗಲಿಲಾಯದ ವರೆಗಿನ ತನ್ನ ಪ್ರಯಾಣದಲ್ಲಿ, ಯೇಸು ಒಂದು ಬಾವಿಯ ಬಳಿಯಲ್ಲಿ ಸಮಾರ್ಯದ ಸ್ತ್ರೀಯೊಬ್ಬಳಿಗೆ ಅನೌಪಚಾರಿಕ ಸಾಕ್ಷಿಯನ್ನು ನೀಡಿದನು. (ಯೋಹಾನ 4:​2-26) ದೇವರ ರಾಜ್ಯದ ಸುವಾರ್ತೆಯ ಕುರಿತು ಮಾತಾಡುವ ಪ್ರತಿಯೊಂದು ಅವಕಾಶವನ್ನು ನೀವು ಸದ್ವಿನಿಯೋಗಿಸಿಕೊಳ್ಳುತ್ತೀರೋ?

ಮೆಕ್ಸಿಕೋದಲ್ಲಿರುವ ಇಂಗ್ಲಿಷ್‌ ಭಾಷಾ ಕ್ಷೇತ್ರವು ಅನೌಪಚಾರಿಕ ಸಾಕ್ಷಿಕಾರ್ಯಕ್ಕೆ ವಿಶೇಷ ಅವಕಾಶವನ್ನೊದಗಿಸುತ್ತದೆ. ಪ್ರವಾಸಿಗರು ಇಲ್ಲಿನ ವಿರಾಮಧಾಮ (ರಿಸಾರ್ಟ್‌)ಗಳನ್ನು ಸಂದರ್ಶಿಸುತ್ತಾರೆ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬಂದು ಹೋಗುತ್ತಾರೆ, ಅಷ್ಟುಮಾತ್ರವಲ್ಲ ಮೆಕ್ಸಿಕೋದಲ್ಲಿ ನಿವೃತ್ತಿಯನ್ನು ಪಡೆದಿರುವ ವಿದೇಶೀಯರು ಆಗಿಂದಾಗ್ಗೆ ಉದ್ಯಾನವನಗಳಿಗೆ ಮತ್ತು ರೆಸ್ಟೊರೆಂಟ್‌ಗಳಿಗೆ ಹೋಗುತ್ತಾರೆ. ಇಂಗ್ಲಿಷ್‌ ಭಾಷೆಯು ಗೊತ್ತಿರುವಂಥ ಯೆಹೋವನ ಸಾಕ್ಷಿಗಳಲ್ಲಿ ಅನೇಕರು, ಇಂಥ ಜನರೊಂದಿಗೆ ಸಂಭಾಷಣೆಗಳನ್ನು ಆರಂಭಿಸುವುದರಲ್ಲಿ ಪ್ರವೀಣರಾಗಿದ್ದಾರೆ. ವಾಸ್ತವದಲ್ಲಿ, ವಿದೇಶೀಯರಂತೆ ಅಥವಾ ಇಂಗ್ಲಿಷ್‌ ಭಾಷೆಯನ್ನು ಮಾತಾಡುವವರಂತೆ ಕಾಣುವ ಜನರೊಂದಿಗೆ ಮಾತಾಡಲು ಸಿಗುವ ಅವಕಾಶಗಳಿಗಾಗಿ ಇವರು ಕಾಯುತ್ತಿರುತ್ತಾರೆ. ಅವರಿದನ್ನು ಹೇಗೆ ಮಾಡುತ್ತಾರೆ ಎಂಬುದನ್ನು ನಾವೀಗ ನೋಡೋಣ.

ಹೊರದೇಶಗಳಿಂದ ಬಂದವರಾಗಿದ್ದು, ಇಂಗ್ಲಿಷ್‌ ಭಾಷಾ ಕ್ಷೇತ್ರದಲ್ಲಿ ಸೇವೆಮಾಡುತ್ತಿರುವ ಸಾಕ್ಷಿಗಳು ಅನೇಕವೇಳೆ ವಿದೇಶೀಯರೆಂಬಂತೆ ತೋರುವವರಿಗೆ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ ಮತ್ತು ಅವರು ಎಲ್ಲಿಯವರು ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಸಮಂಜಸವಾಗಿಯೇ ಇದು, ಆ ವಿದೇಶೀಯರು ಈ ಸಾಕ್ಷಿಯು ಮೆಕ್ಸಿಕೋದಲ್ಲಿ ಏನು ಮಾಡುತ್ತಿದ್ದಾನೆ ಎಂದು ಪ್ರಶ್ನಿಸಲು ಎಡೆಮಾಡಿಕೊಡುತ್ತದೆ ಮತ್ತು ಇದು ಕ್ರೈಸ್ತ ನಂಬಿಕೆಗಳ ಕುರಿತು ಮಾತಾಡುವ ಅವಕಾಶವನ್ನು ಸಾಕ್ಷಿಗೆ ನೀಡುತ್ತದೆ. ಉದಾಹರಣೆಗೆ, ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಆ ವಹಾಕದಲ್ಲಿನ ಇಂಗ್ಲಿಷ್‌ ಕ್ಷೇತ್ರದಲ್ಲಿ ಸೇವೆಮಾಡುತ್ತಿರುವ ಗ್ಲೋರಿಯಳು ಈ ರೀತಿ ಸಂಭಾಷಣೆಗಳನ್ನು ಆರಂಭಿಸುವುದನ್ನು ವಿಶೇಷವಾಗಿ ಸುಲಭವಾದದ್ದಾಗಿ ಕಂಡುಕೊಳ್ಳುತ್ತಾಳೆ. ಗ್ಲೋರಿಯಳು ಪಟ್ಟಣದ ಚೌಕದಲ್ಲಿ ಅನೌಪಚಾರಿಕವಾಗಿ ಸಾರುವ ಕೆಲಸವನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ, ಇಂಗ್ಲೆಂಡ್‌ನಿಂದ ಬಂದಿದ್ದ ದಂಪತಿಯೊಬ್ಬರು ಅವಳನ್ನು ಸಮೀಪಿಸಿದರು. ಬಳಿಕ ಆ ಸ್ತ್ರೀಯು ಉದ್ಗರಿಸಿದ್ದು: “ವಹಾಕದ ಬೀದಿಗಳಲ್ಲಿ ಒಬ್ಬ ಕರಿಯ ಹೆಂಗಸು ನಡೆದಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಎಂಬುದನ್ನು ನಂಬಲಾಗುತ್ತಿಲ್ಲ!” ಇದನ್ನು ಕೇಳಿಸಿಕೊಂಡ ಗ್ಲೋರಿಯಳು ಕೋಪಗೊಳ್ಳುವುದಕ್ಕೆ ಬದಲಾಗಿ ನಗಾಡಿದಳು, ಮತ್ತು ಅವಳು ಯಾವ ಕಾರಣಕ್ಕಾಗಿ ಮೆಕ್ಸಿಕೋದಲ್ಲಿದ್ದಾಳೆ ಎಂಬುದರ ಕುರಿತು ಅವರು ಮಾತಾಡಲಾರಂಭಿಸಿದರು. ಆ ಸ್ತ್ರೀಯು ಗ್ಲೋರಿಯಳನ್ನು ಕಾಫಿ ಕುಡಿಯಲಿಕ್ಕಾಗಿ ತನ್ನ ಮನೆಗೆ ಬರುವಂತೆ ಆಹ್ವಾನಿಸಿದಳು. ಅವರನ್ನು ಭೇಟಿಯಾಗುವ ಸಮಯವನ್ನು ನಿಗದಿಪಡಿಸಿದ ಬಳಿಕ ಗ್ಲೋರಿಯಳು ಅವರಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಕೊಟ್ಟಳು, ಆದರೆ ತಾನು ನಾಸ್ತಿಕಳು ಎಂದು ಹೇಳುತ್ತಾ ಆ ಸ್ತ್ರೀ ಅವುಗಳನ್ನು ಸ್ವೀಕರಿಸಲು ನಿರಾಕರಿಸಿದಳು. ಆಗ ಗ್ಲೋರಿಯಳು, ತಾನು ನಾಸ್ತಿಕರೊಂದಿಗೆ ಮಾತಾಡಲು ತುಂಬ ಇಷ್ಟಪಡುತ್ತೇನೆ ಮತ್ತು “ಆರಾಧನಾ ಸ್ಥಳಗಳು​—⁠ನಮಗೆ ಅವುಗಳ ಆವಶ್ಯಕತೆಯಿದೆಯೋ?” ಎಂಬ ಲೇಖನದ ಕುರಿತು ನಿಮ್ಮ ಅಭಿಪ್ರಾಯವೇನೆಂದು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಉತ್ತರಿಸಿದಳು. ಆ ಸ್ತ್ರೀಯು ಪತ್ರಿಕೆಗಳನ್ನು ಸ್ವೀಕರಿಸುತ್ತಾ ಹೇಳಿದ್ದು: “ಒಬ್ಬ ದೇವರಿದ್ದಾನೆ ಎಂಬ ವಿಷಯದಲ್ಲಿ ನೀನು ನನ್ನನ್ನು ಒಡಂಬಡಿಸುವಲ್ಲಿ, ನೀನು ನಿಜವಾಗಿಯೂ ಏನನ್ನೋ ಸಾಧಿಸಿದ್ದೀ ಎಂದರ್ಥ.” ಕಾಫಿ ಕುಡಿಯಲು ಹೋದಾಗ ಆಸಕ್ತಿಕರ ಸಂಭಾಷಣೆಗಳು ನಡೆದವು. ಸಮಯಾನಂತರ ಈ ದಂಪತಿಗಳು ಇಂಗ್ಲೆಂಡ್‌ಗೆ ಹಿಂದಿರುಗಿದರು, ಆದರೆ ಇಲೆಕ್ಟ್ರಾನಿಕ್‌ ಮೆಯಿಲ್‌ನ ಮೂಲಕ ಚರ್ಚೆಗಳು ಮುಂದುವರಿದವು.

ಗ್ಲೋರಿಯಳು ವಾಷಿಂಗ್ಟನ್‌, ಡಿ.ಸಿ.ಯಿಂದ ಬಂದಿದ್ದ ಸ್ಯಾರಾನ್‌ ಎಂಬ ವಿದ್ಯಾರ್ಥಿನಿಯೊಂದಿಗೂ ಮಾತಾಡತೊಡಗಿದಳು. ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಲಿಕ್ಕಾಗಿ ಸ್ಯಾರಾನ್‌ ವಹಾಕದಲ್ಲಿ ಸ್ಥಳೀಯ ಸ್ತ್ರೀಯರೊಂದಿಗೆ ಸ್ವಯಂಸೇವೆಯನ್ನು ಮಾಡುತ್ತಿದ್ದಳು. ಇಂಥ ಒಳ್ಳೇ ಕೆಲಸಕ್ಕಾಗಿ ಸ್ಯಾರಾನ್‌ಳನ್ನು ಪ್ರಶಂಸಿಸಿದ ಬಳಿಕ ಗ್ಲೋರಿಯಳು ತಾನು ಏಕೆ ಮೆಕ್ಸಿಕೋದಲ್ಲಿದ್ದೇನೆ ಎಂಬುದನ್ನು ವಿವರಿಸಿದಳು. ಇದು ಬೈಬಲಿನ ಕುರಿತು ಮತ್ತು ದೇವರು ಕೇವಲ ಬಡವರಿಗಾಗಿ ಅಲ್ಲ ಬದಲಾಗಿ ಪ್ರತಿಯೊಬ್ಬರಿಗಾಗಿ ಏನನ್ನು ಮಾಡುವನು ಎಂಬುದರ ಕುರಿತು ಅತ್ಯುತ್ತಮವಾದ ಒಂದು ಸಂಭಾಷಣೆಗೆ ನಡಿಸಿತು. ಅಮೆರಿಕದಲ್ಲಿದ್ದಾಗ ತಾನೆಂದೂ ಸಾಕ್ಷಿಗಳೊಂದಿಗೆ ಮಾತಾಡಿಯೇ ಇರಲಿಲ್ಲವಾದರೂ, ಮೆಕ್ಸಿಕೋದಲ್ಲಿ ತಾನು ಭೇಟಿಯಾದ ಮೊದಲ ವ್ಯಕ್ತಿಗಳಲ್ಲಿ ಒಬ್ಬಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಾಳೆ ಎಂಬ ಸಂಗತಿಯು ವಿಚಿತ್ರವಾಗಿ ತೋರುತ್ತದೆ ಎಂದು ಸ್ಯಾರಾನ್‌ ಹೇಳಿದಳು! ಸ್ಯಾರಾನ್‌ ಒಂದು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದಳು ಮತ್ತು ಒಡನೆಯೇ ಕ್ರೈಸ್ತ ಕೂಟಗಳಿಗೆ ಹಾಜರಾಗಲಾರಂಭಿಸಿದಳು.

ಅನೇಕ ವಿದೇಶೀಯರು ಪರದೈಸ್‌ನಂತಹ ಪರಿಸ್ಥಿತಿಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾ ಮೆಕ್ಸಿಕೋದಲ್ಲಿರುವ ಬೀಚ್‌ ರಿಸಾರ್ಟ್‌ಗಳಿಗೆ ಸ್ಥಳಾಂತರಿಸಿದ್ದಾರೆ. ಆಕಾಫೂಲ್ಕೋ ಪಟ್ಟಣದಲ್ಲಿ ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ ಲಾರಲ್‌ ಇದನ್ನೇ ಪೀಠಿಕೆಯಾಗಿ ಉಪಯೋಗಿಸುತ್ತಾಳೆ; ಜನರು ಯಾವ ದೇಶಗಳಿಂದ ಬಂದಿದ್ದಾರೋ ಅದಕ್ಕಿಂತಲೂ ಆಕಾಫೂಲ್ಕೋ ಬಹುಮಟ್ಟಿಗೆ ಒಂದು ಪರದೈಸ್‌ನಂತೆ ಕಂಡುಬರುತ್ತಿರುವಲ್ಲಿ, ಇಲ್ಲಿ ಯಾವುದು ಅವರಿಗೆ ತುಂಬ ಇಷ್ಟಕರವಾಗಿದೆ ಎಂದು ಅವರನ್ನು ಕೇಳುತ್ತಾಳೆ. ತದನಂತರ, ಅತಿ ಬೇಗನೆ ಇಡೀ ಭೂಮಿಯು ಒಂದು ನಿಜ ಪರದೈಸ್‌ ಆಗಲಿದೆ ಎಂಬುದನ್ನು ವಿವರಿಸುತ್ತಾಳೆ. ಪಶುವೈದ್ಯನ ಆಫೀಸ್‌ವೊಂದರ ಬಳಿ ಭೇಟಿಯಾದ ಕೆನಡದ ಸ್ತ್ರೀಯೊಂದಿಗೆ ಲಾರಲ್‌ ಉಪಯೋಗಿಸಿದ ಇದೇ ಪೀಠಿಕೆಯು, ಒಂದು ಬೈಬಲ್‌ ಅಧ್ಯಯನಕ್ಕೆ ನಡಿಸಿತು. ನೀವು ಎಲ್ಲಿ ವಾಸಿಸುತ್ತಿದ್ದೀರೋ ಅಲ್ಲಿಯೂ ತದ್ರೀತಿಯ ಪೀಠಿಕೆಯು ಪರಿಣಾಮಕಾರಿಯಾಗಿರಬಹುದೋ?

‘ಬೀದಿಗಳಲ್ಲಿ ಮತ್ತು ಚೌಕಗಳಲ್ಲಿ’

ಅನೇಕವೇಳೆ “ನೀವು ಇಂಗ್ಲಿಷ್‌ ಮಾತಾಡುತ್ತೀರೋ?” ಎಂಬ ಪ್ರಶ್ನೆಯನ್ನು ಕೇಳುವ ಮೂಲಕವೇ ಬೀದಿಗಳಲ್ಲಿ ಮತ್ತು ಚೌಕಗಳಲ್ಲಿ ಒಂದು ಸಂಭಾಷಣೆಯು ಆರಂಭಿಸಲ್ಪಟ್ಟಿದೆ. ಮೆಕ್ಸಿಕೋದಲ್ಲಿನ ಅನೇಕರು ತಮ್ಮ ವೃತ್ತಿಯ ಕಾರಣ ಅಥವಾ ಈ ಮುಂಚೆ ಅವರು ಅಮೆರಿಕದಲ್ಲಿ ವಾಸಿಸಿದ್ದ ಕಾರಣ ಇಂಗ್ಲಿಷ್‌ ಭಾಷೆಯನ್ನು ಮಾತಾಡುತ್ತಾರೆ.

ಒಬ್ಬ ಸಾಕ್ಷಿ ದಂಪತಿಗಳು ವೃದ್ಧ ಸ್ತ್ರೀಯೊಬ್ಬಳನ್ನು ಭೇಟಿಯಾದರು. ಅವಳು ಗಾಲಿಕುರ್ಚಿಯೊಂದರಲ್ಲಿ ಕುಳಿತಿದ್ದು, ಒಬ್ಬ ನರ್ಸ್‌ ಅದನ್ನು ತಳ್ಳಿಕೊಂಡುಹೋಗುತ್ತಿದ್ದಳು. ಈ ದಂಪತಿಗಳು, ಇಂಗ್ಲಿಷ್‌ ಬರುತ್ತದೋ ಎಂದು ಆ ವೃದ್ಧೆಯನ್ನು ಕೇಳಿದರು. ಹೌದು ಬರುತ್ತದೆ, ಏಕೆಂದರೆ ತಾನು ಅನೇಕ ವರ್ಷಗಳ ವರೆಗೆ ಅಮೆರಿಕದಲ್ಲಿ ವಾಸಿಸುತ್ತಿದ್ದೆ ಎಂದು ಅವಳು ಉತ್ತರಿಸಿದಳು. ಈ ಮುಂಚೆ ತಾನೆಂದೂ ಓದಿರದಿದ್ದಂಥ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಅವಳು ಸ್ವೀಕರಿಸಿದಳು, ಮತ್ತು ಕೋನ್ಸ್‌ವೀಲೋ ಎಂಬ ತನ್ನ ಹೆಸರನ್ನೂ ವಿಳಾಸವನ್ನೂ ಅವರಿಗೆ ಕೊಟ್ಟಳು. ನಾಲ್ಕು ದಿನಗಳ ಬಳಿಕ ಅವರು ಅವಳನ್ನು ಭೇಟಿಯಾಗಲು ಹೋದಾಗ, ಅವಳು ವಾಸಿಸುತ್ತಿದ್ದದ್ದು ಕ್ಯಾಥೊಲಿಕ್‌ ಸಂನ್ಯಾಸಿನಿಯರಿಂದ ನಡೆಸಲ್ಪಡುತ್ತಿದ್ದ ಒಂದು ಶುಶ್ರೂಷಾ ಗೃಹದಲ್ಲಿಯೇ ಎಂಬುದು ಅವರಿಗೆ ತಿಳಿದುಬಂತು. ಆರಂಭದಲ್ಲಿ ಕೋನ್ಸ್‌ವೀಲೋಳನ್ನು ಸಂಪರ್ಕಿಸುವುದು ತುಂಬ ಕಷ್ಟಕರವಾಗಿತ್ತು, ಏಕೆಂದರೆ ಆ ಸಂನ್ಯಾಸಿನಿಯರು ಇವರ ವಿಷಯದಲ್ಲಿ ಸಂಶಯಪಡುತ್ತಿದ್ದರು ಮತ್ತು ಕೋನ್ಸ್‌ವೀಲೋ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದರು. ತಾವು ಇಲ್ಲಿಗೆ ಬಂದಿದ್ದೇವೆ ಮತ್ತು ಅವಳನ್ನು ಅಭಿವಂದಿಸಲು ಬಯಸುತ್ತೇವೆ ಎಂದು ಕೋನ್ಸ್‌ವೀಲೋಳಿಗೆ ಸುದ್ದಿಮುಟ್ಟಿಸುವಂತೆ ದಂಪತಿಗಳು ಸಂನ್ಯಾಸಿನಿಯರನ್ನು ಕೇಳಿಕೊಂಡರು. ಆಗ ಕೋನ್ಸ್‌ವೀಲೋ ಈ ದಂಪತಿಗಳನ್ನು ಒಳಗೆ ಆಹ್ವಾನಿಸಿದಳು. ಅಂದಿನಿಂದ, ಸಂನ್ಯಾಸಿನಿಯರಿಂದ ನಕಾರಾತ್ಮಕ ಹೇಳಿಕೆಗಳು ಮಾಡಲ್ಪಡುತ್ತಿರುವುದಾದರೂ, 86 ವರ್ಷ ಪ್ರಾಯದ ಈ ವೃದ್ಧೆಯು ಕ್ರಮವಾದ ಬೈಬಲ್‌ ಅಧ್ಯಯನದಲ್ಲಿ ಆನಂದಿಸುತ್ತಿದ್ದಾಳೆ. ಕೆಲವು ಕ್ರೈಸ್ತ ಕೂಟಗಳಿಗೂ ಹಾಜರಾಗಿದ್ದಾಳೆ.

ಜ್ಞಾನೋಕ್ತಿ 1:20 ಹೇಳುವುದು: “ಜ್ಞಾನವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ, ಚೌಕಗಳಲ್ಲಿ ದನಿಗೈಯುತ್ತಾಳೆ.” ಸಾನ್‌ ಮೀಗೆಲ್‌ ಡೇ ಆಯೆಂಡೇ ಚೌಕದಲ್ಲಿ ಇದು ಹೇಗೆ ಸಂಭವಿಸಿತು ಎಂಬುದನ್ನು ಗಮನಿಸಿರಿ. ಒಂದು ದಿನ ಬೆಳಗ್ಗೆ ರಾಲ್ಫ್‌, ಬೆಂಚೊಂದರ ಮೇಲೆ ಕುಳಿತುಕೊಂಡಿದ್ದ ಮಧ್ಯವಯಸ್ಸಿನ ಪುರುಷನೊಬ್ಬನನ್ನು ಸಮೀಪಿಸಿದನು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಅವನಿಗೆ ನೀಡಲ್ಪಟ್ಟಾಗ ಅವನು ತುಂಬ ಆಶ್ಚರ್ಯಚಕಿತನಾದನು ಮತ್ತು ರಾಲ್ಫ್‌ಗೆ ತನ್ನ ಕಥೆಯನ್ನು ಹೇಳಿದನು.

ಅವನು ವಿಯೆಟ್ನಾಮ್‌ನ ಯೋಧನಾಗಿದ್ದು, ಮಿಲಿಟರಿ ಸೇವೆಯ ಸಮಯದಲ್ಲಿ ಅಷ್ಟೊಂದು ಮರಣಗಳನ್ನು ನೋಡಿದ್ದರಿಂದ ಉಂಟಾದ ಭಾವನಾತ್ಮಕ ಒತ್ತಡದ ಪರಿಣಾಮವಾಗಿ ನರಾಘಾತವನ್ನು ಅನುಭವಿಸಿದನು. ಅವನನ್ನು ರಣರಂಗದಿಂದ ಸೇನೆಯ ಮೂಲಠಾಣ್ಯಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ, ಮೃತರಾದ ಸೈನಿಕರ ದೇಹಗಳನ್ನು ಅಮೆರಿಕಕ್ಕೆ ರವಾನಿಸುವ ಸಿದ್ಧತೆಯಲ್ಲಿ ಅವುಗಳನ್ನು ತೊಳೆಯುವ ನೇಮಕವು ಅವನಿಗೆ ಕೊಡಲ್ಪಟ್ಟಿತು. ಈಗ, 30 ವರ್ಷಗಳ ತರುವಾಯವೂ ಅವನು ಸತತವಾದ ಘೋರ ಸ್ವಪ್ನಗಳು ಹಾಗೂ ಭಯದ ಅನಿಸಿಕೆಗಳಿಂದ ಹಿಂಸೆಯನ್ನು ಅನುಭವಿಸುತ್ತಿದ್ದನು. ಆ ದಿನ ಬೆಳಗ್ಗೆ ಚೌಕದಲ್ಲಿ ಕುಳಿತುಕೊಂಡಿದ್ದಾಗ, ಸಹಾಯಕ್ಕಾಗಿ ಮೌನವಾಗಿ ಪ್ರಾರ್ಥಿಸುತ್ತಿದ್ದನು.

ಈ ಯೋಧನು ಸಾಹಿತ್ಯವನ್ನು ಹಾಗೂ ರಾಜ್ಯ ಸಭಾಗೃಹಕ್ಕೆ ಬರುವಂತೆ ಕೊಡಲ್ಪಟ್ಟ ಆಮಂತ್ರಣವನ್ನು ಸ್ವೀಕರಿಸಿದನು. ಕೂಟಕ್ಕೆ ಹಾಜರಾದ ಬಳಿಕ, ರಾಜ್ಯ ಸಭಾಗೃಹದಲ್ಲಿ ಕಳೆದ ಆ ಎರಡು ತಾಸುಗಳ ಕಾಲಾವಧಿಯಲ್ಲಿ, 30 ವರ್ಷಗಳಲ್ಲೇ ಪ್ರಥಮ ಬಾರಿಗೆ ಮನಶ್ಶಾಂತಿಯನ್ನು ಅನುಭವಿಸಿದೆ ಎಂದು ಅವನು ಹೇಳಿದನು. ಸಾನ್‌ ಮೀಗೆಲ್‌ ಡೇ ಆಯೆಂಡೇಯಲ್ಲಿದ್ದ ಈ ಪುರುಷನು ಅಲ್ಲಿ ಕೆಲವೇ ವಾರಗಳಿಗಾಗಿ ಬಂದಿದ್ದನು, ಆದರೂ ಅವನು ಅನೇಕ ಬೈಬಲ್‌ ಅಧ್ಯಯನಗಳಲ್ಲಿ ಸಂತೋಷಿಸಿದನು ಮತ್ತು ಸ್ವದೇಶಕ್ಕೆ ಹಿಂದಿರುಗುವ ತನಕ ಎಲ್ಲಾ ಕೂಟಗಳಿಗೆ ಹಾಜರಾದನು. ಅವನ ಅಧ್ಯಯನವು ಮುಂದುವರಿಯಸಾಧ್ಯವಾಗುವಂತೆ ಏರ್ಪಾಡುಗಳು ಮಾಡಲ್ಪಟ್ಟವು.

ಕೆಲಸದ ಸ್ಥಳದಲ್ಲಿ ಮತ್ತು ಶಾಲೆಯಲ್ಲಿ ಅನೌಪಚಾರಿಕವಾಗಿ ಸಾಕ್ಷಿನೀಡುವುದು

ನಿಮ್ಮ ಕೆಲಸದ ಸ್ಥಳದಲ್ಲಿ ನೀವು ನಿಮ್ಮನ್ನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ಪರಿಚಯಿಸಿಕೊಳ್ಳುತ್ತಿದ್ದೀರೋ? ಕೇಪ್‌ ಸಾನ್‌ ಲೂಕಾಸ್‌ನಲ್ಲಿ ರಜಾಕಾಲದಲ್ಲಿ ಉಪಯೋಗಿಸಲಿಕ್ಕಾಗಿರುವ ಅಪಾರ್ಟ್‌ಮೆಂಟ್‌ಗಳನ್ನು ಮಾರುವ ಆಡ್ರೀಆನ್‌ ತಾನೊಬ್ಬ ಸಾಕ್ಷಿಯೆಂಬುದನ್ನು ಎಲ್ಲರಿಗೂ ತಿಳಿಯಪಡಿಸುತ್ತಾನೆ. ಇದರ ಪರಿಣಾಮವಾಗಿ, ಅವನ ಸಹೋದ್ಯೋಗಿಯಾದ ಜೂಡೀ ಹೇಳುವುದು: “ನೀವು ನನಗೆ ಕೇವಲ ಮೂರು ವರ್ಷಗಳ ಹಿಂದೆ, ನೀನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಬಹುದು ಎಂದು ಹೇಳಿರುತ್ತಿದ್ದಲ್ಲಿ, ‘ನಾನು ಬದುಕಿರುವಷ್ಟು ಕಾಲ ಅದು ಸಾಧ್ಯವಿಲ್ಲ’ ಎಂದು ನಾನು ಹೇಳಿರುತ್ತಿದ್ದೆ! ನಾನು ಬೈಬಲ್‌ ಓದಲೇಬೇಕೆಂದು ನಿರ್ಧರಿಸಿದೆ. ‘ಇದು ಕಷ್ಟಕರವಾದ ಕೆಲಸವೇನಲ್ಲ, ಏಕೆಂದರೆ ಓದುವುದೆಂದರೆ ನನಗೆ ತುಂಬ ಇಷ್ಟ’ ಎಂದು ನನ್ನಷ್ಟಕ್ಕೇ ನೆನಸಿದೆ. ಆದರೆ, ಸುಮಾರು ಆರು ಪುಟಗಳಷ್ಟು ಓದಿದ ಬಳಿಕ, ಸಹಾಯದ ಅಗತ್ಯವಿದೆ ಎಂಬುದು ನನಗೆ ಮನವರಿಕೆಯಾಯಿತು. ನನಗೆ ಸಹಾಯಮಾಡಸಾಧ್ಯವಿರುವ ಏಕಮಾತ್ರ ವ್ಯಕ್ತಿ ಆಡ್ರೀಆನ್‌ ಎಂಬ ಹೆಸರಿನ ನನ್ನ ಸಹೋದ್ಯೋಗಿಯೇ ಆಗಿದ್ದಾನೆ ಎಂದು ನನಗನಿಸಿತು. ನಾನು ಅವನೊಂದಿಗೆ ಮಾತಾಡಲು ಇಷ್ಟಪಡುತ್ತಿದ್ದೆ ಏಕೆಂದರೆ ಕೆಲಸದ ಸ್ಥಳದಲ್ಲಿ ನಿಜವಾಗಿಯೂ ಸಭ್ಯನಾಗಿದ್ದ ಏಕಮಾತ್ರ ವ್ಯಕ್ತಿ ಅವನಾಗಿದ್ದನು.” ಆ ಕೂಡಲೆ ಆಡ್ರೀಆನ್‌ ತನ್ನ ನಿಶ್ಚಿತ ವಧುವಾಗಿದ್ದ ಕೇಟೀಯೊಂದಿಗೆ ಬಂದು, ಜೂಡೀಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಒಪ್ಪಿಕೊಂಡನು. ಕೇಟೀ ಅವಳೊಂದಿಗೆ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಿದಳು, ಮತ್ತು ಸಮಯಾನಂತರ ಜೂಡೀ ಒಬ್ಬ ಸ್ನಾತ ಸಾಕ್ಷಿಯಾದಳು.

ಶಾಲೆಯಲ್ಲಿ ಅನೌಪಚಾರಿಕವಾಗಿ ಸಾಕ್ಷಿನೀಡುವ ವಿಷಯದಲ್ಲೇನು? ಇಬ್ಬರು ಸಾಕ್ಷಿಗಳು ವಿಶ್ವವಿದ್ಯಾನಿಲಯದಲ್ಲಿ ಸ್ಪ್ಯಾನಿಷ್‌ ಭಾಷೆಯ ಪಾಠಗಳಿಗೆ ಹಾಜರಾಗುತ್ತಿದ್ದರು, ಆದರೆ ಒಂದು ದಿನ ಕ್ರೈಸ್ತ ಸಮ್ಮೇಳನವೊಂದಕ್ಕೆ ಹಾಜರಾಗಲಿಕ್ಕಾಗಿ ಕ್ಲಾಸಿಗೆ ಗೈರುಹಾಜರಾದರು. ಅವರು ಕ್ಲಾಸಿಗೆ ಹಿಂದಿರುಗಿದಾಗ, ಅವರು ಏನು ಮಾಡುತ್ತಿದ್ದರು ಎಂಬುದನ್ನು ಸ್ಪ್ಯಾನಿಷ್‌ ಭಾಷೆಯಲ್ಲಿ ತಿಳಿಸುವಂತೆ ಕೇಳಿಕೊಳ್ಳಲಾಯಿತು. ತಮ್ಮಿಂದ ಸಾಧ್ಯವಿರುವಷ್ಟು ಮಟ್ಟಿಗೆ ಸ್ಪ್ಯಾನಿಷ್‌ ಭಾಷೆಯಲ್ಲಿ ಸಾಕ್ಷಿಯನ್ನು ನೀಡಲಿಕ್ಕಾಗಿ ಅವರು ಈ ಅವಕಾಶವನ್ನು ಸದುಪಯೋಗಿಸಿಕೊಂಡರು. ಸಿಲ್ವೀಆ ಎಂಬ ಶಿಕ್ಷಕಿಯು ಬೈಬಲ್‌ ಪ್ರವಾದನೆಯಲ್ಲಿ ತುಂಬ ಆಸಕ್ತಳಾಗಿದ್ದಳು. ಅವಳು ಇಂಗ್ಲಿಷ್‌ ಭಾಷೆಯಲ್ಲಿ ಬೈಬಲ್‌ ಅಧ್ಯಯನಮಾಡಲು ಒಪ್ಪಿಕೊಂಡಳು ಮತ್ತು ಈಗ ಸುವಾರ್ತೆಯ ಪ್ರಚಾರಕಳಾಗಿದ್ದಾಳೆ. ಅವಳ ಕುಟುಂಬದ ಅನೇಕ ಸದಸ್ಯರು ಸಹ ಅಧ್ಯಯನಮಾಡುತ್ತಿದ್ದಾರೆ. ಸಿಲ್ವೀಆ ಹೇಳುವುದು: “ನನ್ನ ಜೀವಮಾನದಲ್ಲೆಲ್ಲಾ ನಾನು ಯಾವುದಕ್ಕಾಗಿ ಹುಡುಕಾಟ ನಡೆಸುತ್ತಿದ್ದೆನೋ ಅದನ್ನು ಕಂಡುಕೊಂಡೆ.” ಹೌದು, ಅನೌಪಚಾರಿಕ ಸಾಕ್ಷಿಕಾರ್ಯವು ಅತ್ಯುತ್ತಮ ಫಲವನ್ನು ನೀಡಬಲ್ಲದು.

ಇನ್ನಿತರ ಅವಕಾಶಗಳನ್ನು ಸದುಪಯೋಗಿಸುವುದು

ಅತಿಥಿಸತ್ಕಾರ ಮಾಡುವವರಾಗಿರುವುದು ಸಹ ಸಾಕ್ಷಿಯನ್ನು ನೀಡಲು ಸಹಾಯಮಾಡಬಲ್ಲದು. ಸನೊರಾದ ಸಾನ್‌ ಕಾರ್ಲೋಸ್‌ನಲ್ಲಿ ಸೇವೆಮಾಡುತ್ತಿರುವ ಜಿಮ್‌ ಮತ್ತು ಗೇಲ್‌, ಇದು ನಿಜವಾಗಿಯೂ ಫಲಪ್ರದವಾಗಿದೆ ಎಂಬುದನ್ನು ಕಂಡುಕೊಂಡರು. ಬೆಳಗ್ಗೆ 6 ಗಂಟೆಗೆ ತನ್ನ ನಾಯಿಗಳನ್ನು ವಾಕಿಂಗ್‌ಗೆ ಕರೆದೊಯ್ಯುತ್ತಿದ್ದ ಸ್ತ್ರೀಯೊಬ್ಬಳು, ಇವರ ಅಂಗಳವನ್ನು ಪ್ರಶಂಸಿಸುತ್ತಾ ನಿಂತಳು. ಜಿಮ್‌ ಮತ್ತು ಗೇಲ್‌ ಅವಳನ್ನು ಕಾಫಿ ಕುಡಿಯಲು ಆಮಂತ್ರಿಸಿದರು. ಅವಳು 60 ವರ್ಷಗಳಲ್ಲೇ ಪ್ರಥಮ ಬಾರಿಗೆ ಯೆಹೋವನ ಕುರಿತು ಮತ್ತು ನಿತ್ಯಜೀವದ ಪ್ರತೀಕ್ಷೆಯ ಕುರಿತು ಕೇಳಿಸಿಕೊಂಡಳು. ಒಂದು ಬೈಬಲ್‌ ಅಧ್ಯಯನವು ಆರಂಭಿಸಲ್ಪಟ್ಟಿತು.

ಏಡ್ರೀಎನ್‌ ಸಹ ಅದೇ ರೀತಿ ಅಪರಿಚಿತರನ್ನು ದಯಾಭಾವದಿಂದ ಉಪಚರಿಸುತ್ತಾಳೆ. ಕ್ಯಾನ್‌ಕೂನ್‌ನಲ್ಲಿರುವ ಒಂದು ರೆಸ್ಟೊರೆಂಟ್‌ನಲ್ಲಿ ಅವಳು ಊಟಮಾಡುತ್ತಿದ್ದಾಗ, ಒಬ್ಬ ಯುವಕನು ಅವಳ ಬಳಿಗೆ ಬಂದು, ನೀವು ಕೆನಡದವರೋ ಎಂದು ಕೇಳಿದನು. ಅವಳು ಹೌದೆಂದು ಪ್ರತ್ಯುತ್ತರಿಸಿದಾಗ, ಕೆನಡದವರ ಕುರಿತಾದ ಶಾಲಾ ವರದಿಯೊಂದನ್ನು ಸಿದ್ಧಪಡಿಸುವುದರಲ್ಲಿ ತಾನೂ ತನ್ನ ತಾಯಿಯೂ ತಂಗಿಗೆ ಸಹಾಯಮಾಡಲು ಪ್ರಯತ್ನಿಸುತ್ತಿದ್ದೇವೆಂದು ಅವನು ವಿವರಿಸಿದನು. ಇಂಗ್ಲಿಷ್‌ ಭಾಷೆಯನ್ನು ಮಾತಾಡುತ್ತಿದ್ದ ತಾಯಿ ಏಡ್ರೀಎನ್‌ಳ ಬಳಿ ಕುಳಿತುಕೊಳ್ಳಲು ಬಂದಳು. ಕೆನಡದವರ ಕುರಿತಾದ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದ ಬಳಿಕ ಏಡ್ರೀಎನ್‌ ಹೇಳಿದ್ದು: “ನಾನು ಕೆನಡದಿಂದ ಇಲ್ಲಿಗೆ ಬರಲು ನಿಜವಾಗಿಯೂ ಪ್ರಾಮುಖ್ಯವಾದ ಒಂದು ಕಾರಣವಿದೆ​—⁠ಜನರು ಬೈಬಲಿನ ಕುರಿತು ತಿಳಿದುಕೊಳ್ಳುವಂತೆ ಸಹಾಯಮಾಡುವುದೇ. ನಿಮಗೂ ಇದರಲ್ಲಿ ಆಸಕ್ತಿಯಿದೆಯೋ?” ತನಗೆ ಆಸಕ್ತಿಯಿದೆ ಎಂದು ಆ ಸ್ತ್ರೀಯು ಉತ್ತರಿಸಿದಳು. ಹತ್ತು ವರ್ಷಗಳಿಗೆ ಮುಂಚೆ ಅವಳು ಚರ್ಚನ್ನು ಬಿಟ್ಟಿದ್ದಳು ಮತ್ತು ಅಂದಿನಿಂದ ಸ್ವತಃ ತಾನೇ ಬೈಬಲ್‌ ಅಧ್ಯಯನವನ್ನು ಮಾಡಲು ಪ್ರಯತ್ನಿಸಿದ್ದಳು. ಅವಳು ಏಡ್ರೀಎನ್‌ಳಿಗೆ ತನ್ನ ವಿಳಾಸ ಹಾಗೂ ಫೋನ್‌ ನಂಬರನ್ನು ಕೊಟ್ಟಳು, ಮತ್ತು ತೃಪ್ತಿಕರವಾದ ಒಂದು ಬೈಬಲ್‌ ಅಧ್ಯಯನವು ಆರಂಭಿಸಲ್ಪಟ್ಟಿತು.

‘ನಿಮ್ಮ ಆಹಾರವನ್ನು ನೀರಿನ ಮೇಲೆ ಚೆಲ್ಲಿ’

ಪ್ರತಿಯೊಂದು ಸಂದರ್ಭದಲ್ಲೂ ಬೈಬಲ್‌ ಸತ್ಯದ ಕುರಿತು ಮಾತಾಡುವುದು, ರಾಜ್ಯದ ಸಂದೇಶವನ್ನು ಕೇಳಿಸಿಕೊಳ್ಳಲು ಸ್ವಲ್ಪ ಮಾತ್ರ ಅವಕಾಶವಿರುವ ಅಥವಾ ಅವಕಾಶವೇ ಇಲ್ಲದಿರುವಂಥ ಜನರಿಗೆ ಸಾಕ್ಷಿಯನ್ನು ನೀಡುವುದರಲ್ಲಿ ಫಲಿಸುತ್ತದೆ. ಸೀವಾಟಾನೀಕೋದ ರೇವು ಪಟ್ಟಣದಲ್ಲಿನ ಗದ್ದಲಭರಿತ ಕಾಫಿಯಂಗಡಿಯೊಂದರಲ್ಲಿ ಜನರು ಕಿಕ್ಕಿರಿದಿದ್ದು, ಕುಳಿತುಕೊಳ್ಳಲು ಬೇರಾವುದೇ ಸ್ಥಳವು ಇರಲಿಲ್ಲವಾದ್ದರಿಂದ, ತನ್ನ ಟೇಬಲ್‌ಗೆ ಬಂದು ಕುಳಿತುಕೊಳ್ಳುವಂತೆ ಸಾಕ್ಷಿಯೊಬ್ಬಳು ಇಬ್ಬರು ವಿದೇಶೀಯರನ್ನು ಆಮಂತ್ರಿಸಿದಳು. ಈ ದಂಪತಿಗಳು ಏಳು ವರ್ಷಗಳಿಂದ ಬೇರೆ ಬೇರೆ ಸ್ಥಳಗಳಿಗೆ ಸಮುದ್ರಯಾನ ಮಾಡುತ್ತಿದ್ದರು. ಯೆಹೋವನ ಸಾಕ್ಷಿಗಳ ಕುರಿತಾದ ತಮ್ಮ ನಕಾರಾತ್ಮಕ ಭಾವನೆಗಳನ್ನು ಅವರು ವ್ಯಕ್ತಪಡಿಸಿದರು. ಕಾಫಿಯಂಗಡಿಯಲ್ಲಿ ಇವರನ್ನು ಭೇಟಿಯಾದ ಬಳಿಕ, ಈ ಸಾಕ್ಷಿಯು ದಂಪತಿಯ ಹಡಗಿನ ಬಳಿ ಹೋಗಿ ಅವರನ್ನು ಮಾತಾಡಿಸಿಕೊಂಡು, ತನ್ನ ಮನೆಗೆ ಬರುವಂತೆ ಅವರನ್ನು ಆಹ್ವಾನಿಸಿದಳು. ಅವರು 20ಕ್ಕಿಂತಲೂ ಹೆಚ್ಚು ಪತ್ರಿಕೆಗಳನ್ನು ಮತ್ತು 5 ಪುಸ್ತಕಗಳನ್ನು ಸ್ವೀಕರಿಸಿದರು ಮತ್ತು ತಮ್ಮ ಮುಂದಿನ ತಂಗುದಾಣದಲ್ಲಿ ಸಾಕ್ಷಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇವೆಂದು ಮಾತುಕೊಟ್ಟರು.

ಜೆಫ್‌ ಮತ್ತು ಡೆಬ್‌ರು ಕ್ಯಾನ್‌ಕೂನ್‌ನ ಶಾಪಿಂಗ್‌ ಸೆಂಟರ್‌ವೊಂದರಲ್ಲಿ ಸುಂದರವಾದ ಹೆಣ್ಣುಮಗುವಿನೊಂದಿಗಿದ್ದ ಒಂದು ಕುಟುಂಬವನ್ನು ಗಮನಿಸಿದರು. ಅವರು ಮಗುವಿನ ಕುರಿತು ಏನೋ ಹೇಳಿದಾಗ, ಆ ಮಗುವಿನ ಹೆತ್ತವರು ಅವರನ್ನು ತಮ್ಮೊಂದಿಗೆ ಪೀಟ್ಸ ತಿನ್ನಲು ಬರುವಂತೆ ಆಹ್ವಾನಿಸಿದರು. ಈ ಕುಟುಂಬವು ಭಾರತದಿಂದ ಬಂದದ್ದಾಗಿದೆ ಎಂಬುದು ತಿಳಿದುಬಂತು. ಅವರೆಂದೂ ಯೆಹೋವನ ಸಾಕ್ಷಿಗಳ ಬಗ್ಗೆ ಕೇಳಿಸಿಕೊಂಡಿರಲಿಲ್ಲ ಮತ್ತು ಅವರು ನಮ್ಮ ಸಾಹಿತ್ಯವನ್ನು ನೋಡಿರಲೂ ಇಲ್ಲ. ಅವರು ಶಾಪಿಂಗ್‌ ಸೆಂಟರ್‌ನಿಂದ ಹೊರಗೆ ಹೋಗುವಾಗ ಅವರ ಬಳಿ ಸಾಕ್ಷಿಗಳ ಕೆಲವು ಪ್ರಕಾಶನಗಳಿದ್ದವು.

ಯೂಕಟೇನ್‌ ಕರಾವಳಿತೀರದಿಂದ ಆಚೆಗಿರುವ ಒಂದು ದ್ವೀಪದಲ್ಲಿಯೂ ಇದೇ ರೀತಿಯ ಅನುಭವವಾಯಿತು. ಹೊಸದಾಗಿ ಮದುವೆಯಾಗಿದ್ದ ಒಬ್ಬ ಚೀನೀ ದಂಪತಿಗಳು ತಮ್ಮ ಫೋಟೋ ತೆಗೆಯುವಂತೆ ಜೆಫ್‌ನ ಬಳಿ ವಿನಂತಿಸಿಕೊಂಡರು; ಸಂತೋಷಕರವಾಗಿಯೇ ಅವನಿದನ್ನು ಮಾಡಿದನು. ಜೆಫ್‌ ಅವರೊಂದಿಗೆ ಮಾತಾಡುತ್ತಿದ್ದಾಗ, ಕಳೆದ 12 ವರ್ಷಗಳಿಂದ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದರಾದರೂ ಅವರೆಂದೂ ಯೆಹೋವನ ಸಾಕ್ಷಿಗಳನ್ನು ನೋಡಿರಲಿಲ್ಲ ಅಥವಾ ಅವರ ಕುರಿತು ಕೇಳಿಸಿಕೊಂಡಿರಲಿಲ್ಲ ಎಂಬುದು ಅವನಿಗೆ ತಿಳಿದುಬಂತು! ಹಿತಕರವಾದ ಒಂದು ಸಂಭಾಷಣೆಯು ಆರಂಭಿಸಲ್ಪಟ್ಟಿತು. ಸ್ವದೇಶಕ್ಕೆ ಹಿಂದಿರುಗಿದ ಬಳಿಕ ಸಾಕ್ಷಿಗಳನ್ನು ಸಂಪರ್ಕಿಸುವಂತೆ ಜೆಫ್‌ ಅವರನ್ನು ಉತ್ತೇಜಿಸಿದನು.

ಅನೌಪಚಾರಿಕವಾಗಿ ಸಾಕ್ಷಿನೀಡಲು ಸದವಕಾಶವನ್ನು ನೀಡಸಾಧ್ಯವಿರುವಂಥ ಒಂದು ವಿಶೇಷ ಸಮಾರಂಭವು ನಿಮ್ಮ ಕ್ಷೇತ್ರದಲ್ಲಿ ನಡೆಯಬಹುದು. ಅಮೆರಿಕದ ಅಧ್ಯಕ್ಷರು ಗ್ವಾನಹಾಟೊದ ಬಳಿಯಲ್ಲಿದ್ದ ಮೆಕ್ಸಿಕೋದ ಅಧ್ಯಕ್ಷರನ್ನು ಅವರ ಕ್ಷೇತ್ರಗೃಹದಲ್ಲಿ ಸಂದರ್ಶಿಸಲು ಬಂದಾಗ, ಲೋಕದಾದ್ಯಂತ ಇರುವ ವರದಿಗಾರರು ಈ ಘಟನೆಯನ್ನು ವರದಿಸಲು ಬಂದರು. ಒಂದು ಸಾಕ್ಷಿ ಕುಟುಂಬವು, ಇಂಗ್ಲಿಷ್‌ ಭಾಷೆಯಲ್ಲಿ ಸಾರಲು ಸಿಗುವ ಈ ಅವಕಾಶವನ್ನು ಸದುಪಯೋಗಿಸಿಕೊಳ್ಳಲು ನಿರ್ಧರಿಸಿತು. ಇದಕ್ಕೆ ಸಿಕ್ಕಿದ ಪ್ರತಿಕ್ರಿಯೆಯು ಅನುಕೂಲಕರವಾಗಿತ್ತು. ಉದಾಹರಣೆಗೆ, ಒಬ್ಬ ವರದಿಗಾರನು ಕಾಸವೊ ಮತ್ತು ಕುವೇಟ್‌ನಲ್ಲಿ ನಡೆದ ಯುದ್ಧಗಳಂಥ ಅನೇಕ ಯುದ್ಧಗಳ ಕುರಿತು ವರದಿಯನ್ನು ಬರೆದಿದ್ದನು. ಒಬ್ಬ ವ್ಯಕ್ತಿಯು ಮರೆಯಿಂದ ಹಾರಿಸಿದ ಗುಂಡಿಗೆ ಬಲಿಯಾದ ಸಹೋದ್ಯೋಗಿಯೊಬ್ಬನು ಇವನ ಕೈಗಳಲ್ಲೇ ಪ್ರಾಣಬಿಟ್ಟಿದ್ದನು. ಪುನರುತ್ಥಾನದ ಕುರಿತು ಕೇಳಿಸಿಕೊಂಡ ಬಳಿಕ ಈ ವರದಿಗಾರನು, ಜೀವನಕ್ಕೆ ಒಂದು ಉದ್ದೇಶವಿದೆ ಎಂಬುದನ್ನು ತಿಳಿದುಕೊಳ್ಳಲು ತನಗೆ ಅವಕಾಶ ಕೊಟ್ಟದ್ದಕ್ಕಾಗಿ ಕಣ್ಣೀರು ತುಂಬಿದ ಕಣ್ಣುಗಳಿಂದ ಉಪಕಾರ ಸಲ್ಲಿಸಿದನು. ಪುನಃ ಎಂದೂ ತಾನು ಈ ಸಾಕ್ಷಿ ದಂಪತಿಯನ್ನು ನೋಡುವ ಅವಕಾಶವಿಲ್ಲವಾದರೂ, ಬೈಬಲಿನ ಈ ಸುವಾರ್ತೆಯನ್ನು ತನ್ನ ಹೃದಯದಲ್ಲೇ ಜೋಪಾನವಾಗಿ ಕಾಪಾಡಿಕೊಳ್ಳುವೆ ಎಂದು ಅವನು ಹೇಳಿದನು.

ಈ ಮೇಲಿನ ಅನುಭವಗಳಲ್ಲಿ ನೋಡಸಾಧ್ಯವಿರುವಂತೆ, ಇಂಥ ಸಾಕ್ಷಿಕಾರ್ಯದ ಅಂತಿಮ ಫಲಿತಾಂಶವು ಅನೇಕವೇಳೆ ನಮಗೆ ಗೊತ್ತಿರುವುದಿಲ್ಲ. ಆದರೂ, ಜ್ಞಾನಿ ಅರಸನಾದ ಸೊಲೊಮೋನನು ಹೇಳಿದ್ದು: “ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು.” ಅವನು ಇದನ್ನೂ ಹೇಳಿದನು: “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.” (ಪ್ರಸಂಗಿ 11:1, 6) ಹೌದು, ಪೌಲನೂ ಯೇಸುವೂ ಮಾಡಿದಂತೆ ಹಾಗೂ ಮೆಕ್ಸಿಕೋದ ಇಂಗ್ಲಿಷ್‌ ಭಾಷಾ ಕ್ಷೇತ್ರದಲ್ಲಿರುವ ಆಧುನಿಕ ದಿನದ ಸಾಕ್ಷಿಗಳು ಮಾಡುವಂತೆ, ಅನೇಕ ನೀರುಗಳ ಮೇಲೆ ಹುರುಪಿನಿಂದ ‘ನಿಮ್ಮ ಆಹಾರವನ್ನು ಚೆಲ್ಲಿರಿ’ ಮತ್ತು ಉದಾರ ಮನಸ್ಸಿನಿಂದ ‘ಬೀಜವನ್ನು ಬಿತ್ತಿರಿ.’