ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೆಬೆಕ್ಕ ಒಬ್ಬ ಶ್ರಮಶೀಲ ದೇವಭಕ್ತೆ

ರೆಬೆಕ್ಕ ಒಬ್ಬ ಶ್ರಮಶೀಲ ದೇವಭಕ್ತೆ

ರೆಬೆಕ್ಕ ಒಬ್ಬ ಶ್ರಮಶೀಲ ದೇವಭಕ್ತೆ

ನಿಮ್ಮ ಮಗನಿಗಾಗಿ ಒಬ್ಬ ಪತ್ನಿಯನ್ನು ಆಯ್ಕೆಮಾಡುವ ಜವಾಬ್ದಾರಿ ನಿಮ್ಮ ಮೇಲಿದೆಯೆಂದು ನೆನಸಿ. ನೀವು ಯಾವ ರೀತಿಯ ಹೆಣ್ಣನ್ನು ಆಯ್ಕೆಮಾಡುವಿರಿ? ಅವಳಿಗೆ ಏನೇನು ಅರ್ಹತೆಗಳಿರಬೇಕು? ಶಾರೀರಿಕವಾಗಿ ಆಕರ್ಷಕ ರೂಪವುಳ್ಳ, ಬುದ್ಧಿವಂತಿಕೆಯುಳ್ಳ, ದಯಾಪರ ಹಾಗೂ ಶ್ರಮಶೀಲ ಹೆಣ್ಣಿಗಾಗಿ ನೀವು ಹುಡುಕುವಿರೊ? ಅಥವಾ ಮೊದಲು ನೀವು ಬೇರೇನನ್ನಾದರೂ ನೋಡುವಿರೊ?

ಅಬ್ರಹಾಮನು ಇಂಥ ಉಭಯಸಂಕಟದಲ್ಲಿ ಸಿಲುಕಿದ್ದನು. ಅವನ ಮಗನಾದ ಇಸಾಕನ ಮೂಲಕ ಅವನ ವಂಶಜರಿಗೆ ಆಶೀರ್ವಾದಗಳು ಹರಿಯುವವೆಂದು ಯೆಹೋವನು ಮಾತುಕೊಟ್ಟಿದ್ದನು. ನಾವೀಗ ಚರ್ಚಿಸುತ್ತಿರುವ ಈ ಹಂತದಲ್ಲಿ, ಅಬ್ರಹಾಮನು ಈಗಾಗಲೇ ವೃದ್ಧನಾಗಿದ್ದನು, ಆದರೆ ಅವನ ಮಗನು ಇನ್ನೂ ಅವಿವಾಹಿತನಾಗಿದ್ದನು. (ಆದಿಕಾಂಡ 12:​1-3, 7; 17:19; 22:​17, 18; 24:⁠1) ಇಸಾಕನು, ಇನ್ನೂ ಹುಡುಕಿ ತರಬೇಕಾಗಿದ್ದ ಹೆಂಡತಿಯೊಂದಿಗೆ ಮತ್ತು ಅವರು ಹುಟ್ಟಿಸಬಹುದಾದ ಯಾವುದೇ ಸಂತಾನದೊಂದಿಗೆ ಆಶೀರ್ವಾದಗಳಲ್ಲಿ ಪಾಲಿಗನಾಗಲಿದ್ದುದರಿಂದ, ಅವನಿಗಾಗಿ ಒಬ್ಬ ತಕ್ಕ ಪತ್ನಿಯನ್ನು ಹುಡುಕಿ ತರುವಂತೆ ಅಬ್ರಹಾಮನು ಏರ್ಪಾಡುಮಾಡುತ್ತಾನೆ. ಮೊತ್ತಮೊದಲಾಗಿ ಅವಳು ಯೆಹೋವನ ಸೇವಕಳಾಗಿರಬೇಕು. ಅಬ್ರಹಾಮನು ವಾಸಿಸುತ್ತಿದ್ದ ಕಾನಾನಿನಲ್ಲಿ ಎಲ್ಲೂ ಯೆಹೋವನನ್ನು ಸೇವಿಸುವ ಸ್ತ್ರೀಯರು ಇಲ್ಲದಿದ್ದುದರಿಂದ, ಅವನು ಬೇರೆ ಕಡೆ ಹುಡುಕಬೇಕಾಗುತ್ತದೆ. ಕೊನೆಗೆ ಆಯ್ಕೆಯಾದ ಸ್ತ್ರೀಯೇ ರೆಬೆಕ್ಕ. ಅವಳನ್ನು ಹೇಗೆ ಕಂಡುಕೊಳ್ಳಲಾಯಿತು? ಅವಳೊಬ್ಬ ಆಧ್ಯಾತ್ಮಿಕ ಸ್ತ್ರೀಯಾಗಿದ್ದಳೊ? ಅವಳ ಮಾದರಿಯನ್ನು ಪರಿಗಣಿಸುವ ಮೂಲಕ ನಾವೇನು ಕಲಿಯಬಲ್ಲೆವು?

ಒಬ್ಬ ಅರ್ಹ ಸ್ತ್ರೀಗಾಗಿ ಅನ್ವೇಷಣೆ

ಅಬ್ರಹಾಮನು, ಯೆಹೋವನ ಜೊತೆ ಆರಾಧಕರಾಗಿದ್ದ ತನ್ನ ಸಂಬಂಧಿಕರ ನಡುವೆಯೇ ಒಬ್ಬ ವಧುವನ್ನು ಆಯ್ಕೆಮಾಡಲಿಕ್ಕಾಗಿ ತನ್ನ ಹಿರೀ ಸೇವಕನನ್ನು, ಬಹುಶಃ ಎಲೀಯೆಜರನನ್ನು ದೂರದ ಮೆಸೊಪತಾಮ್ಯಕ್ಕೆ ಕಳುಹಿಸುತ್ತಾನೆ. ಒಬ್ಬ ವಧುವನ್ನು ಆರಿಸುವುದು ಎಷ್ಟು ಗಂಭೀರವಾಗಿದೆಯೆಂದರೆ, ಎಲೀಯೆಜರನು ಇಸಾಕನಿಗಾಗಿ ಒಬ್ಬ ಕಾನಾನ್ಯ ಸ್ತ್ರೀಯನ್ನು ಹೆಂಡತಿಯಾಗಿ ತರುವುದಿಲ್ಲ ಎಂದು ಅಬ್ರಹಾಮನು ಅವನಿಂದ ಪ್ರಮಾಣಮಾಡಿಸುತ್ತಾನೆ. ಈ ವಿಷಯದಲ್ಲಿ ಅಬ್ರಹಾಮನ ಪಟ್ಟುಹಿಡಿಯುವಿಕೆಯು ಗಮನಾರ್ಹ.​—⁠ಆದಿಕಾಂಡ 24:​2-10.

ಅಬ್ರಹಾಮನ ಸಂಬಂಧಿಕರಿರುವ ಪಟ್ಟಣಕ್ಕೆ ಪ್ರಯಾಣಿಸಿ, ಅಲ್ಲಿಗೆ ತಲಪಿದ ಬಳಿಕ, ಎಲೀಯೆಜರನು ತನ್ನ ಹತ್ತು ಒಂಟೆಗಳನ್ನು ಒಂದು ಬಾವಿಯ ಬಳಿ ಕರೆತರುತ್ತಾನೆ. ಆ ದೃಶ್ಯವನ್ನು ಚಿತ್ರಿಸಿಕೊಳ್ಳಿರಿ! ಅದು ಸಾಯಂಕಾಲದ ಹೊತ್ತು, ಮತ್ತು ಎಲೀಯೆಜರನು ಹೀಗೆ ಪ್ರಾರ್ಥಿಸುತ್ತಾನೆ: “ಇಗೋ, ನೀರಿನ ಬುಗ್ಗೆಯ ಬಳಿಯಲ್ಲಿ ನಿಂತಿದ್ದೇನೆ; ಈ ಊರಿನ ಹೆಣ್ಣುಮಕ್ಕಳು ನೀರಿಗೆ ಬರುತ್ತಾರೆ. ನಾನು ಯಾವ ಹುಡುಗಿಗೆ​—⁠ನೀನು ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ನನಗೆ ಕುಡಿಯುವದಕ್ಕೆ ಕೊಡು ಎಂದು ಹೇಳುವಾಗ​—⁠ನೀನು ಕುಡಿಯಬಹುದು, ಮತ್ತು ನಿನ್ನ ಒಂಟೆಗಳಿಗೂ ನೀರುಕೊಡುತ್ತೇನೆ ಅನ್ನುವಳೋ, ಅವಳೇ ನಿನ್ನ ದಾಸನಾದ ಇಸಾಕನಿಗೆ ನೀನು ನೇಮಿಸಿರುವ ಕನ್ಯೆಯಾಗಲಿ.”​—⁠ಆದಿಕಾಂಡ 24:11-14.

ಬಾಯಾರಿರುವ ಒಂದು ಒಂಟೆಯು ಬಹಳಷ್ಟು ನೀರನ್ನು (ಸುಮಾರು 100 ಲೀಟರ್‌ಗಳಷ್ಟನ್ನು) ಕುಡಿಯಬಲ್ಲದೆಂಬುದು ಅಲ್ಲಿನ ಸ್ಥಳಿಕ ಸ್ತ್ರೀಯರೆಲ್ಲರಿಗೂ ಚೆನ್ನಾಗಿ ತಿಳಿದಿದ್ದ ಸಂಗತಿಯಾಗಿತ್ತು. ಆದುದರಿಂದ ಹತ್ತು ಒಂಟೆಗಳಿಗಾಗಿ ನೀರು ಕೊಡಲು ಸಿದ್ಧಳಿರುವ ಒಬ್ಬ ಸ್ತ್ರೀಯು ಬೆನ್ನುಮುರಿಯುವಂಥ ಕೆಲಸಕ್ಕಾಗಿ ಸಿದ್ಧಳಾಗಿರಬೇಕಿತ್ತು. ಬೇರೆಯವರು ಕಿಂಚಿತ್ತೂ ಸಹಾಯ ನೀಡದೆ ನೋಡುತ್ತಾ ನಿಂತಿರುವಾಗ, ಈ ಕೆಲಸವನ್ನು ಮಾಡುತ್ತಾ ಇರುವುದು ಒಬ್ಬ ಸ್ತ್ರೀಯ ಶಕ್ತಿ, ತಾಳ್ಮೆ, ದೀನತೆ, ಮತ್ತು ಮಾನವ ಹಾಗೂ ಪಶುಗಳ ಕಡೆಗಿನ ಅವಳ ದಯಾಪರ ಹೃದಯದ ನಿಶ್ಚಿತ ರುಜುವಾತಾಗಿರಲಿತ್ತು.

ಈಗ ಏನಾಗುತ್ತದೆ? “ಅವನು ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಬ್ರಹಾಮನ ತಮ್ಮನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಊರ ಹೊರಗೆ ಬರುವದನ್ನು ಕಂಡನು. ಆ ಹುಡುಗಿ ಬಹು ಸುಂದರಿಯಾಗಿಯೂ . . . ಕನ್ನಿಕೆಯಾಗಿಯೂ ಇದ್ದಳು. ಆಕೆ ಬುಗ್ಗೆಯ ಬಳಿಗೆ ಇಳಿದು ಕೊಡದಲ್ಲಿ ನೀರುತುಂಬಿಕೊಂಡು ಮೇಲಕ್ಕೆ ಬಂದಾಗ ಆ ಸೇವಕನು ಓಡಿಬಂದು ಎದುರುಗೊಂಡು​—⁠ಅಮ್ಮಾ, ದಯಮಾಡಿ ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವದಕ್ಕೆ ಕೊಡು ಎಂದು ಕೇಳಿಕೊಳ್ಳಲು ಆಕೆ⁠—⁠ಕುಡಿಯಪ್ಪಾ ಎಂದು ಹೇಳಿ ತತ್‌ಕ್ಷಣವೇ ಕೊಡವನ್ನು ತನ್ನ ಕೈಯ ಮೇಲೆ ಇಳಿಸಿ ಕುಡಿಯ ಕೊಟ್ಟಳು.”​—⁠ಆದಿಕಾಂಡ 24:15-18.

ರೆಬೆಕ್ಕಳು ಅರ್ಹಳೊ?

ರೆಬೆಕ್ಕಳು ಅಬ್ರಹಾಮನ ತಮ್ಮನ ಮೊಮ್ಮಗಳು, ಮತ್ತು ಅವಳು ಸುಂದರಿಯೂ ಸುಶೀಲೆಯೂ ಆಗಿದ್ದಾಳೆ. ಅವಳು ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಮಾತಾಡಲು ಹಿಂಜರಿಯುವುದಿಲ್ಲ, ಆದರೆ ಅದೇ ಸಮಯದಲ್ಲಿ ಅವಳು ಅನಾವಶ್ಯಕ ಸಲುಗೆಯನ್ನೂ ತೋರಿಸುವುದಿಲ್ಲ. ಎಲೀಯೆಜರನು ಕುಡಿಯಲಿಕ್ಕಾಗಿ ನೀರನ್ನು ಬೇಡುವಾಗ, ಅವಳು ಆ ಬೇಡಿಕೆಯನ್ನು ಪೂರೈಸುತ್ತಾಳೆ. ಇದು ನಿರೀಕ್ಷಿಸಬಹುದಾದ ಸಂಗತಿಯೇ, ಏಕೆಂದರೆ ಅದು ಸಾಮಾನ್ಯ ಶಿಷ್ಟಾಚಾರದ ಭಾಗವಾಗಿತ್ತು. ಆದರೆ ಆ ಪರೀಕ್ಷೆಯ ಎರಡನೆಯ ಭಾಗದ ಕುರಿತಾಗಿ ಏನು?

ರೆಬೆಕ್ಕಳು ಹೇಳುವುದು: “ಕುಡಿಯಪ್ಪಾ.” ಆದರೆ ಆಕೆ ಅಷ್ಟಕ್ಕೇ ನಿಲ್ಲಿಸಲ್ಲಿಲ್ಲ. ಅವಳು ಮುಂದುವರಿಸುವುದು: “ನಾನು ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರುತಂದುಕೊಡುತ್ತೇನೆ.” ಸಾಮಾನ್ಯವಾಗಿ ನಿರೀಕ್ಷಿಸಲಾಗುವಂಥದ್ದಕಿಂತ ಹೆಚ್ಚನ್ನು ಮಾಡಲು ಅವಳು ಸಿದ್ಧಳಿದ್ದಳು. ಲವಲವಿಕೆಯಿಂದ “ಅವಳು ಕೊಡದಲ್ಲಿದ್ದ ನೀರನ್ನು ದೋಣಿ [“ತೊಟ್ಟಿ,” NW]ಯೊಳಗೆ ಹೊಯಿದು ತಿರಿಗಿ ತರುವದಕ್ಕೆ ಬಾವಿಗೆ ತ್ವರೆಯಾಗಿ ಹೋದಳು. ಹೀಗೆ ಅವನ ಎಲ್ಲಾ ಒಂಟೆಗಳಿಗೂ ತಂದು ಕೊಟ್ಟಳು.” ಅವಳು ಚಟುವಟಿಕೆಯ ಚಿಲುಮೆಯಾಗುತ್ತಾಳೆ. ಈ ಮಧ್ಯೆ “ಆ ಮನುಷ್ಯನು ಏನೂ ಮಾತಾಡದೆ ಆಕೆಯನ್ನು ದೃಷ್ಟಿಸಿ ನೋಡುತ್ತಾ” ಇದ್ದನೆಂದು ವೃತ್ತಾಂತವು ಹೇಳುತ್ತದೆ.​—⁠ಆದಿಕಾಂಡ 24:​19-21.

ಈ ಯುವತಿಯು ಅಬ್ರಹಾಮನ ಸಂಬಂಧಿಕಳಾಗಿದ್ದಾಳೆಂದು ತಿಳಿದುಬಂದಾಗ, ಎಲೀಯೆಜರನು ಯೆಹೋವನಿಗೆ ಉಪಕಾರ ಹೇಳುತ್ತಾ ಆತನಿಗೆ ಬೊಗ್ಗಿ ನಮಸ್ಕರಿಸಿದನು. ಅವಳ ತಂದೆಯ ಮನೆಯಲ್ಲಿ ಅವನಿಗೂ ಅವನೊಂದಿಗಿರುವವರಿಗೂ ಇಳುಕೊಳ್ಳಲು ಸ್ಥಳವಿದೆಯೊ ಎಂದಾತನು ವಿಚಾರಿಸುತ್ತಾನೆ. ಹೌದೆಂದು ರೆಬೆಕ್ಕಳು ಉತ್ತರಿಸಿ, ಈ ಸಂದರ್ಶಕರ ಕುರಿತಾದ ಸುದ್ದಿಯನ್ನು ತಲಪಿಸಲು ಮನೆಗೆ ಓಡುತ್ತಾಳೆ.​—⁠ಆದಿಕಾಂಡ 24:​22-28.

ಎಲೀಯೆಜರನ ಕಥೆಯನ್ನು ಕೇಳಿಸಿಕೊಂಡ ನಂತರ, ರೆಬೆಕ್ಕಳ ಅಣ್ಣನಾದ ಲಾಬಾನ ಮತ್ತು ಅವಳ ತಂದೆ ಬೆತೂವೇಲನು, ಇದರಲ್ಲಿ ದೇವರ ಹಸ್ತವಿರುವುದನ್ನು ಗ್ರಹಿಸುತ್ತಾರೆ. ನಿಶ್ಚಯವಾಗಿಯೂ, ರೆಬೆಕ್ಕಳೇ ಇಸಾಕನಿಗೆ ಹೆಂಡತಿಯಾಗಲು ತಕ್ಕವಳು. ಅವರಂದದ್ದು: “ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ; ಕರೆದುಕೊಂಡು ಹೋಗಬಹುದು; ಯೆಹೋವನು ಹೇಳಿದಂತೆಯೇ ಆಕೆ ನಿನ್ನ ದಣಿಯ ಮಗನಿಗೆ ಹೆಂಡತಿಯಾಗಲಿ.” ಇದರ ಬಗ್ಗೆ ರೆಬೆಕ್ಕಳ ಅಭಿಪ್ರಾಯವೇನು? ಅವಳು ಆ ಕೂಡಲೆ ಹೊರಡುವಳೊ ಎಂದು ಕೇಳಲಾಗಿ, “ಹೋಗುತ್ತೇನೆ” ಎಂದು ಒಂದೇ ಪದದಲ್ಲಿ ಉತ್ತರಿಸುತ್ತಾಳೆ. ಈ ಮದುವೆಯ ಪ್ರಸ್ತಾಪಕ್ಕೆ ಒಪ್ಪುವಂತೆ ಅವಳನ್ನು ಯಾರೂ ಒತ್ತಾಯಿಸಲಿಲ್ಲ. ಅಲ್ಲಿಂದ ತೆರಳಲು “ಆ ಕನ್ಯೆಗೆ ಇಷ್ಟವಿಲ್ಲದೆ ಹೋದರೆ” ಎಲೀಯೆಜರನಿಂದ ಮಾಡಿಸಲ್ಪಟ್ಟ ಪ್ರಮಾಣದಿಂದ ಅವನು ಮುಕ್ತನಾಗುವನೆಂದೂ ಅಬ್ರಹಾಮನು ಸ್ಪಷ್ಟವಾಗಿ ತಿಳಿಸಿದ್ದನು. ಆದರೆ ರೆಬೆಕ್ಕಳು ಸಹ ಈ ವಿಷಯದಲ್ಲಿ ದೇವರ ಹಸ್ತವಿರುವುದನ್ನು ನೋಡುತ್ತಾಳೆ. ಆದುದರಿಂದ ತಡಮಾಡದೇ ಅವಳು ತಾನು ಹಿಂದೆಂದೂ ಭೇಟಿಯಾಗಿರದಿದ್ದ ಪುರುಷನನ್ನು ವರಿಸಲು ತನ್ನ ಕುಟುಂಬವನ್ನು ಬಿಟ್ಟುಹೋಗುತ್ತಾಳೆ. ಆ ಧೀರ ನಿರ್ಣಯವು ನಂಬಿಕೆಯ ಗಮನಾರ್ಹ ಪ್ರದರ್ಶನವಾಗಿದೆ. ಖಂಡಿತವಾಗಿಯೂ ಅವಳು ಸರಿಯಾದ ಆಯ್ಕೆಯಾಗಿದ್ದಾಳೆ!​—⁠ಆದಿಕಾಂಡ 24:29-59.

ರೆಬೆಕ್ಕಳು ಇಸಾಕನನ್ನು ಭೇಟಿಯಾಗುವಾಗ, ಅಧೀನತೆಯ ಗುರುತಿನೋಪಾದಿ ತನ್ನ ಮುಖದ ಮೇಲೆ ಮುಸುಕುಹಾಕಿಕೊಳ್ಳುತ್ತಾಳೆ. ಇಸಾಕನು ಅವಳನ್ನು ತನ್ನ ಹೆಂಡತಿಯಾಗಿ ಸ್ವೀಕರಿಸುತ್ತಾನೆ, ಮತ್ತು ನಿಸ್ಸಂದೇಹವಾಗಿಯೂ ಅವಳ ಉತ್ಕೃಷ್ಟ ಗುಣಗಳಿಂದಾಗಿ ಆಕೆಯನ್ನು ಪ್ರೀತಿಸಲಾರಂಭಿಸುತ್ತಾನೆ.​—⁠ಆದಿಕಾಂಡ 24:​62-67.

ಅವಳಿ ಪುತ್ರರು

ರೆಬೆಕ್ಕಳಿಗೆ ಸುಮಾರು 19 ವರ್ಷಗಳ ವರೆಗೆ ಮಕ್ಕಳು ಹುಟ್ಟುವುದಿಲ್ಲ. ಕೊನೆಗೆ ಅವಳು ಅವಳಿಜವಳಿಗಳ ಬಸುರಿಯಾಗುತ್ತಾಳೆ. ಆದರೆ ಅವಳ ಗರ್ಭಾವಸ್ಥೆಯು ಕಷ್ಟಕರವಾಗಿರುತ್ತದೆ, ಯಾಕಂದರೆ ಮಕ್ಕಳು ಆಕೆಯ ಗರ್ಭದಲ್ಲಿ ಒಂದನ್ನೊಂದು ನೂಕಿಕೊಳ್ಳುತ್ತಿದ್ದವು. ಮತ್ತು ಇದರಿಂದಾಗಿ ರೆಬೆಕ್ಕಳು ದೇವರಿಗೆ ಮೊರೆಯಿಡುತ್ತಾಳೆ. ನಮ್ಮ ಜೀವನದಲ್ಲಿ ಬರುವಂಥ ಬಹಳಷ್ಟು ಸಂಕಷ್ಟಕರ ಸಮಯಗಳಲ್ಲಿ ನಾವೂ ಇದನ್ನೇ ಮಾಡಬಹುದು. ಯೆಹೋವನು ರೆಬೆಕ್ಕಳ ಮೊರೆಯನ್ನು ಆಲಿಸಿ, ಅವಳನ್ನು ಸಂತೈಸುತ್ತಾನೆ. ಆಕೆಯು ಎರಡು ಜನಾಂಗಗಳಿಗೆ ತಾಯಿಯಾಗುವಳು ಮತ್ತು “ಹಿರಿಯದು ಕಿರಿಯದಕ್ಕೆ ಸೇವೆಮಾಡುವದು.”​—⁠ಆದಿಕಾಂಡ 25:​20-26.

ಕೇವಲ ಈ ಮಾತುಗಳು, ತನ್ನ ಕಿರಿಯ ಪುತ್ರನಾದ ಯಾಕೋಬನ ಕಡೆಗಿನ ರೆಬೆಕ್ಕಳ ಹೆಚ್ಚಿನ ಪ್ರೀತಿಗೆ ಒಂದು ಕಾರಣವಾಗಿರಲಿಕ್ಕಿಲ್ಲ. ಈ ಹುಡುಗರು ಭಿನ್ನರಾಗಿದ್ದರು. ಯಾಕೋಬನು “ಸಾಧುಮನುಷ್ಯ”ನಾಗಿದ್ದನು, ಆದರೆ ಏಸಾವನಿಗೆ ಆಧ್ಯಾತ್ಮಿಕ ವಿಷಯಗಳ ಕಡೆಗೆ ಎಷ್ಟೊಂದು ಅನಾಸಕ್ತಿಯಿತ್ತೆಂದರೆ, ಒಂದೇ ಊಟಕ್ಕಾಗಿ ಅವನು, ದೇವರ ವಾಗ್ದಾನಗಳನ್ನು ಬಾಧ್ಯತೆಯಾಗಿ ಪಡೆಯುವ ಹಕ್ಕನ್ನು ಯಾಕೋಬನಿಗೆ ಮಾರಿದನು. ಇಬ್ಬರು ಹಿತ್ತೀಯ ಸ್ತ್ರೀಯರೊಂದಿಗಿನ ಏಸಾವನ ವಿವಾಹವು ಆಧ್ಯಾತ್ಮಿಕ ಮೌಲ್ಯಗಳ ಕಡೆಗಿನ ಅವನ ತಾತ್ಸಾರ ಭಾವವನ್ನು ತೋರಿಸಿತು ಮತ್ತು ಅವನ ಹೆತ್ತವರನ್ನು ಬಹಳಷ್ಟು ಸಂಕಟಕ್ಕೆ ಗುರಿಪಡಿಸಿತು.​—⁠ಆದಿಕಾಂಡ 25:​27-34; 26:​34, 35.

ಯಾಕೋಬನಿಗಾಗಿ ಆಶೀರ್ವಾದವನ್ನು ಗಿಟ್ಟಿಸಿಕೊಳ್ಳುವುದು

ಏಸಾವನು ಯಾಕೋಬನ ಸೇವೆಮಾಡಬೇಕೆಂಬುದು ಇಸಾಕನಿಗೆ ತಿಳಿದಿತ್ತೊ ಇಲ್ಲವೊ ಎಂಬದನ್ನು ಬೈಬಲ್‌ ಹೇಳುವುದಿಲ್ಲ. ಆದರೆ ಹೇಗೂ, ಆಶೀರ್ವಾದಗಳು ಯಾಕೋಬನಿಗೆ ಸೇರತಕ್ಕವುಗಳು ಎಂಬುದು ರೆಬೆಕ್ಕ ಮತ್ತು ಯಾಕೋಬರಿಗೆ ತಿಳಿದಿತ್ತು. ಏಸಾವನು ತನ್ನ ತಂದೆಗೋಸ್ಕರ ಬೇಟೆಯಾಡಿದ ಪ್ರಾಣಿಯ ಭಕ್ಷ್ಯವನ್ನು ತಂದುಕೊಡುವಾಗ ಇಸಾಕನು ಅವನನ್ನು ಆಶೀರ್ವದಿಸಲಿದ್ದಾನೆಂಬ ಸುದ್ದಿ ರೆಬೆಕ್ಕಳ ಕಿವಿಗೆ ಬಿದ್ದ ಕೂಡಲೆ ಅವಳು ಕಾರ್ಯಪ್ರವೃತ್ತಳಾಗುತ್ತಾಳೆ. ಯುವತಿಯಾಗಿದ್ದಾಗ ಅವಳಲ್ಲಿದ್ದ ನಿರ್ಣಾಯಕತೆ ಮತ್ತು ಹುರುಪು, ಅವಳಲ್ಲಿ ಈಗಲೂ ಇದೆ. ಅವಳು ಯಾಕೋಬನಿಗೆ ಎರಡು ಒಳ್ಳೇ ಆಡಿನ ಮರಿಗಳನ್ನು ತರುವಂತೆ ‘ಅಪ್ಪಣೆ ಕೊಡುತ್ತಾಳೆ’ (NW). ಅವಳು ತನ್ನ ಗಂಡನ ಅಚ್ಚುಮೆಚ್ಚಿನ ಭಕ್ಷ್ಯವನ್ನು ತಯಾರಿಸಲಿದ್ದಳು. ಆಮೇಲೆ ಯಾಕೋಬನು ಆ ಆಶೀರ್ವಾದವನ್ನು ಗಿಟ್ಟಿಸಿಕೊಳ್ಳಲಿಕ್ಕಾಗಿ ಏಸಾವನಂತೆ ನಟಿಸಬೇಕಿತ್ತು. ಆದರೆ ಯಾಕೋಬನು ಈ ವಿಷಯದಲ್ಲಿ ತಾಯಿಯೊಂದಿಗೆ ಆಕ್ಷೇಪವೆತ್ತುತ್ತಾನೆ. ಅವನ ತಂದೆಗೆ ಈ ನಾಟಕದ ಬಗ್ಗೆ ಖಂಡಿತವಾಗಿ ಗೊತ್ತಾಗುವುದು ಮತ್ತು ಅವನನ್ನು ಶಪಿಸುವನು! ಆದರೆ ರೆಬೆಕ್ಕಳು ಜಗ್ಗುವುದಿಲ್ಲ. “ಮಗನೇ, ಅವನು ನಿನಗೆ ಶಾಪಕೊಟ್ಟರೆ ಆ ಶಾಪ ನನಗಿರಲಿ” ಎಂದವಳು ಹೇಳುತ್ತಾಳೆ. ನಂತರ ಅವಳು ಭಕ್ಷ್ಯವನ್ನು ತಯಾರಿಸುತ್ತಾಳೆ, ಮತ್ತು ಯಾಕೋಬನ ವೇಷಮರೆಸಿ, ತನ್ನ ಗಂಡನ ಬಳಿ ಕಳುಹಿಸುತ್ತಾಳೆ.​—⁠ಆದಿಕಾಂಡ 27:​1-17.

ರೆಬೆಕ್ಕಳು ಏಕೆ ಹೀಗೆ ಮಾಡಿದಳೆಂಬುದು ತಿಳಿಸಲ್ಪಟ್ಟಿಲ್ಲ. ಅನೇಕರು ಅವಳ ಈ ಕೃತ್ಯವನ್ನು ಖಂಡಿಸುತ್ತಾರೆ. ಆದರೆ ಬೈಬಲಾಗಲಿ, ಯಾಕೋಬನಿಗೆ ಆಶೀರ್ವಾದ ಸಿಕ್ಕಿದೆಯೆಂದು ತಿಳಿದುಬಂದ ನಂತರವೂ ಇಸಾಕನಾಗಲಿ ಅವಳ ಆ ಕೃತ್ಯವನ್ನು ಖಂಡಿಸಲಿಲ್ಲ. ಬದಲಾಗಿ ಇಸಾಕನು ಆ ಆಶೀರ್ವಾದವನ್ನು ಇನ್ನೂ ಹೆಚ್ಚಿಸುತ್ತಾನೆ. (ಆದಿಕಾಂಡ 27:29; 28:​3, 4) ತನ್ನ ಪುತ್ರರ ಕುರಿತಾಗಿ ಯೆಹೋವನು ಏನನ್ನು ಮುಂತಿಳಿಸಿದ್ದನೊ ಅದು ರೆಬೆಕ್ಕಳಿಗೆ ತಿಳಿದಿತ್ತು. ಆದುದರಿಂದ ನ್ಯಾಯಯುತವಾಗಿ ಯಾಕೋಬನಿಗೆ ಸೇರಬೇಕಾಗಿರುವ ಆಶೀರ್ವಾದವು ಅವನಿಗೆ ಸಿಗುವುದನ್ನು ಖಚಿತಪಡಿಸುವಂತೆ ಆಕೆ ಕ್ರಿಯೆಗೈಯುತ್ತಾಳೆ. ಇದು ಸ್ಪಷ್ಟವಾಗಿ ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿದೆ.​—⁠ರೋಮಾಪುರ 9:​6-13.

ಯಾಕೋಬನನ್ನು ಖಾರಾನಿಗೆ ಕಳುಹಿಸಲಾಗುತ್ತದೆ

ತನ್ನ ಅಣ್ಣನ ಕ್ರೋಧವು ಆರಿಹೋಗುವ ತನಕ, ಯಾಕೋಬನು ಓಡಿಹೋಗುವಂತೆ ಪ್ರೇರಿಸುವ ಮೂಲಕ ರೆಬೆಕ್ಕಳು ಈಗ ಏಸಾವನ ಯೋಜನೆಗಳನ್ನು ಬುಡಮೇಲುಮಾಡುತ್ತಾಳೆ. ತನ್ನ ಈ ಯೋಜನೆಗೆ ಇಸಾಕನ ಅನುಮತಿಯನ್ನು ಆಕೆ ಕೋರುತ್ತಾಳೆ. ಆದರೆ ಏಸಾವನ ಸಿಟ್ಟಿನ ಬಗ್ಗೆ ದಯೆಯಿಂದ ಹೇಳದಿರುತ್ತಾಳೆ. ಬದಲಾಗಿ, ಯಾಕೋಬನೂ ಒಬ್ಬ ಕಾನಾನ್ಯಳನ್ನು ಮದುವೆಯಾದಾನು ಎಂಬುದರ ಬಗ್ಗೆ ಚಿಂತೆ ವ್ಯಕ್ತಪಡಿಸುವ ಮೂಲಕ ಅವಳು ಜಾಣ್ಮೆಯಿಂದ ಗಂಡನನ್ನು ವಿನಂತಿಸುತ್ತಾಳೆ. ಮತ್ತು ಈ ವಿಚಾರವೇ ಇಸಾಕನು, ಯಾಕೋಬನಿಗೆ ಅಂಥ ಮದುವೆ ಮಾಡಿಕೊಳ್ಳದಂತೆ ಅಪ್ಪಣೆ ಕೊಡಲು ಹಾಗೂ ಒಬ್ಬ ದೇವಭಯವುಳ್ಳ ಹೆಂಡತಿಯನ್ನು ಹುಡುಕಲಿಕ್ಕಾಗಿ ರೆಬೆಕ್ಕಳ ಕುಟುಂಬದ ಬಳಿಗೆ ಅವನನ್ನು ಕಳುಹಿಸಲು ಮನವೊಪ್ಪಿಸಿತು. ಅನಂತರ ರೆಬೆಕ್ಕಳು ಯಾಕೋಬನನ್ನು ಪುನಃ ನೋಡಿರುವುದರ ಬಗ್ಗೆ ಯಾವುದೇ ದಾಖಲೆಯಿಲ್ಲ, ಆದರೆ ಅವಳ ಕ್ರಿಯೆಗಳು ಖಂಡಿತವಾಗಿಯೂ ಭಾವೀ ಇಸ್ರಾಯೇಲ್‌ ಜನಾಂಗಕ್ಕೆ ಹೇರಳವಾದ ಬಹುಮಾನವನ್ನು ತರುತ್ತವೆ.​—⁠ಆದಿಕಾಂಡ 27:​43–28:⁠2.

ರೆಬೆಕ್ಕಳ ಬಗ್ಗೆ ನಮಗೇನು ತಿಳಿದಿದೆಯೊ ಅದು ನಾವು ಅವಳನ್ನು ಮೆಚ್ಚಿ ಹೊಗಳುವಂತೆ ಮಾಡುತ್ತದೆ. ಅವಳು ಸುಂದರಿಯಾಗಿದ್ದಳು ನಿಜ, ಆದರೆ ಅವಳ ನೈಜ ಸೌಂದರ್ಯವು ಅವಳ ದೇವಭಕ್ತಿಯಾಗಿತ್ತು. ಅಬ್ರಹಾಮನು ತನ್ನ ಸೊಸೆಯಲ್ಲಿ ಬಯಸಿದಂಥ ಸಂಗತಿಯೂ ಅದೇ ಆಗಿತ್ತು. ಅವಳಿಗಿದ್ದ ಬೇರೆಲ್ಲಾ ಸುಗುಣಗಳು ಬಹುಶಃ ಅಬ್ರಹಾಮನ ಎಲ್ಲಾ ನಿರೀಕ್ಷಣೆಗಳನ್ನು ಮೀರಿದವು. ದೈವಿಕ ಮಾರ್ಗದರ್ಶನವನ್ನು ಅನುಸರಿಸುವುದರಲ್ಲಿ ಅವಳಿಗಿದ್ದ ನಂಬಿಕೆ ಮತ್ತು ಧೈರ್ಯ, ಅವಳ ಹುರುಪು, ಮಿತವರ್ತನೆ, ಮತ್ತು ಉದಾರಭಾವದ ಅತಿಥಿಸತ್ಕಾರಗಳು, ಎಲ್ಲಾ ಕ್ರೈಸ್ತ ಸ್ತ್ರೀಯರು ಅನುಕರಿಸತಕ್ಕ ಗುಣಗಳಾಗಿವೆ. ಈ ಗುಣಗಳು ನಿಜವಾಗಿಯೂ ಆದರ್ಶಪ್ರಾಯವಾಗಿರುವ ಸ್ತ್ರೀಯೊಬ್ಬಳಲ್ಲಿ ಸ್ವತಃ ಯೆಹೋವನೇ ಹುಡುಕುವಂಥ ಗುಣಗಳಾಗಿವೆ.