ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬರನ್ನೊಬ್ಬರು ಬಲಪಡಿಸಿಕೊಳ್ಳಿರಿ

ಒಬ್ಬರನ್ನೊಬ್ಬರು ಬಲಪಡಿಸಿಕೊಳ್ಳಿರಿ

ಒಬ್ಬರನ್ನೊಬ್ಬರು ಬಲಪಡಿಸಿಕೊಳ್ಳಿರಿ

“ನನಗೆ ಇವರೇ ಒಂದು ಬಲಪಡಿಸುವ ಸಹಾಯಕದಂತೆ ಪರಿಣಮಿಸಿದ್ದಾರೆ.”​—⁠ಕೊಲೊಸ್ಸೆ 4:​11, Nw.

ಸೆರೆಮನೆಯಲ್ಲಿ ನರಳುತ್ತಿರುವ ಒಬ್ಬ ವ್ಯಕ್ತಿಯ ಸ್ನೇಹಿತನಾಗಿರುವುದು ಅಪಾಯಕರವಾದ ಸಂಗತಿಯಾಗಿದೆ. ಆ ಸ್ನೇಹಿತನು ಅನ್ಯಾಯವಾಗಿ ಸೆರೆಗೆ ಹಾಕಲ್ಪಟ್ಟಿರುವುದಾದರೂ ಅದು ಅಪಾಯಕಾರಿಯೇ. ಏಕೆಂದರೆ, ಆಗ ಸೆರೆಮನೆಯ ಅಧಿಕಾರಿಗಳು ನಿಮ್ಮನ್ನು ಗುಮಾನಿಯಿಂದ ನೋಡಬಹುದು. ನೀವು ಯಾವುದೇ ಪಾತಕವೆಸಗದಂತೆ ನೋಡಿಕೊಳ್ಳಲು, ಅವರು ನಿಮ್ಮ ಪ್ರತಿಯೊಂದು ಚಲನವಲನದ ಮೇಲೂ ಕಣ್ಣಿಡಬಹುದು. ಆದಕಾರಣ, ನಿಮ್ಮ ಆ ಸ್ನೇಹಿತನೊಂದಿಗೆ ಸದಾ ಸಂಪರ್ಕವನ್ನಿಟ್ಟುಕೊಂಡು ಅವನನ್ನು ಸೆರೆಮನೆಯಲ್ಲಿ ಭೇಟಿಮಾಡುವುದು ಧೈರ್ಯವನ್ನು ಕೇಳಿಕೊಳ್ಳುತ್ತದೆ.

2 ಆದರೂ, 1,900 ವರುಷಗಳ ಹಿಂದೆ, ಅಪೊಸ್ತಲ ಪೌಲನ ಸ್ನೇಹಿತರಲ್ಲಿ ಕೆಲವರು ಇದನ್ನೇ ಮಾಡಿದರು. ಪೌಲನು ಸೆರೆಮನೆಯಲ್ಲಿ ಬಂಧಿಯಾಗಿದ್ದಾಗ ಅವನಿಗೆ ಬೇಕಾಗಿದ್ದ ಸಾಂತ್ವನ ಮತ್ತು ಪ್ರೋತ್ಸಾಹನೆಯನ್ನು ನೀಡಿ ಆಧ್ಯಾತ್ಮಿಕವಾಗಿ ಬಲಪಡಿಸಲಿಕ್ಕೋಸ್ಕರ ಅವನನ್ನು ಭೇಟಿಮಾಡಲು ಅವರು ಹಿಂಜರಿಯಲಿಲ್ಲ. ಈ ನಿಷ್ಠಾವಂತ ಸ್ನೇಹಿತರು ಯಾರಾಗಿದ್ದರು? ಮತ್ತು ಅವರ ಧೈರ್ಯ, ನಿಷ್ಠೆ, ಹಾಗೂ ಸ್ನೇಹದಿಂದ ನಾವೇನು ಕಲಿತುಕೊಳ್ಳಬಲ್ಲೆವು?​—⁠ಜ್ಞಾನೋಕ್ತಿ 17:17.

“ಒಂದು ಬಲಪಡಿಸುವ ಸಹಾಯಕ”

3 ನಾವು ಸುಮಾರು ಸಾ.ಶ. 60ಕ್ಕೆ ಹಿಂದೆ ಹೋಗೋಣ. ಅಪೊಸ್ತಲ ಪೌಲನು ರಾಜದ್ರೋಹದ ಸುಳ್ಳಾರೋಪದ ಮೇಲೆ ರೋಮ್‌ನಲ್ಲಿ ಸೆರೆಮನೆಗೆ ಹಾಕಲ್ಪಟ್ಟಿದ್ದಾನೆ. (ಅ. ಕೃತ್ಯಗಳು 24:5; 25:​11, 12) ಪೌಲನು ತನಗೆ ಸಹಾಯಮಾಡಿದ ಐದು ಮಂದಿ ಕ್ರೈಸ್ತರನ್ನು ಪ್ರತ್ಯೇಕವಾಗಿ ಹೆಸರಿಸುತ್ತಾನೆ: ಏಷಿಯ ಸೀಮೆಯ ತನ್ನ ಸ್ವಂತ ಪ್ರತಿನಿಧಿಯೂ “ಕರ್ತನಲ್ಲಿ ಜೊತೆಯ ದಾಸನೂ” ಆದ ತುಖಿಕನು; ಕೊಲೊಸ್ಸೆಯಿಂದ ಬಂದ “ನಂಬಿಗಸ್ತನಾದ ಪ್ರಿಯ ಸಹೋದರ” ಒನೇಸಿಮನು; ಥೆಸಲೋನಿಕದಿಂದ ಬಂದ ಮಕೆದೋನ್ಯದವನೂ ಪೌಲನೊಂದಿಗೆ ‘ಜೊತೆಸೆರೆಯವನೂ’ ಆದ ಅರಿಸ್ತಾರ್ಕನು; ಪೌಲನ ಮಿಷನೆರಿ ಸಂಗಾತಿಯಾಗಿದ್ದ ಬಾರ್ನಬನ ಸೋದರಸಂಬಂಧಿಯೂ ಮಾರ್ಕ ಹೆಸರಿನ ಸುವಾರ್ತೆ ಪುಸ್ತಕದ ಲೇಖಕನೂ ಆದ ಮಾರ್ಕನು; ಮತ್ತು “ದೇವರ ರಾಜ್ಯಾಭಿವೃದ್ಧಿಗಾಗಿ” ಅಪೊಸ್ತಲನ ಜೊತೆಕೆಲಸದವರಲ್ಲಿ ಒಬ್ಬನಾಗಿದ್ದ ಯೂಸ್ತನು. ಈ ಐವರ ಕುರಿತು ಪೌಲನು, “ನನಗೆ ಇವರೇ ಒಂದು ಬಲಪಡಿಸುವ ಸಹಾಯಕದಂತೆ ಪರಿಣಮಿಸಿದ್ದಾರೆ” (NW) ಎಂದು ಹೇಳುತ್ತಾನೆ.​—⁠ಕೊಲೊಸ್ಸೆ 4:​7-11.

4 ತನ್ನ ಈ ನಿಷ್ಠಾಂವತ ಸ್ನೇಹಿತರು ಮಾಡಿದ ಸಹಾಯದ ಕುರಿತು ಪೌಲನು ಪ್ರಬಲವಾದ ಹೇಳಿಕೆಯೊಂದನ್ನು ಮಾಡಿದನು. ಅವನು “ಬಲಪಡಿಸುವ ಸಹಾಯಕ” ಎಂದು ಭಾಷಾಂತರಿಸಲ್ಪಟ್ಟಿರುವ ಒಂದು ಗ್ರೀಕ್‌ ಪದ (ಪಾರೆಗೊರೈಯ)ವನ್ನು ಉಪಯೋಗಿಸಿದನು. ಈ ಪದವು ಬೈಬಲಿನಲ್ಲಿ ಈ ವಚನದಲ್ಲಿ ಮಾತ್ರ ಕಂಡುಬರುತ್ತದೆ. ಈ ಪದಕ್ಕೆ ವಿವಿಧಾರ್ಥಗಳಿದ್ದು, ಇದನ್ನು ವಿಶೇಷವಾಗಿ ಔಷಧಗಳಿಗೆ ಸಂಬಂಧಿತವಾದ ಪೂರ್ವಾಪರಗಳಲ್ಲಿ ಉಪಯೋಗಿಸಲಾಗುತ್ತಿತ್ತು. * ಇದನ್ನು ‘ದುಃಖೋಪಶಮನ, ಲಘುವಾಗಿಸುವುದು, ಸಾಂತ್ವನ ಅಥವಾ ಪರಿಹಾರ’ ಎಂದು ಭಾಷಾಂತರಿಸಸಾಧ್ಯವಿದೆ. ಪೌಲನಿಗೆ ಆ ರೀತಿಯ ಬಲಪಡಿಸುವಿಕೆಯು ಅಗತ್ಯವಾಗಿತ್ತು ಮತ್ತು ಆ ಐವರು ಪುರುಷರು ಅದನ್ನು ಒದಗಿಸಿದರು.

ಪೌಲನಿಗೆ “ಒಂದು ಬಲಪಡಿಸುವ ಸಹಾಯಕ” ಏಕೆ ಆವಶ್ಯಕವಾಗಿತ್ತು?

5 ಒಬ್ಬ ಅಪೊಸ್ತಲನಾಗಿದ್ದ ಪೌಲನಿಗೆ ಬಲಗೊಳಿಸಲ್ಪಡುವ ಆವಶ್ಯಕತೆಯಿತ್ತೆಂದು ನೆನಸುವುದು ಕೆಲವರನ್ನು ಚಕಿತಗೊಳಿಸೀತು. ಆದರೆ ಅವನಿಗೆ ಅದು ನಿಶ್ಚಯವಾಗಿಯೂ ಅಗತ್ಯವಿತ್ತು. ಪೌಲನಿಗೆ ಬಲವಾದ ನಂಬಿಕೆಯಿತ್ತೆಂಬುದು ನಿಜ. ಅಲ್ಲದೆ ಅವನು ತುಂಬ ಶಾರೀರಿಕ ಹಿಂಸೆಯನ್ನು, ‘ಮಿತಿಮೀರಿದ ಪೆಟ್ಟುಗಳನ್ನು’ ಅನುಭವಿಸಿ, “ಅನೇಕ ಸಾರಿ ಮರಣದ ಬಾಯಿಯೊಳಗೆ ಸಿಕ್ಕಿ”ಕೊಂಡನು, ಮತ್ತಿತರ ವೇದನೆಗಳನ್ನೂ ತಾಳಿ ಬದುಕಿ ಉಳಿದಿದ್ದನು. (2 ಕೊರಿಂಥ 11:23-27) ಆದರೂ, ಅವನೊಬ್ಬ ಮನುಷ್ಯನಾಗಿದ್ದನು ಮತ್ತು ಸಕಲ ಮಾನವರಿಗೂ ಒಂದಲ್ಲ ಒಂದು ಸಮಯದಲ್ಲಿ ಸಾಂತ್ವನವನ್ನು ಪಡೆದುಕೊಳ್ಳುವ, ಮತ್ತು ಇತರರ ಸಹಾಯದಿಂದ ತಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವ ಅಗತ್ಯವಿರುತ್ತದೆ. ಯೇಸುವಿನ ವಿಷಯದಲ್ಲಿಯೂ ಇದು ಸತ್ಯವಾಗಿತ್ತು. ಅವನ ಕೊನೆಯ ರಾತ್ರಿಯಲ್ಲಿ, ಗೆತ್ಸೇಮನೆಯಲ್ಲಿ ಒಬ್ಬ ದೇವದೂತನು ಕಾಣಿಸಿಕೊಂಡು “ಆತನನ್ನು ಬಲಪಡಿಸಿದನು.”​—⁠ಲೂಕ 22:43.

6 ಪೌಲನಿಗೂ ಬಲಪಡಿಸುವಿಕೆಯ ಅಗತ್ಯವಿತ್ತು. ಅವನು ಕೈದಿಯಾಗಿ ರೋಮಿಗೆ ಬಂದಾಗ, ಅವನ ಸ್ವಕುಲದ ಜನರೇ ಅವನನ್ನು ಹಾರ್ದಿಕವಾಗಿ ಸ್ವಾಗತಿಸಲಿಲ್ಲ. ಏಕೆಂದರೆ ಈ ಯೆಹೂದ್ಯರಲ್ಲಿ ಹೆಚ್ಚಿನವರು ರಾಜ್ಯ ಸಂದೇಶವನ್ನು ಅಂಗೀಕರಿಸಲಿಲ್ಲ. ಯೆಹೂದ್ಯರ ಪ್ರಮುಖರು ಸೆರೆಯಲ್ಲಿದ್ದ ಪೌಲನಿಗೆ ಭೇಟಿಕೊಟ್ಟ ಬಳಿಕ, ಅಪೊಸ್ತಲರ ಕೃತ್ಯದಲ್ಲಿರುವ ವೃತ್ತಾಂತವು ಹೇಳುವುದು: “ಅವನು ಹೇಳಿದ ಮಾತುಗಳಿಗೆ ಕೆಲವರು ಒಪ್ಪಿಕೊಂಡರು; ಕೆಲವರು ನಂಬದೆ ಹೋದರು. ಅವರಲ್ಲಿ ಐಕಮತ್ಯವಿಲ್ಲದೆ ಇರುವಾಗ . . . ಅವರು ಹೊರಟುಹೋದರು.” (ಅ. ಕೃತ್ಯಗಳು 28:17, 24, 25, 29) ಯೆಹೋವನ ಪ್ರೀತಿಪೂರ್ವಕ ದಯೆಗಾಗಿ ಅವರಲ್ಲಿದ್ದ ಮಾನ್ಯತೆಯ ಕೊರತೆಯು ಪೌಲನ ಮನಸ್ಸನ್ನು ಎಷ್ಟು ನೋಯಿಸಿದ್ದಿರಬೇಕು! ಅದರ ಬಗ್ಗೆ ಅವನಿಗಿದ್ದ ಪ್ರಬಲ ಅನಿಸಿಕೆಗಳು, ಅವನು ಕೆಲವು ವರುಷಗಳ ಹಿಂದೆ ರೋಮಿನಲ್ಲಿದ್ದ ಸಭೆಗೆ ಬರೆದಿದ್ದ ಪತ್ರದಲ್ಲಿ ವ್ಯಕ್ತವಾಗುತ್ತದೆ: “ನನಗೆ ಮಹಾದುಃಖವೂ ನನ್ನ ಹೃದಯದಲ್ಲಿ ಎಡೆಬಿಡದೆ ವೇದನೆಯೂ ಉಂಟು. . . . ಶರೀರ ಸಂಬಂಧವಾಗಿ ಸ್ವಜನರಾಗಿರುವ ನನ್ನ ಸಹೋದರರಿಗೋಸ್ಕರ [ಯೆಹೂದ್ಯರಿಗೋಸ್ಕರ] ನಾನೇ ಸಾಧ್ಯವಾದರೆ ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವದಕ್ಕೆ ಒಪ್ಪಿಕೊಂಡೇನು.” (ರೋಮಾಪುರ 9:1, 3) ಆದರೂ, ಅವನು ರೋಮಿನಲ್ಲಿ, ಯಾರ ಧೈರ್ಯವೂ ಮಮತೆಯೂ ಅವನ ಹೃದಯವನ್ನು ಶಮನಗೊಳಿಸಿತೊ ಆ ನಿಷ್ಠಾವಂತ ನಿಜ ಸಂಗಡಿಗರನ್ನು ಕಂಡುಕೊಂಡನು. ಅವರು ಅವನ ನಿಜವಾದ ಆಧ್ಯಾತ್ಮಿಕ ಸಹೋದರರಾಗಿದ್ದರು.

7 ಆ ಐವರು ಸಹೋದರರು ಒಂದು ಬಲಪಡಿಸುವ ಸಹಾಯಕವಾಗಿ ಪರಿಣಮಿಸಿದ್ದು ಹೇಗೆ? ಪೌಲನ ಸೆರೆವಾಸವು ಅವನನ್ನು ತಮ್ಮಿಂದ ದೂರವಿಡುವಂತೆ ಅವರು ಬಿಡಲಿಲ್ಲ. ಬದಲಾಗಿ, ಪೌಲನು ತನ್ನ ಬಂಧನದ ಕಾರಣದಿಂದ ಸ್ವತಃ ಮಾಡಲು ಅಶಕ್ತನಾಗಿದ್ದಂಥ ಕೆಲಸಗಳನ್ನು ಮಾಡಿ, ಅವರು ಅವನಿಗಾಗಿ ಇಷ್ಟಪೂರ್ವಕವಾಗಿಯೂ ಪ್ರೀತಿಪೂರ್ವಕವಾಗಿಯೂ ವೈಯಕ್ತಿಕ ಸೇವೆಯನ್ನು ಮಾಡಿದರು. ಉದಾಹರಣೆಗೆ, ಅವರು ಸಂದೇಶವಾಹಕರಾಗಿ ವರ್ತಿಸಿ, ಪೌಲನ ಪತ್ರಗಳನ್ನೂ ಬಾಯಿಮಾತಿನ ಸೂಚನೆಗಳನ್ನೂ ವಿವಿಧ ಸಭೆಗಳಿಗೆ ರವಾನಿಸಿದರು; ರೋಮ್‌ ಮತ್ತು ಬೇರೆ ಕಡೆಗಳ ಸಹೋದರರ ಯೋಗಕ್ಷೇಮಗಳ ಕುರಿತ ಪ್ರೋತ್ಸಾಹಕರವಾದ ವರದಿಗಳನ್ನು ಪೌಲನಿಗೆ ತಂದು ಮುಟ್ಟಿಸಿದರು. ಅವರು ಪ್ರಾಯಶಃ ಪೌಲನಿಗೆ ಬೇಕಾಗಿದ್ದ ಚಳಿಗಾಲದ ಬಟ್ಟೆಬರೆ, ಸುರುಳಿಗಳು, ಮತ್ತು ಲೇಖನಿಗಳನ್ನು ತಂದು ಕೊಟ್ಟರು. (ಎಫೆಸ 6:21, 22; 2 ತಿಮೊಥೆಯ 4:11-13) ಈ ಎಲ್ಲಾ ಸಹಾಯಕಾರಿ ಕೃತ್ಯಗಳು ಸೆರೆಯಲ್ಲಿದ್ದ ಅಪೊಸ್ತಲನನ್ನು ಬಲಪಡಿಸಿ, ಹುರಿದುಂಬಿಸಿದವು. ಇದರಿಂದಾಗಿ, ಅವನು ಸರದಿಯಾಗಿ, ಇತರರಿಗೂ ಇಡೀ ಸಭೆಗಳಿಗೂ “ಬಲಪಡಿಸುವ ಸಹಾಯಕ”ವಾಗಿ ಪರಿಣಮಿಸಸಾಧ್ಯವಾಯಿತು.​—⁠ರೋಮಾಪುರ 1:​11, 12.

“ಒಂದು ಬಲಪಡಿಸುವ ಸಹಾಯಕ” ಆಗುವುದು ಹೇಗೆ?

8 ಪೌಲನ ಮತ್ತು ಅವನ ಐವರು ಜೊತೆಕೆಲಸದವರ ಆ ವೃತ್ತಾಂತದಿಂದ ನಾವೇನು ಕಲಿಯಬಲ್ಲೆವು? ನಾವು ವಿಶೇಷವಾಗಿ, ಒಂದು ಪಾಠವನ್ನು ನೋಡೋಣ: ಕಷ್ಟಆಪತ್ತಿನಲ್ಲಿರುವ ಇತರರಿಗೆ ಸಹಾಯಮಾಡಲು ಧೈರ್ಯ ಮತ್ತು ಸ್ವತ್ಯಾಗದ ಆವಶ್ಯಕತೆಯಿರುತ್ತದೆ. ಅಲ್ಲದೆ, ವೈಯಕ್ತಿಕವಾಗಿ ನಮಗೆ ಕಷ್ಟಗಳು ಬರುವ ಸಮಯದಲ್ಲಿ ನಮಗೆ ಸಹಾಯ ಬೇಕಾಗಬಹುದು ಎಂಬುದನ್ನು ಒಪ್ಪಿಕೊಳ್ಳಲು ದೈನ್ಯಭಾವದ ಆವಶ್ಯಕತೆಯಿರುತ್ತದೆ. ಮತ್ತು ಪೌಲನು ತನಗೆ ಸಹಾಯವು ಅಗತ್ಯವೆಂದು ಒಪ್ಪಿಕೊಂಡದ್ದು ಮಾತ್ರವಲ್ಲ, ಅದು ನೀಡಲ್ಪಟ್ಟಾಗ ಅದನ್ನು ವಿನಯದಿಂದ ಅಂಗೀಕರಿಸಿದನು ಮತ್ತು ಅದನ್ನು ನೀಡಿದವರನ್ನು ಶ್ಲಾಘಿಸಿದನು. ಇತರರಿಂದ ಸಹಾಯ ಪಡೆಯುವುದನ್ನು ಅವನು ಬಲಹೀನತೆ ಇಲ್ಲವೆ ತನಗೊಂದು ಅವಮಾನವೆಂದು ಎಣಿಸಲಿಲ್ಲ ಮತ್ತು ನಾವೂ ಹಾಗೆಣಿಸಬಾರದು. ನಮಗೆ ಬಲಪಡಿಸುವ ಸಹಾಯಕದ ಅಗತ್ಯವೇ ಇಲ್ಲ ಎಂದು ಹೇಳುವುದು, ನಾವು ಅತಿಮಾನುಷರು ಎಂದು ಹೇಳಿದಂತಾಗುವುದು. ನೆನಪಿರಲಿ, ಯೇಸುವಿನ ಮಾದರಿಯು ಒಬ್ಬ ಪರಿಪೂರ್ಣ ಮನುಷ್ಯನು ಸಹ ಕೆಲವೊಮ್ಮೆ ಸಹಾಯಕ್ಕಾಗಿ ಮೊರೆಯಿಡಬೇಕಾಗುವ ಸಂದರ್ಭವಿರಬಹುದು ಎಂಬುದನ್ನು ತೋರಿಸುತ್ತದೆ.​—⁠ಇಬ್ರಿಯ 5:⁠7.

9 ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ತಮಗೂ ಇತಿಮಿತಿಗಳಿವೆಯೆಂದೂ ತಾವು ಸಹ ಇತರರ ಸಹಾಯದ ಮೇಲೆ ಹೊಂದಿಕೊಂಡಿದ್ದೇವೆಂದೂ ಒಪ್ಪಿಕೊಳ್ಳುವಾಗ ಉತ್ತಮ ಫಲಿತಾಂಶಗಳು ಬರಬಲ್ಲವು. (ಯಾಕೋಬ 3:⁠2) ಇಂತಹ ಒಪ್ಪಿಕೊಳ್ಳುವಿಕೆಗಳು ಅಧಿಕಾರದಲ್ಲಿರುವವರ ಮತ್ತು ಆ ಅಧಿಕಾರಕ್ಕೆ ಅಧೀನರಾಗಿರುವವರ ನಡುವಣ ಬಂಧವನ್ನು ಬಲಪಡಿಸಿ, ಸ್ನೇಹಭರಿತ ಮತ್ತು ಮುಕ್ತ ಸಂವಾದಕ್ಕೆ ಇಂಬುಕೊಡುತ್ತದೆ. ಸಹಾಯವನ್ನು ಸ್ವೀಕರಿಸಲು ಸಿದ್ಧರಿರುವವರ ದೈನ್ಯವು, ತದ್ರೀತಿಯ ಸನ್ನಿವೇಶಗಳಲ್ಲಿರುವ ಇತರರಿಗೆ ಪ್ರತ್ಯಕ್ಷ ದೃಷ್ಟಾಂತವಾಗಿ ಕಾರ್ಯನಡೆಸುತ್ತದೆ. ಮುಂದಾಳುತ್ವ ವಹಿಸುವವರು ಮನುಷ್ಯಮಾತ್ರರೆಂದೂ ನಾವು ಅವರನ್ನು ಸಮೀಪಿಸಬಲ್ಲೆವೆಂದೂ ಅದು ತೋರಿಸುತ್ತದೆ.​—⁠ಪ್ರಸಂಗಿ 7:20.

10 ದೃಷ್ಟಾಂತಕ್ಕೆ, ತಮ್ಮ ಹೆತ್ತವರು ಮಕ್ಕಳಾಗಿದ್ದಾಗ ಅವರಿಗೂ ತಮ್ಮಂಥದ್ದೇ ಸಮಸ್ಯೆಗಳಿದ್ದವು ಎಂದು ಮಕ್ಕಳಿಗೆ ತಿಳಿದಿರುವುದಾದರೆ, ಅವರು ತಮ್ಮ ಸಮಸ್ಯೆಗಳನ್ನು ಮತ್ತು ಪ್ರಲೋಭನೆಗಳನ್ನು ನಿಭಾಯಿಸುವುದರಲ್ಲಿ ಹೆತ್ತವರು ಕೊಡುವ ಸಹಾಯವನ್ನು ಸ್ವೀಕರಿಸುವುದು ಹೆಚ್ಚು ಸುಲಭವೆಂದು ಕಂಡುಕೊಂಡಾರು. (ಕೊಲೊಸ್ಸೆ 3:21) ಹೀಗೆ, ಹೆತ್ತವರ ಮತ್ತು ಮಕ್ಕಳ ಮಧ್ಯೆ ಸಂವಾದದ ಮಾರ್ಗಗಳು ತೆರೆಯಬಲ್ಲವು. ಮತ್ತು ಹೀಗಾಗುವಲ್ಲಿ, ಶಾಸ್ತ್ರೀಯವಾದ ಪರಿಹಾರ ಮಾರ್ಗಗಳನ್ನು ಅವರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಸಾಧ್ಯವಾಗುವುದು ಮಾತ್ರವಲ್ಲ, ಅದನ್ನು ಮಕ್ಕಳು ಹೆಚ್ಚು ಸಿದ್ಧಮನಸ್ಸಿನಿಂದ ಅಂಗೀಕರಿಸುವರು ಸಹ. (ಎಫೆಸ 6:⁠4) ಅದೇ ರೀತಿಯಲ್ಲಿ, ಹಿರಿಯರು ಸಹ ಸಮಸ್ಯೆಗಳು, ಭೀತಿಗಳು, ಮತ್ತು ಗೊಂದಲಮಯ ಸ್ಥಿತಿಗಳನ್ನು ಎದುರಿಸುತ್ತಾರೆ ಎಂದು ಸಭಾಸದಸ್ಯರು ಗ್ರಹಿಸುವಲ್ಲಿ ಅವರು ಹಿರಿಯರಿಂದ ಸಹಾಯವನ್ನು ಪಡೆಯಲು ಹೆಚ್ಚು ಸಿದ್ಧರಾಗಿರುವರು. (ರೋಮಾಪುರ 12:3; 1 ಪೇತ್ರ 5:3) ಇಲ್ಲಿಯೂ ಒಳ್ಳೆಯ ಸಂವಾದವು ಹಿಂಬಾಲಿಸಿ ಬರಬಲ್ಲದು, ಶಾಸ್ತ್ರೀಯ ಸಲಹೆಯನ್ನು ಹಂಚಿಕೊಳ್ಳಲು ಸಾಧ್ಯವಾಗುವುದು, ಮತ್ತು ಫಲಿತಾಂಶವಾಗಿ ನಂಬಿಕೆಯು ಬಲಗೊಳಿಸಲ್ಪಡುವುದು. ಮತ್ತು ನಮ್ಮ ಸಹೋದರ ಸಹೋದರಿಯರನ್ನು ಬಲಪಡಿಸುವ ಅಗತ್ಯವು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿರಿ.​—⁠2 ತಿಮೊಥೆಯ 3:⁠1.

11 ನಾವು ಎಲ್ಲಿಯೇ ಜೀವಿಸುತ್ತಿರಲಿ, ನಾವು ಯಾರೇ ಆಗಿರಲಿ, ಯಾವ ವಯಸ್ಸಿನವರೇ ಆಗಿರಲಿ, ನಾವೆಲ್ಲರೂ ಜೀವನದಲ್ಲಿ ಆಗಾಗ್ಗೆ ಒತ್ತಡಗಳನ್ನು ಅನುಭವಿಸುತ್ತೇವೆ. ಇದು ಇಂದಿನ ಜಗತ್ತಿನ ಪಾಡು. (ಪ್ರಕಟನೆ 12:12) ಇಂತಹ ಶಾರೀರಿಕ ಹಾಗೂ ಭಾವಾತ್ಮಕವಾಗಿ ಕಳವಳಗೊಳಿಸುವ ಪರಿಸ್ಥಿತಿಗಳು ನಮ್ಮ ನಂಬಿಕೆಯ ಗುಣಮಟ್ಟವನ್ನು ಪರೀಕ್ಷಿಸುತ್ತವೆ. ಉದ್ಯೋಗ, ಶಾಲೆ, ಕುಟುಂಬ, ಅಥವಾ ಸಭೆಯಲ್ಲಿ ನಮ್ಮನ್ನು ಪರೀಕ್ಷಿಸುವಂತಹ ಸನ್ನಿವೇಶಗಳು ಎದ್ದು ಬರಬಹುದು. ಗುರುತರವಾದ ಅಸ್ವಸ್ಥತೆ ಇಲ್ಲವೆ ಗತಕಾಲದ ಯಾವುದೊ ಮಾನಸಿಕ ಆಘಾತವು ಒತ್ತಡವನ್ನು ಉಂಟುಮಾಡಬಲ್ಲದು. ಹೀಗಿರುವಾಗ ವಿವಾಹ ಸಂಗಾತಿಯೊ, ಒಬ್ಬ ಹಿರಿಯನೊ, ಸ್ನೇಹಿತನೊ ಹಿತಚಿಂತನೆಯ ಮಾತುಗಳಿಂದ ಮತ್ತು ಸಹಾಯಕರ ಕ್ರಿಯೆಗಳಿಂದ ದಯಾಭರಿತ ಪ್ರೋತ್ಸಾಹವನ್ನು ನೀಡುವಲ್ಲಿ ಅದೆಷ್ಟು ಉಪಶಮನನೀಡಬಲ್ಲದು! ಅದು ಉರಿಯುವ ಚರ್ಮಕ್ಕೆ ಮುಲಾಮನ್ನು ಹಚ್ಚಿದಂತಿರುವುದು! ಆದುದರಿಂದ, ನಿಮ್ಮ ಸಹೋದರನೊಬ್ಬನು ಇಂತಹ ಸ್ಥಿತಿಯಲ್ಲಿರುವುದನ್ನು ನೀವು ಗಮನಿಸುವುದಾದರೆ ಅವನಿಗೆ ಬಲಪಡಿಸುವ ಸಹಾಯಕವಾಗಿರಿ. ಅಥವಾ ಒಂದು ಸಮಸ್ಯೆಯು ನಿಮ್ಮನ್ನು ಅತಿಯಾಗಿ ಬಳಲಿಸಿ ಕುಗ್ಗಿಸುತ್ತಿರುವುದಾದರೆ, ಸಹಾಯಕ್ಕಾಗಿ ಆಧ್ಯಾತ್ಮಿಕವಾಗಿ ಅರ್ಹತೆಯುಳ್ಳವರನ್ನು ಕೇಳಿಕೊಳ್ಳಿರಿ.​—⁠ಯಾಕೋಬ 5:​14, 15.

ಸಭೆಯು ಸಹಾಯಮಾಡಬಲ್ಲ ವಿಧ

12 ಎಳೆಯರನ್ನು ಸೇರಿಸಿ, ಸಭೆಯಲ್ಲಿರುವ ಸಕಲರೂ ಇತರರನ್ನು ಬಲಪಡಿಸಲು ಏನನ್ನಾದರೂ ಮಾಡಬಲ್ಲರು. ಉದಾಹರಣೆಗೆ, ಕೂಟಗಳಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ನಿಮ್ಮ ಕ್ರಮದ ಭಾಗವಹಿಸುವಿಕೆಯು ಇತರರ ನಂಬಿಕೆಯನ್ನು ಬಲಪಡಿಸಲು ಬಹಳಷ್ಟನ್ನು ಮಾಡಬಲ್ಲದು. (ಇಬ್ರಿಯ 10:24, 25) ಪವಿತ್ರ ಸೇವೆಯಲ್ಲಿ ನಿಮ್ಮ ಸ್ಥಿರಚಿತ್ತತೆಯು ನಿಮಗೆ ಯೆಹೋವನಲ್ಲಿರುವ ನಿಷ್ಠೆಯ ಪುರಾವೆಯಾಗಿದ್ದು, ನೀವು ನಿಭಾಯಿಸುತ್ತಿರಬಹುದಾದ ಸಮಸ್ಯೆಗಳ ಎದುರಿನಲ್ಲಿಯೂ ಆಧ್ಯಾತ್ಮಿಕವಾಗಿ ಎಚ್ಚರವಾಗಿದ್ದೀರಿ ಎಂಬುದನ್ನು ತೋರಿಸುತ್ತದೆ. (ಎಫೆಸ 6:18) ಆ ಸ್ಥಿರಚಿತ್ತವು ಇತರರ ಮೇಲೆ ಬಲಪಡಿಸುವ ಪರಿಣಾಮವನ್ನು ಬೀರಬಲ್ಲದು.​—⁠ಯಾಕೋಬ 2:18.

13 ಕೆಲವು ಸಲ ಜೀವನದ ಒತ್ತಡಗಳು ಇಲ್ಲವೆ ಇತರ ಕಷ್ಟಗಳು ಒಬ್ಬನು ಕ್ಷೇತ್ರ ಸೇವೆಯಲ್ಲಿ ನಿಧಾನಿಯಾಗುವಂತೆ ಇಲ್ಲವೆ ನಿಷ್ಕ್ರಿಯನಾಗುವಂತೆ ಮಾಡಬಹುದು. (ಮಾರ್ಕ 4:​18, 19) ನಾವು ನಿಷ್ಕ್ರಿಯರನ್ನು ಸಭಾಕೂಟಗಳಲ್ಲಿ ನೋಡಲಿಕ್ಕಿಲ್ಲ. ಆದರೂ, ಅವರ ಹೃದಯದಲ್ಲಿ ದೇವರಿಗಾಗಿ ಪ್ರೀತಿಯು ಇನ್ನೂ ಇರಬಹುದು. ಅವರ ನಂಬಿಕೆಯನ್ನು ಬಲಪಡಿಸಲು ಏನು ಮಾಡಸಾಧ್ಯವಿದೆ? ಅವರನ್ನು ಭೇಟಿಮಾಡುವ ಮೂಲಕ ಹಿರಿಯರು ಅವರಿಗೆ ದಯಾಪರ ನೆರವನ್ನು ನೀಡಬಲ್ಲರು. (ಅ. ಕೃತ್ಯಗಳು 20:35) ಸಭೆಯಲ್ಲಿರುವ ಇತರ ಸಹೋದರರೂ ನೆರವು ನೀಡುವಂತೆ ಕೇಳಿಕೊಳ್ಳಲ್ಪಡಬಹುದು. ಇಂತಹ ಪ್ರೀತಿಪೂರ್ವಕವಾದ ಭೇಟಿಗಳು ನಂಬಿಕೆಯಲ್ಲಿ ಬಲಹೀನರಾಗಿರುವವರನ್ನು ಪುನಶ್ಚೈತನ್ಯಗೊಳಿಸಲು ತಕ್ಕ ಔಷಧಿಯಂತಿರಬಲ್ಲದು.

14 “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ,” ಎಂದು ಬೈಬಲು ನಮಗೆ ಪ್ರಬೋಧಿಸುತ್ತದೆ. (1 ಥೆಸಲೋನಿಕ 5:14) ಆ ‘ಮನಗುಂದಿದವರು’ ಪ್ರಾಯಶಃ ತಮ್ಮ ಧೈರ್ಯವು ಕುಂದಿಹೋಗುತ್ತಿದೆ ಮತ್ತು ತಮ್ಮ ಮುಂದಿರುವ ಅಡಚಣೆಗಳನ್ನು ತೆಗೆದುಹಾಕಲು ತಮಗೆ ಯಾರಾದರೊಬ್ಬರ ಸಹಾಯಹಸ್ತದ ಅಗತ್ಯವಿದೆ ಎಂದು ನೆನಸಬಹುದು. ನೀವು ಆ ಸಹಾಯಹಸ್ತವನ್ನು ಚಾಚಬಲ್ಲಿರೊ? “ಬಲಹೀನರಿಗೆ ಆಧಾರವಾಗಿರಿ” ಎಂಬ ಮಾತುಗಳನ್ನು “ಬಿಗಿಯಾಗಿ ಹಿಡಿದುಕೊಳ್ಳುವುದು” ಇಲ್ಲವೆ “ಭದ್ರವಾಗಿ ಅಂಟಿಕೊಳ್ಳುವುದು” ಎಂದು ಭಾಷಾಂತರಿಸಲಾಗಿದೆ. ಯೆಹೋವನು ತನ್ನ ಎಲ್ಲಾ ಕುರಿಗಳನ್ನು ಪೋಷಿಸಿ, ಪ್ರೀತಿಸುತ್ತಾನೆ. ಅವರು ಅಲ್ಪ ಮೌಲ್ಯವುಳ್ಳವರಾಗಿದ್ದಾರೊ ಎಂಬಂತೆ ಆತನು ಅವರನ್ನು ವೀಕ್ಷಿಸುವುದಿಲ್ಲ ಮತ್ತು ಅವರಲ್ಲಿ ಯಾವನೂ ತನ್ನನ್ನು ಬಿಟ್ಟು ದೂರ ಹೋಗಬೇಕೆಂದು ಆತನು ಅಪೇಕ್ಷಿಸುವುದಿಲ್ಲ. ಹಾಗಾದರೆ, ಆಧ್ಯಾತ್ಮಿಕವಾಗಿ ಬಲಹೀನರಾಗಿರುವ ಇಂಥವರು ಪುನಃ ಬಲವುಳ್ಳವರಾಗುವ ತನಕ ಅವರನ್ನು ‘ಬಿಗಿಯಾಗಿ ಹಿಡಿದುಕೊಳ್ಳುವಂತೆ’ ನೀವು ಸಭೆಗೆ ಸಹಾಯಮಾಡಬಲ್ಲಿರಾ?​—⁠ಇಬ್ರಿಯ 2:⁠1.

15 ಹಿರಿಯನೊಬ್ಬನು ಆರು ವರ್ಷಕಾಲ ನಿಷ್ಕ್ರಿಯರಾಗಿದ್ದ ಒಂದು ವಿವಾಹಿತ ದಂಪತಿಯನ್ನು ಭೇಟಿಮಾಡಿದನು. ಆ ಹಿರಿಯನು ಬರೆಯುವುದು: “ಅವರ ಕಡೆಗೆ ಇಡೀ ಸಭೆಯು ತೋರಿಸಿದ ದಯೆ ಮತ್ತು ಪ್ರೀತಿಪೂರ್ವಕ ಕಾಳಜಿಯು ಅವರ ಮೇಲೆ ಎಷ್ಟು ಮಹತ್ತಾದ ಪ್ರಭಾವವನ್ನು ಬೀರಿತೆಂದರೆ ಅವರು ಹಿಂಡಿಗೆ ಹಿಂದಿರುಗುವಂತೆ ಅದು ಅವರನ್ನು ಪ್ರಚೋದಿಸಿತು.” ಇತರ ಸಭಾಸದಸ್ಯರು ಮಾಡಿದ ಭೇಟಿಗಳ ಬಗ್ಗೆ ಒಂದುಕಾಲದಲ್ಲಿ ನಿಷ್ಕ್ರಿಯಳಾಗಿದ್ದ ಆ ಸಹೋದರಿಗೆ ಹೇಗೆನಿಸಿತು? ಆಕೆ ಈಗ ಹೇಳುವುದು: “ನಾವು ಪುನಃ ಕ್ರಿಯಾಶೀಲರಾಗುವಂತೆ ನಮಗೆ ಸಹಾಯಮಾಡಿದ್ದು ಯಾವುದೆಂದರೆ ಭೇಟಿಕೊಟ್ಟ ಸಹೋದರರಾಗಲಿ ಅವರ ಜೊತೆಗಿದ್ದ ಸಹೋದರಿಯರಾಗಲಿ ಯಾರೂ ನಮ್ಮ ಕಡೆಗೆ ಖಂಡನಾತ್ಮಕ ಅಥವಾ ಟೀಕಾತ್ಮಕ ಮನೋಭಾವವನ್ನು ತೋರಿಸದಿದ್ದದ್ದೇ. ಬದಲಿಗೆ, ಅವರು ನಮ್ಮ ಸ್ಥಿತಿಯನ್ನು ಅರ್ಥಮಾಡಿಕೊಂಡು ಶಾಸ್ತ್ರಾಧಾರಿತ ಪ್ರೋತ್ಸಾಹವನ್ನು ಒದಗಿಸಿದರು.”

16 ಹೌದು, ಪ್ರಾಮಾಣಿಕ ಕ್ರೈಸ್ತನೊಬ್ಬನು ಇತರರಿಗೆ ಬಲಪಡಿಸುವ ಸಹಾಯಕವಾಗಿರಲು ಸಂತೋಷಿಸುತ್ತಾನೆ. ಮತ್ತು ನಮ್ಮ ಜೀವನದಲ್ಲಿ ಪರಿಸ್ಥಿತಿಗಳು ಬದಲಾಗುವಾಗ ಒಂದುವೇಳೆ ನಾವೇ ನಮ್ಮ ಸಹೋದರರ ಬಲಪಡಿಸುವಿಕೆಯ ಕೃತ್ಯಗಳನ್ನು ಪಡೆದುಕೊಳ್ಳಬೇಕಾಗಬಹುದು. ಆದರೆ ವಾಸ್ತವಾಂಶವೇನಂದರೆ, ಕೆಲವೊಮ್ಮೆ ನಮಗೆ ಸಹಾಯದ ಅಗತ್ಯವಿರುವಾಗ ಯಾವ ಮಾನವನ ನೆರವೂ ಲಭ್ಯವಾಗದಿರಬಹುದು. ಹೀಗಿದ್ದರೂ, ಯಾವಾಗಲೂ ಲಭ್ಯವಿರುವ ಮತ್ತು ಸಹಾಯಮಾಡಲಿಕ್ಕಾಗಿ ಯಾವಾಗಲೂ ಸಿದ್ಧವಾಗಿರುವ ಬಲದ ಮೂಲನು ಒಬ್ಬನಿದ್ದಾನೆ. ಆತನು ಯೆಹೋವ ದೇವರೇ.​—⁠ಕೀರ್ತನೆ 27:10.

ಯೆಹೋವನು​—⁠ಬಲದ ಪರಮಶ್ರೇಷ್ಠ ಮೂಲನು

17 ಯೇಸು, ಕಂಬಕ್ಕೆ ಜಡಿಯಲ್ಪಟ್ಟಿದ್ದಾಗ, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” ಎಂದು ಕೂಗಿ ಹೇಳಿದನು. (ಲೂಕ 23:46) ಬಳಿಕ ಅವನು ಮೃತಪಟ್ಟನು. ಕೆಲವೇ ತಾಸುಗಳ ಮೊದಲು ಅವನನ್ನು ದಸ್ತಗಿರಿ ಮಾಡಲಾಗಿತ್ತು. ಮತ್ತು ಆಗ ಅವನ ಅತ್ಯಾಪ್ತ ಮಿತ್ರರು ಭಯದಿಂದ ಅವನನ್ನು ಬಿಟ್ಟು, ಓಡಿಹೋಗಿದ್ದರು. (ಮತ್ತಾಯ 26:56) ಯೇಸು ಒಂಟಿಗನಾಗಿ ಬಿಡಲ್ಪಟ್ಟಿದ್ದರೂ, ಏಕಮಾತ್ರ ಬಲದ ಮೂಲನಾದ ಅವನ ಸ್ವರ್ಗೀಯ ಪಿತನ ಸಹಾಯ ಅವನಿಗಿತ್ತು. ಯೆಹೋವನಲ್ಲಿ ಅವನಿಟ್ಟಿದ್ದ ಭರವಸೆ ವ್ಯರ್ಥವಾಗಿರಲಿಲ್ಲ. ಯೇಸು ತನ್ನ ತಂದೆಗೆ ತೋರಿಸಿದ ನಿಷ್ಠೆಗೆ ಪ್ರತಿಫಲವಾಗಿ ಯೆಹೋವನು ತಾನೇ ಅವನಿಗೆ ನಿಷ್ಠಾಭರಿತ ಬೆಂಬಲವನ್ನು ಕೊಟ್ಟನು.​—⁠ಕೀರ್ತನೆ 18:25; ಇಬ್ರಿಯ 7:26.

18 ಭೂಮಿಯ ಮೇಲೆ ಯೇಸುವಿನ ಶುಶ್ರೂಷೆಯಾದ್ಯಂತ, ಯೆಹೋವನು ತನ್ನ ಕುಮಾರನಿಗೆ ಅವನು ತನ್ನ ಕೊನೆಯುಸಿರಿನ ವರೆಗೂ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಏನು ಅಗತ್ಯವಾಗಿತ್ತೋ ಅದನ್ನು ಒದಗಿಸಿದನು. ಉದಾಹರಣೆಗೆ, ಯಾವುದು ಯೇಸುವಿನ ಶುಶ್ರೂಷೆಯ ಆರಂಭವನ್ನು ಗುರುತಿಸಿತೊ ಆ ದೀಕ್ಷಾಸ್ನಾನವನ್ನು ಮಾಡಿಸಿಕೊಂಡ ಬಳಿಕ, ಮೆಚ್ಚಿಕೆಯನ್ನು ವ್ಯಕ್ತಪಡಿಸಿದ ಮತ್ತು ಯೇಸುವಿಗಾಗಿರುವ ತನ್ನ ಪ್ರೀತಿಯನ್ನು ದೃಢೀಕರಿಸಿದ ಅವನ ತಂದೆಯ ಸ್ವರವನ್ನು ಅವನು ಕೇಳಿಸಿಕೊಂಡನು. ಯೇಸುವಿಗೆ ಬೆಂಬಲದ ಅಗತ್ಯವಿದ್ದಾಗ ಅವನನ್ನು ಬಲಪಡಿಸಲು ಯೆಹೋವನು ತನ್ನ ದೇವದೂತರನ್ನು ಕಳುಹಿಸಿದನು. ತನ್ನ ಭೂಜೀವಿತದ ಅಂತ್ಯದಲ್ಲಿ, ಯೇಸು ಅತಿ ದೊಡ್ಡ ಪರೀಕ್ಷೆಯನ್ನು ಎದುರಿಸಿದಾಗ, ಯೆಹೋವನು ಅವನ ವಿಜ್ಞಾಪನೆ ಮತ್ತು ಬಿನ್ನಹಗಳನ್ನು ಆಲಿಸಿದನು. ಇದೆಲ್ಲವೂ ಯೇಸುವಿಗೆ ಒಂದು ಬಲಪಡಿಸುವ ಸಹಾಯಕವಾಗಿತ್ತೆಂಬುದು ನಿಶ್ಚಯ.​—⁠ಮಾರ್ಕ 1:11, 13; ಲೂಕ 22:43.

19 ಯೆಹೋವನು ನಮಗೂ ಬಲದ ಪ್ರಧಾನ ಮೂಲವಾಗಿರಲು ಬಯಸುತ್ತಾನೆ. (2 ಪೂರ್ವಕಾಲವೃತ್ತಾಂತ 16:⁠9) ಸಕಲ ಚಲನಾತ್ಮಕ ಶಕ್ತಿಯ ಮತ್ತು ವೀರ್ಯವತ್ತಾದ ಬಲದ ನಿಜ ಮೂಲನಾಗಿರುವಾತನು ನಮಗೆ ಅಗತ್ಯವಿರುವ ಸಮಯದಲ್ಲಿ ಬಲಪಡಿಸುವ ಸಹಾಯಕನಾಗಿರಬಲ್ಲನು. (ಯೆಶಾಯ 40:26) ಯುದ್ಧ, ದಾರಿದ್ರ್ಯ, ರೋಗ, ಮರಣ, ಅಥವಾ ನಮ್ಮ ಸ್ವಂತ ಅಪರಿಪೂರ್ಣತೆಗಳು ನಮ್ಮನ್ನು ಬಹಳ ಒತ್ತಡದ ಕೆಳಗೆ ಹಾಕಿಡಬಹುದು. ಜೀವನದ ಪರೀಕ್ಷೆಗಳು “ದ್ವೇಷಿಸುತ್ತಿದ್ದ ಶತ್ರು”ವಿನಷ್ಟು ಬಲಾಢ್ಯವಾಗಿರುವಂತೆ ತೋರುವಾಗ ಯೆಹೋವನು ನಮ್ಮ ಬಲವೂ ಶಕ್ತಿಯೂ ಆಗಿರಬಲ್ಲನು. (ಕೀರ್ತನೆ 18:17; ವಿಮೋಚನಕಾಂಡ 15:2) ಆತನಲ್ಲಿ ನಮಗಾಗಿ ಬಲಾಢ್ಯವಾದ ಸಹಾಯಕವೊಂದಿದೆ. ಅದು ಆತನ ಪವಿತ್ರಾತ್ಮವೇ. ತನ್ನ ಆತ್ಮದ ಮೂಲಕ ಯೆಹೋವನು ಸೋತವನಿಗೆ “ತ್ರಾಣವನ್ನು” ಕೊಡಬಲ್ಲನು ಮತ್ತು ಇದರಿಂದಾಗಿ ಅವನು “ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು” ಏರುವನು.​—⁠ಯೆಶಾಯ 40:​29, 31.

20 ದೇವರಾತ್ಮವು ವಿಶ್ವದಲ್ಲಿ ಅತಿ ಬಲಾಢ್ಯ ಶಕ್ತಿಯಾಗಿದೆ. ಪೌಲನು ಹೇಳಿದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” ಹೌದು, ನಮ್ಮ ಪ್ರೀತಿಪೂರ್ಣನಾದ ಸ್ವರ್ಗೀಯ ತಂದೆಯು, ಈಗ ಅತಿ ಹತ್ತಿರದಲ್ಲಿರುವ ತನ್ನ ವಾಗ್ದತ್ತ ಪರದೈಸಿನಲ್ಲಿ “ಎಲ್ಲವನ್ನೂ ಹೊಸದು”ಮಾಡುವ ತನಕ ನಾವು ಸಂಕಟಕರವಾದ ಸಮಸ್ಯೆಗಳನ್ನೆಲ್ಲ ತಾಳಿಕೊಳ್ಳುವಂತೆ ನಮ್ಮಲ್ಲಿ “ಬಲಾಧಿಕ್ಯ”ವನ್ನು ತುಂಬಿಸಬಲ್ಲನು.​—⁠ಫಿಲಿಪ್ಪಿ 4:13; 2 ಕೊರಿಂಥ 4:7; ಪ್ರಕಟನೆ 21:4, 5.

[ಪಾದಟಿಪ್ಪಣಿ]

^ ಪ್ಯಾರ. 7 ಡಬ್ಲ್ಯು. ಈ. ವೈನ್‌, ತಮ್ಮ ವೈನ್ಸ್‌ ಕಂಪ್ಲೀಟ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ಓಲ್ಡ್‌ ಆ್ಯಂಡ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಗ್ರಂಥದಲ್ಲಿ ಹೇಳುವುದು: “[ಪಾರೆಗೊರೈಯ] ಪದದ ಕ್ರಿಯಾರೂಪವು ಕೆರಳಿಕೆಯನ್ನು ಶಮನಗೊಳಿಸುವ ಔಷಧಗಳನ್ನು ಸೂಚಿಸುತ್ತದೆ.”

ಮರುಜ್ಞಾಪಿಸಿಕೊಳ್ಳಬಲ್ಲಿರೊ?

• ರೋಮಿನಲ್ಲಿದ್ದ ಸಹೋದರರು ಪೌಲನಿಗೆ “ಒಂದು ಬಲಪಡಿಸುವ ಸಹಾಯಕ” ಆದದ್ದು ಹೇಗೆ?

• ನಾವು ಸಭೆಯಲ್ಲಿ ಯಾವ ವಿಧಗಳಲ್ಲಿ “ಒಂದು ಬಲಪಡಿಸುವ ಸಹಾಯಕ”ವಾಗಿರಬಲ್ಲೆವು?

• ಯೆಹೋವನು ನಮ್ಮ ಬಲದ ಪರಮಶ್ರೇಷ್ಠ ಮೂಲವಾಗಿರುವುದು ಹೇಗೆ?

[ಅಧ್ಯಯನ ಪ್ರಶ್ನೆಗಳು]

1, 2. ಅಪಾಯಗಳಿದ್ದಾಗ್ಯೂ ಪೌಲನ ಸ್ನೇಹಿತರು ಸೆರೆಮನೆಯಲ್ಲಿ ಅವನನ್ನು ಭೇಟಿಮಾಡಿದ್ದೇಕೆ?

3, 4. (ಎ) ಪೌಲನ ಸ್ನೇಹಿತರಲ್ಲಿ ಐವರು ಯಾರು, ಮತ್ತು ಅವರು ಅವನಿಗೆ ಏನಾಗಿ ಪರಿಣಮಿಸಿದರು? (ಬಿ) “ಬಲಪಡಿಸುವ ಸಹಾಯಕ” ಎಂದರೇನು?

5. ಪೌಲನು ಒಬ್ಬ ಅಪೊಸ್ತಲನಾಗಿದ್ದರೂ ಅವನಿಗೆ ಏನು ಅಗತ್ಯವಿತ್ತು, ಮತ್ತು ನಮಗೆಲ್ಲರಿಗೂ ಆಗಾಗ್ಗೆ ಏನು ಬೇಕಾಗುತ್ತದೆ?

6, 7. (ಎ) ರೋಮಿನಲ್ಲಿ ಪೌಲನನ್ನು ಯಾರು ನಿರಾಶೆಗೊಳಿಸಿದರು, ಮತ್ತು ಯಾರು ಹುರಿದುಂಬಿಸಿದರು? (ಬಿ) ರೋಮಿನಲ್ಲಿ ಪೌಲನ ಕ್ರೈಸ್ತ ಸಹೋದರರು ಯಾವ ರೀತಿಯ ಸೇವೆಗಳನ್ನು ಮಾಡಿ ಅವನಿಗೆ “ಒಂದು ಬಲಪಡಿಸುವ ಸಹಾಯಕ”ವಾದರು?

8. ಪೌಲನು ದೈನ್ಯಭಾವದಿಂದ ತನಗೆ “ಬಲಪಡಿಸುವ ಸಹಾಯಕ” ಅಗತ್ಯವೆಂದು ಒಪ್ಪಿಕೊಂಡ ವಿಷಯದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

9, 10. ಒಬ್ಬನು ತನಗಿರುವ ಸಹಾಯದ ಆವಶ್ಯಕತೆಯನ್ನು ಒಪ್ಪಿಕೊಳ್ಳುವಲ್ಲಿ ಯಾವ ಒಳಿತು ಫಲಿಸಬಲ್ಲದು, ಮತ್ತು ಕುಟುಂಬ ಹಾಗೂ ಸಭೆಯಲ್ಲಿ ಇದು ಇತರರ ಮೇಲೆ ಯಾವ ಪ್ರಭಾವವನ್ನು ಬೀರಬಲ್ಲದು?

11. ಇಂದು ಅನೇಕರಿಗೆ ಏಕೆ “ಒಂದು ಬಲಪಡಿಸುವ ಸಹಾಯಕ” ಅಗತ್ಯವಿದೆ?

12. ಸಭೆಯಲ್ಲಿರುವ ಪ್ರತಿಯೊಬ್ಬನು ತನ್ನ ಸಹೋದರರನ್ನು ಬಲಪಡಿಸಲು ಏನು ಮಾಡಬಲ್ಲನು?

13. ಕೆಲವರು ಏಕೆ ನಿಷ್ಕ್ರಿಯರಾಗಬಹುದು, ಮತ್ತು ಅವರಿಗೆ ಸಹಾಯ ನೀಡಲು ಏನು ಮಾಡಸಾಧ್ಯವಿದೆ?

14, 15. ಇತರರನ್ನು ಬಲಪಡಿಸುವುದರ ಬಗ್ಗೆ ಪೌಲನು ಯಾವ ಸಲಹೆಯನ್ನು ಕೊಡುತ್ತಾನೆ? ಅವನ ಸಲಹೆಯನ್ನು ಅನ್ವಯಿಸಿದಂತಹ ಒಂದು ಸಭೆಯ ಉದಾಹರಣೆ ಕೊಡಿರಿ.

16. ಬಲಪಡಿಸುವಿಕೆಯ ಅಗತ್ಯವಿರುವ ಒಬ್ಬನಿಗೆ ಸಹಾಯ ನೀಡಲು ಯಾರು ಸದಾ ಸಿದ್ಧನಾಗಿರುತ್ತಾನೆ?

17, 18. ಯೆಹೋವನು ತನ್ನ ಮಗನಾದ ಯೇಸು ಕ್ರಿಸ್ತನನ್ನು ಯಾವ ರೀತಿಗಳಲ್ಲಿ ಬಲಪಡಿಸಿದನು?

19, 20. ಅಗತ್ಯದ ಸಮಯದಲ್ಲಿ ಯೆಹೋವನು ನಮ್ಮನ್ನು ಬಲಪಡಿಸುವನೆಂದು ನಮಗೆ ಹೇಗೆ ಖಾತರಿಯಿರಬಲ್ಲದು?

[ಪುಟ 18ರಲ್ಲಿರುವ ಚಿತ್ರ]

ಸಹೋದರರು ಪೌಲನಿಗೆ ತಮ್ಮ ನಿಷ್ಠೆಯ ಬೆಂಬಲ, ಪ್ರೋತ್ಸಾಹನೆ, ಮತ್ತು ವ್ಯಕ್ತಿಪರವಾದ ಸೇವೆಯನ್ನು ನೀಡುವ ಮೂಲಕ “ಒಂದು ಬಲಪಡಿಸುವ ಸಹಾಯಕ” ಆದರು

[ಪುಟ 21ರಲ್ಲಿರುವ ಚಿತ್ರ]

ಹಿರಿಯರು ಮಂದೆಯನ್ನು ಬಲಪಡಿಸುವುದರಲ್ಲಿ ಮುಂದಾಳುತ್ವ ವಹಿಸುತ್ತಾರೆ