ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಟಸ್ಥ ನಿಲುವು ಕ್ರೈಸ್ತ ಪ್ರೀತಿಗೆ ತಡೆಯಾಗಿದೆಯೋ?

ತಟಸ್ಥ ನಿಲುವು ಕ್ರೈಸ್ತ ಪ್ರೀತಿಗೆ ತಡೆಯಾಗಿದೆಯೋ?

ತಟಸ್ಥ ನಿಲುವು ಕ್ರೈಸ್ತ ಪ್ರೀತಿಗೆ ತಡೆಯಾಗಿದೆಯೋ?

ಕ್ರೈಸ್ತರಾಗಿರುವುದರಲ್ಲಿ ಬೈಬಲ್‌ ಓದುವುದು, ಪ್ರಾರ್ಥನೆ ಮಾಡುವುದು, ಮತ್ತು ಭಾನುವಾರಗಳಂದು ಸ್ತೋತ್ರಗೀತೆ ಹಾಡುವುದಕ್ಕಿಂತ ಹೆಚ್ಚಿನದ್ದು ಒಳಗೊಂಡಿವೆ. ಅದರಲ್ಲಿ, ದೇವರಿಗಾಗಿ ಮತ್ತು ಮಾನವರಿಗಾಗಿ ಉತ್ತಮ ಕಾರ್ಯಗಳನ್ನು ಮಾಡುವುದು ಸೇರಿಕೊಂಡಿವೆ. ಬೈಬಲ್‌ ಹೇಳುವುದು: “ನಾವು ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು.” (1 ಯೋಹಾನ 3:18) ಯೇಸುವಿಗೆ ಇತರರ ಬಗ್ಗೆ ಯಥಾರ್ಥವಾದ ಚಿಂತನೆಯಿತ್ತು, ಮತ್ತು ಕ್ರೈಸ್ತರು ಅವನನ್ನು ಅನುಕರಿಸಬೇಕು. “ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ” ಎಂದು ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಿದನು. (1 ಕೊರಿಂಥ 15:58) ಆದರೆ ಕರ್ತನ ಕೆಲಸವು ಯಾವುದಾಗಿದೆ? ಇದರಲ್ಲಿ, ಬಡವರ ಮತ್ತು ದಲಿತಜನರ ಪ್ರಯೋಜನಾರ್ಥವಾಗಿ ಸರಕಾರದ ನಿಯಮಗಳನ್ನು ಬದಲಾಯಿಸಲು ಪ್ರಯತ್ನಿಸುವುದು ಸೇರಿದೆಯೋ? ಯೇಸು ಮಾಡಿದ ಕೆಲಸವು ಇದೇ ಆಗಿತ್ತೋ?

ರಾಜಕೀಯ ವಿಷಯಗಳಲ್ಲಿ ಭಾಗವಹಿಸಲು ಇಲ್ಲವೆ ಅದರ ಪಕ್ಷವಹಿಸಲು ಯೇಸು ಒತ್ತಾಯಿಸಲ್ಪಟ್ಟರೂ, ಹಾಗೆ ಮಾಡಲು ಅವನು ನಿರಾಕರಿಸಿದನು. ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಅವನಿಗೆ ಕೊಡುವುದಾಗಿ ಸೈತಾನನು ಹೇಳಿದಾಗ ಅವನದನ್ನು ತ್ಯಜಿಸಿಬಿಟ್ಟನು. ತೆರಿಗೆ ಕೊಡುವ ವಿಷಯದಲ್ಲಿ ವಿವಾದವು ಎದ್ದಾಗ ಅದರಲ್ಲಿ ಸೇರಿಕೊಳ್ಳಲು ಅವನು ನಿರಾಕರಿಸಿದನು. ಅಷ್ಟುಮಾತ್ರವಲ್ಲದೆ, ಜನರ ಗುಂಪು ಅವನನ್ನು ಹಿಡುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾರೆಂದು ತಿಳಿದಾಗ ಅವನು ಆ ಸ್ಥಳವನ್ನು ಬಿಟ್ಟುಹೋದನು. (ಮತ್ತಾಯ 4:​8-10; 22:​17-21; ಯೋಹಾನ 6:15) ಆದರೆ ಅವನ ತಟಸ್ಥ ನಿಲುವು, ಇತರರ ಪ್ರಯೋಜನಾರ್ಥವಾಗಿ ಕೆಲಸಮಾಡುವುದರಿಂದ ಅವನನ್ನು ತಡೆಯಲಿಲ್ಲ.

ಇತರರಿಗೆ ನಿರಂತರ ಒಳಿತನ್ನು ತರುವುದರ ಮೇಲೆ ಯೇಸು ತನ್ನ ಗಮನವನ್ನು ಕೇಂದ್ರೀಕರಿಸಿದನು. ಅವನು ಐದು ಸಾವಿರ ಮಂದಿಗೆ ಊಟವನ್ನು ಬಡಿಸಿದಾಗ ಮತ್ತು ರೋಗಿಗಳನ್ನು ಗುಣಪಡಿಸಿದಾಗ ಅದು ಕೆಲವು ವ್ಯಕ್ತಿಗಳಿಗೆ ತಾತ್ಕಾಲಿಕ ಪ್ರಯೋಜನವನ್ನು ತಂದಿತಾದರೂ, ಅವನ ಬೋಧನೆಯು ಇಡೀ ಮಾನವಕುಲವು ನಿತ್ಯ ಆಶೀರ್ವಾದಗಳನ್ನು ಪಡೆಯುವಂತೆ ಸಾಧ್ಯಮಾಡಿತು. ಯೇಸು ಪರಿಹಾರ ಕಾರ್ಯಾಚರಣೆಗಳ ಒಬ್ಬ ವ್ಯವಸ್ಥಾಪಕನಾಗಿ ಹೆಸರುಗಳಿಸಲಿಲ್ಲ, ಬದಲಾಗಿ “ಬೋಧಕ”ನೆಂಬ ಹೆಸರು ಪಡೆದನು. (ಮತ್ತಾಯ 26:18; ಮಾರ್ಕ 5:35; ಯೋಹಾನ 11:28) ಅವನು ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.”​—⁠ಯೋಹಾನ 18:37.

ರಾಜಕೀಯಕ್ಕಿಂತ ಉತ್ತಮವಾದ ವಿಷಯವನ್ನು ಸಾರುವುದು

ಯೇಸು ಕಲಿಸಿದ ಸತ್ಯವು ರಾಜಕೀಯ ಸಿದ್ಧಾಂತವಾಗಿರಲಿಲ್ಲ. ಬದಲಾಗಿ, ಅದು ಸ್ವತಃ ಅವನೇ ರಾಜನಾಗಿರುವ ರಾಜ್ಯದ ಮೇಲೆ ಕೇಂದ್ರೀಕೃತವಾಗಿತ್ತು. (ಲೂಕ 4:43) ಈ ರಾಜ್ಯವು ಸ್ವರ್ಗೀಯ ಸರಕಾರವಾಗಿದೆ, ಮತ್ತು ಇದು ಎಲ್ಲಾ ಮಾನವ ಆಳ್ವಿಕೆಯನ್ನು ಸ್ಥಾನಪಲ್ಲಟಗೊಳಿಸಲಿದೆ ಹಾಗೂ ಮಾನವಕುಲಕ್ಕೆ ನಿತ್ಯ ಶಾಂತಿಯನ್ನು ತರಲಿದೆ. (ಯೆಶಾಯ 9:6, 7; 11:9; ದಾನಿಯೇಲ 2:44) ಆದುದರಿಂದ, ಈ ರಾಜ್ಯವು ಮಾತ್ರವೇ ಮಾನವಕುಲಕ್ಕಾಗಿರುವ ಏಕೈಕ ನಿಜ ನಿರೀಕ್ಷೆಯಾಗಿದೆ. ಒಂದು ಭದ್ರವಾದ ಭವಿಷ್ಯತ್ತನ್ನು ಒದಗಿಸಲು ಮಾನವರ ಮೇಲೆ ಭರವಸವಿಡುವಂತೆ ಜನರನ್ನು ಉತ್ತೇಜಿಸುವ ಬದಲಾಗಿ ಭವಿಷ್ಯತ್ತಿಗಾಗಿನ ಇಂಥ ನಿಜ ನಿರೀಕ್ಷೆಯನ್ನು ಘೋಷಿಸುವುದು ಪ್ರೀತಿದಾಯಕವಾದ ವಿಷಯವಾಗಿರುವುದಿಲ್ಲವೋ? ಬೈಬಲ್‌ ತಿಳಿಸುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ; ಅವನು ಸಹಾಯಮಾಡ ಶಕ್ತನಲ್ಲ; ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು. ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು.” (ಕೀರ್ತನೆ 146:​3-5) ಆದುದರಿಂದಲೇ, ಸರಕಾರವನ್ನು ಉತ್ತಮ ರೀತಿಯಲ್ಲಿ ವ್ಯವಸ್ಥಾಪಿಸುವುದರ ಕುರಿತು ಸಾರಿ ಹೇಳುವಂತೆ ಕಳುಹಿಸುವುದರ ಬದಲು ಯೇಸು ತನ್ನ ಶಿಷ್ಯರಿಗೆ ‘ಪರಲೋಕ ರಾಜ್ಯದ ಸುವಾರ್ತೆಯನ್ನು’ ಸಾರಿ ಹೇಳುವಂತೆ ಕಲಿಸಿದನು.​—⁠ಮತ್ತಾಯ 10:​6, 7; 24:14.

ಹಾಗಾದರೆ, ಕ್ರೈಸ್ತ ಸೌವಾರ್ತಿಕರಿಗೆ ಮಾಡಬೇಕೆಂದು ಆಜ್ಞಾಪಿಸಲಾದ ‘ಕರ್ತನ ಕೆಲಸವು’ ಇದೇ ಆಗಿದೆ. ದೇವರ ರಾಜ್ಯದ ಪ್ರಜೆಗಳು ಒಬ್ಬರನ್ನೊಬ್ಬರು ಪ್ರೀತಿಸಲೇಬೇಕಾಗಿರುವ ಕಾರಣ, ಮಾನವಕುಲದ ಸಂಪನ್ಮೂಲಗಳನ್ನು ಸಮಾನವಾದ ರೀತಿಯಲ್ಲಿ ಹಂಚಿಕೊಳ್ಳಲು ಅವರು ಸಿದ್ಧರಿರುತ್ತಾರೆ ಮತ್ತು ಹೀಗೆ, ಬಡತನವನ್ನು ನಿರ್ಮೂಲಮಾಡುವುದರಲ್ಲಿ ರಾಜ್ಯವು ಜಯಗಳಿಸುವುದು. (ಕೀರ್ತನೆ 72:​8, 12, 13) ಇದು ಸುವಾರ್ತೆಯಾಗಿದೆ, ಮತ್ತು ಸಾರಲು ಯೋಗ್ಯವಾದ ವಿಚಾರವಾಗಿದೆ.

ಇಂದು, 235 ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು ಈ “ಕರ್ತನ ಕೆಲಸವನ್ನು” ಮಾಡಲು ವ್ಯವಸ್ಥಾಪಿತರಾಗಿದ್ದಾರೆ. ಯೇಸುವಿನ ಆಜ್ಞೆಗೆ ಹೊಂದಿಕೆಯಲ್ಲಿ, ಎಲ್ಲಾ ಸರಕಾರಗಳಿಗೆ ಅವರು ಯೋಗ್ಯವಾದ ಗೌರವವನ್ನು ಸಲ್ಲಿಸುತ್ತಾರೆ. (ಮತ್ತಾಯ 22:21) ಆದರೆ, ‘ನೀವು ಲೋಕದ ಕಡೆಯವರಲ್ಲದೆ ಇದ್ದೀರಿ ಮತ್ತು ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿದ್ದೇನೆ’ ಎಂಬುದಾಗಿ ಯೇಸು ತನ್ನ ಹಿಂಬಾಲಕರಿಗೆ ಹೇಳಿದ ಮಾತಿಗೆ ಸಹ ಅವರು ವಿಧೇಯತೆಯನ್ನೂ ಗೌರವವನ್ನೂ ತೋರಿಸುತ್ತಾರೆ.​—⁠ಯೋಹಾನ 15:19.

ರಾಜಕೀಯದಲ್ಲಿ ವಿಶ್ವಾಸವನ್ನು ಇಟ್ಟಿದ್ದ ಕೆಲವರು ಬೈಬಲನ್ನು ಜಾಗರೂಕತೆಯಿಂದ ಅಧ್ಯಯನಮಾಡಿದ ನಂತರ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಕ್ಯಾಥಲಿಕ್‌ ಆ್ಯಕ್ಷನ್‌ ಎಂಬ ಚರ್ಚ್‌ ನಿಯಂತ್ರಿತ ಸಂಘದ ಸದಸ್ಯನಾಗಿದ್ದ ಒಬ್ಬ ಇಟಲಿಯ ರಾಜಕಾರಣಿಯು ಹೇಳಿದ್ದು: “ಒಬ್ಬ ವ್ಯಕ್ತಿಯು ಸಮಾಜದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಕ್ರಿಯಾಶೀಲ ಪಾತ್ರವನ್ನು ವಹಿಸಬೇಕೆಂಬ ಭಾವನೆಯಿಂದ ನಾನು ರಾಜಕೀಯದಲ್ಲಿ ಒಳಗೊಂಡೆ.” ನಗರಾಧ್ಯಕ್ಷನಾಗಿದ್ದ ಅವನು, ಒಬ್ಬ ಯೆಹೋವನ ಸಾಕ್ಷಿಯೋಪಾದಿ ದೇವರ ರಾಜ್ಯದ ಬಗ್ಗೆ ಸಾರುವ ಉದ್ದೇಶದಿಂದ ತನ್ನ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ರಾಜಕೀಯದಲ್ಲಿರುವ ಯಥಾರ್ಥ ಜನರು ಮಾಡುವ ಪ್ರಯತ್ನಗಳು ಏಕೆ ವಿಫಲವಾಗುತ್ತವೆ ಎಂಬುದನ್ನು ವಿವರಿಸಿದನು. “ಲೋಕದಲ್ಲಿರುವ ಸದ್ಯದ ಪರಿಸ್ಥಿತಿಗೆ, ಸಭ್ಯ ಜನರು ಸಾಮಾಜಿಕ ಪರಿಸ್ಥಿತಿಗಳನ್ನು ಸುಧಾರಿಸಲು ಪ್ರಯತ್ನಿಸದೆ ಇರುವುದು ಕಾರಣವಲ್ಲ, ಬದಲಾಗಿ, ಅನೇಕರ ಕೆಟ್ಟತನವು ಕೊಂಚ ಜನರ ಪ್ರಾಮಾಣಿಕ ಪ್ರಯತ್ನಗಳನ್ನು ಅದುಮಿಬಿಡುವುದೇ ಆಗಿದೆ.”

ಮಾನವಕುಲಕ್ಕಾಗಿರುವ ಏಕೈಕ ನಿರೀಕ್ಷೆಯ ಕುರಿತು ಸಾರುವ ಸಲುವಾಗಿ ರಾಜಕೀಯದಲ್ಲಿ ಭಾಗವಹಿಸದಿರುವುದು, ಪ್ರಾಯೋಗಿಕ ವಿಧಗಳಲ್ಲಿ ಇತರರಿಗೆ ಸಹಾಯಮಾಡುವುದರಿಂದ ನಿಜ ಕ್ರೈಸ್ತರನ್ನು ತಡೆಯುವುದಿಲ್ಲ. ದೇವರ ರಾಜ್ಯದ ಪ್ರಜೆಗಳಾಗಲು ಅವರು ಯಾರಿಗೆ ಸಹಾಯಮಾಡುತ್ತಾರೋ ಅಂಥವರು ಹಾನಿಕಾರಕ ಸ್ವಭಾವಗಳನ್ನು ಬದಲಾಯಿಸಿಕೊಳ್ಳಲು, ಅಧಿಕಾರದಲ್ಲಿರುವವರನ್ನು ಗೌರವಿಸಲು, ಕುಟುಂಬ ಜೀವನವನ್ನು ಉತ್ತಮಗೊಳಿಸಲು, ಮತ್ತು ಪ್ರಾಪಂಚಿಕ ವಿಷಯಗಳ ಕಡೆಗೆ ಸಮತೂಕದ ನೋಟವನ್ನು ಹೊಂದಲು ಕಲಿಯುತ್ತಾರೆ. ಇದಕ್ಕಿಂತಲೂ ಹೆಚ್ಚಾಗಿ, ಯೆಹೋವನ ಸಾಕ್ಷಿಗಳು ಜನರಿಗೆ ಯೆಹೋವನೊಂದಿಗೆ ಒಂದು ಆಪ್ತ ಸಂಬಂಧದಲ್ಲಿ ಆನಂದಿಸಲು ಸಹಾಯಮಾಡುತ್ತಾರೆ.

ದೇವರ ರಾಜ್ಯದ ಸೌವಾರ್ತಿಕರು ತಾವು ಜೀವಿಸುವ ಸಮುದಾಯಕ್ಕೆ ಉಪಯುಕ್ತರಾಗಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ, ನೈಜ್ಯ ಮತ್ತು ದೇವರನ್ನು ಪ್ರೀತಿಸುವ ಎಲ್ಲರಿಗೆ ಶಾಶ್ವತ ಶಾಂತಿಯನ್ನು ತರುವಂಥ ಸರಕಾರದಲ್ಲಿ ತಮ್ಮ ಭರವಸೆಯನ್ನು ಇಡುವಂತೆ ಅವರು ಜನರನ್ನು ನಿರ್ದೇಶಿಸುತ್ತಾರೆ. ಕ್ರೈಸ್ತರು ತಮ್ಮ ತಟಸ್ಥ ನಿಲುವಿನ ಪರಿಣಾಮವಾಗಿ, ಇಂದು ಲಭ್ಯವಿರುವ ಅತಿ ಹೆಚ್ಚು ಬಾಳುವ ಮತ್ತು ಪ್ರಾಯೋಗಿಕವಾದ ಸಹಾಯವನ್ನು ಒದಗಿಸಲು ಶಕ್ತರಾಗಿದ್ದಾರೆ.

[ಪುಟ 7ರಲ್ಲಿರುವ ಚೌಕ/ಚಿತ್ರ]

ರಾಜಕೀಯದಿಂದ ದೇವರ ರಾಜ್ಯದ ಸಾರುವಿಕೆಗೆ

ಸಣ್ಣ ಹುಡುಗನಾಗಿರುವಾಗಲೇ ಆಟೀಲ, ಬ್ರಸಿಲ್‌ನ ಬಲೇಮ್‌ನಲ್ಲಿದ್ದ ತನ್ನ ಚರ್ಚ್‌ ಪಾದ್ರಿಯಿಂದ ವಿಮೋಚನಾ ದೇವತಾಶಾಸ್ತ್ರವನ್ನು ಕಲಿತಿದ್ದನು. ಮಾನವಕುಲವು ದಬ್ಬಾಳಿಕೆಯಿಂದ ಬಿಡುಗಡೆಯಾಗುವ ವಿಷಯವನ್ನು ಕೇಳಿಸಿಕೊಳ್ಳಲು ಅವನು ಅತ್ಯಾನಂದಪಟ್ಟನು ಮತ್ತು ಕ್ರಿಯಾವಾದಿ ಸಮುದಾಯವನ್ನು ಸೇರಿಕೊಂಡನು. ಅಲ್ಲಿ ಅವನು ಪ್ರತಿಭಟನಾ ನಡಿಗೆ ಹಾಗೂ ಅಸಹಕಾರ ಚಳುವಳಿಗಳನ್ನು ಸಂಘಟಿಸಲು ಕಲಿತುಕೊಂಡನು.

ಆದರೆ ಅದೇ ಸಮಯದಲ್ಲಿ ಆಟೀಲ ತನಗೆ ನೀಡಲ್ಪಟ್ಟಿದ್ದ ಮಹಾ ಬೋಧಕನಿಗೆ ಕಿವಿಗೊಡುವುದು * ಎಂಬ ಪುಸ್ತಕವನ್ನು ಉಪಯೋಗಿಸುತ್ತಾ ಕ್ರಿಯಾವಾದಿ ಸಮುದಾಯದ ಮಕ್ಕಳಿಗೆ ಕಲಿಸುವುದರಲ್ಲಿ ಆನಂದಿಸುತ್ತಿದ್ದನು. ಆ ಪುಸ್ತಕವು, ಉತ್ತಮ ನಡತೆಯ ಮತ್ತು ಅಧಿಕಾರಕ್ಕೆ ವಿಧೇಯತೆಯನ್ನು ತೋರಿಸುವುದರ ಕುರಿತು ಕಲಿಸಿತು. ಇದು, ವಿಮೋಚನಾ ದೇವತಾಶಾಸ್ತ್ರವನ್ನು ಬೆಂಬಲಿಸುವವರು ಯೇಸು ಬೋಧಿಸಿದ ಉಚ್ಚ ನೈತಿಕ ಮಟ್ಟವನ್ನು ಏಕೆ ಅನುಸರಿಸುವುದಿಲ್ಲ ಮತ್ತು ಕೆಲವರು ಅಧಿಕಾರ ದೊರೆತೊಡನೆ ದಲಿತಜನರನ್ನು ಏಕೆ ಮರೆತುಬಿಡುತ್ತಾರೆ ಎಂದು ಆಟೀಲನು ಆಲೋಚಿಸುವಂತೆ ಮಾಡಿತು. ಅವನು ಸಮುದಾಯದ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿಬಿಟ್ಟನು. ನಂತರ, ಯೆಹೋವನ ಸಾಕ್ಷಿಗಳು ಅವನ ಮನೆಗೆ ಬಂದು, ದೇವರ ರಾಜ್ಯದ ಕುರಿತು ಅವನೊಂದಿಗೆ ಮಾತನಾಡಿದರು. ಬೇಗನೆ ಅವನು ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದನು ಮತ್ತು ಮಾನವಕುಲದ ದಬ್ಬಾಳಿಕೆಗೆ ಇರುವ ನಿಜ ಪರಿಹಾರದ ಕುರಿತು ಕಲಿತುಕೊಂಡನು.

ಆಟೀಲ ಬೈಬಲನ್ನು ಅಧ್ಯಯನ ಮಾಡುತ್ತಿರುವ ಸಮಯದಲ್ಲಿ, ಧರ್ಮ ಮತ್ತು ರಾಜಕೀಯದ ಕುರಿತಾದ ಒಂದು ಕ್ಯಾಥೊಲಿಕ್‌ ವಿಚಾರಗೋಷ್ಠಿಗೆ ಹಾಜರಾದನು. “ಧರ್ಮ ಮತ್ತು ರಾಜಕೀಯ ಎಂಬುದು ಒಂದೇ ನಾಣ್ಯದ ಎರಡು ಮುಖಗಳು” ಎಂಬುದಾಗಿ ಆ ವಿಚಾರಗೋಷ್ಠಿಯ ಒಬ್ಬ ಬೋಧಕನು ವಿವರಿಸಿದನು. ನಂತರ ಆಟೀಲ ರಾಜ್ಯ ಸಭಾಗೃಹದಲ್ಲಿ ಒಂದು ಕೂಟಕ್ಕೆ ಸಹ ಹಾಜರಾದನು. ಎಂತಹ ವ್ಯತ್ಯಾಸ! ಒಂದು ವಿಷಯವೇನೆಂದರೆ, ಅಲ್ಲಿ ಯಾರೂ ಧೂಮಪಾನ ಮಾಡುವುದಾಗಲಿ, ಮದ್ಯ ಸೇವಿಸುವುದಾಗಲಿ, ಅಥವಾ ಅಸಹ್ಯವಾದ ಮಾತುಗಳನ್ನು ಆಡುವುದಾಗಲಿ ಇರಲಿಲ್ಲ. ಯೆಹೋವನ ಸಾಕ್ಷಿಗಳೊಂದಿಗೆ ಸಾರುವ ಕೆಲಸದಲ್ಲಿ ತಾನೂ ಸೇರಿಕೊಳ್ಳುವುದಾಗಿ ಅವನು ನಿರ್ಧರಿಸಿದನು, ಮತ್ತು ಬೇಗನೆ ದೀಕ್ಷಾಸ್ನಾನವನ್ನು ಪಡೆದುಕೊಂಡನು. ಬಡವರ ಸಮಸ್ಯೆಗಳಿಗೆ ವಿಮೋಚನಾ ದೇವತಾಶಾಸ್ತ್ರವು ಏಕೆ ನಿಜವಾದ ಪರಿಹಾರವಲ್ಲ ಎಂಬುದನ್ನು ಈಗ ಅವನು ನೋಡಶಕ್ತನಾಗಿದ್ದಾನೆ.

[ಪಾದಟಿಪ್ಪಣಿ]

^ ಪ್ಯಾರ. 15 ಯೆಹೋವನ ಸಾಕ್ಷಿಗಳ ಪ್ರಕಾಶನ.

[ಪುಟ 6ರಲ್ಲಿರುವ ಚಿತ್ರಗಳು]

ಕ್ರೈಸ್ತ ಶುಶ್ರೂಷಕರ ತಟಸ್ಥ ನಿಲುವು ಇತರರಿಗೆ ಸಹಾಯಮಾಡುವುದರಿಂದ ಅವರನ್ನು ತಡೆಯುವುದಿಲ್ಲ