ದೇವರ ವಾಕ್ಯದಿಂದ ನೀವು ಬಲಗೊಳಿಸಲ್ಪಟ್ಟಿದ್ದೀರೋ?
ದೇವರ ವಾಕ್ಯದಿಂದ ನೀವು ಬಲಗೊಳಿಸಲ್ಪಟ್ಟಿದ್ದೀರೋ?
ಸಮಸ್ಯೆಗಳು ಎದುರಾದಾಗ ನೀವು ಅವುಗಳನ್ನು ಹೇಗೆ ನಿಭಾಯಿಸುತ್ತೀರಿ? ಯೇಸುವಿನ ವಿಷಯದಲ್ಲಾದರೋ, ಒಂದು ಸೂಕ್ತವಾದ ಶಾಸ್ತ್ರವಚನವನ್ನು ಜ್ಞಾಪಿಸಿಕೊಳ್ಳುವುದು ತಾನೇ ಸೈತಾನನ ಶೋಧನೆಗಳನ್ನು ಎದುರಿಸಲು ಅವನಿಗೆ ಸಹಾಯಮಾಡಿತು. (ಮತ್ತಾಯ 4:1-11) ಅದೇ ರೀತಿಯಲ್ಲಿ, ರಾಜ ದಾವೀದನು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸಿದಾಗ, ದೇವರ ವಾಕ್ಯದಿಂದ ಬಲಗೊಳಿಸಲ್ಪಟ್ಟನು. ಅವನು ಹೇಳಿದ್ದು: “ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.”—ಕೀರ್ತನೆ 94:19.
ಇದೇ ರೀತಿಯಲ್ಲಿ, ನಾವು ಸಹ ಪಂಥಾಹ್ವಾನಗಳನ್ನು ಎದುರಿಸುವಾಗ ಒಂದು ಅಚ್ಚುಮೆಚ್ಚಿನ ಶಾಸ್ತ್ರವಚನವನ್ನು ಜ್ಞಾಪಿಸಿಕೊಳ್ಳುವುದು ನಮಗೆ ಸಂತೈಸುವಿಕೆಯನ್ನು ಅಥವಾ ಬಲವನ್ನು ನೀಡಬಲ್ಲದು. ಉದಾಹರಣೆಗೆ, ಈಗ 89 ವರುಷ ಪ್ರಾಯದವರಾಗಿರುವ ರೆಕ್ಸ್, 1931ರಿಂದ ಪೂರ್ಣ ಸಮಯದ ಸೌವಾರ್ತಿಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಆದರೂ ಅವರು ತಿಳಿಸುವುದು: “ಶುಶ್ರೂಷೆಯಲ್ಲಿ ನನಗೆ ಒಂದು ಹೊಸ ನೇಮಕವು ನೀಡಲ್ಪಟ್ಟಾಗಲೆಲ್ಲಾ ನನಗೆ ಅನೇಕವೇಳೆ ನಾನು ಅಸಮರ್ಥನು ಎಂಬ ಅನಿಸಿಕೆಯಾಗುತ್ತಿತ್ತು.” ಆದರೆ ಅವರು ಆ ಅನಿಸಿಕೆಯನ್ನು ಹೇಗೆ ಹೋಗಲಾಡಿಸಿದರು? “ನನ್ನ ಅಚ್ಚುಮೆಚ್ಚಿನ ಶಾಸ್ತ್ರವಚನವಾದ ಜ್ಞಾನೋಕ್ತಿ 3:5ನ್ನು ನಾನು ಜ್ಞಾಪಿಸಿಕೊಳ್ಳುತ್ತಿದ್ದೆ. ಅದು ತಿಳಿಸುವುದು: ‘ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.’ ಈ ಶಾಸ್ತ್ರವಚನವನ್ನು ಜ್ಞಾಪಿಸಿಕೊಳ್ಳುವ ಮತ್ತು ಅದನ್ನು ಅನ್ವಯಿಸಿಕೊಳ್ಳುವ ಮೂಲಕ ನನ್ನ ನೇಮಕವನ್ನು ಯಶಸ್ವಿಕರವಾಗಿ ಮಾಡಲು ನನಗೆ ಸಹಾಯ ದೊರಕಿತು.”
ಒಂದು ಅಚ್ಚುಮೆಚ್ಚಿನ ಶಾಸ್ತ್ರವಚನವನ್ನು ಹೊಂದಿರುವ ಮೂಲಕ ಎಳೆಯರು ಸಹ ಪ್ರಯೋಜನ ಪಡೆಯುತ್ತಾರೆ. ಮತ್ತಾಯ 24:14 ತನ್ನ ಅಚ್ಚುಮೆಚ್ಚಿನ ಶಾಸ್ತ್ರವಚನ ಎಂಬುದಾಗಿ ಆರು ವರುಷ ಪ್ರಾಯದ ಜ್ಯಾಕ್ ಹೇಳುತ್ತಾನೆ. ಈ ಶಾಸ್ತ್ರವಚನವು, ತನ್ನ ಹೆತ್ತವರೊಂದಿಗೆ ಕ್ರಮವಾಗಿ ಸಾರುವ ಕೆಲಸಕ್ಕೆ ಹೋಗುವಂತೆ ಅವನನ್ನು ಪ್ರಚೋದಿಸುತ್ತದೆ. ಅವನು ತಿಳಿಸುವುದು: “ನನ್ನ ತಾಯಿ, ತಂದೆ, ಮತ್ತು ಅಕ್ಕನೊಂದಿಗೆ ಪ್ರತಿ ಶನಿವಾರದಂದು ಸಾಕ್ಷಿಕಾರ್ಯಕ್ಕೆ ಹೋಗಲು ನಾನು ಆನಂದಿಸುತ್ತೇನೆ.”
ಯೇಸುವಿನಂತೆ, ನೀವು ಕೆಲವೊಮ್ಮೆ ನಿಮ್ಮ ನಂಬಿಕೆಗೆ ನೇರವಾದ ಪಂಥಾಹ್ವಾನಗಳನ್ನು ಎದುರಿಸುತ್ತೀರೋ? ಹಾಗಾದರೆ, ನೀವು ಫಿಲಿಪ್ಪಿ 4:13ನ್ನು ನಿಮ್ಮ ಅಚ್ಚುಮೆಚ್ಚಿನ ಶಾಸ್ತ್ರವಚನವನ್ನಾಗಿ ಮಾಡಿಕೊಳ್ಳಬಹುದು. ರಾಜ ದಾವೀದನಂತೆ ನೀವು ‘ಚಿಂತೆಗಳಿಂದ’ ಕಷ್ಟಪಡುತ್ತೀರೋ? ಹಾಗಿರುವಲ್ಲಿ, ಫಿಲಿಪ್ಪಿ 4:6, 7 ವಚನಗಳನ್ನು ಜ್ಞಾಪಿಸಿಕೊಳ್ಳುವುದು ನಿಮಗೆ ಸಹಾಯಮಾಡಬಲ್ಲದು. ದೇವರಿಗೆ ನೀವು ಸಲ್ಲಿಸುವ ಸೇವೆಯು ವ್ಯರ್ಥವೋ ಏನೋ ಎಂದು ಕೆಲವೊಮ್ಮೆ ನೀವು ಚಿಂತಿಸುತ್ತೀರೋ? ಹಾಗಾದರೆ, 1 ಕೊರಿಂಥ 15:58ನ್ನು ಜ್ಞಾಪಿಸಿಕೊಳ್ಳುವುದು ನಿಮ್ಮನ್ನು ಬಲಗೊಳಿಸುವುದು.
ಸೂಕ್ತವಾದ ಶಾಸ್ತ್ರವಚನಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಮೂಲಕ ನಮ್ಮ ಜೀವನದಲ್ಲಿ ದೇವರ ವಾಕ್ಯವು ಪ್ರಭಾವ ಬೀರುವಂತೆ ನಾವು ಅನುಮತಿಸುತ್ತೇವೆ. (ಇಬ್ರಿಯ 4:12) ಅಂಥ ಅಚ್ಚುಮೆಚ್ಚಿನ ಶಾಸ್ತ್ರವಚನಗಳು ನಮಗೆ ಬಲವನ್ನೂ ಸಾಂತ್ವನವನ್ನೂ ನೀಡಬಲ್ಲವು.—ರೋಮಾಪುರ 15:4.