ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಕುರುಡನಾಗಿದ್ದಾಗ ನನ್ನ ಕಣ್ಣುಗಳು ತೆರೆಯಲ್ಪಟ್ಟವು!

ನಾನು ಕುರುಡನಾಗಿದ್ದಾಗ ನನ್ನ ಕಣ್ಣುಗಳು ತೆರೆಯಲ್ಪಟ್ಟವು!

ಜೀವನ ಕಥೆ

ನಾನು ಕುರುಡನಾಗಿದ್ದಾಗ ನನ್ನ ಕಣ್ಣುಗಳು ತೆರೆಯಲ್ಪಟ್ಟವು!

ಏಗನ್‌ ಹವ್‌ಸರ್‌ ಅವರು ಹೇಳಿದಂತೆ

ಎರಡು ತಿಂಗಳ ಶಾರೀರಿಕ ಅಂಧತೆಯ ನಂತರ, ನನ್ನ ಜೀವಮಾನದಾದ್ಯಂತ ನಾನು ಕಡೆಗಣಿಸಿದ್ದ ಬೈಬಲ್‌ ಸತ್ಯತೆಗಳ ಕಡೆಗೆ ನನ್ನ ಕಣ್ಣುಗಳು ತೆರೆಯಲ್ಪಟ್ಟವು.

ಏಳು ದಶಕಗಳಿಗಿಂತಲೂ ಹೆಚ್ಚು ಸಮಯದ ಕಡೆಗೆ ನಾನು ಹಿನ್ನೋಟ ಬೀರುವಾಗ, ನನ್ನ ಜೀವನದ ಅನೇಕ ಅಂಶಗಳು ನನಗೆ ಹೆಚ್ಚಿನ ಸಂತೃಪ್ತಿಯನ್ನು ನೀಡುತ್ತವೆ. ಆದರೆ ಒಂದುವೇಳೆ ನನಗೆ ನನ್ನ ಜೀವನದ ಒಂದು ಅಂಶವನ್ನು ಬದಲಾಯಿಸಲು ಸಾಧ್ಯವಿರುತ್ತಿದ್ದಲ್ಲಿ, ನಾನು ಇನ್ನೂ ಯುವಕನಾಗಿದ್ದಾಗಲೇ ಯೆಹೋವನ ಕುರಿತು ತಿಳಿದುಕೊಳ್ಳಲು ಆಯ್ಕೆಮಾಡುತ್ತಿದ್ದೆ.

ನಾನು 1927ರಲ್ಲಿ ಉರುಗ್ವೆಯಲ್ಲಿ ಜನಿಸಿದೆ. ಇದೊಂದು ಪೇರು ಹಣ್ಣಿನಾಕಾರದ ಸಣ್ಣ ದೇಶವಾಗಿದ್ದು, ಅರ್ಜೆಂಟೀನ ಮತ್ತು ಬ್ರಸಿಲ್‌ ದೇಶಗಳ ಮಧ್ಯದಲ್ಲಿದೆ ಹಾಗೂ ಅಟ್ಲಾಂಟಿಕ್‌ ತೀರದ ಉದ್ದಕ್ಕೂ ಅನೇಕ ಕಿಲೊಮೀಟರ್‌ನಷ್ಟು ದೂರದ ವರೆಗೆ ಮನಮೋಹಕವಾದ ದೃಶ್ಯಗಳಿಂದ ಕೂಡಿದೆ. ಅಲ್ಲಿನ ಜನಸಂಖ್ಯೆಯಲ್ಲಿ ಅಧಿಕಾಂಶ ಮಂದಿ ಇಟಲಿ ಮತ್ತು ಸ್ಪೆಯ್ನ್‌ನಿಂದ ಬಂದ ವಲಸೆಗಾರರ ಸಂತತಿಯವರಾಗಿದ್ದಾರೆ. ಹಾಗಿದ್ದರೂ, ನನ್ನ ಹೆತ್ತವರು ಹಂಗೆರಿಯಿಂದ ಬಂದ ವಲಸೆಗಾರರಾಗಿದ್ದರು, ಮತ್ತು ನಾನು ಚಿಕ್ಕವನಾಗಿದ್ದಾಗ ನಾವು ಒಂದು ಬಡ ಆದರೂ ಅನ್ಯೋನ್ಯವಾದ ನೆರೆಹೊರೆಯಲ್ಲಿ ಜೀವಿಸಿದೆವು. ಬಾಗಿಲಿಗೆ ಬೀಗಹಾಕುವುದಾಗಲೀ ಕಿಟಕಿಗಳಿಗೆ ಕಂಬಿಗಳನ್ನು ಬಿಗಿಯುವುದಾಗಲೀ ಅಗತ್ಯವಿರಲ್ಲಿಲ್ಲ. ನಮ್ಮ ಮಧ್ಯೆ ಜಾತಿ ಭೇದವೂ ಇರಲಿಲ್ಲ. ಪರದೇಶಸ್ಥರು, ಸ್ವದೇಶಸ್ಥರು, ಕಪ್ಪಿನವರು, ಬಿಳಿಯವರು ಎಂಬ ಭೇದವಿಲ್ಲದೆ ನಾವೆಲ್ಲರೂ ಸ್ನೇಹಿತರಾಗಿದ್ದೆವು.

ನನ್ನ ಹೆತ್ತವರು ಕ್ಯಾಥೊಲಿಕ್‌ ಧರ್ಮವನ್ನು ಅನುಸರಿಸುತ್ತಿದ್ದರು, ಮತ್ತು ನಾನು ಹತ್ತು ವರುಷ ಪ್ರಾಯದವನಾಗಿದ್ದಾಗಲೇ ಬಲಿಪೀಠದ ಸಹಾಯಕ (ಆಲ್ಟರ್‌ ಬಾಯ್‌)ನಾಗಿ ಕೆಲಸಮಾಡತೊಡಗಿದೆ. ವಯಸ್ಕನಾದಾಗ, ಸ್ಥಳೀಯ ಚರ್ಚಿನೊಂದಿಗೆ ನಾನು ಕೆಲಸಮಾಡಿದೆ ಮತ್ತು ಆಡಳಿತ ಪ್ರಾಂತದಲ್ಲಿನ ಬಿಷಪರ ಸಲಹೆಗಾರರ ಗುಂಪಿನ ಒಬ್ಬ ಸದಸ್ಯನಾಗಿದ್ದೆ. ನಾನು ವೈದ್ಯಕೀಯ ವೃತ್ತಿಯನ್ನು ಆಯ್ಕೆಮಾಡಿದ್ದ ಕಾರಣ, ಕ್ಯಾಥೊಲಿಕ್‌ ಚರ್ಚ್‌ನಿಂದ ವೆನಿಸ್ವೇಲದಲ್ಲಿ ವ್ಯವಸ್ಥಾಪಿಸಲ್ಪಟ್ಟ ಒಂದು ಸೆಮಿನರಿಯಲ್ಲಿ ಭಾಗವಹಿಸುವಂತೆ ಆಮಂತ್ರಿಸಲ್ಪಟ್ಟೆ. ಸ್ತ್ರೀರೋಗ ಶಾಸ್ತ್ರದಲ್ಲಿ ತಜ್ಞರಾದ ವೈದ್ಯರ ನಮ್ಮ ಗುಂಪನ್ನು, ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೊಸದಾಗಿ ಪರಿಚಯಿಸಲ್ಪಟ್ಟ ಮೌಖಿಕ ಗರ್ಭನಿರೋಧಕ ಮಾತ್ರೆಗಳ ಕುರಿತು ಅಧ್ಯಯನಮಾಡುವಂತೆ ನೇಮಿಸಲಾಯಿತು.

ವೈದ್ಯಕೀಯ ವಿದ್ಯಾರ್ಥಿಯೋಪಾದಿ ಆರಂಭದ ಅಭಿಪ್ರಾಯಗಳು

ನಾನು ಇನ್ನೂ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ಮಾನವ ದೇಹದ ಕುರಿತು ಕಲಿಯುತ್ತಿದ್ದಾಗಲೇ, ಅದರ ವಿನ್ಯಾಸದಲ್ಲಿ ಕಂಡುಬರುವ ವಿವೇಕದಿಂದ ಬಹಳವಾಗಿ ಪ್ರಭಾವಿತನಾದೆ. ಉದಾಹರಣೆಗೆ, ಯಕೃತ್ತಿನ, ಅಥವಾ ಪಕ್ಕೆಲುಬಿನ ಒಂದು ಭಾಗವನ್ನು ಶಸ್ತ್ರಚಿಕಿತ್ಸೆಮಾಡಿ ತೆಗೆದ ಬಳಿಕ ಅದು ಸ್ವತಃ ತನ್ನ ಸಾಮಾನ್ಯ ಗಾತ್ರಕ್ಕೆ ಬೆಳೆಯಬಲ್ಲದು. ಈ ರೀತಿಯ, ಸ್ವತಃ ವಾಸಿಮಾಡಿಕೊಳ್ಳುವ ಮತ್ತು ನವೀಕರಿಸಿಕೊಳ್ಳುವ ದೇಹದ ಸಾಮರ್ಥ್ಯದಿಂದ ನಾನು ವಿಸ್ಮಿತನಾದೆ.

ಅದೇ ಸಮಯದಲ್ಲಿ, ನಾನು ಭಯಂಕರವಾದ ಅಪಘಾತಗಳಿಗೆ ಬಲಿಯಾದ ಅನೇಕ ಜನರನ್ನೂ ನೋಡಿದೆ, ಮತ್ತು ಅವರು ರಕ್ತಪೂರಣ ಸ್ವೀಕರಿಸಿದ ಕಾರಣ ಮೃತರಾದಾಗ ನನಗೆ ಬಹಳ ದುಃಖವಾಯಿತು. ರಕ್ತವನ್ನು ಸ್ವೀಕರಿಸಿದ್ದರಿಂದ ಉಂಟಾದ ಜಟಿಲತೆಗಳ ಕಾರಣ ಮೃತಪಟ್ಟವರ ಸಂಬಂಧಿಕರೊಂದಿಗೆ ಮಾತನಾಡುವುದು ಎಷ್ಟು ಕಷ್ಟಕರವಾಗಿತ್ತು ಎಂಬುದು ಇಂದಿನ ವರೆಗೂ ನನಗೆ ನೆನಪಿದೆ. ಹೆಚ್ಚಿನ ಸಮಯಗಳಲ್ಲಿ, ರಕ್ತಪೂರಣವೇ ಅವರ ಪ್ರಿಯ ಜನರ ಮರಣಕ್ಕೆ ಕಾರಣವೆಂಬುದನ್ನು ಹೇಳಲಾಗುತ್ತಿರಲಿಲ್ಲ. ಅದಕ್ಕೆ ಬದಲಾಗಿ, ಅವರಿಗೆ ಬೇರೆ ಕಾರಣಗಳನ್ನು ಕೊಡಲಾಗುತ್ತಿತ್ತು. ಅನೇಕ ವರುಷಗಳು ಕಳೆದಿವೆಯಾದರೂ, ರಕ್ತಪೂರಣಗಳ ವಿಷಯದಲ್ಲಿ ನನಗಿದ್ದ ಅಸಮಾಧಾನವನ್ನು ನಾನು ಈಗಲೂ ನೆನಪಿಸಿಕೊಳ್ಳಬಲ್ಲೆ, ಮತ್ತು ನಾನು ಕೊನೆಯಲ್ಲಿ ಆ ಪದ್ಧತಿಯಲ್ಲಿ ಏನೋ ತಪ್ಪಿದೆ ಎಂಬ ನಿರ್ಣಯಕ್ಕೆ ಬಂದೆ. ಆಗಲೇ ನನಗೆ ರಕ್ತದ ಪವಿತ್ರತೆಯ ಕುರಿತಾದ ಯೆಹೋವನ ನಿಯಮ ತಿಳಿದಿದ್ದರೆ ಎಷ್ಟು ಉತ್ತಮವಾಗಿತ್ತು! ತಿಳಿದಿರುತ್ತಿದ್ದಲ್ಲಿ, ರಕ್ತಪೂರಣದ ವಿಷಯದಲ್ಲಿ ಯಾವುದೇ ಅನಿಶ್ಚಿತ ಭಾವನೆ ನನಗಿರುತ್ತಿರಲಿಲ್ಲ.​—⁠ಅ. ಕೃತ್ಯಗಳು 15:​19, 20.

ಜನರಿಗೆ ಸಹಾಯಮಾಡುವುದರಿಂದ ಸಂತೃಪ್ತಿ

ಸ್ವಲ್ಪ ಸಮಯದಲ್ಲೇ ನಾನು ಒಬ್ಬ ಶಸ್ತ್ರಚಿಕಿತ್ಸಕನಾದೆ ಮತ್ತು ಸ್ಯಾಂಟ ಲೂಸೀಆದಲ್ಲಿನ ವೈದ್ಯಕೀಯ ಸಹಾಯಕ ಕೇಂದ್ರದ ನಿರ್ದೇಶಕನಾದೆ. ಜೀವವಿಜ್ಞಾನದ ರಾಷ್ಟ್ರೀಯ ಸಂಸ್ಥೆಯಲ್ಲಿಯೂ ನನಗೆ ಜವಾಬ್ದಾರಿಗಳಿದ್ದವು. ಇದು ನನಗೆ ಬಹಳ ಸಂತೃಪ್ತಿಯನ್ನು ನೀಡಿತು. ನಾನು ಅಸ್ವಸ್ಥ ಜನರಿಗೆ ಸಹಾಯಮಾಡಿದೆ. ಅವರ ಶಾರೀರಿಕ ಕಷ್ಟಗಳನ್ನು ಹೋಗಲಾಡಿಸಲು ಮತ್ತು ಅನೇಕ ಸಂದರ್ಭಗಳಲ್ಲಿ ಅವರ ಜೀವವನ್ನು ಉಳಿಸಲು ನಾನು ಸಹಾಯಮಾಡಿದೆ. ಅಷ್ಟುಮಾತ್ರವಲ್ಲದೆ, ಹೆರಿಗೆಯ ಸಮಯದಲ್ಲಿ ತಾಯಂದಿರಿಗೆ ಸಹಾಯಮಾಡುವ ಮೂಲಕ ನಾನು ಹೊಸ ಜೀವಗಳನ್ನು ಭೂಮಿಗೆ ತಂದೆ. ರಕ್ತಪೂರಣದಿಂದಾಗುವ ಸಮಸ್ಯೆಗಳ ಕುರಿತು ನನಗಿದ್ದ ಅನುಭವಗಳ ಕಾರಣ ನಾನು ಅನೇಕ ಶಸ್ತ್ರಚಿಕಿತ್ಸೆಗಳನ್ನು ರಕ್ತಪೂರಣಗಳಿಲ್ಲದೆ ಮಾಡಲು ಪ್ರಯತ್ನಿಸಿದೆ. ರಕ್ತಸ್ರಾವವು ಒಂದು ಪೀಪಾಯಿಯಲ್ಲಿನ ಸೋರುವಿಕೆಗೆ ಸಮಾನವಾಗಿದೆ ಮತ್ತು ಅದಕ್ಕಾಗಿರುವ ಏಕಮಾತ್ರ ನಿಜ ಪರಿಹಾರವು ಸೋರುವಿಕೆಯನ್ನು ಸರಿಪಡಿಸುವುದೇ ಹೊರತು ಪೀಪಾಯಿಯನ್ನು ತುಂಬಿಸುತ್ತಾ ಇರುವುದಲ್ಲ ಎಂದು ನಾನು ತರ್ಕಿಸುತ್ತಿದ್ದೆ.

ಸಾಕ್ಷಿ ರೋಗಿಗಳಿಗೆ ಚಿಕಿತ್ಸೆ ನೀಡುವುದು

ರಕ್ತರಹಿತ ಶಸ್ತ್ರಚಿಕಿತ್ಸೆಗಾಗಿ 1960ರಿಂದ ಯೆಹೋವನ ಸಾಕ್ಷಿಗಳು ನಮ್ಮ ಕ್ಲಿನಿಕ್‌ಗೆ ಬರಲಾರಂಭಿಸಿದಂದಿನಿಂದ ನನಗೆ ಅವರ ಪರಿಚಯವಾಯಿತು. ಮರ್ಸೇತೇಸ್‌ ಗೊನ್‌ಸಾಲಿಸ್‌ ಎಂಬ ಒಬ್ಬಾಕೆ ಪಯನೀಯರ್‌ ರೋಗಿಯ ವಿಷಯವನ್ನು ನಾನು ಎಂದಿಗೂ ಮರೆಯಸಾಧ್ಯವಿಲ್ಲ. ಅವಳು ಎಷ್ಟು ರಕ್ತಹೀನಳಾಗಿದ್ದಳೆಂದರೆ, ಅವಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುವುದಾದರೆ ಬದುಕಿ ಉಳಿಯಲಾರಳು ಎಂಬ ಭಾವನೆಯಿಂದ ವಿಶ್ವವಿದ್ಯಾನಿಲಯದ ಆಸ್ಪತ್ರೆಯಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿದರು. ಅವಳು ರಕ್ತವನ್ನು ಕಳೆದುಕೊಳ್ಳುತ್ತಿದ್ದಳಾದರೂ, ನಾವು ಅವಳಿಗೆ ನಮ್ಮ ಕ್ಲಿನಿಕ್‌ನಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಿದೆವು. ಶಸ್ತ್ರಚಿಕಿತ್ಸೆಯು ಯಶಸ್ವಿಯಾಯಿತು, ಮತ್ತು ಅವಳು ತನ್ನ 86ನೇ ವರುಷ ಪ್ರಾಯದಲ್ಲಿ ಮರಣಹೊಂದುವ ತನಕ, ಅಂದರೆ 30 ವರುಷಗಳಿಗಿಂತಲೂ ಹೆಚ್ಚು ಸಮಯದ ವರೆಗೆ ಪಯನೀಯರ್‌ ಸೇವೆಯನ್ನು ಮುಂದುವರಿಸಿದಳು.

ಆಸ್ಪತ್ರೆಯಲ್ಲಿರುವ ತಮ್ಮ ಕ್ರೈಸ್ತ ಸಹೋದರರನ್ನು ನೋಡಿಕೊಳ್ಳುವುದರಲ್ಲಿ ಸಾಕ್ಷಿಗಳು ತೋರಿಸುತ್ತಿದ್ದ ಪ್ರೀತಿ ಮತ್ತು ಕಾಳಜಿಯಿಂದ ನಾನು ಯಾವಾಗಲೂ ಪ್ರಭಾವಿತನಾಗುತ್ತಿದ್ದೆ. ನಾನು ರೋಗಿಗಳನ್ನು ಭೇಟಿಮಾಡುವ ಸಮಯದಲ್ಲಿ, ಸಾಕ್ಷಿಗಳು ತಮ್ಮ ನಂಬಿಕೆಗಳ ಕುರಿತು ತಿಳಿಸುವಾಗ ಆಲಿಸಲು ಬಹಳ ಆನಂದಿಸುತ್ತಿದ್ದೆ, ಮತ್ತು ಅವರು ನೀಡುವ ಸಾಹಿತ್ಯಗಳನ್ನು ಸ್ವೀಕರಿಸುತ್ತಿದ್ದೆ. ಬೇಗನೆ ನಾನು ಅವರ ಚಿಕಿತ್ಸಕನು ಮಾತ್ರವಲ್ಲ ಆಧ್ಯಾತ್ಮಿಕ ಸಹೋದರನೂ ಆಗಲಿರುವೆನೆಂಬುದನ್ನು ಆಗ ನಾನು ಯೋಚಿಸಿರಲೇ ಇಲ್ಲ.

ಒಬ್ಬ ರೋಗಿಯ ಮಗಳಾದ ಬಿಆಟ್ರೀಸ್‌ಳನ್ನು ನಾನು ವಿವಾಹವಾದಾಗ, ಸಾಕ್ಷಿಗಳೊಂದಿಗೆ ನಾನು ಇನ್ನೂ ಹೆಚ್ಚಿನ ಸಂಪರ್ಕಕ್ಕೆ ಒಳಗಾದೆ. ಏಕೆಂದರೆ, ಅವಳ ಕುಟುಂಬದ ಹೆಚ್ಚಿನ ಸದಸ್ಯರು ಈಗಾಗಲೇ ಸಾಕ್ಷಿಗಳಾಗಿದ್ದರು, ಮತ್ತು ನಾವು ವಿವಾಹವಾದ ನಂತರ ಇವಳು ಸಹ ಕ್ರಿಯಾಶೀಲ ಸಾಕ್ಷಿಯಾದಳು. ನಾನಾದರೋ ನನ್ನ ಕೆಲಸದಲ್ಲಿ ಸಂಪೂರ್ಣ ತಲ್ಲೀನನಾಗಿದ್ದೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತಕ್ಕಮಟ್ಟಿಗಿನ ಪ್ರಖ್ಯಾತಿಯನ್ನೂ ಅನುಭವಿಸಿದೆ. ಜೀವನವು ಬಹಳ ಸಂತೃಪ್ತಿದಾಯಕವಾಗಿತ್ತು. ಆದರೆ ಬೇಗನೆ ನನ್ನ ಜೀವನವು ಸಂಪೂರ್ಣವಾಗಿ ಬದಲಾವಣೆ ಹೊಂದಲಿಕ್ಕಿತ್ತು ಎಂಬುದು ನನಗೆ ಆಗ ತಿಳಿದಿರಲಿಲ್ಲ.

ಆಪತ್ತು ಬಂದೆರಗುತ್ತದೆ

ಒಬ್ಬ ಶಸ್ತ್ರಚಿಕಿತ್ಸಕನಿಗೆ ಸಂಭವಿಸಬಹುದಾದ ಅತಿ ಘೋರ ಸಂಗತಿಯು, ಅವನು ತನ್ನ ದೃಷ್ಟಿಯನ್ನು ಕಳೆದುಕೊಳ್ಳುವುದೇ ಆಗಿದೆ. ಅದು ತಾನೆ ನನಗೂ ಸಂಭವಿಸಿತು. ಅನಿರೀಕ್ಷಿತವಾಗಿ ನನ್ನ ಎರಡೂ ಅಕ್ಷಿಪಟಗಳಲ್ಲಿ ಬಿರುಕುಂಟಾಯಿತು. ನಾನು ಕುರುಡನಾದೆ! ನನ್ನ ದೃಷ್ಟಿ ಪುನಃ ಹಿಂದಕ್ಕೆ ಬರುವುದೋ ಇಲ್ಲವೋ ಎಂದು ತಿಳಿಯುವ ಯಾವ ಮಾರ್ಗವೂ ನನಗಿರಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿದ ನಂತರ, ನನ್ನ ಎರಡೂ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿ ನನ್ನನ್ನು ಹಾಸಿಗೆಯಲ್ಲಿ ಮಲಗಿಸಲಾಯಿತು. ನಾನು ಬಹಳ ಖಿನ್ನನಾದೆ. ನಾನು ಅಪ್ರಯೋಜಕನೂ ನಿರೀಕ್ಷಾರಹಿತನೂ ಆಗಿರುವ ಭಾವನೆ ನನಗಾಯಿತು. ನಾನು ನನ್ನ ಜೀವವನ್ನು ಕೊನೆಗೊಳಿಸಲು ನಿರ್ಧರಿಸಿದೆ. ನಾನು ನಾಲ್ಕನೆಯ ಮಹಡಿಯಲ್ಲಿದ್ದ ಕಾರಣ, ನನ್ನ ಹಾಸಿಗೆಯಿಂದ ಇಳಿದು ಕಿಟಕಿಯನ್ನು ಹುಡುಕುತ್ತಾ ಗೋಡೆಯನ್ನು ಹಿಡಿದುಕೊಂಡು ಮುಂದಕ್ಕೆ ನಡೆದೆ. ಮೇಲಿನಿಂದ ಧುಮುಕಿ ಪ್ರಾಣಕಳೆದುಕೊಳ್ಳುವ ಉದ್ದೇಶದಿಂದ ನಾನು ಹೀಗೆ ಮಾಡಿದೆ. ಆದರೆ ಕಿಟಕಿಯ ಬಳಿ ಬರುವ ಬದಲು ನಾನು ಆಸ್ಪತ್ರೆಯ ಪ್ರವೇಶಾಂಗಣವನ್ನು ಪ್ರವೇಶಿಸಿದೆ ಮತ್ತು ಅಲ್ಲಿ ಒಬ್ಬಾಕೆ ನರ್ಸ್‌ ನನ್ನನ್ನು ನೋಡಿ, ಪುನಃ ನನ್ನನ್ನು ಹಿಂದೆ ನನ್ನ ಹಾಸಿಗೆ ತಂದುಬಿಟ್ಟಳು.

ಅಂಥ ಕೆಲಸವನ್ನು ಪುನಃ ಒಮ್ಮೆ ನಾನು ಪ್ರಯತ್ನಿಸಲಿಲ್ಲ. ಆದರೆ ನನ್ನ ಕತ್ತಲೆಯ ಜಗತ್ತಿನಲ್ಲಿ ನಾನು ಬಹಳ ಖಿನ್ನನಾಗಿಯೂ ರೇಗುವವನಾಗಿಯೂ ಮುಂದುವರಿದೆ. ಕುರುಡನಾಗಿದ್ದ ಈ ಸಮಯಾವಧಿಯಲ್ಲಿಯೇ, ಮುಂದಕ್ಕೆ ನಾನು ಎಂದಾದರೂ ನೋಡಶಕ್ತನಾದರೆ ಬೈಬಲನ್ನು ಸಂಪೂರ್ಣವಾಗಿ ಓದುತ್ತೇನೆ ಎಂದು ನಾನು ದೇವರಿಗೆ ವಚನವಿತ್ತೆ. ಕ್ರಮೇಣ ನನ್ನ ದೃಷ್ಟಿಯು ಆಂಶಿಕವಾಗಿ ಸರಿಯಾಯಿತು, ಮತ್ತು ನಾನು ಓದಶಕ್ತನಾದೆ. ಆದರೆ ನಾನು ಒಬ್ಬ ಶಸ್ತ್ರಚಿಕಿತ್ಸಕನಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಹಾಗಿದ್ದರೂ, ಉರುಗ್ವೆಯಲ್ಲಿ ಒಂದು ಜನಪ್ರಿಯ ಹೇಳಿಕೆ ಹೀಗಿದೆ: “ನೋ ಹೈ ಮಾಲ್‌ ಕೇ ಪೋರ್‌ ಬ್ಯೆನ್‌ ನೋ ವೆನ್‌ಗಾ” ಅಂದರೆ, “ಪ್ರತಿಯೊಂದು ನಕಾರಾತ್ಮಕ ಘಟನೆಯಿಂದಲೂ ಯಾವುದಾದರೊಂದು ಸಕಾರಾತ್ಮಕ ಫಲವು ಖಂಡಿತವಾಗಿಯೂ ಫಲಿಸುತ್ತದೆ.” ಈ ಹೇಳಿಕೆಯ ಸತ್ಯತೆಯನ್ನು ನಾನು ಮುಂದಕ್ಕೆ ಅನುಭವಿಸಲಿದ್ದೆ.

ನಕಾರಾತ್ಮಕ ಪ್ರಾರಂಭ

ನಾನು ದಿ ಜೆರೂಸಲೇಮ್‌ ಬೈಬಲ್‌ನ ದೊಡ್ಡ ಅಕ್ಷರಗಳ ಮುದ್ರಣವನ್ನು ಖರೀದಿಸಲು ಬಯಸಿದೆ, ಆದರೆ ಯೆಹೋವನ ಸಾಕ್ಷಿಗಳೊಂದಿಗೆ ಕಡಿಮೆ ಬೆಲೆಯ ಬೈಬಲ್‌ ಲಭ್ಯವಿದೆ ಎಂದು ನನಗೆ ತಿಳಿದುಬಂತು. ಒಬ್ಬ ಯುವ ಸಾಕ್ಷಿಯು ಆ ಬೈಬಲನ್ನು ನನ್ನ ಮನೆಗೆ ತಂದುಕೊಡುವುದಾಗಿ ಹೇಳಿದ. ಮರುದಿನ ಬೆಳಿಗ್ಗೆ, ಅವನು ಬೈಬಲನ್ನು ಹಿಡಿದುಕೊಂಡು ನಮ್ಮ ಮನೆಯ ಮುಂದಿನ ಬಾಗಿಲಿನ ಬಳಿ ನಿಂತಿದ್ದ. ನನ್ನ ಪತ್ನಿಯು ಬಾಗಿಲನ್ನು ತೆರೆದು, ಅವನೊಂದಿಗೆ ಮಾತನಾಡಿದಳು. ಮನೆಯ ಹಿಂಬದಿಯಲ್ಲಿದ್ದ ನಾನು ಜೋರಾದ ಸ್ವರದಿಂದ, “ನೀನು ಅವನಿಗೆ ಹಣವನ್ನು ಕೊಟ್ಟಾಯಿತಲ್ಲಾ ಇನ್ನು ಅವನು ನಮ್ಮ ಮನೆಯಲ್ಲಿ ನಿಲ್ಲುವ ಅಗತ್ಯವಿಲ್ಲ, ಕೂಡಲೆ ಮನೆಯಿಂದ ಹೋಗಲಿ” ಎಂದು ಹೇಳಿದೆ. ಆ ಯುವಕನು ನನ್ನ ಮಾತಿಗನುಸಾರ ಹೋಗಿಬಿಟ್ಟನು. ಇದೇ ವ್ಯಕ್ತಿಯು ಮುಂದಕ್ಕೆ ನನ್ನ ಜೀವನದಲ್ಲಿ ಒಂದು ಮಹತ್ವಪೂರ್ಣ ಪಾತ್ರವನ್ನು ವಹಿಸಲಿದ್ದಾನೆ ಎಂಬುದು ನನಗೆ ತಿಳಿದಿರಲಿಲ್ಲ.

ಒಂದು ದಿನ ನನಗೆ, ನಾನು ನನ್ನ ಪತ್ನಿಗೆ ಕೊಟ್ಟ ಮಾತನ್ನು ನೆರವೇರಿಸಲು ಅಸಾಧ್ಯವಾಯಿತು. ಆದುದರಿಂದ ಅದನ್ನು ಸರಿದೂಗಿಸಲು ಮತ್ತು ಅವಳನ್ನು ಸಂತೋಷಪಡಿಸಲು, ವಾರ್ಷಿಕವಾಗಿ ನಡೆಯುವ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ನಾನು ಅವಳೊಂದಿಗೆ ಬರುವುದಾಗಿ ತಿಳಿಸಿದೆ. ಆ ದಿನವು ಬಂದಾಗ, ನನಗೆ ನನ್ನ ಮಾತಿನ ನೆನಪಾಯಿತು ಮತ್ತು ನಾನು ಅವಳೊಂದಿಗೆ ಆ ಆಚರಣೆಗೆ ಹಾಜರಾದೆ. ಅಲ್ಲಿನ ಸ್ನೇಹಪರ ವಾತಾವರಣ ಮತ್ತು ನನಗೆ ದೊರೆತ ಹಾರ್ದಿಕ ಸ್ವಾಗತವು ನನ್ನನ್ನು ಬಹಳ ಪ್ರಭಾವಿಸಿತು. ಭಾಷಣಕರ್ತನು ಮಾತನಾಡಲು ಆರಂಭಿಸಿದಾಗ ನಾನು ಆಶ್ಚರ್ಯಚಕಿತನಾದೆ, ಏಕೆಂದರೆ ನನ್ನ ಮನೆಯನ್ನು ಬಿಟ್ಟುಹೋಗುವಂತೆ ನಾನು ಯಾರಿಗೆ ಅಸಭ್ಯವಾಗಿ ಹೇಳಿದ್ದೆನೋ ಆ ಯುವಕನೇ ಭಾಷಣಕರ್ತನಾಗಿದ್ದನು. ಅವನ ಭಾಷಣವು ನನ್ನನ್ನು ಗಾಢವಾಗಿ ಪ್ರಭಾವಿಸಿತು, ಮತ್ತು ಅವನೊಂದಿಗೆ ಅಸಭ್ಯವಾಗಿ ವರ್ತಿಸಿದಕ್ಕಾಗಿ ನಾನು ಬಹಳ ದುಃಖಪಟ್ಟೆ. ಆದರೆ ಈಗ ವಿಷಯವನ್ನು ಹೇಗೆ ಸರಿಪಡಿಸಬಲ್ಲೆ?

ಅವನನ್ನು ನಮ್ಮ ಮನೆಗೆ ಊಟಕ್ಕೆ ಆಮಂತ್ರಿಸುವಂತೆ ನಾನು ನನ್ನ ಪತ್ನಿಯನ್ನು ಕೇಳಿಕೊಂಡೆ. ಅದಕ್ಕವಳು ಹೇಳಿದ್ದು: “ನನ್ನ ಬದಲು ನೀವೇ ಅವನನ್ನು ಆಮಂತ್ರಿಸಿದರೆ ಉತ್ತಮವೆಂದು ನೀವು ನೆನಸುವುದಿಲ್ಲವೋ? ಇಲ್ಲಿಯೇ ನಿಂತಿರಿ, ಅವನು ನಿಮ್ಮ ಬಳಿ ಬರುವನು.” ಅವಳು ಹೇಳಿದ್ದು ಸರಿಯಾಗಿತ್ತು. ಅವನು ನನ್ನ ಬಳಿಗೆ ಬಂದು ನನ್ನನ್ನು ವಂದಿಸಿದನು ಮತ್ತು ನನ್ನ ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸಿದನು.

ನಮ್ಮನ್ನು ಭೇಟಿಯಾಗಲು ಅವನು ಬಂದ ಸಂಜೆಯಂದು ನಮ್ಮ ಮಧ್ಯೆ ನಡೆದ ಸಂಭಾಷಣೆಯು, ನಾನು ಮಾಡಿದ ಅನೇಕ ಬದಲಾವಣೆಗಳ ಆರಂಭವಾಗಿತ್ತು. ನಿತ್ಯ ಜೀವಕ್ಕೆ ನಡೆಸುವ ಸತ್ಯ * ಎಂಬ ಪುಸ್ತಕವನ್ನು ಅವನು ನನಗೆ ತೋರಿಸಿದನು, ಮತ್ತು ನಾನು ಅವನಿಗೆ ಅದೇ ಪುಸ್ತಕದ ಆರು ಪ್ರತಿಗಳನ್ನು ತೋರಿಸಿದೆ. ಆಸ್ಪತ್ರೆಯಲ್ಲಿದ್ದಾಗ ಬೇರೆ ಬೇರೆ ಸಾಕ್ಷಿರೋಗಿಗಳು ನನಗೆ ಈ ಪುಸ್ತಕವನ್ನು ನೀಡಿದ್ದರು. ಆದರೆ ನಾನು ಅವುಗಳನ್ನು ಓದಿರಲಿಲ್ಲ. ಅಂದು ಸಂಜೆ ಊಟಕ್ಕೆ ಮುಂಚೆ ಮತ್ತು ಊಟದ ನಂತರ ನಾನು ಅವನ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ. ಆ ಎಲ್ಲಾ ಪ್ರಶ್ನೆಗಳಿಗೆ ಅವನು ಬೈಬಲಿನಿಂದ ಉತ್ತರ ಕೊಟ್ಟನು. ನಮ್ಮ ಚರ್ಚೆಯು ಮುಂದಿನ ಮುಂಜಾನೆಯ ವರೆಗೆ ಮುಂದುವರಿಯಿತು. ಆ ಯುವಕನು ನಮ್ಮ ಮನೆಯಿಂದ ಹೋಗುವ ಮುಂಚೆ, ಸತ್ಯ ಪುಸ್ತಕದ ಮೂಲಕ ಒಂದು ಬೈಬಲ್‌ ಅಧ್ಯಯನವನ್ನು ನನಗೆ ನೀಡಿದನು. ಆ ಪುಸ್ತಕವನ್ನು ನಾವು ಮೂರು ತಿಂಗಳಿನಲ್ಲಿ ಅಧ್ಯಯನಮಾಡಿ ಮುಗಿಸಿದೆವು ಮತ್ತು “ಮಹಾ ಬಾಬೆಲ್‌ ಬಿದ್ದಿದೆ!” ದೇವರ ರಾಜ್ಯವು ಆಳುತ್ತದೆ! * (ಇಂಗ್ಲಿಷ್‌) ಎಂಬ ಪುಸ್ತಕವನ್ನು ಆರಂಭಿಸಿದೆವು. ನಂತರ ನಾನು ನನ್ನ ಜೀವನವನ್ನು ಯೆಹೋವ ದೇವರಿಗೆ ಸಮರ್ಪಿಸಿ, ದೀಕ್ಷಾಸ್ನಾನವನ್ನು ಪಡೆದುಕೊಂಡೆ.

ಪುನಃ ಒಮ್ಮೆ ಉಪಯುಕ್ತನೆಂಬ ಅನಿಸಿಕೆ

ಶಾರೀರಿಕ ದೃಷ್ಟಿಮಾಂದ್ಯದ ಪರಿಣಾಮವಾಗಿ, ಅಂದಿನ ತನಕ ನಾನು ಕಡೆಗಣಿಸಿದ್ದ ಬೈಬಲ್‌ ಸತ್ಯಗಳ ಕಡೆಗೆ ನನ್ನ ‘ಮನೋನೇತ್ರಗಳು’ ತೆರೆಯಲ್ಪಟ್ಟವು. (ಎಫೆಸ 1:18) ಯೆಹೋವನನ್ನೂ ಆತನ ಪ್ರೀತಿಪರ ಉದ್ದೇಶವನ್ನೂ ತಿಳಿದುಕೊಂಡದ್ದು ನನ್ನ ಇಡೀ ಜೀವನವನ್ನೇ ಬದಲಾಯಿಸಿತು. ಪುನಃ ಒಮ್ಮೆ ನಾನು ಉಪಯುಕ್ತನೆಂಬ ಅನಿಸಿಕೆ ಮತ್ತು ಸಂತೋಷ ನನಗಾಗುತ್ತಿದೆ. ನಾನು ಜನರಿಗೆ ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಸಹಾಯಮಾಡುತ್ತಿದ್ದೇನೆ. ಈ ವಿಷಯಗಳ ವ್ಯವಸ್ಥೆಯಲ್ಲಿ ಸ್ವಲ್ಪ ಹೆಚ್ಚು ವರುಷ ಬದುಕುವುದು ಹಾಗೂ ಬರಲಿರುವ ಹೊಸ ವ್ಯವಸ್ಥೆಯಲ್ಲಿ ಅನಂತಕಾಲ ಬದುಕುವುದು ಹೇಗೆ ಎಂಬುದನ್ನು ನಾನು ಅವರಿಗೆ ತೋರಿಸುತ್ತಿದ್ದೇನೆ.

ವೈದ್ಯಕೀಯ ಕ್ಷೇತ್ರದಲ್ಲಿ ಸದ್ಯೋಚಿತ ತಿಳಿವಳಿಕೆಯನ್ನು ನಾನು ಪಡೆದುಕೊಂಡಿದ್ದೇನೆ, ಮತ್ತು ರಕ್ತಸೇವನೆಯ ಅಪಾಯಗಳು, ಬದಲಿ ಚಿಕಿತ್ಸೆಗಳು, ರೋಗಿಯ ಹಕ್ಕುಗಳು, ಹಾಗೂ ಜೀವನೀತಿ ನಿಯಮಾವಳಿ (ಬಯೋಎಥಿಕ್ಸ್‌) ಮುಂತಾದ ವಿಷಯಗಳಲ್ಲಿ ನಾನು ಪರಿಶೋಧನೆಯನ್ನು ಮಾಡಿದ್ದೇನೆ. ವೈದಕೀಯ ಸೆಮಿನಾರ್‌ಗಳಲ್ಲಿ ಈ ವಿಷಯಗಳ ಕುರಿತು ಮಾತಾಡಲು ನಾನು ಆಮಂತ್ರಿಸಲ್ಪಟ್ಟಾಗ, ನನಗೆ ಅಲ್ಲಿನ ಸ್ಥಳೀಯ ವೈದ್ಯಕೀಯ ಸಂಘದೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳುವ ಸುಯೋಗಗಳು ಸಿಕ್ಕಿವೆ. 1994ರಲ್ಲಿ, ಬ್ರಸಿಲ್‌ನ ರಿಯೋ ಡೇ ಜನೈರೋದಲ್ಲಿ ನಡೆದ ರಕ್ತರಹಿತ ಶಸ್ತ್ರಚಿಕಿತ್ಸೆಯ ಕುರಿತಾದ ಮೊದಲನೆಯ ಕಾಂಗ್ರೆಸ್‌ಗೆ ಹಾಜರಾಗಿ, ರಕ್ತಸ್ರಾವವನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು ಭಾಷಣವನ್ನು ನೀಡಿದೆ. ಅಲ್ಲಿ ನೀಡಿದ ಮಾಹಿತಿಯ ಕೆಲವು ವಿಷಯಗಳು, ಹೀಮೊತೆರಪೀಯ ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಾಶನಮಾಡಲ್ಪಟ್ಟ “ಊನಾ ಪ್ರೋಪ್‌ವೆಸ್‌ಟಾ: ಎಸ್‌ಟ್ರಾಟೆಕ್ಯಾಸ್‌ ಪಾರಾ ಎಲ್‌ ಟ್ರಾಟಾಮ್ಯೆಂಟೋ ಡೆ ಲಾಸ್‌ ಏಮೋರಾಕ್ಯಾಸ್‌” (“ರಕ್ತಸ್ರಾವದ ಚಿಕಿತ್ಸೆಗಾಗಿ ಒಂದು ಕಾರ್ಯಯೋಜಿತ ಪ್ರಮೇಯ”) ಎಂಬ ನಾನು ಬರೆದ ಲೇಖನದಲ್ಲಿ ಕಂಡುಬರುತ್ತವೆ.

ಒತ್ತಡದ ಕೆಳಗೆ ಸಮಗ್ರತೆ

ಆರಂಭದಲ್ಲಿ, ರಕ್ತಪೂರಣಗಳ ಕುರಿತಾದ ನನ್ನ ಸಂಶಯಗಳು ಹೆಚ್ಚಾಗಿ ವೈಜ್ಞಾನಿಕ ಜ್ಞಾನದ ಮೇಲೆ ಅವಲಂಬಿಸಿದ್ದವು. ಹಾಗಿದ್ದರೂ, ಸ್ವತಃ ನಾನೇ ರೋಗಿಯಾಗಿ ಆಸ್ಪತ್ರೆಗೆ ಬಂದಾಗ, ರಕ್ತಪೂರಣಗಳನ್ನು ನಿರಾಕರಿಸುವುದು ಮತ್ತು ವೈದ್ಯರ ಬಲವಾದ ಒತ್ತಡದ ಎದುರಿನಲ್ಲೂ ನನ್ನ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಅಷ್ಟೊಂದು ಸುಲಭದ ಸಂಗತಿಯಲ್ಲ ಎಂದು ನನಗೆ ತಿಳಿಯಿತು. ಒಂದು ದೊಡ್ಡ ಹೃದಯಾಘಾತದ ನಂತರ, ನನ್ನ ನಿಲುವನ್ನು ಒಬ್ಬ ಶಸ್ತ್ರಚಿಕಿತ್ಸಕನಿಗೆ ನಾನು ಸುಮಾರು ಎರಡು ತಾಸುಗಳಿಗಿಂತಲೂ ಹೆಚ್ಚು ಸಮಯ ವಿವರಿಸಬೇಕಾಯಿತು. ಅವನು ನನ್ನ ಒಬ್ಬ ಅತ್ಯುತ್ತಮ ಸ್ನೇಹಿತನ ಮಗನಾಗಿದ್ದ ಕಾರಣ, ಒಂದುವೇಳೆ ರಕ್ತಪೂರಣವು ನನ್ನ ಜೀವವನ್ನು ಉಳಿಸಬಲ್ಲದು ಎಂದು ಅವನಿಗನಿಸುವಲ್ಲಿ ಅದನ್ನು ನೀಡದೆ ನನ್ನನ್ನು ಸಾಯುವಂತೆ ಬಿಡಲು ಅವನು ಸಿದ್ಧನಿಲ್ಲ ಎಂದು ಹೇಳಿದನು. ಈ ವೈದ್ಯನು ನನ್ನ ನಿಲುವನ್ನು ಒಪ್ಪದಿದ್ದರೂ ಅದನ್ನು ಅವನು ಅರ್ಥಮಾಡಿಕೊಳ್ಳಲು ಹಾಗೂ ಗೌರವಿಸಲು ಸಹಾಯಮಾಡು ಎಂದು ನಾನು ಯೆಹೋವನಲ್ಲಿ ಮೌನವಾಗಿ ಪ್ರಾರ್ಥಿಸಿದೆ. ಕೊನೆಗೆ, ಆ ವೈದ್ಯನು ನನ್ನ ಇಚ್ಛೆಯನ್ನು ಗೌರವಿಸುವುದಾಗಿ ಮಾತು ಕೊಟ್ಟನು.

ಇನ್ನೊಂದು ಸಂದರ್ಭದಲ್ಲಿ, ಜನನೇಂದ್ರಿಯಕ್ಕೆ ಸಂಬಂಧಪಟ್ಟ ಗ್ರಂಥಿಯಲ್ಲಿ ಬೆಳೆದ ಒಂದು ದೊಡ್ಡ ಗೆಡ್ಡೆಯನ್ನು ತೆಗೆಯಬೇಕಾಯಿತು. ಆಗ ರಕ್ತ ಸ್ರಾವವಾಯಿತು. ಪುನಃ ಒಮ್ಮೆ, ನಾನು ರಕ್ತಪೂರಣವನ್ನು ನಿರಾಕರಿಸಲು ಕಾರಣಗಳನ್ನು ವಿವರಿಸಬೇಕಾಯಿತು, ಮತ್ತು ನಾನು ಆಗಲೇ ಮೂರರಲ್ಲಿ ಎರಡಂಶದಷ್ಟು ರಕ್ತವನ್ನು ಕಳೆದುಕೊಂಡಿದ್ದರೂ ನನ್ನ ನಿಲುವನ್ನು ವೈದ್ಯಕೀಯ ಸಿಬ್ಬಂದಿಯು ಗೌರವಿಸಿತು.

ಮನೋಭಾವದಲ್ಲಿ ಬದಲಾವಣೆ

ಜೀವನೀತಿ ನಿಯಮಾವಳಿಯ ಅಂತಾರಾಷ್ಟ್ರೀಯ ಬಳಗದ ಸದಸ್ಯನೋಪಾದಿ, ರೋಗಿಗಳ ಹಕ್ಕುಗಳ ಕಡೆಗೆ ವೈದ್ಯಕೀಯ ಸಿಬ್ಬಂದಿಗಳ ಮತ್ತು ಕಾನೂನು ಅಧಿಕಾರಿಗಳ ಮನೋಭಾವದಲ್ಲಿ ಬದಲಾವಣೆಯನ್ನು ನೋಡುವ ಸಂತೃಪ್ತಿಯು ನನಗೆ ದೊರಕಿತು. ರೋಗಿಗಳ ಸಂರಕ್ಷಣೆಯ ಕಡೆಗಿನ ವೈದ್ಯರ ಅತಿರೇಕ ಮನೋಭಾವವು, ರೋಗಿಗಳಿಂದ ಮುಂಚಿತವಾಗಿಯೇ ತಿಳಿಸಲ್ಪಟ್ಟಿರುವ ವಿಚಾರಕ್ಕಾಗಿನ ಗೌರವದಿಂದ ಸ್ಥಾನಪಲ್ಲಟವಾಗಿದೆ. ಈಗ ಅವರು, ಚಿಕಿತ್ಸೆಯನ್ನು ಆಯ್ಕೆಮಾಡುವ ಅನುಮತಿಯನ್ನು ರೋಗಿಗಳಿಗೆ ನೀಡುತ್ತಾರೆ. ಯೆಹೋವನ ಸಾಕ್ಷಿಗಳನ್ನು ಈಗ, ವೈದ್ಯಕೀಯ ಗಮನಕ್ಕೆ ಅರ್ಹರಲ್ಲದ ಧರ್ಮಾಂಧರು ಎಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ ಅವರನ್ನು, ಒಳ್ಳೆಯ ಮಾಹಿತಿಯನ್ನು ಹೊಂದಿರುವ ರೋಗಿಗಳೆಂದೂ ಅವರ ಹಕ್ಕುಗಳನ್ನು ಗೌರವಿಸಬೇಕೆಂದೂ ಪರಿಗಣಿಸಲಾಗುತ್ತದೆ. ವೈದ್ಯಕೀಯ ಸೆಮಿನರಿಗಳಲ್ಲಿ ಮತ್ತು ಟೆಲಿವಿಷನ್‌ ಕಾರ್ಯಕ್ರಮಗಳಲ್ಲಿ, ಹೆಸರುವಾಸಿಯಾಗಿರುವ ಒಬ್ಬ ಪ್ರೊಫೆಸರರು ಹೇಳಿದ್ದು: “ಯೆಹೋವನ ಸಾಕ್ಷಿಗಳ ಪ್ರಯತ್ನಗಳಿಗಾಗಿ ಬಹಳ ಉಪಕಾರ, ಈಗ ನಮಗೆ ತಿಳಿದಿದೆ . . .” “ನಾವು ಸಾಕ್ಷಿಗಳಿಂದ ಕಲಿತುಕೊಂಡೆವು . . .” ಮತ್ತು, “ಪ್ರಗತಿಮಾಡಲು ಅವರು ನಮಗೆ ಕಲಿಸಿಕೊಟ್ಟರು.”

ಎಲ್ಲದಕ್ಕಿಂತಲೂ ಮಿಗಿಲಾಗಿ ಜೀವವು ಅತಿ ಪ್ರಾಮುಖ್ಯವಾಗಿದೆ, ಏಕೆಂದರೆ ಜೀವವಿಲ್ಲದಿದ್ದರೆ ಸ್ವಾತಂತ್ರ್ಯ, ವಿಮೋಚನೆ, ಮತ್ತು ಘನತೆ ಇದೆಲ್ಲವು ಅರ್ಥಹೀನವಾಗಿವೆ ಎಂದು ಹೇಳಲಾಗಿದೆ. ಆದರೆ ಈಗ ಹೆಚ್ಚಿನವರು ಒಂದು ಸರ್ವಶ್ರೇಷ್ಠ ಕಾನೂನು ಸಿದ್ಧಾಂತವನ್ನು ಸ್ವೀಕರಿಸಿದ್ದಾರೆ. ಅದೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ಹಕ್ಕುಗಳ ಒಡೆಯನಾಗಿದ್ದಾನೆ ಮತ್ತು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ತನ್ನ ಹಕ್ಕುಗಳಲ್ಲಿ ಯಾವುದನ್ನು ಪ್ರಧಾನವಾಗಿ ಪರಿಗಣಿಸಬೇಕು ಎಂಬುದನ್ನು ಕೇವಲ ಅವನು ಮಾತ್ರವೇ ನಿರ್ಧರಿಸಸಾಧ್ಯವಿದೆ ಎಂಬುದೇ. ಈ ರೀತಿಯಲ್ಲಿ, ಘನತೆ, ಆಯ್ಕೆಯ ಸ್ವಾತಂತ್ರ್ಯ, ಮತ್ತು ಧಾರ್ಮಿಕ ನಂಬಿಕೆಗಳಿಗೆ ಪ್ರಥಮ ಸ್ಥಾನವನ್ನು ನೀಡಲಾಗುತ್ತದೆ. ರೋಗಿಗೆ ವೈಯಕ್ತಿಕ ನಿರ್ಣಯಗಳನ್ನು ಮಾಡುವ ಹಕ್ಕನ್ನು ನೀಡಲಾಗಿದೆ. ಯೆಹೋವನ ಸಾಕ್ಷಿಗಳಿಂದ ವ್ಯವಸ್ಥಾಪಿಸಲ್ಪಟ್ಟಿರುವ ಹಾಸ್ಪಿಟಲ್‌ ಇನ್‌ಫರ್‌ಮೇಷನ್‌ ಸರ್ವಿಸಸ್‌ (ಏಚ್‌ಐಎಸ್‌), ಈ ಎಲ್ಲಾ ವಿಷಯಗಳಲ್ಲಿ ತಮ್ಮ ತಿಳಿವಳಿಕೆಯನ್ನು ಹೆಚ್ಚಿಸಲು ಅನೇಕ ವೈದ್ಯರಿಗೆ ಸಹಾಯಮಾಡಿದೆ.

ನನ್ನ ಕುಟುಂಬದ ಸದಸ್ಯರ ನಿರಂತರ ಬೆಂಬಲವು, ನಾನು ಯೆಹೋವನ ಸೇವೆಯಲ್ಲಿ ಇನ್ನೂ ಉಪಯುಕ್ತನಾಗಿರಲು ಮತ್ತು ಕ್ರೈಸ್ತ ಸಭೆಯಲ್ಲಿ ಒಬ್ಬ ಹಿರಿಯನಾಗಿಯೂ ಸೇವೆಸಲ್ಲಿಸಲು ಸಾಧ್ಯಮಾಡಿದೆ. ನಾನು ಹಿಂದೆ ತಿಳಿಸಿದಂತೆ, ನಾನು ಇನ್ನೂ ಯುವಕನಾಗಿದ್ದಾಗಲೇ ಯೆಹೋವನ ಕುರಿತು ತಿಳಿದುಕೊಳ್ಳಲು ಆಯ್ಕೆಮಾಡದಿದ್ದದಕ್ಕಾಗಿ ಬಹಳವಾಗಿ ದುಃಖಿಸುತ್ತೇನೆ. ಹಾಗಿದ್ದರೂ, ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳದ’ ಆ ದೇವರ ರಾಜ್ಯದ ಏರ್ಪಾಡಿನ ಕೆಳಗೆ ಜೀವಿಸುವ ಅದ್ಭುತಕರವಾದ ನಿರೀಕ್ಷೆಯ ಕಡೆಗೆ ನನ್ನ ಕಣ್ಣುಗಳನ್ನು ತೆರೆದದ್ದಕ್ಕಾಗಿ ನಾನು ಆತನಿಗೆ ಬಹಳ ಆಭಾರಿಯಾಗಿದ್ದೇನೆ.​—⁠ಯೆಶಾಯ 33:24. *

[ಪಾದಟಿಪ್ಪಣಿಗಳು]

^ ಪ್ಯಾರ. 24 ಯೆಹೋವನ ಸಾಕ್ಷಿಗಳ ಪ್ರಕಾಶನ.

^ ಪ್ಯಾರ. 24 ಯೆಹೋವನ ಸಾಕ್ಷಿಗಳ ಪ್ರಕಾಶನ.

^ ಪ್ಯಾರ. 34 ಈ ಲೇಖನವು ತಯಾರಿಸಲ್ಪಡುತ್ತಿದ್ದಾಗ, ಸಹೋದರ ಏಗನ್‌ ಹವ್‌ಸರ್‌ರವರು ನಿಧನರಾದರು. ಅವರು ನಂಬಿಗಸ್ತರಾಗಿ ಮೃತಪಟ್ಟರು, ಮತ್ತು ಅವರ ನಿರೀಕ್ಷೆಯು ನಿಶ್ಚಿತವಾಗಿದೆ ಎಂದು ನಾವು ಅವರೊಂದಿಗೆ ಹರ್ಷಿಸುತ್ತೇವೆ.

[ಪುಟ 24ರಲ್ಲಿರುವ ಚಿತ್ರ]

ನನ್ನ 30ರ ಪ್ರಾಯದಲ್ಲಿ, ಸ್ಯಾಂಟ ಲೂಸೀಆದಲ್ಲಿನ ಆಸ್ಪತ್ರೆಯಲ್ಲಿ ಕೆಲಸಮಾಡುವುದು

[ಪುಟ 26ರಲ್ಲಿರುವ ಚಿತ್ರ]

ಇಸವಿ 1995ರಲ್ಲಿ ನನ್ನ ಪತ್ನಿ ಬಿಆಟ್ರೀಸ್‌ಳೊಂದಿಗೆ