ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾದ್ರಿಗಳು ರಾಜಕೀಯದಲ್ಲಿ ಒಳಗೂಡಬೇಕೊ?

ಪಾದ್ರಿಗಳು ರಾಜಕೀಯದಲ್ಲಿ ಒಳಗೂಡಬೇಕೊ?

ಪಾದ್ರಿಗಳು ರಾಜಕೀಯದಲ್ಲಿ ಒಳಗೂಡಬೇಕೊ?

“ರಾಜಕೀಯದಲ್ಲಿ ಒಳಗೂಡುವ ಮೂಲಕ ಬಡವರಿಗೆ ಸಹಾಯಮಾಡಸಾಧ್ಯವಿದೆ ಎಂಬುದಾಗಿ ಕೆನಡದ ಆರ್ಚ್‌ಬಿಷಪರು ತೀರ್ಥಯಾತ್ರಿಕರಿಗೆ ಹೇಳಿದರು . . . ರಾಜಕೀಯ ವ್ಯವಸ್ಥೆಯು ದೇವರ ಚಿತ್ತಕ್ಕನುಗುಣವಾಗಿ ಇಲ್ಲವಾದರೂ, ‘ನಾವು ರಾಜಕೀಯದಲ್ಲಿ ಒಳಗೂಡುವ ಅಗತ್ಯವಿದೆ, ಏಕೆಂದರೆ ಆಗ ನಾವು ಬಡವರಿಗೆ ನ್ಯಾಯವನ್ನು ದೊರಕಿಸಿಕೊಡಬಲ್ಲೆವು.’”​—⁠ಕ್ಯಾಥಲಿಕ್‌ ನ್ಯೂಸ್‌.

ಹಿರಿಯ ಚರ್ಚ್‌ ಮುಖಂಡರು ರಾಜಕೀಯದಲ್ಲಿ ಒಳಗೂಡುವ ವಿಷಯವನ್ನು ಸಮರ್ಥಿಸಿ ಮಾತನಾಡುವ ವರದಿಗಳು ಹೊಸತೇನಲ್ಲ; ಇಲ್ಲವೆ, ರಾಜಕೀಯ ಸ್ಥಾನವನ್ನು ಹೊಂದಿರುವ ಧಾರ್ಮಿಕ ಮುಖಂಡರು ಕಾಣಸಿಗುವುದೂ ಅಪರೂಪದ ಸಂಗತಿಯೇನಲ್ಲ. ಕೆಲವರು ರಾಜಕೀಯ ಸುಧಾರಣೆಯನ್ನು ಮಾಡಲು ಪ್ರಯತ್ನಿಸಿದ್ದಾರೆ. ಇತರರು, ಜಾತೀಯ ಸಮಾನತೆ ಮತ್ತು ಗುಲಾಮಗಿರಿಯ ನಿರ್ಮೂಲನ ಮುಂತಾದ ಚಳುವಳಿಗಳಿಗಾಗಿ ಮೆಚ್ಚುಗೆಯನ್ನು ಗಳಿಸಿದ್ದಾರೆ ಹಾಗೂ ಜ್ಞಾಪಿಸಲ್ಪಡುತ್ತಾರೆ.

ಹಾಗಿದ್ದರೂ, ಚರ್ಚಿನ ಅನೇಕ ಸದಸ್ಯರಿಗೆ ತಮ್ಮ ಪಾದ್ರಿಗಳು ರಾಜಕೀಯ ವಿಷಯಗಳಲ್ಲಿ ಪಕ್ಷವಹಿಸುವಾಗ ಅಸಮಾಧಾನವಾಗುತ್ತದೆ. ರಾಜಕೀಯ ದೇವತಾಶಾಸ್ತ್ರದ ಕುರಿತಾದ ಕ್ರೈಸ್ತ ಶತಮಾನ (ಇಂಗ್ಲಿಷ್‌) ಎಂಬ ಲೇಖನವು ತಿಳಿಸುವುದು, “ರಾಜಕೀಯ ಚಟುವಟಿಕೆಗಳಲ್ಲಿ ತಮ್ಮ ಪಾದ್ರಿಗಳ ಒಳಗೂಡುವಿಕೆಯ ಕುರಿತು ಕೆಲವೊಮ್ಮೆ ಆಕ್ಷೇಪಿಸಿದವರು ಇವಾಂಜೆಲಿಕಲ್‌ ಚರ್ಚಿನ ಸದಸ್ಯರೇ.” ಚರ್ಚ್‌ ಅತಿ ಪವಿತ್ರವಾಗಿರುವ ಕಾರಣ ಅದು ರಾಜಕೀಯದಲ್ಲಿ ಒಳಗೂಡಬಾರದು ಎಂದು ಅನೇಕ ಧಾರ್ಮಿಕ ಜನರು ಭಾವಿಸುತ್ತಾರೆ.

ಇದು, ಒಂದು ಉತ್ತಮ ಲೋಕವನ್ನು ಬಯಸುವ ಎಲ್ಲಾ ಜನರಲ್ಲಿ ಕೆಲವು ಆಸಕ್ತಿಕರವಾದ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಕ್ರೈಸ್ತ ಧರ್ಮದ ಪಾದ್ರಿಗಳು ರಾಜಕೀಯ * ಸುಧಾರಣೆಯನ್ನು ತರಬಲ್ಲರೋ? ರಾಜಕೀಯದಲ್ಲಿ ಒಳಗೂಡುವ ಮೂಲಕ ಉತ್ತಮ ಸರಕಾರವನ್ನು ಮತ್ತು ಒಂದು ಉತ್ತಮ ಲೋಕವನ್ನು ತರುವುದು ದೇವರ ಚಿತ್ತವಾಗಿದೆಯೋ? ರಾಜಕೀಯವನ್ನು ಅನುಸರಿಸಲು ಒಂದು ಹೊಸ ವಿಧವನ್ನು ತೋರಿಸಿಕೊಡುವುದು ಕ್ರೈಸ್ತ ಧರ್ಮದ ಆದಿ ಉದ್ದೇಶವಾಗಿತ್ತೋ?

ಕ್ರಿಸ್ತನ ಹೆಸರಿನಲ್ಲಿ ರಾಜಕೀಯ ಆರಂಭಗೊಂಡ ವಿಧ

ಆದಿ ಚರ್ಚ್‌ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಇತಿಹಾಸಗಾರನಾದ ಹೆನ್ರಿ ಚ್ಯಾಡ್ವಿಕ್‌ ಹೇಳುವುದು, ಆದಿ ಕ್ರೈಸ್ತ ಸಭೆಯು “ಈ ಲೋಕದಲ್ಲಿ ಅಧಿಕಾರವನ್ನು ಗಿಟ್ಟಿಸಿಕೊಳ್ಳುವ ವಿಷಯದಲ್ಲಿ ಅನಾಸಕ್ತವಾಗಿತ್ತು” ಎಂಬುದು ಎಲ್ಲರಿಗೂ ಜ್ಞಾತವಾಗಿತ್ತು. ಅದು “ಅರಾಜಕೀಯ, ಕಲಹರಹಿತ, ಮತ್ತು ಶಾಂತಿಗೆ ಒತ್ತಾಸೆನೀಡುವ ಒಂದು ಸಮುದಾಯವಾಗಿತ್ತು.” ಕ್ರೈಸ್ತ ಧರ್ಮದ ಒಂದು ಇತಿಹಾಸ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುವುದು: “ಕ್ರೈಸ್ತರು ರಾಜಕೀಯದಲ್ಲಿ ಯಾವುದೇ ಸ್ಥಾನಮಾನವನ್ನು ಪಡೆದುಕೊಳ್ಳಬಾರದೆಂಬುದು ಕ್ರೈಸ್ತರಲ್ಲಿ ವ್ಯಾಪಕವಾಗಿದ್ದ ದೃಢನಿರ್ಣಯವಾಗಿತ್ತು. . . . ಮೂರನೇ ಶತಮಾನದ ಆರಂಭದಲ್ಲಿ ಪೌರ ನ್ಯಾಯಧೀಶನೊಬ್ಬನು ಚರ್ಚಿಗೆ ಸೇರಬೇಕಾದರೆ ತನ್ನ ಹುದ್ದೆಗೆ ರಾಜೀನಾಮೆ ನೀಡುವ ಷರತ್ತನ್ನು ಐತಿಹಾಸಿಕ ಕ್ರೈಸ್ತ ಪದ್ಧತಿಯು ಅವಶ್ಯಪಡಿಸಿತು ಎಂದು ಹಿಪೊಲೈಟಟಿಸ್‌ ತಿಳಿಸುತ್ತಾನೆ.” ಆದರೆ ಕ್ರಮೇಣ ಅಧಿಕಾರ ದಾಹಿಗಳಾದ ವ್ಯಕ್ತಿಗಳು ಸ್ವತಃ ದೊಡ್ಡ ದೊಡ್ಡ ಬಿರುದುಗಳನ್ನು ಇಟ್ಟುಕೊಂಡು ಅನೇಕ ಸಭೆಗಳಲ್ಲಿ ಮುಂದಾಳುತ್ವವನ್ನು ವಹಿಸಲು ಆರಂಭಿಸಿದರು. (ಅ. ಕೃತ್ಯಗಳು 20:​29, 30) ಕೆಲವರಾದರೋ ಧಾರ್ಮಿಕ ಮುಖಂಡರಾಗಿಯೂ ರಾಜಕಾರಣಿಗಳಾಗಿಯೂ ಸ್ಥಾನವನ್ನು ಪಡೆಯಲು ಬಯಸಿದರು. ರೋಮ್‌ ಸರಕಾರದಲ್ಲಿ ಹಠಾತ್ತಾಗಿ ಸಂಭವಿಸಿದ ಬದಲಾವಣೆಯು, ಅಂಥ ಧಾರ್ಮಿಕ ಮುಖಂಡರಿಗೆ ತಾವು ಬಯಸಿದ್ದನ್ನು ಕೈಗೂಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಟ್ಟಿತು.

ಸಾ.ಶ. 312ರಲ್ಲಿ, ಒಬ್ಬ ವಿಧರ್ಮಿ ರೋಮನ್‌ ಸಾಮ್ರಾಟನಾದ ಕಾನ್‌ಸ್ಟೆಂಟೀನ್‌ ನಾಮಮಾತ್ರದ ಕ್ರೈಸ್ತ ಧರ್ಮದ ಕಡೆಗೆ ಒಲವನ್ನು ತೋರಿಸತೊಡಗಿದನು. ಆಶ್ಚರ್ಯಕರವಾಗಿ, ಚರ್ಚಿನ ಬಿಷಪರು ಈ ವಿಧರ್ಮಿ ಸಾಮ್ರಾಟನು ತಮಗೆ ನೀಡಿದ ಸ್ಥಾನಮಾನಗಳಿಗಾಗಿ ಅವನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಸಿದ್ಧರಿದ್ದರು. “ಪ್ರಾಮುಖ್ಯವಾದ ರಾಜಕೀಯ ನಿರ್ಣಯಗಳಲ್ಲಿ ಚರ್ಚ್‌ ಹೆಚ್ಚೆಚ್ಚಾಗಿ ಒಳಗೂಡಿತು,” ಎಂಬುದಾಗಿ ಹೆನ್ರಿ ಚ್ಯಾಡ್ವಿಕ್‌ ಬರೆದರು. ರಾಜಕೀಯದಲ್ಲಿ ಒಳಗೂಡುವುದು ಚರ್ಚ್‌ ಮುಖಂಡರ ಮೇಲೆ ಯಾವ ಪ್ರಭಾವವನ್ನು ಬೀರಿತು?

ರಾಜಕೀಯವು ಪಾದ್ರಿಗಳನ್ನು ಪ್ರಭಾವಿಸಿದ ವಿಧ

ಚರ್ಚ್‌ ಮುಖಂಡರನ್ನು ರಾಜಕಾರಣಿಗಳಾಗಿ ದೇವರು ಉಪಯೋಗಿಸುವನು ಎಂಬ ವಿಚಾರವು, ಉನ್ನತ ಸ್ಥಾನದಲ್ಲಿದ್ದ ಐದನೇ ಶತಮಾನದ ಕ್ಯಾಥೊಲಿಕ್‌ ದೇವತಾಶಾಸ್ತ್ರಜ್ಞನಾದ ಅಗಸ್ಟಿನ್‌ನಿಂದ ಮುಖ್ಯವಾಗಿ ಪ್ರವರ್ಧಿಸಲಾಯಿತು. ರಾಷ್ಟ್ರಗಳ ಮೇಲೆ ಚರ್ಚ್‌ ಅಧಿಕಾರವನ್ನು ನಡೆಸುತ್ತಿರುವುದಾಗಿ ಮತ್ತು ಮಾನವಕುಲಕ್ಕೆ ಶಾಂತಿಯನ್ನು ತರುತ್ತಿರುವುದಾಗಿ ಅವನು ಮನಸ್ಸಿನಲ್ಲಿ ಚಿತ್ರಿಸಿಕೊಂಡನು. ಆದರೆ ಇತಿಹಾಸಗಾರನಾದ ಏಚ್‌. ಜಿ. ವೆಲ್ಸ್‌ ಬರೆದದ್ದು: “ದೈವಿಕ ಲೋಕ ಸರಕಾರವು ಸ್ಥಾಪನೆಯಾಗಲಿದೆ ಎಂಬ ವಿಚಾರವು ತಾನೇ ದೊಡ್ಡ ರೀತಿಯಲ್ಲಿ ಸೋಲನ್ನಪ್ಪಿತು ಎಂಬುದನ್ನು ಐದನೇ ಶತಮಾನದಿಂದ ಹದಿನೈದನೇ ಶತಮಾನದ ವರೆಗಿನ ಯೂರೋಪಿನ ಇತಿಹಾಸವು ತೋರಿಸುತ್ತದೆ.” ಕ್ರೈಸ್ತಪ್ರಪಂಚವು, ಲೋಕವ್ಯಾಪಕವಾಗಿ ಶಾಂತಿಯನ್ನು ತರುವುದಿರಲಿ ಬರೀ ಯೂರೋಪಿಗೆ ಸಹ ಶಾಂತಿಯನ್ನು ತರಶಕ್ತವಾಗಲಿಲ್ಲ. ಯಾವುದನ್ನು ಕ್ರೈಸ್ತ ಧರ್ಮ ಎಂದು ನಂಬಲಾಗಿತ್ತೋ ಅದರ ಮೇಲಣ ಭರವಸೆಯನ್ನು ಅನೇಕ ಜನರು ಕಳೆದುಕೊಂಡರು. ತಪ್ಪಾದದ್ದಾದರೂ ಎಲ್ಲಿ?

ಕ್ರೈಸ್ತ ಧರ್ಮವನ್ನು ಬೋಧಿಸುತ್ತೇವೆಂದು ಹೇಳಿಕೊಳ್ಳುವ ಅನೇಕರು ಒಳ್ಳೇ ಉದ್ದೇಶದಿಂದಲೇ ರಾಜಕೀಯದಲ್ಲಿ ಒಳಗೊಂಡರು, ಆದರೆ ನಂತರ ಅವರು ದುಷ್ಕೃತ್ಯಗಳಲ್ಲಿ ಭಾಗವಹಿಸಿದರು. ಬೈಬಲಿನ ಬೋಧಕನೂ ಭಾಷಾಂತರಕಾರನೂ ಆದ ಮಾರ್ಟಿನ್‌ ಲೂಥರ್‌, ಕ್ಯಾಥೊಲಿಕ್‌ ಚರ್ಚನ್ನು ಸುಧಾರಣೆ ಮಾಡುವ ಪ್ರಯತ್ನಗಳಿಗಾಗಿ ಪ್ರಖ್ಯಾತನಾಗಿದ್ದಾನೆ. ಹಾಗಿದ್ದರೂ, ಚರ್ಚ್‌ ಸಿದ್ಧಾಂತಗಳಿಗೆ ವಿರುದ್ಧವಾದ ಅವನ ಧೀರ ನಿಲುವಿನಿಂದಾಗಿ, ದಂಗೆಗಾಗಿ ರಾಜಕೀಯ ಉದ್ದೇಶಗಳಿದ್ದವರೊಂದಿಗೆ ಅವನು ಗುರುತಿಸಲ್ಪಟ್ಟನು. ರಾಜಕೀಯ ವಿಷಯಗಳಲ್ಲಿ ಲೂಥರನು ಸಹ ತನ್ನ ಅಭಿಪ್ರಾಯಗಳನ್ನು ಹೇಳಲಾರಂಭಿಸಿದಾಗ, ಅವನು ಅನೇಕ ಜನರ ಗೌರವವನ್ನು ಕಳೆದುಕೊಂಡನು. ಆರಂಭದಲ್ಲಿ ಅವನು, ದಬ್ಬಾಳಿಕೆ ನಡಿಸುವ ಕುಲೀನರ ವಿರುದ್ಧ ದಂಗೆಯೇಳುತ್ತಿದ್ದ ರೈತರನ್ನು ಬೆಂಬಲಿಸಿದನು. ಆದರೆ ನಂತರ ಆ ದಂಗೆಯು ಕ್ರೂರ ಹಿಂಸಾಕೃತ್ಯಗಳಿಗೆ ನಡಿಸಿದಾಗ, ದಂಗೆಯನ್ನು ಅಂತ್ಯಗೊಳಿಸುವಂತೆ ಅವನು ಕುಲೀನರನ್ನು ಉತ್ತೇಜಿಸಿದನು. ಸಾವಿರಾರು ರೈತರನ್ನು ಹತಿಸುವ ಮೂಲಕ ಕುಲೀನರು ದಂಗೆಯನ್ನು ಅಂತ್ಯಗೊಳಿಸಿದರು. ಈ ಕಾರಣದಿಂದ ರೈತರು ಅವನನ್ನು ಒಬ್ಬ ವಿಶ್ವಾಸಘಾತುಕನಾಗಿ ಪರಿಗಣಿಸಿದರು. ಅಷ್ಟುಮಾತ್ರವಲ್ಲದೆ, ಈ ಕುಲೀನರು ಕ್ಯಾಥೊಲಿಕ್‌ ಸಾಮ್ರಾಟನಿಗೆ ವಿರುದ್ಧವಾಗಿ ದಂಗೆಯೆದ್ದಾಗಲೂ ಅವರನ್ನು ಲೂಥರ್‌ ಬೆಂಬಲಿಸಿದನು. ವಾಸ್ತವದಲ್ಲಿ, ಪ್ರಾಟೆಸ್ಟಂಟರೆಂದು ಕರೆಯಲ್ಪಡುವ ಲೂಥರನ ಹಿಂಬಾಲಕರು ಆರಂಭದಿಂದಲೇ ರಾಜಕೀಯ ಚಳುವಳಿಯನ್ನು ರಚಿಸಿದ್ದರು. ಅಧಿಕಾರವು ಲೂಥರನ ಮೇಲೆ ಯಾವ ಪ್ರಭಾವವನ್ನು ಬೀರಿತು? ಅದು ಅವನನ್ನು ಭ್ರಷ್ಟಗೊಳಿಸಿತು. ಉದಾಹರಣೆಗೆ, ಆರಂಭದಲ್ಲಿ ಅವನು ತನ್ನ ಧಾರ್ಮಿಕ ನಂಬಿಕೆಗಳನ್ನು ಅಂಗೀಕರಿಸದ ಜನರನ್ನು ಬಲಾತ್ಕಾರದಿಂದ ಮನವೊಪ್ಪಿಸುವುದನ್ನು ವಿರೋಧಿಸಿದ್ದರೂ ತದನಂತರದಲ್ಲಿ ಶಿಶು ದೀಕ್ಷಾಸ್ನಾನವನ್ನು ವಿರೋಧಿಸಿದ ಜನರನ್ನು ಬೆಂಕಿಯಿಂದ ಸುಟ್ಟುಬಿಡುವಂತೆ ತನ್ನ ರಾಜಕೀಯ ಸ್ನೇಹಿತರನ್ನು ಹುರಿದುಂಬಿಸಿದನು.

ಜಾನ್‌ ಕ್ಯಾಲ್ವಿನ್‌ ಜಿನೀವದಲ್ಲಿ ಒಬ್ಬ ಹೆಸರುವಾಸಿ ಚರ್ಚ್‌ ಮುಖಂಡನಾಗಿದ್ದನು, ಆದರೆ ಕ್ರಮೇಣ ಅವನಿಗೆ ಬಹಳಷ್ಟು ರಾಜಕೀಯ ಬೆಂಬಲವು ದೊರಕಲಾರಂಭಿಸಿತು. ತ್ರಯೈಕ್ಯಕ್ಕೆ ಶಾಸ್ತ್ರೀಯವಾಗಿ ಯಾವ ಆಧಾರವೂ ಇಲ್ಲ ಎಂಬುದಾಗಿ ಮಿಕಾಯೆಲ್‌ ಸರ್ವೀಟಸ್‌ ವಿವರಿಸಿದಾಗ, ಅವನನ್ನು ಕೊಲ್ಲಿಸಲು ಕ್ಯಾಲ್ವಿನ್‌ ತನಗಿದ್ದ ರಾಜಕೀಯ ವರ್ಚಸ್ಸನ್ನು ಉಪಯೋಗಿಸಿದನು. ಸರ್ವೀಟಸ್‌ ಸುಡುಗಂಬದಲ್ಲಿ ಸುಡಲ್ಪಟ್ಟನು. ಯೇಸುವಿನ ಬೋಧನೆಗಳಿಗೆ ಎಷ್ಟು ಗಂಭೀರವಾದ ತದ್ವಿರುದ್ಧ ಸಂಗತಿ ಇದಾಗಿತ್ತು!

“ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂಬುದಾಗಿ ಬೈಬಲ್‌ 1 ಯೋಹಾನ 5:19ರಲ್ಲಿ ಹೇಳಿದ ಮಾತುಗಳನ್ನು ಬಹುಶಃ ಈ ವ್ಯಕ್ತಿಗಳು ಮರೆತಿದ್ದರು. ಅವರ ದಿನಗಳಲ್ಲಿದ್ದ ರಾಜಕೀಯವನ್ನು ಸುಧಾರಿಸಬೇಕೆಂಬ ನಿಜವಾದ ಬಯಕೆ ಅವರಿಗಿತ್ತೋ, ಅಥವಾ ಅಧಿಕಾರದ ಪ್ರತೀಕ್ಷೆ ಹಾಗೂ ಉನ್ನತ ಪದವಿಯಲ್ಲಿರುವವರ ಸ್ನೇಹವನ್ನು ಗಳಿಸುವ ಆಕಾಂಕ್ಷೆ ಅವರನ್ನು ರಾಜಕೀಯದ ಕಡೆಗೆ ಆಕರ್ಷಿಸಿತೋ? ಏನೇ ಆಗಿರಲಿ, “ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ” ಎಂಬ ಯೇಸುವಿನ ಶಿಷ್ಯನಾದ ಯಾಕೋಬನ ಪ್ರೇರಿತ ಮಾತುಗಳನ್ನು ಅವರು ಜ್ಞಾಪಕದಲ್ಲಿಟ್ಟುಕೊಳ್ಳಬೇಕಿತ್ತು. (ಯಾಕೋಬ 4:4) “ನಾನು ಲೋಕದವನಲ್ಲದೆ [“ಲೋಕದ ಭಾಗವಾಗಿರದೆ,” NW] ಇರುವ ಪ್ರಕಾರ ಇವರೂ ಲೋಕದವರಲ್ಲ,” ಎಂಬುದಾಗಿ ಯೇಸು ತನ್ನ ಹಿಂಬಾಲಕರ ಕುರಿತು ಹೇಳಿದ ಮಾತು ಯಾಕೋಬನಿಗೆ ತಿಳಿದಿತ್ತು.​—⁠ಯೋಹಾನ 17:14.

ಅನೇಕರಾದರೋ, ಕ್ರೈಸ್ತರು ಲೋಕದ ಕೆಟ್ಟತನದ ಭಾಗವಾಗಿರಬಾರದು ಎಂಬುದನ್ನು ಅಂಗೀಕರಿಸಿದರೂ, ರಾಜಕೀಯವಾಗಿ ತಟಸ್ಥವಾಗಿದ್ದು ನಿಜವಾಗಿಯೂ ‘ಲೋಕದ ಭಾಗವಾಗಿರದೆ’ ಇರುವ ವಿಷಯವನ್ನು ವಿರೋಧಿಸುತ್ತಾರೆ. ಈ ರೀತಿಯಲ್ಲಿ ತಟಸ್ಥರಾಗಿರುವುದು ಇತರರಿಗೆ ಕ್ರಿಯಾಶೀಲವಾಗಿ ಪ್ರೀತಿಯನ್ನು ತೋರಿಸುವುದರಿಂದ ಕ್ರೈಸ್ತರನ್ನು ತಡೆಯುತ್ತದೆ ಎಂದು ಅವರು ವಾದಿಸುತ್ತಾರೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಚರ್ಚ್‌ ಮುಖಂಡರು ಕ್ರಿಯೆಗೈಯಬೇಕು ಎಂಬುದು ಅವರು ಅಭಿಪ್ರಾಯ. ಆದರೆ ಯೇಸು ಕಲಿಸಿಕೊಟ್ಟ ತಟಸ್ಥ ನಿಲುವು, ಇತರರಿಗೆ ಕ್ರಿಯಾಶೀಲ ಚಿಂತನೆಯನ್ನು ತೋರಿಸುವುದಕ್ಕೆ ವಿರುದ್ಧವಾಗಿದೆಯೋ? ಕ್ರೈಸ್ತನೊಬ್ಬನು ವಿಭಜಿಸುವಂಥ ರಾಜಕೀಯ ವಿಷಯಗಳಿಂದ ಪ್ರತ್ಯೇಕವಾಗಿದ್ದು, ಅದೇ ಸಮಯದಲ್ಲಿ ಇತರರಿಗೆ ಪ್ರಾಯೋಗಿಕ ಸಹಾಯವನ್ನು ನೀಡಶಕ್ತನೋ? ಈ ಪ್ರಶ್ನೆಗಳನ್ನು ಮುಂದಿನ ಲೇಖನವು ವಿಶ್ಲೇಷಿಸುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 5 ರಾಜಕೀಯವನ್ನು, ಅಧಿಕಾರ ಚಲಾಯಿಸಲು ಅಥವಾ ಸರ್ಕಾರ ನಡೆಸಲು ಸಂಬಂಧಿಸಿದ ಚಟುವಟಿಕೆಗಳು, ವಿಶೇಷವಾಗಿ ಅಧಿಕಾರವಿರುವ ಇಲ್ಲವೆ ಅಧಿಕಾರವನ್ನು ನಿರೀಕ್ಷಿಸುವ ವ್ಯಕ್ತಿಗಳ ಅಥವಾ ಪಕ್ಷಗಳ ಮಧ್ಯೆ ನಡೆಯುವ ಚರ್ಚೆ ಇಲ್ಲವೆ ಹೋರಾಟ ಎಂಬುದಾಗಿ ಅರ್ಥನಿರೂಪಣೆ ಮಾಡಲಾಗಿದೆ.

[ಪುಟ 4ರಲ್ಲಿರುವ ಚಿತ್ರ]

ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳುವ ಸಲುವಾಗಿ ಚರ್ಚ್‌ ಮುಖಂಡರು ಸಾಮ್ರಾಟನಾದ ಕಾನ್‌ಸ್ಟೆಂಟೀನ್‌ನಂಥ ಪ್ರಭುಗಳಿಗೆ ಅಧೀನರಾದರು

[ಕೃಪೆ]

Musée du Louvre, Paris

[ಪುಟ 5ರಲ್ಲಿರುವ ಚಿತ್ರಗಳು]

ಹೆಸರುವಾಸಿಯಾಗಿದ್ದ ಧಾರ್ಮಿಕ ಮುಖಂಡರು ರಾಜಕೀಯದಲ್ಲಿ ಏಕೆ ಒಳಗೊಂಡರು?

ಅಗಸ್ಟಿನ್‌

ಲೂಥರ್‌

ಕ್ಯಾಲ್ವಿನ್‌

[ಕೃಪೆ]

ಅಗಸ್ಟಿನ್‌: ICCD Photo; ಕ್ಯಾಲ್ವಿನ್‌: Portrait by Holbein, from the book The History of Protestantism (Vol. II)