ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವಜನರೇ, ನೀವು ಭವಿಷ್ಯತ್ತಿಗಾಗಿ ಕಟ್ಟುತ್ತಿದ್ದೀರೊ?

ಯುವಜನರೇ, ನೀವು ಭವಿಷ್ಯತ್ತಿಗಾಗಿ ಕಟ್ಟುತ್ತಿದ್ದೀರೊ?

ಯುವಜನರೇ, ನೀವು ಭವಿಷ್ಯತ್ತಿಗಾಗಿ ಕಟ್ಟುತ್ತಿದ್ದೀರೊ?

“ನಿಮಗೆ ಒಂದು ಭವಿಷ್ಯತ್ತನ್ನು ಮತ್ತು ಒಂದು ನಿರೀಕ್ಷೆಯನ್ನು ಕೊಡಲು, ನಾನು ನಿಮಗಾಗಿ ಯೋಚಿಸುತ್ತಿರುವ ಆಲೋಚನೆಗಳನ್ನು ನಾನೇ ಚೆನ್ನಾಗಿ ಬಲ್ಲೆನು. ಅವು ಶಾಂತಿಯ ಆಲೋಚನೆಗಳೇ, ವಿಪತ್ತಿನವುಗಳಲ್ಲ.”​—⁠ಯೆರೆಮೀಯ 29:​11, Nw.

ವಯಸ್ಕರಲ್ಲಿ ಹೆಚ್ಚಿನವರು ಯೌವನವನ್ನು ಜೀವನದ ಅದ್ಭುತಕರವಾದ ಕಾಲವೆಂದೆಣಿಸುತ್ತಾರೆ. ತಮ್ಮ ಯೌವನದಲ್ಲಿ ತಮಗಿದ್ದ ಶಕ್ತಿ ಮತ್ತು ಜೀವನೋತ್ಸಾಹವನ್ನು ಅವರು ನೆನಪಿಸಿಕೊಳ್ಳುತ್ತಾರೆ. ತಮಗೆ ತೀರ ಕಡಿಮೆ ಜವಾಬ್ದಾರಿಗಳಿದ್ದ, ಬಹಳಷ್ಟು ನಕ್ಕುನಲಿದಂಥ, ಮತ್ತು ತಮ್ಮ ಮುಂದೆ ಸದವಕಾಶಗಳ ಇಡೀ ಜೀವನಮಾನವೇ ಇದ್ದ ಆ ಸಮಯವನ್ನು ಅವರು ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತಾರೆ.

2 ಆದರೆ ಯುವಪ್ರಾಯದವರಾದ ನಿಮಗೆ ಪ್ರಾಯಶಃ ಭಿನ್ನವಾದ ನೋಟವಿದೆ. ಯೌವನದಲ್ಲಾಗುವ ಭಾವನಾತ್ಮಕ ಮತ್ತು ಶಾರೀರಿಕ ಬದಲಾವಣೆಗಳನ್ನು ನಿಭಾಯಿಸುವುದರಲ್ಲಿ ನಿಮಗೆ ಸಮಸ್ಯೆಗಳಿರಬಹುದು. ಶಾಲೆಯಲ್ಲಿ ನೀವು ಸಮಾನಸ್ಥರಿಂದ ಭಾರೀ ಒತ್ತಡವನ್ನು ಎದುರಿಸುತ್ತಿರಬಹುದು. ಮಾದಕದ್ರವ್ಯದ ಹಾಗೂ ಮದ್ಯದ ಅಪಪ್ರಯೋಗ ಮತ್ತು ಅನೈತಿಕತೆಯ ಒತ್ತಡವನ್ನು ತಡೆಯಲು ನೀವು ದೃಢಸಂಕಲ್ಪದ ಪ್ರಯತ್ನವನ್ನು ಮಾಡಬೇಕಾಗುತ್ತಿರಬೇಕು. ನಿಮ್ಮಲ್ಲಿ ಅನೇಕರು ತಾಟಸ್ಥ್ಯದ ವಿವಾದಾಂಶವನ್ನು ಇಲ್ಲವೆ ನಿಮ್ಮ ನಂಬಿಕೆಗೆ ಸಂಬಂಧಿಸಿದ ಇನ್ನಿತರ ವಿವಾದಾಂಶಗಳನ್ನು ಎದುರಿಸುತ್ತಿರಬಹುದು. ಹೌದು, ಯೌವನವು ಕಷ್ಟಕರವಾದ ಸಮಯವಾಗಿರಬಲ್ಲದು. ಆದರೂ, ಅದು ಸದವಕಾಶಗಳ ಸಮಯ ಆಗಿದೆ. ಈಗ ಪ್ರಶ್ನೆಯೇನೆಂದರೆ, ಈ ಅವಕಾಶಗಳನ್ನು ನೀವು ಹೇಗೆ ಸದುಪಯೋಗಿಸುವಿರಿ?

ನಿಮ್ಮ ಯೌವನದಲ್ಲಿ ಸಂತೋಷಿಸಿರಿ

3 ಯೌವನದ ದಿನಗಳ ಬಾಳಿಕೆ ಕೊಂಚವೇ ಎಂದು ವಯಸ್ಕರು ನಿಮಗೆ ಹೇಳುವರು, ಮತ್ತು ಇದು ಸತ್ಯ ಸಂಗತಿಯಾಗಿದೆ. ಕೇವಲ ಕೆಲವೇ ವರುಷಗಳಲ್ಲಿ ನಿಮ್ಮ ಯೌವನ ದಾಟಿ ಹೋಗುವುದು. ಆದುದರಿಂದ ಅದು ನಿಮಗಿರುವಾಗಲೇ ಅದರಲ್ಲಿ ಸಂತೋಷಿಸಿರಿ! ರಾಜ ಸೊಲೊಮೋನನ ಬುದ್ಧಿವಾದವು ಇದೇ ಆಗಿತ್ತು. ಅವನು ಬರೆದುದು: “ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ; ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ.” ಆದರೂ, ಸೊಲೊಮೋನನು ಯುವಜನರನ್ನು ಎಚ್ಚರಿಸಿದ್ದು: “ನಿನ್ನ ಹೃದಯದಿಂದ ಕರಕರೆಯನ್ನೂ ದೇಹದಿಂದ ಶ್ರಮೆಯನ್ನೂ [“ಆಪತ್ತನ್ನೂ,” NW] ತೊಲಗಿಸು.” ಮುಂದಕ್ಕೆ ಅವನಂದದ್ದು: “ಬಾಲ್ಯವೂ ಪ್ರಾಯವೂ ವ್ಯರ್ಥವಷ್ಟೆ.”​—⁠ಪ್ರಸಂಗಿ 11:9, 10.

4 ಸೊಲೊಮೋನನು ಏನನ್ನು ಅರ್ಥೈಸಿದ್ದನು ಎಂಬುದನ್ನು ನೀವು ಗ್ರಹಿಸಿದಿರೋ? ಇದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಒಬ್ಬ ಯುವಕನಿಗೆ ಭಾರೀ ಮೌಲ್ಯದ ಕೊಡುಗೆಯೊಂದು ಸಿಗುತ್ತದೆ ಎಂದೆಣಿಸಿ. ಬಹುಶಃ ದೊಡ್ಡ ಮೊತ್ತದ ಹಣವನ್ನು ಪಿತ್ರಾರ್ಜಿತವಾಗಿ ಪಡೆಯುತ್ತಾನೆ. ಅದನ್ನು ಅವನು ಏನು ಮಾಡುವನು? ಯೇಸುವಿನ ಸಾಮ್ಯವೊಂದರಲ್ಲಿನ ಪೋಲಿಹೋದ ಮಗನಂತೆಯೇ, ಅವನು ಆ ಹಣವನ್ನೆಲ್ಲಾ ತನ್ನ ಮೋಜಿಗಾಗಿ ಪೋಲುಮಾಡಸಾಧ್ಯವಿದೆ. (ಲೂಕ 15:​11-23) ಆದರೆ ಹಣ ಖಾಲಿಯಾದಾಗ ಏನಾಗುವುದು? ಆಗ ಅವನು ತನ್ನ ಬೇಜವಾಬ್ದಾರಿತನಕ್ಕಾಗಿ ಖಂಡಿತವಾಗಿಯೂ ವಿಷಾದಪಡುವನು! ಇದಕ್ಕೆ ಬದಲಾಗಿ, ಅವನದನ್ನು ತನ್ನ ಭವಿಷ್ಯತ್ತಿಗಾಗಿ ಸಿದ್ಧತೆಯಲ್ಲಿ ಉಪಯೋಗಿಸಿ, ಪ್ರಾಯಶಃ ಅದರಲ್ಲಿ ಹೆಚ್ಚಿನದ್ದನ್ನು ಬಂಡವಾಳ ಹೂಡುತ್ತಾನೆಂದು ನೆನಸಿರಿ. ಕ್ರಮೇಣ, ಅವನು ಅದರಿಂದ ಪ್ರಯೋಜನ ಪಡೆಯುತ್ತಿರುವಾಗ, ತನ್ನ ಯೌವನದಲ್ಲಿ ಆ ಎಲ್ಲಾ ಹಣವನ್ನು ತನ್ನ ಮೋಜಿಗಾಗಿ ಪೋಲುಮಾಡದೆ ಇದ್ದದ್ದಕ್ಕಾಗಿ ವಿಷಾದಿಸುವನೊ? ಖಂಡಿತವಾಗಿಯೂ ಇಲ್ಲ!

5 ನಿಮ್ಮ ಯೌವನದ ವರುಷಗಳನ್ನು ದೇವರು ಕೊಟ್ಟಿರುವ ಒಂದು ಕೊಡುಗೆಯೆಂದೆಣಿಸಿರಿ. ಮತ್ತು ನಿಜವಾಗಿಯೂ ಅವು ದೇವರ ಕೊಡುಗೆಯೇ ಆಗಿವೆ. ನೀವು ಅವನ್ನು ಹೇಗೆ ಉಪಯೋಗಿಸುವಿರಿ? ನೀವು ನಿಮ್ಮ ಶಕ್ತಿ ಮತ್ತು ಜೀವನೋತ್ಸಾಹವನ್ನೆಲ್ಲ ಆತ್ಮತೃಪ್ತಿಯಲ್ಲಿಯೂ ನಿರಂತರ ಮೋಜುವಿನೋದಗಳಲ್ಲಿಯೂ ಭವಿಷ್ಯತ್ತಿನ ಕುರಿತು ಸ್ವಲ್ಪವೂ ಚಿಂತಿಸದೆ ವ್ಯರ್ಥಮಾಡಬಲ್ಲಿರಿ. ಆದರೆ ನೀವು ಹಾಗೆ ಮಾಡುವಲ್ಲಿ, ನಿಮ್ಮ “ಬಾಲ್ಯವೂ ಪ್ರಾಯವೂ ವ್ಯರ್ಥ”ವಾಗಿ ಪರಿಣಮಿಸುವುದಂತೂ ಖಂಡಿತ. ಅದಕ್ಕೆ ಬದಲಾಗಿ, ನಿಮ್ಮ ಯೌವನವನ್ನು ಭವಿಷ್ಯತ್ತಿಗಾಗಿ ಸಿದ್ಧಮಾಡಲು ಉಪಯೋಗಿಸುವುದು ಅದೆಷ್ಟು ಉತ್ತಮ!

6 ನಿಮ್ಮ ಯೌವನವನ್ನು ವಿವೇಕಪೂರ್ಣವಾಗಿ ಉಪಯೋಗಿಸಲು ಸಹಾಯಮಾಡಬಲ್ಲ ಒಂದು ಮೂಲತತ್ತ್ವವನ್ನು ಸೊಲೊಮೋನನು ತಿಳಿಸಿದನು. ಅವನು ಹೇಳಿದ್ದು: “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.” (ಪ್ರಸಂಗಿ 12:1) ಅಂದರೆ, ಯೆಹೋವನಿಗೆ ಕಿವಿಗೊಡುವುದು ಮತ್ತು ಆತನ ಚಿತ್ತವನ್ನು ಮಾಡುವುದೇ ಯಶಸ್ಸಿಗೆ ಕೀಲಿ ಕೈ. ಯೆಹೋವನು ಪುರಾತನಕಾಲದ ಇಸ್ರಾಯೇಲ್ಯರಿಗಾಗಿ ಏನು ಮಾಡಲು ಅಪೇಕ್ಷಿಸುತ್ತಾನೆಂದು ತಿಳಿಸುತ್ತ ಹೇಳಿದ್ದು: “ನಿಮಗೆ ಒಂದು ಭವಿಷ್ಯತ್ತನ್ನು ಮತ್ತು ಒಂದು ನಿರೀಕ್ಷೆಯನ್ನು ಕೊಡಲು, ನಾನು ನಿಮಗಾಗಿ ಯೋಚಿಸುತ್ತಿರುವ ಆಲೋಚನೆಗಳನ್ನು ನಾನೇ ಚೆನ್ನಾಗಿ ಬಲ್ಲೆನು. ಅವು ಶಾಂತಿಯ ಆಲೋಚನೆಗಳೇ, ವಿಪತ್ತಿನವುಗಳಲ್ಲ.” (ಯೆರೆಮೀಯ 29:​11, NW) ಯೆಹೋವನು ನಿಮಗೆ “ಒಂದು ಭವಿಷ್ಯತ್ತನ್ನು ಮತ್ತು ಒಂದು ನಿರೀಕ್ಷೆಯನ್ನು ಕೊಡಲು” ಸಹ ಇಷ್ಟಪಡುತ್ತಾನೆ. ನೀವು ಆತನನ್ನು ನಿಮ್ಮ ಕ್ರಿಯೆ, ಯೋಚನೆ, ಮತ್ತು ನಿರ್ಣಯಗಳಲ್ಲಿ ಸ್ಮರಿಸಿಕೊಳ್ಳುವುದಾದರೆ, ಆ ಭವಿಷ್ಯತ್ತು ಮತ್ತು ಆ ನಿರೀಕ್ಷೆ ಸಿದ್ಧಿಸುವುದು.​—⁠ಪ್ರಕಟನೆ 7:16, 17; 21:3, 4.

“ದೇವರ ಸಮೀಪಕ್ಕೆ ಬನ್ನಿರಿ”

7 “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಹೇಳಿದಾಗ ಯಾಕೋಬನು ನಾವು ಯೆಹೋವನನ್ನು ಜ್ಞಾಪಿಸಿಕೊಳ್ಳುವಂತೆ ಪ್ರೋತ್ಸಾಹಿಸಿದನು. (ಯಾಕೋಬ 4:8) ಯೆಹೋವನು ಸೃಷ್ಟಿಕರ್ತನೂ, ಸ್ವರ್ಗೀಯ ಪರಮಪ್ರಭುವೂ, ಸಕಲ ಆರಾಧನೆ ಮತ್ತು ಸ್ತುತಿಗೆ ಅರ್ಹನೂ ಆಗಿದ್ದಾನೆ. (ಪ್ರಕಟನೆ 4:11) ಹೀಗಿದ್ದರೂ, ನಾವು ಆತನ ಸಮೀಪಕ್ಕೆ ಹೋಗುವಲ್ಲಿ ಆತನು ನಮ್ಮ ಸಮೀಪಕ್ಕೆ ಬರುವನು. ಇಂತಹ ಪ್ರೀತಿಪರ ಕಾಳಜಿಯು ನಿಮ್ಮ ಹೃದಯದಲ್ಲಿ ಬೆಚ್ಚಗಿನಭಾವವನ್ನು ಹುಟ್ಟಿಸುವುದಿಲ್ಲವೆ?​—⁠ಮತ್ತಾಯ 22:37.

8 ನಾವು ಅನೇಕ ವಿಧಗಳಲ್ಲಿ ಯೆಹೋವನ ಸಮೀಪಕ್ಕೆ ಬರುತ್ತೇವೆ. ಉದಾಹರಣೆಗೆ, “ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿಮಾಡಿರಿ” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. (ಕೊಲೊಸ್ಸೆ 4:2) ಅಂದರೆ, ಪ್ರಾರ್ಥನೆಯ ರೂಢಿಯನ್ನು ಬೆಳೆಸಿಕೊಳ್ಳಿರಿ ಎಂದರ್ಥ. ನಿಮ್ಮ ತಂದೆ ಅಥವಾ ಸಭೆಯಲ್ಲಿರುವ ಜೊತೆ ಕ್ರೈಸ್ತನೊಬ್ಬನು ನಿಮ್ಮನ್ನು ಪ್ರಾರ್ಥನೆಯಲ್ಲಿ ಪ್ರತಿನಿಧೀಕರಿಸಿದ ಬಳಿಕ ಕೇವಲ ಆಮೆನ್‌ ಎಂದು ಹೇಳುವುದರಲ್ಲಿ ತೃಪ್ತರಾಗಬೇಡಿರಿ. ಸ್ವತಃ ನೀವು ಎಂದಾದರೂ ನಿಮ್ಮ ಹೃದಯಬಿಚ್ಚಿ, ಯೆಹೋವನಿಗೆ ನಿಮ್ಮ ಯೋಚನೆ, ನಿಮ್ಮ ಭಯ, ಮತ್ತು ನೀವು ಎದುರಿಸುವ ಸಮಸ್ಯೆಗಳ ಕುರಿತು ಹೇಳಿದ್ದುಂಟೊ? ನೀವು ಯಾವನೇ ಮನುಷ್ಯನೊಂದಿಗೆ ಚರ್ಚಿಸಲು ಮುಜುಗರಪಡುವ ವಿಷಯಗಳನ್ನು ನೀವೆಂದಾದರೂ ಆತನಿಗೆ ಹೇಳಿಕೊಂಡದ್ದುಂಟೊ? ಪ್ರಾಮಾಣಿಕವೂ ಹೃತ್ಪೂರ್ವಕವೂ ಆದ ಪ್ರಾರ್ಥನೆಗಳು ನಮಗೆ ಶಾಂತಿಯನ್ನು ಕೊಡುತ್ತವೆ. (ಫಿಲಿಪ್ಪಿ 4:​6, 7) ಅವು, ಯೆಹೋವನ ಸಮೀಪಕ್ಕೆ ಬರುವಂತೆ ಮತ್ತು ಆತನು ನಮ್ಮ ಸಮೀಪಕ್ಕೆ ಬರುತ್ತಿದ್ದಾನೆಂಬದನ್ನು ತಿಳಿದುಕೊಳ್ಳುವಂತೆ ನಮಗೆ ಸಹಾಯಮಾಡುತ್ತವೆ.

9 ದೇವರ ಸಮೀಪಕ್ಕೆ ಬರುವ ಇನ್ನೊಂದು ವಿಧವನ್ನು ನಾವು ಈ ಪ್ರೇರಿತ ಮಾತುಗಳಲ್ಲಿ ನೋಡುತ್ತೇವೆ: “ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿ [“ವಿವೇಕಿ,” NW]ಯಾಗುವಿ.” (ಜ್ಞಾನೋಕ್ತಿ 19:20) ಹೌದು, ನೀವು ಯೆಹೋವನಿಗೆ ಕಿವಿಗೊಟ್ಟು ಆತನಿಗೆ ವಿಧೇಯರಾಗುತ್ತಿರುವಲ್ಲಿ ಭವಿಷ್ಯತ್ತಿಗಾಗಿ ಕಟ್ಟುತ್ತಿದ್ದೀರಿ. ನೀವು ಯೆಹೋವನಿಗೆ ಕಿವಿಗೊಡುತ್ತಿದ್ದೀರೆಂಬುದನ್ನು ಹೇಗೆ ಪ್ರದರ್ಶಿಸಬಲ್ಲಿರಿ? ನೀವು ಕ್ರಮವಾಗಿ ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಭಾಗಗಳನ್ನು ಆಲಿಸುತ್ತೀರಿ ಎಂಬುದು ನಿಶ್ಚಯ. ಅಲ್ಲದೆ ಕುಟುಂಬ ಬೈಬಲ್‌ ಅಧ್ಯಯನದಲ್ಲಿ ಹಾಜರಿರುವ ಮೂಲಕ ನೀವು “ತಂದೆತಾಯಿಗಳನ್ನು” ಸನ್ಮಾನಿಸುತ್ತೀರಿ ನಿಜ. (ಎಫೆಸ 6:1, 2; ಇಬ್ರಿಯ 10:24, 25) ಇದು ಅಭಿನಂದನಾರ್ಹ. ಆದರೆ ಇದರೊಂದಿಗೆ, ಕೂಟಗಳಿಗಾಗಿ ತಯಾರಿಸಲು, ಬೈಬಲನ್ನು ಕ್ರಮವಾಗಿ ಓದಲು ಮತ್ತು ಸಂಶೋಧನೆ ಮಾಡಲು ನೀವು ‘ಸಮಯವನ್ನು ಖರೀದಿಸುತ್ತೀರೊ’? “ವಿವೇಕಿ”ಯಾಗಿ ನಡೆಯುವ ಸಲುವಾಗಿ, ಏನು ಓದುತ್ತೀರೊ ಅದನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತೀರೊ? (ಎಫೆಸ 5:15-17, NW; ಕೀರ್ತನೆ 1:1-3) ನೀವು ಹಾಗೆ ಮಾಡುತ್ತಿರುವಲ್ಲಿ, ಯೆಹೋವನ ಸಮೀಪಕ್ಕೆ ಬರುತ್ತಿದ್ದೀರಿ.

10 ಜ್ಞಾನೋಕ್ತಿ ಪುಸ್ತಕದ ಆರಂಭದ ಮಾತುಗಳಲ್ಲಿ, ಪ್ರೇರಿತ ಲೇಖಕನು ಆ ಬೈಬಲ್‌ ಪುಸ್ತಕದ ಉದ್ದೇಶವನ್ನು ವಿವರಿಸುತ್ತಾನೆ. ಆ ಉದ್ದೇಶವು, “ಒಬ್ಬನು ವಿವೇಕ ಮತ್ತು ಶಿಸ್ತನ್ನು ತಿಳಿಯಲು, ತಿಳಿವಳಿಕೆಯ ಮಾತುಗಳನ್ನು ವಿವೇಚಿಸಲು, ಒಳನೋಟ, ನೀತಿ, ತೀರ್ಮಾನಶಕ್ತಿ ಮತ್ತು ಪ್ರಾಮಾಣಿಕತೆಯನ್ನು ಕೊಡುವ ಶಿಸ್ತನ್ನು ಪಡೆದುಕೊಳ್ಳಲು, ಅನನುಭವಿಗಳಿಗೆ ಬುದ್ಧಿವಂತಿಕೆಯನ್ನು, ಯೌವನಸ್ಥನಿಗೆ ಜ್ಞಾನ, ಮತ್ತು ಯೋಚನಾಸಾಮರ್ಥ್ಯವನ್ನು ಕೊಡಲು” ಆಗಿದೆಯೆಂದು ಅವನು ಹೇಳಿದನು. (ಜ್ಞಾನೋಕ್ತಿ 1:1-4, NW) ಆದಕಾರಣ, ನೀವು ಜ್ಞಾನೋಕ್ತಿಯ ಮಾತುಗಳನ್ನು ಹಾಗೂ ಬೈಬಲಿನ ಉಳಿದ ಮಾತುಗಳನ್ನು ಓದಿ ಅನ್ವಯಿಸಿಕೊಳ್ಳುವಾಗ, ನೀತಿ ಮತ್ತು ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳುವಿರಿ ಮತ್ತು ನೀವು ಆತನ ಸಮೀಪಕ್ಕೆ ಬರುವುದರಲ್ಲಿ ಯೆಹೋವನು ಸಂತೋಷಿಸುವನು. (ಕೀರ್ತನೆ 15:​1-5) ತೀರ್ಮಾನಶಕ್ತಿ, ಬುದ್ಧಿವಂತಿಕೆ, ಜ್ಞಾನ, ಮತ್ತು ಯೋಚನಾಸಾಮರ್ಥ್ಯವನ್ನು ನೀವು ಎಷ್ಟು ಹೆಚ್ಚು ಬೆಳೆಸಿಕೊಳ್ಳುತ್ತೀರೊ, ನಿಮ್ಮ ನಿರ್ಣಯಗಳು ಅಷ್ಟು ಹೆಚ್ಚು ಉತ್ತಮವಾಗಿರುವವು.

11 ಒಬ್ಬ ಯುವ ವ್ಯಕ್ತಿಯು ಈ ರೀತಿಯಲ್ಲಿ ವಿವೇಕದಿಂದ ವರ್ತಿಸುವುದನ್ನು ನಿರೀಕ್ಷಿಸುವುದು ಅಸಮಂಜಸವೊ? ಇಲ್ಲ, ಏಕೆಂದರೆ ಅನೇಕ ಮಂದಿ ಯುವ ಕ್ರೈಸ್ತರು ವಿವೇಕದಿಂದ ವರ್ತಿಸುತ್ತಾರೆ. ಈ ಕಾರಣದಿಂದ, ಇತರರು ಅವರನ್ನು ಗಣ್ಯಮಾಡುತ್ತಾರೆ, ಮತ್ತು ‘ಯೌವನಸ್ಥರೆಂದು ಅವರನ್ನು ಅಸಡ್ಡೆಮಾಡುವುದಿಲ್ಲ.’ (1 ತಿಮೊಥೆಯ 4:12) ಅವರ ಹೆತ್ತವರು ಅವರ ಬಗ್ಗೆ ಸಮಂಜಸವಾಗಿಯೇ ಹೆಮ್ಮೆಪಡುತ್ತಾರೆ, ಮತ್ತು ಅವರು ತನ್ನ ಹೃದಯವನ್ನು ಸಂತೋಷಪಡಿಸುತ್ತಾರೆಂದು ಯೆಹೋವನು ಹೇಳುತ್ತಾನೆ. (ಜ್ಞಾನೋಕ್ತಿ 27:11) ಅವರು ಯುವಪ್ರಾಯದವರಾದರೂ, ಈ ಮುಂದಿನ ಪ್ರೇರಿತ ಮಾತುಗಳು ಅವರಿಗೆ ಅನ್ವಯವಾಗುತ್ತದೆಂಬ ಭರವಸೆ ಅವರಿಗಿರಬಲ್ಲದು: “ನಿರ್ದೋಷಿಯನ್ನು ನೋಡು ಮತ್ತು ಯಥಾರ್ಥವಂತನನ್ನು ಲಕ್ಷ್ಯದಲ್ಲಿಡು, ಯಾಕಂದರೆ ಆ ಮನುಷ್ಯನ ಭವಿಷ್ಯತ್ತು ಶಾಂತಿಪೂರ್ಣವಾಗಿರುವುದು.”​—⁠ಕೀರ್ತನೆ 37:​37, NW.

ಒಳ್ಳೆಯ ಆಯ್ಕೆಗಳನ್ನು ಮಾಡಿರಿ

12 ಯೌವನವು ಆಯ್ಕೆಗಳನ್ನು ಮಾಡುವ ಸಮಯವಾಗಿದೆ, ಮತ್ತು ಈ ಆಯ್ಕೆಗಳಲ್ಲಿ ಕೆಲವು, ದೀರ್ಘಕಾಲದ ಫಲಿತಾಂಶಗಳುಳ್ಳದ್ದಾಗಿ ಇರುತ್ತವೆ. ನೀವು ಈಗ ಮಾಡುವ ಕೆಲವೊಂದು ಆಯ್ಕೆಗಳು ಭವಿಷ್ಯದಲ್ಲಿ ಅನೇಕ ವರ್ಷಕಾಲ ನಿಮ್ಮ ಮೇಲೆ ಪರಿಣಾಮ ಬೀರುವವು. ವಿವೇಕಪೂರ್ಣ ಆಯ್ಕೆಗಳು ಸಂತೋಷಕರವಾದ ಮತ್ತು ಯಶಸ್ವಿಕರವಾದ ಬಾಳನ್ನು ಫಲಿಸುವವು. ಆದರೆ ಅವಿವೇಕದ ಆಯ್ಕೆಗಳು ಇಡೀ ಜೀವಮಾನವನ್ನು ಕೆಡಿಸಬಲ್ಲವು. ನೀವು ಮಾಡಬೇಕಾದ ಎರಡು ಆಯ್ಕೆಗಳ ವಿಷಯದಲ್ಲಿ ಇದು ಹೇಗೆ ಸತ್ಯವಾಗಿದೆ ಎಂಬುದನ್ನು ಪರಿಗಣಿಸಿರಿ. ಮೊದಲನೆಯದು: ನೀವು ಯಾರೊಂದಿಗೆ ಸಹವಾಸಿಸಲು ಆಯ್ದುಕೊಳ್ಳುತ್ತೀರಿ? ಅದೇಕೆ ಪ್ರಾಮುಖ್ಯ? ಏಕೆಂದರೆ ಪ್ರೇರಿತ ಜ್ಞಾನೋಕ್ತಿಯು, “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು,” ಎಂದು ಹೇಳುತ್ತದೆ. (ಜ್ಞಾನೋಕ್ತಿ 13:20) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಕಟ್ಟಕಡೆಗೆ ನಾವು ನಮ್ಮ ಸಹವಾಸಿಗಳಂತೆ, ಒಂದೇ ಜ್ಞಾನಿಗಳು ಇಲ್ಲವೆ ಮೂರ್ಖರು ಆಗುವೆವು. ನೀವು ಯಾರಂತೆ ಆಗಲು ಇಷ್ಟಪಡುವಿರಿ?

13 ಸಹವಾಸದ ಕುರಿತು ಯೋಚಿಸುವಾಗ, ನೀವು ಪ್ರಾಯಶಃ ಜನರೊಂದಿಗೆ ಇರುವುದರ ಕುರಿತು ಯೋಚಿಸುತ್ತೀರಿ. ಅದು ನಿಜವಾದರೂ, ಅದರಲ್ಲಿ ಇನ್ನೂ ಹೆಚ್ಚು ವಿಷಯಗಳು ಸೇರಿವೆ. ನೀವು ಟಿವಿ ನೋಡುವಾಗ, ಸಂಗೀತ ಕೇಳಿಸಿಕೊಳ್ಳುವಾಗ, ಕಥೆಪುಸ್ತಕ ಓದುವಾಗ, ಚಲನಚಿತ್ರ ನೋಡಲು ಹೋಗುವಾಗ ಇಲ್ಲವೆ ಇಂಟರ್‌ನೆಟ್‌ನಲ್ಲಿ ಕೆಲವೊಂದು ಮಾಹಿತಿಮೂಲಗಳನ್ನು ಉಪಯೋಗಿಸುವಾಗಲೂ ನೀವು ಸಹವಾಸವನ್ನು ಮಾಡುತ್ತಿದ್ದೀರಿ. ಮತ್ತು ಆ ಸಹವಾಸವು ಹಿಂಸಾತ್ಮಕ ಅಥವಾ ಅನೈತಿಕ ಪ್ರವೃತ್ತಿಗಳನ್ನು ಕೆರಳಿಸುತ್ತಿರುವುದಾದರೆ ಅಥವಾ ಅಮಲೌಷಧದ ಅಪಪ್ರಯೋಗ, ಕುಡುಕತನ ಇಲ್ಲವೆ ಬೈಬಲ್‌ ಮೂಲತತ್ತ್ವಗಳಿಗೆ ಪ್ರತಿಕೂಲವಾಗಿರುವ ಬೇರೇನನ್ನಾದರೂ ಪ್ರೋತ್ಸಾಹಿಸುವುದಾದರೆ, ನೀವು ಯೆಹೋವನು ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ವರ್ತಿಸುವ “ದುರ್ಮತಿಗಳ” ಸಹವಾಸವನ್ನು ಮಾಡುತ್ತಿರುವವರಾಗುತ್ತೀರಿ.​—⁠ಕೀರ್ತನೆ 14:⁠1.

14 ನೀವು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದು ಸಭೆಯಲ್ಲಿ ಕ್ರಿಯಾಶೀಲರಾಗಿರುವ ಕಾರಣ, ಹಿಂಸಾತ್ಮಕ ಚಲನಚಿತ್ರದಿಂದ ಮತ್ತು ಸಂದೇಹಾಸ್ಪದ ಪದ್ಯಗಳಿದ್ದರೂ ಉತ್ತಮ ರಾಗವಿನ್ಯಾಸವಿರುವ ಮ್ಯೂಸಿಕ್‌ ಆ್ಯಲ್ಬಮ್‌ನಿಂದ ಪ್ರಭಾವಿಸಲ್ಪಡದೇ ಇರುವಷ್ಟು ಬಲಶಾಲಿಗಳಾಗಿದ್ದೀರೆಂದು ನೀವು ಪ್ರಾಯಶಃ ನೆನಸಬಹುದು. ನೀವು ಇಂಟರ್‌ನೆಟ್‌ನಲ್ಲಿರುವ ಅಶ್ಲೀಲ ವೆಬ್‌ಸೈಟ್‌ನೊಳಕ್ಕೆ ಒಂದು ಕ್ಷಣ ಮಾತ್ರ ಕಣ್ಣಾಡಿಸುವಲ್ಲಿ ಯಾವುದೇ ದುಷ್ಪರಿಣಾಮಗಳು ಬಾರದೆಂದು ನೆನಸಬಹುದು. ಆದರೆ ನಿಮ್ಮ ಆಲೋಚನೆ ತಪ್ಪೆಂದು ಅಪೊಸ್ತಲ ಪೌಲನು ಹೇಳುತ್ತಾನೆ! ಅವನನ್ನುವುದು: “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ದುಃಖಕರ ಸಂಗತಿಯೇನಂದರೆ, ಚೆನ್ನಾಗಿ ಮುಂದೆಬರುವಂಥ ಭರವಸೆ ಮೂಡಿಸಿದ್ದ ಅನೇಕ ಮಂದಿ ಯುವ ಕ್ರೈಸ್ತರು ಅವಿವೇಕದ ಸಹವಾಸದ ಕಾರಣ ತಮ್ಮ ಒಳ್ಳೆಯ ರೂಢಿಗಳನ್ನು ಕೆಡಿಸಿಕೊಂಡಿದ್ದಾರೆ. ಆದುದರಿಂದ, ಅಂತಹ ಸಹವಾಸಗಳಿಂದ ದೂರವಿರಲು ದೃಢನಿಶ್ಚಯದಿಂದಿರಿ. ಹಾಗೆ ಮಾಡುವಲ್ಲಿ, ನೀವು ಪೌಲನ ಈ ಬುದ್ಧಿವಾದವನ್ನು ಅನುಸರಿಸುವಿರಿ: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.”​—⁠ರೋಮಾಪುರ 12:⁠2.

15 ನಿಮ್ಮ ಎದುರಿಗಿರುವಂಥ ಎರಡನೆಯ ಆಯ್ಕೆ ಇದಾಗಿದೆ. ನೀವು ಶಾಲಾವಿದ್ಯಾಭ್ಯಾಸ ಮುಗಿಸುವಾಗ ಏನು ಮಾಡಬಯಸುತ್ತೀರಿ ಎಂದು ನಿರ್ಣಯಿಸುವ ಕಾಲ ಬರಲಿದೆ. ಉದ್ಯೋಗಾವಕಾಶಗಳು ಕಡಿಮೆಯಾಗಿರುವ ದೇಶವೊಂದರಲ್ಲಿ ನೀವು ಜೀವಿಸುತ್ತಿರುವಲ್ಲಿ, ಅತ್ಯುತ್ತಮ ಉದ್ಯೋಗವನ್ನು ಒಡನೆ ಬಾಚಿಕೊಳ್ಳುವ ಒತ್ತಡಕ್ಕೆ ನೀವು ಗುರಿಯಾಗಬಹುದು. ಶ್ರೀಮಂತ ದೇಶವೊಂದರಲ್ಲಿ ನೀವು ಜೀವಿಸುತ್ತಿರುವಲ್ಲಿ, ಉದ್ಯೋಗದ ಅನೇಕ ಆಯ್ಕೆಗಳಿರಬಹುದು. ಇವುಗಳಲ್ಲಿ ಕೆಲವು ಅತಿ ಆಕರ್ಷಕವಾಗಿರಬಹುದು. ನಿಮ್ಮ ಹಿತವನ್ನು ಮನಸ್ಸಿನಲ್ಲಿಟ್ಟವರಾಗಿ, ನಿಮ್ಮ ಅಧ್ಯಾಪಕರೊ, ಹೆತ್ತವರೊ, ಆರ್ಥಿಕ ಭದ್ರತೆಯಿರುವ, ಬಹುಶಃ ಐಶ್ವರ್ಯವನ್ನೂ ನೀಡುತ್ತಿರುವ ಜೀವನವೃತ್ತಿಯನ್ನು ಬೆನ್ನಟ್ಟುವಂತೆ ನಿಮ್ಮನ್ನು ಪ್ರೋತ್ಸಾಹಿಸಬಹುದು. ಆದರೆ ಅಂಥ ವೃತ್ತಿಗಾಗಿ ನೀವು ಪಡೆಯಬೇಕಾದ ತರಬೇತು, ಯೆಹೋವನ ಸೇವೆಯಲ್ಲಿ ನೀವು ಕಳೆಯಬೇಕಾದ ಸಮಯವನ್ನು ಬಹಳಷ್ಟು ಸೀಮಿತಗೊಳಿಸಬಹುದು.

16 ನಿರ್ಣಯವನ್ನು ಮಾಡುವ ಮೊದಲು ಬೈಬಲನ್ನು ವಿಚಾರಿಸಿ ನೋಡಲು ಮರೆಯಬೇಡಿರಿ. ನಮ್ಮನ್ನು ಪೋಷಿಸಿಕೊಳ್ಳುವುದು ನಮ್ಮ ಜವಾಬ್ದಾರಿಯೆಂದು ತೋರಿಸುತ್ತ, ಜೀವನಾಧಾರಕ್ಕಾಗಿ ಕೆಲಸಮಾಡುವಂತೆ ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. (2 ಥೆಸಲೋನಿಕ 3:​10-12) ಆದರೂ, ಇನ್ನಿತರ ವಿಷಯಗಳೂ ಇದರಲ್ಲಿ ಒಳಗೂಡಿವೆ. ಇಲ್ಲಿ ಮುಂದೆ ಕೊಡಲ್ಪಟ್ಟಿರುವ ಶಾಸ್ತ್ರವಚನಗಳನ್ನು ಓದಿ, ಜೀವನವೃತ್ತಿಯನ್ನು ಆರಿಸಿಕೊಳ್ಳುವ ವಿಷಯದಲ್ಲಿ ಸಮತೋಲನದಲ್ಲಿರುವಂತೆ ಅವು ಒಬ್ಬ ಯುವ ವ್ಯಕ್ತಿಗೆ ಹೇಗೆ ಸಹಾಯಮಾಡಬಲ್ಲವು ಎಂದು ಯೋಚಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ: ಜ್ಞಾನೋಕ್ತಿ 30:8, 9; ಪ್ರಸಂಗಿ 7:11, 12; ಮತ್ತಾಯ 6:33; 1 ಕೊರಿಂಥ 7:31; 1 ತಿಮೊಥೆಯ 6:9, 10. ಈ ವಚನಗಳನ್ನು ಓದಿದ ಬಳಿಕ, ಆ ವಿಷಯದಲ್ಲಿ ಯೆಹೋವನ ದೃಷ್ಟಿಕೋನವೇನೆಂಬುದನ್ನು ನೀವು ನೋಡುತ್ತೀರೊ?

17 ಲೌಕಿಕ ಉದ್ಯೋಗವು ಯೆಹೋವನಿಗೆ ನಾವು ಸಲ್ಲಿಸಬೇಕಾದ ಸೇವೆಗಿಂತಲೂ ಹೆಚ್ಚು ಮಹತ್ವದ್ದಾಗಿ ಪರಿಣಮಿಸುವಂತೆ ನಾವೆಂದಿಗೂ ಬಿಡಬಾರದು. ಕೇವಲ ಹೈಸ್ಕೂಲ್‌ ವಿದ್ಯಾಭ್ಯಾಸವನ್ನು ಪಡೆದು ನೀವು ಒಂದು ತಕ್ಕಮಟ್ಟಿಗಿನ ಉದ್ಯೋಗಕ್ಕೆ ಅರ್ಹತೆ ಪಡೆಯಸಾಧ್ಯವಿರುವಲ್ಲಿ ಅದು ಒಳ್ಳೆಯದೇ. ಹೈಸ್ಕೂಲ್‌ ವಿದ್ಯಾಭ್ಯಾಸದ ಬಳಿಕ ಹೆಚ್ಚಿನ ತರಬೇತು ಅಗತ್ಯವಿರುವಲ್ಲಿ ಅದು ನಿಮ್ಮ ಹೆತ್ತವರೊಂದಿಗೆ ಚರ್ಚಿಸಬೇಕಾದ ಸಂಗತಿಯಾಗಿದೆ. ಹೀಗಿದ್ದರೂ, ಹೆಚ್ಚು “ಉತ್ತಮ ಕಾರ್ಯಗಳು” ಅಂದರೆ ಆಧ್ಯಾತ್ಮಿಕ ವಿಷಯಗಳು ನಿಮ್ಮ ದೃಷ್ಟಿಯಿಂದ ಎಂದೂ ಮರೆಯಾಗದಿರಲಿ. (ಫಿಲಿಪ್ಪಿ 1:​9, 10) ಯೆರೆಮೀಯನ ಲೇಖಕನಾದ ಬಾರೂಕನು ಮಾಡಿದ ತಪ್ಪನ್ನೇ ನೀವೂ ಮಾಡಬೇಡಿ. ಅವನು ತನ್ನ ಸೇವಾಸುಯೋಗಕ್ಕಾಗಿದ್ದ ಮಾನ್ಯತೆಯನ್ನು ಕಳೆದುಕೊಂಡು, ‘ಮಹಾಪದವಿಯನ್ನು ನಿರೀಕ್ಷಿಸಿದನು.’ (ಯೆರೆಮೀಯ 45:⁠5) ಅವನು ಕ್ಷಣಕಾಲಕ್ಕೆ, ಈ ಲೋಕದ “ಮಹಾಪದವಿ” ತನ್ನನ್ನು ಯೆಹೋವನ ಸಮೀಪಕ್ಕೆ ಬರಗೊಡಿಸದೆಂದು ಅಥವಾ ಯೆರೂಸಲೇಮಿನ ನಾಶದಿಂದ ಪಾರಾಗಿಸದೆಂಬುದನ್ನು ಮರೆತುಬಿಟ್ಟನು. ಇಂದು ಸಹ ಪರಿಸ್ಥಿತಿಗಳು ಭಿನ್ನವಾಗಿಲ್ಲ.

ಆಧ್ಯಾತ್ಮಿಕ ವಿಷಯಗಳನ್ನು ಮಾನ್ಯಮಾಡಿರಿ

18 ಕ್ಷಾಮಪೀಡಿತ ದೇಶಗಳಲ್ಲಿನ ಮಕ್ಕಳ ಚಿತ್ರಗಳನ್ನು ನೀವು ವಾರ್ತಾಮಾಧ್ಯಮದಲ್ಲಿ ನೋಡಿದ್ದೀರೊ? ನೋಡಿರುವಲ್ಲಿ, ಅದು ನಿಮಗೆ ಮರುಕ ಹುಟ್ಟಿಸಿರುವುದು ನಿಶ್ಚಯ. ನಿಮ್ಮ ನೆರೆಹೊರೆಯ ಜನರನ್ನು ನೋಡುವಾಗಲೂ ನಿಮಗೆ ಅದೇ ರೀತಿಯ ಮರುಕ ಹುಟ್ಟುತ್ತದೆಯೆ? ಏಕೆ ಹುಟ್ಟಬೇಕು? ಏಕೆಂದರೆ ಅವರಲ್ಲಿಯೂ ಹೆಚ್ಚಿನವರು ಹಸಿದು ಕಂಗಾಲಾಗಿದ್ದಾರೆ. ಅವರು ಆಮೋಸನು ಪ್ರವಾದಿಸಿದಂಥ ಕ್ಷಾಮದಿಂದ ಪೀಡಿತರಾಗಿದ್ದಾರೆ: “ಕರ್ತನಾದ ಯೆಹೋವನು ಇಂತೆನ್ನುತ್ತಾನೆ​—⁠ಆಹಾ, ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.”​—⁠ಆಮೋಸ 8:11.

19 ಈ ಆಧ್ಯಾತ್ಮಿಕವಾದ ಕ್ಷಾಮಪೀಡಿತರಲ್ಲಿ ಹೆಚ್ಚಿನವರು “ಆಧ್ಯಾತ್ಮಿಕ ಆವಶ್ಯಕತೆಗಳ ಪ್ರಜ್ಞೆ” ಉಳ್ಳವರಾಗಿರುವುದಿಲ್ಲವೆಂಬುದು ನಿಜ. (ಮತ್ತಾಯ 5:​3, NW) ಅನೇಕರಿಗೆ ಆಧ್ಯಾತ್ಮಿಕವಾಗಿ ಹಸಿವೆಯೇ ಆಗುವುದಿಲ್ಲ. ಅವರಲ್ಲಿ ಕೆಲವರು ತಮಗೆ ಹೊಟ್ಟೆತುಂಬಿದೆ ಎಂದೂ ಭಾವಿಸಬಹುದು. ಅವರಿಗೆ ಹಾಗನಿಸುತ್ತಿರುವಲ್ಲಿ ಅದಕ್ಕೆ ಕಾರಣವು, ಅವರು ಯಾವುದರಲ್ಲಿ ಪ್ರಾಪಂಚಿಕತೆ, ವೈಜ್ಞಾನಿಕ ಊಹಾಪೋಹ, ನೈತಿಕತೆಯ ಸಂಬಂಧದ ಸ್ವಾಭಿಪ್ರಾಯಗಳು, ಮತ್ತಿತರ ಸಂಗತಿಗಳು ಸೇರಿವೆಯೊ ಆ ನಿಷ್ಪ್ರಯೋಜಕವಾದ “ಇಹಲೋಕಜ್ಞಾನ”ವನ್ನು ಭಕ್ಷಿಸುತ್ತಿರುವುದೇ. ಆಧುನಿಕ “ವಿವೇಕವು” ಬೈಬಲ್‌ ಬೋಧನೆಗಳನ್ನು ಹಳತಾಗಿಸಿದೆಯೆಂಬುದು ಕೆಲವರ ಅಭಿಪ್ರಾಯ. ಆದರೂ, ‘ಲೋಕವು ಜ್ಞಾನವೆನಿಸುವ ಮಾರ್ಗದಿಂದ ದೇವರನ್ನು ತಿಳುಕೊಳ್ಳದೇ’ ಹೋಗಿದೆ. ಈ ಲೋಕದ ವಿವೇಕವು ನೀವು ದೇವರ ಸಮೀಪಕ್ಕೆ ಬರುವಂತೆ ಸಹಾಯಮಾಡದು. ಅದು “ದೇವರ ಮುಂದೆ ಹುಚ್ಚುತನ” ಆಗಿದೆಯೇ ಹೊರತು ಮತ್ತೇನೂ ಅಲ್ಲ.​—⁠1 ಕೊರಿಂಥ 1:20, 21; 3:19.

20 ಹಸಿದಿರುವ ಮಕ್ಕಳ ಚಿತ್ರಗಳನ್ನು ನೋಡುವಾಗ, ನೀವೂ ಅವರಂತಾಗಬೇಕೆಂದು ಎಂದಾದರೂ ಆಸೆಯಾಗುತ್ತದೊ? ನಿಶ್ಚಯವಾಗಿಯೂ ಇಲ್ಲ! ಆದರೂ, ಕ್ರೈಸ್ತ ಕುಟುಂಬಗಳಲ್ಲಿರುವ ಕೆಲವು ಯುವಜನರು, ತಮ್ಮ ಸುತ್ತಲಿರುವ ಆಧ್ಯಾತ್ಮಿಕವಾಗಿ ಹೊಟ್ಟೆಗಿಲ್ಲದವರಂತೆ ಆಗಲು ಅಪೇಕ್ಷಿಸುತ್ತಾರೆಂಬದನ್ನು ತೋರಿಸಿರುತ್ತಾರೆ. ಲೋಕದ ಯುವಜನರಿಗೆ ಯಾವ ಚಿಂತೆಯಿಲ್ಲವೆಂದೂ, ಜೀವನದ ಸುಖಾನುಭವಿಸುತ್ತಿದ್ದಾರೆಂದೂ ಬಹುಶಃ ಅಂಥ ಯುವಜನರು ನೆನಸುತ್ತಾರೆ. ಆದರೆ, ಲೋಕದ ಆ ಯುವಜನರು ಯೆಹೋವನಿಂದ ಅಗಲಿದವರಾಗಿದ್ದಾರೆ ಎಂಬದನ್ನು ಅವರು ಮರೆಯುತ್ತಾರೆ. (ಎಫೆಸ 4:​17, 18) ಆಧ್ಯಾತ್ಮಿಕವಾಗಿ ಹೊಟ್ಟೆಗಿಲ್ಲದಿರುವುದರ ದುಷ್ಪರಿಣಾಮಗಳನ್ನೂ ಅವರು ಮರೆತುಬಿಡುತ್ತಾರೆ. ಇವುಗಳಲ್ಲಿ ಕೆಲವು, ಹದಿಹರೆಯದಲ್ಲೇ ಅನಪೇಕ್ಷಿತ ಗರ್ಭಧಾರಣೆಗಳು ಮತ್ತು ಲೈಂಗಿಕ ಅನೈತಿಕತೆ, ಧೂಮಪಾನ, ಕುಡುಕತನ, ಮತ್ತು ಅಮಲೌಷಧದ ಅಪಪ್ರಯೋಗದಿಂದುಂಟಾಗುವ ಶಾರೀರಿಕ ಹಾಗೂ ಭಾವನಾತ್ಮಕ ದುಷ್ಪರಿಣಾಮಗಳಾಗಿವೆ. ಆಧ್ಯಾತ್ಮಿಕ ಹೊಟ್ಟೆಗಿಲ್ಲದಿರುವಿಕೆಯು ಪ್ರತಿಭಟನಾ ಮನೋಭಾವ, ಆಂತರಿಕ ನಿರಾಶಸ್ಥಿತಿ, ಜೀವನದಲ್ಲಿ ಗುರಿಯ ಕೊರತೆಗಳಿಗೆ ಎಡೆಮಾಡಿಕೊಡುತ್ತದೆ.

21 ಆದುದರಿಂದ, ಶಾಲೆಯಲ್ಲಿ ಯೆಹೋವನ ಜೊತೆ ಆರಾಧಕರಲ್ಲದವರ ಮಧ್ಯೆ ನೀವಿರುವಾಗ, ಅವರ ಮನೋಭಾವಗಳು ನಿಮ್ಮ ಮೇಲೆ ಜಯಸಾಧಿಸುವಂತೆ ಬಿಡಬೇಡಿರಿ. (2 ಕೊರಿಂಥ 4:18) ಕೆಲವರು ಆಧ್ಯಾತ್ಮಿಕ ವಿಷಯಗಳ ಕುರಿತು ತಿರಸ್ಕಾರಭಾವದಿಂದ ಮಾತಾಡುವರು. ಇದಕ್ಕೆ ಕೂಡಿಸುತ್ತ, ವಾರ್ತಾಮಾಧ್ಯಮವು ತನ್ನದೇ ಆದ ಕುಶಾಗ್ರ ಪ್ರಚಾರಕಾರ್ಯವನ್ನು ಕೈಕೊಂಡು, ವ್ಯಭಿಚಾರ ಮಾಡುವುದು, ಕುಡಿದು ಮತ್ತರಾಗುವುದು, ಮತ್ತು ದುರ್ಭಾಷೆಯನ್ನಾಡುವುದು ಸಾಮಾನ್ಯಸಂಗತಿಗಳೆಂದು ಹೇಳುತ್ತದೆ. ಈ ದುಷ್ಪ್ರಭಾವವನ್ನು ಪ್ರತಿಭಟಿಸಿರಿ. “ನಂಬಿಕೆಯನ್ನೂ ಒಳ್ಳೇ ಮನಸ್ಸಾಕ್ಷಿಯನ್ನೂ ಬಿಡದೆ” ಹಿಡಿದುಕೊಂಡಿರುವ ಜನರ ಸಂಗಡ ಕ್ರಮವಾಗಿ ಸಹವಾಸ ಮಾಡಿರಿ. “ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ [“ಹೇರಳವಾಗಿ,” NW] ಮಾಡುವವರಾಗಿರಿ.” (1 ತಿಮೊಥೆಯ 1:19; 1 ಕೊರಿಂಥ 15:58) ರಾಜ್ಯ ಸಭಾಗೃಹದಲ್ಲಿಯೂ ಕ್ಷೇತ್ರಸೇವೆಯಲ್ಲಿಯೂ ಕಾರ್ಯಮಗ್ನರಾಗಿ ಮುಂದುವರಿಯಿರಿ. ನಿಮ್ಮ ಶಾಲಾವರುಷಗಳಲ್ಲಿ, ಆಗಾಗ್ಗೆ ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಿರಿ. ನಿಮ್ಮ ಆಧ್ಯಾತ್ಮಿಕ ದೃಷ್ಟಿಯನ್ನು ಈ ರೀತಿಯಲ್ಲಿ ಚುರುಕುಗೊಳಿಸಿರಿ ಮತ್ತು ಹಾಗಿರುವಲ್ಲಿ ನೀವು ನಿಮ್ಮ ಸಮತೋಲನವನ್ನು ಕಳೆದುಕೊಳ್ಳಲಾರಿರಿ.​—⁠2 ತಿಮೊಥೆಯ 4:⁠5.

22 ವಿಷಯಗಳ ಕಡೆಗೆ ನಿಮಗಿರುವ ಆಧ್ಯಾತ್ಮಿಕ ದೃಷ್ಟಿಕೋನದಿಂದಾಗಿ ಪ್ರಾಯಶಃ ನೀವು ಮಾಡಬಹುದಾದ ನಿರ್ಣಯಗಳು ಇತರರಿಗೆ ಅರ್ಥವಾಗಲಿಕ್ಕಿಲ್ಲ. ದೃಷ್ಟಾಂತಕ್ಕೆ, ಒಬ್ಬ ಕ್ರೈಸ್ತ ಯುವಕನು ಪ್ರತಿಭಾವಂತ ಸಂಗೀತಕಾರನು ಮಾತ್ರವಲ್ಲ, ಶಾಲೆಯಲ್ಲಿ ಎಲ್ಲ ವ್ಯಾಸಂಗ ವಿಷಯಗಳಲ್ಲಿಯೂ ಶ್ರೇಷ್ಠ ದರ್ಜೆಗಳನ್ನು ಪಡೆಯುತ್ತಿದ್ದ ವಿದ್ಯಾರ್ಥಿಯಾಗಿದ್ದನು. ಅವನು ಉತ್ತೀರ್ಣನಾಗಿ ಶಾಲೆ ಮುಗಿಸಿದಾಗ, ತನ್ನ ತಂದೆಯೊಂದಿಗೆ ಕಿಟಕಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ಸೇರಿಕೊಂಡನು. ಇದಕ್ಕೆ ಕಾರಣವು, ತಾನು ಆಯ್ದುಕೊಂಡಿದ್ದ ಪೂರ್ಣಸಮಯದ ಸೌವಾರ್ತಿಕ ಕೆಲಸ ಅಥವಾ ಪಯನೀಯರ್‌ ಕೆಲಸದಲ್ಲಿ ಮುಂದುವರಿಯುವುದಾಗಿತ್ತು. ಅವನ ಅಧ್ಯಾಪಕರು ಅವನ ಈ ನಿರ್ಣಯದ ಕಾರಣಗಳನ್ನು ಗ್ರಹಿಸಲಾರದೆ ಹೋದರು. ಆದರೆ ನೀವು ಯೆಹೋವನ ಸಮೀಪಕ್ಕೆ ಬಂದಿರುವುದಾದರೆ ಇದನ್ನು ಗ್ರಹಿಸಿಕೊಂಡಿದ್ದೀರಿ ಎಂಬ ಖಾತರಿ ನಮಗಿದೆ.

23 ನಿಮ್ಮ ಯೌವನದಲ್ಲಿ ನಿಮಗಿರುವ ಅಮೂಲ್ಯ ಸಾಧನೋಪಾಯಗಳನ್ನು ಹೇಗೆ ಉಪಯೋಗಿಸುವಿರೆಂಬುದರ ಕುರಿತು ನೀವು ಚಿಂತಿಸುವಾಗ, ‘ವಾಸ್ತವ ಜೀವನವನ್ನು ಹೊಂದುವುದಕ್ಕೆ ಮುಂದಿನ ಕಾಲಕ್ಕೆ ಒಳ್ಳೆಯ ಅಸ್ತಿವಾರವಾಗುವಂಥವುಗಳನ್ನು ಕೂಡಿಸಿಟ್ಟುಕೊಳ್ಳಿರಿ.’ (1 ತಿಮೊಥೆಯ 6:​18, 19) ನಿಮ್ಮ ಯೌವನದಲ್ಲಿಯೂ ನಿಮ್ಮ ಉಳಿದ ಜೀವನದಲ್ಲಿಯೂ ‘ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಲು’ ದೃಢಮನಸ್ಸಿನವರಾಗಿರಿ. ಯಶಸ್ವೀ ಭವಿಷ್ಯತ್ತಿಗಾಗಿ, ಅನಂತವಾದ ಭವಿಷ್ಯತ್ತಿಗಾಗಿ ಕಟ್ಟುವ ಒಂದೇ ಒಂದು ಮಾರ್ಗ ಇದೇ ಆಗಿರುತ್ತದೆ.

ನಿಮ್ಮ ತೀರ್ಮಾನವೇನು?

• ಯುವಜನರು ಭವಿಷ್ಯತ್ತಿಗಾಗಿ ಯೋಜಿಸುವಾಗ ಯಾವ ಪ್ರೇರಿತ ಸಲಹೆಯು ಅವರಿಗೆ ಸಹಾಯ ನೀಡುತ್ತದೆ?

• ಯುವ ವ್ಯಕ್ತಿಯು “ದೇವರ ಸಮೀಪಕ್ಕೆ” ಬರುವ ಕೆಲವು ವಿಧಗಳಾವುವು?

• ಒಬ್ಬ ಯುವ ವ್ಯಕ್ತಿಯು ಮಾಡುವ ನಿರ್ಣಯಗಳಲ್ಲಿ ಅವನ ಭವಿಷ್ಯತ್ತಿನ ಮೇಲೆ ಪರಿಣಾಮಬೀರುವ ಕೆಲವು ನಿರ್ಣಯಗಳಾವುವು?

[ಅಧ್ಯಯನ ಪ್ರಶ್ನೆಗಳು]

1, 2. ಯೌವನ ಕಾಲವನ್ನು ಯಾವ ವಿಭಿನ್ನ ವಿಧಗಳಲ್ಲಿ ದೃಷ್ಟಿಸಬಹುದು?

3. ಯುವಜನರಿಗೆ ಸೊಲೊಮೋನನು ಕೊಟ್ಟ ಬುದ್ಧಿವಾದವೇನು, ಮತ್ತು ಎಚ್ಚರಿಕೆಯೇನು?

4, 5. ಯುವಜನರು ಭವಿಷ್ಯತ್ತಿಗಾಗಿ ಸಿದ್ಧತೆಗಳನ್ನು ಮಾಡುವುದು ವಿವೇಕಪ್ರದವಾಗಿದೆಯೇಕೆ? ದೃಷ್ಟಾಂತಿಸಿರಿ.

6. (ಎ) ಸೊಲೊಮೋನನ ಯಾವ ಬುದ್ಧಿವಾದ ಯುವಜನರಿಗೆ ಮಾರ್ಗದರ್ಶನವನ್ನು ಒದಗಿಸುತ್ತದೆ? (ಬಿ) ಯೆಹೋವನು ಯುವಜನರಿಗಾಗಿ ಏನು ಮಾಡಲು ಇಷ್ಟಪಡುತ್ತಾನೆ, ಮತ್ತು ಯುವ ವ್ಯಕ್ತಿಯೊಬ್ಬನು ಇದರಿಂದ ಹೇಗೆ ಪ್ರಯೋಜನ ಪಡೆಯಬಲ್ಲನು?

7, 8. ಯುವ ವ್ಯಕ್ತಿಯೊಬ್ಬನು ದೇವರ ಸಮೀಪಕ್ಕೆ ಹೇಗೆ ಬರಸಾಧ್ಯವಿದೆ?

9. ಯುವ ವ್ಯಕ್ತಿಯೊಬ್ಬನು ಯೆಹೋವನಿಗೆ ಹೇಗೆ ಕಿವಿಗೊಡಬಲ್ಲನು?

10, 11. ಯೆಹೋವನಿಗೆ ಕಿವಿಗೊಡುವಾಗ ಯುವಜನರಿಗೆ ಯಾವ ಮಹಾ ಪ್ರಯೋಜನಗಳು ದೊರೆಯುವವು?

12. ಯುವಜನರು ಮಾಡುವ ಪ್ರಾಮುಖ್ಯ ಆಯ್ಕೆಗಳಲ್ಲಿ ಒಂದು ಯಾವುದು, ಮತ್ತು ಆ ಆಯ್ಕೆ ಏಕೆ ದೀರ್ಘಕಾಲಿಕ ಪರಿಣಾಮವುಳ್ಳದ್ದಾಗಿದೆ?

13, 14. (ಎ) ಸಹವಾಸದಲ್ಲಿ, ಜನರೊಂದಿಗಿನ ನೇರವಾದ ಸಂಪರ್ಕ ಮಾತ್ರವಲ್ಲದೆ ಇನ್ನೇನು ಒಳಗೊಂಡಿದೆ? (ಬಿ) ಯಾವ ತಪ್ಪನ್ನು ಮಾಡುವುದರಿಂದ ಯುವಜನರು ದೂರವಿರಬೇಕು?

15. ಯುವಜನರು ಮಾಡಬೇಕಾದ ಎರಡನೆಯ ಆಯ್ಕೆ ಯಾವುದು, ಮತ್ತು ಈ ಸಂಬಂಧದಲ್ಲಿ ಕೆಲವು ಸಲ ಅವರ ಮೇಲೆ ಯಾವ ಒತ್ತಡಗಳು ಹಾಕಲ್ಪಡುತ್ತವೆ?

16, 17. ವಿವಿಧ ಶಾಸ್ತ್ರವಚನಗಳು ಒಬ್ಬ ಯುವ ವ್ಯಕ್ತಿಗೆ ಉದ್ಯೋಗದ ವಿಷಯದಲ್ಲಿ ಸಮತೋಲನದ ದೃಷ್ಟಿಕೋನವನ್ನು ಪಡೆಯುವಂತೆ ಹೇಗೆ ಸಹಾಯಮಾಡಬಲ್ಲವೆಂದು ವಿವರಿಸಿರಿ.

18, 19. (ಎ) ನಿಮ್ಮ ನೆರೆಹೊರೆಯಲ್ಲಿ ಹೆಚ್ಚಿನವರು ಯಾವುದರಿಂದ ಪೀಡಿತರಾಗಿದ್ದಾರೆ, ಮತ್ತು ನಿಮಗೆ ಅವರ ಕುರಿತು ಹೇಗನಿಸಬೇಕು? (ಬಿ) ಅನೇಕರಿಗೆ ಏಕೆ ಆಧ್ಯಾತ್ಮಿಕವಾಗಿ ಹಸಿವೆಯಾಗುವುದಿಲ್ಲ?

20. ಯೆಹೋವನನ್ನು ಆರಾಧಿಸಬಯಸದವರನ್ನು ಅನುಕರಿಸುವ ಅಪೇಕ್ಷೆಯು ಏಕೆ ಸಮಂಜಸವಲ್ಲ?

21. ಯೆಹೋವನನ್ನು ಆರಾಧಿಸದಿರುವವರ ತಪ್ಪು ಮನೋಭಾವಗಳನ್ನು ಮೈಗೂಡಿಸಿಕೊಳ್ಳುವುದರಿಂದ ನಾವು ನಮ್ಮನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು?

22, 23. (ಎ) ಯುವ ಕ್ರೈಸ್ತನೊಬ್ಬನು ಅನೇಕವೇಳೆ ಇತರರು ಗ್ರಹಿಸಲಾಗದಂಥ ಆಯ್ಕೆಗಳನ್ನು ಏಕೆ ಮಾಡುವನು? (ಬಿ) ಯುವಜನರು ಏನನ್ನು ಮಾಡುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದಾರೆ?

[ಪುಟ 15ರಲ್ಲಿರುವ ಚಿತ್ರ]

ವೈಯಕ್ತಿಕ ಬೆನ್ನಟ್ಟುವಿಕೆಗಳು ನಿಮ್ಮ ಯೌವನದ ಎಲ್ಲಾ ಶಕ್ತಿ ಮತ್ತು ಜೀವನೋತ್ಸಾಹವನ್ನು ಹೀರಿಕೊಳ್ಳುವಂತೆ ನೀವು ಬಿಡುವಿರೊ?

[ಪುಟ 17ರಲ್ಲಿರುವ ಚಿತ್ರ]

ವಿವೇಕಿಗಳಾದ ಯುವ ಕ್ರೈಸ್ತರು ತಮ್ಮ ಆಧ್ಯಾತ್ಮಿಕ ದೃಷ್ಟಿಯನ್ನು ಚುರುಕಾಗಿರಿಸುತ್ತಾರೆ