ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಬ್ರಹಾಮ ಮತ್ತು ಸಾರ ಅವರ ನಂಬಿಕೆಯನ್ನು ನೀವು ಅನುಕರಿಸಬಲ್ಲಿರಿ!

ಅಬ್ರಹಾಮ ಮತ್ತು ಸಾರ ಅವರ ನಂಬಿಕೆಯನ್ನು ನೀವು ಅನುಕರಿಸಬಲ್ಲಿರಿ!

ಅಬ್ರಹಾಮ ಮತ್ತು ಸಾರ ಅವರ ನಂಬಿಕೆಯನ್ನು ನೀವು ಅನುಕರಿಸಬಲ್ಲಿರಿ!

ಅವನನ್ನು ‘ನಂಬಿಕೆಯಿರುವವರೆಲ್ಲರ ತಂದೆ’ ಎಂದು ಕರೆಯಲಾಗುತ್ತದೆ. (ರೋಮಾಪುರ 4:​11, NW) ಅವನ ಒಲುಮೆಯ ಮಡದಿಗೂ ಅದೇ ಗುಣ ಇತ್ತು. (ಇಬ್ರಿಯ 11:11) ಅವರು, ದೇವಭಕ್ತ ಮೂಲಪಿತೃವಾದ ಅಬ್ರಹಾಮ ಮತ್ತು ಅವನ ಹೆಂಡತಿ ಸಾರ ಆಗಿದ್ದರು. ನಂಬಿಕೆಯ ವಿಷಯದಲ್ಲಿ ಅವರು ಅಷ್ಟೊಂದು ಉತ್ತಮ ಮಾದರಿಗಳಾಗಿದ್ದರೇಕೆ? ಅವರು ತಾಳಿಕೊಂಡಂಥ ಪರೀಕ್ಷೆಗಳಲ್ಲಿ ಕೆಲವೊಂದು ಯಾವುವು? ಮತ್ತು ಅವರ ಜೀವನ ಕಥೆಯು ನಮಗೆ ಹೇಗೆ ಮೌಲ್ಯವುಳ್ಳದ್ದಾಗಿದೆ?

ಅಬ್ರಹಾಮನು ತನ್ನ ಊರನ್ನು ಬಿಟ್ಟು ಹೊರಡುವಂತೆ ದೇವರು ಅಪ್ಪಣೆಕೊಟ್ಟಾಗ ಅವನು ನಂಬಿಕೆ ತೋರಿಸಿದನು. ಯೆಹೋವನು ಹೇಳಿದ್ದು: “ನೀನು ಸ್ವದೇಶವನ್ನೂ ಬಂಧುಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು.” (ಆದಿಕಾಂಡ 12:⁠1) ಆ ನಂಬಿಗಸ್ತ ಮೂಲಪಿತನು ವಿಧೇಯನಾದನು. ಆದುದರಿಂದಲೇ ನಮಗೆ ಹೀಗನ್ನಲಾಗಿದೆ: “ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟ ಕೂಡಲೆ ಕರೆದಾತನ ಮಾತನ್ನು ಕೇಳಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು.” (ಇಬ್ರಿಯ 11:8) ಹೀಗೆ ಸ್ಥಳಾಂತರಿಸುವುದರಲ್ಲಿ ಏನೆಲ್ಲಾ ಒಳಗೂಡಿತ್ತೆಂಬುದನ್ನು ಪರಿಗಣಿಸಿರಿ.

ಅಬ್ರಹಾಮನು, ಈಗ ದಕ್ಷಿಣ ಇರಾಕ್‌ನಲ್ಲಿರುವ ಊರ್‌ ಪಟ್ಟಣದಲ್ಲಿ ಜೀವಿಸುತ್ತಿದ್ದನು. ಊರ್‌ ಪಟ್ಟಣವು ಮೆಸೊಪೊತಾಮ್ಯ ಪ್ರದೇಶದಲ್ಲಿ ಸಮೃದ್ಧಿಯಿಂದ ಕೂಡಿದ್ದ ಒಂದು ಕೇಂದ್ರವಾಗಿದ್ದು, ಪರ್ಷಿಯನ್‌ ಕೊಲ್ಲಿ ಮತ್ತು ಬಹುಶಃ ಸಿಂಧು ಕಣಿವೆ ಪ್ರದೇಶದ ದೇಶಗಳೊಂದಿಗೆ ವ್ಯಾಪಾರವನ್ನು ನಡೆಸುತ್ತಿತ್ತು. ಊರ್‌ ಪಟ್ಟಣದ ವ್ಯವಸ್ಥಿತ ಭೂಶೋಧನೆಯನ್ನು ನಿರ್ದೇಶಿಸಿದ ಸರ್‌ ಲೆನರ್ಡ್‌ ವೂಲೀ ಹೇಳುವುದೇನೆಂದರೆ, ಅಬ್ರಹಾಮನ ಸಮಯದಲ್ಲಿ ಹೆಚ್ಚಿನ ಮನೆಗಳು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದವು, ಮತ್ತು ಗಾರೆ ಹಾಕಿ, ಸುಣ್ಣಬಳಿಯಲ್ಪಟ್ಟಿದ್ದ ಗೋಡೆಗಳುಳ್ಳದ್ದಾಗಿದ್ದವು. ದೃಷ್ಟಾಂತಕ್ಕಾಗಿ, ಒಬ್ಬ ಧನಿಕ ಪ್ರಜೆಯ ಮನೆಯು, ಎರಡು ಅಂತಸ್ತಿನ ಕಟ್ಟಡವಾಗಿತ್ತು. ಕಟ್ಟಡದ ಮಧ್ಯಭಾಗದಲ್ಲಿ ಇಟ್ಟಿಗೆಹಾಸಲ್ಪಟ್ಟಿದ್ದ ಅಂಗಣವಿತ್ತು. ನೆಲಅಂತಸ್ತಿನಲ್ಲಿ ಆಳುಗಳಿಗಾಗಿ ಮತ್ತು ಅತಿಥಿಗಳಿಗಾಗಿ ಕೋಣೆಗಳಿದ್ದವು. ಮೊದಲನೆಯ ಮಹಡಿಯಲ್ಲಿ, ಗೋಡೆಯ ಉದ್ದಕ್ಕೂ ಒಂದು ಮರದ ಬಾಲ್ಕನಿ ಇತ್ತು. ಇಲ್ಲಿಂದ, ಕುಟುಂಬದವರ ಉಪಯೋಗಕ್ಕಾಗಿ ಕಾದಿರಿಸಲ್ಪಟ್ಟಿದ್ದ ಕೋಣೆಗಳಿಗೆ ಪ್ರವೇಶಹಾದಿಯಿತ್ತು. 10ರಿಂದ 20 ಕೋಣೆಗಳುಳ್ಳ ಇಂಥ ನಿವಾಸ ಕಟ್ಟಡಗಳು “ತುಲನಾತ್ಮಕವಾಗಿ ವಿಶಾಲವಾಗಿದ್ದು, ಸಭ್ಯ, ಆರಾಮದಾಯಕ ಮತ್ತು ಪೌರಾತ್ಯ ಮಟ್ಟಗಳಿಗನುಸಾರ ಐಷಾರಾಮದ ಜೀವನಕ್ಕಾಗಿ ಅನುವು ಮಾಡಿಕೊಟ್ಟವು” ಎಂದು ವೂಲೀ ಹೇಳುತ್ತಾರೆ. ಅವು “ಮುಖ್ಯವಾಗಿ ಒಂದು ನಾಗರಿಕ ಜನಾಂಗದ ಮನೆಗಳಾಗಿದ್ದವು, ಮತ್ತು ಉಚ್ಚ ಮಟ್ಟದಲ್ಲಿ ವಿಕಸನಹೊಂದಿದ್ದ ನಗರ ಜೀವನದ ಅಗತ್ಯಗಳನ್ನು ಪೂರೈಸುವಂಥದ್ದಾಗಿದ್ದವು.” ಅಬ್ರಹಾಮ ಮತ್ತು ಸಾರಳು ಗುಡಾರಗಳಲ್ಲಿ ವಾಸಿಸಲಿಕ್ಕಾಗಿ ಒಂದುವೇಳೆ ಅಂಥದ್ದೇ ರೀತಿಯ ಮನೆಯನ್ನು ಬಿಟ್ಟುಬಂದಿರುವಲ್ಲಿ, ಅವರು ಯೆಹೋವನಿಗೆ ವಿಧೇಯರಾಗಲು ದೊಡ್ಡ ತ್ಯಾಗಗಳನ್ನು ಮಾಡಿದರೆಂಬುದಂತೂ ನಿಶ್ಚಯ.

ಅಬ್ರಹಾಮನು ಮೊದಲು ತನ್ನ ಕುಟುಂಬವನ್ನು, ಉತ್ತರ ಮೆಸೊಪೊತಾಮ್ಯದಲ್ಲಿ ಒಂದು ನಗರವಾಗಿದ್ದ ಖಾರಾನ್‌ಗೆ ಮತ್ತು ನಂತರ ಕಾನಾನಿನೊಳಕ್ಕೆ ಸ್ಥಳಾಂತರಿಸಿದನು. ಇದು ಸುಮಾರು 1,600 ಕಿಲೊಮೀಟರ್‌ ದೂರದಲ್ಲಿತ್ತು. ವೃದ್ಧ ದಂಪತಿಗೆ ಇದೊಂದು ದೊಡ್ಡ ಸ್ಥಳಾಂತರವೇ ಸರಿ! ಖಾರಾನಿನಿಂದ ಹೊರಡುವಾಗ, ಅಬ್ರಹಾಮನು 75 ವರ್ಷದವನು ಮತ್ತು ಸಾರಳು 65 ವರ್ಷದವಳಾಗಿದ್ದಳು.​—⁠ಆದಿಕಾಂಡ 12:⁠4.

ತಾವು ಊರ್‌ ಅನ್ನು ಬಿಟ್ಟುಹೋಗಬೇಕೆಂದು ಅಬ್ರಹಾಮನು ಸಾರಳಿಗೆ ತಿಳಿಸಿದಾಗ ಅವಳಿಗೆ ಹೇಗನಿಸಿರಬೇಕು? ಒಂದು ಆರಾಮದಾಯಕ ಮನೆಯ ಸುರಕ್ಷೆಯನ್ನು ಬಿಟ್ಟು, ಯಾವುದೊ ಅಜ್ಞಾತ ಹಾಗೂ ಪ್ರಾಯಶಃ ತಮ್ಮನ್ನು ಹಗೆಮಾಡುವ ದೇಶಕ್ಕೆ ಸ್ಥಳಾಂತರಿಸಿ, ಕಡಿಮೆ ಅಂತಸ್ತಿನ ಜೀವನರೀತಿಯನ್ನು ಸ್ವೀಕರಿಸುವುದು ಅವಳನ್ನು ಚಿಂತೆಗೀಡುಮಾಡಿದ್ದಿರಬಹುದು. ಹೀಗಿದ್ದರೂ, ಸಾರಳು ಅಬ್ರಹಾಮನನ್ನು ತನ್ನ “ಯಜಮಾನ”ನೆಂದೆಣಿಸುತ್ತಾ, ಅಧೀನಭಾವವನ್ನು ತೋರಿಸಿದಳು. (1 ಪೇತ್ರ 3:​5, 6) ಇದನ್ನು ಕೆಲವು ವಿದ್ವಾಂಸರು, ಸಾರಳಿಗೆ “ಅವನ ಕಡೆಗಿದ್ದ ರೂಢಿಗತ, ಗೌರವಭರಿತ ಮನೋಭಾವದ ಪ್ರದರ್ಶನೆ” ಹಾಗೂ “ವಿಚಾರ ಮತ್ತು ಭಾವನೆಯ ನೈಜ ರೂಢಿಗಳ” ಸಾಕ್ಷ್ಯವೆಂದು ಪರಿಣಿಸುತ್ತಾರೆ. ಆದರೆ ಎಲ್ಲದಕ್ಕಿಂತಲೂ ಹೆಚ್ಚಾಗಿ ಸಾರಳು ಯೆಹೋವನಲ್ಲಿ ಭರವಸೆಯನ್ನಿಟ್ಟಿದ್ದಳು. ಅವಳ ಅಧೀನಭಾವ ಮತ್ತು ನಂಬಿಕೆಯು ಕ್ರೈಸ್ತ ಪತ್ನಿಯರಿಗಾಗಿ ಒಂದು ಉತ್ತಮ ಮಾದರಿಯಾಗಿದೆ.

ಕೆಲವು ಮಂದಿ ಪೂರ್ಣ ಸಮಯದ ಸೌರ್ವಾತಿಕರು ಇನ್ನೊಂದು ದೇಶದಲ್ಲಿ ಸುವಾರ್ತೆಯನ್ನು ಸಾರಲಿಕ್ಕೋಸ್ಕರ ತಮ್ಮ ಸ್ವದೇಶವನ್ನು ಬಿಟ್ಟುಹೋಗಿದ್ದಾರೆ ನಿಜ. ಆದರೆ, ದೇವರಿಗೆ ವಿಧೇಯರಾಗಲು ನಮ್ಮ ಮನೆಯನ್ನು ತೊರೆದುಬಿಡಲೇಬೇಕೆಂದು ನಮ್ಮಿಂದ ಕೇಳಲಾಗುವುದಿಲ್ಲ. ನಾವು ದೇವರನ್ನು ಎಲ್ಲಿಯೇ ಸೇವಿಸುತ್ತಿರಲಿ, ಎಷ್ಟರ ಮಟ್ಟಿಗೆ ನಾವು ಜೀವನದಲ್ಲಿ ಆಧ್ಯಾತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಡುತ್ತೇವೊ, ಅಷ್ಟರ ವರೆಗೆ ಆತನು ನಮ್ಮ ಅಗತ್ಯಗಳನ್ನು ಪೂರೈಸುವನು.​—⁠ಮತ್ತಾಯ 6:​25-33.

ಸಾರಳಾಗಲಿ ಅಬ್ರಹಾಮನಾಗಲಿ, ತಾವು ಮಾಡಿದಂಥ ನಿರ್ಣಯದ ಬಗ್ಗೆ ಪರಿತಪಿಸಲಿಲ್ಲ. “ತಾವು ಹೊರಟುಬಂದಿದ್ದ ದೇಶದ ಮೇಲೆ ಮನಸ್ಸಿಟ್ಟವರಾಗಿದ್ದರೆ ತಿರಿಗಿ ಅಲ್ಲಿಗೆ ಹೋಗುವದಕ್ಕೆ ಅವರಿಗೆ ಯಾವಾಗಲೂ ಅವಕಾಶವಿತ್ತು” ಎಂದನು ಅಪೊಸ್ತಲ ಪೌಲನು. ಆದರೆ ಅವರು ಹಿಂದಿರುಗಿ ಹೋಗಲಿಲ್ಲ. ಯೆಹೋವನು ‘ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ’ ಎಂಬ ದೃಢಭರವಸೆಯೊಂದಿಗೆ, ಅವರು ಆತನ ವಾಗ್ದಾನಗಳಲ್ಲಿ ನಂಬಿಕೆಯನ್ನಿಟ್ಟರು. ಯೆಹೋವನಿಗೆ ಪೂರ್ಣ ಪ್ರಾಣದ ಭಕ್ತಿಯನ್ನು ಕೊಡುತ್ತಾ ಇರಬೇಕಾದರೆ ನಾವೂ ಹಾಗೆಯೇ ಮಾಡಬೇಕು.​—⁠ಇಬ್ರಿಯ 11:6, 15, 16.

ಆಧ್ಯಾತ್ಮಿಕ ಮತ್ತು ಭೌತಿಕ ಐಶ್ವರ್ಯಗಳು

ಅಬ್ರಹಾಮನು ಕಾನಾನ್‌ ದೇಶವನ್ನು ತಲಪಿದ ನಂತರ, ದೇವರು ಅವನಿಗೆ ಹೇಳಿದ್ದು: “ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು.” ಇದಕ್ಕೆ ಪ್ರತಿಕ್ರಿಯೆಯಲ್ಲಿ ಅಬ್ರಹಾಮನು ಯೆಹೋವನಿಗಾಗಿ ಒಂದು ವೇದಿಯನ್ನು ಕಟ್ಟಿದನು ಮತ್ತು “[ಯೆಹೋವನ] ಹೆಸರನ್ನು ಹೇಳಿಕೊಂಡು ಆರಾಧಿಸಿದನು.” (ಆದಿಕಾಂಡ 12:7, 8) ಯೆಹೋವನು ಅಬ್ರಹಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದನು, ಮತ್ತು ಅವನ ಪಾಳೆಯದಲ್ಲಿದ್ದವರು ಅಸಂಖ್ಯಾತರಾಗಿದ್ದರು. ಒಂದು ಸಂದರ್ಭದಲ್ಲಿ ಅವನು 318 ಶಿಕ್ಷಿತ ಪುರುಷರನ್ನು​—⁠ಅವನ ಮನೆತನದಲ್ಲೇ ಹುಟ್ಟಿದ್ದ ದಾಸರು​—⁠ಜಮಾಯಿಸಿದ್ದರಿಂದ, “ಅವನ ಇಡೀ ಗುಂಪಿನಲ್ಲಿದ್ದವರ ಸಂಖ್ಯೆಯು ಸಾವಿರಕ್ಕಿಂತಲೂ ಹೆಚ್ಚಾಗಿದ್ದಿರಬೇಕೆಂದು” ಸೂಚಿಸಲಾಗಿದೆ. ಕಾರಣವು ಏನೇ ಆಗಿರಲಿ ಜನರಂತೂ ಅವನನ್ನು “ಮಹಾಪ್ರಭು [“ದೇವರ ದಳವಾಯಿ,” NW]” ಎಂದೆಣಿಸುತ್ತಿದ್ದರು.​—⁠ಆದಿಕಾಂಡ 13:2; 14:14; 23:⁠5.

ಅಬ್ರಹಾಮನು ಆರಾಧನೆಯಲ್ಲಿ ಮುಂದಾಳತ್ವ ವಹಿಸುತ್ತಾ, ‘ನ್ಯಾಯನೀತಿಗಳನ್ನು ನಡಿಸಿ ಯೆಹೋವನ ಮಾರ್ಗವನ್ನು ಅನುಸರಿಸಲು’ ತನ್ನ ಮನೆತನದವರಿಗೆ ಕಲಿಸಿದನು. (ಆದಿಕಾಂಡ 18:19) ಇಂದಿನ ಕ್ರೈಸ್ತ ಕುಟುಂಬ ತಲೆಗಳು ಅಬ್ರಹಾಮನ ಮಾದರಿಯಿಂದ ಉತ್ತೇಜನವನ್ನು ಪಡೆಯಬಲ್ಲರು. ಯಾಕಂದರೆ ತನ್ನ ಮನೆಯವರು ಯೆಹೋವನ ಮೇಲೆ ಆತುಕೊಂಡು, ನೀತಿಯುತ ವಿಧದಲ್ಲಿ ವರ್ತಿಸುವಂತೆ ಕಲಿಸುವುದರಲ್ಲಿ ಅವನು ಯಶಸ್ವಿಯಾದನು. ಈ ಕಾರಣದಿಂದಲೇ, ಸಾರಳ ಐಗುಪ್ತ ಸೇವಕಿಯಾದ ಹಾಗರಳು, ಅಬ್ರಹಾಮನ ಹಿರಿಯ ಸೇವಕನು, ಮತ್ತು ಪುತ್ರನಾದ ಇಸಾಕನು ಯೆಹೋವನ ಮೇಲೆ ಆತುಕೊಂಡದ್ದು ಆಶ್ಚರ್ಯದ ಸಂಗತಿಯೇನಲ್ಲ.​—⁠ಆದಿಕಾಂಡ 16:​5, 13; 24:​10-14; 25:⁠21.

ಅಬ್ರಹಾಮನು ಶಾಂತಿಕರ್ತನು ಆಗಿದ್ದನು

ಅಬ್ರಹಾಮನ ಜೀವಿತದಲ್ಲಿನ ಘಟನೆಗಳು ಅವನಿಗೆ ದೇವಭಕ್ತಿಯ ವ್ಯಕ್ತಿತ್ವವಿತ್ತೆಂಬುದನ್ನು ಪ್ರಕಟಪಡಿಸುತ್ತವೆ. ತನ್ನ ಮತ್ತು ತನ್ನ ಸೋದರಳಿಯನಾದ ಲೋಟನ ದನಕಾಯುವವರ ಮಧ್ಯೆ ಜಗಳವು ನಡೆಯುತ್ತಾ ಇರುವಂತೆ ಬಿಡುವ ಬದಲು, ತಾವು ಪ್ರತ್ಯೇಕ ಹೋಗೋಣ ಎಂಬ ಸಲಹೆಯನ್ನು ಅಬ್ರಹಾಮನು ಕೊಟ್ಟನು ಮತ್ತು ತನಗಿಂತಲೂ ಚಿಕ್ಕವನಾಗಿದ್ದ ಲೋಟನು ತಾನು ಇಷ್ಟಪಡುವ ದೇಶವನ್ನು ಆಯ್ಕೆಮಾಡುವಂತೆ ಆಮಂತ್ರಿಸಿದನು. ಅಬ್ರಹಾಮನು ನಿಶ್ಚಯವಾಗಿಯೂ ಒಬ್ಬ ಶಾಂತಿಕರ್ತನಾಗಿದ್ದನು.​—⁠ಆದಿಕಾಂಡ 13:​5-13.

ನಮ್ಮ ಮುಂದೆ ಎಂದಾದರೂ, ನಮ್ಮ ಹಕ್ಕುಗಳನ್ನು ಸ್ಥಾಪಿಸುವ ಇಲ್ಲವೆ ಶಾಂತಿಯನ್ನು ಕಾಪಾಡುವ ಸಲುವಾಗಿ ಅವುಗಳನ್ನು ಬಿಟ್ಟುಕೊಡುವ ಆಯ್ಕೆ ಇರುವಲ್ಲಿ, ಇದನ್ನು ಗಮನದಲ್ಲಿಡೋಣ: ಲೋಟನಿಗೆ ಪರಿಗಣನೆಯನ್ನು ತೋರಿಸಿದ್ದರಿಂದಾಗಿ ಅಬ್ರಹಾಮನು ಯಾವುದೇ ರೀತಿಯಲ್ಲಿ ವಂಚಿತನಾಗುವಂತೆ ಯೆಹೋವನು ಬಿಡಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ತದನಂತರ ದೇವರು ಅಬ್ರಹಾಮನಿಗೆ ಎಲ್ಲಾ ದಿಕ್ಕುಗಳಲ್ಲಿ ಕಾಣುತ್ತಿದ್ದ ಆ ದೇಶವನ್ನು ಅವನಿಗೂ ಅವನ ಸಂತಾನದವರಿಗೂ ಕೊಡುವುದಾಗಿ ವಾಗ್ದಾನಿಸಿದನು. (ಆದಿಕಾಂಡ 13:​14-17) “ಸಮಾಧಾನ ಪಡಿಸುವವರು [ಅಕ್ಷರಶಃ, “ಶಾಂತಿಕರ್ತರು”] ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು” ಎಂದನು ಯೇಸು.​—⁠ಮತ್ತಾಯ 5:​9.

ಯಾರು ಅಬ್ರಹಾಮನ ಬಾಧ್ಯಸ್ಥನಾಗಲಿದ್ದನು?

ಒಂದು ಸಂತಾನದ ಕುರಿತಾದ ವಾಗ್ದಾನಗಳ ಹೊರತಾಗಿಯೂ ಸಾರಳು ಬಂಜೆಯಾಗಿಯೇ ಉಳಿದಳು. ಅಬ್ರಹಾಮನು ಈ ವಿಷಯವನ್ನು ದೇವರ ಮುಂದಿಟ್ಟನು. ತನ್ನ ಸೇವಕನಾದ ಎಲೀಯೆಜೆರನು ತನ್ನ ಎಲ್ಲಾ ಆಸ್ತಿಯನ್ನು ಪಡೆಯಲಿದ್ದನೊ? ಇಲ್ಲ, ಯಾಕಂದರೆ ಯೆಹೋವನು ಹೇಳಿದ್ದು: “ಇವನು ನಿನಗೆ ಬಾಧ್ಯಸ್ಥನಾಗುವದಿಲ್ಲ; ನಿನ್ನ ಹೊಟ್ಟೆಯಲ್ಲೇ ಹುಟ್ಟುವವನು ನಿನಗೆ ಬಾಧ್ಯಸ್ಥನಾಗುವನು.”​—⁠ಆದಿಕಾಂಡ 15:1-4.

ಆದರೂ, ಅವರಿಗೆ ಒಂದು ಮಗು ಹುಟ್ಟಲಿಲ್ಲ. 75 ವರ್ಷ ಪ್ರಾಯದ ಸಾರಳು, ಗರ್ಭಧರಿಸುವ ವಿಚಾರವನ್ನು ಮನಸ್ಸಿನಿಂದ ತೆಗೆದುಹಾಕಿದಳು. ಹೀಗಿರುವುದರಿಂದ ಅವಳು ಅಬ್ರಹಾಮನಿಗೆ, “ಯೆಹೋವನು ನನಗೆ ಮಕ್ಕಳನ್ನು ಕೊಡಲಿಲ್ಲವಷ್ಟೆ; ನೀನು ನನ್ನ ದಾಸಿಯ ಬಳಿಗೆ ಹೋಗಬೇಕು; ಒಂದು ವೇಳೆ ಅವಳ ಮೂಲಕ ನನಗೆ ಸಂತಾನವಾದೀತು” ಎಂದು ಹೇಳಿದಳು. ಆಗ ಅಬ್ರಹಾಮನು ಹಾಗರಳನ್ನು ತನ್ನ ಎರಡನೆಯ ಹೆಂಡತಿಯಾಗಿ ತೆಗೆದುಕೊಂಡು, ಅವಳೊಂದಿಗೆ ಸಂಬಂಧವನ್ನಿಟ್ಟನು, ಮತ್ತು ಅವಳು ಗರ್ಭವತಿಯಾದಳು. ತಾನು ಗರ್ಭಿಣಿಯಾಗಿದ್ದೇನೆಂದು ಹಾಗರಳಿಗೆ ತಿಳಿದುಬಂದ ಕೂಡಲೆ, ಅವಳು ತನ್ನ ಯಜಮಾನಿಯನ್ನು ತಾತ್ಸಾರಮಾಡಲಾರಂಭಿಸಿದಳು. ವ್ಯಥೆತುಂಬಿದವಳಾಗಿ ಸಾರಳು ಅಬ್ರಹಾಮನಿಗೆ ದೂರುಹೇಳಿದಳು ಮತ್ತು ಹಾಗರಳನ್ನು ಬಾಧಿಸಿದಳು. ಇದು ಆ ಸೇವಕಿಯು ಓಡಿಹೋಗುವಂತೆ ಮಾಡಿತು.​—⁠ಆದಿಕಾಂಡ 16:​1-16.

ಅಬ್ರಹಾಮನು ಮತ್ತು ಸಾರಳು ಒಳ್ಳೇ ಮನಸ್ಸಿನಿಂದಲೇ ಆ ಕಾರ್ಯವನ್ನು ಕೈಗೊಂಡಿದ್ದರು. ಅವರು ತಮ್ಮ ದಿನಗಳಲ್ಲಿದ್ದ ಅಂಗೀಕೃತ ಆಚರಣೆಗಳಿಗೆ ಹೊಂದಿಕೆಯಲ್ಲಿದ್ದ ಕ್ರಮವನ್ನೇ ಅನುಸರಿಸಿದ್ದರು. ಆದರೆ ಅಬ್ರಹಾಮನ ಸಂತಾನವನ್ನು ಉತ್ಪಾದಿಸಲು ಅದು ಯೆಹೋವನ ಮಾರ್ಗವಾಗಿರಲಿಲ್ಲ. ನಮ್ಮ ಸಂಸ್ಕೃತಿಯು ವಿಭಿನ್ನ ಪರಿಸ್ಥಿತಿಗಳಲ್ಲಿ ನಿರ್ದಿಷ್ಟ ಕೃತ್ಯಗಳನ್ನು ಸರಿಯಾದದ್ದೆಂದು ಹೇಳಬಹುದಾದರೂ, ಯೆಹೋವನು ಅವುಗಳೊಂದಿಗೆ ಸಮ್ಮತಿಸುತ್ತಾನೆಂಬುದು ಇದರರ್ಥವಲ್ಲ. ನಮ್ಮ ಸನ್ನಿವೇಶದ ಬಗ್ಗೆ ಆತನಿಗಿರುವ ದೃಷ್ಟಿಕೋನವು ಸಂಪೂರ್ಣವಾಗಿ ಭಿನ್ನವಾಗಿರಬಹುದು. ಆದುದರಿಂದಲೇ, ನಾವು ದೇವರ ನಿರ್ದೇಶನವನ್ನು ಕೋರುತ್ತಾ, ನಾವು ಯಾವ ವಿಧದಲ್ಲಿ ಕ್ರಿಯೆಗೈಯುವಂತೆ ಆತನು ಬಯಸುತ್ತಾನೆಂಬುದನ್ನು ನಮಗೆ ಸೂಚಿಸುವಂತೆ ಪ್ರಾರ್ಥಿಸಬೇಕು.​—⁠ಕೀರ್ತನೆ 25:​4, 5; 143:​8, 10.

“ಯೆಹೋವನಿಗೆ ಅಸಾಧ್ಯ”ವಾದದ್ದೇನೂ ಇಲ್ಲ

ಸಮಯಾನಂತರ, ಹಾಗರಳು ಅಬ್ರಹಾಮನಿಗೆ ಇಷ್ಮಾಯೇಲನೆಂಬ ಮಗನನ್ನು ಹೆತ್ತಳು. ಆದರೆ ಅವನು ವಾಗ್ದತ್ತ ಸಂತಾನವಾಗಿರಲಿಲ್ಲ. ಸಾರಳು ವೃದ್ಧೆಯಾಗಿದ್ದರೂ ಅವಳೇ ಆ ಬಾಧ್ಯಸ್ಥನಿಗೆ ಜನ್ಮನೀಡಲಿದ್ದಳು.​—⁠ಆದಿಕಾಂಡ 17:​15, 16.

ಸಾರಳು ತನ್ನ ಗಂಡನಿಗೆ ಒಬ್ಬ ಮಗನನ್ನು ಹೆರುವಳೆಂದು ದೇವರು ಸ್ಪಷ್ಟವಾಗಿ ಹೇಳಿದಾಗ, “ಅಬ್ರಹಾಮನು ಅಡ್ಡಬಿದ್ದು ನಕ್ಕು​—⁠ನೂರು ವರುಷದವನಿಗೆ ಮಗ ಹುಟ್ಟುವದುಂಟೇ? ತೊಂಭತ್ತು ವರುಷದವಳಾದ ಸಾರಳು ಹೆತ್ತಾಳೇ ಎಂದು ಮನಸ್ಸಿನಲ್ಲಿ ಅಂದು”ಕೊಂಡನು. (ಆದಿಕಾಂಡ 17:​16, 17) ಈ ಸಂದೇಶವನ್ನು ಒಬ್ಬ ದೇವದೂತನು ಪುನರುಚ್ಚರಿಸಿದಾಗ ಕೇಳಿಸಿಕೊಂಡ ಸಾರಳು “ತನ್ನೊಳಗೆ ನಕ್ಕಳು.” ಆದರೆ ಯೆಹೋವನಿಗೆ ‘ಅಸಾಧ್ಯವಾದದ್ದೇನೂ’ ಇಲ್ಲ. ಆತನು ಇಚ್ಛಿಸುವಂಥ ಯಾವುದನ್ನೂ ಆತನು ಮಾಡಿಯೇ ತೀರಿಸುವನೆಂಬ ನಂಬಿಕೆ ನಮಗಿರಸಾಧ್ಯವಿದೆ.​—⁠ಆದಿಕಾಂಡ 18:12-14.

“ಸಾರಳು ವಾಗ್ದಾನಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವದಕ್ಕೆ ಶಕ್ತಿಯನ್ನು ಹೊಂದಿದಳು.” (ಇಬ್ರಿಯ 11:11) ಕಾಲಾನಂತರ, ಸಾರಳು ಇಸಾಕನಿಗೆ ಜನ್ಮವಿತ್ತಳು ಮತ್ತು ಅವನ ಹೆಸರಿನ ಅರ್ಥ “ನಗು.”

ದೇವರ ವಾಗ್ದಾನಗಳಲ್ಲಿ ಸಂಪೂರ್ಣ ಭರವಸೆ

ಇಸಾಕನೇ ದೀರ್ಘಕಾಲದಿಂದ ನಿರೀಕ್ಷಿಸಲಾಗಿದ್ದ ಬಾಧ್ಯಸ್ಥನೆಂದು ಯೆಹೋವನು ಗುರುತಿಸಿದನು. (ಆದಿಕಾಂಡ 21:12) ಆದುದರಿಂದ, ಅಬ್ರಹಾಮನು ತನ್ನ ಈ ಮಗನನ್ನು ಬಲಿಯರ್ಪಿಸುವಂತೆ ದೇವರು ಕೇಳಿಕೊಂಡಾಗ ಅವನಿಗೆ ದಂಗುಬಡಿದಿರಬೇಕು. ಆದರೂ, ದೇವರಲ್ಲಿ ಸಂಪೂರ್ಣ ಭರವಸೆಯಿಡಲು ಅಬ್ರಹಾಮನಿಗೆ ಬಲವಾದ ಕಾರಣಗಳಿದ್ದವು. ಯೆಹೋವನು ಇಸಾಕನನ್ನು ಮೃತಾವಸ್ಥೆಯಿಂದ ಎಬ್ಬಿಸಶಕ್ತನಲ್ಲವೊ? (ಇಬ್ರಿಯ 11:​17-19) ಇಸಾಕನ ಜನನವನ್ನು ಸಾಧ್ಯಗೊಳಿಸುವಂತೆ ಅಬ್ರಹಾಮ ಮತ್ತು ಸಾರಳ ಪ್ರಜನನ ಶಕ್ತಿಯನ್ನು ಅದ್ಭುತಕರವಾಗಿ ಪುನರುಜ್ಜೀವಿಸುವ ಮೂಲಕ ದೇವರು ತನ್ನ ಶಕ್ತಿಯನ್ನು ಈಗಾಗಲೇ ತೋರಿಸಿಕೊಟ್ಟಿದ್ದನಲ್ಲವೊ? ತನ್ನ ವಾಗ್ದಾನಗಳನ್ನು ಪೂರೈಸುವ ದೇವರ ಸಾಮರ್ಥ್ಯವನ್ನು ಮನಗಂಡಿದ್ದ ಅಬ್ರಹಾಮನು ವಿಧೇಯನಾಗಲು ಸಿದ್ಧನಿದ್ದನು. ಆದರೆ ಅವನು ತನ್ನ ಮಗನನ್ನು ಹತಿಸುವುದರಿಂದ ತಡೆಯಲ್ಪಟ್ಟನೆಂಬುದು ನಿಜ. (ಆದಿಕಾಂಡ 22:​1-14) ಹಾಗಿದ್ದರೂ, ಈ ವಿಷಯದಲ್ಲಿ ಅಬ್ರಹಾಮನು ವಹಿಸಿದ ಪಾತ್ರವು, ಯೆಹೋವ ದೇವರು ‘ತನ್ನ ಒಬ್ಬನೇ ಮಗನನ್ನು,’ ‘ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಲಿಕ್ಕಾಗಿ’ ನಮ್ಮಲ್ಲಿ ಪ್ರತಿಯೊಬ್ಬರಿಗಾಗಿ ಕೊಡುವುದು ಎಷ್ಟು ಕಷ್ಟಕರವಾಗಿದ್ದಿರಬೇಕೆಂಬುದನ್ನು ನೋಡುವಂತೆ ಸಹಾಯಮಾಡುತ್ತದೆ.​—⁠ಯೋಹಾನ 3:16; ಮತ್ತಾಯ 20:⁠28.

ದೇವರಲ್ಲಿ ಅಬ್ರಹಾಮನಿಗೆ ನಂಬಿಕೆಯು ಇದ್ದುದರಿಂದ, ಯೆಹೋವನ ವಾಗ್ದಾನಗಳ ಬಾಧ್ಯಸ್ಥನು ಕಾನಾನ್‌ ದೇಶದ ಒಬ್ಬ ಸುಳ್ಳು ಆರಾಧಕಳನ್ನು ವಿವಾಹವಾಗಲು ಸಾಧ್ಯವಿಲ್ಲವೆಂದು ಅವನಿಗೆ ತಿಳಿದಿತ್ತು. ಒಬ್ಬ ದೇವಭಕ್ತ ತಂದೆಯು, ಯೆಹೋವನ ಸೇವೆಮಾಡದ ಒಬ್ಬ ವ್ಯಕ್ತಿಯೊಂದಿಗೆ ತನ್ನ ಮಗನ ವಿವಾಹಕ್ಕೆ ಹೇಗೆ ತಾನೇ ಸಮ್ಮತಿ ಕೊಟ್ಟಾನು? ಹೀಗಿರುವುದರಿಂದ ಅಬ್ರಹಾಮನು ಇಸಾಕನಿಗಾಗಿ ತಕ್ಕ ಹೆಂಡತಿಯನ್ನು, 800 ಕಿಲೊಮೀಟರ್‌ಕ್ಕಿಂತಲೂ ದೂರದ ಮೆಸೊಪೊತಾಮ್ಯದಲ್ಲಿದ್ದ ಅವನ ಸಂಬಂಧಿಕರಲ್ಲಿ ಹುಡುಕಿದನು. ದೇವರು ಅವನ ಆ ಪ್ರಯತ್ನವನ್ನು ಹರಸುತ್ತಾ, ಇಸಾಕನ ವಧುವೂ ಮೆಸ್ಸೀಯನ ವಂಶಜಳೂ ಆಗುವಂತೆ ಆರಿಸಲ್ಪಟ್ಟವಳು ರೆಬಕ್ಕಳೆಂಬುದನ್ನು ಸೂಚಿಸಿದನು. ಹೌದು, ಯೆಹೋವನು “[ಅಬ್ರಹಾಮನನ್ನು] ಸಕಲವಿಷಯಗಳಲ್ಲಿ ಅಭಿವೃದ್ಧಿಪಡಿಸಿದ್ದನು.”​—⁠ಆದಿಕಾಂಡ 24:1-67; ಮತ್ತಾಯ 1:1, 2.

ಎಲ್ಲಾ ಜನಾಂಗಗಳಿಗಾಗಿ ಆಶೀರ್ವಾದಗಳು

ಅಬ್ರಹಾಮ ಮತ್ತು ಸಾರಳು ಪರೀಕ್ಷೆಗಳನ್ನು ತಾಳಿಕೊಳ್ಳುವುದರಲ್ಲಿ ಮತ್ತು ದೇವರ ವಾಗ್ದಾನಗಳಲ್ಲಿ ನಂಬಿಕೆಯನ್ನು ತೋರಿಸುವುದರಲ್ಲಿ ಆದರ್ಶಪ್ರಾಯರಾಗಿದ್ದರು. ಅಂಥ ವಾಗ್ದಾನಗಳ ನೆರವೇರಿಕೆಗೂ ಮಾನವಕುಲಕ್ಕಾಗಿರುವ ನಿತ್ಯ ಪ್ರತೀಕ್ಷೆಗಳಿಗೂ ಸಂಬಂಧವಿದೆ. ಯಾಕೆಂದರೆ ಯೆಹೋವನು ಅಬ್ರಹಾಮನಿಗೆ ಆಶ್ವಾಸನೆಕೊಟ್ಟದ್ದು: “ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.”​—⁠ಆದಿಕಾಂಡ 22:⁠18.

ನಿಜ, ನಮ್ಮಂತೆಯೇ ಅಬ್ರಹಾಮ ಮತ್ತು ಸಾರಳು ಅಪರಿಪೂರ್ಣರಾಗಿದ್ದರು. ಆದರೆ ದೇವರ ಚಿತ್ತವೇನೆಂಬುದು ಅವರಿಗೆ ಸ್ಪಷ್ಟವಾದ ಕೂಡಲೆ ಎಷ್ಟೇ ತ್ಯಾಗವನ್ನು ಮಾಡಬೇಕಾಗಿದ್ದರೂ, ಅವರು ತಡಮಾಡದೆ ಅದಕ್ಕೆ ವಿಧೇಯರಾದರು. ಈ ಕಾರಣದಿಂದ ಅಬ್ರಹಾಮನನ್ನು “ದೇವರ ಸ್ನೇಹಿತ” ಮತ್ತು ಸಾರಳನ್ನು ‘ದೇವರ ಮೇಲೆ ನಿರೀಕ್ಷೆಯಿಟ್ಟ ಭಕ್ತ ಸ್ತ್ರೀ’ ಎಂದು ಸ್ಮರಿಸಲಾಗುತ್ತದೆ. (ಯಾಕೋಬ 2:23; 1 ಪೇತ್ರ 3:5) ಅಬ್ರಹಾಮ ಮತ್ತು ಸಾರಳ ನಂಬಿಕೆಯನ್ನು ಅನುಕರಿಸಲು ಪ್ರಯತ್ನಿಸುವ ಮೂಲಕ, ನಾವು ಸಹ ದೇವರೊಂದಿಗೆ ಅಮೂಲ್ಯವಾದ ಆಪ್ತತೆಯಲ್ಲಿ ಆನಂದಿಸಬಲ್ಲೆವು. ಯೆಹೋವನು ಅಬ್ರಹಾಮನಿಗೆ ಮಾಡಿದಂಥ ಅಮೂಲ್ಯ ವಾಗ್ದಾನಗಳಿಂದ ನಾವೂ ಪ್ರಯೋಜನ ಹೊಂದಬಲ್ಲೆವು.​—⁠ಆದಿಕಾಂಡ 17:⁠7.

[ಪುಟ 26ರಲ್ಲಿರುವ ಚಿತ್ರ]

ಅಬ್ರಹಾಮ ಮತ್ತು ಸಾರಳ ನಂಬಿಕೆಯ ಕಾರಣದಿಂದ, ಯೆಹೋವನು ಅವರ ವೃದ್ಧಾಪ್ಯದಲ್ಲಿ ಒಬ್ಬ ಮಗನನ್ನು ಕೊಟ್ಟು ಹರಸಿದನು

[ಪುಟ 28ರಲ್ಲಿರುವ ಚಿತ್ರ]

ಅಬ್ರಹಾಮನ ಮಾದರಿಯು, ಯೆಹೋವನು ತನ್ನ ಏಕಜಾತ ಪುತ್ರನನ್ನು ಸಾಯುವಂತೆ ಅನುಮತಿಸಿದ್ದು ಆತನನ್ನು ಹೇಗೆ ಬಾಧಿಸಿತೆಂಬುದನ್ನು ನೋಡುವಂತೆ ನಮಗೆ ಸಹಾಯಮಾಡುತ್ತದೆ