ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಯೋವೃದ್ಧರು—ನಮ್ಮ ಕ್ರೈಸ್ತ ಸಹೋದರತ್ವದ ಅಮೂಲ್ಯ ಸದಸ್ಯರು

ವಯೋವೃದ್ಧರು—ನಮ್ಮ ಕ್ರೈಸ್ತ ಸಹೋದರತ್ವದ ಅಮೂಲ್ಯ ಸದಸ್ಯರು

ವಯೋವೃದ್ಧರು​—⁠ನಮ್ಮ ಕ್ರೈಸ್ತ ಸಹೋದರತ್ವದ ಅಮೂಲ್ಯ ಸದಸ್ಯರು

“ಯೆಹೋವನ ಆಲಯದಲ್ಲಿ [ಸಸಿಗಳಂತೆ] ನೆಡಲ್ಪಟ್ಟವರು . . . ಚೆನ್ನಾಗಿ ಬೆಳೆಯುವರು. ಮುಪ್ಪಿನಲ್ಲಿಯೂ ಫಲಿಸುವರು.”​—⁠ಕೀರ್ತನೆ 92:13, 14.

ಯೆಹೋವನು ತನ್ನ ಸಕಲ ನಂಬಿಗಸ್ತ ಸೇವಕರನ್ನು ಪ್ರೀತಿಸುತ್ತಾನೆ, ಮತ್ತು ಇವರಲ್ಲಿ ಇಳಿವಯಸ್ಸಿನಲ್ಲಿರುವ ಆತನ ಸೇವಕರೂ ಸೇರಿರುತ್ತಾರೆ. ಆದರೂ, ಅಮೆರಿಕದ ಒಂದು ರಾಷ್ಟ್ರೀಯ ಅಂದಾಜಿಗನುಸಾರ, ಅಲ್ಲಿ ಪ್ರತಿ ವರ್ಷ ಸುಮಾರು ಐದು ಲಕ್ಷ ಮಂದಿ ವೃದ್ಧರು ದೌರ್ಜನ್ಯಕ್ಕೊಳಗಾಗುತ್ತಾರೆ ಅಥವಾ ಅಸಡ್ಡೆ ಮಾಡಲ್ಪಡುತ್ತಾರೆ. ಇದೇ ರೀತಿಯ ಜಗದ್ವ್ಯಾಪಕ ವರದಿಗಳು, ವಯೋವೃದ್ಧರ ಮೇಲಿನ ದೌರ್ಜನ್ಯವು ಒಂದು ಭೌಗೋಳಿಕ ಸಮಸ್ಯೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಇದಕ್ಕಿರುವ ಮೂಲಕಾರಣವು, ಒಂದು ಸಂಸ್ಥೆ ಹೇಳುವಂತೆ, “ವೃದ್ಧರು ತಮ್ಮ ಉಪಯುಕ್ತತೆಯ ಕಾಲವನ್ನು ದಾಟಿ ಬದುಕಿರುತ್ತಾರೆ, ಅವರಿಗೆ ಉತ್ಪಾದನ ಸಾಮರ್ಥ್ಯವಿರುವುದಿಲ್ಲ ಮತ್ತು ಇತರರ ಮೇಲೆ ವಿಪರೀತವಾಗಿ ಅವಲಂಬಿಸುತ್ತಾರೆ . . . ಎಂಬುದು ಇಂದು ಅನೇಕ ಜನರಲ್ಲಿರುವ ಮನೋಭಾವವಾಗಿದೆ.”

2 ಯೆಹೋವ ದೇವರಿಗಾದರೋ ತನ್ನ ನಿಷ್ಠಾವಂತ ವೃದ್ಧ ಸೇವಕರು ಅತ್ಯಮೂಲ್ಯರು. ಆತನು ತನ್ನ ಗಮನವನ್ನು ನಮ್ಮ ‘ಆಂತರ್ಯದ’ ಮೇಲೆ, ಅಂದರೆ ನಮ್ಮ ಆಧ್ಯಾತ್ಮಿಕ ಸ್ಥಿತಿಯ ಮೇಲೆ ಕೇಂದ್ರೀಕರಿಸುತ್ತಾನೆಯೇ ಹೊರತು ನಮ್ಮ ಶಾರೀರಿಕ ಇತಿಮಿತಿಗಳ ಮೇಲಲ್ಲ. (2 ಕೊರಿಂಥ 4:16) ಆತನ ವಾಕ್ಯವಾದ ಬೈಬಲಿನಲ್ಲಿ ಈ ಹೃದಯೋತ್ತೇಜಕ ಆಶ್ವಾಸನೆಯು ನಮಗಿದೆ: “ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು; ಲೆಬನೋನಿನ ದೇವದಾರುವೃಕ್ಷದ ಹಾಗೆ ವೃದ್ಧಿಯಾಗುವರು. ಯೆಹೋವನ ಆಲಯದಲ್ಲಿ [ಸಸಿಗಳಂತೆ] ನೆಡಲ್ಪಟ್ಟವರು ನಮ್ಮ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯುವರು. ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು. ಹೀಗೆ ಅವರು ಯೆಹೋವನ ಸತ್ಯಸಂಧತೆಗೆ ದೃಷ್ಟಾಂತರಾಗಿರುವರು.” (ಕೀರ್ತನೆ 92:12-15) ಈ ವಚನಗಳ ಕುರಿತಾದ ಪರಿಗಣನೆಯು, ವಯಸ್ಸಾದವರಾದ ನೀವು ಕ್ರೈಸ್ತ ಸಹೋದರತ್ವಕ್ಕೆ ನೀಡಬಲ್ಲ ಬೆಲೆಬಾಳುವ ಸಹಾಯದ ರೂಪಗಳನ್ನು ತೋರಿಸುವುದು.

‘ಮುಪ್ಪಿನಲ್ಲಿಯೂ ಫಲಿಸುವುದು’

3 ಕೀರ್ತನೆಗಾರನು ನೀತಿವಂತರನ್ನು, ‘ದೇವರ ಆಲಯದ ಅಂಗಳಗಳಲ್ಲಿ ನೆಡಲ್ಪಟ್ಟ’ ಖರ್ಜೂರದ ಮರಗಳಿಗೆ ಹೋಲಿಸುತ್ತಾನೆ. ಅವರು “ಮುಪ್ಪಿನಲ್ಲಿಯೂ ಫಲಿಸುವರು.” ಇದು ಪ್ರೋತ್ಸಾಹಕರವಾದ ವಿಚಾರವೆಂದು ನೀವು ಒಪ್ಪಿಕೊಳ್ಳುವುದಿಲ್ಲವೊ? ಬೈಬಲ್‌ ಸಮಯಗಳಲ್ಲಿ ಪೌರಾತ್ಯ ದೇಶಗಳ ಅಂಗಳಗಳಲ್ಲಿ, ಸೊಗಸಾದ, ನೆಟ್ಟಗಿನ ಖರ್ಜೂರದ ಮರಗಳು ಸಾಮಾನ್ಯ ನೋಟವಾಗಿದ್ದವು. ಅವು, ಆಲಂಕಾರಿಕ ಮೌಲ್ಯಕ್ಕಾಗಿ ಮಾತ್ರವಲ್ಲದೆ ಅವುಗಳ ಹೇರಳ ಫಲೋತ್ಪಾದನೆಗಾಗಿಯೂ ಬೆಲೆಬಾಳುವ ಮರಗಳಾಗಿದ್ದವು. * ಕೆಲವು ಮರಗಳು ಒಂದು ನೂರಕ್ಕೂ ಹೆಚ್ಚು ವರುಷಕಾಲ ಫಲಬಿಡುತ್ತಿದ್ದವು. ಸತ್ಯಾರಾಧನೆಯಲ್ಲಿ ಸ್ಥಿರವಾಗಿ ನೆಡಲ್ಪಟ್ಟವರಾಗಿರುವ ಮೂಲಕ ನೀವೂ ಹಾಗೆಯೇ, “ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ” ಹೋಗಬಲ್ಲಿರಿ.​—⁠ಕೊಲೊಸ್ಸೆ 1:10.

4 ಕ್ರೈಸ್ತರು “ತುಟಿಗಳ ಫಲವನ್ನು” (NW) ಕೊಡುವಂತೆ ಅಂದರೆ ಯೆಹೋವನ ಮತ್ತು ಆತನ ಉದ್ದೇಶಗಳ ಸ್ತುತಿಯಲ್ಲಿ ಮಾತುಗಳನ್ನು ಆಡುವಂತೆ ಆತನು ಅಪೇಕ್ಷಿಸುತ್ತಾನೆ. (ಇಬ್ರಿಯ 13:15) ಇದು ವೃದ್ಧರಾಗಿರುವ ನಿಮಗೆ ಅನ್ವಯಿಸುತ್ತದೆಯೆ? ಖಂಡಿತವಾಗಿಯೂ ಅನ್ವಯಿಸುತ್ತದೆ.

5 ಯೆಹೋವನ ನಾಮ ಮತ್ತು ಉದ್ದೇಶಗಳಿಗೆ ನಿರ್ಭೀತಿಯಿಂದ ಸಾಕ್ಷಿಕೊಟ್ಟ ವೃದ್ಧರ ಮಾದರಿಗಳು ಬೈಬಲಿನಲ್ಲಿವೆ. ಯೆಹೋವನು ಮೋಶೆಯನ್ನು ತನ್ನ ಪ್ರವಾದಿಯಾಗಿಯೂ ಪ್ರತಿನಿಧಿಯಾಗಿಯೂ ನೇಮಿಸಿದಾಗ ಅವನಿಗೆ “ಎಪ್ಪತ್ತು ವರುಷ” ದಾಟಿ ಹೋಗಿತ್ತು. (ಕೀರ್ತನೆ 90:10; ವಿಮೋಚನಕಾಂಡ 4:10-17) ಪ್ರವಾದಿ ದಾನಿಯೇಲನ ಇಳಿವಯಸ್ಸು ಯೆಹೋವನ ಪರಮಾಧಿಕಾರದ ಕುರಿತು ನಿರ್ಭೀತಿಯಿಂದ ಸಾಕ್ಷಿಕೊಡುವುದರಿಂದ ಅವನನ್ನು ತಡೆದುಹಿಡಿಯಲಿಲ್ಲ. ಬೇಲ್ಶೆಚ್ಚರನು ಗೋಡೆಯ ಮೇಲೆ ಬರೆಯಲ್ಪಟ್ಟ ರಹಸ್ಯಗರ್ಭಿತ ಬರಹಗಳ ಅರ್ಥವನ್ನು ತಿಳಿಸಲು ದಾನಿಯೇಲನಿಗೆ ಆಜ್ಞೆಕೊಟ್ಟಾಗ ಅವನ ವಯಸ್ಸು ಪ್ರಾಯಶಃ ತೊಂಬತ್ತನ್ನು ಮೀರಿರಬೇಕು. (ದಾನಿಯೇಲ, ಅಧ್ಯಾಯ 5) ಮತ್ತು ವೃದ್ಧನಾದ ಅಪೊಸ್ತಲ ಯೋಹಾನನ ವಿಷಯ ಏನನ್ನಬಹುದು? ಅವನ ನಂಬಿಗಸ್ತಿಕೆಯ ದೀರ್ಘಾವಧಿ ಸೇವೆಯ ಅಂತ್ಯಭಾಗದಲ್ಲಿ, “ದೇವರ ವಾಕ್ಯಕ್ಕೋಸ್ಕರವೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ” ಅವನನ್ನು ಪತ್ಮೋಸ್‌ ದ್ವೀಪದಲ್ಲಿ ಬಂಧಿಸಲಾಯಿತು. (ಪ್ರಕಟನೆ 1:9) ಹೀಗೆ, ತಮ್ಮ ವೃದ್ಧಾಪ್ಯದಲ್ಲಿ “ತುಟಿಗಳ ಫಲವನ್ನು” ಕೊಟ್ಟ ಇನ್ನೂ ಅನೇಕ ಬೈಬಲ್‌ ವ್ಯಕ್ತಿಗಳ ನೆನಪು ನಿಮಗಿದ್ದೀತು.​—⁠1 ಸಮುವೇಲ 8:1, 10; 12:2; 1 ಅರಸುಗಳು 14:4, 5; ಲೂಕ 1:7, 67-79; 2:22-32.

6 ಅಪೊಸ್ತಲ ಪೇತ್ರನು ಹೀಬ್ರು ಪ್ರವಾದಿಯಾದ ಯೋವೇಲನನ್ನು ಉಲ್ಲೇಖಿಸುತ್ತ ಹೇಳಿದ್ದು: ‘ಕಡೇ ದಿವಸಗಳಲ್ಲಿ ನಾನು [‘ಹಿರಿಯರನ್ನು’ ಸೇರಿಸಿ] ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಅವರೂ ಪ್ರವಾದಿಸುವರು ಎಂದು ದೇವರು ಹೇಳುತ್ತಾನೆ.’ (ಅ. ಕೃತ್ಯಗಳು 2:17, 18, 21; ಯೋವೇಲ 2:28) ಅದಕ್ಕನುಸಾರವಾಗಿ, ಈ ಕಡೇ ದಿವಸಗಳಲ್ಲಿ ಯೆಹೋವನು ಅಭಿಷಿಕ್ತ ವರ್ಗದ ಮತ್ತು “ಬೇರೆ ಕುರಿ”ಗಳ ವೃದ್ಧ ಸದಸ್ಯರನ್ನು ತನ್ನ ಉದ್ದೇಶಗಳನ್ನು ಪ್ರಕಟಿಸಲು ಉಪಯೋಗಿಸಿದ್ದಾನೆ. (ಯೋಹಾನ 10:16) ಇವರಲ್ಲಿ ಕೆಲವರು ದಶಕಗಳಿಂದಲೂ ರಾಜ್ಯ ಫಲಗಳನ್ನು ನಂಬಿಗಸ್ತಿಕೆಯಿಂದ ಫಲಿಸುತ್ತಿದ್ದಾರೆ.

7 ಸೋನ್ಯ ಎಂಬ ಸಹೋದರಿಯನ್ನು ತೆಗೆದುಕೊಳ್ಳಿರಿ. ಅವರು 1941ರಲ್ಲಿ ಪೂರ್ಣ ಸಮಯದ ರಾಜ್ಯ ಪ್ರಚಾರಕರಾದರು. ಅವರು ದೀರ್ಘಕಾಲದ ವ್ಯಾಧಿಯಿಂದ ನರಳುತ್ತಿದ್ದಾಗಲೂ ತಮ್ಮ ಮನೆಯಲ್ಲೇ ಕ್ರಮವಾಗಿ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದರು. ಸೋನ್ಯ ವಿವರಿಸಿದ್ದು: “ಸುವಾರ್ತೆ ಸಾರುವಿಕೆ ನನ್ನ ಜೀವನದ ಅಂಗವಾಗಿದೆ. ವಾಸ್ತವವಾಗಿ, ಅದು ನನ್ನ ಬಾಳೇ ಆಗಿದೆ, ಅದರಿಂದ ನಾನು ನಿವೃತ್ತಳಾಗಲು ಬಯಸುವುದಿಲ್ಲ.” ಸ್ವಲ್ಪ ಸಮಯದ ಹಿಂದೆ, ಸೋನ್ಯ ಮತ್ತು ಅವರ ಅಕ್ಕ ಆಲಿವ್‌, ಆಸ್ಪತ್ರೆಯ ಪ್ರತೀಕ್ಷಾಲಯದಲ್ಲಿ ತಾವು ಭೇಟಿಯಾದ ಜ್ಯಾನೆಟ್‌ ಎಂಬ ರೋಗಿಯೊಂದಿಗೆ ಬೈಬಲಿನ ನಿರೀಕ್ಷೆಯ ಸಂದೇಶವನ್ನು ಹಂಚಿಕೊಂಡರು. ಜ್ಯಾನೆಟಳು, ಗುಣವಾಗದಂಥ ಕಾಯಿಲೆಯ ರೋಗಿಯಾಗಿದ್ದಳು. ತನ್ನ ಮಗಳಲ್ಲಿ ತೋರಿಸಲ್ಪಟ್ಟ ಈ ಪ್ರೀತಿಪೂರ್ವಕವಾದ ಆಸಕ್ತಿಯಿಂದಾಗಿ, ಒಬ್ಬ ಶ್ರದ್ಧಾಭರಿತ ಕ್ಯಾಥೊಲಿಕಳಾಗಿದ್ದ ಜ್ಯಾನೆಟಳ ತಾಯಿಯು ಎಷ್ಟು ಪ್ರಭಾವಿತಳಾದಳೆಂದರೆ, ಆಕೆ ಮನೆ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡಳು ಮತ್ತು ಈಗ ಅತ್ಯುತ್ತಮ ಪ್ರಗತಿಯನ್ನು ಮಾಡುತ್ತಿದ್ದಾಳೆ. ರಾಜ್ಯಫಲವನ್ನು ಫಲಿಸಲು ನೀವು ಈ ರೀತಿಯ ಸಂದರ್ಭಗಳನ್ನು ಕೂಡಲೇ ಸದುಪಯೋಗಿಸಿಕೊಳ್ಳುತ್ತೀರೊ?

8 ಇಳಿವಯಸ್ಸಿನ ಇತಿಮಿತಿಗಳ ಹೊರತೂ ರಾಜ್ಯ ಸಾರುವ ಕೆಲಸದಲ್ಲಿ ಧೈರ್ಯದಿಂದ ಮುಂದುವರಿಯುತ್ತಿರುವ ವೃದ್ಧ ಕ್ರೈಸ್ತರು, ನಾಲ್ಕು ದಶಕಗಳ ವರೆಗೆ ಅರಣ್ಯದಲ್ಲಿ ಮೋಶೆಯ ಸಂಗಡಿಗನಾಗಿದ್ದ ನಂಬಿಗಸ್ತ ಇಸ್ರಾಯೇಲ್ಯನಾದ ಕಾಲೇಬನ ಹೆಜ್ಜೆಜಾಡಿನಲ್ಲಿ ನಡೆಯುತ್ತಿದ್ದಾರೆ. ಕಾಲೇಬನು ಯೊರ್ದನ್‌ ಹೊಳೆಯನ್ನು ದಾಟಿ ವಾಗ್ದತ್ತ ದೇಶಕ್ಕೆ ಕಾಲಿಟ್ಟಾಗ 79 ವರ್ಷದವನಾಗಿದ್ದನು. ಇಸ್ರಾಯೇಲಿನ ವಿಜಯೀ ಸೈನ್ಯದಲ್ಲಿ ಆರು ವರುಷ ಹೋರಾಡಿದ ಬಳಿಕ ಅವನು ತನ್ನ ಹಿಂದಿನ ಸಾಧನೆಗಳಲ್ಲಿ ತೃಪ್ತನಾಗಿ ವಿಶ್ರಮಿಸಬಹುದಾಗಿತ್ತು. ಆದರೆ ಅವನು ಹಾಗೆ ಮಾಡದೆ, ದೊಡ್ಡ ಗಾತ್ರದ ಶರೀರಿಗಳಾದ ಅನಾಕ್ಯರು ಜೀವಿಸುತ್ತಿದ್ದ ಕ್ಷೇತ್ರವಾದ ಯೆಹೂದದ ಪರ್ವತ ಪ್ರದೇಶದಲ್ಲಿ “ದೊಡ್ಡವೂ ಕೋಟೆಕೊತ್ತಲುಳ್ಳವುಗಳೂ” ಆಗಿದ್ದ ಪಟ್ಟಣಗಳನ್ನು ಸ್ವಾಧೀನಪಡಿಸುವ ಕಷ್ಟಕರವಾದ ನೇಮಕವನ್ನು ಕೇಳಿಪಡೆದನು. ಯೆಹೋವನ ಸಹಾಯದಿಂದ ಕಾಲೇಬನು ‘ಅವರೆಲ್ಲರನ್ನೂ ಯೆಹೋವನ ಮಾತಿಗನುಸಾರ ಓಡಿಸಿಬಿಟ್ಟನು.’ (ಯೆಹೋಶುವ 14:9-14; 15:13, 14) ಆದುದರಿಂದ, ವೃದ್ಧಾಪ್ಯದಲ್ಲಿ ನೀವು ರಾಜ್ಯಫಲವನ್ನು ಫಲಿಸುತ್ತ ಮುಂದುವರಿಯುವಾಗ, ಯೆಹೋವನು ಕಾಲೇಬನೊಂದಿಗೆ ಇದ್ದಂತೆ ನಿಮ್ಮೊಂದಿಗೂ ಇರುವನೆಂಬ ಭರವಸೆ ನಿಮಗಿರಲಿ. ಮತ್ತು ನೀವು ನಂಬಿಗಸ್ತರಾಗಿ ಉಳಿಯುವಲ್ಲಿ ಆತನು ತನ್ನ ವಾಗ್ದತ್ತ ನೂತನ ಲೋಕದಲ್ಲಿ ನಿಮಗೊಂದು ಸ್ಥಾನವನ್ನು ದಯಪಾಲಿಸುವನು.​—⁠ಯೆಶಾಯ 40:29-31; 2 ಪೇತ್ರ 3:13.

“ಅವರು ಪುಷ್ಟರೂ ನವೀನರೂ ಆಗಿರುತ್ತ ಮುಂದುವರಿಯುವರು”

9 ಯೆಹೋವನ ವಯೋವೃದ್ಧ ಸೇವಕರ ಫಲವತ್ತತೆಗೆ ಗಮನ ಸೆಳೆಯುತ್ತ, ಕೀರ್ತನೆಗಾರನು ಹಾಡಿದ್ದು: “ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು; ಲೆಬನೋನಿನ ದೇವದಾರುವೃಕ್ಷದ ಹಾಗೆ ವೃದ್ಧಿಯಾಗುವರು. ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು [“ಅವರು ಪುಷ್ಟರೂ ನವೀನರೂ ಆಗಿರುತ್ತ ಮುಂದುವರಿಯುವರು,” NW].”​—⁠ಕೀರ್ತನೆ 92:​12, 14.

10 ಮುಪ್ಪಿನ ವರುಷಗಳಲ್ಲೂ ನೀವು ನಿಮ್ಮ ಆಧ್ಯಾತ್ಮಿಕ ಚೈತನ್ಯವನ್ನು ಹೇಗೆ ಕಾಪಾಡಿಕೊಳ್ಳಬಲ್ಲಿರಿ? ಖರ್ಜೂರದ ಮರದ ನಿರಂತರ ಸೊಬಗಿನ ರಹಸ್ಯವು ಅದಕ್ಕೆ ಸಿಗುವ ಸಿಹಿನೀರಿನ ಸರಬರಾಯಿ ಬತ್ತಿ ಹೋಗದಿರುವುದೇ. ಅದೇ ರೀತಿ, ದೇವರ ವಾಕ್ಯದ ನಿಮ್ಮ ಅಧ್ಯಯನದ ಮೂಲಕ ಬೈಬಲ್‌ ಸತ್ಯವೆಂಬ ಜಲದಿಂದ ಮತ್ತು ಆತನ ಸಂಸ್ಥೆಯೊಂದಿಗಿನ ನಿಮ್ಮ ಸಹವಾಸದಿಂದ ನೀವು ಪೋಷಣೆ ಪಡೆಯಬಲ್ಲಿರಿ. (ಕೀರ್ತನೆ 1:1-3; ಯೆರೆಮೀಯ 17:7, 8) ನಿಮ್ಮ ಆಧ್ಯಾತ್ಮಿಕ ಚೈತನ್ಯದಿಂದಾಗಿ ನಿಮ್ಮ ಜೊತೆವಿಶ್ವಾಸಿಗಳಿಗೆ ನೀವೊಂದು ಅತ್ಯಮೂಲ್ಯ ಸ್ವತ್ತಾಗಿದ್ದೀರಿ. ವೃದ್ಧ ಮಹಾಯಾಜಕನಾಗಿದ್ದ ಯೆಹೋಯಾದನ ಸಂಬಂಧದಲ್ಲಿ ಇದು ಹೇಗೆ ನಿಜವಾಯಿತೆಂಬುದನ್ನು ಪರಿಗಣಿಸಿರಿ.

11 ಹೆಬ್ಬಯಕೆಯ ರಾಣಿ ಅತಲ್ಯಳು ತನ್ನ ಸ್ವಂತ ಮೊಮ್ಮಕ್ಕಳನ್ನು ಕೊಲೆಮಾಡಿ ಯೆಹೂದದ ಅಧಿಕಾರವನ್ನು ವಶಪಡಿಸಿಕೊಂಡಾಗ ಯೆಹೋಯಾದನಿಗೆ ಪ್ರಾಯಶಃ ಒಂದು ನೂರಕ್ಕೂ ಹೆಚ್ಚು ವರ್ಷ ಪ್ರಾಯವಾಗಿತ್ತು. ಹೀಗಿರುವಾಗ ವೃದ್ಧ ಯೆಹೋಯಾದನು ಏನು ಮಾಡಸಾಧ್ಯವಿತ್ತು? ಅವನೂ ಅವನ ಹೆಂಡತಿಯೂ ರಾಜನ ಬದುಕಿ ಉಳಿದಿದ್ದ ಏಕಮಾತ್ರ ಉತ್ತರಾಧಿಯಾಗಿದ್ದ ಯೆಹೋವಾಷನನ್ನು ಆರು ವರ್ಷಕಾಲ ದೇವಾಲಯದಲ್ಲಿ ಅಡಗಿಸಿಟ್ಟರು. ಬಳಿಕ, ಚಕಿತಗೊಳಿಸುವ ಒಂದು ಘಟನೆಯಲ್ಲಿ, ಯೆಹೋಯಾದನು ಏಳು ವರ್ಷದವನಾದ ಯೆಹೋವಾಷನನ್ನು ರಾಜನೆಂದು ಘೋಷಿಸಿ ಅತಲ್ಯಳನ್ನು ಕೊಲ್ಲಿಸಿದನು.​—⁠2 ಪೂರ್ವಕಾಲವೃತ್ತಾಂತ 22:10-12; 23:1-3, 15, 21.

12 ಅರಸನ ಪಾಲಕನಾಗಿ ಯೆಹೋಯಾದನು ಸತ್ಯಾರಾಧನೆಯನ್ನು ವರ್ಧಿಸಲು ತನ್ನ ವರ್ಚಸ್ಸನ್ನು ಉಪಯೋಗಿಸಿದನು. ಅವನು “ಎಲ್ಲಾ ಜನರನ್ನೂ ಅರಸನನ್ನೂ ಪ್ರೇರಿಸಿ ತಾವೆಲ್ಲರೂ ಯೆಹೋವನ ಪ್ರಜೆಗಳಾಗಿರುವೆವೆಂದು ಅವರೊಡನೆ ಪ್ರಮಾಣಮಾಡಿದನು.” ಯೆಹೋಯಾದನ ಅಪ್ಪಣೆಗಳ ಮೇರೆಗೆ ಜನರು ಸುಳ್ಳು ದೇವರಾದ ಬಾಳನ ಆಲಯವನ್ನು ಕೆಡವಿ, ಅದರ ಬಲಿಪೀಠಗಳು, ವಿಗ್ರಹಗಳು, ಮತ್ತು ಪೂಜಾರಿಯನ್ನು ತೆಗೆದುಹಾಕಿದರು. ಯೆಹೋವಾಷನು ದೇವಾಲಯದ ಸೇವೆಗಳನ್ನು ಪುನಸ್ಸ್ಥಾಪಿಸಿ, ಬಹಳಷ್ಟು ಅಗತ್ಯವಾಗಿದ್ದ ದೇವಾಲಯದ ಜೀರ್ಣೋದ್ಧಾರ ಕೆಲಸವನ್ನು ಕೈಕೊಂಡದ್ದೂ ಯೆಹೋಯಾದನ ಮಾರ್ಗದರ್ಶನದಿಂದಲೇ. ಯೆಹೋವಾಷನು, ‘ಯಾಜಕನಾದ ಯೆಹೋಯಾದನು ಅವನಿಗೆ ಬೋಧಕನಾಗಿದ್ದ ಕಾಲದಲ್ಲಿ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಂಡನು.’ (2 ಪೂರ್ವಕಾಲವೃತ್ತಾಂತ 23:11, 16-19; 24:11-14; 2 ಅರಸುಗಳು 12:2) ಯೆಹೋಯಾದನು 130 ವರ್ಷಪ್ರಾಯದಲ್ಲಿ ಸತ್ತಾಗ, ಅವನನ್ನು ರಾಜಸ್ಮಶಾನದಲ್ಲಿ ಸಮಾಧಿಮಾಡಿ ವಿಶೇಷವಾಗಿ ಗೌರವಿಸಲಾಯಿತು. ಏಕೆಂದರೆ, “ಅವನು ಇಸ್ರಾಯೇಲ್ಯರ ವಿಷಯದಲ್ಲಿಯೂ ದೇವರ ಮತ್ತು ದೇವಾಲಯದ ವಿಷಯದಲ್ಲಿಯೂ ಸತ್ಕಾರ್ಯಮಾಡಿ”ದ್ದನು.​—⁠2 ಪೂರ್ವಕಾಲವೃತ್ತಾಂತ 24:15, 16.

13 ಒಂದು ವೇಳೆ, ಕೆಡುತ್ತಿರುವ ಆರೋಗ್ಯಸ್ಥಿತಿಯೊ ಬೇರೆ ಪರಿಸ್ಥಿತಿಗಳೊ ಸತ್ಯಾರಾಧನೆಯಲ್ಲಿ ನಿಮಗೆ ಮಾಡಸಾಧ್ಯವಿರುವುದನ್ನು ಸೀಮಿತಗೊಳಿಸಸಾಧ್ಯವಿದೆ. ಹಾಗಿರುವಲ್ಲಿಯೂ, ನೀವು ಈಗಲೂ ‘ದೇವರ ಮತ್ತು ದೇವಾಲಯದ ವಿಷಯದಲ್ಲಿ ಸತ್ಕಾರ್ಯಮಾಡಲು’ ಸಾಧ್ಯವಿದೆ. ನೀವು ಸಭಾಕೂಟಗಳಲ್ಲಿ ಉಪಸ್ಥಿತರಾಗಿದ್ದು ಭಾಗವಹಿಸುವ ಮೂಲಕ ಮತ್ತು ಸಾಧ್ಯವಿರುವಾಗೆಲ್ಲ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವ ಮೂಲಕ ಯೆಹೋವನ ಆಧ್ಯಾತ್ಮಿಕ ಆಲಯಕ್ಕಾಗಿ ನಿಮಗಿರುವ ಹುರುಪನ್ನು ಪ್ರದರ್ಶಿಸಬಲ್ಲಿರಿ. ಬೈಬಲಿನ ಸಲಹೆಯನ್ನು ನೀವು ಸಿದ್ಧಮನಸ್ಸಿನಿಂದ ಅಂಗೀಕರಿಸುವುದು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗಕ್ಕೆ ಹಾಗೂ ಸಭೆಗೆ ನೀವು ಕೊಡುವ ನಿಷ್ಠೆಯ ಬೆಂಬಲವು ಕ್ರೈಸ್ತ ಸೋದರತ್ವದ ಮೇಲೆ ಬಲಗೊಳಿಸುವ ಪ್ರಭಾವವನ್ನು ಬೀರುವುದು. (ಮತ್ತಾಯ 24:​45-47) ನೀವು ಜೊತೆ ಆರಾಧಕರನ್ನು ‘ಪ್ರೀತಿ, ಸತ್ಕಾರ್ಯಗಳಿಗೂ’ ಪ್ರೇರಿಸಬಲ್ಲಿರಿ. (ಇಬ್ರಿಯ 10:24, 25; ಫಿಲೆಮೋನ 8, 9) ಮತ್ತು “ವೃದ್ಧರು ಮದ್ಯಾಸಕ್ತಿಯಿಲ್ಲದವರೂ ಗೌರವವುಳ್ಳವರೂ ಜಿತೇಂದ್ರಿಯರೂ ನಂಬಿಕೆ ಪ್ರೀತಿ ತಾಳ್ಮೆ ಇವುಗಳಲ್ಲಿ ಸ್ವಸ್ಥರೂ ಆಗಿರಬೇಕೆಂದು ಬೋಧಿಸು. ಹಾಗೆಯೇ ವೃದ್ಧಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಗುಲಾಮರೂ ಆಗಿರದೆ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ ಸದ್ಭೋಧನೆ ಹೇಳುವವರೂ ಆಗಿರಬೇಕೆಂದು ಬೋಧಿಸು” ಎಂಬ ಅಪೊಸ್ತಲ ಪೌಲನ ಸಲಹೆಗೆ ಹೊಂದಿಕೆಯಲ್ಲಿ ನೀವು ವರ್ತಿಸುವಲ್ಲಿ ಇತರರಿಗೆ ಆಶೀರ್ವಾದಪ್ರದರಾಗುವಿರಿ.​—⁠ತೀತ 2:2-4.

14 ನೀವು ಸಭಾಹಿರಿಯರಾಗಿ ಅನೇಕ ವರ್ಷಕಾಲ ಸೇವೆ ಮಾಡಿದ್ದೀರೊ? ಹಾಗಿರುವಲ್ಲಿ, “ಅನೇಕ ವರುಷಗಳಕಾಲ ನೀವು ಶೇಖರಿಸಿಕೊಂಡಿರುವ ವಿವೇಕವನ್ನು ನಿಸ್ವಾರ್ಥತೆಯಿಂದ ಉಪಯೋಗಿಸಿರಿ” ಎಂಬುದೇ ಒಬ್ಬ ದೀರ್ಘಕಾಲದ ಸಭಾಹಿರಿಯನ ಬುದ್ಧಿವಾದವಾಗಿದೆ. “ಜವಾಬ್ದಾರಿಯನ್ನು ವಹಿಸಿಕೊಟ್ಟು, ಕಲಿಯಲು ಆತುರಪಡುವವರೊಂದಿಗೆ ನಿಮ್ಮ ಅನುಭವವನ್ನು ಹಂಚಿರಿ . . . ಇತರರಲ್ಲಿರುವ ಸಾಮರ್ಥ್ಯವನ್ನು ವಿವೇಚಿಸಿ ತಿಳಿದುಕೊಳ್ಳಿರಿ. ಅದನ್ನು ವಿಕಸಿಸಿ ಪೋಷಿಸಿರಿ. ಭವಿಷ್ಯತ್ತಿಗಾಗಿ ಸಿದ್ಧರಾಗಿರಿ.” (ಧರ್ಮೋಪದೇಶಕಾಂಡ 3:27, 28) ಸದಾ ಬೆಳೆಯುತ್ತಿರುವ ರಾಜ್ಯ ಕೆಲಸದಲ್ಲಿ ನೀವು ತೋರಿಸುವ ನೈಜ ಆಸಕ್ತಿಯು ನಮ್ಮ ಕ್ರೈಸ್ತ ಸೋದರತ್ವದಲ್ಲಿ ಇತರರಿಗೆ ಅನೇಕ ಆಶೀರ್ವಾದಗಳನ್ನು ತರುವುದು.

‘ಯೆಹೋವನ ಸತ್ಯಸಂಧತೆಯ’ ಕುರಿತು ತಿಳಿಸುತ್ತಾರೆ

15 ‘ಯೆಹೋವನ ಸತ್ಯಸಂಧತೆಯ’ ಕುರಿತು ತಿಳಿಸುವ ಜವಾಬ್ದಾರಿಯನ್ನು ದೇವರ ಪ್ರಾಯಸ್ಥ ಸೇವಕರು ಹರ್ಷದಿಂದ ನಿರ್ವಹಿಸುತ್ತಾರೆ. ನೀವೊಬ್ಬ ವೃದ್ಧ ಕ್ರೈಸ್ತರಾಗಿರುವಲ್ಲಿ, ‘ಯೆಹೋವನು ನಿಮ್ಮ ಬಂಡೆ, ಆತನು ನಿರ್ವಂಚಕನು’ ಎಂಬುದನ್ನು ನಿಮ್ಮ ನಡೆನುಡಿಗಳು ತೋರಿಸಬಲ್ಲವು. (ಕೀರ್ತನೆ 92:15) ಖರ್ಜೂರದ ಮರವು ಅದರ ಸೃಷ್ಟಿಕರ್ತನ ಪರಮ ಗುಣಗಳಿಗೆ ಮೌನ ಸಾಕ್ಷಿಯನ್ನು ನೀಡುತ್ತದೆ. ಆದರೆ ಯೆಹೋವನು ನಿಮಗೆ, ಈಗ ಸತ್ಯಾರಾಧನೆಯನ್ನು ಅವಲಂಬಿಸುತ್ತಿರುವವರಿಗೆ ಆತನ ಕುರಿತು ಸಾಕ್ಷ್ಯನೀಡುವ ಸದವಕಾಶವನ್ನು ಕೊಟ್ಟಿರುತ್ತಾನೆ. (ಧರ್ಮೋಪದೇಶಕಾಂಡ 32:7; ಕೀರ್ತನೆ 71:17, 18; ಯೋವೇಲ 1:2, 3) ಇದೇಕೆ ಪ್ರಾಮುಖ್ಯ?

16 ಇಸ್ರಾಯೇಲ್ಯರ ನಾಯಕನಾದ ಯೆಹೋಶುವನು “ದಿನತುಂಬಿದ ಮುದುಕ”ನಾದಾಗ, ದೇವರ ಸತ್ಯಸಂಧತೆಯ ವ್ಯವಹಾರಗಳ ಕುರಿತು ಮರುಜ್ಞಾಪನವನ್ನು ಕೊಡಲು “ಇಸ್ರಾಯೇಲ್ಯರ ಹಿರಿಯರು, ಪ್ರಭುಗಳು, ನ್ಯಾಯಾಧಿಪತಿಗಳು, ಅಧಿಕಾರಿಗಳು ಇವರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ” ತನ್ನ ಬಳಿಗೆ ಕರಿಸಿದನು. ಅವನು ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” (ಯೆಹೋಶುವ 23:1, 2, 14) ಸ್ವಲ್ಪ ಸಮಯದ ವರೆಗೆ ಇದು, ನಂಬಿಗಸ್ತರಾಗಿ ಉಳಿಯುವ ಜನರ ನಿರ್ಧಾರವನ್ನು ಬಲಪಡಿಸಿತು. ಆದರೆ ಯೆಹೋಶುವನ ಮರಣಾನಂತರ, “ಯೆಹೋವನನ್ನೂ ಆತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು. ಈ ಇಸ್ರಾಯೇಲ್ಯರು ಬಾಳನ ಪ್ರತಿಮೆಗಳನ್ನು ಪೂಜಿಸಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು.”​—⁠ನ್ಯಾಯಸ್ಥಾಪಕರು 2:8-11.

17 ಇಂದು ಕ್ರೈಸ್ತ ಸಭೆಯ ಸಮಗ್ರತೆಯು ದೇವರ ವೃದ್ಧ ಸೇವಕರ ಬಾಯಿಮಾತಿನ ಸಾಕ್ಷ್ಯದ ಮೇಲೆ ಹೊಂದಿಕೊಂಡಿರುವುದಿಲ್ಲ. ಆದರೂ ಯೆಹೋವನು ಈ ಕಡೇ ದಿವಸಗಳಲ್ಲಿ ತನ್ನ ಜನರ ಪರವಾಗಿ ಮಾಡಿರುವ “ಮಹತ್ಕಾರ್ಯ”ಗಳ ಕುರಿತ ಅವರ ಸ್ವಂತ ಹೇಳಿಕೆಗಳನ್ನು ನಾವು ಕೇಳುವಾಗ ಯೆಹೋವನಲ್ಲಿಯೂ ಆತನ ವಾಗ್ದಾನಗಳಲ್ಲಿಯೂ ನಮಗಿರುವ ನಂಬಿಕೆ ಇನ್ನೂ ಬಲವಾಗುತ್ತದೆ. (ನ್ಯಾಯಸ್ಥಾಪಕರು 2:7; 2 ಪೇತ್ರ 1:​16-19) ನೀವು ಅನೇಕ ವರ್ಷಗಳಿಂದ ಯೆಹೋವನ ಸಂಸ್ಥೆಯೊಂದಿಗೆ ಸಹವಾಸಮಾಡುತ್ತಿರುವಲ್ಲಿ, ನಿಮ್ಮ ಪ್ರದೇಶ ಅಥವಾ ದೇಶದಲ್ಲಿ ಕೇವಲ ಕೆಲವೇ ರಾಜ್ಯ ಪ್ರಚಾರಕರಿದ್ದ ಅಥವಾ ಸಾರುವ ಕೆಲಸಕ್ಕೆ ಕಠಿನ ವಿರೋಧವಿದ್ದ ಸಮಯ ನಿಮಗೆ ನೆನಪಿರಬಹುದು. ಕ್ರಮೇಣ, ಯೆಹೋವನು ಕೆಲವು ತಡೆಗಳನ್ನು ತೆಗೆದುಹಾಕಿ ರಾಜ್ಯಾಭಿವೃದ್ಧಿಯನ್ನು “ಬಲುಬೇಗನೆ” ಮಾಡಿದ್ದನ್ನು ನೀವು ನೋಡಿದ್ದೀರಿ. (ಯೆಶಾಯ 54:17; 60:22) ಬೈಬಲ್‌ ಸತ್ಯಗಳ ಸ್ಪಷ್ಟೀಕರಣವನ್ನು ನೀವು ಗಮನಿಸಿದ್ದೀರಿ ಮತ್ತು ದೇವರ ಸಂಸ್ಥೆಯ ದೃಶ್ಯಭಾಗದಲ್ಲಿ ನಡೆದಿರುವ ಪ್ರಗತಿಪರ ಪರಿಷ್ಕಾರವನ್ನು ನೋಡಿದ್ದೀರಿ. (ಜ್ಞಾನೋಕ್ತಿ 4:18; ಯೆಶಾಯ 60:17) ಆದಕಾರಣ, ಯೆಹೋವನ ಸತ್ಯಸಂಧತೆಯ ವ್ಯವಹಾರಗಳ ಸಂಬಂಧದಲ್ಲಿ ನಿಮಗಿರುವ ಅನುಭವವನ್ನು ಇತರರೊಂದಿಗೆ ಹಂಚುವ ಮೂಲಕ ಅವರ ಭಕ್ತಿವೃದ್ಧಿ ಮಾಡಲು ನೀವು ಪ್ರಯತ್ನಿಸುತ್ತೀರೊ? ಹಾಗಿರುವಲ್ಲಿ, ಅದು ಕ್ರೈಸ್ತ ಸೋದರತ್ವದ ಮೇಲೆ ಎಷ್ಟು ಸಕಾರಾತ್ಮಕವೂ ಬಲದಾಯಕವೂ ಆದ ಪರಿಣಾಮವನ್ನು ಉಂಟುಮಾಡಬಲ್ಲದು!

18 ನಿಮ್ಮ ವೈಯಕ್ತಿಕ ಜೀವನದಲ್ಲಿ ಯೆಹೋವನ ಪ್ರೀತಿಪೂರ್ವಕವಾದ ಆರೈಕೆ ಮತ್ತು ಮಾರ್ಗದರ್ಶನೆಯನ್ನು ನೀವು ಅನುಭವಿಸಿದ ಸಂದರ್ಭಗಳ ವಿಷಯದಲ್ಲೇನು? (ಕೀರ್ತನೆ 37:25; ಮತ್ತಾಯ 6:33; 1 ಪೇತ್ರ 5:7) ಮಾರ್ಥ ಎಂಬ ವೃದ್ಧ ಸಹೋದರಿಯು ಇತರರನ್ನು, “ಏನೇ ಸಂಭವಿಸಿದರೂ, ಯೆಹೋವನನ್ನು ತ್ಯಜಿಸಬೇಡಿ. ಆತನು ನಿಮ್ಮನ್ನು ಪೋಷಿಸುವನು,” ಎಂದು ಹೇಳಿ ಪ್ರೋತ್ಸಾಹಿಸುತ್ತಿದ್ದಳು. ಈ ಸಲಹೆಯು, ಮಾರ್ಥಳ ಬೈಬಲ್‌ ವಿದ್ಯಾರ್ಥಿಗಳಲ್ಲಿ ಒಬ್ಬಳೂ 1960ಗಳಲ್ಲಿ ದೀಕ್ಷಾಸ್ನಾನ ಹೊಂದಿದ್ದವಳೂ ಆದ ಟೋಲ್ಮೀನಳ ಮೇಲೆ ಗಾಢ ಪ್ರಭಾವವನ್ನು ಬೀರಿತು. ಟೋಲ್ಮೀನ ಜ್ಞಾಪಿಸಿಕೊಳ್ಳುವುದು: “ನನ್ನ ಗಂಡ ಸತ್ತಾಗ, ನಾನು ತೀರ ನಿರಾಶಳಾಗಿದ್ದೆ. ಆದರೆ ಆ ಮಾತುಗಳು ನಾನು ಒಂದೇ ಒಂದು ಕೂಟವನ್ನು ಸಹ ತಪ್ಪಿಸದಿರುವ ನಿರ್ಣಯವನ್ನು ಮಾಡುವಂತೆ ನನ್ನನ್ನು ಬಲಪಡಿಸಿದವು. ಮತ್ತು ನಾನು ಹಾಗೆ ಮುಂದುವರಿಯುವಂತೆ ಯೆಹೋವನು ನಿಜವಾಗಿಯೂ ನನ್ನನ್ನು ಬಲಪಡಿಸಿದನು.” ಅನೇಕ ವರುಷಗಳಿಂದ ಟೋಲ್ಮೀನಳು ಸಹ ಇದೇ ಸಲಹೆಯನ್ನು ತನ್ನ ಬೈಬಲ್‌ ವಿದ್ಯಾರ್ಥಿಗಳಿಗೂ ಕೊಟ್ಟಿರುತ್ತಾಳೆ. ಹೌದು, ಪ್ರೋತ್ಸಾಹವನ್ನು ಕೊಡುವ ಮೂಲಕ ಮತ್ತು ಯೆಹೋವನ ಸತ್ಯಸಂಧತೆಯ ಕಾರ್ಯಗಳನ್ನು ತಿಳಿಸುವ ಮೂಲಕ ಜೊತೆವಿಶ್ವಾಸಿಗಳ ನಂಬಿಕೆಯನ್ನು ವರ್ಧಿಸಲು ನೀವು ಹೆಚ್ಚನ್ನು ಮಾಡಬಲ್ಲಿರಿ.

ನಂಬಿಗಸ್ತ ವೃದ್ಧರನ್ನು ಯೆಹೋವನು ಬಹುಮೂಲ್ಯರೆಂದೆಣಿಸುತ್ತಾನೆ

19 ಕೃತಜ್ಞತೆಯ ಕೊರತೆಯಿರುವ ಇಂದಿನ ಜಗತ್ತಿಗೆ ವೃದ್ಧರ ಪರಿವೆ ಕಡಮೆ. (2 ತಿಮೊಥೆಯ 3:​1, 2) ಮತ್ತು ಅವರನ್ನು ಒಂದುವೇಳೆ ಜ್ಞಾಪಿಸಿಕೊಳ್ಳುವುದಾದರೂ, ಅನೇಕವೇಳೆ ಅದು ಅವರ ಗತ ಸಾಧನೆಗಳಿಗಾಗಿ ಅಂದರೆ, ಅವರು ಹಿಂದೆ ಏನಾಗಿದ್ದರೊ ಅದಕ್ಕಾಗಿಯೇ ಹೊರತು ಅವರು ಈಗ ಏನಾಗಿದ್ದಾರೊ ಅದಕ್ಕಾಗಿ ಅಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬೈಬಲು ಹೇಳುವುದು: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿಯ 6:10) ಹೌದು, ಯೆಹೋವ ದೇವರು ನಿಮ್ಮ ನಂಬಿಗಸ್ತಿಕೆಯ ಕೆಲಸಗಳ ಗತ ದಾಖಲೆಯನ್ನು ನೆನಪಿಸಿಕೊಳ್ಳುವುದು ನಿಶ್ಚಯ. ಆದರೆ ನೀವು ಈಗ ಆತನ ಸೇವೆಯಲ್ಲಿ ಏನನ್ನು ಮಾಡುತ್ತ ಇದ್ದೀರೊ ಅದಕ್ಕಾಗಿಯೂ ಆತನು ನಿಮ್ಮನ್ನು ಬಹುಮೂಲ್ಯವೆಂದೆಣಿಸುತ್ತಾನೆ. ಹೌದು, ಆತನು ನಂಬಿಗಸ್ತ ವೃದ್ಧರನ್ನು ಫಲೋತ್ಪಾದಕರಾಗಿ, ಆಧ್ಯಾತ್ಮಿಕವಾಗಿ ಸ್ವಸ್ಥರೂ ಕಸುವುಳ್ಳವರೂ ಆದ ಕ್ರೈಸ್ತರಾಗಿ, ತನ್ನ ಮಹಾ ಶಕ್ತಿಯ ಸಜೀವ ಸಾಕ್ಷ್ಯವಾಗಿ ವೀಕ್ಷಿಸುತ್ತಾನೆ.​—⁠ಫಿಲಿಪ್ಪಿ 4:13.

20 ನಮ್ಮ ಕ್ರೈಸ್ತ ಸೋದರತ್ವದ ವೃದ್ಧ ಸದಸ್ಯರನ್ನು ಯೆಹೋವನು ವೀಕ್ಷಿಸುವಂತೆಯೇ ನೀವೂ ವೀಕ್ಷಿಸುತ್ತೀರೊ? ಹಾಗೆ ಮಾಡುವಲ್ಲಿ, ಅವರಿಗೆ ನಿಮ್ಮ ಪ್ರೀತಿ ತೋರಿಸುವಂತೆ ನೀವು ಪ್ರಚೋದಿಸಲ್ಪಡುವಿರಿ. (1 ಯೋಹಾನ 3:18) ಮುಂದಿನ ಲೇಖನವು, ಅವರ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಇಂತಹ ಪ್ರೀತಿಯನ್ನು ತೋರಿಸುವ ಕೆಲವು ಪ್ರಾಯೋಗಿಕ ವಿಧಗಳನ್ನು ಚರ್ಚಿಸುವುದು.

[ಪಾದಟಿಪ್ಪಣಿ]

^ ಪ್ಯಾರ. 6 ಪ್ರತಿಯೊಂದು ಖರ್ಜೂರದ ಗೊಂಚಲಿನಲ್ಲಿ ಒಂದು ಸಾವಿರದಷ್ಟು ಖರ್ಜೂರದ ಹಣ್ಣುಗಳಿರಬಹುದು ಮತ್ತು ಅದರ ತೂಕ ಎಂಟು ಕಿಲೋಗ್ರ್ಯಾಮ್‌ ಅಥವಾ ಅದಕ್ಕಿಂತಲೂ ಹೆಚ್ಚಾಗಿರಬಹುದು. “ಫಲಕೊಡುವ ಪ್ರತಿಯೊಂದು [ಖರ್ಜೂರದ] ಮರವು ಅದರ ಜೀವಮಾನದಲ್ಲಿ ಅದರ ಧಣಿಗಳಿಗೆ ಎರಡು ಅಥವಾ ಮೂರು ಟನ್ನುಗಳಷ್ಟು ಫಲವನ್ನು ಕಾಣಿಕೆಯಾಗಿ ಅರ್ಪಿಸುವುದು” ಎಂದು ಒಬ್ಬ ಲೇಖಕನು ಅಂದಾಜು ಮಾಡುತ್ತಾನೆ.

ನಿಮ್ಮ ಉತ್ತರಗಳೇನು?

• ವಯೋವೃದ್ಧರು ಹೇಗೆ ‘ಫಲ ಕೊಡು’ತ್ತಾರೆ?

• ವೃದ್ಧ ಕ್ರೈಸ್ತರ ಆಧ್ಯಾತ್ಮಿಕ ಚೈತನ್ಯವು ಅತ್ಯಮೂಲ್ಯವಾದ ಸ್ವತ್ತಾಗಿರುವುದೇಕೆ?

• ‘ಯೆಹೋವನ ಸತ್ಯಸಂಧತೆಯ’ ಕುರಿತು ವೃದ್ಧರು ಹೇಗೆ ತಿಳಿಸಬಲ್ಲರು?

• ದೀರ್ಘಕಾಲದಿಂದ ತನ್ನ ಸೇವೆಮಾಡಿರುವ ಸೇವಕರನ್ನು ಯೆಹೋವನು ಬಹುಮೂಲ್ಯರೆಂದೆಣಿಸುವುದು ಏಕೆ?

[ಅಧ್ಯಯನ ಪ್ರಶ್ನೆಗಳು]

1. ಅನೇಕರು ಇಂದು ವೃದ್ಧರನ್ನು ಹೇಗೆ ವೀಕ್ಷಿಸುತ್ತಾರೆ?

2. (ಎ) ಯೆಹೋವನು ತನ್ನ ನಂಬಿಗಸ್ತ ವಯೋವೃದ್ಧ ಸೇವಕರನ್ನು ಹೇಗೆ ವೀಕ್ಷಿಸುತ್ತಾನೆ? (ಬಿ) ಕೀರ್ತನೆ 92:​12-15ರಲ್ಲಿ ನಾವು ಯಾವ ಹೃದಯೋತ್ತೇಜಕ ವರ್ಣನೆಯನ್ನು ನೋಡುತ್ತೇವೆ?

3. (ಎ) ನೀತಿವಂತರನ್ನು ಖರ್ಜೂರದ ಮರಗಳಿಗೆ ಹೋಲಿಸಲಾಗಿರುವುದೇಕೆ? (ಬಿ) ವೃದ್ಧರು ‘ಮುಪ್ಪಿನಲ್ಲಿಯೂ ಫಲಕೊಡಲು’ ಹೇಗೆ ಸಾಧ್ಯವಾಗುವುದು?

4, 5. (ಎ) ಕ್ರೈಸ್ತರು ಯಾವ ಪ್ರಾಮುಖ್ಯ ಫಲವನ್ನು ಕೊಡುವುದು ಅಗತ್ಯ? (ಬಿ) “ತುಟಿಗಳ ಫಲವನ್ನು” ಕೊಟ್ಟ ವೃದ್ಧರ ಶಾಸ್ತ್ರೀಯ ಉದಾಹರಣೆಗಳನ್ನು ಕೊಡಿರಿ.

6. ಈ ಕಡೇ ದಿವಸಗಳಲ್ಲಿ ಪ್ರವಾದಿಸಲು ‘ಹಿರಿಯರನ್ನು’ ಯೆಹೋವನು ಹೇಗೆ ಉಪಯೋಗಿಸಿದ್ದಾನೆ?

7. ವೃದ್ಧರು ಶಾರೀರಿಕ ಇತಿಮಿತಿಗಳ ಹೊರತೂ ರಾಜ್ಯಫಲವನ್ನು ಫಲಿಸುತ್ತ ಹೇಗೆ ಮುಂದುವರಿಯುತ್ತಿದ್ದಾರೆಂಬುದನ್ನು ದೃಷ್ಟಾಂತಿಸಿರಿ.

8. ವೃದ್ಧನಾಗುತ್ತಿದ್ದ ಕಾಲೇಬನು ಹೇಗೆ ಯೆಹೋವನಲ್ಲಿ ಭರವಸೆಯನ್ನು ಪ್ರದರ್ಶಿಸಿದನು, ಮತ್ತು ಹಿರೀಪ್ರಾಯದ ಕ್ರೈಸ್ತರು ಅವನ ಮಾದರಿಯನ್ನು ಹೇಗೆ ಅನುಕರಿಸಬಲ್ಲರು?

9, 10. ವಯಸ್ಸಾಗಿರುವ ಕ್ರೈಸ್ತರು ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿದ್ದು ತಮ್ಮ ಆಧ್ಯಾತ್ಮಿಕ ಚೈತನ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? (ಪುಟ 13ರಲ್ಲಿರುವ ಚೌಕವನ್ನು ನೋಡಿ.)

11, 12. (ಎ) ಯೆಹೂದ ರಾಜ್ಯದ ಇತಿಹಾಸದಲ್ಲಿ ಯೆಹೋಯಾದನು ಯಾವ ಪ್ರಮುಖ ಪಾತ್ರ ವಹಿಸಿದನು? (ಬಿ) ಯೆಹೋಯಾದನು ಸತ್ಯಾರಾಧನೆಯನ್ನು ವರ್ಧಿಸಲು ತನ್ನ ವರ್ಚಸ್ಸನ್ನು ಉಪಯೋಗಿಸಿದ್ದು ಹೇಗೆ?

13. ವೃದ್ಧ ಕ್ರೈಸ್ತರು ‘ದೇವರ ಮತ್ತು ದೇವಾಲಯದ ವಿಷಯದಲ್ಲಿ ಸತ್ಕಾರ್ಯವನ್ನು’ ಹೇಗೆ ಮಾಡಬಲ್ಲರು?

14. ದೀರ್ಘಕಾಲದಿಂದ ಕ್ರೈಸ್ತ ಮೇಲ್ವಿಚಾರಕರಾಗಿರುವವರು ಸತ್ಯಾರಾಧನೆಯನ್ನು ವರ್ಧಿಸಲು ಏನು ಮಾಡಬಲ್ಲರು?

15. ವಯೋವೃದ್ಧರಾದ ಕ್ರೈಸ್ತರು ‘ಯೆಹೋವನ ಸತ್ಯಸಂಧತೆಯ’ ಕುರಿತು ತಿಳಿಸುವುದು ಹೇಗೆ?

16. ಯಾವ ಬೈಬಲ್‌ ಮಾದರಿಯು ‘ಯೆಹೋವನ ಸತ್ಯಸಂಧತೆಯ’ ಕುರಿತು ತಿಳಿಸುವ ಪ್ರಮುಖತೆಯನ್ನು ದೃಷ್ಟಾಂತಿಸುತ್ತದೆ?

17. ಯೆಹೋವನು ಆಧುನಿಕ ದಿನಗಳಲ್ಲಿ ತನ್ನ ಜನರೊಂದಿಗೆ ಹೇಗೆ ವ್ಯವಹರಿಸಿರುತ್ತಾನೆ?

18. (ಎ) ‘ಯೆಹೋವನ ಸತ್ಯಸಂಧತೆಯ’ ಬಗ್ಗೆ ಬೇರೆಯವರಿಗೆ ಹೇಳುವುದರ ದೀರ್ಘಕಾಲಿಕ ಪರಿಣಾಮವನ್ನು ದೃಷ್ಟಾಂತಿಸಿರಿ. (ಬಿ) ಯೆಹೋವನ ಸತ್ಯಸಂಧತೆಯನ್ನು ನೀವು ವೈಯಕ್ತಿಕವಾಗಿ ಹೇಗೆ ಅನುಭವಿಸಿದ್ದೀರಿ?

19, 20. (ಎ) ತನ್ನ ವೃದ್ಧ ಸೇವಕರ ಚಟುವಟಿಕೆಗಳನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ? (ಬಿ) ಮುಂದಿನ ಲೇಖನವು ಯಾವುದನ್ನು ಚರ್ಚಿಸುವುದು?

[ಪುಟ 13ರಲ್ಲಿರುವ ಚೌಕ]

ಅವರು ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿ ಉಳಿದಿರುವ ವಿಧ

ದೀರ್ಘಕಾಲದಿಂದ ಕ್ರೈಸ್ತರಾಗಿರುವವರಿಗೆ, ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿದ್ದು ತಮ್ಮ ಆಧ್ಯಾತ್ಮಿಕ ಚೈತನ್ಯವನ್ನು ಕಾಪಾಡಿಕೊಳ್ಳಲು ಯಾವುದು ಸಹಾಯಮಾಡಿದೆ? ಈ ವಿಷಯದಲ್ಲಿ ಕೆಲವರು ಹೀಗೆ ಹೇಳಿದರು:

“ನಮಗೆ ಯೆಹೋವನೊಂದಿಗಿರುವ ಸಂಬಂಧದ ಮೇಲೆ ಗಮನಕೇಂದ್ರೀಕರಿಸುವ ಶಾಸ್ತ್ರವಚನಗಳನ್ನು ಓದುವುದು ಅತಿ ಪ್ರಾಮುಖ್ಯ. ಹೆಚ್ಚಿನ ರಾತ್ರಿಗಳಲ್ಲಿ ನಾನು ಕೀರ್ತನೆ 23 ಮತ್ತು 91ನ್ನು ಪಠಿಸುತ್ತೇನೆ.”​—⁠ಆಲಿವ್‌, 1930ರಲ್ಲಿ ದೀಕ್ಷಾಸ್ನಾನಪಡೆದವರು.

“ಪ್ರತಿಯೊಂದು ದೀಕ್ಷಾಸ್ನಾನದ ಭಾಷಣಕ್ಕೆ, ಅದು ನನ್ನ ಸ್ವಂತ ದೀಕ್ಷಾಸ್ನಾನವೊ ಎಂಬಂತೆ ನಾನು ಹಾಜರಿದ್ದು ಜಾಗರೂಕತೆಯಿಂದ ಕಿವಿಗೊಡುವುದನ್ನು ಯಾವಾಗಲೂ ಖಚಿತಪಡಿಸಿಕೊಂಡಿದ್ದೇನೆ. ಈ ರೀತಿಯಲ್ಲಿ ನನ್ನ ಸಮರ್ಪಣೆಯನ್ನು ಮನಸ್ಸಿನಲ್ಲಿ ಹೊಚ್ಚಹೊಸತಾಗಿ ಇರಿಸುವುದು ನಾನು ನಂಬಿಗಸ್ತನಾಗಿ ಉಳಿದಿರುವುದರಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿರುತ್ತದೆ.”​—⁠ಹ್ಯಾರಿ, 1946ರಲ್ಲಿ ದೀಕ್ಷಾಸ್ನಾನಪಡೆದವರು.

“ದೈನಂದಿನ ಪ್ರಾರ್ಥನೆ ಪ್ರಾಮುಖ್ಯ. ಯೆಹೋವನ ಸಹಾಯ, ಕಾಪು, ಮತ್ತು ಆಶೀರ್ವಾದಕ್ಕಾಗಿ ಸದಾ ಕೇಳಿಕೊಂಡು, ‘ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯತೆ’ ತೋರಿಸುವುದು ಅತ್ಯಗತ್ಯ.” (ಜ್ಞಾನೋಕ್ತಿ 3:​5, 6)​—⁠ಆಂಟಾನ್ಯೂ, 1951ರಲ್ಲಿ ದೀಕ್ಷಾಸ್ನಾನಪಡೆದವರು.

“ಎಷ್ಟೋ ವರ್ಷಕಾಲದ ನಂತರವೂ ಯೆಹೋವನನ್ನು ಇನ್ನೂ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವವರ ಅನುಭವಗಳನ್ನು ಕೇಳಿಸಿಕೊಳ್ಳುವುದು, ಯೆಹೋವನಿಗೆ ನಿಷ್ಠಾವಂತಳಾಗಿಯೂ ನಂಬಿಗಸ್ತಳಾಗಿಯೂ ಉಳಿಯುವ ನನ್ನ ನಿರ್ಣಯವನ್ನು ನವೀಕರಿಸುತ್ತದೆ.”​—⁠ಜೋನ್‌, 1954ರಲ್ಲಿ ದೀಕ್ಷಾಸ್ನಾನಪಡೆದವರು.

“ಒಬ್ಬನು ತನ್ನ ವಿಷಯದಲ್ಲಿ ಉಬ್ಬಿಕೊಳ್ಳದೆ ಇರುವುದು ಪ್ರಾಮುಖ್ಯ. ನಮಗಿರುವುದೆಲ್ಲವೂ ದೇವರ ಅಪಾತ್ರ ದಯೆಯ ಕಾರಣದಿಂದಲೇ ಆಗಿದೆ. ಈ ದೃಷ್ಟಿಕೋನವನ್ನಿಟ್ಟುಕೊಳ್ಳುವುದೇ, ನಾವು ಅಂತ್ಯದ ತನಕ ತಾಳಿಕೊಳ್ಳಲು ಬೇಕಾಗುವ ಆಧ್ಯಾತ್ಮಿಕ ಪೋಷಣೆಗಾಗಿ ಸರಿಯಾದ ದಿಕ್ಕಿನಲ್ಲಿ ನೋಡುತ್ತ ಇರುವಂತೆ ಮಾಡುತ್ತದೆ.”​—⁠ಆರ್ಲೀನ್‌, 1954ರಲ್ಲಿ ದೀಕ್ಷಾಸ್ನಾನಪಡೆದವರು.

[ಪುಟ 11ರಲ್ಲಿರುವ ಚಿತ್ರ]

ವಯೋವೃದ್ಧರು ಅತ್ಯಮೂಲ್ಯ ರಾಜ್ಯಫಲವನ್ನು ಫಲಿಸುತ್ತಾರೆ

[ಪುಟ 14ರಲ್ಲಿರುವ ಚಿತ್ರ]

ವಯೋವೃದ್ಧರ ಆಧ್ಯಾತ್ಮಿಕ ಚೈತನ್ಯವು ಅತ್ಯಮೂಲ್ಯವಾದೊಂದು ಸ್ವತ್ತಾಗಿದೆ