ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಯೋವೃದ್ಧರ ಪರಾಮರಿಕೆ —ಒಂದು ಕ್ರೈಸ್ತ ಜವಾಬ್ದಾರಿ

ವಯೋವೃದ್ಧರ ಪರಾಮರಿಕೆ —ಒಂದು ಕ್ರೈಸ್ತ ಜವಾಬ್ದಾರಿ

ವಯೋವೃದ್ಧರ ಪರಾಮರಿಕೆ—⁠ಒಂದು ಕ್ರೈಸ್ತ ಜವಾಬ್ದಾರಿ

“ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು.”​—⁠ಯೆಶಾಯ 46:⁠4.

ಕರ್ತವ್ಯಶ್ರದ್ಧ ಹೆತ್ತವರು ತಮ್ಮ ಮಕ್ಕಳನ್ನು ಶೈಶವ, ಬಾಲ್ಯಾವಸ್ಥೆ, ಮತ್ತು ಹದಿಹರೆಯದಾದ್ಯಂತ ಸಾಕಿಸಲಹುತ್ತಾರೆ. ಯುವಜನರು ಪ್ರಾಪ್ತವಯಸ್ಕರಾಗಿ ಸ್ವಂತ ಕುಟುಂಬವುಳ್ಳವರಾಗುವಾಗಲೂ ಅವರ ಹೆತ್ತವರು ಅವರಿಗೆ ಪ್ರೀತಿಯ ಗಮನ ಮತ್ತು ಬೆಂಬಲವನ್ನು ಕೊಡುತ್ತ ಹೋಗುತ್ತಾರೆ.

2 ಮಾನವರು ತಮ್ಮ ಮಕ್ಕಳಿಗಾಗಿ ಏನು ಮಾಡಬಲ್ಲರೊ ಅದು ಸೀಮಿತವಾಗಿದೆಯಾದರೂ, ನಮ್ಮ ಸ್ವರ್ಗೀಯ ತಂದೆಯಾದರೊ ತನ್ನ ನಂಬಿಗಸ್ತ ಸೇವಕರಿಗೆ ಸದಾ ಪ್ರೀತಿಯ ಗಮನ ಮತ್ತು ಬೆಂಬಲವನ್ನು ಕೊಡಶಕ್ತನಾಗಿದ್ದಾನೆ. ಪುರಾತನ ಕಾಲದಲ್ಲಿ ತಾನು ಆಯ್ದುಕೊಂಡಿದ್ದ ಜನರನ್ನು ಸಂಬೋಧಿಸುತ್ತ ಯೆಹೋವನು ಹೇಳಿದ್ದು: “ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು.” (ಯೆಶಾಯ 46:4) ಇವು, ವೃದ್ಧ ಕ್ರೈಸ್ತರಿಗೆ ಎಷ್ಟೊಂದು ಪುನರಾಶ್ವಾಸನದಾಯಕವಾದ ಮಾತುಗಳು! ತನಗೆ ನಿಷ್ಠರಾಗಿ ಉಳಿಯುವವರನ್ನು ಯೆಹೋವನು ಕೈಬಿಡುವುದಿಲ್ಲ. ಬದಲಿಗೆ, ಅವರನ್ನು ಜೀವನಾದ್ಯಂತ, ಮುಪ್ಪಿನಲ್ಲೂ ಪೋಷಿಸಿ, ಬೆಂಬಲಿಸಿ, ನಡೆಸುವನೆಂದು ಆತನು ಮಾತುಕೊಡುತ್ತಾನೆ.​—⁠ಕೀರ್ತನೆ 48:14.

3 ವೃದ್ಧರಿಗೆ ಯೆಹೋವನು ತೋರಿಸುವ ಪ್ರೀತಿಪೂರ್ವಕವಾದ ಕಾಳಜಿಯನ್ನು ನಾವು ಹೇಗೆ ಅನುಕರಿಸಬಲ್ಲೆವು? (ಎಫೆಸ 5:​1, 2) ಮಕ್ಕಳು, ಸಭಾ ಮೇಲ್ವಿಚಾರಕರು, ಮತ್ತು ವ್ಯಕ್ತಿಪರವಾಗಿ ಕ್ರೈಸ್ತರು ನಮ್ಮ ಜಗದ್ವ್ಯಾಪಕ ಸೋದರತ್ವದ ಹಿರಿಯ ಸದಸ್ಯರ ಆವಶ್ಯಕತೆಗಳನ್ನು ಪರಾಮರಿಸುವ ವಿಧಗಳನ್ನು ನಾವೀಗ ಪರಿಗಣಿಸೋಣ.

ಮಕ್ಕಳೋಪಾದಿ ನಮ್ಮ ಜವಾಬ್ದಾರಿ

4 “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು.” (ಎಫೆಸ 6:2; ವಿಮೋಚನಕಾಂಡ 20:12) ಹೀಬ್ರು ಶಾಸ್ತ್ರಗ್ರಂಥದಿಂದ ಉಲ್ಲೇಖಿಸಲಾಗಿರುವ ಈ ಸರಳವಾದ ಆದರೆ ಅರ್ಥಗರ್ಭಿತವಾದ ಮಾತುಗಳಿಂದ ಅಪೊಸ್ತಲ ಪೌಲನು, ಮಕ್ಕಳಿಗೆ ತಮ್ಮ ಹೆತ್ತವರ ಕಡೆಗಿರುವ ಜವಾಬ್ದಾರಿಯನ್ನು ಜ್ಞಾಪಕಹುಟ್ಟಿಸಿದನು. ಆದರೆ ಈ ಮಾತುಗಳು ವಯೋವೃದ್ಧರ ಪರಾಮರಿಕೆಗೆ ಅನ್ವಯಿಸುವುದು ಹೇಗೆ? ಈ ಪ್ರಶ್ನೆಯನ್ನು ಉತ್ತರಿಸಲು ಕ್ರೈಸ್ತಪೂರ್ವ ಸಮಯಗಳ ಒಂದು ಹೃದಯೋತ್ತೇಜಕ ಮಾದರಿಯು ನಮಗೆ ಸಹಾಯಮಾಡುವುದು.

5 ಯೋಸೇಫನಿಗೆ ತನ್ನ ವೃದ್ಧ ತಂದೆಯಾದ ಮೂಲಪಿತ ಯಾಕೋಬನೊಂದಿಗೆ 20ಕ್ಕೂ ಹೆಚ್ಚು ವರ್ಷಗಳ ವರೆಗೆ ಯಾವ ಸಂಪರ್ಕವೂ ಇರಲಿಲ್ಲ. ಆದರೂ ಪುತ್ರನೋಪಾದಿ ಯೋಸೇಫನು ಯಾಕೋಬನ ಕಡೆಗಿದ್ದ ಪ್ರೀತಿಯನ್ನು ಕಳೆದುಕೊಂಡಿರಲಿಲ್ಲವೆಂದು ವ್ಯಕ್ತವಾಗುತ್ತದೆ. ಆದುದರಿಂದಲೇ, ಯೋಸೇಫನು ತನ್ನ ಸಹೋದರರಿಗೆ ತನ್ನ ನಿಜ ಗುರುತನ್ನು ತಿಳಿಯಪಡಿಸಿದಾಗ, “ನನ್ನ ತಂದೆ ಇನ್ನೂ ಇದ್ದಾನೋ”? ಎಂದು ಕೇಳಿದನು. (ಆದಿಕಾಂಡ 43:7, 27; 45:3) ಆ ಸಮಯದಲ್ಲಿ ಕಾನಾನ್‌ ದೇಶದಲ್ಲಿ ಕ್ಷಾಮದ ಬಾಧೆಯಿತ್ತು. ಆದುದರಿಂದ ಯೋಸೇಫನು ತನ್ನ ತಂದೆಗೆ, “ನೀನೂ ತಡಮಾಡದೆ ನನ್ನ ಬಳಿಗೆ ಬಾ; ಗೋಷೆನ್‌ ಸೀಮೆಯಲ್ಲಿ ನೀನು ವಾಸಮಾಡಬಹುದು; . . . ನನ್ನ ಬಳಿಯಲ್ಲೇ ಇರಬಹುದು; . . . ಇಲ್ಲಿ ನಿನ್ನನ್ನು ಪೋಷಿಸುವೆನೆಂದು” ಹೇಳಿ ಕಳುಹಿಸಿದನು. (ಆದಿಕಾಂಡ 45:9-11; 47:12) ಹೌದು, ವೃದ್ಧ ಹೆತ್ತವರನ್ನು ಸನ್ಮಾನಿಸುವುದರಲ್ಲಿ, ಅವರು ಸ್ವತಃ ತಮ್ಮನ್ನೇ ನೋಡಿಕೊಳ್ಳಲು ಅಶಕ್ತರಾಗಿರುವಾಗ ಅವರನ್ನು ಸಂರಕ್ಷಿಸುವುದು ಮತ್ತು ಭೌತಿಕ ರೀತಿಯಲ್ಲಿ ಪೋಷಿಸುವುದು ಸೇರಿರುತ್ತದೆ. (1 ಸಮುವೇಲ 22:1-4; ಯೋಹಾನ 19:25-27) ಯೋಸೇಫನು ಈ ಜವಾಬ್ದಾರಿಯನ್ನು ಸಂತೋಷದಿಂದ ಅಂಗೀಕರಿಸಿದನು.

6 ಯೋಸೇಫನು ಯೆಹೋವನ ಆಶೀರ್ವಾದದ ಕಾರಣ, ಐಗುಪ್ತದ ಅತಿ ಐಶ್ವರ್ಯವಂತರಲ್ಲಿ ಮತ್ತು ಅತಿ ಬಲಿಷ್ಠರಲ್ಲಿ ಒಬ್ಬನಾಗಿ ಪರಿಣಮಿಸಿದ್ದನು. (ಆದಿಕಾಂಡ 41:40) ಆದರೆ ತನ್ನ 130 ವರ್ಷ ಪ್ರಾಯದ ತಂದೆಯನ್ನು ಸನ್ಮಾನಿಸಲು ತಾನು ತೀರ ದೊಡ್ಡ ಸ್ಥಾನದಲ್ಲಿದ್ದೇನೆಂದಾಗಲಿ, ಹಾಗೆ ಸನ್ಮಾನಿಸಲು ತನಗೆ ಸಮಯವಿಲ್ಲವೆಂದಾಗಲಿ ಅವನು ನೆನಸಲಿಲ್ಲ. ಯಾಕೋಬನು (ಅಥವಾ ಇಸ್ರಾಯೇಲನು) ಬರುತ್ತಿದ್ದಾನೆಂದು ತಿಳಿದಾಗ, “ಯೋಸೇಫನು ತನ್ನ ರಥವನ್ನು ಸಿದ್ಧಪಡಿಸಿಕೊಂಡು ತನ್ನ ತಂದೆಯಾದ ಇಸ್ರಾಯೇಲನನ್ನು ಎದುರುಗೊಳ್ಳುವದಕ್ಕೋಸ್ಕರ ಗೋಷೆನಿಗೆ ಹೋಗಿ ಅವನಿಗೆ ಕಾಣಿಸಿಕೊಂಡು ತಂದೆಯನ್ನು ಬಹಳ ಹೊತ್ತಿನವರೆಗೆ ಅಪ್ಪಿಕೊಂಡು ಅತ್ತನು.” (ಆದಿಕಾಂಡ 46:28, 29) ಈ ಸ್ವಾಗತವು ಗೌರವದ ಬಾಹ್ಯ ಪ್ರದರ್ಶನವಾಗಿರಲಿಲ್ಲ. ಯೋಸೇಫನು ತನ್ನ ತಂದೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದನು ಮತ್ತು ತನ್ನ ಈ ಪ್ರೀತಿಯನ್ನು ತೋರಿಸಲು ಅವನು ನಾಚಿಕೆಪಡಲಿಲ್ಲ. ವಯಸ್ಸಾಗುತ್ತಿರುವ ಹೆತ್ತವರು ನಮಗಿರುವಲ್ಲಿ, ಅವರಿಗೆ ನಮ್ಮ ಮಮತೆಯ ಅಭಿವ್ಯಕ್ತಿಗಳನ್ನು ಮಾಡುವುದರಲ್ಲಿ ತದ್ರೀತಿಯ ಉದಾರಭಾವವನ್ನು ತೋರಿಸುತ್ತೇವೊ?

7 ಯಾಕೋಬನಿಗೆ ಯೆಹೋವನ ಕಡೆಗೆ ಇದ್ದ ಭಕ್ತಿಯು ಅವನು ಸಾಯುವವರೆಗೂ ಬಲವುಳ್ಳದ್ದಾಗಿ ಉಳಿಯಿತು. (ಇಬ್ರಿಯ 11:21) ದೈವಿಕ ವಾಗ್ದಾನಗಳಲ್ಲಿ ಅವನಿಗಿದ್ದ ನಂಬಿಕೆಯ ಕಾರಣ, ತನ್ನ ಕಳೇಬರವನ್ನು ಕಾನಾನಿನಲ್ಲಿ ಸಮಾಧಿಮಾಡಬೇಕೆಂದು ಅವನು ಕೇಳಿಕೊಂಡನು. ಇದಕ್ಕೆ ತುಂಬಾ ಖರ್ಚು ಮತ್ತು ಪ್ರಯತ್ನವು ಬೇಕಾಗಿತ್ತಾದರೂ, ಅವನ ಈ ವಿನಂತಿಯನ್ನು ಪೂರೈಸುವ ಮೂಲಕ ಯೋಸೇಫನು ತನ್ನ ತಂದೆಯನ್ನು ಸನ್ಮಾನಿಸಿದನು.​—⁠ಆದಿಕಾಂಡ 47:29-31; 50:7-14.

8 ತನ್ನ ತಂದೆಯನ್ನು ಪರಾಮರಿಸುವಂತೆ ಯೋಸೇಫನನ್ನು ಯಾವುದು ಪ್ರಚೋದಿಸಿತು? ತನಗೆ ಜೀವಕೊಟ್ಟು ಪೋಷಿಸಿದ ತಂದೆಯ ಕಡೆಗಿದ್ದ ಪ್ರೀತಿ ಮತ್ತು ಋಣ ಭಾವನೆಯು ಹೀಗೆ ಮಾಡುವಂತೆ ಯೋಸೇಫನನ್ನು ಪ್ರಚೋದಿಸಿತಾದರೂ, ಯೆಹೋವನನ್ನು ಮೆಚ್ಚಿಸಬೇಕೆಂಬ ತೀವ್ರವಾದ ಬಯಕೆಯೂ ಅವನಿಗಿತ್ತೆಂಬುದು ನಿಸ್ಸಂದೇಹ. ನಮಗೂ ಇದೇ ರೀತಿಯ ಬಯಕೆಯಿರಬೇಕು. ಪೌಲನು ಬರೆದುದು: “ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿ ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.” (1 ತಿಮೊಥೆಯ 5:⁠3) ಹೌದು, ಯೆಹೋವನ ಮೇಲಿರುವ ಪ್ರೀತಿ ಮತ್ತು ಆತನ ಕಡೆಗಿರುವ ಪೂಜ್ಯಭಾವದ ಭಯವು ವಯಸ್ಸಾಗುತ್ತಿರುವ ಹೆತ್ತವರನ್ನು ಪರಾಮರಿಸಲಿಕ್ಕಾಗಿ ನಾವು ಎಷ್ಟೇ ಕಷ್ಟಗಳನ್ನು ಎದುರಿಸಬೇಕಾಗಿರುವುದಾದರೂ ಹಾಗೆ ಮಾಡುವಂತೆ ನಮ್ಮನ್ನು ಪ್ರೇರಿಸುವುದು. *

ಮೇಲ್ವಿಚಾರಕರು ತಮ್ಮ ಕಾಳಜಿಯನ್ನು ತೋರಿಸುವ ವಿಧ

9 ತನ್ನ ದೀರ್ಘಾಯುಸ್ಸಿನ ಅಂತ್ಯವು ಸಮೀಪವಾಗಿದ್ದಾಗ ಯಾಕೋಬನು ಯೆಹೋವನನ್ನು, “ನನ್ನನ್ನು ಚಿಕ್ಕಂದಿನಿಂದ ಈ ದಿನದ ವರೆಗೂ ಪರಾಂಬರಿಸುತ್ತಾ ಬಂದ ದೇವ”ರೆಂದು ಸೂಚಿಸಿದನು. (ಆದಿಕಾಂಡ 48:15) ಇಂದು ಯೆಹೋವನು ತನ್ನ ಭೂಸೇವಕರನ್ನು ತನ್ನ ಪುತ್ರನಾದ “ಹಿರೀ ಕುರುಬ” ಯೇಸು ಕ್ರಿಸ್ತನ ನಿರ್ದೇಶನದ ಕೆಳಗಿರುವ ಕ್ರೈಸ್ತ ಮೇಲ್ವಿಚಾರಕರು ಅಥವಾ ಹಿರಿಯರ ಮೂಲಕ ಪರಾಂಬರಿಸುತ್ತಾನೆ. (1 ಪೇತ್ರ 5:​2-4) ಮೇಲ್ವಿಚಾರಕರು ಮಂದೆಯ ವೃದ್ಧ ಸದಸ್ಯರ ಪರಾಮರಿಕೆ ಮಾಡುವಾಗ ಯೆಹೋವನನ್ನು ಹೇಗೆ ಅನುಕರಿಸಬಲ್ಲರು?

10 ಕ್ರೈಸ್ತ ಸಭೆ ಆರಂಭಗೊಂಡ ಸ್ವಲ್ಪದರಲ್ಲಿ ಅಪೊಸ್ತಲರು, ಅಗತ್ಯದಲ್ಲಿದ್ದ ಕ್ರೈಸ್ತ ವಿಧವೆಯರ ಮಧ್ಯೆ ಆಹಾರದ “ದಿನದಿನದ ಉಪಚಾರ”ವನ್ನು ನೋಡಿಕೊಳ್ಳಲಿಕ್ಕಾಗಿ, “ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಆಗಿರುವ ಏಳು ಮಂದಿಯನ್ನು” ನೇಮಿಸಿದರು. (ಅ. ಕೃತ್ಯಗಳು 6:1-6) ತರುವಾಯ, ಪೌಲನು ಮೇಲ್ವಿಚಾರಕನಾದ ತಿಮೊಥೆಯನಿಗೆ, ಭೌತಿಕ ಸಹಾಯವನ್ನು ಪಡೆಯಲು ತಕ್ಕವರಾಗಿರುವವರ ಪಟ್ಟಿಯಲ್ಲಿ ಆದರ್ಶಪ್ರಾಯ ವೃದ್ಧ ವಿಧವೆಯರನ್ನು ಸೇರಿಸುವಂತೆ ಸಲಹೆ ಕೊಟ್ಟನು. (1 ತಿಮೊಥೆಯ 5:3, 9, 10) ಇದೇ ರೀತಿ, ಇಂದು ಸಭಾ ಮೇಲ್ವಿಚಾರಕರು, ಅಗತ್ಯವಿರುವಲ್ಲಿ ವೃದ್ಧ ಕ್ರೈಸ್ತರಿಗೆ ಪ್ರಾಯೋಗಿಕ ನೆರವಿನ ಏರ್ಪಾಡನ್ನು ಸಿದ್ಧಮನಸ್ಸಿನಿಂದ ಸಂಘಟಿಸುತ್ತಾರೆ. ಆದರೂ, ನಂಬಿಗಸ್ತರಾದ ವೃದ್ಧರನ್ನು ಪರಾಮರಿಸುವುದರಲ್ಲಿ ಇನ್ನೂ ಹೆಚ್ಚಿನದ್ದು ಸೇರಿದೆ.

11 ತನ್ನ ಭೂಶುಶ್ರೂಷೆಯು ಕೊನೆಗೊಳ್ಳುವುದಕ್ಕೆ ಸ್ವಲ್ಪ ಮುಂಚೆ, ಯೇಸು ದೇವಾಲಯದಲ್ಲಿ ಕುಳಿತುಕೊಂಡು ಜನರು “ಬೊಕ್ಕಸದಲ್ಲಿ ಹಣಹಾಕುವದನ್ನು ನೋಡುತ್ತಿದ್ದನು.” ಆಗ ಒಬ್ಬಾಕೆ ಅವನ ಗಮನವನ್ನು ಸೆಳೆದಳು. ಆ ಕಥನ ಹೇಳುವುದು: “ಒಬ್ಬ ಬಡ ವಿಧವೆಯು ಬಂದು ಎರಡು ಕಾಸು ಅಂದರೆ ಒಂದು ದುಗ್ಗಾಣಿ ಹಾಕಿದಳು.” ಯೇಸು ತನ್ನ ಶಿಷ್ಯರನ್ನು ಕರೆದು ಅವರಿಗಂದದ್ದು: “ನಿಮಗೆ ನಿಜವಾಗಿ ಹೇಳುತ್ತೇನೆ, ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಈ ಬಡ ವಿಧವೆ ಹೆಚ್ಚು ಹಾಕಿದ್ದಾಳೆ. ಹೇಗಂದರೆ ಎಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಹಾಕಿದರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು.” (ಮಾರ್ಕ 12:41-44) ಮೌಲ್ಯದ ಲೆಕ್ಕದಲ್ಲಿ ಆ ವಿಧವೆಯ ಕಾಣಿಕೆ ಚಿಕ್ಕದಾಗಿದ್ದರೂ, ಅಂತಹ ಪೂರ್ಣಪ್ರಾಣದ ಭಕ್ತಿಯ ಅಭಿವ್ಯಕ್ತಿಗಳನ್ನು ಸ್ವರ್ಗದಲ್ಲಿರುವ ತನ್ನ ತಂದೆಯು ಎಷ್ಟು ಬೆಲೆಯುಳ್ಳದ್ದಾಗಿ ಕಾಣುತ್ತಾನೆಂದು ಯೇಸುವಿಗೆ ತಿಳಿದಿತ್ತು. ಆ ಬಡ ವಿಧವೆಯ ವಯಸ್ಸು ಎಷ್ಟೇ ಆಗಿದ್ದಿರಲಿ, ಆಕೆ ಮಾಡಿದ್ದನ್ನು ಯೇಸು ಅಲಕ್ಷಿಸಲಿಲ್ಲ.

12 ಯೇಸುವಿನಂತೆಯೇ, ಕ್ರೈಸ್ತ ಮೇಲ್ವಿಚಾರಕರು ಸತ್ಯಾರಾಧನೆಯ ವರ್ಧನೆಗಾಗಿ ವೃದ್ಧ ವ್ಯಕ್ತಿಗಳು ಏನು ಮಾಡುತ್ತಾರೊ ಅದನ್ನು ಅಲಕ್ಷಿಸುವುದಿಲ್ಲ. ಸೇವೆಯಲ್ಲಿ ವಯಸ್ಸಾದವರ ಪಾಲ್ಗೊಳ್ಳುವಿಕೆ, ಕೂಟಗಳಲ್ಲಿ ಭಾಗವಹಿಸುವಿಕೆ, ಸಭೆಯಲ್ಲಿ ಅವರು ಬೀರುವ ಸಕಾರಾತ್ಮಕ ಪ್ರಭಾವ, ಮತ್ತು ಅವರ ತಾಳಿಕೊಳ್ಳುವಿಕೆಗಾಗಿ ವಯಸ್ಸಾದವರನ್ನು ಶ್ಲಾಘಿಸಲು ಸಭಾ ಹಿರಿಯರಿಗೆ ಸಕಾರಣಗಳಿವೆ. ಮನಃಪೂರ್ವಕವಾದ ಪ್ರೋತ್ಸಾಹದ ಒಂದು ಮಾತು, ವೃದ್ಧರು ತಮ್ಮ ಪವಿತ್ರ ಸೇವೆಯಲ್ಲಿ “ಹೆಚ್ಚಳ”ಪಡಲು ಸಹಾಯಮಾಡಸಾಧ್ಯವಿದೆ. ಹೀಗೆ ಅವರು, ತಮ್ಮ ಸೇವೆಯನ್ನು ಇತರ ಕ್ರೈಸ್ತರು ಸೇವೆಯಲ್ಲಿ ಏನು ಮಾಡುತ್ತಾರೊ ಅದಕ್ಕೆ ಹೋಲಿಸುವಾಗ ಅಥವಾ ಗತಕಾಲದಲ್ಲಿನ ತಮ್ಮ ಸ್ವಂತ ಸೇವೆಯೊಂದಿಗೆ ಹೋಲಿಸುವಾಗ ಬರುವ ನಿರಾಶೆಯಿಂದ ದೂರವಿರುವರು.​—⁠ಗಲಾತ್ಯ 6:⁠4.

13 ಮೇಲ್ವಿಚಾರಕರು ವೃದ್ಧ ಕ್ರೈಸ್ತರ ಅನುಭವ ಮತ್ತು ಪ್ರತಿಭೆಗಳಿಂದ ಪ್ರಯೋಜನಪಡೆಯುವ ಮೂಲಕ ಅವರ ಬೆಲೆಬಾಳುವ ಬೆಂಬಲವನ್ನು ಮಾನ್ಯಮಾಡಬಲ್ಲರು. ಆದರ್ಶಪ್ರಾಯ ವೃದ್ಧರನ್ನು ಒಮ್ಮೊಮ್ಮೆ ಪ್ರತ್ಯಕ್ಷಾಭಿನಯಗಳಲ್ಲಿಯೊ ಇಂಟರ್‌ವ್ಯೂಗಳಲ್ಲಿಯೊ ಉಪಯೋಗಿಸಬಹುದು. ಒಬ್ಬ ಹಿರಿಯನು ಹೇಳುವುದು: “ಸತ್ಯದಲ್ಲಿ ಮಕ್ಕಳನ್ನು ಬೆಳೆಸಿರುವ ವೃದ್ಧ ಸಹೋದರನನ್ನೊ ಸಹೋದರಿಯನ್ನೊ ನಾನು ಇಂಟರ್‌ವ್ಯೂ ಮಾಡುವಾಗ ಸಭಿಕರು ತುಂಬ ಗಮನಕೊಟ್ಟು ಆಲಿಸುತ್ತಾರೆ.” ಇನ್ನೊಂದು ಸಭೆಯ ಹಿರಿಯರು ವರದಿಸಿರುವಂತೆ, ಎಪ್ಪತ್ತೊಂದು ವರ್ಷ ಪ್ರಾಯದ ಪಯನೀಯರ್‌ ಸಹೋದರಿಯೊಬ್ಬಳು ರಾಜ್ಯ ಪ್ರಚಾರಕರು ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ ಭಾಗವಹಿಸುವಂತೆ ಸಹಾಯಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಅವರು ಬೈಬಲ್‌ ಮತ್ತು ದಿನದ ವಚನದ ಓದುವಿಕೆಯಂಥ “ಪ್ರಾಥಮಿಕ ವಿಷಯಗಳನ್ನು” ಮಾಡಿ ನಂತರ ವಾಚನದ ಬಗ್ಗೆ ಧ್ಯಾನಿಸುವಂತೆ ಸಹ ಈ ಸಹೋದರಿ ಪ್ರೋತ್ಸಾಹಿಸುತ್ತಾರೆ.

14 ಹಿರಿಯರು ವಯಸ್ಸಾಗಿರುವ ಜೊತೆ ಹಿರಿಯರ ಸಹಾಯವನ್ನೂ ಬೆಲೆಯುಳ್ಳದ್ದಾಗಿ ನೋಡುತ್ತಾರೆ. ಈಗ 70ರ ಪ್ರಾಯದಲ್ಲಿದ್ದು ಅನೇಕ ದಶಕಗಳಿಂದ ಹಿರಿಯರಾಗಿ ಸೇವೆ ಮಾಡಿರುವ ಹೋಸೇ ಇತ್ತೀಚೆಗೆ ಒಂದು ದೊಡ್ಡ ಶಸ್ತ್ರಚಿಕಿತ್ಸೆಗೊಳಗಾದರು. ಗುಣಮುಖವಾಗಲು ದೀರ್ಘಕಾಲ ಹಿಡಿಯುತ್ತದೆಂದು ತಿಳಿದಿದ್ದ ಅವರು ಅಧ್ಯಕ್ಷ ಮೇಲ್ವಿಚಾರಕರೋಪಾದಿ ಅವರಿಗಿದ್ದ ನೇಮಕವನ್ನು ಬಿಟ್ಟುಕೊಡಲು ಯೋಚಿಸಿದರು. ಹೋಸೇ ಹೇಳುವುದು: “ಬೇರೆ ಹಿರಿಯರ ಪ್ರತಿಕ್ರಿಯೆಯಿಂದ ನನಗೆ ಆಶ್ಚರ್ಯವಾಯಿತು. ನನ್ನ ಸೂಚನೆಗೆ ಒಪ್ಪುವ ಬದಲು ಅವರು, ನಾನು ನನ್ನ ಜವಾಬ್ದಾರಿಗಳನ್ನು ಹೊರುತ್ತ ಮುಂದುವರಿಯುವಂತೆ ತಮ್ಮಿಂದ ಯಾವ ಪ್ರಾಯೋಗಿಕ ಸಹಾಯದ ಅಗತ್ಯವಿದೆ ಎಂದು ನನ್ನನ್ನು ಕೇಳಿದರು.” ತಮಗಿಂತ ಕಡಿಮೆ ಪ್ರಾಯದ ಹಿರಿಯನೊಬ್ಬನ ಸಹಾಯದಿಂದ, ಹೋಸೇ ಸಂತೋಷದಿಂದ ಅಧ್ಯಕ್ಷ ಮೇಲ್ವಿಚಾರಕರಾಗಿ ಸೇವೆ ಮಾಡುತ್ತ ಮುಂದುವರಿಯಲು ಶಕ್ತರಾದರು. ಮತ್ತು ಇದು ಸಭೆಗೆ ಆಶೀರ್ವಾದಪ್ರದವಾಗಿ ಪರಿಣಮಿಸಿದೆ. ಜೊತೆ ಹಿರಿಯನೊಬ್ಬನು ಹೇಳುವುದು: “ಹಿರಿಯರಾದ ಹೋಸೇಯವರ ಕೆಲಸವನ್ನು ಸಭೆ ಬಹಳ ಮಾನ್ಯಮಾಡುತ್ತದೆ. ಅವರ ಅನುಭವ ಮತ್ತು ನಂಬಿಕೆಯ ಮಾದರಿಯ ಕಾರಣ ಸಹೋದರರು ಅವರನ್ನು ಪ್ರೀತಿಸಿ, ಸನ್ಮಾನಿಸುತ್ತಾರೆ. ಅವರು ನಮ್ಮ ಸಭೆಯ ಕಳೆಯನ್ನು ಹೆಚ್ಚಿಸುತ್ತಾರೆ.”

ಪರಸ್ಪರ ಹಿತಚಿಂತನೆ

15 ವಯಸ್ಸಾದ ಹೆತ್ತವರಿರುವ ಮಕ್ಕಳು ಮತ್ತು ನೇಮಕ ಹೊಂದಿರುವ ಸೇವಕರು ಮಾತ್ರ ವೃದ್ಧರ ಬಗ್ಗೆ ಕಾಳಜಿವಹಿಸಬೇಕೆಂದು ಇದರ ಅರ್ಥವಲ್ಲ. ಕ್ರೈಸ್ತ ಸಭೆಯನ್ನು ಮಾನವ ದೇಹಕ್ಕೆ ಹೋಲಿಸುತ್ತ, ಪೌಲನು ಬರೆದುದು: “ದೇಹದಲ್ಲಿ ಭೇದವೇನೂ ಇರದೆ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಕೂಡಿಸಿದ್ದಾನೆ.” (1 ಕೊರಿಂಥ 12:24, 25) ಕ್ರೈಸ್ತ ಸಭೆಯು ಸಾಮರಸ್ಯದಿಂದ ಕಾರ್ಯವೆಸಗಬೇಕಾದರೆ ಪ್ರತಿಯೊಬ್ಬ ಸದಸ್ಯನು, ವಯಸ್ಸಾದವರ ಸಮೇತ ತನ್ನ ಜೊತೆವಿಶ್ವಾಸಿಗಳ ಕುರಿತು ಹಿತಚಿಂತಕನಾಗಿರತಕ್ಕದ್ದು.​—⁠ಗಲಾತ್ಯ 6:⁠2.

16 ಕ್ರೈಸ್ತ ಕೂಟಗಳು ವೃದ್ಧರಲ್ಲಿ ನಮ್ಮ ಆಸಕ್ತಿಯನ್ನು ತೋರಿಸಲು ಉತ್ತಮ ಸಂದರ್ಭವನ್ನು ಒದಗಿಸುತ್ತವೆ. (ಫಿಲಿಪ್ಪಿ 2:4; ಇಬ್ರಿಯ 10:24, 25) ಇಂತಹ ಸಂದರ್ಭಗಳಲ್ಲಿ ನಾವು ವಯಸ್ಸಾದವರೊಂದಿಗೆ ಮಾತನಾಡಲು ಸಮಯವನ್ನು ತೆಗೆದುಕೊಳ್ಳುತ್ತೇವೊ? ಅವರ ಆರೋಗ್ಯದ ಬಗ್ಗೆ ಕೇಳುವುದು ಸೂಕ್ತವಾಗಿರಬಹುದಾದರೂ, ಪ್ರಾಯಶಃ ಒಂದು ಭಕ್ತಿವರ್ಧಕ ಅನುಭವವನ್ನೊ ಶಾಸ್ತ್ರೀಯ ವಿಚಾರವನ್ನೊ ಹೇಳಿ ಅವರಿಗೆ ‘ಆಧ್ಯಾತ್ಮಿಕ ಉಡುಗೊರೆಯನ್ನು ಕೊಡಬಹುದೊ’? ಕೆಲವು ಮಂದಿ ವೃದ್ಧರಿಗೆ ನಡೆದಾಡಲು ಕಷ್ಟವಾಗುವುದರಿಂದ, ಅವರು ನಮ್ಮ ಬಳಿಗೆ ಬರುವಂತೆ ಕಾಯುವ ಬದಲು ನಾವೇ ಅವರ ಬಳಿಗೆ ಹೋಗುವುದು ದಯಾಪರ ವಿಷಯವಾಗಿದೆ. ಅವರಿಗೆ ಕಿವಿಮಾಂದ್ಯದ ಸಮಸ್ಯೆಯಿರುವಲ್ಲಿ, ನಾವು ಮಾತುಗಳನ್ನು ನಿಧಾನವಾಗಿಯೂ ಸ್ಪಷ್ಟವಾಗಿಯೂ ಉಚ್ಚರಿಸುವ ಅಗತ್ಯವಿರಬಹುದು. ಮತ್ತು ನಿಜವಾದ “ಪ್ರೋತ್ಸಾಹನೆಯ ವಿನಿಮಯ” ಇರಬೇಕಾದರೆ, ಆ ವೃದ್ಧ ವ್ಯಕ್ತಿ ಹೇಳುವುದನ್ನು ನಾವು ಗಮನಕೊಟ್ಟು ಆಲಿಸತಕ್ಕದ್ದು.​—⁠ರೋಮಾಪುರ 1:​11, 12, NW.

17 ವೃದ್ಧರಲ್ಲಿ ಕೆಲವರಿಗೆ ಕ್ರೈಸ್ತ ಕೂಟಗಳಿಗೆ ಹಾಜರಾಗಲು ಸಾಧ್ಯವಾಗದೆ ಇರುವಾಗ ಏನು ಮಾಡಬಹುದು? ‘ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಂಬರಿಸುವುದು’ ನಮ್ಮ ಕರ್ತವ್ಯವೆಂದು ಯಾಕೋಬ 1:27 ತೋರಿಸುತ್ತದೆ. ‘ಪರಾಂಬರಿಸು’ ಎಂದು ಭಾಷಾಂತರಿಸಲಾಗಿರುವ ಗ್ರೀಕ್‌ ಕ್ರಿಯಾಪದದ ಒಂದು ಅರ್ಥ “ಭೇಟಿ ಮಾಡು” ಎಂದಾಗಿದೆ. (ಅ. ಕೃತ್ಯಗಳು 15:36) ಮತ್ತು ವೃದ್ಧ ವ್ಯಕ್ತಿಗಳು ನಮ್ಮ ಭೇಟಿಗಳಲ್ಲಿ ಎಷ್ಟು ಆನಂದಿಸುತ್ತಾರೆ! ಸುಮಾರು ಸಾ.ಶ. 65ರಷ್ಟಕ್ಕೆ ರೋಮ್‌ನಲ್ಲಿ ಬಂದಿಯಾಗಿದ್ದ “ಮುದುಕ” ಪೌಲನು ಕಾರ್ಯತಃ ಒಂಟಿಯಾಗಿದ್ದನು. ಅವನು ತನ್ನ ಜೊತೆಕೆಲಸಗಾರನಾದ ತಿಮೊಥೆಯನನ್ನು ನೋಡಲು ಹಾತೊರೆಯುತ್ತಾ ಬರೆದುದು: “ನನ್ನ ಬಳಿಗೆ ಬೇಗ ಬರುವದಕ್ಕೆ ಪ್ರಯತ್ನಮಾಡು.” (ಫಿಲೆಮೋನ 8, 9; 2 ತಿಮೊಥೆಯ 1:3, 4; 4:9) ಕೆಲವು ಮಂದಿ ವೃದ್ಧರು ಅಕ್ಷರಾರ್ಥವಾಗಿ ಬಂದಿಗಳಲ್ಲವಾದರೂ, ಆರೋಗ್ಯ ಸಮಸ್ಯೆಗಳ ಕಾರಣ ಅವರು ತಮ್ಮ ಮನೆಗೆ ನಿರ್ಬಂಧಿಸಲ್ಪಟ್ಟಿರುತ್ತಾರೆ. ಆದುದರಿಂದ ಅವರು ಕಾರ್ಯತಃ, ‘ದಯವಿಟ್ಟು ನನ್ನನ್ನು ಬೇಗನೆ ಭೇಟಿ ಮಾಡಲು ಕೈಲಾಗುವುದನ್ನು ಮಾಡಿರಿ’ ಎಂದು ಹೇಳುತ್ತಿರಬಹುದು. ಈ ರೀತಿಯ ಬಿನ್ನಹಗಳಿಗೆ ನಾವು ಓಗೊಡುತ್ತಿದ್ದೇವೊ?

18 ವೃದ್ಧರಾದ ಆಧ್ಯಾತ್ಮಿಕ ಸಹೋದರರನ್ನೊ ಸಹೋದರಿಯರನ್ನೊ ಭೇಟಿಮಾಡುವುದರ ಪ್ರಯೋಜನಕರ ಪರಿಣಾಮಗಳ ಬಗ್ಗೆ ಕಡಿಮೆ ಅಂದಾಜು ಮಾಡಬೇಡಿ. ಒನೇಸಿಫೊರನೆಂಬ ಕ್ರೈಸ್ತನು ರೋಮಿನಲ್ಲಿದ್ದಾಗ, ಪೌಲನಿಗಾಗಿ ಶ್ರದ್ಧೆಯಿಂದ ಹುಡುಕಿ ಕಂಡುಹಿಡಿದು ನಂತರ ‘ಅನೇಕಾವರ್ತಿ ಅವನನ್ನು ಆದರಿಸಿದನು.’ (2 ತಿಮೊಥೆಯ 1:​16, 17) ಒಬ್ಬ ವೃದ್ಧ ಸಹೋದರಿ ಹೇಳುವುದು: “ಎಳೆಯರೊಂದಿಗೆ ಸಮಯ ಕಳೆಯುವುದು ನನಗೆ ಬಲು ಇಷ್ಟ. ಅವರು ನನ್ನನ್ನು ಕುಟುಂಬದವಳಂತೆ ಸತ್ಕರಿಸುವುದನ್ನು ನೋಡುವುದು ನನಗೆ ತುಂಬ ಖುಷಿ. ಅದು ನನಗೆ ಬಹಳಷ್ಟು ಪ್ರೋತ್ಸಾಹವನ್ನು ಕೊಡುತ್ತದೆ.” ವೃದ್ಧೆಯಾದ ಇನ್ನೊಬ್ಬ ಸಹೋದರಿ ಹೇಳುವುದು: “ಯಾರಾದರೂ ನನಗೆ ಕಾರ್ಡ್‌ ಕಳುಹಿಸುವಾಗ, ಕೆಲವು ನಿಮಿಷ ಫೋನ್‌ನಲ್ಲಿ ಮಾತಾಡುವಾಗ, ಇಲ್ಲವೆ ತುಸು ಸಮಯಕ್ಕಾಗಿ ಭೇಟಿಕೊಡುವಾಗ, ನಾನದನ್ನು ನಿಜವಾಗಿಯೂ ಮಾನ್ಯಮಾಡುತ್ತೇನೆ. ಅದು ಚೈತನ್ಯದಾಯಕವಾಗಿದೆ.”

ಪರಾಮರಿಸುವವರಿಗೆ ಯೆಹೋವನು ಪ್ರತಿಫಲ ನೀಡುತ್ತಾ

19 ವೃದ್ಧರನ್ನು ಪರಾಮರಿಸುವುದು ಅನೇಕ ಆಶೀರ್ವಾದಗಳನ್ನು ತರುತ್ತದೆ. ವಯಸ್ಸಾದವರ ಸಹವಾಸಮಾಡುತ್ತ, ಅವರ ಜ್ಞಾನ ಮತ್ತು ಅನುಭವದಿಂದ ಪ್ರಯೋಜನಪಡೆದುಕೊಳ್ಳುವುದೇ ಒಂದು ಸುಯೋಗವಾಗಿದೆ. ಪರಾಮರಿಕೆ ಮಾಡುವವರು, ಕೊಡುವುದರಿಂದ ದೊರೆಯುವ ಹೆಚ್ಚಿನ ಸಂತೋಷವನ್ನೂ ತಮ್ಮ ಶಾಸ್ತ್ರೀಯ ಜವಾಬ್ದಾರಿಯನ್ನು ಪೂರೈಸಿದುದರಿಂದ ಬರುವ ನಿರ್ವಹಣ ಪ್ರಜ್ಞೆಯನ್ನೂ ಆಂತರಿಕ ಶಾಂತಿಯನ್ನೂ ಅನುಭವಿಸುತ್ತಾರೆ. (ಅ. ಕೃತ್ಯಗಳು 20:35) ಇದಲ್ಲದೆ, ವೃದ್ಧರ ಆರೈಕೆ ಮಾಡುವವರಿಗೆ, ತಮ್ಮ ವೃದ್ಧಾಪ್ಯದಲ್ಲಿ ತಮ್ಮನ್ನು ತ್ಯಜಿಸಲಾಗುವುದು ಎಂಬ ಭಯವಿರಬೇಕೆಂದಿಲ್ಲ. ಏಕೆಂದರೆ ದೇವರ ವಾಕ್ಯವು, “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು” ಎಂಬ ಆಶ್ವಾಸನೆಯನ್ನು ನಮಗೆ ಕೊಡುತ್ತದೆ.​—⁠ಜ್ಞಾನೋಕ್ತಿ 11:25.

20 ಯೆಹೋವನು, ವೃದ್ಧರಾದ ಜೊತೆವಿಶ್ವಾಸಿಗಳ ಆವಶ್ಯಕತೆಗಳನ್ನು ನಿಸ್ವಾರ್ಥಭಾವದಿಂದ ಪರಾಮರಿಸುವ ದೇವಭಯವುಳ್ಳ ಮಕ್ಕಳು, ಮೇಲ್ವಿಚಾರಕರು, ಮತ್ತು ಇತರ ಕಾಳಜಿಭರಿತ ಕ್ರೈಸ್ತರಿಗೆ ಪ್ರತಿಫಲವನ್ನು ಕೊಡುತ್ತಾನೆ. ಈ ಮನೋಭಾವವು, “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರಮಾಡುವನು” ಎಂಬ ಜ್ಞಾನೋಕ್ತಿಗೆ ಹೊಂದಿಕೆಯಲ್ಲಿದೆ. (ಜ್ಞಾನೋಕ್ತಿ 19:17) ದೀನ ದರಿದ್ರರಿಗೆ ದಯೆತೋರಿಸುವಂತೆ ಪ್ರೀತಿ ನಮ್ಮನ್ನು ಪ್ರೇರಿಸುವಲ್ಲಿ, ಅದನ್ನು ದೇವರು ನಾವು ಆತನಿಗೆ ಕೊಟ್ಟಿರುವ ಸಾಲದಂತೆ ಕಂಡು ಆಶೀರ್ವಾದಗಳೊಂದಿಗೆ ನಮಗೆ ಹಿಂದೆ ಕೊಡುತ್ತಾನೆ. ಮತ್ತು ಯಾರಲ್ಲಿ ಅನೇಕರು ‘ಲೌಕಿಕವಾಗಿ ಬಡವರಾಗಿದ್ದರೂ ನಂಬಿಕೆಯಲ್ಲಿ ಐಶ್ವರ್ಯವಂತರಾಗಿದ್ದಾರೊ’ ಅಂತಹ ವಯಸ್ಸಾಗಿರುವ ನಮ್ಮ ಜೊತೆ ಆರಾಧಕರಿಗೆ ಪ್ರೀತಿಯಿಂದ ಆರೈಕೆ ಮಾಡುತ್ತಿರುವುದಕ್ಕಾಗಿಯೂ ಆತನು ನಮಗೆ ಪ್ರತಿಫಲವನ್ನು ಕೊಡುತ್ತಾನೆ.​—⁠ಯಾಕೋಬ 2:⁠5.

21 ದೇವರ ಪ್ರತಿಫಲವು ಎಷ್ಟು ಉದಾರಭಾವದ್ದಾಗಿದೆ! ಅದರಲ್ಲಿ ನಿತ್ಯಜೀವವು ಸೇರಿದೆ. ಯೆಹೋವನ ಸೇವಕರಲ್ಲಿ ಹೆಚ್ಚಿನವರಿಗೆ ಇದು ಭೂಪರದೈಸಿನಲ್ಲಿನ ನಿತ್ಯಜೀವವಾಗಿರುವುದು. ಅಲ್ಲಿ ಬಾಧ್ಯತೆಯಾಗಿ ಬಂದ ಪಾಪವು ನಿರ್ಮೂಲವಾಗಿ ನಂಬಿಗಸ್ತ ವೃದ್ಧಜನರು ತಮ್ಮ ಯೌವನದ ಚೈತನ್ಯವನ್ನು ಮರಳಿ ಪಡೆಯುವರು. (ಪ್ರಕಟನೆ 21:​3-5) ನಾವು ಆ ಆಶೀರ್ವದಿತ ಸಮಯಕ್ಕಾಗಿ ಕಾಯುತ್ತಿರುವಾಗ, ವೃದ್ಧಜನರನ್ನು ಪರಾಮರಿಸುವ ಕ್ರೈಸ್ತ ಜವಾಬ್ದಾರಿಯನ್ನು ಸದಾ ಪೂರೈಸುತ್ತ ಮುಂದುವರಿಯೋಣ.

[ಪಾದಟಿಪ್ಪಣಿ]

^ ಪ್ಯಾರ. 11 ವೃದ್ಧ ಹೆತ್ತವರ ಪರಾಮರಿಕೆಯ ಬಗ್ಗೆ ಪ್ರಾಯೋಗಿಕ ಸಲಹೆಗಳಿಗಾಗಿ, ಫೆಬ್ರವರಿ 8, 1994ರ ಎಚ್ಚರ! ಪತ್ರಿಕೆಯ 3-10ನೆಯ ಪುಟಗಳನ್ನು ನೋಡಿ.

ನಿಮ್ಮ ಉತ್ತರಗಳೇನು?

• ಮಕ್ಕಳು ವಯಸ್ಸಾದ ಹೆತ್ತವರನ್ನು ಹೇಗೆ ಸನ್ಮಾನಿಸಬಲ್ಲರು?

• ಮಂದೆಯ ವೃದ್ಧ ಸದಸ್ಯರಿಗೆ ಮೇಲ್ವಿಚಾರಕರು ಹೇಗೆ ಮಾನ್ಯತೆ ತೋರಿಸುತ್ತಾರೆ?

• ವೃದ್ಧರ ಕಡೆಗೆ ನಿಜ ಆಸಕ್ತಿ ತೋರಿಸಲು ಕ್ರೈಸ್ತರು ವ್ಯಕ್ತಿಪರವಾಗಿ ಏನು ಮಾಡಬಲ್ಲರು?

• ವೃದ್ಧರಾದ ಕ್ರೈಸ್ತರನ್ನು ಪರಾಮರಿಸುವುದರಿಂದ ಯಾವ ಆಶೀರ್ವಾದಗಳು ಬರುತ್ತವೆ?

[ಅಧ್ಯಯನ ಪ್ರಶ್ನೆಗಳು]

1, 2. ನಮ್ಮ ಸ್ವರ್ಗೀಯ ತಂದೆಯ ಆರೈಕೆಯು ಮಾನವ ಹೆತ್ತವರು ಕೊಡುವ ಆರೈಕೆಗಿಂತ ಹೇಗೆ ಭಿನ್ನವಾಗಿದೆ?

3. ಈ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

4. ಕ್ರೈಸ್ತ ಮಕ್ಕಳಿಗೆ ತಮ್ಮ ಹೆತ್ತವರ ಕಡೆಗೆ ಯಾವ ಜವಾಬ್ದಾರಿಯಿದೆ?

5. (ಎ) ಯೋಸೇಫನು ಒಬ್ಬ ಪುತ್ರನೋಪಾದಿ ತನಗಿದ್ದ ಕರ್ತವ್ಯಗಳನ್ನು ಮರೆತಿರಲಿಲ್ಲವೆಂಬುದನ್ನು ಯಾವುದು ತೋರಿಸುತ್ತದೆ? (ಬಿ) ನಮ್ಮ ಹೆತ್ತವರನ್ನು ಸನ್ಮಾನಿಸುವುದು ಎಂಬುದರ ಅರ್ಥವೇನು, ಮತ್ತು ಈ ವಿಷಯದಲ್ಲಿ ಯೋಸೇಫನು ಯಾವ ಉತ್ತಮ ಮಾದರಿಯನ್ನಿಟ್ಟನು?

6. ಯೋಸೇಫನು ತನ್ನ ತಂದೆಗೆ ನಿಜ ಪ್ರೀತಿಯನ್ನು ಹೇಗೆ ತೋರಿಸಿದನು, ಮತ್ತು ನಾವು ಅವನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?

7. ತನ್ನನ್ನು ಕಾನಾನಿನಲ್ಲಿ ಸಮಾಧಿ ಮಾಡಬೇಕೆಂದು ಯಾಕೋಬನು ಬಯಸಿದ್ದೇಕೆ?

8. (ಎ) ವೃದ್ಧ ಹೆತ್ತವರನ್ನು ಪರಾಮರಿಸುವುದಕ್ಕಾಗಿ ನಮಗಿರುವ ಮುಖ್ಯ ಪ್ರಚೋದನೆಯೇನು? (ಬಿ) ತನ್ನ ವೃದ್ಧ ಹೆತ್ತವರನ್ನು ಪರಾಮರಿಸಲಿಕ್ಕಾಗಿ ಒಬ್ಬ ಪೂರ್ಣ ಸಮಯದ ಸೇವಕನು ಏನು ಮಾಡಿದನು? (ಪುಟ 17ರಲ್ಲಿ ಚೌಕವನ್ನು ನೋಡಿ.)

9. ವಯಸ್ಸಾದ ಕ್ರೈಸ್ತರ ಸಮೇತ ಮಂದೆಯನ್ನು ಪಾಲಿಸಲು ಯೆಹೋವನು ಯಾರನ್ನು ನೇಮಿಸಿದ್ದಾನೆ?

10. ವೃದ್ಧ ಕ್ರೈಸ್ತರಿಗೆ ಭೌತಿಕ ಸಹಾಯವನ್ನು ಒದಗಿಸಲು ಏನು ಮಾಡಲಾಗಿದೆ? (ಪುಟ 19ರಲ್ಲಿರುವ ಚೌಕವನ್ನು ನೋಡಿ.)

11. ಚಿಕ್ಕ ಕಾಣಿಕೆ ಕೊಟ್ಟ ಆ ಬಡ ವಿಧವೆಯ ಕುರಿತು ಯೇಸು ಏನಂದನು?

12. ವೃದ್ಧ ಕ್ರೈಸ್ತರು ಕೊಡುವ ಬೆಂಬಲಕ್ಕಾಗಿ ಮೇಲ್ವಿಚಾರಕರು ಹೇಗೆ ಮಾನ್ಯತೆತೋರಿಸಬಲ್ಲರು?

13. ವೃದ್ಧರ ಪ್ರತಿಭೆಗಳು ಮತ್ತು ಅನುಭವದಿಂದ ಹಿರಿಯರು ಯಾವ ವಿಧಗಳಲ್ಲಿ ಪ್ರಯೋಜನ ಪಡೆಯಬಲ್ಲರು?

14. ಹಿರಿಯರ ಒಂದು ಮಂಡಲಿಯು ಒಬ್ಬ ವೃದ್ಧ ಜೊತೆ ಮೇಲ್ವಿಚಾರಕನಿಗೆ ಹೇಗೆ ಮಾನ್ಯತೆಯನ್ನು ತೋರಿಸಿತು?

15. ಕ್ರೈಸ್ತರೆಲ್ಲರು ತಮ್ಮ ಮಧ್ಯೆ ಇರುವ ವೃದ್ಧರ ಹಿತಚಿಂತನೆಯಲ್ಲಿ ಏಕೆ ಆಸಕ್ತರಾಗಿರಬೇಕು?

16. ನಾವು ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ ವೃದ್ಧರಲ್ಲಿ ಹೇಗೆ ಆಸಕ್ತಿ ತೋರಿಸಬಲ್ಲೆವು?

17. ಮನೆಗೆ ನಿರ್ಬಂಧಿಸಲ್ಪಟ್ಟಿರುವ ವೃದ್ಧ ಕ್ರೈಸ್ತರ ಕಡೆಗೆ ನಾವು ಹೇಗೆ ಚಿಂತೆಯನ್ನು ತೋರಿಸಬಹುದು?

18. ನಾವು ವೃದ್ಧರನ್ನು ಭೇಟಿಮಾಡುವುದರಿಂದ ಯಾವ ಪ್ರಯೋಜನಗಳು ಬರಬಲ್ಲವು?

19. ವೃದ್ಧರನ್ನು ಪರಾಮರಿಸುವುದರಿಂದ ಯಾವ ಆಶೀರ್ವಾದಗಳು ಬರುತ್ತವೆ?

20, 21. ವೃದ್ಧರನ್ನು ಪರಾಮರಿಸುವವರನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ, ಮತ್ತು ನಮ್ಮ ದೃಢನಿರ್ಣಯ ಏನಾಗಿರಬೇಕು?

[ಪುಟ 17ರಲ್ಲಿರುವ ಚೌಕ]

ಅವನ ಹೆತ್ತವರಿಗೆ ಸಹಾಯ ಅಗತ್ಯವಿದ್ದಾಗ

ಫಿಲಿಪ್‌ 1999ರಲ್ಲಿ ಲೈಬೀರಿಯದಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ಸ್ವಯಂಸೇವಕನಾಗಿ ಕೆಲಸಮಾಡುತ್ತಿದ್ದಾಗ, ತನ್ನ ತಂದೆ ವಿಷಮವಾಗಿ ಕಾಯಿಲೆ ಬಿದ್ದಿದ್ದಾರೆಂಬ ಸುದ್ದಿ ಸಿಕ್ಕಿತು. ತನ್ನ ತಾಯಿ ಒಬ್ಬರೇ ಇದನ್ನು ನಿಭಾಯಿಸಲಾರರು ಎಂದು ಗ್ರಹಿಸಿದ ಫಿಲಿಪ್‌ ತನ್ನ ತಂದೆಗೆ ವೈದ್ಯಕೀಯ ಸಹಾಯವನ್ನು ಏರ್ಪಡಿಸಲಿಕ್ಕಾಗಿ ಮನೆಗೆ ಹಿಂದಿರುಗಲು ನಿರ್ಣಯಿಸಿದನು.

ಫಿಲಿಪ್‌ ಜ್ಞಾಪಿಸಿಕೊಳ್ಳುವುದು: “ಹಿಂದೆ ಹೋಗುವ ನಿರ್ಣಯ ಮಾಡುವುದು ಸುಲಭವಾಗಿರಲಿಲ್ಲವಾದರೂ ನನ್ನ ಪ್ರಥಮ ಜವಾಬ್ದಾರಿ ನನ್ನ ಹೆತ್ತವರ ಕಡೆಗಿದೆ ಎಂದು ನನಗನಿಸಿತು.” ಮುಂದಿನ ಮೂರು ವರುಷಗಳಲ್ಲಿ ಅವನು ತನ್ನ ತಂದೆತಾಯಿಯನ್ನು ಹೆಚ್ಚು ಸೂಕ್ತವಾದ ಮನೆಗೆ ವರ್ಗಾಯಿಸಿ, ಸ್ಥಳಿಕ ಜೊತೆಕ್ರೈಸ್ತರ ಸಹಾಯದಿಂದ ತನ್ನ ತಂದೆಯ ವಿಶೇಷ ಅಗತ್ಯಗಳಿಗನುಸಾರ ಮನೆಯ ಅನುಕೂಲತೆಗಳನ್ನು ಹೊಂದಿಸಿಕೊಂಡನು.

ಈಗ ಫಿಲಿಪ್‌ನ ತಂದೆಯ ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಅವನ ತಾಯಿ ಹೆಚ್ಚು ಉತ್ತಮವಾಗಿ ಸಜ್ಜಾಗಿದ್ದಾರೆ. ಇತ್ತೀಚೆಗೆ, ಫಿಲಿಪ್‌ಗೆ ಯೆಹೋವನ ಸಾಕ್ಷಿಗಳ ಮ್ಯಾಸಿಡೋನ್ಯ ಬ್ರಾಂಚ್‌ ಆಫೀಸಿನಲ್ಲಿ ಸ್ವಯಂಸೇವಕನಾಗಿ ಕೆಲಸಮಾಡುವ ಆಮಂತ್ರಣವನ್ನು ಸ್ವೀಕರಿಸಲು ಸಾಧ್ಯವಾಯಿತು.

[ಪುಟ 19ರಲ್ಲಿರುವ ಚೌಕ]

ಆಕೆಯ ಅಗತ್ಯಗಳನ್ನು ಅವರು ಅಲಕ್ಷಿಸಲಿಲ್ಲ

ಆಸ್ಟ್ರೇಲಿಯದ 85 ವರ್ಷ ಪ್ರಾಯದ ಏಡ ಎಂಬ ಸಹೋದರಿ ಅನಾರೋಗ್ಯದ ಕಾರಣ ಮನೆಗೆ ನಿರ್ಬಂಧಿಸಲ್ಪಟ್ಟಾಗ, ಸಭೆಯ ಹಿರಿಯರು ನೆರವು ನೀಡುವ ಏರ್ಪಾಡನ್ನು ಮಾಡಿದರು. ಜೊತೆವಿಶ್ವಾಸಿಗಳ ಒಂದು ಗುಂಪು ಆಕೆಗೆ ಸಹಾಯಮಾಡುವಂತೆ ಅವರು ಏರ್ಪಡಿಸಿದರು. ಈ ಸೋದರಸೋದರಿಯರು ಶುಚಿಮಾಡುವ, ಬಟ್ಟೆ ಒಗೆಯುವ, ಅಡುಗೆಮಾಡುವ, ಮತ್ತು ಹೊರಗಿನ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲು ಸಂತೋಷಿಸಿದರು.

ನೆರವಿನ ಈ ಏರ್ಪಾಡನ್ನು ಸುಮಾರು ಹತ್ತು ವರುಷಗಳ ಹಿಂದೆ ಆರಂಭಿಸಲಾಗಿತ್ತು. ಇದುವರೆಗೆ, ಸಹೋದರಿ ಏಡಳ ಪರಾಮರಿಕೆ ಮಾಡುವುದರಲ್ಲಿ ಜೊತೆ ಸಾಕ್ಷಿಗಳಲ್ಲಿ 30ಕ್ಕೂ ಹೆಚ್ಚು ಮಂದಿ ಸಹಾಯಹಸ್ತವನ್ನು ಚಾಚಿದ್ದಾರೆ. ಅವರನ್ನು ಭೇಟಿಮಾಡುವುದು, ಬೈಬಲ್‌ ಪ್ರಕಾಶನಗಳನ್ನು ಓದಿಹೇಳುವುದು, ಸಭೆಯಲ್ಲಿರುವವರ ಆಧ್ಯಾತ್ಮಿಕ ಪ್ರಗತಿಯನ್ನು ತಿಳಿಸುವುದು, ಮತ್ತು ಕ್ರಮವಾಗಿ ಆಕೆಯೊಂದಿಗೆ ಪ್ರಾರ್ಥಿಸುವುದನ್ನು ಅವರು ಇನ್ನೂ ಮುಂದುವರಿಸುತ್ತಿದ್ದಾರೆ.

ಒಬ್ಬ ಸ್ಥಳಿಕ ಕ್ರೈಸ್ತ ಹಿರಿಯನು ಹೇಳಿದ್ದು: “ಸಹೋದರಿ ಏಡಳನ್ನು ನೋಡಿಕೊಳ್ಳುವವರು, ಆಕೆಗೆ ಸಹಾಯಮಾಡುವುದನ್ನು ಒಂದು ಸುಯೋಗವೆಂದೆಣಿಸುತ್ತಾರೆ. ದಶಕಗಳಿಂದ ಆಕೆ ಮಾಡಿರುವ ನಂಬಿಗಸ್ತಿಕೆಯ ಸೇವೆಯಿಂದ ಅನೇಕರು ಪ್ರಚೋದಿಸಲ್ಪಟ್ಟಿರುವುದರಿಂದ, ಆಕೆಯ ಅಗತ್ಯಗಳನ್ನು ಅಲಕ್ಷ್ಯಮಾಡುವುದು ಅವರಿಗೆ ಅಚಿಂತ್ಯವಾಗಿರುತ್ತದೆ.”

[ಪುಟ 16ರಲ್ಲಿರುವ ಚಿತ್ರ]

ವೃದ್ಧರಾದ ಹೆತ್ತವರಿಗೆ ನಮ್ಮ ಮಮತೆಯ ಅಭಿವ್ಯಕ್ತಿಗಳನ್ನು ಮಾಡುವುದರಲ್ಲಿ ನಾವು ಉದಾರಿಗಳಾಗಿದ್ದೆವೊ?

[ಪುಟ 18ರಲ್ಲಿರುವ ಚಿತ್ರಗಳು]

ಸಭೆಯಲ್ಲಿರುವವರೆಲ್ಲರೂ ವೃದ್ಧ ಜೊತೆವಿಶ್ವಾಸಿಗಳಿಗೆ ತಮ್ಮ ಪ್ರೀತಿಯನ್ನು ತೋರಿಸಬಲ್ಲರು