ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರಿಗೆ ಒಳ್ಳೇದನ್ನು ಮಾಡಬೇಕೋ ಅಥವಾ ಅವರಿಗೆ ಕೆಡುಕನ್ನು ಮಾಡದಿರುವುದಷ್ಟೇ ಸಾಕೊ?

ಇತರರಿಗೆ ಒಳ್ಳೇದನ್ನು ಮಾಡಬೇಕೋ ಅಥವಾ ಅವರಿಗೆ ಕೆಡುಕನ್ನು ಮಾಡದಿರುವುದಷ್ಟೇ ಸಾಕೊ?

ಇತರರಿಗೆ ಒಳ್ಳೇದನ್ನು ಮಾಡಬೇಕೋ ಅಥವಾ ಅವರಿಗೆ ಕೆಡುಕನ್ನು ಮಾಡದಿರುವುದಷ್ಟೇ ಸಾಕೊ?

“ಇತರರು ನಿಮಗೆ ಏನು ಮಾಡಬಾರದೆಂದು ನೆನಸುತ್ತೀರೋ ಅದನ್ನು ನೀವು ಅವರಿಗೆ ಮಾಡಬೇಡಿ.” ಹೆಸರಾಂತ ಚೀನೀ ಬೋಧಕನೂ ತತ್ತ್ವಜ್ಞಾನಿಯೂ ಆಗಿದ್ದ ಕನ್‌ಫ್ಯೂಷಿಯಸನು ಈ ನೀತಿಬೋಧೆಯನ್ನು ನುಡಿದನೆಂದು ಹೇಳಲಾಗುತ್ತದೆ. ಇಂದು, ಸುಮಾರು 2,500 ವರ್ಷಗಳ ಬಳಿಕವೂ, ಒಬ್ಬ ವ್ಯಕ್ತಿಯು ಬೇರೆಯವರಿಗೆ ಹಾನಿಯನ್ನು ಮಾಡುವುದರಿಂದ ದೂರವಿರುವ ಮೂಲಕ ತನ್ನ ನೈತಿಕ ಕರ್ತವ್ಯವನ್ನು ಪೂರೈಸುತ್ತಾನೆ ಎಂದು ಅನೇಕರು ನಂಬುತ್ತಾರೆ.

ನಡತೆಯ ಕುರಿತಾದ ಕನ್‌ಫ್ಯೂಷಿಯಸನ ಈ ನಿಯಮಕ್ಕೆ ಅದರದ್ದೇ ಆದ ಮೌಲ್ಯವಿದೆ ಎಂಬುದು ಒಪ್ಪತಕ್ಕ ಸಂಗತಿಯೇ. ಆದರೆ ಅದೇ ಸಮಯದಲ್ಲಿ, ಮಾನವ ನಡತೆ ಹಾಗೂ ಪರಸ್ಪರ ಕ್ರಿಯೆಯ ಕುರಿತಾದ ಇನ್ನೊಂದು ಅಂಶವನ್ನು ಬೈಬಲು ತಿಳಿಯಪಡಿಸುತ್ತದೆ. ಕೃತ್ಯಾಕರಣ, ಅಂದರೆ ಜೊತೆ ಮಾನವರ ವಿರುದ್ಧ ತಪ್ಪುಗಳನ್ನು ಮಾಡುವುದು ಎಂದು ಯಾವುದನ್ನು ಕರೆಯಲಾಗುತ್ತದೋ ಅದರ ಜೊತೆಗೆ, ಅಕೃತ್ಯಕರಣ, ಅಂದರೆ ಉದ್ದೇಶಪೂರ್ವಕವಾಗಿ ಮಾಡಲ್ಪಡದಿರುವ ಪಾಪದ ಕುರಿತು ಬೈಬಲ್‌ ತಿಳಿಸುತ್ತದೆ. ಕ್ರೈಸ್ತ ಶಿಷ್ಯನಾದ ಯಾಕೋಬನು ಬರೆದುದು: “ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನು ಪಾಪಕ್ಕೊಳಗಾಗಿದ್ದಾನೆ.” (ಯಾಕೋಬ 4:17) ಕ್ರೈಸ್ತರು ಇತರರಿಗೆ ಕೆಟ್ಟದ್ದನ್ನು ಮಾಡಬಾರದೆಂದಷ್ಟೇ ಬೋಧಿಸುವುದಕ್ಕೆ ಬದಲಾಗಿ, ಯೇಸು ಕ್ರಿಸ್ತನು ಅವರಿಗೆ ಈ ಸಲಹೆಯನ್ನು ನೀಡಿದನು: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”​—⁠ಮತ್ತಾಯ 7:⁠12.

ಎಲ್ಲಾ ಮಾನವರು, ಇತರರು ತಮ್ಮನ್ನು ಹೇಗೆ ಉಪಚರಿಸಬೇಕೆಂದು ಬಯಸುತ್ತಾರೋ ಹಾಗೆಯೇ ಒಬ್ಬರನ್ನೊಬ್ಬರು ಉಪಚರಿಸಬೇಕೆಂದು ದೇವರು ಆದಿಯಲ್ಲಿ ಉದ್ದೇಶಿಸಿದ್ದನು. ಮಾನವರನ್ನು ಸೃಷ್ಟಿಸಿದ ವಿಧದಲ್ಲಿ ಆತನು ಇತರರ ಹಿತಕ್ಷೇಮಕ್ಕಾಗಿ ಕಾಳಜಿಯನ್ನು ವ್ಯಕ್ತಪಡಿಸುವ ವಿಷಯದಲ್ಲಿ ಅತ್ಯುತ್ತಮ ಮಾದರಿಯನ್ನಿಟ್ಟನು: “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” (ಆದಿಕಾಂಡ 1:27) ಇದರ ಅರ್ಥವೇನೆಂದರೆ, ದೇವರು ಪ್ರೀತಿಯಿಂದ ಮಾನವರಿಗೆ ಒಂದು ಮನಸ್ಸಾಕ್ಷಿಯನ್ನು ಕೊಟ್ಟನು. ಈ ಮನಸ್ಸಾಕ್ಷಿಯನ್ನು ಯೋಗ್ಯ ರೀತಿಯಲ್ಲಿ ತರಬೇತುಗೊಳಿಸುವಲ್ಲಿ, ಇತರರು ತಮ್ಮನ್ನು ಹೇಗೆ ಉಪಚರಿಸಬೇಕೆಂದು ಅವರು ಬಯಸುತ್ತಾರೋ ಅದೇ ರೀತಿಯಲ್ಲಿ ಅವರೂ ಇತರರನ್ನು ಉಪಚರಿಸುವಂತೆ ಈ ಮನಸ್ಸಾಕ್ಷಿಯು ಅವರನ್ನು ಮಾರ್ಗದರ್ಶಿಸುವುದು.

ಇಂದು ಅನೇಕರು ವಿಚಾರಹೀನರೂ ಸ್ವಾರ್ಥಿಗಳೂ ಆಗಿರುವ ಜನರ ಕೈಯಲ್ಲಿ ನಿರೀಕ್ಷಾಹೀನರಾಗಿ ಮತ್ತು ನಿಸ್ಸಹಾಯಕರಾಗಿ ಕಷ್ಟಾನುಭವಿಸುತ್ತಿದ್ದಾರೆ. ಹೀಗಿರುವಾಗ, ಇತರರಿಗೆ ಕೆಟ್ಟದ್ದನ್ನು ಮಾಡುವುದು ಅಥವಾ ಹಾನಿಮಾಡುವುದರಿಂದ ದೂರವಿರುವುದಕ್ಕಿಂತಲೂ ಹೆಚ್ಚಾಗಿ, ಅವರಿಗೆ ಒಳ್ಳೇದನ್ನು ಮಾಡುವುದು ಹಾಗೂ ಸಹಾಯ ನೀಡುವುದು ಇನ್ನಷ್ಟು ಆವಶ್ಯಕವಾದದ್ದಾಗಿದೆ ಎಂಬುದಂತೂ ಸುಸ್ಪಷ್ಟ. ಈ ಕಾರಣದಿಂದಲೇ ಯೆಹೋವನ ಸಾಕ್ಷಿಗಳು, ದೇವರ ವಾಕ್ಯದಲ್ಲಿ ಕಂಡುಬರುವ ಅದ್ಭುತಕರ ನಿರೀಕ್ಷೆಯ ಕುರಿತು ಕಲಿಯುವಂತೆ ಇತರರಿಗೆ ಸಹಾಯಮಾಡಲು ಸ್ವಇಚ್ಛೆಯಿಂದ ಸಕಾರಾತ್ಮಕವಾಗಿ ಕ್ರಿಯೆಗೈಯುತ್ತಾರೆ. ಬೈಬಲಿನ ಸುವಾರ್ತೆಯೊಂದಿಗೆ ಅವರು ತಮ್ಮ ನೆರೆಯವರನ್ನು ಭೇಟಿಮಾಡುವಾಗ, ಪ್ರೀತಿಯ ಮನೋಭಾವದಿಂದ ಹೀಗೆ ಮಾಡುತ್ತಾರೆ; ಸ್ವತಃ ತಮಗೆ ಏನು ಮಾಡಲ್ಪಡಬೇಕೆಂದು ಅವರು ಬಯಸುತ್ತಾರೋ ಅದನ್ನೇ ಅವರು ಇತರರಿಗೆ ಮಾಡುತ್ತಾರೆ.