ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕತ್ತಲುಕೋಣೆಗಳಿಂದ ಸ್ವಿಸ್‌ ಆ್ಯಲ್ಪ್ಸ್‌ಗೆ

ಕತ್ತಲುಕೋಣೆಗಳಿಂದ ಸ್ವಿಸ್‌ ಆ್ಯಲ್ಪ್ಸ್‌ಗೆ

ಜೀವನ ಕಥೆ

ಕತ್ತಲುಕೋಣೆಗಳಿಂದ ಸ್ವಿಸ್‌ ಆ್ಯಲ್ಪ್ಸ್‌ಗೆ

ಲೋಟಾರ್‌ ವಾಲ್ಟರ್‌ ಅವರು ಹೇಳಿದಂತೆ

ಪೂರ್ವ ಜರ್ಮನಿಯ ಕಮ್ಯೂನಿಸ್ಟ್‌ ಸೆರೆಮನೆಗಳ ಕತ್ತಲುಕೋಣೆಗಳಲ್ಲಿ ದೀರ್ಘವಾದ ಮೂರು ವರ್ಷಗಳನ್ನು ಕಳೆದ ಬಳಿಕ, ಚೈತನ್ಯದಾಯಕ ಸ್ವಾತಂತ್ರ್ಯದ ರುಚಿಯನ್ನು ಸವಿಯಲು ಮತ್ತು ನನ್ನ ಕುಟುಂಬದೊಂದಿಗೆ ಹೃತ್ಪೂರ್ವಕ ಸಹವಾಸದಲ್ಲಿ ಆನಂದಿಸಲು ತುದಿಗಾಲಿನಲ್ಲಿ ನಿಂತಿದ್ದೆ.

ಆದರೂ, ನನ್ನ ಆರು ವರ್ಷದ ಮಗನಾಗಿದ್ದ ಯೋಹಾನಸ್‌ನ ಮುಖದ ಮೇಲೆ ಕಂಡುಬರುತ್ತಿದ್ದ ಗೊಂದಲಭರಿತ ನೋಟಕ್ಕೆ ಮಾತ್ರ ಮಾನಸಿಕವಾಗಿ ಸಿದ್ಧನಾಗಿರಲಿಲ್ಲ. ಏಕೆಂದರೆ ಕಳೆದ ಮೂರು ವರ್ಷಗಳಲ್ಲಿ ಅವನು ನನ್ನನ್ನು ನೋಡಿರಲೇ ಇಲ್ಲ. ಅವನಿಗೆ ನಾನೊಬ್ಬ ಅಪರಿಚಿತನಾಗಿದ್ದೆ.

ನನ್ನ ಮಗನಿಗೆ ಅಸದೃಶವಾಗಿ, ನಾನು ಮಗುವಾಗಿದ್ದಾಗ ನನ್ನ ಹೆತ್ತವರ ಪ್ರೀತಿಭರಿತ ಸಾಹಚರ್ಯದಲ್ಲಿ ತುಂಬ ಆನಂದಿಸಿದ್ದೆ. ಇಸವಿ 1928ರಲ್ಲಿ ನಾನು ಜನಿಸಿದಾಗ, ಜರ್ಮನಿಯ ಕೆಮ್‌ನಿಟ್ಸ್‌ನಲ್ಲಿದ್ದ ನಮ್ಮ ಮನೆಯಲ್ಲಿ ಪ್ರೀತಿಭರಿತ ವಾತಾವರಣವು ತುಂಬಿತ್ತು. ನನ್ನ ತಂದೆಯವರು ಧರ್ಮದ ಕುರಿತಾದ ತಮ್ಮ ಅಸಮ್ಮತಿಯ ಬಗ್ಗೆ ಮುಚ್ಚುಮರೆಯಿಲ್ಲದೆ ಮಾತಾಡುತ್ತಿದ್ದರು. ಒಂದನೆಯ ಲೋಕ ಯುದ್ಧದ ಸಮಯದಲ್ಲಿ, ಎರಡೂ ಪಕ್ಷದಲ್ಲಿದ್ದ “ಕ್ರೈಸ್ತ” ಯೋಧರು ಡಿಸೆಂಬರ್‌ 25ರಂದು ಪರಸ್ಪರ “ಕ್ರಿಸ್ಮಸ್‌ ಶುಭಾಶಯ”ಗಳನ್ನು ವಿನಿಮಯಮಾಡಿಕೊಂಡರೂ, ಮರುದಿನವೇ ಪುನಃ ಪರಸ್ಪರ ಹತ್ಯೆಗೈಯಲು ಆರಂಭಿಸಿದ್ದನ್ನು ಅವರು ಜ್ಞಾಪಿಸಿಕೊಳ್ಳುತ್ತಿದ್ದರು. ಅವರ ಅಭಿಪ್ರಾಯದಲ್ಲಿ, ಧರ್ಮವು ಕಪಟಭಾವದ ತೀರ ಕೆಟ್ಟ ರೂಪವಾಗಿತ್ತು.

ಭ್ರಮನಿರಸನವು ನಂಬಿಕೆಗೆ ದಾರಿಮಾಡಿದ್ದು

ಸಂತೋಷಕರವಾಗಿಯೇ, ನಾನು ಇಂಥ ಹತಾಶೆಯನ್ನು ಅನುಭವಿಸಲಿಲ್ಲ. ನಾನು 17 ವರ್ಷದವನಾಗಿದ್ದಾಗ IIನೆಯ ಲೋಕ ಯುದ್ಧವು ಕೊನೆಗೊಂಡಿತು, ಮತ್ತು ಬಲಾತ್ಕಾರದಿಂದ ಸೈನ್ಯಕ್ಕೆ ಸೇರಿಸಲ್ಪಡುವ ಅಪಾಯದಿಂದ ನಾನು ಕೂದಲೆಳೆಯಷ್ಟು ಅಂತರದಲ್ಲಿ ಪಾರಾಗಿದ್ದೆ. ಆದರೂ, ‘ಇಷ್ಟೆಲ್ಲಾ ಹತ್ಯೆಗಳು ಏಕೆ ನಡೆಯುತ್ತಿವೆ? ನಾನು ಯಾರ ಮೇಲೆ ಭರವಸೆಯಿಡಸಾಧ್ಯವಿದೆ? ನಿಜ ಭದ್ರತೆಯನ್ನು ನಾನೆಲ್ಲಿ ಕಂಡುಕೊಳ್ಳಬಲ್ಲೆ?’ ಎಂಬಂಥ ಕೆಲವು ಚಿಂತಾದಾಯಕ ಪ್ರಶ್ನೆಗಳ ಕುರಿತು ನಾನು ಚಿಂತಾಕ್ರಾಂತನಾಗಿದ್ದೆ. ನಾವು ವಾಸಿಸುತ್ತಿದ್ದ ಪೂರ್ವ ಜರ್ಮನಿಯು ಸೋವಿಯಟ್‌ ನಿಯಂತ್ರಣದ ಕೆಳಗೆ ಬಂತು. ಯುದ್ಧದ ಪರಿಣಾಮಗಳಿಂದ ಕಂಗಾಲಾದವರಿಗೆ, ನ್ಯಾಯ, ಸಮಾನತೆ, ಐಕಮತ್ಯ, ಮತ್ತು ಶಾಂತಿಭರಿತ ಸಂಬಂಧಗಳ ಕುರಿತಾದ ಕಮ್ಯೂನಿಸ್ಟ್‌ ಧ್ಯೇಯಗಳು ತುಂಬ ಆಕರ್ಷಣೀಯವಾಗಿ ಕಂಡವು. ಸ್ವಲ್ಪದರಲ್ಲೇ ಈ ಪ್ರಾಮಾಣಿಕ ವ್ಯಕ್ತಿಗಳಲ್ಲಿ ಅನೇಕರು ಬಹಳವಾಗಿ ಭ್ರಮನಿರಸನಗೊಂಡರು; ಈ ಸಲ ಧರ್ಮದ ಕಾರಣದಿಂದಲ್ಲ, ಬದಲಾಗಿ ರಾಜಕೀಯ ಕಾರಣಕ್ಕಾಗಿಯೇ.

ನನ್ನ ಪ್ರಶ್ನೆಗಳಿಗೆ ಅರ್ಥಭರಿತ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದ ನನ್ನ ದೊಡ್ಡಮ್ಮನವರು ತಮ್ಮ ನಂಬಿಕೆಯ ಕುರಿತು ನನ್ನೊಂದಿಗೆ ಮಾತಾಡಿದರು. ಪ್ರಪ್ರಥಮ ಬಾರಿಗೆ ನಾನು ಮತ್ತಾಯ ಪುಸ್ತಕದ ಇಡೀ 24ನೆಯ ಅಧ್ಯಾಯವನ್ನು ಓದುವಂತೆ ನನ್ನನ್ನು ಪ್ರಚೋದಿಸಿದಂಥ ಒಂದು ಬೈಬಲ್‌ ಆಧಾರಿತ ಪ್ರಕಾಶನವನ್ನು ಅವರು ನನಗೆ ಕೊಟ್ಟರು. ನಮ್ಮ ಕಾಲವನ್ನು “ವಿಷಯಗಳ ವ್ಯವಸ್ಥೆಯ ಅಂತ್ಯ”ವೆಂದು ಗುರುತಿಸುತ್ತಾ, ಮಾನವಕುಲದ ಸಮಸ್ಯೆಗಳಿಗೆ ಯಾವುದು ಮೂಲಕಾರಣವಾಗಿದೆ ಎಂಬುದನ್ನು ಸೂಚಿಸುತ್ತಾ, ಆ ಪ್ರಕಾಶನದಲ್ಲಿ ಕೊಡಲ್ಪಟ್ಟಿದ್ದ ಸಮಂಜಸವಾದ ಹಾಗೂ ಒಡಂಬಡಿಸುವಂಥ ವಿವರಣೆಗಳಿಂದ ನಾನು ಪ್ರಭಾವಿತನಾದೆ.​—⁠ಮತ್ತಾಯ 24:​3, NW; ಪ್ರಕಟನೆ 12:⁠9.

ತದನಂತರ ಯೆಹೋವನ ಸಾಕ್ಷಿಗಳ ಇನ್ನೂ ಹೆಚ್ಚಿನ ಪ್ರಕಾಶನಗಳು ನನಗೆ ದೊರೆತವು, ಮತ್ತು ನಾನು ಅವುಗಳನ್ನು ಅತ್ಯಾತುರನಾಗಿ ಓದುತ್ತಾ ಹೋದಂತೆ, ತುಂಬ ಕಟ್ಟಾಸಕ್ತಿಯಿಂದ ಹುಡುಕುತ್ತಿದ್ದ ಸತ್ಯವನ್ನು ನಾನೀಗ ಕಂಡುಕೊಂಡಿದ್ದೇನೆ ಎಂಬುದು ನನ್ನ ಅರಿವಿಗೆ ಬಂತು. ಇಸವಿ 1914ರಲ್ಲಿ ಯೇಸು ಕ್ರಿಸ್ತನು ಸ್ವರ್ಗದಲ್ಲಿ ಸಿಂಹಾಸನಾರೂಢನಾದನು, ಮತ್ತು ವಿಧೇಯ ಮಾನವಕುಲಕ್ಕೆ ಆಶೀರ್ವಾದಗಳನ್ನು ತರಲಿಕ್ಕಾಗಿ ಅತಿ ಬೇಗನೆ ಅವನು ಅದೈವಿಕ ಸಂಘಟನೆಗಳನ್ನು ಸದೆಬಡಿಯುವನು ಎಂಬುದನ್ನು ತಿಳಿಯುವುದು ತುಂಬ ರೋಮಾಂಚಕರ ಸಂಗತಿಯಾಗಿತ್ತು. ನನಗೆ ಒಂದು ದೊಡ್ಡ ಆವಿಷ್ಕಾರವಾಗಿ ತೋರಿದಂಥ ಇನ್ನೊಂದು ವಿಚಾರವು, ಈಡಿನ ಕುರಿತಾದ ಸ್ಪಷ್ಟವಾದ ತಿಳಿವಳಿಕೆಯೇ ಆಗಿತ್ತು. ಹೃತ್ಪೂರ್ವಕವಾದ ಪ್ರಾರ್ಥನೆಯಲ್ಲಿ ಯೆಹೋವ ದೇವರ ಕಡೆಗೆ ತಿರುಗಿ ಕ್ಷಮಾಪಣೆಯನ್ನು ಕೇಳುವಂತೆ ಇದು ನನಗೆ ಸಹಾಯಮಾಡಿತು. ಯಾಕೋಬ 4:8ರಲ್ಲಿ ಕಂಡುಬರುವ “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂಬ ದಯಾಭರಿತ ಆಮಂತ್ರಣದಿಂದ ನಾನು ತುಂಬ ಭಾವುಕನಾದೆ.

ಹೊಸದಾಗಿ ಕಂಡುಕೊಳ್ಳಲ್ಪಟ್ಟ ನಂಬಿಕೆಯ ವಿಷಯದಲ್ಲಿ ನನಗೆ ಅಪಾರವಾದ ಹುರುಪು ಇತ್ತಾದರೂ, ನನ್ನ ಅಕ್ಕ ಹಾಗೂ ನನ್ನ ಹೆತ್ತವರು ಆರಂಭದಲ್ಲಿ ನಾನು ಹೇಳಿದ ವಿಚಾರವನ್ನು ಸ್ವೀಕರಿಸಲು ನಿರಾಕರಿಸಿದರು. ಆದರೂ, ಇದು ಕೆಮ್‌ನಿಟ್ಸ್‌ನ ಬಳಿ ಸಾಕ್ಷಿಗಳ ಒಂದು ಚಿಕ್ಕ ಗುಂಪಿನಿಂದ ನಡೆಸಲ್ಪಡುತ್ತಿದ್ದ ಕ್ರೈಸ್ತ ಕೂಟಗಳಿಗೆ ಹಾಜರಾಗುವ ನನ್ನ ಬಯಕೆಯನ್ನು ಒಂದಿಷ್ಟೂ ಕುಂದಿಸಲಿಲ್ಲ. ನನ್ನ ಆಶ್ಚರ್ಯಕ್ಕೆ, ನನ್ನ ಅಕ್ಕ ಹಾಗೂ ಹೆತ್ತವರು ಮೊದಲ ಕೂಟಕ್ಕೆ ನನ್ನೊಂದಿಗೆ ಬಂದಿದ್ದರು! ಇದು 1945/46ರ ಚಳಿಗಾಲದಲ್ಲಾಗಿತ್ತು. ಸಮಯಾನಂತರ, ನಾವು ವಾಸಿಸುತ್ತಿದ್ದ ಹಾರ್‌ಟೌ ಪಟ್ಟಣದಲ್ಲಿ ಒಂದು ಬೈಬಲ್‌ ಅಧ್ಯಯನ ಗುಂಪು ಸಂಘಟಿಸಲ್ಪಟ್ಟಿತು ಮತ್ತು ನನ್ನ ಕುಟುಂಬವು ಕ್ರಮವಾಗಿ ಹಾಜರಾಗಲಾರಂಭಿಸಿತು.

‘ನಾನು ಬಾಲಕನು’

ಪ್ರಾಮುಖ್ಯವಾದ ಬೈಬಲ್‌ ಸತ್ಯಗಳನ್ನು ಕಲಿಯುವುದು ಮತ್ತು ಯೆಹೋವನ ಜನರೊಂದಿಗೆ ಕ್ರಮವಾಗಿ ಸಹವಾಸಿಸುವುದು, ನನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸುವಂತೆ ನನ್ನನ್ನು ಪ್ರಚೋದಿಸಿತು, ಮತ್ತು 1946ರ ಮೇ 25ರಂದು ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡೆ. ನನ್ನ ಕುಟುಂಬದ ಸದಸ್ಯರು ಸಹ ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಮಾಡಿದಾಗ ನನಗೆ ತುಂಬ ಸಂತೋಷವಾಯಿತು, ಮತ್ತು ಕಾಲಕ್ರಮೇಣ ಮೂವರೂ ನಂಬಿಗಸ್ತ ಸಾಕ್ಷಿಗಳಾದರು. ನನ್ನ ಅಕ್ಕ ಕೆಮ್‌ನಿಟ್ಸ್‌ನ ಸಭೆಗಳಲ್ಲೊಂದರಲ್ಲಿ ಈಗಲೂ ಕ್ರಿಯಾಶೀಲ ಸದಸ್ಯಳಾಗಿದ್ದಾಳೆ. ನನ್ನ ತಾಯಿ ಮತ್ತು ತಂದೆಯವರು 1965 ಮತ್ತು 1986ರಲ್ಲಿ ಮರಣಪಡುವ ತನಕ ನಿಷ್ಠಾವಂತರಾಗಿ ಸೇವೆಸಲ್ಲಿಸಿದರು.

ನನ್ನ ದೀಕ್ಷಾಸ್ನಾನವಾಗಿ ಆರು ತಿಂಗಳುಗಳ ಬಳಿಕ, ನಾನು ಒಬ್ಬ ವಿಶೇಷ ಪಯನೀಯರನಾಗಿ ಸೇವೆಮಾಡಲಾರಂಭಿಸಿದೆ. ಇದು, ಇಡೀ ಜೀವಮಾನವೆಲ್ಲಾ “ಅನುಕೂಲವಾದ ಕಾಲದಲ್ಲಿ ಮತ್ತು ಅನುಕೂಲವಿಲ್ಲದ ಕಾಲದಲ್ಲಿ” ದೇವರ ಸೇವೆಯನ್ನು ಮಾಡುವುದರ ಆರಂಭವನ್ನು ಗುರುತಿಸಿತು. (2 ತಿಮೊಥೆಯ 4:⁠2) ಸ್ವಲ್ಪದರಲ್ಲೇ ಸೇವೆಯ ಹೊಸ ಅವಕಾಶಗಳು ಲಭ್ಯಗೊಳಿಸಲ್ಪಟ್ಟವು. ಪೂರ್ವ ಜರ್ಮನಿಯಲ್ಲಿರುವ ಗ್ರಾಮೀಣ ಪ್ರದೇಶವೊಂದರಲ್ಲಿ ಪೂರ್ಣ ಸಮಯದ ಸೌವಾರ್ತಿಕರ ಆವಶ್ಯಕತೆಯಿತ್ತು. ನಾನೂ ಇನ್ನೊಬ್ಬ ಸಹೋದರನೂ ಈ ನೇಮಕಕ್ಕೆ ಅರ್ಜಿಯನ್ನು ಹಾಕಿದೆವು, ಆದರೆ ಇಂಥ ಒಂದು ಜವಾಬ್ದಾರಿಯುತ ಕೆಲಸಕ್ಕಾಗಿ ತನ್ನ ಬಳಿ ಅನುಭವವಾಗಲಿ ಪ್ರೌಢತೆಯಾಗಲಿ ಇಲ್ಲವಲ್ಲಾ ಎಂದು ನನಗನಿಸಿತು. ನಾನು ಕೇವಲ 18ರ ಪ್ರಾಯದವನಾಗಿದ್ದರಿಂದ, ಯೆರೆಮೀಯನಂಥದ್ದೇ ಅನಿಸಿಕೆಗಳು ನನಗಿದ್ದವು: “ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು.” (ಯೆರೆಮೀಯ 1:⁠6) ನನಗೆ ಇಷ್ಟೆಲ್ಲಾ ಆತಂಕಗಳಿದ್ದರೂ, ಜವಾಬ್ದಾರಿಯುತ ಸಹೋದರರು ನಮಗೊಂದು ಅವಕಾಶವನ್ನು ಕೊಡಲು ನಿರ್ಧರಿಸಿದರು. ಹೀಗೆ, ಬ್ರಾಂಡನ್‌ಬರ್ಗ್‌ ರಾಜ್ಯದ ಬೆಲ್‌ಟ್ಸಿಕ್‌ ಎಂಬ ಚಿಕ್ಕ ಪಟ್ಟಣವೊಂದಕ್ಕೆ ನಾವು ನೇಮಿಸಲ್ಪಟ್ಟೆವು.

ಆ ಟೆರಿಟೊರಿಯಲ್ಲಿ ಸಾರುವುದು ತುಂಬ ಪಂಥಾಹ್ವಾನದಾಯಕವಾಗಿತ್ತು, ಆದರೆ ಇದು ನನಗೆ ಅಮೂಲ್ಯವಾದ ತರಬೇತಿಯನ್ನು ನೀಡಿತು. ಸಕಾಲದಲ್ಲಿ, ಸಮಾಜದಲ್ಲಿ ಅಗ್ರಗಣ್ಯರಾಗಿದ್ದ ಅನೇಕ ವ್ಯಾಪಾರಸ್ಥ ಸ್ತ್ರೀಯರು ರಾಜ್ಯದ ಸಂದೇಶವನ್ನು ಅಂಗೀಕರಿಸಿ ಯೆಹೋವನ ಸಾಕ್ಷಿಗಳಾದರು. ಆದರೂ, ಅವರ ಕ್ರೈಸ್ತ ನಿಲುವು, ಆ ಚಿಕ್ಕ ಗ್ರಾಮೀಣ ಸಮುದಾಯದಲ್ಲಿ ಆಳವಾಗಿ ಬೇರೂರಿದ್ದ ಸಂಪ್ರದಾಯಗಳು ಮತ್ತು ಭಯಗಳಿಗೆ ತದ್ವಿರುದ್ಧವಾಗಿತ್ತು. ಕ್ಯಾಥೊಲಿಕ್‌ ಹಾಗೂ ಪ್ರಾಟೆಸ್ಟಂಟ್‌ ಪಾದ್ರಿಗಳು ಕಲ್ಲುಮನಸ್ಸಿನಿಂದ ನಮ್ಮನ್ನು ವಿರೋಧಿಸಿದರು ಮತ್ತು ನಮ್ಮ ಸಾರುವ ಕೆಲಸದ ಕಾರಣದಿಂದಾಗಿ ನಮ್ಮ ಮೇಲೆ ಸುಳ್ಳು ದೋಷಾರೋಪಗಳನ್ನು ಹೊರಿಸಿದರು. ಆದರೆ ಮಾರ್ಗದರ್ಶನೆ ಹಾಗೂ ಸಂರಕ್ಷಣೆಗಾಗಿ ನಾವು ಯೆಹೋವನ ಮೇಲೆ ಆತುಕೊಂಡಿದ್ದರಿಂದ, ಅನೇಕ ಆಸಕ್ತ ಜನರು ಸತ್ಯವನ್ನು ಸ್ವೀಕರಿಸುವಂತೆ ಸಹಾಯಮಾಡಲು ಶಕ್ತರಾದೆವು.

ಅಸಹನೆಯ ಮೋಡಗಳು ಮುಸುಕತೊಡಗಿದ್ದು

ಇಸವಿ 1948ರಲ್ಲಿ ನಾನು ಆಶೀರ್ವಾದಗಳನ್ನೂ ಅನಿರೀಕ್ಷಿತ ಕಷ್ಟಗಳನ್ನೂ ಅನುಭವಿಸಿದೆ. ಪ್ರಥಮವಾಗಿ, ತುರಿಂಜಿಯದ ರೂಡಲ್‌ಶ್ಟಾಟ್‌ನಲ್ಲಿ ಪಯನೀಯರ್‌ ನೇಮಕವನ್ನು ಪಡೆದುಕೊಂಡೆ. ಅಲ್ಲಿ ನನಗೆ ಅನೇಕ ನಂಬಿಗಸ್ತ ಸಹೋದರ ಸಹೋದರಿಯರ ಪರಿಚಯವಾಯಿತು, ಮತ್ತು ನಾನು ಅವರ ಸಾಹಚರ್ಯದಲ್ಲಿ ಆನಂದಿಸಿದೆ. ಅದೇ ವರ್ಷದ ಜುಲೈ ತಿಂಗಳಿನಲ್ಲಿ ಇನ್ನೊಂದು ಪ್ರಮುಖ ಆಶೀರ್ವಾದವು ದೊರಕಿತು. ನಾನು ಕೆಮ್‌ನಿಟ್ಸ್‌ ಸಭೆಯಲ್ಲಿ ಕೂಟಗಳಿಗೆ ಹಾಜರಾಗಲು ಆರಂಭಿಸಿದಂದಿನಿಂದ ನನಗೆ ಪರಿಚಯವಿದ್ದ ಒಬ್ಬ ನಂಬಿಗಸ್ತ ಕ್ರಿಯಾಶೀಲ ಕ್ರೈಸ್ತ ಸ್ತ್ರೀಯಾದ ಏರೀಕಾ ಉಲ್ಮಾನ್‌ಳನ್ನು ನಾನು ಮದುವೆಯಾದೆ. ನನ್ನ ಸ್ವಂತ ಸ್ಥಳವಾಗಿದ್ದ ಹಾರ್‌ಟೌ ಪಟ್ಟಣದಲ್ಲಿ ನಾವಿಬ್ಬರೂ ಪಯನೀಯರ್‌ ಸೇವೆಯನ್ನು ಆರಂಭಿಸಿದೆವು. ಆದರೂ, ಸಮಯಾನಂತರ ಆರೋಗ್ಯದ ಸಮಸ್ಯೆಗಳಿಂದಾಗಿ ಮತ್ತು ಇನ್ನಿತರ ಕಾರಣಗಳಿಗಾಗಿ ಏರೀಕಾಳು ಪೂರ್ಣ ಸಮಯದ ಸೇವೆಯನ್ನು ಮುಂದುವರಿಸಲು ಶಕ್ತಳಾಗಲಿಲ್ಲ.

ಅವು ಯೆಹೋವನ ಜನರಿಗೆ ತುಂಬ ಕಷ್ಟಕರವಾಗಿದ್ದ ಸಮಯಗಳಾಗಿದ್ದವು. ಕೆಮ್‌ನಿಟ್ಸ್‌ನಲ್ಲಿದ್ದ ಕಾರ್ಮಿಕ ಇಲಾಖೆಯು, ನಾನು ಸಾರುವ ಕೆಲಸವನ್ನು ಬಿಟ್ಟು, ಒಂದು ಪೂರ್ಣಕಾಲಿಕ ಐಹಿಕ ಉದ್ಯೋಗವನ್ನು ಮಾಡುವಂತೆ ನನ್ನನ್ನು ಒತ್ತಾಯಿಸುವ ಪ್ರಯತ್ನದಲ್ಲಿ ನನ್ನ ಆಹಾರದ ರೇಷನ್‌ ಕಾರ್ಡನ್ನು ರದ್ದುಪಡಿಸಿತು. ಜವಾಬ್ದಾರಿಯುತ ಸಹೋದರರು ರಾಜ್ಯದಿಂದ ಕಾನೂನುಬದ್ಧ ಅಂಗೀಕಾರವನ್ನು ಪಡೆಯುವ ವಿನಂತಿಗಾಗಿ ನನ್ನ ಕೇಸನ್ನು ಉಪಯೋಗಿಸಿದರು. ಈ ವಿನಂತಿಯು ನಿರಾಕರಿಸಲ್ಪಟ್ಟಿತು, ಮತ್ತು 1950ರ ಜೂನ್‌ 23ರಂದು, ದಂಡವನ್ನು ತೆರುವ ಇಲ್ಲದಿದ್ದರೆ ಸೆರೆಯಲ್ಲಿ 30 ದಿನಗಳನ್ನು ಕಳೆಯುವ ಶಿಕ್ಷೆಯು ವಿಧಿಸಲ್ಪಟ್ಟಿತು. ಈ ನಿರ್ಣಯವನ್ನು ನಾವು ಅಪೀಲ್‌ಮಾಡಿದೆವು, ಆದರೆ ಉಚ್ಚ ನ್ಯಾಯಾಲಯವು ಆ ಅಪೀಲನ್ನು ತಿರಸ್ಕರಿಸಿತು ಮತ್ತು ನಾನು ಸೆರೆಮನೆಗೆ ಕಳುಹಿಸಲ್ಪಟ್ಟೆ.

ಈ ಘಟನೆಯು, ಮುಂದೆ ಬರಲಿಕ್ಕಿದ್ದ ವಿರೋಧ ಹಾಗೂ ವಿಪತ್ಕಾಲದ ಚಿಕ್ಕ ಮುನ್ಸೂಚನೆಯಾಗಿತ್ತಷ್ಟೆ. ಇದಾಗಿ ಒಂದು ತಿಂಗಳು ಕಳೆಯುವ ಮೊದಲೇ, ಅಂದರೆ 1950ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ವಾರ್ತಾ ಮಾಧ್ಯಮದಲ್ಲಿ ಸುಳ್ಳಾರೋಪದ ಪ್ರಚಾರ ಕಾರ್ಯಾಚರಣೆಯನ್ನು ಆರಂಭಿಸಿದ ಬಳಿಕ, ಕಮ್ಯೂನಿಸ್ಟ್‌ ಆಳ್ವಿಕೆಯು ನಮ್ಮ ಚಟುವಟಿಕೆಗಳಿಗೆ ನಿಷೇಧವೊಡ್ಡಿತು. ನಮ್ಮ ತೀವ್ರಗತಿಯ ಬೆಳವಣಿಗೆ ಮತ್ತು ತಟಸ್ಥ ನಿಲುವಿನ ಕಾರಣದಿಂದ, ಧರ್ಮದ ಸೋಗಿನಲ್ಲಿ “ಸಂಶಯಾಸ್ಪದ ಚಟುವಟಿಕೆಯನ್ನು” ನಡೆಸುತ್ತಿರುವಂಥ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳ ಅಪಾಯಕರ ಗೂಢಚಾರರ ಸಂಘವೆಂಬ ಹೆಸರುಪಟ್ಟಿಯನ್ನು ನಮಗೆ ಕೊಡಲಾಯಿತು. ಈ ನಿಷೇಧವು ಜಾರಿಗೆ ಬಂದ ದಿನ, ನಮ್ಮ ಮನೆಯಲ್ಲಿ ನನ್ನ ಹೆಂಡತಿಯು ನಮ್ಮ ಮಗನಾದ ಯೋಹಾನಸ್‌ನಿಗೆ ಜನ್ಮವಿತ್ತಳು ಮತ್ತು ಆ ಸಮಯದಲ್ಲಿ ನಾನು ಸೆರೆಮನೆಯಲ್ಲಿದ್ದೆ. ಸೂಲಗಿತ್ತಿಯು ಎಷ್ಟೇ ಪ್ರತಿಭಟನೆಯನ್ನು ತೋರಿಸಿದರೂ, ರಾಜ್ಯದ ಭದ್ರತಾ ಅಧಿಕಾರಿಗಳು ಬಲವಂತವಾಗಿ ನಮ್ಮ ಅಪಾರ್ಟ್‌ಮೆಂಟ್‌ಗೆ ನುಗ್ಗಿ, ತಮ್ಮ ದೋಷಾರೋಪಗಳನ್ನು ರುಜುಪಡಿಸಲು ಪುರಾವೆಗಳಿಗಾಗಿ ಹುಡುಕಿದರು. ಇಷ್ಟೆಲ್ಲಾ ಮಾಡಿದರೂ ಅವರಿಗೆ ಏನೂ ಸಿಗಲಿಲ್ಲ. ಆದರೂ, ಸಮಯಾನಂತರ ನಮ್ಮ ಸಭೆಯಲ್ಲಿ ಬೇಹುಗಾರಿಕೆಯನ್ನು ನಡೆಸಲಿಕ್ಕಾಗಿ ಒಬ್ಬ ಸುದ್ದಿಗಾರನನ್ನು ಇರಿಸುವುದರಲ್ಲಿ ಅವರು ಸಫಲರಾದರು. ಇದರಿಂದ, 1953ರ ಅಕ್ಟೋಬರ್‌ ತಿಂಗಳಿನಲ್ಲಿ, ನನ್ನನ್ನೂ ಸೇರಿಸಿ ಇತರ ಎಲ್ಲಾ ಜವಾಬ್ದಾರಿಯುತ ಸಹೋದರರನ್ನು ಬಂಧಿಸಲಾಯಿತು.

ಕತ್ತಲುಕೋಣೆಗಳಲ್ಲಿ

ತಪ್ಪಿತಸ್ಥರೆಂದು ತೀರ್ಮಾನಿಸಲ್ಪಟ್ಟು, ಮೂರರಿಂದ ಆರು ವರ್ಷಗಳ ವರೆಗಿನ ಸೆರೆಶಿಕ್ಷೆಯು ವಿಧಿಸಲ್ಪಟ್ಟ ಬಳಿಕ, ಸ್ಫಿಕಾವ್‌ನಲ್ಲಿದ್ದ ಓಸ್ಟಶ್ಟೈನ್‌ ಕಾಸಲ್‌ನ ಅಸಹ್ಯಕರ ಕತ್ತಲುಕೋಣೆಗಳಲ್ಲಿದ್ದ ನಮ್ಮ ಅನೇಕ ಸಹೋದರರನ್ನು ನಾವು ಸೇರಿಕೊಂಡೆವು. ಅಲ್ಲಿ ಭೀಕರ ಪರಿಸ್ಥಿತಿಗಳಿದ್ದರೂ, ಪ್ರೌಢ ಸಹೋದರರೊಂದಿಗೆ ಸಹವಾಸಿಸುವುದು ನಿಜವಾಗಿಯೂ ಸಂತೋಷದಾಯಕವಾಗಿತ್ತು. ನಮಗೆ ಸ್ವಾತಂತ್ರ್ಯದ ಕೊರತೆಯಿತ್ತಾದರೂ, ಆಧ್ಯಾತ್ಮಿಕ ಆಹಾರದ ಕೊರತೆಯಿರಲಿಲ್ಲ. ಸರಕಾರದಿಂದ ಕಡೆಗಣಿಸಲ್ಪಟ್ಟು, ನಿಷೇಧಿಸಲ್ಪಟ್ಟಿತ್ತಾದರೂ, ಕಾವಲಿನಬುರುಜು ಪತ್ರಿಕೆಯು ರಹಸ್ಯವಾದ ರೀತಿಯಲ್ಲಿ ಸೆರೆಮನೆಗೆ ಮತ್ತು ನೇರವಾಗಿ ನಮ್ಮ ಸೆರೆಕೋಣೆಗಳಿಗೇ ಬಂದು ತಲಪುತ್ತಿತ್ತು! ಹೇಗೆ?

ನಮ್ಮ ಸಹೋದರರಲ್ಲಿ ಕೆಲವರು ಕಲ್ಲಿದ್ದಲ ಗಣಿಗಳಲ್ಲಿ ಕೆಲಸಮಾಡುವಂತೆ ನೇಮಿಸಲ್ಪಟ್ಟಿದ್ದರು; ಬಂಧಿಸಲ್ಪಟ್ಟಿರದಂಥ ಸಾಕ್ಷಿಗಳು ಅವರನ್ನು ಭೇಟಿಯಾಗಿ, ಪತ್ರಿಕೆಗಳನ್ನು ಕೊಡುತ್ತಿದ್ದರು. ಆ ಸಹೋದರರು ಪತ್ರಿಕೆಗಳನ್ನು ರಹಸ್ಯವಾಗಿ ಸೆರೆಮನೆಯೊಳಗೆ ತರುತ್ತಿದ್ದರು ಮತ್ತು ಚಾಕಚಕ್ಯತೆಯಿಂದ ನಾವು ಎಲ್ಲರಿಗೂ ಅತ್ಯಧಿಕವಾಗಿ ಬೇಕಾಗಿದ್ದ ಆಧ್ಯಾತ್ಮಿಕ ಆಹಾರವನ್ನು ದಾಟಿಸಲು ಪ್ರಯತ್ನಿಸುತ್ತಿದ್ದೆವು. ಈ ರೀತಿಯಲ್ಲಿ ಯೆಹೋವನ ಕಾಳಜಿ ಮತ್ತು ಮಾರ್ಗದರ್ಶನವನ್ನು ಅನುಭವಿಸಲು ನಾನೆಷ್ಟು ಸಂತೋಷಿತನಾಗಿದ್ದೆ ಮತ್ತು ಇದರಿಂದ ಎಷ್ಟು ಉತ್ತೇಜನವನ್ನು ಪಡೆದುಕೊಂಡೆ!

ಇಸವಿ 1954ರ ಅಂತ್ಯದಷ್ಟಕ್ಕೆ, ಟೋರ್‌ಗೌನಲ್ಲಿದ್ದ ಕುಖ್ಯಾತ ಸೆರೆಮನೆಗೆ ನಮ್ಮನ್ನು ವರ್ಗಾಯಿಸಲಾಯಿತು. ಅಲ್ಲಿದ್ದ ಸಾಕ್ಷಿಗಳು ನಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಅಷ್ಟರ ತನಕ ಅವರು ಹಳೆಯ ಕಾವಲಿನಬುರುಜು ಸಂಚಿಕೆಗಳಿಂದ ತಾವು ನೆನಪಿಸಿಕೊಳ್ಳಸಾಧ್ಯವಿದ್ದ ವಿಚಾರಗಳನ್ನೇ ಪುನರಾವರ್ತಿಸುವ ಮೂಲಕ ಆಧ್ಯಾತ್ಮಿಕವಾಗಿ ಬಲವಾಗಿ ಉಳಿದಿದ್ದರು. ಆಧ್ಯಾತ್ಮಿಕ ಆಹಾರದ ತಾಜಾ ಸರಬರಾಯಿಗಾಗಿ ಅವರೆಷ್ಟು ಹಂಬಲಿಸುತ್ತಿದ್ದರು! ಈಗ, ಸ್ಫಿಕಾವ್‌ನಲ್ಲಿ ನಾವು ಅಧ್ಯಯನಮಾಡಿದ್ದ ಪ್ರಮುಖ ಅಂಶಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕೆಂಬ ಕಡುಬಯಕೆ ನಮ್ಮಲ್ಲುಂಟಾಯಿತು. ಆದರೆ ನಮ್ಮ ದೈನಂದಿನ ನಡಿಗೆಯ ಸಮಯದಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಮಾತಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದರಿಂದ, ನಾವಿದನ್ನು ಹೇಗೆ ಮಾಡಸಾಧ್ಯವಿತ್ತು? ಈ ಕಾರ್ಯಗತಿಯನ್ನು ಹೇಗೆ ಮುಂದುವರಿಸಬೇಕೆಂಬ ವಿಷಯದಲ್ಲಿ ಸಹೋದರರು ನಮಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದರು ಮತ್ತು ಯೆಹೋವನ ಬಲಿಷ್ಠವಾದ ಸಂರಕ್ಷಣಾ ಹಸ್ತವು ನಮ್ಮನ್ನು ಮಾರ್ಗದರ್ಶಿಸಿತು. ಇದು, ನಮಗೆ ಸಾಕಷ್ಟು ಸ್ವಾತಂತ್ರ್ಯ ಹಾಗೂ ಅವಕಾಶಗಳು ಇರುವಾಗಲೇ ಶ್ರದ್ಧಾಪೂರ್ವಕವಾದ ಬೈಬಲ್‌ ಅಧ್ಯಯನವನ್ನು ಮಾಡುವುದರ ಮತ್ತು ಧ್ಯಾನಿಸುವುದರ ಪ್ರಾಮುಖ್ಯತೆಯನ್ನು ಕಲಿಸಿತು.

ಪ್ರಮುಖ ನಿರ್ಣಯಗಳನ್ನು ಮಾಡಲಿಕ್ಕಾಗಿರುವ ಸಮಯ

ಯೆಹೋವನ ಸಹಾಯದಿಂದ ನಾವು ದೃಢನಿಷ್ಠರಾಗಿ ಉಳಿದೆವು. ನಮ್ಮ ಆಶ್ಚರ್ಯಕ್ಕೆ, 1956ರ ಕೊನೆಯಷ್ಟಕ್ಕೆ ನಮ್ಮಲ್ಲಿ ಅನೇಕರಿಗೆ ಸಾಮೂಹಿಕ ಕ್ಷಮಾದಾನವು ಕೊಡಲ್ಪಟ್ಟಿತು. ಸೆರೆಮನೆಯ ಬಾಗಿಲುಗಳು ತೆರೆಯಲ್ಪಟ್ಟಾಗ ನಮಗಾದ ಸಂತೋಷವನ್ನು ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ! ಇಷ್ಟರಲ್ಲಾಗಲೇ ನನ್ನ ಮಗನು ಆರು ವರ್ಷದವನಾಗಿದ್ದನು, ಮತ್ತು ನನ್ನ ಹೆಂಡತಿಯೊಂದಿಗೆ ಜೊತೆಗೂಡಿ, ನಮ್ಮ ಮಗುವನ್ನು ಬೆಳೆಸುವ ಕೆಲಸದಲ್ಲಿ ಒಳಗೂಡುವುದು ನನಗೆ ಅಪಾರ ಆನಂದದಾಯಕ ಸಂಗತಿಯಾಗಿತ್ತು. ಸ್ವಲ್ಪ ಕಾಲಾವಧಿಯ ವರೆಗೆ ಯೋಹಾನಸ್‌ ನನ್ನನ್ನು ಅಪರಿಚಿತನಂತೆ ಉಪಚರಿಸುತ್ತಿದ್ದ, ಆದರೆ ಸ್ವಲ್ಪದರಲ್ಲೇ ನಮ್ಮ ಮಧ್ಯೆ ತುಂಬ ಆತ್ಮೀಯ ಬಂಧವು ಬೆಸೆಯಿತು.

ಪೂರ್ವ ಜರ್ಮನಿಯಲ್ಲಿದ್ದ ಯೆಹೋವನ ಸಾಕ್ಷಿಗಳು ತುಂಬ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ನಮ್ಮ ಕ್ರೈಸ್ತ ಶುಶ್ರೂಷೆಯ ಕಡೆಗೆ ದಿನೇ ದಿನೇ ಹೆಚ್ಚುತ್ತಿದ್ದ ಹಗೆತನ ಮತ್ತು ನಮ್ಮ ತಟಸ್ಥ ನಿಲುವು, ಸತತವಾದ ಬೆದರಿಕೆಯ ಕೆಳಗೆ ಜೀವಿಸುವುದನ್ನು ಅಂದರೆ ಅಪಾಯ, ಚಿಂತೆ, ಮತ್ತು ಬೇಸರದಿಂದ ತುಂಬಿದ್ದ ಜೀವನವನ್ನು ನಡೆಸುವುದನ್ನು ಅರ್ಥೈಸುತ್ತಿತ್ತು. ಹೀಗೆ, ನಾನೂ ಏರೀಕಾಳೂ ನಮ್ಮ ಸನ್ನಿವೇಶವನ್ನು ಜಾಗರೂಕತೆಯಿಂದ ಮತ್ತು ಪ್ರಾರ್ಥನಾಪೂರ್ವಕವಾಗಿ ಪರಿಶೀಲಿಸಬೇಕಾಗಿತ್ತು. ಅಷ್ಟುಮಾತ್ರವಲ್ಲ, ಚಿಂತೆಯಲ್ಲೇ ಆಳವಾಗಿ ಮುಳುಗದಿರುವಂತೆ ಹೆಚ್ಚು ಅನುಕೂಲಕರವಾದ ಪರಿಸ್ಥಿತಿಗಳ ಕೆಳಗೆ ಜೀವಿಸಲಿಕ್ಕಾಗಿ ಬೇರೆ ಕಡೆ ಸ್ಥಳಾಂತರಿಸುವ ಆವಶ್ಯಕತೆಯಿದೆ ಎಂದು ನಮಗನಿಸಿತು. ಯೆಹೋವನ ಸೇವೆಮಾಡುವ ಮತ್ತು ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವ ಸ್ವಾತಂತ್ರವನ್ನು ನಾವು ಬಯಸಿದೆವು.

ಇಸವಿ 1957ರ ವಸಂತಕಾಲದಲ್ಲಿ, ಪಶ್ಚಿಮ ಜರ್ಮನಿಯ ಸ್ಟುಟ್‌ಗಾರ್ಟ್‌ಗೆ ಸ್ಥಳಾಂತರಿಸುವ ಅವಕಾಶವು ನಮಗೆ ಲಭ್ಯವಾಯಿತು. ಅಲ್ಲಿ ಸೌವಾರ್ತಿಕ ಕೆಲಸವು ನಿಷೇಧಕ್ಕೊಳಗಾಗಿರಲಿಲ್ಲ, ಮತ್ತು ಯಾವುದೇ ಅಡೆತಡೆಯಿಲ್ಲದೆ ನಾವು ನಮ್ಮ ಸಹೋದರರೊಂದಿಗೆ ಸಹವಾಸಮಾಡಸಾಧ್ಯವಿತ್ತು. ಅವರು ಪ್ರೀತಿಪರ ಬೆಂಬಲದ ಮಹಾಪೂರವನ್ನೇ ಹರಿಸಿದರು. ಹೇಡಲ್‌ಫಿಂಗ್‌ನಲ್ಲಿದ್ದ ಸಭೆಯೊಂದಿಗೆ ನಾವು ಏಳು ವರ್ಷಗಳನ್ನು ಕಳೆದೆವು. ಆ ವರ್ಷಗಳಲ್ಲೇ ನಮ್ಮ ಮಗನು ಶಾಲೆಗೆ ಹೋಗಲಾರಂಭಿಸಿದನು ಮತ್ತು ಸತ್ಯದಲ್ಲಿಯೂ ಒಳ್ಳೇ ಪ್ರಗತಿಯನ್ನು ಮಾಡಿದನು. ಇಸವಿ 1962ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ವೀಸ್‌ಬಾಡನ್‌ನಲ್ಲಿ ನಡೆದ ರಾಜ್ಯ ಶುಶ್ರೂಷಾ ಶಾಲೆಗೆ ಹಾಜರಾಗುವ ಸುಯೋಗವೂ ನನಗೆ ಸಿಕ್ಕಿತು. ಎಲ್ಲಿ ಜರ್ಮನ್‌ ಭಾಷೆಯನ್ನು ಮಾತಾಡುವ ಬೈಬಲ್‌ ಬೋಧಕರ ಆವಶ್ಯಕತೆಯಿತ್ತೋ ಆ ಸ್ಥಳದಲ್ಲಿ ಸೇವೆಮಾಡಲಿಕ್ಕಾಗಿ ನನ್ನ ಕುಟುಂಬದೊಂದಿಗೆ ಸ್ಥಳಾಂತರಿಸುವ ಪ್ರೋತ್ಸಾಹವು ನನಗೆ ಇಲ್ಲಿ ಸಿಕ್ಕಿತು. ಇದರಲ್ಲಿ ಜರ್ಮನಿಯ ಕೆಲವು ಕ್ಷೇತ್ರಗಳು ಮತ್ತು ಸ್ವಿಟ್ಸರ್ಲೆಂಡ್‌ ಸಹ ಸೇರಿತ್ತು.

ಸ್ವಿಸ್‌ ಆ್ಯಲ್ಪ್ಸ್‌ನಲ್ಲಿ

ಹೀಗೆ, 1963ರಲ್ಲಿ ನಾವು ಸ್ವಿಟ್ಸರ್ಲೆಂಡ್‌ಗೆ ಸ್ಥಳಾಂತರಿಸಿದೆವು. ಸ್ವಿಸ್‌ ಆ್ಯಲ್ಪ್ಸ್‌ನ ಮಧ್ಯಭಾಗದಲ್ಲಿ ಸುಂದರವಾದ ಲೂಸರ್ನ್‌ ಸರೋವರದ ಮೇಲಿರುವ ಬ್ರುನನ್‌ನ ಚಿಕ್ಕ ಸಭೆಯೊಂದರಲ್ಲಿ ಸೇವೆಮಾಡುವಂತೆ ನಮಗೆ ಹೇಳಲಾಯಿತು. ನಮಗಾದರೋ ಇದು ಪರದೈಸ್‌ನಲ್ಲಿರುವಂತಿತ್ತು. ನಾವು ಇಲ್ಲಿ ಮಾತಾಡಲ್ಪಡುವ ಜರ್ಮನ್‌ ಉಪಭಾಷೆಗೆ, ಸ್ಥಳಿಕ ಜೀವನ ರೀತಿಗೆ, ಮತ್ತು ಜನರ ಮನೋಭಾವಕ್ಕೆ ಒಗ್ಗಿಕೊಳ್ಳಬೇಕಾಗಿತ್ತು. ಆದರೂ, ಶಾಂತಿಪ್ರಿಯರಾದ ಜನರ ನಡುವೆ ಕೆಲಸಮಾಡುವುದು ಮತ್ತು ಸಾರುವುದು ನಮಗೆ ಹರ್ಷದಾಯಕ ಸಂಗತಿಯಾಗಿತ್ತು. ನಾವು ಬ್ರುನನ್‌ನಲ್ಲಿ 14 ವರ್ಷಗಳನ್ನು ಕಳೆದೆವು. ನಮ್ಮ ಮಗನು ಇಲ್ಲೇ ದೊಡ್ಡವನಾದನು.

ಇಸವಿ 1977ರಲ್ಲಿ, ಅಂದರೆ ನಾನು ಸುಮಾರು 50ರ ಪ್ರಾಯದವನಾಗಿದ್ದಾಗ, ಟೂನ್‌ನ ಸ್ವಿಸ್‌ ಬೆತೆಲ್‌ನಲ್ಲಿ ಸೇವೆಮಾಡಲಿಕ್ಕಾಗಿ ನಾವು ಆಹ್ವಾನಿಸಲ್ಪಟ್ಟೆವು. ನಾವು ಇದನ್ನು ಒಂದು ಅಪೂರ್ವ ಸುಯೋಗವಾಗಿ ಪರಿಗಣಿಸಿದೆವು ಮತ್ತು ತುಂಬ ಕೃತಜ್ಞತೆಯಿಂದ ಅದನ್ನು ಸ್ವೀಕರಿಸಿದೆವು. ನಾನೂ ನನ್ನ ಹೆಂಡತಿಯೂ ಬೆತೆಲ್‌ ಸೇವೆಯಲ್ಲಿ ಒಂಬತ್ತು ವರ್ಷಗಳನ್ನು ಕಳೆದೆವು. ನಮ್ಮ ಕ್ರೈಸ್ತ ಜೀವಿತದಲ್ಲಿ ಮತ್ತು ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಈ ಕಾಲಾವಧಿಯನ್ನು ಒಂದು ವಿಶೇಷ ಮೈಲುಗಲ್ಲಾಗಿ ನಾವು ಜ್ಞಾಪಿಸಿಕೊಳ್ಳುತ್ತೇವೆ. ಯೆಹೋವನ “ಅದ್ಭುತಕಾರ್ಯಗಳ” ಅಂದರೆ ಬರ್ನೀಸ್‌ ಆ್ಯಲ್ಪ್ಸ್‌ನ ಭವ್ಯವಾದ ಹಿಮಮಕುಟವುಳ್ಳ ಪರ್ವತಗಳ ಕಣ್ಮನತಣಿಸುವ ನೋಟವನ್ನು ಸದಾ ಆನಂದಿಸುತ್ತಾ, ಟೂನ್‌ನಲ್ಲಿ ಮತ್ತು ಹತ್ತಿರದ ಕ್ಷೇತ್ರಗಳಲ್ಲಿದ್ದ ಸ್ಥಳಿಕ ಪ್ರಚಾರಕರೊಂದಿಗೆ ಸಾರುವಿಕೆಯಲ್ಲಿ ಜೊತೆಗೂಡುವುದರಲ್ಲಿಯೂ ನಾವು ಸಂತೋಷಿಸಿದೆವು.

ಇನ್ನೊಂದು ಸ್ಥಳಾಂತರ

ಇಸವಿ 1986ರ ಆರಂಭದಲ್ಲಿ ನಾವು ಇನ್ನೊಂದು ಸ್ಥಳಾಂತರವನ್ನು ಮಾಡಬೇಕಾಯಿತು. ಸ್ವಿಟ್ಸರ್ಲೆಂಡ್‌ನ ಪೂರ್ವ ಭಾಗದಲ್ಲಿರುವ ಬೂಕ್ಸ್‌ ಸಭೆಗೆ ನೇಮಿಸಲ್ಪಟ್ಟಿದ್ದ ಒಂದು ದೊಡ್ಡ ಟೆರಿಟೊರಿಯಲ್ಲಿ ವಿಶೇಷ ಪಯನೀಯರರಾಗಿ ಸೇವೆಮಾಡುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು. ಪುನಃ ನಾವು ಭಿನ್ನ ರೀತಿಯ ಜೀವನಮಾರ್ಗಕ್ಕೆ ಹೊಂದಿಕೊಳ್ಳಬೇಕಾಯಿತು. ಆದರೂ, ನಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಎಲ್ಲಿ ಉಪಯೋಗಿಸಲಾಗುತ್ತದೋ ಅಲ್ಲಿ ಯೆಹೋವನ ಸೇವೆಮಾಡುವ ನಮ್ಮ ಬಯಕೆಯಿಂದ ಪ್ರಚೋದಿತರಾದ ನಾವು ಈ ನೇಮಕವನ್ನು ಸ್ವೀಕರಿಸಿದೆವು ಮತ್ತು ಆತನ ಆಶೀರ್ವಾದವನ್ನು ಪಡೆದುಕೊಂಡೆವು. ಕೆಲವೊಮ್ಮೆ ಸಭೆಗಳನ್ನು ಭೇಟಿಮಾಡುತ್ತಾ, ಅವುಗಳನ್ನು ಬಲಪಡಿಸುತ್ತಾ ನಾನು ಬದಲಿ ಸಂಚರಣ ಮೇಲ್ವಿಚಾರಕನಾಗಿಯೂ ಸೇವೆಮಾಡಿದ್ದೇನೆ. ಹದಿನೆಂಟು ವರ್ಷಗಳು ಕಳೆದಿವೆ, ಮತ್ತು ಈ ಕ್ಷೇತ್ರದಲ್ಲಿ ಸಾರುವಾಗ ನಮಗೆ ಅನೇಕ ಸಂತೋಷಭರಿತ ಅನುಭವಗಳಾಗಿವೆ. ಬೂಕ್ಸ್‌ನಲ್ಲಿರುವ ಸಭೆಯು ದೊಡ್ಡದಾಗಿದೆ, ಮತ್ತು ಐದು ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ಒಂದು ಸುಂದರ ರಾಜ್ಯ ಸಭಾಗೃಹದಲ್ಲಿ ಕೂಡಿಬರುವ ಸಂಗತಿಯೂ ನಮಗೆ ಮುದನೀಡುತ್ತದೆ.

ಯೆಹೋವನು ನಮ್ಮನ್ನು ಅತಿ ಉದಾರವಾದ ರೀತಿಯಲ್ಲಿ ಪರಾಮರಿಸಿದ್ದಾನೆ. ನಮ್ಮ ಜೀವಿತದ ಬಹುತೇಕ ಕಾಲಾವಧಿಯನ್ನು ನಾವು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಕಳೆದಿದ್ದೇವೆ, ಆದರೆ ನಮಗೆಂದಿಗೂ ಯಾವುದರ ಕೊರತೆಯ ಅನಿಸಿಕೆಯೂ ಆಗಿಲ್ಲ. ನಮ್ಮ ಮಗ, ಅವನ ಹೆಂಡತಿ, ಮತ್ತು ಅವರ ಮಕ್ಕಳು ಹಾಗೂ ನಮ್ಮ ಮೊಮ್ಮಕ್ಕಳ ಕುಟುಂಬಗಳು ಯೆಹೋವನ ಮಾರ್ಗದಲ್ಲಿ ನಂಬಿಗಸ್ತಿಕೆಯಿಂದ ನಡೆಯುವುದನ್ನು ನೋಡುವ ಸಂತೋಷ ಹಾಗೂ ಸಂತೃಪ್ತಿ ನಮಗಿದೆ.

ಹಿನ್ನೋಟ ಬೀರುವಾಗ, ಖಂಡಿತವಾಗಿಯೂ ನಾವು “ಅನುಕೂಲವಾದ ಕಾಲದಲ್ಲಿ ಮತ್ತು ಅನುಕೂಲವಿಲ್ಲದ ಕಾಲದಲ್ಲಿ” ಯೆಹೋವನ ಸೇವೆಮಾಡಿದ್ದೇವೆ ಎಂಬ ಅನಿಸಿಕೆ ನನಗಿದೆ. ಕ್ರೈಸ್ತ ಶುಶ್ರೂಷೆಯ ಬೆನ್ನಟ್ಟುವಿಕೆಯು ನನ್ನನ್ನು ಕಮ್ಯೂನಿಸ್ಟ್‌ ಸೆರೆಮನೆಗಳ ಕತ್ತಲುಕೋಣೆಗಳಿಂದ ಸ್ವಿಸ್‌ ಆ್ಯಲ್ಪ್ಸ್‌ನ ಭವ್ಯ ಪರ್ವತಗಳ ವರೆಗೆ ತಂದುಮುಟ್ಟಿಸಿದೆ. ಕ್ರೈಸ್ತ ಶುಶ್ರೂಷೆಯನ್ನು ಬೆನ್ನಟ್ಟಿದ್ದಕ್ಕಾಗಿ ನಾನು ಮತ್ತು ನನ್ನ ಕುಟುಂಬದವರು ಒಂದು ಕ್ಷಣವೂ ವಿಷಾದಿಸಿಲ್ಲ.

[ಪುಟ 28ರಲ್ಲಿರುವ ಚೌಕ]

“ಇಮ್ಮಡಿ ಬಲಿಪಶುಗಳು” ಹಿಂಸೆಯ ಕೆಳಗೆ ದೃಢಚಿತ್ತರಾಗಿ ಉಳಿದದ್ದು

ಪೂರ್ವ ಜರ್ಮನಿಯೆಂದೂ ಪ್ರಸಿದ್ಧವಾಗಿರುವ ಜರ್ಮನ್‌ ಡೆಮೊಕ್ರ್ಯಾಟಿಕ್‌ ರಿಪಬ್ಲಿಕ್‌ (ಜಿಡಿಆರ್‌)ನ ಕೆಳಗೆ, ಯೆಹೋವನ ಸಾಕ್ಷಿಗಳು ಪಾಶವೀಯ ನಿಗ್ರಹಕ್ಕೆ ಗುರಿಯಾದರು. ಕ್ರೈಸ್ತ ಶುಶ್ರೂಷೆ ಮತ್ತು ತಾಟಸ್ಥ್ಯದ ಕಾರಣ 5,000ಕ್ಕಿಂತಲೂ ಹೆಚ್ಚು ಸಾಕ್ಷಿಗಳು ಒತ್ತಡಭರಿತ ಕಾರ್ಮಿಕ ಶಿಬಿರಗಳಿಗೆ ಮತ್ತು ಬಂಧನ ಕೇಂದ್ರಗಳಿಗೆ ಕಳುಹಿಸಲ್ಪಟ್ಟರು ಎಂದು ದಾಖಲೆಗಳು ತೋರಿಸುತ್ತವೆ.​—⁠ಯೆಶಾಯ 2:⁠4.

ಈ ಸಾಕ್ಷಿಗಳಲ್ಲಿ ಕೆಲವರನ್ನು “ಇಮ್ಮಡಿ ಬಲಿಪಶುಗಳು” ಎಂದು ವರ್ಣಿಸಲಾಗಿದೆ. ಅವರಲ್ಲಿ 325 ಮಂದಿ ನಾಸಿ ಕೂಟಶಿಬಿರಗಳಲ್ಲಿ ಮತ್ತು ಸೆರೆಮನೆಗಳಲ್ಲಿ ಹಾಕಲ್ಪಟ್ಟಿದ್ದರು. ನಂತರ, 1950ಗಳಲ್ಲಿ ಶ್ಟಾಸೀ ಅಂದರೆ ಜಿಡಿಆರ್‌ನ ರಾಜ್ಯದ ಭದ್ರತಾ ಸಮಿತಿಯವರು ಇವರನ್ನು ಹುಡುಕಿಕೊಂಡು ಹೋದರು ಮತ್ತು ಹಿಡಿದು ಸೆರೆಮನೆಯಲ್ಲಿ ಹಾಕಿದರು. ಕೆಲವು ಸೆರೆಮನೆಗಳು ಸಹ ಎರಡೆರಡು ಬಾರಿ​—⁠ಮೊದಲು ನಾಸಿ ಅಧಿಕಾರಿಗಳ ಕೆಳಗೆ ಮತ್ತು ನಂತರ ಶ್ಟಾಸೀ ಅಧಿಕಾರಿಗಳ ಕೆಳಗೆ​—⁠ಉಪಯೋಗಿಸಲ್ಪಟ್ಟವು.

ತೀವ್ರವಾದ ಹಿಂಸೆಯ ಮೊದಲ ದಶಕದಲ್ಲಿ, ಅಂದರೆ 1950ರಿಂದ 1961ರ ವರೆಗೆ, ಸ್ತ್ರೀಪುರುಷರು ಒಳಗೂಡಿದ್ದ ಒಟ್ಟು 60 ಮಂದಿ ಸಾಕ್ಷಿಗಳು ದುರುಪಚಾರ, ನ್ಯೂನಪೋಷಣೆ, ಅನಾರೋಗ್ಯ, ಮತ್ತು ವೃದ್ಧಾಪ್ಯದ ಕಾರಣ ಸೆರೆಮನೆಯಲ್ಲೇ ಮೃತಪಟ್ಟರು. ಹನ್ನೆರಡು ಮಂದಿ ಸಾಕ್ಷಿಗಳಿಗೆ ಜೀವಾವಧಿಯ ಶಿಕ್ಷೆಯು ವಿಧಿಸಲ್ಪಟ್ಟಿತಾದರೂ, ಸಮಯಾನಂತರ ಅದು 15 ವರ್ಷಗಳಿಗೆ ಇಳಿಸಲ್ಪಟ್ಟಿತು.

ಇಂದು, ಬರ್ಲಿನ್‌ನಲ್ಲಿರುವ ಹಿಂದಿನ ಶ್ಟಾಸೀ ಮುಖ್ಯಕಾರ್ಯಾಲಯದಲ್ಲಿ, ಪೂರ್ವ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ತರಲ್ಪಟ್ಟ 40 ವರ್ಷಗಳ ಅಧಿಕೃತ ಹಿಂಸೆಯನ್ನು ಎತ್ತಿತೋರಿಸುವಂಥ ಶಾಶ್ವತವಾದ ಪ್ರದರ್ಶನವಿದೆ. ಅಲ್ಲಿ ಪ್ರದರ್ಶಿಸಲ್ಪಟ್ಟಿರುವ ಚಿತ್ರಪಟಗಳು ಮತ್ತು ವೈಯಕ್ತಿಕ ವೃತ್ತಾಂತಗಳು, ಹಿಂಸೆಯ ಕೆಳಗೆ ನಂಬಿಗಸ್ತರಾಗಿದ್ದ ಈ ಸಾಕ್ಷಿಗಳ ಧೈರ್ಯ ಮತ್ತು ಆಧ್ಯಾತ್ಮಿಕ ಬಲಕ್ಕೆ ಮೂಕಸಾಕ್ಷಿಯನ್ನು ನೀಡುತ್ತವೆ.

[ಪುಟ 24, 25ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಪೂರ್ವ ಜರ್ಮನಿ

ರೂಡಲ್‌ಶ್ಟಾಟ್‌

ಬೆಲ್‌ಟ್ಸಿಕ್‌

ಟೋರ್‌ಗೌ

ಕೆಮ್‌ನಿಟ್ಸ್‌

ಸ್ಫಿಕಾವ್‌

[ಪುಟ 25ರಲ್ಲಿರುವ ಚಿತ್ರ]

ಸ್ಫಿಕಾವ್‌ನಲ್ಲಿರುವ ಓಸ್ಟಶ್ಟೈನ್‌ ಕಾಸಲ್‌

[ಕೃಪೆ]

Fotosammlung des Stadtarchiv Zwickau, Deutschland

[ಪುಟ 26ರಲ್ಲಿರುವ ಚಿತ್ರ]

ನನ್ನ ಹೆಂಡತಿ ಏರೀಕಾಳೊಂದಿಗೆ