ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವ ಧರ್ಮವನ್ನು ನೀವು ಆರಿಸಿಕೊಳ್ಳಬೇಕು?

ಯಾವ ಧರ್ಮವನ್ನು ನೀವು ಆರಿಸಿಕೊಳ್ಳಬೇಕು?

ಯಾವ ಧರ್ಮವನ್ನು ನೀವು ಆರಿಸಿಕೊಳ್ಳಬೇಕು?

‘ಎಲ್ಲಾ ಧರ್ಮಗಳು ಒಂದೇ ಗುರಿಗೆ ನಡೆಸುವ ಬೇರೆ ಬೇರೆ ಮಾರ್ಗಗಳಾಗಿವೆ ಅಷ್ಟೇ. ಎಷ್ಟೆಂದರೂ ಕೇವಲ ಒಬ್ಬನೇ ದೇವರಿದ್ದಾನಲ್ಲವೇ?’ ಈ ಅಭಿಪ್ರಾಯವು, ಧಾರ್ಮಿಕ ಸದಸ್ಯತ್ವವು ಪ್ರಾಮುಖ್ಯವಾಗಿರುವುದಾದರೂ, ಒಬ್ಬನು ಹಿಂಬಾಲಿಸಲು ಯಾವ ಧರ್ಮವನ್ನು ಆಯ್ಕೆಮಾಡುತ್ತಾನೆಂಬುದು ಅಷ್ಟೇನು ಪ್ರಾಮುಖ್ಯವಲ್ಲವೆಂದು ನೆನಸುವಂಥ ಅನೇಕ ಜನರಿಗಿದೆ.

ಮೇಲ್ನೋಟಕ್ಕೆ ಈ ತರ್ಕವು ನ್ಯಾಯಸಮ್ಮತವಾಗಿ ತೋರಬಹುದು, ಏಕೆಂದರೆ ಸರ್ವಶಕ್ತ ದೇವರು ಒಬ್ಬನೇ ಆಗಿದ್ದಾನೆ ಎಂಬುದು ಸತ್ಯ ಮಾತು. (ಯೆಶಾಯ 44:6; ಯೋಹಾನ 17:3; 1 ಕೊರಿಂಥ 8:5, 6) ಹಾಗಿದ್ದರೂ, ಸತ್ಯ ದೇವರನ್ನು ಆರಾಧಿಸುತ್ತೇವೆಂದು ಹೇಳಿಕೊಳ್ಳುವ ಅನೇಕ ಧಾರ್ಮಿಕ ಗುಂಪುಗಳ ಮಧ್ಯೆ ಸ್ಪಷ್ಟವಾಗಿ ತೋರಿಬರುವ ಭಿನ್ನತೆಗಳನ್ನು​—⁠ವಿರೋಧೋಕ್ತಿಗಳನ್ನೂ​—⁠ನಾವು ಅಲ್ಲಗಳೆಯುವಂತಿಲ್ಲ. ಅವುಗಳ ಆಚರಣೆಗಳು, ನಂಬಿಕೆಗಳು, ಬೋಧನೆಗಳು, ಮತ್ತು ಆವಶ್ಯಕತೆಗಳಲ್ಲಿ ಮಹತ್ತರವಾದ ವ್ಯತ್ಯಾಸವಿದೆ. ಈ ಭಿನ್ನತೆಗಳು ಎಷ್ಟು ದೊಡ್ಡದಾಗಿವೆಯೆಂದರೆ, ಒಂದು ಧರ್ಮ ಅಥವಾ ಧಾರ್ಮಿಕ ಗುಂಪಿಗೆ ಸೇರಿರುವವರು ಬೇರೆ ಧರ್ಮದವರು ಬೋಧಿಸುವ ಅಥವಾ ನಂಬುವ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಇಲ್ಲವೆ ಸ್ವೀಕರಿಸಲು ಕಷ್ಟಕರವಾದುದ್ದಾಗಿ ಕಂಡುಕೊಳ್ಳುತ್ತಾರೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಯೇಸು ಹೇಳಿದ್ದು: “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು.” (ಯೋಹಾನ 4:​24, NW) ದೇವರನ್ನು ಸತ್ಯದಿಂದ ಆರಾಧಿಸುವಾಗ, ದೇವರು ಯಾರು, ಆತನ ಉದ್ದೇಶಗಳೇನು, ಮತ್ತು ಆತನು ಹೇಗೆ ಆರಾಧಿಸಲ್ಪಡಲು ಬಯಸುತ್ತಾನೆ ಎಂಬ ವಿಷಯಗಳ ಬಗ್ಗೆ ಪರಸ್ಪರ ವಿರೋಧೋಕ್ತಿಗಳಿಗೆ ಅವಕಾಶವಿದೆಯೊ? ಸರ್ವಶಕ್ತ ದೇವರನ್ನು ನಾವು ಹೇಗೆ ಆರಾಧಿಸುತ್ತೇವೆಂಬುದು ಅಷ್ಟೇನೂ ಪ್ರಾಮುಖ್ಯ ಸಂಗತಿಯಲ್ಲ ಎಂದು ನೆನಸುವುದು ತರ್ಕಸಮ್ಮತವೊ?

ಸತ್ಯ ಕ್ರೈಸ್ತರು​—⁠ಅಂದು ಮತ್ತು ಇಂದು

ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರಿಗೆ ಕೆಲವು ವಿಷಯಗಳ ಕುರಿತು ವಿಭಿನ್ನವಾದ ಅಭಿಪ್ರಾಯಗಳಿದ್ದವು. ಉದಾಹರಣೆಗೆ, ಕೊರಿಂಥದಲ್ಲಿದ್ದವರ ಕುರಿತು ಮಾತನಾಡುತ್ತಾ, ಅಪೊಸ್ತಲ ಪೌಲನು ಹೇಳಿದ್ದು: “ನನ್ನ ಸಹೋದರರೇ, ನಿಮ್ಮಲ್ಲಿ ಜಗಳಗಳುಂಟೆಂದು ನಿಮ್ಮ ವಿಷಯವಾಗಿ ಖ್ಲೋಯೆಯ ಮನೆಯವರಿಂದ ನನಗೆ ತಿಳಿದುಬಂತು. ನಿಮ್ಮೊಳಗೆ ಪ್ರತಿಯೊಬ್ಬನು​—⁠ನಾನು ಪೌಲನವನು, ಇಲ್ಲವೆ​—⁠ನಾನು ಅಪೊಲ್ಲೋಸನವನು, ಅಥವಾ​—⁠ನಾನು ಕೇಫನವನು, ಇಲ್ಲವೆ​—⁠ನಾನು ಕ್ರಿಸ್ತನವನು ಎಂದು ಹೇಳಿಕೊಳ್ಳುತ್ತಾನಂತೆ.”​—⁠1 ಕೊರಿಂಥ 1:11, 12.

ಈ ಭಿನ್ನಾಭಿಪ್ರಾಯಗಳು ಅಷ್ಟೇನೂ ದೊಡ್ಡ ಸಂಗತಿಯಲ್ಲವೆಂದು ಪೌಲನು ಪರಿಗಣಿಸಿದನೋ? ರಕ್ಷಣೆಗಾಗಿ ಪ್ರತಿಯೊಬ್ಬನು ಕೇವಲ ತನ್ನ ಸ್ವಂತ ಮಾರ್ಗದಲ್ಲಿ ನಡೆಯುತ್ತಿದ್ದನೋ? ಖಂಡಿತವಾಗಿಯೂ ಇಲ್ಲ! ಪೌಲನು ಉತ್ತೇಜಿಸಿದ್ದು: “ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.”​—⁠1 ಕೊರಿಂಥ 1:10.

ವಾಸ್ತವದಲ್ಲಿ, ನಂಬಿಕೆಯ ವಿಷಯದಲ್ಲಿ ಐಕ್ಯತೆಯನ್ನು ಒತ್ತಾಯಪೂರ್ವಕವಾಗಿ ಸಾಧಿಸಲು ಸಾಧ್ಯವಿಲ್ಲ. ವ್ಯಕ್ತಿಗಳು ವೈಯಕ್ತಿಕವಾಗಿ ಜಾಗರೂಕ ಪರಿಶೋಧನೆಯನ್ನು ಮಾಡಿ ಎಲ್ಲರೂ ಏಕಪ್ರಕಾರದ ತೀರ್ಮಾನಗಳಿಗೆ ಬಂದು ಅವುಗಳನ್ನು ಸ್ವೀಕರಿಸುವಾಗಲೇ ಇದು ಸಾಧ್ಯ. ಆದುದರಿಂದ, ಪೌಲನು ತಿಳಿಸಿದ ಐಕ್ಯದಲ್ಲಿ ಆನಂದಿಸಲಿಕ್ಕಾಗಿ, ದೇವರ ವಾಕ್ಯದ ವೈಯಕ್ತಿಕ ಅಧ್ಯಯನ ಮತ್ತು ಕಲಿತಂಥ ವಿಷಯಗಳನ್ನು ಅನ್ವಯಿಸಿಕೊಳ್ಳಲು ಪ್ರಾಮಾಣಿಕ ಇಚ್ಛೆಯು ಪ್ರಾಮುಖ್ಯ ಹೆಜ್ಜೆಗಳಾಗಿವೆ. ಈ ರೀತಿಯ ಐಕ್ಯವನ್ನು ಕಂಡುಕೊಳ್ಳಲು ಸಾಧ್ಯವೋ? ನಾವು ಈಗಾಗಲೇ ಪರಿಗಣಿಸಿರುವಂತೆ, ದೇವರು ಆದಿಯಿಂದಲೂ ತನ್ನ ಜನರೊಂದಿಗೆ ಒಂದು ಗುಂಪಿನೋಪಾದಿ ವ್ಯವಹರಿಸಿದ್ದಾನೆ. ಅಂತಹ ಒಂದು ಗುಂಪನ್ನು ಇಂದು ಕಂಡುಕೊಳ್ಳಲು ಸಾಧ್ಯವಿದೆಯೋ?

ದೈವಾಂಗೀಕೃತ ಗುಂಪಿನೊಂದಿಗೆ ಸಹವಾಸಿಸುವುದರಿಂದ ಬರುವ ಪ್ರಯೋಜನಗಳು

ಕೀರ್ತನೆಗಾರನಾದ ದಾವೀದನು ಒಮ್ಮೆ ಕೇಳಿದ್ದು: “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?” ಇದು ನಿಜವಾಗಿಯೂ ವಿಚಾರಪ್ರೇರಕವಾದ ಪ್ರಶ್ನೆಯಾಗಿದೆ. ದಾವೀದನು ಉತ್ತರಿಸಿದ್ದು: “ಅವನು ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ ಆಗಿರಬೇಕು.” (ಕೀರ್ತನೆ 15:1, 2) ಈ ದೈವಿಕ ಆವಶ್ಯಕತೆಗಳನ್ನು ಪೂರೈಸುವ ಧರ್ಮವು ಯಾವುದೆಂದು ಕಂಡುಕೊಳ್ಳಲು ಬೈಬಲಿನ ಕುರಿತಾದ ನಿಷ್ಕೃಷ್ಟ ತಿಳಿವಳಿಕೆಯು ಒಬ್ಬನಿಗೆ ಸಹಾಯಮಾಡುವುದು. ಹೀಗೆ, ಆ ಗುಂಪಿನೊಂದಿಗೆ ಸಹವಾಸಿಸುವ ಮೂಲಕ ಒಬ್ಬನು “ಆತ್ಮದಿಂದಲೂ ಸತ್ಯದಿಂದಲೂ” ದೇವರನ್ನು ಐಕ್ಯದಿಂದ ಆರಾಧಿಸುವ ಜನರೊಂದಿಗೆ ಆತ್ಮೋನ್ನತಿ ಮಾಡುವ ಸಾಹಚರ್ಯದಲ್ಲಿ ಆನಂದಿಸುವನು.

ಇಂದಿನ ವಿಭಜಿತ ಲೋಕದಲ್ಲಿಯೂ ನಂಬಿಕೆಯಲ್ಲಿ ಮತ್ತು ಕೃತ್ಯದಲ್ಲಿ ಐಕ್ಯವನ್ನು ಸಾಧಿಸಸಾಧ್ಯವಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ಸಾಧಿಸಿ ತೋರಿಸಿದ್ದಾರೆ. ಅವರ ಸದಸ್ಯರಲ್ಲಿ, ವಿಭಿನ್ನ ಧರ್ಮಗಳು ಮತ್ತು ಜನಾಂಗೀಯ ಗುಂಪುಗಳಿಂದ ಬಂದವರಿದ್ದಾರೆ. ಇತರ ಸಾಕ್ಷಿಗಳು ಈ ಮುಂಚೆ ಅಜ್ಞೇಯತಾವಾದಿಗಳಾಗಿದ್ದರು ಅಥವಾ ನಾಸ್ತಿಕರಾಗಿದ್ದರು. ಇನ್ನಿತರರು, ಧರ್ಮದ ವಿಷಯದಲ್ಲಿ ಯಾವುದೇ ಗಂಭೀರ ಆಸಕ್ತಿಯನ್ನು ತೋರಿಸದವರಾಗಿದ್ದರು. ವಿಭಿನ್ನವಾದ ಧರ್ಮಗಳು ಮತ್ತು ಸಂಸ್ಕೃತಿಗಳಿಂದ ಬಂದಿರುವ ಹಾಗೂ ವಿಭಿನ್ನವಾದ ವೇದಾಂತಗಳನ್ನು ಹೊಂದಿದ್ದ ಈ ವ್ಯಕ್ತಿಗಳು, ಇಂದು ಈ ಲೋಕದಲ್ಲಿ ಕಾಣಸಿಗದಿರುವ ಧಾರ್ಮಿಕ ಐಕ್ಯವನ್ನು ಈಗ ಅನುಭವಿಸುತ್ತಿದ್ದಾರೆ.

ಈ ರೀತಿಯ ಐಕ್ಯಕ್ಕೆ ದೇವರ ವಾಕ್ಯವಾದ ಬೈಬಲ್‌ ಆಧಾರವಾಗಿದೆ. ನಿಶ್ಚಯವಾಗಿಯೂ, ಒಂದು ನಿರ್ದಿಷ್ಟ ರೀತಿಯಲ್ಲಿಯೇ ನಡೆಯಬೇಕೆಂದು ಇತರರನ್ನು ಒತ್ತಾಯಿಸಸಾಧ್ಯವಿಲ್ಲ ಎಂಬುದನ್ನು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. ಆದರೆ, ಬೈಬಲಿನಿಂದ ವಿಷಯಗಳನ್ನು ಕಲಿತು, ಆ ಸುದೃಢವಾದ ತಳಪಾಯದ ಮೇಲೆ ಆರಾಧನೆಯ ಸಂಬಂಧದಲ್ಲಿ ತಮ್ಮ ಆಯ್ಕೆಯನ್ನು ಮಾಡುವಂತೆ ಇತರರನ್ನು ಪ್ರೋತ್ಸಾಹಿಸಲು ತಮಗಿರುವ ಸುಯೋಗವನ್ನು ಅವರು ಗಣ್ಯಮಾಡುತ್ತಾರೆ. ಈ ರೀತಿಯಲ್ಲಿ, ದೇವರನ್ನು “ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸುವುದರಿಂದ ಬರುವ ಪ್ರಯೋಜನಗಳಲ್ಲಿ ಇನ್ನೂ ಹೆಚ್ಚಿನವರು ಪಾಲ್ಗೊಳ್ಳುವಂತಾಗುವುದು.

ಇಂದು, ಹಾನಿಕರ ಪ್ರಭಾವಗಳು ಮತ್ತು ಪ್ರಲೋಭನೆಗಳಿಗೆ ಬಲಿಬೀಳುವ ಅಪಾಯವು ತೀರ ಹೆಚ್ಚು. ಸರಿಯಾದ ರೀತಿಯ ಸಹವಾಸವನ್ನು ಆರಿಸಿಕೊಳ್ಳುವುದು ಪ್ರಾಮುಖ್ಯವಾಗಿದೆ. “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು” ಮತ್ತು “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 13:20; 1 ಕೊರಿಂಥ 15:33) ದೇವರ ನಿಜ ಆರಾಧಕರೊಂದಿಗೆ ಸಹವಾಸಿಸುವುದು ಒಂದು ಸಂರಕ್ಷಣೆಯಾಗಿದೆ. ಆದುದರಿಂದ, ಬೈಬಲು ನಮಗೆ ಜ್ಞಾಪಕಹುಟ್ಟಿಸುವುದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:24, 25) ನಿಜ ಸ್ನೇಹಿತರಾದ ಆಧ್ಯಾತ್ಮಿಕ ಸಹೋದರ ಸಹೋದರಿಯರು, ದೇವರ ಮುಂದೆ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಪರಸ್ಪರರಿಗೆ ಪ್ರೀತಿಯಿಂದ ನೆರವುನೀಡುವಾಗ ಅದೆಂಥ ಆಶೀರ್ವಾದವಾಗಿರುವುದು!

ಓಟ್‌ಮಾರ್‌ ಈ ವಿಚಾರವನ್ನು ದೃಢೀಕರಿಸುತ್ತಾನೆ. ಜರ್ಮನಿಯಲ್ಲಿ ಒಂದು ಕ್ಯಾಥೊಲಿಕ್‌ ಕುಟುಂಬದಲ್ಲಿ ಬೆಳೆಸಲ್ಪಟ್ಟಿದ್ದರೂ ಅವನು ಚರ್ಚಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದನು. ಅವನು ವಿವರಿಸುವುದು: “ನಾನು ಚರ್ಚಿಗೆ ಹೋದಾಗಲೆಲ್ಲಾ, ಯಾವ ಭಾವನೆಯೊಂದಿಗೆ ಒಳಗೆ ಹೋಗುತ್ತಿದ್ದೆನೋ ಅದೇ ಶೂನ್ಯಭಾವದೊಂದಿಗೆ ಹೊರಬರುತ್ತಿದ್ದೆ.” ಆದರೂ, ಅವನು ದೇವರಲ್ಲಿನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ನಂತರ ಅವನಿಗೆ ಯೆಹೋವನ ಸಾಕ್ಷಿಗಳ ಸಂಪರ್ಕವಾಯಿತು ಮತ್ತು ಅವರೇ ದೇವರ ನಿಜ ಸೇವಕರು ಎಂದು ಅವನಿಗೆ ಮನದಟ್ಟಾಯಿತು. ಅವರೊಂದಿಗೆ ಸಹವಾಸಿಸುವ ಅಗತ್ಯವನ್ನು ಅವನು ಮನಗಂಡನು. ಅವನು ಈಗ ಹೇಳುವುದು: “ಒಂದು ಲೋಕವ್ಯಾಪಕ ಸಂಸ್ಥೆಯೊಂದಿಗೆ ಕ್ರಿಯಾಶೀಲನಾಗಿರುವ ಮೂಲಕ ನಾನು ಹೃದಮನಗಳ ಶಾಂತಿಯನ್ನು ಕಂಡುಕೊಂಡಿದ್ದೇನೆ. ನಾನು ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ನನಗೆ ಪ್ರಗತಿಪರವಾಗಿ ಸಹಾಯವು ಒದಗಿಸಲ್ಪಡುತ್ತಿದೆ. ಇದು ನನಗೆ ವೈಯಕ್ತಿಕವಾಗಿ ನಿಜವಾಗಿಯೂ ಅತ್ಯಮೂಲ್ಯವಾದ ವಿಷಯವಾಗಿದೆ.”

ಸತ್ಯಾನ್ವೇಷಕರಿಗೆ ಒಂದು ಆಮಂತ್ರಣ

ಒಬ್ಬರು ಇನ್ನೊಬ್ಬರ ಮೇಲೆ ಆತುಕೊಳ್ಳದೆ ಒಂದು ಕೆಲಸವನ್ನು ಸ್ವತಂತ್ರವಾಗಿ ಪೂರೈಸುವಾಗ ಪಡೆಯುವ ಸಾಫಲ್ಯಕ್ಕಿಂತ, ಸಹಮತದಿಂದಿರುವ ಜನರು ಒಂದು ಗುಂಪಿನೋಪಾದಿ ನಿಕಟವಾಗಿ ಕಾರ್ಯನಡಿಸುವುದು ಹೆಚ್ಚು ಪರಿಣಾಮಕಾರಿಯಾಗಿರಸಾಧ್ಯವಿದೆ. ಉದಾಹರಣೆಗೆ, ಯೇಸು ತನ್ನ ಶಿಷ್ಯರನ್ನು ಅಗಲಿಹೋಗುತ್ತಿದ್ದಾಗ ಕೊಟ್ಟ ಸೂಚನೆಗಳಲ್ಲಿ, “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ” ಎಂದು ಹೇಳಿದನು. (ಮತ್ತಾಯ 28:19, 20) ಯಾವುದೇ ರೀತಿಯ ನಿರ್ದೇಶನ ಅಥವಾ ಸಂಘಟನೆಯಿಲ್ಲದಿರುತ್ತಿದ್ದರೆ ಇಂತಹ ಒಂದು ಕೆಲಸವನ್ನು ತೃಪ್ತಿದಾಯಕವಾಗಿ ಹೇಗೆ ತಾನೇ ಸಾಧಿಸಲು ಸಾಧ್ಯವಿತ್ತು? ದೇವರನ್ನು ಸ್ವತಂತ್ರವಾಗಿ ಸೇವಿಸಲು ಒಬ್ಬನು ಪ್ರಯತ್ನಿಸುವುದಾದರೆ ಈ ಶಾಸ್ತ್ರೀಯ ಆಜ್ಞೆಗೆ ಅವನು ವಿಧೇಯನಾಗುವುದಾದರೂ ಹೇಗೆ?

ಕಳೆದ ವರ್ಷ, ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ 9,19,33,280 ಬೈಬಲ್‌ ಆಧಾರಿತ ಪುಸ್ತಕಗಳು, ಪುಸ್ತಿಕೆಗಳು, ಮತ್ತು 69,76,03,247 ಪತ್ರಿಕೆಗಳನ್ನು ವಿತರಿಸುವ ಮೂಲಕ ದೇವರ ವಾಕ್ಯದ ಸಂದೇಶದೊಂದಿಗೆ 235 ದೇಶಗಳಲ್ಲಿರುವ ಲಕ್ಷೋಪಲಕ್ಷ ಜನರನ್ನು ತಲಪಿದರು. ಸ್ವತಂತ್ರವಾದ ವ್ಯಕ್ತಿಪರ ಯತ್ನವು ಎಂದಿಗೂ ಸಾಧಿಸಸಾಧ್ಯವಿರುವುದಕ್ಕಿಂತ ಎಷ್ಟೋ ಹೆಚ್ಚಿನದ್ದನ್ನು ಐಕ್ಯವಾದ ಸುಸಂಘಟಿತ ಗುಂಪು ಯತ್ನವು ಸಾಧಿಸುತ್ತದೆಂಬುದಕ್ಕೆ ಇದೆಷ್ಟು ಎದ್ದುಕಾಣುವಂಥ ರುಜುವಾತಾಗಿದೆ!

ಬೈಬಲ್‌ ಸಾಹಿತ್ಯವನ್ನು ವಿತರಿಸುವುದರೊಂದಿಗೆ, ದೇವರು ಅಪೇಕ್ಷಿಸುವ ವಿಷಯಗಳಾವುವು ಎಂಬುದರ ಕುರಿತು ಆಳವಾದ ತಿಳಿವಳಿಕೆಯನ್ನು ಪಡೆದುಕೊಳ್ಳುವಂತೆ ಜನರಿಗೆ ನೆರವು ನೀಡಲು ಯೆಹೋವನ ಸಾಕ್ಷಿಗಳು ಬೈಬಲ್‌ ಅಧ್ಯಯನಗಳನ್ನು ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ನಡೆಸುತ್ತಾರೆ. ಕಳೆದ ವರ್ಷ ಸರಾಸರಿಯಾಗಿ, ಈ ರೀತಿಯ 57,26,509 ಬೈಬಲ್‌ ಅಧ್ಯಯನಗಳು ಸಾಪ್ತಾಹಿಕವಾಗಿ ಒಬೊಬ್ಬ ವ್ಯಕ್ತಿಗಳೊಂದಿಗೆ ಅಥವಾ ಗುಂಪುಗಳೊಂದಿಗೆ ನಡೆಸಲ್ಪಟ್ಟವು. ಈ ಬೈಬಲ್‌ ಉಪದೇಶವು, ಆರಾಧನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ತಮ್ಮ ಆಯ್ಕೆಯನ್ನು ಮಾಡುವಂತೆ ಸುದೃಢವಾದ ಆಧಾರವನ್ನು ಕಂಡುಕೊಳ್ಳಲು ಲಕ್ಷಾಂತರ ಮಂದಿಗೆ ಸಹಾಯಮಾಡಿದೆ. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ದೈವಿಕ ಆವಶ್ಯಕತೆಗಳ ಕುರಿತು ಕಲಿಯುವಂತೆ ನಿಮಗೆ ಆಮಂತ್ರಣವು ನೀಡಲಾಗುತ್ತದೆ. ನಂತರ ನೀವು ನಿಮ್ಮ ಆಯ್ಕೆಯನ್ನು ಮಾಡಬಹುದು.​—⁠ಎಫೆಸ 4:13; ಫಿಲಿಪ್ಪಿ 1:​9, 10; 1 ತಿಮೊಥೆಯ 6:20; 2 ಪೇತ್ರ 3:18.

ನೀವು ದೇವರನ್ನು ಮೆಚ್ಚಿಸಲು ಬಯಸುವುದಾದರೆ, ಧಾರ್ಮಿಕ ಸದಸ್ಯತ್ವವು ಆವಶ್ಯಕ​—⁠ಆದರೆ ಯಾವುದೇ ಧಾರ್ಮಿಕ ಗುಂಪು ಅಥವಾ ಪಂಗಡದೊಂದಿಗಲ್ಲ. ನಿಮ್ಮ ಧರ್ಮದ ಆಯ್ಕೆಯು, ರುಜುಪಡಿಸಲ್ಪಡದ ಸಿದ್ಧಾಂತಗಳ ಅಥವಾ ಹೇಳಿಕೇಳಿದ ಮಾತುಗಳ ಮೇಲಲ್ಲ, ಬದಲಿಗೆ ಬೈಬಲಿನ ನಿಷ್ಕೃಷ್ಟ ಜ್ಞಾನದ ಮೇಲೆ ಆಧಾರಿತವಾಗಿರಬೇಕು. (ಜ್ಞಾನೋಕ್ತಿ 16:25) ಸತ್ಯ ಧರ್ಮಕ್ಕಾಗಿರುವ ಆವಶ್ಯಕತೆಗಳನ್ನು ಕಲಿತುಕೊಳ್ಳಿರಿ. ನಿಮ್ಮ ಸ್ವಂತ ನಂಬಿಕೆಗಳೊಂದಿಗೆ ಅವುಗಳನ್ನು ಹೋಲಿಸಿ ನೋಡಿರಿ. ತದನಂತರ ನಿಮ್ಮ ಆಯ್ಕೆಯನ್ನು ಮಾಡಿರಿ.​—⁠ಧರ್ಮೋಪದೇಶಕಾಂಡ 30:19.

[ಪುಟ 7ರಲ್ಲಿರುವ ಚಿತ್ರಗಳು]

ಯೆಹೋವನ ಸಾಕ್ಷಿಗಳು ವಿಭಜಿತ ಲೋಕವೊಂದರಲ್ಲಿ ಐಕ್ಯವನ್ನು ಆನಂದಿಸುತ್ತಾರೆ