ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಂದು ಮಕ್ಕಳನ್ನು ತರಬೇತುಗೊಳಿಸುವ ಪಂಥಾಹ್ವಾನ

ಇಂದು ಮಕ್ಕಳನ್ನು ತರಬೇತುಗೊಳಿಸುವ ಪಂಥಾಹ್ವಾನ

ಇಂದು ಮಕ್ಕಳನ್ನು ತರಬೇತುಗೊಳಿಸುವ ಪಂಥಾಹ್ವಾನ

ಒಂದು ರೆಸ್ಟರಾಂಟ್‌ನ ಮಾಲೀಕನು ರಾತ್ರಿ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗಲು ಸಿದ್ಧನಾಗುತ್ತಿದ್ದನು. ಆಗ, ಇಬ್ಬರು ಹೆಂಗಸರು ಮತ್ತು ಒಬ್ಬ ಪುಟ್ಟ ಹುಡುಗನು ರೆಸ್ಟರಾಂಟನ್ನು ಪ್ರವೇಶಿಸಿ, ಊಟವನ್ನು ಆರ್ಡರ್‌ ಮಾಡಿದರು. ಆ ಮಾಲೀಕನು ಬಹಳ ದಣಿದಿದ್ದ ಕಾರಣ, “ರೆಸ್ಟರಾಂಟ್‌ ಮುಚ್ಚಿದೆ ಇನ್ನು ಊಟ ದೊರೆಯುವುದಿಲ್ಲ” ಎಂದು ಹೇಳಲು ಅವನಿಗೆ ತುಂಬ ಮನಸ್ಸಾದರೂ, ಅವನು ಹಾಗೆ ಹೇಳದೆ ಅವರಿಗೆ ಊಟ ಬಡಿಸಲು ನಿರ್ಧರಿಸಿದನು. ಆ ಇಬ್ಬರು ಸ್ತ್ರೀಯರು ಮಾತನಾಡುತ್ತಾ ಊಟಮಾಡುತ್ತಿದ್ದಂತೆ, ಹುಡುಗನು ರೆಸ್ಟರಾಂಟ್‌ನಲ್ಲೆಲ್ಲಾ ಓಡಾಡುತ್ತಾ, ಬಿಸ್ಕತ್ತುಗಳನ್ನು ನೆಲದ ಮೇಲೆ ಬೀಳಿಸಿ ಅದನ್ನು ತನ್ನ ಕಾಲುಗಳಿಂದ ಮೆಟ್ಟುತ್ತಾ ಇದ್ದನು. ಹಾಗೆ ಮಾಡದಂತೆ ಹುಡುಗನನ್ನು ತಡೆಯುವ ಬದಲಿಗೆ, ಅವನ ತಾಯಿಯು ಅವನನ್ನು ನೋಡಿ ಮುಗುಳ್ನಗೆ ಬೀರುತ್ತಿದ್ದಳು. ಅವರು ಊಟಮಾಡಿ ಹೋದ ನಂತರ, ದಣಿದಿದ್ದ ಆ ಮಾಲೀಕನು ರೆಸ್ಟರಾಂಟ್‌ನ ನೆಲವನ್ನು ಪುನಃ ಸ್ವಚ್ಛಗೊಳಿಸಬೇಕಾಯಿತು.

ಪ್ರಾಯಶಃ ನಿಮಗೆ ತಿಳಿದಿರುವಂತೆ, ಅನೇಕ ಕುಟುಂಬಗಳಲ್ಲಿ ಮಕ್ಕಳ ತರಬೇತಿಯು ಯಶಸ್ವಿಕರವಾಗಿ ನಡೆಯುತ್ತಿಲ್ಲ ಎಂಬುದನ್ನು ಈ ನಿಜ ಜೀವನದ ಘಟನೆಯು ದೃಷ್ಟಾಂತಿಸುತ್ತದೆ. ಇದಕ್ಕೆ ಕಾರಣಗಳು ಭಿನ್ನ ಭಿನ್ನವಾಗಿರುತ್ತವೆ. ಮಕ್ಕಳನ್ನು ಸ್ವತಂತ್ರ ವಾತಾವರಣದಲ್ಲಿ ಬೆಳೆಸಬೇಕೆಂಬ ಆಲೋಚನೆಯಿಂದ ಕೆಲವು ಹೆತ್ತವರು, ಯಾವುದೇ ನಿರ್ಬಂಧವಿಲ್ಲದೆ ಇಷ್ಟಬಂದ ರೀತಿಯಲ್ಲಿ ನಡೆಯುವಂತೆ ಮಕ್ಕಳನ್ನು ಅನುಮತಿಸುತ್ತಾರೆ. ಅಥವಾ, ಹೆತ್ತವರ ಜೀವನವು ಬಹಳ ಕಾರ್ಯಮಗ್ನವಾಗಿರುವ ಕಾರಣ, ಮಕ್ಕಳಿಗೆ ಅಗತ್ಯವಿರುವ ಗಮನ ಮತ್ತು ತರಬೇತಿಯನ್ನು ನೀಡಲು ಅವರು ಸಮಯವನ್ನು ತೆಗೆದುಕೊಳ್ಳದಿರಬಹುದು. ಇನ್ನೂ ಕೆಲವು ಹೆತ್ತವರು, ಮಕ್ಕಳ ವಿದ್ಯಾಭ್ಯಾಸವೇ ಅತಿ ಪ್ರಾಮುಖ್ಯವಾದ ವಿಷಯವೆಂದು ನೆನಸುತ್ತಾರೆ. ಆದುದರಿಂದ, ಮಕ್ಕಳು ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆದು, ನಂತರ ಒಂದು ಪ್ರತಿಷ್ಠಿತ ಕಾಲೇಜಿಗೆ ಸೇರಬೇಕೆಂಬುದನ್ನು ಮಾತ್ರ ಅವರು ಮಕ್ಕಳಿಂದ ಅಪೇಕ್ಷಿಸುತ್ತಾರೆ. ಎಷ್ಟರ ತನಕ ಮಕ್ಕಳು ಅದನ್ನು ಸಾಧಿಸುತ್ತಾರೋ ಅಷ್ಟರ ತನಕ ಹೆತ್ತವರು ಅವರಿಗೆ ಬಹುಮಟ್ಟಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತಾರೆ.

ಆದರೂ, ಹೆತ್ತವರ ಮತ್ತು ಸಮಾಜದ ಮೌಲ್ಯಗಳನ್ನು ಕ್ರಮಪಡಿಸಬೇಕಾದ ಅಗತ್ಯವಿದೆ ಎಂದು ಕೆಲವರು ಹೇಳುತ್ತಾರೆ. ಅವರು ತರ್ಕಿಸುವುದೇನೆಂದರೆ, ಮಕ್ಕಳು ಎಲ್ಲಾ ರೀತಿಯ ಪಾತಕಗಳಲ್ಲಿ ಒಳಗೂಡುತ್ತಿದ್ದಾರೆ ಮತ್ತು ಶಾಲಾ ಹಿಂಸಾಚಾರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ಆದುದರಿಂದಲೇ, ರಿಪಬ್ಲಿಕ್‌ ಆಫ್‌ ಕೊರಿಯದ ಸೋಲ್‌ನಲ್ಲಿನ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರೊಬ್ಬರು, ವ್ಯಕ್ತಿತ್ವವನ್ನು ಉತ್ತಮಗೊಳಿಸುವ ತರಬೇತಿಗೆ ಪ್ರಾಧಾನ್ಯವನ್ನು ಕೊಡಬೇಕು ಎಂದು ಒತ್ತಿಹೇಳಿದರು. ಅವರು ಹೇಳಿದ್ದು: “ಒಬ್ಬ ವ್ಯಕ್ತಿಯಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿದ ನಂತರವೇ ಜ್ಞಾನವನ್ನು ತುಂಬಿಸಬೇಕು.”

ತಮ್ಮ ಮಕ್ಕಳು ಕಾಲೇಜಿಗೆ ಸೇರಬೇಕು ಮತ್ತು ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ನೆನಸುವ ಅನೇಕ ಹೆತ್ತವರು, ಈ ಎಚ್ಚರಿಕೆಯ ಮಾತಿಗೆ ಕಿವಿಗೊಡಲು ತಪ್ಪಿಹೋಗುತ್ತಾರೆ. ನೀವು ಹೆತ್ತವರಾಗಿರುವಲ್ಲಿ, ನಿಮ್ಮ ಮಗುವು ಯಾವ ರೀತಿಯ ವ್ಯಕ್ತಿಯಾಗಬೇಕೆಂದು ನೀವು ಬಯಸುತ್ತೀರಿ? ನೈತಿಕ ಪ್ರಜ್ಞೆಯುಳ್ಳ ಮತ್ತು ಜವಾಬ್ದಾರಿಯುತ ವಯಸ್ಕರಾಗಬೇಕೆಂದು ನೀವು ಬಯಸುತ್ತೀರೋ? ಇತರರ ಕಡೆಗೆ ಪರಿಗಣನೆಯನ್ನು ತೋರಿಸುವ, ಹೊಂದಿಕೊಳ್ಳುವ, ಮತ್ತು ಸಕಾರಾತ್ಮಕ ಮನೋಭಾವವಿರುವ ಒಬ್ಬ ವ್ಯಕ್ತಿಯಾಗಬೇಕೆಂದು ನೀವು ಬಯಸುತ್ತೀರೋ? ಹಾಗಿರುವುದಾದರೆ, ದಯವಿಟ್ಟು ಮುಂದಿನ ಲೇಖನವನ್ನು ಪರಿಗಣಿಸಿರಿ.