ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇರುವುದರಲ್ಲಿಯೇ ಅತ್ಯಮೂಲ್ಯವಾದ ಉಡುಗೊರೆ

ಇರುವುದರಲ್ಲಿಯೇ ಅತ್ಯಮೂಲ್ಯವಾದ ಉಡುಗೊರೆ

ಇರುವುದರಲ್ಲಿಯೇ ಅತ್ಯಮೂಲ್ಯವಾದ ಉಡುಗೊರೆ

ತನ್ನ ಜೀವಿತದ ಕೊನೆಯನ್ನು ಸಮೀಪಿಸುತ್ತಿದ್ದ ವೃದ್ಧ ಅಪೊಸ್ತಲ ಯೋಹಾನನು ಬರೆದದ್ದು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.”​—⁠3 ಯೋಹಾನ 4.

ಈ ನಂಬಿಗಸ್ತ ಅಪೊಸ್ತಲನು ಆಧ್ಯಾತ್ಮಿಕ ಅರ್ಥದಲ್ಲಿ ತನ್ನ ಮಕ್ಕಳಾಗಿದ್ದವರನ್ನು ಸೂಚಿಸಿ ಮಾತಾಡುತ್ತಿದ್ದನು. ಹಾಗಿದ್ದರೂ, ಅಪೊಸ್ತಲನ ಈ ಮಾತುಗಳನ್ನು ಅನೇಕ ಹೆತ್ತವರು ಸಹ ಪುನರುಚ್ಚರಿಸಬಲ್ಲರು. ಅವರು, “ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ” ನೀಡುತ್ತಾ ತಮ್ಮ ಮಕ್ಕಳನ್ನು ಬೆಳೆಸಿದ್ದಾರೆ, ಮತ್ತು ಇದರ ಫಲಿತಾಂಶವಾಗಿ ಈಗ ವಯಸ್ಕರಾಗಿರುವ ಅವರ ಮಕ್ಕಳು ‘ಸತ್ಯವನ್ನನುಸರಿಸಿ ನಡೆಯುವುದನ್ನು’ ನೋಡಲು ಅವರು ಹರ್ಷಿಸುತ್ತಾರೆ. (ಎಫೆಸ 6:4) ವಾಸ್ತವದಲ್ಲಿ, ತಮ್ಮ ಮಕ್ಕಳಿಗೆ ನಿತ್ಯಜೀವಕ್ಕೆ ನಡೆಸುವ ದಾರಿಯ ಕುರಿತು ಕಲಿಸುವುದೇ ಹೆತ್ತವರು ಅವರಿಗೆ ನೀಡಸಾಧ್ಯವಿರುವ ಅತ್ಯಮೂಲ್ಯವಾದ ಉಡುಗೊರೆಯಾಗಿದೆ. ಏಕೆಂದರೆ, ಕ್ರೈಸ್ತರು ಯಾವ ರೀತಿಯಲ್ಲಿ ಜೀವಿಸಬೇಕೆಂದು ಯೆಹೋವನು ಬಯಸುತ್ತಾನೋ ಆ ರೀತಿಯಲ್ಲಿ ಜೀವಿಸುವುದನ್ನು ಒಳಗೊಂಡಿರುವ ದೈವಿಕ ಭಕ್ತಿಯಿಂದ “ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.”​—⁠1 ತಿಮೊಥೆಯ 4:⁠8.

ತಮ್ಮ ಮಕ್ಕಳನ್ನು ಆಧ್ಯಾತ್ಮಿಕವಾಗಿ ತರಬೇತುಗೊಳಿಸಲು ಕಠಿನವಾಗಿ ಪರಿಶ್ರಮಿಸುವ ದೇವಭಯವುಳ್ಳ ಹೆತ್ತವರನ್ನು, ಪರಿಪೂರ್ಣ ತಂದೆಯಾದ ಯೆಹೋವನು ಅತಿಯಾಗಿ ಗಣ್ಯಮಾಡುತ್ತಾನೆ. ಮಕ್ಕಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಾಗ, ತಮ್ಮ ಹೆತ್ತವರೊಂದಿಗೆ ಸತ್ಯ ಆರಾಧನೆಯನ್ನು ಬೆನ್ನಟ್ಟುವುದರಲ್ಲಿ ಅವರು ಅತ್ಯಾನಂದವನ್ನು ಕಂಡುಕೊಳ್ಳುತ್ತಾರೆ. ಅಂಥ ಮಕ್ಕಳು ವಯಸ್ಕರಾಗುತ್ತಿದ್ದಂತೆ, ಹೆತ್ತವರೊಂದಿಗಿನ ತಮ್ಮ ಅನುಭವಗಳ ಸವಿನೆನಪುಗಳನ್ನು ಒಟ್ಟುಗೂಡಿಸುತ್ತಾರೆ. ಕೆಲವರು ತಾವು ಮೊದಲಬಾರಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ * ಭಾಗವಹಿಸಿದ ಸಮಯವನ್ನು ಆನಂದದಿಂದ ನೆನಪಿಸಿಕೊಳ್ಳುತ್ತಾರೆ. ಅಥವಾ ತಮ್ಮ ಹೆತ್ತವರಲ್ಲಿ ಒಬ್ಬರೊಂದಿಗೆ ಕ್ಷೇತ್ರ ಸೇವೆಗೆ ಹೋದಾಗ, ಮೊದಲಬಾರಿ ಒಂದು ಬೈಬಲ್‌ ವಚನವನ್ನು ಓದಿದ ಸಮಯವನ್ನು ಅವರು ಜ್ಞಾಪಿಸಿಕೊಳ್ಳಬಹುದು. ಅವರ ಹೆತ್ತವರು ಬೈಬಲ್‌ ಕಥೆಗಳ ನನ್ನ ಪುಸ್ತಕ ಅಥವಾ ಮಹಾ ಬೋಧಕನಿಗೆ ಕಿವಿಗೊಡುವುದು * ಎಂಬ ಪುಸ್ತಕದಿಂದ ಅವರಿಗೆ ಓದಿ ಹೇಳಿದ್ದನ್ನು ಅವರು ಹೇಗೆ ತಾನೇ ಮರೆಯಬಲ್ಲರು? ಗೇಬ್ರೀಯೆಲ್‌ ತಾನು ಬಹಳ ಆನಂದಿಸುತ್ತಿದ್ದ ಒಂದು ವಿಷಯದ ಕುರಿತು ಹೀಗೆ ತಿಳಿಸುತ್ತಾನೆ: “ನಾನು ಕೇವಲ ನಾಲ್ಕು ವರುಷದವನಾಗಿದ್ದಾಗ, ನನ್ನ ತಾಯಿ ಪ್ರತಿದಿನ ಅಡುಗೆಮಾಡುತ್ತಿರುವಾಗ ನನಗಾಗಿ ರಾಜ್ಯ ಗೀತೆಗಳನ್ನು ಹಾಡುತ್ತಿದ್ದಳು. ಒಂದು ನಿರ್ದಿಷ್ಟ ರಾಜ್ಯ ಗೀತೆಯನ್ನು ನಾನು ನೆನಪಿಸಿಕೊಳ್ಳುವಾಗ ಈಗಲೂ ನನಗೆ ಆಳವಾದ ಭಾವನೆಗಳು ಹೊರಹೊಮ್ಮುತ್ತವೆ. ಸಮಯಾನಂತರ, ಆ ಗೀತೆಯು ನನಗೆ ಯೆಹೋವನ ಸೇವೆಯ ಮಹತ್ವವನ್ನು ತಿಳಿಯಲು ಸಹಾಯಮಾಡಿತು.” ಗೇಬ್ರೀಯೇಲನು ಸೂಚಿಸುತ್ತಿರುವ ಸುಂದರವಾದ ಗೀತೆಯು ಒಂದುವೇಳೆ ನಿಮಗೂ ನೆನಪಿರಬಹುದು. ಅದು, ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ ಎಂಬ ಸಂಗೀತ ಪುಸ್ತಕದಲ್ಲಿನ 157ನೇ ಗೀತೆಯಾಗಿದೆ. ಅದರ ಶೀರ್ಷಿಕೆಯು, “ಯೌವನದಲ್ಲಿ ಯೆಹೋವನನ್ನು ಆರಾಧಿಸು” ಎಂದಾಗಿದೆ.

ಆ ಗೀತೆಯು ಹೀಗೆ ಆರಂಭಗೊಳ್ಳುತ್ತದೆ: “ದೇವರೊಮ್ಮೆ ಮಕ್ಕಳ ಬಾಯಿಂದ,/ಯೇಸುವಿಗೆ ಜಯವೆತ್ತಿಸಿದ.” ಯೇಸುವಿನೊಂದಿಗೆ ಸಹವಾಸಮಾಡುವ ಸುಯೋಗವನ್ನು ಹೊಂದಿದ್ದ ಮಕ್ಕಳೂ ಇದ್ದರು ಎಂಬುದು ನಿಶ್ಚಯ, ಮತ್ತು ಅವರು ಮನಸ್ಸನ್ನು ಪ್ರಫುಲ್ಲಗೊಳಿಸುವಂಥ, ಮುಚ್ಚುಮರೆಯಿಲ್ಲದ ನಡತೆಯಿಂದ ಅವನನ್ನು ಸಂತೋಷಪಡಿಸಿದ್ದಿರಬಹುದು. ಯೇಸು ಚಿಕ್ಕ ಮಕ್ಕಳಿಗಿರುವ ಕಲಿಯುವ ಮನಸ್ಸನ್ನು, ತನ್ನ ಹಿಂಬಾಲಕರಿಗೆ ಅನುಕರಿಸಲಿಕ್ಕಾಗಿರುವ ಒಂದು ಮಾದರಿಯಾಗಿಯೂ ಉಪಯೋಗಿಸಿದನು. (ಮತ್ತಾಯ 18:​3, 4) ಹಾಗಾದರೆ ಮಕ್ಕಳಿಗೆ ಯೆಹೋವನ ಆರಾಧನೆಯಲ್ಲಿ ಒಂದು ಸೂಕ್ತ ಸ್ಥಾನವಿದೆ. ವಾಸ್ತವದಲ್ಲಿ, ಆ ಗೀತೆಯ ಪದಗಳು ಹೀಗೆ ಮುಂದುವರಿಯುತ್ತವೆ: “ಹೌದು, ಸಾಧ್ಯವಿದೆ ಮಕ್ಕಳಿಗೂ . . . ಯೆಹೋವನ ಸ್ತುತಿಸಲು.”

ಅನೇಕ ಮಕ್ಕಳು ಮನೆಯಲ್ಲಿ, ಶಾಲೆಯಲ್ಲಿ, ಮತ್ತು ಇತರ ಸ್ಥಳಗಳಲ್ಲಿ ತಮ್ಮ ಉತ್ತಮ ನಡತೆಯ ಮೂಲಕ ದೇವರಿಗೂ ತಮ್ಮ ಕುಟುಂಬಕ್ಕೂ ಗೌರವವನ್ನು ತಂದಿದ್ದಾರೆ. ಸತ್ಯವನ್ನು ಪ್ರೀತಿಸುವ “ಕ್ರೈಸ್ತ ಹೆತ್ತವ”ರನ್ನು ಹೊಂದಿರುವುದು ಅವರಿಗೆ ಎಂತಹ ಒಂದು ಆಶೀರ್ವಾದವಾಗಿದೆ. (ಧರ್ಮೋಪದೇಶಕಾಂಡ 6:7) ನಡಿಯಬೇಕಾದ ಮಾರ್ಗದಲ್ಲಿ ನಡೆಯುವಂತೆ ದೇವರು ತನ್ನ ಸೃಷ್ಟಿಜೀವಿಗಳಿಗೆ ಕಲಿಸುತ್ತಿರುವ ಕಾರಣ, ದೇವಭಯವುಳ್ಳ ಹೆತ್ತವರು ಆತನ ಮಾತಿಗನುಸಾರವಾಗಿ ನಡೆಯುತ್ತಾರೆ. ಇದರಿಂದಾಗಿ ಎಂತಹ ಒಂದು ಆಶೀರ್ವಾದವನ್ನು ಅವರು ಪಡೆಯುತ್ತಾರೆ! ಮತ್ತು ತಾವು ಕಲಿತ ವಿಷಯವನ್ನು ಅವರು ತಮ್ಮ ಮಕ್ಕಳಿಗೆ ಕಲಿಸುವಾಗ ಫಲಿತಾಂಶವಾಗಿ ಮಕ್ಕಳು “ವಿಧೇಯರಾಗಿ” ಅವರಿಗೆ ಎಷ್ಟು ಆನಂದವನ್ನು ತರುತ್ತಾರೆ! (ಯೆಶಾಯ 48:​17, 18) ಈಗ ಮೆಕ್ಸಿಕೊದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಸೇವೆಸಲ್ಲಿಸುತ್ತಿರುವ ಆ್ಯನ್ಹೆಲೀಕಾ ತಿಳಿಸುವುದು: “ನನ್ನ ಹೆತ್ತವರು ಯಾವಾಗಲೂ ಬೈಬಲ್‌ ಮೂಲತತ್ತ್ವಗಳನ್ನು ತಮ್ಮ ಜೀವನದಲ್ಲಿ ಕಾರ್ಯರೂಪಕ್ಕೆ ಹಾಕಲು ಪ್ರಯತ್ನಿಸುತ್ತಿದ್ದರು. ಇದು ನನ್ನ ಬಾಲ್ಯವನ್ನು ಬಹಳ ಸುಂದರವಾಗಿ ಮಾಡಿತು. ನಾನು ಸಂತೋಷಿತಳಾಗಿದ್ದೆ.”

ತಮ್ಮ ಆಧ್ಯಾತ್ಮಿಕ ಪರಂಪರೆಯ ಉತ್ತಮ ಕಾಳಜಿವಹಿಸಬೇಕು ಎಂಬುದನ್ನು ಅಂಥ ಕ್ರೈಸ್ತರು ಒಪ್ಪಿಕೊಳ್ಳುತ್ತಾರೆ. ಬಹುಶಃ ನೀವು, ನಿಜ ಕ್ರೈಸ್ತ ಮೌಲ್ಯಗಳುಳ್ಳ ಒಂದು ಕುಟುಂಬದಲ್ಲಿ ಬೆಳೆಸಲ್ಪಟ್ಟ ಒಬ್ಬ ಯುವವ್ಯಕ್ತಿಯಾಗಿರಬಹುದು. ಹಾಗಿರುವಲ್ಲಿ, ಅದೇ ಗೀತೆಯು ನಿಮ್ಮನ್ನು ಉತ್ತೇಜಿಸುವುದು: ‘ಯುವ ಜನರೇ, ಶುದ್ಧ ಮಾರ್ಗದಿ ನಡೆಯಿರಿ.’ ನೀವು ಸ್ವತಃ ನಿರ್ಣಯಗಳನ್ನು ಮಾಡಬೇಕಾದ ಸಮಯವು ಬರುವುದು; ಆದುದರಿಂದ ಈಗಲೇ ಯುವ ಪ್ರಾಯದಲ್ಲಿ “ಯೆಹೋವನ ನಂಬಿರಿ” ಮತ್ತು ಜನಪ್ರಿಯರಾಗಲು ಪ್ರಯತ್ನಿಸಬೇಡಿ.

ಒಂದುವೇಳೆ ನಿಮ್ಮ ಜೀವನದಲ್ಲಿ ಜನಪ್ರಿಯತೆಯನ್ನು ಮೊದಲ ಸ್ಥಾನದಲ್ಲಿಡುವುದಾದರೆ, ನೀವು ಪಡೆಯುವ ಎಲ್ಲಾ ತರಬೇತಿಯು ವ್ಯರ್ಥವಾಗಬಲ್ಲದು ಮತ್ತು ಭವಿಷ್ಯತ್ತಿಗಾಗಿ ನಿಮಗಿರುವ ಪ್ರತೀಕ್ಷೆಗಳನ್ನು ನೀವು ಕಳೆದುಕೊಳ್ಳಬಲ್ಲಿರಿ. ಜನಪ್ರಿಯರಾಗಬೇಕೆಂಬ ಆಸೆಯು, ನಿಮ್ಮ ಎಚ್ಚರಭರಿತ ಸ್ಥಿತಿಯನ್ನು ಕುಂದಿಸಸಾಧ್ಯವಿದೆ. ಇದರ ಪರಿಣಾಮವಾಗಿ ಕೆಲವರು, ಉತ್ತಮರಾಗಿಯೂ ಆಕರ್ಷಕರಾಗಿಯೂ ಕಾಣುವ ಆದರೆ ಅದೇ ಸಮಯದಲ್ಲಿ ಕ್ರೈಸ್ತ ಮಟ್ಟಗಳಲ್ಲಿ ಕಿಂಚಿತ್ತೂ ಆಸಕ್ತಿಯಿಲ್ಲದ ಜನರೊಂದಿಗೆ ಸಹವಾಸಮಾಡಲು ಆರಂಭಿಸಿದ್ದಾರೆ. ಇದು, ಯುವ ಜನರ ಪ್ರಶ್ನೆಗಳು​—⁠ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ? (ಇಂಗ್ಲಿಷ್‌) ಎಂಬ ವಿಡಿಯೋದಲ್ಲಿ ತೋರಿಸಲ್ಪಟ್ಟ ಮುಖ್ಯ ಪಾತ್ರವಾದ ತಾರಾ ಎಂಬವಳಲ್ಲಿ ದೃಷ್ಟಾಂತಿಸಲ್ಪಟ್ಟಿದೆ. ತಾರಾಳಂತೆ ಸತ್ಯ ಆರಾಧನೆಯನ್ನು ಗಣ್ಯಮಾಡದಂಥ ಜನರೊಂದಿಗೆ ಸಹವಾಸಿಸುವ ಕ್ರೈಸ್ತ ಯುವ ಜನರು, ಬೇಗನೆ ಇಲ್ಲವೆ ಸ್ವಲ್ಪ ಸಮಯದ ನಂತರ, ಆ ಗೀತೆಯು ಹೇಳುವಂತೆ “ದುಸ್ಸಹವಾಸ ಸದಾಚಾರವ ಕೆಡಿಸುತ್ತದೆ” ಎಂಬುದನ್ನು ಗ್ರಹಿಸುವರು. ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅನೇಕ ವರುಷಗಳ ಪ್ರಯತ್ನವು ಅಗತ್ಯವಾಗಿದೆ, ಆದರೆ ಅವುಗಳನ್ನು ನಾಶಗೊಳಿಸಲು ಅತ್ಯಲ್ಪ ಸಮಯವೇ ಸಾಕು.

ದೈವಿಕ ಭಯದ ಮಾರ್ಗವು ಸುಲಭದ್ದಲ್ಲ ಎಂಬುದು ಒಪ್ಪತಕ್ಕ ವಿಷಯವಾಗಿದೆ. ಆದರೂ, ಆ ಗೀತೆಯು ಮುಂದಕ್ಕೆ ತಿಳಿಸುವಂತೆ “ಯೌವನದಿ ದೇವರ ಸ್ಮರಿಸಿ, ಆತ್ಮ, ಸತ್ಯದಿಂದ ಆರಾಧಿಸಿ”ದರೆ, ನಿಜವಾದ ಯಶಸ್ಸಿಗಾಗಿ ನೀವು ಒಂದು ಸ್ಥಿರವಾದ ಬುನಾದಿಯನ್ನು ಹಾಕುತ್ತೀರಿ. ಮತ್ತು ಹೀಗೆ ಮಾಡುವುದಾದರೆ ನೀವು ವಯಸ್ಕರಾದಂತೆ “ಹರ್ಷವು ನಿಮ್ಮ”ದಾಗುವುದು. ಯೆಹೋವನ ಪ್ರೀತಿಪರ ಆರೈಕೆಯ ಕೆಳಗೆ ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡುವುದರಿಂದ ನಿಮ್ಮನ್ನು ಯಾವುದೂ ತಡೆಯಲಾರದು ಎಂಬುದನ್ನು ನೀವು ಇನ್ನೂ ಹೆಚ್ಚು ಗ್ರಹಿಸಲಾರಂಭಿಸುವಿರಿ. ಒಬ್ಬ ದೇವಭಯವುಳ್ಳ ಪ್ರೌಢ ವಯಸ್ಕನಾಗಲು ಇದೇ ಮಾರ್ಗವಾಗಿದೆ. ಇದಕ್ಕೆ ಕೂಡಿಸಿ, ವಿವೇಕಯುತವಾಗಿ ಕ್ರೈಸ್ತ ತರಬೇತಿಯ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ “ಸಂತೋಷವಾಗೋದು ದೇವರಿಗೂ.” ಒಬ್ಬ ಮಾನವನಿಗೆ ದೇವರನ್ನು ಸಂತೋಷಪಡಿಸುವುದಕ್ಕಿಂತ ಹೆಚ್ಚಿನ ಸುಯೋಗವು ಯಾವುದಿದೆ?​—⁠ಜ್ಞಾನೋಕ್ತಿ 27:11.

ಆದುದರಿಂದ ಯುವ ಜನರೇ, ಯೆಹೋವನಿಂದ ಮತ್ತು ನಿಮ್ಮ ಕ್ರೈಸ್ತ ಹೆತ್ತವರಿಂದ ದೊರಕುವ ತರಬೇತಿಯು ಎಷ್ಟು ಅಮೂಲ್ಯವಾದದ್ದೆಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿರಿ. ನಿಮ್ಮ ಕಡೆಗೆ ಅವರಿಗಿರುವ ಮಹಾ ಪ್ರೀತಿಯು, ಯೆಹೋವನ ದೃಷ್ಟಿಯಲ್ಲಿ ಯಾವುದು ಮೆಚ್ಚಿಗೆಯಾಗಿದೆಯೋ ಅದನ್ನೇ ಮಾಡುವಂತೆ ನಿಮ್ಮನ್ನು ಪ್ರೇರೇಪಿಸಲಿ. ಆಗ, ಯೇಸು ಕ್ರಿಸ್ತನು ಮತ್ತು ನಂಬಿಗಸ್ತ ಯುವ ತಿಮೊಥೆಯನಂತೆ, ನೀವು ನಿಮ್ಮ ಸ್ವರ್ಗೀಯ ತಂದೆಯನ್ನು ಹಾಗೂ ನಿಮ್ಮ ಹೆತ್ತವರನ್ನು ಸಂತೋಷಪಡಿಸುವಿರಿ. ಅಷ್ಟುಮಾತ್ರವಲ್ಲ, ಒಂದುವೇಳೆ ಮುಂದೆಂದಾದರೂ ನೀವು ಸ್ವತಃ ಹೆತ್ತವರಾಗುವುದಾದರೆ, ಈ ಮುಂಚೆ ಉಲ್ಲೇಖಿಸಿದ ಆ್ಯನ್ಹೆಲೀಕಾಳು ಏನು ಹೇಳಿದಳೋ ಅದನ್ನು ನೀವು ಸಹ ಒಪ್ಪಿಕೊಳ್ಳಬಹುದು. ಅವಳು ಹೇಳಿದ್ದು: “ಒಂದುವೇಳೆ ಮುಂದೆಂದಾದರೂ ನನಗೊಂದು ಮಗು ಹುಟ್ಟುವುದಾದರೆ, ಶಿಶುವಾಗಿರುವಾಗಲೇ ಅದರ ಹೃದಯದಲ್ಲಿ ಯೆಹೋವನ ಪ್ರೀತಿಯನ್ನು ಬೇರೂರಿಸಲು ನಾನು ಕಠಿನ ಪ್ರಯತ್ನವನ್ನು ಮಾಡಿ, ಆ ಪ್ರೀತಿಯು ಅದರ ದಾರಿದೀಪವಾಗಿರುವಂತೆ ಮಾಡುವೆ.” ನಿಶ್ಚಯವಾಗಿಯೂ, ನಿತ್ಯಜೀವಕ್ಕೆ ನಡೆಸುವ ನೀತಿಯ ಮಾರ್ಗವು ಇರುವುದರಲ್ಲಿಯೇ ಅತ್ಯಮೂಲ್ಯವಾದ ಉಡುಗೊರೆಯಾಗಿದೆ!

[ಪಾದಟಿಪ್ಪಣಿಗಳು]

^ ಪ್ಯಾರ. 4 ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ನಡಿಸಲಾಗುತ್ತಿರುವ ಬೈಬಲ್‌ ಶಿಕ್ಷಣ ಕಾರ್ಯಕ್ರಮದ ಈ ಭಾಗವು ಆಬಾಲವೃದ್ಧರೆಲ್ಲರಿಗೆ ಲಭ್ಯವಿದೆ.

^ ಪ್ಯಾರ. 4 ತಿಳಿಸಲ್ಪಟ್ಟಿರುವ ಸಾಹಿತ್ಯಗಳು ಯೆಹೋವನ ಸಾಕ್ಷಿಗಳಿಂದ ಪ್ರಕಾಶನಮಾಡಲ್ಪಟ್ಟಿವೆ.