ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಿಲ್ಯಡ್‌ ಪದವೀಧರರು ಹುರುಪಿನ ಕೊಯ್ಲುಗಾರರೋಪಾದಿ ಹೊರಡುತ್ತಾರೆ!

ಗಿಲ್ಯಡ್‌ ಪದವೀಧರರು ಹುರುಪಿನ ಕೊಯ್ಲುಗಾರರೋಪಾದಿ ಹೊರಡುತ್ತಾರೆ!

ಗಿಲ್ಯಡ್‌ ಪದವೀಧರರು ಹುರುಪಿನ ಕೊಯ್ಲುಗಾರರೋಪಾದಿ ಹೊರಡುತ್ತಾರೆ!

“ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು​—⁠ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಮತ್ತಾಯ 9:​37, 38) ಈ ಮಾತುಗಳು, ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 116 ನೇ ತರಗತಿಯಲ್ಲಿ ಪದವಿಪಡೆಯಲಿದ್ದ ವಿದ್ಯಾರ್ಥಿಗಳಿಗೆ ವಿಶೇಷ ಅರ್ಥವನ್ನು ಹೊಂದಿದ್ದವು. ಅವರು ತಮ್ಮ ಮಿಷನೆರಿ ನೇಮಕಗಳಿಗಾಗಿ ಹೊರಡಲು ಸನ್ನದ್ಧರಾಗುತ್ತಿದ್ದರು.

ಇಸವಿ 2004, ಮಾರ್ಚ್‌ 13 ರ ಶನಿವಾರದಂದು ಪದವಿಪ್ರಾಪ್ತಿ ಕಾರ್ಯಕ್ರಮಕ್ಕಾಗಿ, ನ್ಯೂ ಯಾರ್ಕ್‌ನ ಪ್ಯಾಟರ್‌ಸನ್‌ನಲ್ಲಿರುವ ವಾಚ್‌ಟವರ್‌ ಎಡ್ಯೂಕೇಷನಲ್‌ ಸೆಂಟರ್‌ನಲ್ಲಿ ಮತ್ತು ಟೆಲಿವಿಷನ್‌ ಮುಖಾಂತರ ಕಾರ್ಯಕ್ರಮವನ್ನು ವೀಕ್ಷಿಸುವ ಕೇಂದ್ರಗಳಲ್ಲಿ 6,684 ಮಂದಿ ​ಒಟ್ಟುಗೂಡಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಬೀಳ್ಕೊಡುವಿಕೆಯ ಬುದ್ಧಿವಾದ ಮತ್ತು ಉತ್ತೇಜನವನ್ನು ಪಡೆದರು. ಅವರಿಗೆ ಕೊಡಲ್ಪಟ್ಟ ಸಲಹೆಯಿಂದ, ಆಧ್ಯಾತ್ಮಿಕ ಕೊಯ್ಲಿನಲ್ಲಿ ಹುರುಪಿನಿಂದ ಕೆಲಸಮಾಡುವ ನಾವೆಲ್ಲರೂ ಪ್ರಯೋಜನವನ್ನು ಪಡೆಯಬಲ್ಲೆವು.

ಆಡಳಿತ ಮಂಡಲಿಯ ಸದಸ್ಯರೂ ಗಿಲ್ಯಡ್‌ನ ಏಳನೇ ತರಗತಿಯ ಪದವೀಧರರೂ ಆಗಿರುವ ಥೀಅಡೋರ್‌ ಜರಸ್‌ರವರು ತಮ್ಮ ಆರಂಭದ ಹೇಳಿಕೆಗಳಲ್ಲಿ, “ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಯೇಸುವಿನ ಮಾತುಗಳನ್ನು ಒತ್ತಿಹೇಳಿದರು. (ಮತ್ತಾಯ 28:​19, 20) ಇದು ಬಹಳ ಸಮಯೋಚಿತವಾಗಿತ್ತು, ಏಕೆಂದರೆ ಆ ಪದವೀಧರರು 20 ವಿಭಿನ್ನ ದೇಶಗಳಲ್ಲಿ ಸೇವೆಸಲ್ಲಿಸಲು ಕಳುಹಿಸಲ್ಪಡಲಿದ್ದರು. ಅತಿ ಪ್ರಾಮುಖ್ಯ ಆಧ್ಯಾತ್ಮಿಕ ಕೊಯ್ಲಿನಲ್ಲಿ ಹುರುಪಿನಿಂದ ಕೆಲಸಮಾಡುವಂತೆ ದೇವರ ವಾಕ್ಯದಿಂದ ದೊರೆತ ಸಲಹೆಯು ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಸನ್ನದ್ಧರನ್ನಾಗಿ ಮಾಡಿದೆ ಎಂಬುದನ್ನು ಜರಸ್‌ರವರು ವಿದ್ಯಾರ್ಥಿಗಳಿಗೆ ನೆನಪು ಹುಟ್ಟಿಸಿದರು.​—⁠ಮತ್ತಾಯ 5:16.

ಫಲದಾಯಕ ಕೊಯ್ಲುಗಾರರಾಗುವ ವಿಧ

ಕಾರ್ಯಕ್ರಮದ ಮೊದಲ ಭಾಷಣಕರ್ತರು ರಾಬರ್ಟ್‌ ವಾಲನ್‌ರಾಗಿದ್ದರು. ಅವರು ಅನೇಕ ವರುಷಗಳಿಂದ ಗಿಲ್ಯಡ್‌ ಶಾಲೆಯೊಂದಿಗೆ ನಿಕಟವಾಗಿ ಕೆಲಸಮಾಡಿದ್ದಾರೆ. “ಕನಿಕರವೆಂಬ ಮನೋಹರ ಗುಣ” ಎಂಬ ಶೀರ್ಷಿಕೆಯುಳ್ಳ ಭಾಷಣವನ್ನು ಅವರು ನೀಡಿದರು. “ಕುರುಡರು ಸಹ ನೋಡಬಹುದಾದ ಮತ್ತು ಕಿವುಡರು ಸಹ ಆಲಿಸಬಹುದಾದ ಭಾಷೆಯು ಕನಿಕರವಾಗಿದೆ” ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಇತರರ ಸಂಕಷ್ಟಗಳ ಸೂಕ್ಷ್ಮ ಅರಿವು ಯೇಸುವಿಗಿತ್ತು ಮತ್ತು ಅವುಗಳನ್ನು ಹಗುರಗೊಳಿಸಲು ಅವನು ಪ್ರಯತ್ನಿಸಿದನು. (ಮತ್ತಾಯ 9:36) ಅದೇ ರೀತಿಯಲ್ಲಿ ಕ್ರಿಯೆಗೈಯಲು ವಿದ್ಯಾರ್ಥಿಗಳಿಗೂ ಅನೇಕ ಅವಕಾಶಗಳು​—⁠ಸಾರುವ ಕೆಲಸ​ದಲ್ಲಿ, ಸಭೆಯಲ್ಲಿ, ಮಿಷನೆರಿ ಗೃಹದಲ್ಲಿ, ಮತ್ತು ಸ್ವತಃ ತಮ್ಮ ವೈವಾಹಿಕ ಜೀವನದಲ್ಲಿ​—⁠ದೊರಕಲಿವೆ. ಭಾಷಣಕರ್ತನು ಅವರಿಗೆ ಉತ್ತೇಜನದ ಮಾತುಗಳನ್ನು ತಿಳಿಸಿದನು: “ನೀವು ಇತರರ ಸೇವೆಮಾಡುವಾಗ, ಕನಿಕರವೆಂಬ ಮನೋಹರ ಗುಣವು ನಿಮ್ಮ ಜೀವನದಲ್ಲಿ ಪ್ರದರ್ಶಿಸಲ್ಪಡಲಿ. ಮಿಷನೆರಿ ಗೃಹದಲ್ಲಿನ ದೈನಂದಿನ ಜೀವನಕ್ಕೆ ನಿಮ್ಮ ಅತ್ಯುತ್ತಮ ನಡತೆಯೇ ಸಾಕು. ಆದುದರಿಂದ, ಕನಿಕರವನ್ನು ಧರಿಸಿಕೊಳ್ಳಲು ದೃಢನಿಶ್ಚಯದಿಂದಿರಿ.”​—⁠ಕೊಲೊಸ್ಸೆ 3:12.

ಈ ಭಾಷಣದ ನಂತರ, ಆಡಳಿತ ಮಂಡಲಿಯ ಸದಸ್ಯರೂ ಗಿಲ್ಯಡ್‌ನ 41 ನೇ ತರಗತಿಯ ಪದವೀಧರರೂ ಆಗಿರುವ ಗೆರಿಟ್‌ ಲಾಶ್‌ರವರು, ‘ರಕ್ಷಣೆಯನ್ನು ಪ್ರಕಟಿಸುವವರು’ ಎಂಬ ಶೀರ್ಷಿಕೆಯುಳ್ಳ ಭಾಷಣ​ವನ್ನು ನೀಡಿದರು. (ಯೆಶಾಯ 52:⁠7) ಸದ್ಯದ ವಿಷಯಗಳ ವ್ಯವಸ್ಥೆಯು ನಾಶವಾಗುವಾಗ ಜನರು ರಕ್ಷಿಸಲ್ಪಡಬೇಕಾದರೆ, ಅವರು ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು, ತಮ್ಮ ನಂಬಿಕೆ​ಯನ್ನು ಬಹಿರಂಗವಾಗಿ ಘೋಷಿಸಬೇಕು, ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಳ್ಳಬೇಕು. (ರೋಮಾಪುರ 10:10; 2 ತಿಮೊಥೆಯ 3:15; 1 ಪೇತ್ರ 3:21) ಹಾಗಿದ್ದರೂ, ರಕ್ಷಣೆಯನ್ನು ಪ್ರಕಟಪಡಿಸುವ ಮುಖ್ಯ ಕಾರಣವು ಮಾನವರನ್ನು ರಕ್ಷಿಸುವುದಲ್ಲ, ಬದಲಾಗಿ ದೇವರಿಗೆ ಸ್ತುತಿಯನ್ನು ತರುವುದೇ ಆಗಿದೆ. ಆದುದರಿಂದ, ಸಹೋದರ ಲಾಶ್‌ರವರು ಆ ಭಾವೀ ಮಿಷನೆರಿಗಳಿಗೆ ಹೀಗೆ ಬುದ್ಧಿವಾದ ನೀಡಿದರು: “ಲೋಕದ ಕಟ್ಟಕಡೆಯ ವರೆಗೂ ರಾಜ್ಯದ ಸಂದೇಶವನ್ನು ಕೊಂಡೊಯ್ಯಿರಿ, ಮತ್ತು ರಕ್ಷಣೆಯನ್ನು ಹುರುಪಿನಿಂದ ಪ್ರಕಟಪಡಿಸಿರಿ. ಇದೆಲ್ಲವನ್ನು ಯೆಹೋವನ ಸ್ತುತಿಗಾಗಿ ಮಾಡಿರಿ.”​—⁠ರೋಮಾಪುರ 10:18.

“ನೀವು ಎಷ್ಟರಮಟ್ಟಿಗೆ ಪ್ರಜ್ವಲಿಸುತ್ತಿದ್ದೀರಿ?” ಎಂಬುದು ಗಿಲ್ಯಡ್‌ ಶಾಲೆಯ ಶಿಕ್ಷಕರಾದ ಲಾರೆನ್ಸ್‌ ಬೋವನ್‌ರವರು ತಮ್ಮ ಭಾಷಣದ ಶೀರ್ಷಿಕೆಯಲ್ಲಿ ಕೇಳಿದ ಪ್ರಶ್ನೆಯಾಗಿತ್ತು. ಮತ್ತಾಯ 6:22 ರಲ್ಲಿ (NW) ದಾಖಲಾಗಿರುವ ಯೇಸುವಿನ ಮಾತುಗಳಿಗೆ ಅವರು ಸೂಚಿಸಿದರು ಮತ್ತು “ಯೆಹೋವನನ್ನು ಘನಪಡಿಸುವ ಹಾಗೂ ಜೊತೆ ಮಾನವರಿಗೆ ಪ್ರಯೋಜನವನ್ನು ತರುವ ಆಧ್ಯಾತ್ಮಿಕ ಜ್ಞಾನವನ್ನು ಪ್ರತಿಬಿಂಬಿಸಲು” ಸಾಧ್ಯವಾಗುವಂತೆ ತಮ್ಮ ಕಣ್ಣುಗಳನ್ನು “ಸರಳವಾಗಿ” ಇಟ್ಟುಕೊಳ್ಳಬೇಕೆಂದು ಪದವೀಧರರಾಗಲಿದ್ದ ವಿದ್ಯಾರ್ಥಿಗಳನ್ನು ಅವರು ಉತ್ತೇಜಿಸಿದರು. ಈ ವಿಷಯದಲ್ಲಿ ಯೇಸು ತನ್ನ ಶುಶ್ರೂಷೆಯ ಆರಂಭದಿಂದಲೇ ಒಂದು ಉತ್ತಮ ಮಾದರಿಯನ್ನಿಟ್ಟನು. ದೇವರ ಚಿತ್ತವನ್ನು ಮಾಡುವುದರ ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುವ ಮೂಲಕ ಅವನಿದನ್ನು ಮಾಡಿದನು. ಯೇಸುವಿಗೆ ಅಡವಿಯಲ್ಲಿ ಸೈತಾನನು ಒಡ್ಡಿದ ಪರೀಕ್ಷೆಗಳನ್ನು ತಾಳಿಕೊಳ್ಳಲು, ಅವನ ತಂದೆಯು ಸ್ವರ್ಗದಲ್ಲಿ ಅವನಿಗೆ ಕಲಿಸಿದ ಅದ್ಭುತಕರ ವಿಷಯಗಳ ಧ್ಯಾನವೇ ಸಹಾಯಮಾಡಿತು. (ಮತ್ತಾಯ 3:16; 4:​1-11) ತನ್ನ ದೇವದತ್ತ ನೇಮಕವನ್ನು ಪೂರೈಸಲು ಯೇಸು ಸಂಪೂರ್ಣವಾಗಿ ಯೆಹೋವನ ಮೇಲೆ ಅವಲಂಬಿಸಿದನು. ತದ್ರೀತಿಯಲ್ಲಿ, ಮಿಷನೆರಿಗಳು ತಮ್ಮ ಮುಂದಿರುವ ಪಂಥಾಹ್ವಾನಗಳನ್ನು ಎದುರಿಸಲು ಶಕ್ತರಾಗುವಂತೆ ಉತ್ತಮ ಬೈಬಲ್‌ ಅಧ್ಯಯನದ ಹವ್ಯಾಸಗಳನ್ನು ಮುಂದುವರಿಸಲೇಬೇಕು ಮತ್ತು ಯೆಹೋವನ ಮೇಲೆ ಸಂಪೂರ್ಣವಾಗಿ ಅವಲಂಬಿಸಬೇಕು.

ಇದರ ನಂತರ ಗಿಲ್ಯಡ್‌ ಶಾಲೆಯ ಶಿಕ್ಷಕರೂ ಗಿಲ್ಯಡ್‌ನ 77 ನೇ ತರಗತಿಯ ಪದವೀಧರರೂ ಆಗಿರುವ ಮಾರ್ಕ್‌ ನ್ಯೂಮರ್‌ರವರು, ‘ಇಗೋ, ನಾವು ನಿನ್ನ ಕೈಯಲ್ಲಿದ್ದೇವೆ’ ಎಂಬ ಶೀರ್ಷಿಕೆಯುಳ್ಳ ಭಾಷಣವನ್ನು ನೀಡುತ್ತಾ ಈ ಭಾಷಣಮಾಲೆಯನ್ನು ಮುಕ್ತಾಯಗೊಳಿಸಿದರು. (ಯೆಹೋಶುವ 9:25) ಪುರಾತನ ಗಿಬ್ಯೋನ್ಯರ ಮನೋಭಾವವನ್ನು ಅನುಕರಿಸುವಂತೆ ಅವರು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. ಗಿಬ್ಯೋನ್‌ ಒಂದು ‘ದೊಡ್ಡ ಪಟ್ಟಣವಾಗಿತ್ತು ಮತ್ತು ಅಲ್ಲಿನ ಜನರೆಲ್ಲರೂ ಯುದ್ಧವೀರರಾಗಿದ್ದ’ ರಾದರೂ ಗಿಬ್ಯೋನ್ಯರು ತಮಗೆ ಪ್ರತಿಷ್ಠೆ ಸಿಗಬೇಕೆಂದು ತಗಾದೆಮಾಡಲಿಲ್ಲ ಅಥವಾ ತಮ್ಮ ಷರತ್ತುಗಳಿಗನುಸಾರ ವಿಷಯಗಳನ್ನು ನಿರ್ವಹಿಸಬೇಕೆಂದೂ ಬಯಸಲಿಲ್ಲ. (ಯೆಹೋಶುವ 10:2) ಅವರು ಇಷ್ಟಪೂರ್ವಕವಾಗಿ ಲೇವಿಯರ ಕೈಕೆಳಗೆ, ಯೆಹೋವನ ಆರಾಧನೆಯನ್ನು ಬೆಂಬಲಿಸುತ್ತಾ ‘ಕಟ್ಟಿಗೆ ಒಡೆಯುವವರಾಗಿಯೂ ನೀರು ತರುವವರಾಗಿಯೂ’ ಸೇವೆಸಲ್ಲಿಸಿದರು. (ಯೆಹೋಶುವ 9:27) ಪದವೀಧರರಾಗಲಿದ್ದ ವಿದ್ಯಾರ್ಥಿಗಳು ಕಾರ್ಯತಃ ಮಹಾ ಯೆಹೋಶುವನಾದ ಯೇಸು ಕ್ರಿಸ್ತನಿಗೆ ‘ಇಗೋ, ನಾವು ನಿನ್ನ ಕೈಯಲ್ಲಿದ್ದೇವೆ’ ಎಂದು ಹೇಳಿದ್ದಾರೆ. ಈಗ ಅವರು ತಮ್ಮ ವಿದೇಶೀ ನೇಮಕಗಳನ್ನು ಆರಂಭಿಸುವಾಗ, ಮಹಾ ಯೆಹೋಶುವನು ಅವರಿಗೆ ಯಾವುದೇ ಕೆಲಸವನ್ನು ಮಾಡುವಂತೆ ಕೇಳಿಕೊಂಡರೂ ಅದನ್ನು ಅವರು ಸ್ವೀಕರಿಸುವ ಅಗತ್ಯವಿದೆ.

ಅನುಭವಗಳು ಮತ್ತು ಇಂಟರ್‌ವ್ಯೂಗಳು

ಗಿಲ್ಯಡ್‌ನ 61 ನೇ ತರಗತಿಯ ಪದವೀಧರರೂ ಗಿಲ್ಯಡ್‌ ಶಾಲೆಯ ಶಿಕ್ಷಕರೂ ಆಗಿರುವ ವಾಲೆಸ್‌ ಲಿವರೆನ್ಸ್‌ರವರು, ವಿದ್ಯಾರ್ಥಿಗಳ ಒಂದು ಗುಂಪಿನೊಂದಿಗೆ “ಶಾಸ್ತ್ರಗ್ರಂಥಗಳ ಅರ್ಥವನ್ನು ಬಿಚ್ಚಿ​ಹೇಳಿರಿ” ಎಂಬ ಶೀರ್ಷಿಕೆಯ ಚರ್ಚೆಯನ್ನು ನಡೆಸಿದರು. ವಿದ್ಯಾರ್ಥಿಗಳು ತಮಗೆ ಶಾಲೆಯ ಸಮಯಾವಧಿಯಲ್ಲಿ ಕ್ಷೇತ್ರ ಶುಶ್ರೂಷೆಯಲ್ಲಿ ಆದ ಅನುಭವಗಳನ್ನು ತಿಳಿಸಿದರು ಮತ್ತು ಅಭಿನಯಿಸಿದರು. ಐದು ತಿಂಗಳುಗಳ ತರಬೇತಿಯ ಸಮಯದಲ್ಲಿ ಶಾಸ್ತ್ರವಚನಗಳ ಬಗ್ಗೆ ಮಾಡಿರುವ ವಿಸ್ತಾರ ಅಧ್ಯಯನವು ಅವರ ಹೃದಯವನ್ನು ತಲಪಿದೆ ಮತ್ತು ಅವರು ಕಲಿತದ್ದನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಅವರನ್ನು ಪ್ರೇರೇಪಿಸಿದೆ ಎಂಬುದರಲ್ಲಿ ಯಾವ ಸಂಶಯವೂ ಇರಲಿಲ್ಲ. (ಲೂಕ 24:32) ಐದು ತಿಂಗಳ ಕೋರ್ಸಿನ ಸಮಯದಲ್ಲಿ, ಒಬ್ಬ ವಿದ್ಯಾರ್ಥಿಯು ತಾನೇನನ್ನು ಕಲಿತನೋ ಅದನ್ನು ತನ್ನ ಸ್ವಂತ ತಮ್ಮನೊಂದಿಗೆ ಹಂಚಿಕೊಳ್ಳಲು ಶಕ್ತನಾದನು. ಇದು ಅವನ ತಮ್ಮನಿಗೆ, ಸ್ಥಳಿಕ ಸಭೆಯನ್ನು ಹುಡುಕಿ ತಾನೂ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸುವಂತೆ ಉತ್ತೇಜನವನ್ನು ನೀಡಿತು. ಈಗ ಅವನು ಒಬ್ಬ ಅಸ್ನಾತ ಪ್ರಚಾರಕನಾಗಿ ಅರ್ಹತೆಯನ್ನು ಪಡೆದಿದ್ದಾನೆ.

ಈ ಅನುಭವಗಳ ನಂತರ ಸಹೋದರರಾದ ರಿಚ್ಚರ್ಡ್‌ ಆ್ಯಶ್‌ ಮತ್ತು ಜಾನ್‌ ಗಿಬ್‌ಅರ್ಡ್‌, ಯೆಹೋವನ ಅನೇಕ ದೀರ್ಘಕಾಲದ ನಂಬಿಗಸ್ತ ಸೇವಕರನ್ನು ಇಂಟರ್‌ವ್ಯೂ ಮಾಡಿದರು. ಇವರಲ್ಲಿ, ವಾಚ್‌ಟವರ್‌ ಎಡ್ಯೂಕೇಷನಲ್‌ ಸೆಂಟರ್‌ನಲ್ಲಿ ವಿಶೇಷ ತರಬೇತಿಯನ್ನು ಪಡೆಯುತ್ತಾ ಇದ್ದ ಸಂಚರಣ ಮೇಲ್ವಿಚಾರಕರೂ ಇದ್ದರು. ಇವರು ಗಿಲ್ಯಡ್‌ ಶಾಲೆಯ ಹಿಂದಿನ ತರಗತಿಗಳಲ್ಲಿ ಪದವೀಧರರಾಗಿದ್ದರು. ತರಗತಿಯ ಸಮಯದಲ್ಲಿ ಸಹೋದರ ನಾರ್‌ರವರು ಒಮ್ಮೆ ಈ ರೀತಿ ಹೇಳಿದ್ದರು ಎಂಬುದನ್ನು ಒಬ್ಬರು ನೆನಪುಮಾಡಿಕೊಂಡರು: “ಗಿಲ್ಯಡ್‌ನಲ್ಲಿ ನೀವು ಬಹಳಷ್ಟು ಅಧ್ಯಯನ ಮಾಡುತ್ತೀರಿ. ಆದರೆ ಇದರಿಂದಾಗಿ ನಿಮ್ಮ ತಲೆ ಉಬ್ಬಿಕೊಂಡರೆ, ನಮ್ಮ ಶ್ರಮವೆಲ್ಲ ವ್ಯರ್ಥ. ಏಕೆಂದರೆ, ನಿಮ್ಮ ಹೃದಯವು ಪ್ರೀತಿಯಿಂದ ತುಂಬಬೇಕೆಂಬುದೇ ನಮ್ಮ ಇಚ್ಛೆ.” ಜನರ ಮತ್ತು ಅವರ ಅಗತ್ಯಗಳ ಕಡೆಗೆ ಹಿತಚಿಂತನೆ ಇರುವವರಾಗಿರಬೇಕು, ಇತರರೊಂದಿಗೆ ಯೇಸು ವ್ಯವಹರಿಸಿದ ರೀತಿಯಲ್ಲಿಯೇ ವ್ಯವಹರಿಸಬೇಕು, ಮತ್ತು ತಮಗೆ ದೊರೆತ ಯಾವುದೇ ನೇಮಕವನ್ನು ದೀನತೆಯಿಂದ ಸ್ವೀಕರಿಸಬೇಕೆಂದು ಅಲ್ಲಿದ್ದ ವಿದ್ಯಾರ್ಥಿಗಳಿಗೆ ಸಂಚರಣ ಸಹೋದರರು ಬುದ್ಧಿವಾದ ನೀಡಿದರು. ಈ ಸಲಹೆಯನ್ನು ಅನ್ವಯಿಸುವುದು ನಿಶ್ಚಯವಾಗಿಯೂ ಹೊಸ ಮಿಷನೆರಿಗಳಿಗೆ ತಮ್ಮ ನೇಮಕಗಳಲ್ಲಿ ಫಲಭರಿತರಾಗಿರುವಂತೆ ಸಹಾಯಮಾಡುವುದು.

ಹುರುಪಿನ ಕೊಯ್ಲುಗಾರರೋಪಾದಿ ಹೊರಡಿರಿ!

ಸಭಿಕರಿಗೆ, ಆಡಳಿತ ಮಂಡಲಿಯ ಸದಸ್ಯರಾಗಿರುವ ಸ್ಟೀಫನ್‌ ಲೆಟ್‌ರವರ ಭಾಷಣವನ್ನು ಕೇಳುವ ಸುಯೋಗವೂ ದೊರಕಿತು. ಕಾರ್ಯಕ್ರಮದ ಮುಖ್ಯ ಭಾಷಣವನ್ನು ಅವರು ನೀಡಿದರು. ಅದರ ಶೀರ್ಷಿಕೆಯು, “ಹುರುಪಿನ ಕೊಯ್ಲುಗಾರರೋಪಾದಿ ಹೊರಡಿರಿ!” ಎಂದಾಗಿತ್ತು. (ಮತ್ತಾಯ 9:38) ಅಕ್ಷರಾರ್ಥವಾದ ಕೊಯ್ಲಿನ ಕೆಲಸ​ದಲ್ಲಿ ಫಸಲನ್ನು ಕೊಯ್ಯುವುದಕ್ಕಿರುವ ಸಮಯವು ಸೀಮಿತವಾಗಿದೆ. ಆದ್ದರಿಂದ ಕೊಯ್ಲುಗಾರರು ಕಠಿನವಾಗಿ ದುಡಿಯುವ ಅಗತ್ಯವಿದೆ. ಹೀಗಿರುವಾಗ, ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಸಮೀಪಿಸುತ್ತಿರುವುದರಿಂದ ಇದು ಇನ್ನೆಷ್ಟು ಪ್ರಾಮುಖ್ಯವಾಗಿದೆ! ಈ ಮಹಾ ಆಧ್ಯಾತ್ಮಿಕ ಕೊಯ್ಲಿನಲ್ಲಿ, ಜೀವಗಳು ಗಂಡಾಂತರದಲ್ಲಿವೆ. (ಮತ್ತಾಯ 13:39) ‘ಆಲಸ್ಯವಾಗಿರದೆ ಆಸಕ್ತಚಿತ್ತರಾಗಿರುವಂತೆ’ ಮತ್ತು ಇನ್ನೆಂದಿಗೂ ಪುನರಾವರ್ತಿಸಲ್ಪಡದಂಥ ಕೊಯ್ಲಿನ ಕೆಲಸದಲ್ಲಿ ‘ಕರ್ತನ ಸೇವೆ ಮಾಡುವಂತೆ’ ಸಹೋದರ ಲೆಟ್‌ರವರು ಪದವೀಧರರನ್ನು ಉತ್ತೇಜಿಸಿದರು. (ರೋಮಾಪುರ 12:11) “ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಬೆಳ್ಳಗಾಗಿ ಕೊಯ್ಲಿಗೆ ಬಂದವೆ” ಎಂಬ ಯೇಸುವಿನ ಮಾತುಗಳನ್ನು ಭಾಷಣಕರ್ತರು ಉದ್ಧರಿಸಿದರು. (ಯೋಹಾನ 4:35) ಜನರು ಯಾವಾಗ ಮತ್ತು ಎಲ್ಲಿ ಸಿಗುತ್ತಾರೊ ಅಲ್ಲೆಲ್ಲಾ ಅವರನ್ನು ತಲಪಲು ಯಥಾರ್ಥ ಪ್ರಯತ್ನವನ್ನು ಮಾಡುವ ಮೂಲಕ ಮತ್ತು ಅನೌಪಚಾರಿಕ ಸಾಕ್ಷಿನೀಡಲು ಸಿಗುವಂಥ ಎಲ್ಲಾ ಅವಕಾಶಗಳನ್ನು ಸದುಪಯೋಗಿಸುವ ಮೂಲಕ ಕೊಯ್ಲಿನ ಕೆಲಸಕ್ಕಾಗಿ ತಮ್ಮ ಹುರುಪನ್ನು ತೋರಿಸುವಂತೆ ಅವರು ಪದವೀಧರರನ್ನು ಉತ್ತೇಜಿಸಿದರು. ಸಂದರ್ಭಗಳನ್ನು ಸೃಷ್ಟಿಸಲು ಯಾವಾಗಲೂ ಜಾಗರೂಕರಾಗಿರುವುದು, ಪರಿಣಾಮಕಾರಿಯಾಗಿ ಸಾಕ್ಷಿನೀಡುವಂತೆ ಸಾಧ್ಯಮಾಡುತ್ತದೆ. ಯೆಹೋವನು ಹುರುಪಿನ ದೇವರಾಗಿದ್ದಾನೆ, ಮತ್ತು ನಾವೆಲ್ಲರೂ ಆತನನ್ನು ಅನುಕರಿಸಬೇಕೆಂದು ಹಾಗೂ ಆಧ್ಯಾತ್ಮಿಕ ಕೊಯ್ಲಿನ ಕೆಲಸದಲ್ಲಿ ಕಠಿನವಾಗಿ ದುಡಿಯಬೇಕೆಂದು ಆತನು ನಿರೀಕ್ಷಿಸುತ್ತಾನೆ.​—⁠2 ಅರಸುಗಳು 19:31; ಯೋಹಾನ 5:17.

ಕಾರ್ಯಕ್ರಮವನ್ನು ಮುಕ್ತಾಯಗೊಳಿಸುವಾಗ, ಅಧ್ಯಕ್ಷರಾಗಿದ್ದ ಜರಸ್‌ರವರು ಬೇರೆ ಬೇರೆ ಬ್ರಾಂಚ್‌ಗಳಿಂದ ಬಂದ ಅಭಿನಂದನೆಗಳನ್ನು ಓದಿಹೇಳಿದರು, ಮತ್ತು ಪದವೀಧರರಿಗೆ ಡಿಪ್ಲೊಮಾಗಳನ್ನು ಕೊಟ್ಟರು. ತರಗತಿಯ ಪರವಾಗಿ ಒಬ್ಬ ಪದವೀಧರನು ತಮಗೆ ದೊರೆತ ತರಬೇತಿಗಾಗಿ ಆಳವಾದ ಗಣ್ಯತೆಯನ್ನು ವ್ಯಕ್ತಪಡಿಸುವ ಒಂದು ಪತ್ರವನ್ನು ಓದಿದನು. ಖಂಡಿತವಾಗಿಯೂ 116 ನೇ ತರಗತಿಯ ಪದವಿಪ್ರಾಪ್ತಿ ಕಾರ್ಯಕ್ರಮವು, ಹಾಜರಿದ್ದ ಪ್ರತಿಯೊಬ್ಬರನ್ನೂ ಹುರುಪಿನ ಕೊಯ್ಲುಗಾರರೋಪಾದಿ ಹೊರಡಲು ಹೆಚ್ಚು ದೃಢನಿರ್ಧಾರವುಳ್ಳವರನ್ನಾಗಿ ಮಾಡಿತು.

[ಪುಟ 25ರಲ್ಲಿರುವ ಚೌಕ]

ತರಗತಿಯ ಅಂಕಿಅಂಶಗಳು

ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 6

ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 20

ವಿದ್ಯಾರ್ಥಿಗಳ ಸಂಖ್ಯೆ: 46

ಸರಾಸರಿ ಪ್ರಾಯ: 34.2

ಸತ್ಯದಲ್ಲಿ ಸರಾಸರಿ ವರ್ಷಗಳು: 17.2

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13.9

[ಪುಟ 26ರಲ್ಲಿರುವ ಚಿತ್ರ]

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ಪದವಿಯನ್ನು ಪಡೆದ 116 ನೆಯ ತರಗತಿ

ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.

(1) ಸೀಆನ್‌ಸೂ, ಆರ್‌.; ಸ್ಪಾರ್ಕ್ಸ್‌, ಟಿ.; ಪೀನ್ಯಾ, ಸಿ.; ಟರ್ನರ್‌, ಪಿ.; ಚೇನೀ, ಎಲ್‌. (2) ಸ್ವಾರ್ಡೀ, ಎಮ್‌.; ಶೋಕ್ವಿಸ್ಟ್‌, ಎ.; ಆಮಾಡೋರೇ, ಎಲ್‌.; ಸ್ಮಿತ್‌, ಎನ್‌.; ಜೋರ್ಡನ್‌, ಎ.; ಬಸ್ವನೋ, ಎಲ್‌. (3) ಮ್ಯಾಟ್ಲೋಕ್‌, ಜೆ.; ರೂಯೀತ್‌, ಸಿ.; ಡ್ಯೂಲಾರ್‌, ಎಲ್‌.; ವೀನ್ಯರ್‌ಆನ್‌, ಎಮ್‌.; ಹೆನ್ರೀ, ಕೆ. (4) ಶೋಕ್ವಿಸ್ಟ್‌, ಏಚ್‌.; ಲೋಕ್ಸ್‌, ಜೆ.; ರೂಜೋ, ಜೆ.; ಗಸ್ಟಾಫ್‌ಸನ್‌, ಕೆ.; ಬಸ್ವನೋ, ಆರ್‌.; ಜೋರ್ಡನ್‌, ಎಮ್‌. (5) ಹೆನ್ರೀ, ಡಿ.; ಟರ್ನರ್‌, ಡಿ.; ಕಿರ್ವಿನ್‌, ಎಸ್‌.; ಫ್ಲೋರೀಟ್‌, ಕೆ.; ಸೀಆನ್‌ಸೂ, ಎಸ್‌. (6) ಆಮಾಡೋರೇ, ಎಸ್‌.; ಚೇನೀ, ಜೆ.; ರೋಸ್‌, ಆರ್‌.; ನೆಲ್ಸನ್‌, ಜೆ.; ರೂಯೀತ್‌, ಜೆ.; ವೀನ್ಯರ್‌ಆನ್‌, ಎಮ್‌. (7) ಫ್ಲೋರೀಟ್‌, ಜೆ.; ಮ್ಯಾಟ್ಲೋಕ್‌, ಡಿ.; ರೋಸ್‌, ಬಿ.; ಲೋಕ್ಸ್‌, ಸಿ.; ರೂಜೋ, ಟಿ.; ಡ್ಯೂಲಾರ್‌, ಡಿ.; ಕಿರ್ವಿನ್‌, ಎನ್‌. (8) ಗಸ್ಟಾಫ್‌ಸನ್‌, ಎ.; ನೆಲ್ಸನ್‌, ಡಿ.; ಸ್ವಾರ್ಡೀ, ಡಬ್ಲ್ಯೂ.; ಪೀನ್ಯಾ, ಎಮ್‌.; ಸ್ಮಿತ್‌, ಸಿ.; ಸ್ಪಾರ್ಕ್ಸ್‌, ಟಿ.