ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ತನ್ನ ಧರ್ಮವನ್ನು ಗೌರವಿಸುವಂತೆ ಅವಳು ನಮಗೆ ಕಲಿಸಿದಳು’

‘ತನ್ನ ಧರ್ಮವನ್ನು ಗೌರವಿಸುವಂತೆ ಅವಳು ನಮಗೆ ಕಲಿಸಿದಳು’

‘ತನ್ನ ಧರ್ಮವನ್ನು ಗೌರವಿಸುವಂತೆ ಅವಳು ನಮಗೆ ಕಲಿಸಿದಳು’

ಇಟಲಿಯ ರೋವೀಗೋ ಪ್ರಾಂತ್ಯದಲ್ಲಿನ ಒಬ್ಬ ಯೆಹೋವನ ಸಾಕ್ಷಿಗೆ, ತನಗೆ ಒಂದು ಟ್ಯೂಮರ್‌ ಇದೆ ಮತ್ತು ತನ್ನ ಸ್ಥಿತಿಯು ಬಹಳ ಶೋಚನೀಯವಾಗಿದೆ ಎಂದು ತಿಳಿದುಬಂತು. ಅವಳು ಆಸ್ಪತ್ರೆಯಲ್ಲಿ ದಾಖಲುಮಾಡಲ್ಪಟ್ಟಾಗಲೆಲ್ಲಾ, ರಕ್ತಪೂರಣಗಳಿಲ್ಲದೆ ಚಿಕಿತ್ಸೆಯನ್ನು ನೀಡುವಂತೆ ಕೇಳಿಕೊಂಡಳು. ಹೀಗೆ ಅನೇಕಬಾರಿ ಆಸ್ಪತ್ರೆಯಲ್ಲಿದ್ದ ನಂತರ, ಸ್ಥಳಿಕ ಕ್ಯಾನ್ಸರ್‌ ಸೇವಾ ಇಲಾಖೆಯಲ್ಲಿನ ನರ್ಸ್‌ಗಳು ಅವಳನ್ನು ಮನೆಯಲ್ಲಿಯೇ ನೋಡಿಕೊಳ್ಳತೊಡಗಿದರು.

ಈ 36 ವರುಷ ಪ್ರಾಯದ ರೋಗಿಯ ಬಲವಾದ ನಂಬಿಕೆ ಮತ್ತು ಸಹಕಾರ ಮನೋಭಾವವು, ಅವಳಿಗೆ ಚಿಕಿತ್ಸೆ ನೀಡಿದ ವೈದ್ಯಕೀಯ ತಜ್ಞರನ್ನು ಬಹಳವಾಗಿ ಪ್ರಭಾವಿಸಿತು. ಈ ರೋಗಿಯು ಕ್ಯಾನ್ಸರ್‌ನಿಂದ ಮರಣಹೊಂದುವ ಸ್ವಲ್ಪ ಸಮಯಕ್ಕೆ ಮುಂಚೆ, ಅವಳನ್ನು ನೋಡಿಕೊಂಡ ಒಬ್ಬ ನರ್ಸ್‌ ಒಂದು ನರ್ಸಿಂಗ್‌ ಪತ್ರಿಕೆಯಲ್ಲಿ, ಆ್ಯನ್‌ಜೇಲಾ ಎಂದು ಅವನು ಹೆಸರಿಸಿದ ಈ ರೋಗಿಯೊಂದಿಗಿನ ತನ್ನ ಅನುಭವವನ್ನು ಬರೆದನು.

“ಆ್ಯನ್‌ಜೇಲಾ ಲವಲವಿಕೆಯಿಂದ ಕೂಡಿದವಳೂ ಜೀವಿಸಬೇಕೆಂಬ ದೃಢನಿಶ್ಚಯವುಳ್ಳವಳೂ ಆಗಿದ್ದಾಳೆ. ಅವಳಿಗೆ ತನ್ನ ಪರಿಸ್ಥಿತಿ ಮತ್ತು ತನ್ನ ಗಂಭೀರವಾದ ರೋಗದ ಬಗ್ಗೆ ಅರಿವಿದೆ, ಹಾಗೂ ಆ ಪರಿಸ್ಥಿತಿಯಲ್ಲಿರುವ ಯಾರೇ ಆಗಲಿ ಮಾಡಬಹುದಾಗಿರುವಂತೆ ಅವಳು ಸಹ ಒಂದು ಪರಿಹಾರಕ್ಕಾಗಿ, ಅಥವಾ ಮದ್ದಿಗಾಗಿ ಹುಡುಕುತ್ತಿದ್ದಾಳೆ. . . . ನರ್ಸ್‌ಗಳಾದ ನಮಗೆ ಹಂತಹಂತವಾಗಿ ಅವಳ ಪರಿಚಯವಾಯಿತು. ಅವಳು ನಮ್ಮ ಸಹಾಯವನ್ನು ನಿರಾಕರಿಸಲಿಲ್ಲ. ಅದಕ್ಕೆ ಬದಲಾಗಿ, ಆ್ಯನ್‌ಜೇಲಾಳ ಬಿಚ್ಚುಮನಸ್ಸು ನಮ್ಮ ಎಲ್ಲಾ ಕೆಲಸವನ್ನು ಸರಾಗವಾಗಿಸಿತು. ಅವಳನ್ನು ನೋಡಿಕೊಳ್ಳುವುದು ಒಂದು ಸಂತೋಷದ ವಿಷಯವಾಗಿತ್ತು, ಏಕೆಂದರೆ ಅದೊಂದು ಯಥಾರ್ಥ ಮಾನವ ಸಂಪರ್ಕ ಮತ್ತು ಪರಸ್ಪರ ಪ್ರಯೋಜನದ ಸಮಯವಾಗಿರುವುದೆಂದು ನಮಗೆ ತಿಳಿದಿತ್ತು. . . . ಅವಳ ರೋಗಕ್ಕೆ ಚಿಕಿತ್ಸೆ ನೀಡಲು ಅವಳ ಧರ್ಮವು ಒಂದು ಅಡ್ಡಿಯಾಗಲಿದೆ ಎಂದು ನಮಗೆ ಕೂಡಲೆ ತಿಳಿದುಬಂತು.” ಇದು ಅವನ ಅಭಿಪ್ರಾಯವಾಗಿತ್ತು. ಏಕೆಂದರೆ, ಆ್ಯನ್‌ಜೇಲಾಳಿಗೆ ರಕ್ತಪೂರಣಗಳನ್ನು ನೀಡಬೇಕೆಂದು ಅವನು ನೆನಸಿದನು, ಆದರೆ ಅವಳದನ್ನು ನಿರಾಕರಿಸಿದಳು.​—⁠ಅ. ಕೃತ್ಯಗಳು 15:​28, 29.

“ಆರೋಗ್ಯಾರೈಕೆ ತಜ್ಞರೋಪಾದಿ ನಾವು ಅವಳ ನಿರ್ಣಯವನ್ನು ಸಮ್ಮತಿಸುವುದಿಲ್ಲವೆಂದು ಆ್ಯನ್‌ಜೇಲಾಳಿಗೆ ತಿಳಿಸಿದೆವು. ಆದರೆ, ಅವಳಿಗೆ ಜೀವವು ಎಷ್ಟು ಪ್ರಾಮುಖ್ಯ ಎಂಬುದನ್ನು ನಾವು ಅವಳ ಸಹಾಯದಿಂದ ತಿಳಿದುಕೊಂಡೆವು. ಅಷ್ಟುಮಾತ್ರವಲ್ಲದೆ, ಅವಳಿಗೆ ಮತ್ತು ಅವಳ ಕುಟುಂಬದ ಸದಸ್ಯರಿಗೆ ಅವಳ ಧರ್ಮವು ಎಷ್ಟು ಪ್ರಾಮುಖ್ಯ ಎಂಬುದನ್ನು ಸಹ ನಾವು ತಿಳಿದೆವು. ಆ್ಯನ್‌ಜೇಲಾ ತನ್ನ ನಿರ್ಣಯವನ್ನು ಬಿಟ್ಟುಕೊಟ್ಟಿಲ್ಲ. ಮಾತ್ರವಲ್ಲ, ಅವಳು ಆ ರೋಗಕ್ಕೆ ಮಣಿಯಲೂ ಇಲ್ಲ. ಅವಳು ಧೈರ್ಯವಂತಳೂ ದೃಢನಿಶ್ಚಯವುಳ್ಳವಳೂ ಆಗಿದ್ದಾಳೆ. ಅವಳಿಗೆ ಬದುಕಬೇಕು, ಬದುಕಿರಲು ಹೋರಾಡಬೇಕು, ಮತ್ತು ಸದಾ ಬದುಕಬೇಕು ಎಂಬ ಬಯಕೆಯಿದೆ. ಅವಳು ತನ್ನ ದೃಢನಿರ್ಧಾರವನ್ನು, ತನ್ನ ಅಚಲ ವಿಶ್ವಾಸವನ್ನು ತಿಳಿಸಿದ್ದಾಳೆ. ಅನೇಕವೇಳೆ ನಮ್ಮಲ್ಲಿಲ್ಲದಂಥ ದೃಢನಿರ್ಧಾರವು ಅವಳಲ್ಲಿದೆ, ಮತ್ತು ಅವಳಲ್ಲಿರುವಷ್ಟು ದೃಢವಾದ ನಂಬಿಕೆಯು ನಮ್ಮಲ್ಲಿಲ್ಲ. . . . ತನ್ನ ಧರ್ಮವನ್ನು ಗೌರವಿಸುವುದರ ಮಹತ್ವವನ್ನು ಆ್ಯನ್‌ಜೇಲಾ ನಮಗೆ ಕಲಿಸಿದಳು. ಇದು ನಮ್ಮ ವೃತ್ತಿಪರ ನಿಯಮಗಳಿಗಿಂತ ಬಹಳ ಭಿನ್ನವಾಗಿದೆ. . . . ಆ್ಯನ್‌ಜೇಲಾ ನಮಗೆ ಕಲಿಸಿದ ವಿಷಯವು ಬಹಳ ಪ್ರಾಮುಖ್ಯವಾಗಿದೆ ಎಂಬುದನ್ನು ನಾವು ನಂಬುತ್ತೇವೆ, ಏಕೆಂದರೆ ನಾವು ಎಲ್ಲಾ ರೀತಿಯ ಜನರು, ಎಲ್ಲಾ ರೀತಿಯ ಸನ್ನಿವೇಶಗಳು, ಮತ್ತು ಎಲ್ಲಾ ರೀತಿಯ ಧರ್ಮಗಳೊಂದಿಗೆ ಸಂಪರ್ಕ ಹೊಂದಿರುತ್ತೇವೆ ಹಾಗೂ ನಾವು ಭೇಟಿಯಾಗುವ ಪ್ರತಿಯೊಬ್ಬರಿಂದಲೂ ಏನನ್ನಾದರೂ ಕಲಿಯಬಲ್ಲೆವು ಮತ್ತು ಅವರಿಗೆ ಏನನ್ನಾದರೂ ನೀಡಬಲ್ಲೆವು.”

ನಂತರ ಈ ಪತ್ರಿಕಾ ಲೇಖನವು, 1999ರಲ್ಲಿ ಮಂಜೂರು ಮಾಡಲ್ಪಟ್ಟ ‘ಇಟಲಿಯ ನರ್ಸ್‌ಗಳಿಗಾಗಿ ವೃತ್ತಿಪರ ನಿಯಮಗಳ ಸಂಕಲನ’ದ ಈ ಹೇಳಿಕೆಯ ಕಡೆಗೆ ಗಮನವನ್ನು ಸೆಳೆಯಿತು: “ನರ್ಸ್‌ ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ, ವ್ಯಕ್ತಿಯ ಧಾರ್ಮಿಕ, ನೈತಿಕ, ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹಾಗೂ ಕುಲ ಮತ್ತು ಲಿಂಗಜಾತಿಯನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು.” ಕೆಲವೊಮ್ಮೆ, ವೈದ್ಯರಿಗೆ ಮತ್ತು ನರ್ಸ್‌ಗಳಿಗೆ ಒಬ್ಬ ರೋಗಿಯ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು ಕಷ್ಟಕರವಾಗಿರಬಹುದು. ಆದುದರಿಂದ, ಹಾಗೆ ಗೌರವಿಸಲು ಸಿದ್ಧರಿರುವ ವೈದ್ಯರು ಮತ್ತು ನರ್ಸ್‌ಗಳನ್ನು ಒಬ್ಬನು ನಿಜವಾಗಿಯೂ ಮಾನ್ಯಮಾಡಬೇಕು.

ಯೆಹೋವನ ಸಾಕ್ಷಿಗಳು ತಮ್ಮ ಆರೋಗ್ಯ ಮತ್ತು ವೈದ್ಯಕೀಯ ಆರೈಕೆಯ ಕುರಿತಾಗಿ ಮಾಡುವ ನಿರ್ಣಯಗಳು, ಬಹಳ ಜಾಗರೂಕ ಗಮನವನ್ನು ನೀಡಿ ಮಾಡಿದವುಗಳಾಗಿವೆ. ಶಾಸ್ತ್ರವಚನಗಳು ಏನನ್ನುತ್ತವೋ ಅವುಗಳನ್ನು ಅವರು ಗಂಭೀರವಾಗಿ ಪರಿಗಣಿಸುತ್ತಾರೆ, ಮತ್ತು ಆ್ಯನ್‌ಜೇಲಾಳ ವಿಷಯದಲ್ಲಿ ದೃಷ್ಟಾಂತಿಸಲ್ಪಟ್ಟಿರುವಂತೆ ಅವರು ಧರ್ಮಾಂಧರಲ್ಲ. (ಫಿಲಿಪ್ಪಿ 4:5) ಲೋಕದಾದ್ಯಂತ, ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಆರೋಗ್ಯಾರೈಕೆಯ ವೃತ್ತಿಗೆ ಸೇರಿದವರು ತಮ್ಮ ಸಾಕ್ಷಿ ರೋಗಿಗಳ ಮನಸ್ಸಾಕ್ಷಿಯನ್ನು ಗೌರವಿಸಲು ಸಿದ್ಧರಿದ್ದಾರೆ.