ನಿಮ್ಮ ಮಕ್ಕಳನ್ನು ತರಬೇತುಗೊಳಿಸಲು ಬೈಬಲ್ ನಿಮಗೆ ಸಹಾಯಮಾಡಬಲ್ಲದೋ?
ನಿಮ್ಮ ಮಕ್ಕಳನ್ನು ತರಬೇತುಗೊಳಿಸಲು ಬೈಬಲ್ ನಿಮಗೆ ಸಹಾಯಮಾಡಬಲ್ಲದೋ?
ಆರ್ಕಿಡ್ ಬಹಳ ಸುಂದರವಾದ ಒಂದು ಪುಷ್ಪ. ಆದರೆ ಅದನ್ನು ಬೆಳೆಸುವುದು ಬಹಳ ಕಷ್ಟಕರ. ನೀವು ಅದನ್ನು ಯಶಸ್ವಿಯಾಗಿ ಬೆಳೆಸಬೇಕಾದರೆ, ಉಷ್ಣತೆ, ಬೆಳಕು, ಮತ್ತು ಹೂಕುಂಡದ ಗಾತ್ರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮಣ್ಣು ಮತ್ತು ಗೊಬ್ಬರವು ಸೂಕ್ತವಲ್ಲದಿದ್ದರೆ ಆರ್ಕಿಡ್ ಸುಲಭವಾಗಿ ಬಾಧಿಸಲ್ಪಡುತ್ತದೆ. ಅಷ್ಟುಮಾತ್ರವಲ್ಲದೆ, ಅದು ರೋಗ ಮತ್ತು ಕೀಟಾಣುಗಳಿಂದ ಸುಲಭವಾಗಿ ಹಾನಿಗೊಳಗಾಗುತ್ತದೆ. ಹೀಗಿರುವುದರಿಂದ, ಆರ್ಕಿಡ್ ಬೆಳೆಸುವ ಮೊದಲ ಪ್ರಯತ್ನದಲ್ಲಿ ಒಬ್ಬನು ವಿಫಲನಾಗುವುದು ಸರ್ವಸಾಮಾನ್ಯ.
ಮಕ್ಕಳನ್ನು ಬೆಳೆಸುವುದು ಅದಕ್ಕಿಂತ ಹೆಚ್ಚು ಕಷ್ಟಕರವೂ ಜಟಿಲವೂ ಆಗಿದೆ ಮತ್ತು ಅದಕ್ಕೆ ಸಹ ಜಾಗರೂಕ ಗಮನ ಅಗತ್ಯ. ಆದುದರಿಂದ, ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ತಮ್ಮಲ್ಲಿ ಏನೋ ಕೊರತೆಯಿದೆಯೆಂದು ಹೆತ್ತವರಿಗೆ ಅನಿಸುವುದು ಸರ್ವಸಾಮಾನ್ಯ. ಆರ್ಕಿಡ್ ಬೆಳೆಸುವ ವ್ಯಕ್ತಿಗೆ, ಅದನ್ನು ಬೆಳೆಸುವುದರಲ್ಲಿ ಪ್ರವೀಣನಾಗಿರುವಂಥ ವ್ಯಕ್ತಿಯಿಂದ ಸಲಹೆಯನ್ನು ಪಡೆಯುವ ಅಗತ್ಯವಿರುವಂತೆಯೇ, ಅನೇಕ ಹೆತ್ತವರು ತಮಗೆ ಸಹಾಯದ ಅಗತ್ಯವಿದೆ ಎಂಬುದನ್ನು ಮನಗಾಣುತ್ತಾರೆ. ನಿಶ್ಚಯವಾಗಿಯೂ, ಪ್ರತಿಯೊಬ್ಬ ಹೆತ್ತವರಿಗೂ ಅತ್ಯುತ್ತಮ ಮಾರ್ಗದರ್ಶನವನ್ನು ಹೊಂದುವ ಬಯಕೆಯಿರುತ್ತದೆ. ಆದರೆ ಅಂಥ ಮಾರ್ಗದರ್ಶನವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
ಬೈಬಲು ಮಕ್ಕಳನ್ನು ಬೆಳೆಸುವುದರ ಕುರಿತಾದ ಕೈಪಿಡಿಯಲ್ಲದಿದ್ದರೂ, ಈ ವಿಷಯಕ್ಕೆ ಸಂಬಂಧಿಸಿದ ಬಹಳಷ್ಟು ಪ್ರಾಯೋಗಿಕ ಸಲಹೆಸೂಚನೆಯನ್ನು ಅದರಲ್ಲಿ ಬರೆಯುವಂತೆ ಸೃಷ್ಟಿಕರ್ತನು ಅದರ ಬರಹಗಾರರನ್ನು ಪ್ರೇರೇಪಿಸಿದ್ದಾನೆ. ಅನೇಕವೇಳೆ ಅಲಕ್ಷಿಸಲ್ಪಡುತ್ತದೆ ಎಂದು ಹೆಚ್ಚಿನ ಜನರು ಭಾವಿಸುವಂಥ ಅಪೇಕ್ಷಣೀಯ ಗುಣಗಳನ್ನು ಮಕ್ಕಳಲ್ಲಿ ಬೇರೂರಿಸುವಂತೆ ಬೈಬಲ್ ಒತ್ತಿಹೇಳುತ್ತದೆ. (ಎಫೆಸ 4:22-24) ಈ ರೀತಿಯಲ್ಲಿ ಶಾಸ್ತ್ರೀಯ ಸಲಹೆಯು, ಸಮತೂಕ ಶಿಕ್ಷಣದ ಒಂದು ಮುಖ್ಯ ಅಂಶವನ್ನು ನೀಡುತ್ತದೆ. ಇಂಥ ಸಲಹೆಯು, ಇದನ್ನು ಅನ್ವಯಿಸಿದ ಸಾವಿರಾರು ಜನರಿಗೆ—ಅವರು ಜೀವಿಸುತ್ತಿದ್ದ ಸಮಯ ಅಥವಾ ಸಾಂಸ್ಕೃತಿಕ ಹಿನ್ನೆಲೆ ಯಾವುದೇ ಆಗಿರಲಿ—ಈಗಾಗಲೇ ಪ್ರಯೋಜನವನ್ನು ತಂದಿದೆ. ಆದುದರಿಂದ, ಶಾಸ್ತ್ರೀಯ ಸಲಹೆಯನ್ನು ಅನುಸರಿಸುವುದು ನಿಮ್ಮ ಮಕ್ಕಳನ್ನು ಯಶಸ್ವಿಕರವಾಗಿ ತರಬೇತುಗೊಳಿಸಲು ಸಹಾಯಮಾಡಬಲ್ಲದು.
ಹೆತ್ತವರ ಮಾದರಿ—ಅತ್ಯುತ್ತಮ ಶಿಕ್ಷಣ
“ಹೀಗಿರಲಾಗಿ ಮತ್ತೊಬ್ಬನಿಗೆ ಉಪದೇಶಮಾಡುವ ನೀನು ನಿನಗೆ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ? ಹಾದರ ಮಾಡಬಾರದೆಂದು ಹೇಳುವ ನೀನು ಹಾದರ ಮಾಡುತ್ತೀಯೋ?”—ರೋಮಾಪುರ 2:21, 22.
ಸೋಲ್‌ನ ಶಿಕ್ಷಣ ಸಮಿತಿಯ ಒಬ್ಬ ಅಧ್ಯಕ್ಷರು ಹೇಳಿದ್ದು: “ಮಕ್ಕಳ ಅತ್ಯುತ್ತಮ ಶಿಕ್ಷಣವು, ನಡೆನುಡಿಗಳಲ್ಲಿನ ಮಾದರಿಯೇ ಆಗಿದೆ.” ನಡೆನುಡಿಗಳಲ್ಲಿ ಹೆತ್ತವರು ಅತ್ಯುತ್ತಮ ಮಾದರಿಯನ್ನು ಇಡದೆ, ಮಕ್ಕಳಿಗೆ ನಿರ್ದಿಷ್ಟ ಸಲಹೆಯನ್ನು ನೀಡುವುದಾದರೆ, ಕೂಡಲೆ ಮಕ್ಕಳು ತಮ್ಮ ಹೆತ್ತವರು ಕಪಟಿಗಳೆಂದು ನೆನಸುವರು. ಆಗ ಹೆತ್ತವರ ಮಾತುಗಳಿಗೂ ಮೌಲ್ಯವಿರುವುದಿಲ್ಲ. ಉದಾಹರಣೆಗೆ, ಹೆತ್ತವರು ತಮ್ಮ ಮಕ್ಕಳಿಗೆ ಪ್ರಾಮಾಣಿಕತೆಯನ್ನು ಕಲಿಸಲು ಬಯಸುವುದಾದರೆ, ಮೊದಲಾಗಿ ಅವರೇ ಪ್ರಾಮಾಣಿಕರಾಗಿರಬೇಕು. ಆದರೆ, ಕೆಲವು ಹೆತ್ತವರು ತಮಗೆ ಒಂದು ನಿರ್ದಿಷ್ಟ ಟೆಲಿಫೋನ್ ಕರೆಗೆ ಉತ್ತರಿಸಲು ಇಷ್ಟವಿಲ್ಲದಿರುವಾಗ, ತಮ್ಮ ಮಗನಿಗೆ “ಅಪ್ಪ (ಅಥವಾ ಅಮ್ಮ) ಮನೆಯಲ್ಲಿಲ್ಲ” ಎಂದು ಹೇಳುವಂತೆ ತಿಳಿಸುವುದು ಸರ್ವಸಾಮಾನ್ಯವಾಗಿದೆ. ಹಾಗೆ ಮಾಡುವಂತೆ ಮಕ್ಕಳಿಗೆ ಹೇಳಲ್ಪಡುವಾಗ, ಅವರಲ್ಲಿ ಪೇಚಾಟ ಮತ್ತು ಗಲಿಬಿಲಿ ಉಂಟಾಗುತ್ತದೆ. ಕ್ರಮೇಣ, ಆ ಬಾಲಕನು ಒಂದು ಕಷ್ಟಕರ ಸನ್ನಿವೇಶದಲ್ಲಿರುವಾಗ ಯಾವುದೇ ಅಪರಾಧಭಾವವಿಲ್ಲದೆ ಸುಳ್ಳು ಹೇಳಲು ಆರಂಭಿಸಬಹುದು. ಆದುದರಿಂದ, ತಮ್ಮ ಮಕ್ಕಳು ಪ್ರಾಮಾಣಿಕ ವ್ಯಕ್ತಿಗಳಾಗಬೇಕೆಂದು ಹೆತ್ತವರು ನಿಜವಾಗಿಯೂ ಬಯಸುವುದಾದರೆ, ಮೊದಲಾಗಿ ಅವರೇ ಪ್ರಾಮಾಣಿಕವಾಗಿ ಮಾತನಾಡುವವರೂ ಅದಕ್ಕನುಸಾರ ಕ್ರಿಯೆಗೈಯುವವರೂ ಆಗಿರಬೇಕು.
ಗೌರವಪೂರ್ವಕವಾಗಿ ಮಾತನಾಡುವಂತೆ ನಿಮ್ಮ ಮಕ್ಕಳನ್ನು ತರಬೇತುಗೊಳಿಸಲು ನೀವು ಬಯಸುತ್ತೀರೋ? ಹಾಗಿರುವಲ್ಲಿ, ನೀವು ಒಂದು ಉತ್ತಮ ಮಾದರಿಯನ್ನು ಇಡಬೇಕು. ಆಗ ನಿಮ್ಮ ಮಕ್ಕಳು ಬೇಗನೆ ನಿಮ್ಮನ್ನು ಅನುಕರಿಸುವರು. ನಾಲ್ಕು ಮಕ್ಕಳ ತಂದೆಯಾಗಿರುವ ಸೋನ್-ಸಿಕ್ ಹೇಳುವುದು: “ನಾನು ಹಾಗೂ ನನ್ನ ಪತ್ನಿ, ಒರಟಾದ ಮಾತುಗಳನ್ನು ಉಪಯೋಗಿಸಬಾರದೆಂದು ನಿರ್ಣಯಿಸಿದೆವು. ನಾವು ಒಬ್ಬರಿಗೊಬ್ಬರು ಗೌರವವನ್ನು ತೋರಿಸಿದೆವು ಮತ್ತು ಗಲಾತ್ಯ 6:7ರಲ್ಲಿ ಬೈಬಲ್ ತಿಳಿಸುವುದು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” ತಮ್ಮ ಮಕ್ಕಳಿಗೆ ಉತ್ತಮ ನೈತಿಕ ಮಟ್ಟಗಳಿರಬೇಕೆಂದು ಬಯಸುವ ಹೆತ್ತವರು, ಮೊದಲಾಗಿ ತಾವೇ ಅಂಥ ಮಟ್ಟಗಳಿಗೆ ಅನುಸಾರವಾಗಿ ಜೀವಿಸುತ್ತಿದ್ದೇವೆಂದು ತೋರಿಸಬೇಕು.
ನಮಗೆ ಕಿರಿಕಿರಿಯಾದಾಗ ಇಲ್ಲವೆ ಕೋಪಬಂದಾಗಲೂ ಕಿರಿಚಾಡಲಿಲ್ಲ. ಬರಿಯ ಮಾತುಗಳಿಗಿಂತ ಉತ್ತಮ ಮಾದರಿಯು ಎಷ್ಟೋ ಪ್ರಭಾವಕಾರಿಯಾಗಿತ್ತು. ನಮ್ಮ ಮಕ್ಕಳು ಇತರರೊಂದಿಗೆ ಗೌರವಪೂರ್ವಕವಾಗಿ ಮತ್ತು ವಿನಯದಿಂದ ಮಾತಾಡುವುದನ್ನು ನೋಡುವಾಗ ನಮಗೆ ಬಹಳ ಸಂತೋಷವಾಗುತ್ತದೆ.”ಸಂವಾದದ ದ್ವಾರವನ್ನು ತೆರೆದಿಡಿರಿ
“[ದೇವರ ಆಜ್ಞೆಗಳನ್ನು] ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:7.
ಓವರ್‌ಟೈಮ್ ಕೆಲಸಮಾಡುವ ಪ್ರವೃತ್ತಿಯು ಈಗ ಹೆಚ್ಚಾಗುತ್ತಾ ಇದೆ. ಗಂಡಹೆಂಡತಿಯರಿಬ್ಬರೂ ಉದ್ಯೋಗದಲ್ಲಿರುವಾಗ, ಇದು ಮಕ್ಕಳ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುತ್ತದೆ. ಈಗ, ಹೆಚ್ಚಿನ ಹೆತ್ತವರು ತಮ್ಮ ಮಕ್ಕಳೊಂದಿಗೆ ಕಳೆಯುವ ಸಮಯವು ಕಡಿಮೆಯಾಗುತ್ತಾ ಇದೆ. ಮನೆಗೆ ಬಂದೊಡನೆ ಹೆತ್ತವರಿಗೆ ಮನೆಗೆಲಸಗಳನ್ನು ಮತ್ತು ಇನ್ನಿತರ ಸಣ್ಣಪುಟ್ಟ ಕೆಲಸಗಳನ್ನು ಮಾಡಲಿಕ್ಕಿರುತ್ತದೆ, ಆದುದರಿಂದ ಅವರು ತೀರಾ ದಣಿದುಹೋಗುತ್ತಾರೆ. ಅಂಥ ಪರಿಸ್ಥಿತಿಗಳಲ್ಲಿ ನಿಮ್ಮ ಮಕ್ಕಳೊಂದಿಗೆ ಉತ್ತಮ ಸಂವಾದವನ್ನು ನೀವು ಹೇಗೆ ಕಾಪಾಡಿಕೊಳ್ಳಬಲ್ಲಿರಿ? ನೀವೂ ನಿಮ್ಮ ಮಕ್ಕಳೂ ಒಟ್ಟಾಗಿ ಮನೆಗೆಲಸಗಳನ್ನು ಮಾಡುವುದಾದರೆ, ಆಗ ಸಂಭಾಷಣೆಗಾಗಿ ಸಂದರ್ಭಗಳು ಸಿಗಬಹುದು. ಒಂದು ಕುಟುಂಬದ ತಲೆಯು, ತನ್ನ ಮಕ್ಕಳೊಂದಿಗೆ ಸಂಭಾಷಿಸಲು ಹೆಚ್ಚು ಸಮಯವನ್ನು ಪಡೆದುಕೊಳ್ಳುವ ಉದ್ದೇಶದಿಂದ ಟಿವಿಯನ್ನು ಮಾರಿಬಿಟ್ಟನು. ಅವನು ಹೇಳಿದ್ದು: “ಆರಂಭದಲ್ಲಿ ಮಕ್ಕಳಿಗೆ ಬೇಸರವಾಗುತ್ತಿತ್ತು, ಆದರೆ ನಾನು ಅವರಿಗೆ ಒಗಟುಗಳನ್ನು ಹೇಳಿ, ಅವರು ಅದರ ಅರ್ಥವನ್ನು ಬಿಡಿಸುವಂತೆ ಮಾಡಿದಾಗ ಮತ್ತು ಆಸಕ್ತಿದಾಯಕ ಪುಸ್ತಕಗಳನ್ನು ಅವರೊಂದಿಗೆ ಚರ್ಚಿಸಿದಾಗ ಅವರು ಟಿವಿ ಇಲ್ಲದೆ ಜೀವಿಸುವುದಕ್ಕೆ ಹೊಂದಿಕೊಂಡರು.”
ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ತಮ್ಮ ಹೆತ್ತವರೊಂದಿಗೆ ಸಂವಾದಮಾಡುವ ರೂಢಿಯನ್ನು ಮಾಡಿಸುವುದು ಪ್ರಾಮುಖ್ಯವಾಗಿದೆ. ಇಲ್ಲವಾದರೆ, ಮಕ್ಕಳು ಹದಿಹರೆಯದವರಾಗಿ ಪ್ರಾಯಶಃ ಸಮಸ್ಯೆಗಳನ್ನು ಎದುರಿಸುವಾಗ, ಅವುಗಳ ಬಗ್ಗೆ ಮಾತಾಡಸಾಧ್ಯವಿರುವ ಸ್ನೇಹಿತರಂತೆ ಅವರು ತಮ್ಮ ಹೆತ್ತವರನ್ನು ಪರಿಗಣಿಸುವುದಿಲ್ಲ. ಅವರು ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ತೋಡಿಕೊಳ್ಳುವಂತೆ ನೀವು ಅವರಿಗೆ ಹೇಗೆ ಸಹಾಯಮಾಡಬಲ್ಲಿರಿ? ಜ್ಞಾನೋಕ್ತಿ 20:5 ತಿಳಿಸುವುದು: “ಮನುಷ್ಯನ ಹೃದಯಸಂಕಲ್ಪವು ಆಳವಾದ [ಬಾವಿಯ] ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.” “ನೀನೇನು ನೆನಸುತ್ತಿ?” ಎಂಬಂಥ ದೃಷ್ಟಿಕೋನ ಪ್ರಶ್ನೆಗಳನ್ನು ಉಪಯೋಗಿಸುವ ಮೂಲಕ, ಮಕ್ಕಳು ತಮ್ಮ ಯೋಚನೆಗಳನ್ನು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವಂತೆ ಹೆತ್ತವರು ಉತ್ತೇಜಿಸಸಾಧ್ಯವಿದೆ.
ನಿಮ್ಮ ಮಗನು ಒಂದು ಗಂಭೀರವಾದ ತಪ್ಪನ್ನು ಮಾಡುವುದಾದರೆ ನೀವೇನು ಮಾಡುವಿರಿ? ಆ ಸಮಯದಲ್ಲಿ ಅವನಿಗೆ ನಿಮ್ಮ ದಯಾಭರಿತ ಪರಿಗಣನೆಯು ಬಹಳ ಅಗತ್ಯವಾಗಿದೆ. ನಿಮ್ಮ ಮಗನಿಗೆ ಕಿವಿಗೊಡುವಾಗ ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಿರಿ. ಅಂಥ ಪರಿಸ್ಥಿತಿಯಲ್ಲಿ ತಾನು ಹೇಗೆ ವ್ಯವಹರಿಸುತ್ತೇನೆ ಎಂಬುದರ ಕುರಿತು ಒಬ್ಬ ತಂದೆಯು ಹೀಗೆ ತಿಳಿಸುತ್ತಾನೆ: “ಮಕ್ಕಳು ತಪ್ಪುಮಾಡಿದಾಗ, ನಾನು ವಿಪರೀತವಾಗಿ ಪ್ರತಿಕ್ರಿಯಿಸದಿರಲು ಪ್ರಯತ್ನಿಸುತ್ತೇನೆ. ಮೊದಲು ನಾನು, ಅವರು ಏನು ಹೇಳುತ್ತಾರೋ ಅದನ್ನು ಸುಮ್ಮನೆ ಕುಳಿತುಕೊಂಡು ಆಲಿಸುತ್ತೇನೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ನನಗೆ ಕೋಪವನ್ನು ತಡೆಯಲು ಕಷ್ಟವಾದಾಗ, ನಾನು ಸ್ವಲ್ಪ ಹೊತ್ತು ಸುಮ್ಮನಿರುತ್ತೇನೆ ನಂತರ ನಾನಾಗಿಯೇ ಶಾಂತನಾಗುತ್ತೇನೆ.” ನೀವು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಕಿವಿಗೊಡುವುದಾದರೆ, ನೀವು ನೀಡುವ ತಿದ್ದುಪಾಟನ್ನು ಅವರು ಬೇಗನೆ ಸ್ವೀಕರಿಸುವರು.
ಪ್ರೀತಿಯ ಮೇಲೆ ಆಧಾರಿತವಾದ ಶಿಸ್ತು ಅತ್ಯಾವಶ್ಯಕ
“ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ [“ಶಿಸ್ತನ್ನೂ,” NW] ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿ ಸಲಹಿರಿ.”—ಎಫೆಸ 6:4.
ಉತ್ತಮ ಫಲಿತಾಂಶಗಳನ್ನು ಪಡೆಯಬೇಕಾದರೆ, ನೀವು ಪ್ರೀತಿಪರ ಶಿಸ್ತನ್ನು ನೀಡುವ ವಿಧವು ಪ್ರಾಮುಖ್ಯವಾಗಿದೆ. ಹೆತ್ತವರು ತಮ್ಮ ಮಕ್ಕಳಿಗೆ ‘ಕೋಪವನ್ನೆಬ್ಬಿಸಲು’ ಹೇಗೆ ಸಾಧ್ಯ? ಶಿಸ್ತು ತಪ್ಪಿನ ಗಂಭೀರತೆಗೆ ಅನುಸಾರವಾಗಿರದೆ ಇದ್ದಲ್ಲಿ ಅಥವಾ ಅದನ್ನು ಅತಿ ಟೀಕಾತ್ಮಕ ರೀತಿಯಲ್ಲಿ ನೀಡುವಲ್ಲಿ ಮಕ್ಕಳು ಅದನ್ನು ನಿರಾಕರಿಸುವರು. ಎಲ್ಲಾ ಸನ್ನಿವೇಶಗಳಲ್ಲೂ ಶಿಸ್ತು ಪ್ರೀತಿಯಿಂದ ನೀಡಲ್ಪಡಬೇಕು. (ಜ್ಞಾನೋಕ್ತಿ 13:24) ನೀವು ನಿಮ್ಮ ಮಕ್ಕಳಿಗೆ ಶಿಸ್ತಿನ ಕಾರಣಗಳನ್ನು ಕೊಟ್ಟು ಮನವೊಲಿಸುವ ರೀತಿಯಲ್ಲಿ ಮಾತಾಡುವುದಾದರೆ, ಆಗ ಅವರು ನೀವು ಶಿಸ್ತನ್ನು ವಿಧಿಸುವುದು ಅವರ ಮೇಲಿರುವ ಪ್ರೀತಿಯ ಕಾರಣದಿಂದಲೇ ಎಂಬುದನ್ನು ಅರಿತುಕೊಳ್ಳುವರು.—ಜ್ಞಾನೋಕ್ತಿ 22:15; 29:19.
ಇನ್ನೊಂದು ಬದಿಯಲ್ಲಿ, ಮಕ್ಕಳು ತಮ್ಮ ತಪ್ಪು ನಡವಳಿಕೆಯ
ಅನಪೇಕ್ಷಣೀಯ ಪರಿಣಾಮಗಳನ್ನು ಅನುಭವಿಸುವಂತೆ ಬಿಡುವುದು ಉತ್ತಮ. ಉದಾಹರಣೆಗೆ, ನಿಮ್ಮ ಮಗನು ಇನ್ನೊಬ್ಬರ ವಿರುದ್ಧ ತಪ್ಪು ಮಾಡಿರುವಲ್ಲಿ, ಅವನು ಹೋಗಿ ಕ್ಷಮೆಯನ್ನು ಕೇಳುವಂತೆ ನೀವು ಒತ್ತಾಯಿಸಸಾಧ್ಯವಿದೆ. ಅವನು ಕುಟುಂಬದ ನಿಯಮಗಳನ್ನು ಮುರಿಯುವಲ್ಲಿ, ಕೆಲವು ನಿರ್ದಿಷ್ಟ ಆನಂದದಾಯಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನೀವು ಅವನನ್ನು ತಡೆಯಬಹುದು. ಈ ಮೂಲಕ, ಆ ನಿಯಮಗಳಿಗೆ ಅನುಸಾರ ನಡೆಯುವ ಪ್ರಮುಖತೆಯನ್ನು ನೀವು ಅವನಿಗೆ ಒತ್ತಿಹೇಳಿದಂತಾಗುತ್ತದೆ.ಶಿಸ್ತನ್ನು ಸರಿಯಾದ ಸಮಯದಲ್ಲಿ ವಿಧಿಸುವುದು ಉತ್ತಮ. ಪ್ರಸಂಗಿ 8:11 ತಿಳಿಸುವುದು: “ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವದು.” ತದ್ರೀತಿಯಲ್ಲಿ, ಅನೇಕ ಮಕ್ಕಳು ಸಹ ತಪ್ಪುಗಳನ್ನು ಮಾಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆಯೋ ಎಂಬುದನ್ನು ನೋಡಲು ಪ್ರಯತ್ನಿಸುತ್ತಾರೆ. ಆದುದರಿಂದ, ಯಾವುದೇ ಒಂದು ನಿರ್ದಿಷ್ಟ ತಪ್ಪನ್ನು ಮಾಡಿದರೆ ಅದಕ್ಕೆ ಶಿಕ್ಷೆಯು ಸಿಗುತ್ತದೆ ಎಂದು ನೀವು ಮೊದಲೇ ಎಚ್ಚರಿಸಿರುವಲ್ಲಿ, ಆ ಶಿಕ್ಷೆಯನ್ನು ನೀಡಲು ತಪ್ಪಬೇಡಿ.
ಹಿತಕರವಾದ ಮನೋರಂಜನೆಗೆ ಬೆಲೆಯಿದೆ
‘ನಗುವ ಸಮಯ, ಕುಣಿದಾಡುವ ಸಮಯ ಉಂಟು.’—ಪ್ರಸಂಗಿ 3:1, 4.
ಮಗುವಿನ ಮನಸ್ಸು ಮತ್ತು ದೇಹದ ಬೆಳವಣಿಗೆಗೆ ವಿರಾಮದ ಸಮಯ ಹಾಗೂ ಹಿತಕರವೂ ಸಮತೂಕವೂ ಆದ ಮನೋರಂಜನೆ ಅಗತ್ಯವಾಗಿದೆ. ಹೆತ್ತವರು ತಮ್ಮ ಮಕ್ಕಳೊಂದಿಗೆ ಮನೋರಂಜನೆಯಲ್ಲಿ ಆನಂದಿಸುವಾಗ, ಕುಟುಂಬ ಬಂಧಗಳು ಇನ್ನೂ ಹೆಚ್ಚು ಬಲಗೊಳ್ಳುತ್ತವೆ ಮತ್ತು ಮಕ್ಕಳಿಗೆ ಭದ್ರತೆಯ ಅನಿಸಿಕೆಯಾಗುತ್ತದೆ. ಕುಟುಂಬದ ಸದಸ್ಯರು ಒಟ್ಟಾಗಿ ಯಾವ ರೀತಿಯ ಮನೋರಂಜನೆಯಲ್ಲಿ ಆನಂದಿಸಸಾಧ್ಯವಿದೆ? ಇದರ ಕುರಿತು ಆಲೋಚಿಸಲು ನೀವು ಸ್ವಲ್ಪ ಸಮಯವನ್ನು ಬದಿಗಿರಿಸುವುದಾದರೆ, ನೀವು ಒಟ್ಟಾಗಿ ಮಾಡಬಲ್ಲ ಅನೇಕ ಹಿತಕರ ವಿಷಯಗಳಿವೆ ಎಂಬುದನ್ನು ಕಂಡುಕೊಳ್ಳುವಿರಿ. ಕ್ಯಾರಮ್, ಕ್ರಿಕೆಟ್, ಬಾಡ್ಮಿಂಟನ್ ಮುಂತಾದ ಆಟಗಳನ್ನು ಆಡುವುದು, ಮತ್ತು ಪಾರ್ಕಿಗೆ ಹೋಗುವುದು ಈ ಮುಂತಾದ ಚಟುವಟಿಕೆಗಳಿವೆ. ಅಷ್ಟುಮಾತ್ರವಲ್ಲದೆ, ಕುಟುಂಬವು ಒಟ್ಟಾಗಿ ಸಂಗೀತದ ಉಪಕರಣಗಳನ್ನು ನುಡಿಸುವಾಗ ಸಿಗುವ ಆನಂದದ ಕುರಿತು ಸ್ವಲ್ಪ ಊಹಿಸಿರಿ. ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸುವ ಸಲುವಾಗಿ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡುವುದರಿಂದ ಅನೇಕ ಸವಿನೆನಪುಗಳು ಫಲಿಸಸಾಧ್ಯವಿದೆ.
ಅಂಥ ಸಂದರ್ಭಗಳಲ್ಲಿ, ಹೆತ್ತವರು ತಮ್ಮ ಮಕ್ಕಳಲ್ಲಿ ಮನೋರಂಜನೆಯ ಕುರಿತು ಸಮತೂಕ ದೃಷ್ಟಿಕೋನವನ್ನು ತುಂಬಿಸಬಲ್ಲರು. ಮೂರು ಗಂಡುಮಕ್ಕಳಿರುವ ಕ್ರೈಸ್ತ ಪುರುಷನೊಬ್ಬನು ಹೇಳುವುದು: “ಸಾಧ್ಯವಾದಲ್ಲಿ ನಾನು ನನ್ನ ಮಕ್ಕಳ ಮನೋರಂಜನೆಯಲ್ಲಿ ಭಾಗವಹಿಸುತ್ತೇನೆ. ಉದಾಹರಣೆಗೆ, ಅವರು ಕಂಪ್ಯೂಟರ್ ಆಟಗಳನ್ನು ಆಡುವಾಗ, ಅದನ್ನು ಆಡುವುದು ಹೇಗೆಂದು ಅವರನ್ನು ಕೇಳುತ್ತೇನೆ. ಅವರು ಬಹಳ ಉತ್ಸಾಹದಿಂದ ಅದನ್ನು ನನಗೆ ವಿವರಿಸುವಾಗ, ಅಹಿತಕರ ಮನೋರಂಜನೆಯ ಅಪಾಯದ ಕುರಿತು ಅವರೊಂದಿಗೆ ಮಾತನಾಡಲು ಆ ಸಂದರ್ಭವನ್ನು ಉಪಯೋಗಿಸುತ್ತೇನೆ. ಅವರು ಅಯೋಗ್ಯವಾದ ಮನೋರಂಜನೆಯಲ್ಲಿ ಒಳಗೂಡದಿರುವುದನ್ನು ನಾನು ಗಮನಿಸಿದ್ದೇನೆ.” ಹೌದು, ಕುಟುಂಬ ಮನೋರಂಜನೆಯಿಂದ ಸಂತೋಷಪಡುವ ಮಕ್ಕಳು, ಹಿಂಸಾಚಾರ, ಅನೈತಿಕತೆ, ಮತ್ತು ಮಾದಕಪದಾರ್ಥದ ದುರುಪಯೋಗವನ್ನು ಪ್ರದರ್ಶಿಸುವ ಟಿವಿ ಕಾರ್ಯಕ್ರಮಗಳು, ವಿಡಿಯೊಗಳು, ಚಲನಚಿತ್ರಗಳು, ಮತ್ತು ಇಂಟರ್‌ನೆಟ್ ಆಟಗಳನ್ನು ಆಶ್ರಯಿಸುವುದು ತುಂಬ ವಿರಳ.
ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿರಿ
“ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.
ನಾಲ್ಕು ಮಂದಿ ಮಕ್ಕಳನ್ನು ಯಶಸ್ವಿಯಾಗಿ ಬೆಳೆಸಿರುವ ಒಬ್ಬ ಕ್ರೈಸ್ತ ತಂದೆಯು ಹೇಳುವುದು: “ಅವರ ಸ್ನೇಹಿತರ ಆಯ್ಕೆಯ ಮಹತ್ವವನ್ನು ಎಷ್ಟು ಒತ್ತಿಹೇಳಿದರೂ ಸಾಲದು. ಒಬ್ಬನೇ ಒಬ್ಬ ಕೆಟ್ಟ ಸ್ನೇಹಿತನು, ನೀವು ಮಾಡಿದ ಎಲ್ಲಾ ಕೆಲಸವನ್ನು ಧ್ವಂಸಗೊಳಿಸಬಲ್ಲನು.” ತನ್ನ ಮಕ್ಕಳು ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಅವನು ಜಾಣ್ಮೆಯಿಂದ ಈ ರೀತಿಯ ಕೆಲವು ಪ್ರಶ್ನೆಗಳನ್ನು ಅವರಿಗೆ ಕೇಳುತ್ತಿದ್ದನು: ನಿನ್ನ ಆಪ್ತ ಸ್ನೇಹಿತನು ಯಾರು? ನೀನು ಯಾಕೆ ಅವನನ್ನು ಇಷ್ಟಪಡುತ್ತೀ? ಅವನಲ್ಲಿರುವ ಯಾವ ಗುಣವನ್ನು ನೀನು ಅನುಕರಿಸಲು ಬಯಸುತ್ತೀ? ಇನ್ನೊಬ್ಬ ತಂದೆಯು ತನ್ನ ಮಕ್ಕಳು ಅವರ ಆಪ್ತ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬರುವಂತೆ ಏರ್ಪಾಡುಗಳನ್ನು ಮಾಡುತ್ತಾನೆ. ಹೀಗೆ ಮಾಡುವ ಮೂಲಕ, ಅವನು ಅವರನ್ನು ಗಮನಿಸಬಲ್ಲನು ಮತ್ತು ತನ್ನ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಬಲ್ಲನು.
ಇದಕ್ಕೆ ಕೂಡಿಸಿ, ಮಕ್ಕಳು ತಮ್ಮ ಸಮವಯಸ್ಕರೊಂದಿಗೆ ಮಾತ್ರವಲ್ಲದೆ ಪ್ರಾಯಸ್ಥರೊಂದಿಗೂ ಸ್ನೇಹವನ್ನು ಬೆಳೆಸಿಕೊಳ್ಳಸಾಧ್ಯವಿದೆ ಎಂಬುದನ್ನು ಅವರಿಗೆ ಕಲಿಸುವುದು ಪ್ರಾಮುಖ್ಯವಾಗಿದೆ. ಮೂರು ಗಂಡುಮಕ್ಕಳ ತಂದೆಯಾದ ಬೆಮ್-ಸೆನ್ ಹೇಳುವುದು: “ಸ್ನೇಹಿತರು ಸಮವಯಸ್ಕರೇ ಆಗಿರಬೇಕಾದ ಅಗತ್ಯವಿಲ್ಲ, ಬೈಬಲಿನಲ್ಲಿ ತಿಳಿಸಿರುವ ದಾವೀದ ಮತ್ತು ಯೋನಾತಾನರಂತೆಯೂ ಇರಬಹುದು ಎಂಬುದನ್ನು ಗಣ್ಯಮಾಡಲು ನಾನು ನನ್ನ ಮಕ್ಕಳಿಗೆ ಸಹಾಯಮಾಡುತ್ತೇನೆ. ನನ್ನ ಮಕ್ಕಳೊಂದಿಗಿನ ಸಹವಾಸದಲ್ಲಿ ಆನಂದಿಸಲು ನಾನು ವಿವಿಧ ವಯೋವರ್ಗಗಳ ಕ್ರೈಸ್ತರನ್ನು ಆಮಂತ್ರಿಸುತ್ತೇನೆ. ಇದರ ಪರಿಣಾಮವಾಗಿ, ಮಕ್ಕಳು ಅವರ ಸಮವಯಸ್ಕರಲ್ಲದ ಅನೇಕರೊಂದಿಗೆ ಸಹವಾಸಮಾಡುತ್ತಾರೆ.” ಆದರ್ಶಪ್ರಾಯರಾಗಿರುವಂಥ ಪ್ರಾಯಸ್ಥರೊಂದಿಗೆ ಸಹವಾಸಿಸುವುದು, ಅನೇಕ ವಿಷಯಗಳನ್ನು ಕಲಿಯಲು ಮಕ್ಕಳಿಗೆ ಸಂದರ್ಭವನ್ನು ನೀಡುತ್ತದೆ.
ಮಕ್ಕಳ ತರಬೇತಿಯಲ್ಲಿ ನೀವು ಯಶಸ್ವಿಯಾಗಬಲ್ಲಿರಿ
ಅಮೆರಿಕದಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಗನುಸಾರ, ತಮ್ಮ ಮಕ್ಕಳಲ್ಲಿ ಸ್ವನಿಯಂತ್ರಣ, ಸ್ವಶಿಸ್ತು, ಮತ್ತು ಪ್ರಾಮಾಣಿಕತೆ ಎಂಬ ಗುಣಗಳನ್ನು ಬೇರೂರಿಸಲು ಅನೇಕ ಹೆತ್ತವರು ಮಾಡಿದ ಪ್ರಯತ್ನಗಳು ಹೆಚ್ಚಿನ ಯಶಸ್ಸನ್ನು ಕಾಣಲಿಲ್ಲ. ಇದು ಏಕೆ ಇಷ್ಟೊಂದು ಕಷ್ಟಕರ ಸಂಗತಿಯಾಗಿದೆ? ಈ ಸಮೀಕ್ಷೆಯನ್ನು ಉತ್ತರಿಸಿದ ಒಬ್ಬಾಕೆ ತಾಯಿಯು ತಿಳಿಸುವುದು: ‘ವಿಷಾದಕರವಾಗಿ, ನಮ್ಮ ಮಕ್ಕಳನ್ನು ಸಂರಕ್ಷಿಸಲು ಇರುವ ಒಂದೇ ಒಂದು ಮಾರ್ಗವು ಅವರನ್ನು ಕೋಣೆಯಲ್ಲಿ ಬಂಧಿಸಿಟ್ಟು, ಹೊರಗಿನ ಜಗತ್ತಿಗೆ ಹೋಗದಂತೆ ತಡೆಯುವುದೇ ಆಗಿದೆ.’ ಅವಳ ಮನಸ್ಸಿನಲ್ಲಿದ್ದ ವಿಷಯವೇನೆಂದರೆ, ಇಂದು ಮಕ್ಕಳು ಯಾವ ಪರಿಸರದಲ್ಲಿ ಬೆಳೆಯುತ್ತಿದ್ದಾರೊ ಅದು ಹಿಂದೆಂದಿಗಿಂತಲೂ ತೀರಾ ಕೆಟ್ಟದ್ದಾಗಿದೆ. ಇಂಥ ಪರಿಸ್ಥಿತಿಯಲ್ಲಿ, ಮಕ್ಕಳನ್ನು ಯಶಸ್ವಿಕರವಾಗಿ ಬೆಳೆಸುವುದು ನಿಜವಾಗಿಯೂ ಸಾಧ್ಯವಿರುವ ಸಂಗತಿಯೋ?
ನೀವು ಒಂದು ಆರ್ಕಿಡ್ ಬೆಳೆಸಲು ಬಯಸಿದರೂ, ಅದು ಬಾಡಿಹೋಗಬಹುದೆಂಬುದರ ಬಗ್ಗೆ ನೀವು ಚಿಂತಿತರಾಗಿರುವುದಾದರೆ ನೀವು ನಿರುತ್ಸಾಹಗೊಳ್ಳಬಹುದು. ಆದರೆ, ಆರ್ಕಿಡ್ ಬೆಳೆಸುವುದರಲ್ಲಿ ಪ್ರವೀಣನಾಗಿರುವ ಒಬ್ಬನು ನಿಮಗೆ ಕೆಲವು ಉತ್ತಮ ಸಲಹೆಗಳನ್ನು ನೀಡಿ, “ನೀವು ಈ ರೀತಿಯಲ್ಲಿ ಮಾಡುವುದಾದರೆ ಖಂಡಿತ ಯಶಸ್ವಿಯಾಗುವಿರಿ” ಎಂದು ದೃಢಭರವಸೆಯಿಂದ ಹೇಳುವುದಾದರೆ, ನಿಮಗೆಷ್ಟು ನೆಮ್ಮದಿಯ ಅನಿಸಿಕೆಯಾಗಬಹುದು! ಮಾನವ ಸ್ವಭಾವದ ಬಗ್ಗೆ ಪ್ರವೀಣನಾಗಿರುವ ಯೆಹೋವನು, ಮಕ್ಕಳನ್ನು ಬೆಳೆಸುವ ಅತ್ಯುತ್ತಮ ವಿಧಾನದ ಕುರಿತು ಸಲಹೆಯನ್ನು ನೀಡುತ್ತಾನೆ. ಆತನು ಹೇಳುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6) ಬೈಬಲಿನ ಸಲಹೆಗನುಸಾರ ನೀವು ನಿಮ್ಮ ಮಕ್ಕಳನ್ನು ತರಬೇತುಗೊಳಿಸುವಾಗ, ಅವರು ಇತರರ ಕಡೆಗೆ ಪರಿಗಣನೆಯುಳ್ಳವರಾಗಿ, ನೈತಿಕ ಪ್ರಜ್ಞೆಯುಳ್ಳ ಜವಾಬ್ದಾರಿಯುತ ವಯಸ್ಕರಾಗಿ ಬೆಳೆಯುವುದನ್ನು ನೋಡುವ ಆನಂದ ನಿಮ್ಮದಾಗಸಾಧ್ಯವಿದೆ. ಆಗ ಅವರು ಬೇರೆಯವರಿಂದ ಪ್ರೀತಿಸಲ್ಪಡುವರು, ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಂದ ಪ್ರೀತಿಸಲ್ಪಡುವರು.