ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅವರು ಸಮುದ್ರಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು’

‘ಅವರು ಸಮುದ್ರಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು’

‘ಅವರು ಸಮುದ್ರಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು’

ಈ ರೀತಿಯಲ್ಲಿ ಅಪೊಸ್ತಲರ ಕೃತ್ಯಗಳು ಪುಸ್ತಕವು, ಸಾ.ಶ. 47ರ ಸುಮಾರಿಗೆ ಕುಪ್ರದ್ವೀಪ (ಸೈಪ್ರಸ್‌ ದ್ವೀಪ)ಕ್ಕೆ ಭೇಟಿನೀಡಿದ ಕ್ರೈಸ್ತ ಮಿಷನೆರಿಗಳಾದ ಪೌಲ, ಬಾರ್ನಬ, ಮತ್ತು ಮಾರ್ಕನೆನಿಸಿಕೊಳ್ಳುವ ಯೋಹಾನರ ಅನುಭವಗಳ ವೃತ್ತಾಂತವನ್ನು ಆರಂಭಿಸುತ್ತದೆ. (ಅ. ಕೃತ್ಯಗಳು 13:⁠4) ಇಂದಿನಂತೆಯೇ ಅಂದು ಕುಪ್ರದ್ವೀಪವು, ಪೂರ್ವ ಮೆಡಿಟರೇನಿಯನ್‌ನಲ್ಲಿ ಅತೀ ಪ್ರಾಮುಖ್ಯ ಸ್ಥಾನವನ್ನು ಹೊಂದಿತ್ತು.

ರೋಮನರು ಈ ದ್ವೀಪವನ್ನು ವಶಪಡಿಸಿಕೊಳ್ಳಲು ಆಶಿಸಿದರು, ಮತ್ತು ಸಾ.ಶ.ಪೂ. 58ರಲ್ಲಿ ಅದು ಅವರ ಆಳ್ವಿಕೆಯ ಕೆಳಗೆ ಬಂತು. ಅದಕ್ಕಿಂತ ಮುಂಚೆ, ಕುಪ್ರದ್ವೀಪಕ್ಕೆ ಒಂದು ಆಸಕ್ತಿಕರ ಇತಿಹಾಸವಿತ್ತು. ಅದು, ಫಿನೀಷೀಯದವರು, ಗ್ರೀಕರು, ಅಶ್ಶೂರ್ಯರು, ಪಾರಸೀಯರು, ಮತ್ತು ಐಗುಪ್ತದವರ ಕೈಕೆಳಗಿತ್ತು. ಮಧ್ಯಯುಗಗಳಲ್ಲಿ ಅದು ಕ್ರೂಸೇಡರ್‌ಗಳ, ಫ್ರ್ಯಾಂಕರ, ಮತ್ತು ವೆನೀಷಿಯನರ ನಿಯಂತ್ರಣದಡಿ ಬಂತು, ಹಾಗೂ ಸಮಯಾನಂತರ ಆಟಮನರು ಅದನ್ನು ವಶಪಡಿಸಿಕೊಂಡರು. 1914ರಲ್ಲಿ ಬ್ರಿಟಿಷರು ಈ ದ್ವೀಪವನ್ನು ಸ್ವಾಧೀನಪಡಿಸಿಕೊಂಡರು ಮತ್ತು 1960ರಲ್ಲಿ ಅದಕ್ಕೆ ಸ್ವಾತಂತ್ರ್ಯ ದೊರಕುವ ತನಕ ತಮ್ಮ ಆಳ್ವಿಕೆಯನ್ನು ಮುಂದುವರಿಸಿದರು.

ಪ್ರವಾಸೋದ್ಯಮವು ಈಗ ಅಲ್ಲಿನ ಆದಾಯದ ಪ್ರಾಮುಖ್ಯ ಮೂಲವಾಗಿದೆ, ಆದರೆ ಪೌಲನ ದಿನಗಳಲ್ಲಿ ಕುಪ್ರದ್ವೀಪವು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿತ್ತು. ರೋಮನರು ಈ ಸಂಪನ್ಮೂಲಗಳನ್ನು ತಮ್ಮ ಖಜಾನೆಯನ್ನು ತುಂಬಿಸಲಿಕ್ಕಾಗಿ ಉಪಯೋಗಿಸಿಕೊಂಡರು. ಈ ದ್ವೀಪದ ಇತಿಹಾಸದ ಆರಂಭದಲ್ಲಿ ಅಲ್ಲಿ ತಾಮ್ರವನ್ನು ಕಂಡುಹಿಡಿಯಲಾಯಿತು, ಮತ್ತು ರೋಮನ್‌ ಸಮಯಾವಧಿಯ ಅಂತ್ಯದೊಳಗಾಗಿ ಸುಮಾರು 2,50,000 ಟನ್‌ಗಳಷ್ಟು ತಾಮ್ರವನ್ನು ಹೊರತೆಗೆಯಲಾಗಿತ್ತು ಎಂದು ಅಂದಾಜುಮಾಡಲಾಗಿದೆ. ಆದರೆ, ತಾಮ್ರವನ್ನು ಪರಿಷ್ಕರಿಸುವ ಉದ್ದೇಶಕ್ಕಾಗಿ ದಟ್ಟ ಕಾಡಿನ ಹೆಚ್ಚಿನಾಂಶವನ್ನು ನಾಶಮಾಡಲಾಯಿತು. ಪೌಲನು ಆ ದ್ವೀಪಕ್ಕೆ ಬರುವ ಸಮಯದೊಳಗಾಗಿ ಆ ದ್ವೀಪದ ಅನೇಕ ಕಾಡುಗಳು ಕಣ್ಮರೆಯಾಗಿದ್ದವು.

ರೋಮನರ ಸ್ವಾಧೀನದಲ್ಲಿದ್ದ ಕುಪ್ರದ್ವೀಪ

ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕಾಗನುಸಾರ, ಕುಪ್ರದ್ವೀಪವನ್ನು ಐಗುಪ್ತಕ್ಕೆ ಮೊದಲಾಗಿ ಜೂಲಿಯಸ್‌ ಸೀಸರನಿಂದ ಮತ್ತು ನಂತರ ಮಾರ್ಕ್‌ ಆ್ಯಂಟನಿಯಿಂದ ಕೊಡಲಾಯಿತು. ಆದರೆ, ಅಗಸ್ಟಸ್‌ನ ಸಮಯದಲ್ಲಿ ಅದು ಪುನಃ ರೋಮಿನ ವಶಕ್ಕೆ ಬಂತು ಮತ್ತು ಅಪೊಸ್ತಲರ ಕೃತ್ಯಗಳು ಪುಸ್ತಕದ ಬರಹಗಾರನಾದ ಲೂಕನು ನಿಷ್ಕೃಷ್ಟವಾಗಿ ತಿಳಿಸಿದಂತೆ, ರೋಮಿಗೆ ಲೆಕ್ಕಒಪ್ಪಿಸಬೇಕಾದ ಪ್ರಾಂತಾಧಿಪತಿಯಿಂದ ಆಳಲ್ಪಟ್ಟಿತು. ಪೌಲನು ಅಲ್ಲಿ ಸಾರಿದ ಸಮಯದಲ್ಲಿ ಸೆರ್ಗ್ಯಪೌಲನು ಪ್ರಾಂತಾಧಿಪತಿಯಾಗಿದ್ದನು.​—⁠ಅ. ಕೃತ್ಯಗಳು 13:⁠7.

ಪಾಕ್ಸ್‌ ರೊಮಾನ, ಅಂದರೆ ರೋಮಿನಿಂದ ಜಾರಿಗೆ ತರಲಾದ ಅಂತಾರಾಷ್ಟ್ರೀಯ ಶಾಂತಿಯು, ಕುಪ್ರದ್ವೀಪದಲ್ಲಿನ ಗಣಿಗಳ ಮತ್ತು ಕಾರ್ಖಾನೆಗಳ ವಿಸ್ತರಣೆಗೆ ಉತ್ತೇಜನನೀಡಿತು. ಈ ಕಾರಣದಿಂದಾಗಿ, ವಾಣಿಜ್ಯ ವ್ಯವಸ್ಥೆಯು ಹಸನಾಗಿ ವೃದ್ಧಿಯಾಯಿತು. ರೋಮನ್‌ ಪಡೆಗಳ ಉಪಸ್ಥಿತಿಯಿಂದ ಮತ್ತು ಆ ದ್ವೀಪದ ರಕ್ಷಕ ದೇವತೆಯಾದ ಆ್ಯಫ್ರೊಡೈಟಿಯನ್ನು ಆರಾಧಿಸಲು ಅಲ್ಲಿಗೆ ಹಿಂಡುಹಿಂಡಾಗಿ ಬರುತ್ತಿದ್ದ ಯಾತ್ರಾರ್ಥಿಗಳಿಂದ ಅಲ್ಲಿನ ಆದಾಯವು ಹೆಚ್ಚಾಯಿತು. ಇದರ ಪರಿಣಾಮವಾಗಿ, ಹೊಸ ರಸ್ತೆಗಳು, ಬಂದರುಗಳು, ಮತ್ತು ಸುಂದರವಾದ ಸಾರ್ವಜನಿಕ ಕಟ್ಟಡಗಳು ಕಟ್ಟಲ್ಪಟ್ಟವು. ಗ್ರೀಕ್‌ ಭಾಷೆಯು ಅಧಿಕೃತ ಭಾಷೆಯಾಗಿ ಉಳಿಯಿತು, ಮತ್ತು ರೋಮನ್‌ ಸಾಮ್ರಾಟನನ್ನು ಸೇರಿಸಿ ಆ್ಯಫ್ರೊಡೈಟಿ, ಅಪೊಲೋ, ಮತ್ತು ಸ್ಯೂಸ್‌ ದೇವದೇವತೆಗಳ ಆರಾಧನೆಯು ಬಹಳ ಪ್ರಖ್ಯಾತವಾಗಿತ್ತು. ಜನರು ಐಷಾರಾಮದ ಜೀವನವನ್ನು ನಡೆಸುತ್ತಿದ್ದರು ಮತ್ತು ವಿಭಿನ್ನವಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಆನಂದಿಸುತ್ತಿದ್ದರು.

ಪೌಲನು ಕುಪ್ರದ್ವೀಪಕ್ಕೆ ಪ್ರಯಾಣಮಾಡಿ ಅಲ್ಲಿನ ಜನರಿಗೆ ಕ್ರಿಸ್ತನ ಬಗ್ಗೆ ಕಲಿಸುವಾಗ ಆ ದ್ವೀಪದ ಹಿನ್ನೆಲೆಯು ಹೀಗಿತ್ತು. ಹಾಗಿದ್ದರೂ, ಪೌಲನು ಅಲ್ಲಿಗೆ ಬರುವ ಮುನ್ನವೇ ಕ್ರೈಸ್ತತ್ವವು ಅಲ್ಲಿ ತಲಪಿತ್ತು. ಮೊದಲನೆಯ ಕ್ರೈಸ್ತ ಹುತಾತ್ಮನಾದ ಸ್ತೆಫನನ ಮರಣದ ನಂತರ ಕೆಲವು ಆರಂಭದ ಕ್ರೈಸ್ತರು ಕುಪ್ರದ್ವೀಪಕ್ಕೆ ಪಲಾಯನ ಮಾಡಿದರೆಂದು ಅಪೊಸ್ತಲರ ಕೃತ್ಯಗಳ ವೃತ್ತಾಂತವು ತಿಳಿಸುತ್ತದೆ. (ಅ. ಕೃತ್ಯಗಳು 11:19) ಪೌಲನ ಸಂಗಡಿಗನಾದ ಬಾರ್ನಬನು ಕುಪ್ರದ್ವೀಪದ ನಿವಾಸಿಯಾಗಿದ್ದನು, ಮತ್ತು ಅವನಿಗೆ ಆ ದ್ವೀಪವು ಚಿರಪರಿಚಿತವಾಗಿದ್ದ ಕಾರಣ ಅವನು ಸಾರುವ ಪ್ರಯಾಣದಲ್ಲಿ ಪೌಲನಿಗೆ ಒಂದು ಉತ್ತಮ ಮಾರ್ಗದರ್ಶಿಯಾಗಿದ್ದನು ಎಂಬುದಕ್ಕೆ ಯಾವುದೇ ಸಂಶಯವಿಲ್ಲ.​—⁠ಅ. ಕೃತ್ಯಗಳು 4:36; 13:⁠2.

ಪೌಲನ ಪ್ರಯಾಣಗಳ ಪರಾಮರ್ಶೆ

ನಮ್ಮ ದಿನದಲ್ಲಿ ಕುಪ್ರದ್ವೀಪದಲ್ಲಿನ ಪೌಲನ ಪ್ರಯಾಣಗಳ ಹಾದಿಯನ್ನು ಸರಿಯಾಗಿ ಕಂಡುಹಿಡಿಯುವುದು ಸುಲಭವಲ್ಲ. ಹಾಗಿದ್ದರೂ, ಪ್ರಾಕ್ತನಶಾಸ್ತ್ರಜ್ಞರು ರೋಮನ್‌ ಕಾಲಾವಧಿಯಲ್ಲಿದ್ದ ಅತ್ಯುತ್ತಮವಾದ ರಸ್ತೆ ವ್ಯವಸ್ಥೆಯ ಕುರಿತು ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ. ಈ ದ್ವೀಪದ ಭೌಗೋಳಿಕ ವೈಶಿಷ್ಟ್ಯಗಳಿಂದ ತಿಳಿದುಬರುವುದೇನೆಂದರೆ, ಇಂದಿನ ಆಧುನಿಕ ಹೆದ್ದಾರಿಗಳು ಪ್ರಾಯಶಃ ಆರಂಭದ ಮಿಷನೆರಿಗಳು ಪ್ರಯಾಣಿಸಿದ ಮಾರ್ಗವನ್ನೇ ಅನುಸರಿಸಬೇಕಾಗಿತ್ತು.

ಪೌಲ, ಬಾರ್ನಬ, ಮತ್ತು ಮಾರ್ಕನೆನಿಸಿಕೊಳ್ಳುವ ಯೋಹಾನರು ಸೆಲ್ಯೂಕ್ಯದಿಂದ ಸಲಮೀಸ್‌ ಬಂದರಿಗೆ ಸಮುದ್ರಪ್ರಯಾಣಮಾಡಿದರು. ಆದರೆ, ಪಾಫೋಸ್‌ ನಗರವು ರಾಜಧಾನಿಯೂ ಮುಖ್ಯ ಸಮುದ್ರಬಂದರೂ ಆಗಿದ್ದಾಗ ಅವರೇಕೆ ಸಲಮೀಸ್‌ಗೆ ಪ್ರಯಾಣಮಾಡಿದರು? ಒಂದು ಕಾರಣ, ಸಲಮೀಸ್‌ ಪೂರ್ವ ಕರಾವಳಿಯಲ್ಲಿತ್ತು, ಮತ್ತು ಅದು, ಮುಖ್ಯ ಭೂಭಾಗದಲ್ಲಿದ್ದ ಸೆಲ್ಯೂಕ್ಯದಿಂದ ಕೇವಲ 200 ಕಿಲೋಮೀಟರ್‌ ದೂರದಲ್ಲಿತ್ತು. ರೋಮನರ ಆಳ್ವಿಕೆಯ ಸಮಯದಲ್ಲಿ ಸಲಮೀಸ್‌ನ ಬದಲಾಗಿ ಪಾಫೋಸ್‌ ರಾಜಧಾನಿಯಾದರೂ, ಸಲಮೀಸ್‌ ನಗರವು ಆ ದ್ವೀಪದ ಸಾಂಸ್ಕೃತಿಕ, ಶೈಕ್ಷಣಿಕ, ಮತ್ತು ವಾಣಿಜ್ಯ ಕೇಂದ್ರವಾಗಿಯೇ ಉಳಿಯಿತು. ಸಲಮೀಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೆಹೂದಿ ಜನರಿದ್ದರು, ಮತ್ತು ಈ ಮಿಷನೆರಿಗಳು “ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಪ್ರಸಿದ್ಧಿಪಡಿಸಿದರು.”​—⁠ಅ. ಕೃತ್ಯಗಳು 13:⁠5.

ಇಂದು, ಸಲಮೀಸ್‌ನ ಅವಶೇಷಗಳು ಮಾತ್ರ ಉಳಿದಿವೆ. ಆದರೆ ಪ್ರಾಕ್ತನಶಾಸ್ತ್ರದ ಕಂಡುಹಿಡಿತಗಳು, ಆ ನಗರದ ಆರಂಭಿಕ ವೈಭವ ಮತ್ತು ಐಶ್ವರ್ಯಕ್ಕೆ ಈಗಲೂ ಸಾಕ್ಷ್ಯವಾಗಿವೆ. ಭೂಶೋಧನೆಮಾಡಿ ತೆಗೆಯಲ್ಪಟ್ಟ ಮೆಡಿಟರೇನಿಯನ್‌ ಪ್ರಾಂತ್ಯದಲ್ಲಿನ ಎಲ್ಲಾ ರೋಮನ್‌ ಮಾರುಕಟ್ಟೆಗಳಲ್ಲಿ, ಸಲಮೀಸ್‌ನ ಮಾರುಕಟ್ಟೆಯು ಅತಿ ದೊಡ್ಡದಾಗಿದೆಯೆಂದು ಕಂಡುಬಂದಿದೆ. ಆಗಿನ ಕಾಲದಲ್ಲಿ ಮಾರುಕಟ್ಟೆಯು ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯ ಕೇಂದ್ರವಾಗಿತ್ತು. ಅಗಸ್ಟಸ್‌ ಸೀಸರನ ಕಾಲಕ್ಕೆ ಸೇರಿದ ಅದರ ಅವಶೇಷಗಳು, ಅಲ್ಲಿ ಅತಿ ಸೂಕ್ಷ್ಮ ವಿನ್ಯಾಸವನ್ನು ಹೊಂದಿದ್ದ ಮೊಸಾಯಿಕ್‌ ನೆಲಗಳು, ವ್ಯಾಯಾಮ ಶಾಲೆಗಳು, ಅತ್ಯುತ್ತಮ ಸ್ನಾನಗೃಹಗಳ ವ್ಯವಸ್ಥೆ, ಒಂದು ಕ್ರೀಡಾಂಗಣ ಹಾಗೂ ವರ್ತುಲಾಕಾರದ ನಾಟಕಮಂದಿರ, ಶೋಭಾಯಮಾನವಾದ ಸಮಾಧಿಗಳು, ಮತ್ತು 15,000 ಮಂದಿ ಕುಳಿತುಕೊಳ್ಳಬಹುದಾದ ಒಂದು ದೊಡ್ಡ ನಾಟಕಮಂದಿರವಿತ್ತೆಂದು ತೋರಿಸಿಕೊಡುತ್ತವೆ! ಹತ್ತಿರದಲ್ಲಿಯೇ ಸ್ಯೂಸ್‌ ದೇವನ ವೈಭವಭರಿತ ದೇವಸ್ಥಾನದ ಅವಶೇಷಗಳಿವೆ.

ಆದರೆ ಆ ನಗರವು ಭೂಕಂಪಗಳಿಂದ ಧ್ವಂಸಗೊಳ್ಳದಂತೆ ಕಾಪಾಡಲು ಸ್ಯೂಸ್‌ ದೇವನು ಶಕ್ತನಾಗಿರಲಿಲ್ಲ. ಸಾ.ಶ.ಪೂ. 15ರಲ್ಲಿ ಉಂಟಾದ ಒಂದು ಮಹಾ ಭೂಕಂಪದಿಂದಾಗಿ ಸಲಮೀಸ್‌ನ ಹೆಚ್ಚಿನ ಭಾಗವು ನೆಲಸಮವಾಯಿತು ಮತ್ತು ಸಮಯಾನಂತರ ಅದು ಅಗಸ್ಟಸ್‌ನಿಂದ ಪುನರ್‌ನಿರ್ಮಿಸಲ್ಪಟ್ಟಿತು. ಸಾ.ಶ. 77ರಲ್ಲಿ ಅದು ಇನ್ನೊಮ್ಮೆ ಭೂಕಂಪದಿಂದ ಧ್ವಂಸಗೊಂಡು, ಪುನಃ ಕಟ್ಟಲ್ಪಟ್ಟಿತು. ನಾಲ್ಕನೆಯ ಶತಮಾನದಲ್ಲಿ, ಒಂದರ ಹಿಂದೆ ಇನ್ನೊಂದರಂತೆ ಅನೇಕ ಭೂಕಂಪಗಳಿಂದ ಸಲಮೀಸ್‌ ನೆಲಕಚ್ಚಿತು, ಮತ್ತು ಅದು ಮುಂದೆಂದಿಗೂ ಅದರ ಆರಂಭದ ವೈಭವವನ್ನು ಪುನಃ ಹೊಂದಲಿಲ್ಲ. ಮಧ್ಯಯುಗಗಳಷ್ಟಕ್ಕೆ ಅದರ ಬಂದರು ಪ್ರದೇಶವು, ಮೆಕ್ಕಲು ಮಣ್ಣಿನಿಂದ ತುಂಬಿದ ಕಾರಣ ಅದನ್ನು ತೊರೆದುಬಿಡಲಾಯಿತು.

ಪೌಲನ ಸಾರುವಿಕೆಗೆ ಸಲಮೀಸ್‌ನ ಜನರು ಹೇಗೆ ಪ್ರತಿಕ್ರಿಯಿಸಿದರೆಂದು ತಿಳಿಸಲ್ಪಟ್ಟಿಲ್ಲ. ಆದರೆ ಬೇರೆ ಸಮುದಾಯಗಳಿಗೂ ಸಾರಬೇಕಾದ ಜವಾಬ್ದಾರಿಯು ಪೌಲನಿಗಿತ್ತು. ಸಲಮೀಸ್‌ ನಗರವನ್ನು ಬಿಟ್ಟುಹೋಗಲು ಮಿಷನೆರಿಗಳು, ಮೂರು ಮುಖ್ಯ ಮಾರ್ಗಗಳಲ್ಲಿ ಯಾವುದಾದರೊಂದನ್ನು ಆಯ್ಕೆಮಾಡಬೇಕಾಗಿತ್ತು: ಮೊದಲನೆಯದು ಕಿರೀನ್ಯ ಪರ್ವತ ಪ್ರದೇಶವನ್ನು ದಾಟಿ ಉತ್ತರ ಕರಾವಳಿಯ ಕಡೆಗೆ ಹೋಗುವ ಮಾರ್ಗ; ಎರಡನೆಯದು ದ್ವೀಪದ ಮುಖ್ಯ ಭೂಭಾಗದಿಂದ ಮಿಸೋರಿಯಾ ಬಯಲನ್ನು ದಾಟಿ ಪಶ್ಚಿಮದ ಕಡೆಗೆ ಹೋಗುವ ಮಾರ್ಗ; ಮೂರನೆಯದು ದಕ್ಷಿಣ ಕರಾವಳಿತೀರದ ಮಾರ್ಗ.

ಪೌಲನು ಮೂರನೇ ಮಾರ್ಗವನ್ನು ಅನುಸರಿಸಿದನೆಂದು ಸಾಂಪ್ರದಾಯಿಕವಾದ ಹೇಳಿಕೆಯಿದೆ. ಆ ಮಾರ್ಗವು, ವಿಶಿಷ್ಟವಾದ ಕೆಂಪು ಮಣ್ಣಿದ್ದ ಫಲವತ್ತಾದ ಕೃಷಿಭೂಮಿಯನ್ನು ಹಾದುಹೋಗುತ್ತದೆ. ಸುಮಾರು 50 ಕಿಲೋಮೀಟರ್‌ ನೈರುತ್ಯಕ್ಕೆ, ಈ ಮಾರ್ಗವು ಈಶಾನ್ಯ ದಿಕ್ಕಿಗೆ ತಿರುಗುವ ಸ್ವಲ್ಪ ಮುನ್ನ ಲಾರ್ನಾಕಾ ನಗರವನ್ನು ಪ್ರವೇಶಿಸುತ್ತದೆ.

“ದ್ವೀಪದಲ್ಲೆಲ್ಲಾ”

ಈ ಹೆದ್ದಾರಿಯು ಬೇಗನೆ ಪುರಾತನ ಲೀಡ್ರ ಪಟ್ಟಣವನ್ನು ತಲಪುತ್ತದೆ. ಈ ಸ್ಥಳದಲ್ಲಿ ಇಂದು ಆಧುನಿಕ ದಿನದ ರಾಜಧಾನಿಯಾದ ನಿಕೊಸಿಯ ಪಟ್ಟಣವಿದೆ. ಪುರಾತನ ಪಟ್ಟಣದ ಪ್ರತಿಯೊಂದು ಪುರಾವೆಯು ಧ್ವಂಸಗೊಂಡಿದೆ. ಆದರೆ, 16ನೇ ಶತಮಾನದ ವೆನೀಷಿಯನ್‌ ಗೋಡೆಗಳಿಂದ ಸುತ್ತುವರಿಯಲ್ಪಟ್ಟಿರುವ ನಿಕೊಸಿಯಾದ ಮಧ್ಯಭಾಗದಲ್ಲಿ ಲೀಡ್ರ ಬೀದಿ ಎಂಬ ಹೆಸರಿನ ಜನನಿಬಿಡವೂ ಇಕ್ಕಟ್ಟೂ ಆದ ಬೀದಿಯಿದೆ. ಪೌಲನು ಲೀಡ್ರಕ್ಕೆ ಹೋದನೋ ಇಲ್ಲವೋ ನಮಗೆ ತಿಳಿಯದು. ಬೈಬಲ್‌ ಕೇವಲ, ಅವರು “ದ್ವೀಪದಲ್ಲೆಲ್ಲಾ” ಸಂಚಾರಮಾಡಿದರು ಎಂಬುದಾಗಿ ನಮಗೆ ತಿಳಿಸುತ್ತದೆ. (ಅ. ಕೃತ್ಯಗಳು 13:⁠6) ಬೈಬಲ್‌ ದೇಶಗಳ ವಿಕ್ಲಿಫ್‌ ಐತಿಹಾಸಿಕ ಭೂಗೋಳ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುವುದು: “ಈ ಹೇಳಿಕೆಯು, ಕುಪ್ರದ್ವೀಪದಾದ್ಯಂತವಿದ್ದ ಯೆಹೂದಿ ಸಮುದಾಯಗಳ ಬಹುಮಟ್ಟಿಗಿನ ಎಲ್ಲಾ ಸ್ಥಳಗಳಿಗೆ ಅವರು ಸಂಚಾರಮಾಡಿದರೆಂದು ಸೂಚಿಸುತ್ತದೆ.”

ಕುಪ್ರದ್ವೀಪದಲ್ಲಿ ಸಾಧ್ಯವಿದ್ದಷ್ಟು ವ್ಯಕ್ತಿಗಳನ್ನು ಸಂಪರ್ಕಿಸಲು ಪೌಲನು ಆಸಕ್ತನಾಗಿದ್ದನು ಎಂಬುದು ನಿಶ್ಚಯ. ಆದುದರಿಂದ ಅವನು ಲೀಡ್ರದಿಂದ, ವರ್ಧಿಸುವ ಜನಸಂಖ್ಯೆಯಿಂದ ಕೂಡಿದ ಎರಡು ದೊಡ್ಡ ಸರ್ವರಾಷ್ಟ್ರೀಯ ಪಟ್ಟಣಗಳಾದ ಆಮಥಸ್‌ ಮತ್ತು ಕೂರ್ಯನ್‌ ಪಟ್ಟಣಗಳನ್ನು ದಾಟಿ ದಕ್ಷಿಣ ಮಾರ್ಗವಾಗಿ ಪ್ರಯಾಣಿಸಿರಬಹುದು.

ಕೂರ್ಯನ್‌ ಪಟ್ಟಣವು ಸಮುದ್ರದಿಂದ ಎತ್ತರದಲ್ಲಿರುವ ಮತ್ತು ಸಮುದ್ರ ತೀರದಲ್ಲಿ ನೇರವಾಗಿ ಮೇಲೆದ್ದು ನಿಂತಿರುವಂತೆ ಕಾಣುವ ಕಡಿಬಂಡೆಯ ಮೇಲೆ ನೆಲೆಸಿತ್ತು. ಸಾ.ಶ. 77ರಲ್ಲಿ ಸಲಮೀಸ್‌ ನಗರವನ್ನು ಧ್ವಂಸಗೊಳಿಸಿದ ಅದೇ ಭೂಕಂಪವು ಈ ಭವ್ಯ ಗ್ರೀಕೋ-ರೋಮನ್‌ ಪಟ್ಟಣಕ್ಕೆ ಸಹ ಹೊಡೆಯಿತು. ಅಪೋಲೊ ದೇವತೆಗೆ ಪ್ರತಿಷ್ಠಾಪಿಸಿದ್ದ ದೇವಸ್ಥಾನದ ಅವಶೇಷಗಳು ಅಲ್ಲಿವೆ. ಆ ಅವಶೇಷಗಳು ಸಾ.ಶ. 100ರಿಂದ ಕಂಡುಬಂದವುಗಳಾಗಿವೆ. ಅಲ್ಲಿನ ಕ್ರೀಡಾಂಗಣ ಸುಮಾರು 6,000 ಮಂದಿ ಪ್ರೇಕ್ಷಕರು ಕುಳಿತುಕೊಳ್ಳುವಷ್ಟು ದೊಡ್ಡದಾಗಿತ್ತು. ಅಲ್ಲಿನ ಕಟ್ಟಡಗಳ ನೆಲಗಳು ಹಾಗೂ ಅಲ್ಲಿನ ಜನರ ಖಾಸಗಿ ಮನೆಗಳ ನೆಲವೂ ಸುಂದರವಾದ ಮೊಸೇಯಿಕ್‌ ಕಲ್ಲುಗಳಿಂದ ಅಲಂಕರಿಸಲ್ಪಟ್ಟಿದ್ದನ್ನು ನೋಡುವಾಗ, ಕೂರ್ಯನ್‌ ಪಟ್ಟಣದ ಹೆಚ್ಚಿನ ಜನರು ಐಷಾರಾಮದ ಜೀವನಶೈಲಿಯನ್ನು ನಡೆಸುತ್ತಿದ್ದರೆಂದು ತೋರಿಬರುತ್ತದೆ.

ಪಾಫೋಸ್‌ಗೆ ಪ್ರಯಾಣ

ಕೂರ್ಯನ್‌ ಪಟ್ಟಣದಿಂದ, ದ್ರಾಕ್ಷಾಮದ್ಯವನ್ನು ಉತ್ಪಾದಿಸುವ ಪ್ರದೇಶದ ಮೂಲಕ ಹೆಚ್ಚೆಚ್ಚು ಎತ್ತರಕ್ಕೆ ಪಶ್ಚಿಮಾಭಿಮುಖವಾಗಿ ಕಣ್ಮನತಣಿಸುವ ದೃಶ್ಯಮಯ ಮಾರ್ಗವು ಮುಂದುವರಿಯುತ್ತದೆ; ನಂತರ ಇದ್ದಕ್ಕಿದ್ದಂತೆ ಈ ಮಾರ್ಗವು ತೀರ ಕೆಳಮುಖವಾಗಿ, ಬಂಡೆಚಾಚುಗಳ ಮಧ್ಯೆ ಅಂಕುಡೊಂಕಾದ ಹಾದಿಯ ಮೂಲಕ ಉರುಟುಕಲ್ಲಿನಿಂದ ಆವೃತವಾಗಿರುವ ಕಡಲತೀರಗಳ ಕಡೆಗೆ ತಲಪುತ್ತದೆ. ಗ್ರೀಕ್‌ ಪುರಾಣಕ್ಕನುಸಾರ, ಇದೇ ಸ್ಥಳದಲ್ಲಿ ಸಮುದ್ರವು ಆ್ಯಫ್ರೊಡೈಟಿ ದೇವತೆಗೆ ಜನ್ಮವಿತ್ತಿತು.

ಕುಪ್ರದ್ವೀಪದಲ್ಲಿ ಗ್ರೀಕ್‌ ದೇವತೆಗಳಲ್ಲಿಯೇ ಅತಿ ಪ್ರಖ್ಯಾತ ದೇವತೆಯು ಆ್ಯಪ್ರೋಡೈಟಿಯಾಗಿದ್ದಳು. ಮತ್ತು ಸಾ.ಶ. ಎರಡನೆಯ ಶತಮಾನದ ತನಕ ಆಕೆಯನ್ನು ಕಟ್ಟಾಸಕ್ತಿಯಿಂದ ಆರಾಧಿಸಲಾಗುತ್ತಿತ್ತು. ಆ್ಯಪ್ರೋಡೈಟಿಯ ಆರಾಧನಾ ಕೇಂದ್ರವು ಪಾಫೋಸ್‌ ಊರಿನಲ್ಲಿತ್ತು. ಪ್ರತಿ ವಸಂತಕಾಲದಲ್ಲಿ ಈ ದೇವತೆಯ ಗೌರವಾರ್ಥವಾಗಿ ಒಂದು ದೊಡ್ಡ ಹಬ್ಬವನ್ನು ಆಚರಿಸಲಾಗುತ್ತಿತ್ತು. ಏಷ್ಯಾ ಮೈನರ್‌, ಐಗುಪ್ತ, ಗ್ರೀಸ್‌, ಮತ್ತು ಪಾರಸೀಯದಷ್ಟು ದೂರದ ಸ್ಥಳದಿಂದ ಯಾತ್ರಿಕರು ಹಬ್ಬಕ್ಕಾಗಿ ಪಾಫೋಸ್‌ಗೆ ಬರುತ್ತಿದ್ದರು. ಕುಪ್ರದ್ವೀಪವು ಟಾಲೆಮಿಯವರ ಆಳ್ವಿಕೆಯ ಕೆಳಗಿದ್ದಾಗ, ಅಲ್ಲಿನ ನಿವಾಸಿಗಳಿಗೆ ಫರೋಹನ ಆರಾಧನೆಯ ಪರಿಚಯವಾಯಿತು.

ಪಾಫೋಸ್‌ ನಗರವು ಕುಪ್ರದ್ವೀಪದ ರೋಮನ್‌ ರಾಜಧಾನಿಯೂ ಪ್ರಾಂತಾಧಿಪತಿಯ ಮೂಲಸ್ಥಾನವೂ ಆಗಿತ್ತು, ಹಾಗೂ ತಾಮ್ರದ ನಾಣ್ಯಗಳನ್ನು ಟಂಕಿಸುವ ಅಧಿಕಾರವು ಅದಕ್ಕಿತ್ತು. ಸಾ.ಶ.ಪೂ. 15ರಲ್ಲಿ ಈ ನಗರವು ಸಹ ಒಂದು ಭೂಕಂಪದಿಂದ ಧ್ವಂಸಗೊಂಡಿತು. ಸಲಮೀಸ್‌ ನಗರದಂತೆ, ಈ ನಗರದ ಪುನರ್‌ನಿರ್ಮಾಣಕ್ಕಾಗಿ ಅಗಸ್ಟಸನು ಆರ್ಥಿಕ ನೆರವನ್ನು ನೀಡಿದನು. ಮೊದಲನೆಯ ಶತಮಾನದಲ್ಲಿ ಪಾಫೋಸ್‌ನಲ್ಲಿದ್ದ ಕುಲೀನರ ಐಷಾರಾಮದ ಜೀವನಶೈಲಿಯನ್ನು ಭೂಶೋಧನೆಗಳ ಮೂಲಕ ಕಂಡುಹಿಡಿಯಲಾಗಿದೆ. ಉದಾಹರಣೆಗೆ, ಅಲ್ಲಿನ ಅಗಲವಾದ ನಗರ ಬೀದಿಗಳು, ವೈಭವವಾಗಿ ಅಲಂಕರಿಸಲ್ಪಟ್ಟ ಖಾಸಗಿ ಮನೆಗಳು, ಸಂಗೀತ ಶಾಲೆಗಳು, ವ್ಯಾಯಾಮ ಶಾಲೆಗಳು, ಮತ್ತು ಒಂದು ವರ್ತುಲಾಕಾರದ ನಾಟಕಮಂದಿರವನ್ನು ಸಹ ಕಂಡುಹಿಡಿಯಲಾಗಿದೆ.

ಪೌಲ, ಬಾರ್ನಬ, ಮತ್ತು ಮಾರ್ಕನೆನಿಸಿಕೊಳ್ಳುವ ಯೋಹಾನರು ಭೇಟಿನೀಡಿದ ಪಾಫೋಸ್‌ ನಗರವು ಇದೇ ಆಗಿತ್ತು, ಮತ್ತು ಇದೇ ಸ್ಥಳದಲ್ಲಿ ಅಧಿಪತಿಯಾದ ಸೆರ್ಗ್ಯಪೌಲನೆಂಬ “ಬುದ್ಧಿವಂತ” ಮನುಷ್ಯನು, ಮಂತ್ರವಾದಿಯಾದ ಎಲುಮನ ತೀವ್ರ ವಿರೋಧದ ಹೊರತಾಗಿಯೂ “ದೇವರ ವಾಕ್ಯವನ್ನು ಕೇಳುವದಕ್ಕೆ ಅಪೇಕ್ಷೆ” ವ್ಯಕ್ತಪಡಿಸಿದನು. ಈ ಅಧಿಪತಿಯು “ಕರ್ತನ [“ಯೆಹೋವನ,” NW] ಬೋಧನೆಗೆ ಅತ್ಯಾಶ್ಚರ್ಯ”ಪಟ್ಟನು.​—⁠ಅ. ಕೃತ್ಯಗಳು 13:​6-12.

ಕುಪ್ರದ್ವೀಪದಲ್ಲಿ ತಮ್ಮ ಸಾರುವ ಚಟುವಟಿಕೆಯನ್ನು ಮುಕ್ತಾಯಗೊಳಿಸಿದ ನಂತರ ಮಿಷನೆರಿಗಳು ತಮ್ಮ ಕೆಲಸವನ್ನು ಏಷ್ಯಾ ಮೈನರಿನಲ್ಲಿ ಮುಂದುವರಿಸಿದರು. ಪೌಲನಿಂದ ಮಾಡಲ್ಪಟ್ಟ ಆ ಮೊದಲನೆಯ ಮಿಷನೆರಿ ಪ್ರಯಾಣವು, ನಿಜ ಕ್ರೈಸ್ತತ್ವದ ಹರಡುವಿಕೆಯಲ್ಲಿ ಒಂದು ಮೈಲುಗಲ್ಲಿನಂತಿತ್ತು. ಗ್ರೀಕ್‌ ಪೌರಸ್ತ್ಯದಲ್ಲಿ ಸಂತ ಪೌಲನ ಪ್ರಯಾಣ (ಇಂಗ್ಲಿಷ್‌) ಎಂಬ ಪುಸ್ತಕವು ಇದನ್ನು, “ಕ್ರೈಸ್ತ ಚಟುವಟಿಕೆಯ ಮತ್ತು . . . ಪೌಲನ ಮಿಷನೆರಿ ಜೀವನಯಾತ್ರೆಯ ನಿಜವಾದ ಪ್ರಾರಂಭ” ಎಂದು ಕರೆಯುತ್ತದೆ. ಅದು ಕೂಡಿಸುವುದು: “ಸಿರಿಯ, ಏಷ್ಯಾ ಮೈನರ್‌, ಮತ್ತು ಗ್ರೀಸ್‌ ದೇಶಕ್ಕೆ ಹೋಗುವ ಸಮುದ್ರ ಮಾರ್ಗಗಳು ಸಂಧಿಸುವ ಸ್ಥಳದಲ್ಲಿ ಕುಪ್ರದ್ವೀಪವು ನೆಲೆಸಿರುವ ಕಾರಣ, ಅದು ಮಿಷನೆರಿ ಪ್ರಯಾಣದ ತಪ್ಪಿಸಲಾಗದ ಮೊದಲನೆ ಹಂತವಾಗಿತ್ತು.” ಆದರೆ ಇದು ಆರಂಭದ ಹಂತವಾಗಿತ್ತಷ್ಟೇ. ಇಪ್ಪತ್ತು ಶತಮಾನಗಳ ನಂತರವೂ ಕ್ರೈಸ್ತ ಮಿಷನೆರಿ ಕೆಲಸವು ಮುಂದುವರಿಯುತ್ತಾ ಇದೆ, ಮತ್ತು ಯೆಹೋವನ ರಾಜ್ಯದ ಸುವಾರ್ತೆಯು ಇಂದು ಅಕ್ಷರಾರ್ಥಕವಾಗಿ “ಭೂಲೋಕದ ಕಟ್ಟಕಡೆಯ ವರೆಗೂ” ತಲಪಿದೆ ಎಂಬುದಾಗಿ ನಾವು ನಿಶ್ಚಯವಾಗಿಯೂ ಹೇಳಬಲ್ಲೆವು.​—⁠ಅ. ಕೃತ್ಯಗಳು 1:⁠8.

[ಪುಟ 20ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಕುಪ್ರದ್ವೀಪ

ನಿಕೊಸಿಯ (ಲೀಡ್ರ)

ಪಾಫೋಸ್‌

ಕೂರ್ಯನ್‌

ಆಮಥಸ್‌

ಲಾರ್ನಾಕಾ

ಸಲಮೀಸ್‌

ಕಿರೀನ್ಯ ಪರ್ವತಗಳು

ಮಿಸೋರಿಯಾ ಬಯಲು

ಟ್ರೂಡಸ್‌ ಪರ್ವತಗಳು

[ಪುಟ 21ರಲ್ಲಿರುವ ಚಿತ್ರ]

ಪಾಫೋಸ್‌ನಲ್ಲಿರುವಾಗ ಪೌಲನು ಪವಿತ್ರಾತ್ಮಭರಿತನಾಗಿ, ಮಂತ್ರವಾದಿಯಾದ ಎಲುಮನನ್ನು ಕುರುಡನನ್ನಾಗಿ ಮಾಡಿದನು