ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ”

“ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ”

“ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ”

“ನೀವು ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ; . . . ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”​—⁠ಮತ್ತಾಯ 28:19, 20.

ಐಥಿಯೋಪ್ಯದ ಒಬ್ಬ ಮನುಷ್ಯನು ಬಹು ದೂರದಿಂದ ಯೆರೂಸಲೇಮಿಗೆ ಬಂದಿದ್ದನು. ಅಲ್ಲಿ ಅವನು, ತಾನು ಪ್ರೀತಿಸುತ್ತಿದ್ದ ದೇವರಾದ ಯೆಹೋವನನ್ನು ಆರಾಧಿಸಿದನು. ಅವನಿಗೆ ದೇವರ ಪ್ರೇರಿತ ವಾಕ್ಯದ ಮೇಲೆಯೂ ಪ್ರೀತಿಯಿತ್ತೆಂದು ವ್ಯಕ್ತವಾಗುತ್ತದೆ. ಅವನು ತನ್ನ ರಥದಲ್ಲಿ ಸ್ವದೇಶಕ್ಕೆ ಹಿಂದಿರುಗುತ್ತಿದ್ದಾಗ, ಪ್ರವಾದಿ ಯೆಶಾಯನ ಬರಹಗಳ ಒಂದು ಪ್ರತಿಯನ್ನು ಓದುತ್ತಿದ್ದನು. ಆಗ ಕ್ರಿಸ್ತನ ಒಬ್ಬ ಶಿಷ್ಯನಾಗಿದ್ದ ಫಿಲಿಪ್ಪನು ಅವನನ್ನು ಭೇಟಿಯಾದನು. ಫಿಲಿಪ್ಪನು ಆ ಐಥಿಯೋಪ್ಯದವನಿಗೆ, “ನೀನು ಓದುವದು ನಿನಗೆ ತಿಳಿಯುತ್ತದೋ?” ಎಂದು ಕೇಳಿದನು. ಅದಕ್ಕೆ ಅವನು “ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ [“ಮಾರ್ಗದರ್ಶಿಸಿದ,” NW] ಹೊರತು ಅದು ನನಗೆ ಹೇಗೆ ತಿಳಿದೀತು” ಎಂದು ಉತ್ತರಕೊಟ್ಟನು. ಆಗ ಫಿಲಿಪ್ಪನು, ಶಾಸ್ತ್ರವಚನಗಳ ಈ ಯಥಾರ್ಥ ವಿದ್ಯಾರ್ಥಿಗೆ ಕ್ರಿಸ್ತನ ಶಿಷ್ಯನಾಗುವಂತೆ ಸಹಾಯಮಾಡಿದನು.​—⁠ಅ. ಕೃತ್ಯಗಳು 8:26-39.

2 ಆ ಐಥಿಯೋಪ್ಯದವನು ಕೊಟ್ಟ ಉತ್ತರ ಗಮನಾರ್ಹವಾಗಿದೆ. ‘ಮಾರ್ಗದರ್ಶಿಸಿದ ಹೊರತು ಅದು ನನಗೆ ಹೇಗೆ ತಿಳಿದೀತು’ ಎಂದು ಅವನು ಹೇಳಿದನು. ಹೌದು, ಅವನಿಗೊಬ್ಬ ಮಾರ್ಗದರ್ಶಕನ ಅಂದರೆ ಅವನನ್ನು ಮುನ್ನಡೆಸಬಲ್ಲವನ ಆವಶ್ಯಕತೆಯಿತ್ತು. ಈ ಹೇಳಿಕೆಯು ತಾನೇ, ಯೇಸು ಶಿಷ್ಯರನ್ನಾಗಿ ಮಾಡಬೇಕೆಂಬ ತನ್ನ ಆಜ್ಞೆಯಲ್ಲಿ ಸೇರಿಸಿದ ಒಂದು ನಿರ್ದಿಷ್ಟ ಸಲಹೆಯ ಪ್ರಮುಖತೆಯನ್ನು ಚಿತ್ರಿಸುತ್ತದೆ. ಯಾವ ಸಲಹೆಯದು? ಉತ್ತರಕ್ಕಾಗಿ, ಮತ್ತಾಯ 28ನೆಯ ಅಧ್ಯಾಯದಲ್ಲಿ ಯೇಸು ಹೇಳಿದ ಮಾತುಗಳ ಪರಿಶೀಲನೆಯನ್ನು ನಾವು ಮುಂದುವರಿಸೋಣ. ಹಿಂದಿನ ಲೇಖನವು ಏಕೆ? ಮತ್ತು ಎಲ್ಲಿ? ಎಂಬ ಪ್ರಶ್ನೆಗಳ ಮೇಲೆ ಕೇಂದ್ರೀಕರಿಸಿತು. ಈಗ ನಾವು, ಶಿಷ್ಯರನ್ನಾಗಿ ಮಾಡುವ ಕ್ರಿಸ್ತನ ಆಜ್ಞೆಗೆ ಸಂಬಂಧಿಸಿದ ಏನು? ಮತ್ತು ಎಂದಿನ ವರೆಗೆ? ಎಂಬ ಪ್ರಶ್ನೆಗಳನ್ನು ಪರಿಶೀಲಿಸೋಣ.

“ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ”

3 ಇತರರು ಕ್ರಿಸ್ತನ ಶಿಷ್ಯರಾಗುವಂತೆ ನಾವು ಅವರಿಗೆ ಏನನ್ನು ಕಲಿಸತಕ್ಕದ್ದು? ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಹಾಗಾದರೆ, ಯೇಸು ಆಜ್ಞಾಪಿಸಿದ ಸಂಗತಿಗಳನ್ನು ನಾವು ಅವರಿಗೆ ಉಪದೇಶಿಸತಕ್ಕದ್ದು. * ಆದರೆ ಯೇಸುವಿನ ಆಜ್ಞೆಗಳ ಬಗ್ಗೆ ಉಪದೇಶಿಸಲ್ಪಟ್ಟ ಒಬ್ಬ ವ್ಯಕ್ತಿಯು ಶಿಷ್ಯನಾಗುವುದು ಮಾತ್ರವಲ್ಲ, ಶಿಷ್ಯನಾಗಿಯೇ ಉಳಿಯುವುದನ್ನು ಖಚಿತಪಡಿಸಲು ಏನು ಸಹಾಯಮಾಡುವುದು? ಒಂದು ಮುಖ್ಯ ಸಂಗತಿಯು, ಯೇಸು ಜಾಗರೂಕತೆಯಿಂದ ಆರಿಸಿ ತೆಗೆದ ಪದಗಳಲ್ಲಿ ಕಂಡುಬರುತ್ತದೆ. ಅವನು ಕೇವಲ, ‘ನಾನು ಆಜ್ಞಾಪಿಸಿದ್ದನ್ನೆಲ್ಲಾ ಅವರಿಗೆ ಉಪದೇಶ ಮಾಡಿರಿ’ ಎಂದು ಹೇಳದೆ, ‘ನಾನು ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳಲು ಅವರಿಗೆ ಉಪದೇಶ ಮಾಡಿರಿ’ ಎಂದು ಹೇಳಿದನು. (ಮತ್ತಾಯ 19:​17) ಅದು ಏನನ್ನು ಸೂಚಿಸುತ್ತದೆ?

4 ಒಂದು ಆಜ್ಞೆಯನ್ನು ಕಾಪಾಡಿಕೊಳ್ಳುವುದೆಂದರೆ ಆ ಆಜ್ಞೆಗೆ “ಒಬ್ಬನ ವರ್ತನೆಯನ್ನು ಹೊಂದಿಸಿಕೊಳ್ಳುವುದು,” ಅದಕ್ಕೆ ವಿಧೇಯನಾಗುವುದು, ಅಥವಾ ಅದನ್ನು ಪಾಲಿಸುವುದು ಎಂದಾಗಿದೆ. ಹಾಗಾದರೆ, ಕ್ರಿಸ್ತನು ಆಜ್ಞಾಪಿಸಿದ ವಿಷಯಗಳನ್ನು ಒಬ್ಬನು ಕಾಪಾಡಿಕೊಳ್ಳುವಂತೆ ಅಥವಾ ವಿಧೇಯನಾಗುವಂತೆ ನಾವು ಅವನಿಗೆ ಉಪದೇಶ ಮಾಡುವುದು ಹೇಗೆ? ಒಬ್ಬ ಡ್ರೈವಿಂಗ್‌ ಶಿಕ್ಷಕನು ತನ್ನ ವಿದ್ಯಾರ್ಥಿಗಳು ವಾಹನ ಸಂಚಾರ ನಿಯಮಗಳನ್ನು ಪಾಲಿಸುವಂತೆ ಕಲಿಸುವ ರೀತಿಯ ಕುರಿತು ನೆನಸಿರಿ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಆ ಶಿಕ್ಷಕನು ಕ್ಲಾಸಿನಲ್ಲಿ ತನ್ನ ವಿದ್ಯಾರ್ಥಿಗಳಿಗೆ ಕಲಿಸಬಹುದು. ಆದರೆ ಆ ನಿಯಮಗಳನ್ನು ಹೇಗೆ ಪಾಲಿಸಬೇಕೆಂಬುದನ್ನು ಕಲಿಸಲಿಕ್ಕಾಗಿ, ವಾಹನಗಳು ಓಡಾಡುತ್ತಿರುವ ರಸ್ತೆಯಲ್ಲಿ ವಿದ್ಯಾರ್ಥಿಗಳು ವಾಹನ ಚಲಾಯಿಸುತ್ತಾ ತಾವು ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕಲು ಹೆಣಗಾಡುತ್ತಿರುವಾಗ ಅವನು ಅವರಿಗೆ ಮಾರ್ಗದರ್ಶಿಸಬೇಕು. ತದ್ರೀತಿಯಲ್ಲಿ, ನಾವು ಜನರೊಂದಿಗೆ ಬೈಬಲ್‌ ಅಧ್ಯಯನ ಮಾಡುವಾಗ ಅವರಿಗೆ ಕ್ರಿಸ್ತನ ಆಜ್ಞೆಗಳನ್ನು ಉಪದೇಶಿಸುತ್ತೇವೆ. ಆದರೆ, ಅವರು ತಮ್ಮ ದೈನಂದಿನ ಜೀವಿತಗಳಲ್ಲಿ ಮತ್ತು ಶುಶ್ರೂಷೆಯಲ್ಲಿ ಕ್ರಿಸ್ತನ ಅಪ್ಪಣೆಗಳನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುವಾಗಲೂ ನಾವು ಅವರ ಮಾರ್ಗದರ್ಶಕರಾಗಿರುವುದು ಆವಶ್ಯಕ. (ಯೋಹಾನ 14:15; 1 ಯೋಹಾನ 2:3) ಹೀಗೆ, ಶಿಷ್ಯರನ್ನಾಗಿ ಮಾಡುವ ಕ್ರಿಸ್ತನ ಆಜ್ಞೆಯನ್ನು ಪೂರ್ತಿಯಾಗಿ ಪಾಲಿಸುವುದರಲ್ಲಿ, ನಾವು ಬೋಧಕರೂ ಮಾರ್ಗದರ್ಶಕರೂ ಆಗಿರುವುದು ಆವಶ್ಯಕವಾಗಿದೆ. ಈ ರೀತಿಯಲ್ಲಿ ನಾವು ಯೇಸುವಿನ ಮತ್ತು ಸ್ವತಃ ಯೆಹೋವನ ಮಾದರಿಯನ್ನು ಅನುಕರಿಸುತ್ತೇವೆ.​—⁠ಕೀರ್ತನೆ 48:14; ಪ್ರಕಟನೆ 7:17.

5 ಯೇಸುವಿನ ಆಜ್ಞೆಗಳನ್ನು ಕಾಪಾಡಿಕೊಳ್ಳುವಂತೆ ಇತರರಿಗೆ ಉಪದೇಶ ಮಾಡುವುದರಲ್ಲಿ, ಶಿಷ್ಯರನ್ನಾಗಿ ಮಾಡುವ ಆಜ್ಞೆಯನ್ನು ಅವರು ಪಾಲಿಸುವಂತೆ ಸಹಾಯಮಾಡುವುದೂ ಸೇರಿದೆ. ನಾವು ಯಾರೊಂದಿಗೆ ಬೈಬಲ್‌ ಅಧ್ಯಯನವನ್ನು ನಡೆಸುತ್ತೇವೊ ಅವರಲ್ಲಿ ಕೆಲವರಿಗೆ ಇದು ಬಹಳ ಕಷ್ಟಕರವಾಗಿ ಕಂಡುಬಂದೀತು. ಅವರು ಈ ಹಿಂದೆ ಪ್ರಾಯಶಃ ಕ್ರೈಸ್ತಪ್ರಪಂಚದ ಚರ್ಚುಗಳ ಸಕ್ರಿಯ ಸದಸ್ಯರಾಗಿದ್ದರೂ, ಶಿಷ್ಯರನ್ನಾಗಿ ಮಾಡುವುದರ ಬಗ್ಗೆ ಅವರ ಮಾಜಿ ಧಾರ್ಮಿಕ ಬೋಧಕರು ಅವರಿಗೆ ಕಲಿಸಿರುವುದು ಅಸಂಭವನೀಯ. ಕ್ರೈಸ್ತಪ್ರಪಂಚದ ಚರ್ಚುಗಳು ತಮ್ಮ ಹಿಂಡಿಗೆ ಸುವಾರ್ತೆ ಸಾರಲು ಕಲಿಸುವುದರಲ್ಲಿ ಪೂರ್ತಿಯಾಗಿ ವಿಫಲಗೊಂಡಿವೆಯೆಂದು ಕೆಲವು ಚರ್ಚು ಮುಖಂಡರು ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತಾರೆ. ಲೋಕದಲ್ಲೆಲ್ಲ ಹೋಗಿ ಎಲ್ಲ ರೀತಿಯ ಜನರನ್ನು ಶಿಷ್ಯರನ್ನಾಗಿ ಮಾಡಲು ಯೇಸು ಕೊಟ್ಟ ಆಜ್ಞೆಯ ಕುರಿತು ಮಾತಾಡುತ್ತ, ಬೈಬಲ್‌ ವಿದ್ವಾಂಸ ಜಾನ್‌ ಆರ್‌. ಡಬ್ಲ್ಯೂ. ಸ್ಟಾಟ್‌ ಹೇಳಿದ್ದು: “ಈ ಆಜ್ಞೆಯ ಸೂಚ್ಯಾರ್ಥಗಳಿಗೆ ವಿಧೇಯರಾಗಲು ನಾವು ತಪ್ಪಿಬಿದ್ದಿರುವುದೇ ಇಂದಿನ ಸೌವಾರ್ತಿಕ ಕ್ಷೇತ್ರದಲ್ಲಿ ಈವ್ಯಾಂಜೆಲಿಕಲ್‌ ಕ್ರೈಸ್ತರ ಅತ್ಯಂತ ದೊಡ್ಡ ನ್ಯೂನತೆಯಾಗಿದೆ.” ಅವರು ಕೂಡಿಸಿ ಹೇಳಿದ್ದು: “ಸುವಾರ್ತೆಯನ್ನು ದೂರದಿಂದ ಘೋಷಿಸುವುದೇ ನಮ್ಮ ಪ್ರವೃತ್ತಿಯಾಗಿದೆ. ನಾವು ಕೆಲವು ಬಾರಿ, ಮುಳುಗಿ ಸಾಯುತ್ತಿರುವ ಜನರಿಗೆ ಸಮುದ್ರತೀರದ ಭದ್ರಸ್ಥಾನದಿಂದ ಕಿರಿಚಿ ಸಲಹೆ ನೀಡುವವರಂತೆ ಕಾಣುತ್ತೇವೆ. ಅವರನ್ನು ಕಾಪಾಡಲು ನಾವು ನೀರಿಗೆ ಧುಮುಕುವುದಿಲ್ಲ. ನಾವು ಒದ್ದೆಯಾಗುವೆವು ಎಂದು ಹೆದರುತ್ತೇವೆ.”

6 ನಾವು ಯಾರೊಂದಿಗೆ ಬೈಬಲ್‌ ಅಧ್ಯಯನ ನಡೆಸುತ್ತಿದ್ದೇವೊ ಆ ವ್ಯಕ್ತಿ ಈ ಹಿಂದೆ, ಯಾವುದರ ಸದಸ್ಯರು ‘ಒದ್ದೆಯಾಗಲು ಹೆದರುತ್ತಾರೊ’ ಆ ಒಂದು ಧರ್ಮದ ಭಾಗವಾಗಿದ್ದಲ್ಲಿ, ಸಾಂಕೇತಿಕವಾಗಿ ಹೇಳುವುದಾದರೆ ಆ ನೀರಿನ ಭಯವನ್ನು ಜಯಿಸಿ, ಶಿಷ್ಯರನ್ನಾಗಿ ಮಾಡುವ ಕ್ರಿಸ್ತನ ಆಜ್ಞೆಗೆ ವಿಧೇಯನಾಗುವುದು ಒಂದು ಪಂಥಾಹ್ವಾನವಾಗಿದ್ದೀತು. ಅವನಿಗೆ ಸಹಾಯವು ಅಗತ್ಯ. ಆದುದರಿಂದಲೇ, ನಾವು ತಾಳ್ಮೆಯಿಂದ ಆ ವ್ಯಕ್ತಿಗೆ ಎಂಥ ರೀತಿಯ ಉಪದೇಶ ಮತ್ತು ಮಾರ್ಗದರ್ಶನವನ್ನು ಕೊಡಬೇಕೆಂದರೆ ಅದು ಅವನ ತಿಳಿವಳಿಕೆಯನ್ನು ಗಹನಗೊಳಿಸಿ, ಅವನನ್ನು ಕಾರ್ಯಕ್ಕಿಳಿಯುವಂತೆ ಪ್ರಚೋದಿಸಬೇಕು. ಹೇಗೆ ಫಿಲಿಪ್ಪನ ಉಪದೇಶವು ಐಥಿಯೋಪ್ಯದವನ ಜ್ಞಾನವನ್ನು ವರ್ಧಿಸಿ ದೀಕ್ಷಾಸ್ನಾನವನ್ನು ಹೊಂದುವಂತೆ ಅವನನ್ನು ಪ್ರಚೋದಿಸಿತೊ ಹಾಗೆಯೇ. (ಯೋಹಾನ 16:13; ಅ. ಕೃತ್ಯಗಳು 8:35-38) ಇದಕ್ಕೆ ಕೂಡಿಸಿ, ಶಿಷ್ಯರನ್ನಾಗಿ ಮಾಡುವ ಕ್ರಿಸ್ತನ ಆಜ್ಞೆಯನ್ನು ಪಾಲಿಸುವಂತೆ ಬೈಬಲ್‌ ವಿದ್ಯಾರ್ಥಿಗಳಿಗೆ ಕಲಿಸುವ ನಮ್ಮ ಅಪೇಕ್ಷೆಯು, ಅವರು ರಾಜ್ಯ ಸಾರುವಿಕೆಯಲ್ಲಿ ಪ್ರಥಮ ಹೆಜ್ಜೆಗಳನ್ನಿಡುವಾಗ ಅವರಿಗೆ ಮಾರ್ಗದರ್ಶನವನ್ನು ಕೊಡಲು ನಾವು ಅವರ ಪಕ್ಕದಲ್ಲಿರುವಂತೆ ನಮ್ಮನ್ನು ಪ್ರಚೋದಿಸುತ್ತದೆ.​—⁠ಪ್ರಸಂಗಿ 4:9, 10; ಲೂಕ 6:40.

‘ಆಜ್ಞಾಪಿಸಿದ್ದನ್ನೆಲ್ಲಾ’

7 ನಾವು ಹೊಸ ಶಿಷ್ಯರಿಗೆ, ಅವರೂ ಶಿಷ್ಯರನ್ನಾಗಿ ಮಾಡಬೇಕು ಎಂಬುದಷ್ಟನ್ನೇ ಉಪದೇಶ ಮಾಡುವುದಿಲ್ಲ. ಯೇಸು ನಮಗೆ, ಅವನು ‘ಆಜ್ಞಾಪಿಸಿದನ್ನೆಲ್ಲಾ’ ಇತರರಿಗೆ ಉಪದೇಶಿಸುವಂತೆ ಸಲಹೆ ಕೊಟ್ಟನು. ಇದರಲ್ಲಿ, ದೇವರನ್ನು ಪ್ರೀತಿಸುವ ಮತ್ತು ನೆರೆಯವನನ್ನು ಪ್ರೀತಿಸುವ ಅತಿ ಶ್ರೇಷ್ಠವಾದ ಎರಡು ಆಜ್ಞೆಗಳು ಸೇರಿವೆ. (ಮತ್ತಾಯ 22:​37-39) ಆ ಆಜ್ಞೆಗಳನ್ನು ಕಾಪಾಡಿಕೊಳ್ಳುವಂತೆ ಒಬ್ಬ ಹೊಸ ಶಿಷ್ಯನಿಗೆ ಹೇಗೆ ಕಲಿಸಬಹುದು?

8 ಆ ಡ್ರೈವಿಂಗ್‌ ವಿದ್ಯಾರ್ಥಿಯ ದೃಷ್ಟಾಂತವನ್ನು ಪುನಃ ನೆನಪಿಗೆ ತನ್ನಿರಿ. ಶಿಕ್ಷಕನು ಪಕ್ಕದಲ್ಲಿ ಕುಳಿತುಕೊಂಡಿದ್ದು, ಆ ವಿದ್ಯಾರ್ಥಿಯು ವಾಹನಗಳು ಓಡಾಡುತ್ತಿರುವ ರಸ್ತೆಯಲ್ಲಿ ವಾಹನವನ್ನು ಚಲಾಯಿಸುವಾಗ, ವಿದ್ಯಾರ್ಥಿಯು ಶಿಕ್ಷಕನ ಮಾತುಗಳನ್ನು ಕೇಳಿ ಕಲಿಯುತ್ತಾನೆ ಮಾತ್ರವಲ್ಲ, ಬೇರೆ ಚಾಲಕರನ್ನು ನೋಡಿಯೂ ಕಲಿಯುತ್ತಾನೆ. ಉದಾಹರಣೆಗೆ, ಮುಂದಿರುವ ಚಾಲಕನೊಬ್ಬನು ದಯಾಪರನಾಗಿ ಇನ್ನೊಬ್ಬ ಚಾಲಕನಿಗೆ ತನ್ನ ಮುಂದೆ ಬಂದು ವಾಹನಗಳ ಸಾಲಿನಲ್ಲಿ ಸೇರುವಂತೆ ಎಡೆಮಾಡಿಕೊಡುವುದನ್ನು, ಇಲ್ಲವೆ ಒಬ್ಬ ಚಾಲಕನು ತನ್ನ ಎದುರಿನಿಂದ ಬರುತ್ತಿರುವ ವಾಹನಚಾಲಕರ ಕಣ್ಣು ಕುಕ್ಕಿಸದಂತೆ ತನ್ನ ಕಾರಿನ ಹೆಡ್‌ಲೈಟ್‌ಗಳನ್ನು ಮಬ್ಬುಗೊಳಿಸುವುದನ್ನು, ಅಥವಾ ಪರಿಚಯಸ್ಥನ ವಾಹನ ಹಾಳಾಗಿರುವುದನ್ನು ಕಂಡು ಇಷ್ಟಪೂರ್ವಕವಾಗಿ ಸಹಾಯ ನೀಡುವ ಒಬ್ಬ ಚಾಲಕನನ್ನು ಶಿಕ್ಷಕನು ವಿದ್ಯಾರ್ಥಿಗೆ ತೋರಿಸಬಹುದು. ಇಂತಹ ದೃಷ್ಟಾಂತಗಳು, ಆ ವಿದ್ಯಾರ್ಥಿಯು ವಾಹನ ಚಲಾಯಿಸುವಾಗ ಅನ್ವಯಿಸಬಲ್ಲ ಬೆಲೆಬಾಳುವ ಪಾಠಗಳನ್ನು ಅವನಿಗೆ ಕಲಿಸುತ್ತವೆ. ಇದೇ ರೀತಿ, ಜೀವಕ್ಕೆ ನಡೆಸುವ ಮಾರ್ಗದಲ್ಲಿ ಪ್ರಯಾಣಿಸುತ್ತಿರುವ ಹೊಸ ಶಿಷ್ಯನೊಬ್ಬನು ತನ್ನ ಬೋಧಕನಿಂದ ಮಾತ್ರವಲ್ಲ, ಸಭೆಯಲ್ಲಿ ಅವನು ನೋಡುವ ಉತ್ತಮ ಮಾದರಿಗಳಿಂದಲೂ ಕಲಿಯುತ್ತಾನೆ.​—⁠ಮತ್ತಾಯ 7:​13, 14.

9 ಉದಾಹರಣೆಗೆ, ಒಂಟಿ ತಾಯಿಯೊಬ್ಬಳು ತನ್ನ ಪುಟ್ಟ ಮಕ್ಕಳೊಂದಿಗೆ ರಾಜ್ಯ ಸಭಾಗೃಹಕ್ಕೆ ಬರಲು ಪ್ರಯಾಸಪಡುವುದನ್ನು ಒಬ್ಬ ಬೈಬಲ್‌ ವಿದ್ಯಾರ್ಥಿಯು ಗಮನಿಸಬಹುದು. ಖಿನ್ನತೆಯಿಂದ ಬಳಲುತ್ತಿರುವ ಒಬ್ಬಾಕೆಯು ಅದರೊಂದಿಗೆ ಹೋರಾಡುತ್ತಿರುವುದಾದರೂ ನಂಬಿಗಸ್ತಿಕೆಯಿಂದ ಕೂಟಗಳಿಗೆ ಬರುವುದನ್ನು, ವೃದ್ಧ ವಿಧವೆಯೊಬ್ಬಳು ತನ್ನ ವಾಹನದಲ್ಲಿ ಬೇರೆ ವೃದ್ಧರನ್ನು ಪ್ರತಿಯೊಂದು ಸಭಾ ಕೂಟಕ್ಕೆ ಕರೆತರುವುದನ್ನು, ಇಲ್ಲವೇ ಒಬ್ಬ ಹದಿಪ್ರಾಯದವನು ರಾಜ್ಯ ಸಭಾಗೃಹವನ್ನು ಸ್ವಚ್ಛಗೊಳಿಸುವುದರಲ್ಲಿ ಭಾಗವಹಿಸುವುದನ್ನು ಆ ವಿದ್ಯಾರ್ಥಿಯು ಗಮನಿಸಬಹುದು. ಸಭಾ ಹಿರಿಯನೊಬ್ಬನು ತನ್ನ ಅನೇಕ ಸಭಾ ಜವಾಬ್ದಾರಿಗಳ ಹೊರತೂ ನಂಬಿಗಸ್ತಿಕೆಯಿಂದ ಕ್ಷೇತ್ರ ಸೇವೆಯಲ್ಲಿ ನಾಯಕತ್ವ ವಹಿಸುವುದನ್ನು ಆ ಬೈಬಲ್‌ ವಿದ್ಯಾರ್ಥಿ ನೋಡಬಹುದು. ಅಂಗವಿಕಲತೆಯಿಂದಾಗಿ ಮನೆಯಲ್ಲೇ ಇರಬೇಕಾದರೂ ಭೇಟಿ ಕೊಡುವವರಿಗೆಲ್ಲ ಆಧ್ಯಾತ್ಮಿಕ ಪ್ರೋತ್ಸಾಹದ ಮೂಲನಾಗಿರುವಂಥ ಸಾಕ್ಷಿಯೊಬ್ಬನನ್ನು ಅವನು ಸಂಧಿಸಬಹುದು. ತಮ್ಮ ವೃದ್ಧ ಹೆತ್ತವರಿಗೆ ಆಸರೆ ನೀಡುವ ಕಾರಣದಿಂದ ತಮ್ಮ ಜೀವನದಲ್ಲಿ ವಿಪರೀತ ಹೊಂದಾಣಿಕೆಗಳನ್ನು ಮಾಡಿಕೊಂಡಿರುವ ಒಂದು ವಿವಾಹಿತ ದಂಪತಿಯನ್ನು ಆ ವಿದ್ಯಾರ್ಥಿಯು ಗಮನಿಸಬಹುದು. ಆ ಹೊಸ ಶಿಷ್ಯನು ಇಂತಹ ದಯಾಪರರಾದ, ಸಹಾಯ ನೀಡುವ ಮತ್ತು ಭರವಸಾರ್ಹರಾದ ಕ್ರೈಸ್ತರನ್ನು ಅವಲೋಕಿಸುತ್ತಾ, ದೇವರನ್ನೂ ನೆರೆಯವರನ್ನೂ ಅದರಲ್ಲೂ ಜೊತೆ ವಿಶ್ವಾಸಿಗಳನ್ನು ಪ್ರೀತಿಸಬೇಕೆಂಬ ಕ್ರಿಸ್ತನ ಆಜ್ಞೆಗೆ ವಿಧೇಯನಾಗುವುದರ ಅರ್ಥವನ್ನು ಮಾದರಿಯ ಮೂಲಕ ಕಲಿಯುತ್ತಾನೆ. (ಜ್ಞಾನೋಕ್ತಿ 24:32; ಯೋಹಾನ 13:35; ಗಲಾತ್ಯ 6:10; 1 ತಿಮೊಥೆಯ 5:4, 8; 1 ಪೇತ್ರ 5:2, 3) ಈ ರೀತಿಯಲ್ಲಿ ಕ್ರೈಸ್ತ ಸಭೆಯ ಪ್ರತಿಯೊಬ್ಬ ಸದಸ್ಯನು ಒಬ್ಬ ಬೋಧಕನೂ ಮಾರ್ಗದರ್ಶಕನೂ ಆಗಿರಬಲ್ಲನು ಮತ್ತು ಆಗಿರಬೇಕು.​—⁠ಮತ್ತಾಯ 5:16.

“ಯುಗದ ಸಮಾಪ್ತಿಯ ವರೆಗೂ”

10 ನಾವು ಎಂದಿನ ವರೆಗೆ ಶಿಷ್ಯರನ್ನಾಗಿ ಮಾಡುವುದನ್ನು ಮುಂದುವರಿಸಬೇಕು? ಯುಗದ ಸಮಾಪ್ತಿಯ ಆದ್ಯಂತ. (ಮತ್ತಾಯ 28:20) ಯೇಸುವಿನ ಆಜ್ಞೆಯ ಈ ಅಂಶವನ್ನು ನಾವು ನೆರವೇರಿಸಲು ಶಕ್ತರಾಗಿರುವೆವೊ? ಒಂದು ಲೋಕವ್ಯಾಪಕ ಸಭೆಯೋಪಾದಿ ನಾವು ಹೀಗೆ ಮಾಡಲು ದೃಢವಾಗಿ ನಿಶ್ಚಯಿಸಿದ್ದೇವೆ. ಗತ ವರುಷಗಳಲ್ಲಿ, ನಾವು ಸಂತೋಷದಿಂದ ನಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು “ನಿತ್ಯಜೀವಕ್ಕಾಗಿ ಸರಿಯಾದ ಪ್ರವೃತ್ತಿ” ಇರುವವರನ್ನು ಹುಡುಕಲಿಕ್ಕಾಗಿ ವಿನಿಯೋಗಿಸಿದ್ದೇವೆ. (ಅ. ಕೃತ್ಯಗಳು 13:​48, NW) ಪ್ರಸ್ತುತವಾಗಿ, ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ, ವರುಷದಲ್ಲಿ ಪ್ರತಿ ದಿವಸ ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಸರಾಸರಿಯಾಗಿ 30 ಲಕ್ಷಗಳಿಗೂ ಹೆಚ್ಚು ತಾಸುಗಳನ್ನು ವ್ಯಯಿಸುತ್ತಿದ್ದಾರೆ. ನಾವು ಯೇಸುವಿನ ಮಾದರಿಯನ್ನು ಅನುಸರಿಸುವ ಕಾರಣದಿಂದಲೇ ಹಾಗೆ ಮಾಡುತ್ತೇವೆ. ಅವನು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:​34, ಓರೆ ಅಕ್ಷರಗಳು ನಮ್ಮವು.) ಇದು ನಮ್ಮ ಹೃತ್ಪೂರ್ವಕವಾದ ಬಯಕೆಯೂ ಆಗಿದೆ. (ಯೋಹಾನ 20:21) ನಮಗೆ ಒಪ್ಪಿಸಲ್ಪಟ್ಟಿರುವ ಕೆಲಸವನ್ನು ಆರಂಭಿಸುವುದು ಮಾತ್ರವಲ್ಲ, ಅದನ್ನು ಪೂರೈಸುವುದೂ ನಮ್ಮ ಬಯಕೆಯಾಗಿದೆ.​—⁠ಮತ್ತಾಯ 24:13; ಯೋಹಾನ 17:⁠4.

11 ಆದರೆ ನಮ್ಮ ಜೊತೆವಿಶ್ವಾಸಿಗಳಲ್ಲಿ ಕೆಲವರು ಆಧ್ಯಾತ್ಮಿಕವಾಗಿ ಬಲಹೀನರಾಗಿರುವುದನ್ನು ಮತ್ತು ಇದರಿಂದಾಗಿ ಶಿಷ್ಯರನ್ನಾಗಿ ಮಾಡಬೇಕೆಂಬ ಕ್ರಿಸ್ತನ ಆಜ್ಞೆಯನ್ನು ಪೂರೈಸುವುದರಲ್ಲಿ ನಿಧಾನಿಸಿರುವುದನ್ನು ಅಥವಾ ನಿಲ್ಲಿಸಿರುವುದನ್ನು ಗಮನಿಸುವುದು ನಮ್ಮನ್ನು ದುಃಖಿತರನ್ನಾಗಿ ಮಾಡುತ್ತದೆ. ಇಂಥವರು ಸಭೆಯೊಂದಿಗೆ ತಮ್ಮ ಸಹವಾಸವನ್ನು ನವೀಕರಿಸುವಂತೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪುನಃ ಪಾಲ್ಗೊಳ್ಳಲು ಆರಂಭಿಸುವಂತೆ ನಾವು ಯಾವ ವಿಧದಲ್ಲಾದರೂ ಅವರಿಗೆ ಸಹಾಯಮಾಡಬಲ್ಲೆವೊ? (ರೋಮಾಪುರ 15:1; ಇಬ್ರಿಯ 12:12) ತನ್ನ ಅಪೊಸ್ತಲರು ತಾತ್ಕಾಲಿಕವಾಗಿ ಬಲಹೀನ ಸ್ಥಿತಿಯಲ್ಲಿದ್ದಾಗ ಯೇಸು ಅವರಿಗೆ ಸಹಾಯಮಾಡಿದ ವಿಧವು, ಇಂದು ನಾವು ಏನು ಮಾಡಬಹುದೆಂಬುದನ್ನು ಸೂಚಿಸುತ್ತದೆ.

ಚಿಂತೆ ತೋರಿಸಿರಿ

12 ಯೇಸುವಿನ ಭೂಶುಶ್ರೂಷೆಯ ಅಂತ್ಯದಲ್ಲಿ ಅವನ ಮರಣವು ಸನ್ನಿಹಿತವಾಗಿದ್ದಾಗ, ಅಪೊಸ್ತಲರು “ಆತನನ್ನು ಬಿಟ್ಟು ಓಡಿಹೋದರು.” ಯೇಸು ಮುಂತಿಳಿಸಿದ್ದಂತೆಯೇ, “ಒಬ್ಬೊಬ್ಬನು ತನ್ನತನ್ನ ಸ್ಥಳಕ್ಕೆ ಚದರಿ”ಹೋದನು. (ಮಾರ್ಕ 14:50; ಯೋಹಾನ 16:32) ಆಧ್ಯಾತ್ಮಿಕವಾಗಿ ಬಲಹೀನರಾಗಿದ್ದ ಆ ಒಡನಾಡಿಗಳೊಂದಿಗೆ ಯೇಸು ಹೇಗೆ ವ್ಯವಹರಿಸಿದನು? ಅವನ ಪುನರುತ್ಥಾನವಾದ ಸ್ವಲ್ಪದರಲ್ಲಿ, ಯೇಸು ಅವನ ಅನುಯಾಯಿಗಳಲ್ಲಿ ಕೆಲವರಿಗೆ ಹೇಳಿದ್ದು: “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ನನ್ನನ್ನು ನೋಡುವರು.” (ಮತ್ತಾಯ 28:10) ಅಪೊಸ್ತಲರು ಗಂಭೀರವಾದ ಬಲಹೀನತೆಗಳನ್ನು ತೋರಿಸಿದರೂ, ಯೇಸು ಅವರನ್ನು ‘ನನ್ನ ಸಹೋದರರು’ ಎಂದು ಕರೆದನು. (ಮತ್ತಾಯ 12:49) ಅವನು ಅವರಲ್ಲಿ ಭರವಸೆಯನ್ನು ಕಳೆದುಕೊಂಡಿರಲಿಲ್ಲ. ಈ ವಿಧದಲ್ಲಿ, ಯೇಸುವೂ ಯೆಹೋವನಂತೆಯೇ ಕರುಣಾಶೀಲನೂ ಕ್ಷಮಿಸುವವನೂ ಆಗಿದ್ದನು. (2 ಅರಸುಗಳು 13:23) ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?

13 ಸೇವೆಯಲ್ಲಿ ನಿಧಾನಿಸಿರುವವರು, ಇಲ್ಲವೆ ಅದನ್ನು ನಿಲ್ಲಿಸಿರುವವರ ಬಗ್ಗೆ ನಮ್ಮಲ್ಲಿ ಆಳವಾದ ಅನುಕಂಪವಿರಬೇಕು. ಆ ಜೊತೆವಿಶ್ವಾಸಿಗಳು ಈ ಹಿಂದೆ ಮಾಡಿರುವ ಮತ್ತು ಅವರಲ್ಲಿ ಕೆಲವರು ಬಹುಶಃ ದಶಕಗಳಿಂದ ಮಾಡಿರುವ ಪ್ರೀತಿಯ ಕಾರ್ಯಗಳನ್ನು ನಾವಿನ್ನೂ ನೆನಪಿಸಿಕೊಳ್ಳುತ್ತೇವೆ. (ಇಬ್ರಿಯ 6:10) ಅವರ ಒಡನಾಟದ ನಷ್ಟವನ್ನು ನಾವು ನಿಜವಾಗಿಯೂ ಅನುಭವಿಸುತ್ತಿದ್ದೇವೆ. (ಲೂಕ 15:4-7; 1 ಥೆಸಲೊನೀಕ 2:17) ಆದರೆ ನಾವು ಅವರಿಗೆ ನಮ್ಮ ಅನುಕಂಪವನ್ನು ಹೇಗೆ ವ್ಯಕ್ತಪಡಿಸಬಹುದು?

14 ಆ ಕುಗ್ಗಿಹೋಗಿದ್ದ ಅಪೊಸ್ತಲರು ಗಲಿಲಾಯಕ್ಕೆ ಹೋಗಬೇಕೆಂದೂ ತಾನು ಅವರನ್ನು ಅಲ್ಲಿ ಕಾಣುವೆನೆಂದೂ ಯೇಸು ಹೇಳಿದನು. ಕಾರ್ಯತಃ, ಯೇಸು ಅವರನ್ನು ಒಂದು ವಿಶೇಷ ಕೂಟಕ್ಕೆ ಉಪಸ್ಥಿತರಿರುವಂತೆ ಕರೆಕೊಡುತ್ತಿದ್ದನು. (ಮತ್ತಾಯ 28:10) ಹಾಗೆಯೇ ಇಂದು, ಆಧ್ಯಾತ್ಮಿಕವಾಗಿ ಬಲಹೀನರಾಗಿರುವವರು ಕ್ರೈಸ್ತ ಸಭೆಯ ಕೂಟಗಳಿಗೆ ಉಪಸ್ಥಿತರಾಗುವಂತೆ ನಾವು ಪ್ರೋತ್ಸಾಹಿಸುತ್ತೇವೆ, ಮತ್ತು ಅಂತಹ ಪ್ರೋತ್ಸಾಹವನ್ನು ನಾವು ಅವರಿಗೆ ಒಂದಕ್ಕಿಂತಲೂ ಹೆಚ್ಚು ಬಾರಿ ಕೊಡಬೇಕಾಗಿ ಬಂದೀತು. ಅಪೊಸ್ತಲರ ಸಂಬಂಧದಲ್ಲಿಯಾದರೊ, ಆ ಆಮಂತ್ರಣವು ಪರಿಣಾಮಕಾರಿಯಾಗಿತ್ತು, ಏಕೆಂದರೆ ಆ “ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ ಯೇಸು ತಮಗೆ ಗೊತ್ತುಮಾಡಿದ್ದ ಬೆಟ್ಟಕ್ಕೆ ಸೇರಿದರು.” (ಮತ್ತಾಯ 28:16) ನಮ್ಮ ಮನಃಪೂರ್ವಕವಾದ ಆಮಂತ್ರಣಗಳಿಗೆ ಬಲಹೀನರು ಇದೇ ರೀತಿಯಾಗಿ ಪ್ರತಿವರ್ತಿಸಿ, ಕ್ರೈಸ್ತ ಕೂಟಗಳಿಗೆ ಮತ್ತೆ ಬರಲು ತೊಡಗುವಾಗ ನಮಗಾಗುವ ಆನಂದವೊ ಅಪಾರ!​—⁠ಲೂಕ 15:⁠6.

15 ಅಂಥ ಬಲಹೀನ ಕ್ರೈಸ್ತನೊಬ್ಬನು ರಾಜ್ಯ ಸಭಾಗೃಹಕ್ಕೆ ಬಂದಾಗ ನಾವು ಹೇಗೆ ಪ್ರತಿಕ್ರಿಯೆ ತೋರಿಸುವೆವು? ಒಳ್ಳೆಯದು, ತಾತ್ಕಾಲಿಕವಾಗಿ ನಂಬಿಕೆಯಲ್ಲಿ ಬಲಹೀನರಾಗಿದ್ದ ತನ್ನ ಅಪೊಸ್ತಲರನ್ನು ಆ ನೇಮಿತ ಕೂಟದ ಸ್ಥಳದಲ್ಲಿ ನೋಡಿದಾಗ ಯೇಸು ಏನು ಮಾಡಿದನು? “ಯೇಸು ಹತ್ತರಕ್ಕೆ ಬಂದು” ಅವರೊಂದಿಗೆ ಮಾತಾಡಿದನು. (ಮತ್ತಾಯ 28:18) ಅವನು ಅವರನ್ನು ದೂರದಿಂದ ದಿಟ್ಟಿಸಿ ನೋಡುತ್ತಾ ನಿಲ್ಲಲಿಲ್ಲ, ಬದಲಾಗಿ ಅವರ ಬಳಿಗೆ ಹೋದನು. ಯೇಸು ಹೀಗೆ ಆರಂಭದ ಹೆಜ್ಜೆಯನ್ನು ತೆಗೆದುಕೊಂಡಾಗ ಅಪೊಸ್ತಲರಿಗೆ ಎಷ್ಟೊಂದು ನೆಮ್ಮದಿಯ ಅನಿಸಿಕೆಯಾಗಿದ್ದಿರಬಹುದೆಂದು ಊಹಿಸಿರಿ! ಆಧ್ಯಾತ್ಮಿಕವಾಗಿ ಬಲಹೀನರಾಗಿರುವವರು ಕ್ರೈಸ್ತ ಸಭೆಗೆ ಹಿಂದಿರುಗಲು ಪ್ರಯತ್ನಮಾಡುವಾಗ ನಾವೂ ಹಾಗೆಯೇ ಆರಂಭದ ಹೆಜ್ಜೆಯನ್ನು ತೆಗೆದುಕೊಂಡು ಅವರನ್ನು ಸಂತೋಷದಿಂದ ಸ್ವಾಗತಿಸೋಣ.

16 ಯೇಸು ಇನ್ನೇನು ಮಾಡಿದನು? ಪ್ರಥಮವಾಗಿ ಅವನು, “ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ” ಎಂಬ ಪ್ರಕಟನೆಯನ್ನು ಮಾಡಿದನು. ಎರಡನೆಯದಾಗಿ, “ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ” ಎಂಬ ನೇಮಕವನ್ನು ಕೊಟ್ಟನು. ಮತ್ತು ಮೂರನೆಯದಾಗಿ, “ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಮಾತುಕೊಟ್ಟನು. ಆದರೆ ಯೇಸು ಏನು ಮಾಡಲಿಲ್ಲ ಎಂಬುದನ್ನು ನೀವು ಗಮನಿಸಿದಿರೊ? ಅವನು ತನ್ನ ಶಿಷ್ಯರ ವೈಫಲ್ಯಗಳು ಮತ್ತು ಸಂದೇಹಗಳಿಗಾಗಿ ಅವರನ್ನು ಗದರಿಸಲಿಲ್ಲ. (ಮತ್ತಾಯ 28:17) ಅವನ ಈ ವರ್ತನೆ ಕಾರ್ಯಸಾಧಕವಾಗಿತ್ತೊ? ಹೌದು. ಸ್ವಲ್ಪ ಸಮಯದೊಳಗಾಗಿ ಅಪೊಸ್ತಲರು ಪುನಃ “ಉಪದೇಶಮಾಡುತ್ತಾ . . . ಶುಭವರ್ತಮಾನವನ್ನು ಸಾರುತ್ತಾ” ಹೋದರು. (ಅ. ಕೃತ್ಯಗಳು 5:42) ಹೀಗೆ, ಬಲಹೀನರನ್ನು ಹೇಗೆ ವೀಕ್ಷಿಸಬೇಕು, ಹೇಗೆ ಉಪಚರಿಸಬೇಕು ಎಂಬ ವಿಷಯದಲ್ಲಿ ಯೇಸುವಿನ ಮಾದರಿಯನ್ನು ಅನುಕರಿಸುವ ಮೂಲಕ, ನಮ್ಮ ಸ್ಥಳಿಕ ಸಭೆಯಲ್ಲಿ ತದ್ರೀತಿಯ ಹೃದಯೋತ್ತೇಜಕ ಪ್ರತಿಫಲಗಳನ್ನು ನಾವೂ ನೋಡಲು ಶಕ್ತರಾಗಬಹುದು. *​—⁠ಅ. ಕೃತ್ಯಗಳು 20:35.

“ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ”

17 ಯೇಸುವಿನ ಆಜ್ಞೆಯ, “ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂಬ ಅಂತಿಮ ಮಾತುಗಳಲ್ಲಿ, ಶಿಷ್ಯರನ್ನಾಗಿ ಮಾಡುವ ಕ್ರಿಸ್ತನ ಆಜ್ಞೆಯನ್ನು ಪೂರೈಸಲು ಪ್ರಯತ್ನಿಸುವ ಸಕಲರಿಗೆ ಒಂದು ಬಲವರ್ಧಕ ವಿಷಯವು ಅಡಕವಾಗಿದೆ. ರಾಜ್ಯ ಸಾರುವಿಕೆಯ ನಮ್ಮ ಕೆಲಸಕ್ಕೆದುರಾಗಿ ವೈರಿಗಳು ಯಾವುದೇ ವಿರೋಧವನ್ನು ತಂದರೂ, ನಮಗೆ ವಿರುದ್ಧವಾಗಿ ಯಾವುದೇ ರೀತಿಯ ಆರೋಪವನ್ನು ಹೊರಿಸಿದರೂ, ನಾವು ಭಯಪಡಲು ಯಾವ ಕಾರಣವೂ ಇಲ್ಲ. ಏಕೆ? ಏಕೆಂದರೆ, ‘ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು’ ಇರುವ ನಮ್ಮ ನಾಯಕನಾದ ಯೇಸು ನಮಗೆ ಬೆಂಬಲ ನೀಡಲು ನಮ್ಮೊಂದಿಗಿದ್ದಾನೆ!

18‘ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ’ ಎಂಬ ಯೇಸುವಿನ ಮಾತೂ ನಮಗೆ ಮಹಾ ಸಾಂತ್ವನದ ಮೂಲವಾಗಿದೆ. ಶಿಷ್ಯರನ್ನಾಗಿ ಮಾಡುವ ಕ್ರಿಸ್ತನ ಆಜ್ಞೆಯನ್ನು ನಾವು ಶ್ರದ್ಧೆಯಿಂದ ಪೂರೈಸಲು ಪ್ರಯತ್ನಿಸುವಾಗ, ನಮಗೆ ಸಂತೋಷದ ದಿನಗಳು ಮಾತ್ರವಲ್ಲ, ದುಃಖದ ದಿನಗಳೂ ಬರುತ್ತವೆ. (2 ಪೂರ್ವಕಾಲವೃತ್ತಾಂತ 6:29) ನಮ್ಮಲ್ಲಿ ಕೆಲವರು, ತಮಗೆ ಅತಿ ಪ್ರಿಯರಾದವರೊಬ್ಬರ ಮರಣದಿಂದಾಗಿ ಶೋಕಪೂರ್ಣ ಅವಧಿಗಳನ್ನು ಅನುಭವಿಸುತ್ತಾರೆ. (ಆದಿಕಾಂಡ 23:2; ಯೋಹಾನ 11:33-36) ಇತರರು ಆರೋಗ್ಯ ಮತ್ತು ಶಕ್ತಿ ಕುಂದುತ್ತಿರುವಾಗ ವಾರ್ಧಕ್ಯವನ್ನು ನಿಭಾಯಿಸಬೇಕಾಗುತ್ತದೆ. (ಪ್ರಸಂಗಿ 12:​1-6) ಇನ್ನಿತರರು ಖಿನ್ನತೆಯಿಂದ ಜರ್ಜರಿತರಾಗಿರುವ ದಿನಗಳನ್ನು ಎದುರಿಸುತ್ತಾರೆ. (1 ಥೆಸಲೊನೀಕ 5:14) ಮತ್ತು ಹೆಚ್ಚುತ್ತಿರುವ ಸಂಖ್ಯೆಯಲ್ಲಿ ನಮ್ಮಲ್ಲಿರುವವರು ವಿಪರೀತವಾದ ಆರ್ಥಿಕ ಬಿಕ್ಕಟ್ಟುಗಳೊಂದಿಗೆ ಹೋರಾಡುತ್ತಾರೆ. ಆದರೆ ಇಂತಹ ಪಂಥಾಹ್ವಾನಗಳ ಹೊರತೂ, ನಾವು ನಮ್ಮ ಶುಶ್ರೂಷೆಯಲ್ಲಿ ಯಶಸ್ಸು ಗಳಿಸುತ್ತೇವೆ, ಏಕೆಂದರೆ ಯೇಸು “ಎಲ್ಲಾ ದಿವಸ,” ಹೌದು, ನಮ್ಮ ಬದುಕಿನ ಅತಿ ದುಃಖಕರವಾದ ದಿವಸಗಳಲ್ಲಿಯೂ ನಮ್ಮೊಂದಿಗಿರುತ್ತಾನೆ.​—⁠ಮತ್ತಾಯ 11:​28-30.

19 ನಾವು ಈ ಲೇಖನದಲ್ಲಿ ಹಾಗೂ ಹಿಂದಿನ ಲೇಖನದಲ್ಲಿ ನೋಡಿರುವಂತೆ, ಶಿಷ್ಯರನ್ನಾಗಿ ಮಾಡಿರಿ ಎಂಬ ಯೇಸುವಿನ ಆಜ್ಞೆಯಲ್ಲೇ ಎಲ್ಲಾ ಅಂಶಗಳು ಅಡಕವಾಗಿದೆ. ನಾವು ಎಲ್ಲಿ ಮತ್ತು ಏಕೆ ಅವನ ಆಜ್ಞೆಯನ್ನು ಪೂರೈಸಬೇಕೆಂಬುದನ್ನು ಅವನು ತಿಳಿಸಿದ್ದು ಮಾತ್ರವಲ್ಲ, ನಾವು ಏನು ಉಪದೇಶ ಮಾಡಬೇಕು ಮತ್ತು ಎಂದಿನ ವರೆಗೆ ಅದನ್ನು ಮಾಡಬೇಕು ಎಂಬದನ್ನೂ ಹೇಳಿದನು. ಈ ಮಹತ್ತರವಾದ ಆಜ್ಞೆಯನ್ನು ಪೂರೈಸುವುದು ಒಂದು ಪಂಥಾಹ್ವಾನವೆಂಬ ಮಾತು ನಿಜ. ಆದರೆ, ಅಧಿಕಾರವನ್ನು ಹೊಂದಿರುವ ಕ್ರಿಸ್ತನ ಬೆಂಬಲದಿಂದಲೂ ಅವನು ನಮ್ಮೊಂದಿಗೆ ಇರುವುದರಿಂದಲೂ ನಾವದನ್ನು ಪೂರೈಸಲು ಸಾಧ್ಯವಿದೆ! ನೀವಿದನ್ನು ಒಪ್ಪುತ್ತೀರಲ್ಲವೆ?

[ಪಾದಟಿಪ್ಪಣಿಗಳು]

^ ಒಂದು ಪರಾಮರ್ಶೆ ಗ್ರಂಥವು, ದೀಕ್ಷಾಸ್ನಾನ ಮಾಡಿಸುವ ಮತ್ತು ಉಪದೇಶಿಸುವ ಆಜ್ಞೆಯು “ಕಟ್ಟುನಿಟ್ಟಾಗಿ ಒಂದರ ಹಿಂದೆ ಇನ್ನೊಂದರಂತೆ ಬರುವ . . . ಎರಡು ಕೃತ್ಯಗಳಲ್ಲ” ಎಂದು ಹೇಳುತ್ತದೆ. ಬದಲಿಗೆ, “ಉಪದೇಶ ಮಾಡುವುದು ಒಂದು ಮುಂದುವರಿಯುವ ಕಾರ್ಯವಾಗಿದ್ದು, ಸ್ವಲ್ಪ ಮಟ್ಟಿಗೆ ದೀಕ್ಷಾಸ್ನಾನಕ್ಕೆ ಮೊದಲೂ . . . ಇನ್ನು ಸ್ವಲ್ಪ ಮಟ್ಟಿಗೆ ದೀಕ್ಷಾಸ್ನಾನದ ನಂತರವೂ ಹಿಂಬಾಲಿಸಿಬರುತ್ತದೆ.”

^ ಬಲಹೀನರನ್ನು ಹೇಗೆ ದೃಷ್ಟಿಸಬೇಕು ಮತ್ತು ಸಹಾಯಮಾಡಬೇಕೆಂಬುದರ ಬಗ್ಗೆ ಹೆಚ್ಚಿನ ಮಾಹಿತಿಯು ಫೆಬ್ರವರಿ 1, 2003ರ ಕಾವಲಿನಬುರುಜು, ಪುಟಗಳು 15-18ರಲ್ಲಿದೆ.

ಹೇಗೆ ಉತ್ತರ ಕೊಡುವಿರಿ?

• ಯೇಸು ಆಜ್ಞಾಪಿಸಿದ್ದನ್ನು ಕಾಪಾಡಿಕೊಳ್ಳುವಂತೆ ನಾವು ಇತರರಿಗೆ ಹೇಗೆ ಉಪದೇಶಿಸುತ್ತೇವೆ?

• ಹೊಸ ಶಿಷ್ಯನೊಬ್ಬನು ಸಭೆಯಲ್ಲಿರುವ ಇತರರಿಂದ ಯಾವ ಪಾಠಗಳನ್ನು ಕಲಿಯಬಹುದು?

• ಆಧ್ಯಾತ್ಮಿಕವಾಗಿ ಬಲಹೀನರಾಗಿರುವವರಿಗೆ ಸಹಾಯಮಾಡಲು ನಾವೇನು ಮಾಡಬಲ್ಲೆವು?

• “ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಯೇಸು ಕೊಟ್ಟ ಮಾತಿನಿಂದ ನಾವು ಯಾವ ಬಲವನ್ನೂ ಸಾಂತ್ವನವನ್ನೂ ಪಡೆದುಕೊಳ್ಳುತ್ತೇವೆ?

[ಅಧ್ಯಯನ ಪ್ರಶ್ನೆಗಳು]

1. ಶಿಷ್ಯನಾಗಿದ್ದ ಫಿಲಿಪ್ಪ ಮತ್ತು ಐಥಿಯೋಪ್ಯದ ಮನುಷ್ಯನ ಮಧ್ಯೆ ಯಾವ ಸಂಭಾಷಣೆ ನಡೆಯಿತು?

2. (ಎ) ಆ ಐಥಿಯೋಪ್ಯದವನು ಕೊಟ್ಟ ಉತ್ತರವು ಯಾವ ವಿಧದಲ್ಲಿ ಅರ್ಥಭರಿತವಾಗಿತ್ತು? (ಬಿ) ಶಿಷ್ಯರನ್ನಾಗಿ ಮಾಡುವ ಕ್ರಿಸ್ತನ ಆಜ್ಞೆಗೆ ಸಂಬಂಧಿಸಿದ ಯಾವ ಪ್ರಶ್ನೆಗಳನ್ನು ನಾವು ಪರಿಶೀಲಿಸಲಿದ್ದೇವೆ?

3. (ಎ) ಒಬ್ಬನು ಯೇಸು ಕ್ರಿಸ್ತನ ಶಿಷ್ಯನಾಗುವುದು ಹೇಗೆ? (ಬಿ) ಶಿಷ್ಯರನ್ನಾಗಿ ಮಾಡುವುದರಲ್ಲಿ ಏನನ್ನು ಉಪದೇಶಿಸುವುದು ಸೇರಿದೆ?

4. (ಎ) ಒಂದು ಆಜ್ಞೆಯನ್ನು ಕಾಪಾಡಿಕೊಳ್ಳುವುದರ ಅರ್ಥವೇನು? (ಬಿ) ಒಬ್ಬನು ಕ್ರಿಸ್ತನ ಆಜ್ಞೆಗಳನ್ನು ಕಾಪಾಡಿಕೊಳ್ಳಲು ನಾವು ಹೇಗೆ ಕಲಿಸುತ್ತೇವೆಂಬುದನ್ನು ದೃಷ್ಟಾಂತಿಸಿರಿ.

5. ನಾವು ಯಾರೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತೇವೊ ಆ ವ್ಯಕ್ತಿಯು, ಶಿಷ್ಯರನ್ನಾಗಿ ಮಾಡುವ ಕ್ರಿಸ್ತನ ಆಜ್ಞೆಗೆ ವಿಧೇಯನಾಗಲು ಏಕೆ ಹಿಂಜರಿಯಬಹುದು?

6. (ಎ) ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಸಹಾಯ ನೀಡುವಾಗ, ಫಿಲಿಪ್ಪನ ಮಾದರಿಯನ್ನು ನಾವು ಹೇಗೆ ಅನುಕರಿಸಬಲ್ಲೆವು? (ಬಿ) ಒಬ್ಬ ಬೈಬಲ್‌ ವಿದ್ಯಾರ್ಥಿಯು ಸಾರುವ ಕಾರ್ಯದಲ್ಲಿ ಭಾಗವಹಿಸತೊಡಗುವಾಗ ನಾವು ನಮ್ಮ ಹಿತಚಿಂತನೆಯನ್ನು ಹೇಗೆ ತೋರಿಸಬಲ್ಲೆವು?

7. ‘ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವಂತೆ’ ಇತರರಿಗೆ ಉಪದೇಶ ಮಾಡುವುದರಲ್ಲಿ ಯಾವ ಆಜ್ಞೆಗಳ ಕುರಿತು ಉಪದೇಶಿಸುವುದೂ ಸೇರಿದೆ?

8. ಪ್ರೀತಿ ತೋರಿಸಬೇಕೆಂಬ ಆಜ್ಞೆಯನ್ನು ಹೊಸ ಶಿಷ್ಯನೊಬ್ಬನಿಗೆ ಹೇಗೆ ಕಲಿಸಬಹುದೆಂಬುದನ್ನು ದೃಷ್ಟಾಂತಿಸಿರಿ.

9. ಪ್ರೀತಿ ತೋರಿಸಬೇಕೆಂಬ ಆಜ್ಞೆಯನ್ನು ಕಾಪಾಡಿಕೊಳ್ಳುವುದರ ಅರ್ಥವನ್ನು ಹೊಸ ಶಿಷ್ಯನೊಬ್ಬನು ಹೇಗೆ ಕಲಿಯುತ್ತಾನೆ?

10. (ಎ) ನಾವು ಎಷ್ಟು ಸಮಯದ ವರೆಗೆ ಶಿಷ್ಯರನ್ನಾಗಿ ಮಾಡುವುದನ್ನು ಮುಂದುವರಿಸುವೆವು? (ಬಿ) ನಮ್ಮ ನೇಮಕಗಳನ್ನು ಪೂರೈಸುವುದರ ಕುರಿತು ಯೇಸು ಯಾವ ಮಾದರಿಯನ್ನಿಟ್ಟನು?

11. ನಮ್ಮ ಕ್ರೈಸ್ತ ಸೋದರಸೋದರಿಯರಲ್ಲಿ ಕೆಲವರಿಗೆ ಏನು ಸಂಭವಿಸಿದೆ, ಮತ್ತು ನಾವು ಸ್ವತಃ ಏನು ಪ್ರಶ್ನಿಸಿಕೊಳ್ಳಬೇಕು?

12. (ಎ) ಯೇಸುವಿನ ಮರಣಕ್ಕೆ ತುಸು ಮೊದಲು ಅವನ ಅಪೊಸ್ತಲರು ಏನು ಮಾಡಿದರು? (ಬಿ) ಅಪೊಸ್ತಲರು ಗಂಭೀರ ಬಲಹೀನತೆಗಳನ್ನು ತೋರಿಸಿದರೂ ಯೇಸು ಅವರೊಂದಿಗೆ ಹೇಗೆ ವ್ಯವಹರಿಸಿದನು?

13. ಆಧ್ಯಾತ್ಮಿಕವಾಗಿ ಬಲಹೀನರಾಗಿರುವವರನ್ನು ನಾವು ಹೇಗೆ ವೀಕ್ಷಿಸಬೇಕು?

14. ಯೇಸುವನ್ನು ಅನುಕರಿಸುತ್ತಾ, ನಾವು ಒಬ್ಬ ಬಲಹೀನ ವ್ಯಕ್ತಿಗೆ ಹೇಗೆ ಸಹಾಯಮಾಡಬಲ್ಲೆವು?

15. ನಮ್ಮ ಕೂಟದ ಸ್ಥಳಕ್ಕೆ ಬರುವ ಬಲಹೀನರನ್ನು ಸ್ವಾಗತಿಸುವುದರಲ್ಲಿ ನಾವು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?

16. (ಎ) ಯೇಸು ತನ್ನ ಹಿಂಬಾಲಕರೊಂದಿಗೆ ವ್ಯವಹರಿಸಿದ ರೀತಿಯಿಂದ ನಾವೇನನ್ನು ಕಲಿಯಬಲ್ಲೆವು? (ಬಿ) ಬಲಹೀನರ ಕಡೆಗೆ ಯೇಸುವಿಗಿದ್ದ ದೃಷ್ಟಿಕೋನವನ್ನು ನಾವು ಹೇಗೆ ಪ್ರತಿಬಿಂಬಿಸಬಲ್ಲೆವು? (ಪಾದಟಿಪ್ಪಣಿ ನೋಡಿ.)

17, 18. “ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂಬ ಯೇಸುವಿನ ಮಾತುಗಳಲ್ಲಿ ಯಾವ ಬಲವರ್ಧಕ ವಿಚಾರಗಳು ಅಡಕವಾಗಿವೆ?

19. (ಎ) ಶಿಷ್ಯರನ್ನಾಗಿ ಮಾಡಬೇಕೆಂಬ ಯೇಸುವಿನ ಆಜ್ಞೆಯಲ್ಲಿ ಯಾವ ಸಲಹೆಗಳು ಅಡಕವಾಗಿವೆ? (ಬಿ) ಕ್ರಿಸ್ತನ ಆಜ್ಞೆಯನ್ನು ಪೂರೈಸಲು ಯಾವುದು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ?

[ಪುಟ 15ರಲ್ಲಿರುವ ಚಿತ್ರಗಳು]

ನಾವು ಬೋಧಕರೂ ಮಾರ್ಗದರ್ಶಕರೂ ಆಗಿರುವುದು ಅಗತ್ಯ

[ಪುಟ 17ರಲ್ಲಿರುವ ಚಿತ್ರಗಳು]

ಇತರರ ಮಾದರಿಯಿಂದ ಹೊಸ ಶಿಷ್ಯನೊಬ್ಬನು ಬೆಲೆಬಾಳುವ ಪಾಠಗಳನ್ನು ಕಲಿತುಕೊಳ್ಳುತ್ತಾನೆ