ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೋಹನಿಗೆ ಒಂದು ಪತ್ರ

ನೋಹನಿಗೆ ಒಂದು ಪತ್ರ

ನೋಹನಿಗೆ ಒಂದು ಪತ್ರ

“ಪ್ರೀತಿಯ ನೋಹ. ನಾನು ನಿನ್ನ ಬಗ್ಗೆ, ಮತ್ತು ನೀನೂ ನಿನ್ನ ಕುಟುಂಬವೂ ಜಲಪ್ರಳಯದಿಂದ ಪಾರಾದ ನಾವೆಯನ್ನು ನೀನು ಹೇಗೆ ಕಟ್ಟಿದ್ದೀ ಎಂಬುದರ ಬಗ್ಗೆ ಅನೇಕ ಸಲ ಬೈಬಲಿನಲ್ಲಿ ಓದಿದ್ದೇನೆ.”

ಮೀನಾಮಾರಿಯ ಎಂಬ 15 ವರ್ಷ ಪ್ರಾಯದ ಹುಡುಗಿಯು ಬರೆದ ಪತ್ರವು ಹೀಗೆ ಆರಂಭವಾಗುತ್ತದೆ. ಇದು, 14ರಿಂದ 21 ವರ್ಷ ಪ್ರಾಯದ ವಿದ್ಯಾರ್ಥಿಗಳಿಗಾಗಿದ್ದ ಒಂದು ಲೇಖನ ಸ್ಪರ್ಧೆಗೆ ಸಲ್ಲಿಸಲ್ಪಟ್ಟ ಪತ್ರವಾಗಿತ್ತು. ಈ ಸ್ಪರ್ಧೆಯನ್ನು, ಫಿನ್ನಿಷ್‌ ಅಂಚೆ ಸೇವೆ, ಫಿನ್ನಿಷ್‌ ಮಾತೃಭಾಷೆಯ ಶಿಕ್ಷಕರ ಸಂಘ, ಮತ್ತು ಫಿನ್ನಿಷ್‌ ಸಾಹಿತ್ಯ ಸಂಸ್ಥೆಯಿಂದ ಏರ್ಪಡಿಸಲಾಗಿತ್ತು. ಸ್ಪರ್ಧೆಯ ಅಭ್ಯರ್ಥಿಗಳು, ಒಂದು ಪುಸ್ತಕದ ಮೇಲೆ ಆಧರಿತವಾದ ಪತ್ರವೊಂದನ್ನು ಬರೆಯಬೇಕಾಗಿತ್ತು. ಅದನ್ನು ಆ ಪುಸ್ತಕದ ಲೇಖಕನಿಗೆ ಇಲ್ಲವೆ ಅದರಲ್ಲಿನ ಒಬ್ಬ ಪಾತ್ರಧಾರಿಗೆ ಸಂಬೋಧಿಸಬೇಕಾಗಿತ್ತು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಪತ್ರಗಳಲ್ಲಿ 1,400ಕ್ಕಿಂತಲೂ ಹೆಚ್ಚು ಪತ್ರಗಳನ್ನು ಆಯ್ಕೆಮಾಡಿ, ಸ್ಪರ್ಧೆಯ ನ್ಯಾಯದರ್ಶಿ ತಂಡಕ್ಕೆ ಕಳುಹಿಸಿದರು. ಆ ತಂಡದವರು, ಮೊದಲನೆಯ ಸ್ಥಾನಕ್ಕೆ ಅತ್ಯುತ್ತಮವಾದ ಒಂದು ಪತ್ರವನ್ನು, ಎರಡನೆ ಸ್ಥಾನಕ್ಕೆ ಹತ್ತು ಪತ್ರಗಳನ್ನು, ಮತ್ತು ಮೂರನೆಯ ಸ್ಥಾನಕ್ಕೆ ಹತ್ತು ಪತ್ರಗಳನ್ನು ಆಯ್ಕೆಮಾಡಿದರು. ತನ್ನ ಪತ್ರವನ್ನು ಮೂರನೇ ಸ್ಥಾನದಲ್ಲಿರುವ ಪತ್ರಗಳ ಗುಂಪಿನಲ್ಲಿ ಆಯ್ಕೆಮಾಡಲಾಗಿದೆ ಎಂದು ಮೀನಾಮಾರಿಯಗೆ ತಿಳಿದಾಗ ಅವಳು ಆನಂದದಿಂದ ಹಿಗ್ಗಿದಳು.

ಸುಮಾರು 5,000 ವರ್ಷಗಳ ಹಿಂದೆ ಜೀವಿಸಿದ್ದ ನೋಹ ಎಂಬ ಮನುಷ್ಯನಿಗೆ ಒಬ್ಬ ಹದಿವಯಸ್ಕ ವಿದ್ಯಾರ್ಥಿಯಾಗಿರುವ ಮೀನಾಮಾರಿಯ ಪತ್ರ ಬರೆದದ್ದೇಕೆ? ಅವಳು ಹೇಳುವುದು: “ನನ್ನ ಮನಸ್ಸಿಗೆ ಬಂದ ಮೊದಲ ಪುಸ್ತಕ ಬೈಬಲ್‌ ಆಗಿತ್ತು. ಬೈಬಲ್‌ ಪಾತ್ರಧಾರಿಗಳು ನನಗೆ ಚಿರಪರಿಚಿತರಾಗಿದ್ದಾರೆ. ನಾನು ಅವರ ಬಗ್ಗೆ ಎಷ್ಟೊಂದು ಓದಿದ್ದೇನೆಂದರೆ, ಅವರು ಬಹುಮಟ್ಟಿಗೆ ನನಗೆ ಜೀವಂತವಾಗಿದ್ದಾರೆ. ನಾನು ನೋಹನನ್ನು ಆಯ್ಕೆಮಾಡಿದೆ, ಏಕೆಂದರೆ ಅವನ ಬದುಕು ನನ್ನ ಬದುಕಿಗಿಂತ ಎಷ್ಟೊ ಹೆಚ್ಚು ರೋಮಾಂಚಕಾರಿಯೂ ತೀರ ಭಿನ್ನವೂ ಆಗಿತ್ತು.”

ಮೀನಮಾರಿಯ ನೋಹನಿಗೆ ಬರೆದ ಪತ್ರವು ಈ ಮಾತುಗಳೊಂದಿಗೆ ಕೊನೆಗೊಳ್ಳುತ್ತದೆ: “ನೀನೀಗಲೂ ನಂಬಿಕೆ ಹಾಗೂ ವಿಧೇಯತೆಯ ಮಾದರಿಯಾಗಿದ್ದೀ. ನಿನ್ನ ಬದುಕು, ಬೈಬಲನ್ನು ಓದುವವರೆಲ್ಲರೂ ತಮ್ಮ ನಂಬಿಕೆಗನುಸಾರ ಕ್ರಿಯೆಗೈಯುವಂತೆ ಉತ್ತೇಜಿಸುತ್ತದೆ.”

ಒಬ್ಬ ಯುವ ಬೈಬಲ್‌ ವಾಚಕಳ ಈ ಪತ್ರವು, ಬೈಬಲ್‌ ನಿಜವಾಗಿಯೂ “ಸಜೀವವಾದದ್ದು” ಆಬಾಲವೃದ್ಧರೆಲ್ಲರ ಮೇಲೆ “ಕಾರ್ಯಸಾಧಕವಾದದ್ದು” ಆಗಿದೆ ಎಂಬುದನ್ನು ಚೆನ್ನಾಗಿ ದೃಷ್ಟಾಂತಿಸುತ್ತದೆ.​—⁠ಇಬ್ರಿಯ 4:⁠12.