ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನೋವ್ಯಥೆಗಳ ಹೊರತಾಗಿಯೂ ಒಂದು ಸಂತೃಪ್ತಿಕರ ಜೀವನ

ಮನೋವ್ಯಥೆಗಳ ಹೊರತಾಗಿಯೂ ಒಂದು ಸಂತೃಪ್ತಿಕರ ಜೀವನ

ಜೀವನ ಕಥೆ

ಮನೋವ್ಯಥೆಗಳ ಹೊರತಾಗಿಯೂ ಒಂದು ಸಂತೃಪ್ತಿಕರ ಜೀವನ

ಆಡ್ರೀ ಹೈಡ್‌ ಅವರು ಹೇಳಿದಂತೆ

ನಾನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಕಳೆದ 63ಕ್ಕಿಂತಲೂ ಹೆಚ್ಚಿನ ವರುಷಗಳ​—⁠ಇದರಲ್ಲಿ 59 ವರುಷಗಳು ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ​—⁠ಕಡೆಗೆ ಹಿನ್ನೋಟ ಬೀರುವಾಗ ನನ್ನದು ನಿಜವಾಗಿಯೂ ಒಂದು ಸಂತೃಪ್ತಿಕರ ಜೀವನ ಎಂದು ನಾನು ಹೇಳಬಲ್ಲೆ. ನನ್ನ ಮೊದಲನೆಯ ಗಂಡನು ಕ್ಯಾನ್ಸರ್‌ನಿಂದ ನಿಧಾನವಾಗಿ ಸಾಯುವುದನ್ನು ನೋಡುವುದು ಮತ್ತು ನನ್ನ ಎರಡನೆಯ ಗಂಡನು ಆಲ್‌ಸೈಮರ್ಸ್‌ ರೋಗದ ಮಾರಕ ಪರಿಣಾಮಗಳಿಂದ ಸಂಕಟಪಡುವುದನ್ನು ನೋಡುವುದು ಹೃದಯವಿದ್ರಾವಕವಾಗಿತ್ತು ಎಂಬುದು ನಿಜ. ಆದರೆ, ಈ ಎಲ್ಲಾ ವಿಪತ್ತುಗಳ ಹೊರತಾಗಿಯೂ ನಾನು ಹೇಗೆ ನನ್ನ ಆನಂದವನ್ನು ಕಾಪಾಡಿಕೊಂಡಿದ್ದೇನೆ ಎಂಬುದನ್ನು ನಿಮಗೆ ತಿಳಿಸಬಯಸುತ್ತೇನೆ.

ನಾನು ನನ್ನ ಬಾಲ್ಯದ ದಿವಸಗಳನ್ನು ಹ್ಯಾಕ್ಸ್‌ಟನ್‌ನ ಸಣ್ಣ ಪಟ್ಟಣದ ಬಳಿ ಒಂದು ಫಾರ್ಮ್‌ನಲ್ಲಿ ಕಳೆದೆ. ಹ್ಯಾಕ್ಸ್‌ಟನ್‌, ನೆಬ್ರಾಸ್ಕದ ಗಡಿಯ ಸಮೀಪದಲ್ಲಿರುವ ಕೊಲರಾಡೊದ ಈಶಾನ್ಯ ದಿಕ್ಕಿನಲ್ಲಿರುವ ಬಯಲು ಪ್ರದೇಶವಾಗಿತ್ತು. ಆರೆಲ್‌ ಮತ್ತು ನೀನ ಮಾಕ್‌ರವರ ಆರು ಮಕ್ಕಳಲ್ಲಿ ನಾನು ಐದನೆಯವಳು. 1913ರಿಂದಾರಂಭಿಸಿ 1920ನೇ ಇಸವಿಯ ನಡುವಣ ಸಮಯದಲ್ಲಿ, ರಸೆಲ್‌, ವೇನ್‌, ಕ್ಲಾರ, ಮತ್ತು ಆರ್ಡಿಸ್‌ ಜನಿಸಿದರು. ನಾನು 1921ರಲ್ಲಿ ಹುಟ್ಟಿದೆ. 1925ರಲ್ಲಿ ಕರ್ಟಿಸ್‌ ಹುಟ್ಟಿದನು.

ಇಸವಿ 1913ರಲ್ಲಿ ನನ್ನ ತಾಯಿ ಒಬ್ಬ ಬೈಬಲ್‌ ವಿದ್ಯಾರ್ಥಿಯಾದರು​—⁠ಆಗ ಯೆಹೋವನ ಸಾಕ್ಷಿಗಳನ್ನು ಹಾಗೆಂದು ಕರೆಯಲಾಗುತ್ತಿತ್ತು. ಕ್ರಮೇಣ, ಕುಟುಂಬದಲ್ಲಿರುವ ನಾವೆಲ್ಲರೂ ಸಾಕ್ಷಿಗಳಾದೆವು.

ಬಯಲು ಪ್ರದೇಶಗಳಲ್ಲಿನ ಒಂದು ಆರೋಗ್ಯಕರ ಜೀವನ

ತಂದೆಯವರು ಒಬ್ಬ ಪ್ರಗತಿಪರ ವ್ಯಕ್ತಿಯಾಗಿದ್ದರು. ಆ ಕಾಲಗಳಲ್ಲಿ ಬಹಳ ವಿರಳವಾಗಿದ್ದ ವಿದ್ಯುತ್‌ ದೀಪಗಳು ಫಾರ್ಮ್‌ನಲ್ಲಿದ್ದ ನಮ್ಮ ಎಲ್ಲಾ ಕಟ್ಟಡಗಳಲ್ಲಿ ಇದ್ದವು. ಅಷ್ಟುಮಾತ್ರವಲ್ಲದೆ, ನಮ್ಮ ಫಾರ್ಮ್‌ನಲ್ಲಿಯೇ ಬೆಳೆಸಲ್ಪಡುವ ಹಣ್ಣುಹಂಪಲುಗಳನ್ನು, ಮತ್ತು ನಮ್ಮ ಸ್ವಂತ ಕೋಳಿಗಳ ಮೊಟ್ಟೆಗಳನ್ನು, ಹಸುಗಳ ಹಾಲು, ಕೆನೆ, ಹಾಗೂ ಬೆಣ್ಣೆಯನ್ನು ತಿಂದು ಆನಂದಿಸುತ್ತಿದ್ದೆವು. ಗದ್ದೆಯನ್ನು ಉಳಲು ನಾವು ಕುದುರೆಗಳನ್ನು ಉಪಯೋಗಿಸುತ್ತಿದ್ದೆವು, ಮತ್ತು ಅಲ್ಲಿ ಸ್ಟ್ರಾಬೆರಿ, ಆಲೂಗೆಡ್ಡೆ, ಗೋದಿ, ಹಾಗೂ ಜೋಳವನ್ನು ಬೆಳೆಸುತ್ತಿದ್ದೆವು.

ಮಕ್ಕಳಾದ ನಾವೆಲ್ಲರೂ ಕೆಲಸಮಾಡಲು ಕಲಿಯಬೇಕೆಂಬುದು ತಂದೆಯವರ ಬಯಕೆಯಾಗಿತ್ತು. ಆದುದರಿಂದ ನಾನು ಶಾಲೆಗೆ ಹೋಗಲು ಆರಂಭಿಸುವ ಮುನ್ನವೇ ಹೊಲದಲ್ಲಿ ಕೆಲಸಮಾಡಲು ತರಬೇತಿಯನ್ನು ಪಡೆದಿದ್ದೆ. ಬೇಸಿಗೆಯ ಸುಡುಬಿಸಿಲಿನಲ್ಲಿ ನಮ್ಮ ತೋಟದಲ್ಲಿ ಕಳೆ ಕೀಳುತ್ತಿದ್ದ ದಿನಗಳನ್ನು ನಾನಿನ್ನೂ ಮರೆಯಲಾರೆ. ‘ಈ ಕೆಲಸವು ಎಂದಾದರೂ ಮುಗಿಯಬಹುದೋ?’ ಎಂದು ನಾನು ಚಿಂತಿಸುತ್ತಿದ್ದೆ. ನಾನು ಬೆವತ್ತು ಹೋಗುತ್ತಿದ್ದೆ, ಮತ್ತು ಜೇನುಹುಳುಗಳು ನನ್ನನ್ನು ಕಚ್ಚುತ್ತಿದ್ದವು. ಕೆಲವೊಮ್ಮೆ, ನನ್ನ ಬಗ್ಗೆ ನನಗೇ ಕನಿಕರವೆನಿಸುತ್ತಿತ್ತು, ಏಕೆಂದರೆ ಇತರ ಮಕ್ಕಳಿಗೆ ನಮ್ಮಂತೆ ಕಠಿನವಾಗಿ ಕೆಲಸಮಾಡುವ ಅಗತ್ಯವಿರಲಿಲ್ಲ. ಆದರೆ ವಾಸ್ತವದಲ್ಲಿ, ನಾನು ನನ್ನ ಬಾಲ್ಯದ ಸಮಯಗಳ ಕಡೆಗೆ ಈಗ ಹಿನ್ನೋಟ ಬೀರುವಾಗ, ನಮಗೆ ಕೆಲಸಮಾಡಲು ಕಲಿಸಲ್ಪಟ್ಟದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ.

ನಮ್ಮೆಲ್ಲರಿಗೂ ನೇಮಿತ ಕೆಲಸಗಳಿದ್ದವು. ಆರ್ಡಿಸಳು ನನಗಿಂತ ಉತ್ತಮವಾಗಿ ಹಾಲು ಕರೆಯಶಕ್ತಳಾಗಿದ್ದ ಕಾರಣ ಅವಳದನ್ನು ಮಾಡುತ್ತಿದ್ದಳು ಮತ್ತು ಹಟ್ಟಿಯನ್ನು ಶುದ್ಧಮಾಡುವುದು ಹಾಗೂ ಗೊಬ್ಬರವನ್ನು ತೆಗೆಯುವುದು ನನ್ನ ಕೆಲಸವಾಗಿತ್ತು. ಹಾಗಿದ್ದರೂ, ನಾವು ಮೋಜುಮಾಡುತ್ತಿದ್ದೆವು, ಆಟಗಳನ್ನೂ ಆಡುತ್ತಿದ್ದೆವು. ನಾನು ಮತ್ತು ಆರ್ಡಿಸ್‌, ಸ್ಥಳಿಕ ತಂಡದೊಂದಿಗೆ ಬೇಸ್‌ಬಾಲ್‌ ಆಟವನ್ನು ಆಡುತ್ತಿದ್ದೆವು. ನಾನು ಚೆಂಡನ್ನು ಎಸೆಯುತ್ತಿದ್ದೆ, ಅಥವಾ ಮೂರನೇ ಬೇಸ್‌ನಲ್ಲಿ ಆಡುತ್ತಿದ್ದೆ, ಮತ್ತು ಆರ್ಡಿಸ್‌ ಮೊದಲನೆಯ ಬೇಸ್‌ನಲ್ಲಿ ಆಡುತ್ತಿದ್ದಳು.

ಬಯಲು ಪ್ರದೇಶಗಳಲ್ಲಿ ಶುಭ್ರವಾದ ರಾತ್ರಿಯಂದು ಆಕಾಶವನ್ನು ನೋಡುವುದು ಬಹಳ ಮನೋಹರವಾಗಿರುತ್ತಿತ್ತು. ಸಾವಿರಾರು ನಕ್ಷತ್ರಗಳು ನನಗೆ ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ ನೆನಪು ಹುಟ್ಟಿಸುತ್ತಿದ್ದವು. ಚಿಕ್ಕವಳಾಗಿದ್ದಾಗಲೂ ನಾನು ಕೀರ್ತನೆ 147:4ರ ಮಾತುಗಳ ಕುರಿತು ಆಲೋಚಿಸುತ್ತಿದ್ದೆ. ಅದು ಓದುವುದು: “ಆತನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ.” ಇಂಥ ಅನೇಕ ಶುಭ್ರವಾದ ರಾತ್ರಿಗಳಂದು ನಮ್ಮ ನಾಯಿಯಾದ ಜಡ್ಜ್‌ ತನ್ನ ತಲೆಯನ್ನು ನನ್ನ ತೊಡೆಯ ಮೇಲಿಟ್ಟು ಮಲಗಿಕೊಳ್ಳುತ್ತಿತ್ತು. ಹೀಗೆ ನಾನು ಒಂಟಿಯಾಗಿರುತ್ತಿರಲಿಲ್ಲ. ಅನೇಕವೇಳೆ ಮಧ್ಯಾಹ್ನದ ಸಮಯದಲ್ಲಿ ನಾನು ಜಗಲಿಯಲ್ಲಿ ಕುಳಿತುಕೊಂಡು, ಹಸಿರು ಪೈರಿನ ಹೊಲವನ್ನು ನೋಡಿ ಆನಂದಿಸುತ್ತಿದ್ದೆ. ಬೀಸುತ್ತಿರುವ ಗಾಳಿಯಲ್ಲಿ ಆ ಹಸಿರು ಪೈರು ಓಲಾಡುತ್ತಿರುವಾಗ, ಅದು ಸೂರ್ಯನ ಬೆಳಕಿನಲ್ಲಿ ಬೆಳ್ಳಿಯಂತೆ ಕಾಣುತ್ತಿತ್ತು.

ತಾಯಿಯ ಉತ್ತಮ ಉದಾಹರಣೆ

ನನ್ನ ತಾಯಿ ಬಹಳ ನಿಷ್ಠಾವಂತ ಪತ್ನಿಯಾಗಿದ್ದರು. ಮನೆಯಲ್ಲಿ ಯಾವಾಗಲೂ ತಂದೆಯವರು ಹೇಳಿದ್ದೇ ನಡೆಯುತ್ತಿತ್ತು, ಮತ್ತು ಅವರನ್ನು ಗೌರವಿಸುವಂತೆ ತಾಯಿ ನಮಗೆ ಕಲಿಸಿದಳು. 1939ರಲ್ಲಿ ತಂದೆಯವರು ಸಹ ಯೆಹೋವನ ಸಾಕ್ಷಿಯಾದರು. ನಮ್ಮ ತಂದೆಯವರು ನಾವು ಕಠಿನವಾಗಿ ಕೆಲಸಮಾಡುವಂತೆ ಮಾಡಿದರೂ, ಮತ್ತು ನಮ್ಮನ್ನು ಮುದ್ದಿಸುತ್ತಿದ್ದಿಲ್ಲವಾದರೂ, ಅವರು ನಮ್ಮನ್ನು ಪ್ರೀತಿಸುತ್ತಿದ್ದರು ಎಂದು ನಮಗೆ ತಿಳಿದಿತ್ತು. ಅನೇಕ ಬಾರಿ ಚಳಿಗಾಲದಲ್ಲಿ, ಅವರು ಎರಡು ಕುದುರೆಗಳಿಗೆ ಹಿಮ ಬಂಡಿಯನ್ನು ಕಟ್ಟಿ, ಅದರಲ್ಲಿ ನಾವು ಸವಾರಿ ಮಾಡುವಂತೆ ಏರ್ಪಾಡುಗಳನ್ನು ಮಾಡುತ್ತಿದ್ದರು. ಈ ಸವಾರಿಯ ಸಮಯದಲ್ಲಿ ಮಂಜಿನ ಮಿರುಗನ್ನು ನೋಡಿ ನಾವು ಎಷ್ಟೊಂದು ಆನಂದಿಸುತ್ತಿದ್ದೆವು!

ಆದರೆ, ದೇವರನ್ನು ಪ್ರೀತಿಸುವಂತೆ ಮತ್ತು ಬೈಬಲನ್ನು ಗೌರವಿಸುವಂತೆ ನಮಗೆ ಕಲಿಸಿದವರು ನಮ್ಮ ತಾಯಿಯೇ. ದೇವರ ಹೆಸರು ಯೆಹೋವ ಮತ್ತು ಆತನೇ ಜೀವದ ಉಗಮನು ಎಂಬುದನ್ನು ನಾವು ಕಲಿತೆವು. (ಕೀರ್ತನೆ 36:9; 83:18) ಆತನು ನಮಗೆ ಮಾರ್ಗದರ್ಶನಗಳನ್ನು ನೀಡಿರುವುದು ನಮ್ಮ ಆನಂದವನ್ನು ಕಸಿದುಕೊಳ್ಳುವ ಉದ್ದೇಶದಿಂದಲ್ಲ, ಬದಲಾಗಿ ನಮ್ಮ ಪ್ರಯೋಜನಾರ್ಥಕ್ಕಾಗಿಯೇ ಎಂಬುದನ್ನೂ ನಾವು ಕಲಿತೆವು. (ಯೆಶಾಯ 48:​17) ನಮಗೆ ಮಾಡಲಿಕ್ಕಾಗಿ ವಿಶೇಷವಾದ ಕೆಲಸವೊಂದಿದೆ ಎಂಬ ನಿಜತ್ವವನ್ನು ತಾಯಿ ಯಾವಾಗಲೂ ಒತ್ತಿಹೇಳುತ್ತಿದ್ದರು. “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವುದು” ಎಂದು ಯೇಸು ತನ್ನ ಹಿಂಬಾಲಕರಿಗೆ ತಿಳಿಸಿದನು ಎಂಬುದನ್ನು ನಾವು ಕಲಿತುಕೊಂಡೆವು.​—⁠ಮತ್ತಾಯ 24:14.

ನಾನು ಚಿಕ್ಕವಳಿದ್ದಾಗ ಶಾಲೆಯಿಂದ ಮನೆಗೆ ಬಂದೊಡನೆ ತಾಯಿಯು ಮನೆಯಲ್ಲಿಲ್ಲದಿದ್ದರೆ ಅವರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ನಾನು ಸುಮಾರು ಆರು ಅಥವಾ ಏಳು ವರುಷದವಳಾಗಿದ್ದಾಗ, ಒಮ್ಮೆ ಹೀಗೆ ಹುಡುಕಿಕೊಂಡು ಹೋದಾಗ ಅವರನ್ನು ಹಟ್ಟಿಯಲ್ಲಿ ಕಂಡುಕೊಂಡೆ. ನಂತರ ಮಳೆಬರಲು ಆರಂಭವಾಯಿತು. ನಾವು ಹುಲ್ಲು ಶೇಖರಿಸಿಡುವ ಸ್ಥಳದಲ್ಲಿದ್ದಾಗ, ದೇವರು ಇನ್ನೊಂದು ಜಲಪ್ರಳಯವನ್ನು ತರುತ್ತಾನೋ ಎಂದು ನಾನು ತಾಯಿಯನ್ನು ಕೇಳಿದೆ. ದೇವರು ಇನ್ನೊಮ್ಮೆ ಜಲಪ್ರಳಯದ ಮೂಲಕ ಭೂಮಿಯನ್ನು ನಾಶಮಾಡುವುದಿಲ್ಲವೆಂದು ವಾಗ್ದಾನಿಸಿದ್ದಾನೆ ಎಂಬುದನ್ನು ಅವರು ನನಗೆ ದೃಢವಾಗಿ ತಿಳಿಸಿದರು. ಅನೇಕ ಬಾರಿ ನಾನು ಸುಂಟರಗಾಳಿಗೆ ಹೆದರಿ ನೆಲಮಾಳಿಗೆಗೆ ಓಡಿಹೋದ ವಿಷಯವನ್ನೂ ನಾನು ನೆನಪಿಸಿಕೊಳ್ಳಬಲ್ಲೆ, ಏಕೆಂದರೆ ಸುಂಟರಗಾಳಿಯು ಸರ್ವಸಾಮಾನ್ಯವಾಗಿತ್ತು.

ನಾನು ಹುಟ್ಟುವ ಮುಂಚೆಯೇ ತಾಯಿ ಸಾರುವ ಕೆಲಸದಲ್ಲಿ ಭಾಗವಹಿಸುತ್ತಿದ್ದರು. ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯಿದ್ದ ಒಂದು ಗುಂಪು ನಮ್ಮ ಮನೆಯಲ್ಲಿ ಸೇರಿಬರುತ್ತಿತ್ತು. ಮನೆಯಿಂದ ಮನೆಗೆ ಸಾರುವುದು ನನ್ನ ತಾಯಿಗೆ ಒಂದು ಪಂಥಾಹ್ವಾನವಾಗಿದ್ದರೂ, ದೇವರ ಮೇಲಣ ಪ್ರೀತಿಯು ಅವರ ಭಯವನ್ನು ಜಯಿಸುವಂತೆ ಅವರು ಬಿಟ್ಟುಕೊಟ್ಟರು. 1969ರ ನವೆಂಬರ್‌ 24ರಂದು ಅವರು ತಮ್ಮ 84ನೇ ಪ್ರಾಯದಲ್ಲಿ ಮರಣಹೊಂದುವ ತನಕ ನಂಬಿಗಸ್ತರಾಗಿದ್ದರು. “ಅಮ್ಮ, ನೀವು ಸ್ವರ್ಗಕ್ಕೆ ಹೋಗುತ್ತಿದ್ದೀರಿ ಮತ್ತು ನಿಮಗೆ ಪರಿಚಯವಿದ್ದವರೊಂದಿಗೆ ಜೀವಿಸಲಿದ್ದೀರಿ,” ಎಂಬುದಾಗಿ ನಾನು ಅವರ ಕಿವಿಯಲ್ಲಿ ಮೆಲ್ಲನೆ ಹೇಳಿದೆ. ತಾಯಿಯವರು ಮರಣಹೊಂದಿದ ದಿನ ಅವರೊಂದಿಗಿರಲು ಸಾಧ್ಯವಾದದ್ದಕ್ಕಾಗಿ ಮತ್ತು ಅವರ ಆ ನಿರೀಕ್ಷೆಯಲ್ಲಿನ ನನ್ನ ದೃಢಭರವಸೆಯನ್ನು ಅವರಿಗೆ ಹೇಳಸಾಧ್ಯವಾದದ್ದಕ್ಕಾಗಿ ನಾನು ಬಹಳ ಸಂತೋಷಪಟ್ಟೆ! ಅವರು ಮೃದುವಾದ ಸ್ವರದಿಂದ ಹೇಳಿದ್ದು, “ನೀನು ನನಗೆ ಎಷ್ಟು ಒಳ್ಳೆಯವಳಾಗಿದ್ದಿ.”

ನಾವು ಸಾರಲು ಆರಂಭಿಸಿದೆವು

ರಸೆಲ್‌ ಇಸವಿ 1939ರಲ್ಲಿ ಪಯನೀಯರರಾದರು​—⁠ಯೆಹೋವನ ಸಾಕ್ಷಿಗಳಲ್ಲಿ, ಪೂರ್ಣ ಸಮಯದ ಸುವಾರ್ತಿಕರನ್ನು ಹೀಗೆಂದು ಕರೆಯಲಾಗುತ್ತದೆ. 1944ರಲ್ಲಿ ಅವರನ್ನು ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ (ಬೆತೆಲ್‌ ಎಂದು ಕರೆಯಲ್ಪಡುತ್ತದೆ) ಸೇವೆಮಾಡಲು ಆಮಂತ್ರಿಸಲ್ಪಡುವ ತನಕ ಅವರು ಓಕ್ಲಹಾಮ ಮತ್ತು ನೆಬ್ರಾಸ್ಕದಲ್ಲಿ ಪಯನೀಯರ್‌ ಸೇವೆಮಾಡಿದರು. ನಾನು 1941ರ ಸೆಪ್ಟೆಂಬರ್‌ 20ರಂದು ಪಯನೀಯರ್‌ ಸೇವೆಯನ್ನು ಆರಂಭಿಸಿದೆ, ಮತ್ತು ಕೊಲರಾಡೊ, ಕ್ಯಾನ್ಸಸ್‌, ಮತ್ತು ನೆಬ್ರಾಸ್ಕದಲ್ಲಿರುವ ವಿಭಿನ್ನ ಕ್ಷೇತ್ರಗಳಲ್ಲಿ ಸೇವೆಮಾಡಿದೆ. ಪಯನೀಯರ್‌ ಸೇವೆಯ ಆ ವರುಷಗಳು ಸಂತಸದ ಸಮಯಗಳಾಗಿದ್ದವು. ಯಾಕೆಂದರೆ, ಯೆಹೋವನ ಕುರಿತು ಕಲಿಯುವಂತೆ ನಾನು ಇತರರಿಗೆ ಸಹಾಯಮಾಡಲು ಶಕ್ತಳಾದೆ ಮಾತ್ರವಲ್ಲ, ವೈಯಕ್ತಿಕವಾಗಿ ನಾನು ಯೆಹೋವನ ಮೇಲೆ ಹೆಚ್ಚು ಆತುಕೊಳ್ಳಲೂ ಕಲಿತೆ.

ರಸೆಲ್‌ ಪಯನೀಯರ್‌ ಸೇವೆಯನ್ನು ಆರಂಭಿಸಿದ ಸಮಯದಷ್ಟಕ್ಕೆ, ವೇನ್‌ ಈಗಾಗಲೇ ಸ್ವಲ್ಪ ಸಮಯ ಐಹಿಕ ಕೆಲಸವನ್ನು ಮಾಡಿ, ಈಶಾನ್ಯ ಅಮೆರಿಕದಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದನು. ನಂತರ, ಅವನು ಬೆತೆಲಿಗೆ ಆಮಂತ್ರಿಸಲ್ಪಟ್ಟನು. ನ್ಯೂ ಯಾರ್ಕ್‌ನ ಇಥಿಕ ನಗರದ ಬಳಿ, ಕಿಂಗ್‌ಡಮ್‌ ಫಾರ್ಮ್‌ನಲ್ಲಿ ಅವನು ಕೆಲವು ವರುಷ ಸೇವೆಮಾಡಿದನು. ಅಲ್ಲಿ, ಫಾರ್ಮ್‌ನಲ್ಲಿದ್ದ ಚಿಕ್ಕ ಕುಟುಂಬಕ್ಕಾಗಿ ಮತ್ತು ಬ್ರೂಕ್ಲಿನ್‌ ಬೆತೆಲಿನಲ್ಲಿದ್ದ 200 ಮಂದಿ ಸಿಬ್ಬಂದಿಗಾಗಿ ಆಹಾರವನ್ನು ತಯಾರಿಸಲಾಗುತ್ತಿತ್ತು. ವೇನ್‌ 1988ರಲ್ಲಿ ಮರಣಹೊಂದುವ ತನಕ ತನ್ನ ಕೌಶಲಗಳನ್ನು ಮತ್ತು ಅನುಭವವನ್ನು ಯೆಹೋವನ ಸೇವೆಯಲ್ಲಿ ಉಪಯೋಗಿಸಿದನು.

ನನ್ನ ಅಕ್ಕ ಆರ್ಡಿಸ್‌, ಜೇಮ್ಸ್‌ ಕರ್ನ್‌ ಅವರನ್ನು ವಿವಾಹವಾದಳು, ಮತ್ತು ಅವರಿಗೆ ಐದು ಮಕ್ಕಳು ಜನಿಸಿದರು. ಅವಳು 1997ರಲ್ಲಿ ಮೃತಪಟ್ಟಳು. ನನ್ನ ಇನ್ನೊಬ್ಬ ಅಕ್ಕ ಕ್ಲಾರ, ಇಂದಿನ ತನಕವೂ ಯೆಹೋವನಿಗೆ ನಂಬಿಗಸ್ತಳಾಗಿ ಇದ್ದಾಳೆ, ಮತ್ತು ನನ್ನ ರಜಾದಿನಗಳಲ್ಲಿ ಕೊಲರಾಡೊದಲ್ಲಿರುವ ಅವಳ ಮನೆಗೆ ನಾನು ಇನ್ನೂ ಹೋಗುತ್ತಿರುತ್ತೇನೆ. ನಮ್ಮೆಲ್ಲರ ಚಿಕ್ಕ ತಮ್ಮನಾದ ಕರ್ಟಿಸ್‌ 1940ಗಳ ಮಧ್ಯಭಾಗದಲ್ಲಿ ಬ್ರೂಕ್ಲಿನ್‌ ಬೆತೆಲಿಗೆ ಹೋದನು. ಅಲ್ಲಿ ಅವನು ಟ್ರಕ್‌ ಚಾಲಕನಾಗಿ ಕೆಲಸಮಾಡಿದನು. ಕಿಂಗ್‌ಡಮ್‌ ಫಾರ್ಮ್‌ನಿಂದ ಬ್ರೂಕ್ಲಿನ್‌ ಬೆತೆಲಿಗೆ ವಿವಿಧ ಸಾಮಾನುಗಳು ಮತ್ತು ಉತ್ಪನ್ನಗಳನ್ನು ತರುವುದು ಅವನ ಕೆಲಸವಾಗಿತ್ತು. ಅವನು ಅವಿವಾಹಿತನಾಗಿಯೇ ಇದ್ದು, 1971ರಲ್ಲಿ ತೀರಿಹೋದನು.

ನನ್ನ ಆಸೆ​—⁠ಬೆತೆಲ್‌ ಸೇವೆ

ನನ್ನ ಹಿರಿಯಣ್ಣನು ಬೆತೆಲಿಗೆ ಹೋಗಿ ಬಹಳ ಸಮಯವಾಗಿತ್ತು, ಮತ್ತು ನನ್ನ ಆಸೆಯು ಸಹ ಅಲ್ಲಿ ಸೇವೆಮಾಡುವುದೇ ಆಗಿತ್ತು. ನನ್ನನ್ನು ಅಲ್ಲಿಗೆ ಆಮಂತ್ರಿಸಲು, ಅವನ ಉತ್ತಮ ಮಾದರಿಯೇ ಕಾರಣವೆಂದು ನನಗೆ ಖಂಡಿತವಾಗಿಯೂ ತಿಳಿದಿದೆ. ದೇವರ ಸಂಸ್ಥಾಪನೆಯ ಇತಿಹಾಸದ ಬಗ್ಗೆ ನನ್ನ ತಾಯಿಯವರು ಮಾತನಾಡುವಾಗ ಆಲಿಸುವ ಮೂಲಕ ಮತ್ತು ಕಡೇ ದಿವಸಗಳ ಕುರಿತಾದ ಬೈಬಲ್‌ ಪ್ರವಾದನೆಗಳ ನೆರವೇರಿಕೆಯನ್ನು ಕಣ್ಣಾರೆನೋಡುವ ಮೂಲಕ ಬೆತೆಲ್‌ ಸೇವೆಗಾಗಿ ನನ್ನಲ್ಲಿ ಆಸೆಯು ಬೆಳೆಯಿತು. ಯೆಹೋವನು ನನಗೆ ಬೆತೆಲಿನಲ್ಲಿ ಸೇವೆಮಾಡುವ ಸುಯೋಗವನ್ನು ನೀಡುವುದಾದರೆ, ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸುವುದಕ್ಕಾಗಿ ಅಲ್ಲದೆ ಬೇರಾವ ಕಾರಣಕ್ಕೂ ನಾನು ಆ ಸೇವೆಯನ್ನು ಬಿಟ್ಟುಬಿಡುವುದಿಲ್ಲ ಎಂದು ನಾನು ಆತನಿಗೆ ಪ್ರಾರ್ಥನೆಯಲ್ಲಿ ಮಾತುಕೊಟ್ಟೆ.

ಇಸವಿ 1945ರ ಜೂನ್‌ 20ರಂದು ನಾನು ಬೆತೆಲಿಗೆ ಆಗಮಿಸಿದೆ, ಮತ್ತು ಒಬ್ಬ ಹೌಸ್‌ಕೀಪರ್‌ ಆಗಿ ಸೇವೆಮಾಡಲು ನೇಮಿಸಲ್ಪಟ್ಟೆ. ಪ್ರತಿದಿನ ನಾನು 13 ಕೋಣೆಗಳನ್ನು ಶುಚಿಗೊಳಿಸಬೇಕಿತ್ತು, 26 ಹಾಸಿಗೆಗಳನ್ನು ಸಿದ್ಧಮಾಡಬೇಕಿತ್ತು, ಮತ್ತು ಅದರೊಂದಿಗೆ ಕಟ್ಟಡದ ಚಾವಡಿ ದಾರಿಗಳನ್ನು, ಮೆಟ್ಟಲುಗಳನ್ನು, ಹಾಗೂ ಕಿಟಕಿಗಳನ್ನು ಶುಚಿಗೊಳಿಸುವ ಕೆಲಸವೂ ಇತ್ತು. ಕೆಲಸವು ಬಹಳ ಕಠಿನವಾಗಿತ್ತು. ಪ್ರತಿದಿನ ಕೆಲಸಮಾಡುತ್ತಿರುವಾಗ ನನಗೇ ಹೀಗೆ ಹೇಳಿಕೊಳ್ಳುತ್ತಿದ್ದೆ: ‘ನಿನಗೆ ಸುಸ್ತಾಗಿದೆ ನಿಜ, ಆದರೆ ನೀನು ದೇವರ ಮನೆಯಾದ ಬೆತೆಲಿನಲ್ಲಿದ್ದಿ!’

ನಾನು ಬೆತೆಲಿಗೆ ಬಂದ ಹೊಸದರಲ್ಲಿ ಒಂದು ಮುಜುಗರದ ಸಂಗತಿಯು ಸಂಭವಿಸಿತು. ಹಳ್ಳಿಯಲ್ಲಿ ಹುಟ್ಟಿಬೆಳೆದವಳಾದ ಕಾರಣ ನನಗೆ ಡಮ್‌ವೆಯ್ಟರ್‌ ಅಂದರೆ ಏನೆಂದು ತಿಳಿದಿರಲಿಲ್ಲ. ಅದು, ಕಟ್ಟಡದಲ್ಲಿನ ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ವಸ್ತುಗಳನ್ನು ಮೇಲೆಕೆಳಗೆ ಸಾಗಿಸುವ ಸಣ್ಣ ಲಿಫ್ಟ್‌ನಂಥ ಯಂತ್ರವಾಗಿತ್ತು. ಒಂದು ದಿನ ಒಬ್ಬ ಸಹೋದರರು ನನಗೆ ಫೋನ್‌ ಮಾಡಿ, “ದಯಮಾಡಿ ಡಮ್‌ವೆಯ್ಟರ್‌ ಅನ್ನು ಕೆಳಗೆ ಕಳುಹಿಸುವಿರಾ?” ಎಂದು ಹೇಳಿದರು. ಅದೇನೆಂದು ಕೇಳುವಷ್ಟರಲ್ಲಿ ಅವರು ಫೋನ್‌ ಅನ್ನು ಇಟ್ಟುಬಿಟ್ಟರು. ಏನು ಮಾಡುವುದೆಂದು ನನಗೆ ತೋಚಲಿಲ್ಲ. ಆದರೆ ಕೂಡಲೆ ನನಗೆ, ನಾನು ಕೆಲಸಮಾಡುತ್ತಿದ್ದ ಅಂತಸ್ತಿನ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದ ಒಬ್ಬ ಸಹೋದರರ ನೆನಪಾಯಿತು. ಅವರು ಬೆತೆಲಿನಲ್ಲಿ ವೆಯ್ಟರ್‌ ಕೆಲಸವನ್ನು ಮಾಡುತ್ತಿದ್ದರು. ಒಂದುವೇಳೆ ಅವರನ್ನೇ ಕೆಳಗೆ ಕಳುಹಿಸಲು ಹೇಳಿರಬೇಕು ಎಂದು ನೆನಸಿ, ನಾನು ಅವರ ಕೋಣೆಯ ಬಾಗಿಲನ್ನು ತಟ್ಟಿ, “ನಿಮ್ಮನ್ನು ಕೆಳಗೆ ಅಡುಗೆಮನೆಗೆ ಬರಲು ಕರೆಯುತ್ತಿದ್ದಾರೆ” ಎಂದು ಹೇಳಿದೆ.

ನೇತನ್‌ ನಾರ್‌ರೊಂದಿಗೆ ವಿವಾಹ

ಇಸವಿ 1920ರಿಂದ, ಬೆತೆಲಿನಲ್ಲಿ ಸೇವೆಮಾಡುವ ಯಾರಾದರೂ ವಿವಾಹವಾಗಲು ಇಚ್ಛಿಸುವುದಾದರೆ ಅವರು ಬೆತೆಲನ್ನು ಬಿಟ್ಟು, ಬೇರೆಕಡೆಯಲ್ಲಿ ರಾಜ್ಯಾಭಿರುಚಿಗಳನ್ನು ವರ್ಧಿಸುವ ಕೆಲಸವನ್ನು ಮಾಡಬೇಕಿತ್ತು. ಆದರೆ, 1950ರ ಆರಂಭದಲ್ಲಿ, ಈಗಾಗಲೇ ಬೆತೆಲ್‌ ಸೇವೆಯಲ್ಲಿ ಅನೇಕ ವರುಷಗಳನ್ನು ಕಳೆದಿರುವ ಕೆಲವು ವ್ಯಕ್ತಿಗಳಿಗೆ ವಿವಾಹವಾಗಿ ಬೆತೆಲಿನಲ್ಲಿ ಉಳಿಯಲು ಅನುಮತಿಸಲಾಯಿತು. ಆದುದರಿಂದ, ಆ ಸಮಯದಲ್ಲಿ ಲೋಕವ್ಯಾಪಕ ರಾಜ್ಯ ಕೆಲಸದಲ್ಲಿ ಮುಂದಾಳತ್ವವನ್ನು ವಹಿಸುತ್ತಿದ್ದ ನೇತನ್‌ ಏಚ್‌. ನಾರ್‌ರವರು ನನ್ನಲ್ಲಿ ಆಸಕ್ತಿಯನ್ನು ತೋರಿಸಿದಾಗ, ‘ಇವರು ಖಂಡಿತವಾಗಿಯೂ ಬೆತೆಲಿನಲ್ಲಿ ಉಳಿಯುತ್ತಾರೆ’ ಎಂದು ನಾನು ನೆನಸಿದೆ.

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಚಟುವಟಿಕೆಯ ಮೇಲ್ವಿಚಾರಣೆಮಾಡುವ ಅನೇಕ ಜವಾಬ್ದಾರಿಗಳು ನೇತನ್‌ರಿಗಿತ್ತು. ಅವರು ನನ್ನೊಂದಿಗೆ ಮುಚ್ಚುಮರೆಯಿಲ್ಲದೆ ಮಾತನಾಡಿ, ಅವರ ಮದುವೆಯ ಪ್ರಸ್ತಾಪವನ್ನು ಸ್ವೀಕರಿಸುವ ಮುನ್ನ ನಾನೇಕೆ ಜಾಗ್ರತೆಯಿಂದ ಆಲೋಚಿಸಬೇಕು ಎಂಬುದಕ್ಕೆ ಅನೇಕ ಕಾರಣಗಳನ್ನು ತಿಳಿಸಿದರು. ಆ ದಿನಗಳಲ್ಲಿ ಅವರು ಲೋಕದಲ್ಲೆಲ್ಲಾ ಇದ್ದ ಯೆಹೋವನ ಸಾಕ್ಷಿಗಳ ಬ್ರಾಂಚ್‌ಗಳಿಗೆ ಭೇಟಿನೀಡಲು ಹೋಗುತ್ತಿದ್ದರು ಮತ್ತು ಕೆಲವೊಮ್ಮೆ ಅನೇಕ ವಾರಗಳಿಗಾಗಿ ಹೋಗುತ್ತಿದ್ದರು. ಆದುದರಿಂದ, ನಾವು ಅನೇಕ ದಿವಸಗಳ ವರೆಗೆ ಪ್ರತ್ಯೇಕವಾಗಿರಬೇಕಾದ ಸಂದರ್ಭಗಳು ಬರಬಹುದು ಎಂಬುದನ್ನು ಸಹ ಅವರು ನನಗೆ ವಿವರಿಸಿದರು.

ನಾನು ಹದಿಹರೆಯದವಳಾಗಿದ್ದಾಗ, ವಸಂತಕಾಲದಲ್ಲಿ ವಿವಾಹವಾಗಿ ಹವಾಯಿಯ ಪೆಸಿಫಿಕ್‌ ದ್ವೀಪಗಳಲ್ಲಿ ಮಧುಚಂದ್ರ ದಿವಸಗಳನ್ನು ಕಳೆಯುವ ಹಗಲುಕನಸುಗಳನ್ನು ಕಾಣುತ್ತಿದ್ದೆ. ನಾವು 1953ರ ಜನವರಿ 31ರ ಚಳಿಗಾಲದಂದು ವಿವಾಹವಾದೆವು, ಮತ್ತು ಆ ಶನಿವಾರ ಮಧ್ಯಾಹ್ನ ಮತ್ತು ಭಾನುವಾರ ನ್ಯೂ ಜರ್ಸಿಯಲ್ಲಿ ನಮ್ಮ ಮಧುಚಂದ್ರವನ್ನು ಕಳೆದೆವು. ಸೋಮವಾರ ನಮ್ಮ ಕೆಲಸವನ್ನು ಪುನಃ ಆರಂಭಿಸಿದೆವು. ಆದರೆ ಹೇಗೊ ಒಂದು ವಾರದ ನಂತರ ನಾವು ಪುನಃ ಒಂದು ವಾರಕ್ಕಾಗಿ ಮಧುಚಂದ್ರಕ್ಕೆ ಹೋದೆವು.

ಉದ್ಯೋಗಶೀಲ ಸಂಗಾತಿ

ಇಸವಿ 1923ರಲ್ಲಿ ನೇತನ್‌ ಬೆತೆಲಿಗೆ ಆಗಮಿಸಿದಾಗ 18 ವರುಷ ಪ್ರಾಯದವರಾಗಿದ್ದರು. ಸಾಕ್ಷಿಕಾರ್ಯದಲ್ಲಿ ಮುಂದಾಳುತ್ವವನ್ನು ವಹಿಸುತ್ತಿದ್ದ ಜೋಸೆಫ್‌ ಎಫ್‌. ರದರ್‌ಫರ್ಡ್‌ ಮತ್ತು ಮುದ್ರಣಾಲಯದ ಕಾರ್ಯನಿರ್ವಾಹಕರಾಗಿದ್ದ ರೋಬರ್ಟ್‌ ಜೆ. ಮಾರ್ಟಿನ್‌ರಂಥ ಅನುಭವಸ್ಥ ವ್ಯಕ್ತಿಗಳಿಂದ ಅವರಿಗೆ ಅತ್ಯಮೂಲ್ಯವಾದ ತರಬೇತಿಯು ದೊರಕಿತ್ತು. 1932ರಲ್ಲಿ ಸಹೋದರ ಮಾರ್ಟಿನ್‌ ತೀರಿಕೊಂಡಾಗ, ನೇತನ್‌ರವರು ಮುದ್ರಣಾಲಯದ ಕಾರ್ಯನಿರ್ವಾಹಕರಾದರು. ನಂತರದ ವರುಷಗಳಲ್ಲಿ, ಸಹೋದರ ರದರ್‌ಫರ್ಡ್‌ರವರು ಯೂರೋಪಿನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ಗಳನ್ನು ಭೇಟಿನೀಡಲು ಹೋದಾಗ, ನೇತನ್‌ರನ್ನು ತಮ್ಮೊಂದಿಗೆ ಕರೆದೊಯ್ದರು. 1942ರ ಜನವರಿಯಲ್ಲಿ ಸಹೋದರ ರದರ್‌ಫರ್ಡ್‌ ನಿಧನರಾದಾಗ, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸವನ್ನು ನೋಡಿಕೊಳ್ಳುವ ಜವಾಬ್ದಾರಿಗಳನ್ನು ನೇತನ್‌ರಿಗೆ ಕೊಡಲಾಯಿತು.

ನೇತನ್‌ ಪ್ರಗತಿಶೀಲ ವ್ಯಕ್ತಿಯಾಗಿದ್ದರು. ಯಾವಾಗಲೂ ಭವಿಷ್ಯತ್ತಿನ ಬೆಳವಣಿಗೆಗಾಗಿ ಮುಂಚಿತವಾಗಿಯೇ ಯೋಜನೆಗಳನ್ನು ಮಾಡುತ್ತಿದ್ದರು. ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಅತೀ ಹತ್ತಿರವಿದ್ದ ಕಾರಣ, ಇದು ಸೂಕ್ತವಲ್ಲ ಎಂದು ಕೆಲವರು ನೆನಸುತ್ತಿದ್ದರು. ಮುದ್ರಣ ಕೆಲಸಕ್ಕೆ ಸಂಬಂಧಿಸಿದ ನೇತನ್‌ರ ಯೋಜನೆಗಳನ್ನು ನೋಡಿದ ಒಬ್ಬ ಸಹೋದರರು ಅವರನ್ನು ಹೀಗೆ ಕೇಳಿದರು: “ಇದೇನು ಸಹೋದರ ನಾರ್‌? ಅಂತ್ಯವು ಹತ್ತಿರವಿದೆ ಎಂಬುದರಲ್ಲಿ ನಿಮಗೆ ನಂಬಿಕೆ ಇಲ್ಲವೇ?” ಅದಕ್ಕವರು ಉತ್ತರಿಸಿದ್ದು: “ಹೌದು, ನನಗೆ ನಂಬಿಕೆ ಇದೆ. ಆದರೆ ಒಂದುವೇಳೆ ನಾವು ನೆನಸಿದಷ್ಟು ಬೇಗನೆ ಅಂತ್ಯವು ಬರಲಿಲ್ಲವಾದರೆ, ಆಗ ನಾವು ಸನ್ನದ್ಧರಾಗಿರುವೆವು.”

ನೇತನ್‌ರಿಗೆ, ಮಿಷನೆರಿಗಳಿಗಾಗಿ ಒಂದು ಶಾಲೆಯನ್ನು ಸ್ಥಾಪಿಸುವ ಯೋಜನೆಯು ಯಾವಾಗಲೂ ಇತ್ತು. ಆದುದರಿಂದ, 1943ರ ಫೆಬ್ರವರಿ 1ರಂದು ಮಿಷನೆರಿ ಶಾಲೆಯು ಸ್ಥಾಪನೆಯಾಯಿತು. ಎಲ್ಲಿ ನನ್ನ ಅಣ್ಣನಾದ ವೇನ್‌ ಸೇವೆಮಾಡುತ್ತಿದ್ದನೋ ಆ ಕಿಂಗ್‌ಡಮ್‌ ಫಾರ್ಮ್‌ನಲ್ಲಿ ಅದು ಆರಂಭವಾಯಿತು. ಆ ಶಾಲೆಯು, ಐದು ತಿಂಗಳುಗಳ ಆಳವಾದ ಬೈಬಲ್‌ ಅಧ್ಯಯನ ಕೋರ್ಸ್‌ ಅನ್ನು ಹೊಂದಿದ್ದರೂ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ಮನೋರಂಜನೆಯು ದೊರಕುವಂತೆ ನೇತನ್‌ ನೋಡಿಕೊಂಡರು. ಶಾಲೆಯ ವರುಷಗಳ ಆರಂಭದ ದಿವಸಗಳಲ್ಲಿ, ಅವರು ವಿದ್ಯಾರ್ಥಿಗಳೊಂದಿಗೆ ಚೆಂಡಾಟಗಳನ್ನು ಆಡುತ್ತಿದ್ದರು. ಆದರೆ ನಂತರ, ಒಂದುವೇಳೆ ಆಟದ ಸಮಯದಲ್ಲಿ ಯಾವುದೇ ಹಾನಿಯಾಗುವುದಾದರೆ ಅದು ಅವರ ಬೇಸಿಗೆಕಾಲದ ಜಿಲ್ಲಾ ಅಧಿವೇಶನದ ಹಾಜರಿಗೆ ತಡೆಯಾಗಬಹುದೆಂಬ ಹೆದರಿಕೆಯಿಂದ ಅವರು ಆಡುವುದನ್ನು ನಿಲ್ಲಿಸಿದರು. ಆಟವಾಡುವ ಬದಲು ಅವರು ಕೇವಲ ಅಂಪಾಯರ್‌ ಆಗಲು ಆಯ್ಕೆಮಾಡುತ್ತಿದ್ದರು. ಆಟವಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪರವಾಗಿ ಅವರು ನೇರವಾಗಿ ಆಟದ ನಿಯಮಗಳನ್ನು ಉಲ್ಲಂಘಿಸುವಾಗ ವಿದ್ಯಾರ್ಥಿಗಳು ಆನಂದಿಸುತ್ತಿದ್ದರು.

ನೇತನ್‌ರೊಂದಿಗಿನ ಪ್ರಯಾಣಗಳು

ಕಾಲಕ್ರಮೇಣವಾಗಿ ನಾನೂ, ನೇತನ್‌ರೊಂದಿಗೆ ಪ್ರಯಾಣಿಸಲು ಆರಂಭಿಸಿದೆ. ಬ್ರಾಂಚ್‌ ಸ್ವಯಂಸೇವಕರು ಮತ್ತು ಮಿಷನೆರಿಗಳೊಂದಿಗೆ ಅನುಭವಗಳನ್ನು ಹಂಚಿಕೊಳ್ಳಲು ನಾನು ಆನಂದಿಸಿದೆ. ಅವರ ಪ್ರೀತಿ ಮತ್ತು ಶ್ರದ್ಧೆಯನ್ನು ನಾನು ವೈಯಕ್ತಿಕವಾಗಿ ನೋಡಶಕ್ತಳಾದೆ, ಮತ್ತು ಅವರ ನೇಮಿತ ದೇಶಗಳಲ್ಲಿನ ಅವರ ದಿನಚರಿ ಮತ್ತು ಜೀವನ ಸ್ಥಿತಿಗಳ ಬಗ್ಗೆ ನಾನು ಕಲಿತುಕೊಂಡೆ. ಅನೇಕ ವರುಷಗಳಿಂದ, ನಾವು ಹಿಂದೆ ಮಾಡಿದ ಅಂಥ ಭೇಟಿಗಳಿಗಾಗಿ ನನಗೆ ಗಣ್ಯತಾ ಪತ್ರಗಳು ಬರುತ್ತಾ ಇವೆ.

ನಮ್ಮ ಪ್ರಯಾಣಗಳ ಕಡೆಗೆ ಹಿನ್ನೋಟ ಬೀರುವಾಗ, ನಾನು ಅನೇಕ ಅನುಭವಗಳನ್ನು ನೆನಪಿಸಿಕೊಳ್ಳುತ್ತೇನೆ. ಉದಾಹರಣೆಗೆ, ನಾವು ಪೋಲೆಂಡಿಗೆ ಭೇಟಿನೀಡಿದಾಗ, ನನ್ನ ಮುಂದೆ ಇಬ್ಬರು ಸಹೋದರಿಯರು ಏನೋ ಪಿಸುಗುಟ್ಟುತ್ತಿದ್ದರು. ನಾನು ಅವರನ್ನು “ನೀವೇಕೆ ಪಿಸುಗುಟ್ಟುತ್ತಿದ್ದೀರಿ?” ಎಂದು ಕೇಳಿದೆ. ಅವರು ನನ್ನಲ್ಲಿ ಕ್ಷಮೆಯಾಚಿಸಿ ಈ ಹವ್ಯಾಸಕ್ಕಾಗಿನ ಕಾರಣವನ್ನು ತಿಳಿಸಿದರು. ಹಿಂದೆ ಪೋಲೆಂಡಿನಲ್ಲಿ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ನಿಷೇಧವಿದ್ದಾಗ, ಅಧಿಕಾರಿಗಳು ಸಾಕ್ಷಿಗಳ ಮನೆಯಲ್ಲಿ ಅವರು ಏನು ಮಾತನಾಡುತ್ತಾರೆಂದು ಕದ್ದಾಲಿಸಲು ಮೈಕ್ರೋಫೋನ್‌ಗಳನ್ನು ಬಚ್ಚಿಡುತ್ತಿದ್ದದರಿಂದ, ಸಾಕ್ಷಿಗಳು ಯಾವಾಗಲೂ ಏನೇ ಮಾತನಾಡುವಾಗ ಪಿಸುಗುಟ್ಟುತ್ತಿದ್ದರು.

ಪೋಲೆಂಡಿನಲ್ಲಿ ನಿಷೇಧವಿದ್ದಾಗ ಸೇವೆಮಾಡಿದವರಲ್ಲಿ ಸಹೋದರಿ ಆಡಾ ಒಬ್ಬರಾಗಿದ್ದರು. ಅವರಿಗೆ ಗುಂಗುರು ಕೂದಲಿತ್ತು ಮತ್ತು ಅವರ ಹಣೆಯು ಕೂದಲಿನಿಂದ ಮುಚ್ಚಿತ್ತು. ಒಮ್ಮೆ ಅವರು ನನಗೆ ತಮ್ಮ ಹಣೆಯ ಮೇಲಿನ ಕೂದಲುಗಳನ್ನು ಎತ್ತಿ, ಹಿಂಸೆಯ ಸಮಯದಲ್ಲಿ ದೊರೆತ ಹೊಡೆತಗಳ ಪರಿಣಾಮವಾಗಿ ಉಂಟಾದ ಗಾಯದ ಕಲೆಯನ್ನು ತೋರಿಸಿದರು. ನಮ್ಮ ಸಹೋದರ ಸಹೋದರಿಯರು ತಾಳಿಕೊಳ್ಳಬೇಕಾದ ಅಂಥ ಕ್ರೂರ ಹಿಂಸೆಯ ಪರಿಣಾಮಗಳನ್ನು ಕಣ್ಣಾರೆಕಂಡು ನಾನು ಸ್ತಬ್ಧಳಾದೆ.

ಬೆತೆಲಿನ ನಂತರದ ನನ್ನ ಅಚ್ಚುಮೆಚ್ಚಿನ ಸ್ಥಳವೆಂದರೆ ಹವಾಯೀ. 1957ರಲ್ಲಿ ಅಲ್ಲಿನ ಹೀಲೋ ಎಂಬ ಪಟ್ಟಣದಲ್ಲಿ ನಡೆದ ಅಧಿವೇಶನವು ಇನ್ನೂ ನನ್ನ ನೆನಪಿನಲ್ಲಿದೆ. ಅದೊಂದು ಗಮನಾರ್ಹ ಸಂದರ್ಭವಾಗಿತ್ತು, ಮತ್ತು ಅದರ ಹಾಜರಿಯು ಸ್ಥಳಿಕ ಸಾಕ್ಷಿಗಳ ಸಂಖ್ಯೆಗಿಂತ ಹೆಚ್ಚಾಗಿತ್ತು. ಅಲ್ಲಿನ ಪೌರ ಸಭಾಧ್ಯಕ್ಷರು, ನೇತನ್‌ರಿಗೆ ಅಧಿಕೃತ ಸ್ವಾಗತವನ್ನು ನೀಡಿದರು. ಅನೇಕರು ಬಂದು ನಮ್ಮನ್ನು ವಂದಿಸಿದರು, ಮತ್ತು ನಮ್ಮನ್ನು ಹೂವಿನ ಹಾರಗಳಿಂದ ಶೃಂಗರಿಸಿದರು.

ಇನ್ನೊಂದು ಗಮನಾರ್ಹವಾದ ಅಧಿವೇಶನವು, 1955ರಲ್ಲಿ ಜರ್ಮನಿಯ ನ್ಯೂರೆಂಬರ್ಗ್‌ನಲ್ಲಿ ನಡೆದ ಅಧಿವೇಶನವಾಗಿತ್ತು. ಇದು, ಒಂದು ಸಮಯದಲ್ಲಿ ಹಿಟ್ಲರನ ಸೈನ್ಯದ ಕವಾಯತು ಮೈದಾನವಾಗಿದ್ದ ಸ್ಥಳದಲ್ಲಿ ಜರಗಿತು. ಎಲ್ಲರಿಗೂ ತಿಳಿದಿರುವಂತೆ, ಜರ್ಮನಿಯಲ್ಲಿ ಒಬ್ಬ ಯೆಹೋವನ ಸಾಕ್ಷಿಯೂ ಇಲ್ಲದಂತೆ ಮಾಡುವುದಾಗಿ ಹಿಟ್ಲರನು ಶಪಥಮಾಡಿದ್ದನು, ಆದರೆ ಈಗ ಈ ಸ್ಟೇಡಿಯಂ ಯೆಹೋವನ ಸಾಕ್ಷಿಗಳಿಂದ ತುಂಬಿತ್ತು! ನನಗೆ ಕಣ್ಣೀರನ್ನು ತಡೆಹಿಡಿಯಲಾಗಲಿಲ್ಲ. ವೇದಿಕೆಯು ಅತೀ ದೊಡ್ಡದಾಗಿತ್ತು, ಮತ್ತು ವೇದಿಕೆಯ ಹಿಂಬದಿಯಲ್ಲಿ ಅತೀ ಆಕರ್ಷಕವಾದ 144 ದೊಡ್ಡ ಸ್ತಂಭಗಳ ಹಿನ್ನೆಲೆಯಿತ್ತು. ನಾನು ವೇದಿಕೆಯಲ್ಲಿದ್ದ ಕಾರಣ, 1,07,000 ಮಂದಿ ಸಭಿಕರ ದೊಡ್ಡ ಸಂಖ್ಯೆಯನ್ನು ನೋಡಶಕ್ತಳಾದೆ. ಜನರ ಸಾಲುಗಳು ನಾನು ಕಡೇ ಸಾಲನ್ನು ನೋಡಲು ಕಷ್ಟಕರವಾಗಿರುವಷ್ಟು ದೂರದ ವರೆಗೆ ಇದ್ದವು.

ನಾಸಿ ಆಳ್ವಿಕೆಯ ಕೆಳಗೆ ನಮ್ಮ ಜರ್ಮನಿಯ ಸಹೋದರರು ಅನುಭವಿಸಿದ್ದ ಹಿಂಸೆಯ ಸಮಯದಲ್ಲಿ ಅವರು ತೋರಿಸಿದ್ದ ಸಮಗ್ರತೆಯನ್ನು ಮತ್ತು ಅವರು ಯೆಹೋವನಿಂದ ಪಡೆದಂಥ ಬಲವನ್ನು ನಾವು ಗ್ರಹಿಸಶಕ್ತರಾದೆವು. ಅದು, ಯೆಹೋವನಿಗೆ ನಿಷ್ಠರಾಗಿರಬೇಕೆಂಬ ಮತ್ತು ಆತನಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕೆಂಬ ನಮ್ಮ ದೃಢನಿಶ್ಚಯವನ್ನು ಇನ್ನೂ ಹೆಚ್ಚು ಬಲಗೊಳಿಸಿತು. ನೇತನ್‌ ಮುಕ್ತಾಯದ ಪ್ರಾರ್ಥನೆಯನ್ನು ಮಾಡಿದರು, ಮತ್ತು ಪ್ರಾರ್ಥನೆಯು ಮುಗಿದ ನಂತರ ಸಭಿಕರೆಲ್ಲರಿಗೆ ವಿದಾಯಹೇಳುತ್ತಾ ತಮ್ಮ ಕೈಯನ್ನಾಡಿಸಿದರು. ಕೂಡಲೆ ಸಭಿಕರೆಲ್ಲರೂ ತಮ್ಮ ಕರವಸ್ತ್ರಗಳನ್ನು ಬೀಸುತ್ತಾ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಆಗ ಅದೊಂದು ಸುಂದರವಾದ ಹೂಹೊಲದಂತೆ ತೋರಿತು.

ಇಸವಿ 1974ರ ಡಿಸೆಂಬರ್‌ ತಿಂಗಳಿನಲ್ಲಿ ಪೋರ್ಚುಗಲ್‌ಗೆ ನಾವು ಮಾಡಿದ ಭೇಟಿಯು ಸಹ ಮರೆಯಲಾಗದ ಘಟನೆಯಾಗಿತ್ತು. ಲಿಸ್ಬನ್‌ನಲ್ಲಿ ನಮ್ಮ ಸಾಕ್ಷಿ ಕಾರ್ಯವು ಕಾನೂನುಬದ್ಧವಾದ ನಂತರ ನಡೆದ, ಅಲ್ಲಿನ ಸಾಕ್ಷಿಗಳ ಮೊದಲ ಕೂಟದಲ್ಲಿ ನಾವು ಸಹ ಹಾಜರಿದ್ದೆವು. ಅಲ್ಲಿ ನಮ್ಮ ಸಾಕ್ಷಿ ಕಾರ್ಯವು, ಸುಮಾರು 50 ವರುಷಗಳ ತನಕ ನಿಷೇಧದ ಕೆಳಗಿತ್ತು. ಆ ದೇಶದಲ್ಲಿ ಆ ಸಮಯದಲ್ಲಿ ಕೇವಲ 14,000 ರಾಜ್ಯ ಪ್ರಚಾರಕರಿದ್ದರೂ, ಅಲ್ಲಿ ನಡೆದ ಎರಡು ಕೂಟಗಳಿಗೆ ಸುಮಾರು 46,000ಕ್ಕಿಂತಲೂ ಹೆಚ್ಚು ಜನರು ಹಾಜರಿದ್ದರು. “ನಾವು ಇನ್ನೆಂದೂ ಅಡಗಿಕೊಳ್ಳಬೇಕಾದ ಅಗತ್ಯವಿಲ್ಲ. ನಾವು ಈಗ ಸ್ವತಂತ್ರ ಜನರು” ಎಂದು ಸಹೋದರರು ಹೇಳಿದಾಗ ನನಗೆ ನನ್ನ ಕಣ್ಣೀರನ್ನು ತಡೆಹಿಡಿಯಲಾಗಲಿಲ್ಲ.

ನಾನು ನೇತನ್‌ರೊಂದಿಗೆ ಪ್ರಯಾಣಿಸಲು ತೊಡಗಿದಂದಿನಿಂದ ಇಂದಿನ ತನಕ, ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ​—⁠ವಿಮಾನಯಾನದ ಸಮಯದಲ್ಲಿ, ಹೋಟೇಲಿನಲ್ಲಿ​—⁠ಮತ್ತು ಬೀದಿಸಾಕ್ಷಿಕಾರ್ಯದಲ್ಲಿ ಆನಂದಿಸುತ್ತಿದ್ದೇನೆ. ನಾನು ಸಾಕ್ಷಿಕೊಡಲು ಸಿದ್ಧಳಾಗಿರಲು ಸಾಧ್ಯವಾಗುವಂತೆ, ಯಾವಾಗಲೂ ಸಾಹಿತ್ಯವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಒಮ್ಮೆ ತಡವಾಗಿದ್ದ ವಿಮಾನಕ್ಕಾಗಿ ನಾವು ಕಾಯುತ್ತಿದ್ದಾಗ, ಒಬ್ಬಾಕೆ ಸ್ತ್ರೀಯು ನನ್ನನ್ನು ನಾನು ಎಲ್ಲಿ ಕೆಲಸಮಾಡುತ್ತೇನೆಂದು ಕೇಳಿದಳು. ಅದು ಅವಳೊಂದಿಗೆ ಮತ್ತು ನಮ್ಮ ಸುತ್ತಲೂ ಇದ್ದು ನಮ್ಮನ್ನು ಆಲಿಸುತ್ತಿದ್ದ ಇತರರೊಂದಿಗೆ ಒಂದು ಸಂಭಾಷಣೆಗೆ ನಡಿಸಿತು. ಬೆತೆಲ್‌ ಸೇವೆ ಮತ್ತು ಸಾರುವ ಕೆಲಸವು ಯಾವಾಗಲೂ ನನ್ನನ್ನು ಕಾರ್ಯಮಗ್ನಳನ್ನಾಗಿಯೂ ಸಂತೋಷಿತಳನ್ನಾಗಿಯೂ ಇಟ್ಟಿದೆ.

ಅನಾರೋಗ್ಯ ಮತ್ತು ಅಗಲುವ ಸಮಯದ ಉತ್ತೇಜನದಾಯಕ ಮಾತುಗಳು

ಇಸವಿ 1976ರಲ್ಲಿ ನೇತನ್‌ರವರು ಕ್ಯಾನ್ಸರ್‌ ರೋಗದಿಂದ ಬಹಳ ಅಸ್ವಸ್ಥರಾದರು, ಮತ್ತು ನಾನು ಹಾಗೂ ಬೆತೆಲ್‌ ಸಿಬ್ಬಂದಿಗಳಲ್ಲಿ ಇತರರು ಅವರನ್ನು ನೋಡಿಕೊಂಡೆವು. ಅವರ ಕುಗ್ಗುತ್ತಿರುವ ಆರೋಗ್ಯದ ಹೊರತಾಗಿಯೂ, ತರಬೇತಿಗಾಗಿ ಬ್ರೂಕ್ಲಿನ್‌ ಬೆತೆಲ್‌ಗೆ ಬಂದಿದ್ದ ಲೋಕದ ಸುತ್ತಲಿನ ಬ್ರಾಂಚ್‌ ಆಫೀಸುಗಳ ಸದಸ್ಯರನ್ನು ನಾವು ನಮ್ಮ ಕೋಣೆಗೆ ಆಮಂತ್ರಿಸುತ್ತಿದ್ದೆವು. ಡಾನ್‌ ಮತ್ತು ಅರ್‌ಲೀನ್‌ ಸ್ಟೀಲ್‌, ಲೋಯಿಡ್‌ ಮತ್ತು ಮೆಲ್ಬಾ ಬ್ಯಾರಿ, ಡಗ್ಲಸ್‌ ಮತ್ತು ಮೇರಿ ಗೆಸ್ಟ್‌, ಮಾರ್ಟಿನ್‌ ಮತ್ತು ಗರ್ಟ್ರೂಡ್‌ ಪೋಯೆಟ್ಸಿಂಗರ್‌, ಪ್ರೈಸ್‌ ಹ್ಯೂಸ್‌, ಮತ್ತು ಇನ್ನೂ ಅನೇಕರ ಭೇಟಿಯು ನನ್ನ ನೆನಪಿನಲ್ಲಿದೆ. ಅನೇಕಬಾರಿ ಅವರು ನಮ್ಮೊಂದಿಗೆ ತಮ್ಮ ದೇಶದ ಅನುಭವಗಳನ್ನು ಹಂಚಿಕೊಂಡರು. ನಿಷೇಧದ ಕೆಳಗೆ ನಮ್ಮ ಸಹೋದರರು ತೋರಿಸಿದ ಸಮಗ್ರತೆಯ ಅನುಭವಗಳನ್ನು ಕೇಳಿ ನಾನು ಬಹಳ ಪ್ರಭಾವಿತಳಾದೆ.

ತಮ್ಮ ಮರಣದ ದಿನವು ಸಮೀಪಿಸುತ್ತಿದೆ ಎಂದು ನೇತನ್‌ರಿಗೆ ತಿಳಿದಾಗ, ಮುಂದಕ್ಕೆ ನಾನು ನನ್ನ ವೈಧವ್ಯವನ್ನು ನಿಭಾಯಿಸಶಕ್ತಳಾಗುವಂತೆ ಅವರು ನನಗೆ ಕೆಲವು ಉತ್ತಮ ಸಲಹೆಗಳನ್ನು ನೀಡಿದರು. ಅವರು ಹೇಳಿದ್ದು: “ನಾವು ಒಂದು ಸಂತೋಷಕರ ವೈವಾಹಿಕ ಜೀವನವನ್ನು ಆನಂದಿಸಿದೆವು. ಅನೇಕ ಜನರು ಅದನ್ನು ಅನುಭವಿಸುವುದಿಲ್ಲ.” ನಮ್ಮ ವೈವಾಹಿಕ ಜೀವನವನ್ನು ಆನಂದದಾಯಕವಾಗಿ ಮಾಡಿದ ಒಂದು ವಿಷಯವು ನೇತನ್‌ರವರ ಆಲೋಚನಾಶೀಲತೆಯೇ. ಉದಾಹರಣೆಗೆ, ನಮ್ಮ ಪ್ರಯಾಣದಲ್ಲಿ ನಾವು ಅನೇಕರನ್ನು ಭೇಟಿಯಾಗುತ್ತಿದ್ದರಿಂದ ಅವರು ನನಗೆ ಹೀಗೆ ಹೇಳುತ್ತಿದ್ದರು: “ಆಡ್ರೀ, ಒಂದುವೇಳೆ ನಾನು ಯಾರನ್ನಾದರು ನಿನಗೆ ಪರಿಚಯಮಾಡಿಸದೆ ಇದ್ದರೆ, ಅದರ ಅರ್ಥ ನಾನು ಅವರ ಹೆಸರನ್ನು ಮರೆತಿದ್ದೇನೆ ಅಷ್ಟೇ.” ಇದನ್ನು ಅವರು ನನಗೆ ಮುಂಚಿತವಾಗಿಯೇ ಹೇಳುತ್ತಿದ್ದ ಕಾರಣ ನನಗೆ ಬಹಳ ಸಂತೋಷವಾಗುತ್ತಿತ್ತು.

“ಮರಣದ ನಂತರ ನಮ್ಮ ನಿರೀಕ್ಷೆಯು ಖಚಿತವಾಗುತ್ತದೆ, ಮತ್ತು ಮುಂದೆಂದೂ ನಾವು ಪುನಃ ನೋವನ್ನು ಅನುಭವಿಸಬೇಕಾದ ಅಗತ್ಯವಿಲ್ಲ” ಎಂಬುದನ್ನು ನೇತನ್‌ ನನಗೆ ನೆನಪುಮಾಡಿದರು. ನಂತರ ಅವರು ನನಗೆ ಹೇಳಿದ್ದು: “ನಿನ್ನ ಭವಿಷ್ಯತ್ತಿನ ಕಡೆಗೆ ನೋಡು, ಏಕೆಂದರೆ ಆಗಲೇ ನಿನ್ನ ಪ್ರತಿಫಲವು ಸಿಗಲಿದೆ. ನೆನಪುಗಳು ಮುಂದುವರಿಯಬಹುದಾದರೂ, ಕಳೆದುಹೋದ ದಿವಸಗಳಲ್ಲಿಯೇ ಜೀವಿಸಬೇಡ. ಸಮಯವು ನಿನಗೆ ವಾಸಿಯಾಗಲು ಸಹಾಯಮಾಡುತ್ತದೆ. ದುಃಖಿಸಬೇಡ ಮತ್ತು ನಿನ್ನ ಬಗ್ಗೆ ಮರುಕವನ್ನು ಬೆಳೆಸಿಕೊಳ್ಳಬೇಡ. ನಿನಗೆ ದೊರೆತ ಆನಂದಗಳು ಮತ್ತು ಆಶೀರ್ವಾದಗಳಿಗಾಗಿ ಸಂತೋಷಪಡು. ಸ್ವಲ್ಪ ಸಮಯದ ನಂತರ, ನೆನಪುಗಳು ನಿನಗೆ ಆನಂದವನ್ನು ತರುವುದನ್ನು ನೀನು ನೋಡುವಿ. ಸವಿನೆನಪುಗಳು ದೇವರ ವರದಾನವಾಗಿದೆ.” ಅವರು ಕೂಡಿಸಿದ್ದು: “ನಿನ್ನನ್ನು ಕಾರ್ಯಮಗ್ನವಾಗಿಟ್ಟುಕೊ​—⁠ಇತರರಿಗಾಗಿ ಏನನ್ನಾದರೂ ಮಾಡುವುದರಲ್ಲಿ ನಿನ್ನ ಜೀವನವನ್ನು ಉಪಯೋಗಿಸು. ಇದು, ಜೀವಿಸುವುದರಲ್ಲಿ ನಿನಗೆ ಆನಂದವನ್ನು ನೀಡುತ್ತದೆ.” ಸ್ವಲ್ಪ ಸಮಯದ ನಂತರ, ಅಂದರೆ 1977ರ ಜೂನ್‌ 8ರಂದು ನೇತನ್‌ ಈ ಭೂದೃಶ್ಯದಿಂದ ಇಲ್ಲವಾದರು.

ಗ್ಲೆನ್‌ ಹೈಡ್‌ರೊಂದಿಗೆ ವಿವಾಹ

ನಾನು ಒಂದೇ ನನ್ನ ಹಳೇ ನೆನಪುಗಳಲ್ಲಿಯೇ ಜೀವಿಸಸಾಧ್ಯವಿದೆ ಇಲ್ಲವೆ ಒಂದು ಹೊಸ ಜೀವನವನ್ನು ಕಟ್ಟಸಾಧ್ಯವಿದೆ ಎಂದು ನೇತನ್‌ ನನಗೆ ತಿಳಿಸಿದ್ದರು. ಆದುದರಿಂದ 1978ರಲ್ಲಿ, ನ್ಯೂ ಯಾರ್ಕ್‌ನ ವಾಲ್‌ಕಿಲ್‌ನಲ್ಲಿರುವ ವಾಚ್‌ಟವರ್‌ ಫಾರ್ಮ್ಸ್‌ಗೆ ಸ್ಥಳಾಂತರಿಸಿದ ಬಳಿಕ ನಾನು ಗ್ಲೆನ್‌ ಹೈಡ್‌ರನ್ನು ವಿವಾಹವಾದೆ. ಅವರು ಬಹಳ ಸುಂದರ ವ್ಯಕ್ತಿ, ಮತ್ತು ಸೌಮ್ಯ ಸ್ವಭಾವದವರೂ ಶಿಷ್ಟ ವ್ಯಕ್ತಿಯೂ ಆಗಿದ್ದರು. ಸಾಕ್ಷಿಯಾಗುವ ಮುನ್ನ, ಅಮೆರಿಕವು ಜಪಾನಿನೊಂದಿಗೆ ಯುದ್ಧಮಾಡುತ್ತಿದ್ದ ಸಮಯದಲ್ಲಿ ಅವರು ನೌಕಾ ಸೈನ್ಯದಲ್ಲಿ ಕೆಲಸಮಾಡಿದ್ದರು.

ಗ್ಲೆನ್‌ರವರು ಪಿ.ಟಿ. (ಪಟ್ರೋಲ್‌ ಟಾರ್ಪಿಡೊ) ಹಡಗಿನ ಎಂಜಿನ್‌ ರೂಮ್‌ನಲ್ಲಿ ನೇಮಿಸಲ್ಪಟ್ಟಿದ್ದರು. ಎಂಜಿನಿನ ಶಬ್ದದ ಕಾರಣ ಅವರು ತಮ್ಮ ಶ್ರವಣ ಸಾಮರ್ಥ್ಯವನ್ನು ಆಂಶಿಕವಾಗಿ ಕಳೆದುಕೊಂಡಿದ್ದರು. ಯುದ್ಧದ ನಂತರ, ಅವರು ಅಗ್ನಿಶಾಮಕ ಕೆಲಸವನ್ನು ಮಾಡಿದರು. ಯುದ್ಧಸಮಯದ ಅನುಭವಗಳ ಕಾರಣ ಅನೇಕ ವರುಷಗಳ ವರೆಗೆ ಅವರಿಗೆ ಘೋರ ಸ್ವಪ್ನಗಳು ಬೀಳುತ್ತಿದ್ದವು. ಅವರು, ತನಗೆ ಅನೌಪಚಾರಿಕವಾಗಿ ಸಾಕ್ಷಿನೀಡಿದ ತನ್ನ ಕಾರ್ಯದರ್ಶಿಯ ಮೂಲಕ ಬೈಬಲ್‌ ಸತ್ಯವನ್ನು ಕಲಿತರು.

ನಂತರ, 1968ರಲ್ಲಿ ಗ್ಲೆನ್‌ರನ್ನು ಬ್ರೂಕ್ಲಿನ್‌ ಬೆತೆಲಿಗೆ ಆಮಂತ್ರಿಸಲಾಯಿತು, ಮತ್ತು ಅಲ್ಲಿ ಅವರು ಅಗ್ನಿಶಾಮಕ ವಿಭಾಗದಲ್ಲಿ ಕೆಲಸಮಾಡಿದರು. ನಂತರ, ವಾಚ್‌ಟವರ್‌ ಫಾರ್ಮ್ಸ್‌ಗೆ ತನ್ನದೇ ಆದ ಅಗ್ನಿಶಾಮಕ ಯಂತ್ರವು ದೊರೆತೊಡನೆ, 1975ರಲ್ಲಿ ಅವರನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. ಸಮಯಾನಂತರ ಅವರು ಆಲ್‌ಸೈಮರ್ಸ್‌ ರೋಗದಿಂದ ಪೀಡಿತರಾದರು. ನಾವು ವಿವಾಹವಾಗಿ ಹತ್ತು ವರುಷಗಳ ನಂತರ ಗ್ಲೆನ್‌ ತೀರಿಕೊಂಡರು.

ಈ ದುಃಖವನ್ನು ನಿಭಾಯಿಸಲು ನಾನು ಹೇಗೆ ಶಕ್ತಳಾದೆ? ನೇತನ್‌ರವರು ಸಾಯುವ ಮುನ್ನ ನನಗೆ ನೀಡಿದ ಅದೇ ವಿವೇಕದ ನುಡಿಮುತ್ತುಗಳು ಪುನಃ ನನ್ನನ್ನು ಸಾಂತ್ವನಗೊಳಿಸಿದವು. ನನ್ನ ವೈಧವ್ಯವನ್ನು ಹೇಗೆ ಎದುರಿಸಬೇಕೆಂದು ಅವರು ನನಗಾಗಿ ಬರೆದಿಟ್ಟಿದ್ದ ವಿಷಯಗಳನ್ನು ನಾನು ಯಾವಾಗಲೂ ಓದುತ್ತಾ ಇದ್ದೆ. ಈಗಲೂ ನಾನು ಈ ಹೇಳಿಕೆಗಳನ್ನು, ತಮ್ಮ ಸಂಗಾತಿಯನ್ನು ಕಳೆದುಕೊಂಡ ಇತರರೊಂದಿಗೆ ಹಂಚಿಕೊಳ್ಳುತ್ತೇನೆ ಮತ್ತು ನೇತನ್‌ರವರ ಸಲಹೆಯಿಂದ ಅವರು ಸಹ ಸಾಂತ್ವನವನ್ನು ಕಂಡುಕೊಂಡಿದ್ದಾರೆ. ನಿಜ, ಅವರು ನನಗೆ ಹೇಳಿದ್ದಂತೆ ಭವಿಷ್ಯತ್ತಿನ ಕಡೆಗೆ ನೋಡುವುದು ಬಹಳ ಪ್ರಯೋಜನದಾಯಕವಾಗಿದೆ.

ಅತ್ಯಮೂಲ್ಯ ಸಹೋದರತ್ವ

ನನ್ನ ಸಂತೋಷಕರ, ಸಂತೃಪ್ತ ಜೀವನಕ್ಕೆ ವಿಶೇಷವಾಗಿ ಸಹಾಯಮಾಡಿದವರು ಯಾರೆಂದರೆ, ಬೆತೆಲಿನಲ್ಲಿರುವ ನನ್ನ ಆಪ್ತ ಸ್ನೇಹಿತರೇ. ಅವರಲ್ಲಿ ಒಬ್ಬರು, 1944ರಲ್ಲಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ ಮೂರನೇ ತರಗತಿಯಿಂದ ಪದವಿ ಪ್ರಾಪ್ತಿಹೊಂದಿದ್ದ ಎಸ್ಟರ್‌ ಲೋಪೆಸ್‌. ಅವರು ನಮ್ಮ ಬೈಬಲ್‌ ಸಾಹಿತ್ಯವನ್ನು ಸ್ಪ್ಯಾನಿಷ್‌ ಭಾಷೆಗೆ ಭಾಷಾಂತರಿಸುವ ಕೆಲಸಕ್ಕಾಗಿ 1950ರ ಫೆಬ್ರವರಿ ತಿಂಗಳಿನಲ್ಲಿ ಬ್ರೂಕ್ಲಿನ್‌ಗೆ ಹಿಂದಿರುಗಿದರು. ಅನೇಕಬಾರಿ ನೇತನ್‌ ನನ್ನನ್ನು ಬಿಟ್ಟು ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾಗ, ಎಸ್ಟರ್‌ ನನ್ನ ಆಪ್ತ ಜೊತೆಗಾರ್ತಿಯಾಗಿದ್ದರು. ಅವರು ಸಹ ವಾಚ್‌ಟವರ್‌ ಫಾರ್ಮ್ಸ್‌ನಲ್ಲಿದ್ದಾರೆ. ಅವರು ಈಗ ತಮ್ಮ 90ರ ಪ್ರಾಯಗಳಲ್ಲಿದ್ದಾರೆ. ಅವರ ಆರೋಗ್ಯವು ಕ್ಷೀಣಿಸುತ್ತಿದೆ ಮತ್ತು ನಮ್ಮ ಸಣ್ಣ ಚಿಕಿತ್ಸಾಲಯದಲ್ಲಿ ಅವರನ್ನು ನೋಡಿಕೊಳ್ಳಲಾಗುತ್ತಿದೆ.

ನನ್ನ ಕುಟುಂಬದವರಲ್ಲಿ ಕೇವಲ ರಸೆಲ್‌ ಮತ್ತು ಕ್ಲಾರ ಇನ್ನೂ ಬದುಕಿದ್ದಾರೆ. ರಸೆಲ್‌ಗೆ ಈಗ 90ಕ್ಕಿಂತಲೂ ಹೆಚ್ಚು ಪ್ರಾಯವಾಗಿದೆ ಮತ್ತು ಬ್ರೂಕ್ಲಿನ್‌ ಬೆತೆಲಿನಲ್ಲಿ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಿದ್ದಾರೆ. ವಿವಾಹವಾಗಿ ಬೆತೆಲಿನಲ್ಲಿ ಉಳಿಯಲು ಅನುಮತಿಸಲ್ಪಟ್ಟವರಲ್ಲಿ ಅವರು ಮೊದಲನೆಯವರು. 1952ರಲ್ಲಿ ಅವರು ತಮ್ಮ ಜೊತೆ ಬೆತೆಲಿಗಳಾದ ಜೀನ್‌ ಲಾರ್ಸನ್‌ಳನ್ನು ವಿವಾಹವಾದರು. ಜೀನ್‌ಳ ಸಹೋದರ ಮ್ಯಾಕ್ಸ್‌ 1939ರಲ್ಲಿ ಬೆತೆಲಿಗೆ ಆಗಮಿಸಿದರು. ನೇತನ್‌ರ ನಂತರ ಮ್ಯಾಕ್ಸ್‌, 1942ರಲ್ಲಿ ಮುದ್ರಣಾಲಯದ ಮೇಲ್ವಿಚಾರಕರಾದರು. ಮ್ಯಾಕ್ಸ್‌ರವರು ಬೆತೆಲಿನಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಮುಂದುವರಿಸುತ್ತಿದ್ದಾರೆ. ಮಾತ್ರವಲ್ಲದೆ, ಅವರಿಗೆ ತಮ್ಮ ಪ್ರಿಯ ಪತ್ನಿಯಾದ ಹೆಲೆನ್‌ಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಇದೆ, ಏಕೆಂದರೆ ಹೆಲೆನ್‌ ಬಹ್ವಂಶ ಜಡ್ಡುರೋಗದಿಂದ ಬಾಧಿತರಾಗಿದ್ದಾರೆ.

ನಾನು ಯೆಹೋವನ ಪೂರ್ಣ ಸಮಯದ ಸೇವೆಯಲ್ಲಿ ಕಳೆದ 63ಕ್ಕಿಂತಲೂ ಹೆಚ್ಚಿನ ವರುಷಗಳ ಕಡೆಗೆ ಹಿನ್ನೋಟ ಬೀರುವಾಗ, ನನ್ನದು ನಿಜವಾಗಿಯೂ ಒಂದು ಸಂತೃಪ್ತಿಕರ ಜೀವನ ಎಂದು ಹೇಳಬಲ್ಲೆ. ಬೆತೆಲ್‌ ನನ್ನ ಸ್ವಂತ ಮನೆಯಾಯಿತು, ಮತ್ತು ನಾನು ಇಲ್ಲಿ ಹೃದಯೋಲ್ಲಾಸದಿಂದ ಸೇವೆಮಾಡುತ್ತಾ ಮುಂದುವರಿಯುತ್ತಿದ್ದೇನೆ. ಈ ಎಲ್ಲಾ ವಿಷಯಕ್ಕಾಗಿ ಪ್ರಶಂಸೆಯು ನನ್ನ ಹೆತ್ತವರಿಗೆ ಸಲ್ಲುತ್ತದೆ, ಏಕೆಂದರೆ ಅವರೇ ಕೆಲಸದ ಪ್ರಮುಖತೆಯನ್ನು ಮತ್ತು ಯೆಹೋವನನ್ನು ಸೇವಿಸಬೇಕೆಂಬ ಇಚ್ಛೆಯನ್ನು ನಮ್ಮ ಹೃದಯದಲ್ಲಿ ಬೇರೂರಿಸಿದರು. ನಮ್ಮ ಜೀವನವನ್ನು ನಿಜವಾಗಿಯೂ ಸಂತೃಪ್ತಿಕರವನ್ನಾಗಿ ಯಾವುದು ಮಾಡುತ್ತದೆಂದರೆ, ನಮ್ಮ ಅದ್ಭುತಕರವಾದ ಸಹೋದರತ್ವ ಮತ್ತು ಭೂಪರದೈಸಿನಲ್ಲಿ ನಮ್ಮ ಸಹೋದರ ಸಹೋದರಿಯರೊಂದಿಗೆ ನಮ್ಮ ಮಹಾನ್‌ ಸೃಷ್ಟಿಕರ್ತನೂ ಒಬ್ಬನೇ ಸತ್ಯ ದೇವರೂ ಆಗಿರುವ ಯೆಹೋವನನ್ನು ನಿತ್ಯಕ್ಕೂ ಸೇವಿಸುತ್ತಾ ಜೀವಿಸುವ ನಿರೀಕ್ಷೆಯೇ.

[ಪುಟ 24ರಲ್ಲಿರುವ ಚಿತ್ರ]

ನನ್ನ ಹೆತ್ತವರು, ಇಸವಿ 1912ರ ಜೂನ್‌ ತಿಂಗಳಿನಲ್ಲಿ ತಮ್ಮ ವಿವಾಹದ ದಿನದಂದು

[ಪುಟ 24ರಲ್ಲಿರುವ ಚಿತ್ರ]

ಎಡದಿಂದ ಬಲಕ್ಕೆ: 1927ರಲ್ಲಿ ರಸೆಲ್‌, ವೇನ್‌, ಕ್ಲಾರ, ಆರ್ಡಿಸ್‌, ನಾನು, ಮತ್ತು ಕರ್ಟಿಸ್‌

[ಪುಟ 25ರಲ್ಲಿರುವ ಚಿತ್ರ]

ಇಸವಿ 1944ರಲ್ಲಿ ಪಯನೀಯರ್‌ ಸೇವೆಮಾಡುತ್ತಿದ್ದಾಗ, ಫ್ರಾನ್‌ಸಿಸ್‌ ಮತ್ತು ಬಾರ್ಬರ ಮೆಕ್‌ನಾಟ್‌ರ ಮಧ್ಯೆ ನಿಂತಿರುವುದು

[ಪುಟ 25ರಲ್ಲಿರುವ ಚಿತ್ರ]

ಇಸವಿ 1951ರಲ್ಲಿ ಬೆತೆಲಿನಲ್ಲಿ. ಎಡದಿಂದ ಬಲಕ್ಕೆ: ನಾನು, ಎಸ್ಟರ್‌ ಲೋಪೆಸ್‌, ಮತ್ತು ನನ್ನ ಅತ್ತಿಗೆ ಜೀನ್‌

[ಪುಟ 26ರಲ್ಲಿರುವ ಚಿತ್ರ]

ನೇತನ್‌ ಮತ್ತು ಅವರ ಹೆತ್ತವರೊಂದಿಗೆ

[ಪುಟ 26ರಲ್ಲಿರುವ ಚಿತ್ರ]

ಇಸವಿ 1955ರಲ್ಲಿ ನೇತನ್‌ರೊಂದಿಗೆ

[ಪುಟ 27ರಲ್ಲಿರುವ ಚಿತ್ರ]

ಹವಾಯೀಯಲ್ಲಿ ನೇತನ್‌ರೊಂದಿಗೆ

[ಪುಟ 29ರಲ್ಲಿರುವ ಚಿತ್ರ]

ನನ್ನ ಎರಡನೆಯ ಗಂಡ ಗ್ಲೆನ್‌ರೊಂದಿಗೆ