ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ’

‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ’

‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ’

“ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ.”​—⁠ಮತ್ತಾಯ 28:18, 19.

ಇಸ್ರಾಯೇಲಿನಲ್ಲಿ ಸಾ.ಶ. 33ರ ವಸಂತಕಾಲದ ದಿನ. ಯೇಸುವಿನ ಶಿಷ್ಯರು ಗಲಿಲಾಯದಲ್ಲಿದ್ದ ಒಂದು ಬೆಟ್ಟದ ಮೇಲೆ ಸೇರಿ ಬಂದಿದ್ದರು. ಅವರ ಪುನರುತ್ಥಿತ ಒಡೆಯನು ಇನ್ನೇನು ಸ್ವರ್ಗಕ್ಕೆ ಏರಿಹೋಗಲಿದ್ದನು. ಆದರೆ ಅದಕ್ಕೆ ಮೊದಲು, ಅವರಿಗೆ ತಿಳಿಸಬೇಕಾಗಿದ್ದ ಮಹತ್ವದ ಸಂಗತಿಯೊಂದು ಅವನಲ್ಲಿತ್ತು. ಯೇಸು ಅವರಿಗೆ ಒಂದು ನೇಮಕವನ್ನು ಕೊಡಲಿಕ್ಕಿದ್ದನು. ಆ ನೇಮಕವೇನಾಗಿತ್ತು? ಅವನ ಶಿಷ್ಯರು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದರು? ಮತ್ತು ಆ ನೇಮಕವು ಇಂದು ನಮಗೆ ಹೇಗೆ ಅನ್ವಯಿಸುತ್ತದೆ?

2 ಯೇಸು ಹೇಳಿದ ವಿಷಯವು ಮತ್ತಾಯ 28:​18-20ರಲ್ಲಿ ದಾಖಲೆಯಾಗಿದೆ: “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ [“ಪವಿತ್ರಾತ್ಮದ,” NW] ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” ಇಲ್ಲಿ ಯೇಸು, “ಎಲ್ಲಾ ಅಧಿಕಾರ,” “ಎಲ್ಲಾ ದೇಶಗಳ,” “ಆಜ್ಞಾಪಿಸಿದ್ದನ್ನೆಲ್ಲಾ” ಮತ್ತು “ಎಲ್ಲಾ ದಿವಸ”​—⁠ಇವುಗಳ ಕುರಿತು ಮಾತಾಡಿದನು. ಈ ನಾಲ್ಕು ಸರ್ವಾವಲಂಬಿತ ವಾಕ್ಸರಣಿಗಳನ್ನು ಒಳಗೊಂಡಿರುವ ಅವನ ಆಜ್ಞೆಗಳು ಕೆಲವು ಪ್ರಾಮುಖ್ಯ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಆ ಪ್ರಶ್ನೆಗಳನ್ನು, ಏಕೆ? ಎಲ್ಲಿ? ಏನು? ಮತ್ತು ಎಂದಿನ ವರೆಗೆ? ಎಂಬ ಪದಗಳಲ್ಲಿ ಸಾರಾಂಶಿಸಬಹುದು. ಈ ಪ್ರಶ್ನೆಗಳನ್ನು ನಾವೀಗ ಒಂದೊಂದಾಗಿ ಪರಿಗಣಿಸೋಣ. *

“ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ”

3 ಪ್ರಥಮವಾಗಿ, ಶಿಷ್ಯರನ್ನಾಗಿ ಮಾಡುವ ಆಜ್ಞೆಗೆ ನಾವು ಏಕೆ ವಿಧೇಯರಾಗಬೇಕು? ಯೇಸು ಹೇಳಿದ್ದು: “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ.” ನಾವು ಈ ಆಜ್ಞೆಗೆ ಏಕೆ ವಿಧೇಯರಾಗಬೇಕೆಂಬುದಕ್ಕೆ, “ಆದ್ದರಿಂದ” ಎಂಬ ಪದವು ಒಂದು ಪ್ರಮುಖ ಕಾರಣವನ್ನು ತೋರಿಸುತ್ತದೆ. ಏಕೆಂದರೆ, ಈ ಆಜ್ಞೆ ಕೊಟ್ಟವನಲ್ಲಿ “ಎಲ್ಲಾ ಅಧಿಕಾರವು” ಇದೆ. ಆದರೆ ಅವನ ಅಧಿಕಾರವು ಎಷ್ಟು ವ್ಯಾಪಕವಾಗಿದೆ?

4 ಯೇಸುವಿಗೆ ತನ್ನ ಸಭೆಯ ಮೇಲೆಯೂ 1914ರಿಂದ ನೂತನವಾಗಿ ಸ್ಥಾಪಿತವಾದ ದೇವರ ರಾಜ್ಯದ ಮೇಲೆಯೂ ಅಧಿಕಾರವಿದೆ. (ಕೊಲೊಸ್ಸೆ 1:13; ಪ್ರಕಟನೆ 11:15) ಅವನು ಪ್ರಧಾನದೂತನಾಗಿದ್ದಾನೆ ಮತ್ತು ಈ ಕಾರಣದಿಂದ ಕೋಟ್ಯಂತರ ಸಂಖ್ಯೆಯ ದೇವದೂತರುಳ್ಳ ಸ್ವರ್ಗೀಯ ಸೇನೆಯು ಅವನ ಅಧಿಕಾರದ ಕೆಳಗಿದೆ. (1 ಥೆಸಲೊನೀಕ 4:16; 1 ಪೇತ್ರ 3:22; ಪ್ರಕಟನೆ 19:14-16) ಅವನ ತಂದೆಯು ಅವನಿಗೆ, ನೀತಿಯ ಮೂಲತತ್ತ್ವಗಳನ್ನು ವಿರೋಧಿಸುವ “ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ”ಬಿಡುವ ಅಧಿಕಾರಕೊಟ್ಟಿದ್ದಾನೆ. (1 ಕೊರಿಂಥ 15:24-26; ಎಫೆಸ 1:20-23) ಯೇಸುವಿನ ಅಧಿಕಾರ ಜೀವಿತರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವನು “ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿ” ಆಗಿದ್ದಾನೆ ಮತ್ತು ಮರಣದಲ್ಲಿ ನಿದ್ರೆಹೋಗಿರುವವರನ್ನು ಪುನರುತ್ಥಾನ ಮಾಡುವ ದೇವದತ್ತ ಶಕ್ತಿಯೂ ಅವನಿಗಿದೆ. (ಅ. ಕೃತ್ಯಗಳು 10:42; ಯೋಹಾನ 5:26-28) ಇಷ್ಟು ಅಪಾರವಾದ ಅಧಿಕಾರ ವಹಿಸಲ್ಪಟ್ಟವನು ಕೊಡುವ ಆಜ್ಞೆಯು ನಿಶ್ಚಯವಾಗಿಯೂ ಅತ್ಯಂತ ಪ್ರಾಮುಖ್ಯವಾದುದ್ದಾಗಿ ವೀಕ್ಷಿಸಲ್ಪಡಬೇಕು. ಹೀಗಿರುವುದರಿಂದ, ‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿ’ ಎಂಬ ಕ್ರಿಸ್ತನ ಆಜ್ಞೆಗೆ ನಾವು ಗೌರವಪೂರ್ವಕವಾಗಿಯೂ ಇಷ್ಟಪೂರ್ವಕವಾಗಿಯೂ ವಿಧೇಯರಾಗುತ್ತೇವೆ.

5 ತನ್ನ ಅಧಿಕಾರವನ್ನು ಒಪ್ಪಿಕೊಂಡು ತನ್ನ ಆಜ್ಞೆಗಳನ್ನು ಪರಿಪಾಲಿಸುವುದು ಆಶೀರ್ವಾದಗಳಿಗೆ ನಡೆಸುತ್ತದೆ ಎಂಬುದನ್ನು ಯೇಸು ಅವನ ಭೂಶುಶ್ರೂಷೆಯ ಆರಂಭದಲ್ಲಿ ಅವನ ಶಿಷ್ಯರಿಗೆ ಮನಸ್ಸಿಗೆ ನಾಟುವಂಥ ರೀತಿಯಲ್ಲಿ ಕಲಿಸಿದನು. ಒಂದು ಸಂದರ್ಭದಲ್ಲಿ ಅವನು ಬೆಸ್ತನಾಗಿದ್ದ ಪೇತ್ರನಿಗೆ, ‘ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನುಬೇಟೆಗಾಗಿ ಬಲೆಗಳನ್ನು ಹಾಕು’ವಂತೆ ಹೇಳಿದನು. ಆದರೆ ಅಲ್ಲಿ ಮೀನು ಇರಲಿಲ್ಲವೆಂದು ಪೇತ್ರನಿಗೆ ಚೆನ್ನಾಗಿ ತಿಳಿದಿತ್ತು. ಆದುದರಿಂದ ಅವನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ” ಎಂದು ಹೇಳಿದನು. ಹಾಗಿದ್ದರೂ, ಪೇತ್ರನು ದೀನಭಾವದಿಂದ ಕೂಡಿಸಿ ಹೇಳಿದ್ದು: “ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ.” ಪೇತ್ರನು ಕ್ರಿಸ್ತನ ಆಜ್ಞೆಗೆ ವಿಧೇಯನಾದಾಗ “ಮೀನುಗಳು ರಾಶಿರಾಶಿಯಾಗಿ” ಸಿಕ್ಕಿದವು. ಇದರಿಂದ ಭಾವಪರವಶನಾದ ಪೇತ್ರನು, “ಯೇಸುವಿನ ಮೊಣಕಾಲಿಗೆ ಬಿದ್ದು​—⁠ಸ್ವಾಮೀ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗಬೇಕು ಅಂದನು.” ಆದರೆ ಯೇಸು ಉತ್ತರಕೊಟ್ಟದ್ದು: “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವವನಾಗಿರುವಿ.” (ಲೂಕ 5:1-10; ಮತ್ತಾಯ 4:18) ಈ ವೃತ್ತಾಂತದಿಂದ ನಾವೇನು ಕಲಿಯುತ್ತೇವೆ?

6 ಯೇಸುವು ಪೇತ್ರ, ಅಂದ್ರೆಯ ಮತ್ತು ಬೇರೆ ಅಪೊಸ್ತಲರಿಗೆ, ‘ಮನುಷ್ಯರನ್ನು ಹಿಡಿಯುವ ಬೆಸ್ತರಾಗುವ’ ನೇಮಕವನ್ನು ಕೊಟ್ಟದ್ದು, ಆ ರೀತಿಯಲ್ಲಿ ಅದ್ಭುತಕರವಾಗಿ ಮೀನುಗಳನ್ನು ಹಿಡಿದ ಬಳಿಕವೇ ಹೊರತು ಮೊದಲಲ್ಲ. (ಮಾರ್ಕ 1:16, 17) ಕುರುಡು ವಿಧೇಯತೆಯನ್ನು ಯೇಸು ಅಪೇಕ್ಷಿಸುತ್ತಿರಲಿಲ್ಲವೆಂಬುದು ಸ್ಪಷ್ಟ. ತನಗೆ ಏಕೆ ವಿಧೇಯರಾಗಬೇಕೆಂಬುದಕ್ಕೆ ಅವನು ಆ ಪುರುಷರಿಗೆ ಮನವೊಪ್ಪಿಸುವ ಕಾರಣವನ್ನು ಕೊಟ್ಟನು. ಬಲೆಯನ್ನು ಹಾಕಿರಿ ಎಂಬ ಯೇಸುವಿನ ಆಜ್ಞೆಗೆ ವಿಧೇಯತೆಯು ಹೇಗೆ ಧಾರಾಳ ಪ್ರತಿಫಲಕ್ಕೆ ನಡೆಸಿತೊ ಹಾಗೆಯೇ ‘ಮನುಷ್ಯರನ್ನು ಹಿಡಿಯುವ’ ಆಜ್ಞೆಗೂ ವಿಧೇಯತೆಯು ಮಹಾ ಆಶೀರ್ವಾದಗಳಿಗೆ ನಡೆಸಲಿತ್ತು. ಅಪೊಸ್ತಲರು ಪೂರ್ಣ ನಂಬಿಕೆಯಿಂದ ಪ್ರತಿಕ್ರಿಯಿಸಿದರು. ಆ ವೃತ್ತಾಂತವು ಹೀಗೆ ಮುಕ್ತಾಯಗೊಳ್ಳುತ್ತದೆ: “ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು.” (ಲೂಕ 5:11) ನಾವು ಇಂದು ಇತರರಿಗೆ, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವಾಗ ಯೇಸುವನ್ನು ಅನುಕರಿಸುತ್ತಿದ್ದೇವೆ. ನಾವು ಹೇಳಿದಂತೆ ಅವರು ಮಾಡಬೇಕೆಂದು ಅಪೇಕ್ಷಿಸದೆ, ಕ್ರಿಸ್ತನ ಆಜ್ಞೆಗೆ ಅವರು ಏಕೆ ವಿಧೇಯರಾಗಬೇಕೆಂಬುದಕ್ಕೆ ಮನವೊಪ್ಪಿಸುವ ಕಾರಣಗಳನ್ನು ನಾವು ಕೊಡುತ್ತೇವೆ.

ಮನವೊಪ್ಪಿಸುವ ಕಾರಣಗಳು ಮತ್ತು ಯೋಗ್ಯ ಪ್ರಚೋದನೆಗಳು

7 ನಾವು ಕ್ರಿಸ್ತನ ಅಧಿಕಾರವನ್ನು ಒಪ್ಪಿಕೊಳ್ಳುವುದರಿಂದ, ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಮಗೆ ಒಂದು ಭಾಗವಿದೆ. ನಾವು ಯಾರನ್ನು ಸತ್ಕಾರ್ಯಗಳಿಗೆ ಪ್ರಚೋದಿಸಬಯಸುತ್ತೇವೊ ಅವರಿಗೆ ಆ ಕೆಲಸವನ್ನು ಮಾಡಲಿಕ್ಕಾಗಿ ಇನ್ನಾವ ಶಾಸ್ತ್ರೀಯ ಕಾರಣಗಳನ್ನು ಕೊಡಬಲ್ಲೆವು? ಇದಕ್ಕಾಗಿ, ವಿವಿಧ ದೇಶಗಳ ಅನೇಕ ಮಂದಿ ನಂಬಿಗಸ್ತ ಸಾಕ್ಷಿಗಳು ಮಾಡಿರುವ ಈ ಕೆಳಗಣ ಹೇಳಿಕೆಗಳನ್ನು ಪರಿಗಣಿಸಿರಿ, ಮತ್ತು ಉಲ್ಲೇಖಿಸಲ್ಪಟ್ಟಿರುವ ಶಾಸ್ತ್ರವಚನಗಳು ಅವರ ಹೇಳಿಕೆಗಳನ್ನು ಹೇಗೆ ಬೆಂಬಲಿಸುತ್ತವೆಂಬುದನ್ನು ಗಮನಿಸಿರಿ.

8 ಇಸವಿ 1951ರಲ್ಲಿ ದೀಕ್ಷಾಸ್ನಾನ ಪಡೆದ ರಾಯ್‌ ಎಂಬವರು ಹೇಳಿದ್ದು: “ನಾನು ಯೆಹೋವನಿಗೆ ನನ್ನನ್ನು ಸಮರ್ಪಿಸಿಕೊಂಡಾಗ ಆತನನ್ನು ಸದಾ ಸೇವಿಸುತ್ತೇನೆಂದು ಮಾತುಕೊಟ್ಟೆ. ಮತ್ತು ನಾನು ಆ ಮಾತನ್ನು ನೆರವೇರಿಸಬೇಕೆಂದಿದ್ದೇನೆ.” (ಕೀರ್ತನೆ 50:14; ಮತ್ತಾಯ 5:37) 1962ರಲ್ಲಿ ದೀಕ್ಷಾಸ್ನಾನ ಪಡೆದ ಹೆದರ್‌: “ಯೆಹೋವನು ನನಗಾಗಿ ಏನೆಲ್ಲ ಮಾಡಿದ್ದಾನೊ ಅದರ ಬಗ್ಗೆ ಯೋಚಿಸುವಾಗ, ನಾನು ಆತನಿಗೆ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸಿ ನನ್ನ ಕೃತಜ್ಞತೆಯನ್ನು ತೋರಿಸಬೇಕೆಂಬ ಅಪೇಕ್ಷೆ ನನ್ನಲ್ಲಿ ಉಂಟಾಗುತ್ತದೆ.” (ಕೀರ್ತನೆ 9:1, 9-11; ಕೊಲೊಸ್ಸೆ 3:15) 1954ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಹಾನಲೋರ ಎಂಬವರು ಹೇಳಿದ್ದು: “ನಾವು ಪ್ರತಿ ಸಲ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗಲೆಲ್ಲಾ ದೇವದೂತರ ಬೆಂಬಲ ನಮಗಿದೆ​—⁠ಇದೆಂತಹ ಒಂದು ಸುಯೋಗ!” (ಅ. ಕೃತ್ಯಗಳು 10:30-33; ಪ್ರಕಟನೆ 14:6, 7) 1969ರಲ್ಲಿ ದೀಕ್ಷಾಸ್ನಾನ ಪಡೆದ ಆನರ್‌ ಎಂಬವರು ಹೇಳಿದ್ದು: “ಯೆಹೋವನ ತೀರ್ಪಿನ ಸಮಯವು ಬರುವಾಗ ನನ್ನ ನೆರೆಹೊರೆಯಲ್ಲಿ ಯಾರೂ, ಯೆಹೋವನು ಮತ್ತು ಆತನ ಸಾಕ್ಷಿಗಳು ತಮ್ಮನ್ನು ಅಲಕ್ಷ್ಯಮಾಡಿದರೆಂಬ ಅಪವಾದವನ್ನು ಅವರ ಮೇಲೆ ಹಾಕಿ: ‘ನನಗೆ ಯಾರೂ ಎಚ್ಚರಿಕೆ ಕೊಡಲಿಲ್ಲ!’ ಎಂದು ಹೇಳಬಾರದೆಂಬುದು ನನ್ನ ಬಯಕೆ.” (ಯೆಹೆಜ್ಕೇಲ 2:5; 3:17-19; ರೋಮಾಪುರ 10:16, 18) 1974ರಲ್ಲಿ ದೀಕ್ಷಾಸ್ನಾನ ಪಡೆದ ಕ್ಲಾಡಿಯೊ ಹೇಳಿದ್ದು: “ಇದರ ಬಗ್ಗೆ ಸ್ವಲ್ಪ ಯೋಚಿಸಿ: ನಾವು ಸಾರುತ್ತಿರುವಾಗ ‘ದೇವರ ಸಮಕ್ಷಮದಲ್ಲಿ’ ಮತ್ತು ‘ಕ್ರಿಸ್ತನ ಅನ್ಯೋನ್ಯತೆಯಲ್ಲಿ’ ಇದ್ದೇವೆ! ಸೇವೆಯಲ್ಲಿರುವಾಗ ನಾವು ನಮ್ಮ ಅತ್ಯುತ್ತಮ ಸ್ನೇಹಿತರ ಜೊತೆಯಲ್ಲಿದ್ದೇವೆ.”​—⁠2 ಕೊರಿಂಥ 2:17. *

9 ಆ ವಿಶೇಷ ರೀತಿಯ, ಮೀನು ಹಿಡಿಯುವಿಕೆಯ ಕುರಿತಾದ ವೃತ್ತಾಂತವು ಕ್ರಿಸ್ತನಿಗೆ ವಿಧೇಯರಾಗಲಿಕ್ಕಾಗಿ ಪ್ರೀತಿ ಎಂಬ ಯೋಗ್ಯವಾದ ಪ್ರಚೋದನೆಯನ್ನು ಹೊಂದುವುದರ ಪ್ರಮುಖತೆಯನ್ನೂ ತೋರಿಸುತ್ತದೆ. ಪೇತ್ರನು, “ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗಬೇಕು” ಎಂದು ಹೇಳಿದಾಗ, ಯೇಸು ಅವನನ್ನು ಬಿಟ್ಟು ಹೋಗಲೂ ಇಲ್ಲ, ಇಲ್ಲವೆ ಯಾವುದೊ ಪಾಪಕ್ಕಾಗಿ ಅವನನ್ನು ಖಂಡಿಸಲೂ ಇಲ್ಲ. (ಲೂಕ 5:⁠8) ಅಷ್ಟುಮಾತ್ರವಲ್ಲ, ತಾನು ಅವನನ್ನು ಬಿಟ್ಟು ಹೋಗಬೇಕೆಂದು ಹೇಳುತ್ತಾನಲ್ಲಾ ಎಂದು ಯೇಸು ಪೇತ್ರನನ್ನು ಟೀಕಿಸಲೂ ಇಲ್ಲ. ಬದಲಿಗೆ, ಯೇಸು ದಯೆಯಿಂದ “ಅಂಜಬೇಡ” ಎಂದು ಉತ್ತರಕೊಟ್ಟನು. ಅಹಿತಕರ ಭಯದಿಂದ ಕ್ರಿಸ್ತನಿಗೆ ವಿಧೇಯನಾಗುವುದು ತಪ್ಪಾದ ಪ್ರಚೋದನೆಯಾಗಿತ್ತು. ಬದಲಿಗೆ, ಯೇಸು ಪೇತ್ರನಿಗೆ, ಅವನೂ ಅವನ ಒಡನಾಡಿಗಳೂ ಮನುಷ್ಯರನ್ನು ಹಿಡಿಯುವ ಬೆಸ್ತರಾಗಿ ಉಪಯುಕ್ತರಾಗುವರೆಂದು ತಿಳಿಸಿದನು. ಅದೇ ರೀತಿ ನಾವಿಂದು ಇತರರಲ್ಲಿ ಭಯ, ಇಲ್ಲವೆ ಅಪರಾಧಿಭಾವ ಮತ್ತು ಅಪಮಾನಗಳಂತಹ ನಕಾರಾತ್ಮಕ ಭಾವಾವೇಶಗಳನ್ನು ಹುಟ್ಟಿಸಿ, ಅವರು ಕ್ರಿಸ್ತನಿಗೆ ವಿಧೇಯರಾಗಬೇಕೆಂದು ಹೇಳುವುದಿಲ್ಲ. ದೇವರು ಮತ್ತು ಕ್ರಿಸ್ತನಿಗಾಗಿರುವ ಪ್ರೀತಿಯ ಮೇಲೆ ಆಧಾರಿತವಾದ ಪೂರ್ಣಪ್ರಾಣದ ವಿಧೇಯತೆಯಿಂದಲೇ ಯೆಹೋವನ ಹೃದಯವು ಉಲ್ಲಾಸಪಡುತ್ತದೆ.​—⁠ಮತ್ತಾಯ 22:37.

“ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ”

10 ಕ್ರಿಸ್ತನ ಆಜ್ಞೆಯ ವಿಷಯದಲ್ಲಿ ಕೇಳಲ್ಪಟ್ಟ ಎರಡನೆಯ ಪ್ರಶ್ನೆಯು, ಈ ಶಿಷ್ಯರನ್ನಾಗಿ ಮಾಡುವ ಕೆಲಸವು ಎಲ್ಲಿ ನಡೆಸಲ್ಪಡಬೇಕು ಎಂಬುದೇ. “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಯೇಸು ತನ್ನ ಹಿಂಬಾಲಕರಿಗೆ ಹೇಳಿದನು. ಯೇಸುವಿನ ಶುಶ್ರೂಷೆಯ ಸಮಯಕ್ಕಿಂತಲೂ ಮುಂಚೆ, ಯೆಹೋವನನ್ನು ಸೇವಿಸಲು ರಾಷ್ಟ್ರಗಳ ಜನರು ಇಸ್ರಾಯೇಲಿಗೆ ಬರುತ್ತಿದ್ದಲ್ಲಿ ಅವರನ್ನು ಸ್ವಾಗತಿಸಲಾಗುತ್ತಿತ್ತು. (1 ಅರಸುಗಳು 8:​41-43) ಯೇಸು ತಾನೇ ಪ್ರಧಾನವಾಗಿ ಸಾರಿದ್ದು ಹುಟ್ಟು ಯೆಹೂದ್ಯರಿಗಾದರೂ, ಈಗ ಅವನು ತನ್ನ ಹಿಂಬಾಲಕರು ಎಲ್ಲ ದೇಶಗಳ ಜನರ ಬಳಿಗೆ ಹೋಗಬೇಕೆಂದು ಹೇಳಿದನು. ವಾಸ್ತವದಲ್ಲಿ, ಅವನ ಶಿಷ್ಯರಿಗಿದ್ದ ಮೀನು ಹಿಡಿಯುವ ಪ್ರದೇಶ ಇಲ್ಲವೆ ಸಾರಲಿಕ್ಕಿದ್ದ ಟೆರಿಟೊರಿಯು ಒಂದು ಸಣ್ಣ “ಕೊಳ”ವಾಗಿತ್ತು ಅಂದರೆ, ಹುಟ್ಟು ಯೆಹೂದ್ಯರು ಮಾತ್ರ ಆಗಿದ್ದರು. ಆದರೆ, ಬೇಗನೆ ಅದು ಮಾನವಕುಲದ ಪೂರ್ಣ “ಸಮುದ್ರ”ವನ್ನು ಒಳಗೊಳ್ಳಲಿಕ್ಕಿತ್ತು. ಈ ಬದಲಾವಣೆಯು ಶಿಷ್ಯರಿಗೆ ಒಂದು ಕಷ್ಟಕರವಾದ ಪಂಥಾಹ್ವಾನವನ್ನು ತಂದೊಡ್ಡಿದರೂ, ಅವರು ಸಿದ್ಧಮನಸ್ಸಿನಿಂದ ಯೇಸುವಿನ ಆಜ್ಞೆಗೆ ವಿಧೇಯರಾದರು. ಯೇಸುವು ಮರಣಹೊಂದಿದ ನಂತರ ಮೂವತ್ತಕ್ಕೂ ಕಡಿಮೆ ವರುಷಗಳೊಳಗೆ, ಸುವಾರ್ತೆಯು ಯೆಹೂದ್ಯರಿಗೆ ಮಾತ್ರವಲ್ಲ “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಲ್ಪಟ್ಟಿತ್ತೆಂದು ಅಪೊಸ್ತಲ ಪೌಲನಿಗೆ ಬರೆಯಲು ಸಾಧ್ಯವಾಯಿತು.​—⁠ಕೊಲೊಸ್ಸೆ 1:23.

11 ಇತ್ತೀಚಿನ ಸಮಯಗಳಲ್ಲಿ ಸಾರುವ ಪ್ರದೇಶದ ಸಂಬಂಧದಲ್ಲಿ ತದ್ರೀತಿಯ ವಿಸ್ತರಣೆಯು ಕಂಡುಬಂದಿದೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ‘ಮೀನು ಹಿಡಿಯುವ ಪ್ರದೇಶ’ ಕೇವಲ ಕೆಲವೇ ದೇಶಗಳಿಗೆ ಸೀಮಿತವಾಗಿತ್ತು. ಆದರೂ, ಆಗ ಜೀವಿಸುತ್ತಿದ್ದ ಕ್ರಿಸ್ತನ ಹಿಂಬಾಲಕರು ಒಂದನೆಯ ಶತಮಾನದ ಕ್ರೈಸ್ತರ ಮಾದರಿಯನ್ನು ಅನುಸರಿಸಿ, ತಾವು ಸಾರುತ್ತಿದ್ದ ಟೆರಿಟೊರಿಯನ್ನು ಅತ್ಯುತ್ಸಾಹದಿಂದ ವಿಸ್ತರಿಸಿದರು. (ರೋಮಾಪುರ 15:20) ಹೀಗೆ, 1930ರ ದಶಕದ ಆದಿಭಾಗದೊಳಗೆ, ಅವರು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಸುಮಾರು ನೂರು ದೇಶಗಳಲ್ಲಿ ಮಾಡುತ್ತಿದ್ದರು. ಇಂದು, ನಮ್ಮ ‘ಮೀನು ಹಿಡಿಯುವ ಪ್ರದೇಶಗಳು’ 235 ದೇಶಗಳಿಗೆ ವಿಸ್ತರಿಸಿವೆ.​—⁠ಮಾರ್ಕ 13:10.

“ಸರ್ವ ಭಾಷೆಗಳಿಂದ”

12 ಎಲ್ಲ ದೇಶಗಳಲ್ಲಿ ಶಿಷ್ಯರನ್ನಾಗಿ ಮಾಡುವ ಕೆಲಸವು, ಟೆರಿಟೊರಿಯ ಗಾತ್ರದಿಂದಷ್ಟೇಯಲ್ಲದೆ ಭಾಷೆಗಳ ಸಂಬಂಧದಲ್ಲಿಯೂ ಒಂದು ಪಂಥಾಹ್ವಾನವನ್ನು ತಂದೊಡ್ಡಿದೆ. ಪ್ರವಾದಿ ಜೆಕರ್ಯನ ಮೂಲಕ ಯೆಹೋವನು ಮುಂತಿಳಿಸಿದ್ದು: “ಆ ಕಾಲದಲ್ಲಿ ಜನಾಂಗಗಳ ವಿವಿಧಭಾಷೆಗಳವರಾದ [“ಸರ್ವ ಭಾಷೆಗಳಿಂದ ಬರುವ,” NW] ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು​—⁠ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕರ್ಯ 8:​23, ಓರೆ ಅಕ್ಷರಗಳು ನಮ್ಮವು.) ಈ ಪ್ರವಾದನೆಯ ಹೆಚ್ಚು ವಿಸ್ತಾರವಾದ ನೆರವೇರಿಕೆಯಲ್ಲಿ, ಆ ‘ಯೆಹೂದ್ಯನು’ ಅಭಿಷಿಕ್ತ ಕ್ರೈಸ್ತರ ಉಳಿಕೆಯವರನ್ನು ಮತ್ತು ಆ “ಹತ್ತು ಜನರು” “ಮಹಾ ಸಮೂಹ”ವನ್ನು ಪ್ರತಿನಿಧಿಸುತ್ತಾರೆ. * (ಪ್ರಕಟನೆ 7:9, 10; ಗಲಾತ್ಯ 6:16) ಕ್ರಿಸ್ತನ ಶಿಷ್ಯರ ಈ ಮಹಾ ಸಮೂಹವು ಅನೇಕ ದೇಶಗಳಲ್ಲಿ ಕಂಡುಬರಲಿಕ್ಕಿತ್ತಲ್ಲದೆ, ಜೆಕರ್ಯನು ಬರೆದಂತೆ ಅನೇಕಾನೇಕ ಭಾಷೆಗಳನ್ನೂ ಆಡಲಿಕ್ಕಿತ್ತು. ದೇವಜನರ ಆಧುನಿಕ ಇತಿಹಾಸವು ಶಿಷ್ಯತ್ವದ ಈ ಅಂಶವನ್ನು ತೋರಿಸುತ್ತದೆಯೆ? ನಿಶ್ಚಯವಾಗಿಯೂ ಹೌದು.

13 ಇಸವಿ 1950ರಲ್ಲಿ ಲೋಕವ್ಯಾಪಕವಾಗಿದ್ದ ಯೆಹೋವನ ಸಾಕ್ಷಿಗಳಲ್ಲಿ ಪ್ರತಿ 5ರಲ್ಲಿ 3 ಮಂದಿಯ ಮಾತೃಭಾಷೆಯು ಇಂಗ್ಲಿಷ್‌ ಆಗಿತ್ತು. ಆದರೆ, 1980ರೊಳಗೆ ಆ ಪ್ರಮಾಣವು ಪ್ರತಿ 5ರಲ್ಲಿ 2 ಮಂದಿಗೆ ಇಳಿಯಿತು. ಇಂದು ಪ್ರತಿ 5 ಮಂದಿಯಲ್ಲಿ ಕೇವಲ ಒಬ್ಬ ಸಾಕ್ಷಿಯ ಮಾತೃಭಾಷೆ ಇಂಗ್ಲಿಷ್‌ ಆಗಿರುತ್ತದೆ. ಹೀಗಿರುವಾಗ, ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗ ಈ ಭಾಷೀಯ ಪಲ್ಲಟಕ್ಕೆ ಹೇಗೆ ಪ್ರತಿವರ್ತನೆ ತೋರಿಸಿದೆ? ಇನ್ನೂ ಹೆಚ್ಚೆಚ್ಚು ಭಾಷೆಗಳಲ್ಲಿ ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಮೂಲಕವೇ. (ಮತ್ತಾಯ 24:45) ಉದಾಹರಣೆಗೆ, 1950ರಲ್ಲಿ ನಮ್ಮ ಸಾಹಿತ್ಯವು 90 ಭಾಷೆಗಳಲ್ಲಿ ಮುದ್ರಿಸಲ್ಪಡುತ್ತಿತ್ತು. ಆದರೆ, ಈಗ ಆ ಸಂಖ್ಯೆ ಸುಮಾರು 400ಕ್ಕೆ ಏರಿದೆ. ವಿವಿಧ ಭಾಷೆಯ ಗುಂಪುಗಳಿಗೆ ಕೊಡಲ್ಪಟ್ಟಿರುವ ಈ ಹೆಚ್ಚಿನ ಗಮನವು ಫಲಿತಾಂಶಗಳನ್ನು ತಂದಿದೆಯೆ? ಹೌದು! ಹೇಗಂದರೆ, ವರುಷದ ಪ್ರತಿ ವಾರದಲ್ಲಿ ‘ಸಕಲ ಭಾಷೆಗಳ’ ಸರಾಸರಿ 5,000 ಜನರು ಕ್ರಿಸ್ತನ ಶಿಷ್ಯರಾಗುತ್ತಾರೆ. (ಪ್ರಕಟನೆ 7:⁠9) ಮತ್ತು ಈ ವೃದ್ಧಿ ಮುಂದುವರಿಯುತ್ತಾ ಇದೆ. ಕೆಲವು ದೇಶಗಳಲ್ಲಂತೂ “ಬಲೆಗಳು” ರಾಶಿರಾಶಿ ಮೀನುಗಳನ್ನು ತರುತ್ತಿವೆ!​—⁠ಲೂಕ 5:6; ಯೋಹಾನ 21:⁠6.

ತೃಪ್ತಿದಾಯಕವಾದ ಶುಶ್ರೂಷೆ​—⁠ನೀವು ಭಾಗವಹಿಸಬಲ್ಲಿರೊ?

14 ಅನೇಕ ಪಾಶ್ಚಾತ್ಯ ದೇಶಗಳಲ್ಲಿ ವಲಸೆಗಾರರ ಆಗಮನದಿಂದಾಗಿ ‘ಪ್ರತಿಯೊಂದು ಭಾಷೆಯ’ ಜನರನ್ನು ಶಿಷ್ಯರನ್ನಾಗಿ ಮಾಡುವುದು ಹೆಚ್ಚು ಆವಶ್ಯಕವಾಗಿ ಪರಿಣಮಿಸಿದೆ. (ಪ್ರಕಟನೆ 14:⁠6) ಹಾಗಾದರೆ ನಮ್ಮ ಟೆರಿಟೊರಿಯಲ್ಲಿ ಪರಭಾಷೆಯನ್ನಾಡುವವರಿಗೆ ನಾವು ಹೇಗೆ ಸಹಾಯಮಾಡಸಾಧ್ಯವಿದೆ? (1 ತಿಮೊಥೆಯ 2:⁠4) ಸಾಂಕೇತಿಕವಾಗಿ ಹೇಳುವುದಾದರೆ, ನಾವು ಮೀನು ಹಿಡಿಯಲು ಸೂಕ್ತವಾದ ಸಾಧನಸಾಮಗ್ರಿಯನ್ನು ಉಪಯೋಗಿಸಸಾಧ್ಯವಿದೆ. ಅವರು ಆಡುವ ಭಾಷೆಯಲ್ಲಿ ಅವರಿಗೆ ಸಾಹಿತ್ಯವನ್ನು ಕೊಡಸಾಧ್ಯವಿದೆ. ಸಾಧ್ಯವಿರುವಲ್ಲಿ, ಅವರ ಭಾಷೆಯನ್ನಾಡುವ ಸಾಕ್ಷಿಯೊಬ್ಬರು ಅವರನ್ನು ಭೇಟಿಮಾಡುವಂತೆ ಏರ್ಪಡಿಸಬಲ್ಲೆವು. (ಅ. ಕೃತ್ಯಗಳು 22:⁠2) ಈ ಏರ್ಪಾಡುಗಳನ್ನು ಮಾಡುವುದು ಈಗ ಹೆಚ್ಚು ಸುಲಭವಾಗಿ ಪರಿಣಮಿಸಿದೆ, ಏಕೆಂದರೆ ಇಂಥ ವಿದೇಶೀಯರು ಕ್ರಿಸ್ತನ ಶಿಷ್ಯರಾಗುವಂತೆ ಸಹಾಯಮಾಡಲು ಅನೇಕ ಮಂದಿ ಸಾಕ್ಷಿಗಳು ಪರಭಾಷೆಯನ್ನಾಡಲು ಕಲಿತಿದ್ದಾರೆ. ಈ ರೀತಿಯಲ್ಲಿ ಸಹಾಯಮಾಡುವುದು ಸಂತೃಪ್ತಿದಾಯಕವಾದ ಅನುಭವವಾಗಿರುತ್ತದೆಂದು ವರದಿಗಳು ತೋರಿಸುತ್ತವೆ.

15 ರಾಜ್ಯ ಸಾರುವ ಸಂಘಟಿತ ಕಾರ್ಯವು 35 ಭಾಷೆಗಳಲ್ಲಿ ನಡೆಯುತ್ತಿರುವ ನೆದರ್ಲೆಂಡ್ಸ್‌ ದೇಶದ ಎರಡು ಉದಾಹರಣೆಗಳನ್ನು ಪರಿಗಣಿಸಿ. ಸಾಕ್ಷಿಗಳಾಗಿರುವ ಒಂದು ವಿವಾಹಿತ ದಂಪತಿಯು ಪೋಲಿಷ್‌ ಭಾಷೆಯನ್ನಾಡುವ ವಲಸೆಗಾರರ ಮಧ್ಯೆ ಸೇವೆಮಾಡಲು ಮುಂದೆಬಂದರು. ಅವರ ಪ್ರಯತ್ನಗಳಿಗೆ ಪ್ರತಿಕ್ರಿಯೆಯು ಎಷ್ಟು ಅಧಿಕವಾಗಿತ್ತೆಂದರೆ, ಆಸಕ್ತಿ ತೋರಿಸುವವರೊಂದಿಗೆ ಬೈಬಲ್‌ ಅಧ್ಯಯನ ನಡೆಸಲು ವಾರದಲ್ಲಿ ಇನ್ನೊಂದು ದಿನವನ್ನು ಪಡೆಯಲಿಕ್ಕಾಗಿ ಗಂಡನು ತನ್ನ ಐಹಿಕ ಉದ್ಯೋಗದ ದಿನಗಳನ್ನು ಕಡಿಮೆ ಮಾಡಬೇಕೆಂದು ಅನಿಸಿತು. ಸ್ವಲ್ಪ ಸಮಯದೊಳಗೆ ಈ ದಂಪತಿಯು ಪ್ರತಿ ವಾರ 20ಕ್ಕೂ ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡೆಸತೊಡಗಿದರು. ಅವರು ಹೇಳಿದ್ದು: “ನಮ್ಮ ಶುಶ್ರೂಷೆ ನಮಗೆ ಅತಿಯಾದ ಸಂತೋಷವನ್ನು ಕೊಡುತ್ತದೆ.” ಬೈಬಲ್‌ ಸತ್ಯಗಳನ್ನು ತಮ್ಮ ಸ್ವಂತ ಭಾಷೆಗಳಲ್ಲಿ ಕೇಳಿಸಿಕೊಳ್ಳುವವರು ಅವುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರಚೋದಿಸಲ್ಪಡುವಾಗ ಶಿಷ್ಯರನ್ನಾಗಿ ಮಾಡುವವರು ವಿಶೇಷವಾಗಿ ಸಂತೋಷಪಡುತ್ತಾರೆ. ಉದಾಹರಣೆಗೆ, ವಿಯೆಟ್ನಮೀಸ್‌ ಭಾಷೆಯಲ್ಲಿ ಕೂಟ ನಡೆಯುತ್ತಿದ್ದಾಗ ಒಬ್ಬ ವೃದ್ಧನು ಎದ್ದು ನಿಂತು, ಮಾತಾಡಲು ಅನುಮತಿ ಕೇಳಿದನು. ಕಣ್ಣಿನಲ್ಲಿ ಕಂಬನಿ ತುಂಬಿದವನಾಗಿ, ಅವನು ಸಾಕ್ಷಿಗಳಿಗೆ ಹೇಳಿದ್ದು: “ನನ್ನ ಕಷ್ಟಕರವಾದ ಭಾಷೆಯನ್ನು ಕಲಿಯಲು ನೀವು ಮಾಡುವ ಪ್ರಯತ್ನಕ್ಕಾಗಿ ಉಪಕಾರ ಹೇಳುತ್ತೇನೆ. ನನ್ನ ವೃದ್ಧಾಪ್ಯದಲ್ಲಿ ಬೈಬಲಿನಿಂದ ಇಷ್ಟೊಂದು ಆಶ್ಚರ್ಯಕರ ಸಂಗತಿಗಳನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತಿರುವುದಕ್ಕಾಗಿ ನಾನು ತುಂಬ ಕೃತಜ್ಞನು.”

16 ಆದುದರಿಂದ, ಪರಭಾಷಾ ಸಭೆಗಳಲ್ಲಿ ಸೇವೆಮಾಡುವವರು ತಮಗೆ ಅದರಲ್ಲಿ ಮಹಾ ಪ್ರತಿಫಲಗಳು ಸಿಗುತ್ತವೆ ಎಂದು ಎಣಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಬ್ರಿಟನ್‌ನ ಒಂದು ವಿವಾಹಿತ ದಂಪತಿಯು ಹೇಳಿದ್ದು: “ಪರಭಾಷಾ ಕ್ಷೇತ್ರದಲ್ಲಿನ ಶುಶ್ರೂಷೆಯು ನಮ್ಮ 40 ವರುಷಗಳ ರಾಜ್ಯ ಸೇವೆಯಲ್ಲಿ ನಾವು ಅನುಭವಿಸಿರುವ ಅತ್ಯಂತ ರೋಮಾಂಚಕಾರಿ ಅನುಭವಗಳಲ್ಲಿ ಒಂದಾಗಿತ್ತು.” ಈ ಹುರಿದುಂಬಿಸುವಂಥ ಶುಶ್ರೂಷೆಯಲ್ಲಿ ಭಾಗವಹಿಸುವಂತೆ ನೀವು ನಿಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಳ್ಳಬಲ್ಲಿರೊ? ನೀವು ಇನ್ನೂ ಶಾಲೆಗೆ ಹೋಗುವವರಾಗಿರುವಲ್ಲಿ, ಈ ರೀತಿಯ ಶುಶ್ರೂಷೆಯಲ್ಲಿ ಭಾಗವಹಿಸುವಂತೆ ಸಿದ್ಧರಾಗಲು ನೀವು ಒಂದು ಪರಭಾಷೆಯನ್ನು ಕಲಿಯಬಲ್ಲಿರೊ? ಹಾಗೆ ಮಾಡುವಲ್ಲಿ ಅದು ನಿಮ್ಮನ್ನು ಆಶೀರ್ವಾದಭರಿತವಾದ ತೃಪ್ತಿಕರ ಜೀವನಕ್ಕೆ ನಡೆಸಬಲ್ಲದು. (ಜ್ಞಾನೋಕ್ತಿ 10:22) ಇದನ್ನು ನಿಮ್ಮ ಹೆತ್ತವರೊಂದಿಗೆ ಏಕೆ ಚರ್ಚಿಸಬಾರದು?

ನಮ್ಮ ವಿಧಾನಗಳನ್ನು ಬದಲಾಯಿಸುವುದು

17 ನಮ್ಮಲ್ಲಿ ಹೆಚ್ಚಿನವರಿಗೆ ಪರಭಾಷಾ ಕ್ಷೇತ್ರಗಳಲ್ಲಿ “ಬಲೆಗಳನ್ನು” ಹಾಕುವಂತೆ ಪರಿಸ್ಥಿತಿಗಳು ಅನುಮತಿಸುವುದಿಲ್ಲವೆಂಬುದು ಗ್ರಾಹ್ಯ. ಆದರೂ, ನಾವೀಗ ನಮ್ಮ ಸ್ವಂತ ಸಭಾ ಕ್ಷೇತ್ರದಲ್ಲಿ ಸಂಪರ್ಕಿಸುವುದಕ್ಕಿಂತ ಹೆಚ್ಚು ಜನರನ್ನು ಸಂಪರ್ಕಿಸಲು ಶಕ್ತರಾಗಬಹುದು. ಇದು ಹೇಗೆ? ನಮ್ಮ ಸಂದೇಶವನ್ನು ಬದಲಾಯಿಸಿಯಲ್ಲ, ಬದಲಾಗಿ ನಮ್ಮ ವಿಧಾನಗಳನ್ನು ಬದಲಾಯಿಸುವುದರ ಮೂಲಕವೇ. ಅನೇಕ ಪ್ರದೇಶಗಳಲ್ಲಿ ಜನರು ಹೆಚ್ಚುತ್ತಿರುವ ಸಂಖ್ಯೆಯಲ್ಲಿ ವಿಶೇಷ ಭದ್ರತೆಯ ಏರ್ಪಾಡುಗಳಿರುವ ಕಟ್ಟಡಗಳಲ್ಲಿ ಜೀವಿಸುತ್ತಾರೆ. ಇನ್ನು ಅನೇಕರು ನಾವು ಮನೆಮನೆಯ ಸೇವೆಗೆ ಹೋಗುವಾಗ ಮನೆಯಲ್ಲಿರುವುದಿಲ್ಲ. ಹೀಗಿರುವುದರಿಂದ ನಾವು ನಮ್ಮ “ಬಲೆಗಳನ್ನು” ಬೇರೆ ಬೇರೆ ಸಮಯಗಳಲ್ಲಿ ಮತ್ತು ಬೇರೆ ಬೇರೆ ಸ್ಥಳಗಳಲ್ಲಿಯೂ ಬೀಸಬೇಕಾಗಬಹುದು. ನಾವು ಹೀಗೆ ಯೇಸುವನ್ನು ಅನುಕರಿಸುತ್ತೇವೆ. ಅವನು ವಿವಿಧ ಸನ್ನಿವೇಶಗಳಲ್ಲಿ ಜನರೊಂದಿಗೆ ಮಾತಾಡಲು ಮಾರ್ಗಗಳನ್ನು ಕಂಡುಹಿಡಿದನು.​—⁠ಮತ್ತಾಯ 9:9; ಲೂಕ 19:1-10; ಯೋಹಾನ 4:6-15.

18 ಲೋಕದ ಕೆಲವು ಭಾಗಗಳಲ್ಲಿ, ಜನರು ಎಲ್ಲಿ ದೊರೆಯುತ್ತಾರೊ ಅಲ್ಲೆಲ್ಲಾ ಸಾಕ್ಷಿ ನೀಡುವುದು ಶಿಷ್ಯರನ್ನಾಗಿ ಮಾಡುವ ಪ್ರಮುಖ ವಿಧಾನವಾಗಿದೆ. ಶಿಷ್ಯರನ್ನು ಮಾಡುವುದರಲ್ಲಿ ಅನುಭವಿಗಳಾಗಿರುವವರು ವಿವಿಧ ಸ್ಥಳಗಳಲ್ಲಿ ಸಾಕ್ಷಿ ನೀಡುವುದರ ಕಡೆಗೆ ಹೆಚ್ಚು ಗಮನವನ್ನು ಕೊಡುತ್ತಿದ್ದಾರೆ. ಮನೆಮನೆಯ ಸೇವೆಯಲ್ಲಿ ಭಾಗವಹಿಸುವುದಲ್ಲದೆ, ಈಗ ಪ್ರಚಾರಕರು ವಿಮಾನ ನಿಲ್ದಾಣಗಳಲ್ಲಿ, ಆಫೀಸುಗಳಲ್ಲಿ, ಅಂಗಡಿಗಳಲ್ಲಿ, ಕಾರುನಿಲ್ದಾಣಗಳಲ್ಲಿ, ಬಸ್‌ನಿಲ್ದಾಣಗಳಲ್ಲಿ, ಬೀದಿಗಳಲ್ಲಿ, ಉದ್ಯಾನಗಳಲ್ಲಿ, ಸಮುದ್ರತೀರಗಳಲ್ಲಿ ಮತ್ತಿತರ ಸ್ಥಳಗಳಲ್ಲಿ ಸಾಕ್ಷಿ ನೀಡುತ್ತಾರೆ. ಹವಾಯೀ ದೇಶದಲ್ಲಿ ಹೊಸದಾಗಿ ದೀಕ್ಷಾಸ್ನಾನ ಹೊಂದಿರುವ ಸಾಕ್ಷಿಗಳಲ್ಲಿ ಅನೇಕರು ಪ್ರಥಮವಾಗಿ ಸಂಪರ್ಕಿಸಲ್ಪಟ್ಟದ್ದು ಇಂಥ ಸ್ಥಳಗಳಲ್ಲಿಯೇ. ಹೀಗೆ ನಮ್ಮ ವಿಧಾನಗಳಲ್ಲಿ ವೈವಿಧ್ಯವು ಶಿಷ್ಯರನ್ನಾಗಿ ಮಾಡಬೇಕೆಂಬ ಯೇಸುವಿನ ಆಜ್ಞೆಯನ್ನು ನಾವು ಪೂರ್ಣವಾಗಿ ನೆರವೇರಿಸುವಂತೆ ಸಹಾಯಮಾಡುತ್ತದೆ.​—⁠1 ಕೊರಿಂಥ 9:​22, 23.

19 ಶಿಷ್ಯರನ್ನಾಗಿ ಮಾಡುವಂತೆ ಯೇಸು ಕೊಟ್ಟ ನೇಮಕದಲ್ಲಿ, ಅದನ್ನು ನಾವು ಏಕೆ ಮತ್ತು ಎಲ್ಲಿ ಮಾಡಬೇಕೆಂಬುದು ಮಾತ್ರವಲ್ಲ, ನಾವು ಏನು ಸಾರಬೇಕು ಮತ್ತು ಎಂದಿನ ವರೆಗೆ ಅದನ್ನು ಮುಂದುವರಿಸಬೇಕು ಎಂಬ ವಿವರಗಳೂ ಸೇರಿದ್ದವು. ಯೇಸುವಿನ ಆಜ್ಞೆಯ ಈ ಎರಡು ಅಂಶಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿ ನಾವು ಮೊದಲ ಎರಡು ಪ್ರಶ್ನೆಗಳನ್ನು ಚರ್ಚಿಸುವೆವು. ಕೊನೆಯ ಎರಡು ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

^ ಸಾರಲಿಕ್ಕಾಗಿರುವ ಹೆಚ್ಚಿನ ಕಾರಣಗಳನ್ನು ಜ್ಞಾನೋಕ್ತಿ 10:5; ಆಮೋಸ 3:8; ಮತ್ತಾಯ 24:42; ಮಾರ್ಕ 12:17; ರೋಮಾಪುರ 1:14, 15ನೇ ವಚನಗಳಲ್ಲಿ ಕಂಡುಕೊಳ್ಳುವಿರಿ.

^ ಈ ಪ್ರವಾದನೆಯ ನೆರವೇರಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾವಲಿನಬುರುಜು, ಮೇ 15, 2001, ಪುಟ 12, ಮತ್ತು ಯೆಹೋವನ ಸಾಕ್ಷಿಗಳ ಪ್ರಕಾಶನವಾದ ಯೆಶಾಯನ ಪ್ರವಾದನೆ​—⁠ಸಕಲ ಮಾನವಕುಲಕ್ಕೆ ಬೆಳಕು, ಸಂಪುಟ 2, ಪುಟ 408ನ್ನು ನೋಡಿ.

ಜ್ಞಾಪಕವಿದೆಯೆ?

• ಯಾವ ಕಾರಣಗಳಿಗಾಗಿ ಹಾಗೂ ಯಾವ ಪ್ರಚೋದನೆಯಿಂದ ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಭಾಗವಹಿಸುತ್ತೇವೆ?

• ಎಲ್ಲ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವ ಯೇಸುವಿನ ಆಜ್ಞೆಯನ್ನು ಯೆಹೋವನ ಸೇವಕರು ಇಂದು ಎಷ್ಟರ ಮಟ್ಟಿಗೆ ನೆರವೇರಿಸಿದ್ದಾರೆ?

• ನಾವು ‘ಮೀನು ಹಿಡಿಯುವ ವಿಧಾನ’ವನ್ನು ಹೇಗೆ ಬದಲಾಯಿಸಬಹುದು, ಮತ್ತು ನಾವು ಏಕೆ ಹಾಗೆ ಮಾಡಬೇಕು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಯೇಸು ತನ್ನ ಹಿಂಬಾಲಕರಿಗೆ ಯಾವ ನೇಮಕವನ್ನು ಕೊಟ್ಟನು? (ಬಿ) ಯೇಸುವಿನ ಆಜ್ಞೆಗಳ ಬಗ್ಗೆ ಯಾವ ಪ್ರಶ್ನೆಗಳನ್ನು ಪರಿಗಣಿಸಲಾಗುವುದು?

3. ನಾವು ಶಿಷ್ಯರನ್ನಾಗಿ ಮಾಡುವ ಆಜ್ಞೆಗೆ ಏಕೆ ವಿಧೇಯರಾಗಬೇಕು?

4. (ಎ) ಯೇಸುವಿನ ಅಧಿಕಾರವು ಎಷ್ಟು ವ್ಯಾಪಕವಾಗಿದೆ? (ಬಿ) ಯೇಸುವಿನ ಅಧಿಕಾರದ ಬಗ್ಗೆ ನಮಗಿರುವ ತಿಳಿವಳಿಕೆಯು, ಶಿಷ್ಯರನ್ನಾಗಿ ಮಾಡುವ ಆಜ್ಞೆಯ ಕುರಿತು ನಮ್ಮ ದೃಷ್ಟಿಕೋನವನ್ನು ಹೇಗೆ ಪ್ರಭಾವಿಸಬೇಕು?

5. (ಎ) ಪೇತ್ರನು ಯೇಸುವಿನ ಮಾತುಗಳಿಗೆ ಹೇಗೆ ವಿಧೇಯನಾದನು? (ಬಿ) ಯೇಸುವಿನ ಆಜ್ಞೆಗೆ ಪೇತ್ರನು ತೋರಿಸಿದ ವಿಧೇಯತೆಯು ಯಾವ ಆಶೀರ್ವಾದಕ್ಕೆ ನಡೆಸಿತು?

6. (ಎ) ಮೀನುಗಳ ಅದ್ಭುತಕರವಾದ ಹಿಡಿಯುವಿಕೆಯ ಕುರಿತಾದ ವೃತ್ತಾಂತವು ಯೇಸು ಯಾವ ರೀತಿಯ ವಿಧೇಯತೆಯನ್ನು ಅಪೇಕ್ಷಿಸುತ್ತಾನೆಂದು ತೋರಿಸುತ್ತದೆ? (ಬಿ) ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?

7, 8. (ಎ) ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕಾಗಿರುವಂಥ ಕೆಲವು ಶಾಸ್ತ್ರೀಯ ಕಾರಣಗಳಾವುವು? (ಬಿ) ವಿಶೇಷವಾಗಿ ಯಾವ ಶಾಸ್ತ್ರವಚನವು, ಸಾರುವ ಕಾರ್ಯದಲ್ಲಿ ಮುಂದುವರಿಯುವಂತೆ ನಿಮ್ಮನ್ನು ಪ್ರಚೋದಿಸುತ್ತದೆ? (ಪಾದಟಿಪ್ಪಣಿಯನ್ನೂ ನೋಡಿ.)

9. (ಎ) ಮೀನು ಹಿಡಿಯುವಿಕೆಯಲ್ಲಿ ಪೇತ್ರ ಮತ್ತು ಬೇರೆ ಅಪೊಸ್ತಲರಿಗಾದ ಅನುಭವದ ಕುರಿತಾದ ವೃತ್ತಾಂತವು ಕ್ರಿಸ್ತನಿಗೆ ವಿಧೇಯರಾಗಲು ಇರಬೇಕಾದಂಥ ಯೋಗ್ಯ ಪ್ರಚೋದನೆಯ ಕುರಿತು ಏನು ತಿಳಿಸುತ್ತದೆ? (ಬಿ) ಇಂದು ದೇವರಿಗೂ ಕ್ರಿಸ್ತನಿಗೂ ವಿಧೇಯರಾಗಲು ಇರಬೇಕಾದ ಯೋಗ್ಯ ಪ್ರಚೋದನೆ ಯಾವುದು, ಮತ್ತು ಏಕೆ?

10. (ಎ) ಶಿಷ್ಯರನ್ನಾಗಿ ಮಾಡಲು ಯೇಸು ಕೊಟ್ಟ ಆಜ್ಞೆಯಲ್ಲಿದ್ದ ಯಾವ ವಿವರವು ಅವನ ಶಿಷ್ಯರಿಗೆ ದೊಡ್ಡ ಪಂಥಾಹ್ವಾನವನ್ನು ತಂದೊಡ್ಡಿತು? (ಬಿ) ಯೇಸುವಿನ ಶಿಷ್ಯರು ಅವನ ಆಜ್ಞೆಗೆ ಹೇಗೆ ಪ್ರತಿವರ್ತಿಸಿದರು?

11. ಇಪ್ಪತ್ತನೆಯ ಶತಮಾನದ ಆದಿಭಾಗದಿಂದ ‘ಮೀನು ಹಿಡಿಯುವ ಪ್ರದೇಶ’ಗಳಲ್ಲಿ ಯಾವ ವಿಸ್ತರಣೆಯಾಗಿದೆ?

12. ಜೆಕರ್ಯ 8:23ರಲ್ಲಿರುವ ಪ್ರವಾದನೆ ಯಾವ ಪಂಥಾಹ್ವಾನವನ್ನು ಎತ್ತಿತೋರಿಸುತ್ತದೆ?

13. (ಎ) ಆಧುನಿಕ ಸಮಯದಲ್ಲಿರುವ ದೇವಜನರ ಮಧ್ಯೆ ಭಾಷೆಗಳ ಬಗ್ಗೆ ಯಾವ ಬೆಳವಣಿಗೆಯಿದೆ? (ಬಿ) ನಂಬಿಗಸ್ತ ಆಳು ವರ್ಗವು ವಿವಿಧ ಭಾಷೆಗಳ ಬೆಳೆಯುತ್ತಿರುವ ಆಧ್ಯಾತ್ಮಿಕಾಹಾರದ ಆವಶ್ಯಕತೆಗೆ ಹೇಗೆ ಪ್ರತಿಕ್ರಿಯಿಸಿದೆ? (“ದೃಷ್ಟಿಹೀನರಿಗಾಗಿ ಪ್ರಕಾಶನಗಳು” ಎಂಬ ಚೌಕವನ್ನು ನೋಡಿ.)

14. ನಮ್ಮ ಟೆರಿಟೊರಿಯಲ್ಲಿರುವ ಪರಭಾಷೆಯನ್ನಾಡುವವರಿಗೆ ನಾವು ಹೇಗೆ ಸಹಾಯಮಾಡಬಹುದು? (“ಸಂಜ್ಞಾಭಾಷೆ ಮತ್ತು ಶಿಷ್ಯರನ್ನಾಗಿ ಮಾಡುವುದು” ಎಂಬ ಚೌಕವನ್ನು ಸೇರಿಸಿ.)

15, 16. (ಎ) ಪರಭಾಷೆಯನ್ನಾಡುವವರಿಗೆ ಸಹಾಯ ನೀಡುವುದು ಪ್ರತಿಫಲದಾಯಕವೆಂಬುದನ್ನು ಯಾವ ದೃಷ್ಟಾಂತಗಳು ತೋರಿಸುತ್ತವೆ? (ಬಿ) ಪರಭಾಷಾ ಕ್ಷೇತ್ರದಲ್ಲಿ ಸೇವೆ ಮಾಡುವುದರ ಬಗ್ಗೆ ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸಬಹುದು?

17. ನಮ್ಮ ಸಭಾ ಕ್ಷೇತ್ರದಲ್ಲಿ ಹೆಚ್ಚು ಜನರನ್ನು ನಾವು ಹೇಗೆ ಸಂಪರ್ಕಿಸಬಹುದು?

18. ವಿವಿಧ ಸನ್ನಿವೇಶಗಳಲ್ಲಿ ಸಾಕ್ಷಿ ನೀಡುವುದು ಹೇಗೆ ಕಾರ್ಯಸಾಧಕವಾಗಿ ಪರಿಣಮಿಸಿದೆ? (“ವ್ಯಾಪಾರಸ್ಥರನ್ನು ಶಿಷ್ಯರನ್ನಾಗಿ ಮಾಡುವುದು” ಎಂಬ ಚೌಕವನ್ನು ಸೇರಿಸಿ.)

19. ಯೇಸು ನಮಗೆ ಕೊಟ್ಟ ಆಜ್ಞೆಯ ಯಾವ ಅಂಶಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು?

[ಪುಟ 10ರಲ್ಲಿರುವ ಚೌಕ/ಚಿತ್ರಗಳು]

ದೃಷ್ಟಿಹೀನರಿಗಾಗಿ ಪ್ರಕಾಶನಗಳು

ಆಲ್ಬರ್ಟ್‌ ಎಂಬವರು ಅಮೆರಿಕದಲ್ಲಿ ಜೀವಿಸುತ್ತಿರುವ ಒಬ್ಬ ಕ್ರೈಸ್ತ ಹಿರಿಯರೂ ಪೂರ್ಣ ಸಮಯದ ಸೇವಕರೂ ಆಗಿದ್ದಾರೆ. ಅವರು ಕುರುಡರು. ಬ್ರೇಲ್‌ ಭಾಷೆಯಲ್ಲಿರುವ ಬೈಬಲ್‌ ಸಾಹಿತ್ಯಗಳ ಉಪಯೋಗವು ಅವರಿಗೆ ಸೇವೆಯಲ್ಲಿ, ಮತ್ತು ಸೇವಾ ಮೇಲ್ವಿಚಾರಕರೋಪಾದಿ ತಮ್ಮ ಚಟುವಟಿಕೆಗಳಲ್ಲಿ ಹೆಚ್ಚು ಕಾರ್ಯಸಾಧಕರಾಗಿರುವಂತೆ ಸಹಾಯಮಾಡುತ್ತದೆ. ಅವರು ತಮ್ಮ ಸಭಾ ನೇಮಕವನ್ನು ಹೇಗೆ ನಿರ್ವಹಿಸುತ್ತಾರೆ?

ಅಧ್ಯಕ್ಷ ಮೇಲ್ವಿಚಾರಕರಾದ ಜೇಮ್ಸ್‌ ಹೇಳುವುದು: “ಆಲ್ಬರ್ಟ್‌ರವರಷ್ಟು ಕಾರ್ಯಸಾಧಕರಾದ ಸೇವಾ ಮೇಲ್ವಿಚಾರಕರು ನಮ್ಮ ಸಭೆಯಲ್ಲಿ ಇದ್ದದ್ದಿಲ್ಲ.” ಅಮೆರಿಕದಲ್ಲಿ ಅನೇಕ ವರುಷಗಳಿಂದ ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಬ್ರೇಲ್‌ ಭಾಷೆಗಳಲ್ಲಿ ಪ್ರಕಾಶನಗಳನ್ನು ಪಡೆದಿರುವ ಸುಮಾರು 5,000 ಮಂದಿ ಕುರುಡರಲ್ಲಿ ಆಲ್ಬರ್ಟ್‌ ಒಬ್ಬರು. ವಾಸ್ತವದಲ್ಲಿ, 1912ರಿಂದ, ನಂಬಿಗಸ್ತ ಆಳು ವರ್ಗವು ಬ್ರೇಲ್‌ ಭಾಷೆಯಲ್ಲಿ ನೂರಕ್ಕೂ ಹೆಚ್ಚು ವಿವಿಧ ಪ್ರಕಾಶನಗಳನ್ನು ಪ್ರಕಟಿಸಿದೆ. ಯೆಹೋವನ ಸಾಕ್ಷಿಗಳ ಮುದ್ರಣಾಲಯಗಳು ಆಧುನಿಕ ಯಂತ್ರಕಲೆಯನ್ನುಪಯೋಗಿಸಿ ಈಗ ಪ್ರತಿ ವರುಷ ಲಕ್ಷಾಂತರ ಪುಟಗಳನ್ನು ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ತಯಾರಿಸಿ 70ಕ್ಕೂ ಹೆಚ್ಚು ದೇಶಗಳಲ್ಲಿ ವಿತರಣೆ ಮಾಡುತ್ತಿವೆ. ದೃಷ್ಟಿಹೀನರಿಗಾಗಿ ತಯಾರಿಸಲ್ಪಡುವ ಈ ಬೈಬಲ್‌ ಪ್ರಕಾಶನಗಳಿಂದ ಪ್ರಯೋಜನ ಪಡೆಯಬಹುದಾದ ಯಾರ ಪರಿಚಯವಾದರೂ ನಿಮಗಿದೆಯೆ?

[ಪುಟ 11ರಲ್ಲಿರುವ ಚೌಕ/ಚಿತ್ರ]

ಸಂಜ್ಞಾಭಾಷೆ ಮತ್ತು ಶಿಷ್ಯರನ್ನಾಗಿ ಮಾಡುವುದು

ಭೂಗೋಳಾದ್ಯಂತ, ಹುರುಪಿನ ಯುವಜನರ ಸಮೇತ ಸಾವಿರಾರು ಮಂದಿ ಸಾಕ್ಷಿಗಳು, ಕಿವುಡರು ಕ್ರಿಸ್ತನ ಶಿಷ್ಯರಾಗುವಂತೆ ಸಹಾಯಮಾಡಲು ಸಂಜ್ಞಾಭಾಷೆಯನ್ನು ಕಲಿತಿದ್ದಾರೆ. ಇದರ ಪರಿಣಾಮವಾಗಿ, ಇತ್ತೀಚಿನ ಒಂದು ವರುಷದಲ್ಲಿ ಕೇವಲ ಬ್ರಸಿಲ್‌ ದೇಶದಲ್ಲಿಯೇ 63 ಮಂದಿ ಕಿವುಡರು ದೀಕ್ಷಾಸ್ನಾನಪಡೆದರು ಮತ್ತು ಆ ದೇಶದಲ್ಲಿ 35 ಮಂದಿ ಕಿವುಡ ಸಾಕ್ಷಿಗಳು ಪೂರ್ಣ ಸಮಯದ ಸುವಾರ್ತಿಕರಾಗಿ ಸೇವೆಮಾಡುತ್ತಿದ್ದಾರೆ. ಲೋಕಾದ್ಯಂತವಾಗಿ ಈಗ 1,200ಕ್ಕಿಂತಲೂ ಹೆಚ್ಚು ಸಂಜ್ಞಾಭಾಷಾ ಸಭೆಗಳು ಮತ್ತು ಗುಂಪುಗಳು ಇವೆ. ರಷ್ಯಾದಲ್ಲಿರುವ ಒಂದೇ ಒಂದು ಸಂಜ್ಞಾಭಾಷೆಯ ಸರ್ಕಿಟು ಇಡೀ ರಷ್ಯಾವನ್ನೇ ವ್ಯಾಪಿಸುವ ಲೋಕದ ಅತಿ ದೊಡ್ಡ ಸರ್ಕಿಟಾಗಿದೆ!

[ಪುಟ 12ರಲ್ಲಿರುವ ಚೌಕ]

ವ್ಯಾಪಾರಸ್ಥರನ್ನು ಶಿಷ್ಯರನ್ನಾಗಿ ಮಾಡುವುದು

ಆಫೀಸುಗಳಲ್ಲಿ ಕೆಲಸ ಮಾಡುವ ವ್ಯಾಪಾರಸ್ಥರನ್ನು ಭೇಟಿ ಮಾಡುವಾಗ ಹವಾಯೀ ದೇಶದ ಸಾಕ್ಷಿಯೊಬ್ಬಳು ಒಂದು ಸಾರಿಗೆ ಕಂಪೆನಿಯ ಕಾರ್ಯನಿರ್ವಾಹಕನನ್ನು ಭೇಟಿಯಾದಳು. ಕಾರ್ಯಮಗ್ನನಾಗಿದ್ದರೂ ಆ ವ್ಯಕ್ತಿ ವಾರಕ್ಕೆ 30 ನಿಮಿಷ ಕಾಲ ಬೈಬಲ್‌ ಅಧ್ಯಯನ ಮಾಡಲು ಒಪ್ಪಿಕೊಂಡನು. ಅವನು ಪ್ರತಿ ಬುಧವಾರ ಬೆಳಿಗ್ಗೆ, ತನಗೆ ಬರುವ ಟೆಲಿಫೋನ್‌ ಕರೆಗಳನ್ನು ನಿರ್ವಹಿಸುವಂತೆ ತಮ್ಮ ನೌಕರವರ್ಗಕ್ಕೆ ತಿಳಿಸಿ, ಅಧ್ಯಯನಕ್ಕೆ ಪೂರ್ಣ ಗಮನವನ್ನು ಕೊಡುತ್ತಾನೆ. ಹವಾಯೀಯ ಇನ್ನೊಬ್ಬ ಸಾಕ್ಷಿ, ಷೂ ರಿಪೇರಿ ಅಂಗಡಿಯ ಮಾಲೀಕಳೊಂದಿಗೆ ವಾರಕ್ಕೊಮ್ಮೆ ಬೈಬಲ್‌ ಅಧ್ಯಯನ ನಡೆಸುತ್ತಾಳೆ. ಈ ಅಧ್ಯಯನವನ್ನು ಅಂಗಡಿಯ ಕೌಂಟರ್‌ನಲ್ಲೇ ನಡೆಸಲಾಗುತ್ತದೆ. ಗಿರಾಕಿಗಳು ಬರುವಾಗ ಸಹೋದರಿ ಪಕ್ಕಕ್ಕೆ ಸರಿಯುತ್ತಾಳೆ, ಗಿರಾಕಿ ಹೊರಟುಹೋದಾಗ ಅಧ್ಯಯನವನ್ನು ಮುಂದುವರಿಸುತ್ತಾಳೆ.

ಆ ಕಾರ್ಯನಿರ್ವಹಕನು ಮತ್ತು ಮಾಲೀಕಳು ಸಂಪರ್ಕಿಸಲ್ಪಟ್ಟದ್ದು ಸಾಕ್ಷಿಗಳು ತಮ್ಮ “ಬಲೆಗಳನ್ನು” ವಿವಿಧ ಸ್ಥಳಗಳಲ್ಲಿ ಬೀಸಲು ಆರಂಭಿಕ ಹೆಜ್ಜೆಯನ್ನು ತೆಗೆದುಕೊಂಡ ಕಾರಣದಿಂದಲೇ. ನಿಮ್ಮ ಸಭಾ ಕ್ಷೇತ್ರದಲ್ಲಿ, ಹೆಚ್ಚಾಗಿ ಮನೆಯಲ್ಲಿ ಇಲ್ಲದವರನ್ನು ಸಂಪರ್ಕಿಸುವ ಸ್ಥಳಗಳ ಕುರಿತು ನೀವು ಯೋಚಿಸಬಲ್ಲಿರೊ?

[ಪುಟ 12ರಲ್ಲಿರುವ ಚಿತ್ರ]

ನೀವು ಪರಭಾಷಾ ಕ್ಷೇತ್ರದಲ್ಲಿ ಸೇವೆಮಾಡಬಲ್ಲಿರೊ?