ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಬೇಸಿಗೆಕಾಲವೂ ಹಿಮಕಾಲವೂ ತಪ್ಪುವುದೇ ಇಲ್ಲ’

‘ಬೇಸಿಗೆಕಾಲವೂ ಹಿಮಕಾಲವೂ ತಪ್ಪುವುದೇ ಇಲ್ಲ’

ಯೆಹೋವನ ಸೃಷ್ಟಿಯ ವೈಭವ

‘ಬೇಸಿಗೆಕಾಲವೂ ಹಿಮಕಾಲವೂ ತಪ್ಪುವುದೇ ಇಲ್ಲ’

ಸುಡುತ್ತಿರುವ ಸೂರ್ಯನು ಮರುಳುಭೂಮಿಯನ್ನು ಕಾಯಿಸುತ್ತಾನೆ. ಆದರೆ ಅದೇ ಸೂರ್ಯನು, ಭೂಮಿಯ ಇತರ ಭಾಗಗಳಲ್ಲಿ, ಅತಿ ಶೀತಲವಾದ ಚಳಿಗಾಲದ ನಂತರ ಬೆಚ್ಚಗಿನ ಹವಾಮಾನವನ್ನು ತರುತ್ತಾನೆ. ಹೌದು, ಹವಾಮಾನಗಳು ಹಾಗೂ ಋತುಗಳು ಉಂಟಾಗುವುದರ ಪ್ರಧಾನ ಕಾರಣಗಳಲ್ಲಿ ಸೂರ್ಯನ ಶಾಖವು ಒಂದಾಗಿದೆ.

ಭೂಗೋಳದಾದ್ಯಂತ ಋತುಗಳ ಸ್ಥಿತಿಗಳು ಭಿನ್ನಭಿನ್ನವಾಗಿರುತ್ತವೆ. ಆದರೆ ಋತುಗಳು ನಿಮ್ಮ ಮೇಲೆ ಹೇಗೆ ಪರಿಣಾಮಬೀರುತ್ತವೆ? ಬೇಸಗೆಕಾಲದಲ್ಲಿ ಸಮುದ್ರತೀರದಲ್ಲಿ ನಡೆಯುತ್ತಿರುವಾಗ ಸಾಯಂಕಾಲದ ತಂಗಾಳಿಯ ಚೇತೋಹಾರಿ ತಾಜಾತನವು ನಿಮ್ಮಲ್ಲಿ ಹರ್ಷವನ್ನು ತುಂಬಿಸುತ್ತದೊ? ಮಳೆಗಾಲದ ಆರಂಭದಲ್ಲಿ ಒಣಗಿಹೋಗಿರುವ ಮಣ್ಣನ್ನು ತೇವಗೊಳಿಸುವ ಮೊದಲ ಮಳೆಯ ಸಮಯದಲ್ಲಿ ನಿಮಗೆ ಹೇಗನಿಸುತ್ತದೆ? ಚಳಿಗಾಲದಲ್ಲಿ ಮಂಜುಭರಿತ ನೈಸರ್ಗಿಕ ದೃಶ್ಯವೊಂದನ್ನು ನೋಡುವಾಗ ಅದು ನಿಮಗೆ ಮುದ ನೀಡುತ್ತದೊ?

ಋತುಗಳುಂಟಾಗುವುದು ಹೇಗೆ? ಚುಟುಕಾಗಿ ಹೇಳುವುದಾದರೆ, ಭೂಮಿಯು ಓರೆಯಾಗಿ ಇರುವುದರಿಂದಲೇ. ಅದರ ಪರಿಭ್ರಮಣದ ಅಕ್ಷರೇಖೆಯು, ಸೂರ್ಯನ ಸುತ್ತಲೂ ಅದರ ಪಥದ ಭೂಕಕ್ಷಾ ಸಮತಲಕ್ಕೆ 23.5 ಡಿಗ್ರಿ ಬಾಗಿದೆ. ಭೂಮಿಯ ಅಕ್ಷ ಓರೆಯಾಗಿರದಿದ್ದಲ್ಲಿ, ಋತುಗಳೇ ಇರುತ್ತಿರಲಿಲ್ಲ. ಎಲ್ಲಾ ಸಮಯದಲ್ಲೂ ಒಂದೇ ರೀತಿಯ ವಾಯುಗುಣವಿರುತ್ತಿತ್ತು. ಮತ್ತು ಇದು ಸಸ್ಯಜೀವನ ಹಾಗೂ ಬೆಳೆ ಉತ್ಪನ್ನದ ಚಕ್ರವನ್ನು ಬಾಧಿಸುತ್ತಿತ್ತು.

ಋತುಗಳ ಬದಲಾಗುವಿಕೆಯ ಹಿಂದೆ ಸೃಷ್ಟಿಕರ್ತನ ಹಸ್ತವನ್ನು ನೋಡಸಾಧ್ಯವಿದೆ. ಯೆಹೋವ ದೇವರನ್ನು ಸಂಬೋಧಿಸುತ್ತಾ, ಕೀರ್ತನೆಗಾರನು ಸೂಕ್ತವಾಗಿಯೇ ತಿಳಿಸಿದ್ದು: “ಭೂಮಿಯ ಎಲ್ಲಾ ಮೇರೆಗಳನ್ನು ಸ್ಥಾಪಿಸಿದವನು ನೀನು; ಶೀತೋಷ್ಣಕಾಲಗಳನ್ನು ನೇಮಿಸಿದವನು ನೀನು.” (ಓರೆ ಅಕ್ಷರಗಳು ನಮ್ಮವು.)​—⁠ಕೀರ್ತನೆ 74:​17. *

ಭೂಮಿಯಲ್ಲಿರುವ ಪ್ರೇಕ್ಷಕನೊಬ್ಬನಿಗೆ, ಆಕಾಶಸ್ಥಕಾಯಗಳು ಋತುಗಳ ಸ್ಪಷ್ಟ ಸಂಕೇತಗಳಾಗಿ ಕಾರ್ಯನಡಿಸುತ್ತವೆ. ನಮ್ಮ ಸೌರವ್ಯೂಹವನ್ನು ಸೃಷ್ಟಿಸುವಾಗ ದೇವರು ಆಜ್ಞಾಪಿಸಿದ್ದು: “ಆಕಾಶಮಂಡಲದಲ್ಲಿ ಬೆಳಕುಗಳು ಉಂಟಾಗಲಿ; . . . ಅವು ಗುರುತುಗಳಾಗಿದ್ದು ಸಮಯಗಳನ್ನೂ ದಿನಸಂವತ್ಸರಗಳನ್ನೂ ತೋರಿಸಲಿ.” (ಆದಿಕಾಂಡ 1:14) ಒಂದು ವರ್ಷದ ಅವಧಿಯಲ್ಲಿ ಭೂಮಿಯು, ಅದರ ಪಥದಲ್ಲಿ, ಸೂರ್ಯನು ಮಧ್ಯಾಹ್ನದಂದು ನೇರವಾಗಿ ಅದರ ಸಮಭಾಜಕ ವೃತ್ತದ ಮೇಲೆ ಇರುವ ಎರಡು ಬಿಂದುಗಳನ್ನು ತಲಪುತ್ತದೆ. ಈ ಸಂಭವಗಳನ್ನು ವಿಷುವತ್ತುಗಳೆಂದು ಕರೆಯಲಾಗುತ್ತದೆ, ಮತ್ತು ಅನೇಕ ದೇಶಗಳಲ್ಲಿ ಇವು ವಸಂತಕಾಲ ಮತ್ತು ಶರತ್ಕಾಲದ ಆರಂಭವನ್ನು ಗುರುತಿಸುತ್ತವೆ. ವಿಷುವತ್ತುಗಳ ಸಮಯದಲ್ಲಿ, ಭೂಮಿಯಾದ್ಯಂತ ಹಗಲುರಾತ್ರಿಗಳ ಅವಧಿಯು ಹೆಚ್ಚುಕಡಿಮೆ ಸರಿಸಮಾನವಾಗಿರುತ್ತದೆ.

ಋತುಗಳ ಅಸ್ತಿತ್ವ ಮತ್ತು ಆಗಮನದಲ್ಲಿ ಕೇವಲ ಆಕಾಶಸ್ಥಕಾಯಗಳ ಚಲನೆಗಳು ಮಾತ್ರ ಒಳಗೂಡಿರುವುದಿಲ್ಲ. ಋತುಗಳು, ವಾಯುಗುಣ, ಮತ್ತು ಹವಾಮಾನ ಇವೆಲ್ಲವೂ ಜೀವವನ್ನು ಪೋಷಿಸುವಂಥ ಒಂದು ಸಂಕೀರ್ಣ ವ್ಯವಸ್ಥೆಯಲ್ಲಿ ಪರಸ್ಪರ ಹೆಣೆದುಕೊಂಡಿವೆ. ಯಾರಲ್ಲಿ ಅನೇಕರು ಕೃಷಿ, ಮತ್ತು ಆಹಾರ ಉತ್ಪಾದನೆಯ ಕುರಿತು ಚಿರಪರಿಚಿತರಾಗಿದ್ದರೊ ಆ ಏಷ್ಯಾ ಮೈನರ್‌ನಲ್ಲಿ ವಾಸಿಸುತ್ತಿದ್ದ ಜನರಿಗೆ ಕ್ರೈಸ್ತ ಅಪೊಸ್ತಲರಾದ ಪೌಲನೂ ಅವನ ಸಂಗಡಿಗನಾದ ಬಾರ್ನಬನೂ ತಿಳಿಸಿದ್ದೇನೆಂದರೆ, “ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರ ಮಾಡುತ್ತಾ ಬಂದವನು” ದೇವರೇ.​—⁠ಅ. ಕೃತ್ಯಗಳು 14:14-17.

ದ್ಯುತಿಸಂಶ್ಲೇಷಣೆ ಎಂಬ ವಿಸ್ಮಯಕಾರಿ ಪ್ರಕ್ರಿಯೆ ಭೂಮಿಯ ಮೇಲೆ ಸಸ್ಯಜೀವನವನ್ನು ಮತ್ತು ಸಮುದ್ರಗಳಲ್ಲಿರುವ ಫೈಟೋಪ್ಲ್ಯಾಂಕ್ಟನ್‌ ಎಂಬ ಅತಿಸೂಕ್ಷ್ಮ ಸಸ್ಯವನ್ನು ಪೋಷಿಸುತ್ತದೆ. ಇದರಿಂದಾಗಿ, ಸದ್ಯದ ಆಹಾರ ಸರಪಳಿ ಮತ್ತು ವೈವಿಧ್ಯಮಯ ಜೀವಿಗಳ ಜಾಲವು, ಕ್ಲಿಷ್ಟಕರ ರೀತಿಗಳಲ್ಲಿ ಹವಾಮಾನ ಮತ್ತು ವಾಯುಗುಣಕ್ಕೆ ಪ್ರತಿಕ್ರಿಯಿಸುತ್ತವೆ. ಇದೆಲ್ಲದ್ದರಲ್ಲಿರುವ ಯೆಹೋವನ ಹಸ್ತಕ್ಕೆ ಯಥೋಚಿತವಾಗಿ ಸೂಚಿಸುತ್ತಾ ಪೌಲನು ಹೇಳಿದ್ದು: “ಭೂಮಿಯು ತನ್ನ ಮೇಲೆ ಅನೇಕಾವರ್ತಿ ಸುರಿಯುವ ಮಳೆಯನ್ನು ಹೀರಿಕೊಂಡು ಅದು ಯಾರ ನಿಮಿತ್ತವಾಗಿ ವ್ಯವಸಾಯಮಾಡಲ್ಪಡುತ್ತದೋ ಅವರಿಗೆ ಅನುಕೂಲವಾದ ಬೆಳೆಯನ್ನು ಕೊಟ್ಟರೆ ದೇವರ ಆಶೀರ್ವಾದವನ್ನು ಹೊಂದುತ್ತದೆ.”​—⁠ಇಬ್ರಿಯ 6:⁠7.

ನೀವು ಸ್ವಲ್ಪ ಹೊತ್ತು ನಿಂತು, ವಸಂತಕಾಲವು ಹಿತಮಿತವಾದ ತಾಪಮಾನವನ್ನು, ದೀರ್ಘವಾದ ದಿನಗಳನ್ನು, ಹೆಚ್ಚಿನ ಸೂರ್ಯಪ್ರಕಾಶವನ್ನು ಮತ್ತು ಒಳ್ಳೇ ಮಳೆಗಳನ್ನು ತರುವಂಥ ಸ್ಥಳಗಳಲ್ಲಿ ಏನು ಸಂಭವಿಸುತ್ತದೆಂಬುದರ ಕುರಿತಾಗಿ ಯೋಚಿಸಿರಿ. “ಆಶೀರ್ವಾದ” ಎಂಬ ಪದವು ಹೊಸ ಅರ್ಥವನ್ನು ಪಡೆಯುತ್ತದಲ್ಲವೊ? ಹೂವುಗಳು ಅರಳುತ್ತವೆ ಮತ್ತು ಕೀಟಗಳು ತಮ್ಮ ಚಳಿಗಾಲದ ಆಶ್ರಯತಾಣಗಳಿಂದ ಹೊರಬಂದು, ಪೈರುಗಳಿಗೆ ಪರಾಗಧಾನಮಾಡಲು ಸಿದ್ಧವಾಗಿರುತ್ತವೆ. ನೀವು ಇಲ್ಲಿ ನೋಡಬಹುದಾದ ಬ್ಲೂ ಜೇಯಂಥ ಪಕ್ಷಿಗಳು ಕಾಡನ್ನು ತಮ್ಮ ಬಣ್ಣ ಹಾಗೂ ಹಾಡುಗಳಿಂದ ತುಂಬಿಸುತ್ತವೆ, ಮತ್ತು ಎಲ್ಲೆಲ್ಲೂ ಭೂದೃಶ್ಯಕ್ಕೆ ಕಳೆಬರುತ್ತದೆ. ಜೀವನಾಡಿಯು ತ್ವರಿತಗೊಳ್ಳುತ್ತದೆ, ಮತ್ತು ಜೀವಿಗಳು ಜನನ, ಪುನರ್‌ಜನನ, ಮತ್ತು ಬೆಳವಣಿಗೆಯ ಜೀವನಚಕ್ರಗಳನ್ನು ಪೂರೈಸುತ್ತವೆ. (ಪರಮಗೀತ 2:​12, 13) ಇದು, ಬೇಸಗೆಕಾಲದ ಕೊನೆಯಲ್ಲಿ ಇಲ್ಲವೆ ಶರತ್ಕಾಲದಲ್ಲಿನ ಕೊಯ್ಲಿನ ಕೆಲಸಕ್ಕೆ ರಂಗವನ್ನು ಸಜ್ಜುಗೊಳಿಸುತ್ತದೆ.​—⁠ವಿಮೋಚನಕಾಂಡ 23:⁠16.

ನಮಗೆ ಹಗಲುರಾತ್ರಿಗಳನ್ನು, ಋತುಗಳನ್ನು, ಮತ್ತು ಬೀಜಬಿತ್ತುವ ಹಾಗೂ ಕೊಯ್ಲಿನ ಸಮಯವನ್ನು ಒದಗಿಸುವಂತೆ ಯೆಹೋವನು ಭೂಮಿಯನ್ನು ಇರಿಸಿರುವ ರೀತಿಯಲ್ಲಿ, ಆತನ ಕಾರ್ಯಗಳು ಅದ್ಭುತಕರವಾಗಿ ಪ್ರದರ್ಶಿಸಲ್ಪಟ್ಟಿದೆ. ಚಳಿಗಾಲದ ನಂತರ ಬೇಸಗೆಕಾಲವು ಬಂದೇ ತೀರುವುದೆಂಬ ಭರವಸೆ ನಮಗಿದೆ. ಏಕೆಂದರೆ, “ಭೂಮಿಯು ಇರುವ ತನಕ ಬಿತ್ತನೆಯೂ ಕೊಯಿಲೂ, ಚಳಿಯೂ ಸೆಕೆಯೂ, ಬೇಸಿಗೆಕಾಲವೂ ಹಿಮಕಾಲವೂ, ಹಗಲೂ ಇರುಳೂ ಇವುಗಳ ಕ್ರಮ ತಪ್ಪುವದೇ ಇಲ್ಲ” ಎಂದು ವಾಗ್ದಾನಿಸಿರುವವನು ದೇವರೇ.​—⁠ಆದಿಕಾಂಡ 8:⁠22.

[ಪಾದಟಿಪ್ಪಣಿ]

^ ಪ್ಯಾರ. 6 ಇಸವಿ 2004ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್‌ನ (ಇಂಗ್ಲಿಷ್‌) ಜುಲೈ/ಆಗಸ್ಟ್‌ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಚೌಕ/ಚಿತ್ರ]

ಜೀವಕ್ಕೆ ಅತ್ಯಾವಶ್ಯಕವಾದ ಒಂದು ಉಪಗ್ರಹ

ಯುಗಗಳಾದ್ಯಂತ, ಚಂದ್ರನು ಮನುಷ್ಯರಿಗೆ ಸ್ಫೂರ್ತಿಯನ್ನು ಕೊಟ್ಟಿದ್ದಾನೆ ಮತ್ತು ಅವರನ್ನು ವಿಸ್ಮಿತರನ್ನಾಗಿಯೂ ಮಾಡಿದ್ದಾನೆ. ಆದರೆ ಚಂದ್ರನು ಋತುಗಳ ಮೇಲೆ ಪ್ರಭಾವಬೀರುತ್ತಾನೆಂದು ನಿಮಗೆ ತಿಳಿದಿದೆಯೊ? ಚಂದ್ರನ ಇರುವಿಕೆಯು, ಭೂಮಿಯ ವಾಲುವಿಕೆ, ಅಂದರೆ ಅದು ಆವರ್ತಿಸುವ ಅಕ್ಷದ ಓರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯಮಾಡುತ್ತದೆ. ಇದು, “ಭೂಮಿಯ ಮೇಲೆ ಜೀವವನ್ನು ಪೋಷಿಸುವಂಥ ಪರಿಸ್ಥಿತಿಗಳನ್ನು ಉತ್ಪಾದಿಸುವುದರಲ್ಲಿ ಅತ್ಯಾವಶ್ಯಕವಾದ ಪಾತ್ರವನ್ನು” ವಹಿಸುತ್ತದೆಂದು ವಿಜ್ಞಾನದ ಲೇಖಕನಾಗಿರುವ ಆ್ಯಂಡ್ರೂ ಹಿಲ್‌ ತಿಳಿಸುತ್ತಾರೆ. ನಮ್ಮ ಭೂಗ್ರಹದ ಅಕ್ಷದ ಓರೆಯನ್ನು ನಿಯಂತ್ರಿಸಲು ಯಾವುದೇ ದೊಡ್ಡ ನೈಸರ್ಗಿಕ ಉಪಗ್ರಹ ಇಲ್ಲದಿರುತ್ತಿದ್ದಲ್ಲಿ, ತಾಪಮಾನವು ಏರಿ, ಭೂಮಿಯ ಮೇಲೆ ಜೀವವು ಉಳಿಯುವುದು ಅಸಾಧ್ಯವಾಗುತ್ತಿತ್ತು. ಈ ಕಾರಣದಿಂದ, ಖಗೋಳಶಾಸ್ತ್ರಜ್ಞರ ಒಂದು ತಂಡವು ಈ ತೀರ್ಮಾನಕ್ಕೆ ಬಂತು: “ಚಂದ್ರನು ಭೂಮಿಯಲ್ಲಿ ಉಂಟಾಗಬಹುದಾದ ಹವಾಗುಣ ಬದಲಾವಣೆಗಳನ್ನು ತಡೆಯುವಂಥ ರೆಗ್ಯುಲೇಟರ್‌ ಆಗಿ ವರ್ತಿಸುತ್ತಾನೆಂದು ಹೇಳಬಹುದು.”​—⁠ಕೀರ್ತನೆ 104:⁠19.

[ಕೃಪೆ]

ಚಂದ್ರ: U.S. Fish & Wildlife Service, Washington, D.C./Bart O’Gara

[ಪುಟ 9ರಲ್ಲಿರುವ ಚಿತ್ರ]

ಒಂಟೆಗಳು, ಉತ್ತರ ಆಫ್ರಿಕಾ ಮತ್ತು ಅರಬ್ಬೀ ದ್ವೀಪಕಲ್ಪ