ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಅದ್ಭುತಗಳು—ವಾಸ್ತವಿಕವೊ ಕಾಲ್ಪನಿಕವೊ?

ಯೇಸುವಿನ ಅದ್ಭುತಗಳು—ವಾಸ್ತವಿಕವೊ ಕಾಲ್ಪನಿಕವೊ?

ಯೇಸುವಿನ ಅದ್ಭುತಗಳು—ವಾಸ್ತವಿಕವೊ ಕಾಲ್ಪನಿಕವೊ?

“ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ [ಯೇಸು ಕ್ರಿಸ್ತನ] ಬಳಿಗೆ ಕರತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಮೈಯಲ್ಲಿ ನೆಟ್ಟಗಿಲ್ಲದವರೆಲ್ಲರನ್ನು ವಾಸಿಮಾಡಿದನು.” (ಮತ್ತಾಯ 8:16) “ಆತನು [ಯೇಸು] ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ​—⁠ಸುಮ್ಮನಿರು, ಮೊರೆಯಬೇಡ ಎಂದು ಅಪ್ಪಣೆಕೊಟ್ಟನು. ಕೊಡುತ್ತಲೆ ಗಾಳಿ ನಿಂತು ಹೋಗಿ ಎಲ್ಲಾ ಶಾಂತವಾಯಿತು.” (ಮಾರ್ಕ 4:⁠39) ಈ ಹೇಳಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇವು ನಿಜವಾಗಿಯೂ ನಡೆದಂಥ ಚಾರಿತ್ರಿಕ ಘಟನೆಗಳನ್ನು ತಿಳಿಸುತ್ತಿವೆಯೆಂದು ನೀವು ನಂಬುತ್ತೀರೊ ಅಥವಾ ಇವು ಕಟ್ಟುಕಥೆಗಳೂ ಬರಿಯ ಮಿಥ್ಯೆಗಳೂ ಆಗಿವೆಯೆಂದು ನಿಮಗನಿಸುತ್ತದೊ?

ಯೇಸು ನಡಿಸಿದ ಅದ್ಭುತಗಳ ಬಗ್ಗೆ ಇಂದು ಅನೇಕರಿಗೆ ಗಂಭೀರವಾದ ಶಂಕೆಗಳಿವೆ. ದೂರದರ್ಶಕ ಹಾಗೂ ಸೂಕ್ಷ್ಮದರ್ಶಕಗಳು, ಅಂತರಿಕ್ಷ ಪರಿಶೋಧನೆ ಮತ್ತು ತಳಿಶಾಸ್ತ್ರ ಎಂಜಿನಿಯರಿಂಗ್‌ನ ಈ ಯುಗದಲ್ಲಿ, ಅದ್ಭುತಕಾರ್ಯಗಳು ಹಾಗೂ ದೈವಿಕ ಚಮತ್ಕಾರಗಳ ವರದಿಗಳಿಗೆ ಎಲ್ಲೂ ಎಡೆಯಿಲ್ಲವೆಂಬಂತೆ ತೋರುತ್ತದೆ.

ಈ ಅದ್ಭುತಕಾರ್ಯಗಳ ಕುರಿತಾದ ವೃತ್ತಾಂತಗಳು, ಊಹಾತ್ಮಕ ಯಾ ಗೂಢಾರ್ಥವುಳ್ಳದ್ದಾಗಿವೆ ಎಂದು ಕೆಲವರಿಗನಿಸುತ್ತದೆ. “ನಿಜವಾದ” ಯೇಸು ಯಾರೆಂಬುದನ್ನು ಪರಿಶೋಧಿಸುತ್ತಿರುವುದಾಗಿ ಹೇಳಿಕೊಳ್ಳುವ ಒಂದು ಪುಸ್ತಕದ ಲೇಖಕನಿಗನುಸಾರ, ಕ್ರಿಸ್ತನ ಅದ್ಭುತಗಳ ಕುರಿತಾದ ಕಥೆಗಳು, ಕ್ರೈಸ್ತಧರ್ಮವನ್ನು ಪ್ರವರ್ಧಿಸಲಿಕ್ಕಾಗಿರುವ ಕೇವಲ “ಮಾರಾಟದ ತಂತ್ರಗಳು” ಆಗಿವೆ ಅಷ್ಟೇ.

ಇನ್ನಿತರರ ಅಭಿಪ್ರಾಯದಲ್ಲಿ ಯೇಸುವಿನ ಅದ್ಭುತಗಳು ಮಹಾ ಮೋಸದ ಕೃತ್ಯಗಳಾಗಿದ್ದವು. ಕೆಲವೊಮ್ಮೆ, ಯೇಸುವೇ ಆ ಮೋಸ ನಡೆಸಿದನೆಂಬ ಆರೋಪವನ್ನು ಅವನ ಮೇಲೆ ಹೊರಿಸಲಾಗುತ್ತದೆ. ಸಾ.ಶ. ಎರಡನೆಯ ಶತಮಾನದ ಜಸ್ಟಿನ್‌ ಮಾರ್ಟರ್‌ಗನುಸಾರ, ಯೇಸುವಿನ ಟೀಕಾಕಾರರು “ಅವನನ್ನು ಒಬ್ಬ ಜಾದುಗಾರ ಮತ್ತು ಜನರನ್ನು ಮೋಸಗೊಳಿಸುವವ ಎಂದು ಕರೆಯುವಷ್ಟು ಧೈರ್ಯಮಾಡಿದರು.” ಯೇಸು “ತನ್ನ ಅದ್ಭುತಗಳನ್ನು ಒಬ್ಬ ಯೆಹೂದಿ ಪ್ರವಾದಿಯಾಗಿ ಅಲ್ಲ, ಬದಲಾಗಿ ಒಬ್ಬ ಜಾದುಗಾರನಾಗಿ, ವಿಧರ್ಮಿ ದೇವಾಲಯಗಳಲ್ಲಿ ದೀಕ್ಷೆಪಡೆದವನಾಗಿ ನಡೆಸಿದನು” ಎಂದು ಕೆಲವರು ಆರೋಪಹೊರಿಸುತ್ತಾರೆ.

ಅಸಾಧ್ಯ ಎಂಬುದರ ಅರ್ಥನಿರೂಪಣೆ

ಇಂಥ ಶಂಕೆಗಳು, ಅದ್ಭುತಗಳು ನಿಜವಾಗಿಯೂ ನಡೆದವೆಂದು ನಂಬಲು ಜನರು ಏಕೆ ಹಿಂಜರಿಯುತ್ತಾರೆ ಎಂಬುದಕ್ಕೆ ಮೂಲಭೂತ ಕಾರಣವನ್ನು ಪ್ರಕಟಪಡಿಸುತ್ತವೆ ಎಂದು ನಿಮಗನಿಸಬಹುದು. ಅತಿಲೌಕಿಕವಾದ ಶಕ್ತಿಗಳು ಅದ್ಭುತಗಳನ್ನು ನಡೆಸಬಲ್ಲವೆಂಬ ವಿಚಾರವು ಅವರಿಗೆ ನುಂಗಲಾಗದಂಥ ತುತ್ತಾಗಿದೆ. “ಅದ್ಭುತಗಳು ನಡೆಯುವುದೇ ಇಲ್ಲ. ವಿಷಯ ಮುಗಿಯಿತು” ಎಂದು ತನ್ನನ್ನೇ ಒಬ್ಬ ಅಜ್ಞೇಯತಾವಾದಿಯೆಂದು ಕರೆಯುವ ಯೌವನಸ್ಥನೊಬ್ಬನು ಹೇಳಿದನು. ನಂತರ ಅವನು, 18ನೆಯ ಶತಮಾನದ ಸ್ಕಾಟಿಷ್‌ ತತ್ತ್ವಜ್ಞಾನಿ ಡೇವಿಡ್‌ ಹ್ಯೂಮ್‌ ಬರೆದಂಥ ಈ ಮಾತುಗಳನ್ನು ಉಲ್ಲೇಖಿಸಿದನು: “ಒಂದು ಅದ್ಭುತವು, ಪ್ರಕೃತಿ ನಿಯಮಗಳ ಉಲ್ಲಂಘನೆಯಾಗಿದೆ.”

ಆದರೆ, ಒಂದು ನಿರ್ದಿಷ್ಟ ಘಟನೆ ಇಲ್ಲವೆ ಸಂಗತಿಯು ಅಸಾಧ್ಯವೆಂದು ದೃಢವಾಗಿ ಹೇಳುವುದರ ಬಗ್ಗೆ ಅನೇಕರು ಜಾಗ್ರತೆವಹಿಸುವರು. ಏಕೆಂದರೆ, ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ ಒಂದು ಅದ್ಭುತವನ್ನು, “ಜ್ಞಾತ ಪ್ರಕೃತಿ ನಿಯಮಗಳ ಸಹಾಯದಿಂದ ವಿವರಿಸಲಾಗದಂಥ ಒಂದು ಘಟನೆ” ಎಂದು ಕರೆಯುತ್ತದೆ. ಈ ಅರ್ಥನಿರೂಪಣೆಗನುಸಾರ, ಅಂತರಿಕ್ಷಯಾನ, ತಂತಿರಹಿತ ಸಂಪರ್ಕವ್ಯವಸ್ಥೆ, ಮತ್ತು ಉಪಗ್ರಹ ಯಾನವು ಕೇವಲ ನೂರು ವರ್ಷಗಳ ಹಿಂದೆಯಷ್ಟೇ ಹೆಚ್ಚಿನವರಿಗೆ “ಅದ್ಭುತಗಳು” ಆಗಿ ತೋರುತ್ತಿದ್ದವು. ಆದ್ದರಿಂದ, ಅದ್ಭುತಗಳನ್ನು ಪ್ರಸ್ತುತ ಜ್ಞಾನದ ಆಧಾರದ ಮೇಲೆ ನಮಗೆ ವಿವರಿಸಲಾಗುವುದಿಲ್ಲ ಎಂದಮಾತ್ರಕ್ಕೆ, ಅವು ನಡೆದಿಲ್ಲ ಎಂದು ಪಟ್ಟುಹಿಡಿಯುವುದು ಅವಿವೇಕದ ಸಂಗತಿಯಾಗಿದೆ.

ಯೇಸು ಕ್ರಿಸ್ತನು ನಡೆಸಿದನೆಂದು ಹೇಳಲಾಗುವ ಅದ್ಭುತಗಳಿಗೆ ಸಂಬಂಧಿಸಿದ ಕೆಲವು ಶಾಸ್ತ್ರೀಯ ಸಾಕ್ಷ್ಯವನ್ನು ನಾವು ಪರೀಕ್ಷಿಸುವಲ್ಲಿ ನಾವೇನನ್ನು ಕಂಡುಕೊಳ್ಳುವೆವು? ಯೇಸು ನಡಿಸಿದ ಅದ್ಭುತಗಳು ವಾಸ್ತವಿಕವೊ ಕಾಲ್ಪನಿಕವೊ?